ಪ್ರಸಂಗಿ
6 ಇನ್ನೊಂದು ದುರಂತಕರ ಸಂಗತಿಯನ್ನ ನಾನು ಭೂಮಿ ಮೇಲೆ* ನೋಡಿದ್ದೀನಿ. ಅದು ಮನುಷ್ಯರಲ್ಲಿ ಸಾಮಾನ್ಯ. ಅದೇನಂದ್ರೆ, 2 ಮನುಷ್ಯ ಬಯಸಿದ್ದೆಲ್ಲ ಅವನಿಗೆ ಸಿಗಬೇಕಂತ ಸತ್ಯ ದೇವರು ಅವನಿಗೆ ಐಶ್ವರ್ಯ, ಸೊತ್ತು, ಘನತೆ ಕೊಡ್ತಾನೆ. ಆದ್ರೆ ಅವುಗಳನ್ನ ಅನುಭವಿಸೋ ಸಾಮರ್ಥ್ಯವನ್ನ ಅವನಿಗೆ ಕೊಡದೆ ಬೇರೊಬ್ಬ ಅದನ್ನ ಅನುಭವಿಸೋಕೆ ಬಿಡ್ತಾನೆ. ಇದು ವ್ಯರ್ಥ ಮತ್ತು ತುಂಬ ವೇದನಾಮಯ. 3 ಒಬ್ಬ ನೂರು ಮಕ್ಕಳನ್ನ ಪಡೆದು ತುಂಬ ವರ್ಷ ಬದುಕಿ ವಯಸ್ಸಾದ್ರೂ ಅವನು ಸಮಾಧಿ* ಸೇರೋ ಮುಂಚೆ ತನ್ನ ಜೀವನನ ಆನಂದಿಸದಿದ್ರೆ ಏನು ಪ್ರಯೋಜನ? ಅವನಿಗಿಂತ ಹುಟ್ಟುವಾಗ್ಲೇ ಸತ್ತಿರೋ ಮಗು ಮೇಲು ಅನ್ನೋದು ನನ್ನ ಅಭಿಪ್ರಾಯ.+ 4 ಆ ಮಗು ಹುಟ್ಟಿದ್ದು ವ್ಯರ್ಥ, ಅದು ಕತ್ತಲೆಯಲ್ಲಿ ಮರೆಯಾಗಿ ಹೋಯ್ತು. ಅದು ಹೆಸ್ರಿಲ್ಲದೆ ಕತ್ತಲೆಯಲ್ಲಿ ಹೂತುಹೋಯ್ತು. 5 ಆ ಮಗು ಸೂರ್ಯನನ್ನ ಯಾವತ್ತೂ ನೋಡ್ಲಿಲ್ಲ, ಅದಕ್ಕೆ ಏನೂ ಗೊತ್ತಿಲ್ಲ, ಆದ್ರೂ ಅದು ಆ ಮನುಷ್ಯನಿಗಿಂತ ಎಷ್ಟೋ ಮೇಲು.+ 6 ಒಬ್ಬ ಮನುಷ್ಯ ಎರಡು ಸಾವಿರ ವರ್ಷ ಬದುಕಿದ್ರೂ ಜೀವನದಲ್ಲಿ ಯಾವ ಸಂತೋಷನೂ ಅನುಭವಿಸದಿದ್ರೆ ಏನು ಪ್ರಯೋಜನ? ಕೊನೆಗೆ ಎಲ್ರೂ ಹೋಗೋದು ಒಂದೇ ಸ್ಥಳಕ್ಕೆ ಅಲ್ವಾ?+
7 ಮನುಷ್ಯ ಬೆವರು ಸುರಿಸಿ ದುಡಿಯೋದೆಲ್ಲ ತನ್ನ ಹೊಟ್ಟೆಗಾಗಿ.+ ಆದ್ರೂ ಅವನಿಗೆ ತೃಪ್ತಿ ಆಗಲ್ಲ. 8 ಹೀಗಿರುವಾಗ, ಅವಿವೇಕಿಗಿಂತ ವಿವೇಕಿ ಯಾವ ವಿಧದಲ್ಲಿ ಮೇಲು?+ ಬಡವನಿಗೆ ಜೀವನ ಮಾಡೋದು ಹೇಗಂತ ಗೊತ್ತಿರೋದ್ರಿಂದ ಏನು ಪ್ರಯೋಜನ ಆಗುತ್ತೆ? 9 ಬಯಕೆಗಳ ಬೆನ್ನು ಹತ್ತೋದಕ್ಕಿಂತ ಕಣ್ಮುಂದೆ ಇರೋದನ್ನ ಆನಂದಿಸೋದೇ ಮೇಲು. ಇದೂ ವ್ಯರ್ಥ, ಗಾಳಿ ಹಿಡಿಯೋಕೆ ಓಡೋ ಹಾಗಿದೆ.
10 ಈಗ ಏನೇನು ಇದ್ಯೋ ಅದಕ್ಕೆಲ್ಲ ಮೊದಲೇ ಹೆಸ್ರಿಡಲಾಗಿದೆ, ಮನುಷ್ಯ ನಿಜವಾಗ್ಲೂ ಎಂಥವನಂತ ಬೆಳಕಿಗೆ ಬಂದಿದೆ. ಅವನು ತನಗಿಂತ ಬಲಶಾಲಿಯಾದವನ ಜೊತೆ ಕಾದಾಡೋಕೆ* ಆಗಲ್ಲ. 11 ಹೆಚ್ಚು ಮಾತಾಡಿದಷ್ಟು* ಅವು ಹೆಚ್ಚು ವ್ಯರ್ಥವಾಗಿ ಇರುತ್ತೆ, ಅವುಗಳಿಂದ ಮನುಷ್ಯನಿಗೆ ಯಾವ ಪ್ರಯೋಜನನೂ ಆಗಲ್ಲ. 12 ಮನುಷ್ಯ ತನ್ನ ಜೀವಮಾನದಲ್ಲಿ ಏನು ಮಾಡಿದ್ರೆ ಅತ್ಯುತ್ತಮ ಅಂತ ತಿಳ್ಕೊಳ್ಳೋಕೆ ಯಾರಿಗೆ ತಾನೇ ಸಾಧ್ಯ? ಅವನ ಅಲ್ಪ* ಜೀವಮಾನ ನೆರಳಿನ ತರ ಕಾಣದೆ ಹೋಗುತ್ತೆ.+ ಅವನು ಸತ್ತ ನಂತ್ರ ಭೂಮಿ ಮೇಲೆ ಏನಾಗುತ್ತೆ ಅಂತ ಅವನಿಗೆ ಹೇಳೋಕೆ ಯಾರಿಂದ ತಾನೇ ಸಾಧ್ಯ?