ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 3/06 ಪು. 3-4
  • ಆಡಳಿತ ಮಂಡಳಿಯಿಂದ ಒಂದು ಪತ್ರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆಡಳಿತ ಮಂಡಳಿಯಿಂದ ಒಂದು ಪತ್ರ
  • 2006 ನಮ್ಮ ರಾಜ್ಯದ ಸೇವೆ
2006 ನಮ್ಮ ರಾಜ್ಯದ ಸೇವೆ
km 3/06 ಪು. 3-4

ಆಡಳಿತ ಮಂಡಳಿಯಿಂದ ಒಂದು ಪತ್ರ

“ನಮ್ಮ ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಆಗಲಿ.” ಇದು, ಪೌಲನು ಸಭೆಗಳಿಗೆ ಬರೆದ ಅನೇಕ ಪತ್ರಗಳಲ್ಲಿ ಉಪಯೋಗಿಸುತ್ತಿದ್ದ ವಂದನೆಯಾಗಿತ್ತು. ನಾವು ನಿಮಗಾಗಿ ಏನನ್ನು ಹಾರೈಸುತ್ತೇವೆಂಬುದನ್ನು ಇದು ಯೋಗ್ಯ ರೀತಿಯಲ್ಲಿ ವ್ಯಕ್ತಪಡಿಸುತ್ತದೆ.​—⁠ಎಫೆ. 1:⁠2.

ಯೆಹೋವನು ಕ್ರಿಸ್ತ ಯೇಸುವಿನ ವಿಮೋಚನಾ ಮೌಲ್ಯದ ಯಜ್ಞದ ಮುಖೇನ ನಮಗೆ ತೋರಿಸಿರುವ ಅಪಾತ್ರ ದಯೆಗೆ ನಾವೆಷ್ಟು ಕೃತಜ್ಞರು! ಈ ವಿಮೋಚನಾ ಮೌಲ್ಯದ ಮೂಲಕ ನಮಗೆ ದೇವರ ಮುಂದೆ ಒಪ್ಪಿಗೆಯ ನಿಲುವು ಇದೆ. ನಾವಿದನ್ನು ನಮ್ಮ ಸ್ವಪ್ರಯತ್ನಗಳಿಂದ, ಅಂದರೆ ಎಷ್ಟೇ ಶ್ರದ್ಧಾಪೂರ್ವಕವಾಗಿ ಬೈಬಲನ್ನು ಅಧ್ಯಯನ ಮಾಡಿದರೂ, ಸುವಾರ್ತೆಯನ್ನು ಸಾರಿದರೂ, ಇಲ್ಲವೆ ಬೇರೆ ಸತ್ಕಾರ್ಯಗಳನ್ನು ಮಾಡುವುದರಲ್ಲಿ ತೊಡಗಿದರೂ ಎಂದಿಗೂ ಸಂಪಾದಿಸಲಾರೆವು. ಪಾಪಗಳ ಕ್ಷಮಾಪಣೆ ಮತ್ತು ನಿತ್ಯಜೀವವನ್ನು, ನಮ್ಮ ಪ್ರಯತ್ನಗಳಿಗೆ ಸಂಬಳವಾಗಿ ಕೊಡಲಾಗುವ ಬದಲಿಗೆ ಯೇಸು ಕ್ರಿಸ್ತನ ಮೂಲಕ ಸಿಗುವ ಯೆಹೋವನ ಅಪಾತ್ರ ದಯೆಯನ್ನು ಪ್ರತಿಬಿಂಬಿಸುವ ಉಡುಗೊರೆಗಳಾಗಿ ಕೊಡಲಾಗುತ್ತದೆ.​—⁠ರೋಮಾ. 11:⁠6.

ಪೌಲನು ಜೊತೆವಿಶ್ವಾಸಿಗಳಿಗೆ ಬರೆದುದು: “ನೀವು ಹೊಂದಿದ ದೇವರ ಕೃಪೆಯನ್ನು ವ್ಯರ್ಥಮಾಡಿಕೊಳ್ಳಬೇಡಿರೆಂದು ಎಚ್ಚರಿಸುತ್ತೇವೆ. ಪ್ರಸನ್ನತೆಯ ಕಾಲದಲ್ಲಿ ನಿನ್ನ ಮನವಿಯನ್ನು ಕೇಳಿದೆನು, ರಕ್ಷಣೆಯ ದಿನದಲ್ಲಿ ನಿನಗೆ ಸಹಾಯಮಾಡಿದೆನು ಎಂದು ದೇವರು ಹೇಳುತ್ತಾನಲ್ಲಾ. ಈಗಲೇ ಆ ಸುಪ್ರಸನ್ನತೆಯಕಾಲ; ಇದೇ ಆ ರಕ್ಷಣೆಯ ದಿನ.” ಒಂದನೆಯ ಶತಮಾನದಲ್ಲಿ ಯೆರೂಸಲೇಮ್‌ ನಾಶವಾಗುವುದಕ್ಕೆ ಮೊದಲು ಒಂದು “ಸುಪ್ರಸನ್ನತೆಯಕಾಲ” ಇತ್ತು. ಯೆಹೋವನನ್ನು ಪ್ರೀತಿಸುತ್ತಿದ್ದ ಪ್ರಾಮಾಣಿಕ ಹೃದಯದ ಜನರನ್ನು ಆಗ ಆಧ್ಯಾತ್ಮಿಕವಾಗಿ ರಕ್ಷಿಸಲಾಯಿತು. ಇದು ಕಟ್ಟಕಡೆಗೆ, ಸಾ.ಶ. 70ರಲ್ಲಿ ಯೆರೂಸಲೇಮ್‌ ನಾಶಗೊಳ್ಳುವುದಕ್ಕೆ ಮೊದಲು ಅಲ್ಲಿಂದ ಪಲಾಯನ ಮಾಡಿದವರೆಲ್ಲರ ಶಾರೀರಿಕ ರಕ್ಷಣೆಗೂ ನಡೆಸಿತು.​—⁠2 ಕೊರಿಂ. 6:​1, 2.

ಇಂದು ನಾವು ಸಹ ಒಂದು “ಸುಪ್ರಸನ್ನತೆಯ ಕಾಲ” ಮತ್ತು “ರಕ್ಷಣೆಯ ದಿನ”ದಲ್ಲಿ ಜೀವಿಸುತ್ತಿದ್ದೇವೆ. ಯೆಹೋವನು ಯಾರನ್ನು ತನ್ನ ಸೇವಕರನ್ನಾಗಿ ಅಂಗೀಕರಿಸುತ್ತಾನೊ ಮತ್ತು ಯಾರು ಆಧ್ಯಾತ್ಮಿಕವಾಗಿ ರಕ್ಷಣೆಹೊಂದುತ್ತಿದ್ದಾರೊ ಅವರಿಗೆ, ಈಗ ಅತಿ ನಿಕಟವಾಗಿರುವ “ಯೆಹೋವನ ಮಹಾದಿನ”ದಲ್ಲಿ ಶಾರೀರಿಕವಾಗಿ ರಕ್ಷಣೆಹೊಂದುವ ಪ್ರತೀಕ್ಷೆಯಿದೆ.​—⁠ಚೆಫ. 1:14.

ಯೆಹೋವನ ದಿನದ ಬರೋಣವು ನಮ್ಮ ಮೇಲೆ ಗಂಭೀರವಾದ ಜವಾಬ್ದಾರಿಯನ್ನು ಹೊರಿಸುತ್ತದೆ. ಜನರನ್ನು ನಾವು ಎಚ್ಚರಿಸುವುದೂ ಅಗತ್ಯ, ಪ್ರಾಮಾಣಿಕ ಹೃದಯದ ಜನರು ಯೆಹೋವನ ಅಪಾತ್ರ ದಯೆಯಿಂದ ಪ್ರಯೋಜನ ಪಡೆದು ರಕ್ಷಣೆಯನ್ನು ಹೊಂದುವಂತೆ ಅವರಿಗೆ ಸಹಾಯಮಾಡುವುದೂ ಅಗತ್ಯ. ಪೌಲನು ಈ ಜವಾಬ್ದಾರಿಯನ್ನು ಆಳವಾಗಿ ಗಣ್ಯಮಾಡಿದನು. ಅವನು ಬರೆದುದು: “ಸಾರದಿದ್ದರೆ ನನ್ನ ಗತಿಯನ್ನು ಏನು ಹೇಳಲಿ.” ಅವನಿಗೆ ಹೇಗನಿಸುತ್ತಿತ್ತೆಂಬುದನ್ನು ಸಹ ಅವನು ಈ ಮಾತುಗಳಲ್ಲಿ ವ್ಯಕ್ತಪಡಿಸಿದನು: “ಜ್ಞಾನಿಗಳಿಗೂ ಮೂಢರಿಗೂ ತೀರಿಸಬೇಕಾದ ಒಂದು ಋಣ ನನ್ನ ಮೇಲೆ ಅದೆ. ಹೀಗಿರುವದರಿಂದ . . . ನಿಮಗೆ ಸಹ ಸುವಾರ್ತೆಯನ್ನು ಸಾರುವದಕ್ಕೆ ನಾನಂತೂ ಸಿದ್ಧವಾಗಿದ್ದೇನೆ.”​—⁠1 ಕೊರಿಂ. 9:16; ರೋಮಾ. 1:​14, 15.

ಜನರಿಗೆ ಎಚ್ಚರಿಕೆ ನೀಡುವ ಆ ಮಹತ್ವಪೂರ್ಣ ಕೆಲಸವನ್ನು ನಾವು ಅಸಡ್ಡೆಮಾಡುವಲ್ಲಿ ಯೆಹೋವನು ನಮ್ಮನ್ನು ಉತ್ತರವಾದಿಗಳಾಗಿಸುತ್ತಾನೆ. ಪ್ರವಾದಿಯಾದ ಯೆಹೆಜ್ಕೇಲನಿಗೆ ಯೆಹೋವನು ಹೇಳಿದ ಈ ಮಾತುಗಳು ನಮಗೆ ತಿಳಿದಿವೆ: “ನರಪುತ್ರನೇ, ನಾನು ನಿನ್ನನ್ನು ಇಸ್ರಾಯೇಲ್‌ ವಂಶದವರ ಮೇಲೆ ಕಾವಲುಗಾರನನ್ನಾಗಿ ನೇಮಿಸಿದ್ದೇನೆ. ಹೀಗಿರಲು ನನ್ನ ಬಾಯಿಂದ ಹೊರಡುವ ಮಾತನ್ನು ಕೇಳಿ ನನ್ನ ಪರವಾಗಿ ಅವರನ್ನು ಎಚ್ಚರಿಸು. ನಾನು ದುಷ್ಟನಿಗೆ​—⁠ಸತ್ತೇ ಸಾಯುವಿ ಎಂದು ನುಡಿಯುವಾಗ ನೀನು ಅವನನ್ನು ಎಚ್ಚರಿಸದೆಯೂ ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ತನ್ನ ಪ್ರಾಣವನ್ನು ಉಳಿಸಿಕೊಳ್ಳುವಂತೆ ಅವನಿಗೆ ಬುದ್ಧಿಹೇಳದೆಯೂ ಇದ್ದರೆ ಆ ದುಷ್ಟನು ತನ್ನ ಅಪರಾಧದಿಂದ ಸಾಯಬೇಕಾಗುವದು; ಅವನ ಮರಣಕ್ಕಾಗಿ ನಿನಗೇ ಮುಯ್ಯಿತೀರಿಸುವೆನು.”​—⁠ಯೆಹೆ. 3:​17, 18.

ಈ ಕಡೇ ದಿವಸಗಳು ನಿಭಾಯಿಸಲು ಕಷ್ಟಕರವಾದ ದಿನಗಳಾಗಿವೆ. ಕುಟುಂಬ ವಿಚಾರಗಳು, ಐಹಿಕ ಕೆಲಸಗಳು, ಸಭಾ ಚಟುವಟಿಕೆ ಮತ್ತು ಸಾರುವ ಕಾರ್ಯವನ್ನು ಸಮತೋಲನದಲ್ಲಿಟ್ಟುಕೊಳ್ಳುವುದು ಸುಲಭವಲ್ಲ. ಇದಕ್ಕೆ ಕೂಡಿಸಿ, ನಿಮ್ಮಲ್ಲಿ ಅನೇಕರಿಗೆ ಅನಾರೋಗ್ಯ, ಖಿನ್ನತೆ, ವೃದ್ಧಾಪ್ಯ ಮತ್ತು ವಿರೋಧವನ್ನು ಸಹ ಎದುರಿಸಬೇಕಾಗುತ್ತಿರಬಹುದು. ನಿಮ್ಮಲ್ಲಿ ಹೆಚ್ಚಿನವರು “ಹೊರೆಹೊತ್ತವರು” ಆಗಿದ್ದೀರಿ. ನಾವು ನಿಮಗೆ, “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು” ಎಂಬ ಯೇಸುವಿನ ಹೇಳಿಕೆಗೆ ಹೊಂದಿಕೆಯಲ್ಲಿ ಸಹಾನುಭೂತಿಯನ್ನು ವ್ಯಕ್ತಪಡಿಸಲು ಬಯಸುತ್ತೇವೆ. (ಮತ್ತಾ. 11:28) ದೊಡ್ಡ ಮತ್ತು ಚಿಕ್ಕ ಪಂಥಾಹ್ವಾನಗಳ ಹೊರತೂ ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸುತ್ತ ಇರಲು ಪ್ರಯತ್ನಿಸುತ್ತಿರುವ ನಿಮ್ಮೆಲ್ಲರನ್ನು ನಾವು ಹಾರ್ದಿಕವಾಗಿ ಅಭಿನಂದಿಸಬಯಸುತ್ತೇವೆ.

ನಿಮ್ಮ ಹುರುಪಿನ ಸಾರುವ ಮತ್ತು ಬೋಧಿಸುವ ಚಟುವಟಿಕೆಯ ಫಲವಾಗಿ ಮತ್ತು ಯೆಹೋವನ ಆಶೀರ್ವಾದದ ಕಾರಣ, ಲೋಕವ್ಯಾಪಕವಾಗಿ ಪ್ರತಿ ವಾರ ಸರಾಸರಿ 4,762 ಮಂದಿ ದೀಕ್ಷಾಸ್ನಾನ ಹೊಂದುತ್ತಿದ್ದಾರೆ. ಕಳೆದ ಸೇವಾ ವರುಷದಲ್ಲಿ 1,375 ಹೊಸ ಸಭೆಗಳನ್ನು ರಚಿಸಲಾಯಿತು. ನಮ್ಮ ಹಾರೈಕೆಯೂ ಪ್ರಾರ್ಥನೆಯೂ ಏನಂದರೆ, ಈಗಾಗಲೇ 120ಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ಲಭ್ಯವಿರುವ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಎಂಬ ಪುಸ್ತಕವು ಯೆಹೋವನ ಈ “ರಕ್ಷಣೆಯ ದಿನ”ದಲ್ಲಿ ಆತನ ಅಪಾತ್ರ ದಯೆ ಮತ್ತು ಶಾಂತಿಯಿಂದ ಲಕ್ಷಾಂತರ ಜನರು ಪ್ರಯೋಜನ ಪಡೆಯಲಿ ಎಂಬುದೇ ಆಗಿದೆ.

ಆಡಳಿತ ಮಂಡಳಿಯು ನಿಮ್ಮನ್ನು ಪ್ರೀತಿಸುತ್ತದೆ ಮತ್ತು ನಾವು ನಿಮಗಾಗಿ ಪ್ರಾರ್ಥಿಸುತ್ತೇವೆ ಎಂಬ ಆಶ್ವಾಸನೆ ನಿಮಗಿರಲಿ. ನೀವು ನಮ್ಮ ಪರವಾಗಿ ಮಾಡುವ ಪ್ರಾರ್ಥನೆಗಳಿಗಾಗಿಯೂ ನಾವು ನಿಮಗೆ ಆಭಾರಿಗಳು.

ನಿಮ್ಮ ಸಹೋದರರು,

ಯೆಹೋವನ ಸಾಕ್ಷಿಗಳ ಆಡಳಿತ ಮಂಡಳಿ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ