ಬೈಬಲಿನ ದೃಷ್ಟಿಕೋನ
ದೇವದೂತರ ಕುರಿತು ನೀವೇನು ತಿಳಿದಿರಬೇಕು?
ಕಳೆದ ವಾರ ನ್ಯೂಯೋರ್ಕಿನಲ್ಲಿ ಸುಮಾರು 3,000 ಧಾರ್ಮಿಕ ಪಂಡಿತರು ನಗೆಬರಿಸುವ ಪ್ರಸಂಗಗಳಿಂದ ಹಿಡಿದು ಪೆಂಟಕೋಸ್ಟರಿಗೆ ಸಂಸ್ಕಾರಗಳ ಪ್ರಾಮುಖ್ಯತೆಯ ವರೆಗಿನ ವಿಷಯಗಳ ಮೇಲೆ 500ಕ್ಕೂ ಹೆಚ್ಚು ವರದಿಗಳನ್ನು ಕೆಳಲು ನಾಲ್ಕು ದಿವಸಗಳಲ್ಲಿ ಸಭೆಯಾಗಿ ಕೂಡಿಬಂದರು. ದೇವದೂತರುಗಳ ಕುರಿತು ಯಾರೂ ಪ್ರಸ್ತಾಪಿಸಲಿಲ್ಲ.”—ಡೆಯ್ಲಿ ನ್ಯೂಸ್, ದಶಂಬರ 26, 1982.
ಇಂದು, ಸುಮಾರು ಒಂಭತ್ತು ವರ್ಷಗಳ ಮೇಲೆಯೂ, ಪುರೋಹಿತ ವರ್ಗ ದೇವದೂತರ ಕುರಿತು ಅತಿ ಕೊಂಚವೇ ನುಡಿಯುತ್ತದೆ.ಇದೇಕೆ? ಈ ಸ್ವರ್ಗೀಯ ಸಂದೇಶವಾಹಕರನ್ನು ಅವರು ಹಳೆಯ ಪುರಾಣದ ಭಾಗವೆಂಬ ದೃಷ್ಟಿಯಲ್ಲಿ ನೋಡುವುದರಿಂದಾಗಿರ ಬಹುದೋ? ಅಥವಾ, ಅವರು ನಿಜವಾಗಿಯೂ ಅಸ್ತಿತ್ವದಲ್ಲಿದ್ದಾರೋ? ಇರುವುದಾದರೆ, ಅವರ ವಿಷಯ ನೀವೇನು ತಿಳಿದಿರ ಬೇಕು?
ಅವರು ಅಸ್ತಿತ್ವದಲ್ಲಿದ್ದಾರೋ?
ಕೆಲವು ತತ್ವಜ್ಞಾನಿಗಳು ವಾದಿಸುವಂತೆ, ದೇವದೂತರು ಕೇವಲ “ಶಕ್ತಿಗಳು” ಅಥವಾ “ವಿಶ್ವದ ಚಲನೆಗಳು” ಆಗಿರುವುದಿಲ್ಲ. ದೇವರ ವಾಕ್ಯವಾದ ಬೈಬಲಿನಲ್ಲಿ ಅವರ ವಿಷಯ ನೂರಾರು ಸಲ ಹೇಳುವಷ್ಟು ವಾಸ್ತವವಾಗಿ ಅವರಿದ್ದಾರೆ. ಬೈಬಲಿನ ಮೂಲಭಾಷೆಗಳಲ್ಲಿ “ದೇವದೂತ” ಎಂಬುದನ್ನು ಸೂಚಿಸುವ ಪದಗಳು (ಹಿಬ್ರು, ಮಾಲಖ್; ಗ್ರೀಕ್ ಆ್ಯಗ್ಗಿಲೊಸ್) ಅಕ್ಷರಾರ್ಥಕವಾಗಿ “ಸಂದೇಶವನ್ನು ತರುವವನು” ಅಥವಾ “ದೂತ” ಎಂಬ ಅರ್ಥ ಕೊಡುತ್ತವೆ. ಈ ಪದಗಳು ಬೈಬಲಿನಲ್ಲಿ ಸುಮಾರು 400 ಸಲ ಬಂದು, ಕೆಲವು ಸಲ ಮನುಷ್ಯರನ್ನೂ, ಆದರೆ ಸಾಮಾನ್ಯವಾಗಿ, ಆತ್ಮ ಜೀವಿಗಳನ್ನೂ ಸೂಚಿಸುತ್ತವೆ.
ಮಾನೋಹನ ಬಂಜೆಯಾಗಿದ್ದ ಹೆಂಡತಿಗೆ ಆಕೆಯ ಮಗನಾದ ಸಂಸೋನನ ಗರ್ಭಧಾರಣೆಯನ್ನು ತಿಳಿಸಿದ ದೂತನು ಆಕೆಗೆ ವಾಸ್ತವವಾಗಿದ್ದನು. ಅಬ್ರಹಾಮನಿಗೂ ಅವನ ಹೆಂಡತಿಗೂ ತೋರಿ ಬಂದ ಮೂವರು ದೇವದೂತರು, ಲೋಟನನ್ನು ಹುಡುಕಿ ಕೊಂಡು ಹೋದ ಇಬ್ಬರು ಮತ್ತು ದೊಡ್ಡ ಮರದಡಿಯಲ್ಲಿ ಕೂತು ಗಿದ್ಯೋನನೊಂದಿಗೆ ಮಾತಾಡಿದ ದೂತನು—ಇವರೆಲ್ಲರೂ ವಾಸ್ತವವಾಗಿದ್ದರು. (ಆದಿಕಾಂಡ 18:1-15; 19:1-5; ನ್ಯಾಯಸ್ಥಾಪಕರು 6:11-22; 13:3-21) ಯೇಸುವಿನ ಜನನ ಸಮಯದಲ್ಲಿ ಒಬ್ಬ ದೂತನು ಪ್ರಭೆ ಮತ್ತು ಪ್ರಕಾಶಗಳ ಮಧ್ಯೆ ಥಟ್ಟನೇ ಕುರುಬರ ಗುಂಪಿಗೆ ಕಾಣಿಸಿ ಕೊಂಡನು.—ಲೂಕ 2:8, 9.
ಆ ದೇವದೂತರು ನಿಜವಾಗಿಯೂ ದೇವದೂತರಾಗಿದ್ದರು. ಅದೊಂದು ಮನೋಭ್ರಾಂತಿ ಅಥವಾ ವ್ಯಕ್ತಿಸ್ರರೂಪವಿಲ್ಲದ್ಲ ಶಕ್ತಿಯಾಗಿರಲಿಲ್ಲ. ದೇವರಿಂದ ಬಂದ ದೂತರಾಗಿದ್ದ ಅವರು ನಿರ್ದಿಷ್ಟ ಉದ್ದೇಶವನ್ನು ನೆರವೇರಿಸಿದರು ಮತ್ತು ಯೋಗ್ಯವಾಗಿಯೇ ಈ ಸಂಭವಗಳು ಇಂದು ನಮ್ಮ ಪ್ರಯೋಜನಕ್ಕಾಗಿ ಬೈಬಲಿನಲ್ಲಿ ದಾಖಲೆಯಾಗಿವೆ. (2 ತಿಮೊಥಿ 3:16) ಬೈಬಲು ಹೀಗೆ, ದೇವದೂತರ ಕುರಿತು ನಮಗೆ ತಿಳಿಯ ಬೇಕಾಗಿರುವ ಪ್ರಾಮುಖ್ಯ ವಿವರಣೆಗಳನ್ನು ತಿಳಿಸುತ್ತದೆ. ಆದರೆ ಇವುಗಳಲ್ಲಿ ಕೆಲವು ಸಾಂಪ್ರದಾಯಿಕ ಊಹೆಗಳಿಗೆ ಪ್ರತಿಕೂಲವಾಗಿರುತ್ತವೆ.
ಅವರ ರೂಪ ಹೇಗಿದೆ?
ದೇವದೂತರು ಸಂದರಿಯರಾದ ಸ್ತ್ರೀಯರು ಅಥವಾ ರೆಕ್ಕೆಗಳಿರುವ, ಬಿಳಿ ನಿಲುವಂಗಿಗಳಲ್ಲಿ ಮಂದಹಾಸ ಬೀರುತ್ತಾ ಚಿಕ್ಕ ಕಿನ್ನರಿಗಳನ್ನು ಬಾರಿಸುತ್ತಾ ಗಾಳಿಯಲ್ಲಿ ಹಾರುತ್ತಿರುವ ದುಂಡುದುಂಡಾದ ಮಗು ಸದೃಶ ಜೀವಿಗಳೆಂದು ನೀವು ಚಿತ್ರಿಸಿರಬಹುದು. ಹಾಗಿರುವಲ್ಲಿ ಇವು ಗ್ರೀಕ್ ಪುರಾಣ ಕಥೆಗಳಂಥ ವಿಧರ್ಮಿ ವಿಚಾರಗಳಿಂದ ಬಂದಿರುವ ತಪ್ಪು ಕಲ್ಪನೆಗಳೆಂದು ನೀವು ತಿಳಿಯಬೇಕು. ಅಥವಾ, ಈ ವಿಚಾರಗಳು ಬೈಬಲನ್ನು ಬರೆದು ಮುಗಿಸಿದ ಬಳಿಕ ಆಯ್ದು ಕೊಂಡ ವಿಚಾರಗಳು. ಬೈಬಲಿನ ಸೂಚಕರೂಪದ ದರ್ಶನಗಳಲ್ಲಿ ಸೆರಾಫ ಮತ್ತು ಕೆರೂಬಿಯರಂಥ ಆತ್ಮ ಜೀವಿಗಳಿಗೆ ರೆಕ್ಕೆಗಳಿವೆ.—ಯೆಶಾಯ 6:2; ಯೆಹೆಜ್ಕೇಲ 10:5; ಪ್ರಕಟಣೆ 14:6.
ದೇವರ ವಾಕ್ಯವು ದೇವದೂತರನ್ನು ಅವರು ಬಲಾಢ್ಯ ಆತ್ಮಗಳೆಂದು ವರ್ಣಿಸುತ್ತದೆ ಮತ್ತು ಆತ್ಮ (SPIRIT) ಅದೃಶ್ಯವಾಗಿದೆ. (1 ಅರಸು 22:21; ಕೀರ್ತನೆ 34:7; 91:11) ಇಸ್ರಾಯೇಲ್ಯರ ಶತ್ರು ಪಾಳೆಯದಲ್ಲಿದ್ದ 1,85,000 ಜನರನ್ನು ಒಂದೇ ಸಾಯಂಕಾಲ ಸಂಹರಿಸಿದ್ದು “ಯೆಹೋವನ ದೂತ”ನೇ. (ಯೆಶಾಯ 37:36) ಮತ್ತು, ದೇವದೂತರು ಮನುಷ್ಯರಿಗೆ ತೋರಿ ಬಂದಾಗ ಅವರು ಯಾವಾಗಲೂ ಪೂರ್ಣ ವಸ್ತ್ರಧಾರಣೆ ಮಾಡಿದ್ದ ಪುರುಷರಾಗಿ ತೋರಿಬಂದರೇ ಹೊರತು ಸ್ತ್ರೀಯರಾಗಿ ಅಥವಾ ಮಕ್ಕಳಾಗಿ ತೋರಿ ಬರಲಿಲ್ಲ. ಮನುಷ್ಯ ಜಾತಿಗಿಂತ ಕೆಳಜಾತಿಯವರಾಗಿಯೂ ತೋರಿ ಬರಲಿಲ್ಲ.
ಈ ಬಲಾಢ್ಯ ಆತ್ಮ ಜೀವಿಗಳು ಎಲ್ಲಿಂದ ಬಂದರು? “ಭೂಪರಲೋಕಗಳಲ್ಲಿರುವ ದೃಶ್ಯ-ಅದೃಶ್ಯವಾದವುಗಳೆಲ್ಲವೂ ಆತನಲ್ಲಿ [ಯೇಸು] ಸೃಷ್ಟಿಸಲ್ಪಟ್ಟವು” ಎಂದು ಬೈಬಲು ಹೇಳುತ್ತದೆ. (ಕೊಲೊಸ್ಸೆಯವರಿಗೆ 1:16) ಯೆಹೋವ ದೇವರು ತನ್ನ ಚೊಚ್ಚಲು ಮಗನ ಮುಖಾಂತರ ಮನುಷ್ಯರಿಗಿಂತ ಮೊದಲಾಗಿ ದೇವದೂತರನ್ನು ಸೃಷ್ಟಿಸಿದ್ದು ಮಾತ್ರವಲ್ಲ, ಅವರನ್ನು ಮನುಷ್ಯರಿಗಿಂತ ಶ್ರೇಷ್ಠ ದರ್ಜೆಯವರನ್ನಾಗಿಯೂ ಉಂಟು ಮಾಡಿದನು.—ಯೋಬ 38:4, 7; 2 ಪೇತ್ರ 2:11.
ಅವರಿಗೆ ವ್ಯಕ್ತಿತ್ವಗಳಿವೆಯೇ?
ಮನುಷ್ಯರಿಗಿರುವಂತೆ, ದೇವದೂತರಿಗೂ ಅನಿಸಿಕೆಗಳಿವೆ. ಭೂಸೃಷ್ಟಿಯನ್ನು ನೋಡಿದ ಬಳಿಕ ದೇವದೂತರು “ಒಟ್ಟಾಗಿ ಉತ್ಸಾಹ ಧ್ವನಿ” ಗೈದರೆಂದೂ, “ಆನಂದ ಘೋಷ”ವನ್ನು ಸಹ ಮಾಡಿದ್ದರೆಂದೂ ನಮಗೆ ಹೇಳಲ್ಪಟ್ಟಿದೆ. (ಯೋಬ 38:7) “ಒಬ್ಬ ಪಾಪಿಯು ದೇವರ ಕಡೆಗೆ ತಿರುಗಿ ಕೊಳ್ಳುವ ವಿಷಯದಲ್ಲಿ ದೇವದೂತರ ಮುಂದೆ ಸಂತೋಷವಾಗುವುದು” ಎಂದೂ ಬೈಬಲು ತಿಳಿಸುತ್ತದೆ. (ಲೂಕ 15:10) ಈ ವಚನಗಳಲ್ಲಿ ವರ್ಣಿಸಿದ ಅಪಾರ ಆನಂದವನ್ನು ವ್ಯಕ್ತಿರೂಪವಲ್ಲದ ಯಾವ “ಶಕ್ತಿಯೂ” ಅನುಭವಿಸಲಾರದೆಂಬುದು ನಿಶ್ಚಯ.
ದೇವದೂತರಿಗೆ ಸಾಮರ್ಥ್ಯಮಿತಿಯೂ ಇದೆ. ಕ್ರಿಸ್ತನ ಮತ್ತು ಭವಿಷ್ಯದ ಕುರಿತಾದ ಕೆಲವು ನಿಜತ್ವಗಳನ್ನು ಮಾನವ ಪ್ರವಾದಿಗಳಿಗೆ ತಿಳಿಸಲಾಗಿತ್ತಾದರೂ, ದೇವದೂತರಿಗೆ ತಿಳಿಸಲಾಗಿರಲಿಲ್ಲ. “ದೇವದೂತರಿಗೂ ಈ ಸಂಗತಿಗಳನ್ನು ಲಕ್ಷ್ಯವಿಟ್ಟು ನೋಡಬೇಕೆಂಬ ಅಪೇಕ್ಷೆ ಉಂಟು” ಎಂದೂ ದೇವರ ವಾಕ್ಯ ತಿಳಿಸುತ್ತದೆ. (1 ಪೇತ್ರ 1:10-12) ಕರ್ತನ ಬರೋಣಕ್ಕೆ ದೇವರು ಆಯ್ದು ಕೊಂಡ ನಿರ್ದಿಷ್ಟ ದಿನದ ಕುರಿತು ಯೇಸು ಹೇಳಿದ್ದು: “ಆ ದಿನದ ವಿಷಯವೂ ಆ ಗಳಿಗೆಯ ವಿಷಯವೂ ನನ್ನ ತಂದೆಯೊಬ್ಬನಿಗೆ ತಿಳಿಯುವದೇ ಹೊರತು ಮತ್ತಾರಿಗೂ ತಿಳಿಯದು. ಪರಲೋಕದಲ್ಲಿರುವ ದೂತರಿಗೂ ತಿಳಿಯದು, ಮಗನಿಗೂ ತಿಳಿಯದು.”—ಮತ್ತಾಯ 24:36.
ಇದಲ್ಲದೇ, ಮೀಕಾಯೇಲ ಮತ್ತು ಗಬ್ರಿಯೇಲ ಎಂಬ ಇಬ್ಬರು ದೂತರ ಹೆಸರುಗಳು ಬೈಬಲಲ್ಲಿ ತೋರಿ ಬರುತ್ತವೆ. (ದಾನಿಯೇಲ 12:1; ಲೂಕ 1:26) ಇದು ಅವರ ವ್ಯಕ್ತಿ ಲಕ್ಷಣಕ್ಕೆ ಹೆಚ್ಚಿನ ಸಾಬೀತನ್ನು ಒದಗಿಸುವುದಿಲ್ಲವೇ? ವ್ಯಕ್ತಿ ವೈಲಕ್ಷಣದ ಅವರನ್ನು ಕಂಪ್ಯೂಟರ್ ಅಥವಾ ಯಂತ್ರಮನುಷ್ಯನಂತೆ ಒಂದು ನಿರ್ದಿಷ್ಟ ವಿಧದಲ್ಲಿ ವರ್ತಿಸುವರೇ ಕ್ರಮಪಡಿಸಿರುವುದಿಲ್ಲ. ಬದಲಿಗೆ ಅವರಿಗೆ ವಿವೇಚನಾಶಕ್ತಿಯ ವರವು ಕೊಡಲ್ಪಟ್ಟಿದೆ. ಸ್ವಂತ ನೈತಿಕ ನಿರ್ಣಯ ಸ್ವಾತಂತ್ರ್ಯ ಅವರಿಗಿದೆ. ಹೀಗಾಗಿ, ನೈತಿಕ ಇಚ್ಛಾ ಸ್ವಾತಂತ್ರ್ಯವಿದ್ದ ಅವರಲ್ಲಿ ಕೆಲವು ದೇವದೂತರು ದೇವರ ವಿರುದ್ಧ ದಂಗೆ ಏಳಲು ನಿರ್ಧರಿಸಿ, ಸೈತಾನ ಮತ್ತು ಅವನ ದೆವ್ವಗಳಾದರು.—ಆದಿಕಾಂಡ 6:1-4;ಯೂದ 6; ಪ್ರಕಟಣೆ 12:7-9.
ಅವರನ್ನು ಆರಾಧಿಸಬೇಕೋ?
ದೆವ್ವಗಳ ಅಸ್ತಿತ್ವ ಕಟ್ಟುಕತೆಯಲ್ಲ. ವಾಸ್ತವವೆಂದು ನಾವು ಒಪ್ಪಿಕೊಳ್ಳಬಹುದಾದರೂ ನಾವು ಇದರಲ್ಲಿ ಅತಿಗಾಮಿಗಳಾಗ ಬಾರದು. ಬೈಬಲ್ ದೇವದೂತರ ಆರಾಧನೆಯನ್ನು ಖಂಡಿಸುತ್ತದಾದರೂ, ಕೆಲವು ಧಾರ್ಮಿಕ ಸಂಸ್ಥೆಗಳು ಇದಕ್ಕೆ ಅನುಚಿತ ಪ್ರಾಧಾನ್ಯವನ್ನು ಕೊಟ್ಟಿವೆ. (ಕೊಲೊಸ್ಸೆಯವರಿಗೆ 2:18; ಪ್ರಕಟಣೆ 22:8, 9) ಕ್ಯಾಥಲಿಕ್ ಚರ್ಚು ಮೀಕಾಯೇಲ ಮತ್ತು ಗಬ್ರಿಯೇಲರನ್ನು ಆರಾಧನಾ ವಸ್ತುಗಳಾಗಿ ರೂಪಾಂತರಿಸಿದೆ. ಮತ್ತು ಈಸ್ಟರ್ನ್ ಆರ್ಥಡಕ್ಷ್ ಚರ್ಚುಗಳ ಪ್ರಾರ್ಥನಾಮಾಲೆಯಲ್ಲಿ ದೇವದೂತರು ತೀರಾ ಪ್ರಧಾನರು. ಅಪೊಸ್ತಲ ಯೋಹಾನನು ಯೆಹೋವನ ದೂತನ ಪಾದಗಳಿಗೆ ಬಿದ್ದಾಗ, ಅವನು “ಮಾಡ ಬೇಡ, ನೋಡು ನಾನು . . . ಜೊತೆಯ ದಾಸನಾಗಿದ್ದೇನೆ” ಎಂದು ಹೇಳಿದುದಕ್ಕೆ ಇದೆಷ್ಟು ವ್ಯತಿರಿಕ್ತ.—ಪ್ರಕಟಣೆ 19:10.
ಹಾಗಾದರೆ, ದೇವದೂತರ ವಿಷಯದಲ್ಲಿ ಇಷ್ಟು ಗಲಿಬಿಲಿಯೇಕೆ? ಏಕಂದರೆ “ಪ್ರಕಾಶರೂಪವುಳ್ಳ ದೇವದೂತನ” ವೇಷ ಹಾಕಿಕೊಳ್ಳುವ ಸೈತಾನನು “ನಂಬಿಕೆಯಿಲ್ಲದವರ ಮಂಕು” ಮಾಡಿದ್ದಾನೆ. (2 ಕೊರಿಂಥದವರಿಗೆ 4:4; 11:14) ಹೀಗಿರುವುದರಿಂದ, ಇಂದು ಅನೇಕರು ದೇವದೂತರ ಅಸ್ತಿತ್ವ ಮತ್ತು ಪ್ರಕೃತಿಯ ಕುರಿತು ದೇವರ ವಾಕ್ಯ ಹೇಳುವುದನ್ನು ಅಂಗೀಕರಿಸುವ ಬದಲಿಗೆ ತಮ್ಮ ಸ್ವಂತ ಅಭಿಪ್ರಾಯಗಳನ್ನೇ ಹಿಡಿದು ಕೊಳ್ಳುವರೆಂದು ಅಪೇಕ್ಷಿಸುವುದು ನ್ಯಾಯಸಮ್ಮತವಲ್ಲವೇ? ಹೌದು, ಇಂದು ದೇವದೂತರ ವಿಷಯ ಕೊಂಚವೇ ನುಡಿಯಬಹುದಾದರೂ, ಅವರು ನಿಜವಾಗಿಯೂ ಅಸ್ತಿತ್ವದಲ್ಲಿದ್ದಾರೆ ಮತ್ತು ಯೆಹೋವನ ದೂತರಾಗಿ ಗೌರವಯುಕ್ತವಾದ ಸೇವೆಯನ್ನು ಮಾಡುತ್ತಾರೆಂಬುದಕ್ಕೆ ನಮಗೆ ಬೈಬಲ್ ದಾಖಲೆಯ ಮೂಲಕ ದೇವರ ಖಾತ್ರಿ ಇದೆ.—ಇಬ್ರಿಯರಿಗೆ 1:7, 14; 6:18. (g90 3/8)
[ಪುಟ 20 ರಲ್ಲಿರುವಚಿತ್ರ]
ಕೂಸುಸದೃಶವಾದ ರೆಕ್ಕೆಗಳುಳ್ಳ ಜೀವಿಗಳಾಗಿ ಮಾಡಿರುವ ದೇವದೂತರ ಚಿತ್ರೀಕರಣ ವಿಧರ್ಮಿ ವಿಚಾರಗಳಿಂದ ಬಂದಿರುತ್ತದೆ
[ಕೃಪೆ]
Cupid a Captive by François Boucher, c. 1754