ವಯಸ್ಸಾದವರನ್ನು ಪರಾಮರಿಸುವುದು—ವರ್ಧಿಸುತ್ತಿರುವ ಒಂದು ಸಮಸ್ಯೆ
ಒಬ್ಬ ಚಿಕ್ಕ ಹುಡುಗಿ ತನ್ನ ತಾಯಿಯನ್ನು ಹೀಗೆ ಪ್ರಶ್ನಿಸಿದಳೆಂಬ ಕಥೆಯಿದೆ: “ನಾವೆಲ್ಲರೂ ಸೊಗಸಾದ ಬಟ್ಟಲುಗಳಲ್ಲಿ ಊಟ ಮಾಡುವಾಗ ಅಜ್ಜಿ ಏಕೆ ಮರದ ಬಟ್ಟಲ್ಲಲಿ ಊಟ ಮಾಡುತ್ತಾರೆ?” ಆಕೆಯ ತಾಯಿ ವಿವರಿಸಿದ್ದು: “ಅಜಿಯ್ಜ ಕೈ ನಡುಗುವುದರಿಂದ ಅವರು ನಮ್ಮ ಉತ್ತಮ ಬಟ್ಟಲುಗಳನ್ನು ಬೀಳಿಸಿ ಒಡೆಯ ಬಹುದಾದ ಕಾರಣದಿಂದಲೇ ಅವರು ಮರದ ಬಟ್ಟಲನ್ನು ಉಪಯೋಗಿಸುತ್ತಾರೆ.” ಇದನ್ನು ಒಂದು ಕ್ಷಣ ಯೋಚಿಸಿದ ಬಳಿಕ ಆ ಚಿಕ್ಕ ಹುಡುಗಿ ಕೇಳಿದ್ದು: “ಹಾಗಾದರೆ ಆ ಮರದ ಬಟ್ಟಲನ್ನು ನನಗಾಗಿ ಉಳಿಸಿ. ನಾನು ಬೆಳೆದಾಗ ಅದನ್ನು ನಿಮ್ಮ ಉಪಯೋಗಕ್ಕಾಗಿ ಇಡುತ್ತೇನೆ.” ಬರಲಿದ್ದ ಸಂಗತಿಗಳ ಈ ಪೂರ್ವವೀಕ್ಷಣ ತಾಯಿಯನ್ನು ದಿಗಿಲುಗೊಳಿಸಿದ್ದಿರಬೇಕು, ಹೌದು, ನಡುಕವನ್ನೂ ಬರಿಸಿದ್ದಿರಬೇಕು. ಆದರೆ, ಪುನರಾಲೋಚನೆಯ ಬಳಿಕ, ತನ್ನ ಚಿಕ್ಕ ಹುಡುಗಿ ತನ್ನ ಆರೈಕೆ ಮಾಡಲು ಯೋಜಿಸುತ್ತಿದ್ದಾಳೆಂಬ ಆಶ್ವಾಸನೆಯನ್ನೂ ಅವಳಿಗೆ ಕೊಟ್ಟಿರಬಹುದು!
ಆದರೆ ಅನೇಕ ವೃದ್ಧರಿಗೆ ಇಷ್ಟು ಉಜ್ವಲ ಪ್ರತೀಕ್ಷೆಯಿರಲಿಕ್ಕಿಲ್ಲ. ಅವರು ಲೋಕದ ಅನೇಕ ಭಾಗಗಳಲ್ಲಿ ಜನಸಂಖ್ಯೆಯ ಅತಿ ವೇಗವಾಗಿ ಹೆಚ್ಚುತ್ತಿರುವ ಭಾಗವಾಗಿದ್ದಾರೆ. ಆಗಸ್ಟ್ 1987ರ ವರ್ಲ್ಡ್ ಪ್ರೆಸ್ ರಿವ್ಯೂ ವರದಿ ಮಾಡುವುದೇನಂದರೆ ಸುಮಾರು 60 ಕೋಟಿ ಜನರು, ಅಂದರೆ ಆಗಿನ ಭೂಗ್ರಹದ ಜನಸಂಖ್ಯೆಯಲ್ಲಿ 12 ಪ್ರತಿಶತ, ಆಗ 60ಕ್ಕಿಂತ ಹೆಚ್ಚು ವಯಸ್ಸಿನವರಾಗಿದ್ದರು.
ಅಮೆರಿಕದ ಸಂಯುಕ್ತ ರಾಜ್ಯಗಳಲ್ಲಿ, ವೃದ್ಧರು ಹದಿಹರೆಯದವರಿಗಿಂತ ಹೆಚ್ಚು ವೇಗವಾಗಿ ವೃದ್ಧಿಯಾಗುವುದು ಇದು ಮೊದಲ ಬಾರಿ. ನ್ಯೂ ಯೋರ್ಕ್ ನಗರದ ಒಂದು ಪತ್ರಿಕೆಯ ವಿಜ್ಞಾನ ಸಂಪಾದಕನು ವರದಿ ಮಾಡಿದ್ದು: “ಮೂರು ಕೋಟಿ ಅಮೆರಿಕನರು ಈಗ 65 ಯಾ ಅದಕ್ಕೂ ಹೆಚ್ಚು ವಯಸ್ಸಾದವರು. ನಮ್ಮಲ್ಲಿ ಎಂಟು ಜನರಲ್ಲಿ ಒಬ್ಬನ ಪ್ರಮಾಣದಲ್ಲಿರುವ ಇದು ಹಿಂದೆಂದೂ ಇದ್ದುದಕ್ಕಿಂತ ಹೆಚ್ಚು. ಮತ್ತು ವಯಸ್ಸಾದವರ ಸಂಖ್ಯೆ ಉಳಿದ ಜನಸಂಖ್ಯೆಗಿಂತ ಇಮ್ಮಡಿಯಾಗಿ ವೃದ್ಧಿಯಾಗುತ್ತಿದೆ. . . . 1786ರಲ್ಲಿ ಅಮೆರಿಕದವರ ಸರಾಸರಿ ಆಯುಸ್ಸು 35 ಆಗಿತ್ತು. ಆದರೆ 1989ರಲ್ಲಿ ಹುಟ್ಟಿದ ಅಮೆರಿಕದ ಶಿಶುವಿನ ಜೀವಿತಕಾಲದ ನಿರೀಕ್ಷಣೆ 75.”
ಕೆನಡದಲ್ಲಿ, ಅತಿ ವೃದ್ಧರ ಅಂದರೆ 85 ಮತ್ತು ಹೆಚ್ಚು ವಯಸ್ಸಿನವರ ಸಂಖ್ಯೆ ಈ ಶತಮಾನದ ಅಂತ್ಯದೊಳಗೆ ಮುಮ್ಮಡಿ ಹೆಚ್ಚಾಗಲಿಕ್ಕಿದೆ.
ಯೂರೋಪಿನಲ್ಲಿ ಒಂದು ನೂರು ವರುಷಗಳ ಹಿಂದೆ, ಅದರ ಒಟ್ಟು ಜನಸಂಖ್ಯೆಯಲ್ಲಿ ವಯಸ್ಸಾದವರು 1 ಪ್ರತಿಶತ ಮಾತ್ರ ಇದ್ದರು. ಇಂದು ಅವರ ಸಂಖ್ಯೆ 17 ಪ್ರತಿಶತಕ್ಕೆ ಏರಿದೆ.
“ತೃತೀಯ ಜಗತ್ತಿನಲ್ಲಿ ವಯಸ್ಸಾಗುವಿಕೆ” ಯ ಕುರಿತು ಯು. ಎಸ್. ಸೆನ್ಸಸ್ ಬ್ಯೂರೋ ವರದಿಯೊಂದು, “ವಯಸ್ಸಾದವರ ಸಂಖ್ಯಾವೃದ್ಧಿಯಲ್ಲಿ ಐದರಲ್ಲಿ ನಾಲ್ಕಂಶ ವೃದ್ಧಿ ತೃತೀಯ ಜಗತ್ತಿನಲ್ಲಿ ಆಗುತ್ತಿದೆ” ಎಂದು ಹೇಳಿತು.
ನಾಲ್ಕು ದಶಕಗಳ ಹಿಂದೆ ಚೈನೀಸ್ ಜನರ ಆಯುಸ್ಸಿನ ನಿರೀಕ್ಷಣೆ ಸುಮಾರು 35 ಆಗಿತ್ತು. ಆದರೆ 1982ರೊಳಗೆ ಈ ಸಂಖ್ಯೆ 68ಕ್ಕೆ ಧುಮುಕಿತ್ತು. ಇಂದು 9 ಕೋಟಿಗೂ ಹೆಚ್ಚು ಚೀನಿಯರು ವಯಸ್ಸಾದವರೆಂದು ಎಣಿಸಲ್ಪಡುತ್ತಾರೆ, ಮತ್ತು ಈ ಶತಕದ ಅಂತ್ಯದೊಳಗೆ ಅವರ ಸಂಖ್ಯೆ 13 ಕೋಟಿಗೆ ಯಾ ಜನಸಂಖ್ಯೆಯ 11 ಸೇಕಡಕ್ಕೆ ಏರಲಿರುವುದು.
ನಿಮ್ಮ ಸ್ವಂತದವರನ್ನು ಪರಾಮರಿಸಲು ವಿಶೇಷ ಪ್ರಯತ್ನ
ಅತಿ ವೃದ್ಧರ ಸಂಖ್ಯೆ ಲೋಕಾದ್ಯಂತ ಹೆಚ್ಚುತ್ತಿರುವಾಗ ಅವರನ್ನು ಹೇಗೆ ಪರಾಮರಿಸುವುದೆಂಬ ಗಾಬರಿಗೊಳಿಸುವ ಪ್ರಶ್ನೆ ಹೆಚ್ಚು ಕಠಿಣವಾಗುತ್ತದೆ. ಬೈಬಲ್ ಸಮಯಗಳಲ್ಲಿ ಈ ಸಮಸ್ಯೆ ಕಷ್ಟಕರವಾಗಿರಲಿಲ್ಲ. ಅವರಿಗೆ ವಿಸ್ತೃತ ಕುಟುಂಬಗಳಿದ್ದವು. ಅಲ್ಲಿ ಮಕ್ಕಳು, ತಂದೆತಾಯಿಗಳು, ಅಜ್ಜ ಅಜ್ಜಿ ಕೂಡಿ ಜೀವಿಸುತ್ತಿದ್ದರು. ಮಕ್ಕಳು ಮತ್ತು ಅಜ್ಜ ಅಜ್ಜಿ, ಒಬ್ಬರಿಗೊಬ್ಬರು ಪ್ರಯೋಜನ ತಂದುಕೊಂಡು ಪರಸ್ಪರ ಪ್ರಭಾವ ಬೀರುವ ಕಾರ್ಯ ನಡೆಸಿದರು. ಮತ್ತು ತಂದೆತಾಯಿಗಳು ಲೌಕಿಕ ಒದಗಿಸುವಿಕೆಯನ್ನು ಮಾಡಿದ್ದು ಮಾತ್ರವಲ್ಲ ವೃದ್ಧರಿಗೆ ಬೇಕಾದ ವಿಶೇಷ ಆರೈಕೆಯೂ ಕುಟುಂಬದಲ್ಲಿ ದೊರೆಯುವಂತೆ ನೋಡಿದರು. ಇಂಥ ವೃದ್ಧರ ಆರೈಕೆಯ ವಿಸ್ತೃತ ಕುಟುಂಬಗಳು ಇಂದು ಕೆಲವು ದೇಶಗಳಲ್ಲಿ ಇನ್ನೂ ಅಸ್ತಿತ್ವದಲ್ಲಿವೆ. (ದೃಷ್ಟಾಂತಕ್ಕೆ, ದಯವಿಟ್ಟು 8ನೆಯ ಪುಟದ ಬಾಕ್ಸ್ ನೋಡಿ.) ಆದರೆ, ಹೆತ್ತವರು ಮತ್ತು ಮಕ್ಕಳಿಗೆ ಪರಿಮಿತವಾಗಿರುವ ಕುಟುಂಬ ವೃತ್ತಗಳಿರುವ ಹೆಚ್ಚು ಸಮೃದ್ಧ ರಾಷ್ಟ್ರಗಳಲ್ಲಿ ವಿಷಯ ಹೀಗಿರುವುದಿಲ್ಲ. ಮಕ್ಕಳು ಬೆಳೆದು ವಿವಾಹವಾಗಿ ಅವರಿಗೆ ತಮ್ಮದೇ ಆದ ಮಕ್ಕಳಾಗುವಾಗ, ಅನೇಕ ವೇಳೆ ಅವರನ್ನು, ತಮ್ಮ ವೃದ್ಧರಾದ, ಬಲಹೀನ ಮತ್ತು ಅನೇಕ ಸಲ, ಅಸ್ಥಿಗತವಾಗಿ ಕಾಯಿಲೆ ಬಿದ್ದಿರುವ ಹೆತ್ತವರ ಆರೈಕೆಯ ಸಮಸ್ಯೆ ಎದುರಿಸುತ್ತದೆ.
ಈ ಪ್ರಸ್ತುತದ ವ್ಯವಸ್ಧೆಯಲ್ಲಿ ಇದು ಭರವಾದ ಸಮಸ್ಯೆಯಾಗಬಲ್ಲದು! ಅನಪೇಕ್ಷಿತವಾದರೂ, ಈಗಿನ ಆರ್ಥಿಕ ಪರಿಸ್ಥಿತಿಗಳಲ್ಲಿ ಇಬ್ಬರು ಹೆತ್ತವರೂ ಕೆಲಸ ಮಾಡಬೇಕಾಗಿ ಬಂದೀತು. ಆಹಾರದ ಖರ್ಚು ಜಾಸ್ತಿ, ಮನೆಬಾಡಿಗೆ ಹೆಚ್ಚು ಮತ್ತು ಅಂಗಡಿಗಳಿಂದ ಬೆಲೆಪಟ್ಟಿಗಳು ಬರುತ್ತಾ ಇರುತ್ತವೆ. ಎರಡು ಸಂಬಳಗಳೂ ಬೇಗನೆ ಮಾಯವಾಗುವ ಸಾಧ್ಯತೆಯಿದೆ. ಮನೆಗಾರ್ತಿ ಹೊರಗೆ ಕೆಲಸ ಮಾಡದಿರುವಲ್ಲಿ, ಮಕ್ಕಳನ್ನು ನೋಡಿಕೊಳ್ಳುವುದು, ಸಾಮಾನು ಖರೀದಿ ಮತ್ತು ಶುಚಿ ಮಾಡುವ—ಪೂರ್ಣ ಸಮಯದ ಕೆಲಸದಲ್ಲಿ ಮಗ್ನಳಾಗಿರಬಹುದು. ಇದರ ಅರ್ಥವು ವೃದ್ಧರಾದ ಒಬ್ಬ ಯಾ ಇಬ್ಬರು ಹೆತ್ತವರನ್ನು ಮನೆಯಲ್ಲಿ ಆರೈಕೆ ಮಾಡಬಾರದು ಎಂದಾಗುವುದಿಲ್ಲ. ಇದು ಅತಿ ಕಷ್ಟಕರವಾದ ಕೆಲಸವೆಂದೇ ಇದರ ಅರ್ಥ. ವೃದ್ಧರಿಗೆ ತಮ್ಮ ನೋವು, ವೇದನೆಗಳಿರುತ್ತವೆ, ಮತ್ತು ಕೆಲವು ವೇಳೆ ಅವರು, ಹಿತಕರವಾದ ಪ್ರಸನ್ನಚಿತ್ತದವರಾಗುವ ಬದಲಿಗೆ ಗೊಣಗುವವರೂ ವಕ್ರ ಮಾತಾಡುವವರೂ ಆಗಿರಬಲ್ಲರು. ಆದರೆ ಇದರ ಅರ್ಥ ವೃದ್ಧರಾದ ಹೆತ್ತವರನ್ನು ಮನೆಯಲ್ಲಿ ಆರೈಕೆ ಮಾಡಲು ಶ್ರದ್ಧೆಯ ಪ್ರಯತ್ನ ಮಾಡಬಾರದು ಎಂದಾಗುವುದಿಲ್ಲ.
ಅನೇಕ ವೇಳೆ, ಉಳಿದಿರುವ ಹೆಣ್ಣು ಮಕ್ಕಳ ಮೇಲೆ ಈ ಜವಾಬ್ದಾರಿ ಬೀಳುತ್ತದೆ. ಪುರುಷರು ಹಣ ಸಹಾಯ ಮಾಡಬಹುದಾದರೂ ಪ್ರಧಾನವಾಗಿ ಸ್ತ್ರೀಯರು ವ್ಯಕ್ತಿಪರವಾದ ಕೈಕೆಲಸದ ಆರೈಕೆ ನೀಡುತ್ತಾರೆಂದು ಅನೇಕ ಅಧ್ಯಯನಗಳು ತೋರಿಸಿವೆ. ಅವರು ವೃದ್ಧರಿಗೆ ಅಡುಗೆ ಮಾಡಿ—ಅನೇಕ ವೇಳೆ ಉಣ್ಣಿಸಿ—ಅವರಿಗೆ ಸ್ನಾನ ಮಾಡಿಸಿ, ಬಟ್ಟೆ ತೊಡಿಸಿ, ಶುಚಿ ಮಾಡಿ, ವೈದ್ಯರ ಬಳಿ ಮತ್ತು ಆಸ್ಪತ್ರೆಗಳಿಗೆ ಒಯ್ದು, ಔಷಧಗಳ ಜಾಗ್ರತೆ ವಹಿಸುತ್ತಾರೆ. ಅನೇಕ ಸಲ, ಇವರೇ ಆ ಹೆತ್ತವರ ಕಣ್ಣು, ಕಿವಿ ಮತ್ತು ಮನಸ್ಸು ಸಹ ಆಗುತ್ತಾರೆ. ಅವರ ಕೆಲಸ ಕಷ್ಟಸಾಧ್ಯವಾದದ್ದು ಮತ್ತು ಅವರು ಈ ಕಷ್ಟದ ಎದುರಿನಲ್ಲೂ ಇದನ್ನು ಸ್ವಂತ ಇಷ್ಟದಿಂದ ಮಾಡುವುದು ನಿಜವಾಗಿಯೂ ಪ್ರಶಂಸನೀಯವೂ, ಯೆಹೋವ ದೇವರನ್ನು ಮೆಚ್ಚಿಸುವಂಥದ್ದೂ ಆಗಿದೆ.
ಅಮೆರಿಕದ ಫ್ಲಾರಿಡದಲ್ಲಿರುವ ಮಯಾಮಿ ವಿಶ್ವವಿದ್ಯಾಲಯದ ವಯಸ್ಕ ವಿಕಾಸ ಮತ್ತು ವಯಸ್ಸಾಗುವಿಕೆಯ ಕೇಂದ್ರದ ಕಾರ್ಲ್ ಐಸ್ಡಾರ್ಫರ್, ಎಮ್.ಡಿ., ಪಿಎಚ್.ಡಿ., ಇವರಿಗನುಸಾರ, ಹೆಚ್ಚಿನ ವಯಸ್ಕ ಮಕ್ಕಳು ತಮ್ಮ ಹೆತ್ತವರು ಅವರ ಕ್ಷೀಣತೆಯ ವರುಷಗಳನ್ನು ಕಳೆಯಲು ನರ್ಸಿಂಗ್ ಹೋಮಿಗೆ ಕಳುಹಿಸುತ್ತಾರೆಂಬುದು ನಿಜವಲ್ಲ. “ವೃದ್ಧರಿಗೆ ಹೆಚ್ಚಿನ ಆರೈಕೆ ಅವರ ಸ್ವಂತ ಕುಟುಂಬಗಳಿಂದಲೇ ಒದಗಿಸಲ್ಪಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ,” ಎನ್ನುತ್ತಾರೆ ಅವರು.
ಸಂಖ್ಯಾ ಸಂಗ್ರಹಣ ಅವರ ವಾದವನ್ನು ಸಮರ್ಥಿಸುತ್ತದೆ. ಉದಾಹರಣೆಗೆ, ಅಮೆರಿಕದಲ್ಲಿ ಅಭಿಪ್ರಾಯ ಕೊಟ್ಟವರಲ್ಲಿ 75 ಸೇಕಡ, ತಮ್ಮ ತಂದೆತಾಯಿಗಳು ಒಂಟಿಗರಾಗಿ ಜೀವಿಸಲು ಅಸಮರ್ಥರಾಗುವಲ್ಲಿ ತಮ್ಮೊಂದಿಗೆ ಜೀವಿಸಬೇಕೆಂದೇ ತಮ್ಮ ಬಯಕೆ ಎಂದು ಹೇಳಿದರು. “ಕುಟುಂಬಗಳಿಗೆ ತಮ್ಮ ಸ್ವಂತದವರನ್ನು ಪರಾಮರಿಸಲು ಮನಸ್ಸಿದೆ ಎಂದು ಇದು ತೋರಿಸುತ್ತದೆ,” ಎಂದರು ಡಾ. ಐಸ್ಡಾರ್ಫರ್. ಮತ್ತು ಎಮೆಸ್ ಪತ್ರಿಕೆಯಲ್ಲಿ ಒಂದು ವರದಿ ಹೇಳಿದ್ದು: “ಯಾವುದಾದರೂ ಒಂದು ಸಮಯದಲ್ಲಿ, 65ಕ್ಕೂ ಹೆಚ್ಚಿನ ವಯಸ್ಸಿನವರಲ್ಲಿ ಕೇವಲ 5 ಸೇಕಡ ಮಾತ್ರ ನರ್ಸಿಂಗ್ ಹೋಮಿನಲ್ಲಿರುತ್ತಾರೆ. ಏಕೆಂದರೆ ವಯಸ್ಸಾದವರಿಗೂ ಅವರ ಸಂಬಂಧಿಕರಿಗೂ ಇಂಥ ನರ್ಸಿಂಗ್ ಸಂಸ್ಥೆಗಳ ಆರೈಕೆಯ ಬದಲು ಮನೆಯೇ ಇಷ್ಟ.”
ವೃದ್ಧರಾದ ಹೆತ್ತವರಿಗೆ ಆರೈಕೆ ಮಾಡಲು ಕೆಲವರು ತೆಗೆದುಕೊಳ್ಳುವ ಪ್ರಯಾಸವನ್ನು ಈ ಕೆಳಗಿನ ದೃಷ್ಟಾಂತ ತಿಳಿಸುತ್ತದೆ. ಅಮೆರಿಕದಲ್ಲೆಲ್ಲಾ ಸಭೆಗಳಿಗೆ ಭೇಟಿಕೊಡುವ ಯೆಹೋವನ ಸಾಕ್ಷಿಗಳ ಸಂಚಾರ ಪ್ರತಿನಿಧಿಯಿಂದ ಈ ವರದಿ ಸಿಕ್ಕಿದೆ. ತನ್ನ ಪತ್ನಿಯ 83 ವಯಸ್ಸಿನ ತಾಯಿಯನ್ನು ನರ್ಸಿಂಗ್ ಹೋಮಿಗೆ ಕಳುಹಿಸುವ ಬದಲು ತಾವೇ ಆರೈಕೆ ಮಾಡಬೇಕೆಂದು ಅವರು ದೃಢ ಮನಸ್ಸು ಮಾಡಿದ್ದರು. ಅವನು ಹೇಳಿದ್ದು: “ಒಬ್ಬ ತಾಯಿ 11 ಮಕ್ಕಳ ಆರೈಕೆ ಮಾಡಿದರೂ 11 ಮಕ್ಕಳಿಗೆ ಒಬ್ಬ ತಾಯಿಯನ್ನು ಪರಾಮರಿಸಲು ಸಾಧ್ಯವಾಗಲಿಲ್ಲವೆಂಬ ಮಾತು ನನ್ನ ನೆನಪಿಗೆ ಬಂತು. ನಾವಿಬ್ಬರು ಈ ವೃದ್ಧೆ ತಾಯಿಯ ಆರೈಕೆ ಮಾಡಲು ದೃಢ ಸಂಕಲ್ಪ ಮಾಡಿದೆವು. ತಾಯಿಗೆ ಆರಂಭ ಹಂತದ ಅಲ್ಸೈಮರ್ ರೋಗವಿದ್ದರೂ ಅವರು ನಮ್ಮೊಂದಿಗೆ ಟ್ರೆಯ್ಲರಿನಲ್ಲಿ ಪ್ರಯಾಣ ಮಾಡಿದರು.
“ಮೊದಲಲ್ಲಿ, ನಾವು ರಾಜ್ಯ ಸಂದೇಶವನ್ನು ಮನೆಮನೆಯಲ್ಲಿ ಸಾರುವಾಗ ಅವರೂ ನಮ್ಮೊಂದಿಗೆ ಬಂದರು. ಕೊನೆಗೆ ಅವರನ್ನು ಗಾಲಿಕುರ್ಚಿಯಲ್ಲಿ ತೆಗೆದುಕೊಂಡು ಹೋಗಬೇಕಾಯಿತು. ನಾವು ಅವರಿಗೆ ಮಾಡುತ್ತಿದ್ದ ಆರೈಕೆಯನ್ನು ಮನೆಯವರು ಗಣ್ಯಮಾಡುವಂತೆ ತೋರಿತು. ಅವರು ಕೆಲವು ಬಾರಿ ಸಮರ್ಪಕವಲ್ಲದ ವಿಷಯಗಳನ್ನು ಹೇಳಿದರೂ ನಾವು ಅವರನ್ನು ತಿದ್ದುವುದರ ಮೂಲಕ ತೊಡಕಿಗೆ ಹಾಕಲಿಲ್ಲ. ಅವರಲ್ಲಿ ಇನ್ನೂ ವಿನೋದ ಪ್ರವೃತ್ತಿ ಇತ್ತು. ನಾನು ಅವರಿಗೆ ಮುಂಜಾಗ್ರತೆ ಹೇಳುತ್ತಾ, ‘ವಾಚ್ ಯುವರ್ ಸೆಪ್ಟ್, ಮದರ್,’ (‘ಹುಷಾರು, ಅಮ್ಮಾ,’) ಎಂದು ಹೇಳುತ್ತಿದ್ದಾಗ ಅವರು, ‘ಐ ಡೋಂಟ್ ಹ್ಯಾವ್ ಎ ಸೆಪ್ಟ್ಮದರ್,’ (‘ನನಗೆ ಮಲತಾಯಿ ಇಲ್ಲ,’) ಎಂದು ಉತ್ತರಿಸುತ್ತಿದ್ದರು. ನಾವು ಅವರನ್ನು, ಅವರು 90ನೆಯ ವಯಸ್ಸಿನಲ್ಲಿ ಸಾಯುವ ತನಕ ಆರೈಕೆ ಮಾಡಿದೆವು.”
ನರ್ಸಿಂಗ್ ಹೋಮ್ಗಳು ಅಗತ್ಯವಿರುವ ಸಮಯ
ಸುಮಾರು ಇಪ್ಪತ್ತು ಲಕ್ಷ ವೃದ್ಧರು ಅಮೆರಿಕದಲ್ಲಿ ನರ್ಸಿಂಗ್ ಹೋಮ್ಗಳಲ್ಲಿ ಜೀವಿಸುತ್ತಾರೆ. ಆದರೂ, ಅಧಿಕಾಂಶ ಸಂದರ್ಭಗಳಲ್ಲಿ, ಕೆಲವರು ನರ್ಸಿಂಗ್ ಹೋಮ್ಗಳಲ್ಲಿ ವೃದ್ಧರನ್ನು ಹಾಕುವುದನ್ನು, “ವೃದ್ಧರನ್ನು ಕಲ್ಲೆದೆಯಿಂದ ಮಳಿಗೆಯಲ್ಲಿ ಹಾಕಿಬಿಡುವುದು” ಎಂದು ಕರೆದರೂ ವಿಷಯ ಹಾಗಿಲ್ಲ. ಬದಲಿಗೆ, ಯೋಗ್ಯ ಆರೈಕೆಯನ್ನು ಮಾಡಲಾಗದವರಿಗೆ ಅನೇಕ ಬಾರಿ ಇರುವ ಒಂದೇ ಅನ್ಯ ಮಾರ್ಗ ಇದಾಗಿದೆ. ಅನೇಕಾನೇಕ ವೇಳೆ, ವಯಸ್ಸಾದವರ ಮಕ್ಕಳು ತಮ್ಮ ವೃದ್ಧ ಹೆತ್ತವರನ್ನು ಪರಾಮರಿಸುವ ಸ್ಥಾನದಲ್ಲಿರುವುದಿಲ್ಲ. ಏಕೆಂದರೆ ಇಂಥ ವೃದ್ಧರಲ್ಲಿ ಅನೇಕರು ಅಲ್ಸೈಮರ್ ರೋಗದಿಂದ ಕಠಿಣವಾಗಿ ಪೀಡಿತರಾಗಿರುತ್ತಾರೆ, ಇಲ್ಲವೇ, ಇಡೀ ದಿನ ವಿಶೇಷ ಆರೈಕೆ ಬೇಕಾಗುವ ಕ್ಷೀಣಿಸುವ ರೋಗದಿಂದ ಹಾಸಿಗೆ ಹಿಡಿದಿರುತ್ತಾರೆ. ಇಂಥ ಸಂದರ್ಭಗಳಲ್ಲಿ, ಇಂಥ ವಿಶೇಷ ಆವಶ್ಯಕತೆಗಳನ್ನು ಪಡೆಯುವ ಒಂದೇ ಸ್ಥಳವು ನರ್ಸಿಂಗ್ ಹೋಮ್ ಆಗಿರಬಹುದು.
ಆಫ್ರಿಕದ ಸಿಯೆರ ಲಿಯೋನಿನಲ್ಲಿ, ವಾಚ್ಟವರ್ ಸೊಸೈಟಿಯ ಮಿಶನೆರಿಯೊಬ್ಬನು, ತನ್ನ ತಾಯಿಯ ತಾಯಿಯನ್ನು ನರ್ಸಿಂಗ್ ಹೋಮಿನಲ್ಲಿ ಹಾಕಲೇ ಬೇಕಾದಾಗ ತನ್ನ ತಾಯಿಗಾದ ಬೇನೆಯ ಕುರಿತು ಹೇಳಿದನು: “ಇತ್ತೀಚೆಗೆ ನನ್ನ ತಾಯಿ ಫ್ಲಾರಿಡದಲ್ಲಿ ತನ್ನ ತಾಯಿ ಹೆಲೆನ್ ಎಂಬವರನ್ನು ನರ್ಸಿಂಗ್ ಹೋಮಿಗೆ ಹಾಕಿದರು. ಅವರಿಗೆ ಇದೊಂದು ಕಷ್ಟಕರ ತೀರ್ಮಾನವಾಗಿತ್ತು. ಅವರು ತನ್ನ ತಾಯಿಯನ್ನು ನಾಲ್ಕು ವರ್ಷ ಆರೈಕೆ ಮಾಡಿದ್ದರು. ಆದರೆ ಈಗ ಹೆಲೆನಜ್ಜಿಗೆ ಪೂರ್ಣ ಸಮಯದ ಆರೈಕೆ ಬೇಕಾಗಿತ್ತು. ತಾಯಿಯ ಸ್ನೇಹಿತರು, ಕುಟುಂಬ, ವಿವಿಧ ಸಮಾಜ ಸೇವಕರು ಮತ್ತು ಡಾಕ್ಟರರು, ಹೀಗೆ ಎಲ್ಲರೂ ಈ ನಿರ್ಣಯವನ್ನು ಸಮರ್ಥಿಸಿದರೂ, ಇದು ಮಾಡಲು ಕಷ್ಟಕರವಾದ ನಿರ್ಣಯವಾಗಿತ್ತು. ತನ್ನ ತಾಯಿ ಮಗುವಾಗಿದ್ದ ತನ್ನನ್ನು ಪರಾಮರಿಸಿದ್ದುದರಿಂದ ತಾಯಿಯ ವೃದ್ಧಾಪ್ಯದಲ್ಲಿ ಅವರನ್ನು ಪರಾಮರಿಸುವುದು ತನಗಿದ್ದ ಕರ್ತವ್ಯವಾಗಿತ್ತು, ಅದೇ ಅಪೊಸ್ತಲ ಪೌಲನು ಹೇಳಿದ ಪರಿಹಾರ, ಯಾ ‘ಪ್ರತ್ಯುಪಕಾರ’ ವಾಗಿತ್ತು ಎಂದು ಅವರು ನೆನಸಿದರು. ಆದರೆ, ಹೆಲನಜ್ಜಿಗೆ ನನ್ನ ತಾಯಿಯ ಮನೆಯಲ್ಲಿ ದೊರೆಯುವುದಕ್ಕಿಂತ ಹೆಚ್ಚು ಉತ್ತಮ ಆರೈಕೆ ನರ್ಸಿಂಗ್ ಹೋಮಿನಲ್ಲಿ ದೊರೆಯಿತು.”—1 ತಿಮೊಥಿ 5:4.
ಯೆಹೋವನ ಸಾಕ್ಷಿಗಳ ಜಾಗತಿಕ ಪ್ರಧಾನ ಕಾರ್ಯಾಲಯಗಳಲ್ಲಿ ಕೆಲಸ ಮಾಡುವ ಇನ್ನೊಬ್ಬ ಸಾಕ್ಷಿ, ತನ್ನ ತಂದೆಯ ಕ್ಯಾನ್ಸರ್ ರೋಗದ ಕುರಿತು ತಿಳಿಸಿದನು. “ನನ್ನ ತಂದೆ 30ಕ್ಕೂ ಹೆಚ್ಚು ವರ್ಷಕಾಲ ಅತ್ಯಾಸಕ್ತ ಸಾಕ್ಷಿಯಾಗಿದ್ದರು. ಅವರ ಜೀವನದ ಕೊನೆಯ ಒಂಭತ್ತು ವರ್ಷಗಳಲ್ಲಿ ಅವರಿಗೆ ಕ್ಯಾನ್ಸರ್ ರೋಗ ಹಿಡಿಯಿತು. ನನ್ನ ಪತ್ನಿ ಮತ್ತು ನಾನು ನಮ್ಮ ರಜಾದಿನಗಳನ್ನೂ ಹೆಚ್ಚು ಕಾಲದ ಗೈರುಹಾಜರಿಯ ರಜೆಗಳನ್ನೂ ತಕ್ಕೊಂಡು ಅವರೊಂದಿಗಿದ್ದು ಅವರಿಗೆ ಸಹಾಯ ಮಾಡಿದೆವು. ಇತರ ಸಂಬಂಧಿಗಳು ವಿವಿಧ ವಿಧಗಳಲ್ಲಿ ಸಹಾಯ ಮಾಡಿದರು. ಆದರೆ ಅಧಿಕಾಂಶ ಕಾಲ, ಪಕ್ಕದಲ್ಲಿ ವಾಸಿಸುತ್ತಿದ್ದ ಅವರ ಹೆಂಡತಿ ಮತ್ತು ವಿವಾಹಿತ ಮಗಳು ಅವರ ಆರೈಕೆ ಮಾಡಿದರು. ಅವರು ಹಾಜರಾಗುತ್ತಿದ್ದ ಸಭೆಯ ಸದಸ್ಯ ಸಾಕ್ಷಿಗಳೂ ಅವರನ್ನು ಭೇಟಿಯಾಗುತ್ತಿದ್ದರು. ಕೊನೆಯ ಎರಡು ವರ್ಷಗಳನ್ನು ಆಗಾಗ ಆಸ್ಪತ್ರೆಯಲ್ಲೂ ಮನೆಯಲ್ಲೂ ಕಳೆದ ತಂದೆ, ಕೊನೆಯ ಐದು ತಿಂಗಳನ್ನು ಅಗತ್ಯವಿದ್ದ ವಿಶೇಷ ಆರೈಕೆಗಾಗಿ ವಿಸ್ತೃತ ಪರಾಮರಿಕೆಯ ಸೌಕರ್ಯದಲ್ಲಿ ಕಳೆದರು.
“ತಂದೆಯನ್ನು ಅಲ್ಲಿಗೆ ವರ್ಗಾಯಿಸುವ ನಿರ್ಣಯ ತಂದೆ ಸೇರಿ ಮಾಡಿದ ಕುಟುಂಬ ನಿರ್ಣಯವಾಗಿತ್ತು. ತನ್ನ ಆರೈಕೆ ಕುಟುಂಬಕ್ಕೆ ಮನೆಯಲ್ಲಿ ತುಂಬಾ ಪ್ರಯಾಸಕರವಾಗಿರುವುದು ಮಾತ್ರವಲ್ಲ ಅಸಾಧ್ಯವೂ ಆಗಿದೆ ಎಂದು ತಂದೆ ನಿರ್ಣಯಿಸಿದರು. ಅವರು ಹೇಳಿದ್ದು: ‘ಇದು ನಿಮ್ಮೆಲ್ಲರನ್ನು ಸಾಯಿಸುತ್ತದೆ! ಇದೀಗ ವಿಸ್ತೃತ ಆರೋಗ್ಯ ಸೌಕರ್ಯಕ್ಕೆ ಹೋಗುವ ಸಮಯ. ಅದು ನಿಮಗೂ ಒಳ್ಳೆಯದು, ನನಗೂ ಒಳ್ಳೆಯದು.’
“ಹೀಗೆ ಅವರು ಹೋದರು. ಒಂಭತ್ತು ವರ್ಷಗಳಲ್ಲಿ ಅಧಿಕಾಂಶ ಸಮಯ ಕುಟುಂಬ ಅವರ ಆರೈಕೆ ಮಾಡಿತ್ತು ಮತ್ತು ಕೊನೆಗೆ ಬೇರೆ ಯಾವ ಉಪಾಯವೂ ಇಲ್ಲದ ಕಾರಣ ಅವರಿಗೆ ಬೇಕಾಗಿದ್ದ ವಿಶೇಷ ರೀತಿಯ, ಇಡೀ ದಿನದ ಆರೈಕೆಗಾಗಿ ಅವರು ಆ ಸೌಕರ್ಯಕ್ಕೆ ಹೋದರು.”
ಹೀಗೆ ಯೋಗ್ಯ ರೀತಿಯ ಆರೈಕೆಗಾಗಿ ರೋಗೋಪಚಾರ ಗೃಹವು ಅನಿವಾರ್ಯವಾಗುವಾಗ, ನಿರ್ಮಲವಾದ ಮತ್ತು ದಯಾಪರರೂ ಸಮರ್ಥರೂ ಆದ ಸಿಬ್ಬಂದಿಗಳಿರುವ ಗೃಹವನ್ನು ಕುಟುಂಬವು ಹುಡುಕಬೇಕು. ಸಾಧ್ಯವಿರುವಲ್ಲಿ, ಪ್ರತಿದಿನ ಒಬ್ಬೊಬ್ಬ ಭೇಟಿಕಾರನನ್ನು—ಕುಟುಂಬ ಸದಸ್ಯ, ಸಭಾಸದಸ್ಯ, ಕಡಿಮೆ ಪಕ್ಷ, ಫೋನ್ ಮೂಲಕ ಸಂಪರ್ಕ—ಏರ್ಪಡಿಸಿರಿ. ಇದರಿಂದ, ತಾವು ತ್ಯಜಿಸಲ್ಪಟ್ಟಿದ್ದೇವೆ, ತಮ್ಮನ್ನು ಮರೆತು ಬಿಟ್ಟಿದ್ದಾರೆ, ತಾವು ಒಂಟಿಗರು ಮತ್ತು ತಮ್ಮನ್ನು ಯಾರೂ ಲಕ್ಷ್ಯ ಮಾಡುವುದಿಲ್ಲ ಎಂದು ವೃದ್ಧರು ಯೋಚಿಸದಂತಾಗುವುದು. ನರ್ಸಿಂಗ್ ಹೋಮಿನಲ್ಲಿರುವ ಇತರರನ್ನು ನೋಡಲು ಭೇಟಿಕಾರರು ಬರುವಾಗ ನಿಮ್ಮ ಪ್ರಿಯರನ್ನು ನೋಡಲು ಯಾರೂ ಬಾರದೇ ಇರುವುದು ಅತಿ ನಿರುತ್ತೇಜಕವಾಗಬಲ್ಲದು. ಆದುದರಿಂದ ಅವರನ್ನು ಕ್ರಮವಾಗಿ, ನೋಡಪ್ರಯತ್ನಿಸಿರಿ. ಅವರಿಗೆ ಭೇಟಿಕೊಡಿರಿ. ಆಲಿಸಿರಿ. ಸಂಗಡ ಪ್ರಾರ್ಥನೆ ಮಾಡಿರಿ. ಪ್ರಾರ್ಥನೆ ಅತಿ ಪ್ರಾಮುಖ್ಯ. ಅವರು ಅತಿ ಸುಪ್ತಿಯಲ್ಲಿರುವಾಗಲೂ ಪ್ರಾರ್ಥಿಸಿರಿ. ಅವರಿಗೆ ಅದರಲ್ಲಿ ಎಷ್ಟು ಕೇಳೀತೆಂಬುದು ನಿಮಗೆ ತಿಳಿಯಲಿಕ್ಕಿಲ್ಲ!
ಹೆತ್ತವರ ಕುರಿತು ನಿರ್ಣಯಿಸುವಾಗ ಅವರಿಗಾಗಿ ಮಾಡದೆ ಅವರೊಂದಿಗೆ ಮಾಡಿರಿ. ತಮ್ಮ ಜೀವನ ಇನ್ನೂ ತಮ್ಮ ನಿಯಂತ್ರಣದಲ್ಲಿಯೇ ಇದೆ ಎಂದು ಅವರು ತಿಳಿಯಲಿ. ಅಗತ್ಯವಿರುವ ಸಹಾಯವನ್ನು ಸಾಧ್ಯವಿರುವಷ್ಟು ಪ್ರೀತಿ, ತಾಳ್ಮೆ ಮತ್ತು ತಿಳಿವಳಿಕೆಯಿಂದ ಕೊಡಿರಿ. ಇದು, ಅಪೊಸ್ತಲ ಪೌಲನು ಬರೆದಂತೆ, ನಾವು ಹೆತ್ತವರಿಗೆ ಮತ್ತು ಅಜ್ಜಅಜಿಗ್ಜೆ ಸಲ್ಲಿಸತಕ್ಕದ್ದನ್ನು ಹಿಂದೆ ಕೊಡುವ ಸಮಯ.
“ಮನುಷ್ಯರೆಲ್ಲರ ಕರ್ತವ್ಯ”
ಈ ಆಧುನಿಕ ಲೋಕದ ಗೊಂದಲ, ಗಲಿಬಿಲಿಗಳಲ್ಲಿ, ವಯಸ್ಸಾದವರನ್ನು ಜೀವನದ ಹಿನ್ನೀರಿಗೆ ತಳ್ಳುವುದು ಸುಲಭ. ವಿಶೇಷವಾಗಿ, ಜೀವನದೋಟವನ್ನು ಈಗ ತಾನೇ ಪ್ರವೇಶಿಸಿ ತಮ್ಮ ಸ್ವಂತ ಜೀವನಮ್ನ ನಡೆಸಲು ಅವಸರಪಡುವ ಯುವಜನರು, ಮುದುಕರು ತಮ್ಮ ದಾರಿಗೆ ಅಡಬ್ಡರುತ್ತಾರೆಂದೂ, ಅವರು ಜೀವನದ ಉಪಯೋಗಾವಸ್ಥೆಯನ್ನು ದಾಟಿದ, ಕೆಲಸಕ್ಕೆ ಬಾರದವರೆಂದೂ ಎಣಿಸುತ್ತಾರೆ. ಪ್ರಾಯಶಃ ನಾವೆಲ್ಲರೂ ತುಸು ನಿಂತು ಪುನರಾಲೋಚಿಸಬೇಕಾದೀತು: ಒಂದು ಜೀವನ ಉಪಯುಕ್ತವೋ ಅಲ್ಲವೋ ಎಂಬ ಅರ್ಹತೆಯನ್ನು ಯಾವುದು ಕೊಡುತ್ತದೆ? ವಯಸ್ಸಾದವರ ಜೀವನಕ್ಕೆ ಅಪಮೌಲ್ಯ ಹಚ್ಚಿ ತಮ್ಮ ಸ್ವಂತ ಜೀವನದ ಮೌಲ್ಯವನ್ನು ಉಬ್ಬರಿಸುವುದು ಯುವಜನರಿಗೆ ಸುಲಭ.
ಆದರೂ, ಪ್ರಾಮುಖ್ಯವಾದುದಕ್ಕೆ ತುಸು ಯಾ ಯಾವ ಸಹಾಯವನ್ನೂ ಮಾಡದಿರುವವರು ವೃದ್ಧರೂ ಬಲಹೀನರೂ ಮಾತ್ರ ಆಗಿರುವುದಿಲ್ಲ. ಸೊಲೊಮೋನ ರಾಜನು ಪ್ರಸಂಗಿ ಪುಸ್ತಕದಲ್ಲಿ ಜನಸಾಮಾನ್ಯರ ಚಟುವಟಿಕೆಗಳನ್ನು ಆಗಾಗ ವ್ಯರ್ಥವೆಂದು ಹೇಳಿ ಸೂಚಿಸಿದನು. ಯುವಜನರು ಮತ್ತು ಅವರ ತಾತ್ಕಾಲಿಕ ಕಸುವಿನ ಕುರಿತು ಅವನು ಮಾತಾಡಿ, ದಾಟುವ ವರುಷಗಳು ಅವರ ದೇಹಗಳನ್ನು, ಆಗಲೇ ಗತಿಸಿಹೋಗಿರುವ ಕೋಟ್ಯಂತರ ದೇಹಗಳಂತೆ ಹೇಗೆ ನಶಿಸುತ್ತದೆಂದು ತೋರಿಸಿದನು. ಎಲ್ಲವೂ ಮಣ್ಣಾಗಿ ಈ ಬೆಲೆಯನ್ನು ಸಂಪಾದಿಸುತ್ತದೆ: “ವ್ಯರ್ಥವೇ ವ್ಯರ್ಥ, ಸಮಸ್ತವೂ ವ್ಯರ್ಥ” ಎಂದನು ಸೊಲೊಮೋನನು.—ಪ್ರಸಂಗಿ 12:8.
ಆದರೆ ಅವನು ವಿವೇಕಿಗಳ ಮಾತುಗಳನ್ನು ಶ್ಲಾಘನೆ ಮಾಡಿ ಜೀವನದ ತನ್ನ ಪರೀಕ್ಷೆಯನ್ನು ಈ ಮಾತುಗಳಲ್ಲಿ ಮೊತ್ತವಾಗಿ ಹೇಳಿದನು: “ವಿಷಯವು ತೀರಿತು; ಎಲ್ಲವೂ ಕೇಳಿ ಮುಗಿಯಿತು; ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ.” (ಪ್ರಸಂಗಿ 12:13) ಉಪಯುಕ್ತ ಜೀವನಕ್ಕಿರುವ ಸೂತ್ರ, ನೀವೆಷ್ಟು ಎಳೆಯರು, ವೃದ್ಧರು, ಅಥವಾ ದಾಟಿ ಹೋಗುತ್ತಿರುವ ಈ ಪ್ರಾಪಂಚಿಕ ಮನೋಭಾವದ ಹಳೆಯ ಲೋಕದಲ್ಲಿ ಯಾವ ನಡತೆಯ ಸ್ಥಾನವನ್ನು ತಲುಪುತ್ತೀರೆಂಬುದಲ್ಲ.
ನಮ್ಮ ಮಾನವ ಸಂಬಂಧಗಳನ್ನು ಚಲಾಯಿಸಲು, ಸುವರ್ಣ ನಿಯಮವೆಂದು ಪ್ರಖ್ಯಾತವಾಗಿರುವ ಒಂದು ಮಾರ್ಗದರ್ಶಿ ಸೂತ್ರವನ್ನು ಯೇಸುವು ಕೊಟ್ಟನು: “ಇತರರು ನಿಮ್ಮನ್ನು ಹೇಗೆ ಉಪಚರಿಸಬೇಕೆಂದು ನೀವು ಬಯಸುತ್ತೀರೋ, ಹಾಗೆಯೇ ಇತರರನ್ನು ಉಪಚರಿಸಿರಿ.” (ಮತ್ತಾಯ 7:12, ದ ನ್ಯೂ ಇಂಗ್ಲಿಷ್ ಬೈಬಲ್) ಈ ನಿಯಮವನ್ನು ಅನ್ವಯಿಸಲು, ಒಂದು ವೇಳೆ ಅವನ ಸ್ಥಾನದಲ್ಲಿ ನಾವಿದ್ದರೆ ನಮ್ಮನ್ನು ಹೇಗೆ ಉಪಚರಿಸಬೇಕು ಎಂದು ನಾವು ನೋಡಲಾಗುವಂತೆ, ನಾವು ಬೇರೆ ವ್ಯಕ್ತಿಯ ಸ್ಥಾನದಲ್ಲಿ ನಮ್ಮನ್ನಿಟ್ಟುಕೊಳ್ಳಲು ಶಕ್ತರಾಗಿರಬೇಕು. ನಾವು ಮುದುಕರೂ, ಬಲಹೀನರೂ ಆಗಿದ್ದು ಸಹಾಯದ ಅಗತ್ಯತೆಯುಳ್ಳವರಾದರೆ, ನಮ್ಮ ಮಕ್ಕಳೊಬ್ಬರಿಂದ ನಾವು ಹೇಗೆ ಉಪಚರಿಸಲ್ಪಡಲು ಬಯಸುವೆವು? ನಾವು ಸಹಾಯಶೂನ್ಯ ಮಕ್ಕಳಾಗಿದ್ದಾಗ 20 ವರ್ಷಗಳ ಜಾಗ್ರತೆಯನ್ನು ಮತ್ತು ಬೆಂಬಲವನ್ನು ನಮಗೆ ಧಾರಾಳವಾಗಿ ನೀಡಿದಕ್ಕಾಗಿ, ಈಗ ಅವರ ಮುದಿ ವಯಸ್ಸಿನಲ್ಲಿ ಅವರು ಸಹಾಯಶೂನ್ಯರಾಗಿರುವಾಗ ಅವರ ಜಾಗ್ರತೆ ವಹಿಸುವದರ ಮೂಲಕ ಪ್ರತಿಯಾಗಿ ನಮ್ಮ ಹೆತ್ತವರಿಗೆ ನಾವು ಹಿಂದಕ್ಕೆ ಕೊಡುವೆವೋ?
ನಾವು ನಮ್ಮ ವೃದ್ಧ ಹೆತ್ತವರ ಕೊರತೆಯನ್ನು ನೋಡುವಾಗ ಪ್ರಾಯಶಃ ನಾವು ನಮ್ಮ ಶೈಶವವನ್ನು ಪುನರ್ವಿಮರ್ಶಿಸಿ, ನಾವು ಶಿಶು, ಮಕ್ಕಳಾಗಿರುವಾಗ ಅವರು ನಮ್ಮನ್ನು ಮಕ್ಕಳ ಕಾಯಿಲೆಯ ಆರೈಕೆ ಮಾಡಿದ್ದು, ನಮಗೆ ಉಣ್ಣಿಸಿ, ತೊಡಿಸಿದ್ದು, ನಾವು ಬಾಲ್ಯತನದ ಸಂತೋಷವನ್ನು ಪಡೆಯುವಂತೆ ನಮ್ಮನ್ನು ವಿನೋದ ವಿಹಾರಗಳಿಗೆ ಕೊಂಡೊಯ್ದದ್ದು—ಇವುಗಳನ್ನು ನೆನಪಿಸಿಕೊಳ್ಳುವೆವು. ಬಳಿಕ, ಅವರ ಹಿತಕ್ಕಾಗಿ ಪ್ರೀತಿಯ ಚಿಂತೆಯಿಂದ ಅವರ ಕೊರತೆಗಳಿಗೆ ಯಾವುದು ಅತ್ಯುತ್ತಮವೆಂದು ಪರಿಗಣಿಸಿರಿ.
ಸಾಧ್ಯವಿರುವಲ್ಲಿ, ಅವರನ್ನು ಮನೆಯಲ್ಲೇ ಇಟ್ಟುಕೊಳ್ಳುವ ಏರ್ಪಾಡನ್ನು ಮಾಡಬಹುದು. ಆದರೆ ಇನ್ನೊಂದು ಕಡೆ, ವಯಸ್ಸಾದವರನ್ನು ಸೇರಿಸಿ, ಸಂಬಂಧಪಟ್ಟ ಎಲ್ಲರಿಗೂ ಅತ್ಯುತ್ತಮ ಏರ್ಪಾಡು ವಿಸ್ತೃತ ಆರೈಕೆಯ ಸೌಕರ್ಯ ಯಾ ನರ್ಸಿಂಗ್ ಹೋಮ್ ಆಗಿರಬಹುದು. ನಿರ್ಣಯ ಯಾವುದೇ ಆಗಲಿ, ಅದನ್ನು ಎಲ್ಲರೂ ಗೌರವಿಸಬೇಕು. ನಮಗೆ ಹೀಗೆ ಹೇಳಲ್ಪಡುತ್ತದೆ: “ನಿನ್ನ ಸಹೋದರನ ವಿಷಯ ನೀನು ತೀರ್ಪು ಮಾಡುವದೇನು? . . . ನಿನ್ನ ಸಹೋದರನನ್ನು ನೀನು ಹೀನೈಸುವದೇನು?” ಮತ್ತು ಪುನಃ: “ನಿನ್ನ ನೆರೆಯವನ ವಿಷಯದಲ್ಲಿ ತೀರ್ಪು ಮಾಡುವದಕ್ಕೆ ನೀನು ಯಾರು?”—ರೋಮಾಪುರ 14:10; ಯಾಕೋಬ 4:12.
ವೃದ್ಧ ಹೆತ್ತವರಿಗೆ ಮಕ್ಕಳೊಂದಿಗೆ ಜೀವಿಸುವ ಏರ್ಪಾಡು ಯಾ ನರ್ಸಿಂಗ್ ಹೋಮಿನ ಏರ್ಪಾಡು, ಹೀಗೆ ಯಾವುದು ಯೋಗ್ಯವಾದರೂ, ಅವರ ಮನಶ್ಶಕ್ತಿಗೆ ಹಾನಿ ತಟಿಲ್ಟವ್ಲಾದರೆ ಅವರಿನ್ನೂ ಅರ್ಥಪೂರ್ಣವಾದ ಜೀವನವನ್ನು ನಡೆಸುವ ಸಂಭವವಿದೆ. ಸಕಲ ವಿಧೇಯ ಮಾನವರು ಆರೋಗ್ಯದಲ್ಲಿ ಭೂಪ್ರಮೋದವನದ ಮೇಲೆ ಸದಾ ಜೀವಿಸುವ ಯೆಹೋವನ ಉದ್ದೇಶವನ್ನು ಅವರು ಕಲಿಯಬಹುದು. ಅವರು ತಮ್ಮ ಸೃಷ್ಟಿಕರ್ತನಾದ ಯೆಹೋವ ದೇವರನ್ನು ಸೇವಿಸುವ ಹೊಸತಾದ, ಸಂತೃಪ್ತಿಕರವೂ ಆದ ಹೊಸ ಜೀವನೋಪಾಯವನ್ನು ಕಂಡುಹಿಡಿಯಬಹುದು. ಹೀಗೆ, ಇದು ಅವರ ಜೀವನದ ಅತ್ಯಂತ ಉದ್ದೇಶಪೂರ್ಣವೂ ಆನಂದಕರವೂ ಆದ ಸಮಯವಾಗುತ್ತದೆ. ಅನೇಕರು ಜೀವದಾಸೆಯನ್ನೇ ತೊರೆದಿರುವ ಸಮಯದಲ್ಲಿ ಕೆಲವರು ತಮ್ಮ ವೃದ್ಧಾಪ್ಯದಲ್ಲಿ, ಅಂತ್ಯವಿಲ್ಲದ ನೀತಿಯ ನೂತನ ಲೋಕದಲ್ಲಿ ಸದಾ ಜೀವಿಸುವ ವಿಷಯ ಯೆಹೋವನ ವಾಗ್ದಾನಗಳನ್ನು ಅರಿತು ಈ ನಿರೀಕ್ಷೆಯ ಕುರಿತು ಇತರರಿಗೆ ತಿಳಿಸುವುದರಲ್ಲಿ ಹೊಸ ಆನಂದವನ್ನು ಕಂಡುಕೊಂಡಿದ್ದಾರೆ.
ಸಮಾಪ್ತಿಯಲ್ಲಿ ಇದರ ಒಂದು ದೃಷ್ಟಾಂತ. ಕ್ಯಾಲಿಫೋರ್ನಿಯದ ಒಬ್ಬ ಮಹಿಳೆಗೆ ಆಕೆಯ 100 ವರ್ಷ ಪ್ರಾಯದಲ್ಲಿ ನರ್ಸಿಂಗ್ ಹೋಮಿನ ನರ್ಸೊಬ್ಬಳು ಈ ವಾಗ್ದಾನಿತ ಆಶೀರ್ವಾದಗಳನ್ನು ಪರಿಚಯ ಮಾಡಿಸಿದಳು. ಮತ್ತು ಆಕೆಯ 102ನೆಯ ಮುಪ್ಪು ವಯಸ್ಸಿನಲ್ಲಿ ಆಕೆ ಯೆಹೋವನ ಸಾಕ್ಷಿಯಾಗಿ ದೀಕ್ಷಾಸ್ನಾನ ಹೊಂದಿದಳು. ಆಕೆ ತನ್ನ ಜೀವನವನ್ನು ‘ನಿರರ್ಥಕತೆಗಳ ನಿರರ್ಥಕತೆ’ಯ ನಿಲುಕೊನೆಯಲ್ಲಲ್ಲ, ‘ಮನುಷ್ಯರೆಲ್ಲರ ಕರ್ತವ್ಯ’ವನ್ನು ನೆರವೇರಿಸಿ, ಅಂದರೆ, ‘ಸತ್ಯದೇವರಿಗೆ ಭಯಪಡುತ್ತಾ ಆತನ ಆಜ್ಞೆಗಳನ್ನು ಕೈಕೊಂಡು’ ಮುಗಿಸಿದಳು. (g91 3/22)
[ಪುಟ 6 ರಲ್ಲಿರುವ ಸಂಕ್ಷಿಪ್ತ ವಿವರಣೆ]
ವರ್ಷಗಳಿಗೆ ಹಿಂದೆ, ಒಬ್ಬ ತಾಯಿಗೆ 11 ಮಕ್ಕಳ ಪರಾಮರಿಕೆ ಮಾಡಸಾಧ್ಯವಿತ್ತು ಎಂದು ಹೇಳಲಾಗುತ್ತಿತ್ತು; ಈಗ 11 ಮಕ್ಕಳಿಗೆ ಒಬ್ಬ ತಾಯಿಯನ್ನು ನೋಡಿಕೊಳ್ಳಲಾಗುವುದಿಲ್ಲ
[ಪುಟ 8 ರಲ್ಲಿರುವ ಚೌಕ]
ವೃದ್ಧರನ್ನು ಪರಾಮರಿಸಿ ಗೌರವ ತೋರಿಸುವುದು—ಲೋಕವ್ಯಾಪಕವಾಗಿ ಕೇಳಿಬಂದಿರುವ ಹೇಳಿಕೆಗಳು
“ಆಫ್ರಿಕದಲ್ಲಿ ವೃದ್ಧರಿಗೆ ಸರಕಾರದ ಒದಗಿಸುವಿಕೆಗಳು ಕೊಂಚ ಯಾ ಇಲ್ಲವೇ ಇಲ್ಲ. ನರ್ಸಿಂಗ್ ಹೋಮ್ಗಳಾಗಲಿ ಮೆಡಿಕ್ಯಾರ್ ಯಾ ಸಾಮಾಜಿಕ ಸುರಕ್ಷಾ ಪ್ರಯೋಜನಗಳಾಗಲಿ ಯಾ ಪೆನ್ಶನುಗಳಾಗಲಿ ಅವರಿಗಿಲ್ಲ. ವೃದ್ಧರನ್ನು ಅವರ ಮಕ್ಕಳು ನೋಡಿಕೊಳ್ಳುತ್ತಾರೆ.
“ವಿಕಾಸ ಹೊಂದುತ್ತಿರುವ ದೇಶಗಳಲ್ಲಿ ಮಕ್ಕಳನ್ನು ಪಡೆಯುವುದು ಪ್ರಾಮುಖ್ಯವಾಗಿರಲು ಒಂದು ಮೂಲಕಾರಣ ಭವಿಷ್ಯತ್ತಿನಲ್ಲಿ ತಮ್ಮ ಮಕ್ಕಳು ತಮ್ಮನ್ನು ನೋಡಿಕೊಳ್ಳುತ್ತಾರೆಂಬ ನಂಬಿಕೆಯೇ. ಹೆಚ್ಚು ಮಕ್ಕಳಿರುವಲ್ಲಿ ಅವರಲ್ಲಿ ಕೆಲವರಾದರೂ ಬದುಕಿ ಉಳಿದು ತಮ್ಮನ್ನು ಪರಾಮರಿಸುವರೆಂದು ತರ್ಕಿಸುತ್ತಾ ಬಡಜನರೂ ಹೆಚ್ಚು ಮಕ್ಕಳನ್ನು ಹಡೆಯುವರು.
“ಆಫ್ರಿಕದಲ್ಲಿ ಮಟ್ಟಗಳು ಬದಲಾವಣೆಯಾಗುತ್ತಿದೆಯಾದರೂ, ಹೆಚ್ಚಿನದ್ದಾಗಿ, ಕುಟುಂಬಗಳು ತಮ್ಮ ವಯಸ್ಸಾದವರನ್ನು ಪರಾಮರಿಸುವ ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತವೆ. ಮಕ್ಕಳಿಲ್ಲದಿರುವಲ್ಲಿ, ಕುಟುಂಬದ ಇತರರು ಅವರನ್ನು ನೋಡಿಕೊಳ್ಳುತ್ತಾರೆ. ಅನೇಕ ವೇಳೆ, ಹೀಗೆ ಜಾಗ್ರತೆ ವಹಿಸುವವರು ಆರ್ಥಿಕವಾಗಿ ಬಡಸ್ಥಿತಿಯಲ್ಲಿ ಇರುವುದಾದರೂ ತಮ್ಮಲ್ಲಿ ಏನಿದೆಯೋ ಅದರಲ್ಲಿ ಅವರು ಭಾಗಿಗಳಾಗುತ್ತಾರೆ.
“ಹೆತ್ತವರನ್ನು ಪರಾಮರಿಸುವ ಇನ್ನೊಂದು ವಿಧ ತಮ್ಮ ಸ್ವಂತ ಮಕ್ಕಳನ್ನು ತಮ್ಮ ವಯಸ್ಸಾದ ಹೆತ್ತವರಿಗೆ ಕೊಡುವ ಮೂಲಕವೇ. ಅನೇಕ ವೇಳೆ, ಮನೆಯ ಸುತ್ತಲಿನ ಕೆಲಸವನ್ನು ಮೊಮ್ಮಕ್ಕಳೇ ಮಾಡುತ್ತಾರೆ.
“ವಿಕಾಸ ಹೊಂದಿರುವ ದೇಶಗಳಲ್ಲಿ, ವೈದ್ಯಕೀಯ ಪ್ರಗತಿಯ ಕಾರಣ ಜನರು ಹೆಚ್ಚು ಸಮಯ ಜೀವಿಸುತ್ತಾರೆ. ಆದರೆ, ವಿಕಾಸಗೊಳ್ಳುತ್ತಿರುವ ಜಗತ್ತಿನಲ್ಲಿ ವಿಷಯವು ಹೀಗಿರುವುದಿಲ್ಲ. ದೊರೆಯುವ ಪರಿಮಿತ ವೈದ್ಯಕೀಯ ಸಹಾಯವನ್ನೂ ಪಡೆಯಲು ಹಣವಿಲ್ಲದ ಕಾರಣ ಬಡವರು ಸಾಯುತ್ತಾರೆ. ಸಿಯೆರ ಲಿಯೋನಿನ ಒಂದು ನಾಣ್ಣುಡಿ, ‘ಯಾವ ಬಡವನಿಗೂ ಕಾಯಿಲೆಯಿಲ್ಲ’ ಎಂದು ಹೇಳುತ್ತದೆ. ಅಂದರೆ, ಬಡವನಿಗೆ ಚಿಕಿತ್ಸೆಗೆ ಹಣವಿಲ್ಲದಿರುವುದರಿಂದ ಅವನು ಒಂದೇ ಕ್ಷೇಮವಾಗಿರುತ್ತಾನೆ, ಇಲ್ಲವೇ ಸಾಯುತ್ತಾನೆ ಎಂದರ್ಥ.”—ರಾಬರ್ಟ್ ಲ್ಯಾಂಡಿಸ್, ಆಫ್ರಿಕದ ಮಿಶನೆರಿ.
ಮೆಕ್ಸಿಕೊ ದೇಶದಲ್ಲಿ ಜನರು ವೃದ್ಧ ಹೆತ್ತವರನ್ನು ಹೆಚ್ಚು ಗೌರವಿಸುತ್ತಾರೆ. ಗಂಡುಮಕ್ಕಳಿಗೆ ಮದುವೆಯಾದಾಗ ಹೆತ್ತವರು ಒಂಟಿಯಾಗಿ ಮನೆಯಲ್ಲಿ ಜೀವಿಸುತ್ತಾರೆ, ಆದರೆ ಹೆತ್ತವರು ವೃದ್ಧರಾಗಿ ಸಹಾಯದ ಅಗತ್ಯ ಅವರಿಗಿರುವಲ್ಲಿ ಮಕ್ಕಳು ಅವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಅವರ ಪರಾಮರಿಕೆ ಮಾಡುತ್ತಾರೆ. ಇದು ಅವರಿಗಿರುವ ಹಂಗು ಎಂದು ಅವರ ಅಭಿಪ್ರಾಯ.
“ಮಕ್ಕಳು, ಮೊಮ್ಮಕ್ಕಳು ಇರುವ ಮನೆಯಲ್ಲೆ ಅಜ್ಜ ಅಜ್ಜಿ ಜೀವಿಸುವುದನ್ನು ನೋಡುವುದು ಸಾಮಾನ್ಯ. ಮೊಮ್ಮಕ್ಕಳು ಅಜ್ಜ ಅಜಿಯ್ಜನ್ನು ಪ್ರೀತಿಸಿ ಪರಾಮರಿಸುತ್ತಾರೆ. ಕುಟುಂಬ ಅತಿ ನಿಕಟವಾಗಿದೆ.
“ಮೆಕ್ಸಿಕೊ ದೇಶದಲ್ಲಿ ವಯಸ್ಸಾದವರಿಗೆ ಉಪಚಾರ ಗೃಹಗಳು ವಿರಳ, ಏಕೆಂದರೆ ವಯಸ್ಸಾದವರನ್ನು ಅವರ ಗಂಡು ಮತ್ತು ಹೆಣ್ಣು ಮಕ್ಕಳು ಪರಾಮರಿಸುತ್ತಾರೆ. ಅನೇಕ ಗಂಡು ಮಕ್ಕಳಿರುವಲ್ಲಿ, ಕೆಲವು ಸಲ, ಕೊನೆಗೆ ಮದುವೆಯಾಗುವವನು ಮನೆಯಲ್ಲೆ ಹೆತ್ತವರೊಂದಿಗೆ ಜೀವಿಸುತ್ತಾನೆ.”—ಐಶ ಅಲೆಮನ್, ಮೆಕ್ಸಿಕೊದಿಂದ.
ಕೊರಿಯ ದೇಶದಲ್ಲಿ ನಮಗೆ ಮನೆ ಮತ್ತು ಶಾಲೆಯಲ್ಲಿ ವೃದ್ಧರನ್ನು ಗೌರವಿಸಲು ಕಲಿಸಲಾಗುತ್ತದೆ. ಕುಟುಂಬದಲ್ಲಿ ಜ್ಯೇಷ್ಠ ಪುತ್ರನು ವೃದ್ಧ ಹೆತ್ತವರನ್ನು ಪರಾಮರಿಸಬೇಕೆಂದಿದೆ. ಇದು ಸಾಧ್ಯವಾಗದಿರುವಲ್ಲಿ ಇನ್ನೊಬ್ಬ ಪುತ್ರ ಯಾ ಪುತ್ರಿ ಅವರನ್ನು ನೋಡಿಕೊಳ್ಳುತ್ತಾರೆ. ಅನೇಕ ದಂಪತಿಗಳು ಒಂದೇ ಮನೆಯಲ್ಲಿ ಹೆತ್ತವರೊಂದಿಗೆ ಜೀವಿಸುತ್ತಾ ಅವರ ಜಾಗ್ರತೆ ವಹಿಸುತ್ತಾರೆ. ಹೆತ್ತವರು ತಮ್ಮ ಮಕ್ಕಳೊಂದಿಗೆ ಜೀವಿಸಲು ನಿರೀಕ್ಷಿಸುತ್ತಾರೆ, ಮತ್ತು ಅವರು ತಮ್ಮ ಮೊಮ್ಮಕ್ಕಳಿಗೆ ಕಲಿಸಿ ಅವರ ಜಾಗ್ರತೆ ವಹಿಸುವುದು ಅವರಿಗೆ ಇಷ್ಟ. ಯುವ ದಂಪತಿಗಳು ತಮ್ಮ ವೃದ್ಧ ಹೆತ್ತವರನ್ನು ನರ್ಸಿಂಗ್ ಹೋಮಿಗೆ ಕಳುಹಿಸುವುದು ನಾಚಿಕೆಗೇಡೆಂದು ಎಣಿಸಲ್ಪಡುತ್ತದೆ.
“ನನ್ನ ತಂದೆ ಮೊದಲನೆಯ ಮಗ, ಮತ್ತು ನಾವು ಅಜ್ಜ ಅಜಿಯ್ಜೊಂದಿಗೆ ಅದೇ ಮನೆಯಲ್ಲಿ ಜೀವಿಸಿದೆವು. ನಾವು ಹೊರಗೆ ಹೋದಾಗೆಲ್ಲ ಹೋಗುವುದೆಲ್ಲಿಗೆ ಮತ್ತು ಯಾವಾಗ ಹಿಂದೆ ಬರುತ್ತೇವೆ ಎಂದು ಹೇಳಿ ಹೋಗುತ್ತಿದ್ದೆವು. ಮನೆಗೆ ಹಿಂದಿರುಗಿದಾಗ ಅವರ ಕೋಣೆಗೆ ಹೋಗಿ ತಲೆಬಗ್ಗಿಸಿ ಅವರನ್ನು ವಂದಿಸಿ ಹಿಂದೆ ಬಂದಿದ್ದೇವೆಂದು ಹೇಳುತ್ತಿದ್ದೆವು, ಏಕೆಂದರೆ ಅವರಿಗೆ ಇಡೀ ಕುಟುಂಬ ಹಿತದ ಚಿಂತೆ ಇತ್ತು.
“ನಾವು ಅವರಿಗೆ ಯಾವ ವಸ್ತುವನ್ನಾದರೂ ಕೊಟ್ಟಾಗ ಎರಡು ಕೈಗಳಲ್ಲಿ ಹಿಡಿದು ಕೊಡುತ್ತಿದ್ದೆವು. ಗೌರವಾರ್ಹ ವ್ಯಕ್ತಿಗಳಿಗೆ, ಅಂದರೆ, ಹೆತ್ತವರು, ಅಜ್ಜ ಅಜ್ಜಿ, ಉಪಾಧ್ಯಾಯರು ಮತ್ತು ಸಾರ್ವಜನಿಕ ಸೇವೆಯ ಉನ್ನತಾಧಿಕಾರಿಗಳಿಗೆ ಒಂದು ಕೈಯಲ್ಲಿ ಯಾವುದನ್ನಾದರೂ ಕೊಡುವುದು ಅಸಭ್ಯತೆ. ವಿಶೇಷ ಊಟವಿದ್ದಾಗ ನಾವು ಅದನ್ನು ಅಜ್ಜ ಅಜಿಗ್ಜೆ ಮೊದಲು ಬಡಿಸುತ್ತಿದ್ದೆವು.
“ವಯಸ್ಸಾದವರಿಗೆ ಕೊಡುವ ಗೌರವ ಕುಟುಂಬದ ಸದಸ್ಯರಿಗೆ ಸೀಮಿತವಾಗಿರದೇ ಸಕಲ ವೃದ್ಧರನ್ನೂ ಆವರಿಸುತ್ತದೆ. ಪ್ರಾಥಮಿಕದಿಂದ ಮಾಧ್ಯಮಿಕ ಶಾಲೆಯ ತನಕ ನಡೆವಳಿಕೆಯ ನಿಯಮಗಳ ಸಂಬಂಧದಲ್ಲಿ ಕ್ಲಾಸುಗಳಿವೆ. ಆ ಕ್ಲಾಸಿನಲ್ಲಿ ರಂಜನ ಕಥೆಗಳ ಯಾ ಭಾಷಣಗಳ ಮೂಲಕ ವಯಸ್ಸಾದವರನ್ನು ಹೇಗೆ ಸನ್ಮಾನಿಸಿ ಗೌರವಿಸುವುದೆಂದು ನಾವು ಕಲಿತೆವು.
“ವೃದ್ಧ ವ್ಯಕ್ತಿ ಕೋಣೆಗೆ ಬರುವಲ್ಲಿ ಯುವಜನರು ಎದ್ದು ನಿಲ್ಲಬೇಕೆಂದಿದೆ. ಒಬ್ಬ ಯುವಕನು ಬಸ್ಸಿನಲ್ಲಿ ಕುಳಿತುಕೊಂಡಿರುವಾಗ ವಯಸ್ಸಾದ ಪುರುಷ ಯಾ ಸ್ತ್ರೀಗೆ ಸ್ಥಳವಿಲ್ಲದಿರುವಲ್ಲಿ, ಯುವವ್ಯಕ್ತಿ ತನ್ನ ಸ್ಥಳ ಬಿಟ್ಟುಕೊಳ್ಳುವುದು ಸಾಮಾನ್ಯ ಪದ್ಧತಿ. ಒಬ್ಬ ವೃದ್ಧನು ಭಾರವಾದ ಹೊರೆ ಹೊತ್ತಿರುವಲ್ಲಿ, ಅವನಿಗೆ ಸಹಾಯ ಬೇಕೋ ಬೇಡವೋ ಎಂದು ನೀವು ಕೇಳುವಿರಿ. ಬೇಕೆಂದು ಅವನು ಹೇಳುವಲ್ಲಿ ಅವನ ಸಾಮಾನನ್ನು ಹೊತ್ತುಕೊಂಡು ಅವನ ಗುರಿ ತಲುಪಿಸುವಿರಿ.
“ಬೈಬಲ್ ಪ್ರವಾದಿಸಿರುವಂತೆ, ವಿಷಯ ವ್ಯವಸ್ಥೆಯ ಈ ಕೊನೆಯ ದಿನಗಳಲ್ಲಿ, ನೈತಿಕ ಮಟ್ಟವು ದಿನದಿಂದ ದಿನ ಕೆಡಲಿರುವುದು. ಈ ಪ್ರಭಾವದಿಂದ ಕೊರಿಯ ದೇಶ ವಿನಾಯಿತಿ ಪಡೆದಿಲ್ಲ. ಆದರೂ, ವಯಸ್ಸಾದವರ ಕಡೆಗೆ ಗೌರವ ಮನೋಭಾವ ಅನೇಕ ಕೊರಿಯನ್ ಜನರ ಹೃದಯಗಳಲ್ಲಿದೆ.” (2 ತಿಮೊಥಿ 3:1-5)—ಕೇ ಕಿಮ್, ಕೊರಿಯದಿಂದ.
[ಪುಟ 7 ರಲ್ಲಿರುವ ಚಿತ್ರ]
ವಯಸ್ಸಾದವರಿಗೆ ಭೇಟಿ ಕೊಡುವುದು ಸಮಯದ ಸುವ್ಯಯವಾಗಿದೆ