ಹರಟೆ ಅಷ್ಟು ಹಿಡಿಸುವುದೇಕೆ?
ಚೈನೀಸ್ ಭಾಷೆಯಲ್ಲಿ ಅದರ ಹೆಸರು ಶೆಂಟನ್; ಫಿನ್ನಿಷ್ ಭಾಷೆಯಲ್ಲಿ ಜುಓರು; ಇಟ್ಯಾಲಿಯನ್ ಭಾಷೆಯಲ್ಲಿ ಪೆಟಿಗೊಲೆಸೆ; ಸ್ಪ್ಯಾನಿಷಿನಲ್ಲಿ, ಚಿಸ್ಮಿ. ಹೌದು, ಹರಟೆಯು ವಿಶ್ವವ್ಯಾಪಕ. ಕೆಲವು ಭಾಷೆಗಳಲ್ಲಿ ಹರಟೆಗೆ ನೇರವಾದ ನಕಾರಾತ್ಮಕ ಅರ್ಥವಿದೆ. ಇಂಗ್ಲಿಷಿನಲ್ಲಿ “ಗಾಸಿಪ್” ಎಂದು ಕರೆಯಲ್ಪಡುವ ಹರಟೆಗೆ “ಅಪ್ರಯೋಜಕ ಮಾತು,” ಕೆಲಸಕ್ಕೆ ಬಾರದ ವಿಷಯಗಳ ಕುರಿತು ಮಾತುಕತೆ ಎಂಬ ಅರ್ಥವಿದೆ.
ಆದರೆ, ಸ್ವಾರಸ್ಯಕರವಾಗಿ, ಈ ಇಂಗ್ಲಿಷ್ ಪದವು ನಕಾರಾತ್ಮಕ ಅರ್ಥವನ್ನು ಪಡೆದಿದೆ. ಹೀಗೆ, “ಹರಟೆ” ಎಂಬ ಪದಕ್ಕೆ ಪೂರ್ವ, “ಹಗೆಸಾಧನೆಯ” ಯಾ “ಹಾನಿಕರವಾದ” ಎಂಬ ಪದಗಳು ಆಗಾಗ್ಗೆ ಕಂಡುಬರುತ್ತವೆ. ವ್ಯರ್ಥವಾದ ಮಾತು ಅನೇಕ ವೇಳೆ ಹಾನಿಕರವಾಗಿ ಅಥವಾ ಉಪದ್ರವಕರವಾಗಿ ಪರಿಣಮಿಸುವುದೇ ಇದಕ್ಕೆ ಕಾರಣ. ಇದು ಚಾಡಿಮಾತಾಗಿಯೂ ಪರಿವರ್ತನೆ ಹೊಂದಬಹುದು, ಮತ್ತು ಚಾಡಿಮಾತನ್ನು, “ಒಬ್ಬನ ಕೀರ್ತಿಯನ್ನು ಕಳಂಕಿಸುವ ಮತ್ತು ಹಾಳುಮಾಡುವ ಮಿಥ್ಯಾಪವಾದ ಯಾ ತಪ್ಪು ನಿರೂಪಣೆಯ ಹೇಳಿಕೆ” ಎಂದು ನಿರೂಪಿಸಲಾಗಿದೆ. ಹೀಗಿರುವುದರಿಂದ ಒಂದು ಪುರಾತನ ನಾಣ್ಣುಡಿ, “ಬಡಗಣ ಗಾಳಿ ಮಳೆ ತರುವಷ್ಟೆ ನಿಶ್ಚಯವಾಗಿ ಹರಟೆ ಕೋಪವನ್ನು ತರುತ್ತದೆ” ಎಂದು ಹೇಳಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ.—ಜ್ಞಾನೋಕ್ತಿ 25:23, ಟುಡೇಸ್ ಇಂಗ್ಲಿಷ್ ವರ್ಷನ್.
ಈ ಹಾನಿಮಾಡುವ ಸಾಮರ್ಥ್ಯ ಹರಟೆಗಿರುವಾಗಲೂ ನಾವು ಹರಟೆಯನ್ನು ಅಷ್ಟು ತಡೆಯಲಾಗದ್ದಾಗಿ, ಅಷ್ಟು ಹಿಡಿಸುವುದಾಗಿ ಕಂಡುಕೊಳ್ಳುವುದೇಕೆ? ಮತ್ತು ಹಾನಿರಹಿತ ಮತ್ತು ಹಾನಿಪೂರ್ಣ ಹರಟೆಗಳ ಮಧ್ಯೆ ಒಬ್ಬನು ಎಲ್ಲಿ ಮಿತಿ ಕಲ್ಪಿಸಬೇಕು?
ಹರಟೆ—ಮಾಹಿತಿ ವಿನಿಮಯ
ಹರಟೆಗೆ ಈ ಒಂದು ಮೂಲಕಾರಣವಿದೆ: ಜನರು ಜನರಲ್ಲಿ ಆಸಕ್ತಿ ವಹಿಸುತ್ತಾರೆ. ಆದುದರಿಂದ, ನಾವು ಸ್ವಾಭಾವಿಕವಾಗಿ ಇತರರ ಕುರಿತು ಮಾತಾಡುವ ಪ್ರವೃತ್ತಿಯಲ್ಲಿರುತ್ತೇವೆ. ಮನುಷ್ಯ ಶಾಸ್ತ್ರಜ್ಞ ಮ್ಯಾಕ್ಸ್ ಗ್ಲಕ್‌ಮ್ಯಾನ್ ಒಮ್ಮೆ ಹೇಳಿದ್ದು: “ಪ್ರತಿಯೊಂದು ದಿನ, ಆ ದಿನದ ಒಂದು ದೊಡ್ಡ ಭಾಗದಲ್ಲಿ, ನಮ್ಮಲ್ಲಿ ಹೆಚ್ಚಿನವರು ಹರಟೆಯಲ್ಲಿ ನಿರತರಾಗುತ್ತೇವೆ. ನಮ್ಮ ಎಚ್ಚತ್ತಿರುವ ಸಮಯವನ್ನು ನಾವು ಹೇಗೆ ಉಪಯೋಗಿಸುತ್ತೇವೆಂದು ಒಂದು ದಾಖಲೆಯನ್ನಿಡುವ ಪಕ್ಷದಲ್ಲಿ, ಹರಟೆಯು ತಾಸುಗಳ ಮೊತ್ತದಲ್ಲಿ—ನಮ್ಮಲ್ಲಿ ಕೆಲವರ ಸಂಬಂಧದಲ್ಲಿ—‘ಕೆಲಸ’ದ ನಂತರ ಬರುತ್ತದೆಂದು ನನ್ನ ಭಾವನೆ.”
ಅನಿಯತ ಮಾತುಕತೆ, ಸೀಮಿತ ಹಾಗೂ ದಯಾಪೂರಿತವಾಗಿರುವಲ್ಲಿ, ಅತ್ಯಾಧುನಿಕ ಆಗುಹೋಗುಗಳನ್ನು ತಿಳಿಯುವರೆ ಉಪಯುಕ್ತ ಮಾಹಿತಿಯ ವಿನಿಮಯಕ್ಕೆ ದಾರಿ ಮಾಡಿಕೊಡುತ್ತದೆ. ಅದರಲ್ಲಿ, ದೋಷವಿಲ್ಲದ ಅಂದರೆ, ಯಾರಿಗೆ ಮದುವೆಯಾಯಿತು, ಯಾರು ಗರ್ಭಿಣಿ, ಯಾರು ಸತ್ತರು, ಇವೇ ಮೊದಲಾದ, ಅಥವಾ, ಹಾಸ್ಯರಸದ, ಮತ್ಸರವಿಲ್ಲದ ಮಾತುಕತೆ ಅಡಕವಾಗಿರಬಹುದು.
ಆದರೆ, ಅನೇಕ ವೇಳೆ, ಇಂಥ ವ್ಯರ್ಥ ಮಾತು, ಔಚಿತ್ಯ ಮತ್ತು ಸುಸಂಸ್ಕೃತಿಯ ಎಲ್ಲೆಯನ್ನು ಮೀರಿ ಹೋಗುತ್ತದೆ. ನಿಜತ್ವಗಳಿಗೆ ಅಲಂಕಾರ, ಅತಿಶಯೋಕ್ತಿ, ಯಾ ಕೊಂಕು ಅರ್ಥ ಕೊಡಲ್ಪಡುತ್ತದೆ. ಏಕಾಂತತೆಯನ್ನು ಉಲ್ಲಂಘಿಸಲಾಗುತ್ತದೆ. ಹಾಸ್ಯದ ಬುಡದಲ್ಲಿ ಅಪಮಾನದ ಉದ್ದೇಶವಿರುತ್ತದೆ. ಗೋಪ್ಯತೆ ಹೊರಗೆಡಹಲ್ಪಡುತ್ತದೆ. ಖ್ಯಾತಿಗೆ ಹಾನಿಯನ್ನು ತರಲಾಗುತ್ತದೆ ಇಲ್ಲವೆ ಅದನ್ನು ಧ್ವಂಸಮಾಡಲಾಗುತ್ತದೆ. ಸ್ತುತ್ಯಾರ್ಹ ವಿಷಯಗಳನ್ನು ದೂರಿಕೊಂಡು, ಗೊಣಗಿ, ಯಾ ತಪ್ಪು ಕಂಡುಹಿಡಿದು ಮರೆ ಮಾಡಲಾಗುತ್ತದೆ. ಹಾನಿಯ ಉದ್ದೇಶವಿಲ್ಲದೆ ಮಾತನಾಡಿದೆನೆಂದು ಹೇಳುವುದು, ಯಾರ ವಿಷಯ ಮಾತನಾಡಲಾಗಿತ್ತೊ ಆ ವ್ಯಕ್ತಿಗೆ ಶಮನವನ್ನು ತರಲಾರದು. ಹಾನಿಕರ ಹರಟೆಯನ್ನು ನಿರ್ಮಲವಾದ ಗೋಡೆಯ ಮೇಲೆ ಕೆಸರು ಮಣ್ಣನ್ನು ಎಸೆಯುವುದಕ್ಕೆ ಹೋಲಿಸಲಾಗಿದೆ. ಅದು ಗೋಡೆಗೆ ಅಂಟಿಕೊಳ್ಳಲಿಕ್ಕಿಲವ್ಲಾದರೂ ಹೊಲಸು ಕಲೆಯನ್ನು ಸದಾ ಬಿಟ್ಟುಹೋಗುತ್ತದೆ.
ಸ್ವೀಕಾರಾರ್ಹತೆ
ನಾವು ಹರಟೆಗೆ ಸುಲಭವಾಗಿ ಎಳೆಯಲ್ಪಡಬಹುದಾದ ಇನ್ನೊಂದು ಕಾರಣ ಮೆಚ್ಚಲ್ಪಡಲು ಮತ್ತು ಇತರರಿಂದ ಅಂಗೀಕರಿಸಲ್ಪಡಲು ನಮಗಿರುವ ಸ್ವಾಭಾವಿಕ ಬಯಕೆಯೆ. ಮನಶ್ಶಾಸ್ತ್ರಜ್ಞರಾದ ಜಾನ್ ಸಬೀನಿ ಮತ್ತು ಮೋರಿ ಸಿಲ್ವರ್ ಬರೆದುದು: “ಒಂದಲ್ಲ ಒಂದು ಕಾರಣದ ನಿಮಿತ್ತ ನಿಮಗೆ ಮಾತಾಡುವ ಹಂಗು ಇದೆ; ಮತ್ತು ಹರಟೆಯು ಈ ಹಂಗನ್ನು ಪೂರೈಸುವ ಇಷ್ಟಕರವಾದ, ಸುಲಭ, ಹಾಗೂ ವಿಶ್ವವ್ಯಾಪಕವಾಗಿ ಅಂಗೀಕರಿಸಲ್ಪಡುವ ಮಾರ್ಗವಾಗಿದೆ.” (ಮೊರ್ಯಾಲಿಟೀಸ್ ಆಫ್ ಎವ್ರಿಡೇ ಲೈಫ್) ಹೀಗೆ, ಸ್ವಲ್ಪ ಮಟ್ಟಿಗೆ, ಹರಟೆಯು ಸಂಭಾಷಣೆಯ ಇಂಧನ, ಸ್ವೀಕಾರಯೋಗ್ಯತೆಯ ಮಾಧ್ಯಮ.
ಆದರೆ ಸಮಸ್ಯೆಯು ಜನರು ಸಕಾರಾತ್ಮಕ ಮಾಹಿತಿಯ ಬದಲಿಗೆ ನಕಾರಾತ್ಮಕ ಸಮಾಚಾರದಲ್ಲಿ ಹೆಚ್ಚು ಉತ್ತೇಜಿತರಾಗುವ ಪ್ರವೃತ್ತಿಯುಳ್ಳವರಾಗುವುದೆ. ಕೆಲವರು ಕೌತುಕಕಾರಿ ಹಾಗೂ ದೂಷಣೀಯ ಸುದ್ದಿಗಳಿಂದ ತಲ್ಲಣಗೊಳಿಸಲ್ಪಡಲು ಆನಂದವುಳ್ಳವರಾಗುವಂತೆ ಕಾಣುತ್ತದೆ. ಹೀಗೆ, ಹರಟೆಯು ನಿಜಾಕರ್ಷಣೆ ಪಡೆಯುವ ಒಂದು ಸಂಗತಿ—ರಸವತ್ತಾದ ವಿಷಯವು ಎಷ್ಟು ವಿವರ್ಣವೊ, ಗೌರವಹಾನಿಕಾರಕವೊ, ಅಷ್ಟು ಹೆಚ್ಚು ಒಳ್ಳೆಯದು. ಆ ತಲ್ಲಣಗೊಳಿಸುವ ಆರೋಪಗಳನ್ನು ರುಜುಮಾಡುವ ವಿಚಾರವು ವಿರಳ.
ಪತ್ರಿಕಾಮಾಧ್ಯಮ ಹರಟೆ
ಈ ವಿಧದ ಹರಟೆ ಇನ್ನೊಂದು ಮಾನವ ನ್ಯೂನತೆಗೆ—ಹದತಪ್ಪಿದ ಕುತೂಹಲಕ್ಕೆ—ಹಿಡಿಸುತ್ತದೆ. ನಮಗೆ ರಹಸ್ಯಗಳು ಇಷ್ಟ. ವಿಷಯಗಳ ತಿಳಿವಳಿಕೆ ನಮಗೆ ಆನಂದ. 1730ರಷ್ಟೂ ಪೂರ್ವದಲ್ಲಿ, ಬೆಂಜಮಿನ್ ಫ್ರ್ಯಾಂಕಿನ್ಲ್, ಪೆನ್ಸಿಲೇನ್ವಿಯ ಗಝೆಟ್ ಪತ್ರಿಕೆಗೆ ಒಂದು ಹರಟೆಯ ಅಂಕಣವನ್ನು ಬರೆಯಲಾರಂಭಿಸಿದಾಗ, ಜನರು ಹರಟೆಗೆ ಹಣ ತೆರುವರೆಂದು ವ್ಯಕ್ತವಾಯಿತು.
ಪತ್ರಿಕಾ ಮಾಧ್ಯಮ ಹರಟೆ ಬದುಕಿ ಉಳಿಯುತ್ತಾ ಬಂದಿದೆ—ಮತ್ತು ಬೆಳೆದಿದೆ. ಯೂರೋಪಿನಲ್ಲಿ ಪತ್ರಿಕಾ ಅಂಗಡಿಗಳು, ರಾಜಕುಟುಂಬಗಳ, ಪಂದ್ಯದ ಕಾರಿನ ಓಟಗಾರರ, ಮತ್ತು ಇತರ ಅಂತಾರಾಷ್ಟ್ರೀಯ ಪ್ರಸಿದ್ಧ ವ್ಯಕ್ತಿಗಳ ಕಥೆಗಳಿರುವ ಪತ್ರಿಕೆಗಳಿಂದ ತುಂಬಿ ತುಳುಕುತ್ತವೆ. ಒಂದು ವೃತ್ತಪತ್ರಕೆಯ ಲೇಖನ ಹರಟೆಯನ್ನು ದೊಡ್ಡ ವ್ಯಾಪಾರವೆಂದು ಕರೆಯಿತು.
ಆದರೆ ಜನರ ಮನೆಗಳ ಏಕಾಂತತೆಯಲ್ಲಿ, ಅವರ ಮಲಗುವ ಕೋಣೆಗಳಲ್ಲಿ, ಮತ್ತು ಅವರ ಮನಸ್ಸಿನಲ್ಲಿ ಏನು ನಡೆಯುತ್ತದೆಂದು ವಿಪರೀತ ಕುತೂಹಲತೆ ತೋರಿಸುವುದು ಪ್ರಯೋಜನಕರವೊ? ವಿಕಾರ ಬಯಕೆಯನ್ನು ಉದ್ರೇಕಿಸುವ ವಿಷಯಗಳನ್ನು ಓದುವುದು ಯಾ ನೋಡುವುದು ಆರೋಗ್ಯಕರವಾಗುವ ಸಾಧ್ಯತೆಯಿದೆಯೆ? ಪತ್ರಿಕಾ ಹರಟೆ ಕುತೂಹಲವನ್ನು ನ್ಯಾಯಸಮ್ಮತ ಮೇರೆಗಳನ್ನು ಮೀರುವಂತೆ ಮಾಡಿಸುತ್ತದೆಂಬುದು ವ್ಯಕ್ತ.
“[ಸುಳ್ಳು ವದಂತಿ] ದ್ರಾಕ್ಷಿಬಳ್ಳಿಯ ಮೂಲಕ ಕೇಳಿಸಿಕೊಂಡೆ”
ಗಾಳಿಸುದ್ದಿ ಮತ್ತು ತಪ್ಪು ಮಾಹಿತಿಗಳೂ ಹಾನಿಕರವಾದ ಹರಟೆಯನ್ನು ಪ್ರೋತ್ಸಾಹಿಸಿವೆ. ಅಮೆರಿಕದ ಸಿವಿಲ್ ಯುದ್ಧಕಾಲದಲ್ಲಿ, ಮಿಲಿಟರಿ ಠಾಣ್ಯಗಳ ಮಧ್ಯೆ ದ್ರಾಕ್ಷಿಬಳ್ಳಿಯೋಪಾದಿ ಅಸಂಖ್ಯಾತ ಟೆಲಿಗ್ರಾಫ್ ತಂತಿಗಳು ನೇತು ಹಾಕಲ್ಪಡುತ್ತಿದ್ದವು. ಹೀಗೆ “ಗ್ರೇಪ್‌ವೈನ್” ಎಂದು ಕರೆಯಲ್ಪಡುವ ದ್ರಾಕ್ಷಿಬಳ್ಳಿ ಗಾಳಿಸುದ್ದಿಯ ಸೂಚಕವಾಗಿ, “ನಾನು ಗ್ರೇಪ್‌ವೈನಿನ ಮೂಲಕ ಕೇಳಿಸಿಕೊಂಡೆ” ಎಂಬ ಹೇಳಿಕೆ ಸುಳ್ಳು ವದಂತಿಯನ್ನು ದಾಟಿಸಲು ನೆವವಾಗಿ ಪರಿಣಮಿಸಿತು.
ಆದರೆ ದುರ್ಭಾಗ್ಯವಶಾತ್, ಈ ದ್ರಾಕ್ಷಿಬಳ್ಳಿಯ ಫಲ ಅನೇಕ ವೇಳೆ ಕಹಿ. ಗಾಳಿಸುದ್ದಿಗಳು ತೀವ್ರಭಯ, ಮರಣ ಮತ್ತು ಧ್ವಂಸಗಳಿಗೆ ಕಾರಣಭೂತವಾಗಿ ಪರಿಣಮಿಸಿವೆ. ಇದರಿಂದ ವ್ಯಾಪಾರಕ್ಕಾಗಿರುವ ನಷ್ಟ ಅಸಂಖ್ಯಾತ. ಒಂದು ಫಾಸ್ಟ್‌ಫುಡ್ ಉಪಾಹಾರ ಗೃಹ ಸಂಘವು ಅದರ ಹ್ಯಾಂಬರ್ಗರ್ ತಿಂಡಿಯಲ್ಲಿ ಹುಳುಗಳನ್ನು ಹಾಕುತ್ತದೆಂಬ ಗಾಳಿಸುದ್ದಿಯ ವಿರುದ್ಧ ಹೋರಾಡಲು ಒಂದು ವರ್ಷಕ್ಕೂ ಹೆಚ್ಚು ಸಮಯವನ್ನು ವ್ಯಯಿಸಿತು. ಸಾಬೂನು ಉತ್ಪಾದನೆಗೆ ಪ್ರಸಿದ್ಧವಾಗಿರುವ ಒಂದು ಕಂಪೆನಿಯು ತನ್ನ ಸಂಸ್ಥಾ ದ್ಯೋತಕವು ಸೈತಾನನ ಲಾಂಛನವೆಂದೂ ಕಂಪೆನಿಯು ದೆವ್ವಾರಾಧನೆಯಲ್ಲಿ ಹೇಗೊ ಸಿಕ್ಕಿಕೊಂಡಿದೆ ಎಂಬ ಗಾಳಿಸುದ್ದಿಯನ್ನು ಅಡಗಿಸಿಬಿಡಲು ಅನೇಕ ವರ್ಷಗಳನ್ನು—ಮತ್ತು ಲಕ್ಷಾಂತರ ಡಾಲರುಗಳನ್ನು—ವ್ಯಯಿಸಿತು.
ಆದರೆ ಗಾಳಿಸುದ್ದಿಯ ಕಾರಣ ಅತಿ ಹೆಚ್ಚು ಹೃದೇದ್ವನೆ ಮತ್ತು ಹಾನಿಯನ್ನು ಅನುಭವಿಸುವವರು ಒಬ್ಬೊಬ್ಬರಾದ ವ್ಯಕ್ತಿಗಳೇ. ಆದರೂ, ಇಂಥ ಹುಚ್ಚುಕಥೆಗಳು ಆಕರ್ಷಕವಾಗಿರುವುದರಿಂದ, ಸತ್ಯವನ್ನು ಅಥವಾ ಆಗಬಹುದಾದ ಅಂತ್ಯಪರಿಣಾಮವನ್ನು ಅಲಕ್ಷ್ಯ ಮಾಡಿ ಜನರು ಅವನ್ನು ಬೆಳೆಸುತ್ತಾರೆ.
ಹಗೆಸಾಧನೆಯ ಹರಟೆ—ಚಾಡಿ ಮಾತು
ಮತ್ಸರ ಮತ್ತು ಹಗೆಗಳು ಅನೇಕ ವೇಳೆ ಹರಟೆಯ ಅತಿ ನಾಶಕರ ರೂಪವಾದ ಹಗೆಸಾಧನೆಯ ಹರಟೆ ಯಾ ಚಾಡಿ ಮಾತಿನ ಬುಡದಲ್ಲಿವೆ. “ಚಾಡಿಕೋರ” ಎಂಬುದರ ಗ್ರೀಕ್ ಪದವು ಡಆ್ಯಬೋಲೊಸ್. ಈ ಪದವನ್ನು ಬೈಬಲು ಪಿಶಾಚ (ಡೆವಿಲ್) ಎಂದು ಭಾಷಾಂತರಿಸಿದೆ. (ಪ್ರಕಟನೆ 12:9) ಈ ಬಿರುದು ಯೋಗ್ಯ, ಏಕೆಂದರೆ ಸೈತಾನನು ದೇವರ ಸಂಬಂಧದಲ್ಲಿ ಮಹಾ ಚಾಡಿಕೋರನು. ಈ ಸೈತಾನನಂತೆ, ಕೆಲವರು ಇತರರ ಮೇಲೆ ದುರುದ್ದೇಶದಿಂದ ಮಾತನಾಡುತ್ತಾರೆ. ಕೆಲವು ಸಲ, ಮನನೊಂದಿರುವ ಕಾರಣ ಯಾ ಹೊಟ್ಟೆಕಿಚ್ಚಿನ ಕಾರಣ ಇದರ ಉದ್ದೇಶವು ಹಗೆಸಾಧನೆಯಾಗಿದೆ. ಹೇಗೂ, ಅವರು ಇತರರ ಒಳ್ಳೆ ಹೆಸರನ್ನು ಕೊಲೆಮಾಡಿ ತಮ್ಮ ಸ್ವಂತ ಅಭಿರುಚಿಗಳನ್ನು ಬೆಳೆಸಲು ನೋಡುತ್ತಾರೆ.
ಈ ಹಗೆಸಾಧನೆಯ ಹರಟೆ, ಯಾ ಚಾಡಿ ಮಾತು ಹರಟೆಯ ರೂಪಗಳಲ್ಲಿ ಅತಿ ಖಂಡನಾರ್ಹವೆಂಬುದು ಸ್ಪಷ್ಟವಾಗಿದರೂ ಯಾವುದೇ ವಿಧದ ನೋವುಂಟುಮಾಡುವ, ಉಪದ್ರವಕಾರಿ ಹರಟೆಯಲ್ಲಿ ಭಾಗವಹಿಸುವುದು ನೀತಿವಿರುದ್ಧವೂ ಬೇಜವಾಬ್ದಾರಿಯದ್ದೂ ಆಗಿದೆ. ಹಾಗಾದರೆ, ಹಾನಿರಹಿತ ಮಾತು ಹಾನಿಕಾರಕ ಚಾಡಿಯಾಗಿ ಕೆಡದಂತೆ ಒಬ್ಬನು ಹೇಗೆ ತಡೆಯಬಹುದು? (g91 6/8)
[ಪುಟ 5 ರಲ್ಲಿರುವ ಚಿತ್ರ]
ಸ್ನೇಹಭಾವದ ಹರಟೆ ಅನೇಕ ವೇಳೆ ಉಪಯೋಗಕರ ಮಾಹಿತಿ ವಿನಿಮಯ ಮತ್ತು ಸಂಭಾಷಣಾ ಇಂಧನವಾಗಿ ಕೆಲಸ ನಡೆಸುತ್ತದೆ
[ಪುಟ 6 ರಲ್ಲಿರುವ ಚಿತ್ರ]
ಹಾನಿಕರವಾದ ಹರಟೆ ನಿರ್ಮಲ ಗೋಡೆಯ ಮೇಲೆ ಕೆಸರುಮಣ್ಣನ್ನು ಎಸೆದಂತೆ. ಅದು ಅಲ್ಲಿ ಅಂಟಿಕೊಳ್ಳಲಿಕ್ಕಿಲ್ಲ, ಆದರೆ ಸದಾ ಮಲಿನವಾದ ಕಲೆಯನ್ನು ಬಿಟ್ಟುಹೋಗುತ್ತದೆ.
[ಪುಟ 7 ರಲ್ಲಿರುವ ಚಿತ್ರ]
ತಾವು ಗಮನದ ಕೇಂದ್ರವಾಗಿರಬೇಕೆಂದು ಕೆಲವರು ಹರಟೆ ಮಾತಾಡುತ್ತಾರೆ