ವಿವಿಧ ಸಾಮರ್ಥ್ಯಗಳ ಆಲಿವ್ ಎಣ್ಣೆ
ಆಲಿವ್ ಎಣ್ಣೆ ಒಂದು ಹಣ್ಣಿನ ರಸವೆಂದು ತಿಳಿಯಲು ನಿಮಗೆ ಆಶ್ಚರ್ಯವಾದೀತೆ? ನೀವೊಂದು ಭೂಮಧ್ಯ ದೇಶದಲ್ಲಿ ಜೀವಿಸುವಲ್ಲಿ ಆಶ್ಚರ್ಯವಾಗಲಿಕ್ಕಿಲ್ಲ. ಏಕೆಂದರೆ, ಜಗತ್ತಿನಲ್ಲಿ ಸಾಗುವಳಿಯಾಗುತ್ತಿರುವ 80 ಕೋಟಿ ಆಲಿವ್ ಮರಗಳಲ್ಲಿ, 98 ಪ್ರತಿಶತ ಮರಗಳು ಭೂಮಧ್ಯ ಪ್ರದೇಶದಲ್ಲಿವೆ ಎಂದು ಅಂದಾಜಿಸಲಾಗಿದೆ. ಇಲ್ಲಿ, ಸಾವಿರಾರು ವರ್ಷಗಳಿಂದ ಆಲಿವ್ ಎಣ್ಣೆ ಜನರ ಜೀವನದಲ್ಲಿ ಪ್ರಾಮುಖ್ಯ ಪಾತ್ರ ವಹಿಸಿದೆ.
ಸರಳವಾಗಿ ಹೇಳುವುದಾದರೆ, ಆಲಿವ್ ಎಂಬುದು ಒಂದು ನಿತ್ಯ ಹಸುರು ಮರದ ಹಣ್ಣು, ಮತ್ತು ಆಲಿವ್ ಎಣ್ಣೆ ಮೂಲಸ್ವಭಾವದಲ್ಲಿ ಆಲಿವ್ನಿಂದ ಹಿಂಡಿ ತೆಗೆದ ವಸ್ತು. ನಿಧಾನ ಬೆಳೆವಣಿಗೆಯ ಕಾರಣ, ಒಳ್ಳೆಯ ಉತ್ಪಾದನೆಯನ್ನು ಕೊಡುವ ಮೊದಲು, ಆಲಿವ್ ಮರ ಹತ್ತು ವರ್ಷಗಳಷ್ಟೂ ಸಮಯವನ್ನು ತೆಗೆದುಕೊಳ್ಳಬಹುದು. ಆ ಬಳಿಕ, ಆ ಮರ ನೂರಾರು ವರ್ಷಗಳ ತನಕ ಹಣ್ಣು ಕೊಡಬಲ್ಲದು. ಪ್ಯಾಲೆಸ್ಟೀನಿನಲ್ಲಿ ಒಂದು ಸಾವಿರ ವರ್ಷಕ್ಕೂ ಹಿಂದಿನ ಆಲಿವ್ ಮರಗಳಿವೆ ಎಂದು ಹೇಳಲಾಗುತ್ತದೆ!
ಆಲಿವ್ ಎಣ್ಣೆಯ ಉತ್ಪಾದನೆ ಬೀಸುವ ಕಲ್ಲಿನಲ್ಲಿ ಆಲಿವನ್ನು ಜಜ್ಜುವ ಮೂಲಕ ಆರಂಭವಾಗುತ್ತದೆ. ಹೀಗೆ ಜಜ್ಜಿದಾಗ ಉಂಟಾಗುವ ಅಂಟಿನಿಂದ ರಸವನ್ನು ತೆಗೆಯಲು ಅದನ್ನು ಜಲಭಾರ ಒತ್ತುಯಂತ್ರದಲ್ಲಿ ಇಡಲಾಗುತ್ತದೆ. ಆದರೆ ಇದು ಸಾಮಾನ್ಯ ಹಣ್ಣಿನ ರಸವಲ್ಲ. ಇದು ಕಾರ್ಯತಃ ಎಣ್ಣೆ ಮತ್ತು ನೀರಿನ ಮಿಶ್ರಣ. ನೀರನ್ನು ತೆಗೆದ ಮೇಲೆ, ಎಣ್ಣೆಯನ್ನು ವರ್ಗೀಕರಿಸಿ, ಶೇಖರಿಸಿ, ಬಳಕೆಗಾಗಿ ಸೀಸೆಗಳಲ್ಲಿ ತುಂಬಿಸಲಾಗುತ್ತದೆ.
ಪೂರ್ವ ಕಾಲಗಳಲ್ಲಿ ಇದರ ಉಪಯೋಗಗಳು
ಆಲಿವ್ ಎಣ್ಣೆಯ ಬಹುಸಾಮರ್ಥ್ಯವು ಪ್ರಾಚೀನ ಜಗತ್ತಿನಲ್ಲಿ ವಿಶೇಷವಾಗಿ ವ್ಯಕ್ತವಾಗುತ್ತಿತ್ತು. ಉದಾಹರಣೆಗೆ, ಈಜಿಪ್ಟ್ನಲ್ಲಿ, ಕಟ್ಟಡಕ್ಕೆ ಬೇಕಾಗುವ ಭಾರವಾದ ವಸ್ತುಗಳನ್ನು ಒಯ್ಯಲು ಆಲಿವ್ ಎಣ್ಣೆಯನ್ನು ಮೃದುಚಾಲಕವಾಗಿ ಉಪಯೋಗಿಸಲಾಗುತ್ತಿತ್ತು. ಮೂಲ ಆಹಾರವಾಗಿದ್ದುದಲ್ಲದೆ, ಆಲಿವ್ ಎಣ್ಣೆಯನ್ನು ಮಧ್ಯ ಪೂರ್ವ ದೇಶಗಳಲ್ಲಿ ಕಾಂತಿವರ್ಧಕವಾಗಿಯೂ ದೀಪಗಳ ಎಣ್ಣೆಯಾಗಿಯೂ ಉಪಯೋಗಿಸಲಾಗುತ್ತಿತ್ತು.
ಅನೇಕ ಬೈಬಲ್ ವೃತ್ತಾಂತಗಳಿಗನುಸಾರ, ಸುಗಂಧ ದ್ರವ್ಯ ಕೂಡಿದ ಆಲಿವ್ ಎಣ್ಣೆಯನ್ನು ಚರ್ಮೌಷಧ ದ್ರವವಾಗಿ ಉಪಯೋಗಿಸಲಾಗುತ್ತಿತ್ತು. ಸೂರ್ಯಕಾವಿನಿಂದ ರಕ್ಷಣೆ ಪಡೆಯಲು ಮತ್ತು ಸ್ನಾನ ಮಾಡಿದ ಬಳಿಕ ಇದನ್ನು ಸಾಮಾನ್ಯವಾಗಿ ಚರ್ಮಕ್ಕೆ ಹಚ್ಚಲಾಗುತ್ತಿತ್ತು. (ರೂತ 3:3) ಒಬ್ಬ ಅತಿಥಿಯ ತಲೆಗೆ ಎಣ್ಣೆ ಹಚ್ಚುವುದು ಅತಿಥಿ ಸತ್ಕಾರದ ಒಂದು ವರ್ತನೆಯೆಂದು ತಿಳಿಯಲಾಗುತ್ತಿತ್ತು. (ಲೂಕ 7:44-46) ಈ ಎಣ್ಣೆ ಜಜ್ಜುಗಾಯ ಮತ್ತು ಗಾಯಗಳನ್ನು ಶಮನಗೊಳಿಸಲು ಬಳಸಲ್ಪಡುತ್ತಿದ್ದುದರಿಂದ ಔಷಧದ ಉದ್ದೇಶವನ್ನೂ ಪೂರೈಸುತ್ತಿತ್ತು. (ಯೆಶಾಯ 1:6; ಲೂಕ 10:33, 34) ಮತ್ತು ಒಬ್ಬನನ್ನು ಹೂಣಿಡಲು ತಯಾರಿಸುವುದರಲ್ಲಿ ಉಪಯೋಗಿಸಲ್ಪಡುತ್ತಿದ್ದ ಒಂದು ಪದಾರ್ಥ ಆಲಿವ್ ಎಣ್ಣೆಯಾಗಿದ್ದಿರಬಹುದು.—ಮಾರ್ಕ 14:8; ಲೂಕ 23:56.
ಯೆಹೋವನು ಮೋಶೆಗೆ ಪವಿತ್ರ “ಅಭಿಷೇಕತೈಲ” ವನ್ನು ತಯಾರಿಸಲು ಹೇಳಿದಾಗ ಪದಾರ್ಥಗಳಲ್ಲಿ ಯಾವ ರೀತಿಯ ತೈಲವಿರಬೇಕೆಂದು ಹೇಳಿದನು? ಹೌದು, ಅತಿ ಶುದ್ಧವಾದ ಆಲಿವ್ ತೈಲವನ್ನೇ! ಇದರಿಂದ ಮೋಶೆ ದೇವದರ್ಶನದ ಗುಡಾರ, ಅದರ ಪೀಠೋಪಕರಣಗಳು, ಪವಿತ್ರ ಪಾತ್ರೆಗಳು, ಮತ್ತು ಒಡಂಬಡಿಕೆಯ ಮಂಜೂಷವನ್ನೂ ಅಭಿಷೇಕಿಸಿದನು. ಆರೋನನೂ ಅವನ ಪುತ್ರರೂ ಯೆಹೋವನ ಯಾಜಕರಾಗಿ ಶುದ್ಧೀಕರಿಸಲ್ಪಡಲಿಕ್ಕಾಗಿ ಈ ತೈಲದಿಂದ ಅಭಿಷೇಕಿಸಲ್ಪಟ್ಟರು. (ವಿಮೋಚನಕಾಂಡ 30:22-30; ಯಾಜಕಕಾಂಡ 8:10-12) ತದ್ರೀತಿ, ಇಸ್ರಾಯೇಲಿನ ರಾಜರ ತಲೆಯ ಮೇಲೆ ಆಲಿವ್ ಎಣ್ಣೆಯನ್ನು ಹೊಯ್ದು ಅವರನ್ನು ಅಭಿಷೇಕಿಸಲಾಗುತ್ತಿತ್ತು.—1 ಸಮುವೇಲ 10:1; 1 ಅರಸು 1:39.
ಪುರಾತನ ಕಾಲದ ದೀಪಗಳಲ್ಲಿ ಇಂಧನವಾಗಿ ಯಾವುದನ್ನು ಸುಡಲಾಗುತ್ತಿತ್ತು? ವಿಮೋಚನಕಾಂಡ 27:20ರಲ್ಲಿ ಇದಕ್ಕೆ ಉತ್ತರವನ್ನು ಕಂಡುಕೊಳ್ಳಬಲ್ಲಿರಿ. ಇದೂ ವಿವಿಧೋದ್ದೇಶಗಳ ಆಲಿವ್ ತೈಲವಾಗಿತ್ತು! ಯೆಹೋವನ ಆಲಯದಲ್ಲಿದ್ದ ಹತ್ತು ದೊಡ್ಡ ಚಿನ್ನದ ದೀಪಸ್ತಂಭಗಳನ್ನು ಅತಿ ಶ್ರೇಷ್ಠ ರೀತಿಯ ಆಲಿವ್ ಎಣ್ಣೆಯಿಂದ ಉರಿಸಲಾಗುತ್ತಿತ್ತು. ಯೆಹೋವನಿಗೆ ಸಮರ್ಪಿಸಲಾಗುತ್ತಿದ್ದ ಧಾನ್ಯ ನೈವೇದ್ಯ ಹಾಗೂ “ಸರ್ವಾಂಗ ಹೋಮ”ಗಳ ಸಂಬಂಧದಲ್ಲಿಯೂ ಈ ಎಣ್ಣೆಯನ್ನೇ ಉಪಯೋಗಿಸಲಾಗುತ್ತಿತ್ತು.—ವಿಮೋಚನಕಾಂಡ 290:40, 42.
ಆಲಿವ್ ಎಣ್ಣೆ ಎಷ್ಟು ಅಮೂಲ್ಯವಾದ ಒಂದು ಪದಾರ್ಥವಾಗಿತ್ತೆಂದರೆ, ತೂರಿನ ಹೀರಾಮ ರಾಜನಿಗೆ ದೇವಾಲಯದ ರಚನಾ ಸಾಮಗ್ರಿಗಳ ಅಂಶಿಕ ಹಣ ಪಾವತಿಗಾಗಿ ಸೊಲೊಮೋನನು ಇದನ್ನು ಉಪಯೋಗಿಸಿದನು. (1 ಅರಸು 5:10, 11) ಅಧಿಕ ಶಕ್ತಿಯ ಆಹಾರ ಮತ್ತು ಅತಿಯಾಗಿ ಜೀರ್ಣಿಸುವ ಮೇದಸ್ಸುಗಳಲ್ಲಿ ಒಂದಾಗಿದೆಯೆಂದು ಇಂದು ಅಂಗೀಕೃತವಾಗಿರುವ ಆಲಿವ್ ಎಣ್ಣೆ, ಇಸ್ರಾಯೇಲ್ಯರ ಆಹಾರ ಪದ್ಧತಿಯಲ್ಲಿ ಮುಖ್ಯ ಆಹಾರವಾಗಿಯೂ ಇತ್ತು.
ಆಧುನಿಕ ಸಮಯಗಳಲ್ಲಿ
ಇಂದು ಸಹ ಆಲಿವ್ ಎಣ್ಣೆ ಎಂದಿನಂತೆ ವಿವಿಧೋದ್ದೇಶಗಳುಳ್ಳದ್ದಾಗಿದೆ. ಆಲಿವ್ ಎಣ್ಣೆಯ ಉತ್ಪಾದನೆಗಳನ್ನು ಕಾಂತಿವರ್ಧಕ, ಮಾರ್ಜಕ, ಔಷಧ ಮತ್ತು ನೆಯ್ಕೆಯ ಸಾಮಾನುಗಳಲ್ಲಿ ಸಹ ಸೇರಿಸಲಾಗುತ್ತದೆ. ಆದರೆ ಈ ಎಣ್ಣೆಯ ಪ್ರಧಾನ ಉಪಯೋಗವು ಇನ್ನೂ ಆಹಾರವೇ. ಯೂರೋಪ್ ಮತ್ತು ಮಧ್ಯ ಪೂರ್ವದಲ್ಲಿ ಅದರ ಜನಪ್ರಿಯತೆಗೆ ಎಣೆಯೇ ಇಲ್ಲವಾದರೂ, ಇತ್ತೀಚಿನ ವರ್ಷಗಳಲ್ಲಿ ಇತರ ದೇಶಗಳಲ್ಲಿಯೂ ಇದಕ್ಕೆ ಗಿರಾಕಿ ಹೆಚ್ಚಾಗುತ್ತಿದೆ.
ದೃಷ್ಟಾಂತಕ್ಕೆ, ಕನ್ಸೂಮರ್ ರಿಪೋರ್ಟ್ಸ್ಗನುಸಾರ, ಆಲಿವ್ ಎಣ್ಣೆಯ ಮಾರಾಟ ಅಮೆರಿಕದಲ್ಲಿ “1985ರಿಂದ 1990ರ ವರೆಗೆ ಇಮ್ಮಡಿಗಿಂತ ಹೆಚ್ಚಾಗಿತ್ತು.” ಇದೇಕೆ? ಇದಕ್ಕೆ ಒಂದು ಕಾರಣವು, ಇದು ಇ ಜೀವಾತು (Vitamin E)ವಿನ ಉತ್ತಮ ಮೂಲವೆಂದು ಹೇಳಲ್ಪಡುತ್ತಿರುವುದರಿಂದಲೇ. ಇತ್ತೀಚಿನ ಅನೇಕ ಅಧ್ಯಯನಗಳು ಆಲಿವ್ ಎಣ್ಣೆಯಲ್ಲಿರುವ ಏಕ ಅಸಂಪೂರಕ (monounsaturated) ಮೇದಸ್ಸಿನ ಬಳಕೆಯು ನಕಾರಾತ್ಮಕ ಪಕ್ಕ ಪರಿಣಾಮವಿಲ್ಲದೆ ಹೃದಯಕ್ಕೆ ಪ್ರಯೋಜನವನ್ನು ತರಬಹುದೆಂದೂ ತೋರಿಸಿವೆ. ಇನ್ನೊಂದು ಅಧ್ಯಯನವು, ಆಲಿವ್ ಎಣ್ಣೆ ರಕ್ತದೊತ್ತಡವನ್ನೂ ರಕ್ತದಲ್ಲಿರುವ ಸಕ್ಕರೆಯ ಮಟ್ಟಗಳನ್ನು ಕಡಮೆ ಮಾಡಬಹುದೆಂದೂ ವಾದಿಸಿತು.
ಕೆಲವು ನಿಪುಣರು ಆಲಿವ್ ಎಣ್ಣೆಯಲ್ಲಿ ಕಂಡುಬರುವ ಏಕ ಅಸಂಪೂರಕಗಳ ಮೇಲೆ ಆಧಾರ ಮಾಡಿರುವ ಮೇದಸ್ಸು ಹೆಚ್ಚಿರುವ ಆಹಾರಕ್ರಮವನ್ನು ಶಿಫಾರಸು ಮಾಡಿದ್ದಾರೆ. ಇಂತಹ ಶಿಫಾರಸು “ಉದ್ರೇಕ ಮತ್ತು ಸಾರ್ವಜನಿಕಾಸಕ್ತಿಯನ್ನು ಹುಟ್ಟಿಸಿದೆ” ಎಂದು ಕನ್ಸೂಮರ್ ರಿಪೋರ್ಟ್ಸ್ ಗಮನಿಸಿತು, “ಏಕೆಂದರೆ ಹೆಚ್ಚು ಮೇದಸ್ಸಿರುವ ಯಾವುದೇ ಆಹಾರವು ಹೃದಯಕ್ಕೆ ಒಳ್ಳೆಯದೆಂಬ ಭಾವನೆಯು ಸರಿಸುಮಾರಾಗಿ ಪುಷ್ಟಿಪೋಷಣಾತ್ಮಕವಾದ ಪಾಷಂಡವಾದವಾಗಿತ್ತು. ಏಕ ಅಸಂಪೂರಕಗಳು ಬೇಗನೆ ವಾರ್ತಾ ಮಾಧ್ಯಮಗಳಿಂದ ಹೆಚ್ಚು ಗಮನಕ್ಕೊಳಗಾದವು, ಮತ್ತು ಆಲಿವ್ ಎಣ್ಣೆಯ ಮಾರಾಟ ತೀವ್ರಗೊಂಡಿತು.”
ಈ ವಾದಗಳು ಸಾಮಾನ್ಯವಾಗಿ ಅಂಗೀಕರಿಸಲಾಗುತ್ತಿವೆಯೆ? ಆಲಿವ್, ಆವೊಕಾಡೊ, ಮತ್ತು ಇತರ ಕೆಲವು ಕರಟಕಾಯಿಗಳಲ್ಲಿರುವ ಏಕ ಅಸಂಪೂರಕ ಮೇದಸ್ಸುಗಳು ಇತರ ಆಹಾರಗಳಲ್ಲಿ ಕಂಡುಬರುವ ಬಹು ಅಸಂಪೂರಕ ಮತ್ತು ಸಂಪೂರಕ ಮೇದಸ್ಸುಗಳಿಗಿಂತ ಹೆಚ್ಚು ಆರೋಗ್ಯಕರವಾದ ಆಯ್ಕೆಯೆಂಬುದರಲ್ಲಿ ಇರುವ ವಿವಾದ ಕೊಂಚವೆಂದು ತೋರಿಬರುತ್ತದೆ. ಆದರೂ, ಕೆಲವು ನಿಪುಣರು ಇತರ ಅನುಕೂಲ ವಾದಗಳು ತುಸು ಅತಿಶಯವೆಂದು ಅಭಿಪ್ರಯಿಸುತ್ತಾರೆ. ಉದಾಹರಣೆಗೆ, ಕನ್ಸೂಮರ್ ರಿಪೋರ್ಟ್ಸ್ ವಿವರಿಸುವುದು: “ಕೆಲವು ಜಾಹೀರಾತುಗಳು, ‘ಆಲಿವ್ ಎಣ್ಣೆ ಕಲೆಸ್ಟರಲ್, ರಕ್ತದೊತ್ತಡ ಮತ್ತು ರಕ್ತದಲ್ಲಿರುವ ಸಕ್ಕರೆಯನ್ನು ಕಡಮೆ ಮಾಡಬಲ್ಲದೆಂದು ವೈದ್ಯಕೀಯ ವಿಜ್ಞಾನ ದೃಢೀಕರಿಸಿದೆ’ ಎಂದು ಬಡಾಯಿ ಕೊಚ್ಚಿದುವು. ಆದರೆ ಡಾ. ಮಾರ್ಗೋ ಡೆಂಕ್ ಎಂಬ ಒಬ್ಬ ಸಂಶೋಧಕರ ಮಾತುಗಳಲ್ಲಿ, . . . ರಕ್ತದೊತ್ತಡ ಮತ್ತು ರಕ್ತದಲ್ಲಿರುವ ಸಕ್ಕರೆಯ ಮಧ್ಯೆ ಇರುವ ವ್ಯತ್ಯಾಸ ಎಷ್ಟು ಅಲ್ಪವೆಂದರೆ ಅದು ‘ಚಿಕಿತ್ಸಾತ್ಮಕವಾಗಿ ಅಮುಖ್ಯ.’”
ಸಂಶೋಧಕರ ಒಂದು ಗುಂಪು ಈ ಬುದ್ಧಿವಾದವನ್ನು ಕೊಟ್ಟಿತು: “ಎಲ್ಲ ಆಲಿವ್ ಎಣ್ಣೆ, ಅದು ‘ಲಘು’ ವಾಗಿರಲಿ, ಇಲ್ಲದಿರಲಿ, 100 ಪ್ರತಿಶತ ಮೇದಸ್ಸುಳ್ಳದ್ದಾಗಿದ್ದು ಒಂದು ಟೇಬ್ಲ್ ಸ್ಪೂನಿನಲ್ಲಿ 125 ಕ್ಯಾಲೊರಿ ಶಾಖವನ್ನು ಒದಗಿಸುತ್ತದೆ. ಇದೊಂದೇ ಕಾರಣಕ್ಕಾಗಿ, ಆರೋಗ್ಯಕರವಾದ ಆಹಾರದಲ್ಲಿ ಇದು ಕೇವಲ ಮಿತವಾದ ಪಾತ್ರ ವಹಿಸಬಲ್ಲದು. ಆಲಿವ್ ಎಣ್ಣೆಯ ಆರೋಗ್ಯ ಪ್ರಯೋಜನದ ಸಾಮರ್ಥ್ಯವು, ಅದು ಬೆಣ್ಣೆ, ಮಾರ್ಜರಿನ್, ಮತ್ತು ಇತರ ವನಸ್ಪತಿ ತೈಲಗಳಿಗೆ ಬದಲಿಯಾಗಿ ಉಪಯೋಗಿಸಲ್ಪಡುವುದರಿಂದ ಮಾತ್ರ ಬರುತ್ತದೆ. ಮತ್ತು ಈ ಪ್ರಯೋಜನಗಳನ್ನೂ ಅಶಿಶಯಿಸಿ ಹೇಳಲಾಗಿದೆ.” ಆದುದರಿಂದ ಸಕಾರಣದಿಂದಲೇ, ಇಂಟರ್ನ್ಯಾಷನಲ್ ಆಲಿವ್ ಆಯಿಲ್ ಕೌನ್ಸಿಲ್ ಈ ಎಚ್ಚರಿಕೆಯನ್ನು ಪ್ರಕಟಿಸಿತು: “ಆವೇಶಕ್ಕೆ ನೀವು ಮಾರು ಹೋಗಿ, ಆಹಾರಕ್ಕೆ ಲೀಟರ್ಗಟ್ಟಲೆ ಆಲಿವ್ ಎಣ್ಣೆ ಕೂಡಿಸುವ ಮೊದಲು, ಎಚ್ಚರಿಕೆಯ ಕೆಲವು ಮಾತುಗಳು ಸಮಂಜಸ. ಆಲಿವ್ ಎಣ್ಣೆಯ ಹೆಚ್ಚಿಗೆಯ ಬಳಕೆ ನಿಮ್ಮನ್ನು ಆರೋಗ್ಯವಂತರಾಗಿ ಇಡಬಹುದಾದರೂ ತೆಳ್ಳಗಾಗಿ ಇಡಬೇಕೆಂಬುದಾಗಿಲ್ಲ.”
ಪುರಾತನ ಕಾಲಗಳಂತೆಯೇ ಇಂದು ಸಹ, ಯೆಹೋವನಿಂದ ಬರುವ ಆಹಾರ ಮತ್ತು ಇತರ ಕೊಡುಗೆಗಳಲ್ಲಿ ಸಂತೋಷಿಸುವ ಸಂಬಂಧದಲ್ಲಿ ಮಿತ ಭಾವವೇ ಕೀಲಿಕೈ. ನೀವು ಜೀವಿಸುವುದು ಭೂಮಧ್ಯ ಪ್ರದೇಶದಲ್ಲಿ ಆಗಿರಲಿ, ಇನ್ನೆಲಿಯ್ಲಾದರೂ ಆಗಿರಲಿ, ಇದನ್ನು ಮನಸ್ಸಿನಲ್ಲಿಟ್ಟುಕೊಂಡು ವಿವಿಧ ಸಾಮರ್ಥ್ಯಗಳುಳ್ಳ ಆಲಿವ್ ಎಣ್ಣೆಯಿಂದ ಆನಂದ ಮತ್ತು ಪ್ರಯೋಜನಗಳನ್ನು ಕೊಯ್ಯಿರಿ! (g92 10/8)
[ಪುಟ 26 ರಲ್ಲಿರುವ ಚೌಕ/ಚಿತ್ರಗಳು]
ಆಲಿವ್ ಎಣ್ಣೆಯ ದರ್ಜೆಗಳು
o ಎಕ್ಸ್ಟ್ರ ವರ್ಜಿನ್: ಇದು ಅತ್ಯುನ್ನತ ದರ್ಜೆಯ ಆಲಿವ್ ತೈಲ. ಉತ್ಕೃಷ್ಟ ಗುಣಮಟ್ಟದ ಆಲಿವ್ಗಳಿಂದ ದ್ರಾವಕಗಳನ್ನು ಉಪಯೋಗಿಸದೆ ತೆಗೆದ ಎಣ್ಣೆಯಿದು. ಇದನ್ನು ಅನೇಕ ವೇಳೆ “ಶೀತಲ ಗಾಣದ್ದು” ಎಂದು ಕರೆಯಲಾಗುತ್ತದೆ, ಏಕೆಂದರೆ ಇದನ್ನು ಕೋಣೆಯ ಸಾಮಾನ್ಯ ತಾಪಮಾನದಲ್ಲಿ ತೆಗೆಯಲಾಗುತ್ತದೆ. ಇದರಲ್ಲಿರುವ ಫ್ರೀ ಓಲಿಯಿಕ್ ಆ್ಯಸಿಡ್ ಅತಿ ಕಡಮೆ. ಈ ಕೊಬ್ಬು ತುಂಬಿದ ಆಮ್ಲ ಆಲಿವ್ ಎಣ್ಣೆಯ ರುಚಿಯನ್ನು ಕೆಡಿಸಬಹುದು. ಎಕ್ಸ್ಟ್ರ ವರ್ಜಿನ್ ಆಲಿವ್ ಎಣ್ಣೆ ಅತಿ ವಿಶಾಲ ರೀತಿಯ ರುಚಿಗಳನ್ನೂ ಸುವಾಸನೆಗಳನ್ನೂ ಒದಗಿಸುತ್ತದೆ.
○ ವರ್ಜಿನ್: ಎಕ್ಸ್ಟ್ರ ವರ್ಜಿನ್ ಆಲಿವ್ ಎಣ್ಣೆಯಂತೆಯೇ ಇದನ್ನು ತೆಗೆಯಲಾಗುತ್ತದಾದರೂ ಇದರಲ್ಲಿ ಫ್ರೀ ಓಲಿಯಿಕ್ ಆ್ಯಸಿಡಿನ ಪ್ರಮಾಣ ಹೆಚ್ಚಾಗಿದೆ.
○ ಆಲಿವ್ ಆಯಿಲ್: “ಶೀತಲ ಗಾಣ”ದಿಂದ ತೆಗೆದ ಕೆಲವು ರೀತಿಯ ಎಣ್ಣೆ, ಅದರಲ್ಲಿರುವ ಆಮ್ಲದ ಕಾರಣ ಯಾ ಅದರ ಅನಪೇಕ್ಷಣೀಯ ರುಚಿ, ಬಣ್ಣ, ಯಾ ವಾಸನೆಯ ಕಾರಣ ಬಳಕೆಗೆ ಅರ್ಹವೆಂದು ಎಣಿಸಲ್ಪಡುವುದಿಲ್ಲ. ಈ ರೀತಿಯ ಎಣ್ಣೆಯನ್ನು ತಯಾರಕರು ದ್ರಾವಕಗಳನ್ನು ಉಪಯೋಗಿಸಿ ಶೋಧಿಸುತ್ತಾರೆ. ಆ ಬಳಿಕ ಕಾಯಿಸಿ ಈ ದ್ರಾವಕಗಳನ್ನು ತೆಗೆಯಲಾಗುತ್ತದೆ. ಇದರ ಫಲವಾಗಿ ಬರುವ ಎಣ್ಣೆ ಹೆಚ್ಚು ಕಡಮೆ ಬಣ್ಣರಹಿತವೂ ರುಚಿ ಇಲ್ಲದ್ದೂ ಆಗಿರುತ್ತದೆ. ಇದನ್ನು ಆ ಬಳಿಕ ಉನ್ನತ ದರ್ಜೆಯ ವರ್ಜಿನ್ ಆಲಿವ್ ಎಣ್ಣೆಯೊಂದಿಗೆ ಬೆರಕೆ ಮಾಡಲಾಗುತ್ತದೆ. ಇದನ್ನು ಮೊದಲು “ಪ್ಯೂರ್ ಆಲಿವ್ ಆಯಿಲ್” ಎಂಬ ಹೆಸರಿನಿಂದ ಮಾರಲಾಗುತ್ತಿದ್ದರೂ 1991ರಿಂದ ಈ ಹೆಸರು ಉಪಯೋಗದಲ್ಲಿಲ್ಲ. ಈಗ ಇದನ್ನು ಕೇವಲ “ಆಲಿವ್ ಆಯಿಲ್” ಎಂದು ಸೂಚಿಸಲಾಗುತ್ತದೆ.
○ ಆಲಿವ್ ಪಮೆಸ್ ಆಯಿಲ್: ಆಲಿವ್ಗಳಿಂದ ಎಣ್ಣೆ ಮತ್ತು ನೀರನ್ನು ಯಾಂತ್ರಿಕ ಹಾಗೂ ದೈಹಿಕ ಕೆಲಸಗಳ ಮೂಲಕ ತೆಗೆದ ಬಳಿಕ ಉಳಿಯುವುದೇ ಪಮೆಸ್ ಹಿಪ್ಪೆ. ದ್ರಾವಕಗಳ ಮೂಲಕವಾಗಿ ಈ ಪಮೆಸ್ನಿಂದ ಇನ್ನೂ ಹೆಚ್ಚಿನ ಎಣ್ಣೆಯನ್ನು ತೆಗೆಯಬಹುದು. ಈ ಎಣ್ಣೆಯನ್ನು ಆ ಬಳಿಕ ಹೆಚ್ಚು ಉನ್ನತ ದರ್ಜೆಯ ವರ್ಜಿನ್ ಆಲಿವ್ ಎಣ್ಣೆಯೊಂದಿಗೆ ಶೋಧಿಸಿ, ಒಂದುಗೂಡಿಸಲಾಗುತ್ತದೆ.
○ ಲೈಟ್ ಆಲಿವ್ ಆಯಿಲ್: ಇದು ಎಣ್ಣೆಯ ದರ್ಜೆಯಲ್ಲ. ವರ್ಜಿನ್ ಆಲಿವ್ ಎಣ್ಣೆಯ ಚಿಕ್ಕ ಪರಿಮಾಣಗಳನ್ನು ಶೋಧಿಸಿದ ಆಲಿವ್ ಎಣ್ಣೆಯೊಂದಿಗೆ ಮಾಡಿರುವ ಮಿಶ್ರಣ ಅಷ್ಟೆ. “ಲೈಟ್” (ಲಘು) ಎಂಬ ಶಬ್ದಕ್ಕೆ ಎಣ್ಣೆಯಲ್ಲಿರುವ ಮೇದಸ್ಸಿನ ಅಂಶಕ್ಕೂ ಸಂಬಂಧವೇ ಇಲ್ಲ. ಏಕೆಂದರೆ ಎಲ್ಲ ಆಲಿವ್ ಎಣ್ಣೆಯೂ 100 ಪ್ರತಿಶತ ಮೇದಸ್ಸಾಗಿದೆ. ಬದಲಾಗಿ ಲೈಟ್ ಎಂಬುದು ಅದರ ಬಣ್ಣ, ಸುಗಂಧ ಮತ್ತು ರುಚಿಯ ಕಡಮೆ ತೀವ್ರತೆಯನ್ನು ಸೂಚಿಸುತ್ತದೆ.
[ಪುಟ 26 ರಲ್ಲಿರುವ ಚೌಕ]
ನಿಮಗೆ . . . ತಿಳಿದಿತ್ತೊ?
○ ಪೊಚ್ಚ ಪೊಸ ಆಲಿವ್ಗಳಲ್ಲಿ ಒಲ್ಯೂರೊಪೀಯಿನ್ ಎಂಬ, ಯಾವ ವಿಧದಲ್ಲಾದರೂ ಸಂಸ್ಕರಿಸದಿರುವಲ್ಲಿ ಹಿಡಿಸದಿರುವ ಕಹಿಯಾದ ಒಂದು ವಸ್ತುವಿದೆ. ನ್ಯಾಚುರಲ್ ಹಿಸ್ಟರಿ ಪತ್ರಿಕೆ ವಿವರಿಸುವುದೇನಂದರೆ, ಆಲಿವ್ಗಳನ್ನು ತಿನ್ನುವ ಮೊದಲು, ಅವನ್ನು “ಉಪ್ಪಿನಲ್ಲಿ ಕಟ್ಟಿಡಸಾಧ್ಯವಿದೆ; ಉಪ್ಪು ನೀರಿನಲ್ಲಿ ಸಂಸ್ಕರಿಸಸಾಧ್ಯವಿದೆ; ಅನೇಕ ದಿನಗಳ ಸಮಯ ಅನೇಕ ಸಲ ನೀರನ್ನು ಬದಲಾಯಿಸಿ ತೋಯಿಸಿಡಸಾಧ್ಯವಿದೆ; ಅವನ್ನು ಹೊರಗೆ ಸೂರ್ಯನ ಬಿಸಿಲಿಗೂ ಇಡಸಾಧ್ಯವಿದೆ.” ಆದರೂ, ಎಣ್ಣೆ ತೆಗೆಯುವಲ್ಲಿ ಆಲಿವ್ಗಳಿಗೆ ಈ ಯಾವ ಸಂಸ್ಕರಣದ ಅಗತ್ಯವೂ ಇಲ್ಲ.
○ ಎಲ್ಲ ಆಲಿವ್ ಎಣ್ಣೆಗಳೂ ಒಂದೇ ರುಚಿಯದ್ದಾಗಿರುವುದಿಲ್ಲ. ನೈಸರ್ಗಿಕ ರುಚಿ, ಬಣ್ಣ, ಮತ್ತು ಸುವಾಸನೆಗಳಲ್ಲಿ ವಿಸ್ತಾರವಾದ ವೈವಿಧ್ಯವಿದೆ. ಇಂಟರ್ನ್ಯಾಷನಲ್ ಆಲಿವ್ ಆಯಿಲ್ ಕೌನ್ಸಿಲ್ಗನುಸಾರ, “ರಸಜ್ಞರು ಆಲಿವ್ ಎಣ್ಣೆಯನ್ನು ಸಾಮಾನ್ಯವಾಗಿ ಸಪ್ಪೆ (ಸ್ವಾದು, ಲಘು ಯಾ ‘ನಯ’); ಅರೆ ಹಣ್ಣಿನ ರುಚಿ (ಹೆಚ್ಚು ಕಟು, ಆಲಿವ್ನ ಹೆಚ್ಚು ರುಚಿಯ); ಮತ್ತು ಹಣ್ಣು ರುಚಿ (ಪೂರ್ತಿ ಆಲಿವ್ ರುಚಿಯ ಎಣ್ಣೆ) ಎಂದು ವರ್ಗೀಕರಿಸುತ್ತಾರೆ.”
○ ಆಲಿವ್ ಎಣ್ಣೆಯನ್ನು ಶೀತಕದಲ್ಲಿ ಇಡುವಲ್ಲಿ ಅದು ಮಸುಕಾಗಿಯೂ ದಪ್ಪವಾಗಿಯೂ ಪರಿಣಮಿಸುತ್ತದೆ. ಇದು ಕೆಟ್ಟು ಹೋಗಿದೆಯೆಂಬ ಲಕ್ಷಣವಲ್ಲ, ಪುನ: ಸಾಮಾನ್ಯ ತಾಪಮಾನಕ್ಕೆ ತರುವಲ್ಲಿ ಅದು ಬೇಗನೆ ಸ್ವಚ್ಛವಾಗುತ್ತದೆ. ವಾಸ್ತವವೇನಂದರೆ, ಆಲಿವ್ ಎಣ್ಣೆಯನ್ನು ಶೀತಕವಿಲ್ಲದೆ ತಿಂಗಳುಗಟ್ಟಲೆ ಶೇಖರಿಸಿಡಸಾಧ್ಯವಿದೆ.