ಯುವ ಜನರು ಪ್ರಶ್ನಿಸುವುದು . . .
ನಾನು ಕುಡಿಯುವುದನ್ನು ಹೇಗೆ ನಿಲ್ಲಿಸಬಲ್ಲೆ?
“ಮರುದಿನ ನನಗೆ ಯಾವಾಗಲೂ, ಭಾವಾತ್ಮಕವಾಗಿಯೂ ಅಧ್ಯಾತ್ಮಿಕವಾಗಿಯೂ ಭಯಂಕರ ಅನಿಸಿಕೆಯಾಗುತ್ತಿತ್ತು!”—ಬಾಬ್.
“ನಾನು ಮನೆಯಲ್ಲಿ, ಶಾಲೆಯಲ್ಲಿ, ಮಿತ್ರರೊಂದಿಗೆ, ಮತ್ತು ಪೊಲೀಸರೊಂದಿಗೆ ಪದೇ ಪದೇ ತೊಂದರೆಗೊಳಗಾಗುತ್ತಿದ್ದೆ!”—ಜೆರೋಮ್.
ಬಾಬ್ ಮತ್ತು ಜೆರೋಮ್ ಎಂಬ ಇವರಿಬ್ಬರೂ ತುಂಬ ಮದ್ಯವನ್ನು ಅನೇಕಾನೇಕ ವೇಳೆ ಕುಡಿದ ಕಾರಣ ಬೆಲೆಯನ್ನು ತೆತ್ತರು. ಇವರಿಬ್ಬರೂ ಮದ್ಯ ವ್ಯಸನಿಗಳಾದರು. ಮತ್ತು ಬಾಬ್ ಹೇಗೂ ಕೊನೆಗೆ ಕುಡಿಯುವುದನ್ನೇ ನಿಲ್ಲಿಸಲು ಶಕ್ತನಾದರೂ, ಜೆರೋಮ್ ಈ ಮದ್ಯದ ಗೀಳನ್ನು ತೊರೆಯಲು ಇನ್ನೂ ಪ್ರಯತ್ನಿಸುತ್ತಿದ್ದಾನೆ.
ಮದ್ಯ ವ್ಯಸನವು ಲೋಕದ ಅನೇಕ ಭಾಗಗಳಲ್ಲಿ ಯುವ ಜನರ ಮಧ್ಯೆ ಬೆಳೆಯುತ್ತಿರುವ ಒಂದು ಸಮಸ್ಯೆಯಾಗಿದೆ. ಅಮೆರಿಕದಲ್ಲಿಯೇ ಸುಮಾರು 50 ಲಕ್ಷ ಯುವ ಜನರಿಗೆ ಕುಡಿತದ ಸಮಸ್ಯೆಯಿದೆಯೆಂದು ಕೆಲವರು ಅಂದಾಜಿಸುತ್ತಾರೆ. ನೀವು ಒಬ್ಬ ಕ್ರೈಸ್ತ ಯುವ ವ್ಯಕ್ತಿಯಾಗಿರುವಲ್ಲಿ, ವಿಶೇಷವಾಗಿ ನಿಮ್ಮ ಸಮಾಜದಲ್ಲಿ ಹದಿಪ್ರಾಯದ ಕುಡಿತವು ನ್ಯಾಯವಿರುದ್ಧವಾಗಿರುವಲ್ಲಿ, ನೀವು ಮದ್ಯ ಪ್ರಯೋಗಿಸುವುದನ್ನು ವಿಸರ್ಜಿಸಿದ್ದೀರೆಂಬುದು ನಿಸ್ಸಂಶಯ. ಆದರೂ, ಈ ಕೆಳಗಿನ ಮಾಹಿತಿ, ನೀವು ಪ್ರಥಮವಾಗಿ ಕುಡಿಯುವುದರಲ್ಲಿ ಸಿಕ್ಕಿಕೊಳ್ಳದಂತೆ ಮಾಡಿರುವ—ಕಡಮೆ ಪಕ್ಷ, ಪ್ರಾಯಸ್ಥರಾಗಿ ಅದನ್ನು ನಿಭಾಯಿಸಲು ಶಕ್ತರಾಗುವ ತನಕ—ನಿಮ್ಮ ನಿರ್ಧಾರವನ್ನು ಬಲಪಡಿಸಲು ಸಾಧ್ಯಮಾಡಬಲ್ಲದು. ಆದರೆ ನೀವು ಆಗಲೆ ಮದ್ಯ ವ್ಯಸನಿ ಆಗಿರುವಲ್ಲಿ, ಈ ಮಾಹಿತಿಯು ನೀವು ಈ ಸಮಸ್ಯೆಯೊಂದಿಗೆ ಹೋರಾಡುವಂತೆ ಸಹಾಯ ಮಾಡುವುದೆಂದು ನಮ್ಮ ನಿರೀಕ್ಷೆ. ನೀವು ಮಾಡುವ ನಿಜ ಪ್ರಯತ್ನದಿಂದ ಮತ್ತು ಯೆಹೋವ ದೇವರ ಸಹಾಯದಿಂದ, ಗುಣಹೊಂದುವುದು ಸಾಧ್ಯ.
ಅಲ್ಲಗಳೆಯುವಿಕೆಯನ್ನು ಜಯಿಸುವುದು
ನೀವು ತೆಗೆದುಕೊಳ್ಳಬೇಕಾದ ಪ್ರಥಮ ಮತ್ತು ಅತಿ ಕಷ್ಟಕರವಾದ ಹೆಜ್ಜೆಯು ಅಲ್ಲಗಳೆಯುವಿಕೆಯನ್ನು ಜಯಿಸುವುದೇ. ತಮಗೆ ಕುಡಿಯುವ ಸಂಬಂಧದ ಸಮಸ್ಯೆಯಿದೆಯೆಂಬುದನ್ನು ನಂಬಲು ಮದ್ಯ ವ್ಯಸನಿಗಳು ಲಾಕ್ಷಣಿಕವಾಗಿ ನಿರಾಕರಿಸುತ್ತಾರೆ. ‘ನಾನು ಅದನ್ನು ನಿಭಾಯಿಸಬಲ್ಲೆ’ ಎಂಬುದು ಮದ್ಯ ವ್ಯಸನಿಯ ಮರುಕ ಹುಟ್ಟಿಸುವ ಆತ್ಮಸ್ತುತಿ. ದೃಷ್ಟಾಂತಕ್ಕೆ, 15 ವಯಸ್ಸಿನವನೊಬ್ಬನು ಹೇಳಿದುದನ್ನು ಪರ್ಯಾಲೋಚಿಸಿ: “ನಾನು ಕುಡಿಯುವ ಸಮಸ್ಯೆ ಇರುವವನಲ್ಲ. ನಾನು ಸಂಜೆ ಆರು ಡಬ್ಬಿ ಬಿಯರ್ ಕುಡಿಯುತ್ತೇನೆ, ಅಷ್ಟೆ.” ಇದು, ಬೈಬಲಿನ “ತನ್ನ ತಪ್ಪನ್ನು ಕಂಡುಹಿಡಿದು ಅದನ್ನು ದ್ವೇಷಿಸುವ ವಿಷಯದಲ್ಲಿ ತನಗೆ ತೀರಾ ನಯವಾಗಿ ವರ್ತಿಸಿದ” ಒಬ್ಬ ಮನುಷ್ಯನನ್ನು ನಮಗೆ ನೆನಪಿಸುತ್ತದೆ.—ಕೀರ್ತನೆ 36:2, NW.
ಹೌದು, ಅಲ್ಲಗಳೆಯುವಿಕೆ ಮಾರಕ. ಆದುದರಿಂದ ನಿಮಗೆ ಕುಡಿಯುವ ಸಮಸ್ಯೆಯಿರುವಲ್ಲಿ, ಆ ವೇದನಾಮಯ ಸತ್ಯವನ್ನು ನೀವು ನಿಮ್ಮಲ್ಲಿಯೇ ಒಪ್ಪಿಕೊಳ್ಳತಕ್ಕದ್ದು.a ನೀವು ತುಂಬ ಕುಡಿಯುತ್ತೀರೆಂದು ಹೇಳುವ ನಿಮ್ಮ ಸ್ನೇಹಿತರನ್ನು, ಸೋದರರನ್ನು, ಯಾ ಹೆತ್ತವರನ್ನು ಅಲಕ್ಷ್ಯ ಮಾಡಬೇಡಿರಿ. ಅವರು ಸತ್ಯವನ್ನು ಹೇಳುವ ಕಾರಣ ನಿಮ್ಮ ಶತ್ರುಗಳಲ್ಲ. (ಗಲಾತ್ಯ 4:16 ಹೋಲಿಸಿ.) ಬಾಬ್ (ಈ ಮೊದಲು ಹೇಳಲ್ಪಟ್ಟಿರುವವನು) ಪ್ರತಿ ವಾರಾಂತ್ಯದಲ್ಲಿ ತುಂಬ ಕುಡಿಯುತ್ತಿದ್ದನು. ಒಬ್ಬ ಸ್ನೇಹಿತನು ಅದರ ಕುರಿತು ಅವನನ್ನು ಸಮೀಪಿಸಿದಾಗ, ತನಗೆ ಕುಡಿಯುವ ಸಮಸ್ಯೆಯಿದೆಯೆಂಬ ಅಭಿಪ್ರಾಯವನ್ನೇ ಬಾಬ್ ನಿರಾಕರಿಸಿ, ಸಂಭಾಷಣೆಯನ್ನು ನಿಲ್ಲಿಸಿದನು. ಆದರೆ ಮದ್ಯವು ಬಾಬ್ನ ಜೀವನವನ್ನು ಹೇಗೆ ಬಾಧಿಸುತ್ತಿತ್ತು? “ಕುಡಿಯದಿದ್ದರೆ ಉದ್ರೇಕ ಭಾವದವನೂ, ಕುಡಿದರೆ ನಿಯಂತ್ರಣ ತಪ್ಪಿ ಕುಡಿಯುವವನೂ ಆದೆ,” ಎಂದು ಬಾಬ್ ಒಪ್ಪಿಕೊಳ್ಳುತ್ತಾನೆ. “ನನ್ನಕುಟುಂಬ ಜೀವನ—ಮತ್ತು ದೇವರೊಂದಿಗಿನ ಸಂಬಂಧ ಛಿದ್ರವಾಗಿ ಹೋಗಿತ್ತು.”
ಇನ್ನೊಂದು ಸಂದರ್ಭದಲ್ಲಿ ಬಾಬ್, ಕೊನೆಗೆ ತನ್ನ ಪ್ರತಿಭಟನೆಯನ್ನು ನಿಲ್ಲಿಸಿ, ತಾನು ನಿಜವಾಗಿಯೂ ಮದ್ಯವನ್ನು ಬಯಸುತ್ತೇನೆಂದು ಹೇಳಿದನು. ಈ ಅಲ್ಲಗಳೆಯುವಿಕೆಯ ಗೋಡೆಯನ್ನು ಒಡೆದ ಬಳಿಕ, ಬಾಬ್ ಗುಣ ಹೊಂದುವುದನ್ನು ಆರಂಭಿಸಲು ಶಕ್ತನಾದನು.
ಬಿಟ್ಟು ಬಿಡಲು ಮಾಡುವ ದೃಢ ಮನಸ್ಸನ್ನು ಬೆಳೆಯಿಸಿರಿ
ಪ್ರೊಫೆಸರ್ ಜಾರ್ಜ್ ವಯಾನ್ ಬರೆಯುವುದೇನಂದರೆ, “ಮದ್ಯ ರೋಗಾವಸ್ಥೆಯು . . . ಚಿಕಿತ್ಸೆಗೆ ತೀರಾ ಸಾಧ್ಯವಿರುವ ಸಂಗತಿಯಾದರೂ . . . ರೋಗಿಯಿಂದ ಮಹಾ ಜವಾಬ್ದಾರಿಯನ್ನು ಕೇಳಿಕೊಳ್ಳುತ್ತದೆ.” ಇದರಲ್ಲಿ ಮದ್ಯ ಕುಡಿಯುವುದನ್ನು ಬಿಡಲು ನಿಮ್ಮ ದೃಢ ಮನಸ್ಸು ಸೇರಿದೆ. ಈ ನಿರ್ಧಾರದ ನ್ಯೂನತೆಯೆಂದರೆ ಮದ್ಯ ರೋಗಿಯಾಗಿ ಬದುಕುವುದು—ಮತ್ತು ಸಾಯುವುದು—ಎಂದರ್ಥ. ಯಾವುದು ಸಹಾಯ ಮಾಡಬಲ್ಲದು? ಮದ್ಯ ರೋಗಾವಸ್ಥೆಯ ವಿನಾಶಕತೆಯ ಮೇಲೆ ಮನಸ್ಸಿಡುವುದು, ನೀವು “ಕೆಟ್ಟತನವನ್ನು ಹಗೆ” ಮಾಡಲು ಸಹಾಯ ಮಾಡಿ, ಕುಡಿಯುವುದನ್ನು ನಿಲ್ಲಿಸುವ ನಿಮ್ಮ ನಿರ್ಧಾರವನ್ನು ಒಮ್ಮೆಗೇ ಬಲಪಡಿಸಬಲ್ಲದು.—ಕೀರ್ತನೆ 97:10.
ದೃಷ್ಟಾಂತಕ್ಕೆ, ಮದ್ಯ ರೋಗಾವಸ್ಥೆ ಶಾರೀರಿಕವಾಗಿ, ಭಾವಾತ್ಮಕವಾಗಿ, ಮತ್ತು ನೈತಿಕವಾಗಿ ಮಾಡುವ ಮಹಾ ಹಾನಿಯ ಕುರಿತು ನೀವು ತುಂಬ ಯೋಚಿಸಬಹುದು. ಒಂದು ಮದ್ಯಪಾನ ನಿಮ್ಮ ಆಂತರಿಕ ವೇದನೆ ಯಾ ಅಯೋಗ್ಯರೆಂಬ ಅನಿಸಿಕೆಗಳನ್ನು ಸ್ವಲ್ಪ ಕಾಲ ಉಪಶಮನ ಮಾಡಬಹುದು. ಆದರೆ ಅಂತಿಮವಾಗಿ, ಮದ್ಯದ ಮೇಲೆ ಹೊಂದಿಕೊಳ್ಳುವುದು ಇನ್ನೂ ಹೆಚ್ಚು ಸಮಸ್ಯೆಗಳನ್ನು ಉಂಟುಮಾಡುತ್ತದೆ; ಮಿತ್ರತ್ವಗಳು ಮುರಿಯುತ್ತವೆ, ಮತ್ತು ಕುಟುಂಬ ಸಂಬಂಧಗಳು ವಿಷಮಗೊಳ್ಳುತ್ತವೆ. ಇದಲ್ಲದೆ, ಮದ್ಯವು ನಿಮ್ಮ ಸಂಯಮ ಪ್ರವೃತ್ತಿಯನ್ನು ಕೆಳಗಿಳಿಸುವುದರಿಂದ, ಅದು “ಬುದ್ಧಿಯನ್ನು ಕೆಡಿಸಿ” ನಿಮ್ಮನ್ನು ಗುರುತರವಾದ ದುರ್ವರ್ತನೆಗೆ ನಡೆಸಬಲ್ಲದು.—ಹೋಶೇಯ 4:11.
ದೊಡ್ಡ ಪ್ರಮಾಣದಲ್ಲಿ ತೆಗೆದುಕೊಳ್ಳುವ ಮದ್ಯವು, ಕ್ರಮೇಣ ನಿಮ್ಮ ಜೀವನಾಧಾರವಾಗಿರುವ ಅಂಗಗಳಿಗೆ ಹಾನಿ ಮಾಡಿ ನಿಮ್ಮ ದೇಹಕ್ಕೆ ಏನು ಮಾಡಬಲ್ಲದೆಂಬುದನ್ನೂ ಪರಿಗಣಿಸಿರಿ. ಹೀಗೆ ಬೈಬಲು, ವಿಪರೀತ ಕುಡಿತವು ‘ಕ್ಲೇಶ, ಮರುಕ, ಜಗಳ, ವ್ಯಾಕುಲ, ಮತ್ತು ಗಾಯ’ಗಳಿಗಿಂತ ಹೆಚ್ಚಿನದನ್ನು ಉಂಟುಮಾಡುತ್ತದೆಂದು ಹೇಳುತ್ತದೆ. (ಜ್ಞಾನೋಕ್ತಿ 23:29-30, ದ ನ್ಯೂ ಇಂಗ್ಲಿಷ್ ಬೈಬಲ್) ನಿಮಗೆ ಸಿಗುವ ಯಾವ ತಾತ್ಕಾಲಿಕ ಸುಖಕ್ಕಾದರೂ ಇಷ್ಟು ಬೆಲೆ ತೆರುವುದು ಯೋಗ್ಯವೆ?
ಸಂತೋಷವಾಗಿರಲು ಮದ್ಯದ ಅವಶ್ಯವಿಲ್ಲ ಎಂಬುದನ್ನೂ ನೀವು ಜ್ಞಾಪಿಸಿಕೊಳ್ಳುವುದರಿಂದ ಸಹಾಯ ದೊರಕೀತು. ಮತ್ತು ಆತ್ಮಗೌರವ, ಒಳ್ಳೆಯ ಆರೋಗ್ಯ, ನಿಷ್ಠಾವಂತ ಮಿತ್ರರು, ಮತ್ತು ಪ್ರೀತಿಯ ಕುಟುಂಬಗಳಿರಬೇಕಾದರೆ ಕೃತಕ ಉದ್ರೇಕಾನಂದದ ಅನುಭವ ನಿಮಗೆ ಅವಶ್ಯವಿಲ್ಲ. ಜೀವನದ ಈ ಕ್ಷೇತ್ರಗಳಲ್ಲಿ ಯಶಸ್ಸು ದೇವರ ವಾಕ್ಯವನ್ನು ಅನ್ವಯಿಸುವುದರ ಮೂಲಕ ಬರುತ್ತದೆ. (ಕೀರ್ತನೆ 1:1-3) ಆ ವಾಕ್ಯವು ನಿಮಗೆ ಹೆಚ್ಚು ಉಜ್ವಲವಾದ ಭವಿಷ್ಯತ್ತಿನ—ಭಾವಾತ್ಮಕ ಯಾ ಶಾರೀರಿಕ ನೋವಿಲ್ಲದ ಅನಂತ ಜೀವ—ನಿರೀಕ್ಷೆಯನ್ನೂ ಕೊಡುತ್ತದೆ! (ಪ್ರಕಟನೆ 21:3, 4) ಇಂಥ ನಿರೀಕ್ಷೆಯ ಇರುವಿಕೆ, ಮದ್ಯವನ್ನು ವಿಸರ್ಜಿಸಲು ನಿಮಗೆ ಇನ್ನೊಂದು ಕಾರಣವನ್ನೀಯುತ್ತದೆ.—1 ಕೊರಿಂಥ 6:9, 10, ಹೋಲಿಸಿ.
ಸಹಾಯವನ್ನು ದೊರಕಿಸಿಕೊಳ್ಳಿರಿ
ಆದರೆ ಇದರಿಂದ ವಾಸಿ ಹೊಂದಲು ಇರುವ ಇಚ್ಫೆ ಮಾತ್ರ ಸಾಮಾನ್ಯವಾಗಿ ಸಾಕಾಗುವದಿಲ್ಲ. ನಿಮಗೆ ಇತರರ ಬೆಂಬಲ ಮತ್ತು ಸಹಾಯ ಸಹ ಅಗತ್ಯ. “ಒಬ್ಬನಿಗಿಂತ ಇಬ್ಬರು ಲೇಸು,” ಎಂದನು ರಾಜ ಸೊಲೊಮೋನ. “ಒಬ್ಬನು ಬಿದ್ದರೆ ಇನ್ನೊಬ್ಬನು ಎತ್ತುವನು.” (ಪ್ರಸಂಗಿ 4:9, 10) ನಿಮ್ಮ ಸಮಸ್ಯೆಯಲ್ಲಿ ಸಹಾಯಕ್ಕಾಗಿ ಇನ್ನೊಬ್ಬನಲ್ಲಿ ಭರವಸವಿಡುವುದು ಸುಲಭವಲ್ಲ. ಆದರೆ ವಾಸಿಯಾಗುತ್ತಿರುವ ಕೇಟಿ ಎಂಬ ಒಬ್ಬ ಮದ್ಯ ರೋಗಿ ಈ ಸಲಹೆಯನ್ನು ಕೊಡುತ್ತಾಳೆ: “ಜನರಲ್ಲಿ, ವಿಶೇಷವಾಗಿ ನಿಮ್ಮ ಕುಟುಂಬದಲ್ಲಿ ಭರವಸವಿಡಲು ಕಲಿಯಿರಿ.” ಹೌದು, ಹೆಚ್ಚಿನ ಸಂದರ್ಭಗಳಲ್ಲಿ ನಿಮಗೆ ಅವಶ್ಯವಿರುವ ಪ್ರೀತಿ ಮತ್ತು ಬೆಂಬಲವನ್ನು ನೀಡಲು ನಿಮ್ಮ ಕುಟುಂಬವೇ ಉತ್ತಮ ಸ್ಥಾನದಲ್ಲಿದೆ.
ನಿಮ್ಮ ಕುಟುಂಬದ ಪರಿಸ್ಥಿತಿಯೇ ಮೊದಲಾಗಿ ನೀವು ಕುಡಿಯುವುದರಲ್ಲಿ ಸಿಕ್ಕಿಕೊಳ್ಳುವುದಕ್ಕೆ ಸಹಾಯಮಾಡಿರಬಹುದೆಂಬುದು ನಿಜ. ಆದರೆ ನಿಮ್ಮ ಸ್ಥಿತಿಯ ಕುರಿತು ಹೆತ್ತವರಿಗೆ ತಿಳಿಯಪಡಿಸುವಲ್ಲಿ, ಮನೆಯಲ್ಲಿ ಸುಧಾರಣೆಯಾಗುವಂತೆ ಅವರು ನೋಡಿಕೊಳ್ಳರೊ? ಆದುದರಿಂದ ನಿಮ್ಮ ಹೆತ್ತವರನ್ನು ಸಮೀಪಿಸಿ, ನಿಮಗೊಂದು ಗಂಭೀರವಾದ ಸಮಸ್ಯೆಯಿದೆಯೆಂದು ಏಕೆ ಹೇಳಬಾರದು? ಅವರ ಮೇಲೆಯೇ ಸಕಲ ಆಪಾದನೆಯನ್ನು ಹೇರುವ ಬದಲಿಗೆ, ಅವರ ಸಹಾಯ ಮತ್ತು ಬೆಂಬಲವನ್ನು ಕೇಳಿರಿ. ನಿಮ್ಮ ಹೆತ್ತವರೊಂದಿಗೆ ತೆರೆದ ಮನಸ್ಸು ಮತ್ತು ಪ್ರಾಮಾಣಿಕತೆಯಿಂದಿರುವುದು, ನಿಮ್ಮ ಕುಟುಂಬವು ದೇವರ ಮನೆವಾರ್ತೆಯಂತೆಯೇ “ಐಕ್ಯವಾಗಿ” ಇರಲು ಸಹಾಯ ಮಾಡುವುದು. (ಎಫೆಸ 4:16) ಈ ರೀತಿಯಲ್ಲಿ ನೀವೆಲ್ಲರೂ ಸಾಫಲ್ಯದ ಗುಣ ಹೊಂದುವಿಕೆಗೆ ಕೂಡಿ ಮಾಡುವ ಕೆಲಸವನ್ನು ಆರಂಭಿಸಸಾಧ್ಯವಾಗುವುದು.
ಕುಟುಂಬದ ಸಹಾಯ ದೊರಕದಿದ್ದರೆ ಇತರರು ಸಹಾಯ ಮಾಡಬಲ್ಲರು.b (ಜ್ಞಾನೋಕ್ತಿ 17:17) ಒಬ್ಬ ಕ್ರೈಸ್ತ ಹಿರಿಯನು ಬಾಬ್ನ ಗೆಳೆತನ ಮಾಡಿಕೊಂಡು, ಮುಂದಿನ ಅನೇಕ ತಿಂಗಳುಗಳಲ್ಲಿ ಪ್ರತಿ ವಾರ ಅವನ ಪ್ರಗತಿಯನ್ನು ಕಂಡುಹಿಡಿಯಲು ಅವನನ್ನು ಭೇಟಿಯಾದನು. ಬಾಬ್ ಹೇಳುವುದು: “ಅವನ ಆಸಕ್ತಿ ಮತ್ತು ಚಿಂತೆ ನನ್ನ ದುಶಟ್ಟವನ್ನು ನಿಲ್ಲಿಸಲು ನನಗೆ ಬೇಕಾದ ಆತ್ಮಗೌರವವನ್ನು ಕೊಟ್ಟಿತು.”—ಯಾಕೋಬ 5:13, 14.
ಎಲ್ಲಕ್ಕೂ ಮಿಗಿಲಾಗಿ, ನಿಮಗೆ ಯೆಹೋವ ದೇವರ ಸಹಾಯವು ಅಗತ್ಯವೆಂದು ಗ್ರಹಿಸಿಕೊಳ್ಳಿರಿ. ಶಕಿಗ್ತಾಗಿ ಆತನ ಮೇಲೆ ಆತುಕೊಳ್ಳಿರಿ. ಹೌದು, ದೇವರ ಸಹಾಯದಿಂದ, “ಮುರಿದ ಮನಸ್ಸುಳ್ಳವರು” ಯೆಹೋವನ ‘ವಾಸಿ ಮಾಡುವಿಕೆಯನ್ನು ಮತ್ತು ಗಾಯ ಕಟ್ಟುವಿಕೆಯನ್ನು’ ಅನುಭವಿಸುವರು.—ಕೀರ್ತನೆ 147:3; ನೋಡಿ ಕೀರ್ತನೆ 145:14 ಸಹ.
ಹೊಸ ಮಿತ್ರರನ್ನು ಕಂಡುಹಿಡಿಯಿರಿ
ನ್ಯೂ ಜೀಲೆಂಡ್ನಲ್ಲಿ ಮಾಡಿದ ಒಂದು ಸಮೀಕ್ಷೆಯು, ಮದ್ಯವನ್ನು ದುರುಪಯೋಗಿಸುವ ಯುವ ಜನರಿಗೆ ಒಂದು ದೊಡ್ಡ ಪ್ರಭಾವ ಮಿತ್ರರದ್ದು ಎಂದು ವರದಿ ಮಾಡಿತು. ಆದುದರಿಂದ ನೀವು ಕುಡಿಯುವವರೊಂದಿಗೆ ಕೂಡಿಕೊಳ್ಳುವಲ್ಲಿ ಕುಡಿಯುವುದನ್ನು ನಿಲ್ಲಿಸುವುದು ಕಷ್ಟವೆಂದು ಕಂಡುಕೊಳ್ಳುವಿರಿ. ಈ ಕಾರಣದಿಂದ ಬೈಬಲು ಬುದ್ಧಿ ಹೇಳುವುದು: “ಕುಡುಕರಲ್ಲಿ . . . ಸೇರದಿರು.” (ಜ್ಞಾನೋಕ್ತಿ 23:20) ಹೊಸ, ಹಿತಕರವಾದ ಮಿತ್ರತ್ವಗಳನ್ನು ಬೆಳೆಸಿರಿ. “ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ” ಎಂಬುದು ಸತ್ಯವಾಗಿರುವಂತೆಯೆ, ಸುಸಹವಾಸಿಗಳು ಸಕಾರಾತ್ಮಕ ಪ್ರಭಾವವಾಗಿದ್ದಾರೆ.—1 ಕೊರಿಂಥ 15:33.
ಕಿಮ್ ಎಂಬವಳು ಇದು ನಿಜವೆಂದು ಕಂಡುಹಿಡಿದಳು. “ಹಾಗೆ ಮಾಡುವುದು ಎಡವಟ್ಟಾಗಿದ್ದರೂ ನನಗೆ ಸ್ನೇಹಿತರನ್ನು ಬದಲಾಯಿಸಲೇ ಬೇಕಾಗಿತ್ತು. . . . ಮದ್ಯ ಯಾ ಅಮಲೌಷಧವಿರುವಲ್ಲಿ ನಾನು ಇರಲು ಬಯಸಲಿಲ್ಲ,” ಎಂದು ಅವಳು ಒಪ್ಪಿಕೊಳ್ಳುತ್ತಾಳೆ. ಕುಡಿಯದಿರುವ ಮಿತ್ರರನ್ನು ಕಂಡುಹಿಡಿಯುವುದು ಕಷ್ಟವೆಂಬುದು ಒಪ್ಪಿಕೊಳ್ಳಬೇಕಾದ ವಿಷಯ. ಆದರೆ ಯೆಹೋವನ ಸಾಕ್ಷಿಗಳಲ್ಲಿ ಆದರ್ಶ ರೀತಿಯ ಯುವ ಜನರು ಶಾಸನಬದ್ಧವಲ್ಲದ ಕುಡಿತದಲ್ಲಿ ಭಾಗವಹಿಸುವುದಿಲ್ಲವೆಂದು ನೀವು ಕಂಡುಕೊಳ್ಳುವಿರಿ. ಮತ್ತು ವಿನೋದ ವಿಹಾರ ಮತ್ತು ಪಲಾಯನದ ಉಗಮವಾಗಿ ಅವರು ಮದ್ಯದ ಮೇಲೆ ಹೊಂದಿಕೊಂಡಿರುವುದೂ ಇಲ್ಲ. ಆದುದರಿಂದ, “ಪೂರ್ವಸ್ವಭಾವವನ್ನು ಅದರ ಕೃತ್ಯಗಳ ಕೂಡ” ತೆಗೆದಿಡುವ ನಿಮ್ಮ ಪ್ರಯತ್ನಕ್ಕೆ ಅವರು ಸಹಾಯ—ತಡೆಯಲ್ಲ—ನೀಡಬಲ್ಲರು.—ಕೊಲೊಸ್ಸೆ 3:9.
ನೀವು ಗುಣಹೊಂದಬಲ್ಲಿರಿ!
ಮದ್ಯವಿಲ್ಲದ ಜೀವನವು ನಿಮಗೆ ಅನಿವಿರತ ಹೋರಾಟವಾಗಿರುವುದು. ಕೆಲವು ಸಮಯಗಳಲ್ಲಿ ಇದರ ವರ್ಜನೆ ಅತಿ ಕಷ್ಟವಾಗಿರಬಹುದು. ಆ್ಯನ ಎಂಬವಳು ಒಪ್ಪಿಕೊಳ್ಳುವುದು: “ನನಗೆ [ಕುಡಿಯಲು] ಬಲವಾದ ಪ್ರಚೋದನೆ ಇನ್ನೂ ಇದೆ. ವಿಶೇಷವಾಗಿ, ನಾನು ರೇಗಿರುವಾಗ, ಹತಾಶಳಾಗಿರುವಾಗ, ಖಿನ್ನಳಾಗಿರುವಾಗ ಯಾ ನೊಂದಾಗ.” ಆದುದರಿಂದ ಗುಣಹೊಂದುತ್ತಿರುವ ಒಬ್ಬ ಮದ್ಯ ರೋಗಿಗೆ, ತೀರಾ ಅಪರಾಧ ಪ್ರಜ್ಞಾಪರವಶರಾಗುವಂತೆ ನಡೆಸುವ ಮರುಕೊಳಿಸುವಿಕೆಯ ಅನುಭವವು ಅಸಾಮಾನ್ಯವಲ್ಲ. ಇದು ಸಂಭವಿಸುವಲ್ಲಿ, “ನಾವು ಅನೇಕ ಬಾರಿ ಮುಗ್ಗರಿಸುವುದುಂಟು,” ಎಂಬುದನ್ನು ಜ್ಞಾಪಿಸಿರಿ. (ಯಾಕೋಬ 3:2, NW) ಯೆಹೋವನು ಕರುಣೆಯ, ನಿಮ್ಮ ಬಲಹೀನತೆಯನ್ನು ತಿಳಿದಿರುವ ದೇವರು ಎಂಬುದನ್ನೂ ನೆನಪಿಸಿಕೊಳ್ಳಿರಿ.—ಕೀರ್ತನೆ 103:14.
ಆದರೂ, ದೇವರ ದಯೆಯನ್ನು ಅಪಪ್ರಯೋಗಿಸದಂತೆ ಎಚ್ಚರವಾಗಿರಿ. ನಿಮ್ಮ ತಪ್ಪಿನಿಂದ ಪಾಠ ಕಲಿತು, ಮರುಕೊಳಿಸದಂತೆ ಹಿಂದೆಂದಿಗಿಂತಲೂ ಹೆಚ್ಚಿನ ದೃಢ ಮನಸ್ಸನ್ನು ಮಾಡಿರಿ. ಇಂಥ ದೃಢತೆಯನ್ನು ತೋರಿಸಿದುದರ ಮೂಲಕ ಬಾಬ್ ಕುಡಿಯುವುದನ್ನು ಬಿಟ್ಟು ಬಿಡಲು ಶಕ್ತನಾದನು. ಅಂದಿನಿಂದ ಅವನು ತನ್ನ ಕುಟುಂಬದೊಂದಿಗೂ ದೇವರೊಂದಿಗೂ ಶಾಂತಿಯುಳ್ಳ ಸಂಬಂಧವನ್ನು ಅನುಭವಿಸಶಕ್ತನಾಗಿದ್ದಾನೆ. ಅವನ ಸಂತೋಷದ ಜೀವನದಲ್ಲಿ ಈಗ ಪೂರ್ಣ ಸಮಯದ ಶುಶ್ರೂಷಕನಾಗಿ ಮಾಡುವ ಸೇವೆ ಸೇರಿದೆ. ಮದ್ಯದ ವಿರುದ್ಧ ಮಾಡುವ ಹೋರಾಟದಲ್ಲಿ ನೀವು ಜಯಹೊಂದುವಲ್ಲಿ ಆನಂದ ಮತ್ತು ಮನಶ್ಶಾಂತಿ ನಿಮ್ಮ ಪಾಲೂ ಆಗುವುದು.
[ಅಧ್ಯಯನ ಪ್ರಶ್ನೆಗಳು]
a “ಯುವ ಜನರು ಪ್ರಶ್ನಿಸುವುದು . . . ಮದ್ಯಪಾನ ನಿಜವಾಗಿಯೂ ನನ್ನನ್ನು ವ್ಯಸನಿಯಾಗುವಂತೆ ಮಾಡಬಲ್ಲದೊ?” (ಏಪ್ರಿಲ್ 8, 1993, ಎಚ್ಚರ!) ಎಂಬ ಲೇಖನ ನಿಮಗೆ ಈ ವಿಷಯದಲ್ಲಿ ಸಮಸ್ಯೆ ಇದೆಯೆ ಎಂದು ನಿರ್ಧರಿಸಲು ಸಹಾಯ ಮಾಡಬಲ್ಲದು.
b ಅನೇಕರು ಮದ್ಯ ವ್ಯಸನವನ್ನು ನಿಭಾಯಿಸಲು ತರಬೇತು ಹೊಂದಿರುವ ವೈದ್ಯರ ಮತ್ತು ಸಲಹೆಗಾರರ ಸಹಾಯದಿಂದ ಪ್ರಯೋಜನ ಪಡೆದಿದ್ದಾರೆ. ಕೆಲವು ಪರಿಣತರ ನಂಬಿಕೆಯೇನಂದರೆ, ಈ ವ್ಯಸನದ ವರ್ತನೆ ನಿಲ್ಲಿಸಲ್ಪಡುವ ತನಕ ವಾಸಿ ಮಾಡುವುದರಲ್ಲಿರುವ ಇತರ ಭಾಗಗಳು ಸಫಲಹೊಂದಸಾಧ್ಯವಿಲ್ಲ. ಈ ಮತ್ತು ಇತರ ಕಾರಣಗಳಿಗಾಗಿ, ಮದ್ಯ ವ್ಯಸನಿಗಳು ಒಂದು ಆಸ್ಪತ್ರೆ ಯಾ ಚಿಕಿತ್ಸಾಲಯದಲ್ಲಿ ನಿರ್ವಿಷೀಕರಣ ಕಾರ್ಯಕ್ರಮವನ್ನು ಪ್ರವೇಶಿಸಬೇಕೆಂದು ಕೆಲವರು ಶಿಫಾರಸು ಮಾಡುತ್ತಾರೆ.
[ಪುಟ 16 ರಲ್ಲಿರುವ ಚಿತ್ರ]
ಯುವ ಮದ್ಯ ರೋಗಿಗಳು ತಮಗೆ ಒಂದು ಸಮಸ್ಯೆ ಇದೆ ಎಂಬುದನ್ನು ಅಲ್ಲಗಳೆಯುತ್ತಾರೆ.