ಸ್ತ್ರೀಯರನ್ನು ಮತ್ತು ಅವರ ಕೆಲಸವನ್ನು ಗಣ್ಯಮಾಡುವುದು
ಮೂರು ಸಾವಿರ ವರ್ಷಗಳ ಹಿಂದೆ, ಲೆಮೂವೇಲನೆಂಬ ಪುರುಷನು ಸಮರ್ಥಳಾದ ಹೆಂಡತಿಯೊಬ್ಬಳ ಕುರಿತ ಉಜ್ವಲ ವರ್ಣನೆಯನ್ನು ಬರೆದನು. ಬೈಬಲಿನಲ್ಲಿ ಇದು ಜ್ಞಾನೋಕ್ತಿ 31ನೆಯ ಅಧ್ಯಾಯದಲ್ಲಿ ದಾಖಲೆಯಾಗಿದೆ. ಯಾರ ಯೋಗ್ಯತೆಗಳನ್ನು ಅವನು ಹೊಗಳಿದನೋ, ಆ ಸ್ತ್ರೀಯು ಖಂಡಿತವಾಗಿಯೂ ಕಾರ್ಯಮಗ್ನಳಾಗಿದ್ದಳು. ಆಕೆ ತನ್ನ ಕುಟುಂಬವನ್ನು ನೋಡಿಕೊಂಡು, ಮಾರುಕಟ್ಟೆಯಲ್ಲಿ ವ್ಯಾಪಾರಮಾಡಿ, ಜಮೀನನ್ನು ಖರೀದಿಸಿ ಮತ್ತು ಮಾರಿ, ತನ್ನ ಮನೆವಾರ್ತೆಗೆ ಬಟ್ಟೆಗಳನ್ನು ತಯಾರಿಸಿ, ಹೊಲದಲ್ಲಿ ಕೆಲಸಮಾಡಿದಳು.
ಈ ಸ್ತ್ರೀಯ ವೈಶಿಷ್ಟ್ಯವು ಗಮನಿಸಲ್ಪಡದಿರಲಿಲ್ಲ. ‘ಆಕೆಯ ಮಕ್ಕಳು ಆಕೆಯನ್ನು ಧನ್ಯಳೆಂದು ಕರೆಯುತ್ತಾರೆ, ಆಕೆಯ ಗಂಡನು ಆಕೆಯನ್ನು ಹೊಗಳುತ್ತಾನೆ.’ ಅಂತಹ ಹೆಂಡತಿಯು ಒಂದು ನಿಕ್ಷೇಪವಾಗಿರುತ್ತಾಳೆ. “ಅವಳು ಮಾಣಿಕ್ಯಗಳಿಗಿಂತ ಹೆಚ್ಚು ಬೆಲೆಬಾಳುವವಳು” ಎಂದು ಬೈಬಲು ಹೇಳುತ್ತದೆ.—ಜ್ಞಾನೋಕ್ತಿ 31:10-28, ನ್ಯೂ ಇಂಟರ್ನ್ಯಾಷನಲ್ ವರ್ಷನ್.
ಲೆಮೂವೇಲನ ಸಮಯದಲ್ಲಿದ್ದುದಕ್ಕಿಂತ, ಈಗ ಸ್ತ್ರೀಯರ ಕೆಲಸವು ಹೆಚ್ಚು ಜಟಿಲವಾಗಿದೆ. ಅವರ 20ನೆಯ ಶತಮಾನದ ಪಾತ್ರವು, ಏಕಕಾಲದಲ್ಲಿ ಅವರು, ಹೆಂಡತಿಯರು, ತಾಯಂದಿರು, ನರ್ಸ್ಗಳು, ಶಿಕ್ಷಕಿಯರು, ಕುಟುಂಬ ಪೋಷಕರು ಮತ್ತು ಬೇಸಾಯಗಾರರು ಆಗಿರಬೇಕೆಂದು ಅನೇಕ ವೇಳೆ ಕೇಳಿಕೊಳ್ಳುತ್ತದೆ. ತಮ್ಮ ಮಕ್ಕಳಿಗೆ ಸಾಕಷ್ಟು ತಿನ್ನಲು ಸಿಗುವಂತೆ ಮಾಡಲಿಕ್ಕಾಗಿ, ಅಸಂಖ್ಯಾತ ಮಂದಿ ಸ್ತ್ರೀಯರು ಸಾಹಸದ ತ್ಯಾಗಗಳನ್ನು ಮಾಡುತ್ತಾರೆ. ಈ ಸ್ತ್ರೀಯರೆಲ್ಲರೂ ಗಣ್ಯತೆಗೆ ಮತ್ತು ಶ್ಲಾಘನೆಗೆ ಅರ್ಹರಲ್ಲವೊ?
ಕುಟುಂಬ ಪೋಷಕರಾಗಿ ಸ್ತ್ರೀಯರು
ಇಂದು ಹಿಂದೆಂದಿಗಿಂತಲೂ ಹೆಚ್ಚು ಸಂಖ್ಯೆಯಲ್ಲಿ ಸ್ತ್ರೀಯರು ತಮ್ಮ ಕುಟುಂಬದ ಸಹಾಯಾರ್ಥವಾಗಿ ಮನೆಯಿಂದ ಹೊರಗೆ ಕೆಲಸಮಾಡಬೇಕಾಗುತ್ತದೆ ಅಥವಾ ಅವರು ತಮ್ಮ ಕುಟುಂಬದ ಏಕಮಾತ್ರ ಬೆಂಬಲಿಗರಾಗಿರುತ್ತಾರೆ. ಸ್ತ್ರೀಯರು ಮತ್ತು ಲೋಕದ ಆರ್ಥಿಕ ಬಿಕ್ಕಟ್ಟು (ಇಂಗ್ಲಿಷ್) ಎಂಬ ಪುಸ್ತಕವು, ಹೀಗೆಂದು ಹೇಳಿದ ಒಂದು ವರದಿಯ ಕುರಿತು ಗಮನಿಸಿತು: “ಸ್ತ್ರೀಯರು ಮಾಡುವುದು ಕೇವಲ ಮನೆಕೆಲಸವಲ್ಲ. ‘ಕೇವಲ ಒಬ್ಬ ಗೃಹಿಣಿ’ ಎಂದು ಹೇಳಿಕೊಳ್ಳುವ ಸ್ತ್ರೀಯರು ಲೋಕದ ಯಾವುದೇ ಭಾಗದಲ್ಲಿ ಇರುವುದು ಸಂಬಂಧಸೂಚಕವಾಗಿ ಕೊಂಚ ಮಂದಿಯೇ.” ಮತ್ತು ಸ್ತ್ರೀಯರ ಕೆಲಸವು ಮನಮೋಹಕವಾಗಿರುವುದು ವಿರಳ. ಪತ್ರಿಕೆಗಳು ಅಥವಾ ಟೆಲಿವಿಷನ್ ಸೋಪ್ ಆಪೆರಗಳು ಸ್ತ್ರೀಯರನ್ನು ಸೊಬಗಿನ ಆಫಿಸ್ಗಳಲ್ಲಿ ಹುದ್ದೇದಾರರಾಗಿ ಚಿತ್ರಿಸಬಹುದಾದರೂ, ವಾಸ್ತವ್ಯವು ಸಾಮಾನ್ಯವಾಗಿ ತೀರ ಭಿನ್ನವಾಗಿರುತ್ತದೆ. ಲೋಕದ ಸ್ತ್ರೀಯರಲ್ಲಿ ಅತಿ ದೊಡ್ಡ ಅಂಶವು, ಅಲ್ಪ ಪ್ರಾಪಂಚಿಕ ಪ್ರತಿಫಲಕ್ಕಾಗಿ ದೀರ್ಘ ತಾಸುಗಳ ವರೆಗೆ ದುಡಿಯುತ್ತದೆ.
ಕೋಟ್ಯಂತರ ಮಂದಿ ಸ್ತ್ರೀಯರು ಹೊಲದಲ್ಲಿ ಕೆಲಸಮಾಡುತ್ತಾರೆ, ಬೆಳೆಯನ್ನು ಬೆಳೆಸಿ, ಕುಟುಂಬದ ಚಿಕ್ಕ ಜಮೀನುಗಳನ್ನು ನೋಡಿಕೊಳ್ಳುತ್ತಾರೆ ಇಲ್ಲವೆ ಪಶುಪಾಲನೆ ಮಾಡುತ್ತಾರೆ. ಸಾಮಾನ್ಯವಾಗಿ ಅಸಮರ್ಪಕ ಸಂಬಳ ದೊರಕುವ ಅಥವಾ ಸಂಬಳವೇ ದೊರೆಯದ ಈ ದುಡಿಮೆಯು, ಲೋಕದ ಅರ್ಧಾಂಶ ಜನರಿಗಾಗಿ ಆಹಾರವನ್ನು ಉತ್ಪಾದಿಸುತ್ತದೆ. ಸ್ತ್ರೀಯರು ಮತ್ತು ಪರಿಸರ (ಇಂಗ್ಲಿಷ್) ಎಂಬ ಪುಸ್ತಕವು ವರದಿಮಾಡುವುದು: “ಆಫ್ರಿಕದಲ್ಲಿ 70 ಪ್ರತಿಶತ, ಏಷಿಯದಲ್ಲಿ 50ರಿಂದ 60 ಪ್ರತಿಶತ, ಮತ್ತು ಲ್ಯಾಟಿನ್ ಅಮೆರಿಕದಲ್ಲಿ 30 ಪ್ರತಿಶತದಷ್ಟು ಆಹಾರವು ಸ್ತ್ರೀಯರಿಂದ ಬೆಳೆಸಲ್ಪಡುತ್ತದೆ.”
ಸ್ತ್ರೀಯರಿಗೆ ಸಂಬಳ ದೊರೆಯುವ ಕೆಲಸವಿರುವಾಗ, ಅವರು ಕೇವಲ ಸ್ತ್ರೀಯರಾಗಿರುವ ಮಾತ್ರಕ್ಕೆ, ಸಾಮಾನ್ಯವಾಗಿ ಗಂಡು ಕೆಲಸಗಾರರಿಗಿಂತ ಕಡಮೆ ಸಂಪಾದಿಸುತ್ತಾರೆ. ಈಗ ಹೆಚ್ಚೆಚ್ಚು ಸಾಮಾನ್ಯವಾಗುತ್ತಿರುವ ಒಂದು ಪಾತ್ರವಾದ, ಕುಟುಂಬದ ಏಕಮಾತ್ರ ಪೋಷಕ ಸ್ಥಾನವನ್ನು ತಾಯಿಯು ನಿರ್ವಹಿಸುತ್ತಿರುವುದರಿಂದ, ನಿರ್ದಿಷ್ಟವಾಗಿ ಈ ಭೇದಭಾವವನ್ನು ಅಂಗೀಕರಿಸುವುದು ಅವಳಿಗೆ ಹೆಚ್ಚು ಕಷ್ಟಕರವಾಗಿದೆ. ಆಫ್ರಿಕ, ಕ್ಯಾರಿಬೀಅನ್ ಮತ್ತು ಲ್ಯಾಟಿನ್ ಅಮೆರಿಕದ ಎಲ್ಲ ಕುಟುಂಬಗಳಲ್ಲಿ, 30ರಿಂದ 50 ಪ್ರತಿಶತದಷ್ಟು ಕುಟುಂಬಗಳು ತಮ್ಮ ಮುಖ್ಯ ಪೋಷಕಳೋಪಾದಿ ಸ್ತ್ರೀಯ ಮೇಲೆ ಅವಲಂಬಿಸುತ್ತವೆಂದು ವಿಶ್ವ ಸಂಸ್ಥೆಯ ಒಂದು ವರದಿಯು ಅಂದಾಜುಮಾಡುತ್ತದೆ. ಮತ್ತು ಹೆಚ್ಚು ವಿಕಾಸಹೊಂದಿರುವ ದೇಶಗಳಲ್ಲಿಯೂ, ಹೆಚ್ಚುತ್ತಿರುವ ಸಂಖ್ಯೆಯಲ್ಲಿ ಸ್ತ್ರೀಯರು ಮುಖ್ಯ ಪೋಷಕರಾಗಬೇಕಾಗಿ ಬಂದಿದೆ.
ವಿಕಾಸಶೀಲ ಲೋಕದ ಹೆಚ್ಚಿನ ಭಾಗಗಳಲ್ಲಿರುವ ಗ್ರಾಮೀಣ ದಾರಿದ್ರ್ಯವು ಈ ಪ್ರವೃತ್ತಿಯನ್ನು ತ್ವರೆಗೊಳಿಸುತ್ತಿದೆ. ತನ್ನ ಕುಟುಂಬವನ್ನು ಪೋಷಿಸುವುದನ್ನು ಸತತವಾದ ಹೋರಾಟವಾಗಿ ಕಂಡುಕೊಳ್ಳುವ ಗಂಡನು, ಕೆಲಸ ಪಡೆಯಲಿಕ್ಕಾಗಿ ಹತ್ತಿರದ ನಗರಕ್ಕೆ ಅಥವಾ ಇನ್ನೊಂದು ದೇಶಕ್ಕೆ ಹೋಗಲು ನಿರ್ಣಯಿಸಬಹುದು. ಕುಟುಂಬವನ್ನು ಪರಾಮರಿಸುವುದಕ್ಕಾಗಿ ಅವನು ತನ್ನ ಹೆಂಡತಿಯನ್ನು ಬಿಟ್ಟುಹೋಗುತ್ತಾನೆ. ಕೆಲಸವನ್ನು ಪಡೆಯುವ ಭಾಗ್ಯ ಅವನಿಗಿರುವಲ್ಲಿ, ಅವನು ಮನೆಗೆ ಹಣ ಕಳುಹಿಸುತ್ತಾನೆ. ಆದರೆ ಅವನಿಗೆ ಸದುದ್ದೇಶವಿರುವುದಾದರೂ, ಅನೇಕ ವೇಳೆ ಇದು ಮುಂದುವರಿಯುವುದಿಲ್ಲ. ಅವನು ಬಿಟ್ಟುಹೋಗಿದ್ದ ಅವನ ಕುಟುಂಬವು, ಇನ್ನೂ ಹೆಚ್ಚು ದಾರಿದ್ರ್ಯಕ್ಕೆ ಒಳಗಾಗಬಹುದು, ಮತ್ತು ಕುಟುಂಬದ ಹಿತವು ಈಗ ತಾಯಿಯ ಮೇಲೆ ಅವಲಂಬಿಸುತ್ತದೆ.
“ದಾರಿದ್ರ್ಯದ ಹೆಣ್ಣಾಗಿಸುವಿಕೆ” ಎಂದು ಯೋಗ್ಯವಾಗಿಯೇ ವರ್ಣಿಸಲ್ಪಟ್ಟಿರುವ ಈ ವಿಷಮ ಚಕ್ರವು, ಲಕ್ಷಾಂತರ ಮಂದಿ ಸ್ತ್ರೀಯರ ಮೇಲೆ ಭಾರವಾದ ಹೊರೆಯನ್ನು ಹಾಕುತ್ತದೆ. ಸ್ತ್ರೀಯರು ಮತ್ತು ಆರೋಗ್ಯ (ಇಂಗ್ಲಿಷ್) ಎಂಬ ಪುಸ್ತಕವು ವಿವರಿಸುವುದು: “ಲೋಕವ್ಯಾಪಕವಾಗಿರುವ ಒಟ್ಟು ಕುಟುಂಬಗಳಲ್ಲಿ, ಸ್ತ್ರೀಯರು ತಲೆಯಾಗಿದ್ದಾರೆಂದು ಅಂದಾಜಿಸಲಾಗುವ ಮೂರರಲ್ಲಿ ಒಂದು ಪಾಲು ಕುಟುಂಬಗಳು, ಪುರುಷರು ತಲೆಯಾಗಿರುವ ಕುಟುಂಬಗಳಿಗಿಂತ ಬಡವರಾಗಿರುವ ಸಾಧ್ಯತೆಯು ಎಷ್ಟೋ ಪಟ್ಟು ಹೆಚ್ಚಾಗಿರುತ್ತದೆ, ಮತ್ತು ಇಂತಹ ಕುಟುಂಬಗಳ ಸಂಖ್ಯೆ ವೃದ್ಧಿಯಾಗುತ್ತಿದೆ.” ಆದರೆ ಕಷ್ಟಕರವಾಗಿರುವುದಾದರೂ, ಆಹಾರವನ್ನು ಒದಗಿಸುವುದು ಮಾತ್ರ ಸ್ತ್ರೀಯರು ಎದುರಿಸುವ ಏಕೈಕ ಪಂಥಾಹ್ವಾನವಾಗಿರುವುದಿಲ್ಲ.
ತಾಯಂದಿರು ಮತ್ತು ಶಿಕ್ಷಕಿಯರು
ತಾಯಿಯೊಬ್ಬಳು ತನ್ನ ಮಕ್ಕಳ ಭಾವಾತ್ಮಕ ಹಿತವನ್ನೂ ನೋಡಿಕೊಳ್ಳಬೇಕಾಗುತ್ತದೆ. ಪ್ರೀತಿ ಮತ್ತು ಮಮತೆಯ ಕುರಿತು—ಅದರ ಶಾರೀರಿಕ ಆವಶ್ಯಕತೆಗಳನ್ನು ಪೂರೈಸುವಷ್ಟೇ ಪ್ರಾಮುಖ್ಯವಾಗಿರುವ ಪಾಠಗಳು—ಮಗು ಕಲಿಯುವಂತೆ ಸಹಾಯಮಾಡುವುದರಲ್ಲಿ ಆಕೆ ಮಹತ್ವದ ಪಾತ್ರವನ್ನು ವಹಿಸುತ್ತಾಳೆ. ಸುಸಮತೆಯ ವಯಸ್ಕನಾಗಿ ಬೆಳೆಯಲು, ಒಂದು ಮಗುವಿಗೆ ಅದು ಬೆಳೆಯುವಾಗ ಹೃದಯೋಲ್ಲಾಸದ, ಭದ್ರವಾದ ಪರಿಸರವು ಅಗತ್ಯ. ಪುನಃ ತಾಯಿಯ ಪಾತ್ರವು ನಿರ್ಣಾಯಕವಾಗಿದೆ.
ಬೆಳೆಯುತ್ತಿರುವ ಮಗು (ಇಂಗ್ಲಿಷ್) ಎಂಬ ಪುಸ್ತಕದಲ್ಲಿ, ಹೆಲೆನ್ ಬೀ ಬರೆಯುವುದು: “ಆದರಣೀಯರಾದ ಹೆತ್ತವರು, ಮಗುವನ್ನು ಪರಾಮರಿಸಿ, ಮಮತೆಯನ್ನು ವ್ಯಕ್ತಪಡಿಸಿ, ಆಗಾಗ್ಗೆ ಅಥವಾ ಕ್ರಮವಾಗಿ ಮಗುವಿನ ಆವಶ್ಯಕತೆಗಳನ್ನು ಪ್ರಥಮವಾಗಿಟ್ಟು, ಮಗುವಿನ ಚಟುವಟಿಕೆಗಳ ವಿಷಯದಲ್ಲಿ ಉತ್ಸಾಹ ತೋರಿಸಿ, ಮಗುವಿನ ಅನಿಸಿಕೆಗಳಿಗೆ ಸಂವೇದನಶೀಲರಾಗಿ ಮತ್ತು ಅನುತಾಪದಿಂದ ಪ್ರತಿಕ್ರಿಯಿಸುತ್ತಾರೆ.” ಪರಾಮರಿಕೆಯ ಭಾವವುಳ್ಳ ತಾಯಿಯಿಂದ ಅಂತಹ ಹೃದಯೋಲ್ಲಾಸವನ್ನು ಪಡೆದಿರುವ ಮಕ್ಕಳು, ನಿಶ್ಚಯವಾಗಿಯೂ ಆಕೆಗೆ ಗಣ್ಯತೆ ತೋರಿಸಬೇಕು.—ಜ್ಞಾನೋಕ್ತಿ 23:22.
ಅನೇಕ ತಾಯಂದಿರು ಮೊಲೆಯುಣಿಸುವ ಮೂಲಕ ಜನ್ಮತಃ ಮಗುವಿಗೆ ಒಂದು ಒಲವಿನ ಪರಿಸರವನ್ನು ಒದಗಿಸುತ್ತಾರೆ. ವಿಶೇಷವಾಗಿ ಬಡ ಕುಟುಂಬಗಳಲ್ಲಿ, ತಾಯಿಯ ಸ್ವಂತ ಹಾಲು ಆಕೆ ತನ್ನ ನವಜನಿತ ಮಗುವಿಗೆ ಕೊಡಬಲ್ಲ ಅಮೂಲ್ಯವಾದ ಕೊಡುಗೆಯಾಗಿದೆ. (10-11ನೆಯ ಪುಟಗಳಲ್ಲಿರುವ ರೇಖಾಚೌಕವನ್ನು ನೋಡಿ.) ರಸಕರವಾಗಿ, ಅಪೊಸ್ತಲ ಪೌಲನು ಥೆಸಲೊನೀಕದ ಕ್ರೈಸ್ತರ ಕಡೆಗೆ ತನಗಿದ್ದ ಉಲ್ಲಾಸದ ವಾತ್ಸಲ್ಯವನ್ನು, “ತನ್ನ ಮಕ್ಕಳನ್ನು ಪೋಷಿಸುವ [“ಮೊಲೆಯುಣಿಸುವ,” NW] ತಾಯಿ”ಗೆ ಹೋಲಿಸಿದನು.—1 ಥೆಸಲೊನೀಕ 2:7, 8.
ತನ್ನ ಮಕ್ಕಳಿಗೆ ಮೊಲೆಯುಣಿಸಿ ಅವರನ್ನು ಪೋಷಿಸುವುದಲ್ಲದೆ, ತಾಯಿಯು ಅನೇಕ ವೇಳೆ ಅವರ ಮುಖ್ಯ ಶಿಕ್ಷಕಿಯೂ ಆಗಿರುತ್ತಾಳೆ. “ಮಗನೇ, ನಿನ್ನ ತಂದೆಯ ಉಪದೇಶವನ್ನು ಕೇಳು, ನಿನ್ನ ತಾಯಿಯ ಬೋಧನೆಯನ್ನು ತೊರೆಯಬೇಡ,” ಎಂದು ಬೈಬಲು ಬುದ್ಧಿಹೇಳುತ್ತ, ತಮ್ಮ ಮಕ್ಕಳಿಗೆ ವಿದ್ಯೆ ನೀಡುವುದರಲ್ಲಿ ತಾಯಂದಿರು ವಹಿಸುವ ವ್ಯಾಪಕವಾದ ಪಾತ್ರವನ್ನು ಸೂಚಿಸುತ್ತದೆ. (ಜ್ಞಾನೋಕ್ತಿ 1:8) ಮಗುವಿಗೆ ಮಾತಾಡಲು, ನಡೆಯಲು ಮತ್ತು ಮನೆಗೆಲಸಗಳನ್ನು ಮಾಡಲು ಹಾಗೂ ಅಸಂಖ್ಯಾತ ಬೇರೆ ವಿಷಯಗಳನ್ನು ತಾಳ್ಮೆಯಿಂದ ಕಲಿಸುವುದು ಮುಖ್ಯವಾಗಿ ತಾಯಿ ಅಥವಾ ಅಜ್ಜಿಯಂದಿರೇ.
ಅನುಕಂಪ ಅತಿ ಆವಶ್ಯಕ
ತಮ್ಮ ಕುಟುಂಬಗಳಿಗೆ ಸ್ತ್ರೀಯರು ಕೊಡಬಲ್ಲ ಅತಿ ದೊಡ್ಡ ಕೊಡುಗೆಗಳಲ್ಲಿ ಒಂದು ಅನುಕಂಪವಾಗಿದೆ. ಕುಟುಂಬದ ಸದಸ್ಯನೊಬ್ಬನು ಕಾಯಿಲೆ ಬೀಳುವಾಗ, ತಾಯಿ, ತನ್ನ ಇತರ ಜವಾಬ್ದಾರಿಗಳನ್ನೆಲ್ಲ ನಿರ್ವಹಿಸಿಕೊಳ್ಳುತ್ತಾ, ನರ್ಸ್ನ ಪಾತ್ರವನ್ನೂ ವಹಿಸುತ್ತಾಳೆ. ಸ್ತ್ರೀಯರು ಮತ್ತು ಆರೋಗ್ಯ ಪುಸ್ತಕವು ವಿವರಿಸುವುದು: “ವಾಸ್ತವವಾಗಿ, ಸ್ತ್ರೀಯರು ಲೋಕದಲ್ಲಿ ಅಧಿಕಾಂಶ ಆರೋಗ್ಯಾರೈಕೆಯನ್ನು ಒದಗಿಸುತ್ತಾರೆ.”
ತಾಯಿಯ ಅನುಕಂಪವು, ತನ್ನ ಮಕ್ಕಳು ಆಹಾರವಿಲ್ಲದೆ ಹೋಗದಿರುವುದಕ್ಕಾಗಿ ತಾನು ಕಡಮೆ ತಿನ್ನುವಂತೆಯೂ ಆಕೆಯನ್ನು ಪ್ರಚೋದಿಸಬಹುದು. ಕೆಲವು ಮಂದಿ ಸ್ತ್ರೀಯರು ನ್ಯೂನಪೋಷಿತರಾಗಿರುವುದಾದರೂ, ತಾವು ಸಾಕಷ್ಟು ಆಹಾರವನ್ನು ಸೇವಿಸುತ್ತೇವೆಂದು ಅಭಿಪ್ರಯಿಸುತ್ತಾರೆಂದು ಸಂಶೋಧಕರು ಕಂಡುಹಿಡಿದಿದ್ದಾರೆ. ತಮ್ಮ ಗಂಡಂದಿರಿಗೂ ಮಕ್ಕಳಿಗೂ ಆಹಾರದಲ್ಲಿ ಅಧಿಕಾಂಶ ಪಾಲನ್ನು ಕೊಡುವುದು ಅವರಿಗೆ ಎಷ್ಟು ವಾಡಿಕೆಯಾಗಿದೆಯೆಂದರೆ, ಕೆಲಸ ಮಾಡುತ್ತ ಇರುವಷ್ಟರ ವರೆಗೆ ತಾವು ಸಾಕಷ್ಟು ಪೋಷಿತರೆಂದು ಅವರು ಪರಿಗಣಿಸುತ್ತಾರೆ.
ಕೆಲವು ಬಾರಿ ಒಬ್ಬ ಸ್ತ್ರೀಯ ಅನುಕಂಪವು, ಸ್ಥಳಿಕ ಪರಿಸರಕ್ಕೆ ಆಕೆ ತೋರಿಸುವ ಚಿಂತೆಯಿಂದ ವ್ಯಕ್ತವಾಗುತ್ತದೆ. ಪರಿಸರದ ಕುರಿತು ಅವಳು ಚಿಂತಿಸುವುದರ ಕಾರಣವೇನೆಂದರೆ, ಅನಾವೃಷ್ಟಿ, ಮರುಭೂಮೀಕರಣ ಮತ್ತು ಕಾಡು ಕಡಿಯುವಿಕೆಯೂ ಜಮೀನನ್ನು ಕೆಡಿಸುವಾಗ ಆಕೆಯೂ ಕಷ್ಟಾನುಭವಿಸುತ್ತಾಳೆ. ಭಾರತದ ಒಂದು ಪಟ್ಟಣದಲ್ಲಿ, ಮರ ಕಡಿಯುವ ಒಂದು ಕಂಪನಿಯು, ಹತ್ತಿರದ ಒಂದು ಕಾಡಿನಲ್ಲಿ ಸುಮಾರು 2,500 ಮರಗಳನ್ನು ಕಡಿಯುತ್ತದೆಂದು ಸ್ತ್ರೀಯರಿಗೆ ತಿಳಿದುಬಂದಾಗ ಅವರು ಕೋಪಿಸಿಕೊಂಡರು. ಸ್ತ್ರೀಯರಿಗೆ ಆ ಮರಗಳು ಆಹಾರ, ಕಟ್ಟಿಗೆ ಮತ್ತು ಮೇವಿಗಾಗಿ ಬೇಕಾಗಿದ್ದವು. ಮರ ಕಡಿಯುವವರು ಬಂದಾಗ, ಸ್ತ್ರೀಯರು ಆಗಲೇ ಕೈ ಕೈ ಜೋಡಿಸಿಕೊಂಡು ಮರಗಳನ್ನು ಕಾಪಾಡಲು ಸಿದ್ಧರಾಗಿದ್ದರು. ‘ನಿಮಗೆ ಮರಗಳನ್ನು ಕಡಿಯಲು ಮನಸ್ಸಿದ್ದರೆ, ಅದಕ್ಕೆ ಮೊದಲು ನಮ್ಮ ತಲೆಗಳನ್ನು ಉರುಳಿಸಬೇಕು,’ ಎಂದು ಆ ಸ್ತ್ರೀಯರು ಮರ ಕಡಿಯುವವರಿಗೆ ಹೇಳಿದರು. ಕಾಡು ಉಳಿಯಿತು.
“ಆಕೆ ಸಂಪಾದಿಸಿರುವ ಪ್ರತಿಫಲವನ್ನು ಆಕೆಗೆ ಕೊಡಿರಿ”
ಆಕೆಯ ಪಾತ್ರ ಯಾವುದೇ ಆಗಿರಲಿ—ಕುಟುಂಬ ಪೋಷಕಳು, ತಾಯಿ, ಶಿಕ್ಷಕಿ, ಅಥವಾ ಕನಿಕರದ ಬುಗ್ಗೆಯೇ ಆಗಿರಲಿ, ಒಬ್ಬಾಕೆ ಸ್ತ್ರೀಯೂ ಆಕೆಯ ಕೆಲಸವೂ, ಗೌರವ ಮತ್ತು ಮನ್ನಣೆಗೆ ಅರ್ಹವಾಗಿದೆ. ಸಮರ್ಥಳಾದ ಸ್ತ್ರೀಯನ್ನು ಅಷ್ಟು ಉತ್ತಮವಾಗಿ ಪ್ರಶಂಸಿಸಿದ ವಿವೇಕಿ ಲೆಮೂವೇಲನು, ಆಕೆಯ ಕೆಲಸವನ್ನೂ ಸಲಹೆಯನ್ನೂ ಬೆಲೆಯುಳ್ಳದ್ದೆಂದು ಎಣಿಸಿದನು. ವಾಸ್ತವವೇನಂದರೆ, ಅವನ ಸಂದೇಶದಲ್ಲಿ ಹೆಚ್ಚಿನದ್ದು, ಅವನ ತಾಯಿಯಿಂದ ಅವನಿಗೆ ಕೊಡಲ್ಪಟ್ಟಿದ್ದ ಬೋಧನೆಯಿಂದಲೇ ಆರಿಸಿಕೊಂಡದ್ದಾಗಿತ್ತೆಂದು ಬೈಬಲು ವಿವರಿಸುತ್ತದೆ. (ಜ್ಞಾನೋಕ್ತಿ 31:1) ಶುದ್ಧಾಂತಃಕರಣದ ಹೆಂಡತಿಯನ್ನೂ ತಾಯಿಯನ್ನೂ ಸಾಮಾನ್ಯವೆಂದು ಪರಿಗಣಿಸಬಾರದೆಂದು ಲೆಮೂವೇಲನು ದೃಢಾಭಿಪ್ರಾಯಪಟ್ಟಿದ್ದನು. ಅವನು ಬರೆದುದು: “ಆಕೆ ಸಂಪಾದಿಸಿರುವ ಪ್ರತಿಫಲವನ್ನು ಆಕೆಗೆ ಕೊಡಿರಿ. ಆಕೆಯ ಕೆಲಸಗಳು ಆಕೆಗೆ ಪ್ರಶಂಸೆಯನ್ನು ತರುತ್ತವೆ.”—ಜ್ಞಾನೋಕ್ತಿ 31:31, NIV.
ಆದರೂ, ಲೆಮೂವೇಲನು ಆ ಅಭಿಪ್ರಾಯಗಳನ್ನು ದಾಖಲೆಮಾಡಿದಾಗ, ಅವು ಕೇವಲ ಮಾನವ ಯೋಚನೆಗಳ ಪ್ರತಿಬಿಂಬವಾಗಿರಲಿಲ್ಲ. ಅವು ದೇವರ ವಾಕ್ಯವಾಗಿರುವ ಬೈಬಲಿನಲ್ಲಿ ದಾಖಲಿಸಲ್ಪಟ್ಟಿವೆ. “ಪ್ರತಿಯೊಂದು ಶಾಸ್ತ್ರವು ದೇವರಿಂದ ಪ್ರೇರಿತವಾಗಿದೆ.” (2 ತಿಮೊಥೆಯ 3:16, NW) ಆ ಮಾತುಗಳನ್ನು ದೇವರು ನಮ್ಮ ಉಪದೇಶಕ್ಕಾಗಿ ಪ್ರೇರಿಸಿರುವುದರಿಂದ, ಅವು ಸ್ತ್ರೀಯರ ಕುರಿತು ಸರ್ವಶಕ್ತನಾದ ದೇವರ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ.
ಅಲ್ಲದೆ, ಗಂಡಂದಿರು ಹೆಂಡತಿಯರಿಗೆ “ಮಾನವನ್ನು ಸಲ್ಲಿಸ”ಬೇಕೆಂದು ದೇವರ ಪ್ರೇರಿತ ವಾಕ್ಯವು ಹೇಳುತ್ತದೆ. (1 ಪೇತ್ರ 3:7) ಮತ್ತು ಎಫೆಸ 5:33ರಲ್ಲಿ ಗಂಡನಿಗೆ ಹೇಳಲಾಗಿರುವುದು: “ನಿಮ್ಮಲ್ಲಿ ಪ್ರತಿ ಪುರುಷನು ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಬೇಕು.” ನಿಜವಾಗಿಯೂ, ಎಫೆಸ 5:25 ಹೇಳುವುದು: “ಪುರುಷರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರವೇ ನಿಮ್ಮ ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ. ಆತನು ಅದನ್ನು ಪ್ರತಿಷ್ಠೆಪಡಿಸುವದಕ್ಕಾಗಿ ತನ್ನನ್ನು ಒಪ್ಪಿಸಿಕೊಟ್ಟನು.” ಹೌದು, ಕ್ರಿಸ್ತನು ತನ್ನ ಹಿಂಬಾಲಕರ ಕಡೆಗೆ ಎಂತಹ ಪ್ರೀತಿಯನ್ನು ತೋರಿಸಿದನೆಂದರೆ, ಅವನು ಅವರಿಗಾಗಿ ಸಾಯಲು ಸಿದ್ಧನಾಗಿದ್ದನು. ಗಂಡಂದಿರಿಗಾಗಿ ಅವನು ಎಂತಹ ಒಂದು ಉತ್ತಮವಾದ, ನಿಸ್ವಾರ್ಥಭಾವದ ಮಾದರಿಯನ್ನಿಟ್ಟನು! ಮತ್ತು ಯೇಸು ಕಲಿಸಿ ಜೀವಿಸಿದ ಮಟ್ಟಗಳು, ದೇವರ ಮಟ್ಟಗಳನ್ನು ಪ್ರತಿಬಿಂಬಿಸಿದವು. ನಮ್ಮ ಪ್ರಯೋಜನಕ್ಕಾಗಿ ಇವು ಬೈಬಲಿನಲ್ಲಿ ದಾಖಲೆಯಾಗಿವೆ.
ಆದರೂ, ಅನೇಕ ಕ್ಷೇತ್ರಗಳಲ್ಲಿ ಅವರು ಶ್ರಮಪಟ್ಟು ಕೆಲಸವನ್ನು ಮಾಡಿದರೂ, ಅನೇಕ ಸ್ತ್ರೀಯರಿಗೆ ಅವರು ಮಾಡುವ ಕೆಲಸಗಳಿಗೆ ಪ್ರಶಂಸೆ ದೊರೆಯುವುದು ವಿರಳ. ಹಾಗಿದ್ದರೂ ಅವರು ಈಗಲೂ ಜೀವನದಲ್ಲಿನ ತಮ್ಮ ಸ್ಥಿತಿಯನ್ನು ಹೇಗೆ ಉತ್ತಮಗೊಳಿಸಿಕೊಳ್ಳಬಲ್ಲರು? ಮತ್ತು, ಅವರ ಕಡೆಗಿನ ಮನೋಭಾವಗಳು ಬದಲಾಗುವ ಯಾವ ಸಂದರ್ಭವಾದರೂ ಇದೆಯೆ? ಸ್ತ್ರೀಯರಿಗಾಗಿರುವ ಭಾವೀ ಪ್ರತೀಕ್ಷೆಗಳೇನು?
[ಪುಟ 10,11ರಲ್ಲಿರುವಚೌಕ]
ಸ್ತ್ರೀಯು ತನ್ನ ಸ್ಥಿತಿಯನ್ನು ಉತ್ತಮಗೊಳಿಸಬಲ್ಲ ಮೂರು ವಿಧಗಳು
ವಿದ್ಯಾಭ್ಯಾಸ. ಲೋಕದಲ್ಲಿ ಸುಮಾರು 60 ಕೋಟಿ ಅನಕ್ಷರಸ್ಥ ಸ್ತ್ರೀಯರಿದ್ದಾರೆ. ಅನೇಕರಿಗೆ ಶಾಲೆಗೆ ಹೋಗುವ ಸಂದರ್ಭವೇ ಇದ್ದಿರಲಿಲ್ಲ. ನಿಮಗೂ ಸ್ವಲ್ಪವೇ ವಿದ್ಯೆ ಇರಬಹುದಾದರೂ, ನಿಮಗೆ ನೀವೇ ಕಲಿಸಿಕೊಳ್ಳಲು ಸಾಧ್ಯವಿಲ್ಲವೆಂದು ಇದರ ಅರ್ಥವಲ್ಲ. ಅದು ಸುಲಭವಾಗಿರುವುದಿಲ್ಲವಾದರೂ, ಅನೇಕ ಮಂದಿ ಸ್ತ್ರೀಯರು ಸಾಫಲ್ಯ ಪಡೆದಿದ್ದಾರೆ. ಸ್ತ್ರೀಯರು ಮತ್ತು ಸಾಕ್ಷರತೆ (ಇಂಗ್ಲಿಷ್) ಎಂಬ ಪುಸ್ತಕವು ವಿವರಿಸುವುದು: “ಸಾಕ್ಷರ ಕೌಶಲಗಳನ್ನು ವಯಸ್ಕರು ಪಡೆದುಕೊಳ್ಳುವಂತೆ ಪ್ರಚೋದಿಸುವುದರಲ್ಲಿ ಧಾರ್ಮಿಕ ಕಾರಣಗಳು ಪ್ರಮುಖ ಪಾತ್ರವನ್ನು ವಹಿಸಸಾಧ್ಯವಿದೆ.” ನೀವಾಗಿಯೇ ಬೈಬಲನ್ನು ಓದಲು ಸಮರ್ಥರಾಗುವುದು, ಓದಲು ಕಲಿತುಕೊಳ್ಳುವುದರ ಒಂದು ಉತ್ತಮ ಪ್ರತಿಫಲವಾಗಿದೆ. ಆದರೆ ಅದರಲ್ಲಿ ಅನೇಕ ಬೇರೆ ಪ್ರಯೋಜನಗಳೂ ಇವೆ.
ಅಕ್ಷರಸ್ಥ ತಾಯಿಗೆ ಹೆಚ್ಚು ಆರ್ಥಿಕ ಸಂದರ್ಭಗಳು ದೊರೆಯುವುದು ಮಾತ್ರವಲ್ಲ, ಆಕೆಗೆ ಒಳ್ಳೆಯ ಆರೋಗ್ಯ ಪದ್ಧತಿಗಳನ್ನೂ ಕಲಿಯಲಿಕ್ಕಾಗುತ್ತದೆ. ಭಾರತದ ಕೇರಳ ರಾಜ್ಯವು, ಸಾಕ್ಷರತೆಯ ಪ್ರಯೋಜನಗಳನ್ನು ನಾಟಕೀಯವಾಗಿ ಚಿತ್ರಿಸುತ್ತದೆ. ಆದಾಯದ ಸಂಬಂಧದಲ್ಲಿ ಈ ಪ್ರದೇಶವು ಸರಾಸರಿಗಿಂತ ಕಡಮೆ ಮಟ್ಟದಲ್ಲಿರುವುದಾದರೂ, ಅದರ ಸ್ತ್ರೀಯರಲ್ಲಿ 87 ಪ್ರತಿಶತ ಮಂದಿ ಅಕ್ಷರಸ್ಥರು. ಆಸಕ್ತಿಕರವಾಗಿ, ಅದೇ ರಾಜ್ಯದಲ್ಲಿ ಶಿಶುಮರಣವು ಭಾರತದ ಉಳಿದ ಭಾಗಗಳಲ್ಲಿರುವುದಕ್ಕಿಂತಲೂ ಐದು ಪಾಲು ಕಡಮೆಯಾಗಿದೆ; ಸರಾಸರಿಯಾಗಿ, ಸ್ತ್ರೀಯರು 15 ವರುಷ ಹೆಚ್ಚು ಜೀವಿಸುತ್ತಾರೆ; ಮತ್ತು ಎಲ್ಲ ಹೆಣ್ಣು ಮಕ್ಕಳು ಶಾಲೆಗೆ ಹೋಗುತ್ತಾರೆ.
ಸ್ವಾಭಾವಿಕವಾಗಿ, ಅಕ್ಷರಸ್ಥ ತಾಯಿಯು ತನ್ನ ಮಕ್ಕಳಲ್ಲಿ ಕಲಿಯುವ ಪ್ರಕ್ರಿಯೆಯನ್ನು—ಸುಲಭ ಸಾಹಸವಲ್ಲ—ಪ್ರಚೋದಿಸುತ್ತಾಳೆ. ಹೆಣ್ಣುಮಕ್ಕಳ ವಿದ್ಯಾಭ್ಯಾಸವು ಅತ್ಯುತ್ತಮ ಬಂಡವಾಳವಾಗಿದೆ. ಕುಟುಂಬ ಆರೋಗ್ಯವನ್ನು ಮತ್ತು ಸ್ತ್ರೀಯರ ಸ್ವಂತ ಜೀವಿತಗಳನ್ನು ಉತ್ತಮಗೊಳಿಸಲು ಅದಕ್ಕಿರುವಷ್ಟು ಶಕ್ತಿ ಇನ್ನಾವುದಕ್ಕೂ ಇಲ್ಲವೆಂದು, ವಿಶ್ವ ಸಂಸ್ಥೆಯ ಮಕ್ಕಳ ನಿಧಿ (ಯೂನಿಸೆಫ್)ಯ ಪ್ರಕಾಶನವಾದ 1991ರ ಜಗತ್ತಿನ ಮಕ್ಕಳ ಸ್ಥಿತಿಗತಿ (ಇಂಗ್ಲಿಷ್)ಯು ಹೇಳುತ್ತದೆ. ಓದುವ ಮತ್ತು ಬರೆಯುವ ಕೌಶಲಗಳು, ನೀವು ಹೆಚ್ಚು ಉತ್ತಮವಾದ ತಾಯಿಯೂ ಒದಗಿಸುವವರೂ ಆಗುವಂತೆ ಸಹಾಯಮಾಡುವುದು ನಿಸ್ಸಂದೇಹ.a
ಆರೋಗ್ಯ. ಒಬ್ಬ ತಾಯಿಯೋಪಾದಿ, ವಿಶೇಷವಾಗಿ ನೀವು ಗರ್ಭಿಣಿಯಾಗಿರುವಲ್ಲಿ ಇಲ್ಲವೆ ಮೊಲೆಯುಣಿಸುತ್ತಿರುವಲ್ಲಿ, ನಿಮ್ಮನ್ನು ನೀವು ಪರಾಮರಿಸಿಕೊಳ್ಳಬೇಕು. ನಿಮ್ಮ ಆಹಾರ ಕ್ರಮವನ್ನು ಉತ್ತಮಗೊಳಿಸಬಲ್ಲಿರೊ? ವೈದ್ಯರಿಗನುಸಾರ, ಆಫ್ರಿಕದಲ್ಲಿ ಹಾಗೂ ದಕ್ಷಿಣ ಮತ್ತು ಪಶ್ಚಿಮ ಏಷ್ಯದಲ್ಲಿರುವ ಗರ್ಭಿಣಿ ಸ್ತ್ರೀಯರಲ್ಲಿ ಮೂರರಲ್ಲಿ ಎರಡಂಶ ಸ್ತ್ರೀಯರು ರಕ್ತಹೀನರಾಗಿದ್ದಾರೆ. ರಕ್ತಹೀನತೆಯು ನಿಮ್ಮ ಶಕ್ತಿಯನ್ನು ಕ್ಷೀಣಿಸುವುದಲ್ಲದೆ, ಶಿಶುಜನನದೊಂದಿಗೆ ಬರುವ ಅಪಾಯಗಳನ್ನು ಹೆಚ್ಚಿಸುತ್ತದೆ ಮತ್ತು ಮಲೇರಿಯ ಸೋಂಕನ್ನು ಹೆಚ್ಚು ಸಂಭವನೀಯವಾಗಿ ಮಾಡುತ್ತದೆ. ಮಾಂಸ ಅಥವಾ ಮೀನು ವಿರಳವಾಗಿರಬಹುದು ಅಥವಾ ದುಬಾರಿಯಾಗಿರಬಹುದಾದರೂ, ಮೊಟ್ಟೆಗಳು ಮತ್ತು ಹೆಚ್ಚು ಕಬ್ಬಿಣ ಸ್ವತವಿರುವ ಫಲಗಳು ಅಥವಾ ತರಕಾರಿಗಳು ದೊರೆಯಬಹುದು. ಪೋಷಕವಾದ ಆಹಾರಗಳನ್ನು ತಿನ್ನುವುದನ್ನು ಮೂಢನಂಬಿಕೆಯು ತಡೆಯುವಂತೆ ಬಿಡಬೇಡಿರಿ ಮತ್ತು ಕುಟುಂಬದ ಆಹಾರದಲ್ಲಿ ನಿಮ್ಮ ಪಾಲನ್ನು ತೆಗೆದುಕೊಳ್ಳುವುದನ್ನು ಸ್ಥಳಿಕ ಪದ್ಧತಿಗಳು ಕಸಿದುಕೊಳ್ಳುವಂತೆ ಬಿಡಬೇಡಿರಿ.b
ಮೊಲೆಯುಣಿಸುವಿಕೆ ನಿಮಗೂ ಮಗುವಿಗೂ ಪ್ರಯೋಜನಕರ. ಮೊಲೆಹಾಲು ಅಗ್ಗ, ಹೆಚ್ಚು ಆರೋಗ್ಯಕರ ಮತ್ತು ಇನ್ನಾವುದೇ ಬದಲಿಗಿಂತ ಹೆಚ್ಚು ಪುಷ್ಟಿಕಾರಕ. ಮಕ್ಕಳ ಜೀವಿತದ ಮೊದಲ ನಾಲ್ಕರಿಂದ ಹಿಡಿದು ಆರು ತಿಂಗಳುಗಳ ವರೆಗೆ ತಾಯಂದಿರು ಶಿಶುಗಳಿಗೆ ಮೊಲೆಯುಣಿಸುವಲ್ಲಿ, ಪ್ರತಿ ವರ್ಷ ಹತ್ತು ಲಕ್ಷ ಶಿಶುಮರಣಗಳನ್ನು ತಪ್ಪಿಸಸಾಧ್ಯವಿದೆಯೆಂದು ಯೂನಿಸೆಫ್ ಲೆಕ್ಕಹಾಕುತ್ತದೆ. ಆದರೆ ಮೊಲೆ ಹಾಲಿನ ಮೂಲಕ ರವಾನಿಸಬಹುದಾದ ಸೋಂಕುರೋಗ ತಾಯಿಗಿರುವಲ್ಲಿ, ಸುರಕ್ಷಿತವಾದ ಬದಲಿ ಆಹಾರವನ್ನು ಉಪಯೋಗಿಸಬೇಕು.
ನೀವು ಮನೆಯೊಳಗೆ ತೆರೆದ ಒಲೆಯಲ್ಲಿ ಅಡುಗೆ ಮಾಡುವುದಾದರೆ ಸಾಕಷ್ಟು ವಾಯುಸಂಚಾರವಿರುವಂತೆ ನಿಶ್ಚಯಮಾಡಿಕೊಳ್ಳಿರಿ. ಸ್ತ್ರೀಯರು ಮತ್ತು ಆರೋಗ್ಯ ಎಂಬ ಪುಸ್ತಕವು ಎಚ್ಚರಿಸುವುದು: “ಅಡುಗೆ ಮಾಡುವಾಗ ಹೊಗೆ ಮತ್ತು ವಿಷ ಅನಿಲಗಳಿಗೆ ಒಡ್ಡಲ್ಪಡುವುದು, ಪ್ರಾಯಶಃ ಇಂದು ಜ್ಞಾತವಾಗಿರುವ ಅತಿ ಗುರುತರವಾದ ಆರೋಗ್ಯಾಪಾಯವಾಗಿದೆ.”
ಒತ್ತಡಗಳು ಎಷ್ಟೇ ಇರಲಿ, ಹೊಗೆಸೊಪ್ಪನ್ನು ಸೇದಬೇಡಿ. ವಿಕಾಸಶೀಲ ದೇಶಗಳಲ್ಲಿ ವ್ಯಾಪಕವಾದ ಸಿಗರೇಟು ಜಾಹೀರಾತು, ಸ್ತ್ರೀಯರನ್ನು ಗುರಿಹಲಗೆಗಳನ್ನಾಗಿ ಮಾಡಿ, ಧೂಮಪಾನವು ಸೂಕ್ಷ್ಮಾಭಿರುಚಿಯ ಸಂಗತಿಯೆಂದು ನಂಬಿಸಲು ಪ್ರಯತ್ನಿಸುತ್ತದೆ. ಆದರೆ ಇದು ನಿಶ್ಚಯವಾಗಿಯೂ ಸತ್ಯವಲ್ಲ. ಧೂಮಪಾನ ನಿಮ್ಮ ಮಕ್ಕಳಿಗೆ ಹಾನಿಮಾಡಿ ನಿಮ್ಮನ್ನು ಕೊಲ್ಲಬಲ್ಲದು. ಅಂತಿಮವಾಗಿ ಧೂಮಪಾನಿಗಳಲ್ಲಿ ಕಾಲುಭಾಗ, ತಮ್ಮ ಹೊಗೆಸೊಪ್ಪಿನ ಚಟದ ಕಾರಣ ಕೊಲ್ಲಲ್ಪಡುತ್ತಾರೆಂದು ಲೆಕ್ಕಹಾಕಲಾಗುತ್ತದೆ. ಇದಲ್ಲದೆ, ಪ್ರಥಮವಾಗಿ ಸಿಗರೇಟು ಸೇದುವವನು ಹೊಗೆಸೊಪ್ಪಿನ ವ್ಯಸನಿಯಾಗುವ ಪ್ರಮಾಣಗಳು ಅತಿ ಹೆಚ್ಚಾಗಿವೆಯೆಂದು ಪರಿಣತರು ಎಚ್ಚರಿಕೆ ಕೊಡುತ್ತಾರೆ.
ಆರೋಗ್ಯ ಸೂತ್ರಗಳು. ಆರೋಗ್ಯದ ಸಂಬಂಧದಲ್ಲಿ ನಿಮ್ಮ ಮಾದರಿ ಮತ್ತು ಸಲಹೆಯು ನಿಮ್ಮ ಕುಟುಂಬದ ಆರೋಗ್ಯಕ್ಕೆ ನಿರ್ಣಾಯಕವಾಗಿದೆ. ಉತ್ತಮ ಆರೋಗ್ಯಕ್ಕಾಗಿರುವ ಈ ಕೆಳಗಿನ ಮೂಲ ಹೆಜ್ಜೆಗಳನ್ನು, ಜೀವನಕ್ಕಾಗಿ ವಾಸ್ತವಾಂಶಗಳು (ಇಂಗ್ಲಿಷ್) ಎಂಬ ಪುಸ್ತಕವು ಕೊಡುತ್ತದೆ:
• ಮಲ ಸಂಪರ್ಕ ಮಾಡಿದ ಮೇಲೆ ಮತ್ತು ಆಹಾರವನ್ನು ಮುಟ್ಟುವ ಮೊದಲು ಸಾಬೂನು ಮತ್ತು ನೀರಿನಿಂದ ನಿಮ್ಮ ಕೈಗಳನ್ನು ತೊಳೆಯಿರಿ. ನಿಮ್ಮ ಮಕ್ಕಳು ತಿನ್ನುವ ಮೊದಲು ಕೈತೊಳೆಯುತ್ತಾರೆಂಬುದನ್ನು ಖಚಿತಪಡಿಸಿಕೊಳ್ಳಿ.
• ಪಾಯಿಖಾನೆಯನ್ನು ಉಪಯೋಗಿಸಿ, ಅದನ್ನು ಶುದ್ಧವಾಗಿಡಿರಿ ಮತ್ತು ಮುಚ್ಚಿಡಿರಿ. ಇದು ಸಾಧ್ಯವಿಲ್ಲದಿರುವಾಗ ಮನೆಯಿಂದ ಸಾಧ್ಯವಿರುವಷ್ಟು ದೂರ ಮಲವಿಸರ್ಜನೆ ಮಾಡಿ, ಆ ಕೂಡಲೇ ಮಲವನ್ನು ಹುಗಿದು ಬಿಡಿರಿ.—ಧರ್ಮೋಪದೇಶಕಾಂಡ 23:12, 13ನ್ನು ಹೋಲಿಸಿರಿ.
• ನಿಮ್ಮ ಕುಟುಂಬವು ಶುದ್ಧ ನೀರನ್ನು ಉಪಯೋಗಿಸುವಂತೆ ಶ್ರಮಿಸಿರಿ. ಈ ಉದ್ದೇಶದಿಂದ, ಬಾವಿಗಳನ್ನು ಮುಚ್ಚಿಟ್ಟು, ನೀರನ್ನು ಒಯ್ಯಲು ಸ್ವಚ್ಛ ಪಾತ್ರೆಗಳನ್ನು ಬಳಸಿರಿ.
• ಸುರಕ್ಷಿತವಾದ ಕುಡಿಯುವ ನೀರು ದೊರೆಯದಿರುವಲ್ಲಿ, ನೀರನ್ನು ಕುದಿಸಿ ಅದನ್ನು ಕುಡಿಯುವ ಮೊದಲು ಅದು ತಣ್ಣಗಾಗಲು ಬಿಡಿರಿ. ಕುದಿಸಿಲ್ಲದ ನೀರು ಶುದ್ಧವಾಗಿ ಕಾಣಬಹುದಾದರೂ, ಅದು ಇನ್ನೂ ಸೋಂಕಿತವಾಗಿರಸಾಧ್ಯವಿದೆ.
• ಬೇಯಿಸದಿರುವ ಆಹಾರವು ಸೋಂಕನ್ನು ರವಾನಿಸುವುದು ಹೆಚ್ಚು ಸಂಭವನೀಯವೆಂಬುದು ನೆನಪಿರಲಿ. ಹಸಿಯಾಗಿ ತಿನ್ನಲ್ಪಡುವ ಆಹಾರಗಳನ್ನು ತಿನ್ನುವ ಮೊದಲು ತೊಳೆಯಬೇಕು ಮತ್ತು ಅವುಗಳನ್ನು ಆದಷ್ಟು ಬೇಗನೆ ತಿನ್ನಬೇಕು. ಇತರ ಆಹಾರಗಳು, ವಿಶೇಷವಾಗಿ ಮಾಂಸ ಮತ್ತು ಕೋಳಿಮಾಂಸ, ಚೆನ್ನಾಗಿ ಬೇಯಿಸಲ್ಪಡಬೇಕು.
• ಕೀಟಗಳು ಇಲ್ಲವೆ ಪ್ರಾಣಿಗಳು, ಆಹಾರಕ್ಕೆ ಸೋಂಕುಹತ್ತಿಸದಂತೆ, ಅದನ್ನು ಶುದ್ಧವಾಗಿಡಿರಿ ಮತ್ತು ಮುಚ್ಚಿಡಿರಿ.
• ಮನೆಯ ಕಚಡವನ್ನು ಸುಡಿರಿ ಇಲ್ಲವೆ ಹೂಳಿಡಿರಿ.c
[ಅಧ್ಯಯನ ಪ್ರಶ್ನೆಗಳು]
a ಯೆಹೋವನ ಸಾಕ್ಷಿಗಳು ತಮ್ಮ ವ್ಯಾಪಕವಾದ ಬೈಬಲ್ ವಿದ್ಯಾಭ್ಯಾಸ ಕಾರ್ಯಕ್ರಮದ ಭಾಗವಾಗಿ, ಉಚಿತವಾದ ಸಾಕ್ಷರತೆಯ ಕ್ಲಾಸುಗಳನ್ನು ಸಂಘಟಿಸುತ್ತಾರೆ.
b ಕೆಲವು ದೇಶಗಳಲ್ಲಿ, ಗರ್ಭಧಾರಣೆಯ ಸಮಯದಲ್ಲಿ, ಅಜಾತ ಮಗುವಿಗೆ ಹಾನಿಮಾಡುವ ಭಯದಿಂದ, ಸ್ತ್ರೀಯರು ಮೀನು, ಮೊಟ್ಟೆ ಮತ್ತು ಕೋಳಿಮಾಂಸವನ್ನು ತಿನ್ನಬಾರದೆಂದು ಮೂಢನಂಬಿಕೆಯು ಹೇಳುತ್ತದೆ. ಕೆಲವು ಸಲ, ಪುರುಷರು ಮತ್ತು ಹುಡುಗರು ಊಟಮಾಡಿ ಮುಗಿಸಿದ ಬಳಿಕ ಉಳಿದುದನ್ನು ಸ್ತ್ರೀಯು ತಿನ್ನಬೇಕೆಂದು ಪದ್ಧತಿಯು ವಿಧಿಸುತ್ತದೆ.
c ಹೆಚ್ಚಿನ ವಿವರಗಳಿಗಾಗಿ ಏಪ್ರಿಲ್ 8, 1995ರ ಎಚ್ಚರ! ಪತ್ರಿಕೆಯ 6-11ನೆಯ ಪುಟಗಳನ್ನು ನೋಡಿ.
[ಪುಟ 8 ರಲ್ಲಿರುವ ಚಿತ್ರ]
ಪಾಶ್ಚಾತ್ಯ ಲೋಕದಲ್ಲಿರುವ ಅನೇಕ ಸ್ತ್ರೀಯರು ಆಫೀಸುಗಳಲ್ಲಿ ಕೆಲಸಮಾಡುತ್ತಾರೆ
[ಪುಟ 9 ರಲ್ಲಿರುವ ಚಿತ್ರ]
ಅನೇಕ ಸ್ತ್ರೀಯರು ಅಸಹ್ಯಕರವಾದ ಪರಿಸ್ಥಿತಿಗಳಲ್ಲಿ ಕೆಲಸಮಾಡಬೇಕಾಗುತ್ತದೆ
[ಕೃಪೆ]
Godo-Foto
[ಪುಟ 9 ರಲ್ಲಿರುವ ಚಿತ್ರ]
ಮನೆಯಲ್ಲಿ ತಾಯಂದಿರು ಶಿಕ್ಷಕಿಯರಾಗಿದ್ದಾರೆ