ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lr ಅಧ್ಯಾ. 10 ಪು. 57-61
  • ದೆವ್ವಗಳಿಗಿಂತ ಯೇಸು ಶಕ್ತಿಶಾಲಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೆವ್ವಗಳಿಗಿಂತ ಯೇಸು ಶಕ್ತಿಶಾಲಿ
  • ಮಹಾ ಬೋಧಕನಿಂದ ಕಲಿಯೋಣ
  • ಅನುರೂಪ ಮಾಹಿತಿ
  • ದೇವದೂತರು ಯಾರು?
    ಬೈಬಲ್‌ ನಮಗೆ ಏನು ಕಲಿಸುತ್ತದೆ?
  • ದೇವದೂತರು ಅಂದರೆ ಯಾರು?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ಯುವಜನರೇ—ಯಾರ ಬೋಧನೆಗೆ ನೀವು ಕಿವಿಗೊಡುತ್ತೀರಿ?
    ಕಾವಲಿನಬುರುಜು—1994
  • ದೆವ್ವಗಳು ನಿಜವಾಗಿಯೂ ಇವೆಯೊ?
    ಎಚ್ಚರ!—1998
ಇನ್ನಷ್ಟು
ಮಹಾ ಬೋಧಕನಿಂದ ಕಲಿಯೋಣ
lr ಅಧ್ಯಾ. 10 ಪು. 57-61

ಅಧ್ಯಾಯ 10

ದೆವ್ವಗಳಿಗಿಂತ ಯೇಸು ಶಕ್ತಿಶಾಲಿ

ದೇವದೂತನಾಗಿ ಇದ್ದವನು ಹೇಗೆ ಸೈತಾನನಾದನು ಅಂತ ನಾವು ಕಲಿತೆವಲ್ವಾ. ನಿನಗೆ ಅದು ನೆನಪಿದೆಯಾ?— ಜನರು ದೇವರನ್ನಲ್ಲ ತನ್ನನ್ನು ಆರಾಧಿಸಬೇಕು ಎಂಬ ದುರಾಸೆ ಆ ದೇವದೂತನ ಮನಸ್ಸಿನಲ್ಲಿ ತುಂಬಿತ್ತು. ಈ ಕಾರಣ ಅವನು ದೇವರಿಗೆ ವಿರೋಧವಾಗಿ ನಿಂತನು. ಉಳಿದ ದೇವದೂತರ ಬಗ್ಗೆ ಏನು? ಅವರಲ್ಲಿ ಯಾರಾದರು ಸೈತಾನನ ಹಿಂದೆ ಹೋದರಾ?— ಹೌದು. ಕೆಲವು ದೂತರು ಸೈತಾನನ ಹಿಂಬಾಲಕರಾದರು. ಬೈಬಲ್‌ ಅವರನ್ನು ಸೈತಾನನ ‘ದೂತರು’ ಅಥವಾ ದೆವ್ವಗಳು ಎಂದು ಕರೆಯುತ್ತದೆ.—ಪ್ರಕಟನೆ 12:9.

ಈ ಕೆಟ್ಟ ದೂತರು, ಅಂದರೆ ದೆವ್ವಗಳು ದೇವರಿದ್ದಾನೆಂದು ನಂಬುತ್ತವಾ?— ‘ದೇವರಿದ್ದಾನೆಂದು ದೆವ್ವಗಳು ನಂಬುತ್ತವೆ’ ಎಂದು ಬೈಬಲ್‌ ಹೇಳುತ್ತದೆ. (ಯಾಕೋಬ 2:19) ಆದರೆ ಈಗ ಆ ದೆವ್ವಗಳು ಭಯದಿಂದ ನಡುಗುತ್ತಿವೆ. ಏಕೆಂದರೆ ತಾವು ಮಾಡಿರುವ ಎಲ್ಲಾ ಕೆಟ್ಟ ಕೆಲಸಗಳಿಗಾಗಿ ದೇವರು ಅತಿ ಬೇಗನೆ ಶಿಕ್ಷೆಕೊಡಲಿದ್ದಾನೆ ಎಂದು ಅವುಗಳಿಗೆ ತಿಳಿದಿದೆ. ಆ ದೆವ್ವಗಳು ಏನೆಲ್ಲಾ ಕೆಟ್ಟ ಕೆಲಸಗಳು ಮಾಡಿವೆ ಗೊತ್ತಾ?—

ದೇವದೂತರು ಎಲ್ಲಿ ವಾಸಿಸುತ್ತಾರೆ? ಸ್ವರ್ಗದಲ್ಲಿ ಅಲ್ವಾ. ಆದರೆ ಆ ಕೆಟ್ಟ ದೇವದೂತರು ಸ್ವರ್ಗವನ್ನು ಬಿಟ್ಟು ಮನುಷ್ಯರ ರೂಪ ತಕ್ಕೊಂಡು ಭೂಮಿಯಲ್ಲಿ ಜೀವಿಸಲು ಬಂದರು. ಏಕೆಂದರೆ ಭೂಮಿಯಲ್ಲಿರುವ ಸುಂದರ ಸ್ತ್ರೀಯರೊಂದಿಗೆ ಲೈಂಗಿಕ ಸಂಬಂಧವನ್ನು ಇಟ್ಟಕೊಳ್ಳಲು ಅವರು ಬಯಸಿದರು. (ಆದಿಕಾಂಡ 6:1, 2; ಯೂದ 6) ಲೈಂಗಿಕತೆ ಅಥವಾ ಸೆಕ್ಸ್‌ ಬಗ್ಗೆ ನಿನಗೆ ಗೊತ್ತಿದೆಯಾ?—

ಲೈಂಗಿಕ ಸಂಬಂಧ ಅಂದರೆ ಗಂಡು ಹೆಣ್ಣು ವಿಶೇಷ ರೀತಿಯಲ್ಲಿ ಒಂದುಗೂಡುವುದಾಗಿದೆ. ಈ ರೀತಿ ಒಂದುಗೂಡಿದಾಗ ಹೆಣ್ಣಿನ ಗರ್ಭದಲ್ಲಿ ಒಂದು ಮಗು ಬೆಳೆಯುತ್ತದೆ. ಆದರೆ ದೇವದೂತರು ಲೈಂಗಿಕ ಸಂಬಂಧ ಇಟ್ಟುಕೊಳ್ಳುವುದು ತಪ್ಪು. ಏಕೆಂದರೆ ಮದುವೆಯಾದ ಗಂಡು ಮತ್ತು ಹೆಣ್ಣು ಮಾತ್ರ ಲೈಂಗಿಕ ಸಂಬಂಧದಲ್ಲಿ ಒಳಗೂಡಬೇಕು ಅನ್ನೋದು ದೇವರ ಏರ್ಪಾಡಾಗಿದೆ. ಹೀಗೆ ಅವರಿಗೆ ಮಗು ಹುಟ್ಟಿದರೆ ತಂದೆತಾಯಿಯಾಗಿ ಅವರಿಬ್ಬರು ಆ ಮಗುವಿನ ಸಂರಕ್ಷಣೆ ಮಾಡಬಹುದು.

ಕೆಟ್ಟ ದೇವದೂತರು ಸ್ವರ್ಗದಿಂದ ಭೂಮಿಯ ಕಡೆಗೆ ಸುಂದರ ಸ್ತ್ರೀಯರನ್ನು ನೋಡುತ್ತಿದ್ದಾರೆ

ಈ ದೇವದೂತರು ಯಾವ ಕೆಟ್ಟ ಕೆಲಸ ಮಾಡಿದರು?

ಮನುಷ್ಯರ ರೂಪ ಧರಿಸಿ ಭೂಮಿಗೆ ಬಂದ ದೇವದೂತರು ಸ್ತ್ರೀಯರೊಂದಿಗೆ ಲೈಂಗಿಕ ಸಂಬಂಧ ಇಟ್ಟುಕೊಂಡಾಗ ಅವರಿಗೆ ಮಕ್ಕಳು ಹುಟ್ಟಿದರು. ಈ ಮಕ್ಕಳು ಬೆಳೆದಾಗ ಅವರು ಸಾಮಾನ್ಯ ಮನುಷ್ಯರಂತಿರಲಿಲ್ಲ. ಅವರು ತುಂಬಾ ಎತ್ತರವಾಗಿದ್ದರು. ಅಸಾಧಾರಣ ಬಲ ಅವರಿಗಿತ್ತು. ಅವರನ್ನು ಬೈಬಲ್‌ ನೆಫೀಲಿಯರು ಎಂದು ಕರೆಯುತ್ತದೆ. ಅವರು ಬಹಳ ಕ್ರೂರವಾಗಿ ಜನರನ್ನು ಹಿಂಸಿಸುತ್ತಿದ್ದರು. ಆದ್ದರಿಂದ, ದೇವರು ಈ ನೆಫೀಲಿಯರನ್ನು ಮತ್ತು ಎಲ್ಲಾ ಕೆಟ್ಟ ಜನರನ್ನು ನಾಶಮಾಡಲು ಒಂದು ಮಹಾ ಜಲಪ್ರಳಯವನ್ನು ಬರಮಾಡಿದನು. ಜಲಪ್ರಳಯದಲ್ಲಿ ಎಲ್ಲಾ ಜನರು ನಾಶವಾದರಾ? ಇಲ್ಲ. ಒಳ್ಳೆಯ ಜನರ ರಕ್ಷಣೆಗಾಗಿ ಒಂದು ದೊಡ್ಡ ನಾವೆಯನ್ನು (ಹಡಗು) ಕಟ್ಟುವಂತೆ ನೋಹ ಎಂಬ ವ್ಯಕ್ತಿಗೆ ದೇವರು ಅಪ್ಪಣೆ ಕೊಟ್ಟನು. ಆ ಜಲಪ್ರಳಯದ ಸಮಯದಲ್ಲಿ ಏನು ನಡೆಯಿತು ಅಂತ ಜಾಗ್ರತೆಯಿಂದ ಕೇಳಿಸಿಕೊ ಚಿನ್ನಾ. ಇದನ್ನು ನೆನಪಿನಲ್ಲಿಡುವುದು ಪ್ರಾಮುಖ್ಯ ಅಂತ ಮಹಾ ಬೋಧಕನು ಸಹ ಹೇಳಿದನು.—ಆದಿಕಾಂಡ 6:3, 4, 13, 14; ಲೂಕ 17:26, 27.

ಜಲಪ್ರಳಯ ರಭಸದಿಂದ ಬಂತು. ಆಗ ಕೆಟ್ಟ ದೇವದೂತರಿಗೆ ಏನಾಯಿತು ಅಂತ ನಿನಗೆ ಗೊತ್ತಾ?— ಅವರು ತಮ್ಮ ಮಾನವ ದೇಹಗಳನ್ನು ಬಿಟ್ಟು ಸ್ವರ್ಗಕ್ಕೆ ವಾಪಸ್‌ ಹೋದರು. ಆದರೆ ಸ್ವರ್ಗದಲ್ಲಿ ಪುನಃ ಅವರು ದೇವರ ದೂತರಾಗಿ ಇರಲು ಸಾಧ್ಯವಿರಲಿಲ್ಲ. ಅದಕ್ಕೆ ಅವರು ಸೈತಾನನ ದೂತರಾದರು ಅಂದರೆ ದೆವ್ವಗಳಾದರು. ಆದರೆ ಅವರ ಮಕ್ಕಳು, ಅಂದರೆ ನೆಫೀಲಿಯರು ಏನಾದರು?— ಅವರು ಜಲಪ್ರಳಯದಲ್ಲಿ ನೀರುಪಾಲಾಗಿ ಸತ್ತುಹೋದರು. ಅವರೇ ಅಲ್ಲ, ದೇವರಿಗೆ ಅವಿಧೇಯರಾದ ಎಲ್ಲಾ ಜನರು ತಮ್ಮ ಪ್ರಾಣ ಕಳೆದುಕೊಂಡರು.

ಸೈತಾನನ್ನು ಮತ್ತು ಅವನ ದೆವ್ವಗಳನ್ನು ಸ್ವರ್ಗದಿಂದ ಭೂಮಿಗೆ ದೊಬ್ಬಲಾಗಿದೆ

ಭೂಮಿಯಲ್ಲಿ ಮೊದಲಿಗಿಂತಲೂ ಈಗ ಹೆಚ್ಚು ಕಷ್ಟತೊಂದರೆಗಳಿವೆ ಏಕೆ?

ಅಂದಿನಿಂದ ಪುನಃ ಮನುಷ್ಯರ ರೂಪ ಧರಿಸುವಂತೆ ದೆವ್ವಗಳಿಗೆ ದೇವರು ಅನುಮತಿ ಕೊಟ್ಟಿಲ್ಲ. ಈ ದೆವ್ವಗಳು ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ಜನರು ಕೆಟ್ಟ ಕೆಲಸ ಮಾಡಬೇಕು ಅಂತ ಅವು ಪ್ರಯತ್ನಿಸುತ್ತಲೇ ಇವೆ. ಹಿಂದೆಂದಿಗಿಂತಲೂ ಈಗ ಆ ಪ್ರಯತ್ನ ಹೆಚ್ಚಾಗಿದೆ. ಯಾಕೆ ಗೊತ್ತಾ? ಯಾಕೆಂದರೆ ದೆವ್ವಗಳನ್ನು ಈಗ ಸ್ವರ್ಗದಿಂದ ಭೂಮಿಗೆ ದೊಬ್ಬಲಾಗಿದೆ.

ದೆವ್ವಗಳು ಏಕೆ ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ?— ಏಕೆಂದರೆ ಅವು ಆತ್ಮಜೀವಿಗಳಾಗಿವೆ. ದೆವ್ವಗಳು ನಮ್ಮ ಕಣ್ಣಿಗೆ ಕಾಣಿಸದಿದ್ದರೂ ಅವು ಖಂಡಿತ ಇವೆ. ಬೈಬಲ್‌ ಹೇಳುವ ಪ್ರಕಾರ ಸೈತಾನನು ‘ಭೂಮಿಯಲ್ಲಿರುವ ಜನರನ್ನು ತಪ್ಪು ದಾರಿಗೆ ನಡಿಸುತ್ತಾ ಇದ್ದಾನೆ.’ ಈ ಕೆಟ್ಟ ಕೆಲಸದಲ್ಲಿ ದೆವ್ವಗಳ ಕೈವಾಡವೂ ಇದೆ.—ಪ್ರಕಟನೆ 12:9, 12.

ಹಾಗಾದರೆ ದೆವ್ವಗಳು ನಮ್ಮನ್ನು ಸಹ ಮೋಸ ಮಾಡಬುಹುದಾ? ಏನಂತಿಯಾ?— ಹೌದು ನಾವು ಜಾಗ್ರತೆಯಿಂದ ಇಲ್ಲದಿದ್ದರೆ ಅವುಗಳಿಂದ ನಾವೂ ಮೋಸ ಹೋಗಬಹುದು. ದೆವ್ವಗಳು ನಮ್ಮನ್ನು ತಪ್ಪು ದಾರಿಗೆ ಎಳೆದುಕೊಂಡು ಹೋಗುವ ಸಾಧ್ಯತೆ ಇದೆ. ಓ! ಕೇಳುವಾಗಲೇ ಭಯ ಆಗುತ್ತೆ ಅಲ್ವಾ? ಆದರೆ ಹೆದರಬೇಡ ಪುಟ್ಟಾ, ಪಿಶಾಚನ ಬಗ್ಗೆ ಯೇಸು ಏನು ಹೇಳುತ್ತಾನೆ ನೋಡು. ‘ಪಿಶಾಚನಿಗೆ ನನ್ನ ಮೇಲೆ ಹಿಡಿತವಿಲ್ಲ’ ಎಂದು ಹೇಳಿದ್ದಾನೆ. ಹಾಗಾದರೆ ಯೇಸುವಿಗೆ ಪಿಶಾಚನಿಗಿಂತಲೂ ದೆವ್ವಗಳಿಗಿಂತಲೂ ಹೆಚ್ಚು ಶಕ್ತಿ ಇದೆ ಎಂದರ್ಥ ತಾನೆ? ನಾವು ದೇವರಿಗೆ ಆಪ್ತರಾಗಿದ್ದರೆ, ಯೇಸು ನಮ್ಮನ್ನು ಪಿಶಾಚನಿಂದಲೂ ಅವನ ದೆವ್ವಗಳಿಂದಲೂ ತಪ್ಪಿಸಿ ಕಾಪಾಡುವನು.—ಯೋಹಾನ 14:30.

ದೆವ್ವಗಳು ನಮ್ಮಿಂದ ಯಾವೆಲ್ಲ ಕೆಟ್ಟ ಕೆಲಸಗಳನ್ನು ಮಾಡಿಸಲು ಪ್ರಯತ್ನಿಸುತ್ತವೆ ಅಂತ ತಿಳಿದುಕೊಳ್ಳುವುದು ಕೂಡ ಪ್ರಾಮುಖ್ಯ. ದೆವ್ವಗಳು ಭೂಮಿಗೆ ಮನುಷ್ಯ ರೂಪ ಧರಿಸಿ ಬಂದಾಗ ಯಾವ ಕೆಟ್ಟ ಕೆಲಸ ಮಾಡಿದವು ಹೇಳು?— ಸ್ತ್ರೀಯರೊಂದಿಗೆ ಲೈಂಗಿಕ ಸಂಬಂಧ ಇಟ್ಟರು. ದೇವದೂತರು ಹೀಗೆ ಮಾಡುವುದು ತಪ್ಪು ಅಲ್ವಾ. ಸೆಕ್ಸ್‌ ಸಂಬಂಧದ ವಿಷಯದಲ್ಲಿ ದೇವರು ನಿಯಮವನ್ನು ಕೊಟ್ಟಿದ್ದಾನೆ. ಆ ನಿಯಮದ ವಿರುದ್ಧವಾಗಿ ಜನರು ನಡೆದುಕೊಳ್ಳುವಾಗ ದೆವ್ವಗಳಿಗೆ ಖುಷಿಯಾಗುತ್ತದೆ. ಲೈಂಗಿಕ ಸಂಬಂಧ ಎನ್ನುವುದು ಯಾರ ಮಧ್ಯೆ ಮಾತ್ರ ಇರಬೇಕು ಅಂತ ದೇವರು ಹೇಳಿದ್ದಾನೆ?— ಮದುವೆಯಾದ ಗಂಡು ಹೆಣ್ಣಿನ ಮಧ್ಯೆ ಮಾತ್ರ ಇರಬೇಕು.

ಆದರೆ ಇಂದು ಕೆಲವು ಹುಡುಗ-ಹುಡುಗಿಯರು ಸೆಕ್ಸ್‌ನಲ್ಲಿ ಒಳಗೂಡುತ್ತಾರೆ. ಇದು ಸರಿನಾ? ಖಂಡಿತ ಇಲ್ಲ. ಯೆಹೋವನು ಹೆಣ್ಣಿನ ಮತ್ತು ಗಂಡಿನ ಜನನಾಂಗಗಳನ್ನು ಸೃಷ್ಟಿಮಾಡಿದ್ದು ಒಂದು ವಿಶೇಷ ಉದ್ದೇಶಕ್ಕಾಗಿ. ಮದುವೆಯಾದವರು ಲೈಂಗಿಕ ಸಂಬಂಧದಲ್ಲಿ ಒಳಗೂಡಬೇಕು ಎಂಬುದೇ ಆ ಉದ್ದೇಶ. ಇದಕ್ಕೆ ವಿರುದ್ಧವಾಗಿ ಹೋದಾಗ ದೆವ್ವಗಳಿಗೆ ಸಂತೋಷವಾಗುತ್ತದೆ. ಉದಾಹರಣೆಗೆ, ಹುಡುಗ ಹುಡುಗಿ ಒಬ್ಬರು ಇನ್ನೊಬ್ಬರ ಜನನಾಂಗದೊಂದಿಗೆ ಆಟವಾಡುವುದು ದೇವರಿಗೆ ಇಷ್ಟವಿಲ್ಲ. ಆದರೆ ದೆವ್ವಗಳಿಗೆ ಇಷ್ಟವಾಗುತ್ತದೆ. ನಾವು ದೆವ್ವಗಳನ್ನು ಸಂತೋಷಪಡಿಸಲು ಬಯಸುವುದಿಲ್ಲ ತಾನೆ?—

ದೆವ್ವಗಳು ಇಷ್ಟಪಡುವ ಇನ್ನೊಂದು ವಿಷಯ ಇದೆ. ಅದು ಏನು ಅಂತ ನಿನಗೆ ಗೊತ್ತಿದೆಯಾ?— ಹಿಂಸಾಚಾರ. ಹಿಂಸಾಚಾರ ಅಂದರೆ ಬೇರೆಯವರೊಂದಿಗೆ ಕ್ರೂರವಾಗಿ ವರ್ತಿಸುವುದು. ದೆವ್ವಗಳ ಪುತ್ರರಾದ ನೆಫೀಲಿಯರು ವರ್ತಿಸಿದ್ದು ಹೀಗೆ ಅಲ್ವಾ?

ಜನರನ್ನು ಹೆದರಿಸುವುದು ಅಂದರೆ ದೆವ್ವಗಳಿಗೆ ತುಂಬ ಇಷ್ಟ. ಕೆಲವೊಮ್ಮೆ ಅವು ಸತ್ತವರ ಸ್ವರ, ವರ್ತನೆಯನ್ನು ಅನುಕರಿಸುತ್ತಾ ಜನರನ್ನು ಹೆದರಿಸುತ್ತವೆ. ಸತ್ತ ಆ ವ್ಯಕ್ತಿಯೇ ಪ್ರೇತವಾಗಿ ಬಂದು ಇದನ್ನೆಲ್ಲಾ ಮಾಡುತ್ತಿದ್ದಾನೆ ಅಂತ ನಂಬುವ ಹಾಗೆ ಮಾಡುತ್ತವೆ. ಈ ಕಾರಣದಿಂದಲೇ, ಸತ್ತವರು ಭೂತಪ್ರೇತಗಳಾಗಿ ಬದುಕಿರುವ ಜನರೊಂದಿಗೆ ಮಾತಾಡಬಲ್ಲರು ಎಂದು ಅನೇಕರು ನಂಬುತ್ತಾರೆ. ನಿಜವೇನೆಂದರೆ ಇದೆಲ್ಲ ದೆವ್ವಗಳ ಕೆಲಸ.

ಸೈತಾನ ಮತ್ತು ಅವನ ದೆವ್ವಗಳಿಂದ ಮೋಸ ಹೋಗಲು ನಮಗೆ ಇಷ್ಟವಿಲ್ಲ ತಾನೆ? ಹಾಗಾದರೆ ನಾವು ತುಂಬಾ ಎಚ್ಚರವಾಗಿರಬೇಕು. ಏಕೆಂದರೆ, ‘ಸೈತಾನನು ಒಳ್ಳೇ ದೇವದೂತನಂತೆ ತೋರಿಸಿಕೊಳ್ಳಲು ವೇಷ ಹಾಕಿಕೊಳ್ಳುತ್ತಾನೆ ಮತ್ತು ಅವನ ಸೇವಕರು ಸಹ ಹಾಗೆಯೇ ವೇಷ ಹಾಕಿಕೊಳ್ಳುತ್ತಾರೆ’ ಎಂದು ಬೈಬಲ್‌ ನಮ್ಮನ್ನು ಎಚ್ಚರಿಸುತ್ತದೆ. (2 ಕೊರಿಂಥ 11:14, 15) ದೆವ್ವಗಳು ಒಳ್ಳೆಯವರ ತರ ವೇಷ ಹಾಕಿಕೊಂಡರೂ ಅವು ನಿಜವಾಗಿಯೂ ಕೆಟ್ಟವುಗಳೇ. ನಾವು ಸಹ ಅವುಗಳಂತೆ ಕೆಟ್ಟವರಾಗಬೇಕು ಅಂತ ಅವು ತುಂಬಾ ಪ್ರಯತ್ನ ಮಾಡುತ್ತಿವೆ.

ದೆವ್ವಗಳು ಇಷ್ಟಪಡುವ ಹಿಂಸೆ, ತಪ್ಪಾದ ಸೆಕ್ಸ್‌ ಸಂಬಂಧ, ಭೂತಪ್ರೇತ ಇವುಗಳ ಬಗ್ಗೆ ಜನರು ಎಲ್ಲಿಂದ ಕಲಿಯುತ್ತಾರೆ?— ಟಿ.ವಿ. ಕಾರ್ಯಕ್ರಮಗಳು, ಚಲನಚಿತ್ರಗಳು, ಕಂಪ್ಯೂಟರ್‌ ಮತ್ತು ವಿಡಿಯೋ ಗೇಮ್ಸ್‌, ಇಂಟರ್‌ನೆಟ್‌, ಕಾಮಿಕ್‌ ಪುಸ್ತಕ ಇವುಗಳಲ್ಲಿ ಇಂಥ ವಿಷಯಗಳನ್ನು ನೋಡುವುದರಿಂದ ಕಲಿಯುತ್ತಾರೆ. ಇಂಥ ವಿಷಯಗಳನ್ನು ನಾವು ನೋಡುವಾಗ, ಓದುವಾಗ ಅಥವಾ ಕೇಳಿಸಿಕೊಳ್ಳುವಾಗ ನಾವು ಯಾರಿಗೆ ಆಪ್ತರಾಗುತ್ತೇವೆ? ಯೆಹೋವನಿಗಾ ಅಥವಾ ಸೈತಾನ ಹಾಗೂ ಅವನ ದೆವ್ವಗಳಿಗಾ?—

ಇಬ್ಬರು ಹುಡುಗರು ಹಿಂಸೆಯನ್ನು ನೋಡುತ್ತಿದ್ದಾರೆ ಮತ್ತು ಅದ್ರ ತರನೇ ಮಾಡುತ್ತಿದ್ದಾರೆ

ಹಿಂಸಾಚಾರವನ್ನು ತೋರಿಸುವಂಥ ಕಾರ್ಯಕ್ರಮಗಳನ್ನು ನಾವು ನೋಡಿದರೆ ಏನಾಗಬಹುದು?

ನಾವು ಕೆಟ್ಟ ವಿಷಯಗಳನ್ನು ನೋಡಬೇಕು ಕೆಟ್ಟದ್ದನ್ನು ಕೇಳಿಸಿಕೊಳ್ಳಬೇಕು ಅಂತ ಯಾರು ಬಯಸುತ್ತಾರೆ?— ಸೈತಾನ ಮತ್ತು ಅವನ ದೆವ್ವಗಳು ಅಲ್ವಾ. ಹಾಗಾದರೆ ನಾವು ಏನು ಮಾಡಬೇಕು?— ನಮಗೆ ಪ್ರಯೋಜನ ತರುವಂಥ ವಿಷಯಗಳನ್ನು ಮಾತ್ರ ಓದಬೇಕು, ಕೇಳಬೇಕು ಹಾಗೂ ನೋಡಬೇಕು. ಈ ವಿಷಯದಲ್ಲಿ ನಾವು ಮಾಡುವ ಆಯ್ಕೆ ಯೆಹೋವನ ಸೇವೆಮಾಡಲು ಸಹಾಯ ನೀಡುವಂತಿರಬೇಕು. ನಾವು ಯಾವ ಯಾವ ಒಳ್ಳೆಯ ವಿಷಯಗಳನ್ನು ಮಾಡಬಹುದು ಅಂತ ಯೋಚಿಸಿ ಹೇಳು.—

ಇಬ್ಬರು ಹುಡುಗಿಯರು ಒಟ್ಟಾಗಿ ಪುಸ್ತಕವನ್ನು ಓದತ್ತಿದ್ದಾರೆ

ಯಾವ ವಿಷಯಗಳು ನಮಗೆ ಪ್ರಯೋಜನ ತರುತ್ತವೆ?

ನಾವು ಒಳ್ಳೇ ಕೆಲಸಗಳನ್ನು ಮಾಡುವುದಾದರೆ ದೆವ್ವಗಳಿಗೆ ಹೆದರುವ ಆವಶ್ಯಕತೆ ಇಲ್ಲ. ಯೇಸು ಅವುಗಳಿಗಿಂತ ಹೆಚ್ಚು ಶಕ್ತಿಶಾಲಿಯಾಗಿದ್ದಾನೆ. ದೆವ್ವಗಳಿಗೆ ಯೇಸು ಅಂದರೆ ಭಯ. ದೆವ್ವಗಳು ಒಮ್ಮೆ ಭಯದಿಂದ ಕೂಗುತ್ತಾ ಯೇಸುವಿಗೆ, “ನಮ್ಮನ್ನು ನಾಶಮಾಡಲು ಬಂದೆಯಾ?” ಎಂದು ಕೇಳಿದವು. (ಮಾರ್ಕ 1:24) ಯೇಸು ಸೈತಾನನನ್ನು ಅವನ ದೆವ್ವಗಳನ್ನು ನಾಶಮಾಡುವ ಸಮಯ ಬಂದೇ ಬರುತ್ತೆ. ಆಗ ನಾವೆಲ್ಲ ಎಷ್ಟು ಆನಂದಿಸುತ್ತೇವೆ ಅಲ್ವಾ?— ಆದರೆ ಅಷ್ಟರ ತನಕ ನಾವು ಯೇಸುವಿನ ಮತ್ತು ಅವನ ತಂದೆಯ ಮಾತನ್ನು ಕೇಳಿ ಅವರಿಗೆ ಆಪ್ತರಾಗಿ ಇರೋಣ. ಆಗ ಯೇಸು ನಮ್ಮನ್ನು ದೆವ್ವಗಳಿಂದ ತಪ್ಪಿಸಿ ಕಾಪಾಡುತ್ತಾನೆ.

ನಾವೇನು ಮಾಡಬೇಕೆಂದು ಈ ವಚನಗಳನ್ನು ಓದಿ ನೋಡೋಣ: 1 ಪೇತ್ರ 5:8, 9 ಮತ್ತು ಯಾಕೋಬ 4:7, 8.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ