ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lr ಅಧ್ಯಾ. 11 ಪು. 62-66
  • ದೇವದೂತರ ಸಹಾಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವದೂತರ ಸಹಾಯ
  • ಮಹಾ ಬೋಧಕನಿಂದ ಕಲಿಯೋಣ
  • ಅನುರೂಪ ಮಾಹಿತಿ
  • ದೇವದೂತರು ನಿಮಗೆ ಹೇಗೆ ಸಹಾಯಮಾಡಬಲ್ಲರು?
    ಕಾವಲಿನಬುರುಜು—1998
  • ದೇವದೂತರು ನಮ್ಮ ಮೇಲೆ ಪರಿಣಾಮಬೀರುವ ವಿಧ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • ದೇವದೂತರು—‘ಸಾರ್ವಜನಿಕ ಸೇವೆಗಾಗಿರುವ ಆತ್ಮಜೀವಿಗಳು’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ದೇವದೂತರು ಯಾರಾಗಿದ್ದಾರೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
ಇನ್ನಷ್ಟು
ಮಹಾ ಬೋಧಕನಿಂದ ಕಲಿಯೋಣ
lr ಅಧ್ಯಾ. 11 ಪು. 62-66

ಅಧ್ಯಾಯ 11

ದೇವದೂತರ ಸಹಾಯ

ಕಣ್ಣಿಗೆ ಕಾಣುವುದನ್ನು ಮಾತ್ರ ನಾನು ನಂಬುತ್ತೇನೆ ಅಂತ ಕೆಲವರು ಹೇಳುತ್ತಾರೆ. ಆದರೆ ಅದು ಮೂರ್ಖತನ. ಎಷ್ಟೋ ವಿಷಯಗಳನ್ನು ನಾವು ನೋಡಲಾರೆವು. ಹಾಗಾದರೆ ಅವೆಲ್ಲ ಇಲ್ಲ ಎಂದರ್ಥನಾ? ಹಾಗೇನಿಲ್ಲ ಅವು ಇವೆ. ನಮ್ಮ ಸುತ್ತಮುತ್ತಲೇ ಇವೆ. ಒಂದು ಉದಾಹರಣೆ ಕೊಡುತ್ತೀಯಾ?—

ನಾವು ಉಸಿರಾಡುವ ಗಾಳಿಯನ್ನೇ ಉದಾಹರಣೆಯಾಗಿ ತಗೋ. ಅದು ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ಅದು ಇಲ್ಲ ಅಂತ ಹೇಳೋದು ಸರಿನಾ?— ನಿನ್ನ ಅಂಗೈ ಸ್ವಲ್ಪ ತೋರಿಸು. ಈಗ ಅದರ ಮೇಲೆ ಊದು. ನಿನಗೆ ಏನಾದರೂ ಅನಿಸಿತಾ?— ಗಾಳಿಯ ಸ್ಪರ್ಶ ಆಯಿತಲ್ವಾ. ಆದರೆ ಆ ಗಾಳಿ ನಿನ್ನ ಕಣ್ಣಿಗೆ ಕಾಣಿಸಿತಾ?—

ನಮ್ಮ ಕಣ್ಣಿಗೆ ಕಾಣದೇ ಇರುವ ಆತ್ಮಜೀವಿಗಳ ಬಗ್ಗೆ ನಾವು ಈಗಾಗಲೇ ಕಲಿತಿದ್ದೇವೆ. ಅವರಲ್ಲಿ ಒಳ್ಳೆಯವರಿದ್ದಾರೆ ಕೆಟ್ಟವರಿದ್ದಾರೆ. ಒಳ್ಳೆಯವರು ಯಾರು ಅಂತ ಹೇಳುತ್ತೀಯಾ?— ಯೆಹೋವ ದೇವರು, ಯೇಸು ಮತ್ತು ಒಳ್ಳೇ ದೇವದೂತರು. ಹಾಗಾದರೆ ಕೆಟ್ಟ ದೇವದೂತರೂ ಇದ್ದಾರಾ?— ಇದ್ದಾರೆ ಎಂದು ಹಿಂದಿನ ಅಧ್ಯಾಯದಲ್ಲಿ ಕಲಿತೆವು ತಾನೆ. ಏನು ಕಲಿತುಕೊಂಡೆ ಅಂತ ಹೇಳುತ್ತೀಯಾ?—

ಒಳ್ಳೇ ದೇವದೂತರಾಗಿರಲಿ ದೆವ್ವಗಳಾಗಿರಲಿ, ಅವರೆಲ್ಲರು ನಮಗಿಂತ ತುಂಬಾ ಶಕ್ತಿಶಾಲಿಗಳು ಅಂತ ನಮಗೆ ಗೊತ್ತಿದೆ. ದೇವದೂತರ ಬಗ್ಗೆ ಮಹಾ ಬೋಧಕನಿಗೆ ಬಹಳ ವಿಷಯ ಗೊತ್ತಿತ್ತು. ಅದು ಹೇಗೆ? ಹೇಗೆಂದರೆ, ಯೇಸು ಭೂಮಿಯಲ್ಲಿ ಮಗುವಾಗಿ ಹುಟ್ಟುವುದಕ್ಕೆ ಮುಂಚೆ ಅವನೂ ಒಬ್ಬ ದೇವದೂತನಾಗಿದ್ದನು. ಸ್ವರ್ಗದಲ್ಲಿ ಬೇರೆ ದೇವದೂತರೊಂದಿಗೆ ಇದ್ದ ಕಾರಣ ಕೋಟಿಗಟ್ಟಲೆ ದೇವದೂತರ ಪರಿಚಯ ಅವನಿಗಿತ್ತು. ಆ ದೇವದೂತರಿಗೆಲ್ಲ ಹೆಸರಿದೆಯಾ?—

ದೇವರು ಪ್ರತಿಯೊಂದು ನಕ್ಷತ್ರಕ್ಕೂ ಹೆಸರಿಟ್ಟಿದ್ದಾನೆಂದು ನಾವು ಕಲಿತ್ತೇವಲ್ವಾ. ಅಂದ ಮೇಲೆ ದೇವದೂತರಿಗೂ ಹೆಸರು ಇಟ್ಟಿರುತ್ತಾನೆ ಅಲ್ವಾ? ಇನ್ನೊಂದು ವಿಷಯ ಗೊತ್ತಾ, ಈ ದೇವದೂತರು ಒಬ್ಬರಿಗೊಬ್ಬರು ಮಾತಾಡಿಕೊಳ್ಳುತ್ತಾರೆ. ಬೈಬಲ್‌ನಲ್ಲಿ ‘ದೇವದೂತರ ಭಾಷೆಯ’ ಬಗ್ಗೆ ಕೊಡಲಾಗಿದೆ. (1 ಕೊರಿಂಥ 13:1) ದೇವದೂತರು ಯಾವುದರ ಬಗ್ಗೆ ಮಾತಾಡುತ್ತಾರೆ? ಭೂಮಿಯಲ್ಲಿರುವ ನಮ್ಮ ಬಗ್ಗೆನಾ? ನಿನಗೇನು ಅನಿಸುತ್ತೆ?—

ಮೊದಲಾಗಿ, ಸೈತಾನನ ದೂತರು ಅಂದರೆ ದೆವ್ವಗಳು ಯಾವುದರ ಬಗ್ಗೆ ಮಾತಾಡುತ್ತವೆ ಅಂತ ನೋಡೋಣ. ಹೌದು ನಮ್ಮ ಬಗ್ಗೆ ಖಂಡಿತ ಮಾತಾಡುತ್ತವೆ. ಏನಂತ? ಯೆಹೋವನಿಗೆ ನಾವು ಅವಿಧೇಯರಾಗಬೇಕೆಂದು ಅವು ತುಂಬಾ ಪ್ರಯತ್ನ ಮಾಡುತ್ತಿವೆ ಅಂತ ನಮಗೆ ಈಗಾಗಲೇ ಗೊತ್ತಲ್ವಾ. ಹೇಗಾದರೂ ಮಾಡಿ ನಮ್ಮನ್ನು ತಪ್ಪು ದಾರಿಗೆ ಎಳೆಯಬೇಕು ಅಂತ ಮಾತಾಡುತ್ತಿರುತ್ತವೆ. ದೆವ್ವಗಳಂತೆ ನಾವು ತಪ್ಪು ಕೆಲಸ ಮಾಡಿದರೆ ಯೆಹೋವನು ನಮ್ಮನ್ನು ಪ್ರೀತಿಸುವುದಿಲ್ಲ ಅಂತ ಅವುಗಳಿಗೆ ಗೊತ್ತು. ಸರಿ, ಒಳ್ಳೇ ದೇವದೂತರು ಯಾವುದರ ಬಗ್ಗೆ ಮಾತಾಡುತ್ತಾರೆ? ಅವರು ಸಹ ನಮ್ಮ ಬಗ್ಗೆ ಮಾತಾಡಿಕೊಳ್ಳುತ್ತಾರಾ?— ಹೌದು, ನಮಗೆ ಹೇಗೆ ಸಹಾಯ ಮಾಡೋದು ಅಂತ ಮಾತಾಡಿಕೊಳ್ಳುತ್ತಾರೆ. ಯೆಹೋವನನ್ನು ಪ್ರೀತಿಸಿ ಆತನ ಸೇವೆಮಾಡಿದವರಿಗೆ ಈ ದೇವದೂತರು ಹೇಗೆ ಸಹಾಯಮಾಡಿದರು ಅಂತ ನಿನಗೆ ಹೇಳುತ್ತೇನೆ ಕೇಳು.

ಬಾಬೆಲ್‌ ಎಂಬ ಪಟ್ಟಣದಲ್ಲಿ ದಾನಿಯೇಲ ಎಂಬ ವ್ಯಕ್ತಿ ವಾಸಿಸುತ್ತಿದ್ದನು. ಆ ಪಟ್ಟಣದ ಅನೇಕ ಜನರು ಯೆಹೋವನನ್ನು ಪ್ರೀತಿಸುತ್ತಿರಲಿಲ್ಲ. ಅಷ್ಟೇ ಅಲ್ಲ, ಯಾರಾದರು ಯೆಹೋವ ದೇವರಿಗೆ ಪ್ರಾರ್ಥಿಸಿದರೆ ಅವರಿಗೆ ಶಿಕ್ಷೆ ಆಗಬೇಕು ಅಂತ ಒಂದು ನಿಯಮ ಸಹ ಜಾರಿಗೆ ತಂದಿದ್ದರು. ಆದರೆ ದಾನಿಯೇಲನು ಮಾತ್ರ ಹೆದರಲಿಲ್ಲ. ಯೆಹೋವನಿಗೆ ಪ್ರಾರ್ಥಿಸುವುದನ್ನು ನಿಲ್ಲಿಸಲಿಲ್ಲ. ಇದನ್ನು ನೋಡಿದ ಜನರು ದಾನಿಯೇಲನನ್ನು ಏನು ಮಾಡಿದರು ಗೊತ್ತಾ?—

ಆ ಕೆಟ್ಟ ಜನರು ದಾನಿಯೇಲನನ್ನು ಸಿಂಹಗಳ ಗವಿಗೆ ಹಾಕಿಸಿದರು! ಹಸಿವಿನಿಂದ ಗುರ್ರ್‌ರ್ರ್‌ ಅಂತ ಗರ್ಜಿಸುತ್ತಿದ್ದ ಸಿಂಹಗಳ ಮಧ್ಯೆ ಅವನು ಒಬ್ಬನೇ ಇದ್ದನು. ಪಾಪ ದಾನಿಯೇಲನಿಗೆ ಹೇಗಿದ್ದಿರಬೇಕಲ್ವಾ. ಮುಂದೇನಾಯಿತು ಗೊತ್ತಾ?— “ದೇವರು ತನ್ನ ದೂತನನ್ನು ಕಳುಹಿಸಿ ಸಿಂಹಗಳ ಬಾಯಿಗಳನ್ನು ಬಂಧಿಸಿದನು” ಎಂದು ದಾನಿಯೇಲನು ತಿಳಿಸಿದನು. ಹೌದು, ಅವನ ಮೈಮೇಲೆ ಒಂದು ಸಣ್ಣ ಗೀರು ಕಾಣಿಸಲಿಲ್ಲ! ನೋಡಿದ್ಯಾ, ಯೆಹೋವನ ಸೇವೆ ಮಾಡುವವರಿಗೆ ದೇವದೂತರು ಹೇಗೆ ಸಹಾಯಮಾಡುತ್ತಾರೆ ಅಂತ.—ದಾನಿಯೇಲ 6:18-22.

ದೇವದೂತನೊಬ್ಬನು ಸಿಂಹಗಳನ್ನು ದಾನಿಯೇಲನಿಂದ ದೂರವಿಟ್ಟಿದ್ದಾನೆ

ದಾನಿಯೇಲನನ್ನು ಕಾಪಾಡಲು ದೇವರು ಏನು ಮಾಡಿದನು?

ಇನ್ನೊಂದು ಘಟನೆ ನೋಡೋಣ. ಇದು ಪೇತ್ರನು ಜೈಲಿನಲ್ಲಿದ್ದಾಗ ನಡೆದ ಸಂಗತಿ. ಪೇತ್ರನು ಯಾರು ಅಂತ ನಿನಗೆ ನೆನಪಿರಬಹುದು. ಅವನು ಮಹಾ ಬೋಧಕನಾದ ಯೇಸು ಕ್ರಿಸ್ತನ ಸ್ನೇಹಿತ. ಯೇಸು ದೇವರ ಮಗನು ಅಂತ ಪೇತ್ರನು ಎಲ್ಲರಿಗೂ ಹೇಳುತ್ತಿದ್ದನು. ಆದರೆ ಇದು ಕೆಲವರಿಗೆ ಇಷ್ಟವಾಗಲಿಲ್ಲ. ಆದುದರಿಂದ ಅವರು ಪೇತ್ರನನ್ನು ಜೈಲಿಗೆ ಹಾಕಿಸಿದರು. ಅಲ್ಲಿಂದ ಅವನು ತಪ್ಪಿಸಿಕೊಂಡು ಓಡಿಹೋಗಬಾರದು ಅಂತ ಸೈನಿಕರು ಕಾವಲುಕಾಯುತ್ತಾ ಇದ್ದರು. ಜೈಲಿನಲ್ಲಿದ್ದ ಪೇತ್ರನಿಗೆ ಯಾರು ಸಹಾಯ ಮಾಡಬಲ್ಲರು?—

ಪಾಪ, ಜೈಲಿನಲ್ಲಿ ಪೇತ್ರನ ಕೈಗಳನ್ನು ಸರಪಣಿಯಿಂದ ಬಂದಿಸಿದ್ದರು. ಅವನು ಮಲಗಿದ್ದರೂ ಅಕ್ಕಪಕ್ಕದಲ್ಲಿ ಇಬ್ಬರು ಸಿಪಾಯಿಗಳು ಕಾವಲುಕಾಯುತ್ತಿದ್ದರು. ಆಗ ಅಲ್ಲೊಂದು ಅದ್ಭುತ ನಡೆಯಿತು! ಬೈಬಲ್‌ ಹೇಳುವುದು: ‘ಆಗ ಯೆಹೋವನ ದೂತನು ಬಂದನು. ಪೇತ್ರನಿದ್ದ ಕೋಣೆಯಲ್ಲಿ ಬೆಳಕು ಹೊಳೆಯಿತು. ಆ ದೂತನು ಪೇತ್ರನ ಬೆನ್ನು ತಟ್ಟಿ ಎಬ್ಬಿಸಿ, “ಬೇಗ ಎದ್ದೇಳು!” ಎಂದು ಹೇಳಿದನು.’

ಇಬ್ಬರು ಸೈನಿಕರ ಮಧ್ಯದಲ್ಲಿ ಪೇತ್ರನು ಇದ್ದಾನೆ, ಒಬ್ಬ ದೇವದೂತನು ಅವನನ್ನು ಎಬ್ಬಿಸುತ್ತಾನೆ, ಅವನ ಕೈಗಳಿಂದ ಸರಪಣಿಗಳು ಕಳಚಿ ಬೀಳುತ್ತೆ

ದೇವದೂತನು ಪೇತ್ರನಿಗೆ ಜೈಲಿನಿಂದ ಹೊರಬರಲು ಹೇಗೆ ಸಹಾಯಮಾಡಿದನು?

ಅಷ್ಟರಲ್ಲಿ, ಪೇತ್ರನ ಕೈಗಳಲ್ಲಿದ್ದ ಸರಪಣಿಗಳು ತಾನಾಗಿಯೇ ಕಳಚಿಬಿದ್ದವು. ಆ ದೇವದೂತನು ಅವನಿಗೆ, ‘ಎದ್ದು ಕೆರಗಳನ್ನು ಹಾಕಿಕೊಂಡು ನನ್ನ ಹಿಂದೆ ಬಾ’ ಅಂತ ಹೇಳಿದನು. ಕಾವಲುಗಾರರು ಅವರನ್ನು ತಡೆಯಲಾರದೆ ಬೆಪ್ಪಾಗಿ ನಿಂತರು. ಅವರು ತಾನೆ ಏನು ಮಾಡಲು ಸಾಧ್ಯ ಹೇಳು, ಪೇತ್ರನಿಗೆ ಸಹಾಯ ಮಾಡುತ್ತಿದ್ದದ್ದು ಒಬ್ಬ ದೇವದೂತನಲ್ವಾ. ಪೇತ್ರ ಮತ್ತು ದೇವದೂತನು ಕಾವಲುಗಾರರನ್ನು ದಾಟಿ ಮುಂದೆ ಹೋದಾಗ ಒಂದು ದೊಡ್ಡ ಕಬ್ಬಿಣದ ಬಾಗಿಲು ಎದುರಾಯಿತು. ಆಗ ಇನ್ನೊಂದು ಅದ್ಭುತ ನಡೆಯಿತು. ದೊಡ್ಡ ಬಾಗಿಲು ತನ್ನಷ್ಟಕ್ಕೆ ತಾನೇ ತೆರೆದುಕೊಂಡು ದಾರಿಬಿಟ್ಟಿತ್ತು! ಹೀಗೆ ಜೈಲಿನ ಬಂಧನದಿಂದ ಪಾರಾಗಲು ದೇವದೂತನು ಪೇತ್ರನಿಗೆ ಸಹಾಯ ಮಾಡಿದನು. ಈಗ ಪುನಃ ಪೇತ್ರನಿಗೆ ಯೇಸುವಿನ ಬಗ್ಗೆ ಎಲ್ಲರೊಂದಿಗೆ ಮಾತಾಡಲು ಸಾಧ್ಯವಾಯಿತು.—ಅಪೊಸ್ತಲರ ಕಾರ್ಯಗಳು 12:3-11.

ದೇವದೂತರು ನಮಗೂ ಸಹಾಯಮಾಡುತ್ತಾರಾ?— ಹೌದು. ಹಾಗಾದರೆ ನಮಗೆ ಯಾವುದೇ ಹಾನಿಯಾಗುವುದಿಲ್ಲ ಅಂತಾನಾ?— ಹಾಗೇನಲ್ಲ. ನಾವು ಮೂರ್ಖತನದಿಂದ ವರ್ತಿಸಿ ನಮ್ಮನ್ನೇ ಅಪಾಯಕ್ಕೆ ಒಡ್ಡಿದರೆ ಆ ಹಾನಿಯಿಂದ ದೇವದೂತರು ನಮ್ಮನ್ನು ಕಾಪಾಡುವುದಿಲ್ಲ. ಆದರೆ ಕೆಲವೊಮ್ಮೆ ನಾವು ಮೂರ್ಖತನದಿಂದ ವರ್ತಿಸದಿದ್ದರೂ ನಮಗೆ ಹಾನಿಯಾಗುತ್ತೆ. ಆಗ ಏನು? ಎಲ್ಲಾ ಹಾನಿಗಳಿಂದ ನಮ್ಮನ್ನು ಕಾಪಾಡುವಂತೆ ದೇವದೂತರಿಗೆ ಹೇಳಲಾಗಿಲ್ಲ. ದೇವರು ಅವರಿಗೆ ಬೇರೊಂದು ವಿಶೇಷ ಕೆಲಸ ಕೊಟ್ಟಿದ್ದಾನೆ.

ದೇವರನ್ನು ಆರಾಧಿಸಿರಿ ಎಂದು ಭೂಮಿಯಲ್ಲಿರುವ ಜನರಿಗೆ ಸಾರಿ ಹೇಳುತ್ತಿರುವ ಒಬ್ಬ ದೇವದೂತನ ಕುರಿತು ಬೈಬಲ್‌ನಲ್ಲಿ ಇದೆ. (ಪ್ರಕಟನೆ 14:6, 7) ಆ ದೇವದೂತನು ಜನರಿಗೆ ಇದನ್ನು ಹೇಗೆ ಸಾರಿ ಹೇಳುತ್ತಾನೆ? ಸ್ವರ್ಗದಿಂದ ಗಟ್ಟಿಯಾಗಿ ಕೂಗಿ ಹೇಳುತ್ತಾನಾ?— ಇಲ್ಲ. ದೇವರ ಬಗ್ಗೆ ಇತರರೊಂದಿಗೆ ಮಾತಾಡುವವರು ಭೂಮಿಯಲ್ಲಿರುವ ಯೇಸುವಿನ ಹಿಂಬಾಲಕರು. ಆದರೆ ಇವರನ್ನು ಮಾರ್ಗದರ್ಶಿಸುವವರು ದೇವದೂತರು. ದೇವರ ಬಗ್ಗೆ ತಿಳಿದುಕೊಳ್ಳಲು ನಿಜವಾಗಿ ಬಯಸುವವರಿಗೆ ಈ ಸುವಾರ್ತೆ ತಲಪುವಂತೆ ದೇವದೂತರು ನೋಡಿಕೊಳ್ಳುತ್ತಾರೆ. ಇದೇ ಅವರಿಗೆ ಕೊಟ್ಟಿರುವ ವಿಶೇಷ ಕೆಲಸ. ಸುವಾರ್ತೆ ಸಾರುವ ಕೆಲಸದಲ್ಲಿ ನಾವು ಕೂಡ ಭಾಗವಹಿಸಬಹುದು. ಇದರಲ್ಲಿ ದೇವದೂತರು ನಮಗೆ ಖಂಡಿತ ಸಹಾಯಮಾಡುತ್ತಾರೆ.

ಆದರೆ ದೇವರ ಬಗ್ಗೆ ತಿಳಿದುಕೊಳ್ಳಲು ಇಷ್ಟವಿಲ್ಲದ ಜನರು ನಮಗೆ ತೊಂದರೆ ಕೊಟ್ಟರೆ? ಅವರು ನಮ್ಮನ್ನು ಜೈಲಿಗೆ ಹಾಕಿದರೆ? ಆಗ ದೇವದೂತರು ನಮ್ಮನ್ನು ಬಿಡಿಸುತ್ತಾರಾ?— ಅವರು ಬಿಡಿಸಬಲ್ಲರು. ಆದರೆ ಎಲ್ಲಾ ಸಂದರ್ಭಗಳಲ್ಲೂ ಅವರು ಹಾಗೆ ಮಾಡಲೇಬೇಕು ಅಂತೇನಿಲ್ಲ.

ಬಿರುಗಾಳಿ ಬೀಸುವಾಗ ಹಡಗಿನಲ್ಲಿ ಕೂತುಕೊಂಡಿದ್ದ ಪೌಲನಿಗೆ ಒಬ್ಬ ದೇವದೂತನು ಕಾಣಿಸಿಕೊಳ್ಳುತ್ತಾನೆ

ಈ ದೇವದೂತನು ಪೌಲನಿಗೆ ಏನು ಹೇಳುತ್ತಿದ್ದಾನೆ?

ಒಂದು ಸಲ, ಯೇಸುವಿನ ಹಿಂಬಾಲಕನಾದ ಪೌಲನನ್ನು ಬಂಧನದಲ್ಲಿಟ್ಟಿದ್ದರು. ಇತರ ಕೈದಿಗಳೊಂದಿಗೆ ಅವನನ್ನೂ ಒಂದು ಹಡಗಿನಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಆ ಹಡಗು ಒಂದು ಭೀಕರ ಬಿರುಗಾಳಿಯಲ್ಲಿ ಸಿಕ್ಕಿಕೊಂಡಿತು. ದೇವದೂತರು ಪೌಲನನ್ನು ಬಂಧನದಿಂದ ತಕ್ಷಣ ಬಿಡಿಸಿದರಾ? ಇಲ್ಲ. ಪೇತ್ರನನ್ನು ಬಿಡಿಸಿದಂತೆ ಪೌಲನನ್ನು ಬಿಡಿಸಲಿಲ್ಲ. ಇದಕ್ಕೆ ಒಂದು ಕಾರಣವಿತ್ತು. ಸುವಾರ್ತೆಯನ್ನು ಇನ್ನಷ್ಟು ಜನರು ಕೇಳಿಸಿಕೊಳ್ಳಬೇಕಿತ್ತು. ಅದಕ್ಕಾಗಿ ಒಬ್ಬ ದೇವದೂತನು ಅವನಿಗೆ ಕಾಣಿಸಿಕೊಂಡು, “ಪೌಲನೇ ಭಯಪಡಬೇಡ. ನೀನು ಕೈಸರನ ಮುಂದೆ ನಿಲ್ಲಬೇಕು” ಎಂದು ಹೇಳಿದನು. ಹೌದು, ಆಗಿನ ಕಾಲದ ದೊಡ್ಡ ರಾಜನಾದ ಕೈಸರನ ಮುಂದೆ ಹಾಜರಾಗಿ ಪೌಲನು ಅವನಿಗೆ ಸುವಾರ್ತೆ ಸಾರಬೇಕಿತ್ತು. ಪೌಲನು ಎಲ್ಲಿದ್ದನು, ಏನು ಮಾಡುತ್ತಿದ್ದನು ಅಂತ ದೇವದೂತರಿಗೆ ಚೆನ್ನಾಗಿ ತಿಳಿದಿತ್ತು ಹಾಗೂ ಅವರು ಅವನಿಗೆ ಸಹಾಯ ಮಾಡಲು ಸದಾ ಸಿದ್ಧರಿದ್ದರು. ನಾವು ದೇವರ ಸೇವೆ ಮಾಡುವುದಾದರೆ ದೇವದೂತರು ನಮಗೂ ಸಹಾಯಮಾಡುತ್ತಾರೆ.—ಅಪೊಸ್ತಲರ ಕಾರ್ಯಗಳು 27:23-25.

ದೇವದೂತರ ಮುಂದೆ ಇನ್ನೊಂದು ಪ್ರಮುಖ ಕೆಲಸ ಇದೆ. ಅದೇನೆಂದರೆ ಭೂಮಿಯ ಮೇಲಿನ ಕೆಟ್ಟ ಜನರನ್ನು ದೇವರು ಹೇಳಿದಾಗ ನಾಶ ಮಾಡುವುದು. ಈ ಕೆಲಸವನ್ನು ಅವರು ಬಲುಬೇಗನೆ ಮಾಡಲಿದ್ದಾರೆ. ಏಕೆಂದರೆ ಈ ನಾಶನಕ್ಕಾಗಿ ದೇವರು ತಿಳಿಸಿರುವ ಸಮಯ ಬಲು ಹತ್ತಿರವಾಗಿದೆ. ಆ ನಾಶನದಲ್ಲಿ ಸತ್ಯದೇವರನ್ನು ಆರಾಧಿಸದೇ ಇರುವವರು ಉಳಿಯುವುದಿಲ್ಲ. ದೇವದೂತರನ್ನು ನಂಬುವುದಿಲ್ಲ ಯಾಕೆಂದರೆ ಅವರು ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ ಅಂತ ಯಾರೆಲ್ಲ ಹೇಳುತ್ತಾರೋ ಅವರು ಈ ನಾಶನದ ಸಮಯದಲ್ಲಿ ದೇವದೂತರಿದ್ದಾರೆ ಎಂದು ಅರಿತುಕೊಳ್ಳುತ್ತಾರೆ.—2 ಥೆಸಲೊನೀಕ 1:6-8.

ನಮ್ಮ ಕುರಿತೇನು? ಈ ನಾಶನದಿಂದ ನಾವು ಪಾರಾಗುತ್ತೇವಾ?— ನಾವು ದೇವದೂತರ ಪಕ್ಷ ವಹಿಸಿದರೆ ಅವರು ನಮ್ಮನ್ನು ಖಂಡಿತ ರಕ್ಷಿಸುತ್ತಾರೆ. ಆದರೆ ನಾವು ಅವರ ಪಕ್ಷದಲ್ಲಿ ಇದ್ದೇವಾ?— ನಾವು ಯೆಹೋವನ ಸೇವೆ ಮಾಡುತ್ತಿರುವುದಾದರೆ ದೇವದೂತರ ಪಕ್ಷದಲ್ಲಿ ಇದ್ದೇವೆ ಎಂದರ್ಥ. ಯೆಹೋವನ ಸೇವೆ ಹೇಗೆ ಮಾಡುವುದು? ಇತರರಿಗೆ ಯೆಹೋವನ ಬಗ್ಗೆ ತಿಳಿಸುತ್ತಾ ಆತನ ಸೇವೆ ಮಾಡುವಂತೆ ಹೇಳುವ ಮೂಲಕ.

ದೇವದೂತರು ಜನರಿಗೆ ಹೇಗೆ ಸಹಾಯ ಮಾಡುತ್ತಾರೆ ಎಂದು ತಿಳಿಯಲು, ಕೀರ್ತನೆ 34:7; ಮತ್ತಾಯ 4:11; 18:10; ಲೂಕ 22:43 ಮತ್ತು ಅಪೊಸ್ತಲರ ಕಾರ್ಯಗಳು 8:26-31 ಓದೋಣ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ