ಅಧ್ಯಾಯ 39
ದೇವರು ಯೇಸುವನ್ನು ಪುನರುತ್ಥಾನಗೊಳಿಸುತ್ತಾನೆ
ಗೆಳೆಯ ಲಾಜರನು ಮೃತಪಟ್ಟಾಗ ಯೇಸು ದುಃಖದಿಂದ ಕಣ್ಣೀರಿಟ್ಟನಲ್ವಾ. ಯೇಸು ಕಷ್ಟ ನೋವನ್ನು ಅನುಭವಿಸಿ ಪ್ರಾಣ ಬಿಟ್ಟಾಗ ಯೆಹೋವನಿಗೆ ದುಃಖವಾಯಿತಾ?— ಕೆಲವು ವಿಷಯಗಳು ದೇವರಿಗೆ ‘ನೋವನ್ನು’ ಉಂಟುಮಾಡುತ್ತವೆಂದು ಬೈಬಲ್ ತಿಳಿಸುತ್ತದೆ.—ಕೀರ್ತನೆ 78:40, 41; ಯೋಹಾನ 11:35.
ತನ್ನ ಮುದ್ದು ಮಗನು ಕಣ್ಮುಂದೆ ಸಾಯುತ್ತಿರುವಾಗ ಯೆಹೋವನಿಗೆ ಎಷ್ಟು ನೋವಾಗಿರಬೇಡ. ಅದನ್ನು ನೀನು ಊಹಿಸಬಲ್ಲೆಯಾ?— ದೇವರು ತನ್ನನ್ನೆಂದೂ ಮರೆಯುವುದಿಲ್ಲ ಅಂತ ಯೇಸುವಿಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ಅವನು ಸಾಯುವ ಮುಂಚೆ, “ತಂದೆಯೇ, ನಿನ್ನ ಕೈಗಳಿಗೆ ನನ್ನ [ಜೀವವನ್ನು] ಒಪ್ಪಿಸುತ್ತೇನೆ” ಎಂದು ಹೇಳಿ ಪ್ರಾಣ ಬಿಟ್ಟನು.—ಲೂಕ 23:46.
ದೇವರು ತನ್ನನ್ನು ಪುನರುತ್ಥಾನ ಮಾಡುವನೆಂದು ಯೇಸುವಿಗೆ ಗೊತ್ತಿತ್ತು. ಪಾತಾಳದಿಂದ ಅಂದರೆ ಸಮಾಧಿಯಿಂದ ತನ್ನನ್ನು ಎಬ್ಬಿಸುವನೆಂಬ ನಂಬಿಕೆ ಅವನಿಗಿತ್ತು. ಯೇಸುವಿನ ಪುನರುತ್ಥಾನದ ಕುರಿತ ಪ್ರವಾದನೆಯನ್ನು ಪೇತ್ರನು ಉಲ್ಲೇಖಿಸುತ್ತಾ ‘ಅವನು ಪಾತಾಳದಲ್ಲಿ ಬಿಡಲ್ಪಡಲಿಲ್ಲ, ಅವನ ಶರೀರವು ಸಮಾಧಿಯಲ್ಲಿ ಕೊಳೆಯಲಿಲ್ಲ’ ಎಂದು ಹೇಳಿದನು. (ಅಪೊಸ್ತಲರ ಕಾರ್ಯಗಳು 2:31; ಕೀರ್ತನೆ 16:10) ಹೌದು, ಶರೀರ ಕೊಳೆಯುವ ಅಥವಾ ವಾಸನೆ ಬರುವ ಮುಂಚೆಯೇ ಯೇಸು ಪುನರುತ್ಥಾನವಾಗಿದ್ದನು!
ಯೇಸು ಈ ವಿಷಯವನ್ನು ತನ್ನ ಶಿಷ್ಯರಿಗೆ ಮೊದಲೇ ಸೂಚಿಸಿದ್ದನು. ಮೃತಪಟ್ಟಾಗ ತನ್ನ ದೇಹವು ಸಮಾಧಿಯಲ್ಲಿ ಹೆಚ್ಚು ದಿನ ಇರುವುದಿಲ್ಲವೆಂದು ಹೇಳಿದ್ದನು. ತನ್ನನ್ನು ಜನರು ‘ಕೊಲ್ಲುವರು. ಆದರೆ ಮೂರನೆಯ ದಿನದಲ್ಲಿ ಎಬ್ಬಿಸಲ್ಪಡುವೆನು’ ಎಂದವರಿಗೆ ವಿವರಿಸಿದ್ದನು. (ಲೂಕ 9:22) ಹಾಗಾಗಿ ಪುನರುತ್ಥಾನಗೊಂಡ ಯೇಸುವನ್ನು ನೋಡಿ ಶಿಷ್ಯರು ಅಚ್ಚರಿಪಡಬೇಕಾಗಿರಲಿಲ್ಲ. ಆದರೆ ಅವರು ಅಚ್ಚರಿಪಟ್ಟರಾ?— ನೋಡೋಣ.
ಮಹಾ ಬೋಧಕನು ಸಾವನ್ನಪ್ಪಿದ್ದು ಶುಕ್ರವಾರ ಮಧ್ಯಾಹ್ನ ಮೂರು ಗಂಟೆಗೆ. ಹಿರೀಸಭೆಯ ಧನಿಕ ಸದಸ್ಯನೇ ಯೋಸೇಫ. ಅವನು ಗುಟ್ಟಿನಿಂದ ಯೇಸುವಿನ ಶಿಷ್ಯನಾಗಿದ್ದನು. ಯೇಸುವಿನ ಸಾವಿನ ಸುದ್ದಿ ತಿಳಿದುಬಂದಾಗ ಅವನು ರೋಮನ್ ಗವರ್ನರ್ ಪಿಲಾತನ ಬಳಿಗೆ ಹೋಗುತ್ತಾನೆ. ಯೇಸುವಿನ ದೇಹವನ್ನು ಕಂಬದಿಂದ ಇಳಿಸಿ ಸಮಾಧಿಮಾಡಲಿಕ್ಕಾಗಿ ಅಪ್ಪಣೆ ಪಡೆಯುತ್ತಾನೆ. ಅನಂತರ ಯೇಸುವಿನ ದೇಹವನ್ನು ಸಮಾಧಿಮಾಡಲು ಒಂದು ತೋಟಕ್ಕೆ ತೆಗೆದುಕೊಂಡು ಹೋಗುತ್ತಾನೆ.
ತೋಟದಲ್ಲಿ ಯೇಸುವಿನ ಶವವನ್ನು ಗುಹೆಯಲ್ಲಿ ಇಟ್ಟು ಅದರ ಬಾಯಿಗೆ ಒಂದು ದೊಡ್ಡ ಕಲ್ಲನ್ನು ಉರುಳಿಸಿ ಮುಚ್ಚಲಾಗುತ್ತದೆ. ಸಮಾಧಿಯಾಗಿ ಈಗ ಮೂರನೆಯ ದಿನ. ಅದು ಭಾನುವಾರ. ಸೂರ್ಯೋದಯವಾಗಿಲ್ಲ, ಇನ್ನೂ ಚುಮು ಚುಮು ನಸುಕು. ಕಾವಲುಗಾರರು ಸಮಾಧಿಯ ಬಳಿ ಪಹರೆ ಮಾಡುತ್ತಿದ್ದಾರೆ. ಅವರನ್ನು ಆ ಕೆಲಸಕ್ಕೆ ನೇಮಿಸಿರುವುದು ಬೇರೆ ಯಾರೂ ಅಲ್ಲ, ಮುಖ್ಯ ಯಾಜಕರು. ಅವರೇಕೆ ಕಾವಲುಗಾರರನ್ನು ನೇಮಿಸಿದ್ದಾರೆ ಗೊತ್ತಾ?—
ಏಕೆಂದರೆ, ತನಗೆ ಪುನರುತ್ಥಾನವಾಗುವುದೆಂದು ಯೇಸು ಶಿಷ್ಯರಿಗೆ ಹೇಳಿದ್ದ ವಿಷಯ ಯಾಜಕರಿಗೆ ಸಹ ಗೊತ್ತಿತ್ತು. ಶಿಷ್ಯರೆಲ್ಲಿ ಯೇಸುವಿನ ಶವವನ್ನು ಸಮಾಧಿಯಿಂದ ತೆಗೆದುಕೊಂಡು ಹೋಗಿ ನಂತರ ಯೇಸುವಿಗೆ ಪುನರುತ್ಥಾನವಾಗಿದೆಯೆಂದು ಸಾರುವರೋ ಅಂತ ಎಣಿಸಿ ಕಾವಲುಗಾರರನ್ನು ನೇಮಿಸಿದ್ದರು. ಕಾವಲುಗಾರರು ಕಾಯುತ್ತಿದ್ದಾಗ ಇದ್ದಕ್ಕಿದ್ದಂತೆ ನೆಲವು ನಡುಗತೊಡಗಿತು. ಕತ್ತಲೆಯನ್ನು ಛೇದಿಸಿಕೊಂಡು ಬೆಳಕೊಂದು ಮಿಂಚಿದಂತಾಯಿತು. ಯೆಹೋವನ ದೂತನು ಅಲ್ಲಿ ನಿಂತಿದ್ದನು! ಸೈನಿಕರು ಎಷ್ಟು ಹೆದರಿ ಹೋದರೆಂದರೆ ಅಲ್ಲಾಡದೆ ಮರಗಟ್ಟಿ ನಿಂತರು. ದೇವದೂತನು ಸಮಾಧಿಯ ಬಳಿ ಹೋಗಿ ಕಲ್ಲನ್ನು ಪಕ್ಕಕ್ಕೆ ಉರುಳಿಸಿದನು. ಸಮಾಧಿ ಖಾಲಿ!
ಸಮಾಧಿ ಏಕೆ ಖಾಲಿಯಾಗಿದೆ? ಏನು ಸಂಭವಿಸಿತು?
ಹೌದು, ಯೇಸುವನ್ನು ಪುನಃ ಜೀವಂತಗೊಳಿಸಲಾಗಿತ್ತು. ಅಪೊಸ್ತಲ ಪೇತ್ರನು ನಂತರ ಹೇಳಿದಂತೆ “ಯೇಸುವನ್ನು ದೇವರು ಪುನರುತ್ಥಾನಗೊಳಿಸಿದನು.” (ಅಪೊಸ್ತಲರ ಕಾರ್ಯಗಳು 2:32) ಸ್ವರ್ಗದಲ್ಲಿದ್ದಾಗ ಯೇಸುವಿಗೆ ಯಾವ ದೇಹವಿತ್ತೋ ಅದೇ ರೀತಿಯ ದೇಹವನ್ನು ಕೊಟ್ಟು ದೇವರು ಅವನನ್ನು ಪುನರುತ್ಥಾನಗೊಳಿಸಿದ್ದನು. ಅಂದರೆ, ಯೇಸುವಿಗೆ ದೇವದೂತರಂಥ ಅದೃಶ್ಯ ದೇಹ ಕೊಡಲಾಯಿತು. (1 ಪೇತ್ರ 3:18) ಹಾಗಾಗಿ, ಜನರ ಕಣ್ಣಿಗೆ ಯೇಸು ಈಗ ಕಾಣಬೇಕಾದರೆ ನಮಗಿರುವಂಥ ಮಾಂಸಿಕ ದೇಹವನ್ನು ಅವನು ಧರಿಸಬೇಕು. ಅವನು ಜನರ ಕಣ್ಣಿಗೆ ಕಾಣಿಸಿಕೊಂಡನಾ?— ಅದನ್ನೀಗ ನೋಡೋಣ.
ಕತ್ತಲನ್ನು ಸರಿಸಿ ಸೂರ್ಯನು ಬಾನಂಗಳದಲ್ಲಿ ಮೂಡುತ್ತಿದ್ದಾನೆ. ಕಾವಲುಗಾರರು ಹೋಗಿಬಿಟ್ಟಿದ್ದಾರೆ. ಮಗ್ದಲದ ಮರಿಯ ಮತ್ತು ಯೇಸುವಿನ ಇತರ ಶಿಷ್ಯೆಯರು ಸಮಾಧಿಯ ಹತ್ತಿರ ಬರುತ್ತಿದ್ದಾರೆ. ‘ಭಾರವಾದ ಆ ಕಲ್ಲನ್ನು ಉರುಳಿಸಲು ನಮಗೆ ಯಾರು ನೆರವಾಗುವರು?’ ಅಂತ ಚಿಂತೆ ವ್ಯಕ್ತಪಡಿಸುತ್ತಾ ಮಾತಾಡಿಕೊಳ್ಳುತ್ತಿದ್ದಾರೆ. (ಮಾರ್ಕ 16:3) ಅವರು ಸಮಾಧಿಯ ಬಳಿ ಬಂದಾಗ ಆಶ್ಚರ್ಯ ಕಾದಿತ್ತು. ಈಗಾಗಲೇ ಕಲ್ಲನ್ನು ಉರುಳಿಸಲಾಗಿದೆ. ಸಮಾಧಿ ಖಾಲಿಯಾಗಿದೆ! ಯೇಸುವಿನ ಮೃತ ದೇಹ ಅಲ್ಲಿರಲಿಲ್ಲ! ಆ ವಿಷಯವನ್ನು ಅಪೊಸ್ತಲರಿಗೆ ತಿಳಿಸಲು ಮಗ್ದಲದ ಮರಿಯಳು ತಕ್ಷಣವೇ ಊರ ಕಡೆಗೆ ಓಡುತ್ತಾಳೆ.
ಉಳಿದ ಸ್ತ್ರೀಯರು ಸಮಾಧಿಯ ಬಳಿಯಲ್ಲೇ ನಿಂತು ‘ಯೇಸುವಿನ ದೇಹ ಎಲ್ಲಿರಬಹುದು’ ಎಂದು ಯೋಚಿಸತೊಡಗುತ್ತಾರೆ. ಆಗ ಹೊಳೆಯುವ ವಸ್ತ್ರಗಳನ್ನು ಧರಿಸಿದ್ದ ಇಬ್ಬರು ಪುರುಷರು ಫಕ್ಕನೆ ಕಾಣಿಸಿಕೊಳ್ಳುತ್ತಾರೆ. ಅವರು ದೇವದೂತರು! ಅವರು ‘ನೀವು ಯೇಸುವಿಗಾಗಿ ಇಲ್ಲಿ ಏಕೆ ಹುಡುಕುತ್ತಿದ್ದೀರಿ? ಅವನನ್ನು ಎಬ್ಬಿಸಲಾಗಿದೆ. ಬೇಗನೆ ಹೋಗಿ ಶಿಷ್ಯರಿಗೆ ವಿಷಯ ತಿಳಿಸಿರಿ’ ಎಂದು ಹೇಳುತ್ತಾರೆ. ಓಹ್! ಆ ಸ್ತ್ರೀಯರು ಶಿಷ್ಯರನ್ನು ಕಾಣಲು ದೌಡಾಯಿಸಿ ಓಡಿದನ್ನು ನೀನು ಕಲ್ಪಿಸಿಕೊಳ್ಳಬಹುದು! ಅವಸರ ಅವಸರವಾಗಿ ಹೋಗುತ್ತಿದ್ದ ಅವರನ್ನು ದಾರಿಯಲ್ಲಿ ಒಬ್ಬ ಪುರುಷನು ಎದುರುಗೊಳ್ಳುತ್ತಾನೆ. ಅವನು ಯಾರು ಗೊತ್ತಾ?—
ಯೇಸು. ಹೌದು, ಅವನೀಗ ಮಾಂಸಿಕ ದೇಹವನ್ನು ಧರಿಸಿದ್ದಾನೆ. ಆ ಸ್ತ್ರೀಯರನ್ನು ಮಾತಾಡಿಸಿದ ಯೇಸು, ‘ಹೋಗಿ ನನ್ನ ಶಿಷ್ಯರಿಗೆ ತಿಳಿಸಿರಿ’ ಎನ್ನುತ್ತಾನೆ. ಯೇಸುವನ್ನು ಕಂಡ ಸ್ತ್ರೀಯರು ಆನಂದದಿಂದ ಹಿಗ್ಗುತ್ತಾರೆ. ಶಿಷ್ಯರನ್ನು ಭೇಟಿಯಾಗಿ ‘ಯೇಸು ಪುನರುತ್ಥಾನಗೊಂಡಿದ್ದಾನೆ! ನಾವು ಅವನನ್ನು ಕಂಡೆವು!’ ಎಂದು ವಿಷಯ ಒಪ್ಪಿಸುತ್ತಾರೆ. ಮರಿಯಳು ಈಗಾಗಲೇ ಪೇತ್ರಯೋಹಾನರಿಗೆ ಸಮಾಧಿ ಖಾಲಿಯಾಗಿರುವ ವಿಷಯ ತಿಳಿಸಿದ್ದಾಳೆ. ಅವರಿಬ್ಬರು ಸಮಾಧಿ ಬಳಿ ಹೋಗುತ್ತಾರೆ. ಚಿತ್ರದಲ್ಲಿ ನೀನವರನ್ನು ಗಮನಿಸಬಹುದು. ಯೇಸುವಿನ ದೇಹವನ್ನು ಸುತ್ತಿಡಲಾಗಿದ್ದ ಬಟ್ಟೆಯನ್ನು ಅವರಲ್ಲಿ ನೋಡುತ್ತಾರೆ. ಅವರಿಗೆ ತಮ್ಮ ಕಣ್ಣನ್ನೇ ನಂಬಲಾಗುತ್ತಿಲ್ಲ. ಒಂದು ಕ್ಷಣ ತಬ್ಬಿಬ್ಬಾಗಿ ನಿಲ್ಲುತ್ತಾರೆ. ಯೇಸು ಪುನರುತ್ಥಾನಗೊಂಡಿದ್ದಾನೆ ಅಂತ ಅವರಿಗೆ ಗೊತ್ತು. ಆದರೆ ನಂಬುವುದು ಹೇಗೆ?
ಪೇತ್ರ ಯೋಹಾನರು ಏನು ಯೋಚಿಸುತ್ತಿದ್ದಾರೆ?
ಆ ಭಾನುವಾರ ಸಾಯಂಕಾಲ ಯೇಸು, ಎಮ್ಮಾಹು ಎಂಬ ಹಳ್ಳಿಗೆ ಪ್ರಯಾಣಿಸುತ್ತಿದ್ದ ಇಬ್ಬರು ಶಿಷ್ಯರಿಗೆ ಕಾಣಿಸಿಕೊಳ್ಳುತ್ತಾನೆ. ಯೇಸು ಅವರೊಂದಿಗೆ ಹೆಜ್ಜೆಹಾಕುತ್ತಾ ಮಾತಾಡಿದರೂ ಅವರಿಗೆ ಅವನ ಗುರುತು ಸಿಗುವುದಿಲ್ಲ. ಕಾರಣ ಯೇಸು ಈಗ ಧರಿಸಿರುವ ಮಾಂಸಿಕ ದೇಹ ಅವನು ಸಾಯುವ ಮೊದಲಿದ್ದ ದೇಹವನ್ನು ಹೋಲುತ್ತಿರಲಿಲ್ಲ. ಹಾಗಾಗಿ ತಮ್ಮೊಂದಿಗೆ ಯೇಸು ಊಟ ಪ್ರಾರ್ಥನೆ ಮಾಡಿದ ಮೇಲೆಯಷ್ಟೇ ಅವರಿಗೆ ಅವನ ಗುರುತು ಸಿಗುತ್ತದೆ. ಸಂತೋಷಗೊಂಡ ಆ ಶಿಷ್ಯರು ತಕ್ಷಣ ಬಲು ದೂರದಲ್ಲಿದ್ದ ಯೆರೂಸಲೇಮಿಗೆ ಧಾವಿಸಿ ಬರುತ್ತಾರೆ. ಈ ಘಟನೆ ನಡೆದು ಸ್ವಲ್ಪ ಹೊತ್ತಿನಲ್ಲೇ ಇರಬೇಕು ಯೇಸು ತಾನು ಜೀವಂತವಿರುವುದನ್ನು ರುಜುಪಡಿಸಲು ಪೇತ್ರನಿಗೆ ಕಾಣಿಸಿಕೊಂಡದ್ದು.
ಆ ಭಾನುವಾರ ಸಂಜೆ ಯೆರೂಸಲೇಮಿನಲ್ಲಿ ಅನೇಕ ಶಿಷ್ಯರು ಒಂದು ಕೋಣೆಯಲ್ಲಿ ಸೇರಿದ್ದರು. ಬಾಗಿಲಿಗೆ ಚಿಲಕ ಹಾಕಲಾಗಿತ್ತು. ದಿಢೀರನೇ ಆ ಕೋಣೆಯಲ್ಲಿ ಅವರ ಮಧ್ಯೆ ಯೇಸು ಕಾಣಿಸಿಕೊಳ್ಳುತ್ತಾನೆ. ಮಹಾ ಬೋಧಕ ಪುನಃ ಬದುಕಿದ್ದಾನೆ ಅನ್ನೋದರಲ್ಲಿ ಅವರಿಗೀಗ ಕಿಂಚಿತ್ತೂ ಸಂದೇಹವಿಲ್ಲ. ಯೇಸುವನ್ನು ಪುನಃ ನೋಡಿದ ಅವರ ಸಂಭ್ರಮವನ್ನು ಸ್ವಲ್ಪ ಊಹಿಸಿನೋಡು.—ಮತ್ತಾಯ 28:1-15; ಲೂಕ 24:1-49; ಯೋಹಾನ 19:38-20:21.
ಯೇಸು 40 ದಿನಗಳ ವರೆಗೆ ಶಿಷ್ಯರಿಗೆ ಬೇರೆ ಬೇರೆ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ. ಇದರಿಂದ ಅವನು ಬದುಕಿರುವುದು ಶಿಷ್ಯರಿಗೆ ಖಾತ್ರಿಯಾಗುತ್ತದೆ. ಅನಂತರ ಅವನು ಸ್ವರ್ಗದಲ್ಲಿರುವ ತನ್ನ ತಂದೆಯ ಬಳಿಗೆ ಹಿಂದಿರುಗುತ್ತಾನೆ. (ಅಪೊಸ್ತಲರ ಕಾರ್ಯಗಳು 1:9-11) ದೇವರು ಯೇಸುವನ್ನು ಪುನಃ ಬದುಕಿಸಿದ್ದಾನೆಂದು ಶಿಷ್ಯರು ಸಾರಲಾರಂಭಿಸುತ್ತಾರೆ. ಯಾಜಕರು ಅವರಲ್ಲಿ ಕೆಲವರನ್ನು ಹೊಡೆದರೂ ಕೊಂದರೂ ಸಾರುವುದನ್ನು ಮಾತ್ರ ಅವರು ನಿಲ್ಲಿಸುವುದಿಲ್ಲ. ತಾವು ಸತ್ತರೂ ದೇವರು ತನ್ನ ಮಗನನ್ನು ಪುನರುತ್ಥಾನಗೊಳಿಸಿದಂತೆ ತಮ್ಮನ್ನೂ ಪುನರುತ್ಥಾನಗೊಳಿಸುವನು ಎಂಬ ಭರವಸೆ ಅವರಿಗಿತ್ತು.
ಯೇಸುವಿನ ಪುನರುತ್ಥಾನದ ದಿನವನ್ನು ಆಚರಿಸುವ ಅನೇಕರು ಯಾವುದರ ಕುರಿತು ಯೋಚಿಸುತ್ತಾರೆ? ಆದರೆ ನೀನು ಯಾವುದರ ಬಗ್ಗೆ ಯೋಚಿಸಬೇಕು?
ಯೇಸುವಿನ ಆ ಹಿಂಬಾಲಕರು ಇಂದಿನ ಅನೇಕ ಜನರಿಗಿಂತ ತುಂಬಾನೇ ಭಿನ್ನರಾಗಿದ್ದರಲ್ವಾ. ಇಂದು ಅನೇಕರು ಯೇಸುವಿನ ಪುನರುತ್ಥಾನದ ದಿನವನ್ನು ಕೊಂಡಾಡುತ್ತಾ ಕೇವಲ ಈಸ್ಟರ್ ಮೊಲಗಳ ಮತ್ತು ಈಸ್ಟರ್ ಮೊಟ್ಟೆಗಳ ಬಗ್ಗೆ ಮಾತ್ರ ಯೋಚಿಸುತ್ತಾರೆ. ಆದರೆ ಈಸ್ಟರ್ ಮೊಲಗಳ ಬಗ್ಗೆಯಾಗಲಿ ಮೊಟ್ಟೆಗಳ ಬಗ್ಗೆಯಾಗಲಿ ಬೈಬಲ್ ಏನೂ ಹೇಳುವುದಿಲ್ಲ. ಬದಲಾಗಿ ದೇವರ ಸೇವೆ ಮಾಡುವುದರ ಬಗ್ಗೆ ಮಾತಾಡುತ್ತದೆ.
ಯೇಸುವನ್ನು ದೇವರು ಪುನರುತ್ಥಾನಗೊಳಿಸಿದ ಅದ್ಭುತ ಕಾರ್ಯವನ್ನು ಜನರಿಗೆ ಸಾರುವ ಮೂಲಕ ನಾವು ಸಹ ಯೇಸುವಿನ ಆ ಶಿಷ್ಯರಂತೆ ಇರಸಾಧ್ಯವಿದೆ. ಸಾರುವಾಗ ನಾವು ಜನರಿಗೆ ಭಯಪಡಬೇಕಾಗಿಲ್ಲ. ಕೊಲ್ಲುವುದಾಗಿ ಬೆದರಿಸುವಾಗಲೂ ಭಯಪಡಬೇಕಾಗಿಲ್ಲ. ನಾವು ಸತ್ತರೂ ಯೆಹೋವನು ನಮ್ಮನ್ನೂ ಜ್ಞಾಪಿಸಿಕೊಂಡು ಪುನರುತ್ಥಾನಗೊಳಿಸುವನು.
ತನ್ನ ಸೇವಕರನ್ನು ದೇವರು ಜ್ಞಾಪಿಸಿಕೊಂಡು ಪುನರುತ್ಥಾನಗೊಳಿಸುತ್ತಾನೆ ಎನ್ನುವ ವಿಷಯ ನಮಗೆ ಮುದ ನೀಡುತ್ತದಲ್ಲವೇ?— ಈ ಸತ್ಯ ತಿಳಿದ ನಾವು ದೇವರನ್ನು ಸಂತೋಷಪಡಿಸುವುದು ಹೇಗೆ ಎಂದು ತಿಳಿದುಕೊಳ್ಳಲು ಹಾತೊರೆಯಬೇಕು. ದೇವರನ್ನು ಸಂತೋಷಪಡಿಸಲು ನಮ್ಮಿಂದ ಸಾಧ್ಯ ಅಂತ ನಿನಗೆ ಗೊತ್ತಿತ್ತಾ?— ಇದರ ಕುರಿತು ಮುಂದಿನ ಅಧ್ಯಾಯದಲ್ಲಿ ಕಲಿಯೋಣ.
ಯೇಸುವಿನ ಪುನರುತ್ಥಾನ ನಮ್ಮ ನಿರೀಕ್ಷೆ ಹಾಗೂ ಭರವಸೆಯನ್ನು ಬಲಪಡಿಸುತ್ತದೆ. ನಾವೀಗ ಅಪೊಸ್ತಲರ ಕಾರ್ಯಗಳು 2:22-36; 4:18-20 ಮತ್ತು 1 ಕೊರಿಂಥ 15:3-8, 20-23 ಓದೋಣ.