ಅಧ್ಯಾಯ 20
ಯೇಸು ಕ್ರಿಸ್ತನ ಮರಣ
ಯೇಸು ಒಂದು ಹೊಸ ಆಚರಣೆಯನ್ನು ಆರಂಭಿಸುತ್ತಾನೆ; ಯೇಸುವಿಗೆ ನಂಬಿಕೆ ದ್ರೋಹಮಾಡಿ ಮರಣ ದಂಡನೆ ವಿಧಿಸಲಾಗುತ್ತದೆ
ಮೂರುವರೆ ವರ್ಷಗಳಿಂದಲೂ ಸಾರುತ್ತಾ ಬೋಧಿಸುತ್ತಾ ಬಂದಿದ್ದ ಯೇಸುವಿಗೆ ಇನ್ನೇನು ಭೂಮಿಯ ಮೇಲಿನ ತನ್ನ ಜೀವನ ಮುಗಿಯಲಿದೆಯೆಂದು ಗೊತ್ತಿತ್ತು. ಯೆಹೂದಿ ಧಾರ್ಮಿಕ ಮುಖಂಡರು ಯೇಸುವನ್ನು ಕೊಲ್ಲಲು ಸಂಚು ಹೂಡುತ್ತಲೇ ಇದ್ದರು. ಆದರೆ ಯೇಸುವನ್ನು ಹಿಡಿದರೆ ಜನರು ದಂಗೆಯೇಳಬಹುದೆಂಬ ಅಂಜಿಕೆ ಅವರಲ್ಲಿತ್ತು. ಏಕೆಂದರೆ ಜನರು ಯೇಸುವನ್ನು ಪ್ರವಾದಿಯೆಂದು ನಂಬುತ್ತಿದ್ದರು. ಹಾಗಿರುವಾಗ ಯೇಸುವಿನ 12 ಅಪೊಸ್ತಲರಲ್ಲಿ ಒಬ್ಬನಾದ ಇಸ್ಕರಿಯೋತ ಯೂದನು ತನ್ನ ಗುರುವಾದ ಯೇಸುವಿಗೆ ನಂಬಿಕೆದ್ರೋಹ ಮಾಡುವಂತೆ ಸೈತಾನನು ಪ್ರಭಾವಿಸಿದನು. ಯೇಸುವನ್ನು ಹಿಡಿದುಕೊಟ್ಟರೆ 30 ಬೆಳ್ಳಿ ನಾಣ್ಯಗಳನ್ನು ಕೊಡುವುದಾಗಿ ಧಾರ್ಮಿಕ ಮುಖಂಡರು ಯೂದನಿಗೆ ಮಾತುಕೊಟ್ಟರು.
ಯೇಸು ತಾನು ಸಾಯಲಿದ್ದ ರಾತ್ರಿಯಂದು ಪಸ್ಕ ಹಬ್ಬವನ್ನು ಆಚರಿಸಲು ತನ್ನ ಅಪೊಸ್ತಲರೊಂದಿಗೆ ಕೂಡಿಬಂದನು. ಪಸ್ಕ ಹಬ್ಬವನ್ನು ಆಚರಿಸಿದ ನಂತರ ಯೇಸು ಇಸ್ಕರಿಯೋತ ಯೂದನನ್ನು ಹೊರಗೆ ಕಳುಹಿಸಿ ಉಳಿದ 11 ಅಪೊಸ್ತಲರೊಂದಿಗೆ ‘ಕರ್ತನ ಸಂಧ್ಯಾ ಭೋಜನ’ ಎಂಬ ಒಂದು ಹೊಸ ಆಚರಣೆಯನ್ನು ಆರಂಭಿಸಿದನು. ಯೇಸು ಒಂದು ರೊಟ್ಟಿಯನ್ನು ಮುರಿದು ಪ್ರಾರ್ಥನೆ ಮಾಡಿ 11 ಅಪೊಸ್ತಲರಿಗೆ ಆ ರೊಟ್ಟಿಯನ್ನು ಹಂಚಿದನು. ಮತ್ತು “ಇದು ನಿಮಗೋಸ್ಕರ ಕೊಡಲ್ಪಡಲಿರುವ ನನ್ನ ದೇಹವನ್ನು ಸೂಚಿಸುತ್ತದೆ. ನನ್ನನ್ನು ಜ್ಞಾಪಿಸಿಕೊಳ್ಳುವುದಕ್ಕೋಸ್ಕರ ಇದನ್ನು ಮಾಡುತ್ತಾ ಇರಿ” ಎಂದು ಹೇಳಿದನು. ಅನಂತರ ದ್ರಾಕ್ಷಾಮದ್ಯವನ್ನು ತೆಗೆದುಕೊಂಡು ಪ್ರಾರ್ಥನೆ ಮಾಡಿ ಅದನ್ನು ಶಿಷ್ಯರಿಗೆ ನೀಡಿ “ಈ ಪಾತ್ರೆಯು . . . ನನ್ನ ರಕ್ತದ ಆಧಾರದ ಮೇಲೆ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ” ಎಂದು ಹೇಳಿದನು.—ಲೂಕ 22:19, 20.
ಆ ರಾತ್ರಿ ಯೇಸು ತನ್ನ ಅಪೊಸ್ತಲರೊಂದಿಗೆ ಮಾತಾಡುತ್ತಾ ಹಲವಾರು ವಿಷಯಗಳನ್ನು ತಿಳಿಸಿದನು. ಶಿಷ್ಯರು ಒಬ್ಬರಿಗೊಬ್ಬರು ನಿಸ್ವಾರ್ಥ ಪ್ರೀತಿಯನ್ನು ತೋರಿಸಬೇಕೆಂಬ ಹೊಸ ಆಜ್ಞೆಯನ್ನು ಅವರಿಗೆ ಕೊಟ್ಟನು. “ನಿಮ್ಮ ಮಧ್ಯೆ ಪ್ರೀತಿಯಿರುವುದಾದರೆ ನೀವು ನನ್ನ ಶಿಷ್ಯರೆಂದು ಎಲ್ಲರೂ ತಿಳಿದುಕೊಳ್ಳುವರು” ಎಂದು ಯೇಸು ಹೇಳಿದನು. (ಯೋಹಾನ 13:34, 35) ಮುಂದೆ ನಡೆಯಲಿರುವ ದುರಂತಕರ ಘಟನೆಗಳನ್ನು ನೋಡಿ ಕಳವಳಗೊಳ್ಳಬಾರದೆಂದೂ ಅವನು ಶಿಷ್ಯರಿಗೆ ಬುದ್ಧಿ ಹೇಳಿದನು. ಯೇಸು ಅವರಿಗಾಗಿ ದೇವರ ಬಳಿ ತೀವ್ರ ಆಸಕ್ತಿಯಿಂದ ಪ್ರಾರ್ಥಿಸಿದನು. ಅವರೆಲ್ಲರೂ ಒಟ್ಟಾಗಿ ಸ್ತುತಿಗೀತೆಗಳನ್ನು ಹಾಡಿ ರಾತ್ರಿ ಅಲ್ಲಿಂದ ಗೆತ್ಸೇಮನೆ ತೋಟಕ್ಕೆ ಹೋದರು.
ಗೆತ್ಸೇಮನೆ ತೋಟದಲ್ಲಿ ಯೇಸು ಮೊಣಕಾಲೂರಿ ಹೃದಯಾಳದಿಂದ ಯೆಹೋವನಿಗೆ ಪ್ರಾರ್ಥಿಸಿದನು. ಅದಾಗಿ ಸ್ವಲ್ಪದರಲ್ಲಿ ಯಾಜಕರು, ಶಸ್ತ್ರಾಸ್ತ್ರ ಹೊಂದಿದ್ದ ಸೈನಿಕರು ಮುಂತಾದ ಜನರಿದ್ದ ಒಂದು ದೊಡ್ಡ ಗುಂಪು ಯೇಸುವನ್ನು ಸಮೀಪಿಸಿತು. ಆ ಗುಂಪಿನಿಂದ ಇಸ್ಕರಿಯೋತ ಯೂದನು ಯೇಸುವಿನ ಹತ್ತಿರಕ್ಕೆ ಬಂದು ಅವನಿಗೆ ಮುದ್ದಿಟ್ಟು ಅವನನ್ನು ಜನರಿಗೆ ತೋರಿಸಿಕೊಟ್ಟನು. ಸೈನಿಕರು ಯೇಸುವನ್ನು ಹಿಡಿದಾಕ್ಷಣ ಅಪೊಸ್ತಲರೆಲ್ಲರೂ ಅಲ್ಲಿಂದ ಪಲಾಯನಗೈದರು.
ಯೇಸುವನ್ನು ಯೆಹೂದಿ ಮುಖ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಅಲ್ಲಿ ಯೇಸು ತಾನು ದೇವರ ಮಗನೆಂದು ಹೇಳಿಕೊಂಡನು. ಅದನ್ನು ಕೇಳಿದ ನ್ಯಾಯಾಲಯವು ದೇವದೂಷಕನೆಂಬ ಆರೋಪವನ್ನು ಅವನ ಮೇಲೆ ಹೊರಿಸಿ ಮರಣದಂಡನೆಗೆ ಯೋಗ್ಯನೆಂದು ತೀರ್ಮಾನಿಸಿತು. ಯೇಸುವನ್ನು ಅಲ್ಲಿಂದ ರೋಮನ್ ಅಧಿಪತಿ ಪೊಂತ್ಯ ಪಿಲಾತನ ಸಮ್ಮುಖಕ್ಕೆ ತರಲಾಯಿತು. ಪಿಲಾತನಿಗೆ ಯೇಸುವಿನಲ್ಲಿ ಯಾವ ತಪ್ಪೂ ಕಂಡುಬರಲಿಲ್ಲ. ಆದರೆ ಜನರ ಗುಂಪು ಯೇಸುವನ್ನು ಮರಣದಂಡನೆಗೆ ಗುರಿಪಡಿಸಬೇಕೆಂದು ಕೂಗುತ್ತಿದ್ದ ಕಾರಣ ಅವನು ಯೇಸುವನ್ನು ಅವರ ಕೈಗೆ ಒಪ್ಪಿಸಿದನು.
ಅವರು ಯೇಸುವನ್ನು ಗೊಲ್ಗೊಥಾ ಎಂಬ ಸ್ಥಳಕ್ಕೆ ತೆಗೆದುಕೊಂಡು ಹೋದರು. ಅಲ್ಲಿ ರೋಮನ್ ಸೈನಿಕರು ಅವನ ಕೈಕಾಲುಗಳಿಗೆ ಮೊಳೆ ಜಡಿದು ಮರದ ಕಂಬಕ್ಕೆ ತೂಗುಹಾಕಿದರು. ಆಗೊಂದು ಅದ್ಭುತ ನಡೆಯಿತು. ಪ್ರಜ್ವಲಿಸುತ್ತಿದ್ದ ಸೂರ್ಯನ ಬೆಳಕು ಹೋಗಿ ನಡುಹಗಲಿನಲ್ಲಿ ಇದ್ದಕ್ಕಿದ್ದಂತೆ ಕತ್ತಲು ಕವಿಯಿತು. ತದನಂತರ ಯೇಸು ಪ್ರಾಣಬಿಟ್ಟನು. ಆಗ ಭಾರಿ ಭೂಕಂಪವಾಯಿತು. ಬಂಡೆ ಕೊರೆದು ಮಾಡಲಾದ ಸಮಾಧಿಯೊಂದರಲ್ಲಿ ಯೇಸುವಿನ ಮೃತ ದೇಹವನ್ನು ಇಟ್ಟರು. ಮರುದಿನ ಯಾಜಕರು ಬಂದು ಆ ಸಮಾಧಿಯನ್ನು ಭದ್ರಪಡಿಸಿ ಅದನ್ನು ಕಾಯಲು ಸೈನಿಕರನ್ನು ನೇಮಿಸಿದರು. ಆದರೆ ಯೇಸು ಸಮಾಧಿಯಲ್ಲೇ ಉಳಿಯಲಿದ್ದನೋ? ಇಲ್ಲ. ಎಂದೂ ಸಂಭವಿಸಿರದಂಥ ಮಹಾ ಅದ್ಭುತವೊಂದಕ್ಕೆ ವೇದಿಕೆ ಸಿದ್ಧವಾಗಿತ್ತು.
—ಮತ್ತಾಯ ಅಧ್ಯಾಯ 26 ಮತ್ತು 27; ಮಾರ್ಕ ಅಧ್ಯಾಯ 14 ಮತ್ತು 15; ಲೂಕ ಅಧ್ಯಾಯ 22 ಮತ್ತು 23; ಯೋಹಾನ ಅಧ್ಯಾಯ 12ರಿಂದ 19ರ ಮೇಲೆ ಆಧಾರಿತವಾಗಿದೆ.
a ಯೇಸುವಿನ ಮರಣವು ಏಕೆ ಅಷ್ಟೊಂದು ಪ್ರಾಮುಖ್ಯವಾಗಿತ್ತು ಎಂಬುದನ್ನು ತಿಳಿದುಕೊಳ್ಳಲು ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಎಂಬ ಪುಸ್ತಕದ 47ರಿಂದ 56 ಪುಟಗಳನ್ನು ನೋಡಿರಿ.