ಅಧ್ಯಾಯ 8
ನಾನು ಒಳ್ಳೇ ಸ್ನೇಹಿತರನ್ನ ಹೇಗೆ ಮಾಡಿಕೊಳ್ಳಲಿ?
“ನನಗೆ ಕೋಪ ಬಂದಾಗ ಅದನ್ನ ತೋರಿಸಿಕೊಳ್ಳೋಕೆ ಯಾರಾದರೂ ಬೇಕು. ನನಗೆ ದುಃಖ ಆದಾಗ ಪರ್ವಾಗಿಲ್ಲ, ಏನೂ ಆಗಲ್ಲ ಅಂತ ಸಮಾಧಾನ ಮಾಡೋಕೆ ಒಬ್ಬರು ಬೇಕು. ನನಗೆ ಖುಷಿಯಾದಾಗ ಅದನ್ನು ಯಾರ ಜೊತೆಯಾದ್ರೂ ಹಂಚಿಕೊಳ್ಳಬೇಕು. ನನಗೆ ಫ್ರೆಂಡ್ಸ್ ಇಲ್ಲದೆ ಬದುಕೋಕೆ ಆಗಲ್ಲ.”—ಬ್ರಿಟನಿ.
ಚಿಕ್ಕ ಮಕ್ಕಳಿಗೆ ಆಟ ಆಡುವವರು ಬೇಕು ಆದ್ರೆ ದೊಡ್ಡವರಿಗೆ ಫ್ರೆಂಡ್ಸ್ ಬೇಕು. ಇವೆರಡರ ವ್ಯತ್ಯಾಸ ಏನು?
ಮಕ್ಕಳಿಗೆ ಆಟ ಆಡೋಕೆ ಯಾರಾದರೂ ಜೊತೇಲಿ ಇದ್ದರೆ ಸಾಕು.
ಆದ್ರೆ ಹದಿವಯಸ್ಕರಿಗೆ, ಸಹಾಯ ಮಾಡೋ ಬೆಂಬಲ ಕೊಡೋ ಸ್ನೇಹಿತರು ಬೇಕು.
“ನಿಜವಾದ ಸ್ನೇಹಿತ ಎಲ್ಲ ಸಮಯದಲ್ಲೂ ಪ್ರೀತಿಸ್ತಾನೆ. ಕಷ್ಟಕಾಲದಲ್ಲಿ ಅವನು ನಿಮ್ಮ ಸಹೋದರನಾಗ್ತಾನೆ” ಅಂತ ಬೈಬಲ್ ಹೇಳುತ್ತೆ. (ಜ್ಞಾನೋಕ್ತಿ 17:17) ಚಿಕ್ಕ ವಯಸ್ಸಲ್ಲಿ ನಿಮ್ಮ ಜೊತೆ ಆಟ ಆಡಿದವರಿಗಿಂತ ಇವರು ನಿಮಗೆ ತುಂಬ ಸ್ಪೆಷಲ್ ಆಗಿರುತ್ತಾರೆ.
ನಿಜ: ದೊಡ್ಡವರಾದಾಗ ನಿಮಗೆ ಈ ತರ ಫ್ರೆಂಡ್ಸ್ ಇದ್ರೆ ಒಳ್ಳೇದು
1. ಒಳ್ಳೆ ಗುಣ ಇರಬೇಕು
2. ಒಳ್ಳೆ ನಡತೆಯುಳ್ಳವರಾಗಿರಬೇಕು
3. ನಿಮ್ಮನ್ನ ತಿದ್ದುವ ವ್ಯಕ್ತಿಗಳಾಗಿರಬೇಕು
ಪ್ರಶ್ನೆ: ಈ ತರ ಫ್ರೆಂಡ್ಸ್ ನಿಮಗೆ ಎಲ್ಲಿ ಸಿಗ್ತಾರೆ? ಬನ್ನಿ ಅದರ ಬಗ್ಗೆ ಸ್ವಲ್ಪ ಮಾತಾಡೋಣ.
ಒಳ್ಳೆ ಫ್ರೆಂಡ್ ಆಗೋಕೆ #1—ಒಳ್ಳೆ ಗುಣ ಇರಬೇಕು
ನಿಮಗೆ ಗೊತ್ತಿರಬೇಕಾದ ವಿಷಯ. ನಾನು ನಿನ್ನ ಫ್ರೆಂಡ್ ಅಂತ ಬಾಯಿ ಮಾತಲ್ಲಿ ಹೇಳೋರಲ್ಲ, ಕಷ್ಟಕಾಲದಲ್ಲಿ ಕೈ ಹಿಡಿಯೋರೇ ನಿಜವಾದ ಫ್ರೆಂಡ್ಸ್. ಯಾಕಂದ್ರೆ ಬೈಬಲ್ನಲ್ಲಿ ಹೀಗಿದೆ “ಒಬ್ರನ್ನೊಬ್ರು ಜಜ್ಜಿಬಿಡಬೇಕು ಅಂತ ಕಾಯೋ ಜೊತೆಗಾರರೂ ಇದ್ದಾರೆ.” (ಜ್ಞಾನೋಕ್ತಿ 18:24) ಇದು ನಿಜಾನಾ? ಹೌದು. ಈ ಪ್ರಶ್ನೆಗಳ ಬಗ್ಗೆ ಯೋಚನೆ ಮಾಡಿ: ಬೇಕಾದಾಗ ನಿಮ್ಮನ್ನು ಟೈಂಪಾಸಿಗೆ ಯೂಸ್ ಮಾಡ್ಕೊಂಡು ಬಿಸಾಡಿದ ಫ್ರೆಂಡ್ಸ್ ನಿಮಗಿದ್ರಾ? ನಿಮ್ಮ ಬೆನ್ನಿಗೆ ಚೂರಿ ಹಾಕಿ ನೀವು ಹೋಗೋ ದಾರಿಯಲ್ಲಿ ಮುಳ್ಳು ನೆಟ್ಟಿದ್ದ ಫ್ರೆಂಡ್ಸ್ ನಿಮಗಿದ್ರಾ? ನಿಮಗೆ ಈ ತರ ಒಂದು ಫ್ರೆಂಡ್ ಇದ್ರೆ ಅವರನ್ನ ಮತ್ತೆ ನಂಬೋಕೆ ಧೈರ್ಯನೇ ಬರಲ್ಲ ಅಲ್ವಾ?a ವ್ಯಕ್ತಿಯನ್ನು ನೋಡಿ ಮಾಡುವ ಸ್ನೇಹಕ್ಕಿಂತ, ವ್ಯಕ್ತಿತ್ವವನ್ನು ನೋಡಿ ಮಾಡುವ ಸ್ನೇಹ ಶಾಶ್ವತ ಅನ್ನೋದನ್ನ ಯಾವಾಗಲೂ ನೆನಪಲ್ಲಿಡಿ!
ನೀವೇನು ಮಾಡಬೇಕು. ಒಳ್ಳೆ ಗುಣಗಳಿರುವ ವ್ಯಕ್ತಿಗಳನ್ನು ಫ್ರೆಂಡ್ಸ್ ಮಾಡಿಕೊಳ್ಳಿ.
”ನನ್ನ ಫ್ರೆಂಡ್ ಫಿಯೋನಾ ಕಂಡ್ರೆ ಎಲ್ಲರಿಗೂ ತುಂಬ ಇಷ್ಟ. ನನನ್ನೂ ಎಲ್ಲರು ಇಷ್ಟ ಪಡಬೇಕು ಅನ್ನೋದೆ ನನ್ನ ಆಸೆ. ಅವಳ ತರ ಒಳ್ಳೆ ಹೆಸರು ಮಾಡಬೇಕು, ಅವಳ ತರ ಒಳ್ಳೆ ಹುಡುಗಿ ಆಗಬೇಕು ಅನ್ನೋದೇ ನನ್ನ ಗುರಿ.”—ಇವೆಟ್ , 17
ಇದನ್ನ ಮಾಡಿ ನೋಡಿ.
1. ಗಲಾತ್ಯ 5: 22, 23 ಓದಿ.
2. ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ, ’ಈ ವಚನದಲ್ಲಿರುವ ಒಳ್ಳೆ ಗುಣಗಳು ನನ್ನ ಫ್ರೆಂಡ್ಸ್ಗೆ ಇದ್ಯಾ?’
3. ನಿಮ್ಮ ಬೆಸ್ಟ್ ಫ್ರೆಂಡ್ಸ್ ಹೆಸರನ್ನ ಬರೆಯಿರಿ. ಅದರ ಪಕ್ಕದಲ್ಲೇ ಅವರಿಗಿರೋ ಒಳ್ಳೆ ಗುಣಗಳು ಯಾವುದು, ಕೆಟ್ಟ ಗುಣಗಳು ಯಾವುದು ಅಂತನೂ ಬರೆಯಿರಿ.
ಹೆಸರು
............
ಗುಣ
............
ಟಿಪ್ಸ್: ಒಂದುವೇಳೆ ನಿಮ್ಮ ಮನಸ್ಸಿಗೆ ನಿಮ್ಮ ಫ್ರೆಂಡಲ್ಲಿರೋ ಬರೀ ಕೆಟ್ಟ ಗುಣಗಳಷ್ಟೇ ನೆನಪಾಗ್ತಿದೆ ಅಂದ್ರೆ, ಆ ಫ್ರೆಂಡ್ಶಿಪ್ ಬಿಟ್ಟು ಬಿಡೋದೇ ಒಳ್ಳೇದು.
ಒಳ್ಳೆ ಫ್ರೆಂಡ್ ಆಗೋಕೆ #2—ಒಳ್ಳೆ ನಡತೆಯುಳ್ಳವರಾಗಿರಬೇಕು
ನಿಮಗೆ ಗೊತ್ತಿರಬೇಕಾದ ವಿಷಯ. ಹೇಗಾದ್ರೂ ಮಾಡಿ ಜಾಸ್ತಿ ಫ್ರೆಂಡ್ಸ್ ಮಾಡಿಕೊಳ್ಳಬೇಕು ಅಂದ್ಕೊಂಡ್ರೆ ನಮಗೆ ಯಾವತ್ತೂ ಒಳ್ಳೆ ಫ್ರೆಂಡ್ಸ್ ಸಿಗಲ್ಲ. ಯಾಕಂದ್ರೆ ಬೈಬಲ್ ಹೀಗೆ ಹೇಳುತ್ತೆ “ಮೂರ್ಖನ ಜೊತೆ ಸೇರುವವನು ಹಾಳಾಗಿ ಹೋಗ್ತಾನೆ.” (ಜ್ಞಾನೋಕ್ತಿ 13:20) ಈ ವಚನದಲ್ಲಿ “ಮೂರ್ಖ” ಅಂತ ಹೇಳಿರೋದು ದಡ್ಡರು ಅಥವಾ ಕಡಿಮೆ ಮಾರ್ಕ್ಸ್ ತಗೊಳೋರಲ್ಲ ಬದಲಿಗೆ ಒಳ್ಳೆ ಸಲಹೆ ಕೊಟ್ರೂ ಅದನ್ನ ಕೇಳಿಸಿಕೊಳ್ಳದೆ ತನ್ನಿಷ್ಟಕ್ಕೆ ತಾನೇ ನಡ್ಕೊಳ್ಳೋರ ಬಗ್ಗೆ ಹೇಳುತ್ತೆ. ಅಂಥ ಫ್ರೆಂಡ್ಸ್ ಇದ್ರೆ ನಾವು ಹಾಳಾಗೋದು ಗ್ಯಾರಂಟಿ ಅಂಥವರ ಜೊತೆ ನಾವು ಸಹವಾಸನೇ ಇಟ್ಕೋಬಾರದು.
ನೀವೇನು ಮಾಡಬೇಕು. ಸಿಕ್ಕಸಿಕ್ಕವರನ್ನ ಫ್ರೆಂಡ್ಸ್ ಮಾಡಿಕೊಳ್ಳೋದಕ್ಕಿಂತ ಎಂಥವರು ನಮ್ಮ ಫ್ರೆಂಡ್ಸ್ ಆಗಿರಬೇಕು ಅಂತ ಸ್ವಲ್ಪ ಯೋಚನೆ ಮಾಡಿ ಫ್ರೆಂಡ್ಸ್ ಮಾಡಿಕೊಳ್ಳಬೇಕು. (ಕೀರ್ತನೆ 26:4) ಹಾಗಂತ ಕಣ್ಮುಚ್ಚಿ ಎಲ್ಲರನ್ನೂ ಫ್ರೆಂಡ್ಸ್ ಮಾಡ್ಕೋಬಾರದು.“ನೀತಿವಂತನಿಗೂ ಕೆಟ್ಟವನಿಗೂ ಮತ್ತು ದೇವರನ್ನ ಆರಾಧಿಸುವವನಿಗೂ ಆರಾಧಿಸದವನಿಗೂ ಇರೋ ವ್ಯತ್ಯಾಸವನ್ನ” ಅರ್ಥಮಾಡಿಕೊಳ್ಳುವಷ್ಟು ಸಾಮರ್ಥ್ಯ ಇರಬೇಕು.—ಮಲಾಕಿ 3:18.
“ದೇವರನ್ನ ಪ್ರೀತಿಸಿ ಆತನಿಗೆ ಇಷ್ಟ ಇರುವ ವಿಷಯಗಳನ್ನ ಮಾಡುವ ಫ್ರೆಂಡ್ಸ್ ನಂಗೆ ಇದ್ದಾರೆ. ಅಂಥ ಫ್ರೆಂಡ್ಸನ ಕಂಡು ಹಿಡಿಯೋಕೆ ಅಪ್ಪ ಅಮ್ಮನೇ ನನಗೆ ಸಹಾಯ ಮಾಡಿದ್ದು. ಅಷ್ಟೇ ಅಲ್ಲ ಇವರು ನನ್ನ ವಯಸ್ಸಿನವರೇ.” —ಕ್ರಿಸ್ಟೋಫರ್, 13.
ಈ ಪ್ರಶ್ನೆಗಳಿಗೆ ನಿಮ್ಮ ಉತ್ತರ ಏನು?
ಫ್ರೆಂಡ್ಸ್ ಜೊತೆ ನಾನಿರುವಾಗ, ತಪ್ಪಾಗಿರೋ ವಿಷಯಗಳನ್ನ ಮಾಡೋಕೆ ಅವರು ನನಗೆ ಹೇಳ್ತಾರೆ ಅನ್ನೋ ಭಯ ನನಗಿದ್ಯಾ?
❏ ಹೌದು
❏ ಇಲ್ಲ
ಅಪ್ಪ ಅಮ್ಮಗೆ ನನ್ನ ಫ್ರೆಂಡ್ಸ್ನ ಪರಿಚಯ ಮಾಡ್ಸೋಕೆ ನಾನು ಹೆದರುತ್ತೀನಾ?
❏ ಹೌದು
❏ ಇಲ್ಲ
ಟಿಪ್ಸ್: ಒಂದುವೇಳೆ ಈ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಅಂತ ಇರೋದಾದ್ರೆ ಅವರ ಜೊತೆ ಫ್ರೆಂಡ್ಶಿಪನ್ನು ಕಟ್ ಮಾಡಬೇಕು ಅಂತರ್ಥ. ಅಂಥವರ ಫ್ರೆಂಡ್ ಆಗಿರೋ ಬದಲು ದೇವ್ರನ್ನ ಪ್ರೀತಿಸುವವರನ್ನ ಫ್ರೆಂಡ್ಸಾಗಿ ಮಾಡಿಕೊಳ್ಳಿ.
ಒಳ್ಳೆ ಫ್ರೆಂಡ್ ಆಗೋಕೆ #3—ನಿಮ್ಮನ್ನ ತಿದ್ದುವ ವ್ಯಕ್ತಿಗಳಾಗಿರಬೇಕು
ನಿಮಗೆ ಗೊತ್ತಿರಬೇಕಾದ ವಿಷಯ. “ಕೆಟ್ಟ ಸಹವಾಸ ಒಳ್ಳೇ ನಡತೆಯನ್ನ ಹಾಳು ಮಾಡುತ್ತೆ” ಅಂತ ಬೈಬಲ್ ಹೇಳುತ್ತೆ (1 ಕೊರಿಂಥ 15:33) ಲಾರೆನ್ ಅನ್ನೋ ಹುಡುಗಿ ಹೀಗೆ ಹೇಳ್ತಾಳೆ: “ನನ್ನ ಕ್ಲಾಸ್ಮೇಟ್ಸ್ ಹೇಳೋದನ್ನ ಕೇಳಿದ್ರೆ ಮಾತ್ರ ಅವರು ನನ್ನನ್ನ ಫ್ರೆಂಡ್ ಅಂತ ಒಪ್ಪಿಕೊಳ್ಳುತ್ತಿದ್ರು. ನಂಗೆ ಫ್ರೆಂಡ್ಸೇ ಇಲ್ಲ, ಅದಕ್ಕೆ ನಾನು ಅವ್ರಿಗೆ ಇಷ್ಟ ಆಗೋ ತರ ನಡ್ಕೊಳಕ್ಕೆ ತುಂಬ ಪ್ರಯತ್ನ ಮಾಡುತ್ತಿದ್ದೆ.” ಲಾರೆನ್ ಕಲಿತ ಪಾಠ ಏನಂದ್ರೆ, ಬೇರೆಯವರು ಇಷ್ಟಪಡೋ ರೀತಿಯಲ್ಲಿ ನಾವು ಜೀವನ ಮಾಡೋದಾದ್ರೆ ನಾವು ಫ್ರೆಂಡ್ ಆಗೋಕಾಗಲ್ಲ, ಬರೀ ಅವರ ಕೈಗೊಂಬೆಗಳಾಗಿ ಇರುತ್ತೀವಿ. ಅಂಥ ಫ್ರೆಂಡ್ಸ್ ನಮಗೆ ಬೇಡ, ಒಳ್ಳೆ ಫ್ರೆಂಡ್ಸ್ ಸಿಕ್ಕೇ ಸಿಕ್ತಾರೆ.
ನಿವೇನು ಮಾಡಬೇಕು. ತಮ್ಮ ತಾಳಕ್ಕೆ ತಕ್ಕಂತೆ ಕುಣಿಸೋ ಫ್ರೆಂಡ್ಸ್ ನಮಗೆ ಬೇಡ. ಅವರ ಫ್ರೆಂಡಶಿಪ್ ಕಟ್ ಮಾಡಬಹುದು. ನಾವು ಈ ತರ ಮಾಡುವಾಗ ನಮಗೆ ಸ್ವಲ್ಪನೇ ಫ್ರೆಂಡ್ಸ್ ಇರ್ತಾರೆ ಅನ್ನೋದು ನಿಜಾನೆ. ಆದ್ರೆ ಅದ್ರಿಂದ ನಮಗೆ ಒಳ್ಳೇದೇ ಆಗುತ್ತೆ, ನಾವು ಸಂತೋಷವಾಗಿರುತ್ತೀವಿ. ಒಳ್ಳೇ ವ್ಯಕ್ತಿಗಳಾಗೋಕೆ ಅವರು ನಮಗೆ ಸಹಾಯ ಮಾಡ್ತಾರೆ.—ರೋಮನ್ನರಿಗೆ 12:2.
“ನನ್ನ ಬೆಸ್ಟ್ ಫ್ರೆಂಡ್ ಕ್ಲಿಂಟ್ ಒಳ್ಳೆ ತೀರ್ಮಾನಗಳನ್ನ ಮಾಡ್ತಾನೆ ಬೇರೆಯವರನ್ನ ಚೆನ್ನಾಗಿ ಅರ್ಥಮಾಡಿಕೊಳ್ತಾನೆ. ನಂಗೆ ಅವನಲ್ಲಿ ತುಂಬಾ ಇಷ್ಟ ಆಗೋ ಗುಣನೇ ಇದು.” —ಜೇಸನ್, 21.
ಈ ಪ್ರಶ್ನೆಗಳಿಗೆ ನಿಮ್ಮ ಉತ್ತರ ಏನು?
ನನ್ನ ಫ್ರೆಂಡ್ಸ್ಗೆ ಇಷ್ಟ ಆಗುತ್ತೆ ಅಂತ ಕೆಟ್ಟ ಕೆಟ್ಟದಾಗಿ ಮಾತಾಡೋದು, ಬಟ್ಟೆ ಹಾಕ್ಕೋಳ್ಳೋದು, ನಡ್ಕೊಳ್ಳೋದು ಮಾಡ್ತೀನ?
❏ ಹೌದು
❏ ಇಲ್ಲ
ನಂಗೆ ಇಷ್ಟ ಇಲ್ಲ ಅಂದ್ರೂ ನನ್ನ ಫ್ರೆಂಡ್ಸ್ಗೆ ಇಷ್ಟ ಆಗುತ್ತೆ ಅಂತ ಹೋಗಬಾರದ ಜಾಗಕ್ಕೆಲ್ಲ ಹೋಗ್ತಿನ?
❏ ಹೌದು
❏ ಇಲ್ಲ
ಟಿಪ್ಸ್: ಈ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಅಂತ ಆಗಿರೋದಾದ್ರೆ ಸಹಾಯಕ್ಕಾಗಿ ಹೆತ್ತವರ ಹತ್ರ ಅಥವಾ ದೊಡ್ಡವರ ಹತ್ರ ಮಾತಾಡಿ. ಒಂದು ವೇಳೆ ನೀವೊಬ್ಬ ಯೆಹೋವನ ಸಾಕ್ಷಿ ಆಗಿದ್ರೆ ಸಹಾಯಕ್ಕಾಗಿ ಸಭಾ ಹಿರಿಯರ ಹತ್ರನೂ ಕೇಳಬಹುದು. ಒಳ್ಳೇ ಫ್ರೆಂಡ್ಸ್ನ ಕಂಡು ಹಿಡಿಯೋಕೆ ಅವರು ನಿಮಗೆ ಸಹಾಯ ಮಾಡ್ತಾರೆ.
ಇದರ ಬಗ್ಗೆ ಹೆಚ್ಚನ್ನ ತಿಳಿಯೋಕೆ ವಾಲ್ಯೂಮ್ 2ರ 9ನೇ ಅಧ್ಯಾಯ ಓದಿ
ಕೆಟ್ಟ ವಿಷಯ ಮಾಡಬೇಕು ಅಂತ ನಿಮಗೆ ಅನಿಸ್ತಿದೆಯಾ ಅಥವಾ ನಿಮ್ಮ ಫ್ರೆಂಡ್ಸ್ ನಿಮ್ಮನ್ನ ಅದಕ್ಕೆ ಒತ್ತಾಯ ಮಾಡ್ತಿದ್ದಾರ ಹಾಗಿರೋದಾದ್ರೆ ಅದನ್ನ
[ಪಾದಟಿಪ್ಪಣಿ]
a ನಿಜ ಹೇಳಬೇಕಂದ್ರೆ ಎಲ್ಲರೂ ತಪ್ಪು ಮಾಡುತ್ತಾರೆ. (ರೋಮನ್ನರಿಗೆ 3:23) ಹಾಗಾಗಿ ಒಬ್ಬ ಫ್ರೆಂಡ್ ನಮ್ಮ ಮನಸ್ಸಿಗೆ ನೋವು ಮಾಡಿದ ಮೇಲೆ ಅದನ್ನು ಅರ್ಥಮಾಡಿಕೊಂಡು ನಮ್ಮ ಹತ್ತಿರ ಸ್ಸಾರಿ ಕೇಳುವಾಗ ನಾವು ಅವರನ್ನ ಕ್ಷಮಿಸಬೇಕು. “ಯಾಕಂದ್ರೆ ಪ್ರೀತಿ ಇರೋ ವ್ಯಕ್ತಿ ಯಾವಾಗ್ಲೂ ಬೇರೆಯವ್ರ ತಪ್ಪುಗಳನ್ನ ಕ್ಷಮಿಸ್ತಾನೆ.”—1 ಪೇತ್ರ 4:8.
ಮುಖ್ಯ ವಚನ
“ಒಡಹುಟ್ಟಿದವನಿಗಿಂತ ಜಾಸ್ತಿ ಪ್ರೀತಿಸೋ ಸ್ನೇಹಿತನೂ ಇರ್ತಾನೆ.”—ಜ್ಞಾನೋಕ್ತಿ 18:24.
ಟಿಪ್
ನೀವು ಸರಿಯಾಗಿರೋದನ್ನ ಮಾಡೋಕೆ ಪ್ರಯತ್ನಿಸುವಾಗ, ಅದೇ ತರದ ಪ್ರಯತ್ನ ಹಾಕುತ್ತಿರುವ ಫ್ರೆಂಡ್ಸ್ನ್ನ ಕಂಡುಹಿಡಿಯೋಕೆ ಸುಲಭ ಆಗುತ್ತೆ.
ನಿಮಗೆ ಗೊತ್ತಿತ್ತಾ . . .?
ದೇವರು ಪಕ್ಷಪಾತಿ ಅಲ್ಲ ನಿಜ. ಆದ್ರೆ ಆತನ ’ಡೇರೆಯಲ್ಲಿ ಯಾರು ಅತಿಥಿಯಾಗಿ’ ಇರಬೇಕು ಅಂತ ದೇವರೇ ಆಯ್ಕೆ ಮಾಡುತ್ತಾನೆ.—ಕೀರ್ತನೆ 15:1-5.
ನಿಮ್ಮ ತೀರ್ಮಾನ!
ಒಳ್ಳೆ ಫ್ರೆಂಡ್ಸ್ ಮಾಡ್ಕೊಳಕ್ಕೆ ನಾನು ..........
ನನಗಿಂತ ದೊಡ್ಡವರಾದ್ರೂ ಇವರನ್ನು ಫ್ರೆಂಡ್ಸ್ ಮಾಡ್ಕೊಳ್ಳೋಕೆ ಇಷ್ಟಪಡ್ತೀನಿ ..........
ಈ ವಿಷಯದ ಬಗ್ಗೆ ಅಪ್ಪ-ಅಮ್ಮ ಹತ್ರ ನಾನು ಏನು ಕೇಳೋಕೆ ಬಯಸ್ತೀನಿ ಅಂದ್ರೆ ..........
ನಿಮಗೇನು ಅನಿಸುತ್ತೆ?
● ನಿಮ್ಮ ಫ್ರೆಂಡ್ಗೆ ಯಾವ ಗುಣ ಇರಬೇಕು ಅಂತ ಇಷ್ಟಪಡ್ತಿರಾ? ಮತ್ತು ಯಾಕೆ?
● ನೀವು ಒಳ್ಳೇ ಫ್ರೆಂಡ್ ಆಗಬೇಕಂದ್ರೆ ನಿಮ್ಮಲ್ಲಿ ಯಾವ ಗುಣ ಇರಬೇಕು?
[ಸಂಕ್ಷಿಪ್ತ ವಿವರಣೆ]
“ನಿನ್ನ ಕೆಲವು ಫ್ರೆಂಡ್ಸ್ನಿಂದ ದೂರ ಇರಬೇಕು ಅಂತ ಅಪ್ಪ-ಅಮ್ಮ ಹೇಳಿದಾಗ ಅವರು ಇಲ್ಲದೆ ಹೇಗೆ ಬದುಕಲಿ ಅಂತ ಯೋಚನೆ ಮಾಡ್ತಿದ್ದೆ. ಆದ್ರೆ ಅಪ್ಪ ಅಮ್ಮ ಅದನ್ನ ಹೇಳಿದ್ದು ನನ್ನ ಒಳ್ಳೇದಕ್ಕೆ ಅಂತ ನಂಗೆ ಗೊತ್ತಾಯ್ತು. ಅಪ್ಪ-ಅಮ್ಮ ಹೇಳಿದ ವಿಷಯದ ಬಗ್ಗೆ ನಾನು ಯೋಚನೆ ಮಾಡಿದಾಗ, ಇವ್ರಿಗಿಂತ ಬೇರೆ ಎಷ್ಟೋ ಒಳ್ಳೇ ಫ್ರೆಂಡ್ಸ್ ನಂಗೆ ಸಿಕ್ತಾರೆ ಅಂತ ಗೊತ್ತಾಯ್ತು.”— ಕೋಲ್
[ಚೌಕ/ಚಿತ್ರ]
ಈ ಸಲಹೆಗಳನ್ನು ಪ್ರಯತ್ನಿಸಿ
ಫ್ರೆಂಡ್ಶಿಪ್ ಬಗ್ಗೆ ಅಪ್ಪ-ಅಮ್ಮನ ಹತ್ತಿರ ಮಾತಾಡಿ. ನಿಮ್ಮ ವಯಸ್ಸಲ್ಲಿ ಇದ್ದಾಗ ಅವರಿಗೆ ಯಾವ ತರದ ಫ್ರೆಂಡ್ಸ್ ಇದ್ದರು ಅಂತ ಕೇಳಿ. ಕೆಲವು ಫ್ರೆಂಡ್ಸ್ನ್ನ ಮಾಡಿಕೊಳ್ಳಬಾರದಿತ್ತು ಅಂತ ಅವರು ಕೊರಗಿದ್ದಾರಾ? ಒಂದುವೇಳೆ ಕೊರಗಿದ್ರೆ ಯಾಕಂತ ಅವರನ್ನ ಕೇಳಿ. ಅವರಿಗೆ ಬಂದಿರೋ ಸಮಸ್ಯೆಗಳಲ್ಲಿ ನಾವು ಸಿಕ್ಕಿ ಹಾಕೊಳ್ಳದೆ ಇರೋಕೆ ಏನು ಮಾಡಬೇಕು ಅಂತನೂ ಕೇಳಿ ತಿಳಿದುಕೊಳ್ಳಿ.
ಅಪ್ಪ-ಅಮ್ಮಗೆ ನಿಮ್ಮ ಫ್ರೆಂಡ್ಸ್ನ ಪರಿಚಯ ಮಾಡಿಸಿ. ಒಂದುವೇಳೆ ಅವರನ್ನು ಪರಿಚಯ ಮಾಡಿಸೋಕೆ ನೀವು ಹಿಂದೆ ಮುಂದೆ ನೋಡುತ್ತಿರೋದಾದ್ರೆ ’ಯಾಕೆ ಹಾಗೆ ಅನಿಸುತ್ತಿದೆ?’ ಅಂತ ನಿಮ್ಮನ್ನೇ ಕೇಳಿಕೊಳ್ಳಿ. ನಿಮ್ಮ ಫ್ರೆಂಡ್ನಲ್ಲಿರೋ ಯಾವುದೋ ಒಂದು ವಿಷಯನ ಅಪ್ಪ ಅಮ್ಮ ಗ್ಯಾರೆಂಟಿ ಒಪ್ಪಲ್ಲ ಅಂತ ನಿಮಗೆ ಗೊತ್ತಿರೋದ್ರಿಂದಾನಾ? ಇದಕ್ಕೆ ಉತ್ತರ ಹೌದು ಅಂತಾದ್ರೆ ಕಣ್ಮುಚ್ಚಿ ಎಲ್ಲರನ್ನು ಫ್ರೆಂಡ್ಸ್ ಮಾಡ್ಕೊಬೇಡಿ, ಸರಿಯಾಗಿ ಯೋಚನೆ ಮಾಡಿ ಫ್ರೆಂಡ್ಸ್ ಮಾಡಿಕೊಳ್ಳಿ.
ಚೆನ್ನಾಗಿ ಕೇಳಿಸಿಕೊಳ್ಳಿ. ನಿಮ್ಮ ಫ್ರೆಂಡ್ಗೆ ಏನು ಬೇಕು ಏನು ಬೇಡ ಅಂತ ಅರ್ಥ ಮಾಡಿಕೊಳ್ಳಿ. ಅವರಿಗೆ ಕಾಳಜಿ ತೋರಿಸಿ.—ಫಿಲಿಪ್ಪಿ 2:4.
ಕ್ಷಮಿಸಿ. ನಿಮ್ಮ ಫ್ರೆಂಡ್ಸು ತಪ್ಪೇ ಮಾಡಬಾರದು ಅಂತ ನೆನಸಬೇಡಿ. “ನಾವೆಲ್ಲ ತುಂಬ ಸಲ ತಪ್ಪು ಮಾಡ್ತೀವಿ.“—ಯಾಕೋಬ 3:2.
ಯಾವಾಗಲೂ ಅಂಟಿಕೊಂಡು ಇರಬೇಡಿ. ನಿಮ್ಮ ಫ್ರೆಂಡ್ಸ್ ಮೂರು ಹೊತ್ತು ಜೊತೆನೇ ಇರಬೇಕು ಅಂತ ನೆನಸಬೇಡಿ. ನಿಜವಾದ ಸ್ನೇಹಿತರು ಅಗತ್ಯ ಇದ್ದಾಗ ಸಹಾಯಕ್ಕೆ ಬಂದೇ ಬರ್ತಾರೆ.—ಪ್ರಸಂಗಿ 4:9, 10.
[ಚಿತ್ರ]
ಬೇರೆಯವರು ಇಷ್ಟಪಡೋ ರೀತಿಯಲ್ಲಿ ನಾವು ಜೀವನ ಮಾಡೋದಾದ್ರೆ ನಾವು ಫ್ರೆಂಡ್ ಆಗೋಕಾಗಲ್ಲ, ಬರೀ ಅವರ ಕೈಗೊಂಬೆಗಳಾಗಿ ಇರುತ್ತೀವಿ