ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ia ಅಧ್ಯಾ. 4 ಪು. 37-47
  • “ನೀನು ಎಲ್ಲಿಗೆ ಹೋದರೂ ನಾನೂ ಅಲ್ಲಿಗೆ ಬರುವೆನು”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ನೀನು ಎಲ್ಲಿಗೆ ಹೋದರೂ ನಾನೂ ಅಲ್ಲಿಗೆ ಬರುವೆನು”
  • ಅವರ ನಂಬಿಕೆಯನ್ನು ಅನುಕರಿಸಿ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಕುಟುಂಬಕ್ಕೆ ಬಂದೆರಗಿದ ದುರಂತ
  • ರೂತಳ ನಿಷ್ಠಾವಂತ ಪ್ರೀತಿ
  • ಬೇತ್ಲೆಹೇಮ್‌ಗೆ ಬಂದ ರೂತ್‌ ಮತ್ತು ನೊವೊಮಿ
  • ರೂತಳು ಪುಸ್ತಕದ ಮುಖ್ಯಾಂಶಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ರೂತ್‌ ಮತ್ತು ನೊವೊಮಿ
    ಬೈಬಲ್‌ ನಮಗೆ ಕಲಿಸುವ ಪಾಠಗಳು
  • “ಗುಣವಂತೆ”
    ಅವರ ನಂಬಿಕೆಯನ್ನು ಅನುಕರಿಸಿ
  • ರೂತ್‌ ಮತ್ತು ನೊವೊಮಿ
    ಬೈಬಲ್‌ ಕಥೆಗಳ ನನ್ನ ಪುಸ್ತಕ
ಇನ್ನಷ್ಟು
ಅವರ ನಂಬಿಕೆಯನ್ನು ಅನುಕರಿಸಿ
ia ಅಧ್ಯಾ. 4 ಪು. 37-47
ರೂತ್‌

ಅಧ್ಯಾಯ ನಾಲ್ಕು

“ನೀನು ಎಲ್ಲಿಗೆ ಹೋದರೂ ನಾನೂ ಅಲ್ಲಿಗೆ ಬರುವೆನು”

1, 2. (1) ರೂತ್‌ ಮತ್ತು ನೊವೊಮಿಯ ಪ್ರಯಾಣವನ್ನು ವರ್ಣಿಸಿ. (2) ಅವರೇಕೆ ದುಃಖದಿಂದಿದ್ದರು? (3) ಅವರು ಹೋಗಲಿಕ್ಕಿದ್ದ ಸ್ಥಳ ಒಂದೇ ಆಗಿದ್ದರೂ ಅವರಿಬ್ಬರಿಗೆ ಅದು ಹೇಗೆ ಭಿನ್ನವಾಗಿತ್ತು?

ರೂತ್‌ ನೊವೊಮಿಯ ಜೊತೆಯಲ್ಲೇ ಹೆಜ್ಜೆಹಾಕುತ್ತಿದ್ದಳು. ಅವರು ಸಮುದ್ರಮಟ್ಟಕ್ಕಿಂತ ಎತ್ತರದಲ್ಲಿರುವ ಮೋವಾಬ್‌ನ ಬಯಲು ಪ್ರದೇಶದಲ್ಲಿದ್ದರು. ಜೋರಾಗಿ ಗಾಳಿ ಬೀಸುತ್ತಿತ್ತು. ಆ ಅತಿ ವಿಶಾಲ ಪ್ರದೇಶದಲ್ಲಿ ನಡೆಯುತ್ತಿದ್ದ ಅವರಿಬ್ಬರು ಸಣ್ಣ ಚುಕ್ಕಿಯಂತೆ ಕಾಣುತ್ತಿದ್ದರು. ಹೊತ್ತು ಮುಳುಗುತ್ತಿತ್ತು. ದಣಿದಿದ್ದ ನೊವೊಮಿಯನ್ನು ನೋಡಿ, ಮಲಗಲು ಜಾಗ ಹುಡುಕಬೇಕೆಂದು ರೂತ್‌ ಮನದಲ್ಲಿ ಅಂದುಕೊಂಡಳು. ನೊವೊಮಿ ಎಂದರೆ ಅವಳಿಗೆ ಪ್ರಾಣ. ಆಕೆಯನ್ನು ನೋಡಿಕೊಳ್ಳಲಿಕ್ಕಾಗಿ ಏನು ಬೇಕಾದರೂ ಮಾಡಲು ತಯಾರಿದ್ದಳು.

2 ಅವರಿಬ್ಬರ ಮನಸ್ಸು ದುಃಖದಿಂದ ಭಾರವಾಗಿತ್ತು. ಅನೇಕ ವರ್ಷಗಳಿಂದ ವಿಧವೆಯಾಗಿದ್ದ ನೊವೊಮಿ ಇತ್ತೀಚೆಗೆ ತನ್ನ ಗಂಡುಮಕ್ಕಳಾದ ಮಹ್ಲೋನ್‌, ಕಿಲ್ಯೋನ್‌ ಇಬ್ಬರೂ ತೀರಿಹೋದ ಕಾರಣ ಶೋಕತಪ್ತಳಾಗಿದ್ದಳು. ಮಹ್ಲೋನ್‌ ರೂತಳ ಗಂಡ. ಪತಿಯ ಅಗಲಿಕೆಯಿಂದ ರೂತಳು ಕೂಡ ನೊಂದಿದ್ದಳು. ಈಗ ಅತ್ತೆ-ಸೊಸೆ ಇಬ್ಬರೂ ಹೋಗುತ್ತಿದ್ದದ್ದು ಒಂದೇ ಸ್ಥಳಕ್ಕೆ. ಇಸ್ರಾಯೇಲಿನಲ್ಲಿದ್ದ ಬೇತ್ಲೆಹೇಮ್‌ಗೆ. ನೊವೊಮಿಗೇನೊ ಅದು ಗೊತ್ತಿದ್ದ ಸ್ಥಳ. ಅವಳ ಸ್ವಂತ ಊರು. ಆದರೆ ರೂತಳಿಗೆ ಅದು ಅಪರಿಚಿತ ಸ್ಥಳ. ತನ್ನ ಬಂಧು-ಬಳಗ, ಹುಟ್ಟೂರು, ಅಲ್ಲಿನ ಸಂಪ್ರದಾಯ, ಅಲ್ಲಿನ ದೇವರುಗಳನ್ನು ಬಿಟ್ಟು ಅತ್ತೆ ಜೊತೆ ಹೋಗುತ್ತಿದ್ದಳು.—ರೂತಳು 1:2-6 ಓದಿ.

3. ಯಾವ ಪ್ರಶ್ನೆಗಳಿಗೆ ಉತ್ತರವು ರೂತಳ ನಂಬಿಕೆಯನ್ನು ಅನುಕರಿಸಲು ನಮಗೆ ಸಹಾಯ ಮಾಡಲಿದೆ?

3 ಈ ಯುವ ಮಹಿಳೆ ಇಂಥ ದಿಟ್ಟ ಹೆಜ್ಜೆ ತಕ್ಕೊಳ್ಳುವಂತೆ ಪ್ರೇರಿಸಿದ್ದು ಯಾವುದು? ಅತ್ತೆಯನ್ನು ನೋಡಿಕೊಳ್ಳಲು ಮತ್ತು ಹೊಸ ಜಾಗ, ಹೊಸ ಜನರ ಮಧ್ಯೆ ಜೀವನ ನಡೆಸಲು ಬೇಕಾದ ಮನೋಬಲ ರೂತಳಿಗೆ ಸಿಕ್ಕಿದ್ದು ಹೇಗೆ? ಉತ್ತರ ನೋಡೋಣ. ಇದರಿಂದ ನಾವು ಮೋವಾಬ್ಯಳಾದ ರೂತಳ ನಂಬಿಕೆಯನ್ನು ಹೇಗೆ ಅನುಕರಿಸಬಲ್ಲೆವೆಂದು ಕಲಿಯುವೆವು. (“ಪುಟ್ಟ ಮೇರುಕೃತಿ” ಚೌಕ ಸಹ ನೋಡಿ.) ಅದಕ್ಕೂ ಮುಂಚೆ ರೂತ್‌, ನೊವೊಮಿ ಬೇತ್ಲೆಹೇಮ್‌ಗೆ ಹೊರಟದ್ದೇಕೆಂದು ನೋಡೋಣ.

ಕುಟುಂಬಕ್ಕೆ ಬಂದೆರಗಿದ ದುರಂತ

4, 5. (1) ನೊವೊಮಿಯ ಕುಟುಂಬ ಮೋವಾಬ್‌ನಲ್ಲಿ ನೆಲೆಸಲು ಕಾರಣವೇನು? (2) ಅಲ್ಲಿ ನೊವೊಮಿಗೆ ಎದುರಾದ ಸವಾಲುಗಳು ಯಾವುವು?

4 ರೂತ್‌ ಬೆಳೆದದ್ದು ಮೋವಾಬ್‌ನಲ್ಲಿ. ಇದು ಮೃತ ಸಮುದ್ರದ ಪೂರ್ವಕ್ಕಿರುವ ಚಿಕ್ಕ ದೇಶ. ಸಮುದ್ರಮಟ್ಟಕ್ಕಿಂತ ಎತ್ತರದಲ್ಲಿದ್ದ ಈ ದೇಶದ ಬಹುಭಾಗ ಮರಗಿಡಗಳಿಲ್ಲದ ಪ್ರಸ್ಥಭೂಮಿಯಾಗಿತ್ತು. ಮಧ್ಯೆ ಮಧ್ಯೆ ಆಳವಾದ ಕಂದರಗಳು. ಇಸ್ರಾಯೇಲಿನಲ್ಲಿ ಕ್ಷಾಮವಿದ್ದಾಗಲೂ “ಮೋವಾಬ್‌ ದೇಶದಲ್ಲಿ” ಮಳೆ-ಬೆಳೆ ಚೆನ್ನಾಗಿತ್ತು. ರೂತಳಿಗೆ ಮಹ್ಲೋನ್‌ ಮತ್ತು ಅವನ ಕುಟುಂಬದ ಪರಿಚಯವಾಗಲು ಇದು ಕಾರಣವಾಯಿತು. ಹೇಗೆ?—ರೂತ. 1:1.

5 ಇಸ್ರಾಯೇಲ್‌ ಒಮ್ಮೆ ಬರ ಪೀಡಿತವಾದಾಗ ನೊವೊಮಿಯ ಗಂಡ ಎಲೀಮೆಲೆಕನಿಗೆ ಹೆಂಡತಿ ಮಕ್ಕಳನ್ನು ಕರೆದುಕೊಂಡು ಬೇರೆ ಸ್ಥಳಕ್ಕೆ ಹೋಗುವುದೇ ಒಳ್ಳೇದೆಂದು ಅನಿಸಿತು. ಅವರು ಮೋವಾಬ್‌ಗೆ ಹೋಗಿ ಅಲ್ಲಿ ವಿದೇಶಿಯರಂತೆ ವಾಸಿಸಿದರು. ಮೋವಾಬ್‌ಗೆ ಬಂದು ನೆಲೆಸಿದ ಆ ಕುಟುಂಬದ ಪ್ರತಿಯೊಬ್ಬರು ತಮ್ಮ ನಂಬಿಕೆಯ ವಿಷಯದಲ್ಲಿ ಸವಾಲುಗಳನ್ನು ಎದುರಿಸಬೇಕಾಯಿತು. ಏಕೆಂದರೆ ಇಸ್ರಾಯೇಲ್ಯರೆಲ್ಲರು ಯೆಹೋವನು ಗೊತ್ತುಮಾಡಿದ್ದ ಸ್ಥಳದಲ್ಲಿ ವರ್ಷಕ್ಕೆ ಮೂರಾವರ್ತಿ ಆರಾಧನೆಗಾಗಿ ಕೂಡಿಬರಬೇಕೆಂಬ ಆಜ್ಞೆಯಿತ್ತು. (ಧರ್ಮೋ. 16:16, 17) ನೊವೊಮಿ ತನ್ನ ನಂಬಿಕೆಯನ್ನು ಜೀವಂತವಾಗಿಟ್ಟುಕೊಂಡಳು. ಆದರೂ ತನ್ನ ಗಂಡ ಸತ್ತಾಗ ಆಕೆಗೆ ತುಂಬ ದುಃಖವಾಯಿತು.—ರೂತ. 1:2, 3.

6, 7. (1) ತನ್ನ ಗಂಡುಮಕ್ಕಳು ಮೋವಾಬ್‌ ಸ್ತ್ರೀಯರನ್ನು ಮದುವೆಯಾದಾಗ ನೊವೊಮಿ ಏಕೆ ಚಿಂತೆಗೀಡಾಗಿರಬೇಕು? (2) ನೊವೊಮಿ ತನ್ನ ಸೊಸೆಯರೊಂದಿಗೆ ನಡಕೊಂಡ ವಿಧ ಮೆಚ್ಚತಕ್ಕದ್ದೇಕೆ?

6 ಮುಂದೆ ತನ್ನ ಗಂಡುಮಕ್ಕಳು ಮೋವಾಬ್‌ ಸ್ತ್ರೀಯರನ್ನು ಮದುವೆಯಾದಾಗ ಕೂಡ ಆಕೆಗೆ ತುಂಬ ನೋವಾಗಿರಬೇಕು. (ರೂತ. 1:4) ಏಕೆಂದರೆ ತನ್ನ ಜನಾಂಗದ ಪೂರ್ವಜನಾದ ಅಬ್ರಹಾಮನು ಯೆಹೋವನನ್ನು ಆರಾಧಿಸುತ್ತಿದ್ದ ಸ್ವಜನರಿಂದಲೇ ತನ್ನ ಮಗ ಇಸಾಕನಿಗೆ ಹೆಣ್ಣು ತರಲು ಎಷ್ಟು ಶ್ರಮಪಟ್ಟಿದ್ದನೆಂದು ಆಕೆಗೆ ಗೊತ್ತಿತ್ತು. (ಆದಿ. 24:3, 4) ಮಾತ್ರವಲ್ಲ ಇಸ್ರಾಯೇಲ್ಯರು ಅನ್ಯಜನರೊಂದಿಗೆ ಬೀಗತನ ಮಾಡಬಾರದು, ಮಾಡಿದರೆ ವಿಗ್ರಹಾರಾಧಕರಾಗುವ ಸಾಧ್ಯತೆಯಿದೆಯೆಂದು ಮೋಶೆಯ ಧರ್ಮಶಾಸ್ತ್ರ ಕೊಟ್ಟ ಎಚ್ಚರಿಕೆ ಸಹ ಆಕೆಗೆ ತಿಳಿದಿತ್ತು.—ಧರ್ಮೋ. 7:3, 4.

7 ಹಾಗಿದ್ದರೂ ಮಹ್ಲೋನ್‌ ಮತ್ತು ಕಿಲ್ಯೋನ್‌ ಇಬ್ಬರೂ ಮೋವಾಬ್‌ ಸ್ತ್ರೀಯರನ್ನು ಮದುವೆಯಾಗಿದ್ದರು. ಇದರಿಂದ ನೊವೊಮಿ ಚಿಂತೆಗೀಡಾಗಿದ್ದರೂ ನಿರಾಶೆಗೊಂಡಿದ್ದರೂ ತನ್ನ ಸೊಸೆಯರಾದ ರೂತ್‌ ಮತ್ತು ಒರ್ಫಾಳನ್ನು ಮನಸಾರೆ ಪ್ರೀತಿಸಿದಳು. ಅವರೊಂದಿಗೆ ದಯೆಯಿಂದ ನಡೆದುಕೊಂಡಳು. ಒಂದಲ್ಲಾ ಒಂದು ದಿನ ಅವರು ಕೂಡ ತನ್ನಂತೆ ಯೆಹೋವನನ್ನು ಆರಾಧಿಸುವರೆಂಬ ನಿರೀಕ್ಷೆಯನ್ನು ಆಕೆ ಇಟ್ಟುಕೊಂಡಿರಬೇಕು. ಅದೇನೇ ಇರಲಿ ರೂತ್‌ ಮತ್ತು ಒರ್ಫಾಳಿಗಂತೂ ಅತ್ತೆ ಎಂದರೆ ತುಂಬ ಇಷ್ಟ. ತಮಗೆ ಮಕ್ಕಳಾಗುವ ಮುಂಚೆಯೇ ವಿಧವೆಯರಾದ ಆ ಯುವ ಸ್ತ್ರೀಯರಿಬ್ಬರಿಗೆ ಅತ್ತೆಯೊಂದಿಗಿನ ಈ ಬಾಂಧವ್ಯವೇ ವಿಯೋಗ ದುಃಖವನ್ನು ತಾಳಿಕೊಳ್ಳಲು ಸಹಾಯಮಾಡಿತು.—ರೂತ. 1:5.

8. ರೂತಳನ್ನು ಯೆಹೋವನೆಡೆಗೆ ಆಕರ್ಷಿಸಿದ್ದು ಯಾವುದು?

8 ಈ ಸಂಕಷ್ಟವನ್ನು ತಾಳಿಕೊಳ್ಳಲು ರೂತಳು ಬೆಳೆದುಬಂದ ಧರ್ಮ ಬಲಕೊಟ್ಟಿತೊ? ಇರಲಿಕ್ಕಿಲ್ಲ. ಮೋವಾಬ್ಯರು ಪೂಜಿಸುತ್ತಿದ್ದ ಅನೇಕಾನೇಕ ದೇವರುಗಳಲ್ಲಿ ಪ್ರಧಾನನು ಕೆಮೋಷ್‌. (ಅರ. 21:29) ಆ ಕಾಲದಲ್ಲಿ ಸಾಮಾನ್ಯವಾಗಿದ್ದ ಕ್ರೌರ್ಯ ಮತ್ತು ಬೀಭತ್ಸ ಕೃತ್ಯಗಳು ಮೋವಾಬ್‌ ಧರ್ಮದಲ್ಲೂ ಇತ್ತು. ಜೀವಂತವಾಗಿ ಮಕ್ಕಳನ್ನು ದೇವರುಗಳಿಗೆ ಆಹುತಿ ಕೊಡಲಾಗುತ್ತಿದ್ದ ವಿಷಯ ಇದಕ್ಕೊಂದು ಉದಾಹರಣೆಗೆ. ಆದರೆ ಇಸ್ರಾಯೇಲ್ಯರ ದೇವರಾದ ಯೆಹೋವ ಎಷ್ಟು ಭಿನ್ನನೆಂದು ರೂತಳು ಮಹ್ಲೋನ್‌ ಅಥವಾ ನೊವೊಮಿಯಿಂದ ಕಲಿತಳು. ಯೆಹೋವನು ನಿಜಕ್ಕೂ ಕರುಣೆಯುಳ್ಳವನು, ಆತನು ಆಳ್ವಿಕೆ ನಡೆಸುವುದು ಭೀತಿ ಹುಟ್ಟಿಸಿ ಅಲ್ಲ ಪ್ರೀತಿಯಿಂದ ಎಂದು ತಿಳಿದುಕೊಂಡಳು. (ಧರ್ಮೋಪದೇಶಕಾಂಡ 6:5 ಓದಿ.) ರೂತಳು ಗಂಡನನ್ನು ಕಳಕೊಂಡ ಮೇಲಂತೂ ನೊವೊಮಿಗೆ ಇನ್ನಷ್ಟು ಹತ್ತಿರವಾಗಿರಬೇಕು. ಸರ್ವಶಕ್ತ ದೇವರಾದ ಯೆಹೋವನ ಕುರಿತು, ಆತನ ಅದ್ಭುತ ಕಾರ್ಯಗಳ ಕುರಿತು, ತನ್ನ ಜನರಿಗೆ ಆತನು ತೋರಿಸಿದ ಪ್ರೀತಿ, ಕರುಣೆಯ ಕುರಿತು ಅತ್ತೆ ಹೇಳುತ್ತಿದ್ದಾಗೆಲ್ಲಾ ರೂತಳು ಮನಸ್ಸುಕೊಟ್ಟು ಕೇಳಿರಬೇಕು.

ರೂತ್‌ ಮತ್ತು ನೊವೊಮಿ ತಮ್ಮ ದುಃಖವನ್ನು ಹಂಚಿಕೊಳ್ಳುತ್ತಾ ಒಬ್ಬರನ್ನೊಬ್ಬರು ಅಪ್ಪಿಕೊಂಡಿದ್ದಾರೆ

ರೂತಳು ಗಂಡನನ್ನು ಕಳಕೊಂಡು ದುಃಖದಲ್ಲಿದ್ದಾಗ ನೊವೊಮಿಗೆ ತುಂಬ ಹತ್ತಿರವಾದದ್ದು ವಿವೇಕಯುತ

9-11. (1) ನೊವೊಮಿ, ರೂತ್‌, ಒರ್ಫಾ ಯಾವ ನಿರ್ಣಯ ಮಾಡಿದರು? (2) ಈ ಮೂವರು ಅನುಭವಿಸಿದ ಕಷ್ಟದುಃಖಗಳಿಂದ ನಾವೇನು ಕಲಿಯುತ್ತೇವೆ?

9 ನೊವೊಮಿ ತನ್ನ ಸ್ವದೇಶದ ಬಗ್ಗೆ ತಿಳಿಯಲು ಚಡಪಡಿಸುತ್ತಿದ್ದಳು. ಒಂದು ದಿನ ಪ್ರಾಯಶಃ ಒಬ್ಬ ಸಂಚಾರಿ ವ್ಯಾಪಾರಿಯಿಂದ ಆಕೆಗೆ ಇಸ್ರಾಯೇಲಿನಲ್ಲಿ ಬರಗಾಲ ಕೊನೆಗೊಂಡ ಸುದ್ದಿ ಸಿಕ್ಕಿತು. ಹೌದು, ಯೆಹೋವನು ತನ್ನ ಜನರಿಗೆ ದಯೆತೋರಿಸಿದ್ದನು. ‘ಆಹಾರದ ಕಣಜ’ ಎಂಬ ಅರ್ಥವುಳ್ಳ ಬೇತ್ಲೆಹೇಮ್‌ ಪುನಃ ತನ್ನ ಹೆಸರಿಗೆ ತಕ್ಕಂತೆ ಬೆಳೆ ಕಂಡಿತು. ಆದ್ದರಿಂದ ನೊವೊಮಿ ತನ್ನ ನಾಡಿಗೆ ಮರಳಿ ಹೋಗಲು ನಿರ್ಧರಿಸಿದಳು.—ರೂತ. 1:6.

10 ರೂತ್‌ ಮತ್ತು ಒರ್ಫಾ ಏನು ಮಾಡಿದರು? (ರೂತ. 1:7) ವಿಧವೆಯರಾದ ಮೇಲೆ ಅತ್ತೆಯೊಂದಿಗಿನ ಅವರ ನಂಟು ತುಂಬ ಗಟ್ಟಿಯಾಗಿತ್ತು. ನೊವೊಮಿ ತೋರಿಸಿದ ದಯೆ, ಯೆಹೋವನಲ್ಲಿ ಆಕೆಗಿದ್ದ ಅಚಲ ನಂಬಿಕೆಯಿಂದ ಮುಖ್ಯವಾಗಿ ರೂತಳು ಆಕೆಯನ್ನು ತುಂಬ ಹಚ್ಚಿಕೊಂಡಳು. ಇಬ್ಬರೂ ಸೊಸೆಯರು ಅತ್ತೆಯ ಜೊತೆ ಯೆಹೂದಕ್ಕೆ ಹೊರಟರು.

11 ರೂತಳ ಕಥೆ ಒಂದು ವಿಷಯವನ್ನು ನೆನಪಿಗೆ ತರುತ್ತದೆ. ಅದೇನೆಂದರೆ ಕಷ್ಟದುಃಖ ಕೆಟ್ಟ ಜನರಿಗೆ ಮಾತ್ರವಲ್ಲ ಒಳ್ಳೆಯವರಿಗೆ, ಪ್ರಾಮಾಣಿಕ ಜನರಿಗೆ ಸಹ ಬಂದೇ ಬರುತ್ತದೆ. (ಪ್ರಸಂ. 9:2, 11) ಕಲಿಯಬಹುದಾದ ಇನ್ನೊಂದು ವಿಷಯವೇನೆಂದರೆ, ಸಹಿಸಲಸಾಧ್ಯವೆಂದು ಅನಿಸುವಷ್ಟು ದುಃಖದಲ್ಲಿರುವಾಗೆಲ್ಲ ನಾವು ಇತರರಿಂದ ಆದರಣೆ ಪಡೆಯಬೇಕು. ಅದರಲ್ಲೂ ನೊವೊಮಿಯಂತೆ ಯೆಹೋವನನ್ನು ಆಶ್ರಯಿಸಿರುವ ಜನರಿಂದ ಸಾಂತ್ವನ, ಸಹಾಯ ಪಡೆಯುವುದು ಒಳ್ಳೇದು.—ಜ್ಞಾನೋ. 17:17.

ರೂತಳ ನಿಷ್ಠಾವಂತ ಪ್ರೀತಿ

12, 13. (1) ತವರುಮನೆಗೆ ಮರಳುವಂತೆ ನೊವೊಮಿ ಸೊಸೆಯಂದಿರಿಗೆ ಹೇಳಿದ್ದೇಕೆ? (2) ಅವರಿಬ್ಬರ ಮೊದಲ ಪ್ರತಿಕ್ರಿಯೆ ಏನಾಗಿತ್ತು?

12 ಮೂವರು ವಿಧವೆಯರು ಮೋವಾಬನ್ನು ಬಿಟ್ಟು ಬಹು ದೂರ ನಡೆದು ಬರುತ್ತಿದ್ದಾಗ ನೊವೊಮಿಗೆ ಒಂದು ಚಿಂತೆ ಕಾಡಲಾರಂಭಿಸಿತು. ತನಗೂ ತನ್ನ ಪುತ್ರರಿಗೂ ಪ್ರೀತಿ ತೋರಿಸಿದ ಈ ಇಬ್ಬರು ಸೊಸೆಯಂದಿರ ಬಗ್ಗೆಯೇ ಯೋಚನೆ. ‘ಈಗಾಗಲೇ ದುಃಖದಲ್ಲಿರುವ ಇವರು ತನ್ನ ಜೊತೆ ಬಂದು ಇನ್ನೂ ಕಷ್ಟಪಡುವುದು ಬೇಡ. ತವರೂರನ್ನು ಬಿಟ್ಟು ಬೇತ್ಲೆಹೇಮ್‌ಗೆ ಬಂದರೆ ಅವರಿಗೋಸ್ಕರ ತನ್ನಿಂದ ಏನೂ ಮಾಡಲಿಕ್ಕೆ ಆಗಲ್ಲ’ ಎಂಬ ಕೊರಗು ಹೆಚ್ಚಾಯಿತು.

13 ಕೊನೆಗೆ ಹೇಗೋ ನೊವೊಮಿ ತನ್ನ ಮನಸ್ಸಿನ ದುಗುಡವನ್ನು ಹೊರಹಾಕುತ್ತಾ, “ತಿರಿಗಿ ನಿಮ್ಮ ನಿಮ್ಮ ತೌರುಮನೆಗೆ ಹೋಗಿರಿ; ನೀವು ನನ್ನನ್ನೂ ಮರಣಹೊಂದಿದ ನನ್ನ ಮಕ್ಕಳನ್ನೂ ಪ್ರೀತಿಸಿದಂತೆ ಯೆಹೋವನು ನಿಮ್ಮನ್ನು ಪ್ರೀತಿಸಿ ನಿಮಗೆ ಕೃಪೆಮಾಡಲಿ” ಎಂದು ಹೇಳಿದಳು. ಯೆಹೋವನ ಅನುಗ್ರಹದಿಂದ ಅವರು ಇನ್ನೊಂದು ಮದುವೆಯಾಗಿ ಹೊಸ ಜೀವನ ಶುರುಮಾಡಲು ಸಾಧ್ಯವಾಗುವುದೆಂಬ ನಿರೀಕ್ಷೆಯನ್ನೂ ಅವರಲ್ಲಿ ತುಂಬಿಸಿ “ಅವರನ್ನು ಮುದ್ದಿಟ್ಟಳು.” ಇಷ್ಟು ದಯಾಮಯಿಯೂ ನಿಸ್ವಾರ್ಥಿಯೂ ಆದ ಅತ್ತೆಯನ್ನು ಬಿಟ್ಟು ಹೋಗಲು ರೂತ್‌, ಒರ್ಫಾರಿಗೆ ಮನಸ್ಸೇ ಬರಲಿಲ್ಲ. “ಅವರು ಗಟ್ಟಿಯಾಗಿ ಅತ್ತು—ನಾವೂ ನಿನ್ನ ಜೊತೆಯಲ್ಲೇ ನಿನ್ನ ಸ್ವಜನರ ಬಳಿಗೆ ಬರುತ್ತೇವೆ” ಎಂದು ಮತ್ತೆ ಮತ್ತೆ ಹೇಳಿದರು.—ರೂತ. 1:8-10.

14, 15. (1) ಒರ್ಫಾ ಯಾರ ಬಳಿಗೆ ಹಿಂದಿರುಗಿ ಹೋದಳು? (2) ರೂತಳನ್ನು ಹಿಂದೆ ಕಳುಹಿಸಲು ನೊವೊಮಿ ಹೇಗೆ ಪ್ರಯತ್ನಿಸಿದಳು?

14 ಆದರೆ ನೊವೊಮಿ ಅಷ್ಟು ಸುಲಭದಲ್ಲಿ ಒಪ್ಪಿಕೊಳ್ಳಲಿಲ್ಲ. ಆಕೆ ಸೊಸೆಯಂದಿರಿಗೆ ಬಲವಾದ ಕಾರಣಗಳನ್ನು ಕೊಡುತ್ತಾಳೆ. ಏನೆಂದರೆ ಅವರಿಗೆ ಮದುವೆ ಮಾಡಿಕೊಡಲು ಬೇರೆ ಗಂಡುಮಕ್ಕಳು ತನಗಿಲ್ಲ, ತನಗೂ ಗಂಡನಿಲ್ಲ, ಅಷ್ಟಲ್ಲದೆ ಇನ್ನೊಂದು ಮದುವೆಯಾಗಿ ಮಕ್ಕಳನ್ನು ಹಡೆಯುವ ವಯಸ್ಸೂ ದಾಟಿದೆ. ಇಸ್ರಾಯೇಲಿಗೆ ಬಂದರೆ ಅವರಿಗಾಗಿ ತಾನೇನೂ ಮಾಡಲಿಕ್ಕಾಗುವುದಿಲ್ಲ, ಇದಕ್ಕಾಗಿ ತನಗೆ ಬಹಳ ದುಃಖವಾಗುತ್ತದೆಂದು ಹೇಳುತ್ತಾಳೆ. ಅತ್ತೆಯ ಮಾತಿನಲ್ಲಿ ಹುರುಳಿದೆ ಎಂದು ಒರ್ಫಾಳಿಗೆ ಅನಿಸುತ್ತದೆ. ಮೋವಾಬಿನಲ್ಲಿರುವ ತನ್ನ ಕುಟುಂಬ, ತಾನು ಬರುವುದನ್ನೇ ಕಾಯುತ್ತಿರುವ ಅಮ್ಮ, ತವರುಮನೆ ಎಲ್ಲ ಒಂದು ಕ್ಷಣ ಒರ್ಫಾಳ ಮನಸ್ಸಿನಲ್ಲಿ ಹಾದುಹೋಗುತ್ತದೆ. ಅಲ್ಲಿ ಹೋಗಿ ನೆಲೆಸುವುದೇ ಒಳಿತೆಂದು ನೆನಸುತ್ತಾಳೆ. ಭಾರವಾದ ಮನಸ್ಸಿನಿಂದ ಅತ್ತೆಗೆ ಮುದ್ದಿಟ್ಟು ತನ್ನೂರಿಗೆ ಹೊರಟು ಹೋಗುತ್ತಾಳೆ.—ರೂತ. 1:11-14.

15 ರೂತಳು ಏನು ಮಾಡಿದಳು? ಅತ್ತೆ ಹೇಳಿದ ಮಾತು ಅವಳಿಗೂ ಅನ್ವಯಿಸಿತು. ಹಾಗಿದ್ದರೂ ‘ರೂತಳು ಅತ್ತೆಯನ್ನೇ ಅಂಟಿಕೊಂಡಳು’ ಎನ್ನುತ್ತದೆ ಬೈಬಲ್‌. ನೊವೊಮಿ ಪುನಃ ಹೆಜ್ಜೆಹಾಕಲು ಆರಂಭಿಸಿದಾಗ ರೂತಳು ತನ್ನ ಹಿಂದೆ ಹಿಂದೆ ಬರುವುದನ್ನು ಗಮನಿಸಿದ್ದಿರಬಹುದು. ಹಿಂದಿರುಗಿ ಹೋಗಲು ಅವಳಿಗೆ ಇನ್ನೊಂದು ಕಾರಣ ಕೊಡುತ್ತಾ, “ಇಗೋ, ನಿನ್ನ ಓರಗಿತ್ತಿಯು ತಿರಿಗಿ ತನ್ನ ಜನರ ಬಳಿಗೂ ದೇವತೆಗಳ ಬಳಿಗೂ ಹೋಗುತ್ತಾಳೆ; ನೀನೂ ಆಕೆಯ ಜೊತೆಯಲ್ಲಿ ಹೋಗು” ಅಂದಳು. (ರೂತ. 1:15) ನೊವೊಮಿಯ ಈ ಮಾತಿನಲ್ಲಿ ಗಮನಿಸಬೇಕಾದ ಒಂದು ಅಂಶವಿದೆ. ಒರ್ಫಾ ಕೇವಲ ತನ್ನ ಜನರ ಬಳಿಗೆ ಮಾತ್ರವಲ್ಲ, ತನ್ನ “ದೇವತೆಗಳ” ಬಳಿಗೂ ಹಿಂದಿರುಗಿ ಹೋದಳು. ಕೆಮೋಷ್‌ ಮೊದಲಾದ ಸುಳ್ಳು ದೇವರುಗಳ ಆರಾಧಕಳಾಗಿ ಉಳಿಯಲು ಇಷ್ಟಪಟ್ಟಳು. ರೂತಳಿಗೂ ಹಾಗೆಯೇ ಅನಿಸಿತೇ?

16-18. (1) ರೂತಳ ನಿರ್ಣಯ ಏನಾಗಿತ್ತು? (2) ನಿಷ್ಠಾವಂತ ಪ್ರೀತಿಯಿದ್ದ ಕಾರಣ ರೂತಳು ಏನು ಮಾಡಿದಳು? (ಇಲ್ಲಿರುವ ಚಿತ್ರ ಸಹ ನೋಡಿ.)

16 ಈಗಾಗಲೇ ಮನಸ್ಸಿನಲ್ಲಿ ಗಟ್ಟಿ ನಿರ್ಧಾರ ಮಾಡಿದ್ದ ರೂತಳು ನೊವೊಮಿಯ ಎದುರಿಗೆ ಬಂದು ನಿಂತಳು. ರೂತಳಿಗೆ ನೊವೊಮಿಯ ಮೇಲೂ ನೊವೊಮಿ ಆರಾಧಿಸುತ್ತಿದ್ದ ದೇವರ ಮೇಲೂ ಇದ್ದ ಪ್ರೀತಿ ಅಚಲವಾಗಿತ್ತು. ಆದ್ದರಿಂದ ಆಕೆ ನೊವೊಮಿಗೆ, “ನಿನ್ನನ್ನು ಬಿಟ್ಟು ಹಿಂದಿರುಗಬೇಕೆಂದು ನನ್ನನ್ನು ಒತ್ತಾಯಪಡಿಸಬೇಡ. ನೀನು ಎಲ್ಲಿಗೆ ಹೋದರೂ ನಾನೂ ಅಲ್ಲಿಗೆ ಬರುವೆನು; ನೀನು ವಾಸಿಸುವಲ್ಲೇ ನಾನೂ ವಾಸಿಸುವೆನು; ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು. ನೀನು ಸಾಯುವಲ್ಲೇ ನಾನೂ ಸಾಯುವೆನು; ಅಲ್ಲೇ ನನಗೆ ಸಮಾಧಿಯಾಗಬೇಕು; ಮರಣದಿಂದಲ್ಲದೆ ನಾನು ನಿನ್ನನ್ನು ಅಗಲಿದರೆ ಯೆಹೋವನು ನನಗೆ ಬೇಕಾದದ್ದನ್ನು ಮಾಡಲಿ” ಅಂದಳು.—ರೂತ. 1:16, 17.

ರೂತಳು ನೊವೊಮಿಗೆ “ನೀನು ಎಲ್ಲಿಗೆ ಹೋದರೂ ನಾನೂ ಅಲ್ಲಿಗೆ ಬರುವೆನು” ಎಂದು ಹೇಳುತ್ತಿದ್ದಾಳೆ

“ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು”

17 ಮನಸ್ಪರ್ಶಿಸುವ ಮಾತುಗಳವು! ಎಷ್ಟೆಂದರೆ ಅವಳು ಮರಣಹೊಂದಿ ಮೂರು ಸಾವಿರ ವರ್ಷಗಳಾದರೂ ಆ ಮಾತುಗಳು ಇಂದಿಗೂ ಹಲವರ ಮನಸ್ಸಲ್ಲಿ ಹಚ್ಚಹಸುರಾಗಿವೆ. ಅಮೂಲ್ಯ ಗುಣವಾದ ನಿಷ್ಠಾವಂತ ಪ್ರೀತಿಯನ್ನು ಬಿಂಬಿಸುವ ಮಾತುಗಳವು. ರೂತಳಿಗೆ ಅತ್ತೆಯ ಮೇಲಿದ್ದ ಪ್ರೀತಿ ಎಷ್ಟು ಬಲವಾಗಿತ್ತೆಂದರೆ, ಎಷ್ಟು ನಿಷ್ಠೆಯಿಂದ ಕೂಡಿತ್ತೆಂದರೆ ನೊವೊಮಿ ಎಲ್ಲೇ ಹೋದರೂ ಅವಳಿಗೆ ಅಂಟಿಕೊಂಡಿರುವಂತೆ ಅದು ಪ್ರೇರಿಸಿತು. ಮರಣದಿಂದಲ್ಲದೆ ಅವರಿಬ್ಬರ ಅಗಲಿಕೆ ಅಸಾಧ್ಯವಾಗಿತ್ತು. ಅವಳು ಒರ್ಫಾಳಂತೆ ಇರಲಿಲ್ಲ. ಮೋವಾಬಿನಲ್ಲಿ ತನಗಿದ್ದ ಎಲ್ಲವನ್ನೂ ಎಲ್ಲರನ್ನೂ ಅಲ್ಲಿನ ದೇವರುಗಳನ್ನು ಸಹ ಬಿಟ್ಟು ನೊವೊಮಿಯ ಜನರನ್ನು ತನ್ನ ಜನರಾಗಿ ಸ್ವೀಕರಿಸಲು ರೂತ್‌ ಸಿದ್ಧಳಿದ್ದಳು. ಆದ್ದರಿಂದ ನೊವೊಮಿಯ ದೇವರಾದ ಯೆಹೋವನೇ ತನ್ನ ದೇವರೆಂದು ಮನದಾಳದಿಂದ ಹೇಳಿದಳು.a

18 ನೊವೊಮಿ ಮರುಮಾತಾಡಲಿಲ್ಲ. ಈಗ ಅವರಿಬ್ಬರೇ ಬೇತ್ಲೆಹೇಮ್‌ಗೆ ಹೋಗುವ ದಾರಿಯಲ್ಲಿ ನಡೆಯುತ್ತಿದ್ದರು. ಒಂದು ಪುಸ್ತಕದ ಪ್ರಕಾರ ಮೋವಾಬಿನಿಂದ ಬೇತ್ಲೆಹೇಮ್‌ಗೆ ಅವರ ಪ್ರಯಾಣ ಒಂದು ವಾರದ್ದಾಗಿರಬಹುದು. ಆದರೆ ಅವರಿಬ್ಬರೂ ಜೊತೆಗಿದ್ದದರಿಂದ ಒಬ್ಬರಿಗೊಬ್ಬರು ಧೈರ್ಯ ಹೇಳುತ್ತಾ ತಮ್ಮ ನೋವನ್ನು ಸ್ವಲ್ಪ ಮಟ್ಟಿಗೆ ಮರೆಯಲು ನೆರವಾಗಿರಬೇಕೆಂಬುದು ಖಂಡಿತ.

19. ನಮ್ಮ ಕುಟುಂಬ, ಸ್ನೇಹಸಂಬಂಧ ಮತ್ತು ಸಭೆಯಲ್ಲಿ ರೂತಳ ನಿಷ್ಠಾವಂತ ಪ್ರೀತಿಯನ್ನು ಹೇಗೆ ಅನುಕರಿಸಬಹುದೆಂದು ನೆನಸುತ್ತೀರಿ?

19 ಇಂದು ಲೋಕದಲ್ಲಿ ದುಃಖಕ್ಕೆ ಬರವಿಲ್ಲ. ಬೈಬಲ್‌ ವರ್ಣಿಸುವಂತೆ ನಮ್ಮೀ ಕಾಲವು ‘ನಿಭಾಯಿಸಲು ಕಷ್ಟಕರವಾದ ದಿನಗಳಾಗಿವೆ.’ ಆದ್ದರಿಂದ ನಾನಾ ರೀತಿಯ ಕಷ್ಟನಷ್ಟ, ದುಃಖವನ್ನು ಅನುಭವಿಸುತ್ತೇವೆ. (2 ತಿಮೊ. 3:1) ಈ ಕಾರಣದಿಂದಲೇ ರೂತಳು ತೋರಿಸಿದಂಥ ನಿಷ್ಠಾವಂತ ಪ್ರೀತಿ ಹಿಂದೆಂದಿಗಿಂತಲೂ ಇಂದು ಬಹು ಪ್ರಾಮುಖ್ಯ. ನಿಷ್ಠಾವಂತ ಪ್ರೀತಿ ಅಂದರೇನು? ಒಬ್ಬ ವ್ಯಕ್ತಿಗೆ ಅಂಟಿಕೊಳ್ಳುವುದು, ಏನೇ ಆದರೂ ಅವರನ್ನು ಬಿಟ್ಟು ಹೋಗದಿರುವುದು. ದುಃಖದ ಕಾರ್ಮೋಡಗಳು ಕವಿದಿರುವ ಈ ಜಗತ್ತಿನಲ್ಲಿ ಈ ಪ್ರಬಲವಾದ ಗುಣವನ್ನು ನಾವು ವಿವಾಹ ಬಂಧ, ಕುಟುಂಬ ಸಂಬಂಧ, ಸ್ನೇಹಸಂಬಂಧ, ಕ್ರೈಸ್ತ ಸಭೆ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ತೋರಿಸಲೇಬೇಕು. ಇದರಿಂದ ಹೆಚ್ಚು ಒಳಿತಾಗುವುದು. (1 ಯೋಹಾನ 4:7, 8, 20 ಓದಿ.) ಆ ಗುಣವನ್ನು ಬೆಳೆಸಿಕೊಳ್ಳುವ ಮೂಲಕ ರೂತಳ ಶ್ರೇಷ್ಠ ಮಾದರಿಯನ್ನು ಅನುಕರಿಸೋಣ.

ಬೇತ್ಲೆಹೇಮ್‌ಗೆ ಬಂದ ರೂತ್‌ ಮತ್ತು ನೊವೊಮಿ

20-22. (1) ಮೋವಾಬಿನಲ್ಲಿನ ಜೀವನ ನೊವೊಮಿಯನ್ನು ಹೇಗೆ ಬಾಧಿಸಿತ್ತು? (2) ತನ್ನ ಸಂಕಷ್ಟಗಳ ಬಗ್ಗೆ ಅವಳಿಗೆ ಯಾವ ತಪ್ಪಾದ ನೋಟವಿತ್ತು? (ಯಾಕೋಬ 1:13 ಸಹ ನೋಡಿ.)

20 ನಿಷ್ಠಾವಂತ ಪ್ರೀತಿಯನ್ನು ತೋರಿಸುವುದು ಹೇಳಿದಷ್ಟು ಸುಲಭವಲ್ಲ. ಅಂಥ ಪ್ರೀತಿಯನ್ನು ನೊವೊಮಿಗೆ ಮಾತ್ರವಲ್ಲ ತನ್ನ ದೇವರಾಗಿ ಸ್ವೀಕರಿಸಿದ ಯೆಹೋವನಿಗೂ ತೋರಿಸುವ ಅವಕಾಶ ರೂತಳಿಗಿತ್ತು.

21 ಇಬ್ಬರು ಸ್ತ್ರೀಯರು ಯೆರೂಸಲೇಮಿನ ದಕ್ಷಿಣಕ್ಕೆ ಸುಮಾರು 10 ಕಿ.ಮೀ. ದೂರದಲ್ಲಿರುವ ಬೇತ್ಲೆಹೇಮ್‌ಗೆ ಬಂದು ಮುಟ್ಟಿದರು. ಈ ಊರಿನಲ್ಲಿ ನೊವೊಮಿಯ ಕುಟುಂಬ ಮುಂಚೆ ಹೆಸರುವಾಸಿಯಾಗಿತ್ತೆಂದು ತೋರುತ್ತದೆ. ಆದ್ದರಿಂದಲೇ ನೊವೊಮಿ ಊರೊಳಕ್ಕೆ ಕಾಲಿಟ್ಟಂತೆ ಎಲ್ಲರ ಬಾಯಲ್ಲೂ ಅವಳದ್ದೇ ಸುದ್ದಿ. ಸ್ತ್ರೀಯರು ತಮ್ಮತಮ್ಮೊಳಗೆ “ಈಕೆಯು ನೊವೊಮಿಯಲ್ಲವೋ” ಎಂದು ಮಾತಾಡತೊಡಗಿದರು. ಅವಳು ಮುಂಚಿನ ತರ ಇರಲಿಲ್ಲ. ಮೋವಾಬಿನಲ್ಲಿ ಅವಳು ಪಟ್ಟ ಕಷ್ಟ ಅವಳನ್ನು ನೋಡುತ್ತಿದ್ದಂತೆ ಗೊತ್ತಾಗುತ್ತಿತ್ತು. ಅವಳ ಚಹರೆಯಲ್ಲಿ ದುಃಖದ ಗೆರೆಗಳು ಎದ್ದುಕಾಣುತ್ತಿದ್ದವು.—ರೂತ. 1:19, 20.

22 ಅವಳು ಸಂಬಂಧಿಕರಿಗೆ, ನೆರೆಹೊರೆಯವರಿಗೆ ತನ್ನ ಬಾಳು ಎಷ್ಟು ದುಃಖಮಯವಾಗಿತ್ತೆಂದು ತಿಳಿಸಿದಳು. ನೊವೊಮಿ (ಅರ್ಥ “ರಮಣೀಯಳು”) ಎಂಬ ಹೆಸರನ್ನು ಮಾರಾ (ಅರ್ಥ “ದುಃಖಿತಳು”) ಎಂದು ಬದಲಾಯಿಸಿಕೊಳ್ಳಬೇಕೆಂದೂ ಆಕೆಗೆ ಅನಿಸಿತು. ಅಷ್ಟೊಂದು ನೊಂದಿದ್ದಳು! ಇದಕ್ಕೂ ಮುಂಚೆ ಜೀವಿಸಿದ್ದ ಯೋಬನಂತೆ ಈಕೆ ಕೂಡ ಯೆಹೋವನೇ ತನ್ನ ಮೇಲೆ ಸಂಕಷ್ಟಗಳನ್ನು ಬರಮಾಡಿದ್ದಾನೆಂದು ನಂಬಿದ್ದಳು.—ರೂತ. 1:20, 21, ಸತ್ಯವೇದವು ಪಾದಟಿಪ್ಪಣಿ; ಯೋಬ 2:10; 13:24-26.

23. (1) ರೂತಳು ಯಾವುದರ ಬಗ್ಗೆ ಚಿಂತಿಸುತ್ತಿದ್ದಳು? (2) ಮೋಶೆಯ ಧರ್ಮಶಾಸ್ತ್ರದಲ್ಲಿ ಬಡವರಿಗೆಂದು ಯಾವ ಏರ್ಪಾಡಿತ್ತು? (ಪಾದಟಿಪ್ಪಣಿ ಸಹ ನೋಡಿ.)

23 ಅತ್ತೆಸೊಸೆ ಇಬ್ಬರು ಬೇತ್ಲೆಹೇಮ್‌ನಲ್ಲಿ ಜೀವನ ಶುರುಮಾಡಿದರು. ತಮ್ಮಿಬ್ಬರ ಹೊಟ್ಟೆಪಾಡಿಗಾಗಿ ಏನು ಮಾಡಬೇಕೆಂಬ ಯೋಚನೆ ರೂತಳಿಗೆ. ಯೆಹೋವನು ತನ್ನ ಜನರಿಗೆ ಕೊಟ್ಟಿದ್ದ ಧರ್ಮಶಾಸ್ತ್ರದಲ್ಲಿ ಬಡವರಿಗಾಗಿ ಒಂದು ಪ್ರೀತಿಪರ ಏರ್ಪಾಡನ್ನು ಮಾಡಿದ್ದಾನೆಂದು ಅವಳಿಗೆ ತಿಳಿದುಬರುತ್ತದೆ. ಅದಕ್ಕನುಸಾರ ಸುಗ್ಗಿಕಾಲದಲ್ಲಿ ಬಡವರು ಕೊಯ್ಲುಗಾರರ ಹಿಂದೆ ಹೋಗಿ ಹೊಲದ ಅಂಚುಗಳಲ್ಲಿ, ಮೂಲೆಗಳಲ್ಲಿ ಕೊಯ್ಲುಗಾರರು ಕೊಯ್ಯದೆ ಬಿಟ್ಟ ಹಾಗೂ ಮರೆತ ಸಿವುಡುಗಳನ್ನು ಕೂಡಿಸಿಕೊಳ್ಳಬಹುದಿತ್ತು.b—ಯಾಜ. 19:9, 10; ಧರ್ಮೋ. 24:19-21.

24, 25. (1) ಅಕಸ್ಮಾತ್ತಾಗಿ ಬೋವಜನ ಹೊಲಕ್ಕೆ ಹೋದಾಗ ರೂತಳು ಏನು ಮಾಡಿದಳು? (2) ಹಕ್ಕಲಾಯುವ ಕೆಲಸ ಹೇಗಿರುತ್ತಿತ್ತು?

24 ಅದು ಜವೆಗೋಧಿಯ ಕೊಯ್ಲಿನ ಸಮಯ. ನಮ್ಮೀ ಕಾಲದ ಕ್ಯಾಲೆಂಡರಿನ ಏಪ್ರಿಲ್‌ ತಿಂಗಳು. ಹಕ್ಕಲಾಯಲು ತನಗೆ ಎಲ್ಲಿ ಅವಕಾಶ ಸಿಗಬಹುದೆಂದು ನೋಡಲು ರೂತಳು ಹೊಲಗಳ ಕಡೆಗೆ ಹೋದಳು. ಅಕಸ್ಮಾತ್ತಾಗಿ ಅವಳು ಹೋಗಿದ್ದು ಶ್ರೀಮಂತ ಜಮೀನುದಾರನಾದ ಬೋವಜನ ಹೊಲಕ್ಕೆ. ಈತ ನೊವೊಮಿಯ ಗಂಡನಾದ ಎಲೀಮೆಲೆಕನ ಸಂಬಂಧಿ. ರೂತಳಿಗೆ ಧರ್ಮಶಾಸ್ತ್ರಕ್ಕನುಸಾರ ಹಕ್ಕಲಾಯಲು ಹಕ್ಕಿತ್ತಾದರೂ ಅವಳು ಸೀದಾ ಹೋಗಿ ಪೈರುಗಳನ್ನು ಕೂಡಿಸಿಕೊಳ್ಳಲು ಆರಂಭಿಸಲಿಲ್ಲ. ಕೊಯ್ಲಿನ ಮೇಲ್ವಿಚಾರಣೆ ಮಾಡುತ್ತಿದ್ದವನ ಬಳಿ ಹೋಗಿ ಮೊದಲು ಅನುಮತಿ ಕೇಳಿದಳು. ಅವನದಕ್ಕೆ ಒಪ್ಪಿದಾಗ ಕೂಡಲೆ ತೆನೆಗಳನ್ನು ಕೂಡಿಸಿಕೊಳ್ಳಲು ಶುರುಮಾಡಿದಳು.—ರೂತ. 1:22–2:3, 7.

25 ಕೊಯ್ಲುಗಾರರು ಕುಡುಗೋಲಿನಿಂದ ಜವೆಗೋಧಿಯ ತೆನೆಗಳನ್ನು ಕೊಯ್ಯುತ್ತಾ ಮುಂದೆ ಮುಂದೆ ಹೋಗುತ್ತಿದ್ದರು. ರೂತಳು ಅವರ ಹಿಂದೆ ಹೋಗುತ್ತಾ ಅವರು ಕೊಯ್ಯದೆ ಬಿಟ್ಟದ್ದನ್ನು ಮತ್ತು ಕೆಳಗೆ ಬಿದ್ದದ್ದನ್ನು ಕೂಡಿಸಿಕೊಂಡಳು. ಬಳಿಕ ಆ ತೆನೆಗಳನ್ನು ಬಡಿಯಲಿಕ್ಕಾಗಿ ಹೊರೆಕಟ್ಟಿ ಒಂದು ಕಡೆ ತಕ್ಕೊಂಡು ಹೋಗಿ ಹಾಕಿದಳು. ಇದೆಲ್ಲ ಮೈಮುರಿದು ಮಾಡುವಂಥ ಕೆಲಸ, ಪಟಾಪಟ್‌ ಎಂದು ಮಾಡಿಮುಗಿಸುವಂಥದ್ದಲ್ಲ. ಸೂರ್ಯ ನೆತ್ತಿಯ ಮೇಲೆ ಏರಿದಂತೆ ಇನ್ನೂ ಕಷ್ಟ. ಆದರೂ ರೂತ್‌ ಒಂದೇ ಸಮನೆ ಕೆಲಸ ಮಾಡುತ್ತಾ ಇದ್ದಳು. ಹಣೆಯಿಂದ ಇಳಿಯುತ್ತಿದ್ದ ಬೆವರನ್ನು ಒರೆಸಿಕೊಳ್ಳಲು ಮತ್ತು ಮಧ್ಯಾಹ್ನ ಊಟಕ್ಕಷ್ಟೇ ಕೆಲಸ ನಿಲ್ಲಿಸಿದಳು.

ರೂತಳು ಹೊಲದಲ್ಲಿ ಕೆಲಸಗಾರರ ಹಿಂದೆ ಹೋಗಿ ಜವೆಗೋಧಿಯ ತೆನೆಗಳನ್ನು ಕೂಡಿಸಿಕೊಳ್ಳುತ್ತಾ ದೀನತೆಯಿಂದ ಕೆಲಸಮಾಡುತ್ತಿದ್ದಾಳೆ

ರೂತಳು ತನ್ನ ಮತ್ತು ಅತ್ತೆಯ ಜೀವನಾವಶ್ಯಕತೆಗಾಗಿ ಸಾಧಾರಣ ಕೆಲಸ ಮಾಡಲು ಹಿಂಜರಿಯಲಿಲ್ಲ, ಶ್ರಮಪಟ್ಟು ದುಡಿದಳು

26, 27. (1) ಬೋವಜನು ಎಂಥ ವ್ಯಕ್ತಿಯಾಗಿದ್ದನು? (2) ರೂತಳನ್ನು ಹೇಗೆ ಉಪಚರಿಸಿದನು?

26 ತನ್ನನ್ನು ಯಾರಾದರೂ ಗಮನಿಸುವರೆಂದು ರೂತಳು ನೆನಸಿರಲಿಲ್ಲ. ನಿರೀಕ್ಷಿಸಲೂ ಇಲ್ಲ. ಆದರೆ ಬೋವಜನು ಅವಳನ್ನು ಗಮನಿಸಿ ಮೇಲ್ವಿಚಾರಣೆ ನಡೆಸುತ್ತಿದ್ದ ಸೇವಕನನ್ನು ಕರೆದು ಅವಳು ಯಾರೆಂದು ವಿಚಾರಿಸಿದನು. ಬೋವಜನು ದೇವರಿಗೆ ನಂಬಿಗಸ್ತನಾಗಿದ್ದ ವ್ಯಕ್ತಿ. ದಿನಗೂಲಿಗಳೂ ಪರದೇಶಿಯರೂ ಸೇರಿದಂತೆ ಹೊಲದಲ್ಲಿದ್ದ ತನ್ನ ಕೆಲಸಗಾರರಿಗೆ “ಯೆಹೋವನು ನಿಮ್ಮ ಸಂಗಡ ಇರಲಿ” ಎಂದು ಹೇಳಿ ವಂದಿಸುತ್ತಿದ್ದನು. ಪ್ರತಿಯಾಗಿ ಆ ಸೇವಕರು ಕೂಡ ಅದೇ ರೀತಿ ವಂದಿಸುತ್ತಿದ್ದರು. ಆಧ್ಯಾತ್ಮಿಕ ಮನಸ್ಸಿನ ಈ ವೃದ್ಧನು ತಂದೆಯಂತೆ ರೂತಳಿಗೆ ಅಕ್ಕರೆ ತೋರಿಸಿದನು.—ರೂತ. 2:4-7.

27 ಅವಳನ್ನು “ನನ್ನ ಮಗಳೇ” ಎಂದು ಕರೆದು ಹಕ್ಕಲಾಯಲು ಬೇರೆಲ್ಲೂ ಹೋಗದೆ ತನ್ನ ಹೊಲಕ್ಕೇ ಬರುವಂತೆ ಹೇಳಿದನು. ಗಂಡಾಳುಗಳಿಂದ ಅವಳಿಗೆ ತೊಂದರೆ ಆಗುವುದನ್ನು ತಪ್ಪಿಸಲು ತನ್ನ ಹೆಣ್ಣಾಳುಗಳ ಜೊತೆಯಲ್ಲೇ ಇರುವಂತೆ ಹೇಳಿದನು. ಮಧ್ಯಾಹ್ನ ಊಟಕ್ಕೂ ಕೊಟ್ಟನು. (ರೂತಳು 2:8, 9, 14 ಓದಿ.) ಮುಖ್ಯವಾಗಿ ಅವಳನ್ನು ಪ್ರಶಂಸಿಸಿದನು, ಪ್ರೋತ್ಸಾಹಿಸಿದನು. ಹೇಗೆ?

28, 29. (1) ರೂತಳು ಯಾವ ರೀತಿಯ ಹೆಸರು ಗಳಿಸಿದ್ದಳು? (2) ರೂತಳಂತೆ ನೀವು ಹೇಗೆ ಯೆಹೋವನನ್ನು ಆಶ್ರಯಿಸಬಲ್ಲಿರಿ?

28 ಪರದೇಶಿಯಳಾದ ತಾನು ಆತನ ದಯೆಗೆ ಪಾತ್ರಳಾಗುವಂಥದ್ದೇನು ಮಾಡಿದೆ ಎಂದು ರೂತಳು ಕೇಳಿದಳು. ಅದಕ್ಕೆ ಬೋವಜನು ಅತ್ತೆಗಾಗಿ ಅವಳು ಮಾಡಿದ ತ್ಯಾಗಗಳ ಬಗ್ಗೆ ತಾನು ಕೇಳಿಸಿಕೊಂಡಿರುವುದಾಗಿ ಹೇಳಿದನು. ನೊವೊಮಿ ತನ್ನ ನೆಚ್ಚಿನ ಸೊಸೆಯ ಬಗ್ಗೆ ಬೇತ್ಲೆಹೇಮಿನ ಸ್ತ್ರೀಯರ ಬಳಿ ಹೆಮ್ಮೆಯಿಂದ ಮಾತಾಡಿರಬೇಕು. ಈ ಸುದ್ದಿ ಬೋವಜನಿಗೂ ಮುಟ್ಟಿತ್ತೆಂದು ಕಾಣುತ್ತದೆ. ರೂತಳು ಯೆಹೋವನ ಆರಾಧಕಳಾಗಿದ್ದಾಳೆಂದು ಕೂಡ ಅವನಿಗೆ ಗೊತ್ತಿತ್ತೆಂದು ಅವನ ಈ ಮಾತುಗಳು ತೋರಿಸುತ್ತವೆ: “ನೀನು ಮಾಡಿದ ಉಪಕಾರಕ್ಕೆ ಪ್ರತಿಯಾಗಿ ಯೆಹೋವನು ನಿನಗೆ ಉಪಕಾರ ಮಾಡಲಿ; ನೀನು ಯಾವಾತನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳ ಬಂದಿಯೋ ಆ ಇಸ್ರಾಯೇಲ್‌ ದೇವರಾದ ಯೆಹೋವನು ನಿನಗೆ ಉತ್ತಮವಾದ ಪ್ರತಿಫಲವನ್ನು ಅನುಗ್ರಹಿಸಲಿ.”—ರೂತ. 2:12.

29 ಈ ಮಾತುಗಳು ರೂತಳನ್ನು ಖಂಡಿತವಾಗಿ ತುಂಬ ಪ್ರೋತ್ಸಾಹಿಸಿರಬೇಕು. ಹೌದು, ಹಕ್ಕಿಮರಿಯೊಂದು ಸುರಕ್ಷೆಗಾಗಿ ತನ್ನ ತಾಯಿಯ ರೆಕ್ಕೆಗಳಡಿ ಹೋಗುವಂತೆ ರೂತಳು ಯೆಹೋವ ದೇವರ ರೆಕ್ಕೆಗಳ ಮರೆಯಲ್ಲಿ ಆಶ್ರಯ ಪಡೆಯಲು ದೃಢನಿಶ್ಚಯ ಮಾಡಿದ್ದಳು. ಭರವಸೆ ತುಂಬುವ ಮಾತುಗಳನ್ನಾಡಿದ್ದಕ್ಕೆ ಅವಳು ಬೋವಜನಿಗೆ ಕೃತಜ್ಞತೆ ಹೇಳಿದಳು. ಅನಂತರ ಸೂರ್ಯ ಮುಳುಗುವ ವರೆಗೂ ಕೆಲಸ ಮಾಡುತ್ತಾ ಇದ್ದಳು.—ರೂತ. 2:13, 17.

30, 31. ಕೆಲಸದ ರೂಢಿ, ಕೃತಜ್ಞತಾ ಮನೋಭಾವ, ನಿಷ್ಠಾವಂತ ಪ್ರೀತಿಯ ವಿಷಯದಲ್ಲಿ ರೂತಳಿಂದ ಏನು ಕಲಿಯುತ್ತೇವೆ?

30 ರೂತಳು ಕ್ರಿಯೆಯಲ್ಲಿ ತೋರಿಸಿದ ಆ ನಂಬಿಕೆಯು ಆರ್ಥಿಕ ಮುಗ್ಗಟ್ಟಿನ ಈ ಸಮಯದಲ್ಲಿ ನಮಗೆಲ್ಲರಿಗೂ ಅನುಕರಣಯೋಗ್ಯ. ವಿಧವೆಯಾದ ತನಗೆ ಇತರರು ತೋರಿಸುತ್ತಿದ್ದ ಅನುಕಂಪ, ಕೊಡುತ್ತಿದ್ದ ಸಹಾಯವನ್ನು ಬರೇ ಅವರ ಕರ್ತವ್ಯಪಾಲನೆ ಎಂದು ಆಕೆ ನೆನಸಲಿಲ್ಲ. ಬದಲಾಗಿ ಅವರು ಏನೇನು ಮಾಡುತ್ತಿದ್ದರೋ ಅದಕ್ಕಾಗಿ ಕೃತಜ್ಞಳಾಗಿದ್ದಳು. ಅವಳು ತುಂಬ ಪ್ರೀತಿಸುತ್ತಿದ್ದ ಅತ್ತೆಗಾಗಿ ಒಂದು ಸಾಧಾರಣ ಕೆಲಸ ಮಾಡುವುದನ್ನಾಗಲಿ ದಿನವಿಡೀ ಬೆವರು ಸುರಿಸಿ ದುಡಿಯುವುದನ್ನಾಗಲಿ ಅವಮಾನವೆಂದು ನೆನಸಲಿಲ್ಲ. ಮಾತ್ರವಲ್ಲ, ಸುರಕ್ಷೆಗಾಗಿ ಒಳ್ಳೆಯವರ ಸಂಗಡ ಕೆಲಸ ಮಾಡುವಂತೆ ಸಲಹೆ ಕೊಡಲಾದಾಗ ಅದನ್ನು ಒಳ್ಳೇ ಮನಸ್ಸಿನಿಂದ ಸ್ವೀಕರಿಸಿ ಅದರಂತೆ ನಡೆದಳು. ಎಲ್ಲಕ್ಕಿಂತ ಮುಖ್ಯವಾಗಿ ತನ್ನನ್ನು ಸಂರಕ್ಷಿಸುವ ತಂದೆಯಾದ ಯೆಹೋವ ದೇವರಲ್ಲೇ ನಿಜ ಸುರಕ್ಷೆಯನ್ನು ಪಡೆಯಬಲ್ಲೆ ಎಂಬುದನ್ನು ಆಕೆ ಮರೆತುಬಿಡಲಿಲ್ಲ.

31 ನಾವೂ ರೂತಳಂತೆ ನಿಷ್ಠಾವಂತ ಪ್ರೀತಿ ತೋರಿಸೋಣ. ದೈನ್ಯತೆ, ಶ್ರಮಶೀಲತೆ, ಕೃತಜ್ಞತೆ ತೋರಿಸುವ ವಿಷಯದಲ್ಲಿ ಅವಳಿಟ್ಟ ಮಾದರಿಯನ್ನು ಅನುಕರಿಸೋಣ. ಆಗ ನಮ್ಮ ನಂಬಿಕೆ ಸಹ ಇತರರಿಗೆ ಆದರ್ಶವಾಗಿರುವುದು. ರೂತ್‌ ಮತ್ತು ನೊವೊಮಿಯನ್ನು ಯೆಹೋವನು ಹೇಗೆ ಪೋಷಿಸಿದನೆಂದು ಮುಂದಿನ ಅಧ್ಯಾಯದಲ್ಲಿ ನೋಡೋಣ.

ಪುಟ್ಟ ಮೇರುಕೃತಿ

ರೂತಳ ಪುಸ್ತಕವನ್ನು ಚಿಕ್ಕ ರತ್ನ, ಪುಟ್ಟ ಮೇರುಕೃತಿ ಎಂದು ವರ್ಣಿಸಲಾಗಿದೆ. ಇದಕ್ಕೆ ಮುಂಚೆ ಇರುವ ನ್ಯಾಯಸ್ಥಾಪಕರು ಪುಸ್ತಕವು ರೂತಳ ಪುಸ್ತಕದಲ್ಲಿರುವ ಘಟನೆಗಳು ನಡೆದ ಕಾಲಾವಧಿಯನ್ನು ಗುರುತಿಸಲು ಸಹಾಯಮಾಡುತ್ತದೆ. (ರೂತ. 1:1) ನ್ಯಾಯಸ್ಥಾಪಕರು ಪುಸ್ತಕದಲ್ಲಿರುವಷ್ಟು ವಿಸ್ತಾರ ಮಾಹಿತಿ ರೂತಳು ಪುಸ್ತಕದಲ್ಲಿಲ್ಲ. ಇವೆರಡೂ ಪುಸ್ತಕಗಳನ್ನು ಬರೆದದ್ದು ಪ್ರವಾದಿ ಸಮುವೇಲ. ಬೈಬಲಿನ ಅಂಗೀಕೃತ ಪುಸ್ತಕಗಳ ಪಟ್ಟಿಯಲ್ಲಿ ರೂತಳ ಪುಸ್ತಕವನ್ನು ನ್ಯಾಯಸ್ಥಾಪಕರ ಪುಸ್ತಕದ ನಂತರ ಸೇರಿಸಿರುವುದು ತಕ್ಕದಾಗಿದೆ. ಏಕೆಂದರೆ ಯುದ್ಧ, ದಾಳಿ-ಪ್ರತಿದಾಳಿಗಳ ಕುರಿತು ನ್ಯಾಯಸ್ಥಾಪಕರು ಪುಸ್ತಕ ತಿಳಿಸಿದ ನಂತರ ದಿನನಿತ್ಯ ಜೀವನದ ಜಂಜಾಟಗಳೊಂದಿಗೆ ಹೆಣಗಾಡುತ್ತಿರುವ ಶಾಂತಿಯುತ ಜನರನ್ನೂ ಯೆಹೋವನು ಗಮನಿಸುತ್ತಾನೆ, ಅವರಿಗೆ ನೆರವಾಗುತ್ತಾನೆ ಎನ್ನುವುದನ್ನು ರೂತಳ ಪುಸ್ತಕ ತೋರಿಸುತ್ತದೆ. ಇದರಲ್ಲಿರುವ ಕೌಟುಂಬಿಕ ನಿಜ ಕಥೆಯು ಪ್ರೀತಿ, ನಂಬಿಕೆ, ನಿಷ್ಠೆಯ ಕುರಿತು ಅಮೂಲ್ಯ ಪಾಠಗಳನ್ನು ಕಲಿಸುತ್ತದೆ. ಯಾವುದೇ ರೀತಿಯ ನಷ್ಟವನ್ನು ತಾಳಿಕೊಳ್ಳುವುದು ಹೇಗೆಂದು ತೋರಿಸುತ್ತದೆ.

a ಹೆಚ್ಚಿನ ಅನ್ಯಜನರಂತೆ ರೂತಳು “ದೇವರು” ಎಂದು ಸಾಮಾನ್ಯ ಬಿರುದನ್ನು ಬಳಸದೆ ದೇವರ ವೈಯಕ್ತಿಕ ನಾಮವಾದ “ಯೆಹೋವ” ಎಂದು ಹೇಳಿದ್ದು ಗಮನಾರ್ಹ. “ಈ ಮೂಲಕ ಬರಹಗಾರನು ವಿದೇಶಿಯಳಾದ ಈಕೆ ಸತ್ಯ ದೇವರ ಅನುಯಾಯಿ ಎನ್ನುವುದಕ್ಕೆ ಒತ್ತುಕೊಡುತ್ತಿದ್ದಾನೆ” ಎಂದು ದಿ ಇಂಟರ್‌ಪ್ರೆಟರ್ಸ್‌ ಬೈಬಲ್‌ ಹೇಳುತ್ತದೆ.

b ರೂತಳ ತಾಯ್ನಾಡಿನಲ್ಲಿ ಅಂಥ ನಿಯಮವಿರಲಿಲ್ಲ. ಇದು ಅವಳಿಗೆ ವಿಶೇಷವೆನಿಸಿರಬೇಕು. ಆ ಕಾಲದ ಮಧ್ಯ ಪ್ರಾಚ್ಯ ದೇಶಗಳಲ್ಲಿ ವಿಧವೆಯರನ್ನು ಕೆಟ್ಟದ್ದಾಗಿ ಉಪಚರಿಸಲಾಗುತ್ತಿತ್ತು. “ಗಂಡ ಸತ್ತ ಮೇಲೆ ಸ್ತ್ರೀಯೊಬ್ಬಳು ಗಂಡುಮಕ್ಕಳನ್ನೇ ಅವಲಂಬಿಸಬೇಕಿತ್ತು. ಗಂಡುಮಕ್ಕಳು ಇರದಿದ್ದರೆ ಅವಳು ತನ್ನನ್ನು ದಾಸತ್ವಕ್ಕೆ ಮಾರಿಕೊಳ್ಳಬೇಕಿತ್ತು, ವೇಶ್ಯವಾಟಿಕೆಗೆ ಇಳಿಯಬೇಕಿತ್ತು ಅಥವಾ ಅವಳಿಗೆ ಸಾವೇ ಗತಿ” ಎನ್ನುತ್ತದೆ ಒಂದು ಪುಸ್ತಕ.

ಯೋಚಿಸಿ ನೋಡಿ . . .

  • ರೂತಳು ಯೆಹೋವ ದೇವರಲ್ಲಿ ಹೇಗೆ ನಂಬಿಕೆ ವ್ಯಕ್ತಪಡಿಸಿದಳು?

  • ರೂತಳು ನಿಷ್ಠಾವಂತ ಪ್ರೀತಿ ತೋರಿಸಿದ್ದು ಹೇಗೆ?

  • ಯೆಹೋವನು ರೂತಳನ್ನು ಮೆಚ್ಚಲು ಕಾರಣವೇನು?

  • ರೂತಳ ನಂಬಿಕೆಯನ್ನು ನೀವು ಯಾವ ವಿಧಗಳಲ್ಲಿ ಅನುಕರಿಸಬೇಕೆಂದಿದ್ದೀರಿ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ