ಪಾಠ 10
ಯೇಸು ಯಾವಾಗಲೂ ವಿಧೇಯತೆ ತೋರಿಸಿದ
ಅಪ್ಪಅಮ್ಮನ ಮಾತನ್ನು ಕೇಳಲು ನಿನಗೆ ಯಾವತ್ತಾದರೂ ಕಷ್ಟ ಆಗಿದೆಯಾ?— ಕೆಲವೊಮ್ಮೆ ಕಷ್ಟ ಆಗುತ್ತದೆ. ಯೆಹೋವ ದೇವರ ಮತ್ತು ಅಪ್ಪಅಮ್ಮನ ಮಾತನ್ನು ಯೇಸು ಕೇಳುತ್ತಿದ್ದ ಅಂತ ನಿನಗೆ ಗೊತ್ತಾ?— ಕಷ್ಟವಾದರೂ ಅಪ್ಪಅಮ್ಮನಿಗೆ ವಿಧೇಯತೆ ತೋರಿಸಬೇಕು ಅಂದರೆ ಅವರ ಮಾತು ಕೇಳಬೇಕು ಅಂತ ನೀನು ಯೇಸುವಿನಿಂದ ಕಲಿಯಬಹುದು. ಹೇಗೆ ಅಂತ ನೋಡೋಣ.
ಯೇಸು ಭೂಮಿಗೆ ಬರುವ ಮುಂಚೆ ಸ್ವರ್ಗದಲ್ಲಿ ತನ್ನ ತಂದೆಯಾದ ಯೆಹೋವನ ಜೊತೆ ಇದ್ದನು. ಆದರೆ ಭೂಮಿಯಲ್ಲಿ ಕೂಡ ಅವನಿಗೆ ಅಪ್ಪಅಮ್ಮ ಇದ್ದರು. ಅವರ ಹೆಸರು ಯೋಸೇಫ ಮತ್ತು ಮರಿಯ. ಇವರು ಯೇಸುವಿನ ಅಪ್ಪಅಮ್ಮ ಆದದ್ದು ಹೇಗೆ ಅಂತ ನಿನಗೆ ಗೊತ್ತಾ?—
ಯೇಸು ಭೂಮಿ ಮೇಲೆ ಹುಟ್ಟುವಂತೆ ಮಾಡಲು ಯೆಹೋವನು ಏನು ಮಾಡಿದನು? ಒಂದು ಅದ್ಭುತ ಮಾಡಿದನು. ಯೇಸುವಿನ ಜೀವವನ್ನು ಸ್ವರ್ಗದಿಂದ ತೆಗೆದು ಮರಿಯಳ ಹೊಟ್ಟೆಯಲ್ಲಿಟ್ಟನು. ಎಲ್ಲ ಮಕ್ಕಳು ಹೇಗೆ ಅಮ್ಮನ ಹೊಟ್ಟೆಯಲ್ಲಿ ಬೆಳೆಯುತ್ತವೋ ಹಾಗೇ ಯೇಸು ಕೂಡ ಮರಿಯಳ ಹೊಟ್ಟೆಯಲ್ಲಿ ಬೆಳೆದ. 9 ತಿಂಗಳಾದ ಮೇಲೆ ಯೇಸು ಹುಟ್ಟಿದ. ಹೀಗೆ ಮರಿಯ ಯೇಸುವಿನ ಅಮ್ಮ ಆದಳು. ಅವಳ ಗಂಡನಾದ ಯೋಸೇಫ ಯೇಸುವಿನ ಅಪ್ಪ ಆದ.
ಯೇಸುವಿಗೆ ಸ್ವರ್ಗದಲ್ಲಿರುವ ತನ್ನ ತಂದೆಯಾದ ಯೆಹೋವನ ಮೇಲೆ ತುಂಬ ಪ್ರೀತಿ ಇತ್ತು. ಅವನು 12ನೇ ವಯಸ್ಸಿನಲ್ಲಿ ಮಾಡಿದ ಒಂದು ವಿಷಯದಿಂದ ಇದು ಗೊತ್ತಾಗುತ್ತದೆ. ಅವನು ಅಪ್ಪಅಮ್ಮನ ಜೊತೆ ಯೆರೂಸಲೇಮಿಗೆ ಪಸ್ಕ ಹಬ್ಬ ಆಚರಿಸಲು ಹೋದ. ತುಂಬ ದೂರ ಹೋಗಬೇಕಿತ್ತು. ಅಲ್ಲಿಗೆ ಹೋಗಿ ಮನೆಗೆ ವಾಪಸ್ಸು ಬರುವಾಗ ಯೇಸು ಅವನ ಅಪ್ಪಅಮ್ಮನ ಜೊತೆ ಇರಲಿಲ್ಲ. ಅವನು ಎಲ್ಲಿದ್ದ ಹೇಳು ನೋಡೋಣ?—
ಯೇಸು ದೇವಾಲಯದಲ್ಲಿ ಯಾಕೆ ಇದ್ದಾನೆ?
ಯೋಸೇಫ ಮತ್ತು ಮರಿಯ ಯೇಸುವನ್ನು ಹುಡುಕುತ್ತಾ ಮತ್ತೆ ಯೆರೂಸಲೇಮಿಗೆ ಬಂದರು. ಎಲ್ಲಾ ಕಡೆ ಹುಡುಕಿದರು. ಸಿಗದೇ ಇದ್ದಾಗ ಅವರಿಗೆ ತುಂಬ ಚಿಂತೆ ಆಯಿತು. ಮೂರು ದಿನಗಳಾದ ಮೇಲೆ ದೇವಾಲಯದಲ್ಲಿ ಸಿಕ್ಕಿದ! ಅವನು ದೇವಾಲಯದಲ್ಲಿ ಯಾಕೆ ಇದ್ದ?— ತನ್ನ ತಂದೆಯಾದ ಯೆಹೋವನ ಬಗ್ಗೆ ಕಲಿಯಲು. ಯೇಸುವಿಗೆ ಯೆಹೋವನ ಮೇಲೆ ತುಂಬ ಪ್ರೀತಿ ಇತ್ತು. ಆತನನ್ನು ಹೇಗೆ ಖುಷಿಪಡಿಸಬಹುದು ಅಂತ ಕಲಿಯುವ ಆಸೆ ಇತ್ತು. ಯೇಸು ದೊಡ್ಡವನಾದ ಮೇಲೂ ಯೆಹೋವನ ಮಾತು ಕೇಳಿದ. ಕಷ್ಟವಾದರೂ, ಬೇರೆಯವರು ತೊಂದರೆ ಕೊಟ್ಟರೂ ದೇವರು ಹೇಳಿದ ಮಾತನ್ನು ಕೇಳುತ್ತಿದ್ದ. ಅಪ್ಪಅಮ್ಮನ ಮಾತನ್ನು ಕೂಡ ಕೇಳಿದನಾ?— ಹೌದು, ಕೇಳಿದನು ಅಂತ ಬೈಬಲ್ ಹೇಳುತ್ತದೆ.
ಯೇಸುವಿನ ಹಾಗೇ ನೀನೇನು ಮಾಡಬೇಕು?— ಅಪ್ಪಅಮ್ಮನ ಮಾತನ್ನು ನೀನು ಕೇಳಲೇಬೇಕು. ಕೆಲವೊಮ್ಮೆ ಕಷ್ಟವಾದರೂ ಅವರು ಹೇಳಿದ ಹಾಗೇ ಮಾಡಬೇಕು. ಮಾಡುತ್ತೀಯಾ?—