ಅಧ್ಯಾಯ 12
ನಾವು ದೇವರ ಸ್ನೇಹಿತರಾಗುವುದು ಹೇಗೆ?
1, 2. ಯೆಹೋವನ ಸ್ನೇಹಿತರಲ್ಲಿ ಕೆಲವರ ಹೆಸರನ್ನು ಹೇಳಿ.
ನೀವು ಯಾರನ್ನು ನಿಮ್ಮ ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತೀರಿ? ನಿಮಗೆ ಯಾರು ಇಷ್ಟ ಆಗುತ್ತಾರೋ, ಯಾರೊಟ್ಟಿಗೆ ನೀವು ಹೊಂದಿಕೊಂಡು ಹೋಗಲು ಆಗುತ್ತದೋ ಮತ್ತು ಯಾರು ನಿಮ್ಮನ್ನು ಅರ್ಥ ಮಾಡಿಕೊಳ್ಳುತ್ತಾರೋ ಅವರನ್ನು ನಿಮ್ಮ ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತೀರಿ. ನೀವು ಮೆಚ್ಚುವಂಥ ಗುಣಗಳಿರುವವರನ್ನು, ಒಳ್ಳೇ ವ್ಯಕ್ತಿತ್ವ ಇರುವವರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತೀರಿ.
2 ಯೆಹೋವ ದೇವರು ಸಹ ಕೆಲವು ಮನುಷ್ಯರನ್ನು ತನ್ನ ಸ್ನೇಹಿತರನ್ನಾಗಿ ಆರಿಸಿಕೊಳ್ಳುತ್ತಾನೆ. ಅದು ಹೇಗೆ ಗೊತ್ತಾಗುತ್ತದೆ? ಹಿಂದೆ, ಯೆಹೋವ ದೇವರು ಅಬ್ರಹಾಮನನ್ನು ತನ್ನ ಸ್ನೇಹಿತನನ್ನಾಗಿ ಮಾಡಿಕೊಂಡಿದ್ದನು. (ಯೆಶಾಯ 41:8; ಯಾಕೋಬ 2:23) ದಾವೀದನೆಂದರೆ ಯೆಹೋವನಿಗೆ ತುಂಬ ಇಷ್ಟವಿತ್ತು. ಹಾಗಾಗಿಯೇ ಅವನನ್ನು “ನನ್ನ ಹೃದಯಕ್ಕೆ ಮೆಚ್ಚಿಕೆಯಾದವನು” ಎಂದು ಹೇಳಿದನು. (ಅಪೊಸ್ತಲರ ಕಾರ್ಯಗಳು 13:22) ಪ್ರವಾದಿ ದಾನಿಯೇಲನು ಸಹ ಯೆಹೋವನಿಗೆ “ಅತಿಪ್ರಿಯ”ನಾಗಿದ್ದನು.—ದಾನಿಯೇಲ 9:23.
3. ಅಬ್ರಹಾಮ, ದಾವೀದ, ದಾನಿಯೇಲನನ್ನು ಯೆಹೋವನು ಯಾಕೆ ಸ್ನೇಹಿತರನ್ನಾಗಿ ಆರಿಸಿಕೊಂಡನು?
3 ಯೆಹೋವ ದೇವರು ಅಬ್ರಹಾಮ, ದಾವೀದ ಮತ್ತು ದಾನಿಯೇಲನನ್ನು ಯಾಕೆ ಸ್ನೇಹಿತರನ್ನಾಗಿ ಆರಿಸಿಕೊಂಡನು? ಇದಕ್ಕೆ ಉತ್ತರ ದೇವರು ಅಬ್ರಹಾಮನಿಗೆ ಹೇಳಿದ ಮಾತಿನಲ್ಲಿದೆ. ಯೆಹೋವನು ಅಬ್ರಹಾಮನಿಗೆ, ‘ನೀನು ನನ್ನ ಮಾತನ್ನು ಕೇಳಿದ್ದರಿಂದಲೇ’ ಎಂದು ಹೇಳಿದನು. (ಆದಿಕಾಂಡ 22:18) ಇದರಿಂದ ಗೊತ್ತಾಗುತ್ತದೆ, ಯಾರು ದೀನತೆಯಿಂದ ಯೆಹೋವನ ಮಾತನ್ನು ಕೇಳುತ್ತಾರೋ ಅವರು ಆತನ ಸ್ನೇಹಿತರಾಗುತ್ತಾರೆ. ಇಡೀ ಜನಾಂಗಕ್ಕೆ ಜನಾಂಗವೇ ಯೆಹೋವನ ಸ್ನೇಹಿತರಾಗಬಹುದು. ಹಾಗಾಗಿಯೇ ಯೆಹೋವನು ಇಸ್ರಾಯೇಲ್ ಎಂಬ ಜನಾಂಗಕ್ಕೆ “ನನ್ನ ಧ್ವನಿಗೆ ಕಿವಿಗೊಡಿರಿ, ನಾನು ನಿಮ್ಮ ದೇವರಾಗಿರುವೆನು, ನೀವು ನನ್ನ ಪ್ರಜೆಯಾಗಿರುವಿರಿ” ಎಂದು ಹೇಳಿದನು. (ಯೆರೆಮೀಯ 7:23) ಅದೇರೀತಿ ನೀವು ಸಹ ಯೆಹೋವನ ಸ್ನೇಹಿತರಾಗಬೇಕಾದರೆ ಆತನ ಮಾತನ್ನು ಕೇಳಿ ಅದರ ಪ್ರಕಾರ ನಡೆಯಬೇಕು.
ಯೆಹೋವನು ತನ್ನ ಸ್ನೇಹಿತರನ್ನು ಕಾಪಾಡುತ್ತಾನೆ
4, 5. ಯೆಹೋವನು ತನ್ನ ಸ್ನೇಹಿತರನ್ನು ಹೇಗೆ ಕಾಪಾಡುತ್ತಾನೆ?
4 ಯೆಹೋವ ದೇವರು “ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು” ತೋರ್ಪಡಿಸಲು ಅವಕಾಶಗಳಿಗಾಗಿ ಹುಡುಕುತ್ತಿರುತ್ತಾನೆ ಎಂದು ಬೈಬಲಿನಲ್ಲಿದೆ. (2 ಪೂರ್ವಕಾಲವೃತ್ತಾಂತ 16:9) ಅಲ್ಲದೆ, ಯೆಹೋವನು ತನ್ನ ಒಬ್ಬೊಬ್ಬ ಸ್ನೇಹಿತನಿಗೂ, ನಿನ್ನನ್ನು “ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವೆನು; ನಿನ್ನನ್ನು ಕಟಾಕ್ಷಿಸಿ ಆಲೋಚನೆಹೇಳುವೆನು” ಎಂದು ಕೀರ್ತನೆ 32:8ರಲ್ಲಿ ಮಾತುಕೊಟ್ಟಿದ್ದಾನೆ.
5 ನಮ್ಮ ವೈರಿಯಾಗಿರುವ ಸೈತಾನನು ನಾವು ದೇವರ ಸ್ನೇಹಿತರಾಗದಂತೆ ತಡೆಯಲು ಪ್ರಯತ್ನಿಸುತ್ತಾನೆ. ಆದರೆ ಯೆಹೋವ ದೇವರು ನಮ್ಮನ್ನು ಕಾಪಾಡಲು ತಯಾರಿದ್ದಾನೆ. (ಕೀರ್ತನೆ 55:22 ಓದಿ.) ದೇವರ ಸ್ನೇಹಿತರಾಗಿರುವ ನಾವು ಆತನನ್ನು ಪೂರ್ಣ ಹೃದಯದಿಂದ ಆರಾಧಿಸುತ್ತೇವೆ. ಕಷ್ಟ ಸಮಸ್ಯೆಗಳು ಬಂದರೂ ನಾವು ಆತನನ್ನು ಬಿಟ್ಟುಬಿಡುವುದಿಲ್ಲ. ಕೀರ್ತನೆಗಾರನಿಗಿದ್ದ ಭರವಸೆ ನಮಗೂ ಇದೆ. ಅವನು ಯೆಹೋವನ ಕುರಿತು ಬರೆದಿದ್ದು: “ಆತನು ನನ್ನ ಬಲಗಡೆಯಲ್ಲಿ ಇರುವದರಿಂದ ನಾನು ಎಂದಿಗೂ ಕದಲುವದಿಲ್ಲ.” (ಕೀರ್ತನೆ 16:8; 63:8) ಆದರೆ ನಾವು ದೇವರ ಸ್ನೇಹಿತರಾಗದಂತೆ ತಡೆಯಲು ಸೈತಾನನು ಹೇಗೆ ಪ್ರಯತ್ನಿಸುತ್ತಾನೆ ಅಂತ ಮುಂದೆ ನೋಡೋಣ.
ಮನುಷ್ಯರ ಮೇಲೆ ಸೈತಾನನ ಆರೋಪ
6. ಮನುಷ್ಯರ ಮೇಲೆ ಸೈತಾನ ಯಾವ ಆರೋಪ ಹಾಕಿದನು?
6 ಸೈತಾನನು ದೇವರ ಮೇಲೆ ಹಾಕಿದ ಆರೋಪದ ಬಗ್ಗೆ ನಾವು ಅಧ್ಯಾಯ 11ರಲ್ಲಿ ಕಲಿತೆವು. ದೇವರು ಆದಾಮ ಮತ್ತು ಹವ್ವಳಿಗೆ ಸುಳ್ಳು ಹೇಳಿದ್ದಾನೆಂದು ಮತ್ತು ಸರಿ ಯಾವುದು ತಪ್ಪು ಯಾವುದು ಅಂತ ಅವರೇ ನಿರ್ಧರಿಸಲು ಬಿಡದೆ ಅವರಿಗೆ ಅನ್ಯಾಯಮಾಡಿದ್ದಾನೆಂದು ಸೈತಾನ ಆರೋಪ ಹಾಕಿದನು. ದೇವರ ಮೇಲೆ ಮಾತ್ರವಲ್ಲ ದೇವರ ಸ್ನೇಹಿತರಾಗಲು ಬಯಸುವ ಮನುಷ್ಯರ ಮೇಲೆ ಸಹ ಸೈತಾನ ಆರೋಪ ಹಾಕಿದ್ದಾನೆ. ಬೈಬಲಿನ ಯೋಬ ಎಂಬ ಪುಸ್ತಕ ಓದುವಾಗ ಇದು ನಮಗೆ ಗೊತ್ತಾಗುತ್ತದೆ. ಅವನ ಆರೋಪ ಏನೆಂದರೆ, ಮನುಷ್ಯರು ದೇವರನ್ನು ಆರಾಧಿಸುವುದು ದೇವರ ಮೇಲಿನ ಪ್ರೀತಿಯಿಂದಲ್ಲ, ಬದಲಿಗೆ ದೇವರಿಂದ ಅವರಿಗೆ ಸಿಗುವ ಪ್ರಯೋಜನಕ್ಕಾಗಿಯೇ. ಅಷ್ಟೇ ಅಲ್ಲ, ದೇವರನ್ನು ಆರಾಧಿಸುವ ಯಾವುದೇ ಮನುಷ್ಯನನ್ನು ದೇವರ ವಿರುದ್ಧ ತಿರುಗಿಬೀಳುವಂತೆ ಮಾಡಲು ತನ್ನಿಂದ ಆಗುತ್ತದೆ ಎಂದು ಅವನು ಕೊಚ್ಚಿಕೊಳ್ಳುತ್ತಾನೆ. ನಾವು ಯೋಬ ಎಂಬ ವ್ಯಕ್ತಿಯಿಂದ ಏನು ಕಲಿಯಬಹುದು ಮತ್ತು ಅವನನ್ನು ಯೆಹೋವ ದೇವರು ಹೇಗೆ ಕಾಪಾಡಿದನು ಎನ್ನುವುದನ್ನು ಈಗ ನೋಡೋಣ.
7, 8. (ಎ) ಯೋಬ ಬೇರೆ ಜನರಿಗಿಂತ ಹೇಗೆ ಭಿನ್ನನಾಗಿದ್ದನು? (ಬಿ) ಸೈತಾನನು ಯೋಬನ ಮೇಲೆ ಏನೆಂದು ಆರೋಪ ಹಾಕಿದನು?
7 ಯಾರು ಈ ಯೋಬ? ಇವನು ಸುಮಾರು 3,600 ವರ್ಷಗಳ ಹಿಂದೆ ಜೀವಿಸಿದ್ದ ಒಬ್ಬ ಒಳ್ಳೇ ವ್ಯಕ್ತಿ. ಆ ಸಮಯದಲ್ಲಿ ಅವನಷ್ಟು ಒಳ್ಳೆಯವನು ಈ ಭೂಮಿ ಮೇಲೆ ಯಾರೂ ಇರಲಿಲ್ಲವೆಂದು ಸ್ವತಃ ಯೆಹೋವ ದೇವರೇ ಹೇಳಿದನು. ಯೋಬನಿಗೆ ದೇವರ ಮೇಲೆ ತುಂಬ ಭಯಭಕ್ತಿ. ಅವನಿಗೆ ಕೆಟ್ಟದೆಂದರೆ ಸ್ವಲ್ಪವೂ ಇಷ್ಟವಾಗುತ್ತಿರಲಿಲ್ಲ. (ಯೋಬ 1:8) ಹಾಗಾಗಿಯೇ ಯೋಬ ಯೆಹೋವನ ನಿಜ ಸ್ನೇಹಿತನಾಗಿದ್ದನು.
8 ಯೆಹೋವನಿಂದ ತನಗೆ ಏನಾದರೂ ಸಿಗುತ್ತದೆ ಎನ್ನುವ ಸ್ವಾರ್ಥದಿಂದ ಯೋಬನು ಯೆಹೋವನನ್ನು ಆರಾಧಿಸುತ್ತಿದ್ದಾನೆ ಎಂದು ಸೈತಾನನು ಅವನ ಮೇಲೆ ಆರೋಪ ಹಾಕಿದನು. ಸೈತಾನನು ಯೆಹೋವ ದೇವರಿಗೆ; ‘ನೀನು ಅವನಿಗೂ ಅವನ ಮನೆಗೂ ಅವನ ಎಲ್ಲಾ ಸ್ವಾಸ್ತ್ಯಕ್ಕೂ ಸುತ್ತಮುತ್ತ ಬೇಲಿಯನ್ನು ಹಾಕಿದ್ದೀಯಲ್ಲಾ. ಅವನು ಕೈಹಾಕಿದ ಕೆಲಸವನ್ನು ನೀನು ಸಫಲಪಡಿಸುತ್ತಿರುವದರಿಂದ ಅವನ ಸಂಪತ್ತು ದೇಶದಲ್ಲಿ ವೃದ್ಧಿಯಾಗುತ್ತಾ ಬಂದಿದೆ. ಆದರೆ ನಿನ್ನ ಕೈನೀಡಿ ಅವನ ಸೊತ್ತನ್ನೆಲ್ಲಾ ಅಳಿಸಿಬಿಡು. ಆಗ ಅವನು ನಿನ್ನ ಎದುರಿಗೆ ನಿನ್ನನ್ನು ದೂಷಿಸೇ ದೂಷಿಸುವನು’ ಎಂದು ಹೇಳಿದನು.—ಯೋಬ 1:10, 11.
9. ಏನು ಮಾಡಲು ದೇವರು ಸೈತಾನನಿಗೆ ಅನುಮತಿ ಕೊಟ್ಟನು?
9 ತನಗೆ ಸಿಗುವ ಪ್ರಯೋಜನಕ್ಕಾಗಿಯೇ ಯೋಬನು ಯೆಹೋವನನ್ನು ಆರಾಧಿಸುತ್ತಿದ್ದಾನೆಂದು ಸೈತಾನನು ಆರೋಪ ಹೊರಿಸಿದನು. ಯೋಬನು ದೇವರನ್ನು ಆರಾಧಿಸದಂತೆ ಮಾಡಲು ತನ್ನಿಂದ ಆಗುತ್ತದೆಂದು ಸಹ ಸೈತಾನನು ಹೇಳಿದನು. ಆದರೆ ಯೆಹೋವನು ಆ ಮಾತನ್ನು ಒಪ್ಪಲಿಲ್ಲ. ಬದಲಿಗೆ ತನ್ನ ಮೇಲೆ ಪ್ರೀತಿ ಇರುವುದರಿಂದಲೇ ಯೋಬನು ತನ್ನ ಸ್ನೇಹಿತನಾಗಿದ್ದಾನೆಂದು ಹೇಳಿದನು. ಅದನ್ನು ಪರೀಕ್ಷಿಸಿ ನೋಡುವಂತೆ ಸಹ ಸೈತಾನನಿಗೆ ಅನುಮತಿ ಕೊಟ್ಟನು.
ಸೈತಾನನು ಯೋಬನಿಗೆ ತಂದ ಪರೀಕ್ಷೆ
10. (ಎ) ಸೈತಾನನು ಯೋಬನನ್ನು ಹೇಗೆಲ್ಲ ಪರೀಕ್ಷಿಸಿದನು? (ಬಿ) ಇಷ್ಟೆಲ್ಲ ಆದರೂ ಯೋಬನು ಏನು ಮಾಡಲಿಲ್ಲ?
10 ಸೈತಾನನು ಮೊದಲು ಕೈಹಾಕಿದ್ದು ಯೋಬನಿಗೆ ಸೇರಿದ್ದ ಪ್ರಾಣಿಗಳ ಮೇಲೆ. ಅವು ನಾಶವಾಗುವಂತೆ, ಅವುಗಳನ್ನು ಬೇರೆಯವರು ಕದ್ದುಕೊಂಡು ಹೋಗುವಂತೆ ಸೈತಾನನು ಮಾಡಿದನು. ಅಷ್ಟಕ್ಕೆ ಸುಮ್ಮನಾಗದ ಅವನು ಯೋಬನ ಆಳುಗಳಲ್ಲಿ ಹೆಚ್ಚಿನವರ ಕೊಲೆಯಾಗುವಂತೆ ಮಾಡಿದನು. ಆಗ ಯೋಬನು ತನ್ನಲ್ಲಿದ್ದ ಎಲ್ಲವನ್ನೂ ಕಳೆದುಕೊಂಡನು. ಕೊನೆಗೆ ಯೋಬನ ಕುಟುಂಬಕ್ಕೇ ಕೈಹಾಕಿದನು. ಅವನ ಮಕ್ಕಳೆಲ್ಲ ಬಿರುಗಾಳಿಯಲ್ಲಿ ಸಾಯುವಂತೆ ಮಾಡಿದನು. ಇಷ್ಟೆಲ್ಲ ಆದರೂ ಯೋಬನು ಯೆಹೋವನ ಆರಾಧನೆಯನ್ನು ಬಿಟ್ಟುಬಿಡಲಿಲ್ಲ. ಅಲ್ಲದೆ “ಯೋಬನು ಪಾಪಮಾಡಲಿಲ್ಲ, ದೇವರ ಮೇಲೆ ತಪ್ಪುಹೊರಿಸಲೂ ಇಲ್ಲ.”—ಯೋಬ 1:12-19, 22.
ನಿಷ್ಠಾವಂತ ಸ್ನೇಹಿತನಾಗಿದ್ದ ಯೋಬನಿಗೆ ಯೆಹೋವನು ಪ್ರತಿಫಲ ಕೊಟ್ಟನು
11. (ಎ) ಯೋಬನು ಮತ್ತೇನನ್ನು ಅನುಭವಿಸಬೇಕಾಯಿತು? (ಬಿ) ಆಗಲೂ ಯೋಬನ ಪ್ರತಿಕ್ರಿಯೆ ಹೇಗಿತ್ತು?
11 ಇಷ್ಟೆಲ್ಲ ಮಾಡಿದ ಮೇಲೂ ಸೈತಾನ ಸುಮ್ಮನಾಗಲಿಲ್ಲ. ದೇವರ ಹತ್ತಿರ ಹೋಗಿ, ಯೋಬನ ‘ಅಸ್ತಿಮಾಂಸಗಳನ್ನು ಹೊಡೆ; ಅವನು ನಿನ್ನ ಮುಖದೆದುರಿಗೆ ನಿನ್ನನ್ನು ದೂಷಿಸೇ ದೂಷಿಸುವನು’ ಎಂದು ಹೇಳಿದ. ಆಮೇಲೆ ಯೋಬನಿಗೆ ಒಂದು ಭಯಂಕರ ರೋಗ ಬರುವಂತೆ ಮಾಡಿದ. ಅದರಿಂದ ಯೋಬನು ತುಂಬ ನರಳಿದನು. (ಯೋಬ 2:5, 7) ಅಂಥ ನರಳಾಟದಲ್ಲೂ ಯೋಬ ಯೆಹೋವನಿಗೆ ನಿಷ್ಠೆ ತೋರಿಸಿದ. ಅಲ್ಲದೆ, “ಸಾಯುವ ತನಕ ನನ್ನ ಯಥಾರ್ಥತ್ವದ [ಅಂದರೆ, ಸಮಗ್ರತೆಯ] ಹೆಸರನ್ನು ಕಳಕೊಳ್ಳೆನು” ಎಂದು ಹೇಳಿದ.—ಯೋಬ 27:5.
12. ಸೈತಾನನು ಸುಳ್ಳುಗಾರ ಅಂತ ಯೋಬ ಹೇಗೆ ರುಜುಪಡಿಸಿದನು?
12 ತನ್ನ ಮೇಲೆ ಸೈತಾನನು ಹೊರಿಸಿದ ಆರೋಪಗಳ ಬಗ್ಗೆಯಾಗಲಿ, ತನಗೆ ಯಾಕಿಷ್ಟು ಕಷ್ಟ ಬರುತ್ತಿದೆ ಅಂತಾಗಲಿ ಯೋಬನಿಗೆ ಗೊತ್ತೇ ಇರಲಿಲ್ಲ. ಯೆಹೋವನೇ ತನಗೆ ಕಷ್ಟಕೊಡುತ್ತಿದ್ದಾನೆ ಅಂತ ಅವನು ಅಂದುಕೊಂಡನು. (ಯೋಬ 6:4; 16:11-14) ಆದರೂ ಯೆಹೋವನ ಆರಾಧನೆಯನ್ನು ಅವನು ಬಿಟ್ಟುಬಿಡಲಿಲ್ಲ. ಇದರಿಂದ ಯೆಹೋವನು ಹೇಳಿದ ಮಾತು ನಿಜವಾಯಿತು. ಯೋಬನಿಗೆ ಯೆಹೋವನ ಮೇಲೆ ನಿಜಕ್ಕೂ ಪ್ರೀತಿಯಿತ್ತು. ಅವನ ಸ್ನೇಹದ ಹಿಂದೆ ಯಾವುದೇ ಸ್ವಾರ್ಥ ಇರಲಿಲ್ಲ. ಸೈತಾನನು ಯೋಬನ ಮೇಲೆ ಹಾಕಿದ ಎಲ್ಲ ಆರೋಪಗಳು ಶುದ್ಧ ಸುಳ್ಳಾಗಿದ್ದವು!
13. ಯೋಬನು ನಿಷ್ಠೆ ತೋರಿಸಿದ್ದರಿಂದ ಏನಾಯಿತು?
13 ಸ್ವರ್ಗದಲ್ಲಿ ಏನಾಗುತ್ತಿದೆ ಎನ್ನುವುದರ ಸುಳಿವೇ ಇಲ್ಲದಿದ್ದರೂ ಯೋಬ ಯೆಹೋವನಿಗೆ ನಿಷ್ಠಾವಂತನಾಗಿದ್ದನು. ಇದರಿಂದ ಸೈತಾನನು ದುಷ್ಟನೆಂದು ರುಜುವಾಯಿತು. ನಿಷ್ಠಾವಂತ ಸ್ನೇಹಿತನಾಗಿ ಉಳಿದ ಯೋಬನಿಗೆ ಯೆಹೋವನಿಂದ ಬಹುಮಾನವೂ ಸಿಕ್ಕಿತು.—ಯೋಬ 42:12-17.
ಸೈತಾನನು ನಮ್ಮ ಮೇಲೆ ಹಾಕಿರುವ ಆರೋಪ
14, 15. ಎಲ್ಲ ಮನುಷ್ಯರ ಮೇಲೆ ಸೈತಾನ ಯಾವ ಆರೋಪ ಹಾಕಿದ್ದಾನೆ?
14 ಯೋಬನಿಗೆ ಏನಾಯಿತೋ ಅದರಿಂದ ನಾವು ಪ್ರಾಮುಖ್ಯ ಪಾಠಗಳನ್ನು ಕಲಿಯಬಹುದು. ನಾವು ಸಹ ಯೆಹೋವನನ್ನು ಸ್ವಾರ್ಥಕ್ಕಾಗಿಯೇ ಆರಾಧಿಸುತ್ತೇವೆಂದು ಸೈತಾನನು ಆರೋಪ ಹಾಕಿದ್ದಾನೆ. ಹಾಗಾಗಿಯೇ ಅವನು ಯೆಹೋವನಿಗೆ: “ಒಬ್ಬ ಮನುಷ್ಯನು ಪ್ರಾಣವನ್ನು ಉಳಿಸಿಕೊಳ್ಳುವದಕ್ಕೋಸ್ಕರ ತನ್ನ ಸರ್ವಸ್ವವನ್ನೂ ಕೊಡುವನು” ಎಂದು ಹೇಳಿದನು. (ಯೋಬ 2:4) ಇಲ್ಲಿ ಸೈತಾನನು, ‘ಒಬ್ಬ ಮನುಷ್ಯ’ ಎಂದು ಹೇಳುವ ಮೂಲಕ ಕೇವಲ ಯೋಬ ಅಷ್ಟೇ ಅಲ್ಲ ಎಲ್ಲ ಮನುಷ್ಯರು ಸ್ವಾರ್ಥಿಗಳಾಗಿದ್ದಾರೆ ಎನ್ನುತ್ತಿದ್ದಾನೆ. ಯೋಬ ಸತ್ತು ನೂರಾರು ವರ್ಷಗಳು ಗತಿಸಿಹೋದ ನಂತರವೂ ಸೈತಾನನು ಯೆಹೋವನಿಗೆ ಅವಮಾನ ಮಾಡುವುದನ್ನು ಮತ್ತು ಯೆಹೋವನ ಸೇವಕರ ಮೇಲೆ ಆರೋಪ ಹೊರಿಸುವುದನ್ನು ಬಿಟ್ಟುಬಿಡಲಿಲ್ಲ. ಅದಕ್ಕೇ ಯೆಹೋವ ದೇವರು ಜ್ಞಾನೋಕ್ತಿ 27:11ರಲ್ಲಿ ಹೀಗಂದನು: “ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು; ಹಾಗಾದರೆ, ನನ್ನನ್ನು ದೂರುವವನಿಗೆ [ಅಥವಾ, ಅವಮಾನ ಮಾಡುವವನಿಗೆ] ನಾನು ಉತ್ತರಕೊಡಲಾಗುವದು.”
15 ನೀವು ಸಹ ಯೋಬನ ಹಾಗೆ ಯೆಹೋವನ ಮಾತಿನಂತೆ ನಡೆದು ಆತನ ನಿಷ್ಠಾವಂತ ಸ್ನೇಹಿತರಾಗಿರುವ ಆಯ್ಕೆಮಾಡಿ. ಆಗ ಸೈತಾನನನ್ನು ಸುಳ್ಳುಗಾರನೆಂದು ರುಜುಪಡಿಸಬಹುದು. ಯೆಹೋವನ ಸ್ನೇಹಿತರಾಗಲು ನೀವು ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಬೇಕಾಗಿ ಬರಬಹುದು. ಅವುಗಳನ್ನು ಮಾಡಲು ಹಿಂಜರಿಯಬೇಡಿ. ಯಾಕೆಂದರೆ ಯೆಹೋವನ ಸ್ನೇಹಿತರಾಗುವುದಕ್ಕಿಂತ ದೊಡ್ಡದು ಯಾವುದೂ ಇಲ್ಲ. ಅದೊಂದು ಗಂಭೀರ ನಿರ್ಧಾರವಾಗಿದೆ. ನಿಮಗೆ ಕಷ್ಟ ಬಂದಾಗ ನೀವು ದೇವರ ಆರಾಧನೆಯನ್ನು ಬಿಟ್ಟುಬಿಡುತ್ತೀರಿ ಎಂದು ಸೈತಾನ ಆರೋಪಿಸಿದ್ದಾನೆ. ಹಾಗಾಗಿ ಅವನು ನಿಮ್ಮನ್ನು ಮೋಸಗೊಳಿಸಿ ದೇವರಿಂದ ದೂರಮಾಡಲು ನೋಡುತ್ತಾನೆ. ಅದು ಹೇಗೆ?
16. (ಎ) ಜನರು ದೇವರ ಸ್ನೇಹಿತರಾಗದಂತೆ ತಡೆಯಲು ಸೈತಾನನು ಯಾವೆಲ್ಲ ವಿಧಾನಗಳನ್ನು ಬಳಸುತ್ತಾನೆ? (ಬಿ) ನೀವು ಯೆಹೋವನ ಆರಾಧನೆ ಮಾಡದಂತೆ ಸೈತಾನನು ಹೇಗೆಲ್ಲ ತಡೆಯಬಹುದು?
16 ನಾವು ದೇವರ ಸ್ನೇಹಿತರಾಗದಂತೆ ತಡೆಯಲು ಸೈತಾನನು ಅನೇಕ ವಿಧಾನಗಳನ್ನು ಬಳಸುತ್ತಾನೆ. ಅವನು “ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ.” (1 ಪೇತ್ರ 5:8) ನಿಮ್ಮ ಕುಟುಂಬದವರು, ಸ್ನೇಹಿತರು ಅಥವಾ ಇತರರು ನೀವು ಬೈಬಲ್ ಅಧ್ಯಯನವನ್ನು ನಿಲ್ಲಿಸಲು ಮತ್ತು ಜೀವನದಲ್ಲಿ ಬದಲಾವಣೆಗಳನ್ನು ಮಾಡದಂತೆ ತಡೆಯಲು ಪ್ರಯತ್ನಿಸಬಹುದು. ಆಗ ನಿಮಗೆ ಸೈತಾನನು ನಿಮ್ಮ ಮೇಲೆ ಆಕ್ರಮಣ ಮಾಡುತ್ತಿದ್ದಾನೆಂದು ಅನಿಸಬಹುದು.a (ಯೋಹಾನ 15:19, 20) ಸೈತಾನನಿಗೆ ‘ಬೆಳಕಿನ ದೂತನಂತೆ’ ವೇಷ ಹಾಕಿಕೊಳ್ಳುವ ಸಾಮರ್ಥ್ಯ ಸಹ ಇದೆ. ಆ ಸಾಮರ್ಥ್ಯವನ್ನು ಬಳಸಿ ಅವನು ನಮಗೆ ಮೋಸಮಾಡುತ್ತಾನೆ. ನಾವು ಯೆಹೋವನ ಮಾತು ಕೇಳದಂತೆ ಮಾಡಲು ಪ್ರಯತ್ನಿಸುತ್ತಾನೆ. (2 ಕೊರಿಂಥ 11:14) ಸೈತಾನನು ಬಳಸುವ ಇನ್ನೊಂದು ವಿಧಾನ, ನೀವು ಯೆಹೋವನನ್ನು ಆರಾಧಿಸಲು ಅಯೋಗ್ಯರೆಂಬ ಭಾವನೆಯನ್ನು ನಿಮ್ಮಲ್ಲಿ ಹುಟ್ಟಿಸುವುದೇ.—ಜ್ಞಾನೋಕ್ತಿ 24:10.
ಯೆಹೋವನ ಆಜ್ಞೆಗಳನ್ನು ಪಾಲಿಸಿ
17. ಯೆಹೋವನ ಆಜ್ಞೆಗಳ ಪ್ರಕಾರ ನಾವು ಯಾಕೆ ನಡೆಯುತ್ತೇವೆ?
17 ಯೆಹೋವನ ಆಜ್ಞೆಗಳನ್ನು ನಾವು ಪಾಲಿಸಿದಾಗ ಸೈತಾನನು ಸುಳ್ಳುಗಾರನು ಎಂದು ರುಜುಪಡಿಸುತ್ತೇವೆ. ಆದರೆ ದೇವರ ಆಜ್ಞೆಗಳಂತೆ ನಡೆಯಲು ನಮಗೆ ಯಾವುದು ಸಹಾಯಮಾಡುತ್ತದೆ? ಬೈಬಲ್ ಹೇಳುವಂತೆ ‘ನಾವು ನಮ್ಮ ದೇವರಾದ ಯೆಹೋವನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸುವುದು’ ನಮಗೆ ಸಹಾಯಮಾಡುತ್ತದೆ. (ಧರ್ಮೋಪದೇಶಕಾಂಡ 6:5) ಯೆಹೋವನ ಮೇಲೆ ನಮಗೆ ಪ್ರೀತಿ ಇರುವುದರಿಂದ ಆತನ ಆಜ್ಞೆಗಳ ಪ್ರಕಾರ ನಡೆಯುತ್ತೇವೆ. ಆತನ ಕಡೆಗಿನ ನಮ್ಮ ಪ್ರೀತಿ ಹೆಚ್ಚಾಗುತ್ತಾ ಹೋದಂತೆ ಆತನು ನಮ್ಮಿಂದ ಕೇಳಿಕೊಳ್ಳುವ ಪ್ರತಿಯೊಂದನ್ನು ಮಾಡಲು ನಾವು ಬಯಸುತ್ತೇವೆ. ಅಪೊಸ್ತಲ ಯೋಹಾನನು ಇದರ ಕುರಿತು ಹೀಗೆ ಬರೆದನು: “ದೇವರ ಮೇಲಣ ಪ್ರೀತಿ ಏನೆಂದರೆ ನಾವು ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವುದೇ; ಆದರೂ ಆತನ ಆಜ್ಞೆಗಳು ಭಾರವಾದವುಗಳಲ್ಲ.”—1 ಯೋಹಾನ 5:3.
18, 19. (ಎ) ಯಾವ ವಿಷಯಗಳನ್ನು ಯೆಹೋವನು ದ್ವೇಷಿಸುತ್ತಾನೆ? (ಬಿ) ನಮ್ಮಿಂದ ಆಗದ್ದನ್ನು ಯೆಹೋವನು ಕೇಳಿಕೊಳ್ಳುತ್ತಿಲ್ಲ ಅಂತ ನಮಗೆ ಹೇಗೆ ಗೊತ್ತು?
18 ಯಾವೆಲ್ಲ ವಿಷಯಗಳನ್ನು ಯೆಹೋವನು ದ್ವೇಷಿಸುತ್ತಾನೆ? “ಯೆಹೋವನು ದ್ವೇಷಿಸುವುದನ್ನು ನೀವೂ ದ್ವೇಷಿಸಿ” ಎಂಬ ಚೌಕದಲ್ಲಿ ಕೆಲವು ಉದಾಹರಣೆಗಳನ್ನು ನೋಡಬಹುದು. ಅವುಗಳಲ್ಲಿ ಕೆಲವು ಅಷ್ಟೇನು ತಪ್ಪಲ್ಲ ಎಂದು ನಿಮಗೆ ಅನಿಸಬಹುದು. ಆದರೆ ಅಲ್ಲಿ ಕೊಟ್ಟಿರುವ ಬೈಬಲ್ ವಚನಗಳನ್ನು ನೀವು ಓದಿ ಅದರ ಕುರಿತು ಯೋಚಿಸಿದಾಗ ಯೆಹೋವನು ಆ ವಿಷಯಗಳನ್ನು ಮಾಡಬೇಡಿ ಎಂದು ಹೇಳಿರುವುದು ನಮ್ಮ ಒಳ್ಳೇದಕ್ಕೆ ಅಂತ ಅರ್ಥವಾಗುತ್ತದೆ. ಆಗ ನಿಮ್ಮ ಜೀವನದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕೆಂದು ನಿಮಗನಿಸಬಹುದು. ಅದನ್ನು ಮಾಡುವುದು ಕೆಲವೊಮ್ಮೆ ಕಷ್ಟವೆನಿಸಬಹುದು, ಆದರೆ ಅಸಾಧ್ಯವಲ್ಲ. ನೀವು ಆ ಬದಲಾವಣೆಗಳನ್ನು ಮಾಡಿಕೊಂಡರೆ ಯೆಹೋವನ ನಿಷ್ಠಾವಂತ ಸ್ನೇಹಿತರಾಗುತ್ತೀರಿ ಮತ್ತು ಅದರಿಂದ ನಿಮಗೆ ಸಮಾಧಾನ ಸಂತೋಷ ಸಿಗುತ್ತದೆ. (ಯೆಶಾಯ 48:17, 18) ಈ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅಸಾಧ್ಯವಲ್ಲ ಎಂದು ಹೇಗೆ ಹೇಳಬಹುದು?
19 ನಮ್ಮಿಂದ ಆಗದ್ದನ್ನು ಮಾಡುವಂತೆ ಯೆಹೋವನು ಯಾವತ್ತೂ ಕೇಳಿಕೊಳ್ಳುವುದಿಲ್ಲ. (ಧರ್ಮೋಪದೇಶಕಾಂಡ 30:11-14) ನಿಜ ಸ್ನೇಹಿತನಾಗಿರುವ ಆತನಿಗೆ ನಮ್ಮ ಬಗ್ಗೆ ನಮಗಿಂತ ಚೆನ್ನಾಗಿ ಗೊತ್ತು. ನಮ್ಮಿಂದ ಏನು ಮಾಡಲು ಆಗುತ್ತದೆ, ಏನು ಆಗುವುದಿಲ್ಲ ಎಂದು ಆತನು ಬಲ್ಲನು. (ಕೀರ್ತನೆ 103:14) ಅಪೊಸ್ತಲ ಪೌಲನು ನಮಗೆ ಹೀಗೆ ಉತ್ತೇಜಿಸಿದ್ದಾನೆ: ‘ದೇವರು ನಂಬಿಗಸ್ತನು; ನೀವು ಸಹಿಸಿಕೊಳ್ಳಲು ಆಗದಿರುವಷ್ಟರ ಮಟ್ಟಿಗೆ ಪ್ರಲೋಭಿಸಲ್ಪಡುವಂತೆ ಆತನು ಬಿಡುವುದಿಲ್ಲ; ನೀವು ತಾಳಿಕೊಳ್ಳಲು ಶಕ್ತರಾಗುವಂತೆ ಪ್ರಲೋಭನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನೂ ಆತನು ಸಿದ್ಧಪಡಿಸುತ್ತಾನೆ.’ (1 ಕೊರಿಂಥ 10:13) ಹಾಗಾಗಿ ನಮ್ಮ ಜೀವನದಲ್ಲಿ ಸರಿಯಾದದ್ದನ್ನು ಮಾಡಲು ಆತನು ಖಂಡಿತ ನಮಗೆ ಶಕ್ತಿ ಕೊಟ್ಟೇ ಕೊಡುತ್ತಾನೆ ಎಂಬ ಭರವಸೆ ನಮಗಿದೆ. ಕಷ್ಟದ ಸಮಯದಲ್ಲಿ ತಾಳಿಕೊಳ್ಳಲು ನಮ್ಮಲ್ಲಿರುವ “ಸಹಜ ಶಕ್ತಿಗಿಂತ ಹೆಚ್ಚಿನ ಶಕ್ತಿ”ಯನ್ನು ಆತನು ಕೊಡುತ್ತಾನೆ. (2 ಕೊರಿಂಥ 4:7) ಇದನ್ನು ತನ್ನ ಬದುಕಲ್ಲೇ ಅನುಭವಿಸಿದ ಪೌಲನು ಹೀಗೆ ಹೇಳಿದನು: “ನನಗೆ ಶಕ್ತಿಯನ್ನು ಕೊಡುವಾತನ ಮೂಲಕ ನಾನು ಎಲ್ಲವನ್ನು ಮಾಡಲು ಶಕ್ತನಾಗಿದ್ದೇನೆ.”—ಫಿಲಿಪ್ಪಿ 4:13.
ಯೆಹೋವನು ಪ್ರೀತಿಸುವುದನ್ನು ಪ್ರೀತಿಸಿ
20. ಯಾವ ಗುಣಗಳನ್ನು ನೀವು ತೋರಿಸಬೇಕು? ಯಾಕೆ?
20 ನಾವು ಯೆಹೋವನ ಸ್ನೇಹಿತರಾಗಿರಲು ಆತನು ದ್ವೇಷಿಸುವುದನ್ನು ದ್ವೇಷಿಸುವುದರ ಜೊತೆಗೆ ಆತನು ಪ್ರೀತಿಸುವುದನ್ನು ಪ್ರೀತಿಸಲು ಸಹ ಕಲಿಯಬೇಕು. (ರೋಮನ್ನರಿಗೆ 12:9) ಆತನು ಏನನ್ನು ಪ್ರೀತಿಸುತ್ತಾನೆ ಅಂತ ಕೀರ್ತನೆ 15:1-5ರಲ್ಲಿ (ಓದಿ) ಹೇಳಲಾಗಿದೆ. ಯೆಹೋವನ ಸ್ನೇಹಿತರು ಆತನಲ್ಲಿರುವ ಗುಣಗಳನ್ನೇ ತೋರಿಸಬೇಕು. ಹಾಗಾಗಿ ಅವರು “ಪ್ರೀತಿ, ಆನಂದ, ಶಾಂತಿ, ದೀರ್ಘ ಸಹನೆ, ದಯೆ, ಒಳ್ಳೇತನ, ನಂಬಿಕೆ, ಸೌಮ್ಯಭಾವ, ಸ್ವನಿಯಂತ್ರಣ” ಎಂಬ ಗುಣಗಳನ್ನು ಬೆಳೆಸಿಕೊಳ್ಳಬೇಕು.—ಗಲಾತ್ಯ 5:22, 23.
21. ದೇವರು ಇಷ್ಟಪಡುವಂಥ ಗುಣಗಳನ್ನು ತೋರಿಸಲು ನಾವು ಕಲಿಯುವುದು ಹೇಗೆ?
21 ಈ ಒಳ್ಳೇ ಗುಣಗಳನ್ನು ತೋರಿಸಲು ಕಲಿಯುವುದು ಹೇಗೆ? ಬೈಬಲನ್ನು ಪ್ರತಿದಿನ ಓದುವ ಮತ್ತು ಅದನ್ನು ಅಧ್ಯಯನ ಮಾಡುವ ಮೂಲಕ ಯೆಹೋವ ದೇವರಿಗೆ ಏನು ಇಷ್ಟ ಅಂತ ನಮಗೆ ಗೊತ್ತಾಗುತ್ತದೆ. (ಯೆಶಾಯ 30:20, 21) ಅದು ಗೊತ್ತಾಗುತ್ತಾ ಹೋದಂತೆ ಯೆಹೋವನ ಮೇಲಿನ ನಮ್ಮ ಪ್ರೀತಿ ಹೆಚ್ಚಾಗುತ್ತದೆ. ಪ್ರೀತಿ ಹೆಚ್ಚಾದಂತೆ ಆತನು ಹೇಳಿದ್ದನ್ನು ಮಾಡಲು ನಾವು ಬಯಸುತ್ತೇವೆ.
22. ಯೆಹೋವನ ಮಾತನ್ನು ಕೇಳುವ ಆಯ್ಕೆಮಾಡಿದರೆ ಏನಾಗುತ್ತದೆ?
22 ನೀವು ನಿಮ್ಮ ಜೀವನದಲ್ಲಿ ಮಾಡಬೇಕಾದ ಬದಲಾವಣೆಗಳನ್ನು ಹಳೇ ಬಟ್ಟೆ ತೆಗೆದು ಹೊಸ ಬಟ್ಟೆ ಹಾಕಿಕೊಳ್ಳುವುದಕ್ಕೆ ಹೋಲಿಸಬಹುದು. ಬೈಬಲಿನಲ್ಲಿ “ಹಳೆಯ ವ್ಯಕ್ತಿತ್ವವನ್ನು . . . ತೆಗೆದುಹಾಕಿ” “ನೂತನ ವ್ಯಕ್ತಿತ್ವವನ್ನು ಧರಿಸಿಕೊಳ್ಳಿರಿ” ಎಂದು ಹೇಳಲಾಗಿದೆ. (ಕೊಲೊಸ್ಸೆ 3:9, 10) ಕೆಲವೊಮ್ಮೆ ಈ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅಷ್ಟು ಸುಲಭವಾಗಿರಲಿಕ್ಕಿಲ್ಲ. ಆದರೂ ನಾವು ಯೆಹೋವನ ಮಾತನ್ನು ಕೇಳಿ ಈಗ ಬದಲಾವಣೆಗಳನ್ನು ಮಾಡಿಕೊಂಡರೆ ಮುಂದೆ ಆತನು ನಮಗೆ “ಬಹಳ ಫಲ” ಅಂದರೆ ದೊಡ್ಡ ಬಹುಮಾನ ಕೊಡುತ್ತಾನೆ. (ಕೀರ್ತನೆ 19:11) ಹಾಗಾಗಿ ಯೆಹೋವನ ಮಾತನ್ನು ಕೇಳುವ ಆಯ್ಕೆಮಾಡಿ. ಸೈತಾನನು ಸುಳ್ಳುಗಾರನೆಂದು ರುಜುಪಡಿಸಿ. ಬಹುಮಾನ ಸಿಗುತ್ತದೆ ಅಂತ ಯೆಹೋವನನ್ನು ಆರಾಧಿಸದೆ, ಆತನ ಮೇಲಿನ ನಿಸ್ವಾರ್ಥ ಪ್ರೀತಿಯಿಂದ ಆರಾಧಿಸಿ. ಆಗ ನೀವು ಯೆಹೋವನ ನಿಜ ಸ್ನೇಹಿತರಾಗುತ್ತೀರಿ!
a ನೀವು ಬೈಬಲ್ ಅಧ್ಯಯನ ಮಾಡುವುದನ್ನು ಯಾರಾದರೂ ನಿಲ್ಲಿಸಲು ಪ್ರಯತ್ನಿಸಿದರೆ ಅದರರ್ಥ ಅವರನ್ನು ಸೈತಾನನೇ ಕಳುಹಿಸಿದ್ದಾನೆ ಅಂತಲ್ಲ. ಆದರೆ ‘ಈ ದುಷ್ಟ ಲೋಕದ ದೇವನು’ ಸೈತಾನನಾಗಿರುವುದರಿಂದ ಮತ್ತು “ಇಡೀ ಲೋಕವು [ಅವನ] ವಶದಲ್ಲಿ” ಬಿದ್ದಿರುವುದರಿಂದ ಈ ಲೋಕದಲ್ಲಿರುವ ಜನರು ಅವನಂತೆಯೇ ಆಗಿದ್ದಾರೆ. ಹಾಗಾಗಿ ನೀವು ಬೈಬಲ್ ಅಧ್ಯಯನ ಮಾಡುವುದನ್ನು ಯಾರಾದರೂ ವಿರೋಧಿಸಿದರೆ ಅದು ಆಶ್ಚರ್ಯದ ವಿಷಯವಲ್ಲ.—2 ಕೊರಿಂಥ 4:4; 1 ಯೋಹಾನ 5:19.