ಪಾಠ 41
ದಾವೀದ ಮತ್ತು ಸೌಲ
ದಾವೀದ ಗೊಲ್ಯಾತನನ್ನು ಕೊಂದ ಮೇಲೆ ಸೌಲ ಅವನಿಗೆ ತನ್ನ ಸೈನ್ಯದ ಸೇನಾಪತಿಯನ್ನಾಗಿ ಮಾಡಿದ. ದಾವೀದ ಅನೇಕ ಯುದ್ಧದಲ್ಲಿ ಜಯಗಳಿಸಿ ಹೆಸರುವಾಸಿಯಾದ. ಯುದ್ಧದಿಂದ ದಾವೀದ ಮನೆಗೆ ಹಿಂತಿರುಗುವಾಗೆಲ್ಲಾ ಸ್ತ್ರೀಯರು ಹೊರಗೆ ಬಂದು ಕುಣಿಯುತ್ತಾ, ‘ಸೌಲ ಸಾವಿರಗಟ್ಟಲೆ ಶತ್ರುಗಳನ್ನ ಕೊಂದ, ದಾವೀದ ಹತ್ತು ಸಾವಿರಗಟ್ಟಲೆ ಶತ್ರುಗಳನ್ನ ಕೊಂದ!’ ಎಂದು ಹಾಡುತ್ತಿದ್ದರು. ಇದರಿಂದ ಸೌಲನಿಗೆ ದಾವೀದನ ಮೇಲೆ ಹೊಟ್ಟೆಕಿಚ್ಚಾಯಿತು. ದಾವೀದನನ್ನು ಕೊಲ್ಲಬೇಕು ಅಂದುಕೊಂಡ.
ದಾವೀದ ತಂತಿವಾದ್ಯ ನುಡಿಸೋದರಲ್ಲಿ ನಿಪುಣ. ಒಂದಿನ ದಾವೀದ ಸೌಲನಿಗಾಗಿ ತಂತಿವಾದ್ಯ ನುಡಿಸ್ತಿದ್ದಾಗ ಸೌಲ ತನ್ನ ಈಟಿಯನ್ನು ದಾವೀದನ ಕಡೆಗೆ ಎಸೆದ. ದಾವೀದ ತಕ್ಷಣ ಪಕ್ಕಕ್ಕೆ ಸರಿದಿದ್ದರಿಂದ ಈಟಿ ಗೋಡೆಗೆ ನಾಟಿತು. ಇದಾದ ಮೇಲೆ ಸೌಲ ಅನೇಕ ಬಾರಿ ದಾವೀದನನ್ನು ಕೊಲ್ಲಲು ಪ್ರಯತ್ನಿಸಿದ. ನಂತರ ದಾವೀದ ಅಲ್ಲಿಂದ ಓಡಿಹೋಗಿ ಕಾಡುಮೇಡಿನಲ್ಲಿ ಬಚ್ಚಿಟ್ಟುಕೊಂಡ.
ದಾವೀದನನ್ನು ಹಿಡಿಯಲು ಸೌಲ 3,000 ಸೈನಿಕರ ಜೊತೆ ಹೋದ. ಒಂದು ಸಲ ದಾವೀದ ಮತ್ತು ಅವನ ಕಡೆಯವರು ಇದ್ದ ಅದೇ ಗವಿಗೆ ಸೌಲ ಬಂದ. ಆಗ ದಾವೀದನ ಕಡೆಯವರು ‘ಸೌಲನನ್ನು ಕೊಲ್ಲಲು ಇದೇ ಸರಿಯಾದ ಸಮಯ’ ಎಂದು ಪಿಸುಗುಟ್ಟಿದರು. ದಾವೀದ ಸದ್ದಿಲ್ಲದೆ ಸೌಲನ ಹತ್ತಿರ ಹೋಗಿ ಅವನ ಅಂಗಿಯ ಅಂಚನ್ನ ಕತ್ತರಿಸಿಕೊಂಡ. ಆದರೆ ಸೌಲನಿಗೆ ಇದ್ಯಾವುದೂ ಗೊತ್ತಾಗಲಿಲ್ಲ. ದಾವೀದ, ಹೀಗೆ ಮಾಡಿ ಯೆಹೋವನು ಅಭಿಷೇಕಿಸಿದ ರಾಜನಿಗೆ ಅಗೌರವ ತೋರಿಸಿದ್ದಕ್ಕಾಗಿ ತುಂಬ ಬೇಸರಪಟ್ಟ. ತನ್ನ ಕಡೆಯವರು ಸೌಲನಿಗೆ ಹಾನಿ ಮಾಡಲು ಅವನು ಬಿಡಲಿಲ್ಲ. ಅಷ್ಟೇ ಅಲ್ಲ, ಅವನು ಸೌಲನನ್ನು ಕರೆದು ‘ನಿನ್ನನ್ನು ನಾನು ಕೊಲ್ಲಬಹುದಿತ್ತು. ಆದರೆ ನಾನು ಹಾಗೆ ಮಾಡಲಿಲ್ಲ’ ಎಂದ. ಇಷ್ಟಾದ ಮೇಲೆ ಸೌಲ ಬದಲಾದನಾ?
ಇಲ್ಲ. ಸೌಲ ದಾವೀದನನ್ನು ಕೊಲ್ಲಲು ಪುನಃ ಹುಡುಕಾಟ ಶುರು ಮಾಡಿದ. ಒಂದಿನ ದಾವೀದ ಮತ್ತು ಅವನ ಸೋದರಳಿಯ ಅಬೀಷೈ ಸೌಲನಿದ್ದ ಪಾಳೆಯಕ್ಕೆ ಯಾರಿಗೂ ಗೊತ್ತಾಗದಂತೆ ಬಂದರು. ಸೌಲನ ಅಂಗರಕ್ಷಕನಾದ ಅಬ್ನೇರನು ಸಹ ನಿದ್ದೆಮಾಡುತ್ತಿದ್ದ. ಆಗ ಅಬೀಷೈ ‘ಇದೇ ಸರಿಯಾದ ಸಮಯ! ಸೌಲನನ್ನು ಕೊಲ್ಲಲು ನನಗೆ ಅನುಮತಿ ಕೊಡು’ ಎಂದ. ಅದಕ್ಕೆ ದಾವೀದ ‘ಸೌಲನನ್ನು ಯೆಹೋವನು ನೋಡಿಕೊಳ್ಳುತ್ತಾನೆ. ನಾವು ಅವನ ಈಟಿ ಹಾಗೂ ನೀರಿನ ಜಾಡಿ ತೆಗೆದುಕೊಂಡು ಹೋಗೋಣ’ ಎಂದು ಉತ್ತರಿಸಿದ.
ದಾವೀದ ಅಲ್ಲೆ ಹತ್ತಿರದಲ್ಲಿದ್ದ ಬೆಟ್ಟವನ್ನು ಹತ್ತಿ ಅಲ್ಲಿಂದ ‘ಅಬ್ನೇರನೇ, ರಾಜನನ್ನ ಯಾಕೆ ನೀನು ಕಾವಲು ಕಾಯಲಿಲ್ಲ? ಸೌಲನ ಈಟಿ ಮತ್ತು ನೀರಿನ ಜಾಡಿ ಅಲ್ಲಿದೆಯಾ ನೋಡು?’ ಎಂದು ಕೂಗಿದ. ಸೌಲ ದಾವೀದನ ಸ್ವರವನ್ನು ಗುರುತಿಸಿ ‘ನೀನು ನನ್ನನ್ನು ಕೊಲ್ಲಬಹುದಿತ್ತು. ಆದರೆ ನೀನು ಹಾಗೆ ಮಾಡಲಿಲ್ಲ. ಇಸ್ರಾಯೇಲಿನ ಮುಂದಿನ ರಾಜ ನೀನೇ ಎಂದು ನನಗೆ ಗೊತ್ತು’ ಅಂದನು. ನಂತರ ಸೌಲ ತನ್ನ ಅರಮನೆಯತ್ತ ಹೆಜ್ಜೆ ಹಾಕಿದ. ಸೌಲ ದಾವೀದನನ್ನು ದ್ವೇಷಿಸಿದರೂ ಅವನ ಕುಟುಂಬದಲ್ಲಿ ದಾವೀದನನ್ನು ಪ್ರೀತಿಸುವವರೂ ಇದ್ದರು.
“ಸಾಧ್ಯವಾದ್ರೆ ಎಲ್ರ ಜೊತೆ ಶಾಂತಿಯಿಂದ ಇರೋಕೆ ನಿಮ್ಮಿಂದ ಆಗೋದನ್ನೆಲ್ಲ ಮಾಡಿ. ಪ್ರಿಯರೇ, ಸೇಡು ತೀರಿಸಬೇಡಿ. ದೇವರು ತನ್ನ ಕೋಪ ತೋರಿಸೋಕೆ ಬಿಟ್ಟುಬಿಡಿ.”—ರೋಮನ್ನರಿಗೆ 12:18, 19