ಪಾಠ 43
ರಾಜ ದಾವೀದ ಮಾಡಿದ ದೊಡ್ಡ ಪಾಪ
ಸೌಲ ಸತ್ತ ನಂತರ ದಾವೀದ ರಾಜನಾದ. ಆಗ ಅವನಿಗೆ 30 ವರ್ಷ. ಕೆಲವು ವರ್ಷಗಳ ನಂತರ ಅವನು ಒಂದು ದೊಡ್ಡ ತಪ್ಪು ಮಾಡಿದ. ಒಂದಿನ ರಾತ್ರಿ ದಾವೀದ ತನ್ನ ಅರಮನೆಯ ಮಾಳಿಗೆಯ ಮೇಲಿಂದ ಸುಂದರ ಹೆಂಗಸನ್ನು ನೋಡಿದ. ಅವಳ ಹೆಸರು ಬತ್ಷೆಬೆ, ಅವಳು ಸೈನಿಕನಾದ ಊರೀಯನ ಹೆಂಡತಿ ಎಂದು ದಾವೀದನಿಗೆ ಗೊತ್ತಾಯಿತು. ದಾವೀದ ಬತ್ಷೆಬೆಯನ್ನು ತನ್ನ ಅರಮನೆಗೆ ಕರೆಸಿ ಅವಳೊಂದಿಗೆ ಲೈಂಗಿಕ ಸಂಬಂಧ ಇಟ್ಟುಕೊಂಡ. ಅವಳು ಗರ್ಭಿಣಿಯಾದಳು. ಈ ತಪ್ಪನ್ನು ಮುಚ್ಚಿಹಾಕಲು ದಾವೀದ ಪ್ರಯತ್ನಿಸಿದ. ಅವನು ತನ್ನ ಸೇನಾಧಿಪತಿಗೆ ‘ಯುದ್ಧದಲ್ಲಿ ಊರೀಯನನ್ನು ಮುಂದಿನ ಸಾಲಲ್ಲಿ ನಿಲ್ಲಿಸಿ ನೀವು ಹಿಂದೆ ಹೋಗಿ’ ಅಂದನು. ಹೀಗೆ ಯುದ್ಧದಲ್ಲಿ ಊರೀಯನನ್ನು ಕೊಲ್ಲಲಾಯಿತು. ನಂತರ ದಾವೀದ ಬತ್ಷೆಬೆಯನ್ನು ಮದುವೆಯಾದ.
ಆದರೆ ದಾವೀದ ಮಾಡಿದ ಕೆಟ್ಟ ಕೆಲಸಗಳನ್ನು ಯೆಹೋವನು ನೋಡುತ್ತಿದ್ದ. ಆತ ಏನು ಮಾಡಿದ ಗೊತ್ತಾ? ಪ್ರವಾದಿ ನಾತಾನನನ್ನು ದಾವೀದನ ಹತ್ತಿರ ಕಳುಹಿಸಿದ. ನಾತಾನ ದಾವೀದನಿಗೆ ‘ಒಬ್ಬ ಶ್ರೀಮಂತನ ಹತ್ತಿರ ತುಂಬ ಕುರಿಗಳಿದ್ದವು. ಬಡವನ ಹತ್ತಿರ ಒಂದೇ ಒಂದು ಕುರಿಮರಿ ಇತ್ತು. ಅವನು ಅದನ್ನು ತುಂಬಾ ಪ್ರೀತಿಸುತ್ತಿದ್ದ. ಆದರೆ ಒಂದಿನ ಶ್ರೀಮಂತ ಆ ಬಡವನ ಹತ್ತಿರ ಇದ್ದ ಒಂದೇ ಒಂದು ಕುರಿಮರಿಯನ್ನು ತೆಗೆದುಕೊಂಡುಬಿಟ್ಟ’ ಎಂದ. ಇದನ್ನು ಕೇಳಿದಾಗ ದಾವೀದ ಕೋಪಗೊಂಡು ‘ಆ ಶ್ರೀಮಂತ ಸಾಯ್ಲೇಬೇಕು!’ ಅಂದ. ಆಗ ನಾತಾನ ‘ಆ ಶ್ರೀಮಂತ ನೀನೇ!’ ಅಂದಾಗ ದಾವೀದನಿಗೆ ತನ್ನ ತಪ್ಪಿನ ಅರಿವಾಯಿತು. ‘ನಾನು ಯೆಹೋವನ ವಿರುದ್ಧ ಪಾಪ ಮಾಡಿದ್ದೀನಿ’ ಎಂದು ಪಶ್ಚಾತ್ತಾಪಪಟ್ಟ. ದಾವೀದ ಮಾಡಿದ ತಪ್ಪಿನಿಂದ ಅವನು ಮತ್ತೆ ಅವನ ಕುಟುಂಬ ತುಂಬಾ ತೊಂದರೆಗಳನ್ನು ಅನುಭವಿಸಿದರು. ಆದರೆ ಅವನು ಪ್ರಾಮಾಣಿಕ ಮತ್ತು ದೀನನಾಗಿದ್ದರಿಂದ ಯೆಹೋವನು ಅವನನ್ನು ಸಾಯಿಸಲಿಲ್ಲ.
ಯೆಹೋವನ ಆರಾಧನೆಗಾಗಿ ಒಂದು ದೇವಾಲಯವನ್ನು ಕಟ್ಟಬೇಕೆನ್ನುವುದು ದಾವೀದನ ಆಸೆಯಾಗಿತ್ತು. ಆದರೆ ಆಲಯವನ್ನು ಕಟ್ಟಲು ಯೆಹೋವನು ದಾವೀದನ ಮಗನಾದ ಸೊಲೊಮೋನನನ್ನು ಆರಿಸಿದ. ಹಾಗಂತ ದಾವೀದ ಸುಮ್ಮನೆ ಕೈಕಟ್ಟಿ ಕೂರಲಿಲ್ಲ. ಬದಲಿಗೆ ದೇವಾಲಯ ಕಟ್ಟಲು ಬೇಕಾದ ವಸ್ತುಗಳನ್ನು ಕೂಡಿಸಿದ. ದಾವೀದ ಸೊಲೊಮೋನನಿಗೆ ‘ಯೆಹೋವನ ದೇವಾಲಯ ವೈಭವವಾಗಿರಬೇಕು. ನೀನಿನ್ನೂ ಚಿಕ್ಕವನು. ಆಲಯಕ್ಕೆ ಬೇಕಾಗಿರೋ ವಸ್ತುಗಳನ್ನು ನಾನು ನಿನಗೆ ಸಿದ್ಧ ಮಾಡಿಕೊಡುತ್ತೇನೆ’ ಅಂದ. ದಾವೀದ ದೇವಾಲಯ ಕಟ್ಟಲು ತನ್ನ ಸ್ವಂತ ಹಣವನ್ನ ಭಾರಿ ಮೊತ್ತದಲ್ಲಿ ನೀಡಿದ. ನಿಪುಣ ಕೆಲಸಗಾರರನ್ನು ನೇಮಿಸಿದ. ಚಿನ್ನ, ಬೆಳ್ಳಿ, ತೂರ್ ಮತ್ತು ಸೀದೋನಿಂದ ದೇವದಾರು ಮರಗಳನ್ನು ಸಂಗ್ರಹಿಸಿದ. ದಾವೀದ ಸಾಯುವುದಕ್ಕಿಂತ ಮುಂಚೆ ದೇವಾಲಯದ ನಕ್ಷೆಯನ್ನ ಸೊಲೊಮೋನನಿಗೆ ನೀಡಿ ‘ಇವುಗಳನ್ನು ಬರೆಯಲು ಯೆಹೋವನೇ ನನಗೆ ತಿಳಿಸಿದ. ಯೆಹೋವನು ನಿನಗೆ ಸಹಾಯ ಮಾಡುತ್ತಾನೆ. ಧೈರ್ಯವಾಗಿರು, ದೃಢವಾಗಿರು, ಈ ಕೆಲಸಕ್ಕೆ ಕೈ ಹಾಕು’ ಎಂದ.
“ತನ್ನ ಅಪರಾಧಗಳನ್ನ ಮುಚ್ಚಿಡುವವನಿಗೆ ಒಳ್ಳೇದಾಗಲ್ಲ, ಅದನ್ನ ಒಪ್ಕೊಂಡು ಮತ್ತೆ ಮಾಡದೆ ಇರುವವನಿಗೆ ಕರುಣೆ ಸಿಗುತ್ತೆ.”—ಜ್ಞಾನೋಕ್ತಿ 28:13