ಪಾಠ 69
ಗಬ್ರಿಯೇಲನು ಮರಿಯಳನ್ನು ಭೇಟಿಯಾಗುತ್ತಾನೆ
ಎಲಿಸಬೆತಳಿಗೆ ಮರಿಯ ಎಂಬ ಸಂಬಂಧಿಕಳಿದ್ದಳು. ಈ ಯುವತಿ ಗಲಿಲಾಯದ ನಜರೇತ್ ಎಂಬ ಪಟ್ಟಣದಲ್ಲಿ ವಾಸಿಸುತ್ತಿದ್ದಳು. ಮರಿಯಳಿಗೆ ಯೋಸೇಫನೆಂಬ ಬಡಗಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಎಲಿಸಬೆತಳು ಆರು ತಿಂಗಳ ಗರ್ಭಿಣಿಯಾಗಿದ್ದಾಗ, ಗಬ್ರಿಯೇಲ ದೂತನು ಮರಿಯಳಿಗೆ ಕಾಣಿಸಿಕೊಂಡನು. ಅವನು ಅವಳಿಗೆ, ‘ಮರಿಯಳೇ, ನಮಸ್ಕಾರ, ಯೆಹೋವನ ಆಶೀರ್ವಾದ ನಿನ್ನ ಮೇಲೆ ತುಂಬಾ ಇದೆ’ ಎಂದನು. ಗಬ್ರಿಯೇಲನ ಮಾತುಗಳು ಅವಳಿಗೆ ಅರ್ಥವಾಗಲಿಲ್ಲ. ಬಳಿಕ ಅವನು ಅವಳಿಗೆ, ‘ನೀನು ಗರ್ಭಿಣಿ ಆಗ್ತೀಯ, ನಿನಗೆ ಮಗ ಹುಟ್ತಾನೆ, ಅವನಿಗೆ ಯೇಸು ಅಂತ ಹೆಸ್ರಿಡಬೇಕು. ಆತನು ರಾಜನಾಗಿ ಆಳ್ತಾನೆ. ಆತನ ಆಳ್ವಿಕೆಗೆ ಅಂತ್ಯಾನೇ ಇಲ್ಲ’ ಎಂದು ಹೇಳಿದನು.
ಮರಿಯಳು ಗಬ್ರಿಯೇಲನಿಗೆ, ‘ನಾನಿನ್ನೂ ಕನ್ಯೆ. ಹೇಗೆ ಮಗು ಹುಟ್ಟುತ್ತೆ?’ ಅಂದಳು. ಆಗ ಗಬ್ರಿಯೇಲನು, ‘ಯೆಹೋವನಿಗೆ ಯಾವುದೂ ಅಸಾಧ್ಯವಲ್ಲ. ಪವಿತ್ರಶಕ್ತಿ ನಿನ್ನ ಮೇಲೆ ಬರುತ್ತೆ ಮತ್ತು ನಿನಗೆ ಒಂದು ಮಗು ಹುಟ್ಟುವುದು. ನಿನ್ನ ಸಂಬಂಧಿಕಳಾದ ಎಲಿಸಬೆತಳಿಗೆ ತುಂಬ ವಯಸ್ಸಾಗಿದ್ದರೂ ಅವಳು ಗರ್ಭಿಣಿಯಾಗಿದ್ದಾಳೆ’ ಎಂದನು. ಆಗ ಮರಿಯಳು ಗಬ್ರಿಯೇಲನಿಗೆ, ‘ನಾನು ಯೆಹೋವನ ದಾಸಿ. ನೀನು ಹೇಳಿದ ಹಾಗೇ ಆಗಲಿ’ ಅಂದಳು.
ಮರಿಯಳು ಎಲಿಸಬೆತಳನ್ನು ಭೇಟಿಯಾಗಲು ಅವಳ ಊರಿಗೆ ಹೋದಳು. ಮರಿಯಳು ಅವಳನ್ನು ವಂದಿಸಿದಾಗ, ಎಲಿಸಬೆತಳ ಹೊಟ್ಟೆಯಲ್ಲಿದ್ದ ಮಗು ಜಿಗಿಯಿತು. ಅವಳ ಮೇಲೆ ಪವಿತ್ರಶಕ್ತಿ ಬಂದು, ‘ಮರಿಯಳೇ, ಯೆಹೋವನು ನಿನ್ನನ್ನು ಆರ್ಶಿರ್ವದಿಸಿದ್ದಾನೆ. ನನ್ನ ಒಡೆಯನ ತಾಯಿ ನನ್ನ ಮನೆಗೆ ಬಂದಿರುವುದು ನನಗೊಂದು ಸೌಭಾಗ್ಯನೇ ಸರಿ’ ಎಂದಳು. ಆಗ ಮರಿಯಳು, ‘ನನ್ನ ಪ್ರಾಣ ಯೆಹೋವನನ್ನ ಹೊಗಳುತ್ತೆ’ ಎಂದಳು. ಮರಿಯಳು ಸುಮಾರು ಮೂರು ತಿಂಗಳು ಎಲಿಸಬೆತ್ ಜೊತೆ ಇದ್ದು ನಂತರ ನಜರೇತಿನಲ್ಲಿದ್ದ ತನ್ನ ಮನೆಗೆ ಹೋದಳು.
ಮರಿಯಳು ಗರ್ಭಿಣಿಯಾಗಿದ್ದಾಳೆ ಎಂದು ಯೋಸೇಫನಿಗೆ ತಿಳಿದಾಗ, ಅವಳೊಟ್ಟಿಗೆ ನಿಶ್ಚಯವಾಗಿದ್ದ ಮದುವೆಯನ್ನು ಮುರಿಯುವ ಯೋಚನೆ ಮಾಡಿದನು. ಆದರೆ ಒಬ್ಬ ದೇವದೂತನು ಅವನಿಗೆ ಕನಸಿನಲ್ಲಿ ಕಾಣಿಸಿಕೊಂಡು, ‘ಮರಿಯಳನ್ನ ಮದುವೆ ಆಗೋಕೆ ಹೆದ್ರಬೇಡ. ಅವಳು ಯಾವ ತಪ್ಪೂ ಮಾಡಿಲ್ಲ’ ಅಂದನು. ಆದ್ದರಿಂದ ಯೋಸೇಫನು ಮರಿಯಳನ್ನು ಮದುವೆಯಾಗಲು ನಿರ್ಧರಿಸಿದನು ಮತ್ತು ಅವಳನ್ನು ತನ್ನ ಮನೆಗೆ ಕರಕೊಂಡು ಹೋದನು.
‘ಆಕಾಶದಲ್ಲೂ, ಭೂಮಿಯಲ್ಲೂ ಯೆಹೋವ ತನಗೆ ಇಷ್ಟವಾಗಿದ್ದನ್ನೆಲ್ಲ ಮಾಡ್ತಾನೆ.’—ಕೀರ್ತನೆ 135:6