ಪಾಠ 78
ಯೇಸು ದೇವರ ಆಳ್ವಿಕೆಯ ಸಿಹಿಸುದ್ದಿ ಸಾರಿದ
ಯೇಸು ದೀಕ್ಷಾಸ್ನಾನ ಪಡೆದ ನಂತರ, ‘ಸ್ವರ್ಗದ ಆಳ್ವಿಕೆ ಹತ್ರ ಇದೆ’ ಎಂದು ಸಾರಿದನು. ಯೇಸುವಿನ ಶಿಷ್ಯರು ಆತನೊಂದಿಗೆ ಗಲಿಲಾಯ ಮತ್ತು ಯೂದಾಯ ಪ್ರದೇಶದಲ್ಲೆಲ್ಲಾ ಅವನನ್ನು ಹಿಂಬಾಲಿಸಿದರು. ಯೇಸು ತನ್ನ ಸ್ವಂತ ಊರಾದ ನಜರೇತಿಗೆ ಬಂದಾಗ ಸಭಾಮಂದಿರಕ್ಕೆ ಹೋಗಿ ಯೆಶಾಯನ ಸುರಳಿಯನ್ನು ತೆರೆದು ಗಟ್ಟಿಯಾಗಿ, ‘ಸಿಹಿಸುದ್ದಿ ಸಾರೋಕೆ ಯೆಹೋವನು ನನಗೆ ಪವಿತ್ರಶಕ್ತಿ ಕೊಟ್ಟಿದ್ದಾನೆ’ ಎಂದು ಓದಿದನು. ಯೇಸು ಓದಿದ್ದರ ಅರ್ಥವೇನು? ಯೇಸು ಅದ್ಭುತ ಮಾಡುವುದನ್ನು ನೋಡಲು ಜನರು ಇಷ್ಟಪಡುತ್ತಿದ್ದರು. ಆದರೆ ತನಗೆ ಪವಿತ್ರಶಕ್ತಿ ಕೊಟ್ಟಿದ್ದು ಮುಖ್ಯವಾಗಿ ಸಿಹಿಸುದ್ದಿ ಸಾರಲಿಕ್ಕಾಗಿ ಅನ್ನುವುದೇ ಯೇಸುವಿನ ಮಾತಿನ ಅರ್ಥವಾಗಿತ್ತು. ಕೊನೆಯಲ್ಲಿ ಯೇಸು, ‘ಇವತ್ತು ಈ ಭವಿಷ್ಯವಾಣಿ ನೆರವೇರಿದೆ’ ಎಂದು ಹೇಳಿದನು.
ನಂತರ ಯೇಸು ಗಲಿಲಾಯ ಸಮುದ್ರದ ಹತ್ತಿರ ಹೋದನು. ಅಲ್ಲಿ, ನಾಲ್ಕು ಜನ ಮೀನು ಹಿಡಿಯುವವರನ್ನು ಭೇಟಿಮಾಡಿದನು. ಅವರಿಗೆ, ‘ಬನ್ನಿ, ನಿಮ್ಮನ್ನು ಮನುಷ್ಯರನ್ನ ಹಿಡಿಯೋ ಬೆಸ್ತರಾಗಿ ಮಾಡ್ತೀನಿ’ ಎಂದು ಹೇಳಿದನು. ಆ ನಾಲ್ಕು ಜನ ಯಾರೆಂದರೆ ಪೇತ್ರ, ಅಂದ್ರೆಯ, ಯಾಕೋಬ ಮತ್ತು ಯೋಹಾನ. ಅವರು ತಕ್ಷಣವೇ ತಮ್ಮ ಮೀನಿನ ವ್ಯಾಪಾರವನ್ನೆಲ್ಲಾ ಬಿಟ್ಟು ಯೇಸುವಿನ ಹಿಂದೆ ಹೋದರು. ಅವರು ಕೂಡ ಗಲಿಲಾಯದಲ್ಲೆಲ್ಲಾ ಯೆಹೋವನ ಆಳ್ವಿಕೆಯ ಸಿಹಿಸುದ್ದಿಯನ್ನು ಸಾರಿದರು. ಅವರು ಸಭಾಮಂದಿರಗಳಲ್ಲಿ, ಮಾರುಕಟ್ಟೆಗಳಲ್ಲಿ ಮತ್ತು ಬೀದಿಗಳಲ್ಲೆಲ್ಲಾ ಸಾರಿದರು. ಅವರು ಹೋದಲ್ಲೆಲ್ಲಾ ಜನರ ದೊಡ್ಡ ಗುಂಪು ಅವರನ್ನು ಹಿಂಬಾಲಿಸಿತು. ಯೇಸುವಿನ ಬಗ್ಗೆ ದೂರದಲ್ಲಿರುವ ಸಿರಿಯಾದವರೆಗೂ ವಿಷಯ ಹಬ್ಬಿತು.
ಸ್ವಲ್ಪ ಸಮಯದ ನಂತರ ಯೇಸು ತನ್ನ ಶಿಷ್ಯರಲ್ಲಿ ಕೆಲವರಿಗೆ ರೋಗಗಳನ್ನು ವಾಸಿ ಮಾಡುವ, ದೆವ್ವಗಳನ್ನು ಬಿಡಿಸುವ ಶಕ್ತಿ ಕೊಟ್ಟನು. ಉಳಿದವರು ಯೇಸುವಿನೊಂದಿಗೆ ಹಳ್ಳಿಯಿಂದ ಹಳ್ಳಿಗೆ, ಪಟ್ಟಣದಿಂದ ಪಟ್ಟಣಕ್ಕೆ ಸಿಹಿಸುದ್ದಿ ಸಾರುತ್ತಾ ಹೋದರು. ಮಗ್ದಲದ ಮರಿಯಳು, ಯೊಹನ್ನಳು, ಸುಸನ್ನಳು ಮತ್ತು ಇನ್ನಿತರ ನಂಬಿಗಸ್ತ ಸ್ತ್ರೀಯರು ಯೇಸುವಿನ ಮತ್ತು ಆತನ ಶಿಷ್ಯರ ಊಟೋಪಚಾರ ಮಾಡಿದರು.
ತನ್ನ ಶಿಷ್ಯರಿಗೆ ಕಲಿಸಿದ ನಂತರ ಯೇಸು ಅವರನ್ನು ಸಿಹಿಸುದ್ದಿ ಸಾರಲು ಕಳುಹಿಸಿದನು. ಅವರು ಗಲಿಲಾಯದಲ್ಲೆಲ್ಲಾ ಸಾರಿದಾಗ ತುಂಬಾ ಜನ ಯೇಸುವಿನ ಶಿಷ್ಯರಾಗಿ ದೀಕ್ಷಾಸ್ನಾನ ಪಡೆದರು. ಇನ್ನೂ ಎಷ್ಟೋ ಜನ ಯೇಸುವಿನ ಶಿಷ್ಯರಾಗಲು ಸಿದ್ಧರಿದ್ದರು. ಅದಕ್ಕೆ ಯೇಸು ಅವರನ್ನು ಕೊಯ್ಲಿಗೆ ಸಿದ್ಧವಾಗಿದ್ದ ಹೊಲಕ್ಕೆ ಹೋಲಿಸಿದನು. ‘ಕೊಯ್ಲು ಮಾಡಲು ಕೆಲಸದವ್ಪನ್ನ ಕಳಿಸು ಅಂತ ಯೆಹೋವನಿಗೆ ಪ್ರಾರ್ಥಿಸಿ’ ಎಂದು ತನ್ನ ಶಿಷ್ಯರಿಗೆ ಹೇಳಿದನು. ನಂತರ ಯೇಸು 70 ಜನ್ರನ್ನ ಶಿಷ್ಯರನ್ನು ಆರಿಸಿ ಇಬ್ಬಿಬ್ಬರಾಗಿ ಯೂದಾಯದಲ್ಲೆಲ್ಲಾ ಸಿಹಿಸುದ್ದಿ ಸಾರಲು ಕಳುಹಿಸಿದನು. ಇವರು ಎಲ್ಲಾ ರೀತಿಯ ಜನರಿಗೆ ದೇವರ ಆಳ್ವಿಕೆಯ ಬಗ್ಗೆ ಸಾರಿದರು. ಸಾರಿದ ನಂತರ ಆ ಶಿಷ್ಯರು ಸೇವೆ ಎಷ್ಟು ಚೆನ್ನಾಗಿತ್ತೆಂದು ಯೇಸುವಿಗೆ ಹೇಳಲು ತುದಿಗಾಲಲ್ಲಿ ನಿಂತಿದ್ದರು. ಇವರ ಸಾರುವ ಕೆಲಸವನ್ನು ಸೈತಾನನು ನಿಲ್ಲಿಸಲು ಆಗಲಿಲ್ಲ.
ಯೇಸು ತನ್ನ ಶಿಷ್ಯರಿಗೆ, ‘ಭೂಮಿ ಮೇಲೆಲ್ಲಾ ಈ ಸಿಹಿಸುದ್ದಿಯನ್ನು ಸಾರಿರಿ. ದೇವರ ವಾಕ್ಯದ ಬಗ್ಗೆ ಕಲಿಸಿ ಜನರಿಗೆ ದೀಕ್ಷಾಸ್ನಾನ ಮಾಡಿಸಿ’ ಎಂದು ಹೇಳಿದನು. ಹೀಗೆ ತಾನು ಸ್ವರ್ಗಕ್ಕೆ ಹೋದ ನಂತರ ಸಹ ಶಿಷ್ಯರು ಈ ಪ್ರಾಮುಖ್ಯ ಕೆಲಸವನ್ನು ಮುಂದುವರಿಸುವಂತೆ ನೋಡಿಕೊಂಡನು.
“ನಾನು ದೇವರ ಆಳ್ವಿಕೆಯ ಸಿಹಿಸುದ್ದಿನ ಬೇರೆ ಊರುಗಳಿಗೂ ಸಾರಬೇಕಿದೆ. ನನ್ನನ್ನ ಕಳಿಸಿರೋದು ಇದಕ್ಕೇ.”—ಲೂಕ 4:43