ಪಾಠ 100
ಪೌಲ ಮತ್ತು ತಿಮೊತಿ
ಲುಸ್ತ್ರ ಎಂಬ ಸಭೆಯಲ್ಲಿ ತಿಮೊತಿ ಎಂಬ ಯುವ ಸಹೋದರನಿದ್ದ. ಅವನ ತಂದೆ ಗ್ರೀಕನಾಗಿದ್ದನು. ತಾಯಿ ಯೆಹೂದ್ಯಳಾಗಿದ್ದಳು. ತಾಯಿ ಯೂನಿಕೆ ಮತ್ತು ಅಜ್ಜಿ ಲೋವಿ ತಿಮೊತಿಗೆ ಚಿಕ್ಕ ವಯಸ್ಸಿನಿಂದಲೇ ಯೆಹೋವನ ಬಗ್ಗೆ ಕಲಿಸಿದರು.
ಪೌಲ ತನ್ನ ಎರಡನೇ ಮಿಷನರಿ ಪ್ರಯಾಣದಲ್ಲಿ ಲುಸ್ತ್ರಕ್ಕೆ ಭೇಟಿ ಮಾಡಿದ. ಆಗ ತಿಮೊತಿ ಸಹೋದರರಿಗೆ ತೋರಿಸುತ್ತಿದ್ದ ಪ್ರೀತಿಯನ್ನ, ಅವರಿಗೆ ಸಹಾಯ ಮಾಡಲು ಅವನಲ್ಲಿದ್ದ ಸಿದ್ಧ ಮನಸ್ಸನ್ನ ಪೌಲ ಗಮನಿಸಿದನು. ಪೌಲನು ತಿಮೊತಿಗೆ ತನ್ನೊಂದಿಗೆ ಸಾರಲು ಬರುವಂತೆ ಹೇಳಿದನು. ಹೀಗೆ ಸಮಯ ಕಳೆದಂತೆ, ತಿಮೊತಿ ಚೆನ್ನಾಗಿ ಸಿಹಿಸುದ್ದಿ ಸಾರಲು ಮತ್ತು ಒಳ್ಳೇ ಬೋಧಕನಾಗಲು ಪೌಲ ತರಬೇತಿ ಕೊಟ್ಟನು.
ಪೌಲ ಮತ್ತು ತಿಮೊತಿ ಹೋದಲ್ಲೆಲ್ಲಾ ಪವಿತ್ರಶಕ್ತಿ ಅವರನ್ನು ಮಾರ್ಗದರ್ಶಿಸಿತು. ಒಂದು ರಾತ್ರಿ ದರ್ಶನವೊಂದರಲ್ಲಿ ಪೌಲನಿಗೆ ಒಬ್ಬ ವ್ಯಕ್ತಿ, ‘ಮಕೆದೋನ್ಯಕ್ಕೆ ಬಂದು ನಮಗೆ ಸಹಾಯಮಾಡು’ ಎಂದು ಹೇಳಿದನು. ಆಗ ಪೌಲ, ತಿಮೊತಿ, ಸೀಲ ಮತ್ತು ಲೂಕ ಸಿಹಿಸುದ್ದಿಯನ್ನು ಸಾರಲು ಮತ್ತು ಸಭೆಗಳನ್ನು ಸ್ಥಾಪಿಸಲು ಅಲ್ಲಿಗೆ ಹೋದರು.
ಮಕೆದೋನ್ಯದ ಥೆಸಲೊನೀಕದಲ್ಲಿ ಅನೇಕ ಸ್ತ್ರೀ-ಪುರುಷರು ಕ್ರೈಸ್ತರಾದರು. ಆದರೆ ಕೆಲವು ಯೆಹೂದ್ಯರು ಪೌಲ ಮತ್ತು ಆತನ ಸಂಗಡಿಗರ ಮೇಲೆ ಹೊಟ್ಟೆಕಿಚ್ಚುಪಟ್ಟರು. ಆದ್ದರಿಂದ ಅವರು ಗುಂಪು ಕಟ್ಟಿಕೊಂಡು ಬಂದು ಪೌಲ ಮತ್ತು ಸಹೋದರರನ್ನು ಊರಿನ ಅಧಿಕಾರಿಗಳ ಬಳಿಗೆ ಎಳೆದು ತಂದು, ‘ಈ ಮನುಷ್ಯರು ನಮ್ಮ ರಾಜನ ಆಜ್ಞೆಗಳಿಗೆ ವಿರುದ್ಧವಾಗಿ ನಡಿತಿದ್ದಾರೆ’ ಎಂದು ಗಟ್ಟಿಯಾಗಿ ಕೂಗಿದರು. ಪೌಲ ಮತ್ತು ತಿಮೊತಿಯ ಜೀವ ಅಪಾಯದಲ್ಲಿ ಇದ್ದದ್ದರಿಂದ ಅವರು ರಾತ್ರಿವೇಳೆಯಲ್ಲಿ ಬೆರೋಯಕ್ಕೆ ಹೊರಟುಹೋದರು.
ಬೆರೋಯದ ಜನರಿಗೆ ಸಿಹಿಸುದ್ದಿ ಕೇಳಲು ತುಂಬಾ ಇಷ್ಟವಿತ್ತು. ಅಲ್ಲಿನ ಗ್ರೀಕರು ಮತ್ತು ಯೆಹೂದ್ಯರು ವಿಶ್ವಾಸಿಗಳಾದರು. ಆದರೆ ಥೆಸಲೊನೀಕದಿಂದ ಬಂದ ಕೆಲವು ಯೆಹೂದ್ಯರು, ಮತ್ತೆ ಗಲಭೆಯನ್ನು ಎಬ್ಬಿಸಿದ್ದರಿಂದ ಪೌಲನು ಅಥೆನ್ಸ್‌ಗೆ ಹೋದನು. ತಿಮೊತಿ ಮತ್ತು ಸೀಲರು ಬೆರೋಯದಲ್ಲೇ ಇದ್ದು ಸಹೋದರರನ್ನು ಬಲಪಡಿಸಿದರು. ಥೆಸಲೋನಿಕದಲ್ಲಿದ್ದ ಸಹೋದರರು ತುಂಬಾ ಹಿಂಸೆಯನ್ನು ಅನುಭವಿಸುತ್ತಿದ್ದರು. ಆದ್ದರಿಂದ ಅವರಿಗೆ ಸಹಾಯ ಮಾಡಲು ಪೌಲನು ತಿಮೊತಿಯನ್ನು ಪುನಃ ಅಲ್ಲಿಗೆ ಕಳುಹಿಸಿದನು. ನಂತರ, ಪೌಲ ತಿಮೊತಿಯನ್ನು ಬೇರೆ ಬೇರೆ ಸಭೆಗಳನ್ನು ಭೇಟಿ ಮಾಡಲು ಮತ್ತು ಅವರನ್ನು ಉತ್ತೇಜಿಸಲು ಕಳುಹಿಸಿದನು.
ಪೌಲ ತಿಮೊತಿಗೆ, ‘ಯೆಹೋವನನ್ನ ಆರಾಧಿಸ್ತಾ ಜೀವಿಸೋಕೆ ಬಯಸೋ ಎಲ್ರಿಗೂ ಹಿಂಸೆ ಬರುತ್ತೆ’ ಎಂದನು. ನಂಬಿಕೆ ತೋರಿಸಿದ್ದರಿಂದ ತಿಮೊತಿಯನ್ನು ಹಿಂಸೆಪಡಿಸಿ ಜೈಲಿಗೆ ಹಾಕಿದರು. ಆದರೆ, ‘ಕಷ್ಟ ಬಂದ್ರೂ ನಾನು ಯೆಹೋವನಿಗೆ ನಿಯತ್ತಾಗಿದ್ದೆ’ ಎಂದು ತಿಮೊತಿಗೆ ಸಂತೋಷವಾಯಿತು.
ಪೌಲ ಫಿಲಿಪ್ಪಿ ಸಭೆಗೆ, ‘ನಾನು ನಿಮ್ಮ ಹತ್ರ ತಿಮೊತಿಯನ್ನ ಕಳಿಸ್ತಾ ಇದ್ದೀನಿ. ಅವನು ನಿಮಗೆ ಯೆಹೋವನ ಸೇವಕರು ಹೇಗೆ ಜೀವಿಸಬೇಕು ಅಂತ ಕಲಿಸ್ತಾನೆ ಮತ್ತು ಸಿಹಿಸುದ್ದಿ ಸಾರೋಕೆ ತರಬೇತಿ ಕೊಡ್ತಾನೆ’ ಎಂದನು. ಪೌಲನಿಗೆ ತಿಮೊತಿ ಮೇಲೆ ಭರವಸೆ ಇತ್ತು. ಅವರು ಸ್ನೇಹಿತರಾಗಿ, ಜೊತೆ ಸೇವಕರಾಗಿ ಅನೇಕ ವರ್ಷಗಳ ತನಕ ಕೆಲಸಮಾಡಿದರು.
“ಅವನ ತರ ನಿಮ್ಮ ಬಗ್ಗೆ ನಿಜವಾದ ಕಾಳಜಿ ತೋರಿಸೋ ವ್ಯಕ್ತಿ ನನ್ನ ಹತ್ರ ಬೇರೆ ಯಾರೂ ಇಲ್ಲ. ಬೇರೆಯವ್ರೆಲ್ಲ ಯೇಸು ಕ್ರಿಸ್ತ ಏನು ಇಷ್ಟಪಡ್ತಾನೋ ಅದ್ರ ಬಗ್ಗೆ ಯೋಚಿಸದೆ ತಮ್ಮ ಬಗ್ಗೆನೇ ಯೋಚಿಸ್ತಿದ್ದಾರೆ.”—ಫಿಲಿಪ್ಪಿ 2:20, 21