ಪಾಠ 101
ಪೌಲನನ್ನು ರೋಮಿಗೆ ಕಳುಹಿಸಲಾಯಿತು
ಪೌಲನು ಸಾರಲಿಕ್ಕಾಗಿ ಮಾಡಿದ ಮೂರನೇ ಪ್ರಯಾಣ ಯೆರೂಸಲೇಮಿನಲ್ಲಿ ಮುಗಿಯಿತು. ಅಲ್ಲಿ ಅವನನ್ನು ಬಂಧಿಸಿ ಜೈಲಿಗೆ ಹಾಕಲಾಯಿತು. ರಾತ್ರಿ ಒಂದು ದರ್ಶನದಲ್ಲಿ ಯೇಸು ಪೌಲನಿಗೆ, ‘ನೀನು ರೋಮಿಗೆ ಹೋಗಿ ಅಲ್ಲಿ ಸಾರ್ತಿಯ’ ಎಂದು ಹೇಳಿದನು. ಪೌಲನನ್ನು ಯೆರೂಸಲೇಮಿನಿಂದ ಕೈಸರೈಯಕ್ಕೆ ಕರೆದುಕೊಂಡು ಹೋಗಲಾಯಿತು. ಅಲ್ಲಿನ ಜೈಲಿನಲ್ಲಿ ಅವನು ಎರಡು ವರ್ಷ ಕಳೆದನು. ರಾಜ್ಯಪಾಲ ಫೆಸ್ತನ ಮುಂದೆ ವಿಚಾರಣೆ ಆಗುತ್ತಿರುವಾಗ ಪೌಲನು, ‘ನನಗೆ ರೋಮಿನ ರಾಜ ಕೈಸರನೇ ನ್ಯಾಯತೀರಿಸಲಿ’ ಎಂದನು. ಅದಕ್ಕೆ ಫೆಸ್ತನು, “ರೋಮಿನ ರಾಜ ನಿನ್ನ ವಿಚಾರಣೆ ಮಾಡಬೇಕು ಅಂತ ಹೇಳಿದ್ಯಲ್ಲಾ. ಅದಕ್ಕೆ ನೀನು ರೋಮಿನ ರಾಜನ ಹತ್ರ ಹೋಗು” ಅಂದನು. ಪೌಲನನ್ನು ಹಡಗಿನಲ್ಲಿ ರೋಮಿಗೆ ಕಳುಹಿಸಲು ಏರ್ಪಾಡು ಮಾಡಲಾಯಿತು. ಅವನ ಜೊತೆಯಲ್ಲಿ ಲೂಕ ಮತ್ತು ಅರಿಸ್ತಾರ್ಕ ಎಂಬ ಸಹೋದರರೂ ಹೋದರು.
ಅವರು ಸಮುದ್ರದಲ್ಲಿ ಪ್ರಯಾಣಿಸುತ್ತಿದ್ದಾಗ ಒಂದು ಭಯಂಕರ ಬಿರುಗಾಳಿ ಎದ್ದಿತು. ಅನೇಕ ದಿನಗಳವರೆಗೆ ಬಿರುಗಾಳಿ ಕಡಿಮೆ ಆಗಲೇ ಇಲ್ಲ. ಎಲ್ಲರೂ ತಾವು ಸಾಯುತ್ತೇವೆಂದು ಭಯಭೀತರಾದರು. ಆದರೆ ಪೌಲನಿಗೆ ಒಬ್ಬ ದೇವದೂತನು “ಪೌಲ, ಭಯಪಡಬೇಡ. ನೀನು ರೋಮಿಗೆ ಹೋಗ್ತೀಯ. ದೇವರು ನಿನ್ನನ್ನ ಮತ್ತು ನಿನ್ನ ಜೊತೆ ಪ್ರಯಾಣ ಮಾಡ್ತಿರೋ ಎಲ್ರನ್ನ ಕಾಪಾಡ್ತಾನೆ” ಎಂದು ಕನಸಿನಲ್ಲಿ ಹೇಳಿದನು. ಆದ್ದರಿಂದ ಪೌಲನು ಹಡಗಿನಲ್ಲಿ ಇದ್ದವರಿಗೆ ‘ಧೈರ್ಯವಾಗಿರಿ, ನಾವು ಸಾಯಲ್ಲ’ ಎಂದು ಹೇಳಿದನು.
14 ದಿನಗಳವರೆಗೆ ಸತತವಾಗಿ ಬಿರುಗಾಳಿ ಬೀಸುತ್ತಲೇ ಇತ್ತು. ಕೊನೆಗೂ ದಡ ಕಾಣಿಸಿತು. ಅದು ಮಾಲ್ಟ ಎಂಬ ದ್ವೀಪವಾಗಿತ್ತು. ಆದರೆ ಹಡಗು ಮರಳದಿಬ್ಬಕ್ಕೆ ಸಿಕ್ಕಿಹಾಕಿಕೊಂಡು ಅಲೆಗಳ ರಭಸಕ್ಕೆ ಹೊಡೆದು ಹೋಯಿತು. ಹಡಗಿನಲ್ಲಿದ್ದ ಎಲ್ಲಾ 276 ಜನರೂ ಸುರಕ್ಷಿತವಾಗಿ ದಡ ಸೇರಿದರು. ಕೆಲವರು ಈಜಿದರೆ ಇನ್ನು ಕೆಲವರು ಹಡಗಿನ ತುಂಡುಗಳನ್ನು ಹಿಡಿದುಕೊಂಡು ನೀರಿನಲ್ಲಿ ತೇಲುತ್ತಾ ದಡ ಸೇರಿದರು. ಮಾಲ್ಟ ದ್ವೀಪದ ಜನರು ಅವರ ಅಗತ್ಯಗಳನ್ನು ನೋಡಿಕೊಂಡರು ಮತ್ತು ಬೆಂಕಿ ಹಾಕಿ ಚಳಿಕಾಯಿಸಿಕೊಳ್ಳಲು ಅವರಿಗೆ ಸಹಾಯ ಮಾಡಿದರು.
ಇದಾಗಿ ಮೂರು ತಿಂಗಳ ನಂತರ, ಸೈನಿಕರು ಪೌಲನನ್ನು ಬೇರೊಂದು ಹಡಗಿನಲ್ಲಿ ರೋಮಿಗೆ ಕರೆದುಕೊಂಡು ಹೋದರು. ಅಲ್ಲಿ ತಲುಪಿದಾಗ ಪೌಲನನ್ನು ಭೇಟಿಯಾಗಲು ಸಹೋದರರು ಬಂದರು. ಅವರನ್ನು ನೋಡಿದಾಗ ಪೌಲನು ಯೆಹೋವನಿಗೆ ಕೃತಜ್ಞತೆ ಹೇಳಿದನು ಮತ್ತು ಧೈರ್ಯ ಪಡೆದುಕೊಂಡನು. ಪೌಲನು ಸೆರೆಯಾಳು ಆಗಿದ್ದರೂ ಒಂದು ಬಾಡಿಗೆ ಮನೆಯಲ್ಲಿ ಇರಲು ಅವನಿಗೆ ಅನುಮತಿ ಇತ್ತು. ಅದಕ್ಕೆ ಒಬ್ಬ ಸೈನಿಕನು ಕಾವಲಿದ್ದನು. ಅಲ್ಲಿ ಅವನು ಎರಡು ವರ್ಷ ಇದ್ದನು. ಜನರು ಅವನನ್ನು ನೋಡಲು ಬಂದರು. ಆಗ ಪೌಲನು ಅವರಿಗೆ ದೇವರ ಆಳ್ವಿಕೆಯ ಬಗ್ಗೆ ಮತ್ತು ಯೇಸುವಿನ ಬಗ್ಗೆ ಕಲಿಸಿದನು. ಪೌಲನು ಏಷ್ಯಾ ಮೈನರ್ ಮತ್ತು ಯೂದಾಯದ ಸಭೆಗಳಿಗೆ ಪತ್ರಗಳನ್ನು ಸಹ ಬರೆದನು. ಹೀಗೆ ಯೆಹೋವನು ಪೌಲನನ್ನು ಜನಾಂಗಗಳಿಗೆ ಸಿಹಿಸುದ್ದಿಯನ್ನು ಸಾರಲು ಉಪಯೋಗಿಸಿದನು.
“ನಾವು ಎಲ್ಲ ತರದಲ್ಲೂ ದೇವರ ಸೇವಕರು ಅಂತ ತೋರಿಸ್ಕೊಡ್ತಾ ಇದ್ದೀವಿ. ನಾವು ಬೇರೆ ಬೇರೆ ಕಷ್ಟಪರೀಕ್ಷೆ, ತೊಂದ್ರೆ-ನೋವು, ಬಿಕ್ಕಟ್ಟು, ಸಮಸ್ಯೆ ಇದನ್ನೆಲ್ಲ ಸಹಿಸ್ಕೊಂಡ್ವಿ.”—2 ಕೊರಿಂಥ 6:4