ಪಾಠ 53
ಯೆಹೋವ ದೇವರಿಗೆ ಇಷ್ಟವಾಗುವ ಮನರಂಜನೆಯನ್ನ ಆರಿಸಿಕೊಳ್ಳಿ
ಯೆಹೋವನು ‘ಖುಷಿಯಾಗಿರೋ ದೇವರು.’ (1 ತಿಮೊತಿ 1:11) ನಮ್ಮ ಜೀವನವನ್ನ ಖುಷಿ ಖುಷಿಯಾಗಿ ಆನಂದಿಸಬೇಕು ಅಂತ ಆತನು ಬಯಸುತ್ತಾನೆ. ಅಷ್ಟೇ ಅಲ್ಲ ನಾವು ಕೆಲಸದ ಜೊತೆಗೆ ಸ್ವಲ್ಪ ಸಮಯ ಬಿಡುವು ಮಾಡಿಕೊಳ್ಳಬೇಕು ಅಂತನೂ ಬಯಸುತ್ತಾನೆ. ಈ ಪಾಠದಲ್ಲಿ ಬಿಡುವಿನ ಸಮಯವನ್ನ ನಾವು ಹೇಗೆ ಸಂತೋಷವಾಗಿ ಮತ್ತು ಯೆಹೋವ ದೇವರಿಗೆ ಇಷ್ಟವಾಗುವ ರೀತಿಯಲ್ಲಿ ಕಳೆಯಬಹುದು ಅಂತ ನೋಡೋಣ.
1. ಮನರಂಜನೆಯನ್ನ ಆಯ್ಕೆ ಮಾಡುವಾಗ ಯಾವೆಲ್ಲಾ ವಿಷಯಗಳನ್ನ ಮನಸ್ಸಿನಲ್ಲಿಡಬೇಕು?
ಬಿಡುವಿನ ಸಮಯದಲ್ಲಿ ಏನು ಮಾಡೋಕೆ ನಿಮಗೆ ಇಷ್ಟ? ಕೆಲವರು ಮನೆಯಲ್ಲೇ ಏನಾದ್ರೂ ಚಟುವಟಿಕೆಗಳನ್ನ ಮಾಡೋಕೆ ಇಷ್ಟಪಡುತ್ತಾರೆ. ಉದಾಹರಣೆಗೆ ಪುಸ್ತಕ ಓದುತ್ತಾರೆ, ಸಂಗೀತ ಕೇಳಿಸಿಕೊಳ್ಳುತ್ತಾರೆ, ಸಿನಿಮಾ ನೋಡ್ತಾರೆ, ಇಂಟರ್ನೆಟ್ ಬಳಸುತ್ತಾರೆ. ಇನ್ನೂ ಕೆಲವರು ತಮ್ಮ ಸ್ನೇಹಿತರ ಜೊತೆ ಹೊರಗೆ ಹೋಗಿ ಸಮಯ ಕಳೆಯಲು ಇಷ್ಟಪಡುತ್ತಾರೆ. ಉದಾಹರಣೆಗೆ ಬೆಟ್ಟ ಹತ್ತೋದು, ಈಜಾಡೋದು ಅಥವಾ ಯಾವುದಾದ್ರೂ ಆಟ ಆಡೋದನ್ನ ಮಾಡುತ್ತಾರೆ. ಮನರಂಜನೆಯ ವಿಷಯದಲ್ಲಿ ನಿಮ್ಮ ಇಷ್ಟ ಏನೇ ಆದ್ರೂನೂ ಅದು ಯೆಹೋವ ದೇವರಿಗೂ ಇಷ್ಟ ಆಗುತ್ತಾ ಅಂತ ‘ಪರೀಕ್ಷೆ ಮಾಡಬೇಕು.’ (ಎಫೆಸ 5:10) ಇದು ತುಂಬ ಪ್ರಾಮುಖ್ಯ ಯಾಕಂದ್ರೆ ಈಗಿರುವ ಹೆಚ್ಚಿನ ಮನರಂಜನೆಗಳಲ್ಲಿ ಹಿಂಸೆ, ಲೈಂಗಿಕ ಅನೈತಿಕತೆ, ಮಾಟಮಂತ್ರ, ದೆವ್ವಗಳಿಗೆ ಸಂಬಂಧಪಟ್ಟ ವಿಷಯಗಳೇ ಇರುತ್ತೆ. ಇಂಥವುಗಳನ್ನೆಲ್ಲಾ ಯೆಹೋವನು ದ್ವೇಷಿಸುತ್ತಾನೆ. (ಕೀರ್ತನೆ 11:5 ಓದಿ.) ಒಳ್ಳೇ ಮನರಂಜನೆಯನ್ನ ಆಯ್ಕೆ ಮಾಡೋಕೆ ನಮಗೆ ಯಾವುದು ಸಹಾಯ ಮಾಡುತ್ತೆ?
ಯೆಹೋವ ದೇವರನ್ನ ಪ್ರೀತಿಸುವ ಜನರನ್ನ ನಾವು ಸ್ನೇಹಿತರನ್ನಾಗಿ ಮಾಡಿಕೊಂಡರೆ ಒಳ್ಳೇ ಗುಣಗಳನ್ನ ಬೆಳೆಸಿಕೊಳ್ಳಲು ಮತ್ತು ಒಳ್ಳೇ ಮನರಂಜನೆಯನ್ನ ಆರಿಸಿಕೊಳ್ಳಲು ಅವರು ನಮಗೆ ಸಹಾಯ ಮಾಡುತ್ತಾರೆ. 48ನೇ ಪಾಠದಲ್ಲಿ ಕಲಿತ ಹಾಗೆ, “ವಿವೇಕಿ ಜೊತೆ ಸಹವಾಸ ಮಾಡುವವನು ವಿವೇಕಿ ಆಗ್ತಾನೆ” ಆದರೆ ಯೆಹೋವ ದೇವರ ನೀತಿನಿಯಮಗಳನ್ನ ಪಾಲಿಸದೇ ಇರೋರ ಜೊತೆಗೆ ಯಾವಾಗ್ಲೂ ಸಹವಾಸ ಮಾಡುವವನು “ಹಾಳಾಗಿ ಹೋಗ್ತಾನೆ.”—ಜ್ಞಾನೋಕ್ತಿ 13:20.
2. ಮನರಂಜನೆಗಾಗಿ ಎಷ್ಟು ಸಮಯ ಬಳಸುತ್ತೀರ ಅನ್ನೋದರ ಬಗ್ಗೆ ಯಾಕೆ ಎಚ್ಚರವಹಿಸಬೇಕು?
ನಾವು ಒಳ್ಳೇ ಮನರಂಜನೆಯನ್ನ ಆನಂದಿಸುತ್ತಾ ಇರೋದಾದ್ರೂ ಅದರಲ್ಲೇ ಮುಳುಗಿ ಹೋಗದ ಹಾಗೆ ಜಾಗ್ರತೆವಹಿಸಬೇಕು. ಇಲ್ಲವಾದರೆ ಮುಖ್ಯವಾದ ವಿಷಯಗಳನ್ನ ಮಾಡಕ್ಕೆ ನಮ್ಮ ಹತ್ತಿರ ಸಮಯನೇ ಇರಲ್ಲ. ನಾವು “ಮುಖ್ಯವಾದ ವಿಷ್ಯಕ್ಕೆ ಸಮಯ” ಕೊಡಬೇಕು ಅಂತ ಬೈಬಲ್ ಹೇಳುತ್ತೆ.—ಎಫೆಸ 5:15, 16 ಓದಿ.
ಹೆಚ್ಚನ್ನ ತಿಳಿಯೋಣ
ಮನರಂಜನೆಯ ವಿಷಯದಲ್ಲಿ ಒಳ್ಳೇ ತೀರ್ಮಾನಗಳನ್ನ ಮಾಡೋದು ಹೇಗೆ ಅಂತ ತಿಳಿದುಕೊಳ್ಳಿ.
3. ಕೆಟ್ಟ ಮನರಂಜನೆಗಳಿಂದ ದೂರವಿರಿ
ನಾವು ಯಾವಾಗ್ಲೂ ಒಳ್ಳೇ ಮನರಂಜನೆಯನ್ನೇ ಆಯ್ಕೆ ಮಾಡಬೇಕು. ಇದರ ಬಗ್ಗೆ ತಿಳಿದುಕೊಳ್ಳಲು ವಿಡಿಯೋ ನೋಡಿ ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಈಗ ಇರೋ ಕೆಲವು ಮನರಂಜನೆಗಳು ಹಿಂದಿನ ಕಾಲದ ಖಡ್ಗಮಲ್ಲರ ಹೋರಾಟದ ತರ ಇದೆ ಅಂತ ಹೇಗೆ ಹೇಳಬಹುದು?
ವಿಡಿಯೋದಲ್ಲಿ ನೋಡಿದ ಹಾಗೆ ಡ್ಯಾನಿ ಮನರಂಜನೆಯ ಬಗ್ಗೆ ಯಾವ ಪಾಠ ಕಲಿತ?
ರೋಮನ್ನರಿಗೆ 12:9 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ನೀವು ಒಂದು ಮನರಂಜನೆಯನ್ನ ಆರಿಸಿಕೊಳ್ಳುವ ಮುಂಚೆ ಈ ವಚನವನ್ನ ಹೇಗೆ ಅನ್ವಯಿಸುತ್ತೀರಾ?
ಯೆಹೋವ ದೇವರು ಯಾವೆಲ್ಲಾ ವಿಷಯಗಳನ್ನ ದ್ವೇಷಿಸುತ್ತಾನೆ? ಜ್ಞಾನೋಕ್ತಿ 6:16, 17 ಮತ್ತು ಗಲಾತ್ಯ 5:19-21 ಓದಿ, ಪ್ರತಿಯೊಂದು ವಚನವನ್ನ ಓದಿದ ಮೇಲೆ ಈ ಪ್ರಶ್ನೆಯನ್ನ ಚರ್ಚಿಸಿ:
ಈ ವಚನದಲ್ಲಿ ಕೊಡಲಾಗಿರುವ ಯಾವೆಲ್ಲಾ ವಿಷಯಗಳನ್ನ ಈಗಿರೋ ಮನರಂಜನೆಗಳಲ್ಲಿ ನೀವು ಗಮನಿಸಿದ್ದೀರಾ?
ಒಳ್ಳೇ ಮನರಂಜನೆಯನ್ನ ವಿವೇಚನೆಯಿಂದ ಆರಿಸಿಕೊಳ್ಳೋದು ಹೇಗೆ?
ಈ ಪ್ರಶ್ನೆಗಳನ್ನ ಕೇಳಿಕೊಳ್ಳಿ:
ಯಾವುದು? ಯೆಹೋವ ದೇವರಿಗೆ ಇಷ್ಟವಿಲ್ಲದ ಯಾವುದಾದ್ರೂ ವಿಷಯಗಳು ಇದರಲ್ಲಿ ಇದೆಯಾ?
ಎಷ್ಟು ಸಮಯ? ಇದರಿಂದ ಹೆಚ್ಚು ಪ್ರಾಮುಖ್ಯವಾದ ವಿಷಯಗಳನ್ನ ಮಾಡಕ್ಕೆ ನನಗೆ ಸಮಯ ಸಿಗುತ್ತಾ?
ಯಾರ ಜೊತೆ? ಇದು ಯೆಹೋವ ದೇವರನ್ನ ಪ್ರೀತಿಸದ ಜನರ ಜೊತೆ ಸಹವಾಸ ಮಾಡುವಂತೆ ಅಥವಾ ಹೆಚ್ಚು ಸಮಯ ಕಳೆಯುವಂತೆ ಮಾಡುತ್ತಾ?
ಅಪಾಯ ಇದೆ ಅಂತ ಗೊತ್ತಾದರೆ ಅದ್ರಿಂದ ದೂರ ಇರೋದೇ ಒಳ್ಳೇದು. ಅದೇ ತರ ಯಾವುದಾದ್ರೂ ಮನರಂಜನೆಯಲ್ಲಿ ಅಪಾಯ ಇದೆ ಅಂತ ಅನಿಸಿದರೆ ದೂರ ಇರೋದೇ ಒಳ್ಳೇದು
4. ನಿಮ್ಮ ಸಮಯವನ್ನ ವಿವೇಕದಿಂದ ಬಳಸಿ
ವಿಡಿಯೋ ನೋಡಿ ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ವಿಡಿಯೋದಲ್ಲಿದ್ದ ಸಹೋದರ ಕೆಟ್ಟ ಮನರಂಜನೆಯನ್ನ ನೋಡುತ್ತಾ ಇರಲಿಲ್ಲ. ಆದ್ರೂ ಕೂಡ ಅವರು ಸಮಯವನ್ನ ಸರಿಯಾದ ರೀತಿಯಲ್ಲಿ ಬಳಸುತ್ತಿರಲಿಲ್ಲ ಅಂತ ಹೇಗೆ ಹೇಳಬಹುದು?
ಫಿಲಿಪ್ಪಿ 1:10 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ನಾವು ನೋಡುವ ಮನರಂಜನೆಗೆ ಎಷ್ಟು ಸಮಯ ಕೊಡಬೇಕು ಅಂತ ತೀರ್ಮಾನ ಮಾಡಕ್ಕೆ ಈ ವಚನ ಹೇಗೆ ಸಹಾಯ ಮಾಡುತ್ತೆ?
5. ಒಳ್ಳೇ ಮನರಂಜನೆಯನ್ನ ಆರಿಸಿಕೊಳ್ಳಿ
ಯೆಹೋವ ದೇವರು ಕೆಲವು ಮನರಂಜನೆಗಳನ್ನ ಇಷ್ಟಪಡಲ್ಲ. ಆದರೆ ಯೆಹೋವ ದೇವರು ದ್ವೇಷಿಸದ ಅನೇಕ ಮನರಂಜನೆಗಳಿವೆ. ಪ್ರಸಂಗಿ 8:15 ಮತ್ತು ಫಿಲಿಪ್ಪಿ 4:8 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ನೀವು ಇಷ್ಟಪಡುವ ಒಳ್ಳೇ ಮನರಂಜನೆ ಯಾವುದು?
ನೀವು ಒಳ್ಳೇ ರೀತಿಯ ಮನರಂಜನೆಗಳನ್ನ ಆನಂದಿಸಬಹುದು
ಕೆಲವರು ಹೀಗಂತಾರೆ: “ಹಿಂಸೆ, ಅನೈತಿಕತೆ, ಮಾಟಮಂತ್ರ ಅಥವಾ ದೆವ್ವಗಳಿಗೆ ಸಂಬಂಧಪಟ್ಟ ಮನರಂಜನೆಗಳನ್ನ ನೋಡೋದು ತಪ್ಪೇನಲ್ಲ, ಯಾಕಂದ್ರೆ ನಾನು ಅದನ್ನೆಲ್ಲಾ ಮಾಡಕ್ಕೆ ಹೋಗಲ್ಲವಲ್ಲಾ.”
ನೀವೇನು ಹೇಳುತ್ತೀರಾ?
ನಾವೇನು ಕಲಿತ್ವಿ
ನಾವು ಒಳ್ಳೇ ಮನರಂಜನೆಯನ್ನ ಆರಿಸಿಕೊಳ್ಳಬೇಕು ಮತ್ತು ಅದನ್ನ ಆನಂದಿಸಬೇಕು ಅಂತ ಯೆಹೋವನು ಬಯಸುತ್ತಾನೆ.
ನೆನಪಿದೆಯಾ
ಯಾವೆಲ್ಲಾ ರೀತಿಯ ಮನರಂಜನೆಯಿಂದ ಕ್ರೈಸ್ತರು ದೂರ ಇರಬೇಕು?
ಮನರಂಜನೆಗಾಗಿ ನಾವು ಎಷ್ಟು ಸಮಯ ಕಳೆಯುತ್ತೇವೆ ಅನ್ನೋ ವಿಷಯದಲ್ಲಿ ನಾವು ಯಾಕೆ ಜಾಗ್ರತೆವಹಿಸಬೇಕು?
ಯೆಹೋವ ದೇವರಿಗೆ ಇಷ್ಟವಾಗುವ ಮನರಂಜನೆಗಳನ್ನೇ ನಾವು ಯಾಕೆ ಆರಿಸಿಕೊಳ್ಳಬೇಕು?
ಇದನ್ನೂ ನೋಡಿ
ಒಂದು ಮನರಂಜನೆ ನಮಗೆ ಸೂಕ್ತವಾಗಿದೆಯಾ ಇಲ್ವಾ ಅಂತ ಆಯ್ಕೆಮಾಡುವ ಜವಾಬ್ದಾರಿ ಯಾರದು?
“ಯೆಹೋವನ ಸಾಕ್ಷಿಗಳು ನಿರ್ದಿಷ್ಟ ಚಲನಚಿತ್ರ, ಪುಸ್ತಕ ಅಥವಾ ಹಾಡುಗಳನ್ನು ನಿಷೇಧಿಸುತ್ತಾರೋ?” (jw.org ಲೇಖನ)
ಬಿಡುವಿನ ಸಮಯವನ್ನ ಮತ್ತು ಮನರಂಜನೆಯನ್ನ ಒಳ್ಳೇ ರೀತಿಯಲ್ಲಿ ಆನಂದಿಸಲು ಏನು ಮಾಡಬೇಕು ಅಂತ ತಿಳಿಯಿರಿ.
“ಮನರಂಜನೆ ಪರೀಕ್ಷಿಸಿ ಆಯ್ಕೆ ಮಾಡಿ” (ಕಾವಲಿನಬುರುಜು, ಅಕ್ಟೋಬರ್ 15, 2011)
ಒಬ್ಬ ವ್ಯಕ್ತಿಗೆ ಕೆಟ್ಟ ಮನರಂಜನೆಯನ್ನ ಬಿಟ್ಟುಬಿಡಲು ಯಾವುದು ಸಹಾಯ ಮಾಡಿತು ಅಂತ ತಿಳಿಯಲು “ಭೇದ ಭಾವ ಮಾಡೋದನ್ನ ಬಿಟ್ಟುಬಿಟ್ಟೆ” ಅನ್ನೋ ಜೀವನ ಕಥೆಯನ್ನ ನೋಡಿ.
ದೆವ್ವ ಮಾಟಮಂತ್ರಕ್ಕೆ ಸಂಬಂಧಪಟ್ಟ ಮನರಂಜನೆಯನ್ನ ನೋಡದೇ ಇರಕ್ಕೆ ಒಬ್ಬ ತಾಯಿಗೆ ಯಾವುದು ಸಹಾಯ ಮಾಡಿತು ಅಂತ ನೋಡಿ.