ಯೇಸುವಿನ ಜೀವನ ಮತ್ತು ಶುಶ್ರೂಷೆ
ದುಃಖಾಶ್ರುಗಳು ಮಹಾ ಹರ್ಷೊನ್ಮಾದವಾಗಿ ಪರಿವರ್ತಿಸಿದ್ದು
ಸ್ತ್ರೀಯ ರಕ್ತ ಕುಸುಮ ರೋಗವು ವಾಸಿಯಾದದ್ದನ್ನು ನೋಡಿದ ಯಾಯಿರನ ಭರವಸವು ಯೇಸುವಿನ ಅದ್ಭುತ ಶಕ್ತಿಯ ಮೇಲೆ ಅಧಿಕಗೊಂಡಿತು ಎನ್ನುವುದರಲ್ಲಿ ಸಂದೇಹವಿಲ್ಲ. ಮರಣಶಯ್ಯೆಯಲ್ಲಿದ್ದ ತನ್ನ ಪ್ರೀತಿಯ 12 ವಯಸ್ಸಿನ ಮಗಳಿಗೆ ಸಹಾಯ ಮಾಡುವಂತೆ ಯಾಯಿರನು ಅದಕ್ಕೆ ಮೊದಲೇ ಯೇಸುವನ್ನು ವಿನಂತಿಸಿದ್ದನು. ಆದರೆ ಕಪೆರ್ನೌಮಿನಲ್ಲಿ ಯಾ ಅದಕ್ಕೆ ಹತ್ತಿರವಿದ್ದ ಯಾಯಿರನ ಮನೆಗೆ ಹೋಗುವ ದಾರಿಯಲ್ಲಿ, ಸ್ತ್ರೀಯೊಬ್ಬಳು ಯೇಸುವಿನ ಉಡುಪಿನ ಗೊಂಡೆಯನ್ನು ಮುಟ್ಟಿದ ಮಾತ್ರದಿಂದಲೇ ಗುಣವಾಗುತ್ತಾಳೆ.
ಈ ಮಧ್ಯೆಯಾದರೋ, ಯಾಯಿರನು ಯಾತಕ್ಕಾಗಿ ಹೆದರಿದ್ದನೋ ಅದು ಸಂಭವಿಸುತ್ತದೆ. ಯೇಸುವಿನ್ನೂ ಆ ಸ್ತ್ರೀಯೊಂದಿಗೆ ಮಾತಾಡುತ್ತಿದ್ದಾಗಲೇ ಕೆಲವರು ಬಂದು ಯಾಯಿರನಿಗೆ “ನಿನ್ನ ಮಗಳು ತೀರಿಹೋದಳು; ಇನ್ನೇಕೆ ಗುರುವಿಗೆ ತೊಂದರೆ ಕೊಡುವುದು?” ಎಂದನ್ನುತ್ತಾರೆ ಮೆಲ್ಲನೆ.
ಎಂತಹ ಭೀಕರ ವಾರ್ತೆಯದು! ಸ್ವಲ್ಪ ಆಲೋಚಿಸಿರಿ: ಸಮಾಜದಲ್ಲಿ ಬಹಳಷ್ಟು ಮರ್ಯಾದೆ ಪಡೆಯುತ್ತಿದ್ದ ಈ ವ್ಯಕ್ತಿ, ತನ್ನ ಮಗಳ ಮರಣವಾರ್ತೆಯಿಂದ ಪೂರ್ಣವಾಗಿ ನಿಸ್ಸಹಾಯಕನಾಗುತ್ತಾನೆ. ಆದರೆ ಯೇಸುವಿಗೆ ಸಂಭಾಷಣೆ ಕೇಳಿಸಿತು. ಯಾಯಿರನ ಕಡೆಗೆ ತಿರುಗಿ, ಉತ್ತೇಜನೀಯವಾಗಿ ಆತನಂದದ್ದು: “ಅಂಜಬೇಡ, ನಂಬಿಕೆ ಮಾತ್ರ ಇರಲಿ.”
ಆ ದು:ಖಿತ ಮನುಷ್ಯನೊಂದಿಗೆ ಯೇಸು ಅವನ ಮನೆಗೆ ಹೋಗುತ್ತಾನೆ. ಅವರಲ್ಲಿ ತಲಪಿದಾಗ, ಬಹಳವಾಗಿ ಅಳುವುದನ್ನೂ ಗೋಳಾಡುವುದನ್ನೂ ಕಾಣುತ್ತಾರೆ. ಜನರ ಗುಂಪೊಂದು ಒಟ್ಟುಸೇರಿತ್ತು ಮತ್ತು ಅವರು ದು:ಖದಿಂದ ಎದೆ ಬಡಕೊಳ್ಳುತ್ತಿದ್ದರು. ಒಳಗೆ ಬಂದಾಗ, “ನೀವು ಗದ್ದಲಮಾಡುವದೂ ಅಳುವದೂ ಯಾಕೆ? ಹುಡುಗಿ ಸತ್ತಿಲ್ಲ; ನಿದ್ದೆ ಮಾಡುತ್ತಾಳೆ” ಅನ್ನುತ್ತಾನೆ ಯೇಸು.
ಇದನ್ನು ಕೇಳಿದ ಜನರು ಯೇಸುವೆಡೆಗೆ ಅಪಹಾಸ್ಯದಿಂದ ನಗುತ್ತಾರೆ ಯಾಕಂದರೆ ಹುಡುಗಿ ನಿಜವಾಗಿಯೂ ಸತ್ತಿದ್ದಳೆಂದು ಅವರಿಗೆ ಗೊತ್ತಿತ್ತು. ಆಕೆ ಮಲಗಿದ್ದಾಳೆ ಎಂದು ಯೇಸು ಹೇಳಿದ್ದು ಏಕೆಂದರೆ, ಗಾಢನಿದ್ದೆಯಿಂದ ಜನರನ್ನು ಹೇಗೆ ಸುಲಭವಾಗಿ ಎಚ್ಚರಿಸಬಹುದೋ ಹಾಗೆ ಸತ್ತವರನ್ನೂ ತನ್ನ ದೇವದತ್ತ ಶಕ್ತಿಯಿಂದ ಎಬ್ಬಿಸ ಸಾಧ್ಯವಿದೆಂದು ತೋರಿಸುವುದಕ್ಕಾಗಿಯೇ.
ಪೇತ್ರ, ಯೋಹಾನ, ಯಾಕೋಬ ಮತ್ತು ಮೃತ ಹುಡುಗಿಯ ತಂದೆತಾಯಿ ಬಿಟ್ಟು ಬೇರೆಲ್ಲರನ್ನು ಯೇಸುವೀಗ ಹೊರಗೆ ಕಳುಹಿಸುತ್ತಾನೆ. ಈ ಐವರೊಂದಿಗೆ ಅವನು ಮೃತಹುಡುಗಿ ಮಲಗಿರುವಲ್ಲಿಗೆ ಹೋಗಿ ಅವಳ ಕೈಹಿಡಿದು, “ತಬೀಥಾ ಕೂಮ್ ಅಂದನು. ಈ ಮಾತಿಗೆ— ಅಮ್ಮಣ್ಣೀ ಏಳನ್ನುತ್ತೇನೆ ಎಂದರ್ಥ.” ತಕ್ಷಣ ಹುಡುಗಿಯು ಎದ್ದು ನಡೆದಾಡುತ್ತಾಳೆ! ಈ ದೃಶ್ಯವು ಅವಳ ಹೆತ್ತವರನ್ನು ಹರ್ಷದಿಂದ ದಿಗ್ಭ್ರಾಂತರನ್ನಾಗಿ ಮಾಡುತ್ತದೆ.
ಏನಾದರೂ ತಿನ್ನಲು ಮಗಳಿಗೆ ಕೊಡಿರೆಂದು ಹೇಳಿದನಂತರ, ಸಂಭವಿಸಿದ್ದನ್ನು ಯಾರಿಗೂ ತಿಳಿಸಬಾರದೆಂದು ಯೇಸುವು ಯಾಯಿರನಿಗೂ ಅವನ ಹೆಂಡತಿಗೂ ಅಪ್ಪಣೆಕೊಡುತ್ತಾನೆ. ಆದಾಗ್ಯೂ, ಈ ಸುದ್ಧಿಯು ಆ ಪ್ರದೇಶದಲ್ಲೆಲ್ಲಾ ಹಬ್ಬುತ್ತದೆ. ಇದು ಯೇಸು ನಡಿಸಿದ ಎರಡನೆಯ ಪುನರುತ್ಥಾನವಾಗಿತ್ತು. ಮತ್ತಾಯ 9:18-26; ಮಾರ್ಕ 5:35-43; ಲೂಕ 8:41-56.
◆ ಯಾವ ಸುದ್ಧಿಯು ಯಾಯಿರನಿಗೆ ತಲಪುತ್ತದೆ, ಮತ್ತು ಯೇಸು ಅವನನ್ನು ಪ್ರೋತ್ಸಾಹಿಸಿದ್ದು ಹೇಗೆ?
◆ ಯಾಯಿರನ ಮನೆಗೆ ಬಂದಾಗ ಯಾವ ಪರಿಸ್ಥಿತಿ ಅಲ್ಲಿತ್ತು?
◆ ಮೃತಹುಡುಗಿ ಕೇವಲ ನಿದ್ದೆ ಮಾಡುತ್ತಾಳೆಂದು ಯೇಸು ಹೇಳಿದ್ದು ಯಾಕೆ?
◆ ಆ ಪುನರುತ್ಥಾನಕ್ಕೆ ಸಾಕ್ಷಿಯಾಗಿದ್ದ ಯೇಸು ವೊಂದಿಗಿದ್ದ ಆ ಐವರು ಯಾರು? (w87 6/15)