ಸರ್ವರಾಷ್ಟ್ರಗಳಿಗೆ ಶೀಘ್ರವಾಗಿ ನ್ಯಾಯ ದೊರಕಲಿದೆ
“ನೀವು ಕೇವಲ ನ್ಯಾಯವನ್ನೇ ಅನುಸರಿಸಬೇಕು. ಹಾಗೆ ನಡೆದರೆ ನೀವು ಬದುಕಿಕೊಂಡು ನಿಮ್ಮ ದೇವರಾದ ಯೆಹೋವನು ಕೊಡುವ ದೇಶವನ್ನು ಸ್ವಾಧೀನ ಮಾಡಿಕೊಳ್ಳುವಿರಿ.”—ಧರ್ಮೋಪದೇಶಕಾಂಡ 16:20.
1. ಮನುಷ್ಯನ ಕಡೆಗೆ ದೇವರ ಮೂಲ ಉದ್ದೇಶವೇನಾಗಿತ್ತು, ಮತ್ತು ಆತನು ಅದನ್ನು ಹೇಗೆ ಮಾತ್ರ ನೆರವೇರಿಸಶಕ್ತನು?
ಪುರುಷ ಮತ್ತು ಸ್ತ್ರೀಯನ್ನು ಸೃಷ್ಟಿಸುವುದರಲ್ಲಿದ್ದ ಯೆಹೋವ ದೇವರ ಉದ್ದೇಶವು ಭೂಮಿಯನ್ನು ಪರಿಪೂರ್ಣ ಜೀವಿಗಳಿಂದ ತುಂಬಿಸುವುದೇ. ಆಗ ಅವರೆಲ್ಲರು ಆತನನ್ನು ಸ್ತುತಿಸಿ ಭೂಮಿಯನ್ನು ವಶಮಾಡಿಕೊಳ್ಳುವುದರಲ್ಲಿ ತಮ್ಮ ಪಾತ್ರವನ್ನು ವಹಿಸಲಿದ್ದರು. (ಆದಿಕಾಂಡ 1:26-28) ಮನುಷ್ಯನು ದೇವರ ಸ್ವರೂಪ ಮತ್ತು ಹೋಲಿಕೆಯಲ್ಲಿ ಮಾಡಲ್ಪಟ್ಟದರಿಂದ ಆತನ ಗುಣಗಳಾದ ವಿವೇಕ, ನ್ಯಾಯ, ಪ್ರೀತಿ ಮತ್ತು ಶಕ್ತಿ ಮನುಷ್ಯನಿಗೆ ಕೊಡಲಾಗಿದ್ದವು. ಈ ಗುಣಗಳನ್ನು ಸಮತೆಯಿಂದ ನಿರ್ವಹಿಸುವಲ್ಲಿ ಮಾತ್ರ ಅವನು ತನ್ನ ರಚಕನ ಉದ್ದೇಶವನ್ನು ಪೂರೈಸಲಿದ್ದನು.
2. ಇಸ್ರಾಯೇಲ್ಯರಿಗೆ ನ್ಯಾಯವನ್ನು ಅನುಸರಿಸುವುದು ಎಷ್ಟು ಪ್ರಾಮುಖ್ಯವಾಗಿತ್ತು?
2 ಆದರೆ, ಹಿಂದಿನ ಲೇಖನದಲ್ಲಿ ಗಮನಿಸಿರುವಂತೆ ಮನುಷ್ಯನು ದೇವರ ಕಾರ್ಯ ವಿಧಾನದ ವಿರುದ್ಧ ದಂಗೆಯೆದ್ದು ಮರಣಶಿಕ್ಷೆಗೆ ಒಳಗಾದನು. ಈಗ ಅಪೂರ್ಣತೆಯ ಕಾರಣ, ಮಾನವ ಸಂತತಿಯ ಕಡೆಗಿದ್ದ ದೇವರ ಮೂಲ ಉದ್ದೇಶವನ್ನು ನೆರವೇರಿಸುವದು ಅವನಿಗೆ ಅಸಾಧ್ಯವಾಯಿತು. ಪರಿಪೂರ್ಣ ನ್ಯಾಯವನ್ನು ಪ್ರದರ್ಶಿಸುವುದರಲ್ಲಿ ಮನುಷ್ಯನಿಗಿರುವ ಅಸಾಮರ್ಥ್ಯವು ಈ ವೈಫಲ್ಯದಲ್ಲಿರುವ ಗಮನಾರ್ಹ ಸಂಗತಿ. ಆದದರಿಂದ, ಮೋಶೆ ಇಸ್ರಾಯೇಲ್ಯರಿಗೆ, “ನೀವು ಕೇವಲ ನ್ಯಾಯವನ್ನೇ ಅನುಸರಿಸಬೇಕು” ಎಂದು ನೆನಪಿಸಿದ್ದು ಆಶ್ಚರ್ಯವಲ್ಲ! ಅವರ ಜೀವ ಮತ್ತು ವಾಗ್ದಾನ ದೇಶವನ್ನು ಸ್ವಾಧೀನ ಮಾಡಿಕೊಳ್ಳಲು ಅವರಿಗಿದ್ದ ಸಾಮರ್ಥ್ಯವು ಅವರ ನ್ಯಾಯಾನುಸರಣೆಯ ಮೇಲೆ ಹೊಂದಿಕೊಂಡಿತ್ತು.—ಧರ್ಮೋಪದೇಶಕಾಂಡ 16:20.
ಬರಲಿದ್ದ ಹಿತಕರ ವಿಷಯಗಳ ಛಾಯೆ
3. ಇಸ್ರಾಯೇಲ್ಯರೊಂದಿಗೆ ಯೆಹೋವನು ನ್ಯಾಯವನ್ನು ವ್ಯವಹರಿಸಿದ ರೀತಿಯ ಪರೀಕ್ಷೆಯು ಇಂದು ನಮಗೇಕೆ ಪ್ರಾಮುಖ್ಯ?
3 ಯೆಹೋವನು ಇಸ್ರಾಯೇಲ್ ಜನಾಂಗದೊಂದಿಗೆ ನಡೆಸಿದ ವ್ಯವಹಾರ, ಆತನು ತನ್ನ ನಿಯಮಿತ ಸೇವಕನಾದ ಯೇಸು ಕ್ರಿಸ್ತನ ಮೂಲಕ ಸರ್ವ ರಾಷ್ಟ್ರಗಳಿಗೆ ತನ್ನ ನ್ಯಾಯವನ್ನು ಸ್ಪಷ್ಟೀಕರಿಸುವನು ಎಂಬ ನಮ್ಮ ಭರವಸೆಯನ್ನು ಬಲ ಪಡಿಸುತ್ತದೆ. ಅಪೊಸ್ತಲ ಪೌಲನು ಈ ವಿಷಯವನ್ನು ಹೀಗೆ ವಿವರಿಸುತ್ತಾನೆ: “ಪೂರ್ವದಲ್ಲಿ ಬರೆದದ್ದೆಲ್ಲಾ ನಮ್ಮನ್ನು ಉಪದೇಶಿಸುವದಕ್ಕಾಗಿ ಬರೆಯಲ್ಪಟ್ಟಿತು. ನಾವು ಓದಿ ಸ್ಥಿರ ಚಿತ್ತವನ್ನೂ ಆದರಣೆಯನ್ನೂ ಹೊಂದಿ ರಕ್ಷಣೆಯ ನಿರೀಕ್ಷೆಯುಳ್ಳವರಾಗುವಂತೆ ಆ ಗ್ರಂಥಗಳು ಬರೆಯಲ್ಪಟ್ಟವು.” (ರೋಮಾಪುರ 15:4) ದೇವರು “ನೀತಿ ನ್ಯಾಯಗಳನ್ನು ಪ್ರೀತಿಸುವವನು” ಆಗಿರುವುದರಿಂದ ಇಸ್ರಾಯೇಲ್ಯರು ತಮ್ಮ ಪರಸ್ಪರ ವ್ಯವಹಾರದಲ್ಲಿ ಆತನನ್ನು ಅನುಕರಿಸಬೇಕೆಂದು ಆತನು ಅವಶ್ಯ ಪಟ್ಟನು. (ಕೀರ್ತನೆ 33:5) ಇದನ್ನು, ಇಸ್ರಾಯೇಲ್ಯರಿಗೆ ಕೊಡಲ್ಪಟ್ಟಿದ್ದ 600 ವಿಧಿಗಳಲ್ಲಿ ಕೆಲವನ್ನು ಪರೀಕ್ಷಿಸುವುದರಿಂದ ಸ್ಪಷ್ಟವಾಗಿ ನೋಡ ಬಹುದು.
4. ಮೋಶೆಯ ಧರ್ಮಶಾಸ್ತ್ರದಲ್ಲಿ ಪ್ರಜಾಹಕ್ಕು ಸಂಬಂಧವಾದ ಸಮಸ್ಯೆಗಳು ಹೇಗೆ ಪರಿಹರಿಸಲ್ಪಟ್ಟವು?
4 ಮೋಶೆಯ ನಿಯಮಗಳನ್ನು ಅನುಸರಿಸಿದಾಗ ಪ್ರಜಾಹಕ್ಕು ಸಮಸ್ಯೆಗಳೇ ಇರಲಿಲ್ಲ. ದೇಶದಲ್ಲಿ ಜೀವಿಸಲು ಬರುವ ಒಬ್ಬ ಇಸ್ರಾಯೇಲ್ಯೇತರನ ಕುರಿತು ಯಾಜಕಕಾಂಡ 19:34 ತಿಳಿಸುವದು: “ಅವರು ನಿಮಗೆ ಸ್ವದೇಶದವರಂತೆಯೇ ಇರಬೇಕು. ಅವರನ್ನು ನಿಮ್ಮಂತೆಯೇ ಪ್ರೀತಿಸಬೇಕು.” ಎಷ್ಟೊಂದು ನ್ಯಾಯ ಮತ್ತು ಪ್ರೀತಿಯ ಏರ್ಪಾಡು! ಇದಲ್ಲದೆ, ನ್ಯಾಯಾಧಿಪತಿಗಳಿಗೆ ಮತ್ತು ಸಾಕ್ಷಿಗಳಿಗೆ ಈ ಸಲಹೆಯಿತ್ತು: “ಬಹುಮಂದಿಯ ಮಾತಿಗೆ ಒಪ್ಪಿ ನ್ಯಾಯವನ್ನು ಕೆಡಿಸುವ ಸಾಕ್ಷಿಯನ್ನು ಹೇಳಬಾರದು. ಅದಲ್ಲದೆ ಬಡವನನ್ನು ಕರುಣಿಸಿ ಪಕ್ಷಪಾತದಿಂದ ತೀರ್ಮಾನ ಮಾಡಬಾರದು.” (ವಿಮೋಚನಕಾಂಡ 23:2, 3) ಯೋಚಿಸಿರಿ—ಧನಿಕರಿಗೂ ಬಡವರಿಗೂ ಒಂದೇ ರೀತಿಯ ನ್ಯಾಯವು ಕೊಡಲ್ಪಡುತ್ತಿತ್ತು!
5. ಮೋಶೆಯ ಧರ್ಮಶಾಸ್ತ್ರದಲ್ಲಿ ಕೊಟ್ಟ ಕ್ರಿಮಿನಲ್ ನಿಯಮಗಳನ್ನು ಇಂದಿನ ನಿಯಮಗಳೊಂದಿಗೆ ಹೋಲಿಸಿರಿ.
5 ಮೋಶೆಯ ಧರ್ಮ ಶಾಸ್ತ್ರದಲ್ಲಿ ಕ್ರಿಮಿನಲ್ ನಿಯಮಗಳು ಇಂದಿನ ರಾಷ್ಟ್ರಗಳ ಕಾನೂನುಗಳಿಗಿಂತ ಎಷ್ಟೋ ಶ್ರೇಷ್ಠವಾಗಿದ್ದವು. ಉದಾಹರಣೆಗೆ, ಶ್ರಮಜೀವಿಗಳಾಗಿರುವ ನಿಯಮಪಾಲಕ ಜನರ ಮೇಲೆ ಹೊರೆ ಹಾಕುವಂತೆ ಕಳ್ಳನನ್ನು ಸೆರೆಮನೆಗೆ ಹಾಕುತ್ತಿರಲಿಲ್ಲ. ಅವನು ದುಡಿದು ತಾನು ಕದ್ದಿದ್ದ ವಸ್ತುವಿಗಿಂತ ಇಮ್ಮಡಿಯನ್ನು ಅಥವಾ ಹೆಚ್ಚನ್ನು ಹಿಂದೆ ಸಲ್ಲಿಸಬೇಕಾಗಿತ್ತು. ಹೀಗೆ ಕಳ್ಳತನಕ್ಕೆ ಬಲಿಬಿದ್ದವನಿಗೆ ಯಾವ ನಷ್ಟವೂ ಆಗುತ್ತಿರಲಿಲ್ಲ. ಆದರೆ ಕಳ್ಳನು ಕೆಲಸ ಮಾಡಿ ಹಣ ತೆರಲು ನಿರಾಕರಿಸಿದರೆ ಏನು? ಆಗ ಅವನನ್ನು, ಅವನು ನಷ್ಟ ಪರಿಹಾರ ಮಾಡುವ ತನಕ ದಾಸನಾಗಿ ಮಾರಲಾಗುತ್ತಿತ್ತು. ಅವನು ಮತ್ತೂ ಹಟಮಾರಿತನ ತೋರಿಸುವಲ್ಲಿ ಅವನಿಗೆ ಮರಣ ಶಿಕ್ಷೆಯಾಗುತ್ತಿತ್ತು. ಹೀಗೆ ಕಳ್ಳತನಕ್ಕೆ ಬಲಿಬಿದ್ದವನಿಗೆ ನ್ಯಾಯ ಕೊಡಲಾಗುತ್ತಿತ್ತು. ಮತ್ತು ಕಳ್ಳರಿಗೆ ಇದೊಂದು ಬಲಾಢ್ಯ ತಡೆಹಿಡಿತವಾಗಿತ್ತು. (ವಿಮೋಚನ ಕಾಂಡ 22:1, 3, 4, 7; ಧರ್ಮೋಪದೇಶ ಕಾಂಡ 17:12) ಇದಲ್ಲದೆ, ಜೀವವು ದೇವರ ದೃಷ್ಟಿಯಲ್ಲಿ ಪವಿತ್ರವಾಗಿರುವದರಿಂದ, ಕೊಲೆಗಾರನಿಗೆ ಮರಣ ಶಿಕ್ಷೆಯಾಗುತ್ತಿತ್ತು. ಇದು ರಾಷ್ಟ್ರದಿಂದ ದುಷ್ಟ, ಕೊಲೆಪಾತಕಿಯನ್ನು ತೊಲಗಿಸಿತು. ಆದರೆ ಉದ್ದೇಶಪೂರ್ವಕವಲ್ಲದೆ ನರಹತ್ಯ ಮಾಡಿದವರಿಗೆ ದಯ ತೋರಿಸಲ್ಪಡುತ್ತಿತ್ತು.—ಅರಣ್ಯ ಕಾಂಡ 35:9-15, 22-29, 33.
6. ಇಸ್ರಾಯೇಲಿನ ನಿಯಮಗಳ ಪರೀಕ್ಷೆ ನಮ್ಮನ್ನು ಯಾವ ತೀರ್ಮಾನಕ್ಕೆ ನಡಿಸುತ್ತದೆ?
6 ಹಾಗಾದರೆ, ದೇವರು ಇಸ್ರಾಯೇಲ್ಯ ಜನಾಂಗದೊಂದಿಗೆ ಮಾಡಿದ ಸಕಲ ನ್ಯಾಯಾತ್ಮಕ ವ್ಯವಹಾರಗಳಲ್ಲಿ ನ್ಯಾಯ ಸ್ಪಷ್ಟವಾಗಿ ತೋರಿಬಂತೆಂಬದನ್ನು ಯಾರು ತಾನೇ ಅಲ್ಲಗಳೆಯಾನು? ಮತ್ತು ಯೆಶಾಯ 42:1ರ ದೇವರ ವಾಗ್ದಾನವನ್ನು ಆತನು ಕ್ರಿಸ್ತ ಯೇಸುವಿನಲ್ಲಿ ನಿರ್ವಹಿಸುವನು ಎಂಬದನ್ನು ಧ್ಯಾನಿಸುವಾಗ ನಮ್ಮಲ್ಲಿ ಎಂಥ ಉಪಶಮನ, ಎಂಥ ನಿರೀಕ್ಷೆ ತುಂಬಿ ಬರುವುದು! ಅಲ್ಲಿ ನಮಗೆ, “ಅವನು ರಾಷ್ಟ್ರಗಳಿಗೆ ನ್ಯಾಯವನ್ನೇ ಕೊಡಿಸುವನು” ಎಂಬ ಆಶ್ವಾಸನೆ ಕೊಡಲ್ಪಟ್ಟಿದೆ.
ಕರುಣೆಯೊಂದಿಗೆ ಸಮತೆಯಿರುವ ನ್ಯಾಯ
7. ಇಸ್ರಾಯೇಲ್ಯರೊಂದಿಗೆ ಯೆಹೋವನ ದಯೆಯ ವ್ಯವಹಾರಗಳನ್ನು ವರ್ಣಿಸಿರಿ.
7 ದೇವರ ನ್ಯಾಯ ಕರುಣೆಯೊಂದಿಗೆ ಸಮತೆಯಲ್ಲಿದೆ. ದೇವರ ನೀತಿಯ ಮಾರ್ಗದ ವಿರುದ್ಧ ಇಸ್ರಾಯೇಲ್ಯರು ದಂಗೆಯೆದ್ದಾಗ ಇದು ಸ್ಪಷ್ಟವಾಗಿ ತೋರಿಸಲ್ಪಟ್ಟಿತು. ಅವರು 40 ವರ್ಷಕಾಲ ಅರಣ್ಯದಲ್ಲಿದ್ದಾಗ, ಯೆಹೋವನು ಅವರನ್ನು ದಯೆಯಿಂದ ಪಾಲನೆ ಮಾಡಿದ ವಿಷಯದಲ್ಲಿ ಮೋಶೆಯ ವರ್ಣನೆಯನ್ನು ಆಲಿಸಿರಿ: “ಆತನು ಅವರನ್ನು ಶೂನ್ಯವೂ ಭಯಂಕರವೂ ಆದ ಮರಳುಗಾಡಿನಲ್ಲಿ ಕಂಡು ಪರಾಮರಿಸಿ ಪ್ರೀತಿಯಿಂದ ಆವರಿಸಿಕೊಂಡು ಕಣ್ಣುಗುಡ್ಡಿನಂತೆ ಕಾಪಾಡಿದ್ದೂ ಹದ್ದು ತನ್ನ ಮರಿಗಳನ್ನು ಗೂಡಿನೊಳಗಿಂದ ಹೊರಡಿಸಿ ಅವುಗಳ ಬಳಿಯಲ್ಲಿ ಹಾರಾಡುವಂತೆ ಯೆಹೋವನು ತನ್ನ ರೆಕ್ಕೆಗಳನ್ನು ಚಾಚಿ ಇಸ್ರಾಯೇಲ್ಯರನ್ನು ಆತುಕೊಂಡದ್ದೂ”ಎಂದು ಹೇಳಲಾಗಿದೆ. (ಧರ್ಮೋಪದೇಶ ಕಾಂಡ 30:10-12) ಆ ಬಳಿಕ, ಜನಾಂಗವು ಭ್ರಷ್ಟಗೊಂಡಾಗ, ಯೆಹೋವನು ಯಾಚಿಸಿದ್ದು: “ನಿಮ್ಮ ದುಮಾರ್ಗ, ದುಷ್ಕೃತ್ಯಗಳಿಂದ ಹಿಂದಿರುಗಿರಿ.”—ಜೆಕರ್ಯ 1:4,ಎ.
8, 9. (ಎ) ದೇವರು ಯೆಹೂದ್ಯರಿಗೆ ಎಷ್ಟು ಮಟ್ಟಿಗೆ ಕರುಣೆಯ ನ್ಯಾಯವನ್ನು ತೋರಿಸಿದನು? (ಬಿ) ಯಾವ ಅಂತಿಮ ವಿಪತ್ತು ಅವರನ್ನು ಹಿಡಿಯಿತು, ಆದರೆ ಅವರೊಂದಿಗೆ ದೇವರ ವ್ಯವಹಾರ ವಿಧದ ಕುರಿತು ಏನನ್ನಬಹುದು?
8 ಆದರೆ ಯೆಹೋವನ ದಯೆಯ ಆಮಂತ್ರಣಕ್ಕೆ ಅವರು ಕಿವಿಗೊಡಲಿಲ್ಲ. ಜೆಕರ್ಯ ಪ್ರವಾದಿಯ ಮೂಲಕ ದೇವರು, “ಅವರು ನನ್ನ ಮಾತನ್ನು ಕಿವಿಗೊಟ್ಟು ಕೇಳಲಿಲ್ಲ” ಎಂದು ಹೇಳಿದನು. (ಜೆಕರ್ಯ 1:4 ಬಿ) ಹೀಗೆ, ದೇವರ ಕರುಣಾಮಯ ನ್ಯಾಯವು, ಅವರು ಹಿಂತಿರುಗಿ ಬರುವಂತೆ ಸಹಾಯ ಮಾಡಲಿಕ್ಕಾಗಿ ಆತನು ತನ್ನ ಏಕಜಾತ ಪುತ್ರನನ್ನು ಕಳುಹಿಸುವಂತೆ ಪ್ರೇರಿಸಿತು. ಸ್ನಾನಿಕ ಯೋಹಾನನು ಈ ದೇವಪುತ್ರನನ್ನು, “ಅಗೋ, [ಯಜ್ಞಕ್ಕೆ] ದೇವರು ನೇಮಿಸಿದ ಕುರಿ, ಲೋಕದ ಪಾಪವನ್ನು ನಿವಾರಣೆ ಮಾಡುವವನು,” ಎಂದು ಪರಿಚಯಿಸಿದನು. (ಯೋಹಾನ 1:29) ಯೇಸು, ಮುಂದಿನ ಕೆಲವು ವರ್ಷಗಳಲ್ಲಿ ದಣಿಯದೆ ಯೆಹೂದ್ಯರಿಗೆ ದೇವರ ಯೋಗ್ಯ ಮಾರ್ಗಗಳ ಕುರಿತು ಕಲಿಸುತ್ತಾ ಅಸಂಖ್ಯಾತ ಪವಾಡಗಳನ್ನು ಮಾಡುತ್ತಾ, ಹೀಗೆ ತಾನೇ ಆ ವಿಮೋಚಕನೆಂದು ಸಾಬೀತು ಪಡಿಸಿದನು. (ಲೂಕ 24:27; ಯೋಹಾನ 5:36) ಆದರೆ ಜನರು ಕೇಳಲೂ ಇಲ್ಲ, ನಂಬಲೂ ಇಲ್ಲ. ಆದ್ದರಿಂದ ಯೇಸು ಹೀಗೆ ಉದ್ಗರಿಸಲ್ಪಡುವಂತೆ ಪ್ರಚೋದಿಸಲ್ಪಟ್ಟನು: “ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳ ಪ್ರಾಣ ತೆಗೆಯುವವಳೇ, ದೇವರು ನಿನ್ನ ಬಳಿಗೆ ಕಳುಹಿಸಿ ಕೊಟ್ಟವರನ್ನು ಕಲ್ಲೆಸೆದು ಕೊಲ್ಲುವವಳೇ, ಕೋಳಿ ತನ್ನ ಮರಿಗಳನ್ನು ರೆಕ್ಕೆಗಳ ಕೆಳಗೆ ಕೂಡಿಸಿಕೊಳ್ಳುವಂತೆ ನಿನ್ನ ಮಕ್ಕಳನ್ನು ಕೂಡಿಸಿಕೊಳ್ಳುವದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು; ಆದರೆ ನಿನಗೆ ಮನಸ್ಸಿಲ್ಲದೆ ಹೋಯಿತು. ನೋಡಿರಿ, ನಿಮ್ಮ ಆಲಯವು ನಿಮಗೆ ಬರೀದಾಗಿ ಬಿಟ್ಟದೆ.”—ಮತ್ತಾಯ 23:37, 38.
9 ದೇವರು ಈ ಪ್ರತಿಕೂಲ ತೀರ್ಪನ್ನು ಮುಂದಿನ 37 ವರ್ಷಗಳ ವರೆಗೆ, ಅಂದರೆ ಸಾ.ಶ. 70 ರ ವರೆಗೆ ಜಾರಿಗೆ ತರಲಿಲ್ಲ. ಬಳಿಕ ರೋಮನರು ಯೆರೂಸಲೇಮನ್ನು ನಾಶಮಾಡಿ ಸಾವಿರಾರು ಮಂದಿ ಯೆಹೂದ್ಯರನ್ನು ಸೆರೆವಾಸಕ್ಕೊಯ್ಯುವಂತೆ ದೇವರು ಬಿಟ್ಟನು. ಯೆಹೋವನು ಅನೇಕ ಶತಮಾನಗಳಲ್ಲಿ ತೋರಿಸಿದ ದೀರ್ಘಶಾಂತಿ ಮತ್ತು ಸಹನೆಯನ್ನು ನಾವು ಪರಿಗಣಿಸುವಾಗ, ಇಸ್ರಾಯೇಲ್ ಮನೆತನದೊಂದಿಗೆ ತನ್ನ ಎಲ್ಲಾ ವ್ಯವಹಾರದಲ್ಲಿ ಆತನು ತೋರಿಸಿದ ನ್ಯಾಯದ ಗುರುತನ್ನು ನೋಡಲು ಯಾರು ತಾನೇ ತಪ್ಪಿಯಾನು?
ಸಕಲ ರಾಷ್ಟ್ರಗಳಿಗೆ ನ್ಯಾಯ
10. ದೇವರ ನ್ಯಾಯ ಸಕಲ ರಾಷ್ಟ್ರಗಳನ್ನಾವರಿಸಿದ್ದು ಹೇಗೆ?
10 ಯೇಸುವನ್ನು ಇಸ್ರಾಯೇಲ್ಯರು ನಿರಾಕರಿಸಿದ ಬಳಿಕ ಯಾಕೋಬನು, “ದೇವರು ಮೊದಲಲ್ಲಿ ಅನ್ಯಜನರನ್ನು ಕಟಾಕ್ಷಿಸಿ ನೋಡಿ ತನ್ನ ಹೆಸರಿಗಾಗಿ ಅವರೊಳಗಿಂದ ಒಂದು ಪ್ರಜೆಯನ್ನು” ಆರಿಸಿಕೊಂಡನು ಎಂದು ಹೇಳಿದನು. (ಅಪೊಸ್ತಲರ ಕೃತ್ಯ 15:14) ಯೇಸುವನ್ನು ಮೆಸ್ಸೀಯನೆಂದು ಅಂಗೀಕರಿಸಿದ ಆ ಕೆಲವೇ ಯೆಹೂದ್ಯರು ಸೇರಿದ್ದ ಈ ಪ್ರಜೆ ಸಾಮೂಹಿಕವಾಗಿ “ದೇವರ [ಆತ್ಮಿಕ] ಇಸ್ರಾಯೇಲ್ಯರನ್ನು” ಉಂಟುಮಾಡಿ ಅದು ಯೇಸುಕ್ರಿಸ್ತನ 1,44,000 ಮಂದಿ ಆತ್ಮಜನಿತ ಹಿಂಬಾಲಕರನ್ನು ಒಳಗೊಂಡಿದೆ. (ಗಲಾತ್ಯ 6:16; ಪ್ರಕಟನೆ 7:1-8; 14:1-15) ಸುನ್ನತಿ ಹೊಂದಿಲ್ಲದ ಇಸ್ರಾಯೇಲ್ಯೇತರ ಪ್ರಥಮ ವಿಶ್ವಾಸಿ ಕೊರ್ನೇಲ್ಯನಾಗಿದ್ದನು. ಕೊರ್ನೇಲ್ಯನೂ ಅವನ ಕುಟುಂಬವೂ ದೇವರ ರಕ್ಷಣಾ ಮಾರ್ಗವನ್ನು ಅಂಗೀಕರಿಸಿದಾಗ ಪೇತ್ರನಂದದ್ದು: “ದೇವರು ಪಕ್ಷಪಾತಿಯಲ್ಲ. ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆಂದು ಈಗ ಸಂದೇಹವಿಲ್ಲದೆ ನನಗೆ ತಿಳಿದುಬಂದಿದೆ.” (ಅಪೊಸ್ತಲರ ಕೃತ್ಯ 10:34, 35) ಯೆಹೋವನ ನಿಷ್ಪಕ್ಷಪಾತದ ನ್ಯಾಯಬದ್ಧತೆಯನ್ನು ವಿಕಸಿಸುತ್ತಾ ಪೌಲನು ಹೇಳಿದ್ದು: “ನೀವೆಲ್ಲರು ಕ್ರಿಸ್ತಯೇಸುವಿನಲ್ಲಿ ಒಂದೇ ಆಗಿರುವುದರಿಂದ ಯೆಹೂದ್ಯನು ಗ್ರೀಕನು ಎಂದೂ, ಆಳು ಒಡೆಯನು ಎಂದೂ, ಗಂಡು ಹೆಣ್ಣು ಎಂದೂ ಭೇದವಿಲ್ಲ. ನೀವು ಕ್ರಿಸ್ತನವರಾಗಿದ್ದರೆ ಅಬ್ರಹಾಮನ ಸಂತತಿಯವರೂ ವಾಗ್ದಾನಕ್ಕನುಸಾರವಾಗಿ ಬಾಧ್ಯರೂ ಆಗಿದ್ದೀರಿ.”—ಗಲಾತ್ಯ 3:28, 29.
11. ಅಬ್ರಹಾಮನಿಗೆ ಯಾವ ವಾಗ್ದಾನ ಕೊಡಲಾಯಿತು, ಮತ್ತು ಅದು ಹೇಗೆ ನೆರವೇರುವದು?
11 ಇಲ್ಲಿ ಯೆಹೋವನು ಅಬ್ರಹಾಮನಿಗೆ ಕೊಟ್ಟ ಆಶ್ಚರ್ಯಕರವಾದ ವಾಗ್ದಾನ ನೆನಪಿಗೆ ಬರುತ್ತದೆ. ತನ್ನ ಪ್ರಿಯ ಪುತ್ರ ಇಸಾಕನನ್ನು ಬಲಿನೀಡಲು ಆ ಮೂಲಪಿತನಿಗಿದ್ದ ಸಿದ್ಧಮನಸ್ಸಿನ ಮೇಲೆ ಆಧಾರ ಮಾಡಿಕೊಂಡು ದೇವರು ಅವನಿಗೆ ಹೇಳಿದ್ದು: “ನೀನು ನಿನ್ನ ಒಬ್ಬನೇ ಮಗನನ್ನು ಸಮರ್ಪಿಸುವದಕ್ಕೆ ಹಿಂದೆಗೆಯದೆ ಹೋದದರಿಂದ ನಾನು ನಿನ್ನನ್ನು ಆಶೀರ್ವದಿಸಿಯೇ ಆಶೀರ್ವದಿಸುವೆನು. . . . ಭೂಮಿಯ ಎಲ್ಲಾ ಜನಾಂಗಗಳಿಗೂ ನಿನ್ನ ಸಂತತಿಯ ಮೂಲಕ ಆಶೀರ್ವಾದ ಉಂಟಾಗುವದು.” (ಆದಿಕಾಂಡ 22: 16, 18) ಈ ವಾಗ್ದಾನ ಹೇಗೆ ನೆರವೇರುವುದು? ಯೇಸು ಕ್ರಿಸ್ತ ಮತ್ತು ತಮ್ಮ ಮರಣದ ತನಕ ನಂಬಿಗಸ್ತರಾಗಿರುವ ಅವನ 1,44,000 ಮಂದಿ ಅಭಿಷಿಕ್ತ ಹಿಂಬಾಲಕರನ್ನೊಳಗೊಂಡಿರುವ “ಅಬ್ರಹಾಮನ ಸಂತತಿ” ಒಂದು ಸಾವಿರ ವರ್ಷಗಳ ತನಕ ಸ್ವರ್ಗದಿಂದ ಮಾನವ ಸಂತತಿಯನ್ನಾಳುವರು. (ಪ್ರಕಟನೆ 2:10, 26; 20:6) ಆ ಸುಖದಾಯಕ ಸಮಯದ ಸಂಬಂಧದಲ್ಲಿ, “ಅವನ ರಾಜಯೋಗ್ಯ ಆಳಿಕೆ ಮತ್ತು ಸಮಾಧಾನದ ಸಮೃದ್ಧಿಗೆ ಅಂತ್ಯವಿರದು” ಎಂದು ಯೆಹೋವನು ಆಶ್ವಾಸನೆ ನೀಡುತ್ತಾನೆ. ಇದೇಕೆ? ಏಕೆಂದರೆ ಆ ಮೆಸ್ಸೀಯನ ರಾಜ್ಯದ “ರಾಜಯೋಗ್ಯ ಆಳಿಕೆ” ‘ಯಾವಾಗಲೂ ನ್ಯಾಯ ನೀತಿಗಳಿಂದ ಪೋಷಿಸಲ್ಪಡುವದು.’—ಯೆಶಾಯ 9:7, NW.
12. ಅಬ್ರಹಾಮಿಕ ಒಡಂಬಡಿಕೆಯ ಆಶೀರ್ವಾದಗಳನ್ನು ಈಗಾಗಲೇ ಎಷ್ಟರ ಮಟ್ಟಿಗೆ ಅನುಭವಿಸಲಾಗುತ್ತದೆ?
12 ಆದರೆ ಅಬ್ರಹಾಮಿಕ ಒಡಂಬಡಿಕೆಯ ಆಶೀರ್ವಾದಗಳನ್ನು ಅನುಭವಿಸಲಿಕ್ಕಾಗಿ ಯೇಸು ಕ್ರಿಸ್ತನ ಸಹಸ್ರ ವರ್ಷದಾಳಿಕೆಯ ಆರಂಭದ ತನಕ ಕಾಯ ಬೇಕಾಗುವ ಅಗತ್ಯವಿಲ್ಲ. “ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲ ಭಾಷೆಗಳನ್ನು ಆಡುವವರೂ” ಆದ ಒಂದು “ಮಹಾ ಸಮೂಹ” ದವರು ಈ ಆಶೀರ್ವಾದಗಳನ್ನು ಈಗಾಗಲೇ ಅನುಭವಿಸುತ್ತಿದ್ದಾರೆ. ಸಾಂಕೇತಿಕವಾಗಿ, ಯೇಸು ಕ್ರಿಸ್ತನೆಂಬ ‘ಕುರಿಮರಿಯ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಬಿಳಿಯದಾಗಿ’ ಮಾಡಿ ಕೊಂಡದ್ದರಿಂದ ಅವರು ಯೆಹೋವನ ಎದುರು ನೀತಿಯ ನೆಲೆಯಲ್ಲಿ ಇದ್ದಾರೆ. ಅಬ್ರಹಾಮನಂತೆ ಅವರು ಯೆಹೋವನ ಸ್ನೇಹಿತರಾಗಿದ್ದಾರೆ! ಸಕಲ ರಾಷ್ಟ್ರಗಳಿಂದ ಬರುವ ಲಕ್ಷಾಂತರ ಜನರಿಗಾಗಿರುವ ಯೆಹೋವನ ರಕ್ಷಣಾಮಾರ್ಗವನ್ನು ನ್ಯಾಯವು ಗುರುತಿಸಿರುವುದು ನಿಶ್ಚಯ.—ಪ್ರಕಟನೆ 7:9, 14, NW.
ನೀವು ದೇವರ ನ್ಯಾಯ ಮಾರ್ಗಗಳಿಗೆ ಪ್ರತಿಕ್ರಿಯೆ ತೋರಿಸುತ್ತೀರೋ?
13, 14. (ಎ) ನಾವೆಲ್ಲರೂ ಯಾವ ವ್ಯಕ್ತಿಪರ ಹೃದಯ ಪರೀಕ್ಷೆಯನ್ನು ಮಾಡಬೇಕು? (ಬಿ) ಯೆಹೋವನಿಗೆ ನಮ್ಮ ಕೃತಜ್ಞತೆಯನ್ನು ಹೇಗೆ ಸಲ್ಲಿಸ ಸಾಧ್ಯವಿದೆ?
13 ತನ್ನ ಏಕಜಾತ ಪುತ್ರನನ್ನು ನಿಮಗೆ ಪ್ರಾಯಶ್ಚಿತ್ತವಾಗಿ ಕೊಟ್ಟ ದೇವರ ನ್ಯಾಯ ಮತ್ತು ಪ್ರೀತಿಯ ಮಾರ್ಗವು ನಿಮ್ಮ ಹೃದಯವನ್ನು ಸ್ಪರ್ಶಿಸಿ ನಿಮ್ಮನ್ನು ಆಳವಾಗಿ ಪ್ರಚೋದಿಸಿದೆಯೋ? ಯೆಹೋವನು ಅಬ್ರಹಾಮನಿಗೆ, ಅವನು ಎಷ್ಟೋ ಪ್ರೀತಿಸಿದ ಮಗನನ್ನು ಬಲಿ ಅರ್ಪಿಸಬೇಕೆಂದು ಹೇಳಿದಾಗ ಅಬ್ರಹಾಮನಿಗೆ ಹೇಗೆ ಅನಿಸಿದಿರ್ದಬೇಕೆಂದು ಭಾವಿಸಿರಿ! ಆದರೆ ದೇವರ ಅನಿಸಿಕೆ ಅದಕ್ಕಿಂತಲೂ ಹೆಚ್ಚು ಆಳವಾಗಿದೆ. ತನ್ನ ಪ್ರಿಯ ಪುತ್ರನು ಅವಮಾನವನ್ನು ಅನುಭವಿಸಿದಾಗ, ದಾರಿಹೋಕರು ಅವನನ್ನು ನಿಂದಿಸಿದಾಗ, ವಧಸ್ತಂಭದಲ್ಲಿ ಅವನು ವಿಪರೀತ ವೇದನೆಯನ್ನು ಅನುಭವಿಸಿದಾಗ ದೇವರಿಗೆ ಹೇಗೆ ಅನಿಸಿದಿರ್ದಬೇಕೆಂದು ಯೋಚಿಸಿರಿ. “ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈ ಬಿಟ್ಟಿದ್ದೀ” ಎಂದು ಯೇಸು ಕೂಗಿದ್ದಾಗ ಯೆಹೋವನ ಪ್ರತಿಕ್ರಿಯೆ ಹೇಗಿದ್ದಿರಬೇಕೆಂದು ಊಹಿಸಿರಿ. (ಮತ್ತಾಯ 27:39, 46) ಆದರೂ ಯೆಹೋವ ದೇವರು ತನ್ನ ಪುತ್ರನು ತನ್ನ ನೀತಿಯ ನಿರ್ದೋಷಿಕರಣದಲ್ಲಿ ಸಮಗ್ರತೆಯನ್ನು ರುಜುಪಡಿಸಲಿಕ್ಕಾಗಿ ಆ ರೀತಿ ಸಾಯುವಂತೆ ಬಿಡಬೇಕೆಂದು ನ್ಯಾಯವು ಕೇಳಿ ಕೊಂಡಿತು. ಇದಲ್ಲದೆ, ತನ್ನ ಪುತ್ರನು ಸಾಯುವಂತೆ ಅನುಮತಿಸಿದ್ದರ ಮೂಲಕ ಯೆಹೋವನು ನಮಗೆ ಒಂದು ರಕ್ಷಣಾ ಮಾರ್ಗವನ್ನು ತೆರೆದನು.
14 ಆದುದರಿಂದ, ಯೆಹೋವನಿಗೂ ಆತನ ಕುಮಾರನಿಗೂ ನಮ್ಮಲ್ಲಿರುವ ಕೃತಜ್ಞತೆಯು ನಾವು ಬಹಿರಂಗವಾಗಿ, “ನಮ್ಮ ದೇವರಿಗೂ ಯಜ್ಞದ ಕುರಿಯಾದಾತನಿಗೂ ನಮಗೆ ರಕ್ಷಣೆಯುಂಟಾದದ್ದಕ್ಕಾಗಿ ಸ್ತೋತ್ರ” ಎಂದು ಒಪ್ಪಿ ಕೊಳ್ಳುವಂತೆ ಪ್ರೇರಿಸ ಬೇಕು. (ಪ್ರಕಟನೆ 7:10) ಈ ರೀತಿಯ ಸಕಾರಾತ್ಮದ ಪ್ರತಿಕ್ರಿಯೆ ತೋರಿಸುವುದರಿಂದ, “ಆತನು [ಯೆಹೋವನು] ನಡಿಸುವದೆಲ್ಲಾ ನ್ಯಾಯ” ಎಂಬ ಮೋಶೆಯ ಮಾತುಗಳನ್ನು ನಾವು ನಂಬುತ್ತೇವೆಂದು ತೋರಿಸುತ್ತೇವೆ. (ಧರ್ಮೋಪದೇಶ ಕಾಂಡ 32:4) ನಾವು ಇದನ್ನು ಒಪ್ಪಿ, ಬಳಿಕ ಮಾನವನ ರಕ್ಷಣೆಗಾಗಿ ದೇವರು ಮಾಡಿರುವ ನ್ಯಾಯ ಮಾರ್ಗಗಳನ್ನು ಅನುಸರಿಸುವಲ್ಲಿ ಯೆಹೋವನ ಮತ್ತು ಆತನ ಪುತ್ರನ ಹೃದಯಗಳಿಗೆ ಸಂತೋಷವನ್ನು ತರುವೆವು!
15. ಯೇಸು ನಿಕೋದೇಮನಿಗೆ ಹೇಳಿದ ಮಾತುಗಳು ನಮಗೆ ಹೇಗೆ ಅರ್ಥಗರ್ಭಿತವಾಗಿವೆ?
15 ನಮ್ಮ ಜೊತೆ ವಿಶ್ವಾಸಿಗಳು 1870 ಗಳಲ್ಲಿ ಈ ಪ್ರಾಯಶ್ಚಿತ್ತ ಯಜ್ಞದ ಬಗ್ಗೆ ನಿಶ್ಚಲವಾದ ಸ್ಥಾನವನ್ನು ತೆಗೆದುಕೊಂಡದ್ದಕ್ಕಾಗಿ ನಾವು ಸಂತೋಷಿಗಳಾಗಿರುವುದಿಲ್ಲವೇ? ನಾವು ಇಂದು, ಮಾನವ ರಕ್ಷಣೆಗಾಗಿ ದೇವರ ನ್ಯಾಯ ಮತ್ತು ಪ್ರೀತಿಯ ಮಾರ್ಗವನ್ನು ಅಷ್ಟೇ ದೃಢತೆಯಿಂದ ಹಿಡಿದುಕೊಂಡಿರುವ ಒಂದು ಸಂಘಟನೆಗೆ ಸೇರಿರುವುದರಿಂದ ಆನಂದಿತರಲ್ಲವೇ? ನಾವು ಹಾಗಿರುವಲ್ಲಿ, ಯೇಸು ನಿಕೊದೇಮನಿಗೆ ಹೇಳಿದ ವಿಷಯಕ್ಕೆ ವಿಶೇಷ ಗಮನ ಕೊಡುವೆವು: “ದೇವರು ತನ್ನ ಮಗನ ಮುಖಾಂತರ ಲೋಕಕ್ಕೆ ರಕ್ಷಣೆಯಾಗಬೇಕೆಂದು ಕಳುಹಿಸಿಕೊಟ್ಟನೇ ಹೊರತು ತೀರ್ಪು ಮಾಡುವುದಕ್ಕಾಗಿ ಕಳುಹಿಸಲಿಲ್ಲ. ಆತನನ್ನು ನಂಬುವವನಿಗೆ ತೀರ್ಪು ಆಗುವುದಿಲ್ಲ. . . . ಆದರೆ ಸತ್ಯವನ್ನು ಅನುಸರಿಸಿ ನಡಿಯುವವನು ತಾನು ದೇವರಿಂದ ನಡಿಸಿಕೊಂಡು ತನ್ನ ಕೃತ್ಯಗಳನ್ನು ಮಾಡಿದ್ದೇನೆಂದು ತೋರಿಬರುವಂತೆ ಬೆಳಕಿಗೆ ಬರುತ್ತಾನೆ.” ದೇವರ ಪ್ರತಿಕೂಲ ತೀರ್ಪಿನಿಂದ ನಾವು ತಪ್ಪಿಸಿಕೊಳ್ಳಬೇಕಾದರೆ ನಾವು ಮಗನಲ್ಲಿ ವಿಶ್ವಾಸವನ್ನು ‘ದೇವರಿಗೆ ಹೊಂದಿಕೊಳ್ಳುವ ಕೆಲಸಗಳನ್ನು ಮಾಡಿ’ ರುಜುಪಡಿಸಬೇಕು.—ಯೋಹಾನ 3:17, 18, 21.
16. ಯೇಸುವಿನ ಶಿಷ್ಯರು ಸ್ವರ್ಗೀಯ ತಂದೆಯನ್ನು ಹೇಗೆ ಮಹಿಮೆ ಪಡಿಸಬಹುದು?
16 ಯೇಸು ಹೇಳಿದ್ದು: “ನೀವು ಬಹಳ ಫಲಕೊಡುವದರಿಂದಲೇ ನನ್ನ ತಂದೆಗೆ ಮಹಿಮೆ ಉಂಟಾಗುವುದು; ಮತ್ತು ನನ್ನ ಶಿಷ್ಯರಾಗುವಿರಿ; ನಾನು ನನ್ನ ತಂದೆಯ ಆಜ್ಞೆಗಳನ್ನು ಕೈಕೊಂಡು ನಡೆದು ಆತನ ಪ್ರೀತಿಯಲ್ಲಿ ನೆಲೆಗೊಂಡಿರುವ ಮೇರೆಗೆ ನೀವು ನನ್ನ ಆಜ್ಞೆಗಳನ್ನು ಕೈಕೊಂಡು ನಡೆದರೆ ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುವಿರಿ.” (ಯೋಹಾನ 15:8, 10) ಈ ಆಜ್ಞೆಗಳಲ್ಲಿ ಕೆಲವು ಯಾವುವು? ಇವುಗಳಲ್ಲಿ ಒಂದು ಯೋಹಾನ 13:34, 35 ರಲ್ಲಿ ಕಂಡು ಬರುತ್ತದೆ. ಅಲ್ಲಿ ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ. ಏನಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು. . . . ನಿಮ್ಮಲ್ಲಿ ಒಬ್ಬರ ಮೇಲೊಬ್ಬರಿಗೆ ಪ್ರೀತಿ ಇದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” ಪ್ರೀತಿಯ ಫಲ ಯೆಹೋವನ ಸಾಕ್ಷಿಗಳಲ್ಲಿ ತೋರಿಬರುತ್ತದೆ. ಯೇಸು ಹೀಗೂ ಆಜ್ಞಾಪಿಸಿದನು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ. ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ.” (ಮತ್ತಾಯ 28:19, 20) ನೀವು ವ್ಯಕ್ತಿಪರರಾಗಿ ‘ದೇವರಿಗೆ ಹೊಂದಿಕೊಂಡಿರುವ ಕೆಲಸಗಳನ್ನು’ ಮಾಡುತ್ತಿದ್ದೀರೋ?
17. ಸಾರುವ ಮತ್ತು ಕಲಿಸುವ ಕೆಲಸವು ದೇವರ ನ್ಯಾಯದ ಪ್ರದರ್ಶನೆಯೆಂಬದನ್ನು ಯಾವ ಫಲಿತಾಂಶ ತೋರಿಸುತ್ತದೆ?
17 ಯೇಸುವಿನ ಹಿಂಬಾಲಕರು ಸಾರುವ ಮತ್ತು ಕಲಿಸುವ ಕೆಲಸವನ್ನು ಮಾಡುವಂತೆ ಬಿಟ್ಟದರಲ್ಲಿ ಯೆಹೋವನ ನ್ಯಾಯದ ಮಾರ್ಗವು ಒಂದೇ ಒಂದು ವರ್ಷದಲ್ಲಿ ಯೆಹೋವನ ಸಾಕ್ಷಿಗಳು ಸಾಧಿಸಿದ ಕೆಲಸದಿಂದ ಪ್ರತ್ಯಕ್ಷವಾಗುತ್ತದೆ. 1989 ರಲ್ಲಿ 2,63,855 ಹೊಸ ಶಿಷ್ಯರು ದೀಕ್ಷಾಸ್ನಾನ ಹೊಂದಿದರು! ಇದು ನಿಮ್ಮ ಹೃದಯಕ್ಕೆ ಸಂತೋಷ ತರುವುದಿಲ್ಲವೇ?
ನ್ಯಾಯದ ದೇವರು ಶೀಘ್ರವೇ ಕಾರ್ಯಕ್ಕಿಳಿಯುವನು
18. ಯೆಹೋವನ ಜನರ ಹಿಂಸೆಯ ವೀಕ್ಷಣದಲ್ಲಿ ಯಾವ ಪ್ರಶ್ನೆಗಳು ಏಳಬಹುದು?
18 ಸಾಕ್ಷಿಯ ಕೆಲಸವು ವಿರೋಧವಿಲ್ಲದೆ ಮುಂದುವರಿಸಲ್ಪಟ್ಟಿರುವುದಿಲ್ಲ. ಯೇಸು ತನ್ನ ಅನುಯಾಯಿಗಳಿಗೆ ಹೇಳಿದ್ದು: “ಅವರು ನನ್ನನ್ನು ಹಿಂಸೆ ಪಡಿಸಿದರೆ ನಿಮ್ಮನ್ನು ಸಹಾ ಹಿಂಸೆ ಪಡಿಸುವರು.” (ಯೋಹಾನ 15:20) ಯೆಹೋವನ ಸಾಕ್ಷಿಗಳ ಆಧುನಿಕ ಚರಿತ್ರೆ ಆ ಮಾತುಗಳನ್ನು ದೃಢೀಕರಿಸುತ್ತದೆ. ನಿಷೇಧ, ಸೆರೆಮನೆ, ಹೊಡೆತ ಮತ್ತು ಚಿತ್ರಹಿಂಸೆಯನ್ನು ಸಹಾ ದೇಶದೇಶಗಳಲ್ಲಿ ಸಾಕ್ಷಿಗಳು ಅನುಭವಿಸಿದ್ದಾರೆ. ಹಬಕ್ಕೂಕನ ಪ್ರವಾದನಾ ಮಾತುಗಳು ಪುನಃ ನಮ್ಮ ಮನಸ್ಸಿಗೆ ಬರುತ್ತವೆ: “ಧರ್ಮೋಪದೇಶವು ಜಡವಾಗಿದೆ. ನ್ಯಾಯವು ಎಂದಿಗೂ ಸಾಗದು.” ಆದುದರಿಂದ, ಹಲವು ಸಲ ಯೆಹೋವನ ಜನರೇ ಹೀಗೆ ಕೇಳಬಹುದು: ‘ಮೋಸದಿಂದ ವ್ಯವಹರಿಸುವವರನ್ನು ಯೆಹೋವನು ಕೇವಲ ನೋಡುತ್ತಾ ಸುಮ್ಮನಿರುವದೇಕೆ? ದುಷ್ಟನು ತನಗಿಂತ ನೀತಿವಂತನನ್ನು ನುಂಗುತ್ತಿರುವಾಗ ಆತನು ಮೌನವಿರುವದೇಕೆ?”—ಹಬಕ್ಕೂಕ 1:4, 13.
19. ದೇವರ ದೃಷ್ಟಿಕೋನದಿಂದ ವಿಷಯಗಳನ್ನು ತಿಳಿಯುವಂತೆ ಸಹಾಯ ಮಾಡಲು ಯೇಸು ಯಾವ ದೃಷ್ಟಾಂತವನ್ನು ಕೊಟ್ಟನು?
19 ಇಂಥ ಪ್ರಶ್ನೆಗಳನ್ನು ಉತ್ತರಿಸುವಂತೆ ಸಹಾಯ ಮಾಡಲು ಮತ್ತು ನಾವು ದೇವರ ದೃಷ್ಟಿಕೋನದಿಂದ ವಿಷಯವನ್ನು ನೋಡುವಂತೆ ಸಾಧ್ಯಮಾಡಲು ಯೇಸು ಒಂದು ದೃಷ್ಟಾಂತವನ್ನು ಕೊಟ್ಟನು. ಲೂಕ 17:22-37 ರಲ್ಲಿ ಈ ವ್ಯವಸ್ಥೆಯ ಅಂತ್ಯವನ್ನು ಗುರುತಿಸುವ ಹಿಂಸಾತ್ಮಕ ಸಂಗತಿಗಳನ್ನು ಯೇಸು ವರ್ಣಿಸಿದನು. ನೋಹನ ದಿನದ ಜಲಪ್ರಲಯಕ್ಕೆ ಮತ್ತು ಲೋಟನ ದಿನಗಳಲ್ಲಿ ಸೊದೋಮ್ ಗಮೋರಗಳ ನಾಶಕ್ಕೆ ಮುಂಚಿತವಾಗಿದ್ದ ಪರಿಸ್ಥಿತಿಗಳಿಗೆ ಅವು ಸಮಾನಾಂತರವಾಗಿ ಇರುವವೆಂದು ಅವನಂದನು. ಮತ್ತು ಲೂಕ 18:1-5 ವರ್ಣಿಸಿರುವಂತೆ, ಅವನು ಶಿಷ್ಯರಿಗೆ “ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥನೆ ಮಾಡುತ್ತಿರಬೇಕೆಂಬದಕ್ಕೆ ಆತನು ಅವರಿಗೆ ಒಂದು ಸಾಮ್ಯವನ್ನು ಹೇಳಿದನು.” ಅತ್ಯಾವಶ್ಯಕತೆ ಇದ್ದಿದ್ದ ಒಬ್ಬ ವಿಧವೆ ಮತ್ತು ಅವಳ ಅವಶ್ಯಕತೆಗಳನ್ನು ಪೂರೈಸುವ ಸಾಮರ್ಥ್ಯವಿದ್ದ “ಒಬ್ಬ ನ್ಯಾಯಾಧಿಪತಿಯ” ಕುರಿತು ಯೇಸು ಹೇಳಿದನು. ಆ ವಿಧವೆಯು, “ನ್ಯಾಯವಿಚಾರಣೆ ಮಾಡಿ ನನ್ನ ವಿರೋಧಿಯಿಂದ ನನ್ನನ್ನು ಬಿಡಿಸು” ಎಂದು ಬೇಡುತ್ತಾ ಇದ್ದಳು. ಅವಳು ಪಟ್ಟು ಹಿಡಿದದರಿಂದ ನ್ಯಾಯಾಧಿಪತಿಯು ಕೊನೆಗೆ ‘ಅವಳಿಗೆ ನ್ಯಾಯ ದೊರಕುವಂತೆ ನೋಡಿದನು.’
20. ಯೇಸುವಿನ ದೃಷ್ಟಾಂತದಲ್ಲಿ ನಮಗೆ ಯಾವ ಪಾಠವಿದೆ?
20 ಇಂದು ನಮಗೆ ಇದರ ಪಾಠವೇನು? ಆ ಅನೀತಿಯ ನ್ಯಾಯಾಧೀಶನಿಗೆ ಯೆಹೋವನನ್ನು ಪರಸ್ಪರ ವೈದೃಶ್ಯವಾಗಿಡುತ್ತಾ ಯೇಸು ಹೇಳಿದ್ದು: “ಅನ್ಯಾಯಗಾರನಾದ ಈ ನ್ಯಾಯಾಧಿಪತಿ ಅಂದುಕೊಂಡದ್ದನ್ನು ಆಲೋಚಿಸಿಕೊಳ್ಳಿರಿ. ದೇವರಾದುಕೊಂಡವರು ಆತನಿಗೆ ಹಗಲು ರಾತ್ರಿ ಮೊರೆಯಿಡುವಲ್ಲಿ ಆತನು ಅವರ ವಿಷಯದಲ್ಲಿ ತಡ ಮಾಡಿದರೂ ಅವರ ನ್ಯಾಯವನ್ನು ತೀರಿಸದೆ ಇರುವನೇ? ಅವರಿಗೆ ಬೇಗ ನ್ಯಾಯ ತೀರಿಸುವನೆಂದು ನಿಮಗೆ ಹೇಳುತ್ತೇನೆ.”—ಲೂಕ 18: 6-8ಎ.
21. ನಮ್ಮ ವೈಯಕ್ತಿಕ ಸಮಸ್ಯೆಗಳನ್ನು ನಾವು ಹೇಗೆ ನೋಡಿ ಪರಿಹರಿಸಬೇಕು?
21 ನಮ್ಮ ವೈಯಕ್ತಿಕ ಸಮಸ್ಯೆಗಳ ವಿಷಯದಲ್ಲಿ, ನಮ್ಮ ವಿಜ್ಞಾಪನೆಗೆ ತಡವಾಗಿಯೋ ಎಂದು ತೋರಿಬಂದು ಸಿಕ್ಕುವ ಉತ್ತರಗಳು ದೇವರ ಅನಿಚ್ಛೆಯ ಕಾರಣದಿಂದಲ್ಲ ಎಂದು ಸದಾ ಜ್ಞಾಪಿಸಿಕೊಳ್ಳಿರಿ. (2 ಪೇತ್ರ 3:9) ನಾವು ಆ ವಿಧವೆಯಂತೆ ಹಿಂಸೆ ಮತ್ತು ಅನ್ಯಾಯವನ್ನು ಅನುಭವಿಸುತ್ತಿರುವಲ್ಲಿ, ಹೇಗೂ ಅಂತಿಮವಾಗಿ ನಮಗೆ ನ್ಯಾಯ ಸಿಕ್ಕೇ ಸಿಕ್ಕುವಂತೆ ದೇವರು ನೋಡಿಕೊಳ್ಳುವನೆಂಬ ನಂಬಿಕೆ ನಮಗಿರ ಸಾಧ್ಯವಿದೆ. ನಾವು ಇಂಥ ನಂಬಿಕೆಯನ್ನು ಹೇಗೆ ತೋರಿಸಬಲ್ಲೆವು? ಎಡೆಬಿಡದೆ ಪ್ರಾರ್ಥಿಸುವ ಮೂಲಕ ಮತ್ತು ನಂಬಿಗಸ್ತ ವರ್ತನೆಯನ್ನು ಕಾಪಾಡಿಕೊಂಡು ನಮ್ಮ ಪ್ರಾರ್ಥನೆಗಳಂತೆ ನಡಿಯುವ ಮೂಲಕವೇ. (ಮತ್ತಾಯ 10:22; 1 ಥೆಸಲೊನೀಕ 5:17) ನಮ್ಮ ನಂಬಿಗಸ್ತಿಕೆಯ ಮೂಲಕ ಭೂಮಿಯಲ್ಲಿ ನಂಬಿಕೆ ಇದೆಯೆಂದೂ, ನಿಜ ಪ್ರೀತಿಯವರು ಇದ್ದಾರೆಂದೂ, ಮತ್ತು ನಾವು ಅವರ ಮಧ್ಯೆ ಇದ್ದೇವೆಂದೂ ರುಜುಪಡಿಸುವೆವು.—ಲೂಕ 18:8ಬಿ.
“ಜನಾಂಗಗಳಿರಾ, ಆತನ ಜನರೊಂದಿಗೆ ಹರ್ಷಿಸಿರಿ”
22. ಯಾವ ವಿಜಯ ಸರ್ವದೊಂದಿಗೆ ಮೋಶೆ ತನ್ನ ಗೀತವನ್ನು ಮುಗಿಸಿದನು?
22 ಅನೇಕ ಶತಕಗಳ ಹಿಂದೆ, ಮೋಶೆ ವಿಜಯ ಸ್ವರದಿಂದ ತನ್ನ ಗೀತವನ್ನು ಮುಗಿಸಿದನು: “ಜನಾಂಗಗಳಿರಾ, ಆತನ ಜನರೊಂದಿಗೆ ಹರ್ಷಿಸಿರಿ. ಏಕಂದರೆ ಆತನು ತನ್ನ ಸೇವಕರ ರಕ್ತಕ್ಕೆ ಮುಯ್ಯಿತೀರಿಸುವನು. ಮತ್ತು ಆತನು ತನ್ನ ವಿರೋಧಿಗಳಿಗೆ ಸೇಡು ತೀರಿಸಿ ನಿಶ್ಚಯವಾಗಿಯೂ ತನ್ನ ಜನರ ದೇಶಕ್ಕಾಗಿ ದೋಷಪರಿಹಾರ ಮಾಡುವನು.” (ಧರ್ಮೋಪದೇಶಕಾಂಡ 32:43) ಯೆಹೋವನ ಸೇಡಿನ ದಿನ ಹೆಚ್ಚೆಚ್ಚು ಹತ್ತರಿಸುತ್ತಾ ಇದೆ. ಆತನಿನ್ನೂ ತಾಳ್ಮೆ ಮತ್ತು ನ್ಯಾಯವನ್ನು ಆಚರಿಸುತ್ತಾನೆಂಬದಕ್ಕೆ ನಾವೆಷ್ಟು ಆಭಾರಿಗಳು!
23. ದೇವ ಜನರ ಸಂತೋಷದಲ್ಲಿ ಭಾಗಿಗಳಾಗಿರುವವರಿಗೆ ಯಾವ ಸಂತೋಷದ ಪರಿಣಾಮ ಕಾಯುತ್ತದೆ?
23 ಜನರು ‘ಪಶ್ಚಾತ್ತಾಪ ಪಡಲು’ ದಾರಿ ಇನ್ನೂ ತೆರೆದಿರುವದಾದರೂ ಹಾಳು ಮಾಡಲು ಸಮಯವಿಲ್ಲ. ಪೇತ್ರನು ಎಚ್ಚರಿಸಿದ್ದು: “ಯೆಹೋವನ ದಿನವು ಕಳ್ಳನಂತೆ ಬರುತ್ತದೆ.” (2 ಪೇತ್ರ 3:9, 10) ಈ ದುಷ್ಟ ವ್ಯವಸ್ಥೆ ಬೇಗನೇ ನಾಶವಾಗುವಂತೆ ದೇವರ ನ್ಯಾಯ ಕೇಳಿಕೊಳ್ಳುತ್ತದೆ. ಹಾಗೆ ಸಂಭವಿಸುವಾಗ ನಾವು, “ಜನಾಂಗಗಳಿರಾ, ಆತನ ಜನರೊಂದಿಗೆ ಹರ್ಷಿಸಿರಿ” ಎಂಬ ಸಂತೋಷದ ಕರೆಗೆ ಪ್ರತ್ಯುತ್ತರ ಕೊಟ್ಟವರ ಮಧ್ಯೆ ಕಂಡು ಬರುವಂತಾಗಲಿ. ಹೌದು, ದೇವರ ಮಾರ್ಗಗಳೆಲ್ಲಾ ನ್ಯಾಯ ಎಂಬದನ್ನು ನೋಡಿರುವ ಹರ್ಷಭರಿತ ಜನರ ನಡುವೆ ನಾವಿರುವಂತಾಗಲಿ! (w89 3/1)
ಹೇಗೆ ಉತ್ತರಿಸುವಿರಿ?
◻ ಮೋಶೆಯ ಧರ್ಮಶಾಸ್ತ್ರ ದೇವರ ನ್ಯಾಯದಲ್ಲಿ ನಮ್ಮ ನಂಬಿಕೆಯನ್ನೇಕೆ ಬಲಪಡಿಸಬೇಕು?
◻ ದೇವರ ನ್ಯಾಯ ಮಾರ್ಗಗಳಿಗೆ ಪ್ರತಿಕ್ರಿಯೆ ತೋರಿಸುವಂತೆ ನಮ್ಮನ್ನು ಯಾವುದು ಪ್ರಚೋದಿಸಬೇಕು?
◻ ಯೆಹೋವನನ್ನು ಹೇಗೆ ಮಹಿಮೆಪಡಿಸ ಸಾಧ್ಯವಿದೆ?
◻ ಇಂದು ನಿಜ ಸಂತೋಷವನ್ನು ಎಲ್ಲಿ ಮಾತ್ರ ಕಂಡುಕೊಳ್ಳಬಹುದು?
[ಪುಟ 11 ರಲ್ಲಿರುವ ಚಿತ್ರ]
“ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಕೆಯಾಗಿದ್ದಾರೆಂದು ಈಗ ಸಂದೇಹವಿಲ್ಲದೆ ನನಗೆ ತಿಳಿದುಬಂದಿದೆ.”—ಅಪೊಸ್ತಲರ ಕೃತ್ಯ 10:34, 35.
[ಪುಟ 14 ರಲ್ಲಿರುವ ಚಿತ್ರ]
ತಾನು ಆಯ್ದುಕೊಂಡವರು ಕೂಗಿ ಕರೆಯುವಾಗ ಅವರಿಗೆ ನ್ಯಾಯ ಸಿಕ್ಕುವಂತೆ ದೇವರು ನೋಡುವನು