ಆಡಳಿತ ಮಂಡಲಿಯೊಂದಿಗೆ ಇಂದು ಸಹಕರಿಸುವುದು
“ಅಂಥವನನ್ನು ಅವನು ತನ್ನ ಎಲ್ಲಾ ಆಸ್ತಿಯ ಮೇಲೆ ನೇಮಿಸುವನು.”—ಲೂಕ 12:44.
1. ಸಾ.ಶ. 33 ರಲ್ಲಿ ಕ್ರಿಸ್ತನು ಯಾವ ರಾಜ್ಯದಲ್ಲಿ ಆಳತೊಡಗಿದನು, ಮತ್ತು ಯಾರ ಮೂಲಕ?
ಸಭೆಯ ಶಿರಸ್ಸಾದ ಯೇಸುವು ಸಾ.ಶ. 33 ರ ಪಂಚಾಶತಮದಲ್ಲಿ ತನ್ನ ಆತ್ಮಾಭಿಷಿಕ್ತ ಆಳುಗಳ ರಾಜ್ಯದಲ್ಲಿ ಕಾರ್ಯಶೀಲತೆಯಿಂದ ಆಳ ತೊಡಗಿದನು. ಇದು ಹೇಗೆ? ಪವಿತ್ರಾತ್ಮ, ದೇವದೂತರು ಮತ್ತು ದೃಶ್ಯ ಆಡಳಿತ ಮಂಡಲಿಯ ಮೂಲಕವೇ. ಅಪೊಸ್ತಲ ಪೌಲನು ಸೂಚಿಸಿದಂತೆ, ದೇವರು ‘ಅಭಿಷಿಕ್ತರನ್ನು ಅಂಧಕಾರದ ಅಧಿಕಾರದಿಂದ ಬಿಡಿಸಿ ತನ್ನ ಪ್ರೀತಿಯ ಪುತ್ರನ ರಾಜ್ಯದೊಳಗೆ ಸ್ಥಾನಾಂತರಿಸಿದನು.”—ಕೊಲೊಸ್ಸೆ 1:13-18; ಅಪೊಸ್ತಲರ ಕೃತ್ಯ 2:33, 42; 15:2; ಗಲಾತ್ಯ 2:1, 2; ಪ್ರಕಟನೆ 22:16.
2. 1914 ರಲ್ಲಿ, ಯಾವ ಹೆಚ್ಚು ದೊಡ್ಡ ರಾಜ್ಯದಲ್ಲಿ ಕ್ರಿಸ್ತನು ಆಳತೊಡಗಿದನು?
2 “ಅನ್ಯ ದೇಶಗಳವರ ಸಮಯಗಳ” ಅಂತ್ಯದಲ್ಲಿ, ಯೆಹೋವನು ಕ್ರಿಸ್ತನ ರಾಜ್ಯದ ಅಧಿಕಾರವನ್ನು ಹೆಚ್ಚಿಸಿ ಅದನ್ನು ಕ್ರೈಸ್ತ ಸಭೆಯ ಹೊರಗೂ ವ್ಯಾಪಿಸಿದನು. (ಲೂಕ 21:24) ಹೌದು, 1914 ನೇ ವರ್ಷದಲ್ಲಿ ದೇವರು ತನ್ನ ಪುತ್ರನಿಗೆ “ಅನ್ಯಜನಗಳ” ಮೇಲೆ, “ಲೋಕದ ರಾಜ್ಯಾಧಿಕಾರದ” ಮೇಲೆ, ಹೀಗೆ, ಸರ್ವ ಮಾನವ ಕುಲದ ಮೇಲೆ ರಾಜ್ಯಾಧಿಕಾರವನ್ನು ಕೊಟ್ಟನು.—ಕೀರ್ತನೆ 2:6-8; ಪ್ರಕಟನೆ 11:15.
“ತನ್ನ ಎಲ್ಲಾ ಆಸ್ತಿಯ ಮೇಲೆ” ನೇಮಿಸಿದ್ದು
3, 4. (ಎ) ಯೇಸುವಿನ ಮೊಹರಿನ ಸಾಮ್ಯದಲ್ಲಿ ಶ್ರೀಮಂತನನ್ನು ಯಾರು ಪ್ರತಿನಿಧೀಕರಿಸಿದನು? (ಬಿ) 1918 ಮತ್ತು 1919 ರಲ್ಲಿ ಯಾವ ವಿಕಸನಗಳು ನಡೆದವು?
3 ಇಲ್ಲಿ ಯೇಸುವಿನ ಶ್ರೀಮಂತ ಮನುಷ್ಯನ ಸಾಮ್ಯ ಗಮನಕ್ಕೆ ಅರ್ಹವಾಗಿದೆ. (ಲೂಕ 19:11-27) ರಾಜ್ಯಾಧಿಕಾರವನ್ನು ಪಡೆಯಲಿಕ್ಕಾಗಿ ದೇಶಾಂತರಕ್ಕೆ ಪ್ರಯಾಣಿಸುವ ಮೊದಲು ಆ ಮನುಷ್ಯನು ತನ್ನ ಆಳುಗಳಿಗೆ ವ್ಯಾಪಾರಕ್ಕಾಗಿ ಹಣ (ಮೊಹರಿ) ಕೊಟ್ಟು ಹೋದನು. ಹಿಂದಿರುಗಿ ಬಂದಾಗ, ಕ್ರಿಸ್ತನನ್ನು ಪ್ರತಿನಿಧೀಕರಿಸುವ ಈ ಮನುಷ್ಯನು “ತಾನು ಹಣವನ್ನು ಕೊಟ್ಟಿದ್ದ ಆಳುಗಳು ವ್ಯಾಪಾರದಿಂದ ಎಷ್ಟೆಷ್ಟು ಲಾಭ ಸಂಪಾದಿಸಿದರೆಂದು ತಿಳುಕೊಳ್ಳುವದಕ್ಕಾಗಿ” ಅವರನ್ನು ತನ್ನ ಮುಂದೆ ಕರೆದನು. (ಲೂಕ 19:15) ಯೇಸು ರಾಜ್ಯಾಧಿಕಾರ ಪಡೆದ ಮೇಲೆ ಇದು ಹೇಗಾಯಿತು?
4 1918 ರಲ್ಲಿ, ಸಿಂಹಾಸನಕ್ಕೇರಿದ್ದ ರಾಜ ಯೇಸು ಕ್ರಿಸ್ತನು, ಮೊದಲೇ ಕ್ರೈಸ್ತ ಪ್ರಪಂಚದ ಚರ್ಚುಗಳನ್ನು ಬಿಟ್ಟುಬಂದಿದ್ದ ಮತ್ತು ಈಗ ತಮ್ಮ ಯಜಮಾನನ ಭೂ ಆಸ್ತಿಯನ್ನು ನೋಡಿಕೊಳ್ಳುವುದರಲ್ಲಿ ಮಗ್ನರಾಗಿದ್ದ ಕ್ರೈಸ್ತರ ಒಂದು ಚಿಕ್ಕ ಗುಂಪನ್ನು ಕಂಡನು. ಅವರನ್ನು ಅಗ್ನಿಯಿಂದಲೋ ಎಂಬಂತೆ ಪರೀಕ್ಷಿಸಿದ ಬಳಿಕ ಯೇಸು, 1919 ರಲ್ಲಿ, ತನ್ನ ಆಳುಗಳಿಗೆ ಹೆಚ್ಚಿನ ಅಧಿಕಾರವನ್ನು ಕೊಟ್ಟನು. (ಮಲಾಕಿಯ 3:1-4; ಲೂಕ 19:16-19) ಅವನು ಅವರನ್ನು “ತನ್ನ ಎಲ್ಲಾ ಆಸ್ತಿಗಳ ಮೇಲೆ” ನೇಮಿಸಿದನು.—ಲೂಕ 12:42-44.
“ಹೊತ್ತುಹೊತ್ತಿಗೆ ಅಶನಕ್ಕೆ ಒದಗಿಸುವಿಕೆಗಳು”
5, 6. (ಎ) ಕ್ರಿಸ್ತನ ಮನೆವಾರ್ತೆಗಾರನು ಯಾವ ಹೆಚ್ಚಿನ ನೇಮಕವನ್ನು ಪಡೆದನು? (ಬಿ) 1914 ರ ನಂತರ ಯಾವ ಪ್ರವಾದನೆಗಳು ನೆರವೇರಲಿದ್ದವು, ಮತ್ತು ಅವುಗಳ ನೆರವೇರಿಕೆಯಲ್ಲಿ ಮನೆವಾರ್ತೆ ವರ್ಗವು ಹೇಗೆ ಕ್ರಿಯಾಶೀಲವಾಗಿ ಭಾಗವಹಿಸಬೇಕಿತ್ತು?
5 ಆಳುವ ರಾಜ ಯೇಸು ಕ್ರಿಸ್ತನು ಭೂಮಿಯ ತನ್ನ ಮನೆವಾರ್ತೆಗಾರ ಅಥವಾ ಗೃಹ ವ್ಯವಸ್ಥಾಪಕನಿಗೆ ವಿಸ್ತರಿಸಲ್ಪಟ್ಟ ನೇಮಕವನ್ನು ಕೊಟ್ಟನು. ಭೂಮಿಯ ಸರ್ವ ಜನರ ಮೇಲೆ ಆಳುವಂತೆ ಅಧಿಕಾರ ಕೊಡಲ್ಪಟ್ಟ ಕಿರೀಟಧಾರಿ ಅರಸನ ಪ್ರತಿನಿಧ್ಯಾತ್ಮಕ “ರಾಯಭಾರಿಗಳಾಗಿ” ಅವರಿರಬೇಕಿತ್ತು. (2 ಕೊರಿಂಥ 5:20; ದಾನಿಯೇಲ 7:14) ಈಗ ಅವರ ಸಾಮೂಹಿಕ ಜವಾಬ್ದಾರಿ, ಕೇವಲ ಯೇಸು ಕ್ರಿಸ್ತನ ಅಭಿಷಿಕ್ತ ಸೇವಕ ಸಮುದಾಯಕ್ಕೆ “ಹೊತ್ತು ಹೊತ್ತಿಗೆ ಅಶನಕ್ಕೆ ಒದಗಿಸುವಿಕೆಗಳನ್ನು” ಮಾಡುವುದೇ ಆಗಿರಲಿಲ್ಲ. (ಲೂಕ 12:42) ಈಗ ಅವರು, 1914 ರಲ್ಲಿ ರಾಜ್ಯ ಸ್ಥಾಪನೆಯ ಬಳಿಕ ನೆರವೇರಲಿದ್ದ ಪ್ರವಾದನೆಯ ನೆರವೇರಿಕೆಯಲ್ಲಿ ಆಸಕ್ತ ಭಾಗವನ್ನು ತೆಗೆದುಕೊಳ್ಳಬೇಕಾಗಿತ್ತು.
6 ಆದರೆ ಇದರ ಕಾರ್ಯರೂಪದ ಅರ್ಥವೇನು? ‘ರಾಜ್ಯ ಸುವಾರ್ತೆಯನ್ನು ನಿವಾಸಿತ ಭೂಮಿಯಲ್ಲಿ ಸಾರುವುದನ್ನು’ ವಿಕಸಿಸಬೇಕೆಂದೇ ಇದರ ಅರ್ಥ. (ಮತ್ತಾಯ 24:14) ಇದಲ್ಲದೆ, ಸೈತಾನನ ದುಷ್ಟ ಸಂಸ್ಥೆ ಮತ್ತು ಅದರ ಬೆಂಬಲಿಗರ ವಿರುದ್ಧ ತೀರ್ಪಿನ ಬಲಾಢ್ಯ ಸಂದೇಶಗಳನ್ನು ಪ್ರಕಟಿಸುವದು ಎಂದು ಅರ್ಥ. ಇದರ ಪರಿಣಾಮವಾಗಿ ‘ಜನಾಂಗಗಳು ನಡುಗು’ ವಂತೆ ಆಯಿತು. (ಹಗ್ಗಾಯ 2:7; ಯೋಹಾನ 10:16) 1935 ರ ಬಳಿಕ “ಮಹಾ ಸಮೂಹವು” ಲೋಕ ವ್ಯಾಪಕವಾಗಿ ಯೆಹೋವನ ಸಂಸ್ಥೆಯ ಒಳಗೆ ಬರತೊಡಗಿತು. (ಪ್ರಕಟನೆ 7:9, 10) ಇದು ಸಂಸ್ಥೆಯಲ್ಲಿ ಪ್ರಗತಿಪರವಾದ ಅಭಿವೃದ್ಧಿಯು ಆಗುವಂತೆ ಮಾಡಿತು. ಸಾಂಕೇತಿಕ ಭಾಷೆಯಲ್ಲಿ, ಕಲ್ಲುಗಳ ಸ್ಥಾನದಲ್ಲಿ ಕಬ್ಬಿಣ, ಮರದ ಸ್ಥಾನದಲ್ಲಿ ತಾಮ್ರ, ಕಬ್ಬಿಣದ ಸ್ಥಾನದಲ್ಲಿ ಬೆಳ್ಳಿ ಮತ್ತು ತಾಮ್ರದ ಸ್ಥಾನದಲ್ಲಿ ಚಿನ್ನ ಭರ್ತಿಯಾಗಲಿಕ್ಕಿತ್ತು. (ಯೆಶಾಯ 60:17) ಇವೆಲ್ಲವೂ 1919 ರಿಂದ, ಯಾರು ತನ್ನ ಭೂರಾಜ್ಯಾಭಿರುಚಿಗಳನ್ನು ಅಥವಾ ಸೊತ್ತುಗಳನ್ನು ತನ್ನ ನಂಬಿಗಸ್ತ ಆಳು ಮತ್ತು ಅದರ ಆಡಳಿತ ಮಂಡಲಿಗೆ ಒಪ್ಪಿಸಿದ್ದಾನೋ ಆ ಯೇಸು ಕ್ರಿಸ್ತನ ಕ್ರಿಯಾಶೀಲ ಮತ್ತು ಒತ್ತಾದ ಮಾರ್ಗದರ್ಶನದಿಂದ ನಡೆದಿದೆ.
7. ಮನೆವಾರ್ತೆಗಾರನ ಹೆಚ್ಚಿದ ಜವಾಬ್ದಾರಿಯಲ್ಲಿ ಏನೆಲ್ಲಾ ಸೇರಿತ್ತು?
7 ಯಜಮಾನನ ಆಳು, ಮನೆವಾರ್ತೆಗಾರ ಅಥವಾ ಗೃಹ ವ್ಯವಸ್ಥಾಪಕನ ಮೇಲೆ ಬಿದ್ದ ಈ ವೃದ್ಧಿಕೊಂಡ ಜವಾಬ್ದಾರಿಯಲ್ಲಿ ತೀವ್ರ ಬರವಣಿಗೆ ಮತ್ತು ಸಂಪಾದಕೀಯ ಚಟುವಟಿಕೆಗಳು ಕೂಡಿಕೊಂಡಿದವ್ದೆಂದು ನಾವು ಸುಲಭವಾಗಿ ತಿಳಿಯಬಹುದು. ಆತ್ಮಿಕ ಅಶನವನ್ನು ತಕ್ಕ ಸಮಯದಲ್ಲಿ ಕ್ರಮವಾಗಿ ವಾಚ್ಟವರ್ ಪತ್ರಿಕೆಯಲ್ಲಿ ಪ್ರಕಟಿಸಲ್ಪಡಬೇಕಾಗಿತ್ತು. 1919 ರಲ್ಲಿ ದ ಗೋಲ್ಡನ್ ಏಜ್ (ಆ ಮೇಲೆ ಕಾನ್ಸೊಲೇಷನ್ ಮತ್ತು ಬಳಿಕ ಅವೇಕ್! ಎಂದು ಕರೆಯಲಾದ ಸಂಗಾತಿ ಪತ್ರಿಕೆ) ಎಂಬ ಪತ್ರಿಕೆ ಸಾರ್ವಜನಿಕರ ಕುತೂಹಲ ಕೆರಳಿಸಲಿಕ್ಕಾಗಿ ಮತ್ತು “ಮನೆಯವರನ್ನು” ಬಲಪಡಿಸಲಿಕ್ಕಾಗಿ ಪ್ರಕಟಿಸಲ್ಪಟ್ಟಿತು. (ಮತ್ತಾಯ 24:45) ಗತವರ್ಷಗಳಲ್ಲಿ ಪುಸ್ತಕ, ಚಿಕ್ಕ ಪುಸ್ತಕ ಮತ್ತು ಟ್ರ್ಯಾಕ್ಟ್ಗಳನ್ನು ಪ್ರವಾಹದೋಪಾದಿ ತಯಾರಿಸಲಾಗಿದೆ.
ಮುಂದುವರಿದ ಪರಿಷ್ಕಾರ
8. ಆಡಳಿತ ಮಂಡಲಿಯ ಸದಸ್ಯರನ್ನು ಮೊದಲು ಯಾರೊಂದಿಗೆ ಗುರುತಿಸಲಾಯಿತು, ಮತ್ತು 1944 ರಲ್ಲಿ ವಾಚ್ಟವರ್ ಪತ್ರಿಕೆ ಯಾವ ಹೇಳಿಕೆ ನೀಡಿತು?
8 ಈ “ಅಂತ್ಯಕಾಲ” ದಲ್ಲಿರುವ ನಾವು ಹಿಂತಿರುಗಿ ನೋಡಲಾಗಿ, ಆಡಳಿತ ಮಂಡಲಿಯ ಸದಸ್ಯರು ಮೊದಲು ವಾಚ್ ಟವರ್ ಸೊಸೈಟಿಯ ಸಂಪಾದಕೀಯ ಮಂಡಲಿಯ ಒಂದಿಗೆ ಒತ್ತಾಗಿ ಗುರುತಿಸಲ್ಪಟ್ಟರೆಂಬದು ನಮಗೆ ಆಶ್ಚರ್ಯವಾಗುವುದಿಲ್ಲ. (ದಾನಿಯೇಲ 12:4) ನವಂಬರ 1, 1944 ರ ವಾಚ್ಟವರ್ ಪತ್ರಿಕೆಯಲ್ಲಿ ಪ್ರಕಟವಾದ “ಇಂದಿನ ದೇವಪ್ರಭುತ್ವ ಸಾಲುನೆಲೆ” ಎಂಬ ಲೇಖನ ಹೇಳಿದ್ದು: “ನ್ಯಾಯ ಸಮ್ಮತವಾಗಿಯೇ, ಪ್ರಕಟಿತ ಬೈಬಲ್ ಸತ್ಯತೆಗಳ ಪ್ರಕಾಶನ ಯಾರಿಗೆ ಒಪ್ಪಿಸಲ್ಪಟ್ಟಿತ್ತೋ ಅವರನ್ನು, ದೇವರನ್ನು ಆತ್ಮ ಮತ್ತು ಸತ್ಯದಿಂದ ಆರಾಧಿಸುವ ಅಪೇಕ್ಷೆಯುಳ್ಳ ಮತ್ತು ಹಸಿದು ಬಾಯಾರಿರುವ ಇತರರಿಗೆ ಪ್ರಕಟಿತ ಸತ್ಯಗಳನ್ನು ಹಬ್ಬಿಸುವುದರಲ್ಲಿ ಐಕ್ಯದಿಂದ ಸೇವೆಮಾಡುವ ಸರ್ವರನ್ನು ನಡಿಸಲು ಕರ್ತನು ಆಯ್ದುಕೊಂಡ ಆಡಳಿತ ಮಂಡಲಿಯಾಗಿ ನೋಡಲಾಯಿತು.”
9. ಆ ಬಳಿಕ ಆಡಳಿತ ಮಂಡಲಿಯು ಯಾರೊಂದಿಗೆ ಒತ್ತಾಗಿ ಗುರುತಿಸಲ್ಪಟ್ಟಿತು, ಮತ್ತು ಏಕೆ?
9 ಪತ್ರಿಕೆ ಮತ್ತು ಬೈಬಲ್ ಅಧ್ಯಯನ ಸಹಾಯಕಗಳನ್ನು ಪ್ರಕಟಿಸುವುದರಲ್ಲಿ ಶಾಸನಬದ್ಧ ಅವಶ್ಯಕತೆಗಳು ಸೇರಿದ್ದವು. ಆದುದರಿಂದ, ವಾಚ್ಟವರ್ ಬೈಬಲ್ ಎಂಡ್ ಟ್ರ್ಯಾಕ್ಟ್ ಸೊಸೈಟಿಯನ್ನು ಸ್ಥಾಪಿಸಿ ಅದನ್ನು ಅಮೇರಿಕದ ಪೆನ್ಸಿಲ್ವೇನಿಯಾ ರಾಜ್ಯದಲ್ಲಿ ರಿಜಿಸ್ಟರ್ ಮಾಡಲಾಯಿತು. ಅನೇಕ ವರ್ಷಗಳಲ್ಲಿ, ಬೈಬಲ್ ಅಧ್ಯಯನ ಸಹಾಯಕಗಳನ್ನು ಪ್ರಕಟಿಸಿ ಕರ್ತನ ಜನರಿಂದ ಭ್ಯೂವ್ಯಾಪಕವಾಗಿ ಉಪಯೋಗಿಸಲ್ಪಟ್ಟ ಈ ಸಂಸ್ಥೆಯ ಏಳು ಸದಸ್ಯರ ಡೈರೆಕ್ಟರ್ ಮಂಡಲಿಯೊಂದಿಗೆ ದೃಶ್ಯ ಆಡಳಿತ ಮಂಡಲಿಯನ್ನು ಗುರುತಿಸಲಾಯಿತು.
10, 11. 1944 ರಲ್ಲಿ ಯಾವ ಪರಿಷ್ಕಾರ ನಡೆಯಿತು, ಮತ್ತು ವಾಚ್ಟವರ್ ಇದರ ಕುರಿತು ಯಾವ ಹೇಳಿಕೆ ಕೊಟ್ಟಿತು?
10 ಸೊಸೈಟಿಯ ಏಳು ಜನ ಡೈರೆಕ್ಟರು ನಂಬಿಗಸ್ತ ಕ್ರೈಸ್ತರಾಗಿದ್ದರು. ಆದರೆ ಶಾಸನಬದ್ಧ ಸಂಸ್ಥೆಯಲ್ಲಿ ಅವರಿಗಿದ್ದ ಪಾತ್ರ, ಆಡಳಿತ ಮಂಡಲಿಯಲ್ಲಿ ಅವರಿಗಿದ್ದ ಸ್ಥಾನಗಳು ವಾಚ್ಟವರ್ ಸೊಸೈಟಿಯ ಶಾಸನಬದ್ಧ ಸದಸ್ಯರುಗಳು ಚುನಾಯಿಸುವುದರಿಂದ ಸಿಕ್ಕಿದವು ಎಂದು ಸೂಚಿಸುವಂತಿರುವುದು. ಇದಲ್ಲದೆ, ಆದಿಯಲ್ಲಿ ಇಂಥ ಸದಸ್ಯತನ ಮತ್ತು ಮತನೀಡುವ ಹಕ್ಕುಗಳನ್ನು ಕಾಯಿದೆಗನುಸಾರ, ಸೊಸೈಟಿಗೆ ವಂತಿಗೆ ಕೊಡುತ್ತಿದ್ದ ಕೆಲವರಿಗೆ ಮಾತ್ರ ಕೊಡಲಾಗಿತ್ತು. ಈ ಏರ್ಪಾಡಿನಲ್ಲಿ ಬದಲಾವಣೆ ಮಾಡಬೇಕಾದ ಅವಶ್ಯವಿತ್ತು. ಇದನ್ನು ಒಕ್ಟೋಬರ 2, 1944 ರಲ್ಲಿ ನಡೆದ ವಾಚ್ಟವರ್ ಸೊಸೈಟಿಯ ಪೆನ್ಸಿಲ್ವೇನಿಯಾ ಕಾರ್ಪೊರೇಷನಿನ ವಾರ್ಷಿಕ ಕೂಟದಲ್ಲಿ ಮಾಡಲಾಯಿತು. ಇನ್ನು ಮುಂದೆ ಸದಸ್ಯತನ ಹಣದ ಮೇಲೆ ಹೊಂದಿಕೊಂಡಿರದಂತೆ ಸೊಸೈಟಿಯ ಕಾಯಿದೆಗಳನ್ನು ತಿದ್ದುಪಡಿ ಮಾಡಲಾಯಿತು. ಯೆಹೋವನ ನಂಬಿಗಸ್ತ ಸೇವಕರುಗಳಿಂದ ಸದಸ್ಯರನ್ನು ಆಯ್ದುಕೊಳ್ಳಲಾಗುವುದು. ಮತ್ತು ಇವರಲ್ಲಿ, ನ್ಯೂಯೋರ್ಕಿನ ಬ್ರೂಕಿನ್ಲಿನಲ್ಲಿರುವ ಸೊಸೈಟಿಯ ಪ್ರಧಾನ ಕಚೇರಿಯಲ್ಲಿ ಮತ್ತು ಲೋಕವ್ಯಾಪಕವಾಗಿರುವ ಶಾಖಾ ಆಫೀಸುಗಳಲ್ಲಿ ಪೂರ್ಣ ಸಮಯ ಸೇವೆ ಮಾಡುತ್ತಿರುವ ಅನೇಕರು ಸೇರಿಕೊಂಡಿದ್ದಾರೆ.
11 ಈ ಹೊಸ ಏರ್ಪಾಡಿನ ಕುರಿತು ವರದಿಮಾಡುತ್ತಾ, ನವಂಬರ 1, 1944 ರ ವಾಚ್ಟವರ್ ಹೇಳಿದ್ದು: “ವಂತಿಗೆಯಿಂದ ಪ್ರತಿನಿಧೀಕರಿಸಲ್ಪಡುವ ಹಣಕ್ಕೆ ಯಾವ ನಿರ್ಣಯಿಸುವ ಹಕ್ಕೂ ಇರಬಾರದು, ಅದಕ್ಕೆ ಭೂಮಿಯ ಮೇಲಿರುವ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯನ್ನು ತುಂಬಿಸುವ ವಿಷಯದಲ್ಲಿ ಸಂಬಂಧವೇ ಇರಬಾರದು. . . . ಯೆಹೋವ ದೇವರಿಂದ ಕ್ರಿಸ್ತ ಯೇಸುವಿನ ಮೂಲಕ ಬರುವ ಕ್ರಿಯಾಶೀಲ ಶಕ್ತಿಯಾದ ಪವಿತ್ರಾತ್ಮವೇ ಈ ವಿಷಯವನ್ನು ನಿರ್ಣಯಿಸಿ ನಡಿಸಬೇಕು.”
ಡೈರೆಕ್ಟರ ಮಂಡಲಿಗಿಂತ ಪ್ರತ್ಯೇಕ
12. ಆಡಳಿತ ಮಂಡಲಿಯ ಮೇಲ್ವಿಚಾರದಲ್ಲಿ ಮಾಡಿದ ಪರಿಷ್ಕಾರಗಳನ್ನು ಯೆಹೋವನು ಆಶೀರ್ವದಿಸಿದನೆಂದು ಯಾವುದು ತೋರಿಸುತ್ತದೆ?
12 ಮುಂದಿನ ದಶಕಗಳಲ್ಲಿ ಸಾರುವ ಕೆಲಸದಲಾದ್ಲ ಪ್ರಗತಿಯು ಆಡಳಿತ ಮಂಡಲಿಯ ಕುರಿತಾದ ತಿಳುವಳಿಕೆಯಲ್ಲಿ ಆದ ಈ ಮೇಲಿನ ಪರಿಷ್ಕಾರವನ್ನು ಯೆಹೋವನು ಆಶೀರ್ವದಿಸಿದನೆಂದು ರುಜುಮಾಡುತ್ತದೆ. (ಜ್ಞಾನೋಕ್ತಿ 10:22) 1944 ರಲ್ಲಿ ಭೂಮಿಯ ರಾಜ್ಯ ಘೋಷಕರ 1 ಲಕ್ಷ 30 ಸಾವಿರಕ್ಕಿಂತಲೂ ಕಡಿಮೆಯಾಗಿದ್ದ ಸಂಖ್ಯೆ 1970 ರಲ್ಲಿ 14,83,430 ಕ್ಕೇರಿತು! ಆದರೆ ಇನ್ನೂ ಹೆಚ್ಚಿನ ಮಾರ್ಪಾಟು ಬರಲಿಕ್ಕಿತ್ತು.
13. (ಎ) 1971 ರ ವರೆಗೆ ಆಡಳಿತ ಮಂಡಲಿಯ ಸ್ಥಿತಿಗತಿ ಏನಾಗಿತ್ತು? (ಬಿ) 1971 ರ ಸೊಸೈಟಿಯ ವಾರ್ಷಿಕ ಕೂಟದಲ್ಲಿ ಏನು ನಡೆಯಿತು?
13 1971ರ ವರೆಗೆ ಆಡಳಿತ ಮಂಡಲಿಯವರನ್ನು ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಪೆನ್ಸಿಲ್ವೇನಿಯಾದ ಏಳು ಮಂದಿ ಡೈರೆಕ್ಟರರೊಂದಿಗೆ ಇನ್ನೂ ಗುರುತಿಸಲಾಗುತ್ತಿತ್ತು. ಲೋಕ ವ್ಯಾಪಕವಾದ ಸೊಸೈಟಿಯ ಶಾಖೆಗಳ ಕಾರ್ಯಕ್ಕೆ ಸಂಬಂಧಿಸಿದ ಮುಖ್ಯ ಜವಾಬ್ದಾರಿಯನ್ನು ಸೊಸೈಟಿಯ ಅಧ್ಯಕ್ಷರೇ ಹೊತ್ತಿದ್ದರು. ಒಕ್ಟೋಬರ 1, 1971ರ ವಾರ್ಷಿಕ ಕೂಟದಲ್ಲಿ ಹೊಸ ಯುಗಾರಂಭದ ಭಾಷಣಗಳು ಕೊಡಲ್ಪಟ್ಟವು. ಸೊಸೈಟಿಯ ಅಧ್ಯಕ್ಷರು “ಪವಿತ್ರ ಸ್ಥಳವನ್ನು ಸರಿಯಾದ ಸ್ಥಿತಿಗೆ ತರುವುದು” ಎಂಬ ಭಾಷಣವನ್ನೂ ಉಪಾಧ್ಯಕ್ಷರು “ಶಾಸನಬದ್ಥ ಕಾರ್ಪೊರೇಶನಿಗಿಂತ ಪ್ರತ್ಯೇಕವಾದ ಆಡಳಿತ ಮಂಡಲಿ” ಎಂಬ ಭಾಷಣವನ್ನೂ ಕೊಟ್ಟರು. ಹಾಗಾದರೆ ಆಡಳಿತ ಮಂಡಲಿ ಮತ್ತು ಶಾಸನಬದ್ಧ ಕಾರ್ಪೊರೇಷನ್ಗಳ ಮಧ್ಯೆ ಏನು ವ್ಯತ್ಯಾಸವಿದೆ?
14. ಶಾಸನಬದ್ಧ ಕಾರ್ಪೊರೇಷನ್ ಮತ್ತು ಆಡಳಿತ ಮಂಡಲಿ ಇವುಗಳಲ್ಲಿ ಯಾವ ವ್ಯತ್ಯಾಸಗಳಿವೆ?
14 ಆಗಲೇ ಹೇಳಿರುವಂತೆ, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಅಫ್ ಪೆನ್ಸಿಲ್ವೇನಿಯಾದಲ್ಲಿ ಏಳು ಮಂದಿಗೆ ಸೀಮಿತವಾಗಿರುವ ಡೈರೆಕ್ಟರ್ ಮಂಡಲಿಯಿದೆ. ಈ ಸಮರ್ಪಿತ ಕ್ರೈಸ್ತ ಪುರುಷರನ್ನು ಮೂರು ವರ್ಷಗಳ ಕಾಲಾವಧಿಗೆ 500 ಸದಸ್ಯರನ್ನು ಮೀರದ ಮತ್ತು ಅಧಿಕಾಂಶ ಅಭಿಷಿಕ್ತ ಕ್ರೈಸ್ತರಾಗಿರುವ ಕಾರ್ಪೊರೇಷನ್ ಸದಸ್ಯರು ಚುನಾಯಿಸುತ್ತಾರೆ. ಇದಲ್ಲದೆ, ಕಾರ್ಪೊರೇಷನಿನ ಅಸ್ತಿತ್ವ ನಿಯಮಿತ ಸ್ಥಳದಲ್ಲಿ ಮುಖ್ಯ ಕಚೇರಿಯಿದ್ದು, ಕೇವಲ ಶಾಸನಬದ್ಧವಾಗಿರುವುದರಿಂದ ಇದನ್ನು ಕೈಸರನು, ಅಂದರೆ ಸರಕಾರವು ರದ್ದುಮಾಡಬಹುದು. (ಮಾರ್ಕ 12:17) ಆದರೆ ಆಡಳಿತ ಮಂಡಲಿ ವಿಧಿಬದ್ಧ ಪ್ರಮಾಣಪತ್ರವಲ್ಲ. ಅದರ ಸದಸ್ಯರು ಚುನಾಯಿತರಲ್ಲ. ಅವರು ಯೆಹೋವ ದೇವರ ಮತ್ತು ಯೇಸು ಕ್ರಿಸ್ತನ ಮೇಲ್ವಿಚಾರದಲ್ಲಿ ಪವಿತ್ರಾತ್ಮದ ಮೂಲಕ ನೇಮಿಸಲ್ಪಟ್ಟವರು. (ಅಪೊಸ್ತಲರ ಕೃತ್ಯ 20:28 ಹೋಲಿಸಿ) ಇದಲ್ಲದೆ, ಆಡಳಿತ ಮಂಡಲಿಯ ಸದಸ್ಯರು ಒಂದು ನಿರ್ಬಂಧಕವಾದ ಭೂವಿವರಣಾ ಸ್ಥಳ ಅಥವಾ ಮುಖ್ಯ ಕಾರ್ಯಾಲಯವಿಲ್ಲದ ಆತ್ಮ ನಿಯಮಿತ ಪುರುಷರಾಗಿದ್ದಾರೆ.
15. ಡಿಸೆಂಬರ್ 15, 1971 ರ ವಾಚ್ಟವರ್ನಲ್ಲಿ ಸಂಸ್ಥೆಯ ಕುರಿತು ಯಾವ ಹೇಳಿಕೆ ಕೊಡಲಾಯಿತು, ಮತ್ತು ಆಧುನಿಕ ದಿನದ ಆಡಳಿತ ಮಂಡಲಿಯ ಕುರಿತು ಏನು ಹೇಳಬಹುದು?
15 ತಿಳುವಳಿಕೆಯಲ್ಲಿ ಇಂಥ ಪರಿಷ್ಕಾರದ ಸಂಬಂಧದಲ್ಲಿ ಡಿಸೆಂಬರ್ 15, 1971 ರ ವಾಚ್ಟವರ್ ಹೇಳಿದ್ದು: “ಕೃತಜ್ಞತಾ ಸೂಚಕ ವಿಷಯವೇನಂದರೆ, ಇದು ಒಬ್ಬ ಮನುಷ್ಯನ ಧಾರ್ಮಿಕ ಸಂಸ್ಥೆಯಲ್ಲವೆಂದೂ ಆದರೆ ಇದಕ್ಕೆ ಆತ್ಮಾಭಿಷಿಕ್ತ ಕ್ರೈಸ್ತರ ಒಂದು ಆಡಳಿತ ಮಂಡಲಿ ಇದೆಂದೂ ಯೆಹೋವನ ಕ್ರೈಸ್ತ ಸಾಕ್ಷಿಗಳು ತಿಳಿದು ಪ್ರತಿಪಾದಿಸುತ್ತಾರೆ.” ಅಭಿಷಿಕ್ತ ಆಳು ವರ್ಗದ ಮತ್ತು ಬೇರೆ ಕುರಿಗಳಲ್ಲಿ ಅವರಿಗಿರುವ ಲಕ್ಷಾಂತರ ಮಂದಿ ಸಂಗಾತಿಗಳ ಮೇಲಿರುವ ಆಡಳಿತ ಮಂಡಲಿಯು ತನ್ನ ಮೇಲ್ವಿಚಾರಕ ಸ್ಥಾನದ ಜಾಗ್ರತೆ ವಹಿಸುವಂತೆ ಪ್ರಗತಿಪರವಾಗಿ ಸಜ್ಜುಗೊಳಿಸಲ್ಪಟ್ಟಿದೆ.
16. 1971 ರಿಂದ ಕ್ರಿಸ್ತನ ಭೂಸೊತ್ತುಗಳು ಹೇಗೆ ವೃದ್ಧಿಯಾಗಿವೆ, ಮತ್ತು ಆಡಳಿತ ಮಂಡಲಿಯಿಂದ ಪ್ರತಿನಿಧೀಕರಿಸಲ್ಪಟ್ಟಿರುವ ನಂಬಿಗಸ್ತನೂ ವಿವೇಕಿಯೂ ಆದ ಆಳಿಗೆ ಅವನು ಒಪ್ಪಿಸಿರುವ ಕೆಲವು ಸೊತ್ತುಗಳು ಯಾವುವು?
16 ರಾಜ ಯೇಸು ಕ್ರಿಸ್ತನ ಭೂಸೊತ್ತುಗಳು ಸತತವಾಗಿ ಬೆಳೆದಿವೆ. 1971 ರಿಂದ, ಸಾಕ್ಷಿಗಳ ಸಂಖ್ಯೆ 16 ಲಕ್ಷದಿಂದ 1989 ರಲ್ಲಿ 37 ಲಕ್ಷಕ್ಕೂ ಹೆಚ್ಚು ಉನ್ನತಿಗೆ ಹಾರಿದೆ. ಇದು ದೇವರ ಆಶೀರ್ವಾದದ ಎಷ್ಟು ಸೊಗಸಾದ ರುಜುವಾತು! (ಯೆಶಾಯ 60:22) ಈ ಬೆಳವಣಿಗೆ ಸೊಸೈಟಿಯ ಮುಖ್ಯ ಕಾರ್ಯಾಲಯ ಮತ್ತು ಶಾಖೆಗಳಲ್ಲಿ ಸೌಕರ್ಯಗಳ ವ್ಯಾಪಕತೆಯನ್ನೂ ಉತ್ಪಾದನೆ ಮತ್ತು ವಿತರಣೆಯ ನವೀಕರಣವನ್ನೂ ಕೋರಿತು. ಇದರ ಪರಿಣಾಮವಾಗಿ, ಭೂಮಿಯಲ್ಲೆಲ್ಲಾ ಅನೇಕ ರಾಜ್ಯ ಸಭಾಗೃಹಗಳೂ ಎಸೆಂಬ್ಲಿ ಹಾಲ್ಗಳೂ ಕಟ್ಟಲ್ಪಟ್ಟವು. ಈ ಸಮಯದಲ್ಲೆಲ್ಲಾ ಆಡಳಿತ ಮಂಡಲಿ ಸಾರುವ ಕೆಲಸ, ಬೈಬಲ್ ಅಧ್ಯಯನ ಸಲಕರಣೆಗಳನ್ನು ತಯಾರಿಸುವುದು ಮತ್ತು ಬ್ರಾಂಚ್, ಡಿಸ್ಟ್ರಿಕ್ಟ್, ಸರ್ಕಿಟ್ ಮತ್ತು ಸಭೆಗಳಲ್ಲಿ ಮೇಲ್ವಿಚಾರಕರನ್ನು ನೇಮಿಸುವುದು—ಈ ಜವಾಬ್ದಾರಿಕೆಗಳನ್ನೆಲ್ಲಾ ವಹಿಸುತ್ತಾ ಮುಂದುವರಿದದೆ. ಕ್ರಿಸ್ತನು, ಆಡಳಿತ ಮಂಡಲಿಯಿಂದ ಪ್ರತಿನಿಧೀಕರಿಸಲ್ಪಟ್ಟಿರುವ ನಂಬಿಗಸ್ತ ಮತ್ತು ವಿವೇಕಿಯಾಗಿರುವ ಆಳಿನ ವಶಕ್ಕೆ ಒದಗಿಸಿದ ರಾಜ್ಯಾಭಿರುಚಿಗಳು ಇವೇ.
17. 1971, 1974 ಮತ್ತು 1976 ರಲ್ಲಿ ಮೇಲ್ವಿಚಾರಣೆಯಲ್ಲಿ ಇನ್ನಾವ ಅಭಿವೃದ್ಧಿಗಳನ್ನು ಮಾಡಲಾಯಿತು?
17 ಒಂದನೆಯ ಶತಮಾನದ ಆಡಳಿತ ಮಂಡಲಿಯನ್ನು ವಿಕಸಿಸಿದಾಗ ಅಪೊಸ್ತಲರಲ್ಲದೆ ಇತರರೂ ಸೇರಿಸಲ್ಪಟ್ಟರು. ಸುನ್ನತಿಯ ಪ್ರಶ್ನೆ ತೀರ್ಮಾನಿಸಲ್ಪಟ್ಟಾಗ ಆ ಮಂಡಲಿಯಲ್ಲಿ “ಯೆರೂಸಲೇಮಿನಲ್ಲಿದ್ದ ಅಪೊಸ್ತಲರು ಮತ್ತು ಸಭೆಯ ಹಿರಿಯರು” ಇದ್ದರೆಂದು ವ್ಯಕ್ತವಾಗುತ್ತದೆ. (ಅಪೊಸ್ತಲರ ಕೃತ್ಯ 15:1, 2) ಇದಕ್ಕೆ ಸಮಾನವಾಗಿ, ಈಗಿನ ಆಡಳಿತ ಮಂಡಲಿಯನ್ನು 1971 ರಲ್ಲಿ ಮತ್ತು ಪುನಃ 1974 ರಲ್ಲಿ ವಿಕಸಿಸಲಾಯಿತು. ಈ ಮೇಲ್ವಿಚಾರಣೆಯ ಕೆಲಸವನ್ನು ಸುಗಮವಾಗಿ ಮಾಡಲಿಕ್ಕಾಗಿ ಜನವರಿ 1, 1976 ರಿಂದ ಐದು ಕಮಿಟಿಗಳು ಕೆಲಸ ನಡಿಸುವಂತೆ ಆಡಳಿತ ಮಂಡಲಿ ಏರ್ಪಡಿಸಿತು. ಪ್ರತಿಯೊಂದು ಕಮಿಟಿಯಲ್ಲಿ ಚರ್ಚಾ ವಿಷಯದಲ್ಲಿ ಸಮಾನಾಧಿಕಾರವುಳ್ಳ 3 ರಿಂದ ಆರು ಸದಸ್ಯರಿದ್ದಾರೆ. ಪ್ರತಿಯೊಂದು ಕಮಿಟಿಯ ಅಧ್ಯಕ್ಷನು ಒಂದು ವರ್ಷ ಆ ಸ್ಥಾನದಲ್ಲಿರುತ್ತಾನೆ ಮತ್ತು ಆಡಳಿತ ಮಂಡಲಿಯ ಸದಸ್ಯರು ವೈಯಕ್ತಿಕವಾಗಿ ಒಂದು ಅಥವಾ ಹೆಚ್ಚು ಕಮಿಟಿಗಳಲ್ಲಿ ಸೇವೆ ಮಾಡುತ್ತಾರೆ. ಈ ಐದರಲ್ಲಿ ಪ್ರತಿಯೊಂದು ಕಮಿಟಿಯು ಕ್ರಿಸ್ತನ ಭೂಸೊತ್ತುಗಳಲ್ಲಿ ಒಂದು ನಿರ್ದಿಷ್ಟ ಭಾಗಕ್ಕೆ ವಿಶೇಷ ಗಮನ ಕೊಡುತ್ತದೆ. ಆರನೆಯ ಕಮಿಟಿಯಾದ ಅಧ್ಯಕ್ಷರ ಕಮಿಟಿಯು ಜರೂರಿಯ ಸಮಸ್ಯೆಗಳನ್ನು ನೋಡಿಕೊಳ್ಳುತ್ತದೆ. ಇದರ ಸದಸ್ಯರು ಪ್ರತಿ ವರ್ಷ ಆವರ್ತನಾ ರೀತಿಯಲ್ಲಿ ಸೇವೆಮಾಡುತ್ತಾರೆ.
ಆಡಳಿತ ಮಂಡಲಿಯೊಂದಿಗೆ ಕಾರ್ಯಶೀಲ ಸಹಕಾರ
18. ಆಡಳಿತ ಮಂಡಲಿ ಹೇಗೆ ಕಾರ್ಯನಡಿಸುತ್ತದೆ, ಮತ್ತು ಅದಕ್ಕೆ ನಮ್ಮ ಸಹಕಾರವನ್ನು ಪ್ರತಿಬಿಂಬಿಸಬಹುದಾದ ಒಂದು ವಿಧ ಯಾವುದು?
18 ಈ ಆಡಳಿತ ಮಂಡಲಿಯ ಕಮಿಟಿಗಳು ಪ್ರಾಮುಖ್ಯ ವಿಚಾರಗಳನ್ನು ಪುನರ್ವಿಚಾರಿಸಲು, ಪ್ರಾರ್ಥನಾಪೂರ್ವಕವಾದ ಪರಿಗಣನೆಯಾದ ಬಳಿಕ ತೀರ್ಮಾನಿಸಲು ಮತ್ತು ದೇವಪ್ರಭುತ್ವದ ಭಾವೀ ಚಟುವಟಿಕೆಗಳನ್ನು ಯೋಜಿಸಲು ಸಾಪ್ತಾಹಿಕ ಕೂಟಗಳನ್ನು ನಡೆಸುತ್ತಾರೆ. ಈ ಮೊದಲು ಗಮನಿಸಿರುವಂತೆ, ಒಂದು ನಿರ್ಧಾರವನ್ನು ಅಪೇಕ್ಷಿಸಿದ ಗುರುತರವಾದ ಪ್ರಶ್ನೆಯನ್ನು ಪ್ರಥಮ ಶತಕದ ಆಡಳಿತ ಮಂಡಲಿಗೆ ಕಳುಹಿಸಲಾಯಿತೆಂದು ಅಪೊಸ್ತಲರ ಕೃತ್ಯ 15 ನೇ ಅಧ್ಯಾಯ ತೋರಿಸುತ್ತದೆ. ತದ್ರೀತಿ ಇಂದು, ಮಹತ್ವದ ಪ್ರಶ್ನೆಗಳನ್ನು ವಾರಕ್ಕೊಮ್ಮೆ ಅಥವಾ ಅಗತ್ಯವಿರುವಲ್ಲಿ ಹೆಚ್ಚು ಸಲ ಕೂಡಿಬರುವ ಪೂರ್ತಿ ಆಡಳಿತ ಮಂಡಲಿಗೆ ಕಳುಹಿಸಲಾಗುತ್ತದೆ. ಈಗ 12 ಸದಸ್ಯರಿರುವ ಆಡಳಿತ ಮಂಡಲಿ ಶಾಸ್ತ್ರ ಗ್ರಂಥ ಮತ್ತು ಪ್ರಾರ್ಥನೆಯ ಮೂಲಕ ಯೆಹೋವನ ಮಾರ್ಗದರ್ಶನವನ್ನು ಕೋರುತ್ತದೆ. ಆಡಳಿತ ಮಂಡಲಿಗೆ ನಮ್ಮ ಸಹಕಾರವನ್ನು ಪ್ರತಿಬಿಂಬಿಸುವ ಒಂದು ವಿಧವು ಈ ವಿಶೇಷ ನೇಮಕತ್ವವುಳ್ಳವರನ್ನು ನಮ್ಮ ದೈನಂದಿನ ಪ್ರಾರ್ಥನೆಗಳಲ್ಲಿ ನೆನಪು ಮಾಡುವುದೇ.—ರೋಮಾಪುರ 12:12.
19. ಆಡಳಿತ ಮಂಡಲಿಯ ನಿರ್ದೇಶಗಳು ಸಭೆಯನ್ನು ಹೇಗೆ ತಲಪುತ್ತವೆ?
19 ಈ ಆಡಳಿತ ಮಂಡಲಿಯ ಶಿಕ್ಷಣ ಮತ್ತು ತೀರ್ಮಾನಗಳು ಸಭೆಗೆ ಹೇಗೆ ತಲಪುತ್ತವೆ? ಒಂದನೆಯ ಶತಮಾನದ ಆಡಳಿತ ಮಂಡಲಿಯ ಸದಸ್ಯರು ದೇವರಾತ್ಮದ ಸಹಾಯದಿಂದ ತೀರ್ಮಾನಕ್ಕೆ ಬಂದಾಗ ಅವರು ಸಭೆಗಳಿಗೆ ಪತ್ರವನ್ನು ಕಳುಹಿಸಿದರು. (ಅಪೊಸ್ತಲರ ಕೃತ್ಯ 15:22-29) ಆದರೂ ಇದು ಇಂದು ಮುಖ್ಯವಾಗಿ ಕ್ರಿಸ್ತೀಯ ಪ್ರಕಾಶನಗಳ ಮೂಲಕ ಬರುತ್ತದೆ.
20. (ಎ) 1976ರಲ್ಲಿ ಇನ್ನಾವ ಸಂಘಟನಾ ಪರಿಷ್ಕಾರವನ್ನು ಮಾಡಲಾಯಿತು? (ಬಿ) ಬ್ರಾಂಚ್ ಕಮಿಟಿಗಳು ಆಡಳಿತ ಮಂಡಲಿಯೊಂದಿಗೆ ಹೇಗೆ ಸಹಕರಿಸುತ್ತವೆ?
20 ಫೆಬ್ರವರಿ 1, 1976 ರಿಂದ ವಾಚ್ಟವರ್ ಸೊಸೈಟಿಯ ಪ್ರತಿಯೊಂದು ಶಾಖೆಯಲ್ಲಿ ಆಡಳಿತ ಮಂಡಲಿಯಿಂದ ನೇಮಿತರಾದ ಸಮರ್ಥರಾದ ಪುರುಷರ ಬ್ರಾಂಚ್ ಕಮಿಟಿ ಇದೆ. ತಮ್ಮ ಶಾಖೆಯ ಕೆಳಗಿರುವ ದೇಶದಲ್ಲಿ ಅಥವಾ ದೇಶಗಳಲ್ಲಿ ಆಡಳಿತ ಮಂಡಲಿಯ ಪ್ರತಿನಿಧಿಗಳಾಗಿರುವ ಇವರು ನಂಬಿಗಸ್ತರೂ ನಿಷ್ಟೆಯ ಪುರುಷರೂ ಆಗಿರತಕ್ಕದ್ದು. ಇದು ನಮಗೆ, ಪ್ರಾಚೀನ ಇಸ್ರಾಯೇಲ್ಯರಲ್ಲಿ ಮೋಶೆ ನ್ಯಾಯ ತೀರಿಸುವಂತೆ ಸಹಾಯ ಮಾಡಿದ ಸಮರ್ಥರಾದ, ದೇವಭಯವಿದ್ದ ಮತ್ತು ವಿಶ್ವಾಸಾರ್ಹ ಪುರುಷರ ಜ್ಞಾಪಕ ಹುಟ್ಟಿಸುತ್ತದೆ. (ವಿಮೋಚನಕಾಂಡ 18:17-26) ಸೊಸೈಟಿಯ ಪುಸ್ತಕ, ಪತ್ರಿಕೆ, ನಮ್ಮ ರಾಜ್ಯದ ಸೇವೆ ಮತ್ತು ಸ್ಥಳೀಕ ಸಮಸ್ಯೆಗಳನ್ನು ಪರಿಹರಿಸುವ ಸಾಧಾರಣ ಹಾಗೂ ವಿಶೇಷ ಪತ್ರಗಳನ್ನು ಕೊಟ್ಟಿರುವ ಆದೇಶಗಳನ್ನು ಬ್ರಾಂಚ್ ಕಮಿಟಿಯ ಸದಸ್ಯರು ಕಾರ್ಯರೂಪಕ್ಕೆ ಹಾಕುತ್ತಾರೆ. ಪ್ರತಿ ದೇಶದಲ್ಲಿ ಕೆಲಸದ ಪ್ರಗತಿ ಮತ್ತು ಏಳಲಿರುವ ಸಮಸ್ಯೆಗಳ ಕುರಿತು ಇವೊತ್ತಿನ ತನಕದ ಸಮಾಚಾರವನ್ನು ಬ್ರಾಂಚ್ ಕಮಿಟಿಗಳು ಆಡಳಿತ ಮಂಡಲಿಗೆ ಮುಟ್ಟಿಸುತ್ತವೆ. ಲೋಕದ ಸರ್ವಕಡೆಗಳಿಂದ ಬರುವ ಇಂಥ ವರದಿಗಳು, ಸೊಸೈಟಿಯ ಪುಸ್ತಕಗಳಲ್ಲಿ ಯಾವ ವಿಷಯವನ್ನು ಪರಿಗಣಿಸಬೇಕೆಂದು ತೀರ್ಮಾನಿಸಲು ಆಡಳಿತ ಮಂಡಲಿಗೆ ಸಹಾಯ ನೀಡುತ್ತದೆ.
21. ಸಂಚಾರಿ ಸೇವಕರು ಹೇಗೆ ನೇಮಿಸಲ್ಪಡುತ್ತಾರೆ, ಮತ್ತು ಅವರ ಕರ್ತವ್ಯಗಳಲ್ಲಿ ಏನೆಲ್ಲಾ ಒಳಗೂಡಿವೆ?
21 ಪವಿತ್ರಾತ್ಮದ ನಡಿಸುವಿಕೆಯಿಂದ ಬ್ರಾಂಚ್ ಕಮಿಟಿಗಳು ಪಕ್ವತೆಯುಳ್ಳ ಆತ್ಮಿಕ ಪುರುಷರನ್ನು ಸರ್ಕಿಟ್ ಮತ್ತು ಡಿಸ್ಟ್ರಿಕ್ಟ್ ಸೇವಕರಾಗುವಂತೆ ಶಿಫಾರಸು ಮಾಡುತ್ತವೆ. ಆಡಳಿತ ಮಂಡಲಿಯಿಂದ ನೇರವಾಗಿ ನೇಮಕಗೊಂಡ ಬಳಿಕ ಇವರು ಸಂಚಾರೀ ಮೇಲ್ವಿಚಾರಕರಾಗಿ ಸೇವೆ ಮಾಡುತ್ತಾರೆ. ಈ ಸಹೋದರರು ಸರ್ಕಿಟ್ ಮತ್ತು ಸಭೆಗಳನ್ನು, ಅವರನ್ನು ಆತ್ಮಿಕ ರೀತಿಯಲ್ಲಿ ಬಲಪಡಿಸುವ ಮತ್ತು ಅವರು ಆಡಳಿತ ಮಂಡಲಿಯ ಶಿಕ್ಷಣವನ್ನು ಪ್ರಯೋಗಿಸುವಂತೆ ಸಹಾಯ ಮಾಡುವ ಉದ್ದೇಶದಿಂದ ಭೇಟಿ ಮಾಡುತ್ತಾರೆ. (ಅಪೊಸ್ತಲರ ಕೃತ್ಯ 16:4 ಹೋಲಿಸಿ; ರೋಮಾಪುರ 1:11, 12) ಈ ಸಂಚಾರಿ ಮೇಲ್ವಿಚಾರಕರು ಶಾಖಾ ಆಫೀಸಿಗೆ ವರದಿ ಸಲ್ಲಿಸುತ್ತಾರೆ. ಪವಿತ್ರಾತ್ಮ ಮತ್ತು ಪ್ರೇರಿತ ಶಾಸ್ತ್ರದ ಸಹಾಯದಿಂದ ಇವರು ಸ್ಥಳೀಕ ಹಿರಿಯರ ಜೊತೆಯಲ್ಲಿ, ಆಡಳಿತ ಮಂಡಲಿ ಅಥವಾ ಅದರ ಪ್ರತಿನಿಧಿಗಳು ನೇಮಿಸುವಂತೆ ಯೋಗ್ಯತೆಯ ಸಹೋದರರನ್ನು ಶುಶ್ರೂಷಾ ಸೇವಕರು ಮತ್ತು ಹಿರಿಯರ ಸ್ಥಾನಕ್ಕಾಗಿ ಶಿಫಾರಸು ಮಾಡುತ್ತಾರೆ.—ಫಿಲಿಪ್ಪಿ 1:1; ತೀತ 1:5; ಇದನ್ನು 1 ತಿಮೊಥಿ 3:1-13; 4:14ಕ್ಕೆ ಹೋಲಿಸಿ.
22. (ಎ) ಸಭಾಹಿರಿಯರು ಆಡಳಿತ ಮಂಡಲಿಯೊಂದಿಗೆ ಹೇಗೆ ಸಹಕರಿಸುತ್ತಾರೆ? (ಬಿ) ಯೆಹೋವನು ಈ ದೇವಪ್ರಭುತ್ವ ಏರ್ಪಾಡನ್ನು ಆಶೀರ್ವದಿಸುತ್ತಿದ್ದಾನೆಂದು ಯಾವುದು ರುಜುಪಡಿಸುತ್ತದೆ?
22 ಸರದಿಯಾಗಿ, ಹಿರಿಯರ ಮಂಡಲಿಯಲ್ಲಿರುವವರು, ‘ಯಾರ ಮಧ್ಯೆ ಪವಿತ್ರಾತ್ಮ ತಮ್ಮನ್ನು ಮೇಲ್ವಿಚಾರಕರಾಗಿ ನೇಮಿಸಿದೆಯೋ ಆ ಎಲ್ಲಾ ಮಂದೆಗೆ ಮತ್ತು ತಮಗೆ ಗಮನ ಕೊಡುತ್ತಾರೆ.’ (ಅಪೊಸ್ತಲರ ಕೃತ್ಯ 20:28) ಈ ಮೇಲ್ವಿಚಾರಕರು, ಯೆಹೋವ ದೇವರು ಮತ್ತು ಯೇಸು ಕ್ರಿಸ್ತನಿಂದ ನಂಬಿಗಸ್ತನೂ ವಿವೇಕಿಯೂ ಆದ ಆಳು ಮತ್ತು ಅದರ ಆಡಳಿತ ಮಂಡಲಿಯ ಮೂಲಕ ಬರುವ ಶಿಕ್ಷಣವನ್ನು ನಂಬಿಗಸ್ತಿಕೆಯಿಂದ ಪ್ರಯೋಗಿಸಲು ಪ್ರಯತ್ನಿಸುತ್ತಾರೆ. ಯೆಹೋವನು ಈ ದೇವಪ್ರಭುತ್ವದ ಏರ್ಪಾಡನ್ನು ಆಶೀರ್ವದಿಸುತ್ತಿದ್ದಾನೆ. ಏಕೆಂದರೆ ‘ಸಭೆಗಳು ನಂಬಿಕೆಯಲ್ಲಿ ಬಲವಾಗುತ್ತಾ ಮತ್ತು ಸಂಖ್ಯೆಯಲ್ಲಿ ವೃದ್ಧಿಯಾಗುತ್ತಾ ಹೋಗುತ್ತಿವೆ.’—ಅಪೊಸ್ತಲರ ಕೃತ್ಯ 16:5.
23. ಆಡಳಿತ ಮಂಡಲಿಯ ವಿಷಯದಲ್ಲಿ ನಾವೇನು ಮಾಡಲು ನಿರ್ಧರಿಸಬೇಕು?
23 ಈ ಆಡಳಿತ ಮಂಡಲಿಯ ಮೂಲಕ ಯೆಹೋವ ದೇವರು ಮತ್ತು ಯಜಮಾನನಾದ ಯೇಸು ಕ್ರಿಸ್ತನು ದೇವ ಜನರಿಗೆ ಬೆಂಬಲವಾಗಿದ್ದೇವೆಂದು ತೋರಿಸುವುದು ಎಷ್ಟು ಉತ್ತಮ! (ಕೀರ್ತನೆ 94:14) ಇಂಥ ಬೆಂಬಲದಿಂದಾಗಿ ಯೆಹೋವನ ಸಂಸ್ಥೆಯ ಭಾಗವಾಗಿರುವ ನಾವು ವ್ಯಕ್ತಿಗತವಾಗಿ ಪ್ರಯೋಜನ ಪಡೆಯುತ್ತೇವೆ. (ಕೀರ್ತನೆ 145:14) ಇದು, ದೇವರ ಏರ್ಪಾಡುಗಳ ಒಂದಿಗೆ ಸಹಕರಿಸುವ ನಮ್ಮ ನಿರ್ಧಾರವನ್ನು ಬಲ ಪಡಿಸಬೇಕು. “ಸಮುದ್ರದಲ್ಲಿ ನೀರು ಹೇಗೋ ಹಾಗೆ ಭೂಮಿಯಲ್ಲಿ ಯೆಹೋವನ ಜ್ಞಾನ ತುಂಬಿ ಕೊಳ್ಳುವ” ಸಮಯಕ್ಕೆ ನಾವು ಮುಂದುವರಿಯುವಾಗ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯೊಂದಿಗೆ ಸಹಕರಿಸುವವರಾಗಿ ಸದಾ ಕಂಡು ಬರುವಂತಾಗಲಿ.—ಯೆಶಾಯ 11:19. (w90 3/15)
ಜ್ಞಾಪಿಸಿಕೊಳ್ಳಲು ಮುಖ್ಯ ವಿಷಯಗಳು
◻ 1919 ರಲ್ಲಿ ಮನೆವಾರ್ತೆಗಾರ ವರ್ಗವು ಯಾವ ಹೆಚ್ಚಿನ ಜವಾಬ್ದಾರಿಕೆಗಳನ್ನು ಪಡೆಯಿತು?
◻ ಅನೇಕ ವರ್ಷಗಳಲ್ಲಿ ದೃಶ್ಯ ಆಡಳಿತ ಮಂಡಲಿ ಯಾವುದರೊಂದಿಗೆ ಗುರುತಿಸಲ್ಪಡುತ್ತಿತ್ತು?
◻ ಆಡಳಿತ ಮಂಡಲಿಯ ಸದಸ್ಯರ ನೇಮಕದಲ್ಲಿ ಯಾವ ಪ್ರಗತಿಪರ ಪರಿಷ್ಕಾರಗಳ ನೇಮಕವನ್ನು ಮಾಡಲಾಯಿತು?
◻ ಕ್ರಿಸ್ತನು ಆಳು ವರ್ಗ ಮತ್ತು ಅದರ ಆಡಳಿತ ಮಂಡಲಿಗೆ ಒಪ್ಪಿಸಿದ ಅವನ ಭೂಸೊತ್ತುಗಳಲ್ಲಿ ಕೆಲವು ಯಾವುವು?
◻ ನಾವು ಆಡಳಿತ ಮಂಡಲಿಯೊಂದಿಗೆ ಹೇಗೆ ಸಹಕರಿಸಬಲ್ಲೆವು?
[ಪುಟ 16,17 ರಲ್ಲಿರುವಚಿತ್ರಗಳು]
ನ್ಯೂಯೋರ್ಕಿನ ಬ್ರೂಕ್ಲಿನ್ನಲ್ಲಿರುವ ಜಾಗತಿಕ ಪ್ರಧಾನ ಕಾರ್ಯಾಲಯದಿಂದ ಆಡಳಿತ ಮಂಡಲಿಯು ವಾಚ್ಟವರ್ ಸೊಸೈಟಿಯ 93 ಬ್ರಾಂಚ್ಗಳಲ್ಲಿರುವ ಯೆಹೋವನ ಸಾಕ್ಷಿಗಳ ಪ್ರಕಾಶನ ಮತ್ತು ಸಾರುವ ಕೆಲಸದ ಉಸ್ತುವಾರಿ ನಡಿಸುತ್ತದೆ
ಜರ್ಮನಿ
ಜಪಾನ್
ದಕ್ಷಿಣ ಆಫ್ರಿಕ
ಬ್ರೆಸೀಲ್