ಯಾರು ಮಾನವಕುಲವನ್ನು ಶಾಂತಿಗೆ ನಡಿಸುವರು?
ಮಾನವರು ಶಾಂತಿ ತರಲಾರರು ಎಂಬ ನಿಜಸಂಗತಿಯ ಅರ್ಥವು ನಾವು ಶಾಂತಿಯನ್ನು ಎಂದೂ ಕಾಣಲಾರೆವು ಎಂದೋ? ಅಲ್ಲ. ಭೂಮಿಯಲ್ಲಿ ಶಾಂತಿಗೆ ಕಟ್ಟಕಡೆಯ ತಡೆಗಟ್ಟಾಗಿರುವ ಸೈತಾನನು ಹೇಗೆ ನಮಗಿಂತ ಎಷ್ಟೋ ಹೆಚ್ಚು ಶಕ್ತಿಶಾಲಿಯೋ ಹಾಗೆ, ಸೈತಾನನಿಗಿಂತಲೂ ಅಧಿಕ ಶಕ್ತಿಶಾಲಿಯಾದ ಇನ್ನೊಬ್ಬನು ಮಾನವಕುಲವನ್ನು ಕೊನೆಗೆ ಶಾಂತಿಗೆ ನಡಿಸುವನು. ಸೈತಾನನ ಕುರಿತು ತಿಳಿಸುವ ಬೈಬಲು, ಈತನ ಕುರಿತಾಗಿಯೂ ತಿಳಿಸುತ್ತದೆ. ಅದನ್ನುವುದು: “ಆಡಳಿತವು ಆತನ ಬಾಹುವಿನ ಮೇಲಿರುವುದು. ಅದ್ಭುತ ಆಲೋಚನಾ ಕರ್ತನು, ಪರಾಕ್ರಮಿಯಾದ ದೇವರು, ನಿತ್ಯನಾದ ತಂದೆ, ಶಾಂತಿಯ ರಾಜಪುತ್ರ ಎಂಬವು ಅವನ ಹೆಸರು.” (ಯೆಶಾಯ 9:6, 7, NW) ಈ ಶಾಂತಿಯ ರಾಜಪುತ್ರನು ಯಾರು? ಯೇಸು ಕ್ರಿಸ್ತನಲ್ಲದೆ ಬೇರೆ ಯಾರೂ ಅಲ್ಲ. ಮತ್ತು ಅವನು ಶಾಂತಿಯನ್ನು ತರಬಲ್ಲನು ಯಾಕಂದರೆ ಅವನು ನಮಗಿಂತಲೂ ಎಷ್ಟೋ ಯೋಗ್ಯತೆಯುಳ್ಳವನು. ಯಾವ ವಿಧಗಳಲ್ಲಿ?
ಮಾನುಷ ಯೋಗ್ಯತೆಗಳಿಗಿಂತಲೂ ಹೆಚ್ಚು
ಒಂದು ಸಂಗತಿ ಏನಂದರೆ ಯೇಸು ಮರ್ತ್ಯನಲ್ಲ, ಮರಣಾಧೀನನಲ್ಲ. ಅವನು ಮನುಷ್ಯನಾಗಿ ಜೀವಿಸಿದನು ಮತ್ತು ಯಜ್ಞಬಲಿಯಾಗಿ ಸತ್ತನು ನಿಜ. ಆದರೆ ಅನಂತರ ಅವನು, ಅಮರತ್ವದ ಸ್ವರ್ಗ ಜೀವನಕ್ಕೆ ಪುನರುತ್ಥಾನ ಹೊಂದಿದನು, ಮತ್ತು ಇದೇ ಸ್ಥಿತಿಯಲ್ಲಿ ಅವನು ಶಾಂತಿಯ ರಾಜಪುತ್ರನಾಗುವನು. ಆದ್ದರಿಂದಲೇ ಒಂದು ಪ್ರವಾದನೆ ಹೇಳುವುದು: “ಆತನ ರಾಜ್ಯಕ್ಕೆ ಅಂತ್ಯವೇ ಇಲ್ಲ.” (ಲೂಕ 1:32, 33) ಪೌರ್ವಾತ್ಯ ಸಾಮ್ರಾಟ ಆಶೋಕನಿಗೆ ಅಸದೃಶನಾಗಿ ಯೇಸುವಾದರೋ, ತನ್ನ ಸತ್ಕಾರ್ಯಗಳು ಕನಿಷ್ಟ ಉತ್ತರಾಧಿಕಾರಿಗಳಿಂದ ದ್ವಂಸಗೊಳ್ಳದಂತೆ ನೋಡಿಕೊಳ್ಳಲು ಸದಾಕಾಲ ಜೀವಿಸುತ್ತಾ ಇರುವನು.
ಅಷ್ಟಲ್ಲದೆ ಯೇಸು, ಪಾಪದಿಂದ ಅಕಳಂಕಿತನು. ಅವನ ಆಡಳಿತವು ದೈವಿಕ ಜ್ಞಾನ ಮತ್ತು ಸತ್ಯ ತತ್ವಗಳಿಂದ ಆಧರಿತವಾಗಿದೆ. ಪ್ರವಾದಿ ಯೆಶಾಯನು ಮುಂತಿಳಿಸಿದ್ದು: “ಅವನ ಮೇಲೆ ಜ್ಞಾನವಿವೇಕದಾಯಕ ಆತ್ಮ, ಆಲೋಚನಾ ಪರಾಕ್ರಮಗಳನ್ನು ಹುಟ್ಟಿಸುವ ಆತ್ಮ, ತಿಳುವಳಿಕೆಯನ್ನೂ ಯೆಹೋವನ ಭಯವನ್ನೂ ಉಂಟುಮಾಡುವ ಆತ್ಮ, ಅಂತು ಯೆಹೋವನ ಆತ್ಮವೇ ನೆಲೆಗೊಂಡಿರುವುದು. . . ಅವನು ಕಣ್ಣಿಗೆ ಕಂಡಂತೆ ತೀರ್ಪು ಮಾಡುವುದಿಲ್ಲ, ಕಿವಿಗೆ ಬಿದ್ದಂತೆ ನಿರ್ಣಯಿಸುವುದಿಲ್ಲ. ಬಡವರಿಗೋಸ್ಕರ ನ್ಯಾಯವಾಗಿ ತೀರ್ಪು ಮಾಡುವನು.” (ಯೆಶಾಯ 11:2-4) ಯೇಸು, ಆದಿಕಾಲದ ಯುರೋಪಿಯನರಂತೆ, ಸ್ವದೇಶದಲ್ಲಿ ಶಾಂತಿಯನ್ನು ಕಾಪಾಡಿ ಪರದೇಶಗಳಲ್ಲಿ ಯುದ್ಧ ನಡಿಸುತ್ತಾ ಇರುವಾತನಲ್ಲ. ಅವನ ಕೈಕೆಳಗೆ, ಶಾಂತಿಯು ಸಾರ್ವತ್ರಿಕವಾಗಿರುವುದು.
ಅದಲ್ಲದೆ ಯೇಸುವಿಗೆ, ಶಾಂತಿಯನ್ನು ತರುವ ಶಕ್ತಿಯೂ ಇದೆ. “ಯೆಹೋವನ ಆತ್ಮ . . . ಆಲೋಚನಾ ಪರಾಕ್ರಮಗಳನ್ನು ಹುಟ್ಟಿಸುವ ಆತ್ಮ,” ಆತನ ಮೇಲೆ ನೆಲೆಗೊಂಡಿದೆ ಎಂದು ಪ್ರವಾದನೆ ಹೇಳುತ್ತದೆ. ಈ ಆತ್ಮವು ವಿಶ್ವದ ನಿರ್ಮಾಣದ ಹಾಗೂ ಬೈಬಲಲ್ಲಿ ದಾಖಲೆಯಾದ ನೀತಿಯ ಎಲ್ಲಾ ಮಹತ್ಕಾರ್ಯಗಳ ಹಿಂದಿದ್ದ ಆತ್ಮ. ಮಹಾ ವಿರೋಧಿಯಾದ ಸೈತಾನನಲ್ಲಿ ಸಹಾ, ದೇವರಾತ್ಮದ ಈ ಶಕ್ತಿಯನ್ನು ಸಾಫಲ್ಯದಿಂದ ಎದುರಿಸುವ ಸಾಧನಗಳಿಲ್ಲ.
ಶಾಂತಿಗೆ ಹೆಜ್ಜೆಗಳು
ಯೇಸು ಮಾನವ ಕುಲವನ್ನು ಹೇಗೆ ಶಾಂತಿಗೆ ನಡಿಸುವನು? ಆತನು ಅದನ್ನು ಈವಾಗಲೇ ಪ್ರಾರಂಭಿಸಿದ್ದಾನೆಂದು ತಿಳಿಯಲು ನೀವು ಆಶ್ಚರ್ಯಗೊಳ್ಳಬಹುದು. ಪ್ರವಾದನಾ ಪುಸ್ತಕವಾದ ಪ್ರಕಟನೆಯಲ್ಲಿ, ಯೇಸುವು ಸ್ವರ್ಗೀಯ ರಾಜ್ಯದಲ್ಲಿ ದೇವರಿಂದ ರಾಜ್ಯಾಧಿಕಾರವನ್ನು ಪಡೆಯುವುದನ್ನು ತೋರಿಸಲಾಗಿದೆ. (ಪ್ರಕಟನೆ 11:15) ಬೈಬಲ್ ಪ್ರವಾದನೆಗಳನ್ನು ನಾವು ನಿಕಟವಾಗಿ ಪರೀಕ್ಷಿಸುವುದಾದರೆ ಮತ್ತು ಅವನ್ನು ನಮ್ಮ ಶತಮಾನದ ಘಟನಾವಳಿಗೆ ಹೋಲಿಸುವಲ್ಲಿ, ಯೇಸು ಪರಲೋಕದಲ್ಲಿ ರಾಜನಾಗಿ ಹಿಂದೆ 1914ರಲ್ಲಿ ಪಟ್ಟವೇರಿದನೆಂದು ನಾವು ಕಾಣುತ್ತೇವೆ. (ಮತ್ತಾಯ 24:3-42) ಅದು ಭೂಮಿಗೆ ಶಾಂತಿಯನ್ನು ತರುವುದರಲ್ಲಿ ಒಂದು ಪ್ರಾಮುಖ್ಯ ಹೆಜ್ಜೆಯಾಗಿತ್ತು.
ಆದರೂ, ವಿಷಯವು ಹಾಗಿದ್ದಲ್ಲಿ, 1914ರಲ್ಲಿ ಒಂದನೇ ಲೋಕಯುದ್ಧವು ಆರಂಭಿಸಿದ್ದೇಕೆ? ಮತ್ತು ನಮ್ಮ ಶತಮಾನವು ಬೇರೆ ಯಾವುದೇ ಇತಿಹಾಸದಲ್ಲಿದ್ದದಕ್ಕಿಂತ ಹೆಚ್ಚು ಕೆಡುಕಿನ ಯುದ್ಧಗಳನ್ನು ಕಂಡದೇಕ್ದೆ? ಯಾಕಂದರೆ ಸ್ವರ್ಗೀಯ ರಾಜನ ಮೊದಲನೇ ಕ್ರಿಯೆಯು, ಸೈತಾನನನ್ನು ಸ್ವರ್ಗದಿಂದ ಸದಾಕಾಲಕ್ಕಾಗಿ ಹೊರಗಟ್ಟಿ, ಕೆಳಗೆ ಭೂಮಿಯ ಸಾಮಿಪ್ಯಕ್ಕೆ ದೊಬ್ಬಿದ ಕಾರಣದಿಂದಲೇ. ಫಲಿತಾಂಶ? ಪ್ರವಾದನೆ ಅನ್ನುವುದು: “ಭೂಮಿಯೇ, ಸಮುದ್ರವೇ, ನಿಮ್ಮ ದುರ್ಗತಿಯನ್ನು ಏನು ಹೇಳಲಿ. ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದು ಬಂದಿದ್ದಾನೆ.” (ಪ್ರಕಟನೆ 12:7-12) ನಮ್ಮ ಶತಮಾನದ ಮಹಾ ಯುದ್ಧಗಳು ಸೈತಾನನ ರೌದ್ರಕ್ಕೆ ಸಂಬಂಧಿಸಿದವುಗಳು. ಆದರೆ ಗಮನಿಸಿ: ಸೈತಾನನ ರೌದ್ರವು “ಸ್ವಲ್ಪ ಕಾಲದ ತನಕ”ದ್ದು. ಪ್ರಕೋಪ ಕಾಲವು ಬೇಗನೇ ಮುಗಿಯಲಿದೆ!
ಅದಕ್ಕೆ ಮುಂಚಿತವಾಗಿ ಶಾಂತಿಯ ರಾಜಪುತ್ರನು ಶಾಂತಿಗಾಗಿ ಇನ್ನೂ ಹೆಚ್ಚಿನ ಮಹತ್ವದ ಸಿದ್ಧತೆಗಳನ್ನು ಮಾಡುವನು. ಒಂದನೇದಾಗಿ, ಕ್ರಿಸ್ತನ ಮೂಲಕವಾಗಿ ಶಾಂತಿ ತರುವ ದೇವರ ಉದ್ದೇಶವು ಮಾನವ ಕುಲಕ್ಕೆ ತಿಳಿದಿರಬೇಕು. ಇದಕ್ಕನುರೂಪವಾಗಿ, “ಪರಲೋಕ ರಾಜ್ಯದ ಈ ಸುವಾರ್ತೆ ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು,” ಎಂಬ ಪ್ರವಾದನೆಯನ್ನು ನಮ್ಮ ಕಾಲಕ್ಕಾಗಿ ಯೇಸು ನುಡಿದನು. (ಮತ್ತಾಯ 24:14) ಇದರ ನೆರವೇರಿಕೆಯಲ್ಲಿ, ಭೂಲೋಕದ ಪ್ರತಿಯೊಂದು ಮೂಲೆಯಲ್ಲಿ ಈ ಸುವಾರ್ತೆಯು ಯೆಹೋವನ ಸಾಕ್ಷಿಗಳಿಂದ ಸಾರಲ್ಪಡುತ್ತಾ ಇದೆ.
ಅನಂತರ, ಸುಹೃದಯಿಗಳಾದ ಜನರಿಗೆ, ಶಾಂತಿಯ ಮಾರ್ಗಗಳಲ್ಲಿ ಶಿಕ್ಷಣ ಕೊಡಲಾಗುವುದು. ಬೈಬಲು ವಾಗ್ದಾನಿಸುವುದು: “ನಿನ್ನ ಮಕ್ಕಳೆಲ್ಲರೂ ಯೆಹೋವನಿಂದ ಶಿಕ್ಷಿತರಾಗಿರುವರು, ಅವರಿಗೆ ಅಧಿಕ ಸುಕ್ಷೇಮವಾಗುವುದು.” (ಯೆಶಾಯ 54:13) ಲಕ್ಷಾಂತರ ಮಂದಿ ಸುಹೃದಯಿಗಳು ಈ ಶಿಕ್ಷಣವನ್ನು ಈಗಲೂ ಪಡೆಯುತ್ತಿದ್ದಾರೆ.
ಮುಂದಿನ ಹೆಜ್ಜೆ
ಶಾಂತಿ-ಕರ್ತತೆಯ ಕಾರ್ಯವಿಧಾನದ ಇನ್ನೊಂದು ನಿರ್ಧಾರಕ ಹೆಜ್ಜೆಗೆ ಈಗ ಸಮಯ ಬಹಳಷ್ಟು ಹತ್ತಿರವಾಗಿದೆ. ಅದೇನು? ಅನೇಕರು ಅದರ ಹೆಸರನ್ನು ತಿಳಿದಿದ್ದಾರೆ ಆದರೆ ಅದರ ನಿಜೋದ್ದೇಶವನ್ನು ಬಲ್ಲವರು ಕೊಂಚ ಜನ. ಬೈಬಲ್ ಅದನ್ನು “ಸರ್ವಶಕ್ತನಾದ ದೇವರ ಮಹಾ ದಿನದ ಯುದ್ಧ” ಅಥವಾ ಹರ್ಮಗೆದ್ದೋನ್ ಎಂದು ಕರೆಯುತ್ತದೆ. (ಪ್ರಕಟನೆ 16:14, 16) ಈ ಹರ್ಮಗೆದ್ದೋನು ಇಡೀ ನಾಗರಿಕತೆಯನ್ನೇ ನಾಶಗೊಳಿಸುವ ಪರಮಾಣು ಯುದ್ಧವೆಂದು ಅನೇಕರು ಯೋಚಿಸುತ್ತಾರೆ. ಆದರೆ ಅದಕ್ಕೆ ಪ್ರತಿವಿರುದ್ಧವಾಗಿ ಅದು, ಶಾಂತಿಯ ರಾಜಕುವರನಾದ ಯೇಸುವು ಶಾಂತಿಗೆ ಆವಶ್ಯಕವಾದ ವಿಷಯಗಳನ್ನು ಪೂರೈಸಲು ನಡಿಸುವ ಒಂದು ನೇರವಾದ ಕ್ರಿಯೆಯಾಗಿರುತ್ತದೆ.
ಮೊತ್ತಮೊದಲಾಗಿ ಹರ್ಮಗೆದ್ದೋನು, ಶಾಂತಿಗೆ ಇರುವ ಮಾನವ ತಡೆಗಟ್ಟುಗಳನ್ನು ತೆಗೆದು ಹಾಕುವುದು. ಕೀರ್ತನೆ 37:10ರ ಪ್ರವಾದನೆಯು ಹೇಳುವುದು: “ಇನ್ನು ಸ್ವಲ್ಪ ಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು; ಅವನಿದ್ದ ಸ್ಥಳದಲ್ಲಿ ಎಷ್ಟು ವಿಚಾರಿಸಿದರೂ ಅವನು ಸಿಕ್ಕುವುದೇ ಇಲ್ಲ.” ಹೌದು, ಯೇಸುವು “ದುಷ್ಟನನ್ನು”—ಸಮರ ಕರ್ತರನ್ನು, ಪಾತಕಿಗಳನ್ನು, ಭಯೋತ್ಪಾದಕರನ್ನು ಹಾಗೂ ಮಹಾ ಶಾಂತಿಯ ರಾಜಪುತ್ರನನ್ನು ಸ್ವೀಕರಿಸಲು ನಿರಾಕರಿಸುವ ಎಲ್ಲರನ್ನು ಈ ಭೂದೃಶ್ಯದಿಂದ ನಿರ್ಮೂಲಗೊಳಿಸುವನು. ಈ ಭೂಗೃಹದಲ್ಲಿ ಜೀವಿಸುತ್ತಾ ಇರಲು ಅವರಿಗೆ ಇನ್ನು ಮುಂದೆ ಯಾವ ಹಕ್ಕೂ ಇರುವುದಿಲ್ಲ.—ಪ್ರಕಟನೆ 19:19-21.
ಎರಡನೆಯದಾಗಿ, ಹರ್ಮಗೆದ್ದೋನಿನಲ್ಲಿ, ದಾನಿಯೇಲನ ಈ ಭವಿಷ್ಯವಾಣಿಯು ನೆರವೇರುವುದು: “ಆ ರಾಜರ ಕಾಲದಲ್ಲಿ ಪರಲೋಕ ದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಗಳಿಗೆ ಕದಲಿ ಹೋಗದು. ಅದು ಈ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.” (ದಾನಿಯೇಲ 2:44) ಎಷ್ಟೋ ವೇಳೆ ಯುದ್ಧಕ್ಕೆ ಕಾರಣವಾಗಿರುವ ಎಲ್ಲಾ ರಾಷ್ಟ್ರೀಯ ವಿಭಜನೆಗಳು ತೆಗೆದು ಹಾಕಲ್ಪಡುವುವು. ಕಟ್ಟಕಡೆಗೆ, ಒಂದು ಲೋಕ ಸರಕಾರವು ನಮ್ಮ ಭರವಸಕ್ಕೆ ಪಾತ್ರನಾದ ಒಬ್ಬ ಅಧಿಪತಿಯ ಕೈಕೆಳಗೆ ಅಧಿಕಾರಕ್ಕೆ ಬರುವುದು!
ಹರ್ಮಗೆದ್ದೋನು ಯಾವಾಗ ಬರುವುದು? ಯಾವಾಗವೆಂದು ಬೈಬಲ್ ಹೇಳುವುದಿಲ್ಲ. ಬೈಬಲ್ ಪ್ರವಾದನೆಯ ನೆರವೇರಿಕೆಯಲ್ಲಿ ಸಂಭವಿಸುತ್ತಿರುವ ಲೋಕ ಘಟನೆಗಳು ಅದು ಅತಿ ಸಮೀಪವಿದೆಂದು ತೋರಿಸುತ್ತವೆ. ಅದರ ಪೂರ್ವಗಾಮಿಯಾಗಿ ಥಟ್ಟನೇ ಸಂಭವಿಸುವ ಒಂದು ಘಟನೆಯನ್ನು ಬೈಬಲ್ ಸ್ಪಷ್ಟವಾಗಿ ಮುಂತಿಳಿಸಿದೆ: “ಜನರು ‘ಶಾಂತಿ ಮತ್ತು ಭದ್ರತೆ’ ಎಂದು ಹೇಳುತ್ತಿರುವಾಗಲೇ ಅವರ ಮೇಲೆ ನಾಶನವು ಫಕ್ಕನೇ ಬರುವುದು.” (1 ಥೆಸಲೋನಿಕ 5:3) ಅನಂತರ, ಹರ್ಮಗೆದ್ದೋನಲ್ಲಿ ತುತ್ತತುದಿಗೇರುವ ಆ ದಿಢೀರ್ ನಾಶನವಾದ ಮೇಲೆ, ಶಾಂತಿಗೆ ಮಹಾ ತಡೆಗಟ್ಟಾದವನು ತೆಗೆದು ಹಾಕಲ್ಪಡುವನು. ಸೈತಾನನ “ಸ್ವಲ್ಪ ಕಾಲವು” ಆಗ ಕೊನೆಗೊಳ್ಳುವುದು ಮತ್ತು ಇಲ್ಲಿ ಭೂಮಿಯ ಮೇಲೆ ತೊಂದರೆ ಮಾಡಲಾರದ ಒಂದು ಸ್ಥಿತಿಯೊಳಗೆ ಅವನು ಹಾಕಲ್ಪಡುವನು. (ಪ್ರಕಟನೆ 20:1-3) ಅದೆಂಥಾ ಪರಿಹಾರವು!
ಲೋಕವು ಶಾಂತಿಯಲ್ಲಿ
ಆ ಸಮಯದ ಪರಿಸ್ಥಿತಿಯನ್ನು ಚಿತ್ರಿಸಿಕೊಳ್ಳಿರಿ. ಕೀರ್ತನೆಗಾರನು ಪ್ರವಾದಿಸಿದ್ದು: “ದೀನರು ಭೂಮಿಯನ್ನು ಬಾಧ್ಯವಾಗಿ ಹೊಂದುವರು. ಮಹಾ ಶಾಂತಿಯಲ್ಲಿ ಅತ್ಯಾನಂದ ಪಡುವರು.” (ಕೀರ್ತನೆ 37:11, NW) ಈ ದೀನರು ಯೆಶಾಯನ ಈ ಸುಂದರವಾದ ಪ್ರವಾದನೆಯನ್ನು ನೆರವೇರಿಸುತ್ತಾ ಮುಂದರಿಯುವರು: “ಅವರು ತಮ್ಮ ಕತ್ತಿಗಳನ್ನು ಕುಲುಮೆಗೆ ಹಾಕಿ ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು. ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು. ಇನ್ನು ಯುದ್ಧಾಭ್ಯಾಸ ನಡೆಯುವುದೇ ಇಲ್ಲ.”—ಯೆಶಾಯ 2:4.
ಕಟ್ಟಕಡೆಗೆ, ಏದೆನಿನಿಂದ ಹಿಡಿದು ಮೊದಲನೆ ಸಲ, ಎಲ್ಲಾ ಜೀವಿತ ಮಾನವರು ಯೆಹೋವ ದೇವರ ಆಶೀರ್ವಾದದಲ್ಲಿ ಆನಂದಿಸುವರು, ಮತ್ತು ಆತನು ತನ್ನ ವಾಗ್ದಾನವನ್ನು ನೆರವೇರಿಸುವನು: “ಇಗೋ, ದೇವರ ನಿವಾಸವು ಮನುಷ್ಯರಲ್ಲಿ ಅದೆ. ಆತನು ಅವರೊಡನೆ ವಾಸ ಮಾಡುವನು. ಅವರು ಆತನಿಗೆ ಪ್ರಜೆಗಳಾಗಿರುವರು. ದೇವರು ತಾನೇ ಅವರ ಸಂಗಡ ಇರುವನು. ಅವರ ಕಣ್ಣೀರನ್ನೆಲ್ಲಾ ಒರಸಿ ಬಿಡುವನು. ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವುದಿಲ್ಲ. ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”—ಪ್ರಕಟನೆ 21:3, 4.
ಒಂದು ದೃಢವಾದ ನಿರೀಕ್ಷೆ
ಹಾಗಾದರೆ, ಮಾನವ ಕುಲವನ್ನು ಶಾಂತಿಗೆ ನಡಿಸುವರ್ಯಾರು? ನೇಮಿತನಾದ ಶಾಂತಿಯ ರಾಜಪುತ್ರನಾದ ಯೇಸು ಕ್ರಿಸ್ತನೇ. ಇದು ಇಂದು ನಮಗಾಗಿ ಒಂದು ವ್ಯಾವಹಾರ್ಯ ನಿರೀಕ್ಷೆಯೋ? ಒಳ್ಳೆದು, ಬೈಬಲಿನ ವಾಗ್ದಾನಗಳು ನಂಬಲರ್ಹವಲ್ಲವಾಗಿದ್ದರೆ, ಶಾಂತಿಗಾಗಿ ಯಾವ ನಿಜ ನಿರೀಕ್ಷೆಯೂ ಅಲ್ಲಿರುತ್ತಿರಲಿಲ್ಲ. ಯಾವ ಕೊನೆಮೊದಲಿಲ್ಲದೆ ಮನುಷ್ಯರು ಹೋರಾಟ ನಡಿಸುತ್ತಾ, ಒಬ್ಬರನೊಬ್ಬರು ಕೊಲ್ಲುತ್ತಾ ಮುಂದರಿಯುತ್ತಿದ್ದರು. ಆದರೆ ಬೈಬಲು ನಂಬಲರ್ಹವಾಗಿದೆ, ಮತ್ತು ಕ್ರಿಸ್ತನ ಕೆಳಗೆ ದೇವರ ರಾಜ್ಯವು ಶಾಂತಿಯನ್ನು ತರಲಿದೆ. ಯೆಹೋವನ ಸಾಕ್ಷಿಗಳು ನಿಮ್ಮ ಮನೆಗೆ ತರುವ ರಾಜ್ಯದ ಸುವಾರ್ತೆಗೆ ಕಿವಿಗೊಡುವಂತೆ ಮತ್ತು ನೀವಾಗಿಯೇ ಪರೀಕ್ಷಿಸುವಂತೆ ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ಅನಂತರ, ಆ ಸಮಯ ಬಂದಾಗ, ಭೂಮಿಯನ್ನು ಬಾಧ್ಯವಾಗಿ ಹೊಂದುವ ಮತ್ತು ಅದರ ಮಹಾ ಶಾಂತಿಯಲ್ಲಿ ಆನಂದಿಸುವ ಆ ದೀನ ಜನರಲ್ಲಿ ನೀವೂ ಒಬ್ಬರಾಗುವಂತಾಗಲಿ. (w90 4/1)
ಈ ಲೇಖನದಲ್ಲಿ ಚರ್ಚಿಸಲ್ಪಟ್ಟಿರುವ ಶಾಂತಿಯ ನಿರೀಕ್ಷೆ ಬೈಬಲಿನದ್ದು. ಇಂದು ಹೆಚ್ಚಿನವರು ಬೈಬಲನ್ನು ನಂಬದೆ ಇರುವಾಗ, ಈ ನಿರೀಕ್ಷೆ ವ್ಯಾವಹಾರ್ಯವೋ ಎಂದು ನೀವು ಪ್ರಶ್ನಿಸಬಹುದು. ಅದು ವ್ಯಾವಹಾರ್ಯವೆಂದು ಯೆಹೋವನ ಸಾಕ್ಷಿಗಳು ದೃಢವಾಗಿ ನಂಬುತ್ತಾರೆ. ಬೈಬಲು ದೇವರ ಪ್ರೇರಿತ ವಾಕ್ಯವೆಂದು ಅವರು ಸ್ವೀಕರಿಸುತ್ತಾರೆ, ಆದ್ದರಿಂದ ಅದು ಪೂರ್ಣ ಭರವಸಕ್ಕೆ ಪಾತ್ರವು. ಅವರು 1989ರಲ್ಲಿ, ಬೈಬಲ್—ಗಾಡ್ಸ್ ವರ್ಡ್ ಆರ್ ಮ್ಯಾನ್ಸ್? ಎಂಬ ಹೆಸರಿನ ಪುಸ್ತಕವನ್ನು ಪ್ರಕಾಶಿಸಿ, ಈ ನಿಜತ್ವದ ಅನೇಕ ರುಜುವಾತುಗಳನ್ನು ನೀಡಿದರು. ಆ ಪುಸ್ತಕದ ಕೆಲವು ಸಮಾಚಾರವನ್ನು ಹಿಂಬಾಲಿಸುವ ಎರಡು ಲೇಖನಗಳ ಚರ್ಚಿಸಲ್ಪಟ್ಟಿದೆ. ನೀವದನ್ನು ಓದುವಂತೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ.
ಶಾಂತಿಯ ಕುರಿತು ಬೈಬಲಿನ ವಾಗ್ದಾನದ ವಿಷಯದಲ್ಲಿ ಅಧಿಕ ಸಮಾಚಾರವನ್ನು, “ಲೋಕ ಶಾಂತಿ—ಅದರ ನಿಜಾರ್ಥವೇನು?” ಎಂಬ ಲೇಖನದಲ್ಲಿ ನವಂಬರ 1, 1991ರ ಕಾವಲಿನಬುರುಜು ಪ್ರಕಟಿಸಲಿದೆ.
[ಪುಟ 8 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಮಾನವ ಕುಲವನ್ನು ಶಾಂತಿಗೆ ನಡಿಸುವುದಕ್ಕೆ ಯೇಸುವಿಗೆ ಮಾತ್ರವೇ ಯೋಗ್ಯತೆಗಳಿವೆ
[ಪುಟ 9 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಇಂದು ದೇವರ ರಾಜ್ಯದ ಸುವಾರ್ತೆಯು ಭೂಮಿಯ ಪ್ರತಿಯೊಂದು ಮೂಲೆಯಲ್ಲಿ ಸಾರಲ್ಪಡುತ್ತಾ ಇದೆ