ಯೆಹೋವನ ಸೇವೆಯಲ್ಲಿ ಸಂತೋಷದ ಯುವಜನರು
“ಒಬ್ಬ ಬಾಲಕನೂ ಅವನ ವರ್ತನೆಗಳಿಂದ, ಅವನ ನಡತೆಯು ಶುದ್ಧವೂ ಸಮರ್ಪಕವೂ ಆಗಿದೆಯೊ ಎಂಬುದರಿಂದ ಗುರುತಿಸಲ್ಪಡುತ್ತಾನೆ.”—ಜ್ಞಾನೋಕ್ತಿ 20:11, ನ್ಯೂ ಇಂಟರ್ನ್ಯಾಷನಲ್ ವರ್ಷನ್.
1. ಸಮುವೇಲನ ಕುರಿತು ಬೈಬಲು ಎತ್ತಿ ಹೇಳುವ ಕೆಲವು ವಿಷಯಗಳಾವುವು?
ಚಿಕ್ಕವನಾಗಿದ್ದ ಸಮುವೇಲನು ಶೀಲೋವಿನಲ್ಲಿದ್ದ ಯೆಹೋವನ ಸಾಕ್ಷಿಗುಡಾರದಲ್ಲಿ ಸೇವೆಮಾಡುತ್ತಿದ್ದಾಗ ಕೇವಲ ಮೂರರಿಂದ ಐದು ವಯಸ್ಸಿನವನಾಗಿದ್ದಿರಬಹುದು. ಅವನ ಒಂದು ಕರ್ತವ್ಯ “ಯೆಹೋವನ ಮಂದಿರದ ಕದಗಳನ್ನು” ತೆರೆಯುವುದಾಗಿತ್ತು. “ಸಮುವೇಲನಾದರೋ ಬೆಳೆಯುತ್ತಾ ಬಂದ ಹಾಗೆಲ್ಲಾ ಯೆಹೋವನ ಮತ್ತು ಮನುಷ್ಯರ ದಯೆಗೆ ಪಾತ್ರನಾದನು” ಎಂದು ಬೈಬಲನ್ನುತ್ತದೆ. ದೊಡ್ಡವನಾದ ಮೇಲೆ ಅವನು ಇಸ್ರಾಯೇಲನ್ನು ಸತ್ಯಾರಾಧನೆಗೆ ಹಿಂದೆ ತಂದನು. ಸಮುವೇಲನು “ಜೀವದಿಂದಿರುವ ವರೆಗೆ” ದೇವರನ್ನು ಸೇವಿಸಿದನು. ಅವನು “ತಲೆನರೆತ ಮುದುಕ” ನಾಗಿದ್ದಾಗಲೂ ಜನರು “ಯೆಹೋವನಿಗೆ ಭಯಭಕ್ತಿಯುಳ್ಳವರಾಗಿದ್ದು. . .ಆತನನ್ನು ಸತ್ಯದಿಂದ. . .ಸೇವಿಸುತ್ತಾ” ಬರಬೇಕೆಂದು ಅವನು ಪ್ರೋತ್ಸಾಹಿಸಿದನು. ಜನರು ಸಮುವೇಲನ ವಿಷಯ ಹೇಳಿದರೆಂದು ಬೈಬಲು ಹೇಳುವಂತೆಯೆ ನಿಮ್ಮ ವಿಷಯವೂ ಅವರು ಮಾತಾಡಶಕ್ತರಾಗುವಲ್ಲಿ ಅದು ಆಶ್ಚರ್ಯಕರವಾಗಿರಲಿಕ್ಕಿಲ್ಲವೆ?—1 ಸಮುವೇಲ 1:24;2:18,26;3:15;7:2-4,15;12:2,24.
2. ಇಂದು ಯೆಹೋವನ ಜನರ ಕೂಟಗಳಲ್ಲಿ ಚಿಕ್ಕವರು ಏನು ಕಲಿಯುತ್ತಾರೆ?
2 ನೀವು ಒಬ್ಬ ಯೆಹೋವನ ಸಾಕ್ಷಿಯಾಗಿರುವಲ್ಲಿ ಅಥವಾ ಅವರ ಕೂಟಗಳಿಗೆ ಬರುವವರಾಗಿರುವಲ್ಲಿ ಈ ಪಾಠದ ಅಧ್ಯಯನ ಎಲ್ಲಿ ನಡೆಯುತ್ತದೊ ಆ ರಾಜ್ಯ ಸಭಾಗೃಹದಲ್ಲಿ ಸುತ್ತಲೂ ನೋಡಿರಿ. ಎಲ್ಲಾ ವಯಸ್ಸಿನವರನ್ನು ನೀವಲ್ಲಿ ನೋಡುವಿರಿ. ಅಲ್ಲಿ ಬಹುಶ ಆಗಲೆ “ತಲೆನರೆತ ಮುದುಕ” ಜನರಿರಬಹುದು. ಹೆತ್ತವರು, ಯುವಜನರು, ಚಿಕ್ಕ ಮಕ್ಕಳು ಮತ್ತು ಶಿಶುಗಳೂ ಅಲ್ಲಿದ್ದಾರೆ. ಅತಿ ಚಿಕ್ಕವರೂ ಕಲಿಯುತ್ತಿದ್ದಾರೋ? ಹೌದು. ತಾವೇ ಚಿಕ್ಕವರಾಗಿದ್ದಾಗ ಇಂಥ ಕೂಟಗಳಿಗೆ ತರಲ್ಪಡುತ್ತಿದ್ದವರನ್ನು ಕೇಳಿರಿ. ಅವರು ನಿಮಗೆ ಪ್ರಾಮಾಣಿಕತೆಯಿಂದ, ತಾವು ಚಿಕ್ಕಂದಿನಿಂದಲೇ ದೇವರಿಗೆ ಮಾನಕೊಡಲು, ಆತನ ಜನರನ್ನು ಪ್ರೀತಿಸಲು ಮತ್ತು ಆತನು ಆರಾಧಿಸಲ್ಪಡುತ್ತಿರುವ ಸ್ಥಳಗಳನ್ನು ಮಾನ್ಯ ಮಾಡಲು ಕಲಿತಿದ್ದೇವೆಂದು ಹೇಳುವರು. ಸಮಯ ಕಳೆದಂತೆ, ಚಿಕ್ಕವರು ಆಶ್ಚರ್ಯಕರವಾದ ಸತ್ಯವನ್ನು ಕಲಿಯುತ್ತಾರೆ. ಅನೇಕ ಯುವಜನರು, ಜ್ಞಾನ ಮತ್ತು ಗಣ್ಯತೆಯಲ್ಲಿ ಬೆಳೆದಾಗ, ಕೀರ್ತನೆಗಾರನು ಯಾರು, “ಯೆಹೋವನ ನಾಮವನ್ನು ಸ್ತುತಿಸಲಿ, ಏಕೆಂದರೆ ಆತನ ನಾಮವೊಂದೇ ನಿಲುಕಲಾಗದಷ್ಟು ಎತ್ತರ” ವೆಂದು ಹೇಳಿದನೊ ಅಂಥ ‘ಯುವಕರ, ಕನ್ಯೆಯರ, ವೃದ್ಧರ ಮತ್ತು ಹುಡುಗರ’ ಭಾಗವಾಗುತ್ತಾರೆ.—ಕೀರ್ತನೆ 148:12,13, NW.
3. ಬೈಬಲು ತಿಳಿದಿರುವ ಯುವಜನರು ಜೀವವನ್ನು ಬೈಬಲನ್ನು ತಿಳಿಯದವರಿಗಿಂತ ಪ್ರತ್ಯೇಕ ರೀತಿಯಲ್ಲಿ ನೋಡುವುದು ಹೇಗೆ?
3 ಹೆತ್ತವರು ಕ್ರಮವಾಗಿ ಇಂಥ ಕೂಟಗಳಿಗೆ ಕರೆತರುವಂಥ ಚಿಕ್ಕವರು ನೀವಾದರೆ ನೀವು ವಿಶೇಷವಾಗಿ ಆಶೀರ್ವದಿತರು. ಇತರ ಅನೇಕ ಕಿರಿಯರಿಗೆ ಲೋಕ ಸಮಸ್ಯೆಗಳ ತೊಂದರೆಯಿದೆ. ಜನರು ಭೂಮಿಯನ್ನು ನಾಶಮಾಡುವರೆಂಬ ಭಯ ಕೆಲವರಿಗಿರಬಹುದು. ಇದು ಸಂಭವಿಸುವಂತೆ ದೇವರು ಬಿಡನು, ಈ ಸುಂದರ ಗ್ರಹವನ್ನು ಜನರು ಹಾಳುಗೈಯುತ್ತಾ ಹೋಗುವಂತೆ ಆತನು ಅನುಮತಿಸನೆಂದು ನಿಮಗೆ ತಿಳಿದದೆ. ಇದಕ್ಕೆ ಬದಲಾಗಿ, ಬೈಬಲಿಗನುಸಾರ ದೇವರು, “ಭೂನಾಶಕರನ್ನು ನಾಶ” ಮಾಡುವನು. ಬೈಬಲು, ದೇವರ ನೀತಿಯ ನೂತನ ಜಗತ್ತಿನಲ್ಲಿ ಉಜ್ವಲ ಭವಿಷ್ಯತ್ತು ಸಮೀಪವಿದೆ ಎಂದು ವಾಗ್ದಾನಿಸಿದೆ ಎಂಬುದು ನಿಮಗೆ ಗೊತ್ತು.—ಪ್ರಕಟನೆ 11:18; ಕೀರ್ತನೆ 37:29; 2 ಪೇತ್ರ 3:13.
ನಿಮ್ಮ ಸ್ವಂತ ನಂಬಿಕೆ
4. ದೇವರ ಮಾರ್ಗಗಳ ಜ್ಞಾನ ಯುವಜನರ ಮೇಲೆ ಯಾವ ಜವಾಬ್ದಾರಿಯನ್ನಿಡುತ್ತದೆ, ಮತ್ತು ಈ ವಿಷಯದಲ್ಲಿ ಸಮುವೇಲನು ಹೇಗೆ ಉತ್ತಮ ಮಾದರಿ?
4 ಪ್ರಥಮದಲ್ಲಿ, ಕ್ರಿಸ್ತೀಯ ಸತ್ಯಮಾರ್ಗ ನಿಮ್ಮ ಹೆತ್ತವರ ಹವ್ಯಾಸವಾಗಿದ್ದಿರಬಹುದು. ಪ್ರಾಯಶಃ ಅವರು ಕರೆದುಕೊಂಡು ಬಂದುದರಿಂದ ನೀವು ಕ್ರಿಸ್ತೀಯ ಕೂಟಗಳಿಗೆ ಬಂದಿರಬಹುದು, ಮತ್ತು ಅವರು ದಿವ್ಯ ಸೇವೆಯಲ್ಲಿ ಭಾಗವಹಿಸುತ್ತಿದ್ದುದರಿಂದ ನೀವೂ ಭಾಗವಹಿಸಿದಿರ್ದಬಹುದು. ಆದರೂ ಸಮಯ ದಾಟಿದಂತೆ ಯೆಹೋವನಿಗೆ ಸೇವೆ ಮತ್ತು ವಿಧೇಯತೆ ನಿಮ್ಮ ಸ್ವಂತ ಆನಂದವಾಗಿ ಪರಿಣಮಿಸಿತು. ಚಿಕ್ಕ ಸಮುವೇಲನ ತಾಯಿ ಅವನನ್ನು ಸರಿ ಮಾರ್ಗದಲ್ಲಿ ಆರಂಭಿಸಿದರೂ ಅವನು ವೈಯಕ್ತಿಕವಾಗಿ ಅದನ್ನು ಅನುಸರಿಸಬೇಕಾಗಿತ್ತು. ನಾವು ಓದುವುದು:“ ಒಬ್ಬ ಬಾಲಕನೂ ಅವನ ವರ್ತನೆಗಳಿಂದ, ಅವನ ನಡತೆಯು ಶುದ್ಧವೂ ಸಮರ್ಪಕವೂ ಆಗಿದೆಯೊ ಎಂಬುದರಿಂದ ಗುರುತಿಸಲ್ಪಡುತ್ತಾನೆ.—ಜ್ಞಾನೋಕ್ತಿ 20:11, NIV.
5. (ಎ)ಬೈಬಲು ಎಷ್ಟು ಮಹಾ ಬೆಲೆಯದ್ದು? (ಬಿ)ದೇವರ ಲಿಖಿತ ವಾಕ್ಯದ ಪ್ರಾಮುಖ್ಯತೆಯ ಕುರಿತು ಪೌಲನು ತಿಮೊಥಿಗೆ ಏನು ಹೇಳಿದನು?
5 ದೇವರು ನಮ್ಮಿಂದ ಏನು ಬಯಸುತ್ತಾನೆಂದು ಶಾಸ್ತ್ರವು ತಿಳಿಸುತ್ತದೆ. ಆತನನ್ನು ಮೆಚ್ಚಿಸುವ ವಿಧದ ವಿಷಯ ನಮಗೆ ತುಂಬ ಹಿತವನ್ನುಂಟುಮಾಡುವ ಧಾರಾಳ ಮಾಹಿತಿಯನ್ನು ಅದು ಒದಗಿಸುತ್ತದೆ. ತನ್ನ ಯುವ ಸಹಾಯಕ ತಿಮೊಥಿಗೆ ಅಪೊಸ್ತಲ ಪೌಲನು ಹೇಳಿದ್ದು:“ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ. ಅದರಿಂದ ದೇವರ ಮನುಷ್ಯನು ಪ್ರವೀಣನಾಗಿ ಸಕಲ ಸತ್ಕಾರ್ಯಕ್ಕೆ ಸನ್ನದ್ಧನಾಗುವನು.”—2 ತಿಮೊಥಿ 3:16,17.
6. ಜ್ಞಾನ ಮತ್ತು ದೇವಭಕ್ತಿಯ ವಿವೇಕದ ಪ್ರಾಮುಖ್ಯತೆಯ ವಿಷಯ ಜ್ಞಾನೋಕ್ತಿ ಪುಸ್ತಕ ಏನನ್ನುತ್ತದೆ?
6 “ನೀತಿಶಿಕ್ಷೆಗೆ ಕಿವಿಗೊಟ್ಟು ವಿವೇಕಿಗಳಾಗಿರಿ” ಎಂದೂ ಬೈಬಲು ಹೇಳುತ್ತದೆ. ದೇವರ ಆಜ್ಞೆಯನ್ನು “ನಿಧಿಯಂತೆ” ಕಾಪಾಡಿ “ತಿಳುವಳಿಕೆಗಾಗಿ ಮೊರೆ” ಇಡಬೇಕೆಂದೂ ಮರೆಯಲ್ಲಿರುವ ಅಮೂಲ್ಯ ನಿಧಿಗಳಿಗಾಗಿ ಹುಡುಕುವಂತೆಯೇ ವಿವೇಚನಾಶಕ್ತಿಯನ್ನು “ಹುಡುಕುತ್ತಾ ಇರ” ಬೇಕೆಂದೂ ಅದು ತಿಳಿಸುತ್ತದೆ. ಈ ಸಲಹೆಯನ್ನು ಅನುಸರಿಸುವಲ್ಲಿ “ನೀವು ಯೆಹೋವನ ಭಯವನ್ನು ತಿಳಿಯುವಿರಿ, ಮತ್ತು ದೇವರ ಜ್ಞಾನವನ್ನೇ ಕಂಡುಕೊಳ್ಳುವಿರಿ.” ಈ ಕೆಳಗಿನ ಸಲಹೆಯೂ ನಮಗೆ ದೊರೆಯುತ್ತದೆ:“ಈಗ, ಓ ಪುತ್ರರೇ, ನನಗೆ ಕಿವಿಗೊಡಿರಿ. ಹೌದು, ನನ್ನ ಮಾರ್ಗಗಳನ್ನು ಪಾಲಿಸುವವರು ಧನ್ಯರೇ ಸರಿ. ನೀತಿಶಿಕ್ಷೆಗೆ ಕಿವಿಗೊಟ್ಟು ವಿವೇಕಿಗಳಾಗಿರಿ, ಅಸಡ್ಡಾಭಾವ ತೋರಿಸಬೇಡಿರಿ. ನನಗೆ ಕಿವಿಗೊಡುವವನು ಧನ್ಯನು. . .ನನ್ನನ್ನು ಕಂಡುಹಿಡಿಯುವವನು ನಿಶ್ಚಯವಾಗಿಯೂ ಜೀವವನ್ನು ಕಂಡುಕೊಂಡು ಯೆಹೋವನಿಂದ ಕಟಾಕ್ಷವನ್ನು ಪಡೆಯುವನು.” ನೀವು ಬೈಬಲಿಗೆ ಅಷ್ಟು ಬೆಲೆಕೊಟ್ಟು ಅದು ಹೇಳುವ ವಿಷಯಗಳನ್ನು ಕಲಿಯಲು ಅಂಥ ಪ್ರಯತ್ನವನ್ನು ಮಾಡುತ್ತೀರೊ?—ಜ್ಞಾನೋಕ್ತಿ 2:1-5; 8:32-35, NW.
ಜ್ಞಾನ ಪಡೆಯಿರಿ
7. ನಾವು ಕಲಿಯಬೇಕಾದ ಅತ್ಯಂತ ಪ್ರಾಮುಖ್ಯ ವಿಷಯಗಳಾವುವು?
7 ಹಲವು ಯುವಜನರಿಗೆ ಕ್ರೀಡೆಗಳ ಸಂಖ್ಯಾಸಂಗ್ರಹಣವೆಲ್ಲ ಗೊತ್ತಿದೆ, ಯಾ ತಮ್ಮ ಪ್ರಿಯ ಹಾಡುಗಾರರ ತಂಡದ ಕುರಿತು ಅವರು ಸರ್ವವನ್ನೂ ಹೇಳಬಲ್ಲರು. ಅವರಿಗೆ ಅದರಲ್ಲಿ ಆಸಕ್ತಿಯಿರುವುದರಿಂದ ಅದನ್ನು ಕಲಿತು ನೆನಪಿನಲ್ಲಿಡುವುದು ಅವರಿಗೆ ಸುಲಭ. ಆದರೆ ಅತಿ ಪ್ರಾಮುಖ್ಯ ಪ್ರಶ್ನೆಯು, ಅವರಿಗೆ ದೇವರ ವಿಷಯ ಏನು ತಿಳಿದಿದೆ ಎಂಬುದೆ. ಆತನು ಮಾಡಿರುವುದನ್ನು ತುಸು ಯೋಚಿಸಿರಿ. ದೇವರು ವಿಶ್ವವನ್ನು ನಿರ್ಮಿಸಿದನು. ಮನುಷ್ಯರು ಏನು ಮಾಡುವರೆಂದೂ ಏನಾಗುವುದೆಂದೂ ವಿಷಯಗಳು ಸಂಭವಿಸುವುದಕ್ಕೆ ಎಷ್ಟೋ ಮೊದಲು ಮುಂತಿಳಿಸಿದನು. ಬೈಬಲು ನಮಗೆ ದೇವರ ಕುರಿತು ಹೇಳುವುದು ಮಾತ್ರವಲ್ಲ, ನಾವು ಆತನನ್ನು ಹೇಗೆ ಮೆಚ್ಚಿಸಬಹುದೆಂದೂ ಕಲಿಸುತ್ತದೆ. ಈಗ ನಮಗೆ ಸಂತೋಷದ ಜೀವಿತ ಹೇಗೆ ಇರಬಲ್ಲದು ಮತ್ತು ಆತನ ನೀತಿಯ ನೂತನ ಜಗತ್ತಿನಲ್ಲಿ ನಾವು ಹೇಗೆ ಅನಂತ ಜೀವನವನ್ನು ಪಡೆಯಬಲ್ಲೆವೆಂದು ಅದು ತೋರಿಸುತ್ತದೆ. ಒಂದು ಆಟವನ್ನು ಯಾರು ಗೆದ್ದರು ಎಂಬುದನ್ನು ಯಾ ಜನರು ಬೇಗನೆ ಮರೆಯಲಿರುವ ಹಾಡುಗಾರರ ಹೆಸರುಗಳನ್ನು ಕಲಿಯುವುದಕ್ಕಿಂತ ಅದು ಹೆಚ್ಚು ಪ್ರಾಮುಖ್ಯವಲ್ಲವೇ?—ಯೆಶಾಯ 42:5,9; 46:9,10; ಆಮೋಸ 3:7.
8. ಯೋಷೀಯ ಮತ್ತು ಯೇಸು ಯಾವ ಉತ್ತಮ ಮಾದರಿಯನ್ನಿಟ್ಟರು?
8 ಬಾಲಕ ರಾಜ ಯೋಷೀಯನು 15 ವಯಸ್ಸಿನವನಾಗಿದ್ದಾಗ “ತನ್ನ ಪೂರ್ವಿಕನಾದ ದಾವೀದನ ದೇವರನ್ನು ಹುಡುಕುವವನಾದನು.” ಯೇಸುವಿಗೆ 12 ವಯಸ್ಸಾಗಿದ್ದಾಗ ಅವನು ಯೆಹೋವನ ಆಲಯದಲ್ಲಿ “ಬೋಧಕರ ನಡುವೆ ಕುಳಿತುಕೊಂಡು ಅವರ ಉಪದೇಶವನ್ನು ಕೇಳುತ್ತಾ ಪ್ರಶ್ನೆ ಮಾಡುತ್ತಾ ಇದ್ದನು.”a ನಿಮ್ಮ ವಯಸ್ಸು ಎಷ್ಟೇ ಆಗಿರಲಿ, ನೀವು ಯೋಷೀಯ ಮತ್ತು ಯೇಸುವಿನಂತೆ ದೇವರು ಮಾಡಿರುವ ಮತ್ತು ಮುಂದೆ ಮಾಡಲಿರುವ ವಿಷಯಗಳನ್ನು ಕಲಿಯಲು ನಿಜಾಸಕ್ತಿಯನ್ನು ಬೆಳೆಸಿದ್ದೀರೋ?—2 ಪೂರ್ವಕಾಲವೃತ್ತಾಂತ 34:3; ಲೂಕ 2:46.
9. (ಎ) ಅನೇಕ ಯುವಜನರಿಗೆ ಯಾವ ಸಮಸ್ಯೆ ಇದೆ? (ಬಿ) ಓದುವುದನ್ನು ಮತ್ತು ಅಧ್ಯಯನ ಮಾಡುವುದನ್ನು ಯಾವುದು ಸುಲಭ ಮಾಡಬಲ್ಲದು, ಮತ್ತು ಇದು ನಿಜವೆಂದು ನೀವು ಸ್ವತಃ ಕಂಡುಹಿಡಿದಿದ್ದೀರೊ?
9 ಆದರೆ ‘ಅಧ್ಯಯನ ಕಷ್ಟದ ಕೆಲಸ’ ಎಂದು ನೀವನ್ನಬಹುದು. ಅನೇಕ ಹಿರಿಯರೂ ಕಿರಿಯರೂ ಓದುವುದು ಸುಲಭವಾಗುವಂತೆ ಸಾಕಷ್ಟು ಓದಿರುವುದೇ ಇಲ್ಲ. ಆದರೆ ನೀವು ಎಷ್ಟು ಹೆಚ್ಚು ಓದುತ್ತೀರೊ ಅಷ್ಟು ಸುಲಭವಾಗಿ ಅದು ಪರಿಣಮಿಸುತ್ತದೆ. ಅಧ್ಯಯನ ಮಾಡಿದಷ್ಟಕ್ಕೆ ಕಲಿಯುವುದು ಸುಲಭವಾಗುತ್ತದೆ. ನೀವು ಆಗಲೇ ತಿಳಿದಿರುವ ವಿಷಯಗಳಿಗೆ ಹೊಸ ವಿಚಾರಗಳನ್ನು ಜೋಡಿಸುವಾಗ ಅವುಗಳನ್ನು ತಿಳಿಯುವುದು ಮತ್ತು ಜ್ಞಾಪಿಸಿಕೊಳ್ಳುವುದು ಅನಾಯಾಸಕರವಾಗುತ್ತದೆ.
10. (ಎ) ಕ್ರೈಸ್ತ ಕೂಟಗಳಿಂದ ಹೆಚ್ಚನ್ನು ನೀವು ಹೇಗೆ ಪಡೆಯಬಲ್ಲಿರಿ? (ಬಿ) ಈ ವಿಷಯದಲ್ಲಿ ನಿಮ್ಮ ಸ್ವಂತ ಅನುಭವವೇನು?
10 ದೇವರ ಕುರಿತು ಹೆಚ್ಚು ಕಲಿಯುವಂತೆ ನಿಮಗೆ ಯಾವುದು ಸಹಾಯ ಮಾಡಬಲ್ಲದು? ಪ್ರಾಯಶಃ, ಸಭಾಕೂಟಗಳಿಗೆ ಹಾಜರಾಗುವುದರಲ್ಲಿ ನೀವು ಹೆಚ್ಚು ಕ್ರಮವುಳ್ಳವರಾಗಬೇಕಾದೀತು. ನೀವು ಇದಕ್ಕಾಗಿ ಮೊದಲೇ ತಯಾರಿಸಿ ಅದರಲ್ಲಿ ನಿಜವಾಗಿಯೂ ಭಾಗವಹಿಸಬಲ್ಲಿರೊ? ಉದಾಹರಣೆಗೆ, ಈ ಪಾಠದಲ್ಲಿ ಉದಾಹರಿಸಲ್ಪಟ್ಟರೂ ಉಲ್ಲೇಖಿಸಲ್ಪಡದಿರುವ ವಚನಗಳನ್ನು ತೆರೆದು ನೋಡುವಲ್ಲಿ ನಿಮ್ಮ ಜ್ಞಾನದ ಮಟ್ಟ ಆಳವಾದೀತೆ? ಇದರಲ್ಲಿರುವ ಪ್ರತಿಯೊಂದು ವಚನ ಪರಿಚ್ಛೇದಕ್ಕೆ ಯಾ ಪಾಠಕ್ಕೆ ಏನು ಕೂಡಿಸಿ ಹೇಳುತ್ತದೆಂದು ನೀವು ಪಕ್ಕದಲ್ಲಿ ಬರೆದಿದ್ದೀರೋ? ಈ ವಚನಗಳಲ್ಲಿ ಒಂದನ್ನಾದರೂ ನಿಮ್ಮ ಹೇಳಿಕೆಯಲ್ಲಿ ತಂದು ಈ ಶಾಸ್ತ್ರಾಧಾರಿತ ಚರ್ಚೆಯನ್ನು ನೀವು ಮಾನ್ಯ ಮಾಡುತ್ತೀರೆಂದು ತೋರಿಸುತ್ತೀರೊ? ಅನೇಕ ವರ್ಷ ಕೂಟಗಳಿಗೆ ಕ್ರಮವಾಗಿ ಹಾಜರಾಗಿದ್ದ ಒಬ್ಬ ಸಭಾಹಿರಿಯನು ಹೇಳುವುದು:“ನಾನು ನಿಜವಾಗಿಯೂ ತಯಾರಿಸದ ಯಾವ ಪಾಠವನ್ನೂ ಮನಸ್ಸಿಟ್ಟು ಗಮನಿಸಲು ನನಗೆ ಕಷ್ಟವಾಗುತ್ತದೆ. ಆದರೆ ಪೂರ್ತಿ ಅಭ್ಯಾಸಿಸಿರುವುದನ್ನು ಅನುಸರಿಸುವುದು ತೀರಾ ಆಹ್ಲಾದಕರ.”
11. ಬೈಬಲಾಧಾರಿತ ಭಾಷಣಗಳಿಂದ ನೀವು ಹೆಚ್ಚಿನದನ್ನು ಹೇಗೆ ಪಡೆಯಬಲ್ಲಿರಿ, ಮತ್ತು ಇದೇಕೆ ಅಷ್ಟು ಪ್ರಾಮುಖ್ಯ?
11 ಬೈಬಲ್ ಭಾಷಣಗಳನ್ನು ಕೇಳುವಾಗ, ಅದು ಹೇಗೆ ವಿಕಸಿಸಲ್ಪಡುತ್ತಾ ಇದೆ ಎಂದು ವಿಶ್ಲೇಷಿಸಲು ಮತ್ತು ಭಾಷಣದ ಮೇಲೆ ಮನಸ್ಸಿಡಲು ನೀವು ಸಂಕ್ಷಿಪ್ತ ಟಿಪ್ಪಣಿಯನ್ನು ಬರೆಯುವುದುಂಟೆ? ಹೆಚ್ಚು ಸುಲಭವಾಗಿ ತಿಳಿದು ಹೆಚ್ಚು ಜ್ಞಾಪಕದಲ್ಲಿಡುವ ಉದ್ದೇಶದಿಂದ, ಕೇಳುವುದನ್ನು ಆಗಲೆ ತಿಳಿದಿರುವ ವಿಷಯಕ್ಕೆ ಹೋಲಿಸುತ್ತೀರೋ? ಯೇಸು ಪ್ರಾಥಿಸಿದ್ದು:“ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸುಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.”(ಯೋಹಾನ 17:3) ಜೀವಕ್ಕೆ ನಡಿಸುವ ಜ್ಞಾನವು ದೊರೆಯಸಾಧ್ಯವಿರುವ ಜ್ಞಾನಗಳಲ್ಲಿ ಅತ್ಯುತ್ತಮವಲ್ಲವೇ? ಇದರ ಕುರಿತು ಬೈಬಲು ಹೇಳುವುದನ್ನು ಗಮನಿಸಿರಿ:“ ಏಕೆಂದರೆ ಯೆಹೋವನೇ ವಿವೇಕವನ್ನು ಕೊಡುವಾತನು; ಆತನ ಬಾಯಿಂದ ಜ್ಞಾನ ಮತ್ತು ವಿವೇಚನೆ ಬರುತ್ತವೆ. ವಿವೇಕವು ನಿನ್ನ ಹೃದಯವನ್ನು ಪ್ರವೇಶಿಸಿ ಜ್ಞಾನವು ನಿನ್ನಾತ್ಮಕ್ಕೆ ಸುಖದಾಯಕವಾಗುವಾಗ ಯೋಚನಾಸಾಮರ್ಥ್ಯವೇ ನಿನ್ನ ಮೇಲೆ ಕಾವಲಾಗಿದ್ದು ವಿವೇಚನಾಶಕ್ತಿಯು ನಿನ್ನನ್ನು ಕಾಪಾಡುವುದು.”—ಜ್ಞಾನೋಕ್ತಿ 2:6,10,11, NW.
ಮಾನ್ಯತೆಯಲ್ಲಿ ಬೆಳೆಯಿರಿ
12. ದೇವರು ನಮಗಾಗಿ ಮಾಡಿರುವ ಕೆಲವು ಗಮನಾರ್ಹ ವಿಷಯಗಳಾವುವು?
12 ದೇವರು ನಮಗಾಗಿ ಮಾಡಿರುವುದನ್ನು ನಾವು ನಿಜವಾಗಿಯೂ ಮಾನ್ಯ ಮಾಡುತ್ತೇವೊ? ಆತನು ಸುಂದರವಾದ ಭೂಮಿಯನ್ನು ನಿರ್ಮಿಸಿ ಜೀವಕ್ಕಾಗಿ ಅದನ್ನು ತಯಾರಿಸಿದನು. ಆತನು ನಮ್ಮ ಪ್ರಥಮ ಹೆತ್ತವರನ್ನು ಉಂಟುಮಾಡಿ ಹೀಗೆ ನಾವು ಹುಟ್ಟುವಂತೆ ಸಾಧ್ಯಮಾಡಿದನು. ನಮಗೆ ನಮ್ಮ ಕುಟುಂಬಗಳ ಮತ್ತು ಪ್ರೀತಿಯ ಸಭೆಯ ಬೆಂಬಲವಿರುವಂತೆ ಆತನು ಏರ್ಪಡಿಸಿದನು.(ಆದಿಕಾಂಡ 1:27,28; ಯೋಹಾನ 13:35; ಇಬ್ರಿಯ 10:25) ತನ್ನ ಸ್ವಂತ ವಿಷಯದಲ್ಲಿ ನಮಗೆ ಹೆಚ್ಚು ಕಲಿಸಲು ಮತ್ತು ಅನಂತ ಜೀವನದ ಸಾಧ್ಯತೆಗಾಗಿ ತನ್ನ ಸ್ವಂತ ಜ್ಯೇಷ್ಠಪುತ್ರನನ್ನು ಭೂಮಿಗೆ ಕಳುಹಿಸಿದನು. ಇಂಥ ಆಶ್ಚರ್ಯಕರವಾದ ದಾನಗಳನ್ನು ನೀವು ನಿಜವಾಗಿಯೂ ಗಣ್ಯ ಮಾಡುತ್ತೀರೋ? ತನ್ನ ವಿಷಯ ಕಲಿತು ತನ್ನನ್ನಾರಾಧಿಸುವ ಆತನ ಆಮಂತ್ರಣವನ್ನು ಅಂಗೀಕರಿಸುವಂತೆ ಅವು ನಿಮ್ಮನ್ನು ಪ್ರೇರಿಸುತ್ತವೆಯೆ?—ಮತ್ತಾಯ 20:28; ಯೋಹಾನ 1:18; ರೋಮಾಪುರ 5:21.
13. ದೇವರಿಗೆ ಒಬ್ಬೊಬ್ಬರಲ್ಲಿ ಆಸಕ್ತಿಯಿದೆಯೆಂದು ನಿಮಗೆ ಅನಿಸುವುದೇಕೆ?
13 ವಿಶ್ವದ ಸೃಷ್ಟಿಕರ್ತನಿಗೆ ಜನರಲ್ಲಿ ಆಸಕ್ತಿಯಿದೆ. ಅವನು ಅಬ್ರಹಾಮನನ್ನು “ನನ್ನ ಸ್ನೇಹಿತನು” ಎಂದೂ ಮೋಶೆಗೆ “ಹೆಸರಿನಿಂದ ನಿನ್ನನ್ನು ತಿಳಿದಿದ್ದೇನೆ” ಎಂದೂ ಹೇಳಿದನು.(ಯೆಶಾಯ 41:8; ವಿಮೋಚನಕಾಂಡ 33:12, NW) ಪ್ರಕಟನೆ ಪುಸ್ತಕವು ದೇವರಿಗೆ ಒಂದು ಸಾಂಕೇತಿಕ ಪುಸ್ತಕ ಯಾ “ಜೀವಬಾಧ್ಯರ ಪಟ್ಟಿ” ಇದೆಯೆಂದೂ ಅದರಲ್ಲಿ “ಲೋಕಾದಿಯಿಂದ” ಹಿಡಿದು ನಂಬಿಗಸ್ತ ಸೇವಕರುಗಳ ಹೆಸರುಗಳಿವೆಯೆಂದೂ ಸೂಚಿಸುತ್ತದೆ. ಅದರಲ್ಲಿ ನಿಮ್ಮ ಹೆಸರೂ ಇರಬಹುದೋ?—ಪ್ರಕಟನೆ 3:5; 17:8; 2 ತಿಮೊಥಿ 2:19.
14. ದೇವರ ಸೂತ್ರಗಳನ್ನನುಸರಿಸುವುದು ನಿಮ್ಮ ಜೀವನವನ್ನು ಹೇಗೆ ಅಭಿವೃದ್ಧಿಗೊಳಿಸಬಲ್ಲದು?
14 ದೇವರ ಮೂಲಸೂತ್ರಗಳು ಕಾರ್ಯಸಾಧಕ. ಆತನ ಹೇಳಿಕೆಯಂತೆ ಕಾರ್ಯನಡೆಸುವುದು ಅನೇಕ ಸಮಸ್ಯೆಗಳನ್ನು ಅಂದರೆ ಲೈಂಗಿಕ ಅನೀತಿ, ಅಮಲೌಷಧ ಚಟ, ಮದ್ಯ ರೋಗಾವಸ್ಥೆ, ಅನೈಚ್ಫಿಕ ಗರ್ಭಧಾರಣೆ, ಹಿಂಸಾಕೃತ್ಯ, ಕೊಲೆಯೇ ಮುಂತಾದವುಗಳ ಉದ್ದ ಪಟ್ಟಿಯನ್ನು ಕಡಿಮೆ ಮಾಡುತ್ತದೆ. ಆತನ ಮಾರ್ಗವನ್ನನುಸರಿಸುವಲ್ಲಿ ನಾವು ನಿಜ ಸ್ನೇಹಿತರನ್ನು ಕಂಡು ಹಿಡಿಯುವಂತೆಯೂ ಹೆಚ್ಚು ಸಂತೋಷದಿಂದ ಜೀವಿಸುವಂತೆಯೂ ಸಹಾಯ ದೊರೆಯುವುದು. ಇದು ಪ್ರಯೋಜನಕರವಲ್ಲವೆ?(1 ಕೊರಿಂಥ 6:9-11) ದೇವರ ಮಾರ್ಗವನ್ನನುಸರಿಸಲು ಆಗಲೆ ನಿಶ್ಚಯಿಸಿರುವ ಯುವ ವ್ಯಕ್ತಿಗೂ ಸಮರ್ಪಕವಾಗಿರುವುದನ್ನು ಮಾಡಲು ಹೆಚ್ಚು ಶಕ್ತಿ ದೊರೆಯಬಲ್ಲದು. ಬೈಬಲು ಹೇಳುವುದು:“ನಿಷ್ಠನೊಂದಿಗೆ ನೀನು [ಯೆಹೋವನು] ನಿಷ್ಠೆಯಿಂದ ವರ್ತಿಸುವಿ.” ಆತನು ತನ್ನ “ಭಕ್ತರನ್ನು. . .ಕೈಬಿಡುವವನಲ್ಲ” ವೆಂದೂ ತನ್ನ “ಜನರನ್ನು. . .ತಳ್ಳಿಬಿಡುವದಿಲ್ಲ” ಎಂದೂ ಅದು ಆಶ್ವಾಸನೆ ಕೊಡುತ್ತದೆ.—ಕೀರ್ತನೆ 18:25, NW; 37:28; 94:14; ಯೆಶಾಯ 40:29-31.
ದೇವರನ್ನು ಸೇವಿಸುವುದರಲ್ಲಿ ಮುಂದೆ ಸಾಗಿರಿ
15. ಸೊಲೊಮೋನನು ಯುವಜನರಿಗೆ ಯಾವ ದಿವ್ಯ ಸಲಹೆ ಕೊಟ್ಟನು?
15 ನಿಮ್ಮ ಗುರಿಗಳು ಸಾಯುತ್ತಿರುವ ಹಳೆಯ ಲೋಕದಲ್ಲಿ ಕೇಂದ್ರೀಕೃತವಾಗಿವೆಯೇ ಯಾ ನೀತಿಯ ನೂತನ ಲೋಕದಲ್ಲಿಯೇ? ನೀವು ದೇವರಿಗೆ ಕಿವಿಗೊಡುತ್ತೀರೊ ಯಾ ಆತನಿಗೆ ವ್ಯತಿರಿಕ್ತವಾಗಿ ಮಾತಾಡುವ ಲೋಕವಿವೇಕ್ತಿಗಳೋ? ವಿನೋದ ವಿಹಾರ, ಪ್ರೌಢ ವಿದ್ಯಾಭ್ಯಾಸ ಯಾ ಸಮಯ ನುಂಗುವ ಲೋಕವೃತ್ತಿ ದೇವರ ಮತ್ತು ಆತನ ಸೇವೆಗಿಂತ ಪ್ರಥಮವಾಗಿ ಇಡಲ್ಪಡುತ್ತಿದೆಯೆ? ವಿವೇಕಿ ಸೊಲೊಮೋನ ರಾಜನು ನಮ್ಮ ಜೀವನಗಳಲ್ಲಿ ಪ್ರಥಮವಾಗಿ ಯಾವುದಿರಬೇಕೆಂದು ತೋರಿಸಲು ಬೈಬಲಿನ ಇಡೀ ಪ್ರಸಂಗಿ ಪುಸ್ತಕವನ್ನು ಬರೆದನು. ಅವನು ತೀರ್ಮಾನಿಸಿದ್ದು:“ಕಷ್ಟದ ದಿನಗಳೂ ಸಂತೋಷವಿಲ್ಲವೆಂದು ಹೇಳುವ ವರುಷಗಳೂ ಸಮೀಪಿಸುವದರೊಳಗಾಗಿ ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು. ವಿಷಯವು ತೀರಿತು; ಎಲ್ಲವು ಕೇಳಿ ಮುಗಿಯಿತು; ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ ಕರ್ತವ್ಯವು ಇದೇ.”—ಪ್ರಸಂಗಿ 12:1,13.
16. ಯುವಜನರು ಹೆಚ್ಚಿಗೆಯ ಸುಯೋಗಗಳಿಗೆ ಹೇಗೆ ಸಾಧಿಸಬಲ್ಲರು?
16 ನಿಮಗೆ ತಿಳಿದಿರುವ ಎಲ್ಲ ಪ್ರಾಯಸ್ಥ ಕ್ರೈಸ್ತ ಸಹೋದರರು—ಹಿರಿಯರು, ಪಯನೀಯರರು, ನಿಮ್ಮ ಸರ್ಕಿಟ್ ಮತ್ತು ಡಿಸ್ಟ್ರಿಕ್ಟ್ ಮೇಲ್ವಿಚಾರಕರು— ಒಮ್ಮೆ ಮಕ್ಕಳಾಗಿದ್ದರು. ಅವರು ಇಂದು ಅನುಭವಿಸುವ ಆಶೀರ್ವಾದಗಳಿಗೆ ಯಾವುದು ನಡಿಸಿತು? ಅವರು ದೇವರನ್ನು ಪ್ರೀತಿಸಿ ಆತನನ್ನು ಸೇವಿಸಲಿಚ್ಫಿಸಿದರು. ಅವರಲ್ಲಿ ಅನೇಕರು ಯೌವನದಲ್ಲಿ ತಮಗಿದ್ದ ಹೆಚ್ಚಿನ ಸಮಯವನ್ನು ಜ್ಞಾನ ಮತ್ತು ಅನುಭವ ಪಡೆಯಲು ಉಪಯೋಗಿಸಿದರು. ಅವರು ಅಧ್ಯಯನ ಮಾಡಿ ಕೂಟಗಳಲ್ಲಿ ಭಾಗವಹಿಸಿದರು. ಅವರು ಕಲಿಸುವುದರಲ್ಲಿ ಪಾಲಿಗರಾಗಿ ಹೆಚ್ಚಿನ ಸುಯೋಗಗಳನ್ನು—ಪಯನೀಯರ್ ಸೇವೆ, ಬೆತೆಲ್ ಸೇವೆ, ಯಾ ಇತರ ಪ್ರತಿಫಲದಾಯಕ ಚಟುವಟಿಕೆಗಳನ್ನು ಪಡೆಯಲು ಪ್ರಯತ್ನಿಸಿದರು. ಅವರು ‘ಯುವಕಾತೀತ’ರಾಗಿರಲಿಲ್ಲ. ನಿಮಗಿರುವಂತೆಯೆ ಅವರಲ್ಲಿಯೂ ಸ್ವಾಭಾವಿಕ ಆಸಕ್ತಿ, ಚಿಂತೆಗಳಿದ್ದವು. ಆದರೂ ಅವರು ಈ ಬುದ್ಧಿವಾದವನ್ನು ಅನ್ವಯಿಸಿಕೊಂಡರು:“ನೀವು ಯಾವ ಕೆಲಸವನ್ನು ಮಾಡಿದರೂ ಅದನ್ನು ಮನುಷ್ಯರಿಗೋಸ್ಕರವೆಂದು ಮಾಡದೆ ಕರ್ತ[ಯೆಹೋವ, NW]ನಿಗೋಸ್ಕರವೇ ಎಂದು ಮನಃಪೂರ್ವಕವಾಗಿ ಮಾಡಿರಿ.”—ಕೊಲೊಸ್ಸೆ 3:23; ಇದಕ್ಕೆ ಲೂಕ 10:27; 2 ತಿಮೊಥಿ 2:15 ಹೋಲಿಸಿ.
17. ದೇವರ ಸೇವೆಯಲ್ಲಿ ಪ್ರಗತಿಹೊಂದಲು ಯುವಜನರಿಗೆ ಯಾವುದು ಸಹಾಯ ಮಾಡಬಲ್ಲದು?
17 ನಿಮ್ಮ ವಿಷಯವೇನು? ನೀವು ದೇವಭಕ್ತಿಯ ವಿಷಯಗಳನ್ನು ನಿಜವಾಗಿಯೂ ಮಾನ್ಯ ಮಾಡುತ್ತೀರೊ? ಆತ್ಮಿಕ ವಿಷಯಗಳನ್ನು ಪ್ರಥಮವಾಗಿಡುವ ಮಿತ್ರರನ್ನು ನೀವು ಆರಿಸಿಕೊಳ್ಳುತ್ತೀರೊ? ಇತರರು ನಿಮ್ಮೊಂದಿಗೆ ಕ್ರೈಸ್ತ ಚಟುವಟಿಕೆಯಲ್ಲಿ ಭಾಗವಹಿಸುವಂತೆ ನೀವು ಪ್ರೋತ್ಸಾಹಿಸುತ್ತೀರೋ? ನೀವು ಕ್ರೈಸ್ತ ಸೇವೆಯಲ್ಲಿ ಪ್ರಾಯಸ್ಥರೊಂದಿಗೆ, ಹೆಚ್ಚು ಅನುಭವವುಳ್ಳವರೊಂದಿಗೆ, ಅವರಿಂದ ಕಲಿಯುವ, ಅವರ ಆನಂದದ ರುಚಿ ನೋಡುವ, ಅವರ ಉತ್ತಮ ಮಾದರಿಯಿಂದ ಪ್ರೋತ್ಸಾಹಿಸಲ್ಪಡುವ ಉದ್ದೇಶದಿಂದ ಹೋಗುತ್ತೀರೊ? ಒಬ್ಬ ಸಾಕ್ಷಿ, ಸುಮಾರು 20 ವರ್ಷಗಳಿಗೆ ಹಿಂದೆ ತನ್ನನ್ನು ಒಬ್ಬ ಪ್ರಾಯಸ್ಥ ವ್ಯಕ್ತಿ ಮೊದಲನೆಯ ಸಲ ಸಂತೋಷದಿಂದ ಸೇವೆಯಲ್ಲಿ ಬರಲು ಆಮಂತ್ರಿಸಿದ್ದನ್ನು ನೆನಪಿಸುತ್ತಾಳೆ. ಇದು ಅವಳ ಜೀವನದ ಸಂಧಿಕಾಲವಾಯಿತೆಂದು ಅವಳನ್ನುತ್ತಾಳೆ:“ಪ್ರಥಮ ಬಾರಿ ನನ್ನ ಇಷ್ಟದಿಂದ ನಾನು ಹೋಗುವಂತಾಯಿತು, ನನ್ನ ಹೆತ್ತವರು ಕರೆದುಕೊಂಡು ಹೋಗುವುದರಿಂದಲ್ಲ.”
18. ದೀಕ್ಷಾಸ್ನಾನಕ್ಕೆ ಒಪ್ಪಿಸಿಕೊಡುವ ಮೊದಲು ಯೋಚಿಸಬೇಕಾದ ವಿಷಯಗಳಾವುವು?
18 ನೀವು ದೇವರ ಮಾರ್ಗವನ್ನು ಅನುಸರಿಸುವುದರಲ್ಲಿ ಪ್ರಗತಿ ಹೊಂದುತ್ತಿರುವಲ್ಲಿ ಬೇಗನೆ ದೀಕ್ಷಾಸ್ನಾನದ ಕುರಿತು ಯೋಚಿಸಬಹುದು. ದೀಕ್ಷಾಸ್ನಾನ ಯುವಪ್ರಾಯದ ಸ್ಥಾನಕ್ಕೆ ಹೋಗಲಿರುವ ಒಂದು ಸಂಸ್ಕಾರವಲ್ಲವೆಂದು ನಾವು ಜ್ಞಾಪಿಸಿಕೊಳ್ಳುವುದು ಪ್ರಾಮುಖ್ಯ. ಅದು ನೀವು ಬೆಳೆಯುತ್ತಿದ್ದೀರೆಂದು ತೋರಿಸುವುದಿಲ್ಲ. ನಿಮ್ಮ ಸ್ನೇಹಿತರು ಈ ಹೆಜ್ಜೆಯನ್ನು ಇಟ್ಟಿರುವುದರಿಂದ ನೀವೂ ಇಡಬೇಕೆಂಬ ವಿಷಯವೂ ಇದಲ್ಲ. ದೀಕ್ಷಾಸ್ನಾನಕ್ಕೆ ಕೇಳಿಕೊಳ್ಳುವ ಮೊದಲು ನಿಮ್ಮಲ್ಲಿ ಸತ್ಯದ ಪ್ರಾಥಮಿಕ ಜ್ಞಾನವಿದ್ದು ನೀವು ದೇವರ ವಾಕ್ಯಾನುಸಾರ ಜೀವಿಸುತ್ತಿರಬೇಕು. ಈ ಜ್ಞಾನವನ್ನು ಇತರರೊಂದಿಗೆ ಪಾಲಿಗರಾಗುವುದರಲ್ಲಿ ನಿಮಗೆ ನ್ಯಾಯಸಮ್ಮತ ಅನುಭವವಿದ್ದು ಅದು ಸತ್ಯಾರಾಧನೆಯ ಮಹತ್ವದ ಭಾಗವೆಂದು ನಿಮಗೆ ತಿಳಿದಿರಬೇಕು.(ಮತ್ತಾಯ 24:14; 28:19,20) ಈ ಪ್ರಾಮುಖ್ಯ ಕ್ರೈಸ್ತ ಹೆಜ್ಜೆಯನ್ನು ತಕ್ಕೊಂಡ ಬಳಿಕ ಬೈಬಲಿನ ನೀತಿಸೂತ್ರಗಳಿಗನುಸಾರ ಜೀವಿಸಬೇಕೆಂಬುದು ನಿಮಗೆ ತಿಳಿದಿರಬೇಕು.b ನಿಮ್ಮ ಹೃದಯದಲ್ಲಿ ನಿಮ್ಮ ಪ್ರೀತಿಯ ಸ್ವರ್ಗೀಯ ತಂದೆಗೆ ನೀವು ನಿಮ್ಮನ್ನು ಸಮರ್ಪಿಸಿಕೊಂಡಿರಬೇಕು.—ಕೀರ್ತನೆ 40:8,9 ಹೋಲಿಸಿ.
19. ಒಬ್ಬ ವ್ಯಕ್ತಿ ಯಾವಾಗ ದೀಕ್ಷಾಸ್ನಾನ ಹೊಂದಬೇಕು?
19 ದೀಕ್ಷಾಸ್ನಾನವು, ನಿಮ್ಮ ಮುಂದಿನ ಜೀವಿತದಲ್ಲಿ ಏನೇ ಸಂಭವಿಸಲಿ, ನೀವು ದೇವರನ್ನು ಸೇವಿಸುವಿರಿ ಎಂದು ದೃಢವಾಗಿ ನಿಶ್ಚಯಿಸಿದಾಗ ತೆಗೆದುಕೊಳ್ಳುವ ಹೆಜ್ಜೆಯಾಗಿದೆ. ನೀವು ದೇವರ ಚಿತ್ತ ಮಾಡಲು ಯೆಹೋವನಿಗೆ ಯೇಸು ಕ್ರಿಸ್ತನ ಮೂಲಕ ಪೂರ್ಣವಾದ, ಕಾದಿಟ್ಟಿಲ್ಲದ ಮತ್ತು ಯಾವ ಷರತ್ತೂ ಇಲ್ಲದ ಸಮರ್ಪಣೆಯನ್ನು ಮಾಡಿದ್ದೀರಿ ಎಂಬುದರ ಬಹಿರಂಗ ಚಿಹ್ನೆಯಾಗಿದೆ. ಒಬ್ಬ ಕ್ರೈಸ್ತ ಹಿರಿಯನು, ಸುಮಾರು ಅರ್ಧ ಶತಮಾನಕ್ಕೆ ಹಿಂದೆ, “ನನಗೆ ಅದರ ವಿಷಯ ಏನಾದರೂ ಮಾಡಲೇ ಬೇಕು” ಎಂಬ ತಿಳುವಳಿಕೆ ಬಂದದ್ದನ್ನು ನೆನಪಿಸುತ್ತಾನೆ. ಕೆಲವು ವರ್ಷಗಳ ಹಿಂದೆ ಇಂಗ್ಲೆಂಡಿನ ನ್ಯೂಕಾಸ್ಲ್ನಲ್ಲಿ ದೀಕ್ಷಾಸ್ನಾನ ಪಡೆದ ಮಿಶೇಲ್ ಎಂಬ ಯುವ ಸಾಕ್ಷಿ ಹೇಳುವುದು: “13ನೇ ವಯಸ್ಸಿನಲ್ಲಿ, ನಾನು ನನ್ನ ಜೀವವನ್ನು ಸಮರ್ಪಿಸಿಕೊಂಡು ದೀಕ್ಷಾಸ್ನಾನ ಹೊಂದಬೇಕೆಂದು ನನಗೆ ತಿಳಿದುಬಂತು. ದೇವರನ್ನು ಸೇವಿಸುವುದಕ್ಕಿಂತ ಹೆಚ್ಚು ಇನ್ನಾವುದನ್ನೂ ನಾನು ಮಾಡಬಯಸುವುದಿಲ್ಲ.”
20. (ಎ)ಸಾವಿರಾರು ಯುವಜನರಿಂದ ಆಗಲೆ ಯಾವ ಉತ್ತಮ ಮಾದರಿ ಇಡಲ್ಪಟ್ಟಿದೆ? (ಬಿ) ಈ ಹೆಜ್ಜೆಯನ್ನು ಹೇಗೆ ವೀಕ್ಷಿಸಬೇಕು?
20 ಸಾವಿರಾರು ಯುವಜನರು ಇತ್ತೀಚೆಗೆ ದೀಕ್ಷಾಸ್ನಾನ ಹೊಂದಿದ್ದಾರೆ. ಅವರು ದೇವರ ವಾಕ್ಯವನ್ನು ಅಭ್ಯಸಿಸಿ ಆತನ ಮಾರ್ಗಗಳನ್ನು ಕಲಿತಿದ್ದಾರೆ. ಬಳಿಕ, ನೀರಿನ ದೀಕ್ಷಾಸ್ನಾನದ ಮೂಲಕ ಅವರು ಇತರ ಅನೇಕ ಪ್ರಾಯಸ್ಥರೊಂದಿಗೆ, ದೇವರಿಗೆ ತಮ್ಮ ಸಮರ್ಪಣೆಯನ್ನು ಬಹಿರಂಗವಾಗಿ ಸೂಚಿಸಿದರು. ದೀಕ್ಷಾಸ್ನಾನ ಸಮರ್ಪಿತ ಜೀವನದಾರಿಯ ಅಂತ್ಯವಲ್ಲ, ಆರಂಭವಾಗಿದೆ ಎಂದು ಅವರಿಗೆ ಗೊತ್ತು ಮತ್ತು ಅವರು ಯೆಹೋವನ ಸೇವೆಯಲ್ಲಿ ಸದಾ ಮುಂದುವರಿಯಲು ದೃಢತೆಯಿಂದಿದ್ದಾರೆ. (w90 8/1)
[ಅಧ್ಯಯನ ಪ್ರಶ್ನೆಗಳು]
a 4ನೇ ಪುಟದಲ್ಲಿ “ಬೈಬಲ್ ಸಮಯಗಳಲ್ಲಿ ಯುವ ಸೇವಕರು” ಎಂಬ ಲೇಖನ ನೋಡಿ.
b ‘ನನಗೆ ಇನ್ನೂ ದೀಕ್ಷಾಸ್ನಾನವಾಗಿಲ್ಲ’ ಎಂಬ ಹೇಳಿಕೆ ತಪ್ಪು ಮಾಡಲು ನೆವವನ್ನೊದಗಿಸುತ್ತದೆಂದು ಇದರ ಅರ್ಥವಲ್ಲ. ದೇವರು ಏನು ಅವಶ್ಯ ಪಡುತ್ತಾನೆಂದು ತಿಳಿದೊಡನೆ ಆತನಿಗೆ ವಿಧೇಯರಾಗುವ ಜವಾಬ್ದಾರಿ ನಮಗಿದೆಯೆಂಬುದು ವ್ಯಕ್ತ.—ಯಾಕೋಬ 4.17.
ನೀವು ಹೇಗೆ ಉತ್ತರಿಸುವಿರಿ?
▫ ದೇವರ ವಾಕ್ಯದ ಜ್ಞಾನ ಅಷ್ಟು ಪ್ರಾಮುಖ್ಯವೇಕೆ?
▫ ಕ್ರೈಸ್ತ ಕೂಟಗಳಿಂದ ಹೆಚ್ಚನ್ನು ನಾವು ಹೇಗೆ ಪಡೆಯಬಲ್ಲೆವು?
▫ ದೇವರಿಂದ ಯಾವ ಆಶೀರ್ವಾದಗಳು ನಾವು ಆತನಿಗೆ ವಿಧೇಯರಾಗುವಂತೆ ನಮ್ಮನ್ನು ಪ್ರೇರಿಸಬೇಕು?
▫ ನಾವು ದೇವರ ಸೇವೆಯಲ್ಲಿ ಹೇಗೆ ಮುಂದೆ ಸಾಗಬಲ್ಲೆವು?
▫ ಒಬ್ಬನು ಯಾವಾಗ ದೀಕ್ಷಾಸ್ನಾನ ಹೊಂದಬೇಕು?