ದೇವರ ತಾಳ್ಮೆಯು ಇನ್ನೆಷ್ಟು ಕಾಲ ಬಾಳುವುದು?
ಸುಮಾರು 3,000 ವರ್ಷಗಳ ಹಿಂದೆ ಜ್ಞಾನಿ ಪುರುಷನೊಬ್ಬನು ಬರೆದದ್ದು: “ಮನುಷ್ಯನು ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರ ನಡಿಸಿ ಅವನಿಗೆ ಹಾನಿಯನ್ನುಂಟು ಮಾಡಿದ್ದಾನೆ.” (ಪ್ರಸಂಗಿ 8:9) ಅವನು ಆ ವೀಕ್ಷಣೆಯನ್ನು ಮಾಡಿದಂದಿನಿಂದ, ವಿಷಯಗಳೇನೂ ಸುಧಾರಿಸಿರುವುದಿಲ್ಲ. ಇತಿಹಾಸದಲ್ಲೆಲ್ಲಾ ವ್ಯಕ್ತಿಗಳು ಯಾ ಗುಂಪುಗಳು ಅಧಿಕಾರವನ್ನು, ಒಂದರ ಹಿಂದೊಂದರಂತೆ ಆಕ್ರಮಿಸಿವೆ, ಇತರ ಮಾನವರ ಮೇಲೆ ದಬ್ಬಾಳಿಕೆ ಮತ್ತು ದೋಚುವಿಕೆಯನ್ನು ನಡಿಸಿವೆ. ಯೆಹೋವ ದೇವರು ತಾಳ್ಮೆಯಿಂದ ಇದನ್ನು ಸಹಿಸಿರುತ್ತಾನೆ.
ಸರಕಾರಗಳು ಯುದ್ಧದ ಸಮಯದಲ್ಲಿ ಲಕ್ಷಾಂತರ ಜನರನ್ನು ಸಾಯುವುದಕ್ಕೆ ಒಳಪಡಿಸಿದಾಗ ಮತ್ತು ಘೋರ ಆರ್ಥಿಕ ಅನ್ಯಾಯಗಳಿಗೆ ಗುರಿಪಡಿಸಿದಾಗ, ಯೆಹೋವನು ತಾಳ್ಮೆಯಿಂದಿದ್ದನು. ಜನರು ಇಂದು ಭೂಮಿಯ ಮೇಲ್ಭಾಗದ ಪರಿಸರವನ್ನು ನಾಶಪಡಿಸುವಾಗ ಮತ್ತು ವಾತಾವರಣ ಹಾಗೂ ಸಾಗರವನ್ನು ಮಲಿನಗೊಳಿಸುವಾಗಲೂ, ಆತನಿನ್ನೂ ತಾಳ್ಮೆಯನ್ನು ತೋರಿಸುತ್ತಿದ್ದಾನೆ. ಫಲಸಮೃದ್ಧವಾದ ಪ್ರದೇಶಗಳ ಧ್ವಂಸವೂ, ಅರಣ್ಯಗಳ ಮತ್ತು ವನ್ಯಜೀವಿಗಳ ನಿಷ್ಕಾರಣ ನಶಿಸುವಿಕೆಯೂ ಆತನಿಗೆಷ್ಟು ದುಃಖವನ್ನು ತಂದಿರಬೇಕು!
ದೇವರೇಕೆ ಅಷ್ಟು ತಾಳ್ಮೆಯವನು?
ಒಂದು ಸರಳವಾದ ದೃಷ್ಟಾಂತವು ಈ ಪ್ರಶ್ನೆಯನ್ನುತ್ತರಿಸಲು ನಮಗೆ ಸಹಾಯ ಮಾಡಬಹುದು. ಕಾರ್ಮಿಕನೊಬ್ಬನು ಕೆಲಸಕ್ಕೆ ಪದೇಪದೇ ತಡವಾಗಿ ಬರುವಾಗ ವ್ಯಾಪಾರದ ಮೇಲಾಗುವ ಪರಿಣಾಮವನ್ನು ಗಮನಿಸಿರಿ. ಮಾಲಕನು ಆಗೇನು ಮಾಡಬೇಕು? ಆ ಕಾರ್ಮಿಕನನ್ನು ಕೆಲಸದಿಂದ ಕೂಡಲೇ ತೆಗೆದು ಹಾಕುವಂತೆ ವ್ಯವಹಾರ ನ್ಯಾಯವು ಅವಶ್ಯಪಡಿಸಬಹುದು. ಆದರೆ ಅವನಿಗೆ ಬೈಬಲಿನ ಜ್ಞಾನೋಕ್ತಿ ನೆನಪಿಗೆ ಬರಬಹುದು: “ದೀರ್ಘಶಾಂತನು ಕೇವಲ ಬುದ್ಧಿವಂತನು. ಮುಂಗೋಪಿಯು ಮೂರ್ಖತನವನ್ನು ಎತ್ತುವನು.” (ಜ್ಞಾನೋಕ್ತಿ 14:29) ಕ್ರಮಕೈಕೊಳ್ಳುವ ಮುಂಚೆ ಕಾದುನೋಡುವಂತೆ ವಿವೇಚನೆಯು ಅವನನ್ನು ನಡಿಸೀತು. ವ್ಯಾಪಾರವು ಇನ್ನೂ ಹೆಚ್ಚು ಭಂಗಗೊಳ್ಳದಂತೆ ಬದಲಿ ಕೆಲಸಗಾರನೊಬ್ಬನನ್ನು ತರಬೇತು ಮಾಡಲು ಸಮಯ ತಕ್ಕೊಳ್ಳುವಂತೆ ಅವನು ನಿರ್ಧರಿಸಲೂ ಬಹುದು.
ಸಹಾನುಭೂತಿಯು ಸಹಾ ಅವನನ್ನು ಕಾಯುವಂತೆ ಮಾಡಬಹುದು. ಅಜಾಗೃತ ಕಾರ್ಮಿಕನು ತನ್ನ ವರ್ತನೆಯನ್ನು ಬದಲಾಯಿಸುತ್ತಾನೋ ಎಂದು ನೋಡಲು ಎಚ್ಚರ ನೀಡುವ ಕುರಿತೇನು? ತಡವಾಗಿ ಬರುವ ಅವನ ಈ ಹವ್ಯಾಸವು ನಿಭಾಯಿಸಶಕ್ಯವಿರುವ ಒಂದು ಸಮಸ್ಯೆಯಿಂದಲೋ ಅಥವಾ ಗುಣವಾಗದ ದುರ್ಭಾವನೆಯಿಂದಲೋ ಎಂಬದರ ಕುರಿತು ಅವನೊಡನೆ ಮಾತಾಡಿ, ಯಾಕೆ ಕಂಡುಕೊಳ್ಳಬಾರದು? ವ್ಯಾಪಾರದ ಮಾಲಕನು ತಾಳ್ಮೆಯಿಂದ ವರ್ತಿಸಲು ನಿರ್ಧರಿಸಬಹುದಾದರೂ, ಅವನ ದೀರ್ಫಶಾಂತಿಯಾದರೋ ಅಸೀಮಿತವಾಗಿರಲಾರದು. ಕಾರ್ಮಿಕನು ಒಂದಾ ಸುಧಾರಣೆಯನ್ನು ಮಾಡಲೇಬೇಕು, ಇಲ್ಲವಾದರೆ ಕೊನೆಗೆ ಕೆಲಸವನ್ನು ಕಳಕೊಳ್ಳಬೇಕು. ಅದು ಸ್ವತಃ ವ್ಯಾಪಾರಕ್ಕೆ ಮತ್ತು ನಿಯಮ ಪಾಲಕ ಕಾರ್ಮಿಕರಿಗಾಗಿ ಕೇವಲ ಹಿತಕರವು.
ತದ್ರೀತಿಯಲ್ಲಿ, ಒಂದು ದುರ್ನಡತೆಯು ಎದುರಾದಾಗ, ಯೆಹೋವ ದೇವರು ತಾಳ್ಮೆಯಿಂದ ವ್ಯವಹರಿಸುತ್ತಾನೆ, ನಿರ್ದಿಷ್ಟ ಸಮಸ್ಯೆಗಳಿಗೆ ನ್ಯಾಯೋಚಿತ ಪರಿಹಾರವನ್ನು ತರಲಿಕ್ಕಾಗಿ ಸಮಯಕೊಡುತ್ತಾನೆ. ಅದಲ್ಲದೆ, ಅವನ ತಾಳ್ಮೆಯು ತಪ್ಪುಗಾರರಿಗೆ ತಮ್ಮ ಮಾರ್ಗಗಳನ್ನು ಬದಲಾಯಿಸುವಂತೆ ಮತ್ತು ನಿತ್ಯವಾದ ಪ್ರಯೋಜನಗಳನ್ನು ಹೊಂದುವಂತೆ ಒಂದು ಸಂದರ್ಭವನ್ನು ಕೊಡುತ್ತದೆ. ಆದಕಾರಣ, ದೇವರ ತಾಳ್ಮೆಯಿಂದಾಗಿ ನಾವು ಅಸಂತೋಷಗೊಳ್ಳದಂತೆ ಬೈಬಲು ನಮ್ಮನ್ನು ಪ್ರೋತ್ಸಾಹಿಸುತ್ತದೆ. ಬದಲಾಗಿ ಅದನ್ನುವದು: “ನಮ್ಮ ಕರ್ತನ ದೀರ್ಘಶಾಂತಿಯು ನಮ್ಮ ರಕ್ಷಣಾರ್ಥವಾಗಿ ಅದೆ ಎಂದು ಎಣಿಸಿಕೊಳ್ಳಿರಿ.”—2 ಪೇತ್ರ 3:15.
ದೇವರ ತಾಳ್ಮೆಯ ಒಂದು ಮಾದರಿ
ನೋಹನ ದಿನದ ಮಹಾ ಜಲಪ್ರಲಯಕ್ಕೆ ಮುಂಚೆಯೂ, ಯೆಹೋವನು ತಾಳ್ಮೆಯನ್ನು ತೋರಿಸಿದ್ದನು. ಆ ಕಾಲದ ಲೋಕವು ಹಿಂಸಾಚಾರದಿಂದಲೂ ಬಹು ದುಷ್ಟತನದಿಂದಲೂ ತುಂಬಿಹೋಗಿತ್ತು. ನಾವು ಓದುವುದು: “ಮನುಷ್ಯರ ಕೆಟ್ಟತನವು ಭೂಮಿಯ ಮೇಲೆ ಹೆಚ್ಚಾಗಿರುವುದನ್ನೂ . . . ಯೆಹೋವನು ನೋಡಿ—ನಾನು ಸೃಷ್ಟಿಸಿದ ಮನುಷ್ಯ ಜಾತಿಯನ್ನು ಭೂಮಿಯ ಮೇಲಿನಿಂದ ಅಳಿಸಿಬಿಡುವೆನು ಅಂದುಕೊಂಡನು.” (ಆದಿಕಾಂಡ 6:5, 7) ಹೌದು, ಆಗಿನ ಕಾಲದ ದುಷ್ಟತನದ ಸಮಸ್ಯೆಗೆ ಒಂದು ಕೊನೆಯ ಪರಿಹಾರವು ಆತನ ಮನಸ್ಸಿನಲ್ಲಿತ್ತು. ಆದರೆ ಆತನು ಆ ಕೂಡಲೇ ಆ ಕ್ರಿಯೆಯನ್ನು ಕೈಕೊಳ್ಳಲಿಲ್ಲ. ಏಕೆ ಕೈಕೊಳ್ಳಲಿಲ್ಲ?
ಏಕೆಂದರೆ ಅವರಲ್ಲಿ ಎಲ್ಲರೂ ದುಷ್ಟರಾಗಿರಲಿಲ್ಲ. ನೋಹ ಮತ್ತು ಅವನ ಕುಟುಂಬ ದೇವರ ದೃಷ್ಟಿಯಲ್ಲಿ ನೀತಿವಂತರಾಗಿದ್ದರು. ಆದುದರಿಂದ ಅವರ ಪ್ರಯೋಜನಕ್ಕಾಗಿ ಯೆಹೋವನು ತಾಳ್ಮೆಯಿಂದ ಕಾದನು, ಇನ್ನೂ ಕೆಲವು ನೀತಿವಂತ ಜನರು ರಕ್ಷಣೆಗಾಗಿ ತಮ್ಮನ್ನು ತಯಾರು ಮಾಡುವಂತೆ ಸಮಯಕೊಟ್ಟನು. ಅದಲ್ಲದೆ, ಆತನ ದೀರ್ಫಶಾಂತಿಯು ನೋಹನಿಗೆ, “ನೀತಿಯನ್ನು ಸಾರುವವನಾಗುವ” ಒಂದು ಸಂದರ್ಭವನ್ನು ಕೊಟ್ಟಿತು ಮತ್ತು ದುಷ್ಟಜನರು ತಮ್ಮ ದುರ್ಮಾರ್ಗವನ್ನು ತ್ಯಜಿಸುವಂತೆ ಸಂಧಿಯನ್ನಿತಿತ್ತು. ಬೈಬಲ್ ಅನ್ನುವುದು: “ನೋಹನು ನಾವೆಯನ್ನು ಕಟ್ಟಿಸುತ್ತಿರಲು ದೇವರು ದೀರ್ಘಶಾಂತಿಯಿಂದ ಕಾದಿದ್ದಾಗ ಆ ನಾವೆಯೊಳಗೆ ಕೆಲವರು ಅಂದರೆ ಎಂಟೇ ಜನರು ಸೇರಿ ನೀರಿನೊಳಗಿಂದ ರಕ್ಷಣೆ ಹೊಂದಿದರು.”—2 ಪೇತ್ರ 2:5; 1 ಪೇತ್ರ 3:20.)
ದೇವರು ಈಗ ತಾಳ್ಮೆಯಿಂದಿರುವುದಕ್ಕೆ ಕಾರಣ
ಇಂದು ಪರಿಸ್ಥಿತಿಯಾದರೋ ಅದೇ ರೀತಿ ಇದೆ. ಲೋಕವು ಪುನಃ ಹಿಂಸಾಚಾರದಿಂದ ತುಂಬಿಹೋಗಿದೆ. ನೋಹನ ದಿನಗಳಂತೆ, ಈ ಲೋಕವು ಈವಾಗಲೇ ತೀರ್ಪಿಗೆ ಗುರಿಯಾಗಿದೆ. ಅದರ ಕುರಿತು ಬೈಬಲ್ ಹೇಳುವುದು: “ಈಗಿರುವ ಭೂಮ್ಯಾಕಾಶಗಳು . . . ಭಕ್ತಿಹೀನರ ಶಿಕ್ಷಾ ತೀರ್ಪೂ ನಾಶವೂ ಉಂಟಾಗುವ ದಿನಕ್ಕಾಗಿ ಇಡಲ್ಪಟ್ಟಿವೆ.” (2 ಪೇತ್ರ 3:7) ಅದು ಸಂಭವಿಸುವಾಗ, ಪರಿಸರದ ಧ್ವಂಸಗಾರಿಕೆಯು, ನಿರ್ಬಲರ ಮೇಲಿನ ದಬ್ಬಾಳಿಕೆಯು ಅಥವಾ ಅಧಿಕಾರದ ಸ್ವಾರ್ಥಪರ ದುರುಪಯೋಗವು ಅಲ್ಲಿರಲಾರದು.
ಹಾಗಾದರೆ ದೇವರು ಭಕ್ತಿಹೀನರಾದ ಜನರನ್ನು ಬಹಳ ಹಿಂದೆಯೇ ಯಾಕೆ ನಾಶಗೊಳಿಸಲಿಲ್ಲ? ಯಾಕಂದರೆ ಇತ್ಯರ್ಥಗೊಳಿಸತಕ್ಕ ಪ್ರಶ್ನೆಗಳು ಮತ್ತು ಏರ್ಪಡಿಸಬೇಕಾದ ಪ್ರಾಮುಖ್ಯ ವಿಷಯಗಳು ಅಲ್ಲಿದ್ದವು. ನಿಶ್ಚಯವಾಗಿ ಯೆಹೋವನು ದುಷ್ಟತನದ ಸಮಸ್ಯೆಗೆ ಒಂದು ಶಾಶ್ವತ ಪರಿಹಾರವನ್ನು ತರುವ ಕಡೆಗೆ ಮುಂದರಿಯುತ್ತಿದ್ದಾನೆ, ಅದರಲ್ಲಿ ಸುಹೃದಯದ ಮಾನವರನ್ನು ಅಸೌಖ್ಯ ಮತ್ತು ಮರಣದ ಬಂಧನದಿಂದ ರಕ್ಷಿಸುವುದೂ ಸೇರಿರುವ, ಅನೇಕ ವಿಷಯಗಳು ಒಳಗೂಡಿರುತ್ತವೆ.
ಈ ಕಡೆಯ ವಿಷಯದ ಪೂರೈಕೆಗಾಗಿ, ಒಬ್ಬ ರಕ್ಷಕನನ್ನು ನಮ್ಮ ಪಾಪದ ವಿಮೋಚನೆಗಾಗಿ ಒದಗಿಸಲು ಯೆಹೋವನು ಉದ್ದೇಶಿಸಿದನು. ಅವನ ಕುರಿತಾಗಿ ಬೈಬಲು ಅನ್ನುವುದು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು. ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” (ಯೋಹಾನ 3:16) ಯೇಸುವಿನ ಬರೋಣಕ್ಕಾಗಿ ದಾರಿ ತಯಾರಿಸಲು ಮತ್ತು ಮಾನವ ಕುಲದ ಪರವಾಗಿ ಅವನು ತನ್ನ ಜೀವವನ್ನು ಅರ್ಪಿಸಲು ಸಾವಿರಾರು ವರ್ಷ ಹಿಡಿಯಿತು. ಆ ಎಲ್ಲಾ ವರುಷಗಳಲ್ಲಿ ದೇವರು ಪ್ರೀತಿಯುಕ್ತ ತಾಳ್ಮೆಯಿಂದಿದ್ದನು. ಆದರೆ ಅಂಥ ಒಂದು ಒದಗಿಸುವಿಕೆಯು ಕಾಯುವುದಕ್ಕೆ ಅರ್ಹವಾಗಿರದೇ?
ಯೇಸು ಮಾನವ ಕುಲಕ್ಕಾಗಿ ವಿಮೋಚನೆಯನ್ನು ಕೊಟ್ಟು ಸುಮಾರು ಎರಡು ಸಾವಿರ ವರ್ಷಗಳು ದಾಟಿಹೋಗಿವೆ. ಹೀಗಿರಲಾಗಿ, ದೇವರು ಇನ್ನೂ ಯಾಕೆ ತಾಳ್ಮೆಯನ್ನು ತೋರಿಸುತ್ತಿದ್ದಾನೆ? ಒಂದು ಕಾರಣವು, ಯೇಸುವಿನ ಮರಣವು ಒಂದು ಶೈಕ್ಷಣಿಕ ಚಟುವಟಿಕೆಯ ಪ್ರಾರಂಭಕ್ಕೆ ಸಂಕೇತವನ್ನಿತ್ತಿತ್ತು. ಈ ಪ್ರೀತಿಪೂರ್ಣ ಒದಗಿಸುವಿಕೆಯ ಕುರಿತು ಮಾನವರು ಕಲಿಯುವ ಅಗತ್ಯವಿತ್ತು. ಮತ್ತು ಅದನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಸಂದರ್ಭವು ಅವರಿಗೆ ಸಿಕ್ಕಬೇಕಿತ್ತು. ಅದಕ್ಕಾಗಿ ಸಮಯ ಬೇಕಾಗಿತ್ತು, ಆದರೆ ಅದು ಸದುಪಯೋಗಕ್ಕಾಗಿ ಹಾಕಲ್ಪಡುವ ಸಮಯವಾಗಿರುವದು. ಬೈಬಲ್ ಅನ್ನುವುದು: “ಯೆಹೋವನು ತನ್ನ ವಾಗ್ದಾನವನ್ನು ನೆರವೇರಿಸುವುದಕ್ಕೆ ತಡಮಾಡುತ್ತಾನೆಂದು ಕೆಲವರು ಅರ್ಥಮಾಡುವ ಪ್ರಕಾರ ಆತನು ತಡಮಾಡುವವನಲ್ಲ. ಯಾವನಾದರೂ ನಾಶವಾಗುವುದರಲ್ಲಿ ಆತನು ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸುವವನಾಗಿದ್ದು ನಿಮ್ಮ ವಿಷಯದಲ್ಲಿ ದೀರ್ಘಶಾಂತಿಯುಳ್ಳವನಾಗಿದ್ದಾನೆ.”—2 ಪೇತ್ರ 3:9.
ಸರಕಾರದ ಪ್ರಶ್ನೆ
ಇನ್ನೊಂದು ಪ್ರಾಮುಖ್ಯ ವಿಷಯವು ಸಹಾ ಸಮಯವನ್ನು ಕೇಳಿಕೊಳ್ಳುತ್ತದೆ. ಮಾನವ ಕುಲದ ಸರಕಾರದ ಸಮಸ್ಯೆಯನ್ನೂ ನೀಗಿಸುವ ಒಂದು ಅಗತ್ಯವು ಅಲ್ಲಿತ್ತು. ಪ್ರಾರಂಭದಲ್ಲಿ ಮನುಷ್ಯನು ದೈವಿಕ ಸರಕಾರದ ಕೆಳಗೇ ಇದ್ದನು. ಆದರೆ ಏದೆನ್ ತೋಟದಲ್ಲಿ ನಮ್ಮ ಪ್ರಥಮ ಹೆತ್ತವರು ಅದನ್ನು ಪರಿತ್ಯಜಿಸಿಬಿಟ್ಟರು. ದೇವರಿಂದ ಸ್ವತಂತ್ರರಾಗಲು ಅವರು ಆರಿಸಿಕೊಂಡರು, ತಮ್ಮನ್ನು ತಾವೇ ಆಳಿಕೊಳ್ಳಲು ಬಯಸಿದರು. (ಆದಿಕಾಂಡ 3:1-5) ಆದರೂ ನಿಜವಾಗಿ ಹೇಳುವುದಾದರೆ, ಮಾನವನು ತನ್ನನ್ನು ತಾನೇ ಆಳಿಕೊಳ್ಳಲು ನಿರ್ಮಿಸಲ್ಪಟ್ಟಿಲ್ಲ. ಪ್ರವಾದಿ ಯೆರೆಮೀಯನು ಬರೆದದ್ದು: “ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು. ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.”—ಯೆರೆಮೀಯ 10:23; ಜ್ಞಾನೋಕ್ತಿ 20:24.
ಆದಾಗ್ಯೂ, ಸರಕಾರದ ಕುರಿತಾದ ಪ್ರಶ್ನೆಯು ಎಬ್ಬಿಸಲ್ಪಟ್ಟಂದಿನಿಂದ, ಯೆಹೋವನು ಅದನ್ನು ಬಗೆಹರಿಸಲು ತಾಳ್ಮೆಯಿಂದ ಸಮಯವನ್ನು ಕೊಟ್ಟಿರುತ್ತಾನೆ. ಮನುಷ್ಯನು ಕಲ್ಪಿಸಶಕ್ತನಾದ ಪ್ರತಿಯೊಂದು ತರದ ಸರಕಾರವನ್ನು ಸ್ಥಾಪಿಸುವರೇ ದೇವರು ಅವನಿಗೆ ಸಾವಿರಾರು ವರ್ಷಗಳ ಕಾಲವನ್ನು ಔದಾರ್ಯದಿಂದ ನೀಡಿದ್ದಾನೆ. ಫಲಿತಾಂಶವೇನು? ಏನಂದರೆ ಯಾವುದೇ ಮಾನವ ಸರಕಾರವು ದಬ್ಬಾಳಿಕೆಯನ್ನು, ಅನ್ಯಾಯವನ್ನು ಅಥವಾ ಅಸಂತೋಷಕ್ಕೆ ಕಾರಣವಾದ ಇತರ ಸಂಗತಿಗಳನ್ನು ತೆಗೆದುಹಾಕ ಶಕವ್ತಲವ್ಲೆಂದು ಪ್ರಕಟವಾಗಿ ತೋರಿಬಂದಿದೆ.
ನಿಶ್ಚಯವಾಗಿ ಮಾನವ ಇತಿಹಾಸವನ್ನು ನೋಡುವಲ್ಲಿ, ದೇವರು ಮಾನವ ಸರಕಾರವೆಲ್ಲವನ್ನು ತೆಗೆದು ಹಾಕಿ ಅದರ ಸ್ಥಳದಲ್ಲಿ ತನ್ನ ಸ್ವಂತ ಸರಕಾರವನ್ನು ನಿಲ್ಲಿಸುವ ತನ್ನ ಉದ್ದೇಶವನ್ನು ಪ್ರಕಟಿಸುವಾಗ, ಆತನು ಅನ್ಯಾಯವಂತನೆಂದು ಯಾರಾದರೂ ನಿಜವಾಗಿ ಹೇಳಶಕ್ತನೇ? ಖಂಡಿತವಾಗಿಯೂ ಇಲ್ಲ! ಬೈಬಲಿನ ಈ ಪ್ರವಾದನೆಯ ನೆರವೇರಿಕೆಯನ್ನು ನಾವು ನಿಶ್ಚಿತವಾಗಿ ಸ್ವಾಗತಿಸುವೆವು: “ಆ ರಾಜರ ಕಾಲದಲ್ಲಿ ಪರಲೋಕದ ದೇವರು ಒಂದು ರಾಜ್ಯವನ್ನು ಸ್ಥಾಪಿಸುವನು, ಅದು ಎಂದಿಗೂ ಆಳಿಯದು. ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು. ಅದು ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.”—ದಾನಿಯೇಲ 2:44.
ಆ ರಾಜ್ಯದ ಸ್ವರ್ಗೀಯ ರಾಜನು ಪುನರುತಿಥ್ತನಾದ ಯೇಸುವೇ. ಆತನನ್ನು ಆ ಸ್ಧಾನಕ್ಕೆ ಸಿದ್ಧಗೊಳಿಸುವುದಕ್ಕೆ—ಹಾಗೂ ಆತನೊಂದಿಗೆ ಜೊತೆರಾಜರಾಗಿ ಆಳಲಿರುವ ಮಾನವರನ್ನು ಆರಿಸಿಕೊಳ್ಳುವಿಕೆಗೆ—ಬಹಳ ಸಮಯವು ತಗಲಿದೆ. ಆ ಸಮಯದಲ್ಲಿಲ್ಲಾ ದೇವರು ತಾಳ್ಮೆಯನ್ನು ತೋರಿಸುತ್ತಾ ಇದ್ದನು.
ದೇವರ ತಾಳ್ಮೆಯಿಂದ ಈಗಲೇ ಪ್ರಯೋಜನ ಪಡೆಯಿರಿ
ಇಂದು ಕಡಿಮೆ ಪಕ್ಷ 212 ದೇಶಗಳಲ್ಲಿರುವ ಲಕ್ಷಾಂತರ ಜನರು ದೇವರ ತಾಳ್ಮೆಯಿಂದಾಗಿ ಪ್ರಯೋಜನ ಪಡೆಯುತ್ತಿದ್ದಾರೆ. ದೇವರಿಗೆ ವಿಧೇಯರಾಗುವ ತಮ್ಮ ಅಪೇಕ್ಷೆಯಿಂದ ಮತ್ತು ಆತನ ಸ್ವರ್ಗೀಯ ಸರಕಾರದ ಸೇವೆ ಮಾಡುವ ಆಶೆಯಿಂದ ಅವರು ಐಕ್ಯಮತಕ್ಕೆ ಬಂದಿದ್ದಾರೆ. ತಮ್ಮ ರಾಜ್ಯ ಸಭಾಗೃಹಗಳಲ್ಲಿ ಅವರು ಒಟ್ಟಾಗಿ ಕೂಡಿ ಬರುವಾಗ, ಬೈಬಲಿನ ತತ್ವಗಳನ್ನು ತಮ್ಮ ಜೀವಿತದಲ್ಲಿ ಅನ್ವಯಿಸುವುದು ಅದೆಷ್ಟು ಉತ್ತಮವೆಂದು ಅವರು ಕಲಿಯುತ್ತಾರೆ. ಈ ಲೋಕದ ವಿಭಜಿತ ರಾಜಕೀಯದಲ್ಲಿ ಅವರು ಪಾಲಿಗರಾಗುವುದಿಲ್ಲ. ಆದರೂ ಮಾನವ ಸರಕಾರಗಳನ್ನು ದೇವರು ತಾಳ್ಮೆಯಿಂದ ಎಷ್ಟರ ತನಕ ಕಾರ್ಯನಡಿಸಲು ಇರಗೊಡಿಸುತ್ತಾನೋ ಆ ತನಕ ಅವರು ಮಾನವ ಸರಕಾರಗಳಿಗೆ ಅಧೀನರಾಗಿಯೇ ಇರುವರು.—ಮತ್ತಾಯ 22:21; ರೋಮಾಪುರ 13:1-5.
ಇಷ್ಟು ಜನರ ನಡುವೆ ಇಂಥ ಸಹಕಾರವು, ಯೆಹೋವನೊಬ್ಬನೇ ತನ್ನನ್ನು ಸ್ವತಂತ್ರ ಚಿತ್ತದಿಂದ ಪ್ರೀತಿಸಲು, ಕಲಿಯಲು ಮತ್ತು ಸೇವಿಸಲು ಬಯಸುವವರಲ್ಲಿ ಹೊಂದಿಕೆಯನ್ನು ತರಶಕ್ತನೆಂಬದನ್ನು ಸಮರ್ಥಿಸುತ್ತದೆ. ನೀವೀ ಜನರನ್ನು ಭೇಟಿಯಾಗಿದೀರ್ದೆಂಬದಕ್ಕೆ ಸಂದೇಹವಿಲ್ಲ, ಯಾಕಂದರೆ ಅವರು ಯೇಸು ಕ್ರಿಸ್ತನು ಪ್ರಾರಂಭಿಸಿದ ಅದೇ ಕೆಲಸವನ್ನು ಅಂದರೆ ದೇವರ ರಾಜ್ಯದ ಸುವಾರ್ತೆಯನ್ನು ಪ್ರಚುರಪಡಿಸುವ ಕೆಲಸವನ್ನು ಮುಂದುವರಿಸುತ್ತಾ ಇದ್ದಾರೆ. ಈ ಕಾರ್ಯದ ಪರಮಾವಧಿಯನ್ನು ಮುಂತಿಳಿಸುತ್ತಾ ಯೇಸುವಂದದ್ದು: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನರಿಗೆ ಸಾಕ್ಷಿಗಾಗಿ ಸಾರಲಾಗುವದು. ಆಗ ಅಂತ್ಯವು ಬರುವುದು.”—ಮತ್ತಾಯ 24:14.
ಇನ್ನು ಹೆಚ್ಚು ಸಮಯವಿಲ್ಲ!
ದೇವರ ನೀತಿಯ ಸರಕಾರವು ಭೂಮಿಯ ದಿನದಿನದ ಆಳಿಕ್ವೆಯನ್ನು ವಹಿಸಿಕೊಳ್ಳುವದಕ್ಕೆ ಏರ್ಪಾಡುಗಳು ಬಹುಮಟ್ಟಿಗೆ ಪೂರ್ಣವಾಗಿವೆ ಎಂಬದನ್ನು ದೃಶ್ಯ ರುಜುವಾತು ಸಿದ್ಧಪಡಿಸುತ್ತದೆ. ನಾವೀ ಶತಮಾನದಲ್ಲಿ ಕಂಡಿರುವ ಮಾನವ ಸರಕಾರಗಳ ಅಪಜಯದ ಭೀಕರ ಫಲಿತಾಂಶಗಳನ್ನು ವರ್ಣಿಸಿಯಾದ ಬಳಿಕ, ಯೇಸುವಂದದ್ದು: “ಹಾಗೆಯೇ ನೀವು ಸಹ ಇವುಗಳಾಗುವದನ್ನು ನೋಡುವಾಗ ದೇವರ ರಾಜ್ಯವು ಹತ್ತರವದೆ ಎಂದು ತಿಳಿದುಕೊಳ್ಳಿರಿ.”—ಲೂಕ 21:10, 11, 31.
ಶೀಘ್ರದಲ್ಲೇ ದೇವರು ದುಷ್ಟರನ್ನು ಈ ಭೂದೃಶ್ಯದಿಂದ ತೆಗೆದು ಹಾಕುವನು. ಕೀರ್ತನೆಗಾರನ ಮಾತುಗಳು ಅಕ್ಷರಾರ್ಥಕ ಅನ್ವಯವನ್ನು ಪಡೆಯುವವು: “ಕೆಡುಕರು ತೆಗೆದುಹಾಕಲ್ಪಡುವರು. . . ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು; ಅವನಿದ್ದ ಸ್ಥಳದಲ್ಲಿ ಎಷ್ಟು ವಿಚಾರಿಸಿದರೂ ಅವನು ಸಿಕ್ಕುವದೇ ಇಲ್ಲ.” (ಕೀರ್ತನೆ 37:9, 10) ದುಷ್ಟರು ಇಲ್ಲದಿರುವ ಒಂದು ಲೋಕವನ್ನು ನೀವು ಊಹಿಸಿಕೊಳ್ಳಬಲ್ಲಿರೋ? ಆಗ ಕಾರ್ಯಾಧಿಗಳನ್ನು ಯಾರು ನೋಡಿಕೊಳ್ಳುವರು? ಬೈಬಲ್ ಹೇಳುವದು: “ಇಗೋ, ಒಬ್ಬ ರಾಜನು [ಸ್ವರ್ಗದಲ್ಲಿ ಸಿಂಹಾಸನಾರೂಢನಾದ ಕ್ರಿಸ್ತ ಯೇಸು] ನೀತಿಗನುಸಾರವಾಗಿ ಆಳುವನು. ಅಧಿಪತಿಗಳು [ಆತನಿಂದ ನೇಮಿತರಾದ ನಿಷ್ಠಾವಂತರು] ನ್ಯಾಯದಿಂದ ದೊರೆತನ ಮಾಡುವರು. ಧರ್ಮದಿಂದ ಸಮಾಧಾನ ಫಲಿಸುವದು. ಶಾಂತಿ ನಿರ್ಭಯಗಳು ಧರ್ಮದ ನಿತ್ಯ ಪರಿಣಾಮವಾಗಿರುವವು. ನನ್ನ ಜನರು ಸಮಾಧಾನ ನಿವಾಸದಲ್ಲಿಯೂ ನಿರ್ಭಯ ನಿಲಯಗಳಲ್ಲಿಯೂ ನೆಮ್ಮದಿಯ ಆಶ್ರಯಗಳಲ್ಲಿಯೂ ನೆಲೆಗೊಳ್ಳುವರು.”—ಯೆಶಾಯ 32:1, 17, 18
ಹೀಗೆ ದೇವರ ಸ್ವರ್ಗೀಯ ಸರಕಾರವು, ಮನುಷ್ಯನ ದುರ್ನಡತೆಯ ಕೆಟ್ಟ ಪ್ರಭಾವಗಳನ್ನು ತೆಗೆದು ಹಾಕುವದು ಮತ್ತು ತನ್ನಲ್ಲಿ ನಿರೀಕ್ಷೆ ಇಡುವ ಜನರನ್ನು ಒಂದು ಹೊಂದಿಕೆಯುಳ್ಳ ಮಾನವ ಸಮಾಜವಾಗಿ ಮಾರ್ಪಡಿಸುವದು. ಈ ಹೊಂದಿಕೆಯನ್ನು ವರ್ಣಿಸುತ್ತಾ, ಬೈಬಲ್ ಹೇಳುವುದು: “ತೋಳವು ಕುರಿಯ ಸಂಗಡ ವಾಸಿಸುವದು. ಚಿರತೆಯು ಮೇಕೆಯ ಮರಿಯೊಂದಿಗೆ ಮಲಗುವದು. ಕರುವೂ ಪ್ರಾಯದ ಸಿಂಹವೂ ಪುಷ್ಟ ಪಶುವೂ ಒಟ್ಟಿಗಿರುವವು. ಇವನ್ನು ಒಂದು ಚಿಕ್ಕ ಮಗುವು ನಡಿಸುವದು. . . . ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾರೂ ಕೇಡು ಮಾಡುವುದಿಲ್ಲ, ಯಾರೂ ಹಾಳುಮಾಡುವದಿಲ್ಲ; ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.”—ಯೆಶಾಯ 11:6-9.
ದೇವರು ತೋರಿಸಿದ ತಾಳ್ಮೆಯಿಂದಾಗಿ ಎಂಥ ವಿಸ್ಮಯಕರ ಫಲಿತಾಂಶವು! ಆದುದರಿಂದ, ದೇವರು ತುಂಬಾ ತಡಮಾಡುತ್ತಿದ್ದಾನೆಂದು ದೂರುವ ಬದಲಾಗಿ, ಆತನ ತಾಳ್ಮೆಯ ಸದುಪಯೋಗವನ್ನು ಮಾಡಿ ನಿಮ್ಮನ್ನು ಆ ರಾಜ್ಯಕ್ಕೆ ಯಾಕೆ ಅಧೀನಪಡಿಸಿಕೊಳ್ಳಬಾರದು? ಆತನ ಮಟ್ಟಗಳು ಯಾವುವು ಎಂಬದನ್ನು ಬೈಬಲಿನಿಂದ ಕಲಿಯಿರಿ, ಅವುಗಳಿಗೆ ಹೊಂದಿಕೆಯಾಗಿ ನಡಿಯಿರಿ. ಆತನಿಗೆ ಹೊಂದಿಕೆಯಲ್ಲಿ ಅಧೀನರಾಗಿರುವ ಇತರರೊಂದಿಗೆ ಸಹವಾಸಮಾಡಿರಿ. ಆಗ ದೇವರ ತಾಳ್ಮೆಯು ನಿಮಗೆ ನಿತ್ಯ ಆಶೀರ್ವಾದವಾಗಿ ಪರಿಣಮಿಸುವುದು. (w91 10/1)