ಜಯಶಾಲಿಯಾಗುವ ತಾಳ್ಮೆಯು
“ದೇವರ ಚಿತ್ತವನ್ನು ನೆರವೇರಿಸಿ ವಾಗ್ದಾನದ ಫಲವನ್ನು ಹೊಂದಬೇಕಾದರೆ ನಿಮಗೆ ತಾಳ್ಮೆ ಬೇಕು.”—ಇಬ್ರಿಯ 10:36.
1. ಇಂದು ಯೆಹೋವನನ್ನು ಸೇವಿಸುವ ಪ್ರತಿಯೊಬ್ಬನಿಗೆ ತಾಳ್ಮೆಯು ಅತ್ಯಾವಶ್ಯಕವೇಕೆ?
ಈ ಇಡೀ ಲೋಕವು ಒಬ್ಬ ರಾಜ್ಯದ್ರೋಹಿ ದೇವರ ಅಧಿಕಾರದ ಕೆಳಗೆ ಬಿದದ್ದೆ. ಅದರ ಅದೃಶ್ಯ ಅಧಿಪತಿಯಾದ ಪಿಶಾಚ ಸೈತಾನನು ತನ್ನೆಲ್ಲಾ ಪ್ರಯತ್ನಗಳನ್ನು ಯೆಹೋವನನ್ನು ವಿರೋಧಿಸುವುದರಲ್ಲಿ ಮತ್ತು ಮೆಸ್ಸೀಯ ರಾಜ್ಯದ ಮೂಲಕವಾಗಿ ಯೆಹೋವನ ವಿಶ್ವ ಪರಮಾಧಿಕಾರದ ನಿರ್ದೋಷೀಕರಣಕ್ಕೆ ವಿರುದ್ಧವಾಗಿ ಹೋರಾಡಲು ಕೇಂದ್ರೀಕರಿಸುತ್ತಿದ್ದಾನೆ. ಇದು ಯಾರು ದೇವರಿಗೆ ತನ್ನನ್ನು ಸಮರ್ಪಿಸಿಕೊಂಡು ಪರಮಾಧಿಕಾರದ ಪ್ರಶ್ನೆಯಲ್ಲಿ ಆತನ ಪಕ್ಷವನ್ನು ಹಿಡಿಯುತ್ತಾನೋ ಅವನಿಗೆ ಈ ಲೋಕದಿಂದ ಸದಾ ವಿರೋಧವು ಬರುವುದನ್ನು ಅನಿವಾರ್ಯವಾಗಿ ಮಾಡುತ್ತದೆ. (ಯೋಹಾನ 15:18-20; 1 ಯೋಹಾನ 5:19) ಆದ್ದರಿಂದ ನಮ್ಮಲ್ಲಿ ಪ್ರತಿಯೊಬ್ಬರು, ಈ ಲೋಕವು ಹರ್ಮಗೆದೋನ್ದಿನಲ್ಲಿ ಪೂರಾ ಪರಾಜಿತವಾಗುವ ವರೆಗೆ ತಾಳಿಕೊಳ್ಳಲು ತಮ್ಮನ್ನು ಬಲಪಡಿಸಿಕೊಳ್ಳುವ ಅಗತ್ಯವಿದೆ. ತಮ್ಮ ನಂಬಿಕೆ ಮತ್ತು ಸಮಗ್ರತೆಯಿಂದ ಈ ಲೋಕವನ್ನು ಜಯಿಸುವ ದೇವರ ಜಯಶಾಲಿಗಳಾದ ಜನರೊಡನೆ ಇರುವರೇ ಕೊನೆಯ ತನಕ ನಾವು ಅಲುಗಾಡದೆ ಸ್ಥಿರವಾಗಿ ನಿಲ್ಲಬೇಕು. (1 ಯೋಹಾನ 5:4) ನಾವದನ್ನು ಮಾಡುವುದು ಹೇಗೆ?
2, 3. ಯೆಹೋವ ದೇವರು ಮತ್ತು ಯೇಸು ಕ್ರಿಸ್ತನು ತಾಳ್ಮೆಯ ಮಹತ್ತಮ ಮಾದರಿಗಳಾಗಿರುವುದು ಹೇಗೆ?
2 ಒಂದು ವಿಧಾನವು, ತಾಳ್ಮೆಯ ಎರಡು ಮಹತ್ತಮ ಮಾದರಿಗಳ ಕಡೆಗೆ ಉತ್ತೇಜನಕ್ಕಾಗಿ ನಾವು ನೋಡುವ ಮೂಲಕವೇ. ಅವರು ಯಾರು? ಒಬ್ಬನು ಯಾರೆಂದರೆ “ಸೃಷ್ಟಿಗೆಲ್ಲಾ ಜೇಷ್ಠಪುತ್ರನ ಸ್ಥಾನಹೊಂದಿದ” ಯೇಸು ಕ್ರಿಸ್ತನೇ. ಆತನು ಗತಕಾಲದ ಒಂದು ಅಜ್ಞಾತ ಸಮಯದಲ್ಲಿ ಅಸ್ತಿತ್ವಕ್ಕೆ ಬಂದಂದಿನಿಂದ ದೇವರ ಸೇವೆಯಲ್ಲಿ ಎಡೆಬಿಡದೆ ನಂಬಿಗಸ್ತಿಕೆಯಿಂದ ಉಳಿದವನು. ದೇವರನ್ನು ನಂಬಿಗಸ್ತಿಕೆಯಿಂದ ಎಡೆಬಿಡದೆ ಸೇವಿಸಿದ್ದರಲ್ಲಿ ಯೇಸುವು, ಭೂಪರಲೋಕಗಳಲ್ಲಿ ಅನಂತರ ಅಸ್ತಿತ್ವಕ್ಕೆ ತರಲ್ಪಟ್ಟ ಬುದ್ಧಿಶಕ್ತಿಯ ಜೀವಿಗಳಿಗೆಲ್ಲಾ ಒಂದು ಮಾದರಿಯಾದನು. (ಕೊಲೊಸ್ಸೆಯ 1:15, 16) ಆದರೂ ತಾಳ್ಮೆಯ ಮಹಾನ್ ಮಾದರಿಯು ಸ್ವತಾಃ ಯೆಹೋವ ದೇವರೇ; ಆತನು ತನ್ನ ವಿಶ್ವ ಪರಮಾಧಿಕಾರದ ವಿರುದ್ಧವಾಗಿ ಎದ್ದ ದಂಗೆಯನ್ನು ದೀರ್ಘಕಾಲದ ತನಕ ತಾಳಿಕೊಂಡಿದ್ದಾನೆ ಮತ್ತು ಪರಮಾಧಿಕಾರದ ಪ್ರಶ್ನೆಯನ್ನು ಅಂತಿಮವಾಗಿ ಬಗೆಹರಿಸುವ ತನಕ ಹೀಗೆ ತಾಳಿಕೊಳ್ಳುವುದನ್ನು ಮುಂದರಿಸುತ್ತಾ ಇರುವನು.
3 ಯೆಹೋವನು ಎಲ್ಲಿ ಆತನ ಪ್ರತಿಷ್ಠೆ ಮತ್ತು ಚುರುಕಾದ ವೈಯಕ್ತಿಕ ಅನಿಸಿಕೆಗಳು ಸಂಬಂಧಿಸಿದೆಯೇ ಆ ವಿಷಯಗಳಲ್ಲಿ, ಒಂದು ಆದರ್ಶ ಮಾದರಿಯಿಂದ ತಾಳಿಕೊಂಡಿದ್ದಾನೆ. ಮಹಾ ಚಿತಾವಣೆಯ ಎದುರಲ್ಲೂ ಆತನು ತನ್ನನ್ನು ನಿಗ್ರಹಿಸಿ ಹಿಡಿದಿದ್ದಾನೆ ಮತ್ತು ಆತನನ್ನು ನಿಂದಿಸಿದವರ ವಿರುದ್ಧ— ಪಿಶಾಚನಾದ ಸೈತಾನನ ವಿರುದ್ಧ ಸಹಾ—ಕ್ರಿಯೆ ಕೈಕೊಳ್ಳುವದರಿಂದ ತನ್ನನ್ನು ನಿರ್ಬಂಧಿಸಿಕೊಂಡಿರುತ್ತಾನೆ. ದೇವರ ತಾಳ್ಮೆಗಾಗಿ ಮತ್ತು ಕರುಣೆಗಾಗಿ ನಾವು ಆಭಾರಿಗಳಾಗಿದ್ದೇವೆ. ಅವುಗಳ ಹೊರತು, ಅತ್ಯಂತ ಸಂಕ್ಷಿಪ್ತ ಅಸ್ತಿತ್ವವನ್ನು ಸಹಾ ನಾವು ಆನಂದಿಸುತ್ತಿದ್ದಿರಲಿಲ್ಲ. ನಿಶ್ಚಯವಾಗಿಯೂ ಯೆಹೋವನು ತಾಳ್ಮೆಯ ಮೂಲಕವಾಗಿ ತನ್ನನ್ನು ಅತುಲ್ಯವಾಗಿ ಪ್ರತ್ಯೇಕಿಸಿಕೊಂಡಿರುತ್ತಾನೆ.
4, 5. (ಎ) ಕುಂಬಾರನ ಕುರಿತಾದ ಪೌಲನ ದೃಷ್ಟಾಂತವು ದೇವರ ತಾಳ್ಮೆ ಮತ್ತು ಆತನ ಕರುಣೆಯನ್ನು ಹೇಗೆ ತೋರಿಸುತ್ತದೆ? (ಬಿ) ದೇವರ ಕರುಣೆಯು ವ್ಯರ್ಥವಾಗಿ ವ್ಯಯಿಸಲ್ಪಡಲಿಲ್ಲವೆಂಬದು ಹೇಗೆ ರುಜುವಾಗುವದು?
4 ಅಪೊಸ್ತಲ ಪೌಲನು ದೇವರ ತಾಳ್ಮೆಗೆ ಮತ್ತು ಆತನ ಕರುಣೆಗೆ ಕೈತೋರಿಸುತ್ತಾ, ಹೇಳಿದ್ದು: “ಉತ್ತಮವಾದ ಬಳಕೆಗೆ ಒಂದು ಪಾತ್ರೆಯನ್ನೂ ಹೀನವಾದ ಬಳಕೆಗೆ ಮತ್ತೊಂದು ಪಾತ್ರೆಯನ್ನೂ ಒಂದೇ ಮುದೆಯ್ದಿಂದ ಮಾಡುವುದಕ್ಕೆ ಕುಂಬಾರನಿಗೆ ಮಣ್ಣಿನ ಮೇಲೆ ಅಧಿಕಾರವಿಲ್ಲವೋ? ಆದರೆ ದೇವರು ತನ್ನ ಕೋಪವನ್ನು ತೋರಿಸಿ ತನ್ನ ಶಕ್ತಿಯನ್ನು ಪ್ರಸಿದ್ಧಿಪಡಿಸ ಬೇಕೆಂದಿದ್ದರೂ ಹಾಗೆ ಮಾಡದೆ ತನ್ನ ಕೋಪಕ್ಕೆ ಗುರಿಯಾದ ನಾಶನ ಪಾತ್ರರನ್ನು (ಪಾತ್ರೆಗಳನ್ನು, NW) ಬಹು ಸೈರಣೆಯಿಂದ ಸಹಿಸಿಕೊಂಡಿದ್ದಾನೆ ಮತ್ತು ಪ್ರಭಾವಹೊಂದುವದಕ್ಕೆ ತಾನು ಮುಂದಾಗಿ ಸಿದ್ಧಮಾಡಿದ ಕರುಣಾಪಾತ್ರರಲ್ಲಿ ತನ್ನ ಮಹಿಮಾತಿಶಯವನ್ನು ತೋರ್ಪಡಿಸಿದ್ದಾನೆ. ಆತನು ಕರುಣಿಸಿದ ನಮ್ಮನ್ನು ಯೆಹೂದ್ಯರೊಳಗಿಂದ ಮಾತ್ರ ಕರೆಯದೆ . . . ಅನ್ಯಜನರೊಳಗಿಂದ ಸಹ ಕರೆದನು.”—ರೋಮಾಪುರ 9:21-24.
5 ಮೇಲಿನ ಮಾತುಗಳು ತೋರಿಸುವಂತೆ, ಆತನ ತಾಳ್ಮೆಯ ಈ ಪ್ರಚಲಿತ ಅವಧಿಯಲ್ಲಿ, ಯೆಹೋವನು ತನ್ನ ಮಹಿಮಾಭರಿತ ಉದ್ದೇಶಗಳೊಂದಿಗೆ ಮುಂದೆ ಸಾಗುತ್ತಾನೆ ಮತ್ತು ನಿರ್ದಿಷ್ಟ ಮಾನುಷ ಪಾತ್ರೆಗಳಿಗೆ ಕರುಣೆಯನ್ನು ತೋರಿಸುತ್ತಾನೆ. ಈ ಪಾತ್ರೆಗಳನ್ನು ಆತನು ಸದಾಕಾಲದ ಮಹಿಮೆಗಾಗಿ ತಯಾರಿಸುತ್ತಾನೆ ಮತ್ತು ಹೀಗೆ ಅವನ ಮಹಾ ವಿರೋಧಿಯಾದ ಪಿಶಾಚನಾದ ಸೈತಾನನ ಮತ್ತು ಸೈತಾನನ ಸೇನೆಯ ದುರುದ್ದೇಶಗಳನ್ನು ಸೋಲಿಸಿಬಿಡುತ್ತಾನೆ. ಆದರೆ ಮಾನವ ಕುಲದವರೆಲ್ಲರೂ, ಕೋಪಕ್ಕೆ ಗುರಿಯಾಗಿ ನಾಶಕ್ಕೆ ಅರ್ಹವಾದ ಪಾತ್ರೆಗಳಾಗಿ ಪರಿಣಮಿಸಲಿಲ್ಲ. ಅದು ಸರ್ವಶಕ್ತನಾದ ದೇವರ ತಾಳ್ಮೆಯುಕ್ತ ಸೈರಣೆಯನ್ನು ಚೆನ್ನಾಗಿ ತೋರಿಸಿಕೊಟ್ಟಿದೆ. ಆತನ ಕರುಣೆಯೆಂದೂ ವ್ಯರ್ಥಗೊಳ್ಳದು. ಅದು, (1) ಯೆಹೋವನ ಪ್ರಿಯ ಕುಮಾರನಾದ ಯೇಸು ಕ್ರಿಸ್ತನ ಕೈಕೆಳಗೆ ಪರಲೋಕದಲ್ಲಿ ಒಂದು ಮಹಿಮಾಯುಕ್ತ ರಾಜ್ಯ ಕುಟುಂಬವನ್ನು ಪ್ರಾಪ್ತಿಸುವುದು, ಮತ್ತು (2) ಒಂದು ಪರದೈಸ ಭೂಮಿಯಲ್ಲಿ, ವಾಸಿಗೊಂಡು ಪರಿಪೂರ್ಣತೆಗೇರಿಸಲ್ಪಡುವ ಮತ್ತು ಎಲ್ಲರೂ ನಿತ್ಯಜೀವಕ್ಕೆ ಬಾಧ್ಯರಾಗುವ ಒಂದು ಮಾನವ ಕುಲವನ್ನು ಮುಂತರುವುದು.
ಕೊನೆಯ ತನಕ ತಾಳಿಕೊಳ್ಳುವುದು
6. (ಎ) ಕ್ರೈಸ್ತರು ತಾಳ್ಮೆಯ ಒಂದು ಪರೀಕ್ಷೆಯನ್ನು ವರ್ಜಿಸ ಸಾಧ್ಯವಿಲ್ಲವೇಕೆ? (ಬಿ) “ತಾಳ್ಮೆ” ಎಂಬದರ ಗ್ರೀಕ್ ಶಬ್ದವು ಸಾಮಾನ್ಯವಾಗಿ ಏನನ್ನು ಸೂಚಿಸುತ್ತದೆ?
6 ಅಂಥ ಆಶ್ಚರ್ಯಕರ ನಿರೀಕ್ಷೆಯು ಮುಂದಿರಲಾಗಿ, ಯೇಸುವಿನ ಬಲಪಡಿಸುವ ಮಾತುಗಳಾದ, “ಆದರೆ ಕಡೇವರೆಗೂ ತಾಳುವವನು ರಕ್ಷಣೆ ಹೊಂದುವನು” ಎಂಬದು ನಮ್ಮ ಕಿವಿಗಳಲ್ಲಿ ಸದಾ ಘಣಘಣಿಸುತ್ತಿರಬೇಕು. (ಮತ್ತಾಯ 24:13) ಕ್ರೈಸ್ತ ಶಿಷ್ಯತ್ವದ ಮಾರ್ಗದಲ್ಲಿ ಉತ್ತಮವಾಗಿ ಪ್ರಾರಂಭಿಸುವುದು ಅತಿ ಪ್ರಾಮುಖ್ಯವು. ಆದರೆ ಕಟ್ಟಕಡೆಗೆ ಗಣನೆಗೆ ಬರುವಂಥಾದ್ದು, ನಾವು ಹೇಗೆ ತಾಳಿಕೊಳ್ಳುತ್ತೇವೆ ಮತ್ತು ಕೈಕೊಂಡ ಮಾರ್ಗಕ್ರಮವನ್ನು ಹೇಗೆ ಕೊನೆಗೊಳಿಸುತ್ತೇವೆ ಎಂಬದೇ. ಅಪೊಸ್ತಲ ಪೌಲನು ಇದನ್ನು ಒತ್ತಿಹೇಳುತ್ತಾ, ಅಂದದ್ದು: “ದೇವರ ಚಿತ್ತವನ್ನು ನೆರವೇರಿಸಿ ವಾಗ್ದಾನದ ಫಲವನ್ನು ಹೊಂದಬೇಕಾದರೆ ನಿಮಗೆ ತಾಳ್ಮೆ ಬೇಕು.” (ಇಬ್ರಿಯ 10:36) ಇಲ್ಲಿ “ತಾಳ್ಮೆ” ಎಂಬದಾಗಿ ಭಾಷಾಂತರವಾದ ಗ್ರೀಕ್ ಶಬ್ದವು ಹೈಪೊಮೋನ್. ಇದು ಸಾಮಾನ್ಯವಾಗಿ ಕಷ್ಟಗಳಲ್ಲಿ, ಹಿಂಸೆಗಳಲ್ಲಿ, ಪರೀಕ್ಷೆಗಳಲ್ಲಿ ಮತ್ತು ಶೋಧನೆಗಳ ಎದುರಲ್ಲಿ ನಿರಾಶೆಗೊಳ್ಳದ, ಧೈರ್ಯವುಳ್ಳ, ದೃಢತೆಯುಳ್ಳ ಮತ್ತು ಸೈರಣೆಯುಳ್ಳ ತಾಳ್ಮೆಗೆ ಸೂಚಿಸುತ್ತದೆ. ಕಟ್ಟಕಡೆಯ ರಕ್ಷಣೆಯನ್ನು ನಾವು ಜಯಿಸಲು ನಿರೀಕ್ಷಿಸುವುದಾದರೆ, ಆ ರಕ್ಷಣೆಗಾಗಿ ತಯಾರಿಯ ಒಂದು ಆವಶ್ಯಕ ಭಾಗವಾದ ತಾಳ್ಮೆಯ ಒಂದು ಪರೀಕೆಗ್ಷೆ ನಮ್ಮನ್ನು ಅಧೀನಪಡಿಸಿಕೊಳ್ಳಲೇ ಬೇಕು.
7. ಯಾವ ವಿಚಾರದಿಂದ ನಾವು ಮೋಸಹೋಗಬಾರದು, ಮತ್ತು ಯಾರ ಮಾದರಿಗಳು ನಾವು ತಾಳಿಕೊಳ್ಳುವಂತೆ ಸಹಾಯ ಮಾಡುವುದು?
7 ನಾವು ಆ ಪರೀಕ್ಷೆಯನ್ನು ತರ್ವೆಯಾಗಿ ಮುಗಿಸಿಬಿಡಬಲ್ಲೆವು ಎಂಬ ಸ್ವಸಂತೋಷಾರ್ಥಕ ವಿಚಾರದಿಂದ ನಮ್ಮನ್ನು ನಾವೇ ಮೋಸಗೊಳಿಸಬಾರದು. ವಿಶ್ವ ಪರಮಾಧಿಕಾರದ ಮತ್ತು ಮನುಷ್ಯನ ಸಮಗ್ರತೆಯ ಪ್ರಶ್ನೆಗಳು ನಿರ್ಣಾಯಕವಾಗಿ ಉತ್ತರಿಸಲ್ಪಡಲಿಕ್ಕಾಗಿ, ಯೆಹೋವನು ತನ್ನನ್ನು ಒಳಗೂಡಿಸದೆ ಬಿಡಲಿಲ್ಲ. ಆತನು ಅವನ್ನು ಕ್ಷಣದಲ್ಲೇ ನಿರ್ಮೂಲಗೊಳಿಸ ಶಕ್ತನಿದ್ದರೂ ತನಗೆ ಅಹಿತಕರವಾಗಿದ್ದ ಸಂಗತಿಗಳನ್ನು ತಾಳಿಕೊಂಡನು. ಯೇಸು ಕ್ರಿಸ್ತನು ಸಹಾ ತಾಳ್ಮೆಯ ಆದರ್ಶ ನಮೂನೆಯಾಗಿದ್ದನು. (1 ಪೇತ್ರ 2:21; ರೋಮಾಪುರ 15:3-5 ಹೋಲಿಸಿ.) ಈ ಉಜ್ವಲ ಮಾದರಿಗಳು ನಮ್ಮ ಮುಂದಿರಲಾಗಿ, ನಾವು ಸಹಾ ಕಡೇ ವರೆಗೆ ತಾಳಿಕೊಳ್ಳಲು ಸಿದ್ಧ ಮನಸ್ಕರಾಗಿರಬೇಕು.—ಇಬ್ರಿಯ 12:2, 3.
ಒಂದು ಆವಶ್ಯಕ ಯೋಗ್ಯತೆ
8. ನಮಗೆಲ್ಲರಿಗೂ ಬೇಕಾದ ಯಾವ ಗುಣವನ್ನು ಅಪೊಸ್ತಲ ಪೌಲನು ಪ್ರದರ್ಶಿಸಿದನು?
8 ದೇವರ ಯಾವ ಸೇವಕನಾದರೂ, ಅತ್ಯಾರಂಭದ ಕಾಲದಿಂದಲೂ, ತನ್ನ ಸಮಗ್ರತೆಯನ್ನು ತಾಳ್ಮೆಯಿಂದ ರುಜುಪಡಿಸುವ ಅಗತ್ಯತೆಯಿಂದ ವಿನಾಯಿತಿಯನ್ನು ಪಡೆದಿಲ್ಲ. ಮರಣದ ತನಕ ನಂಬಿಗಸ್ತರಾಗಿ ಉಳಿದ ಮತ್ತು ಪರಲೋಕದಲ್ಲಿ ನಿತ್ಯಜೀವಕ್ಕಾಗಿ ಯೋಗ್ಯತೆ ಪಡೆದ ಬೈಬಲ್ ಇತಿಹಾಸದಲ್ಲಿನ ಅತ್ಯಂತ ಪ್ರಮುಖ ವ್ಯಕ್ತಿಗಳಿಗೆ ಸಹಾ ತಮ್ಮ ದೃಢತೆಯನ್ನು ರುಜುಪಡಿಸಿ ತೋರಿಸಲಿಕ್ಕಿತ್ತು. ಉದಾಹರಣೆಗೆ, ಹಿಂದೆ ಒಬ್ಬ ಫರಿಸಾಯನಾಗಿದ್ದ ತಾರ್ಸದ ಸೌಲನು ಕೊರಿಂಥದವರಿಗೆ ಹೇಳಿದ್ದು: “ನಾನು ಕೇವಲ ಅಲ್ಪನಾದರೂ ಅತಿಶ್ರೇಷ್ಠರಾದ ಅಪೊಸ್ತಲರು ಅನ್ನಿಸಿಕೊಳ್ಳುವ ಆ ಜನರಿಗಿಂತ ಒಂದರಲ್ಲಿಯಾದರೂ ಕಡಿಮೆಯಾಗಲಿಲ್ಲ. ನಾನು ಹಿಂಸೆಯನ್ನು ಸ್ಥಿರಚಿತ್ತದಿಂದ ತಾಳಿಕೊಳ್ಳುವದರಲ್ಲಿಯೂ ಸೂಚಕಕಾರ್ಯಗಳನ್ನೂ ಅದ್ಭುತಗಳನ್ನೂ ಮಹತ್ಕಾರ್ಯಗಳನ್ನೂ ನಡಿಸಿದ್ದರಲ್ಲಿಯೂ ಅಪೊಸ್ತಲನಿಗೆ ಇರತಕ್ಕ ಲಕ್ಷಣಗಳು ನಿಮ್ಮ ಮಧ್ಯದಲ್ಲಿ ತೋರಿದವು.” (2 ಕೊರಿಂಥ 12:11, 12) ಹೆಚ್ಚು ಕೆಲಸದ ಹೊರೆಯ ನಡುವೆಯೂ ಪೌಲನು ತನ್ನ ಶುಶ್ರೂಷೆಯನ್ನು ಎಷ್ಟು ಶ್ರೇಷ್ಠವೆಂದೆಣಿಸಿದನ್ದೆಂದರೆ, ಅದಕ್ಕಾಗಿ ಬಹಳಷ್ಟನ್ನು ತಾಳಿಕೊಂಡನು ಮತ್ತು ಅದರ ಮೇಲೆ ಯಾವುದೇ ನಿಂದೆಯು ಬಾರದಂತೆ ದಕ್ಷತೆಯಿಂದ ಪ್ರಯತ್ನಪಟ್ಟನು.—2 ಕೊರಿಂಥ 6:3, 4, 9.
9. (ಎ) ಅಭಿಷಿಕ್ತ ಉಳಿಕೆಯವರು ಹೇಗೆ ತಾಳ್ಮೆಯನ್ನು ತೋರಿಸಿರುತ್ತಾರೆ? (ಬಿ) ದೈವಿಕ ಸೇವೆಯಲ್ಲಿ ನಂಬಿಗಸ್ತಿಕೆಯಿಂದ ಮುಂದರಿಯಲು ನಮಗೆ ಯಾವುದು ಪ್ರೇರೇಪಕವಾಗಿ ಕಾರ್ಯನಡಿಸುವುದು?
9 ಅತ್ಯಾಧುನಿಕ ಸಮಯದಲ್ಲಿ, ಒಂದನೆಯ ಲೋಕ ಯುದ್ಧಕ್ಕೆ ಮುಂಚಿನಿಂದ ದೇವರನ್ನು ಸೇವಿಸುತ್ತಿದ್ದ ಅಭಿಷಿಕ್ತ ಕ್ರೈಸ್ತರು, 1914ನೇ ವರ್ಷವು ಅನ್ಯ ಜನಾಂಗಗಳ ಕಾಲದ ಅಂತ್ಯವನ್ನು ಗುರುತಿಸುವದೆಂದು ತಿಳಿದಿದ್ದರು ಮತ್ತು ಅವರು ತಮ್ಮ ಸ್ವರ್ಗೀಯ ಇನಾಮನ್ನು ಆ ಸ್ಮರಣೀಯ ವರ್ಷದಲ್ಲಿ ಪಡೆಯಲು ನಿರೀಕ್ಷಿಸಿದ್ದರು. ಆದರೆ ಅದು ಸಂಭವಿಸಲಿಲ್ಲ. ನಿಜಸಂಗತಿಗಳು ಈಗ ತೋರಿಸುವ ಪ್ರಕಾರ, ಹತ್ತಾರು ವರ್ಷಗಳು ಅವರಿಗೆ ಕೂಡಿಸಲ್ಪಟ್ಟಿವೆ. ಅವರ ಭೂಜೀವಾವಧಿಗೆ ಈ ಅನಿರೀಕ್ಷಿತ ವಿಸ್ತಾರ್ಯ ಉಂಟಾದ ಸಮಯದಲ್ಲಿ, ಅವರು ಯೆಹೋವ ದೇವರ ಹಸ್ತದಿಂದ ಶುದ್ಧೀಕರಣಕ್ಕೆ ಒಳಗಾದರು. (ಜೆಕರ್ಯ 13:9; ಮಲಾಕಿಯ 3:2, 3) ತಾಳ್ಮೆಯಿಂದ ಮುಂದುವರಿಯುವಂಥಾದ್ದು ಅವರ ಒಳ್ಳೇದಕ್ಕಾಗಿ ಕಾರ್ಯನಡಿಸಿತು. ಯೆಹೋವನ ಸೇವಕರೋಪಾದಿ, ಆತನ ನಾಮದ ಜನರಾಗಿ ನೇಮಕಹೊಂದಲು ಅವರು ಉಲ್ಲಾಸಪಟ್ಟರು. (ಯೆಶಾಯ 43:10-12; ಅಪೊಸ್ತಲರ ಕೃತ್ಯಗಳು 15:14) ಇಂದು, ಎರಡು ಲೋಕ ಯುದ್ಧಗಳೊಳಗಿಂದ ಮತ್ತು ಹಲವಾರು ಚಿಕ್ಕ ಹೋರಾಟಗಳೊಳಗಿಂದ ಹೊರನಡಿಸಲ್ಪಟ್ಟವರಾಗಿ, ಅವರೀಗ 40 ಲಕ್ಷಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿರುವ ಬೇರೆ ಕುರಿಗಳ ಬೆಳೆಯುವ ಮಹಾ ಸಮೂಹದಿಂದ ಸುವಾರ್ತೆಯನ್ನು ಸಾರುವ ಕಾರ್ಯಕ್ಕೆ ಸಹಾಯವನ್ನು ಪಡೆಯುತ್ತಿರುವುದರಲ್ಲಿ ಆನಂದವನ್ನು ಆನುಭವಿಸುತ್ತಿದ್ದಾರೆ. ಅವರು ಆನಂದಿಸುವಂಥ ಆತ್ಮಿಕ ಪರದೈಸವು ಭೂಮಿಯಲ್ಲಿಲ್ಲಾ ಪಸರಿಸಿದೆ, ಅತ್ಯಂತ ಕಟ್ಟಕಡೆಯ ದ್ವೀಪಗಳಿಗೂ ಅದು ಹಬ್ಬಿದೆ. ನಮ್ಮ ವಯಸ್ಸು ಸಂದಷ್ಟಕ್ಕೆ ನಾವು ಹೆಚ್ಚೆಚ್ಚಾಗಿ ಗಣ್ಯಮಾಡುವ ಈ ಅನುಗ್ರಹಿತ ಉಪಚಾರವು, ಯೆಹೋವನ ಚಿತ್ತ ಮತ್ತು ಉದ್ದೇಶವು ಪೂರ್ಣವಾಗಿ ನೆರವೇರುವ ತನಕ ಆ ದಿವ್ಯ ಸೇವೆಯನ್ನು ನಂಬಿಗಸ್ತಿಕೆಯಿಂದ ನಿರ್ವಹಿಸುವಂತೆ ಪ್ರೇರೇಪಕವಾಗಿರುತ್ತದೆ.
10. ನಮಲ್ಲಿ ಯಾವುದೇ ನಿರ್ಬಲತೆ ಉಂಟಾಗದಂತೆ ಕ್ರಮವಾಗಿ ಯಾವುದರ ಅಗತ್ಯ ನಮಗಿದೆ?
10 ನಮ್ಮ ದೃಢತೆಯ ಮೇಲೆ ನಮ್ಮ ಬಹುಮಾನವು ಹೊಂದಿಕೊಂಡಿರುವುದರಿಂದ, ಈ ಅತ್ಯಾವಶ್ಯಕ ವಿಷಯದಲ್ಲಿ ಸದಾ ಬುದ್ಧಿವಾದವನ್ನು ಪಡೆಯುವ ಅಗತ್ಯ ನಮಗಿದೆ. (1 ಕೊರಿಂಥ 15:58; ಕೊಲೊಸ್ಸೆಯ 1:23) ಯೆಹೋವನ ಜನರ ನಡುವೆ ಯಾವುದೇ ನಿರ್ಬಲತೆಯು ಇಲ್ಲದಿರುವಂತೆ, ಸತ್ಯವನ್ನು ಮತ್ತು ಸತ್ಯವನ್ನು ಪ್ರಚುರಪಡಿಸುವ ಆ ಅಮೂಲ್ಯ ಸೌಭಾಗ್ಯವನ್ನು ಬಿಗಿಯಾಗಿ ಹಿಡಿದುಕೊಳ್ಳುವಂತೆ ನಾವು ಕ್ರಮವಾಗಿ ಉತ್ತೇಜಿಸಲ್ಪಡಬೇಕು; ಪೌಲ ಮತ್ತು ಬಾರ್ನಬರ ಮರುಭೇಟಿಗಳಿಂದ ಒಂದನೆಯ ಶತಕದಲ್ಲಿ ಹೊಸದಾಗಿ ರೂಪಿಸಲ್ಪಟ್ಟ ಸಭೆಗಳು ಉತ್ತೇಜನವನ್ನು ಪಡೆದಂತೆಯೇ. (ಅಪೊಸ್ತಲರ ಕೃತ್ಯಗಳು 14:21, 22) ಅಪೊಸ್ತಲ ಯೋಹಾನನು ತನ್ನ ಮಾತಿನಲ್ಲಿ ವ್ಯಕ್ತಪಡಿಸಿದ ಪ್ರಕಾರ, ಸತ್ಯವು ನಮ್ಮಲ್ಲಿ ನೆಲೆಗೊಳ್ಳುವುದು, “ಸದಾಕಾಲವೂ ನಮ್ಮೊಂದಿಗಿರುವದು” ಎಂಬ ದೃಢ ನಿರ್ಧಾರ ಮತ್ತು ನಿರ್ಣಯವು ನಮ್ಮದಾಗಿರಲಿ.—2 ಯೋಹಾನ 2.
ನಿಶ್ಚಂಚಲ ತಾಳ್ಮೆಯಿಂದ ಕಾಯುವುದು
11. ತನ್ನ ಸೇವಕರ ಸಂಬಂಧದಲ್ಲಿ ದೇವರ ಕಾರ್ಯವಿಧಾನವು ಏನೆಂದು ತೋರಿಬರುತ್ತದೆ, ಮತ್ತು ಇದು ಯೋಸೇಫನ ವಿಷಯದಲ್ಲಿ ಹೇಗೆ ಚಿತ್ರಿತವಾಗಿದೆ?
11 ನಮ್ಮ ವಿಷಯದಲ್ಲಾಗುವ ಪರೀಕ್ಷೆಯು ಕೊನೆಗೊಳ್ಳುವುದಕ್ಕೆ ಸಮಯವು ತಗಲುತ್ತದೆ. (ಯಾಕೋಬ 1:2-4) ಕಾಯಿರಿ! ಕಾಯಿರಿ! ಕಾಯಿರಿ! ಎಂಬದೇ ದೇವರ ಕಾರ್ಯವಿಧಾನವಾಗಿತ್ತು—ನಂಬಿಕೆಯಲ್ಲಿ ಮುಂದರಿಯುವ ತಮ್ಮ ನಿರ್ಧಾರದಲ್ಲಿ ದೇವರ ಪುರಾತನ ಸೇವಕರು ಪರೀಕೆಗ್ಷೊಳಗಾದ ಸಂದರ್ಭದಲ್ಲಿ. ಆದರೆ ಆ ಕಾಯುವಿಕೆಯು, ಕಟ್ಟಕಡೆಗೆ, ದೇವರ ನಂಬಿಗಸ್ತ ಸೇವಕರಿಗೆ ಯಾವಾಗಲೂ ಪ್ರತಿಫಲದಾಯಕವಾಗಿ ರುಜುವಾಗಿತ್ತು. ದೃಷ್ಟಾಂತಕ್ಕಾಗಿ, ಯೋಸೇಫನು ದಾಸತ್ವದಲ್ಲಿ ಮತ್ತು ಬಂಧಿತನಾದ ಸ್ಥಿತಿಯಲ್ಲಿ 13 ವರ್ಷಗಳ ತನಕ ಕಾದನು, ಆದರೆ ಆ ಅನುಭವವು ಅವನ ವ್ಯಕ್ತಿತ್ವವನ್ನು ಪರಿಶೋಧಿಸಿ ಶುದ್ಧಮಾಡಿತು.—ಕೀರ್ತನೆ 105:17-19.
12, 13. (ಎ) ನಂಬಿಗಸ್ತ ತಾಳ್ಮೆಗೆ ಅಬ್ರಹಾಮನು ಹೇಗೆ ಆದರ್ಶ ಮಾದರಿಯಾಗಿದ್ದನು? (ಬಿ) ಯಾವ ರೀತಿಯಲ್ಲಿ ಅಬ್ರಹಾಮನ ನಂಬಿಕೆ ಮತ್ತು ತಾಳ್ಮೆಯು ನಮಗೆ ಮಾದರಿಯಾಗಿ ಇಡಲ್ಪಟ್ಟಿದೆ?
12 ದೇವರು ಅಬ್ರಹಾಮನನ್ನು ಕಸೀಯ್ದರ ಊರ್ ದೇಶದಿಂದ ಕರೆದು ವಾಗ್ದತ್ತ ದೇಶಕ್ಕೆ ಹೋಗುವಂತೆ ಆಜ್ಞಾಪಿಸಿದಾಗ ಅವನು ಆವಾಗಲೇ 75 ವರ್ಷ ವಯಸ್ಸಿನವನಾಗಿದ್ದನು. ಸುಮಾರು 125 ವಯಸ್ಸಿನಲ್ಲಿ ಅವನು ದೇವರ ವಾಗ್ದಾನದ ಪ್ರತಿಜ್ಞಾ-ಬಂಧಕ ದೃಢೀಕರಣವನ್ನು ಪಡೆದನು—ತನ್ನ ಪ್ರಿಯ ಪುತ್ರನಾಗಿದ್ದ ಇಸಾಕನನ್ನು ಅರ್ಪಿಸುವ ಬಿಂದುವಿಗೂ ಮುಂದರಿದ ಮೂಲಕ ಮತ್ತು ಯೆಹೋವನ ದೂತನು ಅವನ ಕೈಹಿಡಿದು ಆ ಅರ್ಪಣೆಯನ್ನು ತಡೆದಾಗ ಮಾತ್ರವೇ ನಿಂತು ತನ್ನ ನಂಬಿಕೆಯ ಬಲವನ್ನು ಅಬ್ರಹಾಮನು ಪ್ರದರ್ಶಿಸಿದ ಅನಂತರವೇ ಅದು ಸಂಭವಿಸಿತ್ತು. (ಆದಿಕಾಂಡ 22:1-18) ಒಂದು ಅಪರಿಚಿತ ದೇಶದಲ್ಲಿ ಪ್ರವಾಸಿಯಂತೆ ಐವತ್ತು ವರ್ಷಗಳ ತನಕ ಕಾಯುವುದು ಅಬ್ರಹಾಮನಿಗೆ ಒಂದು ದೀರ್ಘ ಅವಧಿಯಾಗಿತ್ತು, ಆದರೂ ಇನ್ನೊಂದು 50 ವರ್ಷಗಳ ತನಕ ಅವನು ದೃಢತೆಯಿಂದ ನಿಂತು ಕೊನೆಗೆ 175 ವಯಸ್ಸಿನಲ್ಲಿ ತೀರಿಕೊಂಡನು. ಆ ಕಾಲದಲ್ಲೆಲ್ಲಾ ಅಬ್ರಹಾಮನು, ಯೆಹೋವ ದೇವರ ನಂಬಿಗಸ್ತ ಸಾಕ್ಷಿಯೂ ಪ್ರವಾದಿಯೂ ಆಗಿದ್ದನು.—ಕೀರ್ತನೆ 105:9-15.
13 ಅಬ್ರಹಾಮನ ನಂಬಿಕೆ ಮತ್ತು ತಾಳ್ಮೆಯು, ಅಬ್ರಹಾಮನ ಸಂತಾನವಾದ ಯೇಸು ಕ್ರಿಸ್ತನ ಮೂಲಕ ವಾಗ್ದತ್ತ ಆಶೀರ್ವಾದಗಳನ್ನು ಪಡೆಯಲು ಬಯಸುವ ದೇವರ ಸೇವಕರೆಲ್ಲರಿಗೆ ಒಂದು ಮಾದರಿಯಾಗಿ ನೀಡಲ್ಪಟ್ಟಿದೆ. (ಇಬ್ರಿಯ 11:8-10, 17-19) ಅವನ ಕುರಿತಾಗಿ, ಇಬ್ರಿಯ 6:11-15ರಲ್ಲಿ ನಾವು ಓದುವುದು: “ನಿಮ್ಮ ನಿರೀಕ್ಷೆ ದೃಢಮಾಡಿಕೊಂಡು ಕಡೇ ತನಕ ಹಿಡಿಯುವದರಲ್ಲಿಯೂ ನಿಮ್ಮಲ್ಲಿ ಪ್ರತಿಯೊಬ್ಬರು ಅದೇ ಆಸಕ್ತಿಯನ್ನು ತೋರಿಸಬೇಕೆಂದು ಅಪೇಕ್ಷಿಸುತ್ತೇವೆ. ನೀವು ಮಂದಮತಿಗಳಾಗಿರದೆ ಯಾರು ವಾಗ್ದಾನಗಳನ್ನು ನಂಬಿ ಅವುಗಳ ಫಲಕ್ಕೋಸ್ಕರ ಬಹು ದಿನಗಳ ವರೆಗೂ ಕಾದಿದ್ದು ಆ ಫಲವನ್ನು ಹೊಂದುತ್ತಾರೋ ಅವರನ್ನು ಅನುಸರಿಸುವವರಾಗಬೇಕೆಂದು ಕೋರುತ್ತೇನೆ. ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದಾಗ ತನಗಿಂತ ಹೆಚ್ಚಿನವನ ಆಣೆಯಿಡುವದಕ್ಕಾಗದೆ ಇದದ್ದರಿಂದ ತನ್ನಾಣೆಯಿಟ್ಟು—ನಿಜವಾಗಿ ನಿನ್ನನ್ನು ಆಶೀರ್ವದಿಸೇ ಆಶೀರ್ವದಿಸುವೆನು, ನಿನ್ನನ್ನು ಹೆಚ್ಚಿಸೇ ಹೆಚ್ಚಿಸುವೆನು ಎಂದು ಹೇಳಿದನಷ್ಟೆ. ಆ ವಾಗ್ದಾನದ ಫಲಕ್ಕೋಸ್ಕರ ಅಬ್ರಹಾಮನು ಬಹು ದಿವಸ ಕಾದುಕೊಂಡಿದ್ದು ಆ ಫಲವನ್ನು ದೇವರು ಹೇಳಿದ ಹಾಗೆಯೇ ಹೊಂದಿದನು.”
14. ತಾಳ್ಮೆಯ ಪರೀಕೆಗ್ಷೆ ಅಂತ್ಯವಿಲ್ಲ ಮತ್ತು ಬಹುಮಾನವು ಎಟಕಲಾಗದು ಎಂದು ನಾವೇಕೆ ನೆನಸಬಾರದು?
14 ಈವಾಗಲೇ ಅಭಿಷಿಕ್ತ ಉಳಿಕೆಯವರು 1914ರಲ್ಲಿ ಅನ್ಯಜನಾಂಗಗಳ ಕಾಲವು ಅಂತ್ಯವಾದ 1914ರಿಂದ 77 ವರ್ಷಗಳು ದಾಟುವುದನ್ನು ಕಂಡಿದ್ದಾರೆ. ಅವರಲ್ಲಿ ಕೆಲವರು 1914ರಲ್ಲೇ ಪರಲೋಕದಲ್ಲಿ ನಿಜ ಕ್ರೈಸ್ತ ಸಭೆಯ ಮಹಿಮೆಗೇರುವಿಕೆಯನ್ನು ನಿರೀಕ್ಷಿಸಿದ್ದರು. ಈ ಉಳಿಕೆಯವರಿಗೆ ಇನ್ನೆಷ್ಟು ಕಾಲ ಕಾಯಲಿದೆಯೆಂದು ನಮಗೆ ಗೊತ್ತಿಲ್ಲ. ಹೀಗಿರಲಾಗಿ ನಾವು ಚಂಚಲಚಿತ್ತರಾಗಿ, ಇದು ಅಂತ್ಯವಿಲ್ಲದ ಕಾಯುವಿಕೆ ಹಾಗೂ ಎಟಕಲಾಗದ ಮೋಸಕಾರಕ ಗುರಿ ಎಂದು ನೆನಸಬೇಕೋ? ಇಲ್ಲ! ಅದು ದೇವರ ಸಾರ್ವಭೌಮತೆಯನ್ನು ಅಥವಾ ಆತನ ನಾಮವನ್ನು ಎಂದೂ ನಿರ್ದೋಷೀಕರಿಸಲಾರದು. ನಮಗೆ ವಿಜಯವನ್ನು ಮತ್ತು ಫಲಿತಾಂಶವಾಗಿ ದೊರೆಯುವ ನಿತ್ಯಜೀವವನ್ನು ಅನುಗ್ರಹಿಸುವಾಗ ಆತನು ಲೋಕದ ಮುಂದೆ ನ್ಯಾಯಸಮ್ಮತನಾಗಿ ತೋರಿಬರಲಾರನು. ಎಷ್ಟೇ ದೀರ್ಘಕಾಲ ಕಾಯಲಿರಲಿ, ಉಳಿಕೆಯವರು ನಂಬಿಗಸ್ತ ಕುರಿಸದೃಶ ಸಂಗಡಿಗರೊಂದಿಗೆ ಯೆಹೋವನು ತನ್ನ ಕ್ಲುಪ್ತಕಾಲದಲ್ಲಿ ಕ್ರಿಯೆಗೈಯುವಂತೆ ಕಾಯುತ್ತಾ ಇರಲು ನಿರ್ಧಾರವನ್ನು ಮಾಡಿದ್ದಾರೆ. ಇಂಥ ಆದರ್ಶನೀಯ ಸ್ಥಿರಪ್ರಯತ್ನವನ್ನು ತೋರಿಸುವುದರಲ್ಲಿ ಅವರು ಅಬ್ರಹಾಮನ ಮಾರ್ಗಕ್ರಮವನ್ನು ಅನುಸರಿಸುವವರಾಗಿದ್ದಾರೆ.—ರೋಮಾಪುರ 8:23-25.
15. (ಎ) ನಮ್ಮ ಗುರಿನುಡಿಯು ಏನಾಗಿರಬೇಕು, ಮತ್ತು ಯಾವ ಅನುಭವಗಳೊಳಗಿಂದ ದೇವರು ನಮ್ಮನ್ನು ವಿಜಯೋತ್ಸಾಹದಿಂದ ಪೋಷಿಸಿದ್ದಾನೆ? (ಬಿ) ಪೌಲನಿಂದ ಕೊಡಲ್ಪಟ್ಟ ಯಾವ ಬುದ್ಧಿವಾದವು ನಮ್ಮ ದಿನಗಳಿಗಾಗಿ ತಕ್ಕದ್ದಾಗಿ ಉಳಿದದೆ?
15 ಹೀಗಿರಲಾಗಿ, ಗುರಿನುಡಿಯು ಇನ್ನೂ ದೇವರ ಚಿತ್ತವನ್ನು ಮಾಡುವುದರಲ್ಲಿ ನಿಶ್ಚಂಚಲವಾದ ತಾಳ್ಮೆಯೇ. (ರೋಮಾಪುರ 2:6, 7) ಗತಕಾಲದಲ್ಲಿ ಆತನು ನಮ್ಮನ್ನು ತೀವ್ರ ಕಷ್ಟಗಳಲ್ಲಿ, ಜೈಲುವಾಸ ಮತ್ತು ಕೂಟಶಿಬಿರಗಳಲ್ಲೂ, ಬೆಂಬಲಿಸಿ ನಡಿಸಿರುತ್ತಾನೆ ಮತ್ತು ತನ್ನ ನಾಮ ಮತ್ತು ಉದ್ದೇಶಕ್ಕೆ ಮಹಿಮೆಯನ್ನು ತರುವ ರೀತಿಯಲ್ಲಿ ನಮ್ಮನ್ನು ವಿಜಯೋತ್ಸವದಿಂದ ಹೊರಗೆ ತಂದಿರುತ್ತಾನೆ.a ನಮ್ಮ ಪರೀಕ್ಷೆಯು ಕೊನೆಗೊಳ್ಳಲು ಇನ್ನೂ ಉಳಿದಿರುವ ಸಮಯದಲ್ಲಿ, ಯೆಹೋವನು ಅದನ್ನೇ ಮಾಡುತ್ತಾ ಮುಂದರಿಯುವನು. ಪೌಲನ ಬುದ್ಧಿವಾದವು ನಮ್ಮ ದಿನಗಳಿಗೆ ಅತಿ ತಕ್ಕದ್ದಾಗಿದೆ: “ದೇವರ ಚಿತ್ತವನ್ನು ಪೂರ್ಣವಾಗಿ ನಡಿಸಿ ನೆರವೇರಿಸುವಂತೆ ಮತ್ತು ವಾಗ್ದಾನದ ಫಲವನ್ನು ಹೊಂದಿ ಅದನ್ನು ಪೂರ್ಣವಾಗಿ ಆನಂದಿಸುವಂತೆ ನಿಮಗೆ ದೃಢವಾದ ಸೈರಣೆ ಮತ್ತು ತಾಳ್ಮೆಯು ಬೇಕು.”—ಇಬ್ರಿಯ 10:36, ದ ಆ್ಯಂಪಿಫ್ಲೈಡ್ ಬೈಬಲ್; ರೋಮಾಪುರ 8:37.
16. ಯೆಹೋವನಿಗೆ ನಮ್ಮ ಸಮರ್ಪಣೆಯನ್ನು ಒಂದು ಸೀಮಿತ ರೀತಿಯಲ್ಲಿ ಯಾ ಪರಿಮಿತಿಯುಳ್ಳದ್ದಾಗಿ ನಾವೇಕೆ ವೀಕ್ಷಿಸಬಾರದು?
16 ಆದುದರಿಂದ ಈ ದುಷ್ಟ ಲೋಕದ ನಡುವೆ ಎಷ್ಟರ ತನಕ ಯೆಹೋವನು ನಮಗೆ ಕೆಲಸ ಮಾಡಲು ಕೊಟ್ಟಿರುತ್ತಾನೋ ಅದು ಮುಗಿಯುವ ತನಕ, ಯೇಸುವಿನ ಮಾದರಿಯನ್ನು ಅನುಸರಿಸುತ್ತಾ, ಅದನ್ನು ಮಾಡುತ್ತಿರೋಣ. (ಯೋಹಾನ 17:4) ಸ್ವಲ್ಪ ಕಾಲ ಸೇವೆ ಮಾಡುತ್ತೇವೆ ಮತ್ತು ಅನಂತರ ಹರ್ಮಗೆದ್ದೋನ್ ಬರುವುದು ಎಂಬ ಕರಾರಿನ ಮೇಲೆ ನಾವು ಯೆಹೋವನಿಗೆ ನಮ್ಮ ಸಮರ್ಪಣೆಯನ್ನು ಮಾಡಿಲ್ಲ. ನಮ್ಮ ಸಮರ್ಪರ್ಣೆಯು ಸದಾಕಾಲದ್ದು. ದೇವರು ನಮಗೆ ಕೊಟ್ಟಿರುವ ಕೆಲಸವು ಹರ್ಮಗೆದ್ದೋನ್ ಯುದ್ಧದೊಂದಿಗೆ ನಿಂತುಹೋಗದು. ಆದರೂ, ಮಾಡಲಿರುವ ಕಾರ್ಯವನ್ನು ಹರ್ಮಗೆದೋನ್ದಿನ ಮುಂಚೆ ಮಾಡಿ ಮುಗಿಸಿದ ಮೇಲೆಯೇ ಆ ಮಹಾ ಯುದ್ಧಾನಂತರದ ಮಹತ್ತಾದ ವಿಷಯಗಳನ್ನು ನಾವು ನೋಡುವೆವು. ಆಗ, ಈ ಕಾರ್ಯವನ್ನು ಮಾಡುತ್ತಾ ಇರುವ ಸಂತೋಷದ ಸುಯೋಗದೊಂದಿಗೆ, ಆತನು ವಾಗ್ದಾನಿಸಿರುವ ಮತ್ತು ದೀರ್ಘಕಾಲದಿಂದ ಎದುರುನೋಡುತ್ತಿರುವ ಆಶೀರ್ವಾದಗಳ ಬಹುಮಾನವನ್ನೂ ಪಡೆಯುವೆವು.—ರೋಮಾಪುರ 8:32.
ದೇವರ ಕಡೆಗಿನ ಪ್ರೀತಿ ನಮಗೆ ತಾಳಿಕೊಳ್ಳಲು ಸಹಾಯ ಮಾಡುತ್ತದೆ
17, 18. (ಎ) ಒತ್ತಡಗಳ ಸಮಯದಲ್ಲಿ ದೇವರ ಅನುಗ್ರಹದೊಂದಿಗೆ ತಾಳಿಕೊಳ್ಳಲು ನಮಗೆ ಯಾವುದು ಸಹಾಯಕಾರಿಯು? (ಬಿ) ಜಯವನ್ನು ಗಳಿಸಲು ನಮಗೆ ಯಾವುದು ಸಹಾಯ ಮಾಡುವುದು, ಮತ್ತು ಉಳಿದಿರುವ ಸಮಯದ ಕುರಿತು ನಾವೇನನ್ನು ಹೇಳಲಾರೆವು?
17 ಸಮಯವು ಒತ್ತಡಗಳಿಂದ ಕೂಡಿರುವಾಗ ಪ್ರಾಯಶಃ ನಾವು ಹೀಗೆ ಕೇಳಬಹುದು: ‘ಇನ್ನೂ ಹೆಚ್ಚು ಕಾಲ ನಾವು ತಾಳಿಕೊಳ್ಳುವದು ಹೇಗೆ?’ ಇದಕ್ಕೆ ಉತ್ತರ? ದೇವರನ್ನು ನಮ್ಮೆಲ್ಲಾ ಹೃದಯ, ಮನಸ್ಸು, ಆತ್ಮ ಮತ್ತು ಶಕಿಯ್ತಿಂದ ಪ್ರೀತಿಸುವ ಮೂಲಕವೇ. “ಪ್ರೀತಿ ಬಹು ತಾಳ್ಮೆಯುಳ್ಳದ್ದು, ಪ್ರೀತಿ ದಯೆ ತೋರಿಸುವದು. ಪ್ರೀತಿ ಹೊಟ್ಟೆಕಿಚ್ಚು ಪಡುವದಿಲ್ಲ, ಹೊಗಳಿಕೊಳ್ಳುವದಿಲ್ಲ, ಉಬ್ಬಿಕೊಳ್ಳುವದಿಲ್ಲ; ಎಲ್ಲವನ್ನು ಅಡಗಿಸಿಕೊಳ್ಳುತ್ತದೆ, ಎಲ್ಲವನ್ನೂ ನಂಬುತ್ತದೆ, ಎಲ್ಲವನ್ನೂ ನಿರೀಕ್ಷಿಸುತ್ತದೆ, ಎಲ್ಲವನ್ನೂ ಸಹಿಸಿಕೊಳ್ಳುತ್ತದೆ. ಪ್ರೀತಿಯು ಎಂದಿಗೂ ಬಿದ್ದುಹೋಗುವದಿಲ್ಲ.” (1 ಕೊರಿಂಥ 13:4, 7, 8) ದೇವರ ಕಡೆಗಿನ ಪ್ರೀತಿಯಿಂದಾಗಿ ನಾವು ತಾಳಿಕೊಳ್ಳದ ಹೊರತು, ನಮ್ಮ ತಾಳ್ಮೆಗೆ ಬೆಲೆಯಿರುವುದಿಲ್ಲ. ಆದರೆ ಯೆಹೋವನ ಕಡೆಗೆ ಭಕ್ತಿಯಿಂದಾಗಿ ನಾವು ಕಷ್ಟಗಳನ್ನು ಸಹಿಸಿಕೊಂಡಿರುವುದಾದರೆ, ಆಗ ತಾಳ್ಮೆಯು ಆತನಿಗಾಗಿ ನಮ್ಮ ಪ್ರೀತಿಯನ್ನು ಆಳಗೊಳಿಸಲು ಪ್ರಭಾವಿಸುವದು. ತನ್ನ ತಂದೆಯಾದ ದೇವರ ಕಡೆಗಿನ ಪ್ರೀತಿಯು ಯೇಸುವನ್ನು ತಾಳಿಕೊಳ್ಳುವಂತೆ ಶಕ್ತನಾಗಿ ಮಾಡಿತು. (ಯೋಹಾನ 14:30, 31; ಇಬ್ರಿಯ 12:2) ನಮ್ಮ ನಿಜ ಹೇತುವು ನಮ್ಮ ತಂದೆಯಾದ ದೇವರೆಡೆಗಿನ ಪ್ರೀತಿಯಾಗಿದ್ದಲ್ಲಿ, ನಾವು ತಾಳಿಕೊಳ್ಳಲು ಶಕ್ತರಾಗದೆ ಇರುವಂಥಾದ್ದು ಯಾವುದು?
18 ಪರೀಕ್ಷೆಯ ಈ ಅತ್ಯಂತ ಕಠಿಣ ಸಮಯದಲ್ಲಿ ಲೋಕದ ಮೇಲೆ ಜಯಗಳಿಸಲು ನಮ್ಮನ್ನು ಶಕ್ತರನ್ನಾಗಿ ಮಾಡಿರುವುದು ಯೆಹೋವ ದೇವರೆಡೆಗಿನ ನಿಶ್ಚಂಚಲವಾದ ಪ್ರೀತಿಯೇ. ಈ ಹಳೇ ವಿಷಯ ವ್ಯವಸ್ಥೆಯ ಎಷ್ಟೇ ಕಾಲ ಬಾಳಲಿ, ಯೆಹೋವನು ಯೇಸು ಕ್ರಿಸ್ತನ ಮೂಲಕ ನಮಗೆ ಸಹಾಯ ಕೊಡುತ್ತಾ ಮುಂದರಿಯುವನು. (1 ಪೇತ್ರ 5:10) ಇನ್ನೆಷ್ಟು ಸಮಯವು ಉಳಿದಿದೆ ಎಂಬ ಕಾಲಜ್ಞಾನವನ್ನು ನಾವು ನುಡಿಯಲಾರೆವು, ವಿಶಿಷ್ಟವಾದ ತಾರೀಕನ್ನೂ ನಾವು ಗೊತ್ತು ಮಾಡಲಾರೆವು. ಮಹಾ ಕಾಲನಿಯಾಮಕನಾದ ಯೆಹೋವ ದೇವರಿಗೇ ನಾವದನ್ನು ಬಿಟ್ಟುಬಿಡುವೆವು.—ಕೀರ್ತನೆ 31:15.
19, 20. (ಎ) ನಾವು ತಾಳಿಕೊಳ್ಳುತ್ತಾ ದಾಟುವ ಪ್ರತಿಯೊಂದು ದಿನವನ್ನು ಹೇಗೆ ವೀಕ್ಷಿಸಬೇಕು? (ಬಿ) ಯಾವ ಅವಿವೇಕತನವನ್ನು ನಾವು ವರ್ಜಿಸ ಬಯಸಬೇಕು ಮತ್ತು ಏಕೆ?
19 ಆದರೂ, “ವಿಷಯ ವ್ಯವಸ್ಥೆಯ ಅಂತ್ಯವನ್ನು” ಕಾಣುವ ಮತ್ತು ಅನುಭವಿಸುವದೆಂದು ಮುಂತಿಳಿಸಲ್ಪಟ್ಟ ಸಂತತಿಗೆ ಈಗ ಸಾಕಷ್ಟು ಪ್ರಾಯ ಸಂದಿದೆ. (ಮತ್ತಾಯ 24:3, 32-35) ನಾವು ತಾಳುತ್ತಾ ದಾಟುತ್ತಿರುವ ಪ್ರತಿಯೊಂದು ದಿನವು, ಸೈತಾನ ಮತ್ತು ಅವನ ದುರಾತ್ಮಗಳಿಗೆ ಅವರ ಅಸ್ತಿತ್ವದೊಂದಿಗೆ ವಿಶ್ವವನ್ನು ಭ್ರಷ್ಟಗೊಳಿಸಲು ಒಂದು ಕಡಿಮೆ ದಿನ ಎಂಬದನ್ನೂ, ಮತ್ತು “ಕೋಪಕ್ಕೆ ಗುರಿಯಾದ ನಾಶನದ ಪಾತ್ರೆಗಳ” ಅಸ್ತಿತ್ವವನ್ನು ಯೆಹೋವನು ಇನ್ನು ಮುಂದೆ ಸಹಿಸದೆ ಇರುವುದಕ್ಕೆ ಒಂದು ದಿನ ಹತ್ತಿರವೆಂಬದನ್ನೂ ಮರೆಯಬೇಡಿರಿ. (ರೋಮಾಪುರ 9:22) ಬೇಗನೇ, ಯೆಹೋವನ ದೀರ್ಘಶಾಂತಿಯು ಕೊನೆಗೊಂಡಾಗ, ಆತನು ಭಕ್ತಿಹೀನ ಸ್ತ್ರೀ-ಪುರುಷರ ಮೇಲೆ ತನ್ನ ಕ್ರೋಧವನ್ನು ಹೊಯ್ಯುವನು. ಹೀಗೆ, ಈ ಎಲ್ಲಾ ಸಮಯದ ತನಕ ಅವರನ್ನು ಮುಂದರಿಯುವಂತೆ ಬಿಟ್ಟರೂ, ಅವರ ಮಾರ್ಗಕ್ರಮಕ್ಕಾಗಿ ತನ್ನ ದೈವಿಕ ಅಸಮ್ಮತಿಯನ್ನು ಪ್ರದರ್ಶಿಸಿಯೇ ತೀರುವನು.
20 ಯೇಸು ಕ್ರಿಸ್ತನ ಮೂಲಕವಾಗಿ ನಮಗೆ ನೀಡಲ್ಪಟ್ಟ ಆ ಮಹಿಮಾಭರಿತ ಬಹುಮಾನವನ್ನು ಪಡೆಯಲು ನಮ್ಮ ಪ್ರೀತಿಪೂರ್ಣ ಪ್ರಯತ್ನಗಳನ್ನು ಈಗ ಬಿಟ್ಟುಬಿಡುವದು ತೀರಾ ಅವಿವೇಕತನವಾಗಿರುವುದು. ಬದಲಿಗೆ, ಯೆಹೋವನು ತನ್ನನ್ನು ವಿಶ್ವದ ಪರಮಾಧಿಕಾರಿಯಾಗಿ ನಿರ್ದೋಷೀಕರಿಸಲು ಸನ್ನಿಹಿತವಾದ ಈ ಅತ್ಯಂತ ಪ್ರಾಮುಖ್ಯ ಸಮಯದಲ್ಲಿ ಯೆಹೋವನ ಸಾಕ್ಷಿಗಳಾಗಿ ನಂಬಿಗಸ್ತಿಕೆಯಿಂದ ಮುಂದರಿಯುವಂತೆ ನಾವು ನಿರ್ಧಾರವನ್ನು ಮಾಡಿದವರಾಗಿದ್ದೇವೆ. (w91 11/1)
[ಅಧ್ಯಯನ ಪ್ರಶ್ನೆಗಳು]
a ಉದಾಹರಣೆಗೆ, ಕ್ರಿಸ್ಟಿನ್ ಇಲಿಸಬೀತ್ ಕಿಂಗ್ ಬರೆದದ್ದು: “ಯೆಹೋವನ ಸಾಕ್ಷಿಗಳ ವಿರುದ್ಧವಾಗಿ ಮಾತ್ರವೇ [ನಾಝೀ] ಸರಕಾರವು ವೈಫಲ್ಯಗೊಂಡಿತ, ಯಾಕಂದರೆ ಅವರು ಸಾವಿರಾರು ಮಂದಿಯನ್ನು ಕೊಂದರೂ ಕಾರ್ಯವು ಮುಂದರಿಯುತ್ತಾ ಹೋಯಿತು ಮತ್ತು 1945ರ ಮೇ ತಿಂಗಳಲ್ಲಿ ಯೆಹೋವನ ಸಾಕ್ಷಿಗಳ ಚಟುವಟಿಕೆ ಇನ್ನೂ ಸಜೀವವಾಗಿದ್ದಾಗ, ರಾಷ್ಟ್ರೀಯ ಸಮತಾವಾದವಾದರೋ ಇರಲಿಲ್ಲ. ಸಾಕ್ಷಿಗಳ ಸಂಖ್ಯೆಯೂ ಅಭಿವೃದ್ಧಿಯಾಗಿತ್ತು ಮತ್ತು ಯಾವ ರಾಜಿಯೂ ಮಾಡಲ್ಪಡಲಿಲ್ಲ. ಆ ಚಟುವಟಿಕೆಯು ಹುತಾತ್ಮರನ್ನು ಗಳಿಸಿತು ಮತ್ತು ಯೆಹೋವ ದೇವರ ಯುದ್ಧದಲ್ಲಿ ಇನ್ನೊಂದು ಹೋರಾಟವನ್ನು ಸಾಫಲ್ಯದಿಂದ ಹೂಡಿತು.”—ದ ನಾಝೀ ಸ್ಟೇಟ್ ಆ್ಯಂಡ್ ದ ನ್ಯೂ ರಿಲಿಜನ್ಸ್: ಫೈವ್ ಕೇಸಸ್ ಆಫ್ ಸಡ್ಟೀಸ್ ಇನ್ ನಾನ್-ಕನ್‌ಫಾರ್ಮಿಟಿ, ಪುಟ 193.
ನೀವು ಹೇಗೆ ಪ್ರತಿಕ್ರಿಯಿಸುವಿರಿ?
▫ ನಮ್ಮ ತಾಳ್ಮೆಯ ಪರೀಕ್ಷೆಯನ್ನು ನಾವು ವರ್ಜಿಸಸಾಧ್ಯವಿಲ್ಲವೇಕೆ?
▫ ಯಾವ ವಿಚಾರದಿಂದ ಮೋಸಹೋಗುವದನ್ನು ನಾವು ವರ್ಜಿಸಬೇಕು?
▫ ನಮ್ಮಿಂದ ಯಾವುದೇ ನಿರ್ಬಲತೆಯನ್ನು ದೂರವಿರಿಸಲು ಏನು ಅಗತ್ಯವಿದೆ?
▫ ನಮ್ಮ ಗುರಿನುಡಿಯೇನು?
▫ ಒತ್ತಡಗಳ ಸಮಯದಲ್ಲಿ ತಾಳಿಕೊಳ್ಳುವಂತೆ ನಮಗೇನು ಸಹಾಯಕಾರಿಯಾಗುವುದು?
[ಪುಟ 11 ರಲ್ಲಿರುವ ಚಿತ್ರ]
ಟ್ರಿನಿಡಾಡ್‌ನ ಪೋರ್ಟ್ ಸ್ಪೈನ್‌ನಲ್ಲಿನ ಈ ಸಾಕ್ಷಿಗಳಂತೆ, ದೇವಜನರು ಯಾವಾಗಲೂ ಯೆಹೋವನಲ್ಲಿ ಕಾಯಲು ಸಿದ್ಧಮನಸ್ಕರಾಗಿದ್ದಾರೆ