ಆತ್ಮ-ಸಂಯಮ—ಯಾಕೆ ಅಷ್ಟು ಮಹತ್ವದ್ದು?
“ಈ ಕಾರಣದಿಂದಲೇ ನೀವು ಪೂರ್ಣಾಸಕ್ತಿಯುಳ್ಳವರಾಗಿ ನಿಮಗಿರುವ ನಂಬಿಕೆಗೆ ಸದ್ಗುಣವನ್ನೂ ಸದ್ಗುಣಕ್ಕೆ ಜ್ಞಾನವನ್ನೂ ಜ್ಞಾನಕ್ಕೆ ಆತ್ಮ-ಸಂಯಮವನ್ನೂ ಕೂಡಿಸಿರಿ.”—2 ಪೇತ್ರ 1:5, 6, NW.
1. ಶಾರೀರಿಕ ಆತ್ಮ-ಸಂಯಮದ ಯಾವ ಗಮನಾರ್ಹವಾದ ಪ್ರದರ್ಶನೆಯು 19ನೇ ಶತಮಾನದಲ್ಲಿ ಸಂಭವಿಸಿತು?
ನಿಸ್ಸಂಶಯವಾಗಿ, ಶಾರೀರಿಕ ಸಂಯಮದ ಒಂದು ಅತ್ಯಂತ ಅಚ್ಚರಿಯ ಪ್ರದರ್ಶನೆಯು ತೋರಿಸಲ್ಪಟ್ಟದ್ದು 19ನೇ ಶತಮಾನದ ಉತ್ತರಾರ್ಧದಲ್ಲಿ ಚಾರ್ಲ್ಸ್ ಬ್ಲಾಂಡನ್ ಇವರಿಂದ. ಒಂದು ವರದಿಗೆ ಅನುಸಾರವಾಗಿ, ಅವರು ನೈಆ್ಯಗರ ಜಲಪಾತವನ್ನು ಹಲವಾರು ಸಾರಿ ದಾಟಿದ್ದರು. ಮೊದಲಾಗಿ 1859ರಲ್ಲಿ; 340 ಮೀಟರ್ ಉದ್ದದ ಮತ್ತು ನೀರಿನ ಮೇಲಕ್ಕೆ 50 ಮೀಟರ್ ಎತ್ತರದಲ್ಲಿ ಕಟ್ಟಿದ ಬಿಗುಹಗ್ಗದ ಮೇಲೆ ನಡೆದು ದಾಟಿದರು. ಅದರ ನಂತರ ಪ್ರತಿಸಲ, ತಮ್ಮ ಸಾಮರ್ಥ್ಯದ ವಿವಿಧ ಪ್ರದರ್ಶನೆಯೊಂದಿಗೆ ಅವರದನ್ನು ಮಾಡಿದರು: ಕಣ್ಣುಮುಚ್ಚಿಕೊಂಡು, ಗೋಣಿಯೊಳಗೆ, ಒಂದು ಚಕ್ರದ ಕೈಬಂಡಿಯನ್ನು ತಳ್ಳುತ್ತಾ, ಮೆಟ್ಟುಗೋಲಿನ ಮೇಲೆ ಮತ್ತು ಒಬ್ಬ ಮನುಷ್ಯನನ್ನು ತನ್ನ ಬೆನ್ನ ಮೇಲೆ ಹೊತ್ತುಕೊಂಡು. ಇನ್ನೊಂದು ದೃಶ್ಯದಲ್ಲಿ ಅವರು, ನೆಲದಿಂದ 52 ಮೀಟರ್ ಎತ್ತರದಲ್ಲಿ ಚಾಚಿದ್ದ ಹಗ್ಗದ ಮೇಲೆ ಮೆಟ್ಟುಗೋಲಿನಿಂದ ಡೊಂಬರಲಾಗ ಹಾಕುತ್ತಾ ದಾಟಿದರು. ಅಂಥ ಒಂದು ಸಮತೆಯನ್ನು ಕಾಪಾಡಿಕೊಳ್ಳಲು ಅತ್ಯಧಿಕ ಮಹತ್ತಾದ ಶಾರೀರಿಕ ಆತ್ಮ-ಸಂಯಮದ ಆವಶ್ಯಕತೆಯು ಇದೆ. ಅವರ ಪ್ರಯತ್ನಕ್ಕೆ ಫಲವಾಗಿ ಬ್ಲಾಂಡನ್ರವರಿಗೆ ಕೀರ್ತಿಯೂ ಐಶ್ವರ್ಯವೂ ಲಭಿಸಿತು.
2. ಶಾರೀರಿಕ ಸಂಯಮವನ್ನು ಕೇಳಿಕೊಳ್ಳುವ ಬೇರೆ ಯಾವ ಚಟುವಟಿಕೆಯ ವಿಧಗಳು ಇಲ್ಲಿವೆ?
2 ಆ ಪ್ರದರ್ಶನೆಗಳನ್ನು ನಕಲು ಮಾಡುವುದಕ್ಕೆ ಕೆಲವರು ಕೂಡ ಶಕ್ತರಾಗದಿದ್ದರೂ, ಕಸಬಿನ ಸಾಮರ್ಥ್ಯಗಳ ನಿರ್ವಹಣೆಯಲ್ಲಿ ಮತ್ತು ಆಟಗಳಲ್ಲಿ ಶಾರೀರಿಕ ಆತ್ಮ-ಸಂಯಮದ ಮಹತ್ವವು ನಮಗೆಲ್ಲರಿಗೆ ತಿಳಿದೇ ಇದೆ. ದೃಷ್ಟಾಂತಕ್ಕಾಗಿ, ಪ್ರಖ್ಯಾತ ಪಿಯಾನೊ ವಾದಕ ಮಾಜಿ ವ್ಲಾಡಮಿರ್ ಹಾರೊವಿಟ್ಸ್ರ ಪರಿಕ್ರಮ ಕೌಶಲ್ಯವನ್ನು ವರ್ಣಿಸುವಲ್ಲಿ, ಒಬ್ಬ ಸಂಗೀತಗಾರನು ಅಂದದ್ದು: “ನನಗೆ ಅತ್ಯಂತ ಚಿತ್ತಾಕರ್ಷಕವಾದ ವಿಷಯವು ಅವರ ಪರಿಪೂರ್ಣ ಸಂಯಮವೇ . . . ನಂಬಲಸಾಧ್ಯವಾದ ಒಂದು ಶಕ್ತಿಯನ್ನು ಒಂದು ಚಾಲನಕಾರ್ಯಕ್ಕಾಗಿ ಬಳಸುವಿಕೆಯ ಭಾವವದು.” ಹಾರೊವಿಟ್ಸ್ರ ಕುರಿತಾದ ಇನ್ನೊಂದು ವರದಿಯು, “ಎಂಟು ದಶಕಗಳ ತನಕ ಪರಿಪೂರ್ಣ ಸಂಯಮದಲ್ಲಿ ಹಾರಿದ ಕೈಬೆರಳುಗಳವು” ಎಂದು ವರ್ಣಿಸಿದೆ.
3. (ಎ) ಅತ್ಯಂತ ಆವಶ್ಯಕವಾಗಿ ಬೇಕಾದ ಸಂಯಮವು ಅದ್ಯಾವುದು, ಮತ್ತು ಅದು ಹೇಗೆ ವಿವರಿಸಲ್ಪಟ್ಟಿದೆ? (ಬಿ) ಬೈಬಲಲ್ಲಿ “ಆತ್ಮ-ಸಂಯಮ”ವಾಗಿ ಭಾಷಾಂತರವಾದ ಗ್ರೀಕ್ ಶಬ್ದದ ಅರ್ಥವೇನು?
3 ಅಂಥ ಕೌಶಲ್ಯಗಳನ್ನು ವಿಕಾಸಿಸಲು ಮಹಾ ಪ್ರಯತ್ನಗಳ ಅವಶ್ಯಕತೆ ಇದೆ. ಆದರೂ, ಇದಕ್ಕಿಂತಲೂ ಹೆಚ್ಚು ಮಹತ್ವದ್ದು ಮತ್ತು ಹೆಚ್ಚು ಪಂಥಾಹ್ವಾನದ್ದು ಆತ್ಮ-ಸಂಯಮವಾಗಿದೆ. ಅದು “ಒಬ್ಬನ ಸ್ವಂತ ಉದ್ವೇಗಗಳು, ಭಾವುಕತೆಗಳು ಅಥವಾ ಅಪೇಕ್ಷೆಗಳ ಮೇಲೆ ಆತ್ಮನಿಗ್ರಹವನ್ನಿಡುವಿಕೆಯಾಗಿ” ವಿವರಿಸಲ್ಪಡುತ್ತದೆ. ಕ್ರೈಸ್ತ ಗ್ರೀಕ್ ಶಾಸ್ತ್ರದಲ್ಲಿ 2 ಪೇತ್ರ 1:6 ಮತ್ತು ಇತರ ಕಡೆಗಳಲ್ಲಿ ಭಾಷಾಂತರವಾದ “ಆತ್ಮ-ಸಂಯಮ” (NW) “ತನ್ನ ಬಯಕೆಗಳನ್ನು ಮತ್ತು ಮನೋವಿಕಾರಗಳನ್ನು, ವಿಶೇಷವಾಗಿ ಕಾಮವಿಕಾರಗಳನ್ನು ಅಂಕೆಯಲಿಡ್ಲುವವನ ಸದ್ಗುಣ” ಎಂಬರ್ಥವನ್ನು ಕೊಡುತ್ತದೆ. ವ್ಯಕ್ತಿಪರವಾದ ಆತ್ಮ-ಸಂಯಮವು “ಮಾನವ ಪೂರೈಕೆಯ ಅತ್ಯುನ್ನತ ಶಿಖರ” ಎಂದೂ ಕರೆಯಲ್ಪಟ್ಟಿದೆ.
ಆತ್ಮ-ಸಂಯಮವೇಕೆ ಅಷ್ಟು ಮಹತ್ವದ್ದು
4. ಆತ್ಮ-ಸಂಯಮದ ಕೊರತೆಯು ಯಾವ ಕೆಟ್ಟ ಫಲವನ್ನು ಕೊಯ್ದಿದೆ?
4 ಆತ್ಮ-ಸಂಯಮದಲ್ಲಿ ಕೊರತೆಯು ಎಂಥ ಕೊಯ್ಲನ್ನು ಕೊಯ್ಯುತ್ತಾ ಇದೆ! ಲೋಕದಲ್ಲಿ ಇಂದಿರುವ ಅನೇಕ ಸಮಸ್ಯೆಗಳು ಮುಖ್ಯವಾಗಿ ಆತ್ಮ-ಸಂಯಮದ ಕೊರತೆಯಿಂದಲೇ ಉಂಟಾಗಿವೆ. ನಿಜವಾಗಿಯೂ ನಾವು, “ಕಠಿಣಕಾಲಗಳು” ಬರುವ “ಕಡೇ ದಿನಗಳಲ್ಲಿ” ಜೀವಿಸುತ್ತಿದ್ದೇವೆ. ಮನುಷ್ಯರು ಹೆಚ್ಚಾಗಿ ಲೋಭದ ಕಾರಣದಿಂದಾಗಿ “ಆತ್ಮ-ಸಂಯಮವಿಲ್ಲದವರೂ” ಆಗಿದ್ದಾರೆ, ಅದರ ಒಂದು ರೂಪವು “ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ” ಆಗಿರುವುದೇ. (2 ತಿಮೊಥಿ 3:1-5) ಕಳೆದ ಸೇವಾ ವರ್ಷದಲ್ಲಿ 40,000ಕ್ಕಿಂತಲೂ ಹೆಚ್ಚು ತಪ್ಪಿತಸ್ಥ ವ್ಯಕ್ತಿಗಳು, ವಿಶೇಷವಾಗಿ ಘೋರ ದುರ್ನಡತೆಯ ಕಾರಣದಿಂದಾಗಿ, ಕ್ರೈಸ್ತ ಸಭೆಯ ಸಹವಾಸದಿಂದ ಬಹಿಷ್ಕರಿಸಲ್ಪಟ್ಟ ಸಂಗತಿಯಿಂದ ಈ ಗಂಭೀರ ಸತ್ಯವು ನಮಗೆ ಇನ್ನಷ್ಟು ಪ್ರಬಲವಾಗಿ ಸ್ಪಷ್ಟ ಮಾಡಲ್ಪಟ್ಟಿದೆ. ಮುಖ್ಯವಾಗಿ ನೈತಿಕ ಅನೈತಿಕತೆಯಿಂದಾಗಿ ಆದರೆ ಒಟ್ಟಿನಲ್ಲಿ ಆತ್ಮ-ಸಂಯಮ ತೋರಿಸಲು ತಪ್ಪಿದ್ದಕ್ಕಾಗಿ ಗದರಿಕೆಗೆ ಒಳಗಾದವರನ್ನೂ ಈ ಸಂಖ್ಯೆಗೆ ಕೂಡಿಸಲಿಕ್ಕಿದೆ. ಇನ್ನೂ ಗಂಭೀರವಾದ ನಿಜತ್ವವೇನಂದರೆ ದೀರ್ಘ ಸಮಯದಿಂದ ಹಿರಿಯರಾಗಿದ್ದ ಕೆಲವರು ಇದೇ ಕಾರಣಕ್ಕಾಗಿ ತಮ್ಮ ಮೇಲ್ವಿಚಾರಕ ಸುಯೋಗಗಳೆಲ್ಲವನ್ನು ಕಳಕೊಂಡದ್ದೇ.
5. ಆತ್ಮ-ಸಂಯಮದ ಮಹತ್ವವನ್ನು ಹೇಗೆ ದೃಷ್ಟಾಂತಿಸಬಹುದು?
5 ಆತ್ಮ-ಸಂಯಮದ ಮಹತ್ವವನ್ನು ಒಂದು ಮೋಟಾರು ಗಾಡಿಯಿಂದ ಚೆನ್ನಾಗಿ ದೃಷ್ಟಾಂತಿಸಬಹುದು. ಅದಕ್ಕೆ ಚಲಿಸುವಂತೆ ಮಾಡುವ ನಾಲ್ಕು ಚಕ್ರಗಳಿವೆ, ಆ ಚಕ್ರಗಳನ್ನು ಬಹು ವೇಗವಾಗಿ ಚಲಿಸುವಂತೆ ಮಾಡುವ ಶಕ್ತಿಯುಕ್ತ ಎಂಜಿನು ಅದಕ್ಕಿದೆ ಮತ್ತು ಅವುಗಳನ್ನು ನಿಲ್ಲಿಸಿ ಬಿಡುವ ಬ್ರೇಕುಗಳಿವೆ. ಆದರೆ ಸಿಯ್ಟರಿಂಗ್ ವೀಲ್, ವೇಗವರ್ಧಕ ಮತ್ತು ಬ್ರೇಕುಗಳ ಉಪಯೋಗವನ್ನು ಸಂಯಮದಿಂದ ನಿಯಂತ್ರಿಸುವ ಮೂಲಕ, ಚಕ್ರಗಳು ಎಲ್ಲಿಗೆ ಹೋಗಬೇಕು, ಎಷ್ಟು ವೇಗವಾಗಿ ತಿರುಗಬೇಕು ಮತ್ತು ಯಾವಾಗ ನಿಲ್ಲಬೇಕು ಎಂದು ನಿರ್ಧರಿಸುವುದಕ್ಕೆ ಡ್ರೈವರನ ಆಸನದಲ್ಲಿ ಯಾವನಾದರೂ ಇಲ್ಲದ ಹೊರತು ಆಪತ್ತು ಸಂಭವಿಸಬಲ್ಲದು.
6. (ಎ) ಪ್ರೀತಿಯ ಕುರಿತಾದ ಯಾವ ವಿಶೇಷ ಲಕ್ಷಣವನ್ನು ಆತ್ಮ-ಸಂಯಮಕ್ಕೂ ಚೆನ್ನಾಗಿ ಅನ್ವಯಿಸಬಹುದು? (ಬಿ) ಬೇರೆ ಯಾವ ಅಧಿಕ ಸೂಚನೆಯನ್ನು ನಾವು ಮನಸ್ಸಲ್ಲಿಡಬೇಕು?
6 ಆತ್ಮ-ಸಂಯಮದ ಮಹತ್ವವನ್ನು ಅಶಿಶಯವಾಗಿ ಒತ್ತಿಹೇಳುವುದು ಕಷ್ಟಕರವು. ಅಪೊಸ್ತಲ ಪೌಲನು 1 ಕೊರಿಂಥ 13:1-3ರಲ್ಲಿ ಪ್ರೀತಿಯ ಮಹತ್ವದ ಕುರಿತು ಏನು ಹೇಳಿದನೋ ಅದನ್ನು ಆತ್ಮ-ಸಂಯಮದ ಕುರಿತೂ ಹೇಳಬಹುದಾಗಿದೆ. ನಾವೆಷ್ಟೇ ನಿರರ್ಗಳವಾದ ಬಹಿರಂಗ ಭಾಷಣಕರ್ತರಾಗಿರಲಿ, ಒಳ್ಳೇ ಅಧ್ಯಯನ ಹವ್ಯಾಸಗಳ ಮೂಲಕ ನಾವೆಷ್ಟೇ ಜ್ಞಾನ ಮತ್ತು ನಂಬಿಕೆಯನ್ನು ಗಳಿಸಿರಲಿ, ಇತರರ ಪ್ರಯೋಜನಕ್ಕಾಗಿ ನಾವು ಯಾವ ಕೆಲಸಗಳನ್ನೇ ಮಾಡುತ್ತಿರಲಿ, ಆತ್ಮ-ಸಂಯಮವನ್ನು ತೋರಿಸದ ಹೊರತು, ಅವೆಲ್ಲವೂ ವ್ಯರ್ಥವೇ ಸರಿ. ಪೌಲನ ಮಾತುಗಳನ್ನು ನಾವು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು: “ರಂಗಸ್ಥಾನದಲ್ಲಿ ಓಡುವದಕ್ಕೆ ಗೊತ್ತಾದವರೆಲ್ಲರೂ ಓಡುತ್ತಾರಾದರೂ ಒಬ್ಬನು ಮಾತ್ರ ಬಿರುದನ್ನು ಹೊಂದುತ್ತಾನೆ ಎಂಬದು ನಿಮಗೆ ತಿಳಿಯದೋ? ನೀವು ಬಿರುದನ್ನು ಪಡೆಯಬೇಕೆಂತಲೇ ಓಡಿರಿ. ಅದರಲ್ಲಿ ಹೋರಾಡುವವರೆಲ್ಲರೂ ಎಲ್ಲಾ ವಿಷಯಗಳಲ್ಲಿ ಮಿತ (ಆತ್ಮ-ಸಂಯಮ, NW) ವಾಗಿರುತ್ತಾರೆ.” (1 ಕೊರಿಂಥ 9:24, 25) ಎಲ್ಲಾ ವಿಷಯಗಳಲ್ಲಿ ನಮಗೆ ಆತ್ಮ-ಸಂಯಮವನ್ನು ತೋರಿಸಲು ಸಹಾಯ ಮಾಡುವಂಥಹದ್ದು 1 ಕೊರಿಂಥ 10:12ರಲ್ಲಿರುವ ಪೌಲನ ಎಚ್ಚರಿಕೆಯು: “ಆದ್ದರಿಂದ ನಿಂತಿದ್ದೇನೆಂದು ನೆನಸುವವನು ಬೀಳದಂತೆ ಎಚ್ಚರಿಕೆಯಾಗಿರಲಿ.”
ಎಚ್ಚರಿಕೆಯ ಮಾದರಿಗಳು
7. (ಎ) ಆತ್ಮ-ಸಂಯಮದಲ್ಲಿ ಕೊರತೆಯು ಹೇಗೆ ಮಾನವ ಕುಲವನ್ನು ಅಧೋಪಥದ ಪ್ರಾರಂಭಕ್ಕೆ ನಡಿಸಿತು? (ಬಿ) ಆತ್ಮ-ಸಂಯಮದಲ್ಲಿ ಕೊರತೆಯಿದ್ದ ಬೇರೆ ಯಾವ ಆರಂಭದ ಉದಾಹರಣೆಗಳನ್ನು ಶಾಸ್ತ್ರ ವಚನಗಳು ನಮಗೆ ಕೊಡುತ್ತವೆ?
7 ಆದಾಮನು ಆತ್ಮ-ಸಂಯಮವನ್ನು ತೋರಿಸಲು ತಪ್ಪಿದ್ದು ತನ್ನ ಕ್ರಿಯೆಗಳನ್ನು ವಿವೇಚನೆಗಿಂತ ಹೆಚ್ಚಾಗಿ ಭಾವುಕತೆಯು ಆಳುವಂತೆ ಬಿಟ್ಟದ್ದರಿಂದಲೇ. ಫಲಿತಾಂಶವಾಗಿ, “ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು.” (ರೋಮಾಪುರ 5:12) ಮೊದಲನೆಯ ಕೊಲೆಪಾತವು ಸಹಾ ಆತ್ಮ-ಸಂಯಮದ ಕೊರತೆಯಿಂದಲೇ ಉಂಟಾಯಿತು, ಯಾಕೆಂದರೆ ಯೆಹೋವ ದೇವರು ಕಾಯಿನನಿಗೆ ಎಚ್ಚರಿಕೆ ಕೊಟ್ಟದ್ದು: ‘ಯಾಕೆ ಕೋಪಿಸಿಕೊಂಡಿ? ನಿನ್ನ ತಲೆ ಯಾಕೆ ಬೊಗ್ಗಿತು? ಪಾಪವು ನಿನ್ನನ್ನು ಹಿಡಿಯಬೇಕೆಂದು ಬಾಗಲಲ್ಲಿ ಹೊಂಚಿಕೊಂಡಿರುವದು; ಆದರೂ ನೀನದನ್ನು ವಶಮಾಡಿಕೊಳ್ಳಬೇಕು.’ ಕಾಯಿನನು ಪಾಪದ ಮೇಲೆ ಹತೋಟಿಯನ್ನು ಇಡದ ಕಾರಣ, ತನ್ನ ಸಹೋದರನಾದ ಹೇಬೆಲನನ್ನು ಕೊಂದನು. (ಆದಿಕಾಂಡ 4:6-12) ಲೋಟನ ಪತ್ನಿಯು ಸಹಾ ಆತ್ಮ-ಸಂಯಮವನ್ನು ತೋರಿಸಲು ತಪ್ಪಿದಳು. ಹಿಂದೆ ನೋಡುವ ಶೋಧನೆಯನ್ನು ಅವಳಿಂದ ಎದುರಿಸಲು ಶಕ್ಯವಾಗಲೇ ಇಲ್ಲ. ಅವಳ ಆತ್ಮ-ಸಂಯಮದ ಕೊರತೆಗಾಗಿ ಅವಳು ಎಷ್ಟು ಬೆಲೆ ತೆತ್ತಳು? ಅವಳ ಜೀವವನ್ನೇ ತೆರಬೇಕಾಯಿತು!—ಆದಿಕಾಂಡ 19:17, 26.
8. ಪುರಾತನ ಕಾಲದ ಯಾವ ಮೂರು ಮನುಷ್ಯರ ಅನುಭವಗಳು ಆತ್ಮ-ಸಂಯಮದ ಅಗತ್ಯದ ಕುರಿತು ನಮಗೆ ಎಚ್ಚರಿಕೆಗಳನ್ನು ಒದಗಿಸುತ್ತವೆ?
8 ಯಾಕೋಬನ ಜ್ಯೇಷ್ಠ ಪುತ್ರನಾದ ರೂಬೇನನು ತನ್ನ ಹುಟ್ಟುಹಕ್ಕನ್ನು ಕಳಕೊಂಡದ್ದು ಆತ್ಮ-ಸಂಯಮದ ಕೊರತೆಯಿಂದಲೇ. ಅವನು ಯಾಕೋಬನ ಉಪಪತ್ನಿಯರಲ್ಲಿ ಒಬ್ಬಳನ್ನು ಸಂಗಮಿಸಿದ ಮೂಲಕ ತನ್ನ ತಂದೆಯ ಹಾಸಿಗೆಯನ್ನು ಹೊಲೆಮಾಡಿದನು. (ಆದಿಕಾಂಡ 35:22; 49:3, 4; 1 ಪೂರ್ವಕಾಲ 5:1) ಇಸ್ರಾಯೇಲ್ಯರು ತಮ್ಮ ಗುಣುಗುಟ್ಟುವಿಕೆ, ದೂರು ಮತ್ತು ದಂಗೆಯ ಮೂಲಕ ಮೋಶೆಯನ್ನು ಕಾಡಿಸಿದ ರೀತಿಯಿಂದಾಗಿ ಅವನು ತನ್ನ ಚಿತ್ತಸ್ವಾಸ್ಥ್ಯವನ್ನು ಕಳಕೊಂಡ ಕಾರಣ, ವಾಗ್ದತ್ತ ದೇಶವನ್ನು ಪ್ರವೇಶಿಸುವ ಅತ್ಯಪೇಕ್ಷೆಯ ಮಹಾ ಸುಯೋಗವನ್ನು ಕಳಕೊಂಡನು. (ಅರಣ್ಯಕಾಂಡ 20:1-13; ಧರ್ಮೋಪದೇಶಕಾಂಡ 32:50-52) ‘ದೇವರ ಹೃದಯಕ್ಕೆ ಪ್ರಿಯನಾಗಿದ್ದ’ ನಂಬಿಗಸ್ತ ರಾಜ ದಾವೀದನು ಸಹಾ, ಒಂದು ಸಂದರ್ಭದಲ್ಲಿ ಆತ್ಮ-ಸಂಯಮ ತೋರಿಸಲು ತಪ್ಪಿದ್ದಕ್ಕಾಗಿ ಗಹನವಾದ ತೊಂದರೆಗೆ ಒಳಗಾದನು. (1 ಸಮುವೇಲ 13:14; 2 ಸಮುವೇಲ 12:7-14) ಈ ಎಲ್ಲಾ ಮಾದರಿಗಳು ನಮಗೆ ಆತ್ಮ-ಸಂಯಮವನ್ನು ತೋರಿಸುವ ಅವಶ್ಯಕತೆಗೆ ಹಿತಕರವಾದ ಎಚ್ಚರಿಕೆಗಳನ್ನು ಕೊಡುತ್ತವೆ.
ಏನನ್ನು ಅಧೀನದಲ್ಲಿಡುವ ಅಗತ್ಯವಿದೆ
9. ಆತ್ಮ-ಸಂಯಮದ ಮಹತ್ವವನ್ನು ಎತ್ತಿಹೇಳುವ ಕೆಲವು ಶಾಸ್ತ್ರ ವಚನಗಳು ಯಾವುವು?
9 ಮೊತ್ತಮೊದಲಾಗಿ, ಆತ್ಮ-ಸಂಯಮವು ನಮ್ಮ ಆಲೋಚನೆಗಳು ಮತ್ತು ಭಾವೋದ್ರೇಕಗಳನ್ನು ಒಳಗೊಂಡಿದೆ. ಇವುಗಳು ದೇವರ ವಾಕ್ಯದಲ್ಲಿ ಆಗಿಂದಾಗ್ಯೆ “ಹೃದಯ” ಮತ್ತು “ಮೂತ್ರಜನಕಾಂಗ” ಎಂಬ ಶಬ್ದಗಳಿಂದ ಸಾಂಕೇತಿಕವಾಗಿ ಸೂಚಿಸಲ್ಪಟ್ಟಿವೆ. ನಾವು ನಮ್ಮ ಮನಸ್ಸನ್ನು ಯಾವುದರಲ್ಲಿ ನೆಲಸುವಂತೆ ಬಿಡುತ್ತೇವೋ ಅದು ಒಂದಾ ಯೆಹೋವನನ್ನು ಮೆಚ್ಚಿಸಲು ನೆರವಾಗುತ್ತದೆ ಇಲ್ಲವೇ ಹಾಗೆ ಮಾಡುವ ನಮ್ಮ ಪ್ರಯತ್ನಗಳನ್ನು ತಡೆಯುತ್ತದೆ. ಪಿಲಿಪ್ಪಿಯ 4:8ರಲ್ಲಿ ಕಂಡುಬರುವ ಶಾಸ್ತ್ರೀಯ ಸೂಚನೆಯಾದ ಯಾವುದು ಸತ್ಯವೂ, ಶುದ್ಧವೂ ಮತ್ತು ಸದ್ಗುಣವೂ ಆಗಿದೆಯೋ ಅವನ್ನು ಲಕ್ಷ್ಯಕ್ಕೆ ತಂದುಕೊಂಡು ಪಾಲಿಸಬೇಕಾದರೆ ಆತ್ಮ-ಸಂಯಮವು ಅವಶ್ಯಬೇಕು. ಇದೇ ರೀತಿಯ ಭಾವುಕತೆಯನ್ನು ಕೀರ್ತನೆಗಾರ ದಾವೀದನು ಪ್ರಾರ್ಥನೆಯಲ್ಲಿ ವ್ಯಕ್ತಪಡಿಸುತ್ತಾ, ಅಂದದ್ದು: “ಯೆಹೋವನೇ, ನನ್ನ ಶರಣನೇ, ನನ್ನ ವಿಮೋಚಕನೇ . . . ನನ್ನ ಹೃದಯದ ಧ್ಯಾನವೂ ನಿನಗೆ ಸಮರ್ಪಕವಾಗಿರಲಿ.” (ಕೀರ್ತನೆ 19:14) ಹತ್ತನೆಯ ದಶಾಜ್ಞೆಯು—ನಮ್ಮ ನೆರೆಯವನಿಗೆ ಸೇರಿದ ಯಾವುದೇ ವಸ್ತುವನ್ನು ಆಶಿಸದೆ ಇರುವುದು—ಒಬ್ಬನ ಆಲೋಚನೆಗಳನ್ನು ಅಂಕೆಯಲಿಡ್ಲುವದನ್ನು ಕೇಳಿಕೊಳ್ಳುತ್ತದೆ. (ವಿಮೋಚನಕಾಂಡ 20:17) ನಮ್ಮ ಆಲೋಚನೆಗಳನ್ನು ಮತ್ತು ಭಾವೋದ್ರೇಕಗಳನ್ನು ಹತೋಟಿಯಲ್ಲಿಡುವ ಗಂಭೀರತೆಯನ್ನು ಯೇಸು ಒತ್ತಿಹೇಳುತ್ತಾ, ಅಂದದ್ದು: “ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ (ಹೃದಯ, NW) ಆಕೆಯ ಕೂಡ ವ್ಯಭಿಚಾರ ಮಾಡಿದವನಾದನು.”—ಮತ್ತಾಯ 5:28.
10. ನಮ್ಮ ಮಾತುಗಳನ್ನು ಹತೋಟಿಯಲ್ಲಿಡುವ ಮಹತ್ವವನ್ನು ಯಾವ ಬೈಬಲ್ ವಚನಗಳು ಒತ್ತಿಹೇಳುತ್ತವೆ?
10 ಆತ್ಮ-ಸಂಯಮದಲ್ಲಿ ನಮ್ಮ ಮಾತುಗಳು, ನಮ್ಮ ನುಡಿಗಳು ಸಹಾ ಒಳಗೊಂಡಿವೆ. ನಮ್ಮ ನಾಲಿಗೆಯನ್ನು ಬಿಗಿಹಿಡಿಯಲು ಸೂಚಿಸುವ ಶಾಸ್ತ್ರವಚನಗಳು ಅನೇಕವಿವೆ ನಿಶ್ಚಯ. ದೃಷ್ಟಾಂತಕ್ಕಾಗಿ: “ಸತ್ಯದೇವರು ಪರಲೋಕದಲ್ಲಿದ್ದಾನಲ್ಲವೆ, ನೀನು ಭೂಮಿಯಲ್ಲಿದ್ದಿ. ಆದಕಾರಣ ನಿನ್ನ ಮಾತುಗಳು ಕೊಂಚವಾಗಿರಲಿ.” (ಪ್ರಸಂಗಿ 5:2) “ಮಾತಾಳಿಗೆ ಪಾಪ ತಪ್ಪದು. ಮೌನಿಯು (ತುಟಿಗಳನ್ನು ಕಾಯುವವನು, NW) ಮತಿವಂತ.” (ಜ್ಞಾನೋಕ್ತಿ 10:19) “ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತೂ ಹೊರಡಬಾರದು. ಭಕ್ತಿಯನ್ನು ವೃದ್ಧಿಮಾಡುವಂಥ ಕಾಲೋಚಿತವಾದ ಮಾತು ಇದ್ದರೆ ಕೇಳುವವರ ಹಿತಕ್ಕಾಗಿ ಅದನ್ನು ಆಡಿರಿ . . . ಎಲ್ಲಾ . . . ಕಲಹ ದೂಷಣೆ ಇವುಗಳನ್ನು ನಿಮ್ಮಿಂದ ದೂರಮಾಡಿರಿ.” ಹೊಲಸು ಮಾತು ಮತ್ತು ಕುಚೋದ್ಯ ಇವುಗಳನ್ನು ಬಿಟ್ಟುಬಿಡುವಂತೆ ಪೌಲನು ಮತ್ತೂ ಸೂಚನೆಯನ್ನು ಕೊಟ್ಟಿದ್ದಾನೆ.—ಎಫೆಸ 4:29, 31; 5:3, 4.
11. ನಾಲಿಗೆಯನ್ನು ಅಂಕೆಯಲಿಡ್ಲುವ ಸಮಸ್ಯೆಯೊಂದಿಗೆ ಯಾಕೋಬನು ಹೇಗೆ ವ್ಯವಹರಿಸಿದ್ದಾನೆ?
11 ಯೇಸುವಿನ ಮಲತಮ್ಮನಾದ ಯಾಕೋಬನು ಕಡಿವಾಣವಿಲ್ಲದ ಮಾತುಗಳನ್ನು ಖಂಡಿಸಿದ್ದಾನೆ ಮತ್ತು ನಾಲಗೆಯನ್ನು ಬಿಗಿಹಿಡಿಯುವದೆಷ್ಟು ಕಷ್ಟವೆಂಬದನ್ನು ತೋರಿಸುತ್ತಾನೆ. ಅವನನ್ನುವದು: “ನಾಲಿಗೆಯು ಕೂಡಾ ಚಿಕ್ಕ ಅಂಗವಾಗಿದ್ದರೂ ದೊಡ್ಡ ಕಾರ್ಯಗಳನ್ನು ಕೊಚ್ಚಿಕೊಳ್ಳುತ್ತದೆ. ಎಷ್ಟು ಕೊಂಚ ಕಿಚ್ಚು ಎಷ್ಟು ದೊಡ್ಡ ಕಾಡನ್ನು ಉರಿಸುತ್ತದೆ ನೋಡಿರಿ. ನಾಲಿಗೆಯು ಕಿಚ್ಚೇ. ನಾಲಿಗೆಯು ಅಧರ್ಮಲೋಕರೂಪವಾಗಿ ನಮ್ಮ ಅಂಗಗಳ ನಡುವೆ ಇಟ್ಟದೆ. ಅದು ದೇಹವನ್ನೆಲ್ಲಾ ಕೆಡಿಸುತ್ತದೆ. ತಾನೇ ಗೆಹೆನ್ನಾದಿಂದ ಬೆಂಕಿ ಹತ್ತಿಸಿಕೊಳ್ಳುತ್ತಾ ಪ್ರಪಂಚವೆಂಬ ಚಕ್ರಕ್ಕೆ ಬೆಂಕಿಹಚ್ಚುತ್ತದೆ. ನರಜಾತಿಯು ಸಕಲ ಜಾತಿಯ ಮೃಗ ಪಕ್ಷಿ ಕ್ರಿಮಿ ಜಲಚರಗಳನ್ನೂ ಹತೋಟಿಗೆ ತರುವದುಂಟು ಮತ್ತು ತಂದದ್ದುಂಟು. ಆದರೆ ನಾಲಿಗೆಯನ್ನು ಯಾವ ಮಾನವನೂ ಹತೋಟಿಗೆ ತರಲಾರನು. ಅದು ಸುಮ್ಮನಿರಲಾರದ ಕೆಡುಕಾಗಿದೆ; ಮರಣಕರವಾದ ವಿಷದಿಂದ ತುಂಬಿ ಇದೆ. ನಾಲಿಗೆಯಿಂದ ತಂದೆಯಾದ ಯೆಹೋವನನ್ನು ಕೊಂಡಾಡುತ್ತೇವೆ; ಅದರಿಂದಲೇ ದೇವರ ಹೋಲಿಕೆಗೆ ಸರಿಯಾಗಿ ಉಂಟುಮಾಡಲ್ಪಟ್ಟ ಮನುಷ್ಯರನ್ನು ಶಪಿಸುತ್ತೇವೆ. ಅದೇ ಬಾಯಿಂದ ಸ್ತುತಿ ಶಾಪ ಎರಡೂ ಬರುತ್ತವೆ. ನನ್ನ ಸಹೋದರರೇ, ಹೀಗಿರುವದು ಯೋಗ್ಯವಲ್ಲ.”—ಯಾಕೋಬ 3:5-10.
12, 13. ನಮ್ಮ ಕ್ರಿಯೆಗಳನ್ನು ಮತ್ತು ನಡವಳಿಕೆಯನ್ನು ಹತೋಟಿಯಲ್ಲಿಡುವ ಮಹತ್ವವನ್ನು ತೋರಿಸುವ ಕೆಲವು ಶಾಸ್ತ್ರವಚನಗಳು ಯಾವುವು?
12 ಆತ್ಮ-ಸಂಯಮದಲ್ಲಿ ನಮ್ಮ ಕ್ರಿಯೆಗಳು ಕೂಡಿವೆ, ನಿಶ್ಚಯ. ಮಹಾ ಆತ್ಮ-ಸಂಯಮ ಬೇಕಾದ ಒಂದು ಕ್ಷೇತ್ರವು ವಿರುದ್ಧ ಲಿಂಗದವರೊಂದಿಗಿನ ನಮ್ಮ ಸಂಬಂಧಗಳ ವಿಷಯದಲ್ಲಿಯೇ. ಕ್ರೈಸ್ತರಿಗೆ ಆಜ್ಞಾಪಿಸಲ್ಪಟ್ಟದ್ದು: “ಲೈಂಗಿಕ ಅನೈತಿಕತೆಗೆ ದೂರವಾಗಿ ಓಡಿಹೋಗಿರಿ.” (1 ಕೊರಿಂಥ 6:18, ನ್ಯೂ ಇಂಟರ್ನ್ಯಾಷನಲ್ ವರ್ಷನ್) ಗಂಡಂದಿರು ತಮ್ಮ ಲೈಂಗಿಕಾಸಕ್ತಿಯನ್ನು ತಮ್ಮ ಸ್ವಂತ ಪತ್ನಿಯರಿಗೆ ಸೀಮಿತವಾಗಿಡುವಂತೆ ಬೋಧಿಸಲ್ಪಟ್ಟಿದ್ದಾರೆ, ಅಂಶಿಕವಾಗಿ ಅವರಿಗೆ ಹೇಳಲ್ಪಟ್ಟದ್ದು: “ಸ್ವಂತ ಕೊಳದ ನೀರನ್ನು, ಸ್ವಂತ ಬಾವಿಯಲ್ಲಿ ಉಕ್ಕುವ ಜಲವನ್ನು ಮಾತ್ರ ಕುಡಿ.” (ಜ್ಞಾನೋಕ್ತಿ 5:15-20) “ಜಾರರಿಗೂ ವ್ಯಭಿಚಾರಿಗಳಿಗೂ ದೇವರ ನ್ಯಾಯತೀರಿಸುವನು,” ಎಂದು ನಮಗೆ ಸ್ಪಷ್ಟವಾಗಿಗಿ ಹೇಳಲ್ಪಟ್ಟಿದೆ. (ಇಬ್ರಿಯ 13:4) ಅವಿವಾಹಿತತನದ ವರವನ್ನು ಯಾರು ಬೆಳಸುತ್ತಾರೋ ಅವರಿಂದ ವಿಶೇಷವಾಗಿ ಆತ್ಮ-ಸಂಯಮವು ಕೇಳಲ್ಪಡುತ್ತದೆ.—ಮತ್ತಾಯ 19:11, 12; 1 ಕೊರಿಂಥ 7:37.
13 ಸಾಮಾನ್ಯವಾಗಿ “ಸುವರ್ಣ ನಿಯಮ”ವೆಂದು ಕರೆಯಲ್ಪಡುವ ನಿಯಮವನ್ನು ಯೇಸು ಕೊಟ್ಟಾಗ, ನಮ್ಮ ಜೊತೆ ಮಾನವರ ಕಡೆಗೆ ನಮ್ಮ ಕ್ರಿಯೆಗಳ ಸಂಬಂಧವಾದ ಇಡೀ ಸಾರಾಂಶವನ್ನೇ ಯೇಸು ತಿಳಿಸಿರುವನು. ಆತನಂದದ್ದು: “ಅಂತು ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತಿರೋ ಅದನ್ನೇ ನೀವು ಅವರಿಗೆ ಮಾಡಿರಿ.” (ಮತ್ತಾಯ 7:12) ಇತರರು ನಮ್ಮನ್ನು ಹೇಗೆ ಉಪಚರಿಸಬೇಕೆಂದು ನಾವು ಬಯಸುತ್ತೇವೋ ಅದಕ್ಕಿಂತ ಬೇರೆಯಾದ ರೀತಿಯಲ್ಲಿ ಅವರನ್ನು ನಾವು ಉಪಚರಿಸುವಂತೆ ನಮ್ಮ ಸ್ವಾರ್ಥಪರ ಪ್ರವೃತ್ತಿಗಳು ಅಥವಾ ಹೊರಗಿನ ಒತ್ತಡಗಳು ಯಾ ಶೋಧನೆಗಳು ಕಾರಣವಾಗದಂತೆ ತಡೆಯಲು ಆತ್ಮ-ಸಂಯಮವು ನಮಗೆ ಆವಶ್ಯಕವಾಗಿ ಬೇಕು, ನಿಜ.
14. ಆಹಾರ ಮತ್ತು ಕುಡಿತದ ವಿಷಯದಲ್ಲಿ ದೇವರ ವಾಕ್ಯವು ಯಾವ ಸೂಚನೆಯನ್ನು ಕೊಡುತ್ತದೆ?
14 ಅಲ್ಲದೆ ಊಟ ಮತ್ತು ಕುಡಿತದ ವಿಷಯದಲ್ಲೂ ಆತ್ಮ-ಸಂಯಮವನ್ನು ತೋರಿಸುವ ವಿಷಯವು ಅಲ್ಲಿದೆ. ದೇವರ ವಾಕ್ಯವು ಸುಜ್ಞತೆಯಿಂದ ಸೂಚಿಸಿದ್ದು: “ಕುಡುಕರಲ್ಲಿಯೂ ಅತಿಮಾಂಸಭಕ್ಷಕರಲ್ಲಿಯೂ ಸೇರದಿರು.” (ಜ್ಞಾನೋಕ್ತಿ 23:20) ವಿಶೇಷವಾಗಿ ನಮ್ಮ ದಿನಗಳ ಕುರಿತು ಯೇಸು ಎಚ್ಚರಿಸಿದ್ದು: “ನಿಮ್ಮ ವಿಷಯದಲ್ಲಿ ಜಾಗರೂಕರಾಗಿರ್ರಿ. ಅತಿಭೋಜನದ ಮದಡಿನಿಂದಲೂ ಅಮಲಿನಿಂದಲೂ ಪ್ರಪಂಚದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗಿರಲಾಗಿ ಆ ದಿವಸವು ಉರ್ಲಿನಂತೆ ಫಕ್ಕನೇ ನಿಮ್ಮ ಮೇಲೆ ಬಂದೀತು.” (ಲೂಕ 21:34, 35) ಹೌದು, ಆತ್ಮ-ಸಂಯಮದಲ್ಲಿ ನಮ್ಮ ಆಲೋಚನೆ ಮತ್ತು ಭಾವನೆಗಳು ಹಾಗೂ ನಮ್ಮ ಮಾತುಗಳೂ ಕ್ರಿಯೆಗಳೂ ಒಳಗೂಡಿರುತ್ತವೆ.
ಆತ್ಮ-ಸಂಯಮವು ಅಂಥ ಒಂದು ಪಂಥಾಹ್ವಾನವೇಕೆ
15. ಕ್ರೈಸ್ತರಿಂದ ತೋರಿಸಲ್ಪಡುವ ಆತ್ಮ-ಸಂಯಮಕ್ಕೆ ಸೈತಾನನ ವಿರೋಧದ ವಾಸ್ತವಿಕತೆಯನ್ನು ಶಾಸ್ತ್ರವಚನಗಳು ಹೇಗೆ ತೋರಿಸುತ್ತವೆ?
15 ಆತ್ಮ-ಸಂಯಮವು ಸುಲಭವಾಗಿ ಬರಲಾರದು ಯಾಕೆಂದರೆ ಕ್ರೈಸ್ತರೆಲ್ಲರೂ ತಿಳಿದಿರುವಂತೆ, ನಮ್ಮ ಆತ್ಮ ಸಂಯಮದ ವಿರುದ್ಧವಾಗಿ ವ್ಯೂಹನಡಿಸುವ ಮೂರು ಪ್ರಬಲವಾದ ಶಕ್ತಿಗಳು ಅಲ್ಲಿರುತ್ತವೆ. ಸೈತಾನ ಮತ್ತು ಅವನ ದುರಾತ್ಮಗಳು ಮೊದಲನೆಯವರು. ಅವರ ವಾಸ್ತವಿಕತೆಯ ಕುರಿತು ಬೈಬಲ್ ಯಾವ ಸಂದೇಹವನ್ನೂ ತೋರಿಸಿಲ್ಲ. ಹೀಗೆ, ಯೂದನು ಯೇಸುವನ್ನು ಹಿಡುಕೊಡಲು ಹೊರಟುಹೋಗುವ ತುಸುಮೊದಲು, “ಸೈತಾನನು ಅವನೊಳಗೆ ಹೊಕ್ಕನು” ಎಂದು ನಾವು ಓದುತ್ತೇವೆ. (ಯೋಹಾನ 13:27) ಅಪೊಸ್ತಲ ಪೇತ್ರನು ಅನನೀಯನನ್ನು ಕೇಳಿದ್ದು: “ಸೈತಾನನು ನಿನ್ನ ಹೃದಯದಲ್ಲಿ ತುಂಬಿಕೊಂಡದ್ದೇನು? ಯಾಕೆ . . . ಪವಿತ್ರಾತ್ಮವನ್ನು ವಂಚಿಸಬೇಕೆಂದಿದ್ದೀ.” (ಅಪೊಸ್ತಲರ ಕೃತ್ಯಗಳು 5:3) ಅತ್ಯಂತ ಯುಕ್ತವಾಗಿಯೇ, ಪೇತ್ರನು ಈ ಎಚ್ಚರಿಕೆಯನ್ನೂ ಕೊಟ್ಟಿದ್ದಾನೆ: “ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ; ನಿಮ್ಮ ವಿರೋಧಿಯಾಗಿರುವ ಸೈತಾನನು ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ.”—1 ಪೇತ್ರ 5:8.
16. ಈ ಲೋಕಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಕ್ರೈಸ್ತರು ಆತ್ಮ-ಸಂಯಮವನ್ನು ಏಕೆ ತೋರಿಸಬೇಕು?
16 ಆತ್ಮ-ಸಂಯಮವನ್ನು ಪ್ರದರ್ಶಿಸುವ ತಮ್ಮ ಪ್ರಯತ್ನದಲ್ಲಿ ಕ್ರೈಸ್ತರಿಗೆ ಪಿಶಾಚನಾದ ಸೈತಾನನೆಂಬ ‘ಕೆಡುಕನ ವಶದಲ್ಲಿ ಬಿದ್ದಿರುವ ಲೋಕವನ್ನು’ ಸಹಾ ಎದುರಿಸಲಿಕ್ಕದೆ. ಇದರ ಕುರಿತಾಗಿ ಅಪೊಸ್ತಲ ಯೋಹಾನನು ಬರೆದದ್ದು: “ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕವನ್ನು ಪ್ರೀತಿಸಿದರೆ ತಂದೆಯ ಮೇಲಣ ಪ್ರೀತಿಯು ಅವನಲ್ಲಿಲ್ಲ. ಲೋಕದಲ್ಲಿರುವ ಶರೀರದಾಶೆ ಕಣ್ಣಿನಾಶೆ ಬದುಕುಬಾಳಿನ ಡಂಬ ಈ ಮೊದಲಾದವುಗಳೆಲ್ಲವು ತಂದೆಯಿಂದ ಹುಟ್ಟದೆ ಲೋಕದಿಂದ ಹುಟ್ಟಿದವುಗಳಾಗಿವೆ. ಲೋಕವೂ ಅದರ ಆಶೆಯೂ ಗತಿಸಿಹೋಗುತ್ತವೆ. ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.” ನಾವು ಆತ್ಮ-ಸಂಯಮವನ್ನು ತೋರಿಸದ ಹೊರತು ಮತ್ತು ಲೋಕವನ್ನು ಪ್ರೀತಿಸುವ ಯಾವುದೇ ಪ್ರವೃತ್ತಿಯನ್ನು ಬಲವಾಗಿ ಎದುರಿಸದ ಹೊರತು, ಒಮ್ಮೆ ಪೌಲನ ಜೊತೆಗೆಲಸದವನಾಗಿದ್ದ ದೇಮನು ಬಿದ್ದಂತೆ, ನಾವೂ ಅದರ ಪ್ರಭಾವಕ್ಕೆ ಬಲಿಬೀಳುವೆವು.—1 ಯೋಹಾನ 2:15-17; 5:19; 2 ತಿಮೊಥಿ 4:10.
17. ಆತ್ಮ-ಸಂಯಮದ ವಿಷಯದಲ್ಲಿ ಯಾವ ಸಮಸ್ಯೆಯೊಂದಿಗೆ ನಾವು ಹುಟ್ಟಿದ್ದೇವೆ?
17 ಕ್ರೈಸ್ತರೋಪಾದಿ ನಮಗೆ, ನಮ್ಮ ಸ್ವಂತ ಬಾಧ್ಯತೆಯಾಗಿ ಬಂದ ಮಾಂಸಿಕ ನಿರ್ಬಲತೆಗಳ ಮತ್ತು ಕುಂದುಕೊರತೆಗಳೊಂದಿಗೆ ಸಾಫಲ್ಯದಿಂದ ಹೋರಾಡಲು ಸಹಾ ಆತ್ಮ-ಸಂಯಮವು ಬೇಕು. “ಮನುಷ್ಯರ ಹೃದಯ ಸಂಕಲ್ಪವು ಚಿಕ್ಕಂದಿನಿಂದಲೇ ಕೆಟ್ಟದು” ಎಂಬ ನಿಜತ್ವವನ್ನು ನಾವು ತಪ್ಪಿಸಿಕೊಳ್ಳಲಾರೆವು. (ಆದಿಕಾಂಡ 8:21) ಅರಸ ದಾವೀದನಂತೆ, ‘ಹುಟ್ಟಿದಂದಿನಿಂದ ನಾವು ಪಾಪಿಗಳೇ; ಮಾತೃಗರ್ಭವನ್ನು ಹೊಂದಿದ ದಿನದಿಂದ ದ್ರೋಹಿಗಳೇ.’ (ಕೀರ್ತನೆ 51:5) ಹೊಸದಾಗಿ ಹುಟ್ಟಿದ ಒಂದು ಕೂಸಿಗೆ ಆತ್ಮ-ಸಂಯಮದ ಕುರಿತು ಏನೂ ತಿಳಿದಿಲ್ಲ. ಅದಕ್ಕೆ ಏನಾದರೂ ಬೇಕಿದ್ದಲ್ಲಿ ಅದು ಸಿಗುವ ತನಕ ಅದು ಅಳುತ್ತಾ ಇರುತ್ತದೆ. ಮಕ್ಕಳ ತರಬೇತಿನ ಕುರಿತು ಒಂದು ವರದಿಯು ಹೇಳುವದು: ‘ಮಕ್ಕಳು ಪ್ರೌಢರಿಗಿಂತ ಪೂರಾ ಬೇರೆಯಾದ ರೀತಿಯಲ್ಲಿ ವಿವೇಚಿಸುತ್ತಾರೆ. ಮಕ್ಕಳು ಸ್ವಾರ್ಥಮಗ್ನರು ಮತ್ತು ಹೆಚ್ಚಾಗಿ ಅತ್ಯಂತ ನ್ಯಾಯೋಚಿತ ಪ್ರೇರೇಪಣೆಗೂ ಬಗ್ಗದವರು ಯಾಕೆಂದರೆ “ತಮ್ಮನ್ನು ಇನ್ನೊಬ್ಬನ ಸ್ಥಳದಲ್ಲಿ ಹಾಕಿಕೊಳ್ಳಲು” ಅವರು ಶಕ್ತರಲ್ಲ.’ ನಿಜವಾಗಿಯೂ, “ಮೂರ್ಖತನವು ಹುಡುಗನ ಮನಸ್ಸಿಗೆ ಸಹಜ.” ಆದರೂ, “ಶಿಕ್ಷಕನ ಬೆತ್ತದ” ಅನ್ವಯಿಸುವಿಕೆಯಿಂದ, ವಿಧೇಯನಾಗತಕ್ಕ ನಿಯಮಗಳು ಅಲ್ಲಿವೆ ಮತ್ತು ಸ್ವಾರ್ಥಪರತೆಯನ್ನು ನಿಲ್ಲಿಸಬೇಕು ಎಂದು ಕ್ರಮೇಣ ಅವನಿಗೆ ತಿಳಿಯುತ್ತದೆ.”—ಜ್ಞಾನೋಕ್ತಿ 22:15.
18. (ಎ) ಯೇಸುವಿಗನುಸಾರ, ಸಾಂಕೇತಿಕ ಹೃದಯದಲ್ಲಿ ಯಾವ ಎಲ್ಲಾ ಪ್ರವೃತ್ತಿಗಳು ನೆಲೆಸುತ್ತವೆ? (ಬಿ) ಪೌಲನ ಯಾವ ಮಾತುಗಳು ಆತ್ಮ-ಸಂಯಮದ ಕುರಿತಾದ ಸಮಸ್ಯೆ ಅವನಿಗೆ ತಿಳಿದಿತ್ತೆಂದು ತೋರಿಸುತ್ತವೆ?
18 ಹೌದು, ನಮ್ಮಲ್ಲಿ ಸಹಜವಾಗಿರುವ ಸ್ವಾರ್ಥಪರ ಪ್ರವೃತ್ತಿಗಳು ಆತ್ಮ-ಸಂಯಮವನ್ನು ತೋರಿಸುವ ವಿಷಯದಲ್ಲಿ ನಮಗೆ ಒಂದು ಪಂಥಾಹ್ವಾನವನ್ನು ನೀಡಬಲ್ಲವು. ಆ ಪ್ರವೃತ್ತಿಗಳು ಸಾಂಕೇತಿಕ ಹೃದಯದಲ್ಲಿ ನೆಲೆಸಿರುತ್ತವೆ, ಅದರ ಕುರಿತು ಯೇಸು ಹೇಳಿದ್ದು: “ಹೃದಯದೊಳಗಿಂದ ಕೆಟ್ಟ ಆಲೋಚನೆ ಕೊಲೆ ಹಾದರ ಸೂಳೆಗಾರಿಕೆ ಕಳ್ಳತನ ಸುಳ್ಳುಸಾಕ್ಷಿ ಬೈಗಳು ಹೊರಟು ಬರುತ್ತವೆ.” (ಮತ್ತಾಯ 15:19) ಆದುದರಿಂದಲೇ ಪೌಲನು ಬರೆದದ್ದು: “ನಾನು ಮೆಚ್ಚುವ ಒಳ್ಳೇ ಕಾರ್ಯವನ್ನು ಮಾಡದೆ ಮೆಚ್ಚದಿರುವ ಕೆಟ್ಟ ಕಾರ್ಯವನ್ನೇ ಮಾಡುವವನಾಗಿದ್ದೇನೆ. ಮಾಡಬಾರದೆನ್ನುವ ಕೆಲಸವನ್ನು ನಾನು ಮಾಡಿದರೆ ಅದನ್ನು ಮಾಡಿದವನು ಇನ್ನು ನಾನಲ್ಲ, ನನ್ನಲ್ಲಿ ನೆಲೆಗೊಂಡಿರುವ ಪಾಪವೇ ಅದನ್ನು ಮಾಡಿತು.” (ರೋಮಾಪುರ 7:19, 20) ಆದರೂ ಇದೊಂದು ಆಶಾಹೀನ ಹೋರಾಟವಲ್ಲ, ಯಾಕೆಂದರೆ ಪೌಲನು ಇದನ್ನೂ ಬರೆದಿರುವನು: “ಇತರರನ್ನು ಹೋರಾಟಕ್ಕೆ ಕರೆದ ಮೇಲೆ ನಾನೇ ಅಯೋಗ್ಯನೆನಿಸಿಕೊಂಡೇನೋ ಎಂದು ನನ್ನ ಮೈಯನ್ನು ಜಜ್ಜಿ ಸ್ವಾಧೀನಪಡಿಸಿಕೊಳ್ಳುತ್ತೇನೆ.” ಮೈಯನ್ನು ಜಜ್ಜಿ ಸ್ವಾಧೀನಪಡಿಸಲು ಅವನಿಗೆ ಆತ್ಮ-ಸಂಯಮದ ಅಗತ್ಯವಿತ್ತು.—1 ಕೊರಿಂಥ 9:27.
19. ತನ್ನ ಮೈಯನ್ನು ಜಜ್ಜಿ ಸ್ವಾಧೀನಪಡಿಸುತ್ತೇನೆಂದು ಪೌಲನು ಹೇಳಶಕ್ತನಾಗಿದ್ದನೇಕೆ?
19 ತನ್ನ ಮೈಯನ್ನು ಜಜ್ಜಿ ಸ್ವಾಧೀನಪಡಿಸಿದ್ದೇನೆಂದು ಪೌಲನು ಹೇಳಶಕ್ತನಿದ್ದರೂ, ಅನೇಕ ಶಾರೀರಿಕ ಸ್ಥಿತಿಗತಿಗಳಾದ ರಕ್ತದೊತ್ತಡ, ದುರ್ಬಲ ನರಗಳು, ನಿದ್ರೆಗೆಡುವಿಕೆ, ತಲೆಶೂಲೆಗಳು, ಅಜೀರ್ಣವೇ ಮುಂತಾದವುಗಳಿಂದ ಆತ್ಮ-ಸಂಯಮದ ಅಭ್ಯಾಸವು ಜಟಿಲವಾಗುತ್ತದೆ. ಮುಂದಿನ ಲೇಖನದಲ್ಲಿ ಆತ್ಮ-ಸಂಯಮವನ್ನು ತೋರಿಸಲು ನೆರವಾಗುವ ಗುಣಗಳನ್ನು ಮತ್ತು ಸಹಾಯಕಗಳನ್ನು ನಾವು ಚರ್ಚಿಸಲಿರುವೆವು. (w91 11/15)
ನಿಮಗೆ ನೆನಪಿದೆಯೇ?
▫ ಆತ್ಮ-ಸಂಯಮವು ಏಕೆ ಮಹತ್ವದ್ದು?
▫ ಆತ್ಮ-ಸಂಯಮದ ಕೊರತೆಯ ಕಾರಣ ನಷ್ಟವನ್ನು ಅನುಭವಿಸಿದವರ ಕೆಲವು ಉದಾಹರಣೆಗಳು ಯಾವುವು?
▫ ಯಾವ ಕ್ಷೇತ್ರಗಳಲ್ಲಿ ನಾವು ಆತ್ಮ-ಸಂಯಮವನ್ನು ತೋರಿಸಲೇಬೇಕು?
▫ ಯಾವ ಮೂರು ಶತ್ರುಗಳು ನಮಗೆ ಆತ್ಮ-ಸಂಯಮ ತೋರಿಸುವುದನ್ನು ಕಷ್ಟಕರವಾಗಿ ಮಾಡುತ್ತವೆ?
[Picture of Charles Blondin on page 8]
[ಕೃಪೆ]
Historical Pictures Service
[ಪುಟ 10 ರಲ್ಲಿರುವ ಚಿತ್ರ]
ಆಹಾರ ಮತ್ತು ಕುಡಿತದ ವಿಷಯದಲ್ಲಿ ಕ್ರೈಸ್ತರು ಆತ್ಮ-ಸಂಯಮವನ್ನು ತೋರಿಸುವ ಅಗತ್ಯವಿದೆ
[ಪುಟ 11 ರಲ್ಲಿರುವ ಚಿತ್ರ]
ಹಾನಿಕಾರಕ ಹರಟೆಯಿಂದ ದೂರವಿರಲು ಆತ್ಮ-ಸಂಯಮವು ನಮಗೆ ನೆರವಾಗುವುದು