ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w92 5/1 ಪು. 13-18
  • ‘ಪವಿತ್ರಾತ್ಮದ ಹೆಸರಿನಲ್ಲಿ’

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ‘ಪವಿತ್ರಾತ್ಮದ ಹೆಸರಿನಲ್ಲಿ’
  • ಕಾವಲಿನಬುರುಜು—1992
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಪವಿತ್ರಾತ್ಮದಲ್ಲಿ ದೀಕ್ಷಾಸ್ನಾನವಾದದ್ದು
  • “ಪವಿತ್ರಾತ್ಮದ ಹೆಸರಿನಲ್ಲಿ” ದೀಕ್ಷಾಸ್ನಾನವಾದದ್ದು
  • ಆತ್ಮದ ಫಲಗಳು
  • ಪವಿತ್ರಾತ್ಮದಿಂದ ನೇಮಕವಾದದ್ದು
  • ಆತ್ಮದಿಂದ ಮಾರ್ಗದರ್ಶಿಸಲ್ಪಡುವುದು
  • ಪವಿತ್ರಾತ್ಮ ಮತ್ತು ಸಾರುವ ಕಾರ್ಯ
  • ನಮ್ಮ ದೀಕ್ಷಾಸ್ನಾನಕ್ಕೆ ಹೊಂದಿಕೆಯಲ್ಲಿ ಜೀವಿಸುವುದು
  • ಪವಿತ್ರಾತ್ಮವನ್ನು ಅನುಸರಿಸಿ ನಡೆದು ನಿಮ್ಮ ಸಮರ್ಪಣೆಗನುಸಾರ ಜೀವಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ಒಂದನೇ ಶತಮಾನದಲ್ಲಿ ಮತ್ತು ಇಂದು ಪವಿತ್ರಾತ್ಮದ ಮಾರ್ಗದರ್ಶನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ಯೆಹೋವನ ಪವಿತ್ರಾತ್ಮ ವರ
    ಕಾವಲಿನಬುರುಜು—1992
  • ಯೆಹೋವನ ಆತ್ಮವು ಆತನ ಜನರನ್ನು ನಡಿಸುತ್ತದೆ
    ಕಾವಲಿನಬುರುಜು—1993
ಇನ್ನಷ್ಟು
ಕಾವಲಿನಬುರುಜು—1992
w92 5/1 ಪು. 13-18

‘ಪವಿತ್ರಾತ್ಮದ ಹೆಸರಿನಲ್ಲಿ’

“ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; . . . ಪವಿತ್ರಾತ್ಮದ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿರಿ.”—ಮತ್ತಾಯ 28:19.

1. ಪವಿತ್ರಾತ್ಮದ ಸಂಬಂಧದಲ್ಲಿ ಯಾವ ಹೊಸ ವಾಕ್ಸರಣಿಯನ್ನು ಸ್ನಾನಿಕನಾದ ಯೋಹಾನನು ಉಪಯೋಗಿಸಿದನು?

ನಮ್ಮ ಸಾಮಾನ್ಯ ಶಕದ 29ನೆಯ ವರ್ಷದಲ್ಲಿ, ಸ್ನಾನಿಕನಾದ ಯೋಹಾನನು ಇಸ್ರಾಯೇಲಿನಲ್ಲಿ ಮೆಸ್ಸೀಯನಿಗಾಗಿ ದಾರಿಯನ್ನು ಸಿದ್ಧಮಾಡುತ್ತಿದ್ದದರಲ್ಲಿ ಕ್ರಿಯಾಶೀಲನಾಗಿದ್ದನು, ಮತ್ತು ತನ್ನ ಶುಶ್ರೂಷೆಯ ಸಮಯದಲ್ಲಿ, ಪವಿತ್ರಾತ್ಮದ ಕುರಿತು ಒಂದು ಹೊಸತಾದ ವಿಷಯವನ್ನು ಪ್ರಕಟಿಸಿದನು. ಆ ಪವಿತ್ರಾತ್ಮದ ಕುರಿತು ಹಿಬ್ರೂ ಶಾಸ್ತ್ರವು ಏನಂದಿತ್ತು ಎಂಬದು ಯೆಹೂದ್ಯರಿಗೆ ಈ ಮೊದಲೇ ತಿಳಿದಿತ್ತು ನಿಶ್ಚಯ. ಆದರೆ ಯೋಹಾನನು, “ನಾನಂತೂ ನಿಮ್ಮ ಪಶ್ಚಾತ್ತಾಪಕ್ಕಾಗಿ ನಿಮಗೆ ನೀರಿನಲ್ಲಿ ಸ್ನಾನ ಮಾಡಿಸುತ್ತೇನೆ; ಆದರೆ ನನ್ನ ಹಿಂದೆ ಬರುವವನು . . . ಪವಿತ್ರಾತ್ಮದಿಂದ ನಿಮಗೆ ಸ್ನಾನ ಮಾಡಿಸುವನು” ಎಂದು ಹೇಳಿದಾಗ ಅವರಿಗೆ ಆಶ್ಚರ್ಯವಾಗಿದ್ದಿರಬಹುದು. (ಮತ್ತಾಯ 3:11, NW) ‘ಪವಿತ್ರಾತ್ಮದಿಂದ ದೀಕ್ಷಾಸ್ನಾನ’ ಒಂದು ಹೊಸ ವಾಕ್ಸರಣಿಯಾಗಿತ್ತು.

2. ಪವಿತ್ರಾತ್ಮವನ್ನು ಒಳಗೂಡಿದ ಯಾವ ಹೊಸ ವಾಕ್ಸರಣಿಯನ್ನು ಯೇಸು ಪರಿಚಯಿಸಿದನು?

2 ಆತನ ಹಿಂದೆ ಬರಲಿಕ್ಕಿದ್ದವನು ಯೇಸುವೇ. ತನ್ನ ಭೂಜೀವಿತದಲ್ಲಿ ಯೇಸು ಪವಿತ್ರಾತ್ಮದ ಕುರಿತು ಅನೇಕ ಸಾರಿ ಮಾತಾಡಿದ್ದರೂ, ಕಾರ್ಯಥಃ ಯಾರನ್ನಾದರೂ ಪವಿತ್ರಾತ್ಮದಿಂದ ಸ್ನಾನ ಅವನು ಮಾಡಿಸಿರಲಿಲ್ಲ. ಅದಲ್ಲದೆ, ಅವನ ಪುನರುತ್ಥಾನದ ಅನಂತರ, ಅವನು ಪವಿತ್ರಾತ್ಮದ ಕುರಿತು ಇನ್ನೂ ಒಂದು ಹೊಸ ವಿಧಾನದಲ್ಲಿ ನಿರ್ದೇಶಿಸಿದ್ದನು. ಅವನು ತನ್ನ ಶಿಷ್ಯರಿಗೆ ಹೇಳಿದ್ದು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ. ಅವರಿಗೆ ತಂದೆಯ, ಮಗನ, ಮತ್ತು ಪವಿತ್ರಾತ್ಮದ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿರಿ.” (ಮತ್ತಾಯ 28:19) “ಹೆಸರಿನಲ್ಲಿ” ಎಂಬ ಹೇಳಿಕೆಯ ಅರ್ಥವು “ಅಂಗೀಕಾರದಲ್ಲಿ” ಎಂಬರ್ಥವನ್ನು ಕೊಡುತ್ತದೆ. ತಂದೆಯ, ಮಗನ, ಮತ್ತು ಪವಿತ್ರಾತ್ಮದ ಅಂಗೀಕಾರದಲ್ಲಿ ನೀರಿನ ದೀಕ್ಷಾಸ್ನಾನವು, ಪವಿತ್ರಾತ್ಮದಲ್ಲಿ ದೀಕ್ಷಾಸ್ನಾನಕ್ಕಿಂತ ಬೇರೆಯಾಗಿರಲಿಕ್ಕಿತ್ತು. ಇದು ಸಹಾ ಪವಿತ್ರಾತ್ಮವನ್ನು ಒಳಗೂಡಿದ್ದ ಒಂದು ಹೊಸ ವಾಕ್ಸರಣಿಯಾಗಿತ್ತು.

ಪವಿತ್ರಾತ್ಮದಲ್ಲಿ ದೀಕ್ಷಾಸ್ನಾನವಾದದ್ದು

3, 4. (ಎ) ಪವಿತ್ರಾತ್ಮದಲ್ಲಿ ಮೊದಲ ದೀಕ್ಷಾಸ್ನಾನಗಳು ಸಂಭವಿಸಿದ್ದು ಯಾವಾಗ? (ಬಿ) ಅವರಿಗೆ ಸ್ನಾನಕೊಟ್ಟದ್ದಲ್ಲದೆ, ಸಾ.ಶ. 33ರ ಪಂಚಾಶತ್ತಮದಂದು ಯೇಸುವಿನ ಶಿಷ್ಯರ ಕಡೆಗೆ ಪವಿತ್ರಾತ್ಮ ಹೇಗೆ ಕ್ರಿಯೆಗೈದಿತು?

3 ಪವಿತ್ರಾತ್ಮದಲ್ಲಿ ದೀಕ್ಷಾಸ್ನಾನದ ಕುರಿತು, ಯೇಸು ತನ್ನ ದಿವಾರೋಹಣದ ಸ್ವಲ್ಪ ಮುಂಚೆ ತನ್ನ ಶಿಷ್ಯರಿಗೆ ವಾಗ್ದಾನಿಸಿದ್ದು: “ನಿಮಗಾದರೋ ಇನ್ನು ಸ್ವಲ್ಪ ದಿವಸಗಳೊಳಗಾಗಿ ಪವಿತ್ರಾತ್ಮದಲ್ಲಿ ಸ್ನಾನವಾಗುವುದು.” (ಅಪೊಸ್ತಲರ ಕೃತ್ಯಗಳು 1:5, 8) ತದನಂತರ ಸ್ವಲ್ಪ ಸಮಯದಲ್ಲೇ ಆ ವಾಗ್ದಾನವು ನೆರವೇರಿತು. ಯೇಸು, ಪರಲೋಕದಿಂದ, ಪವಿತ್ರಾತ್ಮದಲ್ಲಿ ತನ್ನ ಮೊದಲನೆಯ ದೀಕ್ಷಾಸ್ನಾನಗಳನ್ನು ಮಾಡಿದಾಗ, ಯೆರೂಸಲೇಮಿನ ಮೇಲ್ಮಾಳಿಗೆಯ ಒಂದು ಕೋಣೆಯಲ್ಲಿ ಒಟ್ಟುಗೂಡಿದ್ದ ಸುಮಾರು 120 ಶಿಷ್ಯರ ಮೇಲೆ ಪವಿತ್ರಾತ್ಮವು ಬಂದಿಳಿಯಿತು. (ಅಪೊಸ್ತಲರ ಕೃತ್ಯಗಳು 2:1-4, 33) ಯಾವ ಫಲಿತಾಂಶದೊಂದಿಗೆ? ಆ ಶಿಷ್ಯರು ಕ್ರಿಸ್ತನ ಆತ್ಮಿಕ ದೇಹದ ಒಂದು ಭಾಗವಾದರು. ಅಪೊಸ್ತಲ ಪೌಲನು ವಿವರಿಸುವಂತೆ, “ನಾವೆಲ್ಲರೂ ಒಂದೇ ದೇಹವಾಗುವುದಕ್ಕಾಗಿ ಒಂದೇ ಆತ್ಮದಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡೆವು.” (1 ಕೊರಿಂಥ 12:13) ಅದೇ ಸಮಯದಲ್ಲಿ, ಅವರು ದೇವರ ಸ್ವರ್ಗೀಯ ರಾಜ್ಯದಲ್ಲಿ ಭವಿಷ್ಯದ ರಾಜರು ಮತ್ತು ಯಾಜಕರು ಆಗಿ ಅಭಿಷಿಕ್ತರಾದರು. (ಎಫೆಸ 1:13, 14; 2 ತಿಮೊಥಿ 2:12; ಪ್ರಕಟನೆ 20:6) ಆ ಮಹಿಮಾಯುಕ್ತ ಭವಿಷ್ಯದ ಬಾಧ್ಯಸ್ಥಿಕೆಯ ಒಂದು ಆರಂಭದ ಮುದ್ರೆ ಮತ್ತು ಸಂಕೇತವಾಗಿಯೂ ಆ ಪವಿತ್ರಾತ್ಮವು ಕಾರ್ಯನಡಿಸಿತು, ಆದರೆ ಅಷ್ಟು ಮಾತ್ರವೇ ಅಲ್ಲ.—2 ಕೊರಿಂಥ 1:21, 22.

4 ಕೆಲವು ವರ್ಷಗಳ ಮುಂಚಿತವಾಗಿ, ಯೇಸು ನಿಕೊದೇಮನಿಗೆ ಹೀಗೆ ಹೇಳಿದ್ದನು: “ಒಬ್ಬನು ಪುನಃ ಹುಟ್ಟದಿದ್ದರೆ ಅವನು ದೇವರ ರಾಜ್ಯವನ್ನು ಕಾಣಲಾರನು. . . . ಒಬ್ಬನು ನೀರಿನಿಂದಲೂ ಆತ್ಮದಿಂದಲೂ ಹುಟ್ಟದಿದ್ದರೆ ಅವನು ದೇವರ ರಾಜ್ಯಕ್ಕೆ ಸೇರಲಾರನು.” (ಯೋಹಾನ 3:3, 5) ಈಗ ಆ 120 ಮಂದಿ ಮನುಷ್ಯರು ಪುನಃ ಹುಟ್ಟಿದವರಾದರು. ಪವಿತ್ರಾತ್ಮದ ಮೂಲಕ, ಅವರು ದೇವರ ಆತ್ಮಿಕ ಪುತ್ರರಾಗಿ, ಕ್ರಿಸ್ತನ ಸಹೋದರರಾಗಿ ಸ್ವೀಕಾರ ಮಾಡಲ್ಪಟ್ಟರು. (ಯೋಹಾನ 1:11-13; ರೋಮಾಪುರ 8:14, 15) ಪವಿತ್ರಾತ್ಮದ ಈ ಎಲ್ಲಾ ಚಟುವಟಿಕೆಗಳು ಅವುಗಳ ಸ್ವಂತ ಅಸದೃಶ ರೀತಿಯಲ್ಲಿ ಅದ್ಭುತಗಳಿಗಿಂತಲೂ ಹೆಚ್ಚು ಆಶ್ಚರ್ಯಕರವಾಗಿದ್ದವು. ಅದಲ್ಲದೆ, ಒಂದು ಕಾಲದಲ್ಲಿದ್ದ ಅದ್ಭುತಗಳಂತೆ, ಪವಿತ್ರಾತ್ಮವು ಅಪೊಸ್ತಲರ ಮರಣದ ನಂತರ ಇಲ್ಲದೆ ಹೋಗಲಿಲ್ಲ, ಬದಲಾಗಿ ಈ ರೀತಿ ಕ್ರಿಯಾಶೀಲವಾಗಿ ನಮ್ಮೀ ದಿನಗಳ ತನಕವೂ ಮುಂದರಿಯುತ್ತಾ ಬಂದಿದೆ. ಇಂದು ಯೆಹೋವನ ಸಾಕ್ಷಿಗಳ ನಡುವೆ ಕ್ರಿಸ್ತನ ದೇಹದ ಈ ಆತ್ಮ-ಸ್ನಾತ ಸದಸ್ಯರಲ್ಲಿ ಕೊನೆಯವರು ಇರುವುದು ಅವರ ಸೌಭಾಗ್ಯವೇ ಸರಿ, ಮತ್ತು ಅವರು ಹೊತ್ತು ಹೊತ್ತಿಗೆ ಆತ್ಮಿಕ ಅಹಾರವನ್ನು ಒದಗಿಸಿಕೊಡುವ “ನಂಬಿಗಸ್ತನೂ ವಿವೇಕಿಯೂ ಆದ ಆಳಾಗಿ” ಸೇವೆ ಸಲ್ಲಿಸುತ್ತಿದ್ದಾರೆ.—ಮತ್ತಾಯ 24:45-47.

“ಪವಿತ್ರಾತ್ಮದ ಹೆಸರಿನಲ್ಲಿ” ದೀಕ್ಷಾಸ್ನಾನವಾದದ್ದು

5, 6. ಪವಿತ್ರಾತ್ಮದಲ್ಲಿ ಮೊದಲ ದೀಕ್ಷಾಸ್ನಾನಗಳು ನೀರಿನ ದೀಕ್ಷಾಸ್ನಾನಗಳಿಗೆ ನಡಿಸಿದ್ದು ಹೇಗೆ?

5 ಆದರೆ ತಂದೆಯ, ಮಗನ, ಮತ್ತು ಪವಿತ್ರಾತ್ಮದ ಹೆಸರಿನಲ್ಲಿ ವಾಗ್ದಾನಿತ ನೀರಿನ ದೀಕ್ಷಾಸ್ನಾನದ ಕುರಿತಾಗಿ ಏನು? ಆತ್ಮದಲ್ಲಿ ಸ್ನಾನಿತರಾದ ಆ ಮೊದಲನೆಯ ಶಿಷ್ಯರು ಅಂಥ ಒಂದು ದೀಕ್ಷಾಸ್ನಾನವನ್ನು ಪಡೆದಿರಲಿಲ್ಲ. ಅವರು ಈ ಮೊದಲೇ ಯೋಹಾನನ ನೀರಿನ ದೀಕ್ಷಾಸ್ನಾನವನ್ನು ಪಡೆದಿದ್ದರು, ಮತ್ತು ಅದು ಆ ವಿಶಿಷ್ಟ ಸಮಯದಲ್ಲಿ ಯೆಹೋವನಿಗೆ ಸ್ವೀಕರಣೀಯವಾಗಿದುದ್ದರಿಂದ, ಅವರಿಗೆ ಪುನಃ ದೀಕ್ಷಾಸ್ನಾನ ಪಡೆಯುವ ಅಗತ್ಯವಿರಲಿಲ್ಲ. ಆದರೆ ಸಾ.ಶ. 33ನೆಯ ವರ್ಷದಲ್ಲಿ ಜನರ ಒಂದು ಮಹಾ ಸಮೂಹವು ಆ ಹೊಸ ನೀರಿನ ದೀಕ್ಷಾಸ್ನಾನವನ್ನು ಪಡೆದಿತ್ತು. ಇದು ಸಂಭವಿಸಿದ್ದು ಹೇಗೆ?

6 ಆ 120 ಮಂದಿಯ ದೀಕ್ಷಾಸ್ನಾನವು ಜನಸಮೂಹವನ್ನು ಆಕರ್ಷಿಸಿದ್ದ ಒಂದು ಮಹಾ ಶಬ್ದದಿಂದ ಒಡಗೂಡಿತ್ತು. ಶಿಷ್ಯರು ಬೇರೆ ಬೇರೆ ಭಾಷೆಗಳಲ್ಲಿ, ಅಲ್ಲಿ ಕೂಡಿದವ್ದರಿಗೆ ಅರ್ಥವಾಗುತ್ತಿದ್ದ ವಿದೇಶಿ ಭಾಷೆಗಳಲ್ಲಿ ಮಾತಾಡುತ್ತಿದ್ದದ್ದನ್ನು ಕಂಡು ಅವರು ಆಶ್ಚರ್ಯಚಕಿತರಾದರು. ಸತ್ತವರೊಳಗಿಂದ ಎಬ್ಬಿಸಲ್ಪಟ್ಟ ಮತ್ತು ಈಗ ಪರಲೋಕದಲ್ಲಿ ದೇವರ ಬಲಗಡೆಯಲ್ಲಿ ಕೂತಿರುವ ಯೇಸುವಿನಿಂದ ದೇವರಾತ್ಮವು ಸುರಿಸಲ್ಪಟ್ಟಿದೆ ಎಂಬದಕ್ಕೆ ಈ ಅದ್ಭುತವು ಒಂದು ರುಜುವಾತೆಂದು ಅಪೊಸ್ತಲ ಪೇತ್ರನು ವಿವರಿಸಿ ಹೇಳಿದನು. ಪೇತ್ರನು ತನಗೆ ಕಿವಿಗೊಡುತ್ತಿದ್ದವರನ್ನು ಪ್ರೋತ್ಸಾಹಿಸುತ್ತಾ ಅಂದದ್ದು: “ಆದದರಿಂದ ನೀವು ಕಂಭಕ್ಕೆ ಹಾಕಿಸಿದ ಯೇಸುವನ್ನೇ ದೇವರು ಒಡೆಯನನ್ನಾಗಿಯೂ ಕ್ರಿಸ್ತನನ್ನಾಗಿಯೂ ಮಾಡಿದ್ದಾನೆಂದು ಇಸ್ರಾಯೇಲ್‌ ಕುಲದವರಿಗೆಲ್ಲಾ ನಿಸ್ಸಂದೇಹವಾಗಿ ತಿಳಿದಿರಲಿ.” ಅನಂತರ ಹೀಗನ್ನುತ್ತಾ ಅವನು ಮುಗಿಸಿದನು: “ನಿಮ್ಮ ಪಾಪಗಳು ಪರಿಹಾರವಾಗುವುದಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬರು ದೇವರ ಕಡೆಗೆ ತಿರುಗಿಕೊಂಡು ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಳ್ಳಿರಿ. ಆಗ ನೀವು ಪವಿತ್ರಾತ್ಮ ದಾನವನ್ನು ಹೊಂದುವಿರಿ.” ಸುಮಾರು 3,000 ಜನರು ಪ್ರತಿಕ್ರಿಯೆ ತೋರಿಸಿದರು.—ಅಪೊಸ್ತಲರ ಕೃತ್ಯಗಳು 2:36, 38, 41.

7. ಸಾ.ಶ. 33ರ ಪಂಚಾಶತ್ತಮದಂದು ಸ್ನಾನ ಹೊಂದಿದ 3,000 ಮಂದಿ ತಂದೆಯ, ಮಗನ, ಮತ್ತು ಪವಿತ್ರಾತ್ಮದ ಹೆಸರಿನಲ್ಲಿ ಸ್ನಾನಹೊಂದಿದ್ದು ಹೇಗೆ?

7 ಅವರು ತಂದೆಯ, ಮಗನ, ಮತ್ತು ಪವಿತ್ರಾತ್ಮದ ಹೆಸರಿನಲ್ಲಿ (ಅಂಗೀಕಾರದಲ್ಲಿ) ದೀಕ್ಷಾಸ್ನಾನ ಪಡೆದಿದ್ದರೆಂದು ಹೇಳಬಹುದೋ? ಹೌದು. ತಂದೆಯ ಹೆಸರಿನಲ್ಲಿ ಸ್ನಾನಪಡೆಯುವಂತೆ ಪೇತ್ರನು ಅವರಿಗೆ ಹೇಳದಿದ್ದರೂ, ಅವರು ಈ ಮೊದಲೇ ಯೆಹೋವನನ್ನು ಸಾರ್ವಭೌಮ ಕರ್ತನಾಗಿ ಅಂಗೀಕರಿಸಿದ್ದರು. ಯಾಕಂದರೆ ಅವರು ಆತನಿಗೆ ಸಮರ್ಪಿತವಾಗಿದ್ದ ಜನಾಂಗದ ಸದಸ್ಯರಾಗಿದ್ದರು, ಮಾಂಸಿಕ ಯೆಹೂದ್ಯರಾಗಿದ್ದರು. ‘ಮಗನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಳ್ಳಿರಿ’ ಎಂದು ಪೇತ್ರನು ತಾನೇ ಅವರಿಗೆ ಹೇಳಿದ್ದನು. ಹೀಗೆ ಅವರು ಯೇಸುವನ್ನು ಕರ್ತನು ಮತ್ತು ಕ್ರಿಸ್ತನು ಎಂದು ಅಂಗೀಕರಿಸಿದ್ದರೆಂಬದನ್ನು ಅವರ ದೀಕ್ಷಾಸ್ನಾನವು ಸೂಚಿಸಿತ್ತು. ಅವರೀಗ ಅವನ ಶಿಷ್ಯರು ಮತ್ತು ಇನ್ನು ಮುಂದೆ ಅವನ ಮೂಲಕವಾಗಿ ಮಾತ್ರವೇ ಪಾಪಗಳ ಕ್ಷಮೆ ಸಿಗುವುದೆಂದು ಅವರು ಸ್ವೀಕರಿಸಿದ್ದರು. ಕೊನೆಯದಾಗಿ, ಪವಿತ್ರಾತ್ಮವನ್ನು ಅಂಗೀಕರಿಸುವುದು ದೀಕ್ಷಾಸ್ನಾನಕ್ಕೆ ಬೇಕಿತ್ತು, ಅವರು ಆ ಆತ್ಮವನ್ನು ಉಚಿತಾರ್ಥ ವರವಾಗಿ ಪಡೆಯುವರೆಂಬ ವಾಗ್ದಾನದ ಪ್ರತಿಕ್ರಿಯೆಯಲ್ಲಿ ಅದು ಪೂರೈಸಲ್ಪಟ್ಟಿತ್ತು.

8. (ಎ) ನೀರಿನ ದೀಕ್ಷಾಸ್ನಾನ ಮಾತ್ರವಲ್ಲದೆ, ಬೇರೆ ಯಾವ ದೀಕ್ಷಾಸ್ನಾನವನ್ನೂ ಅಭಿಷಿಕ್ತ ಕ್ರೈಸ್ತರು ಪಡೆದರು? (ಬಿ) 1,44,000 ಮಂದಿಯಲ್ಲದೆ ಬೇರೆ ಯಾರು ಪವಿತ್ರಾತ್ಮದ ಹೆಸರಿನಲ್ಲಿ ನೀರಿನ ದೀಕ್ಷಾಸ್ನಾನ ಪಡೆಯುತ್ತಾರೆ?

8 ಸಾ.ಶ. 33ರ ಪಂಚಾಶತ್ತಮ ದಿನದಂದು ನೀರಿನ ದೀಕ್ಷಾಸ್ನಾನ ಪಡೆದ ಆ ಜನರು ಭವಿಷ್ಯದ ಸ್ವರ್ಗೀಯ ರಾಜ್ಯದಲ್ಲಿ ಅರಸರು ಮತ್ತು ಯಾಜಕರಾಗಿ ಅಭಿಷೇಕಿತರಾದ ಕಾರಣ ಆತ್ಮದಲ್ಲಿಯೂ ಸ್ನಾನವನ್ನು ಪಡೆದವರಾಗಿದ್ದರು. ಪ್ರಕಟನೆ ಪುಸ್ತಕಕ್ಕೆ ಅನುಸಾರವಾಗಿ, ಇಂಥವರು ಇರುವುದು ಕೇವಲ 1,44,000 ಮಂದಿ ಮಾತ್ರವೇ. ಹೀಗೆ ಪವಿತ್ರಾತ್ಮದಲ್ಲಿ ದೀಕ್ಷಾಸ್ನಾನ ಪಡೆದವರು ಮತ್ತು ರಾಜ್ಯಕ್ಕೆ ಬಾಧ್ಯಸ್ಥರೆಂದು ಕೊನೆಗೆ ‘ಮುದ್ರೆ ಒತ್ತಿಸಿಕೊಂಡವರು’ ಕೇವಲ 1,44,000 ಮಂದಿ ಮಾತ್ರವೇ. (ಪ್ರಕಟನೆ 7:4; 14:1) ಆದರೂ, ಎಲ್ಲಾ ಹೊಸ ಶಿಷ್ಯರು—ಅವರ ನಿರೀಕ್ಷೆಯು ಏನೇ ಇರಲಿ—ತಂದೆಯ, ಮಗನ, ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ನೀರಿನ ದೀಕ್ಷಾಸ್ನಾನವನ್ನು ಪಡೆಯುತ್ತಾರೆ. (ಮತ್ತಾಯ 28:19, 20) ಹೀಗಿರಲಾಗಿ, ಕ್ರೈಸ್ತರೆಲ್ಲರಿಗೆ—ಅವರು “ಚಿಕ್ಕ ಹಿಂಡಿ”ನವರಾಗಿರಲಿ ಯಾ “ಬೇರೆ ಕುರಿ” ಗಳಾಗಿರಲಿ,—ಪವಿತ್ರಾತ್ಮದ ಹೆಸರಿನಲ್ಲಿ ದೀಕ್ಷಾಸ್ನಾನವು ಏನನ್ನು ಸೂಚಿಸುತ್ತದೆ? (ಲೂಕ 12:32; ಯೋಹಾನ 10:16) ಅದನ್ನು ಉತ್ತರಿಸುವ ಮೊದಲು, ಕ್ರೈಸ್ತ ಯುಗದಲ್ಲಿ ಪವಿತ್ರಾತ್ಮದ ಕೆಲವು ಚಟುವಟಿಕೆಗಳನ್ನು ನಾವು ಗಮನಿಸೋಣ.

ಆತ್ಮದ ಫಲಗಳು

9. ಪವಿತ್ರಾತ್ಮದ ಯಾವ ಚಟುವಟಿಕೆಯು ಕ್ರೈಸ್ತರೆಲ್ಲರಿಗೆ ಪ್ರಾಮುಖ್ಯವಾಗಿರುತ್ತದೆ?

9 ಪವಿತ್ರಾತ್ಮದ ಒಂದು ಪ್ರಧಾನ ಚಟುವಟಿಕೆಯು ಕ್ರಿಸ್ತೀಯ ವ್ಯಕ್ತಿತ್ವಗಳನ್ನು ವಿಕಾಸಿಸಲು ನಮಗೆ ಸಹಾಯ ಮಾಡುವುದರಲ್ಲಿದೆ. ನಮ್ಮ ಅಪೂರ್ಣತೆಯ ಕಾರಣ ನಾವು ಪಾಪಮಾಡುವುದನ್ನು ವರ್ಜಿಸಲಾರೆವು, ನಿಜ. (ರೋಮಾಪುರ 7:21-23) ಆದರೆ ನಾವು ಪ್ರಾಮಾಣಿಕತೆಯಿಂದ ಪಶ್ಚಾತ್ತಾಪ ಪಡುವಾಗ, ಕ್ರಿಸ್ತನ ಯಜ್ಞದ ಆಧಾರದ ಮೇಲೆ ಯೆಹೋವನು ನಮ್ಮನ್ನು ಕ್ಷಮಿಸುತ್ತಾನೆ. (ಮತ್ತಾಯ 12:31, 32; ರೋಮಾಪುರ 7:24, 25; 1 ಯೋಹಾನ 2:1, 2) ಅದಲ್ಲದೆ, ಪಾಪಮಾಡುವ ನಮ್ಮ ಪ್ರವೃತ್ತಿಯ ವಿರುದ್ಧವಾಗಿ ನಾವು ಹೋರಾಡುವಂತೆ ಯೆಹೋವನು ನಮ್ಮಿಂದ ಅಪೇಕ್ಷಿಸುತ್ತಾನೆ, ಮತ್ತು ಇದನ್ನು ಮಾಡಲು ಪವಿತ್ರಾತ್ಮವು ನಮಗೆ ಸಹಾಯ ಮಾಡುತ್ತದೆ. “ಪವಿತ್ರಾತ್ಮದಿಂದ ನಡಿಸಲ್ಪಡುತ್ತಾ ಇರ್ರಿ” ಎಂದು ಹೇಳುತ್ತಾನೆ ಪೌಲನು, “ಆಗ ನೀವು ಶರೀರಭಾವದ ಅಭಿಲಾಷೆಗಳನ್ನು ಎಷ್ಟು ಮಾತ್ರಕ್ಕೂ ನೆರವೇರಿಸುವುದಿಲ್ಲ.” (ಗಲಾತ್ಯ 5:16, NW )ಪವಿತ್ರಾತ್ಮವು ನಮ್ಮಲ್ಲಿ ಅತ್ಯುತ್ತಮವಾದ ಗುಣಗಳನ್ನು ಉತ್ಪಾದಿಸಬಲ್ಲದು ಎಂದು ತೋರಿಸಲು ಪೌಲನು ಮತ್ತೂ ಹೇಳುತ್ತಾನೆ. ಅವನು ಬರೆದದ್ದು: “ಆತ್ಮದಿಂದ ಉಂಟಾಗುವ ಫಲವೇನಂದರೆ—ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಒಳ್ಳೇತನ ನಂಬಿಕೆ ಸೌಮ್ಯತೆ ಆತ್ಮಸಂಯಮ ಇಂಥವುಗಳೇ.”—ಗಲಾತ್ಯ 5:22, 23, NW.

10. ಆತ್ಮದ ಫಲವು ಒಬ್ಬ ಕ್ರೈಸ್ತನಲ್ಲಿ ವಿಕಾಸಗೊಳ್ಳುವುದು ಹೇಗೆ?

10 ಕ್ರೈಸ್ತನಲ್ಲಿ ಅಂಥ ಫಲವನ್ನು ಪವಿತ್ರಾತ್ಮವು ಶಕ್ಯವಾಗಿ ಮಾಡುವುದು ಹೇಗೆ? ನಾವು ಸಮರ್ಪಿತ ಮತ್ತು ಸ್ನಾನಿತ ಸಾಕ್ಷಿಗಳೆಂಬ ಕಾರಣ ಮಾತ್ರದಿಂದ ಅವು ಯಾಂತ್ರಿಕವಾಗಿ ಸಂಭವಿಸುವುದಿಲ್ಲ. ಅದಕ್ಕಾಗಿ ನಾವು ಕಾರ್ಯನಡಿಸಬೇಕಾಗಿದೆ. ಈ ಗುಣಗಳನ್ನು ಪ್ರದರ್ಶಿಸುವ ಬೇರೆ ಕ್ರೈಸ್ತರೊಂದಿಗೆ ನಾವು ಸಹವಸಿಸುವುದಾದರೆ, ವಿಶಿಷ್ಟ ಗುಣಗಳನ್ನು ಬೆಳೆಸಿಕೊಳ್ಳುವಂತೆ ನಮಗೆ ಸಹಾಯ ಮಾಡಲು ದೇವರನ್ನು ಆತನ ಆತ್ಮಕ್ಕಾಗಿ ನಾವು ಪ್ರಾರ್ಥಿಸುವುದಾದರೆ, ದುಸ್ಸಹವಾಸಗಳನ್ನು ನಾವು ವರ್ಜಿಸುವುದಾದರೆ ಮತ್ತು ಸೂಚನೆಗಾಗಿ ಮತ್ತು ಒಳ್ಳೇ ಮಾದರಿಗಳಿಗಾಗಿ ಬೈಬಲನ್ನು ಅಧ್ಯಯನಿಸುವುದಾದರೆ, ಆಗ ಪವಿತ್ರಾತ್ಮದ ಫಲವು ನಮ್ಮಲ್ಲಿ ಬೆಳೆಯುವುದು.—ಜ್ಞಾನೋಕ್ತಿ 13:20; 1 ಕೊರಿಂಥ 15:33; ಗಲಾತ್ಯ 5:24-26; ಇಬ್ರಿಯ 10:24, 25.

ಪವಿತ್ರಾತ್ಮದಿಂದ ನೇಮಕವಾದದ್ದು

11. ಯಾವ ರೀತಿಯಲ್ಲಿ ಹಿರಿಯರು ಪವಿತ್ರಾತ್ಮದಿಂದ ನೇಮಕವನ್ನು ಹೊಂದುತ್ತಾರೆ?

11 ಎಫೆಸದ ಹಿರಿಯರನ್ನು ಉದ್ದೇಶಿಸಿ ಮಾತಾಡಿದಾಗ, ಪೌಲನು ಪವಿತ್ರಾತ್ಮದ ಇನ್ನೊಂದು ಚಟುವಟಿಕೆಯನ್ನು ಪರಿಚಯಿಸುತ್ತಾ ಅಂದದ್ದು: “ದೇವರು ತನ್ನ ಸ್ವಂತ ಮಗನ ರಕ್ತದಿಂದ ಸಂಪಾದಿಸಿಕೊಂಡ ದೇವರ ಸಭೆಯನ್ನು ಪರಿಪಾಲಿಸುವುದಕ್ಕಾಗಿ ಪವಿತ್ರಾತ್ಮವು ನಿಮ್ಮಲ್ಲಿ ಮೇಲ್ವಿಚಾರಕರಾಗಿ ನೇಮಿಸಿರುವ ನಿಮ್ಮ ವಿಷಯದಲ್ಲಿಯೂ ಮತ್ತು ಎಲ್ಲಾ ಹಿಂಡಿನ ವಿಷಯದಲ್ಲಿಯೂ ಎಚ್ಚರಿಕೆಯಾಗಿರ್ರಿ.” (ಅಪೊಸ್ತಲರ ಕೃತ್ಯಗಳು 20:28, NW) ಹೌದು, ಸಭಾ ಮೇಲ್ವಿಚಾರಕರು ಅಥವಾ ಹಿರಿಯರು ಪವಿತ್ರಾತ್ಮದಿಂದ ನೇಮಕ ಹೊಂದುತ್ತಾರೆ. ಹೇಗೆ? ಹೇಗಂದರೆ ಪ್ರೇರಿತ ಬೈಬಲಲ್ಲಿ ತಿಳಿಸಲ್ಪಟ್ಟ ಯೋಗ್ಯತೆಗಳನ್ನು ನೇಮಿತ ಹಿರಿಯರು ಮುಟ್ಟಲೇ ಬೇಕಾಗಿರುವುದರಲ್ಲಿಯೇ. (1 ತಿಮೊಥಿ 3:1-13; ತೀತ 1:5-9) ಆ ಗುಣಗಳನ್ನು ಅವರು ಪವಿತ್ರಾತ್ಮದ ಸಹಾಯದಿಂದ ಮಾತ್ರವೇ ವಿಕಾಸಿಸ ಶಕ್ತರು. ಅದಲ್ಲದೆ, ಹಿರಿಯ ಮಂಡಲಿಯು ಒಬ್ಬ ಹೊಸ ಹಿರಿಯನನ್ನು ಶಿಫಾರಸು ಮಾಡುವಾಗ ಅವನು ಆ ಯೋಗ್ಯತೆಗಳನ್ನು ಮುಟ್ಟಿರುವನೋ ಇಲ್ಲವೋ ಎಂದು ವಿವೇಚಿಸಲಿಕ್ಕಾಗಿ ಪವಿತ್ರಾತ್ಮದ ಮಾರ್ಗದರ್ಶನೆಗಾಗಿ ಪ್ರಾರ್ಥನೆ ಮಾಡುತ್ತದೆ. ಮತ್ತು ನಿಜವಾದ ನೇಮಕವು ಆತ್ಮಾಭಿಷಿಕ್ತರಾದ ನಂಬಿಗಸ್ತನೂ ವಿವೇಕಿಯೂ ಆದ ಆಳಿನ ಮೇಲ್ವಿಚಾರದ ಕೆಳಗೆ ಮಾಡಲ್ಪಡುತ್ತದೆ.

ಆತ್ಮದಿಂದ ಮಾರ್ಗದರ್ಶಿಸಲ್ಪಡುವುದು

12. ಬೈಬಲಿನ ಮೂಲಕವಾಗಿ ಆತ್ಮವು ನಮ್ಮನ್ನು ಪ್ರಭಾವಿಸಬಲ್ಲದು ಹೇಗೆ?

12 ಪವಿತ್ರ ಶಾಸ್ತ್ರವಚನಗಳು ಪವಿತ್ರಾತ್ಮದ ಪ್ರಭಾವದ ಕೆಳಗೆ ಬರೆಯಲ್ಪಟ್ಟಿವೆ ಎಂದು ಕ್ರೈಸ್ತರು ಅಂಗೀಕರಿಸುತ್ತಾರೆ. ಆದಕಾರಣ ಅವರು ಆತ್ಮ-ಪ್ರೇರಿತ ವಿವೇಕಕ್ಕಾಗಿ, ಯೆಹೋವನ ಕ್ರೈಸ್ತ-ಪೂರ್ವದ ಸಾಕ್ಷಿಗಳಂತೆ, ಅದನ್ನು ಆಳವಾಗಿ ಪರಿಶೋಧಿಸುತ್ತಾರೆ. (ಜ್ಞಾನೋಕ್ತಿ 2:1-9) ಅವರು ಅದನ್ನು ಓದುತ್ತಾರೆ, ಮನನ ಮಾಡುತ್ತಾರೆ ಮತ್ತು ಅದು ತಮ್ಮ ಜೀವನವನ್ನು ಮಾರ್ಗದರ್ಶಿಸುವಂತೆ ಬಿಟ್ಟುಕೊಡುತ್ತಾರೆ. (ಕೀರ್ತನೆ 1:1-3; 2 ತಿಮೊಥಿ 3:16) ಹೀಗೆ ಅವರು ‘ದೇವರ ಅಗಾಧವಾದ ವಿಷಯಗಳನ್ನು ಪರಿಶೋಧಿಸುವುದಕ್ಕೆ’ ಪವಿತ್ರಾತ್ಮದಿಂದ ಸಹಾಯ ಮಾಡಲ್ಪಡುತ್ತಾರೆ. (1 ಕೊರಿಂಥ 2:10, 13; 3:19) ಈ ರೀತಿಯಲ್ಲಿ ದೇವರ ಸೇವಕರನ್ನು ಮಾರ್ಗದರ್ಶಿಸುವುದು ನಮ್ಮ ಕಾಲಕ್ಕಾಗಿ ದೇವರಾತ್ಮದ ಪ್ರಧಾನ ಚಟುವಟಿಕೆಯಾಗಿದೆ.

13, 14. ಸಭೆಯಲ್ಲಿ ಸಮಸ್ಯೆಗಳನ್ನು ನಿಭಾಯಿಸಲಿಕ್ಕಾಗಿ ಯೇಸು ಏನನ್ನು ಉಪಯೋಗಿಸಿದನು, ಮತ್ತು ಹಾಗೆ ಆತನು ಇಂದೂ ಮಾಡುತ್ತಿರುವುದು ಹೇಗೆ?

13 ಅದಲ್ಲದೆ ಪ್ರಕಟನೆ ಪುಸ್ತಕದಲ್ಲಿ, ಪುನರುತಿಥ್ತ ಯೇಸುವು ಆಸ್ಯಾ ಮೈನರ್‌ನ ಏಳು ಸಭೆಗಳಿಗೆ ಸಂದೇಶಗಳನ್ನು ಕಳುಹಿಸಿದ್ದನು. (ಪ್ರಕಟನೆ, ಅಧ್ಯಾಯ 2 ಮತ್ತು 3) ಆ ಸಭೆಗಳನ್ನು ತಾನು ಪರೀಕ್ಷಿಸಿದ್ದೇನೆಂದೂ ಮತ್ತು ಅವುಗಳ ಆತ್ಮಿಕ ಪರಿಸ್ಥಿತಿಯನ್ನು ವಿವೇಚಿಸಿರುತ್ತೇನೆಂದೂ ಆತನು ಅವುಗಳಲ್ಲಿ ಪ್ರಕಟಿಸಿರುತ್ತಾನೆ. ಕೆಲವು ಸಭೆಗಳು ನಂಬಿಕೆಯಲ್ಲಿ ಒಳ್ಳೇ ಮಾದರಿಯನ್ನು ಇಟ್ಟಿರುವುದು ಆತನಿಗೆ ಕಂಡುಬಂತು. ಬೇರೆ ಕೆಲವಲ್ಲಿ ಹಿಂಡನ್ನು ಭ್ರಷ್ಟಗೊಳಿಸುವ ಪಕ್ಷಭೇದ, ಅನೈತಿಕತೆ, ಮಂದೋಷ್ಣತನವನ್ನು ಹಿರಿಯರು ಅನುಮತಿಸಿದ್ದರು. ಸಾರ್ದಿಸ್‌ ಸಭೆಯು, ಕೆಲವೇ ನಂಬಿಗಸ್ತ ಜನರ ಹೊರತು, ಆತ್ಮಿಕವಾಗಿ ಸತ್ತ ಸ್ಥಿತಿಯಲ್ಲಿತ್ತು. (ಪ್ರಕಟನೆ 3:1-4) ಯೇಸು ಆ ಸಮಸ್ಯೆಗಳನ್ನು ನಿರ್ವಹಿಸಿದ್ದು ಹೇಗೆ? ಪವಿತ್ರಾತ್ಮದ ಮೂಲಕವಾಗಿಯೇ. ಆ ಏಳು ಸಭೆಗಳಿಗೆ ಸೂಚನೆ ಕೊಡುತ್ತಿದ್ದಾಗ, ಪ್ರತಿಸಂದರ್ಭದಲ್ಲಿ ಯೇಸುವಿನ ಸಂದೇಶವು ಈ ಹೇಳಿಕೆಯಿಂದ ಕೊನೆಗೊಳ್ಳುತ್ತಿತ್ತು: “ದೇವರಾತ್ಮವು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ.”—ಪ್ರಕಟನೆ 2:7, 11, 17, 29; 3:6, 13, 22.

14 ಇಂದು ಕೂಡಾ, ಯೇಸು ಸಭೆಗಳನ್ನು ಪರೀಕ್ಷಿಸುತ್ತಾನೆ. ಮತ್ತು ಸಮಸ್ಯೆಗಳು ಆತನಿಗೆ ತಿಳಿದುಬರುವಾಗ, ಆತನಿನ್ನೂ ಅವನ್ನು ಪವಿತ್ರಾತ್ಮದ ಮೂಲಕವಾಗಿ ನಿಭಾಯಿಸುತ್ತಾನೆ. ನಾವು ನಮ್ಮ ಸಮಸ್ಯೆಗಳನ್ನು ಮನಗಾಣುವಂತೆ ಮತ್ತು ಪರಿಹರಿಸುವಂತೆ ಪವಿತ್ರಾತ್ಮವು ನಮ್ಮ ಬೈಬಲ್‌ ವಾಚನದ ಮೂಲಕವಾಗಿ ನಮಗೆ ನೇರವಾಗಿ ಸಹಾಯ ಮಾಡಬಲ್ಲದು. ಆತ್ಮಾಭಿಷಿಕ್ತರಾದ ನಂಬಿಗಸ್ತನೂ ವಿವೇಕಿಯೂ ಆದ ಆಳಿನಿಂದ ಪ್ರಕಾಶಿಸಲ್ಪಡುವ ಬೈಬಲ್‌ ಸಾಹಿತ್ಯದ ಮೂಲಕವಾಗಿಯೂ ಸಹಾಯ ಬರಬಲ್ಲದು. ಅಥವಾ, ಸಭೆಯಲ್ಲಿರುವ ಆತ್ಮ-ನಿಯುಕ್ತ ಹಿರಿಯರಿಂದ ಅದು ಬರಬಹುದು. ಹೇಗಿದ್ದರೂ, ಸೂಚನೆಯು ವ್ಯಕ್ತಿಪರವಾಗಿರಲಿ ಅಥವಾ ಇಡೀ ಸಭೆಗಾಗಿರಲಿ, “ದೇವರಾತ್ಮವು ಹೇಳುವುದನ್ನು ಕಿವಿಯುಳ್ಳವನು ಕೇಳಲಿ” ಎಂಬ ಯೇಸುವಿನ ಮಾತುಗಳನ್ನು ನಾವು ಪಾಲಿಸುತ್ತೇವೋ?

ಪವಿತ್ರಾತ್ಮ ಮತ್ತು ಸಾರುವ ಕಾರ್ಯ

15. ಸಾರುವ ಕಾರ್ಯದ ಸಂಬಂಧದಲ್ಲಿ ಯೇಸುವಿನ ಕಡೆಗೆ ಆತ್ಮವು ಕ್ರಿಯೆಗೈದದ್ದು ಹೇಗೆ?

15 ಯೇಸು ನಜರೇತಿನ ಒಂದು ಸಭಾಮಂದಿರದಲ್ಲಿ ಸಾರಿದ್ದ ಒಂದು ಸಂದರ್ಭದಲ್ಲಿ, ಪವಿತ್ರಾತ್ಮದ ಇನ್ನೂ ಒಂದು ಚಟುವಟಿಕೆಯನ್ನು ಎತ್ತಿಹೇಳಿದ್ದನು. ದಾಖಲೆಯು ನಮಗೆ ಹೇಳುವುದು: “ಆತನು ಸುರುಳಿಯನ್ನು ಬಿಚ್ಚಿ ಮುಂದೆ ಹೇಳಿರುವ ಮಾತು ಬರೆದಿರುವ ಸ್ಥಳವನ್ನು ಕಂಡು ಓದಿದನು; ಆ ಮಾತೇನಂದರೆ—ಕರ್ತನ [ಯೆಹೋವನ, NW ] ಆತ್ಮವು ನನ್ನ ಮೇಲೆ ಅದೆ, ಆತನು ನನ್ನನ್ನು ಬಡವರಿಗೆ ಶುಭವರ್ತಮಾನವನ್ನು ಸಾರುವುದಕ್ಕೆ ಅಭಿಷೇಕಿಸಿದನು. ಸೆರೆಯವರಿಗೆ ಬಿಡುಗಡೆಯಾಗುವುದನ್ನು ಮತ್ತು ಕುರುಡರಿಗೆ ಕಣ್ಣು ಬರುವುದನ್ನು ಪ್ರಸಿದ್ಧಪಡಿಸುವುದಕ್ಕೂ ಮನಮುರಿದವರನ್ನು ಬಿಡಿಸಿ ಕಳುಹಿಸುವುದಕ್ಕೂ ಆತನು ನನ್ನನ್ನು ಕಳುಹಿದ್ದಾನೆ ಎಂಬದು. ಅನಂತರ ಆತನು ಅವರಿಗೆ—ನೀವೀಗಲೇ ಕೇಳಿದ ಈ ವೇದೋಕ್ತಿಯು ಇಂದು ನೆರವೇರಿದೆ.” (ಲೂಕ 4:17, 18, 21; ಯೆಶಾಯ 61:1, 2) ಹೌದು, ಸುವಾರ್ತೆಯನ್ನು ಸಾರಲು ಯೇಸು ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟಿದ್ದನು.

16. ಒಂದನೆಯ ಶತಮಾನದಲ್ಲಿ, ಪವಿತ್ರಾತ್ಮವು ಸುವಾರ್ತೆ ಸಾರುವ ಕಾರ್ಯದಲ್ಲಿ ಆಳವಾಗಿ ಒಳಗೂಡಿದ್ದದ್ದು ಹೇಗೆ?

16 ಯೇಸು ತನ್ನ ಮರಣಕ್ಕೆ ಸ್ವಲ್ಪ ಮುಂಚಿತವಾಗಿ, ತನ್ನ ಹಿಂಬಾಲಕರಿಂದ ಪೂರೈಸಲ್ಪಡುವ ಒಂದು ಮಹಾ ಸಾರುವ ಚಟುವಟಿಕೆಯನ್ನು ಮುಂತಿಳಿಸಿದನು. ಆತನಂದದ್ದು: “ಮೊದಲು ಎಲ್ಲಾ ಜನಾಂಗಗಳಿಗೆ ಸುವಾರ್ತೆಯು ಸಾರಲ್ಪಡಬೇಕು.” (ಮಾರ್ಕ 13:10) ಈ ಮಾತುಗಳು ಒಂದನೆಯ ಶತಮಾನದಲ್ಲಿ ಆರಂಭದ ನೆರವೇರಿಕೆಯನ್ನು ಪಡೆದವು, ಮತ್ತು ಆಗ ಪವಿತ್ರಾತ್ಮದಿಂದ ವಹಿಸಲ್ಪಟ್ಟ ಪಾತ್ರವು ಗಮನಾರ್ಹವಾಗಿತ್ತು. ಇಥಿಯೋಪ್ಯದ ಕಂಚುಕಿಗೆ ಸಾರುವಂತೆ ಫಿಲಿಪ್ಪನನ್ನು ಮಾರ್ಗದರ್ಶಿಸಿದ್ದು ಪವಿತ್ರ ಆತ್ಮವೇ. ಪವಿತ್ರಾತ್ಮವೇ ಪೇತ್ರನನ್ನು ಕೊರ್ನೇಲ್ಯನ ಬಳಿಗೆ ನಡಿಸಿತ್ತು, ಮತ್ತು ಪೌಲ ಮತ್ತು ಬಾರ್ನಬರನ್ನು ಅಂತಿಯೋಕ್ಯದಿಂದ ಅಪೊಸ್ತಲರಾಗಿ ಕಳುಹಿಸುವಂತೆ ಮಾರ್ಗದರ್ಶನೆ ಕೊಟ್ಟದ್ದೂ ಪವಿತ್ರ ಆತ್ಮವೇ. ತದನಂತರ, ಆಸ್ಯ ಮತ್ತು ಬಿಥೂನ್ಯ ಸೀಮೆಯಲ್ಲಿ ಸಾರಲು ಪೌಲನು ಬಯಸಿದಾಗ, ಪವಿತ್ರಾತ್ಮವು ಹೇಗೊ ಅದನ್ನು ತಡೆಯಿತು. ಸಾಕ್ಷಿ ಕಾರ್ಯವು ಯೂರೋಪಿನ ಕಡೆಗೆ ಮುಂದರಿಯುವಂತೆ ದೇವರು ಬಯಸಿದ್ದನು.—ಅಪೊಸ್ತಲರ ಕೃತ್ಯಗಳು 8:29; 10:19; 13:2; 16:6, 7.

17. ಇಂದು ಪವಿತ್ರಾತ್ಮವು ಸಾರುವ ಕಾರ್ಯದಲ್ಲಿ ಹೇಗೆ ಒಳಗೂಡಿದೆ?

17 ಇಂದು, ಪುನಃ ಪವಿತ್ರಾತ್ಮವು ಸಾರುವ ಕಾರ್ಯದಲ್ಲಿ ಆಳವಾಗಿ ಒಳಗೂಡಿದೆ. ಯೆಶಾಯ 61:1, 2ರ ಅಧಿಕ ನೆರವೇರಿಕೆಯಲ್ಲಿ, ಯೆಹೋವನ ಆತ್ಮವು ಯೇಸುವಿನ ಸಹೋದರರನ್ನು ಸಾರುವುದಕ್ಕಾಗಿ ಅಭಿಷೇಕಿಸಿದೆ. ಮಾರ್ಕ 13:10ರ ಕೊನೆಯ ನೆರವೇರಿಕೆಯಲ್ಲಿ, ಈ ಅಭಿಷಿಕ್ತರು, ಮಹಾ ಸಮೂಹದವರಿಂದ ಬೆಂಬಲಿಸಲ್ಪಟ್ಟು, ಅಕ್ಷರಾರ್ಥಕವಾಗಿ “ಎಲ್ಲಾ ಜನಾಂಗಗಳಿಗೆ” ಸುವಾರ್ತೆಯನ್ನು ಸಾರಿದ್ದಾರೆ. (ಪ್ರಕಟನೆ 7:9) ಮತ್ತು ಪವಿತ್ರಾತ್ಮವು ಅವರೆಲ್ಲರನ್ನು ಇದರಲ್ಲಿ ಬೆಂಬಲಿಸುತ್ತದೆ. ಒಂದನೆಯ ಶತಮಾನದಂತೆ, ಅದು ಕ್ಷೇತ್ರಗಳನ್ನು ತೆರೆಯುತ್ತದೆ ಮತ್ತು ಕಾರ್ಯದ ಸಾಮಾನ್ಯ ಪ್ರಗತಿಯನ್ನು ಮಾರ್ಗದರ್ಶಿಸುತ್ತದೆ. ವ್ಯಕ್ತಿಗಳನ್ನು ಅದು ಬಲಪಡಿಸುತ್ತದೆ, ಪುಕ್ಕಲುತನವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ ಮತ್ತು ಅವರ ಸಾರುವ ನೈಪುಣ್ಯಗಳನ್ನು ವಿಕಸಿಸುತ್ತದೆ. ಅದಲ್ಲದೆ, ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ನನ್ನ ನಿಮಿತ್ತವಾಗಿ ನಿಮ್ಮನ್ನು ಅಧಿಪತಿಗಳ ಮುಂದಕ್ಕೂ ಅರಸುಗಳ ಮುಂದಕ್ಕೂ ತೆಗೆದುಕೊಂಡು ಹೋಗುವರು. ಹೀಗೆ ಅವರಿಗೂ ಅನ್ಯ ಜನರಿಗೂ ಸಾಕ್ಷಿಯಾಗುವುದು. ಆದರೆ ಅವರು ನಿಮ್ಮನ್ನು ಒಪ್ಪಿಸಿಕೊಡುವಾಗ ಹೇಗೆ ಮಾತಾಡಬೇಕು ಏನು ಹೇಳಬೇಕು ಎಂದು ಚಿಂತೆಮಾಡಬೇಡಿರಿ. . . . ಯಾಕಂದರೆ ಮಾತಾಡುವವರು ನೀವಲ್ಲ, ನಿಮ್ಮ ತಂದೆಯ ಆತ್ಮವೇ ನಿಮ್ಮ ಮುಖಾಂತರವಾಗಿ ಮಾತಾಡುವುದು.”—ಮತ್ತಾಯ 10:18-20.

18, 19. ದೀನ ಹೃದಯರು “ಜೀವಜಲವನ್ನು ಕ್ರಯವಿಲ್ಲದೆ ಕೊಳ್ಳು”ವಂತೆ ಆಮಂತ್ರಿಸುವುದರಲ್ಲಿ ಹೇಗೆ ಆತ್ಮವು ಮದಲಗಿತ್ತಿಯೊಂದಿಗೆ ಜತೆಗೂಡುತ್ತದೆ?

18 ಪ್ರಕಟನೆ ಪುಸ್ತಕದಲ್ಲಿ, ಬೈಬಲ್‌ ಪುನಃ ಸಾರುವ ಕಾರ್ಯದಲ್ಲಿ ಪವಿತ್ರಾತ್ಮದ ಒಳಗೂಡುವಿಕೆಯನ್ನು ಒತ್ತಿಹೇಳುತ್ತದೆ. ಅಲ್ಲಿ ಅಪೊಸ್ತಲ ಯೋಹಾನನು ವರದಿಸುವುದು: “ಆತ್ಮವೂ ಮದಲಗಿತ್ತಿಯೂ—ಬಾ! ಅನ್ನುತ್ತಾರೆ. ಕೇಳುವವನು—ಬಾ! ಅನ್ನಲಿ. ಬಾಯಾರಿದವನು ಬರಲಿ. ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ.” (ಪ್ರಕಟನೆ 22:17) 1,44,000 ಮಂದಿಯಲ್ಲಿ ಇನ್ನೂ ಭೂಮಿಯಲ್ಲಿ ಉಳಿದಿರುವ ಉಳಿಕೆಯವರಿಂದ ಪ್ರತಿನಿಧಿಸಲ್ಪಟ್ಟಿರುವ, ಆ ಮದಲಗಿತ್ತಿಯು, ಜೀವಜಲವನ್ನು ಕ್ರಯವಿಲ್ಲದೆ ಕೊಳ್ಳುವಂತೆ ಎಲ್ಲರನ್ನು ಆಮಂತ್ರಿಸುತ್ತಾಳೆ. ಆದರೆ ಪವಿತ್ರಾತ್ಮವು ಸಹಾ “ಬಾ!” ಅನ್ನುತ್ತದೆ ಎಂಬದನ್ನು ಗಮನಿಸಿರಿ. ಅದು ಹೇಗೆ?

19 ಹೇಗಂದರೆ ಮದಲಗಿತ್ತಿ ವರ್ಗದಿಂದ—ಇಂದು ಬೇರೆ ಕುರಿಗಳ ಮಹಾ ಸಮೂಹದಿಂದ ಬೆಂಬಲಿಸಲ್ಪಟ್ಟು—ಸಾರಲ್ಪಡುವ ಸಂದೇಶವು, ಪವಿತ್ರಾತ್ಮದ ಪ್ರಭಾವದ ನೇರ ಮಾರ್ಗದರ್ಶನೆಯ ಕೆಳಗೆ ಬರೆಯಲ್ಪಟ್ಟ ಬೈಬಲ್‌ನಿಂದ ಬಂದ ಸಂದೇಶವಾಗಿರುವುದರಿಂದಲೇ. ಮತ್ತು ಆದೇ ಆತ್ಮವು ಪ್ರೇರಿತ ವಾಕ್ಯವನ್ನು ತಿಳುಕೊಳ್ಳುವಂತೆ ಮತ್ತು ಅದನ್ನು ಇತರರಿಗೆ ವಿವರಿಸುವಂತೆ ಮದಲಗಿತ್ತಿ ವರ್ಗದವರ ಹೃದಯ ಮತ್ತು ಮನಗಳನ್ನು ತೆರೆದಿದೆ. ಯೇಸು ಕ್ರಿಸ್ತನ ಹೊಸ ಶಿಷ್ಯರಾಗಿ ಯಾರು ದೀಕ್ಷಾಸ್ನಾನ ಪಡೆಯುತ್ತಾರೋ ಅವರು ಜೀವಜಲವನ್ನು ಕ್ರಯವಿಲ್ಲದೆ ಕೊಂಡುಕೊಳ್ಳಲು ಸಂತೋಷ ಪಡುತ್ತಾರೆ. ಮತ್ತು ಆತ್ಮದೊಂದಿಗೆ ಮತ್ತು ಮದಲಗಿತ್ತಿಯೊಂದಿಗೆ ಜತೆಗೂಡಿ ಇನ್ನೂ ಇತರರನ್ನು “ಬಾ!” ಎಂದು ಕರೆಯುವುದರಲ್ಲಿ ಸಹಕರಿಸಲು ಅವರು ಹರ್ಷಿಸುತ್ತಿದ್ದಾರೆ. ಇಂದು ಈ ಕಾರ್ಯದಲ್ಲಿ 40 ಲಕ್ಷಕ್ಕಿಂತಲೂ ಹೆಚ್ಚು ಜನರು ಪವಿತ್ರಾತ್ಮದೊಂದಿಗೆ ಪಾಲಿಗರಾಗುತ್ತಿದ್ದಾರೆ.

ನಮ್ಮ ದೀಕ್ಷಾಸ್ನಾನಕ್ಕೆ ಹೊಂದಿಕೆಯಲ್ಲಿ ಜೀವಿಸುವುದು

20, 21. ಪವಿತ್ರಾತ್ಮದ ಹೆಸರಿನಲ್ಲಿ ನಮ್ಮ ದೀಕ್ಷಾಸ್ನಾನಕ್ಕೆ ಹೊಂದಿಕೆಯಾಗಿ ನಾವು ಹೇಗೆ ಜೀವಿಸಬಲ್ಲೆವು, ಮತ್ತು ಈ ದೀಕ್ಷಾಸ್ನಾನವನ್ನು ನಾವು ಹೇಗೆ ವೀಕ್ಷಿಸಬೇಕು?

20 ಪವಿತ್ರಾತ್ಮದ ಹೆಸರಿನಲ್ಲಿ ದೀಕ್ಷಾಸ್ನಾನವು ನಾವು ಪವಿತ್ರಾತ್ಮವನ್ನು ಅಂಗೀಕರಿಸುತ್ತೇವೆ ಮತ್ತು ಯೆಹೋವನ ಉದ್ದೇಶಗಳಲ್ಲಿ ಅದು ವಹಿಸುವ ಪಾತ್ರವನ್ನು ಒಪ್ಪಿಕೊಳ್ಳುತ್ತೇವೆ ಎಂಬದರ ಒಂದು ಬಹಿರಂಗ ಘೋಷಣೆಯಾಗಿದೆ. ನಾವು ಆ ಆತ್ಮದೊಂದಿಗೆ ಸಹಕರಿಸುತ್ತೇವೆ ಮತ್ತು ಯೆಹೋವನ ಜನರ ನಡುವೆ ಅದರ ಕಾರ್ಯಗತಿಯನ್ನು ತಡೆಯಲು ಏನನ್ನೂ ಮಾಡಲಾರೆವು ಎಂಬದನ್ನು ಅದು ಸೂಚಿಸುತ್ತದೆ. ಹೀಗೆ, ನಂಬಿಗಸ್ತನೂ ವಿವೇಕಿಯೂ ಆದ ಆಳನ್ನು ನಾವು ಅಂಗೀಕರಿಸುತ್ತೇವೆ ಮತ್ತು ಅದರೊಂದಿಗೆ ಸಹಕರಿಸುತ್ತೇವೆ. ಸಭೆಯಲ್ಲಿರುವ ಹಿರಿಯರ ಏರ್ಪಾಡಿನೊಂದಿಗೆ ನಾವು ಸಹಕರಿಸುತ್ತೇವೆ. (ಇಬ್ರಿಯ 13:7, 17; 1 ಪೇತ್ರ 5:1-4) ನಾವು ಮಾಂಸಿಕವಲ್ಲ, ಆತ್ಮಿಕ ವಿವೇಕದಿಂದ ಜೀವಿಸುವೆವು, ಮತ್ತು ನಮ್ಮ ವ್ಯಕ್ತಿತ್ವವನ್ನು ಆತ್ಮವು ರೂಪಿಸುವಂತೆ, ಹೆಚ್ಚು ಕ್ರಿಸ್ತನಂಥಾದ್ದಾಗಿ ಮಾಡುವಂತೆ ಬಿಟ್ಟುಕೊಡುವೆವು. (ರೋಮಾಪುರ 13:14) ಮತ್ತು ಇನ್ನೂ ಪ್ರತಿಕ್ರಿಯೆ ತೋರಿಸಬಹುದಾದ ಇತರ ಲಕ್ಷಾಂತರ ಜನರಿಗೆ “ಬಾ!” ಎಂದು ಹೇಳುವುದರಲ್ಲಿ ಆತ್ಮ ಮತ್ತು ಮದಲಗಿತ್ತಿಯೊಂದಿಗೆ ಹೃದಯಪೂರ್ವಕವಾಗಿ ನಾವು ಜತೆಗೂಡುವೆವು.

21 ಹೀಗೆ ‘ಪವಿತ್ರಾತ್ಮದ ಹೆಸರಿನಲ್ಲಿ’ ಸ್ನಾನ ಪಡೆಯುವುದು ಅದೆಷ್ಟು ಗಂಭೀರವಾದ ವಿಷಯವು! ಆದರೂ, ಫಲಿತಾಂಶವಾಗಿ ಎಷ್ಟು ಆಶೀರ್ವಾದಗಳು ಸಿಗಬಲ್ಲವು! ಹೀಗೆ ಸ್ನಾನಪಡಕೊಳ್ಳುವವರ ಸಂಖ್ಯೆಯು ಹೆಚ್ಚುತ್ತಾ ಹೋಗುವಂತಾಗಲಿ. ಮತ್ತು ನಾವೆಲ್ಲರೂ ಯೆಹೋವನ ಸೇವೆ ಮಾಡುತ್ತಾ “ಆತ್ಮದಲ್ಲಿ ಬೆಳಗುತ್ತಾ” ಮುಂದರಿಯುವಾಗ, ಆ ದೀಕ್ಷಾಸ್ನಾನದ ಅರ್ಥಕ್ಕೆ ಹೊಂದಿಕೆಯಲ್ಲಿ ಜೀವಿಸುತ್ತಾ ಮುಂದರಿಯುವಂತಾಗಲಿ.—ರೋಮಾಪುರ 12:11. (w92 2/1)

ಪವಿತ್ರಾತ್ಮದ ಕುರಿತು ನಿಮಗೇನು ನೆನಪಿದೆ?

▫ ಸಾ.ಶ. 33ರ ಪಂಚಾಶತ್ತಮದಲ್ಲಿ ಪವಿತ್ರಾತ್ಮವು ಹೇಗೆ ಕ್ರಿಯಾಶೀಲವಾಗಿತ್ತು?

▫ ಆತ್ಮದ ಫಲಗಳನ್ನು ನಾವು ಹೇಗೆ ಫಲಿಸಬಲ್ಲೆವು?

▫ ಹಿರಿಯರು ಪವಿತ್ರಾತ್ಮದಿಂದ ಹೇಗೆ ನೇಮಕ ಹೊಂದುತ್ತಾರೆ?

▫ ಪವಿತ್ರಾತ್ಮದ ಮೂಲಕ ಯೇಸು ಸಭೆಯಲ್ಲಿನ ಸಮಸ್ಯೆಗಳನ್ನು ನಿರ್ವಹಿಸುವುದು ಹೇಗೆ?

▫ ಆತ್ಮವು ಸಾರುವ ಕಾರ್ಯದಲ್ಲಿ ಆಳವಾಗಿ ಒಳಗೂಡಿರುವುದು ಹೇಗೆ?

[ಪುಟ 15 ರಲ್ಲಿರುವ ಚಿತ್ರ]

ಪೇತ್ರನು ಸಾರಿದ ದೀಕ್ಷಾಸ್ನಾನವು ಸಹಾ ತಂದೆಯ ಮತ್ತು ಪವಿತ್ರಾತ್ಮದ ಹೆಸರಿನಲ್ಲಿ ಆಗಿತ್ತು

[ಪುಟ 17 ರಲ್ಲಿರುವ ಚಿತ್ರ]

ಪವಿತ್ರಾತ್ಮವು ಸುವಾರ್ತೆಯ ಸಾರುವಿಕೆಯಲ್ಲಿ ಆಳವಾಗಿ ಒಳಗೂಡಿರುತ್ತದೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ