“ದೇವರು ದಯಪಾಲಿಸುವ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ”
ಕ್ರೈಸ್ತರು ಆಯುಧಗಳನ್ನು ಧರಿಸಿಕೊಳ್ಳುವುದೋ? ಯುದ್ಧಕ್ಕೆ ಸಂಬಂಧಿಸಿದ ಅಂಥ ಉಪಕರಣವನ್ನು ಅವರು ಯಾಕೆ ತಕ್ಕೊಳ್ಳಬೇಕು? ಅವರು ಶಾಂತಿಯನ್ನು ಪ್ರೀತಿಸುವವರಲ್ಲವೇ? (2 ತಿಮೊಥಿ 2:24) ಹೌದು, ಅವರು ಅಂಥವರೇ. ಆದರೂ, ನಿಜ ಕ್ರೈಸ್ತರೆಲ್ಲರೂ ಒಂದು ಯುದ್ಧದಲ್ಲಿ ಕೂಡಿರುತ್ತಾರೆ—ಅದರಲ್ಲಿ ಅವರು ಪ್ರಯತ್ನಿಸುವುದು, ಕೊಲಲ್ಲಿಕ್ಕಲ್ಲ, ಜಯಿಸಲಿಕ್ಕಾಗಿ.
ಸೈತಾನನು ದಂಗೆಯೆದಿರ್ದದಿದ್ದರೆ, ಅಂಥ ಒಂದು ಹೋರಾಟವೆಂದೂ ಆವಶ್ಯವಾಗಿರುತ್ತಿದ್ದಿಲ್ಲ. ಆದರೆ ಅವನು ದಂಗೆಯೆದ್ದನು, ಮತ್ತು ತನ್ನ ದಂಗೆಯೊಳಗೆ ಜತೆಗೂಡುವಂತೆ ಆದಾಮ ಮತ್ತು ಹವ್ವರನ್ನು ತಪ್ಪುದಾರಿಗೆಳೆದನು. ಅಂದಿನಿಂದ ವಿಕಸನಗೊಂಡ ಲೋಕ ವ್ಯವಸ್ಥೆಯ ಆ “ಕೆಡುಕನಾದ” ಪಿಶಾಚನಾದ ಸೈತಾನನ ಅಧಿಕಾರದ ಕೆಳಗೆ ಬಿದ್ದಿರುತ್ತದೆ. (1 ಯೋಹಾನ 5:19) ಯಾರು ನ್ಯಾಯವಾದ ಪರಮಾಧಿಕಾರಿಯಾದ ಯೆಹೋವನಿಗೆ ಅಧೀನರಾಗಿದ್ದಾರೋ ಅವರು ಈ ಲೋಕದ ಮತ್ತು ಅದರ ಅಧಿಪತಿಯ ಪ್ರಭಾವವನ್ನು ಎದುರಿಸಬೇಕಾಗಿದೆ. ತಮ್ಮ ಆತ್ಮಿಕ ಜೀವಿತಗಳಿಗಾಗಿ ಅವರು ಹೋರಾಡಲೇ ಬೇಕು. ಇದಕ್ಕಾಗಿ, ಕ್ರೈಸ್ತರಿಗೆ ಪ್ರಬೋಧಿಸಲ್ಪಟ್ಟದ್ದು: “ಸೈತಾನನ ತಂತ್ರೋಪಾಯಗಳನ್ನು ನೀವು ಎದುರಿಸಿ ನಿಲ್ಲುವದಕ್ಕೆ ಶಕ್ತರಾಗುವಂತೆ ದೇವರು ದಯಪಾಲಿಸುವ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ.”—ಎಫೆಸ 6:11.
ಸರ್ವಾಯುಧಗಳು
ನಾವು ಸರಿಯಾಗಿ ಕಾಪಾಡಲ್ಪಡಬೇಕಾದರೆ “ದೇವರು ದಯಪಾಲಿಸುವ ಸರ್ವ ಆಯುಧಗಳು” ನಮಗೆ ಬೇಕೆಂಬದನ್ನು ಗಮನಿಸಿರಿ. ಆದುದರಿಂದ ನಾವು ಅಪೊಸ್ತಲ ಪೌಲನಿಂದ ವಿವರಿಸಲ್ಪಟ್ಟ ಈ ಆಯುಧಗಳ ಪ್ರತಿಯೊಂದು ಭಾಗವನ್ನು ಪರೀಕ್ಷಿಸೋಣ ಮತ್ತು ಆತ್ಮಿಕ ಹೋರಾಟಕ್ಕಾಗಿ ನಾವು ಪೂರ್ಣವಾಗಿ ಸಜ್ಜಿತರಾಗಿದ್ದೇವೋ ಎಂದು ನಿರ್ಧರಿಸಲು ನಮ್ಮ ಪ್ರಾಮಾಣಿಕ ಗುಣವಿಮರ್ಶೆಯನ್ನು ಮಾಡೋಣ.—ಎಫೆಸ 6:14-17.
“ಸತ್ಯವೆಂಬ ನಡುಕಟ್ಟನ್ನು ಕಟ್ಟಿಕೊಳ್ಳಿರಿ.” [ಆದಕಾರಣ ಸ್ಥಿರರಾಗಿ ನಿಲ್ಲಿರಿ, NW] (ಎಫೆಸ 6:14ಎ) ಬೈಬಲ್ನ ಕಾಲದಲ್ಲಿ ಸೈನಿಕರು ಹದಿನೈದು ಸೆಂಟಿಮೀಟರ್ನಷ್ಟು ಅಗಲದ ಒಂದು ಚರ್ಮದ ಪಟ್ಟಿಯನ್ನು ಧರಿಸುತ್ತಿದ್ದರು. ಈ ನಡುಕಟ್ಟು ಅವರ ಟೊಂಕವನ್ನು ರಕ್ಷಿಸಲು ಸಹಾಯಮಾಡುತ್ತಿತ್ತು. ಒಬ್ಬ ಸೈನಿಕನು ತನ್ನ ನಡುಕಟ್ಟನ್ನು ಭದ್ರಪಡಿಸುವಾಗ, ಅವನು ಯುದ್ಧಕ್ಕೆ ಸಿದ್ಧನಾಗಿದ್ದಾನೆಂಬದನ್ನು ಸೂಚಿಸುತ್ತಿತ್ತು.
ಹೀಗಿರುವಲ್ಲಿ, ದೈವಿಕ ಸತ್ಯವು ಒಬ್ಬ ಸೈನಿಕನ ನಡುಕಟ್ಟಿಗೆ ಹೋಲಿಸಲ್ಪಟ್ಟಿರುವುದು ಅದೆಷ್ಟು ಯುಕ್ತವಾದದ್ದಾಗಿದೆ! ನಡುಕಟ್ಟಿನಿಂದ ಕಟ್ಟಲ್ಪಟ್ಟವರೋ ಎಂಬಂತೆ ನಾವು ದೇವರ ಸತ್ಯ ವಾಕ್ಯವನ್ನು ಅತಿ ಹತ್ತಿರವಾಗಿ ಇಡಬೇಕು ಎಂಬದನ್ನು ಇದು ಚೆನ್ನಾಗಿ ಚಿತ್ರಿಸುತ್ತದೆ. ದೇವರ ವಾಕ್ಯದಲ್ಲಿ ಅಡಕವಾಗಿರುವ ವಿಚಾರದ ಮೇಲೆ ನಾವು ಆಳವಾಗಿ ಆಲೋಚಿಸಬೇಕು. ಇದು ನಮ್ಮನ್ನು ಸುಳ್ಳು ಮತ್ತು ಮೋಸಗಳಿಂದ ವಂಚಿತರಾಗದಂತೆ ರಕ್ಷಿಸುವುದು. ಅದಲ್ಲದೆ, ಯೆಹೋವನ ಮಾತುಗಳು ನಮ್ಮನ್ನು ಆತ್ಮಿಕವಾಗಿ ಬೆಂಬಲಿಸಿ, ಬಲಪಡಿಸುವುವು ಮತ್ತು ನಮ್ಮ ಸಮಗ್ರತೆಯನ್ನು ದೃಢಗೊಳಿಸುವುವು.
“ನೀತಿಯೆಂಬ ವಜ್ರಕವಚ [ಎದೆಕಾಪು, NW] ವನ್ನು ಧರಿಸಿಕೊಳ್ಳಿರಿ.” (ಎಫೆಸ 6:14ಬಿ) ಒಬ್ಬ ಸೈನಿಕನ ಎದೆಕಾಪು ಒಂದು ಮಹತ್ವದ ದೇಹಾಂಗವನ್ನು—ಹೃದಯವನ್ನು ಕಾಪಾಡುತ್ತದೆ. ಹಾಗಾದರೆ, ನಮ್ಮ ದೇವದತ್ತ ಆತ್ಮಿಕ ಆಯುಧಗಳಲ್ಲಿ, ನೀತಿಯು ನಮ್ಮ ಹೃದಯವನ್ನು ಕಾಪಾಡುತ್ತದೆ. ಶಾಸ್ತ್ರೀಯವಾಗಿ, ಹೃದಯವು, ನಾವು ಒಳಗೆ ಏನಾಗಿದೇವ್ದೋ ಅದರ—ನಮ್ಮ ಅನಿಸಿಕೆಗಳ, ಆಲೋಚನೆಗಳ ಮತ್ತು ಅಪೇಕ್ಷೆಗಳ ಯುಕ್ತವಾದ ಸೂಚಕವಾಗಿಯದೆ. ಹೃದಯವು ಕೆಟ್ಟತನಕ್ಕೆ ಓಲುವ ಪ್ರವೃತಿಯುಳ್ಳದ್ದು ಎಂದೂ ಬೈಬಲ್ ಹೇಳುವುದರಿಂದ, ಯೆಹೋವನ ನೀತಿಯುಳ್ಳ ಮಟ್ಟಕ್ಕೆ ದೃಢತೆಯಿಂದಿರುವ ಒಂದು ನಿರ್ಧಾರವನ್ನು ಬೆಳೆಸಿಕೊಳ್ಳುವುದು ಅತ್ಯಾವಶ್ಯಕವು. (ಯೆರೆಮೀಯ 17:9) ದೇವರಿಗೆ ವಿಧೇಯತೆಯು ಒಂದು ಡಾಂಭಿಕತೆಯ ಹೊರಗಣ ತೋರಿಕೆಯಾಗಿರಬಾರದು; ಅದು ಅಂತರ್ಯದೊಳಗಿಂದ ಬರಬೇಕು. ಇದು, ನೀತಿಯ ಕಡೆಗೆ ಒಂದು ದೃಢ ಪ್ರೀತಿಯನ್ನು ಮತ್ತು ಅಧರ್ಮದ ಕಡೆಗೆ ಕಟು ದ್ವೇಷವನ್ನು ನಾವು ಬೆಳೆಸಿಕೊಳ್ಳುವಂತೆ ಆವಶ್ಯಪಡಿಸುತ್ತದೆ. (ಕೀರ್ತನೆ 45:7) ಹೀಗೆ ನಮ್ಮ ಹೃದಯವು ಕಾಪಾಡಲ್ಪಡುತ್ತದೆ.
“ಸಮಾಧಾನದ ವಿಷಯವಾದ ಸುವಾರ್ತೆಯನ್ನು ತಿಳಿಸುವದರಲ್ಲಿ ಸಿದ್ಧವಾದ ಮನಸ್ಸೆಂಬ ಕೆರಗಳನ್ನು ಮೆಟ್ಟಿಕೊಳ್ಳಿರಿ.” (ಎಫೆಸ 6:15) ನಿಮ್ಮ ಪಾದಗಳು ಈ ರೀತಿಯ ಕೆರಗಳನ್ನು ಮೆಟ್ಟಿವೆಯೇ? ಅವು ನಿಮ್ಮನ್ನು ಸುವಾರ್ತೆಯ ಪ್ರಚಾರಕ್ಕಾಗಿ ಕ್ಷೇತ್ರ ಶುಶ್ರೂಷೆಗೆ ಕ್ರಮವಾಗಿ ಒಯ್ಯುತ್ತವೋ? ನಿಮ್ಮ ಸಾರುವ ಮತ್ತು ಕಲಿಸುವ ಚಟುವಟಿಕೆಗಳ ದರ್ಜೆಯನ್ನು ಪ್ರಗತಿಮಾಡಲು ನೀವು ಪ್ರಯಾಸಪಡುತ್ತಿರೋ? ಕೆಲವು ಕ್ಷೇತ್ರಗಳು ತುಲನಾತ್ಮಕವಾಗಿ ಪ್ರತಿವರ್ತನೆಹೀನವಾಗಿವೆ, ನಿಜ. ವ್ಯಕ್ತಿಗಳು ಉದಾಸೀನ ಭಾವದವರು, ನಿರಾಸಕ್ತರು, ವಿರೋಧಿಸುವವರೂ ಆಗಿರಬಹುದು. ನಮ್ಮ ಸಾರುವಿಕೆಯು ನಮ್ಮ ಮೇಲೆ ಹಿಂಸೆಯನ್ನು ಸಹ ತರಬಹುದು. ಆದರೆ ಬಿಡದೆ ಮುಂದುವರಿಯುವ ಮೂಲಕ ಕ್ರೈಸ್ತರು, ಸೈತಾನನ ಆಕ್ರಮಣಗಳ ವಿರುದ್ಧವಾಗಿ ಸುರಕ್ಷೆಯನ್ನು ಒದಗಿಸುವ ಗುಣವಾದ ತಾಳ್ಮೆಯನ್ನು ಬೆಳೆಸಿಕೊಳ್ಳುತ್ತಾರೆ. ಪೌಲನು ಹಿಂಸಿಸಲ್ಪಟ್ಟಾಗ್ಯೂ, ಹುರುಪಿನ ಸೌವಾರ್ತಿಕನಾಗಿದ್ದನು, ಮತ್ತು ‘ಆತನು ಕ್ರಿಸ್ತನನ್ನು ಅನುಸರಿಸಿದಂತೆಯೇ ನಾವು ಆತನನ್ನು ಅನುಸರಿಸುವಂತೆ’ ಪ್ರೋತ್ಸಾಹಿಸಲ್ಪಟ್ಟಿದ್ದೇವೆ.—1 ಕೊರಿಂಥ 11:1.
ರಾಜ್ಯ-ಸಾರುವಿಕೆಯ ಚಟುವಟಿಕೆಯಲ್ಲಿ ಕಾರ್ಯಮಗ್ನರಾಗಿರುವುದು ಸುವಾರ್ತೆಯಲ್ಲಿ ನಮ್ಮ ಭರವಸೆಯನ್ನು ಬಲಗೊಳಿಸುತ್ತದೆ. ಅದಲ್ಲದೆ, ಆತನ ಚಿತ್ತದ ನೆರವೇರಿಕೆಯಲ್ಲಿ ಯೆಹೋವನಾತ್ಮವು ನಮ್ಮ ಮೂಲಕ ಕಾರ್ಯನಡಿಸುವಂತೆ ಅದು ಬಿಡುತ್ತದೆ. ವಾಸ್ತವದಲ್ಲಿ ಅಂಥ ಚಟುವಟಿಕೆಯು, ದೇವದೂತರೊಂದಿಗೆ—ಯೆಹೋವ ದೇವರೊಂದಿಗೆ ಸಹ ನಮ್ಮನ್ನು ಜೊತೆಕೆಲಸದವರಾಗಿ ಮಾಡುತ್ತದೆ. (1 ಕೊರಿಂಥ 3:9; ಪ್ರಕಟನೆ 14:6) ಮತ್ತು ‘ಕರ್ತನ ಕಾರ್ಯದಲ್ಲಿ ಯಥೇಷ್ಟವನ್ನು ಮಾಡಲಿಕ್ಕಿರುವುದು’ ನಮ್ಮನ್ನು “ಸ್ಥಿರಚಿತ್ತರಾಗಿಯೂ ನಿಶ್ಚಲರಾಗಿಯೂ” ಇರುವಂತೆ ಮಾಡುತ್ತದೆ. (1 ಕೊರಿಂಥ 15:58) ಇದು ಎಂಥ ಆಶ್ಚರ್ಯಕರ ಭದ್ರತೆಯನ್ನು ಒದಗಿಸುತ್ತದೆ!
“ನಂಬಿಕೆಯೆಂಬ [ದೊಡ್ಡ, NW] ಗುರಾಣಿಯನ್ನು ಹಿಡುಕೊಳ್ಳಿರಿ.” (ಎಫೆಸ 6:16) ದೊಡ್ಡ ಗುರಾಣಿಯೊಂದಿಗೆ ಪುರಾತನ ಕಾಲದ ಸೈನಿಕನು ಈಟಿಗಳಿಂದ ಮತ್ತು ಬಾಣಗಳಿಂದ ತನ್ನನ್ನು ಕಾಪಾಡಿಕೊಳ್ಳುತ್ತಿದ್ದನು. ಒಂದು ಗುರಾಣಿಯನ್ನು ಬಳಸಲು ಅವನು ತಪ್ಪಿದರೆ, ಅವನು ಗಂಭೀರವಾಗಿ ಗಾಯಗೊಳ್ಳಲು ಅಥವಾ ಕೊಲ್ಲಲ್ಪಡಲೂ ಸಾಧ್ಯತೆ ಇತ್ತು. ಕ್ರೈಸ್ತರು ಅವಕ್ಕಿಂತಲೂ ಹೆಚ್ಚು ಮಾರಕವಾದ ಶಸ್ತ್ರಗಳನ್ನು—“ಕೆಡುಕನ ಅಗ್ನಿಬಾಣಗಳನ್ನು” ಎದುರಿಸುತ್ತಾರೆ. ನಮ್ಮನ್ನು ನಂಬಿಕೆಯಲ್ಲಿ ನಿರ್ಬಲಗೊಳಿಸಿ, ಆತ್ಮಿಕವಾಗಿ ಕೊಲ್ಲುವುದಕ್ಕಾಗಿ ಸೈತಾನನು ಉಪಯೋಗಕ್ಕೆ ಹಾಕುವ ಎಲ್ಲಾ ಸಾಧನೋಪಾಯಗಳು ಇವುಗಳಲ್ಲಿ ಒಳಗೂಡಿರುತ್ತವೆ. ಅವುಗಳಲ್ಲಿ ಹಿಂಸೆ, ಸುಳ್ಳುಗಳು, ಮೋಸಕಾರಕ ಲೌಕಿಕ ತತ್ವಜ್ಞಾನಗಳು, ಪ್ರಾಪಂಚಿಕ ಆಕರ್ಷಣೆಗಳು ಮತ್ತು ಅನೈತಿಕತೆಯಲ್ಲಿ ಒಳಗೂಡುವ ಶೋಧನೆಗಳು ಸೇರಿರುತ್ತವೆ. ಇವೆಲ್ಲವುಗಳಿಂದ ನಮ್ಮನ್ನು ಕಾಪಾಡಲು ನಮಗೆ ಒಂದು ದೊಡ್ಡ ಗುರಾಣಿಯ ಅಗತ್ಯವಿದೆ. ನಮ್ಮ ಯಾವ ಭಾಗವನ್ನಾದರೂ ನಿರಪಾಯದಿಂದ ಭೇದ್ಯವಾಗಿ ಬಿಡಸಾಧ್ಯವಿಲ್ಲ.
ಅಬ್ರಹಾಮ ಮತ್ತು ಅವನ ಪತ್ನಿ ಸಾರಳಲ್ಲಿ ಬಲವಾದ ನಂಬಿಕೆ ಇತ್ತು. ಮಕ್ಕಳನ್ನು ಹಡೆಯುವ ಪ್ರಾಯವು ಸಂದಿಹೋಗಿದ್ದಾಗ, ಅವರಿಗೆ ಒಂದು ಸಂತಾನವು ಹುಟ್ಟುವುದು ಎಂಬ ದೇವರ ವಾಗ್ದಾನದಲ್ಲಿ ಅವರು ನಂಬಿಕೆ ಇಟ್ಟರು. ತದನಂತರ, ಅಬ್ರಹಾಮನು ತನ್ನ ಪ್ರಿಯಳಾದ ಸಾರಳಲ್ಲಿ ಹುಟ್ಟಿದ ಒಬ್ಬನೇ ಮಗನಾದ ಇಸಾಕನನ್ನು ಯಜ್ಞವಾಗಿ ಅರ್ಪಿಸುವ ಕರೆಗೆ ವಿಧೇಯನಾದಾಗ, ಗಮನಾರ್ಹ ನಂಬಿಕೆಯನ್ನು ತೋರಿಸಿದನು. ದೇವರು ಅಬ್ರಹಾಮನ ಕೈಯನ್ನು ತಡೆದು ನಿಲ್ಲಿಸಿದನು ಮತ್ತು ಒಂದು ಬದಲಿ ಅರ್ಪಣೆಯನ್ನು ಒದಗಿಸಿಕೊಟ್ಟನು. ಆದರೆ ಅಬ್ರಹಾಮನು ವಿಧೇಯನಾಗಲು ಸಿದ್ಧನಾಗಿದ್ದನು. ಏಕೆ? ಏಕೆಂದರೆ ಯೆಹೋವನು ತನ್ನ ಮಗನನ್ನು ಪುನರುತ್ಥಾನ ಮಾಡಶಕ್ತನು ಮತ್ತು ತನಗೆ ಕೊಟ್ಟ ವಚನಗಳನ್ನು ಪೂರೈಸಶಕ್ತನೆಂಬ ದೃಢ ನಂಬಿಕೆಯು ಅಬ್ರಹಾಮನಿಗಿತ್ತು.—ರೋಮಾಪುರ 4:16-21; ಇಬ್ರಿಯ 11:11, 12, 17-19.
ಮೋಶೆಯಲ್ಲಿ ಸಹ ನಮಗೆ ಬೇಕಾದಂತಹ ನಂಬಿಕೆಯು ಇತ್ತು. ದೇವ ಜನರೊಂದಿಗೆ ದಬ್ಬಾಳಿಕೆಯನ್ನಾದರೂ ಸಹಿಸಿಕೊಳ್ಳಲು ಅವನು ಆರಿಸಿಕೊಂಡವನಾಗಿ, ಐಗುಪ್ತ್ಯದ ಐಶ್ವರ್ಯವನ್ನು ಅವನು ತಿರಸ್ಕರಿಸಿಬಿಟ್ಟನು. ಏಕೆ? ಏಕೆಂದರೆ ಯೆಹೋವನು ಅಸ್ತಿತ್ವದಲ್ಲಿದ್ದಾನೆ ಮತ್ತು ಇಸ್ರಾಯೇಲ್ಯರಿಗೆ ರಕ್ಷಣೆಯನ್ನು ತರಲಿದ್ದಾನೆಂಬ ನಂಬಿಕೆಯು ಅವನಲ್ಲಿತ್ತು. ಮೋಶೆಯ ನಂಬಿಕೆಯು ಎಷ್ಟು ಬಲವಾಗಿತ್ತೆಂದರೆ “ಅವನು ಅದೃಶ್ಯನಾಗಿರುವಾತನನ್ನು ದೃಷ್ಟಿಸುವವನೋ ಎಂಬಂತೆ ದೃಢಚಿತ್ತನಾಗಿದ್ದನು.”—ಇಬ್ರಿಯ 11:6, 24-27.
ಸದೃಶವಾದ ನಂಬಿಕೆಯು ನಮಗೆ ಯೆಹೋವನಲ್ಲಿ ಇದೆಯೇ? ಯೆಹೋವನೊಂದಿಗೆ ನಮ್ಮ ಸಂಬಂಧವು ಎಷ್ಟು ಆಪ್ತವುಳ್ಳದ್ದೆಂದರೆ ನಾವಾತನನ್ನು ಬಹುಮಟ್ಟಿಗೆ ದೃಷ್ಟಿಸಶಕ್ತರೋ ಎಂಬಂತೆ ಇದ್ದೇವೋ? ದೇವರೊಂದಿಗೆ ನಮ್ಮ ಸಂಬಂಧವನ್ನು ಕಾಪಾಡಲು ಯಾವುದೇ ತ್ಯಾಗಗಳನ್ನು ಮಾಡಲು ಅಥವಾ ಯಾವುದೇ ಕಷ್ಟವನ್ನು ಸಹಿಸಿಕೊಳ್ಳಲು ನಾವು ಸಿದ್ಧಮನಸ್ಕರಾಗಿದ್ದೇವೋ? ಯೆಹೋವನಲ್ಲಿ ನಮಗೆ ಪೂರ್ಣ ನಂಬಿಕೆ ಇದೆಯೇ? (ಇಬ್ರಿಯ 11:1) ಹೀಗಿರುವುದಾದರೆ, ಸೈತಾನನ ಅಗ್ನಿಬಾಣಗಳು ನಮ್ಮ ನಂಬಿಕೆಯ ಗುರಾಣಿಯನ್ನು ಭೇದಿಸಿ ಒಳನುಗಲ್ಗಾರವು.
“ರಕ್ಷಣೆಯೆಂಬ ಶಿರಸ್ತ್ರಾಣವನ್ನು ಇಟ್ಟುಕೊಳ್ಳಿರಿ.” (ಎಫೆಸ 6:17ಎ) ಒಬ್ಬ ಸೈನಿಕನ ಶಿರಸ್ತ್ರಾಣವು ಅವನ ತಲೆಯನ್ನು ಮತ್ತು ಹೀಗೆ—ನರಗಳ ಸುಸಂಘಟನೆಯ ಮತ್ತು ಆಲೋಚನೆಯ ಅಂಗವಾದ ಮಿದುಳನ್ನು ಕಾಪಾಡುತ್ತಿತ್ತು. ಕ್ರೈಸ್ತನ ರಕ್ಷಣೆಯ ನಿರೀಕ್ಷೆಯು ಒಂದು ಶಿರಸ್ತ್ರಾಣಕ್ಕೆ ಹೋಲಿಸಲ್ಪಟ್ಟಿದೆ ಯಾಕಂದರೆ ಅದು ಮನಸ್ಸನ್ನು ಕಾಪಾಡುತ್ತದೆ. ಕ್ರೈಸ್ತನ ಮನಸ್ಸು ನಿಷ್ಕೃಷ್ಟ ಜ್ಞಾನದ ಮೂಲಕವಾಗಿ ಹೊಸತಾಗಿ ಮಾಡಲ್ಪಟ್ಟಿದೆ, ಆದರೂ ಅದಿನ್ನೂ ಒಬ್ಬ ನಿರ್ಬಲನೂ ಅಪೂರ್ಣನೂ ಆದ ವ್ಯಕ್ತಿಗೆ ಸೇರಿದ್ದಾಗಿದೆ. (ರೋಮಾಪುರ 7:18; 12:2) ನಮ್ಮ ಮನಸ್ಸನ್ನು ಈ ಲೋಕದ ಆತ್ಮದಿಂದ ಉತ್ಪಾದಿಸಲ್ಪಟ್ಟ ನಂಬಿಕೆ-ನಶಿಸುವ ಅಶುದ್ಧ ವಿಚಾರದಿಂದ ಉಣಿಸುವಂತೆ ನಾವು ಬಿಟ್ಟುಕೊಟ್ಟಲ್ಲಿ, ರಕ್ಷಣೆಯಲ್ಲಿ ನಮ್ಮ ಭರವಸೆಯು ಕುಂದುವುದು ಮತ್ತು ಕೊನೆಗೆ ಗತಿಸಿಹೋಗಲೂಬಹುದು. ಇನ್ನೊಂದು ಕಡೆ, ದೇವರ ಬಲವರ್ಧಕ ಮಾತುಗಳಿಂದ ನಾವು ನಮ್ಮ ಮನಸ್ಸನ್ನು ಸದಾ ಉಣಿಸುವುದಾದರೆ, ನಮ್ಮ ನಿರೀಕ್ಷೆಯು ಪ್ರಕಾಶಮಾನವಾಗಿ ಮತ್ತು ಸ್ಫುಟವಾಗಿ ಉಳಿಯುವುದು. ನೀವು ನಿಮ್ಮ ರಕ್ಷಣೆಯ ಶಿರಸ್ತ್ರಾಣವನ್ನು ಗಟ್ಟಿಯಾಗಿ ಹಿಡಿಸುವಂತೆ ಇಟ್ಟುಕೊಳ್ಳುತ್ತೀರೋ?
“ಪವಿತ್ರಾತ್ಮವು ಕೊಡುವ ದೇವರ ವಾಕ್ಯವೆಂಬ ಕತ್ತಿಯನ್ನು ಹಿಡಿಯಿರಿ.” (ಎಫೆಸ್ಯ 6:17ಬಿ) ಆಕ್ರಮಣವೇ ಉತ್ತಮ ರಕ್ಷಣೆ ಎಂಬ ಗಾದೆಯು ಕ್ರೈಸ್ತ ಹೋರಾಟದಲ್ಲಿ ಸತ್ಯವಾಗಿದೆ. ಸಮಾಧಾನದ ಸುವಾರ್ತೆಯೆಂಬ ಕೆರಗಳನ್ನು ಮೆಟ್ಟಿರುವ ನಮ್ಮ ಪಾದಗಳು ಅವಿಶ್ವಾಸಿಗಳೆಡೆಗೆ ನಮ್ಮನ್ನು ಒಯ್ಯುವಾಗ, ನಾವು ಶಸ್ತ್ರಹೀನರಾಗಿ ಬಿಡಲ್ಪಟ್ಟಿಲ್ಲ. ದೇವರ ವಾಕ್ಯವಾದ ಬೈಬಲ್ ಆತ್ಮಿಕ ಸುಳ್ಳುಗಳನ್ನು ಮತ್ತು ತಪ್ಪು ಕಲ್ಪನೆಗಳನ್ನು ಸವರಿಹಾಕುವಂತೆ ಮತ್ತು ಯೋಗ್ಯ ಹೃದಯದ ಜನರು ಆತ್ಮಿಕ ಸ್ವಾತಂತ್ರ್ಯವನ್ನು ಕಂಡುಕೊಳ್ಳಲು ಸಹಾಯ ಮಾಡುವಂತೆ ಪ್ರಬಲವಾದ ಕತ್ತಿಯಂತೆ ಕಾರ್ಯನಡಿಸುತ್ತದೆ.—ಯೋಹಾನ 8:31, 32.
ಯೇಸು ಈ ಆಯುಧದ ಶಕ್ತಿಯನ್ನು ಕಾರ್ಯತಃ ಪಿಶಾಚನಾದ ಸೈತಾನನನ್ನು ಹೋರಾಟದಲ್ಲಿ ಎದುರಿಸಿದಾಗ ತೋರಿಸಿಕೊಟ್ಟನು. ಅರಣ್ಯದಲ್ಲಿ ಶೋಧನೆಗೆ ಒಳಪಡಿಸಲ್ಪಟ್ಟಾಗ, ದೇವರ ವಾಕ್ಯವನ್ನು ಪರಿಣಾಮಕಾರಿಯಾಗಿ ಉಪಯೋಗಿಸುತ್ತಾ, “ಎಂದು ಬರೆದದೆ” ಎಂದು ಹೇಳಿದ ಮೂಲಕ ಸೈತಾನನ ಮೂರು ಆಕ್ರಮಣಗಳ ವಿರುದ್ಧವಾಗಿ ತನ್ನನ್ನು ರಕ್ಷಿಸಿಕೊಂಡನು. (ಮತ್ತಾಯ 4:1-11) ನಾವೀ ಕತ್ತಿಯನ್ನು ಜಾಣ್ಮೆಯಿಂದ ಉಪಯೋಗಿಸಲು ಕಲಿತರೆ, ದೀನ ಜನರಿಗೆ ಸೈತಾನನ ವಶದೊಳಗಿಂದ ಹೊರಟುಬರುವಂತೆ ಸಹಾಯ ಮಾಡಬಲ್ಲೆವು. ಅದಲ್ಲದೆ, ಬಲಹೀನರ ನಂಬಿಕೆಯನ್ನು ಉರುಳಿಸಿಹಾಕಲು ಪ್ರಯತ್ನಿಸುವ ವ್ಯಕ್ತಿಗಳಿಂದ ಮಂದೆಯನ್ನು ಕಾಪಾಡಲು ಸಹ ಸಭಾ ಹಿರಿಯರು ದೇವರ ವಾಕ್ಯವನ್ನು ಉಪಯೋಗಿಸುತ್ತಾರೆ.—ಅ.ಕೃತ್ಯಗಳು 20:28-30.
ಕತ್ತಿಯೊಂದಿಗೆ ಒಬ್ಬ ಸೈನಿಕನ ನೈಪುಣ್ಯವು ಸುಲಭವಾಗಿ ಬರುವುದಿಲ್ಲ. ಅದನ್ನು ಕೈಚಳಕದಿಂದ ಉಪಯೋಗಿಸಲು ತರಬೇತು ಮತ್ತು ದೀರ್ಘವಾದ, ಸಮರ್ಪಿತ ಅಭ್ಯಾಸವು ಆವಶ್ಯಕವು. ಅದೇ ರೀತಿ, ಆತ್ಮಿಕ ಹೋರಾಟದಲ್ಲಿ ದೇವರ ವಾಕ್ಯವನ್ನು ಕುಶಲತೆಯಿಂದ ಉಪಯೋಗಿಸುವವನಾಗಲು ಬಹಳಷ್ಟು ಅಧ್ಯಯನ ಮತ್ತು ಶುಶ್ರೂಷೆಯಲ್ಲಿ ಕ್ರಮದ ತರಬೇತು ಬೇಕು. “ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸಲು” ಶಕ್ತರಾಗಿರುವ, ನುರಿತ ಆತ್ಮಿಕ ಕತ್ತಿಸಿಪಾಯಿಗಳಾಗುವಂತೆ ನಾವೆಲ್ಲರೂ ಅವಶ್ಯವಾಗಿ ಬೇಕಾದ ಪ್ರಯತ್ನವನ್ನು ಮಾಡೋಣ.—2 ತಿಮೊಥಿ 2:15.
ಪ್ರಾರ್ಥನೆಮಾಡುತ್ತಾ, ಸ್ಥಿರಚಿತ್ತರಾಗಿ ನಿಲ್ಲಿರಿ
ನಮ್ಮ ಆತ್ಮಿಕ ಶಸ್ತ್ರಾಸ್ತ್ರದ ಎಲ್ಲಾ ಆಯುಧಗಳು, ದೇವರಿಗೆ ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳಲು ನಮಗೆ ಅತ್ಯಾವಶ್ಯಕ. ಆದರೆ ನಾವೀ ಆಯುಧಗಳನ್ನು ಹೇಗೆ ಸಜ್ಜಾಗಿ ಉಳಿಸಿಕೊಳ್ಳಬಹುದು? ಬೈಬಲನ್ನು ಕ್ರಮವಾಗಿ ಅಧ್ಯಯನ ಮಾಡುವ, ಕ್ರೈಸ್ತ ಕೂಟಗಳಿಗೆ ಮುಂಚಿತವಾಗಿ ತಯಾರಿಸುವ ಮತ್ತು ಜಾಗ್ರತೆಯಿಂದ ಕಿವಿಗೊಡುತ್ತಾ ಅವುಗಳಲ್ಲಿ ಕ್ರಿಯಾಶೀಲರಾಗಿ ಭಾಗವಹಿಸುವ ಮೂಲಕ ನಮ್ಮ ಆಯುಧಗಳನ್ನು ನಾವು ಉಳಿಸಿಕೊಳ್ಳಲು ಸಹಾಯವಾಗುವುದು. (2 ತಿಮೊಥಿ 3:16; ಇಬ್ರಿಯ 10:24, 25) ಒಳ್ಳೇ ಕ್ರೈಸ್ತ ಸಹವಾಸದ ಜೊತೆಯಲ್ಲಿ ಕ್ರಮದ ಮತ್ತು ಹುರುಪಿನ ಕ್ಷೇತ್ರ ಸೇವೆಯು ಸಹ ನಮ್ಮ ಆಕ್ರಮಣದ ಮತ್ತು ರಕ್ಷಣೆಯ ಆತ್ಮಿಕ ಆಯುಧಗಳನ್ನು ಸುಸಜ್ಜಿತವಾಗಿಡಲು ಸಹಾಯ ಮಾಡುತ್ತದೆ.—ಜ್ಞಾನೋಕ್ತಿ 13:20; ರೋಮಾಪುರ 15:15, 16; 1 ಕೊರಿಂಥ 15:33.
ಯೋಗ್ಯವಾದ ಮಾನಸಿಕ ಭಾವನೆಯನ್ನು ವಿಕಾಸಿಸುವುದು ಸಹ ಮಹತ್ವದ್ದು. ಈ ಲೋಕದ ಆಕರ್ಷಣೆಗಳು ನಮ್ಮನ್ನು ಅಪಕರ್ಷಿಸುವಂತೆ ನಾವು ಬಿಟ್ಟುಕೊಡಲು ನಿರಾಕರಿಸಬೇಕು. ಬದಲಿಗೆ ಒಂದು ‘ಸರಳವಾದ ಕಣ್ಣನ್ನು’ ನಾವು ಬೆಳೆಸಿಕೊಳ್ಳೋಣ. (ಮತ್ತಾಯ 6:19-24) ಯೇಸು ಕ್ರಿಸ್ತನ ಅನುಕರಣೆಯಲ್ಲಿ, ನಾವು ಧರ್ಮವನ್ನು ಪ್ರೀತಿಸುವವರೂ ಅಧರ್ಮವನ್ನು ದ್ವೇಷಿಸುವವರೂ ಆಗಿರುವಂತೆ ಕಲಿಯಬೇಕು. (ಇಬ್ರಿಯ 1:9) ಈ ಎಲ್ಲಾ ವಿಷಯಗಳು ನಮ್ಮ ದೇವದತ್ತ ಆಯುಧಗಳನ್ನು ಸಜ್ಜಾಗಿಡುವಂತೆ ನಮಗೆ ಸಹಾಯ ಮಾಡುವವು.
ಆತ್ಮಿಕ ಆಯುಧಗಳಲ್ಲಿ ಪ್ರತಿಯೊಂದನ್ನು ಚರ್ಚಿಸಿದ ಬಳಿಕ, ಪೌಲನು ಈ ಹೇಳಿಕೆಯಿಂದ ಸಮಾಪ್ತಿಗೊಳಿಸುತ್ತಾನೆ: “ಪವಿತ್ರಾತ್ಮ ಪ್ರೇರಿತರಾಗಿ ಎಲ್ಲಾ ಸಮಯಗಳಲ್ಲಿ ಸಕಲ ವಿಧವಾದ ಪ್ರಾರ್ಥನೆಯಿಂದಲೂ ವಿಜ್ಞಾಪನೆಯಿಂದಲೂ ದೇವರನ್ನು ಪ್ರಾರ್ಥಿಸಿರಿ. ಇದರಲ್ಲಿ ಪೂರ್ಣ ಸ್ಥಿರಚಿತ್ತರಾಗಿದ್ದು ದೇವಜನರೆಲ್ಲರ ವಿಷಯದಲ್ಲಿ ವಿಜ್ಞಾಪನೆಮಾಡುತ್ತಾ ಎಚ್ಚರವಾಗಿರ್ರಿ.” (ಎಫೆಸ 6:18) ನಿಷ್ಠೆಯುಳ್ಳ ಸೈನಿಕರು ಸೇನಾ ಮುಖ್ಯಕಾರ್ಯಾಲಯದೊಂದಿಗೆ ಸಂಪರ್ಕದಲ್ಲಿರುತ್ತಾರೆ ಮತ್ತು ಅಪ್ಪಣೆಗಳನ್ನು ಪಾಲಿಸುತ್ತಾರೆ. ಕ್ರೈಸ್ತ ಸೈನಿಕರೋಪಾದಿ, ನಾವು ನಮ್ಮ ಪರಮಾಧಿಕಾರಿಯಾದ ಯೆಹೋವ ದೇವರೊಂದಿಗೆ, ಆತನ ಮಹಾ “ಜನಾಂಗಗಳ ನಾಯಕ” ಯೇಸು ಕ್ರಿಸ್ತನ ಮೂಲಕವಾಗಿ ಸದಾ ಸಂಪರ್ಕವನ್ನಿಡುವ ಅಗತ್ಯವಿದೆ. (ಯೆಶಾಯ 55:4) ನಾವಿದನ್ನು ಹೊರತೋರ್ಕೆಯ ಪ್ರಾರ್ಥನೆಯ ಮೂಲಕವಲ್ಲ, ಯೆಹೋವನಿಗೆ ಆಪತ್ತೆ ಮತ್ತು ಆಳವಾದ ಭಕ್ತಿಯನ್ನು ಸೂಚಿಸುವ ಹೃದಯಪೂರ್ವಕವಾದ ವಿಜ್ಞಾಪನೆಯ ಮೂಲಕ ಮಾಡಸಾಧ್ಯವಿದೆ. ಯೆಹೋವನೊಂದಿಗೆ ಎಡೆಬಿಡದೆ ಸಂಸರ್ಗವನ್ನಿಡುವ ಮೂಲಕ, ಪ್ರತಿ ದಿನ ನಮಗೆ ಈ ಹೋರಾಟದಲ್ಲಿ ಉಳಿಯಲು ಬೇಕಾದ ಬಲವು ದೊರೆಯುವುದು.
ಯೇಸು ಅಂದದ್ದು: “ನಾನು ಲೋಕವನ್ನು ಜಯಿಸಿದ್ದೇನೆ.” (ಯೋಹಾನ 16:33) ನಾವು ಸಹ ಜಯಶಾಲಿಗಳಾಗುವಂತೆ ಯೆಹೋವನು ಬಯಸುತ್ತಾನೆ. ಅಪೊಸ್ತಲ ಪೌಲನ ಮರಣವು ಹತ್ತಿರವಾದಾಗ, ಅವನು ಹೀಗನ್ನ ಶಕ್ತನಾದನು: “ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ, ನನ್ನ ಓಟವನ್ನು ಕಡೆಗಾಣಿಸಿದ್ದೇನೆ, ಕ್ರಿಸ್ತನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ.” (2 ತಿಮೊಥಿ 4:7) ಈ ಹೋರಾಟದಲ್ಲಿ ನಮ್ಮ ಪಾಲಿನ ಕುರಿತು ನಾವೂ ಇದೇ ರೀತಿಯ ಹೇಳಿಕೆಯನ್ನು ಮಾಡುವಂತಾಗಲಿ. ನಾವಿದನ್ನು ನಿಜವಾಗಿ ಅಪೇಕ್ಷಿಸುವುದಾದರೆ, ದೇವರು ದಯಪಾಲಿಸುವ ಸರ್ವಾಯುಧಗಳನ್ನು ಧರಿಸಿಕೊಳ್ಳುವ ಮೂಲಕ “ಸೈತಾನನ ತಂತ್ರೋಪಾಯಗಳನ್ನು ಎದುರಿಸಿ ನಿಲ್ಲುವದಕ್ಕೆ” ಶಕ್ತರಾಗೋಣ.—ಎಫೆಸ 6:11.