“ಮೆಸ್ಸೀಯನು ನಮಗೆ ಸಿಕ್ಕಿದನು”!
“ಮೊದಲು [ಅಂದ್ರೆಯನು] ತನ್ನ ಅಣ್ಣನಾದ ಸೀಮೋನನನ್ನು ಕಂಡುಕೊಂಡು, ಅವನಿಗೆ ಹೇಳಿದ್ದು: ‘ಮೆಸ್ಸೀಯನು ನಮಗೆ ಸಿಕ್ಕಿದನು’ (ತರ್ಜುಮೆಮಾಡಿದಾಗ, ಅದರ ಅರ್ಥ, ಕ್ರಿಸ್ತನು).”—ಯೋಹಾನ 1:41, NW.
1. ನಜರೇತಿನ ಯೇಸುವಿನ ಕುರಿತು ಸ್ನಾನಿಕ ಯೋಹಾನನು ಯಾವ ಸಾಕ್ಷ್ಯ ನೀಡಿದನು, ಮತ್ತು ಅವನ ಕುರಿತು ಅಂದ್ರೆಯನು ಯಾವ ತೀರ್ಮಾನಕ್ಕೆ ಬಂದನು?
ಅಂದ್ರೆಯನು ನಜರೇತಿನ ಯೇಸು ಎಂದು ಕರೆಯಲ್ಪಡುತ್ತಿದ್ದ ಯೆಹೂದ್ಯ ಮನುಷ್ಯನೆಡೆಗೆ ದೀರ್ಘ, ಕಠಿಣ ನೋಟವನ್ನು ಬೀರಿದನು. ಒಬ್ಬ ಅರಸನ, ಯಾ ಒಬ್ಬ ಬುದ್ಧಿವಂತ ಮನುಷ್ಯನ, ಯಾ ಒಬ್ಬ ರಬ್ಬಿಯ ತೋಚಿಕೆಯು ಅವನಿಗಿರಲಿಲ್ಲ. ಅವನಲ್ಲಿ ರಾಜವೈಭವದ ಸೊಗಸುಗಾರಿಕೆ ಇರಲಿಲ್ಲ, ಯಾ ನರೆತ ಕೂದಲುಗಳಿರಲಿಲ್ಲ, ಯಾ ಮೃದುವಾದ ಕೈಗಳು ಮತ್ತು ಗೌರವರ್ಣದ ಚರ್ಮವಿರಲಿಲ್ಲ. ಯೇಸುವು ಯುವಕನಾಗಿದ್ದನು—ಸುಮಾರು 30 ವರ್ಷ ಪ್ರಾಯ—ಕೈದುಡಿಮೆಯ ಕಾರ್ಮಿಕನ ಗಡಸುಗಟ್ಟಿದ ಹಸ್ತಗಳು ಮತ್ತು ಕಂಚುವರ್ಣದ ಚರ್ಮವಿತ್ತು. ಆದುದರಿಂದ ಅವನೊಬ್ಬ ಬಡಗಿಯಾಗಿದ್ದನು ಎಂದು ತಿಳಿಯಲು ಅಂದ್ರೆಯನಿಗೆ ಆಶ್ಚರ್ಯವೇನೂ ಆಗಿದ್ದಿರಲಿಕ್ಕಿಲ್ಲ. ಆದಾಗ್ಯೂ, ಸ್ನಾನಿಕ ಯೋಹಾನನು ಈ ಮನುಷ್ಯನ ಕುರಿತು ಅಂದದ್ದು: “ಅಗೋ, [ಯಜ್ಞಕ್ಕೆ] ದೇವರು ನೇಮಿಸಿದ ಕುರಿ.” ಒಂದು ದಿನದ ಮುಂಚೆ, ಇನ್ನಷ್ಟು ಬೆರಗುಗೊಳಿಸುವುದನ್ನು ಯೋಹಾನನು ಹೇಳಿದ್ದನು: “ಈತನೇ ದೇವಕುಮಾರನು.” ಇದು ಸತ್ಯವಾಗಿರಬಹುದೇ? ಆ ದಿನ ಯೇಸುವನ್ನು ಆಲಿಸುವುದರಲ್ಲಿ ಅಂದ್ರೆಯನು ಕೆಲವು ಸಮಯ ವ್ಯಯಿಸಿದನು. ಯೇಸುವು ಏನಂದನೆಂದು ನಮಗೆ ಗೊತ್ತಿಲ್ಲ; ಅವನ ಮಾತುಗಳು ಅಂದ್ರೆಯನ ಜೀವಿತವನ್ನು ಪರಿವರ್ತಿಸಿದವು ಎಂಬುದನ್ನು ನಾವು ಬಲ್ಲೆವು. ಅವನು ತನ್ನ ಸಹೋದರ, ಸೀಮೋನನ್ನು ಕಾಣಲು ಅವಸರಿಸಿದನು, ಮತ್ತು ಉದ್ಗರಿಸಿದ್ದು: “ಮೆಸ್ಸೀಯನು ನಮಗೆ ಸಿಕ್ಕಿದನು”!—ಯೋಹಾನ 1:34-41.
2. ಯೇಸುವು ವಾಗ್ದಾನಿಸಿದ ಮೆಸ್ಸೀಯನಾಗಿದ್ದುದರ ಕುರಿತ ಪುರಾವೆಯನ್ನು ಪರಿಗಣಿಸುವುದು ಯಾಕೆ ಪ್ರಾಮುಖ್ಯವಾಗಿದೆ?
2 ಅಂದ್ರೆಯ ಮತ್ತು ಸೀಮೋನ (ಅವನಿಗೆ ಪೇತ್ರ ಎಂದು ಯೇಸು ಪುನರ್ನಾಮಕರಣ ಮಾಡಿದನು) ಅನಂತರ ಯೇಸುವಿನ ಅಪೊಸ್ತಲರಾದರು. ಅವನ ಶಿಷ್ಯನಾಗಿ ಎರಡು ವರ್ಷಗಳಿಗಿಂತಲೂ ಹೆಚ್ಚು ಸಮಯದ ನಂತರ, ಪೇತ್ರನು ಯೇಸುವಿಗೆ ಅಂದದ್ದು: “ನೀನು ಬರಬೇಕಾಗಿರುವ ಕ್ರಿಸ್ತನು [ಮೆಸ್ಸೀಯನು], ಜೀವಸ್ವರೂಪನಾದ ದೇವರ ಕುಮಾರನು.” (ಮತ್ತಾಯ 16:16) ಆ ನಂಬುಗೆಗೋಸ್ಕರ ವಿಶ್ವಾಸಿ ಅಪೊಸ್ತಲರುಗಳು ಮತ್ತು ಶಿಷ್ಯರುಗಳು ಕಟ್ಟಕಡೆಗೆ ಸಾಯಲೂ ಕೂಡ ಇಚ್ಛೆಯುಳ್ಳವರಾಗಿದ್ದರು ಎಂದು ಸಾಬೀತುಪಡಿಸಿದರು. ಇಂದು ಲಕ್ಷಾಂತರ ಯಥಾರ್ಥವಂತ ಜನರು ತತ್ಸಮಾನವಾಗಿ ಅಚಲ ಶ್ರದ್ಧೆಯುಳ್ಳವರಾಗಿದ್ದಾರೆ. ಆದರೆ ಯಾವ ಪುರಾವೆಯ ಮೇಲೆ? ಪುರಾವೆ, ಎಷ್ಟೆಂದರೂ ವಿಶ್ವಾಸ ಮತ್ತು ಬರೇ ಅಂಧ ನಂಬಿಕೆಯ ನಡುವಣದ ಭಿನ್ನತೆಯನ್ನುಂಟುಮಾಡುತ್ತದೆ. (ಇಬ್ರಿಯ 11:1 ನೋಡಿ.) ಆದುದರಿಂದ ಯೇಸುವು ಖಂಡಿತವಾಗಿಯೂ ಮೆಸ್ಸೀಯನಾಗಿದ್ದನು ಎಂಬುದನ್ನು ರುಜುಪಡಿಸುವ ಸಾಕ್ಷ್ಯದ ಮೂರು ಸಾಮಾನ್ಯ ರೇಖೆಗಳನ್ನು ನಾವೀಗ ಪರಿಗಣಿಸೋಣ.
ಯೇಸುವಿನ ವಂಶಾವಳಿ
3. ಯೇಸುವಿನ ವಂಶಾವಳಿಯ ಕುರಿತು ಮತ್ತಾಯ ಮತ್ತು ಲೂಕ ಸುವಾರ್ತೆಗಳು ಯಾವ ವಿವರಣೆಗಳನ್ನು ನೀಡುತ್ತವೆ?
3 ಅವನ ಮೇಸ್ಸೀಯತ್ವದ ಬೆಂಬಲವಾಗಿ ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳು ಕೊಡುವ ಮೊದಲ ಸಾಕ್ಷ್ಯ ಯೇಸುವಿನ ವಂಶಾವಳಿಯಾಗಿದೆ. ಅರಸ ದಾವೀದನ ಕುಟುಂಬದ ಸಾಲಿನಿಂದ ಮೆಸ್ಸೀಯನು ಬರುವನು ಎಂದು ಬೈಬಲ್ ಮುಂತಿಳಿಸಿದೆ. (ಕೀರ್ತನೆ 132:11, 12; ಯೆಶಾಯ 11:1, 10) ಮತ್ತಾಯನ ಸುವಾರ್ತೆಯು ಆರಂಭಿಸುವುದು: “ಯೇಸು ಕ್ರಿಸ್ತನ ವಂಶಾವಳಿಯು. ಆತನು ದಾವೀದನ ವಂಶದವನು. ದಾವೀದನು ಅಬ್ರಹಾಮನ ವಂಶದವನು.” ಯೇಸುವಿನ ತಲೆಮೊರೆಯನ್ನು ಅವನ ದತ್ತು ತಂದೆಯಾದ ಯೋಸೇಫನ ಕುಲದ ಮೂಲಕ ಕಂಡುಹುಡುಕುವುದರಿಂದ ಈ ಬಲವಾದ ವಾದವನ್ನು ಮತ್ತಾಯನು ಬೆಂಬಲಿಸುತ್ತಾನೆ. (ಮತ್ತಾಯ 1:1-16) ಲೂಕನ ಸುವಾರ್ತೆಯು ಯೇಸುವಿನ ವಂಶಾವಳಿಯನ್ನು ಅವನ ಮಾಂಸಿಕ ತಾಯಿ ಮರಿಯಳ ಮೂಲಕ, ಹಿಂದಕ್ಕೆ ದಾವೀದ ಮತ್ತು ಅಬ್ರಹಾಮನಿಂದ ಆದಾಮನ ವರೆಗೆ ಪರಿಶೀಲಿಸುತ್ತದೆ. (ಲೂಕ 3:23-38)a ಹೀಗೆ ಸುವಾರ್ತೆಯ ಬರಹಗಾರರು, ಕಾನೂನುಬದ್ಧವಾಗಿಯೂ, ಮಾಂಸಿಕ ರೀತಿಯಲ್ಲೂ, ಎರಡೂ ರೀತಿಗಳಿಂದ ಯೇಸುವು ದಾವೀದನ ಹಕ್ಕುಬಾಧ್ಯಸ್ಥನಾಗಿದ್ದನು ಎಂಬ ವಾದದಲ್ಲಿ ಸಮಗ್ರವಾಗಿ ದಾಖಲಾತಿಮಾಡಿರುತ್ತಾರೆ.
4, 5. (ಎ) ಅವನು ದಾವೀದನ ತಲೆಮೊರೆಯೆಂಬುದನ್ನು ಯೇಸುವಿನ ಸಮಕಾಲೀನರು ಪಣಕ್ಕೊಡ್ಡಿದ್ದರೋ, ಮತ್ತು ಇದು ಯಾಕೆ ವೈಶಿಷ್ಟ್ಯಯುಳ್ಳದ್ದಾಗಿದೆ? (ಬಿ) ಬೈಬಲ್ಯೇತರ ಪರಾಮರ್ಶೆಗಳು ಯೇಸುವಿನ ವಂಶಾವಳಿಯನ್ನು ಹೇಗೆ ಬೆಂಬಲಿಸುತ್ತವೆ?
4 ದಾವೀದನ ಕುಮಾರನಾಗಿರುವನೆಂಬ ಯೇಸುವಿನ ವಾದವನ್ನು ಯೇಸುವಿನ ಮೇಸ್ಸೀಯತ್ವದ ಅತಿ ಅನಿಶ್ಚಿತಮತಿಯ ವಿರೋಧಿಯೂ ಕೂಡ ನಿರಾಕರಿಸಸಾಧ್ಯವಿಲ್ಲ. ಯಾಕೆ? ಎರಡು ಕಾರಣಗಳಿವೆ. ಒಂದು, ಯೆರೂಸಲೇಮ್ ಸಾ. ಶ. 70 ರಲ್ಲಿ ನಾಶವಾಗುವ ಮೊದಲು ದಶಕಗಳ ತನಕ ಆ ವಾದವು ನಗರದಲ್ಲೆಲ್ಲಾ ವ್ಯಾಪಕವಾಗಿ ಪುನರಾವರ್ತಿಸಲ್ಪಟ್ಟಿತ್ತು. (ಹೋಲಿಸಿ ಮತ್ತಾಯ 21:9; ಅ.ಕೃತ್ಯಗಳು 4:27; 5:27, 28.) ವಾದವು ಸುಳ್ಳಾಗಿದ್ದರೆ, ಯೇಸುವಿನ ವಿರೋಧಿಗಳಲ್ಲಿ ಯಾವನೇ ಒಬ್ಬನು—ಮತ್ತು ಅವನಿಗೆ ಅನೇಕರು ಇದ್ದರು—ಸಾರ್ವಜನಿಕ ಪತ್ರಾಗಾರಗಳಲ್ಲಿದ್ದ ಅವನ ವಂಶಾವಳಿಗಳ ಪೀಳಿಗೆಯನ್ನು ಕೇವಲ ಪರೀಕ್ಷಿಸುವುದರ ಮೂಲಕವೇ ಯೇಸುವು ಒಬ್ಬ ವಂಚಕನು ಎಂದು ರುಜುಪಡಿಸಶಕ್ತನಿದ್ದನು.b ಆದರೆ ರಾಜ ದಾವೀದನಿಂದ ಯೇಸುವಿನ ತಲೆಮೊರೆಯನ್ನು ಯಾವನೊಬ್ಬನು ಪಂಥಕ್ಕೊಡ್ಡಿದ ಯಾವುದೇ ದಾಖಲೆ ಇತಿಹಾಸದಲ್ಲಿ ಇಲ್ಲ. ಆಕ್ಷಿಪಿಸಲಾಗದಂತಹ ವಾದ ಅದಾಗಿತ್ತು ಎಂದು ಸ್ಫುಟವಾಗುತ್ತದೆ. ಅವರ ವರದಿಗಳಿಗಾಗಿ, ಸಾರ್ವಜನಿಕ ದಾಖಲೆಗಳಿಂದ ನೇರವಾಗಿ ಅವನ ವಂಶಾವಳಿಯನ್ನು ರುಜುಪಡಿಸಲು ಆವಶ್ಯಕವಾದ ಹೆಸರುಗಳನ್ನು ಮತ್ತಾಯ ಮತ್ತು ಲೂಕ ನಕಲು ತೆಗೆದಿದ್ದರು ಎಂಬುದರಲ್ಲಿ ಸಂದೇಹವಿಲ್ಲ.
5 ಎರಡನೆಯದ್ದು, ಯೇಸುವಿನ ವಂಶಾವಳಿಯ ಸಾಮಾನ್ಯ ಅಂಗೀಕಾರವನ್ನು ಬೈಬಲಿನ ಹೊರಗಿನ ಉಗಮಗಳು ಸ್ಥಿರೀಕರಿಸುತ್ತವೆ. ಉದಾಹರಣೆಗೆ, ನಾಲ್ಕನೆಯ ಶತಮಾನದ ಒಬ್ಬ ರಬ್ಬಿಯು, ‘ಬಡಗಿಗಳೊಂದಿಗೆ ಅವಳು ಜಾರಸ್ತ್ರೀಯೋಪಾದಿ ವರ್ತಿಸುತ್ತಿದ್ದುದಕ್ಕಾಗಿ’ ಯೇಸುವಿನ ತಾಯಿಯಾದ ಮರಿಯಳ ಮೇಲೆ ಒಂದು ಅಶ್ಲೀಲ ಧಾಳಿಯನ್ನು ಮಾಡಿರುವುದಾಗಿ ತಾಲ್ಮುದ್ ದಾಖಲಿಸುತ್ತದೆ; ಆದರೆ ಅದೇ ವಾಕ್ಸರಣಿಯು ಒಪ್ಪುವದೇನಂದರೆ “ಅವಳು ರಾಜಕುವರಿಯ ಮತ್ತು ಆಳುವವರ ವಂಶಜಳಾಗಿದ್ದಳು.” ಇದಕ್ಕಿಂತ ಮುಂಚಿನ ಉದಾಹರಣೆಯು ಎರಡನೆಯ ಶತಮಾನದ ಇತಿಹಾಸಗಾರ ಹೆಜಸಿಪ್‌ಇಸ್‌ನದ್ದಾಗಿದೆ. ದಾವೀದನ ವಂಶಜರುಗಳಲ್ಲಿ ಉಳಿದಿದ್ದ ಯಾರನ್ನೇ ಆಗಲಿ ನಿರ್ಮೂಲಗೊಳಿಸಲು ರೋಮನ್ ಕೈಸರನಾದ ಡೊಮಿಶಿಯನ್ ಬಯಸಿದಾಗ, ಆದಿ ಕ್ರೈಸ್ತರ ಕೆಲವು ಶತ್ರುಗಳು ಯೇಸುವಿನ ಮಲತಮ್ಮನಾದ ಯೂದನ ಮೊಮ್ಮಗಂದಿರನ್ನು “ದಾವೀದನ ಕುಟುಂಬದವರಾಗಿರುವುದಾಗಿ” ಖಂಡಿಸಿದರು ಎಂದು ಅವನು ವರ್ಣಿಸಿದ್ದಾನೆ. ಯೂದನು ದಾವೀದನ ವಂಶಜನೆಂದು ಖ್ಯಾತಿಹೊಂದಿರುವುದಾದರೆ, ಯೇಸುವು ಕೂಡ ಹಾಗೆಯೇ ಆಗಿರಬೇಕಲ್ಲವೆ? ಅಲ್ಲಗಳೆಯಲಾರದಂತಹ ರೀತಿಯಲ್ಲಿ!—ಗಲಾತ್ಯ 1:19; ಯೂದ 1.
ಮೆಸ್ಸೀಯನೀಕ ಪ್ರವಾದನೆಗಳು
6. ಹೀಬ್ರು ಶಾಸ್ತ್ರಗ್ರಂಥದಲ್ಲಿ ಮೆಸ್ಸೀಯನೀಕ ಪ್ರವಾದನೆಗಳು ಎಷ್ಟು ವಿಪುಲವಾಗಿ ಇವೆ?
6 ನೆರವೇರಿದ ಪ್ರವಾದನೆಯು ಯೇಸುವು ಮೆಸ್ಸೀಯನಾಗಿದ್ದನು ಎಂಬುದರ ಪುರಾವೆಯ ಇನ್ನೊಂದು ರೇಖೆಯಾಗಿದೆ. ಹೀಬ್ರು ಶಾಸ್ತ್ರಗ್ರಂಥದಲ್ಲಿ ಮೆಸ್ಸೀಯನಿಗೆ ಅನ್ವಯವಾಗುವ ವಿಪುಲವಾದ ಪ್ರವಾದನೆಗಳು ಇವೆ. ದ ಲೈಫ್ ಆ್ಯಂಡ್ ಟೈಮ್ಸ್ ಆಫ್ ಜೀಸಸ್ ದ ಮೆಸೈಯ ಎಂಬ ತನ್ನ ಕೃತಿಯಲ್ಲಿ, ಆಲ್‌ಫ್ರೆಡ್ ಎಡ್‌ರ್‌ಎಶೀಮ್, ಪ್ರಾಚೀನ ರಬ್ಬಿಗಳು ಮೆಸ್ಸೀಯನೀಕದ್ದು ಎಂದು ವೀಕ್ಷಿಸಿದ ಹೀಬ್ರು ಶಾಸ್ತ್ರಗ್ರಂಥಗಳ 456 ವಾಕ್ಸರಣಿಗಳನ್ನು ಸರಿದೂಗಿಸಿದ್ದರು. ಆದಾಗ್ಯೂ, ಮೆಸ್ಸೀಯನ ಕುರಿತಾದರೋ ರಬ್ಬಿಗಳಿಗೆ ಅನೇಕ ತಪ್ಪಾದ ಕಲ್ಪನೆಗಳಿದ್ದವು; ಅವರು ನಿರ್ದೇಶಿಸಿದ ಅನೇಕ ವಾಕ್ಸರಣಿಗಳು ಮೆಸ್ಸೀಯನೀಕವಾಗಿ ಇರಲೇ ಇಲ್ಲ. ಆದರೂ, ಯೇಸುವನ್ನು ಮೆಸ್ಸೀಯನೋಪಾದಿ ಗುರುತಿಸುವ ಇನ್ನೂ ಕಡಿಮೆಪಕ್ಷ ನೂರಾರು ಪ್ರವಾದನೆಗಳು ಅಲ್ಲಿದ್ದವು.—ಹೋಲಿಸಿ ಪ್ರಕಟನೆ 19:10.
7. ಭೂಮಿಯ ಮೇಲಿನ ಅವನ ಪಯಣದಲ್ಲಿ, ಯೇಸುವು ನೆರವೇರಿಸಿದ ಕೆಲವು ಪ್ರವಾದನೆಗಳು ಯಾವುವು?
7 ಅವುಗಳಲ್ಲಿ: ಅವನ ಜನನದ ಪಟ್ಟಣ (ಮೀಕ 5:2; ಲೂಕ 2:4-11); ಅವನ ಜನನದ ನಂತರ ನಡೆದ ಸಾಮೂಹಿಕ ಶಿಶುಹತ್ಯೆಗಳ ದುರಂತ (ಯೆರೆಮೀಯ 31:15; ಮತ್ತಾಯ 2:16-18); ಐಗುಪ್ತದಿಂದ ಅವನನ್ನು ಹೊರಗೆ ಕರೆಯಲಿರುವುದು (ಹೋಶೇಯ 11:1; ಮತ್ತಾಯ 2:15); ಅವನನ್ನು ನಾಶಗೊಳಿಸಲು ಜನಾಂಗಗಳ ಅಧಿಪತಿಗಳು ಐಕ್ಯಗೊಳ್ಳುವರು (ಕೀರ್ತನೆ 2:1, 2; ಅ. ಕೃತ್ಯಗಳು 4:25-28); ಮೂವತ್ತು ಬೇಳ್ಳಿನಾಣ್ಯಗಳಿಗಾಗಿ ಆತನಿಗೆ ನಂಬಿಕೆದ್ರೋಹಮಾಡುವಿಕೆ (ಜೆಕರ್ಯ 11:12; ಮತ್ತಾಯ 26:15); ಅವನ ಮರಣದ ವಿಧಾನ ಕೂಡ—ಕೀರ್ತನೆ 22:16, NW ಪಾದಟಿಪ್ಪಣಿ; ಯೋಹಾನ 19:18, 23; 20:25, 27.c
ಅವನ ಆಗಮನವು ಪ್ರವಾದಿಸಲ್ಪಟ್ಟದ್ದು
8. (ಎ) ಮೆಸ್ಸೀಯನು ಯಾವಾಗ ಬರುವನು ಎಂದು ಯಾವ ಪ್ರವಾದನೆ ನಿರ್ದೇಶಿಸುತ್ತದೆ? (ಬಿ) ಈ ಪ್ರವಾದನೆಯನ್ನು ತಿಳಿದುಕೊಳ್ಳಲು ಯಾವ ಎರಡು ವಾಸ್ತವಾಂಶಗಳ ಪರಿಚಯ ಇರಬೇಕಾಗಿದೆ?
8 ನಾವೀಗ ಕೇವಲ ಒಂದು ಪ್ರವಾದನೆಯ ಮೇಲೆ ಕೇಂದ್ರೀಕರಿಸೋಣ. ದಾನಿಯೇಲ 9:25 ರಲ್ಲಿ ಮೆಸ್ಸೀಯನು ಯಾವಾಗ ಬರಲಿದ್ದಾನೆ ಎಂದು ಯೆಹೂದ್ಯರಿಗೆ ತಿಳಿಸಲ್ಪಟ್ಟಿತ್ತು. ಅದು ಓದುವುದು: “ಇದನ್ನು ತಿಳಿದು ಮಂದಟ್ಟುಮಾಡಿಕೋ; ಯೆರೂಸಲೇಮು ಜೀರ್ಣೋದ್ಧಾರವಾಗಿ ಕಟ್ಟಲ್ಪಡಲಿ ಎಂಬ ದೈವೋಕ್ತಿಯು ಹೊರಡುವಂದಿನಿಂದ ಅಭಿಷಿಕ್ತನಾದ ಪ್ರಭುವು ಬರುವದರೊಳಗೆ ಏಳು ವಾರಗಳು ಕಳೆಯಬೇಕು; ಅದು ಪುನಃ ಕಟ್ಟಲ್ಪಟ್ಟು ಆರುವತ್ತೆರಡು ವಾರ ಇರುವದು.” ಮೊದಲ ನೋಟದಲ್ಲಿ, ಈ ಪ್ರವಾದನೆಯು ಗೂಢವೆಂದು ಭಾಸವಾಗಬಹುದು. ಆದರೆ ಸಾಮಾನ್ಯ ಅರ್ಥದಲ್ಲಿ, ಅದು ಕೇವಲ ಸಮಾಚಾರದ ಎರಡು ತುಣುಕುಗಳನ್ನು ಕಂಡುಕೊಳ್ಳುವಂತೆ ನಮ್ಮನ್ನು ಕೇಳಿಕೊಳ್ಳುತ್ತದೆ: ಆರಂಭದ ಬಿಂದು ಮತ್ತು ಸಮಯದ ಅವಧಿ. ಇದನ್ನು ಉದಾಹರಿಸಲು, “ನಗರದ ಉದ್ಯಾನದಲ್ಲಿರುವ ಬಾವಿಯ 50 ಕೋಲುಗಳಷ್ಟು ಪೂರ್ವದಲ್ಲಿ” ನಿಧಿಯೊಂದಿದೆ ಎಂದು ತೋರಿಸುವ ಒಂದು ನಕ್ಷೆ ನಿಮ್ಮಲ್ಲಿರುವುದಾದರೆ, ನಿರ್ದೇಶನಗಳು—ವಿಶೇಷವಾಗಿ, ಈ ಬಾವಿ ಎಲ್ಲಿತ್ತು, ಮತ್ತು ‘ಕೋಲು’ ಎಷ್ಟು ಉದ್ದವಾಗಿತ್ತು ಎಂದು ನಿಮಗೆ ತಿಳಿಯದೆ ಇರುವುದಾದರೆ,—ಗಲಿಬಿಲಿಯದ್ದಾಗಿ ನೀವು ಕಂಡುಕೊಳ್ಳಬಹುದು. ನಿಧಿಯನ್ನು ಪತ್ತೆಹಚ್ಚಲು ನಿಮಗೆ ಸಾಧ್ಯವಾಗುವಂತೆ, ಆ ಎರಡು ನಿಜಾಂಶಗಳನ್ನು ನೀವು ಹುಡುಕುವದಿಲ್ಲವೆ? ಒಳ್ಳೇದು, ದಾನಿಯೇಲನ ಪ್ರವಾದನೆಯು, ಆರಂಭದ ಸಮಯ ಮತ್ತು ಅದನ್ನು ಹಿಂಬಾಲಿಸುವ ಅವಧಿಯನ್ನು ಅಳತೆಮಾಡಲು ನಾವು ಗುರುತಿಸುವುದನ್ನು ಬಿಟ್ಟು, ಸಾಧಾರಣ ಹಾಗೆಯೇ ಇದೆ.
9, 10. (ಎ) ಆರುವತ್ತೊಂಬತ್ತು ವಾರಗಳನ್ನು ಲೆಕ್ಕಿಸಲು ಆರಂಭಕ ಬಿಂದು ಯಾವುದು? (ಬಿ) ಆರುವತ್ತೊಂಬತ್ತು ವಾರಗಳ ಉದ್ದವೆಷ್ಟು, ಮತ್ತು ನಾವಿದನ್ನು ತಿಳಿದಿರುವುದು ಹೇಗೆ?
9 ಮೊದಲು ನಮಗೆ ಆರಂಭದ ಬಿಂದು ಬೇಕಾಗಿದೆ, ‘ಯೆರೂಸಲೇಮು ಜೀರ್ಣೋದ್ಧಾರವಾಗಿ ಕಟ್ಟಲ್ಪಡಲಿ ಎಂಬ ದೈವೋಕ್ತಿಯು ಹೊರಟ’ ತಾರೀಕು ಬೇಕಾಗಿದೆ. ಅನಂತರ, ಆ ಬಿಂದುವಿನಿಂದ ಇರುವ ದೂರ ಎಷ್ಟು ಎಂದು, 69 (7ಕ್ಕೆ 62 ಕೂಡಿದರೆ) ವಾರಗಳು ಎಷ್ಟು ದೀರ್ಘಾವಧಿಯದ್ದಾಗಿವೆ ಎಂದು ಮಾತ್ರ ನಾವು ತಿಳಿಯಬೇಕಾಗಿದೆ. ಸಮಾಚಾರದ ಇವೆರಡೂ ತುಣುಕುಗಳನ್ನು ಪಡೆಯಲು ಅಷ್ಟೇನೂ ಕಷ್ಟತಮವಲ್ಲ. ಕಟ್ಟಕಡೆಗೆ ಒಂದು ಜೀರ್ಣೋದ್ಧಾರಹೊಂದಿದ ಪಟ್ಟಣವಾಗಿ ಮಾಡಲು ಯೆರೂಸಲೇಮಿನ ಸುತ್ತಲೂ ಗೋಡೆಯನ್ನು ಕಟ್ಟುವಂತೆ ಅಪ್ಪಣೆಯು, “ಅರಸನಾದ ಆರ್ತಷಸ್ತನ ಇಪ್ಪತ್ತನೆಯ ವರುಷ” ದಲ್ಲಿ ಹೊರಟಿತು ಎಂದು ನೆಹೆಮೀಯನು ಬಹಳಷ್ಟು ವಿಶದವಾಗಿ ನಮಗೆ ಹೇಳಿದ್ದಾನೆ. (ನೆಹೆಮೀಯ 2:1, 5, 7, 8) ಅದು ನಮ್ಮ ಆರಂಭದ ಬಿಂದುವನ್ನು ಸಾ. ಶ. ಪೂ. 455ಕ್ಕೆ ಇಡುತ್ತದೆ.d
10 ಈಗ ಈ 69 ವಾರಗಳ ಕುರಿತಾಗಿ, ಅವು ಏಳು ದಿನಗಳ ಅಕ್ಷರಾರ್ಥಕ ವಾರಗಳಾಗಿರಬಲ್ಲವೆ? ಇಲ್ಲ, ಯಾಕಂದರೆ ಸಾ. ಶ. ಪೂ. 455ರ ಕೇವಲ ಒಂದು ವರ್ಷಕ್ಕಿಂತ ಸ್ವಲ್ಪ ಹೆಚ್ಚು ಸಮಯದ ನಂತರ ಮೆಸ್ಸೀಯನು ಗೋಚರಿಸಲಿಲ್ಲ. ಆದುದರಿಂದ, ಹೆಚ್ಚಿನ ಬೈಬಲ್ ವಿದ್ವಾಂಸರು ಮತ್ತು ಅಸಂಖ್ಯಾತ ತರ್ಜುಮೆಗಳು (ಯೆಹೂದ್ಯ ತನಾಕದ ಈ ವಚನದ ಪಾದಟಿಪ್ಪಣಿಯಲ್ಲಿ ಸಹಿತ) ಇವುಗಳು “ವರ್ಷಗಳ” ವಾರಗಳಾಗಿವೆ ಎಂದು ಒಪ್ಪುತ್ತಾರೆ. ‘ವರ್ಷಗಳ ವಾರದ’ ಯಾ ಒಂದು ಏಳು-ವರ್ಷ ಚಕ್ರದ ಈ ಕಲ್ಪನೆಯು, ಪುರಾತನ ಯೆಹೂದ್ಯರಿಗೆ ಪರಿಚಿತವಾಗಿತ್ತು. ಪ್ರತಿ ಏಳನೆಯ ದಿನವನ್ನು ಅವರು ಒಂದು ಸಬ್ಬತ್ ದಿನವಾಗಿ ಆಚರಿಸುತ್ತಿದ್ದ ಹಾಗೆಯೇ, ಪ್ರತಿ ಏಳನೆಯ ವರ್ಷವನ್ನು ಒಂದು ಸಬ್ಬತ್ ವರ್ಷವಾಗಿ ಅವರು ಆಚರಿಸುತ್ತಿದ್ದರು. (ವಿಮೋಚನಕಾಂಡ 20:8-11; 23:10, 11) ಆದುದರಿಂದ ವರ್ಷಗಳ 69 ವಾರಗಳು, ಏಳು ವರ್ಷಗಳನ್ನು 69 ಸಾರಿ ಗುಣಿಸಿದ ಮೊತ್ತ, ಯಾ 483 ವರ್ಷಗಳು ಆಗುತ್ತವೆ. ಈಗ ನಮಗೆ ಉಳಿದಿರುವುದು ಕೇವಲ ಲೆಕ್ಕಮಾಡುವುದು ಮಾತ್ರ. ಸಾ. ಶ. ಪೂ. 455ರಿಂದ 483 ವರ್ಷಗಳನ್ನು ನಾವು ಗಣಿಸಿದರೆ, ಅದು ನಮ್ಮನ್ನು ಸಾ. ಶ. 29 ನೆಯ ವರ್ಷಕ್ಕೆ—ಯೇಸುವು ದೀಕ್ಷಾಸ್ನಾನ ಹೊಂದಿದಾಗ, ಮ·ಶಿ΄ಅಕ್, ಮೆಸ್ಸೀಯ ಆದ ಅದೇ ವರ್ಷಕ್ಕೆ—ತರುತ್ತದೆ!—ನೋಡಿರಿ “ಸೆವಂಟಿ ವೀಕ್ಸ್,” ಇನ್‌ಸೈಟ್ ಆನ್ ದ ಸ್ಕ್ರಿಪ್ಚರ್ಸ್, ಸಂಪುಟ 2, ಪುಟ 899.
11. ಇದು ದಾನಿಯೇಲನ ಪ್ರವಾದನೆಯ ಅರ್ಥನಿರೂಪಣೆಮಾಡುವ ಕೇವಲ ಒಂದು ಆಧುನಿಕ ವಿಧಾನವೆಂದು ಹೇಳುವವರಿಗೆ ನಾವು ಹೇಗೆ ಉತ್ತರಿಸಬಹುದು?
11 ಇದು ಇತಿಹಾಸಕ್ಕೆ ಹೊಂದಿಕೆಯಾಗುವಂತೆ ಪ್ರವಾದನೆಯನ್ನು ಕೇವಲ ಆಧುನಿಕ ವಿಧಾನದಲ್ಲಿ ಅರ್ಥವಿವರಿಸುವುದು ಎಂದು ಕೆಲವರು ಆಕ್ಷೇಪಿಸಬಹುದು. ಹಾಗಿರುವುದಾದರೆ, ಮೆಸ್ಸೀಯನು ಯೇಸುವಿನ ದಿನಗಳಲ್ಲಿ ಗೋಚರಿಸುವನು ಎಂದು ಆ ಸಮಯದಲ್ಲಿ ಜನರು ಯಾಕೆ ನಿರೀಕ್ಷಿಸುತ್ತಿದ್ದರು? ಕ್ರೈಸ್ತ ಇತಿಹಾಸಗಾರ ಲೂಕ, ರೋಮನ್ ಇತಿಹಾಸಗಾರರು ಟಾಸಿಟಸ್ ಮತ್ತು ಸ್ಯುಟೊನಿಯಸ್, ಯೆಹೂದ್ಯ ಇತಿಹಾಸಗಾರ ಜೊಸೀಫಸ್, ಮತ್ತು ಯೆಹೂದ್ಯ ತತ್ವಜ್ಞಾನಿ ಫಿಲೋ ಇವರೆಲ್ಲರೂ ಈ ಸಮಯದ ಸಮೀಪದಲ್ಲಿ ಜೀವಿಸಿದ್ದರು ಮತ್ತು ನಿರೀಕ್ಷಣೆಯ ಈ ಸ್ಥಿತಿಯ ಸಾಕ್ಷ್ಯವನ್ನಿತ್ತಿದ್ದರು. (ಲೂಕ 3:15) ಯೆಹೂದ್ಯರು ಆ ದಿನಗಳಲ್ಲಿ ಮೆಸ್ಸೀಯನಿಗಾಗಿ ಹಾತೊರೆಯುವಂತೆ ಮತ್ತು ನಿರೀಕ್ಷಿಸುವಂತೆ ಮಾಡಿದ್ದು ರೋಮನ್ ದಬ್ಬಾಳಿಕೆಯೇ ಎಂದು ಕೆಲವು ವಿದ್ವಾಂಸರು ಇಂದು ಪಟ್ಟುಹಿಡಿಯುತ್ತಾರೆ. ಹಾಗಿರುವುದಾದರೆ, ಶತಮಾನಗಳ ಮೊದಲು ಇದ್ದ ನಿರ್ದಯಿ ಗ್ರೀಕ್ ಹಿಂಸಾಚಾರದ ಸಮಯದಲ್ಲಿ ಮೆಸ್ಸೀಯನಿಗಾಗಿ ಯೆಹೂದ್ಯರು ಯಾಕೆ ನಿರೀಕ್ಷಿಸಲಿಲ್ಲ? ಯೂದಾಯದಿಂದ ಬಲಶಾಲೀ ಅಧಿಪತಿಗಳು ಬಂದು, “ವಿಶ್ವ ಸಾಮ್ರಾಜ್ಯವನ್ನು ಗಳಿಸುವರು” ಎಂದು ನಿರೀಕ್ಷಿಸುವಂತೆ, “ಗೂಢವಾದ ಪ್ರವಾದನೆಗಳು” ಯೆಹೂದ್ಯರನ್ನು ನಡಿಸಿದವು ಎಂದು ಟಾಸಿಟಸನು ಹೇಳಿದ್ದು ಯಾಕೆ? ಎ ಹಿಸ್ಟರಿ ಆಫ್ ಮೆಸ್ಸೀಯನಿಕ್ ಸ್ಪೆಕ್ಯುಲೆಶನ್ ಇನ್ ಇಸ್ರಾಯೇಲ್ ಎಂಬ ಅವನ ಪುಸ್ತಕದಲ್ಲಿ, ಅಬ ಹಿಲ್ಲೆಲ್ ಸಿಲ್ವರ್ ಅಂಗೀಕರಿಸಿದ್ದೇನಂದರೆ, “ಮೆಸ್ಸೀಯನು ಸಾ. ಶ.ದ ಮೊದಲನೆಯ ಶತಕದ ಎರಡನೆಯ ಕಾಲುಭಾಗದ ಸಮಯದಲ್ಲಿ ನಿರೀಕ್ಷಿಸಲ್ಪಟ್ಟಿದ್ದನು,” ರೋಮನ್ ಹಿಂಸಾಚಾರದ ಕಾರಣದಿಂದಾಗಿ ಅಲ್ಲ, ಆದರೆ ದಾನಿಯೇಲನ ಪುಸ್ತಕದಿಂದ ಭಾಗಶಃ ದೊರೆತ “ಆ ಸಮಯದ ಜನಪ್ರಿಯ ಕಾಲಗಣನೆ”ಯ ಕಾರಣದಿಂದಲೇ.
ಮೇಲಣಿಂದ ಗುರುತಿಸಲ್ಪಟ್ಟದ್ದು
12. ಯೇಸುವು ಮೆಸ್ಸೀಯನೆಂದು ಯೆಹೋವನು ಹೇಗೆ ಗುರುತಿಸಿದನು?
12 ಯೇಸುವಿನ ಮೇಸ್ಸೀಯತ್ವದ ಪುರಾವೆಯ ಮೂರನೆಯ ವಿಧಾನವು ಸ್ವತಃ ದೇವರ ಸಾಕ್ಷ್ಯವೇ. ಲೂಕ 3:21, 22 ಕ್ಕನುಸಾರ, ಯೇಸುವು ದೀಕ್ಷಾಸ್ನಾನ ಹೊಂದಿದ ಮೇಲೆ, ವಿಶ್ವದ ಅತಿ ಪವಿತ್ರ ಮತ್ತು ಬಲಾಢ್ಯ ಶಕ್ತಿಯಾದ, ಯೆಹೋವ ದೇವರ ಪವಿತ್ರ ಆತ್ಮದಿಂದ ತಾನೇ, ಅವನು ಅಭಿಷೇಕಿಸಲ್ಪಟ್ಟನು. ಮತ್ತು ಅವನು ಸ್ವಂತ ವಾಣಿಯಿಂದ, ತನ್ನ ಮಗ, ಯೇಸುವನ್ನು ಮೆಚ್ಚಿದ್ದಾನೆ ಎಂದು ಯೆಹೋವನು ಅಂಗೀಕರಿಸಿದನು. ಇನ್ನು ಎರಡು ಸಂದರ್ಭಗಳಲ್ಲಿ, ತನ್ನ ಒಪ್ಪಿಗೆಯನ್ನು ಸೂಚಿಸುತ್ತಾ, ಯೆಹೋವನು ಪರಲೋಕದಿಂದ ನೇರವಾಗಿ ಯೇಸುವಿನೊಂದಿಗೆ ಮಾತಾಡಿದನು: ಒಮ್ಮೆ, ಯೇಸುವಿನ ಮೂವರು ಅಪೊಸ್ತಲರುಗಳ ಮುಂದೆ, ಮತ್ತು ಮಗದೊಮ್ಮೆ, ನೋಡುತ್ತಿರುವ ಜನಸಮೂಹದ ಮುಂದೆ. (ಮತ್ತಾಯ 17:1-5; ಯೋಹಾನ 12:28, 29) ಇನ್ನೂ ಹೆಚ್ಚಾಗಿ, ಕ್ರಿಸ್ತನು ಯಾ ಮೆಸ್ಸೀಯನೋಪಾದಿ ಯೇಸುವಿನ ಪದವಿಯನ್ನು ಸ್ಥಿರೀಕರಿಸಲು ಮೇಲಣಿಂದ ದೇವದೂತರುಗಳು ಕಳುಹಿಸಲ್ಪಟ್ಟರು.—ಲೂಕ 2:10, 11.
13, 14. ಮೆಸ್ಸೀಯನೋಪಾದಿ ಯೇಸುವಿನ ತನ್ನ ಒಪ್ಪಿಗೆಯನ್ನು ಯೆಹೋವನು ಹೇಗೆ ಪ್ರದರ್ಶಿಸಿದನು?
13 ಮಹತ್ಕಾರ್ಯಗಳನ್ನು ಮಾಡುವಂತೆ ಅವನಿಗೆ ಶಕ್ತಿಯನ್ನು ನೀಡಿದ ಮೂಲಕ, ತನ್ನ ಅಭಿಷಿಕ್ತನ ಮೇಲಿನ ಅವನ ಒಪ್ಪಿಗೆಯನ್ನು ಯೆಹೋವನು ತೋರಿಸಿದನು. ಉದಾಹರಣೆಗೆ, ವಿವರವಾದ ಇತಿಹಾಸವನ್ನು ಮುಂದಾಗಿಯೇ—ಕೆಲವು ನಮ್ಮ ಸ್ವಂತ ದಿನಗಳ ತನಕ ಚಾಚುವ—ಪ್ರವಾದನೆಗಳನ್ನು ಯೇಸುವು ಉಚ್ಚರಿಸಿದನು.e ಹಸಿದ ಜನಸಮೂಹಗಳನ್ನು ಉಣಿಸುವ ಮತ್ತು ರೋಗಿಗಳನ್ನು ಗುಣಪಡಿಸುವ ಇತ್ಯಾದಿ ಅದ್ಭುತಗಳನ್ನು ಕೂಡ ಅವನು ನಡಿಸಿದನು. ಸತ್ತವರನ್ನು ಸಹ ಅವನು ಪುನರುತ್ಥಾನಗೊಳಿಸಿದನು. ನಿಜಾಂಶದ ನಂತರ, ಅವನ ಹಿಂಬಾಲಕರು ಈ ಶಕ್ತಿಶಾಲಿ ಕಾರ್ಯಗಳ ಕೇವಲ ಕಥೆಗಳನ್ನು ಕಲ್ಪಿಸಿದ್ದರೋ? ಒಳ್ಳೇದು, ಯೇಸು ತನ್ನ ಮಹತ್ಕಾರ್ಯಗಳಲ್ಲಿ ಅನೇಕವುಗಳನ್ನು ಕಣ್ಣಾರೆ ಕಂಡ ಸಾಕ್ಷಿಗಳ ಮುಂದೆ, ಕೆಲವೊಮ್ಮೆ ಒಂದೇ ಸಮಯ ಸಾವಿರಾರು ಜನರ ಮುಂದೆ ಜರುಗಿಸಿದನು. ಅವನು ಈ ಸಂಗತಿಗಳನ್ನು ನಿಜವಾಗಿಯೂ ನಡಿಸಿದ್ದನು ಎಂಬುದನ್ನು ಯೇಸುವಿನ ಶತ್ರುಗಳು ಕೂಡ ನಿರಾಕರಿಸಶಕ್ತರಾಗಿರಲಿಲ್ಲ. (ಮಾರ್ಕ 6:2; ಯೋಹಾನ 11:47) ಇದರ ಹೊರತಾಗಿ, ಯೇಸುವಿನ ಅನುಯಾಯಿಗಳು ಅಂತಹ ದಾಖಲೆಗಳನ್ನು ಕಲ್ಪಿಸಿಕೊಳ್ಳುವ ಪ್ರವೃತ್ತಿಯವರಾಗಿದ್ದರೆ, ಅವರ ಸ್ವಂತ ಲೋಪದೋಷಗಳಿಗೆ ಬರುವಾಗ, ಅವರು ಅಷ್ಟೊಂದು ಮುಚ್ಚುಮರೆಯಿಲ್ಲದವರಾಗಿದ್ದದ್ದು ಯಾಕೆ? ಅವರು ವೈಯಕ್ತಿಕವಾಗಿ ಕಲ್ಪಿಸಿದ ಕೇವಲ ಮಿಥ್ಯೆಗಳ ಮೇಲಾಧಾರಿತ ನಂಬಿಕೆಗೋಸ್ಕರ ಅವರು ಸಾಯಲೂ ಕೂಡ ನಿಜವಾಗಿಯೂ ಇಚ್ಛೆಯುಳ್ಳವರಾಗಿರುತ್ತಿದ್ದರೇ? ಇಲ್ಲ. ಯೇಸುವಿನ ಅದ್ಭುತಗಳು ಇತಿಹಾಸದ ವಾಸ್ತವಾಂಶಗಳಾಗಿವೆ.
14 ಮೆಸ್ಸೀಯನೋಪಾದಿ ಯೇಸುವಿನ ಕುರಿತಾದ ದೇವರ ಸಾಕ್ಷ್ಯವು ಇನ್ನೂ ಮುಂದಕ್ಕೆ ಹೋಯಿತು. ಯೇಸುವಿನ ಮೇಸ್ಸೀಯತ್ವದ ಕುರಿತಾದ ಪುರಾವೆಯು ಬರೆಯಲ್ಪಡುವಂತೆ ಮತ್ತು ಇತಿಹಾಸದಲ್ಲೇ ಅತಿ ವ್ಯಾಪಕವಾಗಿ ಭಾಷಾಂತರಗೊಂಡ ಮತ್ತು ವಿತರಿಸಲ್ಪಟ್ಟ ಪುಸ್ತಕದ ಭಾಗವಾಗುವಂತೆ ಪವಿತ್ರಾತ್ಮನ ಮೂಲಕ ಅವನು ಖಚಿತಪಡಿಸಿಕೊಂಡನು.
ಯೆಹೂದ್ಯರು ಯೇಸುವನ್ನು ಯಾಕೆ ಸ್ವೀಕರಿಸಲಿಲ್ಲ?
15. (ಎ) ಮೆಸ್ಸೀಯನೋಪಾದಿ ಅವನನ್ನು ಗುರುತಿಸುವ ಯೇಸುವಿನ ಪರಿಚಯಪತ್ರಗಳು ಎಷ್ಟೊಂದು ವ್ಯಾಪಕವಾಗಿವೆ? (ಬಿ) ಯೆಹೂದ್ಯರ ಯಾವ ನಿರೀಕ್ಷಣೆಗಳು, ಮೆಸ್ಸೀಯನೋಪಾದಿ ಯೇಸುವನ್ನು ನಿರಾಕರಿಸಲು ಅವರಲ್ಲಿ ಅನೇಕರನ್ನು ನಡಿಸಿದವು?
15 ಹಾಗಾದರೆ, ರುಜುವಾತಿನ ಇವೆಲ್ಲಾ ಮೂರು ವಿಭಾಗಗಳಲ್ಲಿ, ಮೆಸ್ಸೀಯನೋಪಾದಿ ಯೇಸುವನ್ನು ಗುರುತಿಸುವ ಅಕ್ಷರಶಃ ನೂರಾರು ನಿಜಾಂಶಗಳು ಸೇರಿರುತ್ತವೆ. ಅಷ್ಟೊಂದು ಸಾಕಾಗುವುದಿಲ್ಲವೇ? ಡ್ರೈವರ್‌ನೊಬ್ಬನ ಲೈಸನ್ಸ್ ಯಾ ಸಾಲದ ಚೀಟಿ (Credit Card) ಗಾಗಿ ಅರ್ಜಿಯನ್ನು ಹಾಕುತ್ತೀರಿ ಎಂದು ಊಹಿಸಿರಿ ಮತ್ತು ನಿಮ್ಮ ಗುರುತಿನ ಮೂರು ತುಣುಕುಗಳು ಸಾಕಾಗುವುದಿಲ್ಲ, ಬದಲಾಗಿ ನೂರಾರು ತರಲೇಬೇಕು ಅನ್ನುತ್ತಾರೆ. ಎಂತಹ ಅಸಮಂಜಸತೆಯು! ಖಂಡಿತವಾಗಿಯೂ, ಹಾಗಾದರೆ, ಬೈಬಲಿನಲ್ಲಿ ಯೇಸುವನ್ನು ವಿಸ್ತಾರವಾಗಿ ಗುರುತಿಸಲಾಗಿದೆ. ಹಾಗಾದರೆ, ಅವನೊಬ್ಬ ಮೆಸ್ಸೀಯನಾಗಿದ್ದನು ಎಂಬ ಈ ಎಲ್ಲಾ ಪುರಾವೆಗಳನ್ನು ಯೇಸುವಿನ ಸ್ವಂತ ಜನರಲ್ಲಿ ಹಲವರು ನಿರಾಕರಿಸಿದ್ದು ಯಾಕೆ? ಕಾರಣ ಸಾಚಾ ನಂಬಿಕೆಗೆ ಪುರಾವೆ ಅಗತ್ಯವಾದರೂ, ನಂಬಿಕೆಯ ಖಾತರಿಯನ್ನು ಅದು ಕೊಡುವುದಿಲ್ಲ. ವಿಷಾದನೀಯವಾಗಿ, ಅಧಿಕ ಮೊತ್ತದ ಪುರಾವೆಯ ಎದುರುಗಡೆಯಲ್ಲಿ ಕೂಡ, ಅವರೇನನ್ನು ನಂಬಲು ಇಚ್ಛಿಸುತ್ತಾರೋ, ಅದನ್ನೇ ಅನೇಕ ಜನರು ನಂಬುತ್ತಾರೆ. ಆದರೆ ಮೆಸ್ಸೀಯನ ಕುರಿತು ಬಂದಾಗ, ಅನೇಕ ಯೆಹೂದ್ಯರಿಗೆ ಅವರಿಗೇನು ಬೇಕಿತ್ತೆಂಬದರ ಕುರಿತು ನಿಶ್ಚಿತ ಕಲ್ಪನೆಗಳಿದ್ದವು. ಅವರಿಗೆ ರೋಮನ್ ದಬ್ಬಾಳಿಕೆಯಿಂದ ಅಂತ್ಯಗೊಳಿಸುವ ಮತ್ತು ಇಸ್ರಾಯೇಲ್ಯರಲ್ಲಿ ಸೊಲೊಮೋನನ ದಿನಗಳಿಗೆ ಸಮಾನವಾದ ಪ್ರಾಪಂಚಿಕತೆಯ ಮಹಿಮೆಯನ್ನು ಪುನರ್ಸ್ಥಾಪಿಸುವ ಒಬ್ಬ ರಾಜಕೀಯ ಮೆಸ್ಸೀಯನು ಬೇಕಾಗಿದ್ದನು. ಹಾಗಿದ್ದಲ್ಲಿ, ರಾಜಕೀಯದಲ್ಲಾಗಲಿ, ಐಶ್ವರ್ಯದಲ್ಲಾಗಲಿ ಯಾವುದೆ ಆಸಕ್ತಿಯನ್ನು ತೋರಿಸದ, ಬಡಗಿಯೊಬ್ಬನ ದೀನ ಕುಮಾರನನ್ನು, ಈ ನಜರೇತಿನವನನ್ನು ಅವರು ಹೇಗೆ ಸ್ವೀಕರಿಸಬಲ್ಲರು? ವಿಶೇಷವಾಗಿ, ಅವನು ಬಾಧೆಪಟ್ಟು, ಹಿಂಸಾಕಂಭದ ಮೇಲೆ ಅವಮಾನಕರ ರೀತಿಯಲ್ಲಿ ಸತ್ತನಂತರ, ಅವನೊಬ್ಬ ಮೆಸ್ಸೀಯನಾಗುವುದಾದರೂ ಹೇಗೆ ಸಾಧ್ಯ?
16. ಮೆಸ್ಸೀಯನೋಪಾದಿ ತಮ್ಮ ನಿರೀಕ್ಷಣೆಗಳನ್ನು ಯೇಸುವಿನ ಹಿಂಬಾಲಕರು ಯಾಕೆ ಸರಿಪಡಿಸಿಕೊಳ್ಳಲಿಕ್ಕಿತ್ತು?
16 ಅವನ ಮರಣದಿಂದ ಯೇಸುವಿನ ಸ್ವಂತ ಶಿಷ್ಯರು ತತ್ತರಿಸಿದರು. ಅವನ ಮಹಿಮಾಭರಿತ ಪುನರುತ್ಥಾನದ ನಂತರ, ಅವನು ತತ್‌ಕ್ಷಣವೇ ‘ಇಸ್ರಾಯೇಲ್ ಜನರಿಗೆ ರಾಜ್ಯವನ್ನು ತಿರಿಗಿ ಸ್ಥಾಪಿಸುವನು’ ಎಂದವರು ನಿರೀಕ್ಷಿಸಿದ್ದರು ಎಂದು ವಿದಿತವಾಗುತ್ತದೆ. (ಅ. ಕೃತ್ಯಗಳು 1:6) ಆದರೆ ಈ ವ್ಯಕ್ತಿಶಃ ನಿರೀಕ್ಷೆಯು ಕೈಗೂಡಲಿಲ್ಲವೆಂಬ ಕಾರಣಮಾತ್ರದಿಂದ ಅವರು ಯೇಸುವನ್ನು ಮೆಸ್ಸೀಯನೋಪಾದಿ ನಿರಾಕರಿಸಲಿಲ್ಲ. ದೊರೆತಿದ್ದ ಬಹಳಷ್ಟು ಪುರಾವೆಗಳ ಆಧಾರದ ಮೇಲೆ ಅವರು ಅವನಲ್ಲಿ ನಂಬಿಕೆಯನ್ನು ಪ್ರದರ್ಶಿಸಿದರು, ಮತ್ತು ಅವರ ತಿಳಿವಳಿಕೆಯು ಕ್ರಮೇಣ ಬೆಳೆಯಿತು; ರಹಸ್ಯಗಳು ಸೃಷ್ಟಗೊಳಿಸಲ್ಪಟ್ಟವು. ಭೂಮಿಯ ಮೇಲೆ ಮನುಷ್ಯನೋಪಾದಿ ಅವನಿದ್ದ ಸಂಕ್ಷಿಪ್ತ ಸಮಯದಲ್ಲಿ ಅವನ ಕುರಿತಾದ ಎಲ್ಲಾ ಪ್ರವಾದನೆಗಳನ್ನು ಮೆಸ್ಸೀಯನು ನೆರವೇರಿಸಶಕ್ತನಲ್ಲವೆಂದು ಅವರು ಕಾಣಶಕ್ತರಾದರು. ಒಂದು ಪ್ರವಾದನೆಯು ಅವನು ಒಂದು ಕತ್ತೇಮರಿಯ ಮೇಲೆ ಸವಾರಿಮಾಡುತ್ತಾ, ವಿನೀತನಾಗಿ ಬರುತ್ತಾನೆನ್ನುವಾಗ, ಇನ್ನೊಂದು ಅವನು ಮೇಘಗಳ ಮೇಲೆ ತನ್ನ ಮಹಿಮೆಯೊಂದಿಗೆ ಬರುವುದರ ಕುರಿತು ಮಾತಾಡಿದೆ! ಇವೆರಡೂ ಹೇಗೆ ಸತ್ಯವಾಗಿರಬಲ್ಲವು? ಅವನಿಗೆ ಎರಡನೆಯ ಬಾರಿ ಬರಲಿಕ್ಕಿದೆ ಎಂಬುದು ಸ್ಫುಟವಾಗುತ್ತದೆ.—ದಾನಿಯೇಲ 7:13; ಜೆಕರ್ಯ 9:9.
ಮೆಸ್ಸೀಯನು ಸಾಯಬೇಕಾಗಿದ್ದ ಕಾರಣ
17. ಮೆಸ್ಸೀಯನಿಗೆ ಸಾಯಲಿಕ್ಕಿದೆ ಎಂದು ದಾನಿಯೇಲನ ಪ್ರವಾದನೆಯು ಹೇಗೆ ಸೃಷ್ಟಗೊಳಿಸುತ್ತದೆ, ಮತ್ತು ಅವನು ಯಾವ ಕಾರಣಕ್ಕಾಗಿ ಸಾಯಲಿಕ್ಕಿದ್ದನು?
17 ಇನ್ನು ಅಧಿಕವಾಗಿ, ಮೆಸ್ಸೀಯನು ಸಾಯಬೇಕು ಎಂದು ಮೆಸ್ಸೀಯನೀಕ ಪ್ರವಾದನೆಗಳು ಸೃಷ್ಟಗೊಳಿಸಿದವು. ಉದಾಹರಣೆಗೆ, ಮೆಸ್ಸೀಯನು ಯಾವಾಗ ಬರುವನು ಎಂದು ಮುಂತಿಳಿಸಿದ್ದ ಅದೇ ಪ್ರವಾದನೆಯ ನಂತರದ ವಚನವು ಮುಂತಿಳಿಸಿದ್ದು: “[ಏಳು ವಾರಗಳನ್ನು ಹಿಂಬಾಲಿಸಿ] ಆರುವತ್ತೆರಡು ವಾರಗಳಾದ ಮೇಲೆ ಅಭಿಷಿಕ್ತನೊಬ್ಬನು ಛೇದಿಸಲ್ಪಡುವನು.” (ದಾನಿಯೇಲ 9:26) ಛೇದಿಸಲ್ಪಡುವಿಕೆಗೆ ಇಲ್ಲಿ ಉಪಯೋಗಿಸಲ್ಪಟ್ಟ ಕ·ರತ್΄ ಎಂಬ ಹೀಬ್ರು ಶಬ್ದವೇ ಮೋಶೆಯ ನಿಯಮಶಾಸ್ತ್ರದ ಕೆಳಗೆ ಮರಣದಂಡನೆಗೆ ಉಪಯೋಗಿಸುತ್ತಿದ್ದ ಶಬ್ದವಾಗಿದೆ. ನಿಸ್ಸಂದೇಹವಾಗಿ ಮೆಸ್ಸೀಯನು ಸಾಯಲಿಕ್ಕಿದ್ದನು. ಯಾಕೆ? ವಚನ 24 ನಮಗೆ ಉತ್ತರವನ್ನೀಯುತ್ತದೆ: “ಅಧರ್ಮವನ್ನು ಕೊನೆಗಾಣಿಸುವದು, ಪಾಪಗಳನ್ನು ತೀರಿಸುವದು, ಅಪರಾಧವನ್ನು ನಿವಾರಿಸುವದು, ಸನಾತನ ಧರ್ಮವನ್ನು ಸ್ಥಾಪಿಸುವದ”ಕ್ಕಾಗಿ. ಕೇವಲ ಒಂದು ಯಜ್ಞ, ಒಂದು ಮರಣ ಮಾತ್ರವೇ ದೋಷಪರಾಧಗಳ ಪರಿಹಾರಕವನ್ನುಂಟುಮಾಡಬಲ್ಲದು ಎಂದು ಯೆಹೂದ್ಯರು ಚೆನ್ನಾಗಿ ತಿಳಿದಿದ್ದರು.—ಯಾಜಕಕಾಂಡ 17:11; ಹೋಲಿಸಿ ಇಬ್ರಿಯ 9:22.
18. (ಎ) ಮೆಸ್ಸೀಯನು ಬಾಧೆಪಟ್ಟು, ಸಾಯಬೇಕೆಂಬದನ್ನು ಎಂದು ಯೆಶಾಯ ಅಧ್ಯಾಯ 53 ಹೇಗೆ ತೋರಿಸುತ್ತದೆ? (ಬಿ) ಭಾಸವಾಗುತ್ತಿರುವ ಯಾವ ಅಸಂಗತೋಕ್ತಿಯನ್ನು ಈ ಪ್ರವಾದನೆಯು ಎಬ್ಬಿಸುತ್ತದೆ?
18 ಯೆಹೋವನ ವಿಶೇಷ ಸೇವಕನೋಪಾದಿ ಮೆಸ್ಸೀಯನು, ಇತರರ ಪಾಪಗಳನ್ನು ನಿವಾರಿಸಲು ಬಾಧೆ ಪಡಬೇಕಾಗಿದೆ ಮತ್ತು ಸಾಯಬೇಕಾಗಿದೆ ಎಂದು ಯೆಶಾಯನ 53 ನೆಯ ಅಧ್ಯಾಯ ಹೇಳುತ್ತದೆ. ವಚನ 5 ಹೇಳುವುದು: “ನಮ್ಮ ದ್ರೋಹಗಳ ದೆಸೆಯಿಂದ ಅವನಿಗೆ ಗಾಯವಾಯಿತು. ನಮ್ಮ ಅಪರಾಧಗಳ ನಿಮಿತ್ತ ಅವನು ಜಜ್ಜಲ್ಪಟ್ಟನು.” ಅದೇ ಪ್ರವಾದನೆಯು, “ಪ್ರಾಯಶ್ಚಿತ್ತ ಯಜ್ಞವಾಗಿ” ಈ ಮೆಸ್ಸೀಯನು ಸಾಯತಕ್ಕದ್ದು ಎಂದು ನಮಗೆ ಹೇಳಿಯಾದ ಮೇಲೆ, ಇವನು ತಾನೇ “ಚಿರಂಜೀವಿಯಾಗುವನು, ನನ್ನ [ಯೆಹೋವನ, NW] ಸಂಕಲ್ಪವು ಇವನ ಕೈಯಿಂದ ನೆರವೇರುವದು” ಎಂದು ಪ್ರಕಟಿಸುತ್ತದೆ. (ವಚನ 10) ಇದೊಂದು ಅಸಂಗತೋಕ್ತಿಯಲ್ಲವೆ? ಮೆಸ್ಸೀಯನು ಸಾಯುವುದು, ಮತ್ತು ಅನಂತರ “ಚಿರಂಜೀವಿಯಾಗು”ವುದು ಹೇಗೆ ಸಾಧ್ಯ? ಯಜ್ಞವಾಗಿ ಅರ್ಪಿಸಲ್ಪಟ್ಟಾದ ಬಳಿಕ, ತದನಂತರ ‘ಯೆಹೋವನ ಸಂಕಲ್ಪವು ನೆರವೇರುವಂತೆ’ ಮಾಡುವುದು ಹೇಗೆ ಸಾಧ್ಯ? ಅವನು ಸಾಯುವುದಾದರೂ ಹೇಗೆ ಮತ್ತು ಅವನ ಕುರಿತಾಗಿರುವ ಅತಿ ಮಹತ್ವದ ಪ್ರವಾದನೆಗಳನ್ನು, ವಿಶೇಷವಾಗಿ, ಅರಸನೋಪಾದಿ ಅವನು ಸದಾ ಕಾಲಕ್ಕೂ ಆಳುವನು ಮತ್ತು ಇಡೀ ಭೂಮಿಯ ಮೇಲೆ ಸಂತೋಷವನ್ನು ತರುವನು ಎಂಬುದನ್ನು ನೆರವೇರಿಸದೆ, ಮೃತನಾಗಿ ಇರುವುದಾದರೂ ಹೇಗೆ ಸಾಧ್ಯ?—ಯೆಶಾಯ 9:6, 7.
19. ಮೆಸ್ಸೀಯನ ಕುರಿತಾದ ಭಾಸವಾಗುತ್ತಿರುವ ವಿರೋಧೋಕ್ತಿ ಪ್ರವಾದನೆಗಳನ್ನು ಯೇಸುವಿನ ಪುನರುತ್ಥಾನವು ಹೇಗೆ ಇತ್ಯರ್ಥಗೊಳಿಸುತ್ತದೆ?
19 ಭಾಸವಾಗುತ್ತಿರುವ ಈ ಅಸಂಗತೋಕ್ತಿಯು ಕೇವಲ ಒಂದು ಪ್ರೇಕ್ಷಣೀಯ ಅದ್ಭುತದ ಮೂಲಕ ಪರಿಹರಿಸಲ್ಪಟ್ಟಿತು. ಯೇಸುವು ಪುನರುತ್ಥಾನಗೊಳಿಸಲ್ಪಟ್ಟನು. ಪ್ರಾಮಾಣಿಕ ಹೃದಯದ ನೂರಾರು ಯೆಹೂದ್ಯರು ಈ ಮಹಿಮಾಭರಿತ ವಾಸ್ತವತೆಯ ಪ್ರತ್ಯಕ್ಷದರ್ಶಿಗಳಾದರು. (1 ಕೊರಿಂಥ 15:6) ತದನಂತರ ಅಪೊಸ್ತಲ ಪೌಲನು ಬರೆದದ್ದು: “ಆದರೆ ಈ ಯಾಜಕನು [ಯೇಸು ಕ್ರಿಸ್ತನು] ಪಾಪನಿವಾರಣೆಗೋಸ್ಕರ ನಿರಂತರವಾಗಿ ನಿಲ್ಲುವ ಒಂದೇ ಯಜ್ಞವನ್ನು ಸಮರ್ಪಿಸಿ ದೇವರ ಬಲಗಡೆಯಲ್ಲಿ ಕೂತುಕೊಂಡನು. ಅಂದಿನಿಂದ ತನ್ನ ವಿರೋಧಿಗಳು ತನ್ನ ಪಾದಪೀಠವಾಗಿ ಹಾಕಲ್ಪಡುವ ತನಕ ಆತನು ಕಾದಿರುವನು.” (ಇಬ್ರಿಯ 10:10, 12, 13) ಹೌದು, ಯೇಸುವು ಸ್ವರ್ಗೀಯ ಜೀವಿತಕ್ಕೆ ಪುನರುತಿಥ್ತನಾದ ಮೇಲೆ, ಮತ್ತು “ಕಾದುಕೊಳ್ಳುವ” ಸಮಯಾವಧಿಯ ನಂತರ, ಅವನು ಕಟ್ಟಕಡೆಗೆ, ಅರಸನೋಪಾದಿ ಸಿಂಹಾಸನಾಸೀನನಾಗುವನು, ಮತ್ತು ಅವನ ತಂದೆಯಾದ ಯೆಹೋವನ ವೈರಿಗಳ ವಿರೋಧವಾಗಿ ಕಾರ್ಯಾಚರಣೆಗೈಯುವನು. ಸ್ವರ್ಗೀಯ ಅರಸನೋಪಾದಿ ತನ್ನ ಪಾತ್ರದಲ್ಲಿ, ಮೆಸ್ಸೀಯ ಯೇಸುವು ಈಗ ಜೀವಿಸುತ್ತಿರುವ ಪ್ರತಿಯೊಬ್ಬ ವ್ಯಕ್ತಿಯ ಜೀವಿತದ ಮೇಲೆ ಪರಿಣಾಮ ಬೀರುತ್ತಿದ್ದಾನೆ? ಯಾವ ವಿಧದಲ್ಲಿ? ಇದನ್ನು ನಮ್ಮ ಮುಂದಿನ ಲೇಖನವು ಚರ್ಚಿಸುವುದು. (w92 10⁄1)
[ಅಧ್ಯಯನ ಪ್ರಶ್ನೆಗಳು]
a ಲೂಕ 3:23 “ಯೋಸೇಫನು ಹೇಲೀಯ ಮಗನು” ಎಂದು ಹೇಳುವಾಗ, ಹೇಲಿಯು ಮರಿಯಳ ಮಾಂಸಿಕ ತಂದೆಯಾಗಿದ್ದುದರಿಂದ, “ಅಳಿಯನು” ಎಂಬರ್ಥದಲ್ಲಿ “ಮಗನು” ಎಂದು ವಿದಿತವಾಗುತ್ತದೆ.—ಇನ್‌ಸೈಟ್ ಆನ್ ದ ಸ್ಕ್ರಿಪ್ಚರ್ಸ್, ಸಂಪುಟ 1, ಪುಟಗಳು 913-17.
b ಯೆಹೂದ್ಯ ಇತಿಹಾಸಗಾರ ಜೊಸೀಫಸನು, ತನ್ನ ಸ್ವಂತ ವಂಶಾವಳಿಯನ್ನು ಪ್ರಸ್ತುತಪಡಿಸುವಲ್ಲಿ, ಸಾ. ಶ. 70ರ ಮೊದಲು ಅಂತಹ ದಾಖಲೆಗಳು ದೊರಕುತ್ತಿದ್ದವು ಎಂದು ಸ್ಪಷ್ಟಪಡಿಸಿರುತ್ತಾನೆ. ಯೆರೂಸಲೇಮ್ ನಗರದ ನಾಶನದೊಟ್ಟಿಗೆ ಈ ದಾಖಲೆಗಳು ಕೂಡ ನಾಶಗೊಂಡಿರಲೂ ಬಹುದು, ಇದರಿಂದಾಗಿ, ಮೇಸ್ಸೀಯತ್ವದ ನಂತರದ ಎಲ್ಲಾ ವಾದಗಳನ್ನು ರುಜುಪಡಿಸಲು ಅಶಕ್ಯವನ್ನಾಗಿ ಮಾಡಿತು.
d ಆರ್ತಷಸ್ತನ ರಾಜ್ಯಭಾರದ ಮೊದಲನೆಯ ವರ್ಷವು ಸಾ. ಶ. ಪೂ. 474 ಎಂದು ಸೂಚಿಸುವ ಬಲವಾದ ಪುರಾವೆಯು ಪ್ರಾಚೀನ ಗ್ರೀಕ್, ಬಬಿಲೊನಿಯನ್, ಮತ್ತು ಪರ್ಸಿಯನ್ ಉಗಮಗಳಲ್ಲಿ ಇದೆ. ನೋಡಿರಿ ಇನ್‌ಸೈಟ್ ಆನ್ ದ ಸ್ಕ್ರಿಪ್ಚರ್ಸ್, ಸಂಪುಟ 2, ಪುಟಗಳು 614-16, 900.
e ಅಂತಹ ಒಂದು ಪ್ರವಾದನೆಯಲ್ಲಿ, ಅವನ ದಿನಗಳಿಂದ ಹಿಡಿದು ಮುಂದಕ್ಕೆ, ಸುಳ್ಳು ಮೆಸ್ಸೀಯರು ಏಳುವರು ಎಂದು ಅವನು ಮುಂತಿಳಿಸಿದನು. (ಮತ್ತಾಯ 24:23-26) ಇದರ ಮುಂಚಿನ ಲೇಖನವನ್ನು ನೋಡಿರಿ.
ನೀವು ಹೇಗೆ ಉತ್ತರಿಸುವಿರಿ?
▫ ಯೇಸುವು ವಾಗ್ದಾನಿತ ಮೆಸ್ಸೀಯನೊ ಎಂದು ಪುರಾವೆಗಳನ್ನು ಯಾಕೆ ಪರೀಕ್ಷಿಸತಕ್ಕದ್ದು?
▫ ಯೇಸುವಿನ ವಂಶಾವಳಿಯು ಅವನ ಮೇಸ್ಸೀಯತ್ವವನ್ನು ಹೇಗೆ ಬೆಂಬಲಿಸುತ್ತದೆ?
▫ ಯೇಸುವು ಮೆಸ್ಸೀಯನಾಗಿದ್ದನು ಎಂದು ರುಜುಪಡಿಸಲು ಬೈಬಲಿನ ಪ್ರವಾದನೆಗಳು ಹೇಗೆ ನೆರವಾಗುತ್ತವೆ?
▫ ಮೆಸ್ಸೀಯನೋಪಾದಿ ಯೇಸುವಿನ ಗುರುತನ್ನು ಯಾವ ವಿಧಾನಗಳಲ್ಲಿ ಯೆಹೋವನು ವ್ಯಕ್ತಿಶಃ ಸ್ಥಿರೀಕರಿಸಿದನು?
▫ ಮೆಸ್ಸೀಯನೋಪಾದಿ ಅನೇಕ ಯೆಹೂದ್ಯರು ಯೇಸುವನ್ನು ಯಾಕೆ ನಿರಾಕರಿಸಿದರು, ಮತ್ತು ಈ ಕಾರಣಗಳು ಯಾಕೆ ಅನುಚಿತವಾಗಿದ್ದವು?
[ಪುಟ 12 ರಲ್ಲಿರುವ ಚಿತ್ರ]
ಯೇಸುವಿನ ಅನೇಕ ಅದ್ಭುತಗಳಲ್ಲಿ ಪ್ರತಿಯೊಂದು ಅವನ ಮೇಸ್ಸೀಯತ್ವದ ಇನ್ನಷ್ಟು ಅಧಿಕ ಸಾಕ್ಷ್ಯಗಳನ್ನು ಒದಗಿಸಿದವು