“ದಶಮಾಂಶ ಯಾವತ್ತನ್ನೂ ಭಂಡಾರಕ್ಕೆ ತೆಗೆದುಕೊಂಡು ಬನ್ನಿರಿ”
“ನಾನು ಪರಲೋಕದ ದ್ವಾರಗಳನ್ನು ತೆರೆದು ನಿಮ್ಮಲ್ಲಿ ಸ್ಥಳಹಿಡಿಯಲಾಗದಷ್ಟು ಸುವರವನ್ನು ಸುರಿಯುವೆನೋ ಇಲ್ಲವೋ ನನ್ನನ್ನು ಹೀಗೆ ಪರೀಕ್ಷಿಸಿರಿ.”—ಮಲಾಕಿಯ 3:10.
1. (ಎ) ಸಾ.ಶ.ಪೂ. ಐದನೆಯ ಶತಮಾನದಲ್ಲಿ, ಯಾವ ಆಮಂತ್ರಣವನ್ನು ಯೆಹೋವನು ತನ್ನ ಜನರಿಗೆ ಕೊಟ್ಟನು? (ಬಿ) ಸಾ.ಶ. ಒಂದನೆಯ ಶತಮಾನದಲ್ಲಿ, ತೀರ್ಪಿಗಾಗಿ ಆಲಯಕ್ಕೆ ಯೆಹೋವನ ಬರುವಿಕೆಯಿಂದ ಏನು ಫಲಿತಾಂಶವಾಯಿತು?
ಸಾ.ಶ.ಪೂ. ಐದನೆಯ ಶತಮಾನದಲ್ಲಿ, ಇಸ್ರಾಯೇಲ್ಯರು ಯೆಹೋವನಿಗೆ ಅಪನಂಬಿಗಸ್ತರಾಗಿದ್ದರು. ಅವರು ದಶಮಾಂಶಗಳನ್ನು ತಡೆದುಹಿಡಿದಿದ್ದರು ಮತ್ತು ಅಯೋಗ್ಯ ಪಶುಗಳನ್ನು ಆಲಯಕ್ಕೆ ಅರ್ಪಣೆಗಳಾಗಿ ತಂದರು. ಆದಾಗ್ಯೂ, ಅವರು ಯಾವತ್ತೂ ದಶಮಾಂಶವನ್ನು ಭಂಡಾರಕ್ಕೆ ತೆಗೆದುಕೊಂಡು ಬಂದರೆ, ಸ್ಥಳಹಿಡಿಯಲಾಗದಷ್ಟು ಸುವರವನ್ನು ಸುರಿಯುವೆನೆಂದು ಯೆಹೋವನು ವಾಗ್ದಾನಿಸಿದ್ದನು. (ಮಲಾಕಿಯ 3:8-10) ಸುಮಾರು 500 ವರ್ಷಗಳ ತರುವಾಯ, ಯೆಹೋವನು, ಅವನ ಒಡಂಬಡಿಕೆಯ ದೂತನಾದ ಯೇಸುವಿನಿಂದ ಪ್ರತಿನಿಧಿಸಲ್ಪಟ್ಟವನಾಗಿ, ತೀರ್ಪಿಗಾಗಿ ಯೆರೂಸಲೇಮಿನ ಆಲಯಕ್ಕೆ ಬಂದನು. (ಮಲಾಕಿಯ 3:1) ಇಸ್ರಾಯೇಲು ಒಂದು ಜನಾಂಗದೋಪಾದಿ ಕೊರತೆಯುಳ್ಳದ್ದಾಗಿ ಕಂಡುಬಂತು, ಆದರೆ ಯೆಹೋವನ ಬಳಿಗೆ ಹಿಂತಿರುಗಿ ಬಂದ ಆ ವ್ಯಕ್ತಿಗಳು ಹೇರಳವಾಗಿ ಆಶೀರ್ವದಿಸಲ್ಪಟ್ಟರು. (ಮಲಾಕಿಯ 3:7) ಅವರು ಯೆಹೋವನ ಆತ್ಮಿಕ ಪುತ್ರರು, ಒಂದು ಹೊಸ ಸೃಷ್ಟಿ, “ದೇವರ ಇಸ್ರಾಯೇಲು” ಆಗುವಂತೆ ಅಭಿಷೇಕಿಸಲ್ಪಟ್ಟರು.—ಗಲಾತ್ಯ 6:16; ರೋಮಾಪುರ 3:25, 26.
2. ಮಲಾಕಿಯ 3:1-10 ರ ಎರಡನೆಯ ನೆರವೇರಿಕೆಯು ಯಾವಾಗ ನಡಿಯಲಿಕ್ಕಿತ್ತು, ಮತ್ತು ಇದರ ಸಂಬಂಧದಲ್ಲಿ ನಾವೇನು ಮಾಡಲು ಆಮಂತ್ರಿಸಲ್ಪಟ್ಟಿದ್ದೇವೆ?
2 ಇದರ ನಂತರ ಬಹುಮಟ್ಟಿಗೆ 1,900 ವರ್ಷಗಳು ದಾಟಿದ ಮೇಲೆ, 1914 ರಲ್ಲಿ, ಯೇಸು ದೇವರ ಸ್ವರ್ಗೀಯ ರಾಜ್ಯದಲ್ಲಿ ರಾಜನಾಗಿ ಸಿಂಹಾಸನಾರೂಢನಾದನು, ಮತ್ತು ಮಲಾಕಿಯ 3:1-10 ರ ದೈವ ಪ್ರೇರಿತ ಮಾತುಗಳು ಒಂದು ದ್ವಿತೀಯ ನೆರವೇರಿಕೆಯನ್ನು ಪಡೆಯಲಿಕ್ಕೆ ಸಿದ್ಧವಾಗಿದ್ದವು. ಈ ರೋಮಾಂಚಕರ ಘಟನೆಯ ಸಂಬಂಧದಲ್ಲಿ, ಕ್ರೈಸ್ತರು ಇಂದು ಯಾವತ್ತೂ ದಶಮಾಂಶವನ್ನು ಭಂಡಾರದೊಳಗೆ ತರುವಂತೆ ಆಮಂತ್ರಿಸಲ್ಪಟ್ಟಿದ್ದಾರೆ. ನಾವು ಹಾಗೆ ಮಾಡಿದರೆ, ಸ್ಥಳಹಿಡಿಯಲಾಗದಷ್ಟು ಸುವರಗಳಲ್ಲಿ ನಾವೂ ಆನಂದಿಸುವೆವು.
3. ಯೆಹೋವನ ಮುಂದೆ ದಾರಿಯನ್ನು ಸರಿಮಾಡುವ ಆ ದೂತನು ಯಾರಾಗಿದ್ದನು (ಎ) ಒಂದನೆಯ ಶತಮಾನದಲ್ಲಿ? (ಬಿ) ಒಂದನೆಯ ಲೋಕ ಯುದ್ಧಕ್ಕೆ ಮುಂಚೆ?
3 ಆತನ ಆಲಯಕ್ಕೆ ಬರುವ ಸಂಬಂಧದಲ್ಲಿ, ಯೆಹೋವನು ಅಂದದ್ದು: “ಇಗೋ, ನನ್ನ ದೂತನನ್ನು ಕಳುಹಿಸುತ್ತೇನೆ, ಆತನು ನನ್ನ ಮುಂದೆ ದಾರಿಯನ್ನು ಸರಿಮಾಡುವನು.” (ಮಲಾಕಿಯ 3:1) ಇದರ ಒಂದನೆಯ ಶತಮಾನದ ನೆರವೇರಿಕೆಯಾಗಿ, ಸ್ನಾನಿಕನಾದ ಯೋಹಾನನು ಪಾಪಗಳಿಗಾಗಿ ಪಶ್ಚಾತ್ತಾಪವನ್ನು ಸಾರುತ್ತಾ ಇಸ್ರಾಯೇಲಿಗೆ ಬಂದನು. (ಮಾರ್ಕ 1:2, 3) ಯೆಹೋವನು ತನ್ನ ಆಲಯಕ್ಕೆ ದ್ವಿತೀಯವಾಗಿ ಆಗಮಿಸುವ ಸಂಬಂಧದಲ್ಲಿ ಒಂದು ದಾರಿ ಸಿದ್ಧಮಾಡುವ ಕೆಲಸ ನಡಿಯಲಿಕ್ಕಿತ್ತೋ? ಹೌದು. ಒಂದನೆಯ ಲೋಕ ಯುದ್ಧಕ್ಕೆ ಮುಂಚಿನ ದಶಾಬ್ದಿಗಳಲ್ಲಿ, ಬೈಬಲ್ ವಿದ್ಯಾರ್ಥಿಗಳು ಶುದ್ಧವಾದ ಬೈಬಲ್ ಬೋಧನೆಯನ್ನು ಕಲಿಸುತ್ತಾ ಮತ್ತು ದೇವರನ್ನು ಅಗೌರವಿಸುವ ಸುಳ್ಳುಗಳಾದ ತ್ರಯೈಕತ್ವ ಮತ್ತು ನರಕಾಗ್ನಿಯಂಥ ಬೋಧನೆಗಳನ್ನು ಬಯಲುಪಡಿಸುತ್ತಾ ಲೋಕ ದೃಶ್ಯವನ್ನು ಪ್ರವೇಶಿಸಿದರು. ಅನ್ಯಜನಾಂಗಗಳ ಕಾಲವು 1914 ರಲ್ಲಿ ಅಂತ್ಯಗೊಳ್ಳುವುದೆಂದೂ ಅವರು ಎಚ್ಚರಿಸಿದರು. ಅನೇಕರು ಈ ಸತ್ಯದ ಜ್ಯೋತಿವಾಹಕರಿಗೆ ಪ್ರತಿಕ್ರಿಯೆ ತೋರಿಸಿದರು.—ಕೀರ್ತನೆ 43:3; ಮತ್ತಾಯ 5:14, 16.
4. ಕರ್ತನ ದಿನದ ಸಮಯದಲ್ಲಿ ಯಾವ ಪ್ರಶ್ನೆಯು ಇತ್ಯರ್ಥಗೊಳಿಸಲ್ಪಡಬೇಕಿತ್ತು?
4 ಯಾವುದನ್ನು ಬೈಬಲ್ “ಕರ್ತನ ದಿನ” ಎಂದು ಕರೆಯುತ್ತದೋ ಅದನ್ನು 1914 ನೆಯ ವರ್ಷವು ಪ್ರಾರಂಭಿಸಿತು. (ಪ್ರಕಟನೆ 1:10) ಆ ದಿನದಲ್ಲಿ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳನ್ನು” ಗುರುತಿಸುವುದು ಮತ್ತು ಅವನನ್ನು “ [ಯಜಮಾನನ] ಎಲ್ಲಾ ಆಸ್ತಿಯ ಮೇಲೆ” ನೇಮಿಸುವುದೂ ಸೇರಿದ್ದ ಬಹು ಮುಖ್ಯವಾದ ಫಟನೆಗಳು ಸಂಭವಿಸಲಿಕ್ಕಿದ್ದವು. (ಮತ್ತಾಯ 24:45-47) ಹಿಂದೆ 1914 ರಲ್ಲಿ, ಸಾವಿರಾರು ಚರ್ಚುಗಳು ತಾವು ಕ್ರೈಸ್ತರೆಂದು ಹೇಳಿಕೊಳ್ಳುತ್ತಿದ್ದವು. ಯಾವ ಗುಂಪು ಯಜಮಾನನಾದ ಯೇಸು ಕ್ರಿಸ್ತನಿಂದ, ನಂಬಿಗಸ್ತನೂ ವಿವೇಕಿಯೂ ಆದಂಥ ಆಳಾಗಿ ಅಂಗೀಕರಿಸಲ್ಪಡುವುದು? ಆ ಪ್ರಶ್ನೆಯು ಯೆಹೋವನು ಆಲಯಕ್ಕೆ ಬಂದಾಗ ಇತ್ಯರ್ಥಗೊಳಿಸಲ್ಪಡಲಿಕ್ಕಿತ್ತು.
ಆತ್ಮಿಕ ಆಲಯಕ್ಕೆ ಬರುವುದು
5, 6. (ಎ) ಯಾವ ಆಲಯಕ್ಕೆ ಯೆಹೋವನು ತೀರ್ಪಿಗಾಗಿ ಬಂದನು? (ಬಿ) ಕ್ರೈಸ್ತ ಪ್ರಪಂಚವು ಯೆಹೋವನಿಂದ ಯಾವ ತೀರ್ಪನ್ನು ಪಡೆಯಿತು?
5 ಆತನು ಬಂದದ್ದಾದರೂ ಯಾವ ಆಲಯಕ್ಕೆ? ಯೆರೂಸಲೇಮಿನ ಅಕ್ಷರಾರ್ಥ ಆಲಯಕ್ಕಲ್ಲವೆಂಬದು ಸ್ಫುಟ. ಆ ಆಲಯಗಳಲ್ಲಿ ಕೊನೆಯದ್ದು ಹಿಂದೆ ಸಾ.ಶ. 70 ರಲ್ಲಿ ನಾಶವಾಗಿ ಹೋಗಿತ್ತು. ಆದರೂ ಯೆಹೋವನಿಗೆ ಆ ಯೆರೂಸಲೇಮಿನ ದೇವಾಲಯದಿಂದ ಮುನ್ಸೂಚಿಸಲ್ಪಟ್ಟ ಒಂದು ಮಹಾ ಆಲಯವು ಇದೆ. ಪೌಲನು ಈ ಮಹಾ ಆಲಯದ ಕುರಿತು ಹೇಳಿದ್ದನು ಮತ್ತು ಪರಲೋಕದಲ್ಲಿ ಒಂದು ಪವಿತ್ರಸ್ಥಾನದಿಂದ ಮತ್ತು ಈ ಭೂಮಿಯಲ್ಲಿ ಒಂದು ಅಂಗಣದಿಂದ ಕೂಡಿರುವ ಅದು ನಿಜವಾಗಿಯೂ ಎಷ್ಟು ಮಹತ್ತಾಗಿದೆ ಎಂದು ತೋರಿಸಿದ್ದನು. (ಇಬ್ರಿಯ 9:11, 12, 24; 10:19, 20) ಯೆಹೋವನು ಒಂದು ತೀರ್ಪಿನ ಕೆಲಸಕ್ಕಾಗಿ ಬಂದದ್ದು ಈ ಮಹಾ ಆತ್ಮಿಕ ಆಲಯಕ್ಕೆನೇ.—ಹೋಲಿಸಿರಿ ಪ್ರಕಟನೆ 11:1; 15:8.
6 ಇದು ಸಂಭವಿಸಿದ್ದು ಯಾವಾಗ? ದೊರೆಯುವ ಗಣನೀಯ ಪ್ರಮಾಣದ ರುಜುವಾತಿಗೆ ಅನುಸಾರವಾಗಿ, 1918 ರಲ್ಲಿ.a ಫಲಿತಾಂಶವೇನಾಯಿತು? ಕ್ರೈಸ್ತ ಪ್ರಪಂಚದ ವಿಷಯದಲ್ಲಾದರೋ, ಯಾವುದರ ಹಸ್ತಗಳು ರಕ್ತದಿಂದ ತೊಯ್ದು ತೊಟ್ಟಿಕ್ಕುತ್ತಿದ್ದವೋ ಅಂಥ ಒಂದು ಸಂಸ್ಥೆಯಾಗಿ, ಧನಿಕರೊಂದಿಗೆ ಮೈತ್ರಿಬೆಳೆಸಿ ಬಡವರನ್ನು ಗೋಳುಗುಟ್ಟಿಸುತ್ತಾ, ಸತ್ಯಾರಾಧನೆಯನ್ನು ಪಾಲಿಸುವ ಬದಲಾಗಿ ವಿಧರ್ಮಿ ಬೋಧನೆಗಳನ್ನು ಕಲಿಸುತ್ತಾ, ಈ ಲೋಕಕ್ಕೆ ತನ್ನನ್ನು ವೇಶ್ಯೆಯಾಗಿ ಮಾಡಿಕೊಂಡ ಒಂದು ಭ್ರಷ್ಟ ಧಾರ್ಮಿಕ ವ್ಯವಸ್ಥೆಯಾಗಿ ಯೆಹೋವನು ಕಂಡನು. (ಯಾಕೋಬ 1:27; 4:4) ಮಲಾಕಿಯನ ಮೂಲಕ ಯೆಹೋವನು ಹೀಗೆ ಎಚ್ಚರಿಸಿದ್ದನು: “ಮಾಟಗಾರ, ಸೂಳೆಗಾರ, ಸುಳ್ಳುಸಾಕ್ಷಿ, ಕೂಲಿಹಿಡಿದು ಕೂಲಿಯವನನ್ನು ಮೋಸಪಡಿಸುವವನು, ವಿಧವೆಯರನ್ನೂ ಅನಾಥರನ್ನೂ ಬಾಧಿಸುವವನು, . . . ಇವರೆಲ್ಲರಿಗೆ ವಿರುದ್ಧವಾಗಿ ನಾನು ಶೀಘ್ರ ಸಾಕ್ಷಿಯಾಗಿರುವೆನು.” (ಮಲಾಕಿಯ 3:5) ಕ್ರೈಸ್ತ ಪ್ರಪಂಚವು ಇದೆಲ್ಲವನ್ನು, ಇದಕ್ಕಿಂತಲೂ ಹೆಚ್ಚನ್ನು ಮಾಡಿದೆ. ಸುಳ್ಳುಧರ್ಮದ ಲೋಕವ್ಯಾಪಕ ಭವನವಾದ ಮಹಾ ಬಾಬೆಲಿನ ಉಳಿದ ಭಾಗದೊಂದಿಗೆ ಇದನ್ನು ಸಹ ಯೆಹೋವನು ನಾಶನಕ್ಕೆ ಗುರಿಪಡಿಸಿದ್ದಾನೆಂದು 1919 ರೊಳಗೆ ಸ್ಪಷ್ಟವಾಗಿಗಿ ತೋರಿಬಂತು. ಅಂದಿನಿಂದ ಹಿಡಿದು, ಸಹೃದಯದ ಜನರಿಗೆ ಕರೆಯು ಹೊರಟುಬಂತು: “ನನ್ನ ಪ್ರಜೆಗಳೇ, ಅವಳನ್ನು ಬಿಟ್ಟುಬನ್ನಿರಿ.”—ಪ್ರಕಟನೆ 18:1, 4.
7. ಯಾರನ್ನು ಯೇಸುವು ತನ್ನ ನಂಬಿಗಸ್ತನೂ ವಿವೇಕಿಯೂ ಆದಂಥ ಆಳಾಗಿ ಅಂಗೀಕರಿಸಿದನು?
7 ಹೀಗಿರಲಾಗಿ, ನಂಬಿಗಸ್ತನೂ ವಿವೇಕಿಯೂ ಆಗಿದ್ದ ಆಳು ಯಾರು? ಒಂದನೆಯ ಶತಮಾನದಲ್ಲಿ, ಸ್ನಾನಿಕ ಯೋಹಾನ ಮತ್ತು ಒಡಂಬಡಿಕೆಯ ದೂತನಾದ ಯೇಸುವಿನ ಸಾಕ್ಷಿಕಾರ್ಯಕ್ಕೆ ಪ್ರತಿಕ್ರಿಯೆ ತೋರಿಸಿದ ಒಂದು ಚಿಕ್ಕ ಗುಂಪಿನೊಂದಿಗೆ ಅದು ಆರಂಭಿಸಿತು. ನಮ್ಮ ಶತಮಾನದಲ್ಲಿ, 1914 ಕ್ಕೆ ನಡಿಸಿದ ವರ್ಷಗಳಲ್ಲಿ ಬೈಬಲ್ ವಿದ್ಯಾರ್ಥಿಗಳ ಪೀಠಿಕಾರೂಪದ ಕೆಲಸಕ್ಕೆ ಪ್ರತಿಕ್ರಿಯೆ ತೋರಿಸಿದ ಕೆಲವೇ ಸಾವಿರ ಮಂದಿ ಅವರಾಗಿದ್ದರು. ಇವರು ಮೊದಲನೆಯ ಲೋಕ ಯುದ್ಧದ ಸಮಯದಲ್ಲಿ ಕಠಿಣ ಸಂಕಟಗಳನ್ನು ತಾಳಿಕೊಂಡರು, ಆದರೆ ತಮ್ಮ ಹೃದಯವು ಯೆಹೋವನೊಂದಿಗೆ ಇದೆ ಎಂಬದನ್ನು ಅವರು ಪ್ರದರ್ಶಿಸಿದರು.
ಒಂದು ಶುದ್ಧೀಕರಿಸುವ ಕೆಲಸ
8, 9. ಹಿಂದೆ 1918 ರಲ್ಲಿ, ಯಾವ ವಿಧಗಳಲ್ಲಿ ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿಗೆ ಶುದ್ಧೀಕರಣದ ಅಗತ್ಯವಿತ್ತು, ಮತ್ತು ಈ ಸಂಬಂಧದಲ್ಲಿ ಯಾವ ವಾಗ್ದಾನವನ್ನು ಯೆಹೋವನು ಮಾಡಿದ್ದನು?
8 ಆದರೂ, ಈ ಗುಂಪಿಗೆ ಕೂಡ ಶುದ್ಧೀಕರಿಸಲ್ಪಡುವ ಅಗತ್ಯವಿತ್ತು. ಅವರೊಂದಿಗೆ ಜತೆಗೂಡಿದ್ದ ಕೆಲವರು ನಂಬಿಕೆಯ ವೈರಿಗಳಾಗಿ ಪರಿಣಮಿಸಿದರು ಮತ್ತು ಅವರನ್ನು ತೊಲಗಿಸಿಬಿಡಬೇಕಾಗಿತ್ತು. (ಫಿಲಿಪ್ಪಿ 3:18) ಇತರರಾದರೋ ಯೆಹೋವನ ಸೇವೆಯಲ್ಲಿ ಒಳಗೂಡಿರುವ ಜವಾಬ್ದಾರಿಕೆಗಳನ್ನು ಹೊರಲು ಮನಸ್ಸಿಲ್ಲದವರಾಗಿ, ಮಾರ್ಗತಪ್ಪಿಹೋದರು. (ಇಬ್ರಿಯ 2:1) ಅಷ್ಟಲ್ಲದೆ, ತೊಡೆದು ಹಾಕಲ್ಪಡಬೇಕಾದ ಕೆಲವು ಬಬಿಲೋನ್ಯ ಪದ್ಧತಿಗಳು ಇನ್ನೂ ಉಳಿದಿದ್ದವು. ಸಂಸ್ಥಾಪನಾ ರೂಪದಲ್ಲಿಯೂ ನಂಬಿಗಸ್ತನೂ ವಿವೇಕಿಯೂ ಆದಂಥ ಆಳನ್ನು ಶುದ್ಧೀಕರಿಸುವ ಅಗತ್ಯವಿತ್ತು. ಈ ಲೋಕದ ಕಡೆಗೆ ತಾಟಸ್ಥ್ಯದ ಒಂದು ಯೋಗ್ಯ ಸ್ಥಾನವನ್ನು ಕಲಿಯಬೇಕಿತ್ತು ಮತ್ತು ಅನ್ವಯಿಸಬೇಕಿತ್ತು. ಮತ್ತು ಲೋಕವು ಅಧಿಕಾಧಿಕವಾಗಿ ಭ್ರಷ್ಟವಾಗುತ್ತಾ ಬಂದಾಗ, ನೈತಿಕ ಮತ್ತು ಆತ್ಮಿಕ ಅಶುದ್ಧತೆಗಳನ್ನು ಸಭೆಗಳಿಂದ ಹೊರಗಿಡಲು ಪರಿಶ್ರಮದ ಹೋರಾಟವನ್ನು ನಡಿಸುವ ಅಗತ್ಯತೆ ಅವರಿಗಿತ್ತು.—ಹೋಲಿಸಿರಿ ಯೂದ 3, 4.
9 ಹೌದು, ಶುದ್ಧೀಕರಿಸುವಿಕೆ ಬೇಕಾಗಿತ್ತು, ಆದರೆ ಯೆಹೋವನು ಸಿಂಹಾಸನಾರೂಢ ಯೇಸುವಿನ ಕುರಿತು ಪ್ರೀತಿಯಿಂದ ವಾಗ್ದಾನಿಸಿದ್ದು: “ಬೆಳ್ಳಿಯನ್ನು ಶೋಧಿಸುವ ಅಕ್ಕಸಾಲಿಗನಂತೆ ಕುಳಿತು ಲೇವಿ ವಂಶದವರನ್ನು ಶೋಧಿಸಿ ಬೆಳ್ಳಿಬಂಗಾರಗಳನ್ನೋ ಎಂಬಂತೆ ಶುದ್ಧೀಕರಿಸುವನು. ಅವರು ಸದ್ಧರ್ಮಿಗಳಾಗಿ ಯೆಹೋವನಿಗೆ ನೈವೇದ್ಯಗಳನ್ನು ತಂದೊಪ್ಪಿಸುವರು.” (ಮಲಾಕಿಯ 3:3) ಈ ಒಡಂಬಡಿಕೆಯ ದೂತನ ಮೂಲಕ ಯೆಹೋವನು ಇದನ್ನು 1918 ರಲ್ಲಿ ಆರಂಭಿಸುತ್ತಾ, ತನ್ನ ವಾಗ್ದಾನವನ್ನು ನೆರವೇರಿಸಿದನು ಮತ್ತು ತನ್ನ ಜನರನ್ನು ಶುದ್ಧೀಕರಿಸಿದನು.
10. ದೇವಜನರು ಯಾವ ರೀತಿಯ ಅರ್ಪಣೆಗಳನ್ನು ತಂದರು, ಮತ್ತು ಯೆಹೋವನು ಅವರಿಗೆ ಯಾವ ಆಮಂತ್ರಣವನ್ನು ಕೊಟ್ಟನು?
10 ಬೆಳ್ಳಿಯನ್ನು ಶೋಧಿಸುವ ಅಕ್ಕಸಾಲಿಗನೋಪಾದಿ ಯೆಹೋವನ ಕ್ರಿಯೆಯಿಂದ ಕ್ರಿಸ್ತನ ಅಭಿಷಿಕ್ತ ಸಹೋದರರು ಮತ್ತು ತದನಂತರ ಯೆಹೋವನ ಸೇವೆಯಲ್ಲಿ ಅವರನ್ನು ಜತೆಗೂಡಿದ ಮಹಾ ಸಮೂಹದವರೆಲ್ಲರು ಪ್ರಯೋಜನ ಹೊಂದಿದರು. (ಪ್ರಕಟನೆ 7:9, 14, 15) ಅವರು ಸದ್ಧರ್ಮಿಗಳಾಗಿ ನೈವೇದ್ಯಗಳನ್ನು ಅರ್ಪಿಸುತ್ತಾ ಒಂದು ಸಂಸ್ಥೆಯೋಪಾದಿ ಬಂದರು, ಮತ್ತು ಇನ್ನೂ ಬರುತ್ತಿದ್ದಾರೆ. ಮತ್ತು ಅವರ ನೈವೇದ್ಯವು “ಪೂರ್ವದಿನಗಳಲ್ಲಿ, ಪುರಾತನ ಕಾಲದಲ್ಲಿ ಯೆಹೋವನಿಗೆ ಮೆಚ್ಚಿಕೆಯಾಗಿದ್ದಂತೆ ಆಗಿರು” ತ್ತದೆ. (ಮಲಾಕಿಯ 3:4) ಯೆಹೋವನು ಪ್ರವಾದನಾರೂಪವಾಗಿ ಆಮಂತ್ರಿಸಿದ್ದು ಇವರನ್ನೇ: “ನನ್ನ ಆಲಯವು ಆಹಾರಶೂನ್ಯವಾಗದಂತೆ ನೀವು ದಶಮಾಂಶ ಯಾವತ್ತನ್ನೂ ಭಂಡಾರಕ್ಕೆ ತೆಗೆದುಕೊಂಡು ಬನ್ನಿರಿ; ನಾನು ಪರಲೋಕದ ದ್ವಾರಗಳನ್ನು ತೆರೆದು ನಿಮ್ಮಲ್ಲಿ ಸ್ಥಳಹಿಡಿಯಲಾಗದಷ್ಟು ಸುವರಗಳನ್ನು ಸುರಿಯುವೆನೋ ಇಲ್ಲವೋ ನನ್ನನ್ನು ಹೀಗೆ ಪರೀಕ್ಷಿಸಿರಿ.”—ಮಲಾಕಿಯ 3:10.
ಅರ್ಪಣೆಗಳು ಮತ್ತು ದಶಮಾಂಶಗಳು
11. ಮೋಶೆಯ ನಿಯಮ ವ್ಯವಸ್ಥೆಗೆ ಅನುಸಾರವಾದ ಅರ್ಪಣೆಗಳು ಇನ್ನು ಮುಂದೆ ಆವಶ್ಯವಿಲ್ಲವೇಕೆ?
11 ಮಲಾಕಿಯನ ದಿನಗಳಲ್ಲಿ ದೇವಜನರು ದವಸಧಾನ್ಯ, ಹಣ್ಣುಹಂಪಲು, ಮತ್ತು ಪಶುಗಳೇ ಮುಂತಾದ ಅಕ್ಷರಾರ್ಥಕವಾದ ಅರ್ಪಣೆಗಳನ್ನು ಮತ್ತು ದಶಮಾಂಶಗಳನ್ನು ತಂದಿದ್ದರು. ಯೇಸುವಿನ ದಿನಗಳಲ್ಲಿ ಸಹ, ನಂಬಿಗಸ್ತ ಇಸ್ರಾಯೇಲ್ಯರು ಆಲಯದಲ್ಲಿ ಅಕ್ಷರಾರ್ಥಕ ಅರ್ಪಣೆಗಳನ್ನು ಮಾಡಿದ್ದರು. ಆದರೂ, ಯೇಸುವಿನ ಮರಣಾನಂತರ ಅವೆಲ್ಲವೂ ಬದಲಾದವು. ನಿಯಮಶಾಸ್ತ್ರವು ವಿಶಿಷ್ಟ ಭೌತಿಕ ಅರ್ಪಣೆಗಳನ್ನು ಮತ್ತು ದಶಮಾಂಶಗಳನ್ನು ನೀಡುವ ಆಜ್ಞೆಯೊಂದಿಗೆ ರದ್ದುಮಾಡಲ್ಪಟ್ಟಿತು. (ಎಫೆಸ 2:15) ನಿಯಮಶಾಸ್ತ್ರದ ಕೆಳಗಿನ ಸಮರ್ಪಣೆಗಳ ಪ್ರವಾದನಾ ಬಿಂಬವನ್ನು ಯೇಸು ನೆರವೇರಿಸಿದನು. (ಎಫೆಸ 5:2; ಇಬ್ರಿಯ 10:1, 2, 10) ಹೀಗಿರಲಾಗಿ, ಕ್ರೈಸ್ತರು ಯಾವ ರೀತಿಯಲ್ಲಿ ಅರ್ಪಣೆಗಳನ್ನೂ ದಶಮಾಂಶಗಳನ್ನೂ ತರಬಲ್ಲರು?
12. ಕ್ರೈಸ್ತರು ಯಾವ ರೀತಿಯ ಆತ್ಮಿಕ ಅರ್ಪಣೆಗಳನ್ನು ಮತ್ತು ಯಜ್ಞಗಳನ್ನು ಮಾಡುತ್ತಾರೆ?
12 ಅವರ ಅರ್ಪಣೆಗಳಾದರೋ ಮಹತ್ತಾಗಿ ಒಂದು ಆತ್ಮಿಕ ರೀತಿಯದ್ದಾಗಿವೆ. (ಹೋಲಿಸಿರಿ ಫಿಲಿಪ್ಪಿ 2:17; 2 ತಿಮೊಥೆಯ 4:6.) ದೃಷ್ಟಾಂತಕ್ಕಾಗಿ, ಪೌಲನು ಸಾರುವ ಕಾರ್ಯವನ್ನು ಒಂದು ಅರ್ಪಣೆಯಾಗಿ ಮಾತಾಡುತ್ತಾ ಅಂದದ್ದು: “ಆತನ ನಾಮದ ಬಹಿರಂಗ ಅರಿಕೆಯನ್ನು ಮಾಡುವ ತುಟೀಫಲವಾದ ಸ್ತೋತ್ರ ಯಜ್ಞವನ್ನು ನಾವು ದೇವರಿಗೆ ಎಡೆಬಿಡದೆ ಸಮರ್ಪಿಸೋಣ.” ಆತನು ಇನ್ನೊಂದು ಆತ್ಮಿಕ ರೀತಿಯ ಯಜ್ಞಕ್ಕೆ ಕೈತೋರಿಸುತ್ತಾ, ಪ್ರೇರೇಪಿಸಿದ್ದು: “ಇದಲ್ಲದೆ ಪರೋಪಕಾರವನ್ನೂ ಧರ್ಮಮಾಡುವದನ್ನೂ ಮರೆಯಬೇಡಿರಿ; ಇವೇ ದೇವರಿಗೆ ಸಮರ್ಪಕವಾದ ಯಜ್ಞಗಳು.” (ಇಬ್ರಿಯ 13:15, 16, NW) ಹೆತ್ತವರು ಮಕ್ಕಳನ್ನು ಪಯನೀಯರ ಸೇವೆಗಿಳಿಯಲು ಉತ್ತೇಜಿಸುವಾಗ, ಅವರು ಯೆಹೋವನಿಗೆ ಅವರನ್ನು ಅರ್ಪಿಸುತ್ತಾರೆಂದು ಹೇಳಬಹುದು; ತನಗೆ ವಿಜಯವನ್ನು ಕೊಟ್ಟ ದೇವರಿಗೆ ಯೆಪ್ತಾಹನು ತನ್ನ ಮಗಳನ್ನು ಹೇಗೆ “ಹೋಮವಾಗಿ” ಅರ್ಪಿಸಿದನೋ ಅಂತೆಯೇ.—ನ್ಯಾಯಸ್ಥಾಪಕರು 11:30, 31, 39.
13. ಕ್ರೈಸ್ತರು ತಮ್ಮ ಆದಾಯದ ಅಕ್ಷರಾರ್ಥಕ ಹತ್ತನೆಯ ಒಂದಂಶವನ್ನು ಕೊಡುವಂತೆ ಆವಶ್ಯಪಡಿಸಿಲ್ಲವೇಕೆ?
13 ದಶಮಾಂಶಗಳ ಕುರಿತಾದರೂ ಏನು? ಕ್ರೈಸ್ತ ಪ್ರಪಂಚದ ಕೆಲವು ಚರ್ಚುಗಳಲ್ಲಿ ಏನು ಮಾಡಲಾಗುತ್ತದೋ ಅದಕ್ಕೆ ಹೋಲಿಕೆಯಲ್ಲಿ, ಕ್ರೈಸ್ತರು ತಮ್ಮ ಭೌತಿಕ ಆದಾಯದ ಹತ್ತನೆಯ ಒಂದಂಶವನ್ನು ಬದಿಗಿಟ್ಟು, ಅದನ್ನು ಯೆಹೋವನ ಸಂಸ್ಥೆಗೆ ಕೊಡುವ ಹಂಗಿಗೆ ಒಳಗಾಗಿದ್ದಾರೋ? ಇಲ್ಲ, ಅದರ ಆವಶ್ಯಕತೆ ಇಲ್ಲ. ಕ್ರೈಸ್ತರಿಗಾಗಿ ಅಂಥ ಒಂದು ನಿಯಮವನ್ನು ಸೂಚಿಸುವ ಶಾಸ್ತ್ರವಚನವೂ ಇಲ್ಲ. ಯೂದಾಯದ ಬಡ ಕ್ರೈಸ್ತರಿಗಾಗಿ ಪೌಲನು ದಾನಗಳನ್ನು ಒಟ್ಟುಮಾಡುತ್ತಿದ್ದಾಗ, ಕೊಡಲ್ಪಡಬೇಕಾದ ಒಂದು ವಿಶಿಷ್ಟ ಪ್ರತಿಶತವನ್ನು ಅವನು ತಿಳಿಸಿರಲಿಲ್ಲ. ಬದಲಾಗಿ, ಅವನಂದದ್ದು: “ಪ್ರತಿಯೊಬ್ಬನು ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲಾತ್ಕಾರದಿಂದಾಗಲಿ ಯಾರೂ ಕೊಡಬಾರದು; ಯಾಕಂದರೆ ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು.” (2 ಕೊರಿಂಥ 9:7) ವಿಶೇಷ ಶುಶ್ರೂಷೆಗಳಲ್ಲಿರುವವರ ಕುರಿತು ಮಾತಾಡುವಲ್ಲಿ, ಕೆಲವರು ಇಷ್ಟಪೂರ್ವಕವಾಗಿ ಕೊಡಲ್ಪಟ್ಟ ದಾನಗಳಿಂದ ಬೆಂಬಲಿಸಲ್ಪಡುವುದು ತೀರಾ ಯೋಗ್ಯವಾಗಿದೆಯೆಂದು ಪೌಲನು ತೋರಿಸಿದರೂ, ತಾನು ಕೆಲಸಮಾಡಿ, ತನ್ನ ಪೋಷಣೆಯನ್ನು ಮಾಡಿಕೊಳ್ಳಲು ಅವನು ಸಿದ್ಧನಾಗಿದ್ದನು. (ಅ. ಕೃತ್ಯಗಳು 18:3, 4; 1 ಕೊರಿಂಥ 9:13-15) ಈ ಉದ್ದೇಶಕ್ಕಾಗಿ ನೇಮಿತವಾದ ದಶಮಾಂಶಗಳು ಇರಲಿಲ್ಲ.
14. (ಎ) ಒಂದು ದಶಮಾಂಶವನ್ನು ತರುವುದು, ನಮ್ಮೆಲ್ಲವನ್ನು ಯೆಹೋವನಿಗೆ ಕೊಡುವುದನ್ನು ಪ್ರತಿನಿಧಿಸುವುದಿಲ್ಲವೇಕೆ? (ಬಿ) ದಶಮಾಂಶದಿಂದ ಯಾವುದು ಪ್ರತಿನಿಧಿಸಲ್ಪಟ್ಟಿದೆ?
14 ದಶಮಾಂಶವು ಕ್ರೈಸ್ತರಿಗೆ ಯಾವುದೋ ಒಂದು ವಿಷಯವನ್ನು ಸೂಚಿಸುತ್ತದೆ ಅಥವಾ ಪ್ರತಿನಿಧಿಸುತ್ತದೆ ಎಂಬದು ಸ್ಫುಟ. ಅದು ಹತ್ತನೆಯ ಒಂದಂಶವಾಗಿರುವುದರಿಂದ ಮತ್ತು ಬೈಬಲಿನಲ್ಲಿ ಹತ್ತು ಅಂಕೆಯು ಅನೇಕವೇಳೆ ಲೌಕಿಕ ಪೂರ್ಣತೆಯನ್ನು ಸೂಚಿಸುವುದರಿಂದ, ನಮ್ಮೆಲ್ಲವನ್ನು ನಾವು ಯೆಹೋವನಿಗೆ ಕೊಡುವುದನ್ನು ಅದು ಸೂಚಿಸುತ್ತದೋ? ಇಲ್ಲ. ನಾವು ಯೆಹೋವನಿಗೆ ನಮ್ಮನ್ನು ಸಮರ್ಪಿಸಿಕೊಂಡು, ಅದನ್ನು ನೀರಿನ ದೀಕ್ಷಾಸ್ನಾನದ ಮೂಲಕ ಸೂಚಿಸುವಾಗ, ಅದು ನಮ್ಮೆಲ್ಲವನ್ನು ನಾವು ಆತನಿಗೆ ಕೊಡುವ ಸಮಯವಾಗಿದೆ. ನಮ್ಮ ಸಮರ್ಪಣೆಯ ಸಮಯದಿಂದ, ಆವಾಗಲೇ ಯೆಹೋವನಿಗೆ ಸೇರದೆ ಇರುವ ಯಾವುದೂ ನಮ್ಮಲ್ಲಿಲ್ಲ. ಆದರೂ, ಯಾವುದು ತಮ್ಮದೋ ಅದನ್ನು ಕೊಟ್ಟುಬಿಡುವಂತೆ ಯೆಹೋವನು ವ್ಯಕ್ತಿಗಳಿಗೆ ಅವಕಾಶಕೊಡುತ್ತಾನೆ. ಆದ್ದರಿಂದ ದಶಮಾಂಶವು, ನಾವು ಯೆಹೋವನೆಡೆಗೆ ನಮ್ಮ ಪ್ರೀತಿಯ ಮತ್ತು ನಾವಾತನಿಗೆ ಸೇರಿದವರೆಂಬ ನಿಜತ್ವದ ನಮ್ಮ ಅಂಗೀಕಾರದ ಸೂಚಕವಾಗಿ ತರುವ, ಅಥವಾ ಯೆಹೋವನ ಸೇವೆಯಲ್ಲಿ ಉಪಯೋಗಿಸುವ, ನಮ್ಮದಾಗಿರುವ ವಸ್ತುಗಳ ಒಂದು ಅಂಶವನ್ನು ಪ್ರತಿನಿಧಿಸುತ್ತದೆ. ಆಧುನಿಕ ದಿನದ ದಶಮಾಂಶವು ಕೇವಲ ಹತ್ತನೆಯ ಒಂದಂಶವಾಗಿರಬೇಕೆಂದಿಲ್ಲ. ಕೆಲವು ಸಂದರ್ಭಗಳಲ್ಲಿ ಅದು ಕಡಿಮೆಯೂ ಆಗಿರುವುದು. ಬೇರೆಯವರಲ್ಲಿ ಅದು ಹೆಚ್ಚು ಆಗಿರುವುದು. ಪ್ರತಿ ವ್ಯಕ್ತಿಯು ತನ್ನ ಹೃದಯವು ಪ್ರಚೋದಿಸುವ ಪ್ರಕಾರ ಮತ್ತು ತನ್ನ ಪರಿಸ್ಥಿತಿಗಳು ಅನುಮತಿಸುವ ಪ್ರಕಾರ ಕೊಡುತ್ತಾನೆ.
15, 16. ನಮ್ಮ ಆತ್ಮಿಕ ದಶಮಾಂಶದಲ್ಲಿ ಏನು ಒಳಗೂಡಿದೆ?
15 ಈ ಆತ್ಮಿಕ ದಶಮಾಂಶದಲ್ಲಿ ಏನೆಲ್ಲಾ ಸೇರಿದೆ? ಒಂದು ಸಂಗತಿಯೇನಂದರೆ, ನಾವು ಯೆಹೋವನಿಗೆ ನಮ್ಮ ಸಮಯ ಮತ್ತು ಶಕ್ತಿಯನ್ನು ಕೊಡುತ್ತೇವೆ. ಕೂಟಗಳಲ್ಲಿ, ಸಮ್ಮೇಳನ ಮತ್ತು ಅಧಿವೇಶನಗಳನ್ನು ಹಾಜರಾಗುವುದರಲ್ಲಿ, ಮತ್ತು ಕ್ಷೇತ್ರ ಸೇವೆಯಲ್ಲಿ ನಾವು ಕಳೆಯುವ ಸಮಯ ಇವೆಲ್ಲವೂ ಯೆಹೋವನಿಗೆ ನಾವು ಕೊಡುವ ಒಂದು ವಿಷಯವಾಗಿದೆ—ನಮ್ಮ ದಶಮಾಂಶದ ಒಂದು ಭಾಗವಾಗಿದೆ. ರೋಗಿಗಳನ್ನು ಸಂದರ್ಶಿಸುವುದರಲ್ಲಿ ಮತ್ತು ಇತರರಿಗೆ ಸಹಾಯ ಮಾಡುವುದರಲ್ಲಿ ನಾವು ಕಳೆಯುವ ಸಮಯ ಮತ್ತು ಶಕ್ತಿಯು ಸಹ ನಮ್ಮ ದಶಮಾಂಶದ ಭಾಗವಾಗಿವೆ. ತದ್ರೀತಿ, ಸಭಾಗೃಹಗಳನ್ನು ಕಟ್ಟುವುದರಲ್ಲಿ ನೆರವಾಗುವುದು ಮತ್ತು ಹೋಲನ್ನು ದುರುಸ್ತಿಯಲಿಡ್ಲುವ ಕೆಲಸದಲ್ಲಿ ಮತ್ತು ಶುಚಿಮಾಡುವುದರಲ್ಲಿ ಪಾಲುಗಾರರಾಗುವುದೂ ಅದರ ಒಂದು ಭಾಗವು.
16 ನಮ್ಮ ದಶಮಾಂಶದಲ್ಲಿ ನಮ್ಮ ಆರ್ಥಿಕ ಕಾಣಿಕೆಗಳೂ ಸೇರಿರುತ್ತವೆ. ಇತ್ತೀಚಿನ ವರ್ಷಗಳಲ್ಲಿ ಯೆಹೋವನ ಸಂಸ್ಥೆಯ ಅಸಾಧಾರಣವಾದ ವೃದ್ಧಿಯಿಂದಾಗಿ, ಆರ್ಥಿಕ ಹಂಗುಗಳು ಅಧಿಕವಾಗಿವೆ. ಹೊಸ ರಾಜ್ಯ ಸಭಾಗೃಹಗಳು ಬೇಕಾಗಿವೆ, ಜೊತೆಯಲ್ಲಿ ಹೊಸ ಬ್ರಾಂಚ್ ಸೌಕರ್ಯಗಳು ಮತ್ತು ಹೊಸ ಎಸೆಂಬ್ಲಿ ಹೋಲ್ಗಳು, ಹಾಗೂ ಈ ಮೊದಲೇ ಕಟ್ಟಿದವುಗಳನ್ನು ದುರುಸ್ತಿಯಲಿಡ್ಲುವ ಅಗತ್ಯತೆ ಇದೆ. ವಿಶೇಷ ಸೇವೆಗಾಗಿ ತಮ್ಮನ್ನು ದೊರಕಿಸಿಕೊಂಡವರ—ಹಾಗೆ ಮಾಡಲು ಆಗಾಗ್ಯೆ ಮಹಾ ವೈಯಕ್ತಿಕ ತ್ಯಾಗಗಳನ್ನು ಮಾಡಿರುವವರ—ಖರ್ಚುಗಳನ್ನು ಆವರಿಸುವುದು ಸಹ ಒಂದು ದುರ್ದಮ ಪಂಥಾಹ್ವಾನವಾಗಿದೆ. ಮಿಷನೆರಿಗಳು, ಸಂಚಾರ ಮೇಲ್ವಿಚಾರಕರು, ಮತ್ತು ವಿಶೇಷ ಪಯನೀಯರರನ್ನು ನೋಡಿಕೊಳ್ಳಲು ಮಾತ್ರವೇ 1991 ರಲ್ಲಿ 4 ಕೋಟಿಗಿಂತ ಹೆಚ್ಚು ಅಮೆರಿಕನ್ ಡಾಲರುಗಳು ವೆಚ್ಚವಾಗಿದ್ದವು. ಇವೆಲ್ಲವು ಸ್ವಇಷ್ಟದ ದಾನದ ಮೂಲಕ ಒದಗಿಸಲ್ಪಟ್ಟಿದ್ದವು.
17. ನಮ್ಮ ಆತ್ಮಿಕ ದಶಮಾಂಶವಾಗಿ ನಾವೀಗ ಏನನ್ನು ಕೊಡಬೇಕು?
17 ನಮ್ಮ ಆತ್ಮಿಕ ದಶಮಾಂಶವಾಗಿ ನಾವೀಗ ಏನನ್ನು ಕೊಡಬೇಕು? ಒಂದು ಪ್ರತಿಶತವನ್ನು ಯೆಹೋವನು ಇಟ್ಟಿರುವುದಿಲ್ಲ. ಆದಾಗ್ಯೂ, ಸಮರ್ಪಣೆಯ ಒಂದು ಭಾವವು, ಯೆಹೋವನೆಡೆಗೆ ಮತ್ತು ಸಹೋದರರೆಡೆಗೆ ಒಂದು ನಿಜ ಪ್ರೀತಿಯು, ಹಾಗೂ ಜೀವಗಳನ್ನು ರಕ್ಷಿಸಲಿಕ್ಕಿದೆ ಎಂಬ ಗ್ರಹಿಕೆಯಿಂದ ಬರುವ ಒಂದು ಜರೂರಿಯ ಭಾವವು, ನಮ್ಮ ಪೂರ್ಣ ಆತ್ಮಿಕ ದಶಮಾಂಶವನ್ನು ತರುವಂತೆ ನಮ್ಮನ್ನು ಉತ್ತೇಜಿಸುತ್ತದೆ. ಸಾಧ್ಯವಾದಷ್ಟು ಮಟ್ಟಿಗೆ ಯೆಹೋವನನ್ನು ಸೇವಿಸುವಂತೆ ನಾವು ಮಹತ್ತಮವಾಗಿ ಪ್ರಚೋದಿಸಲ್ಪಡುತ್ತೇವೆ. ನಾವು ನಮ್ಮನ್ನು ಮತ್ತು ನಮ್ಮ ಸಂಪತ್ತುಗಳನ್ನು ಜಿಪುಣತನದಿಂದ ಅಥವಾ ವ್ಯಸನದಿಂದ ಕೊಟ್ಟದ್ದಾದರೆ, ಇದು ದೇವರಿಂದ ನಾವು ಕದ್ದುಕೊಳ್ಳುವಿಕೆಗೆ ಸಮಾನವಾಗಿದೆ.—ಹೋಲಿಸಿರಿ ಲೂಕ 21:1-4.
ಸ್ಥಳಹಿಡಿಯಲಾಗದಷ್ಟು ಸುವರಗಳು
18, 19. ತಮ್ಮ ಯಾವತ್ತೂ ದಶಮಾಂಶವನ್ನು ತಂದದಕ್ಕಾಗಿ ಯೆಹೋವನ ಜನರು ಹೇಗೆ ಆಶೀರ್ವದಿಸಲ್ಪಟ್ಟಿದ್ದಾರೆ?
18 ಸಾರುವಿಕೆಯ ಕಾರ್ಯದ ಅಗತ್ಯತೆಗಳಿಗಾಗಿ, 1919 ರಿಂದ, ಯೆಹೋವನ ಸಾಕ್ಷಿಗಳು ತಮ್ಮ ಸಮಯ, ಶಕ್ತಿ, ಮತ್ತು ಆರ್ಥಿಕ ಸಂಪತ್ತುಗಳೊಂದಿಗೆ ಉದಾರವಾಗಿ ಪ್ರತಿಕ್ರಿಯೆ ತೋರಿಸಿರುತ್ತಾರೆ. ಅವರು ನಿಜವಾಗಿಯೂ ಯಾವತ್ತೂ ದಶಮಾಂಶವನ್ನು ಭಂಡಾರಕ್ಕೆ ತಂದಿರುತ್ತಾರೆ. ಫಲಿತಾಂಶವಾಗಿ, ಯೆಹೋವನು ತನ್ನ ವಾಗ್ದಾನವನ್ನು ನೆರವೇರಿಸಿದ್ದಾನೆ ಮತ್ತು ಸ್ಥಳಹಿಡಿಯಲಾಗದಷ್ಟು ಸುವರವನ್ನು ಸುರಿಸಿದ್ದಾನೆ. ಇದು ಅವರ ಸಂಖ್ಯಾತ್ಮಕ ಅಭಿವೃದ್ಧಿಯಲ್ಲಿ ಅತ್ಯಂತ ಗಮನಾರ್ಹವಾಗಿ ತೋರಿಬಂದಿದೆ. ಯೆಹೋವನು 1918 ರಲ್ಲಿ ತನ್ನ ಆಲಯಕ್ಕೆ ಬಂದಾಗ ಆತನನ್ನು ಸೇವಿಸುತ್ತಿದ್ದ ಕೇವಲ ಕೆಲವೇ ಸಾವಿರ ಅಭಿಷಿಕ್ತರಿಂದ ಹಿಡಿದು, ಈಗ ಅವರು, ಅಭಿಷಿಕ್ತರೂ ಅವರ ಸಂಗಡಿಗರಾದ ಬೇರೆ ಕುರಿಗಳೂ ಸೇರಿ, 229 ವಿವಿಧ ದೇಶಗಳಲ್ಲಿ 40 ಲಕ್ಷಕ್ಕಿಂತಲೂ ಎಷ್ಟೋ ಹೆಚ್ಚು ಸಂಖ್ಯೆಗೇರಿದ್ದಾರೆ. (ಯೆಶಾಯ 60:22) ಸತ್ಯದ ತಿಳಿವಳಿಕೆಯಲ್ಲಿ ಒಂದು ಸತತವಾದ ಬೆಳವಣಿಗೆಯೊಂದಿಗೆ ಸಹ ಇವರು ಆಶೀರ್ವದಿಸಲ್ಪಟ್ಟಿರುತ್ತಾರೆ. ಪ್ರವಾದನಾ ವಾಕ್ಯವು ಅವರಿಗೆ ಮತ್ತೂ ದೃಢವಾಗಿ ಮಾಡಲ್ಪಟ್ಟಿರುತ್ತದೆ. ಯೆಹೋವನ ಉದ್ದೇಶಗಳ ನೆರವೇರಿಕೆಯಲ್ಲಿ ಅವರ ಭರವಸೆಯು ದೃಢವಾಗಿ ನೆಲೆಗೊಳಿಸಲ್ಪಟ್ಟಿದೆ. (2 ಪೇತ್ರ 1:19) ಅವರು ನಿಜವಾಗಿಯೂ “ಯೆಹೋವನಿಂದ ಶಿಕ್ಷಿತರಾದ” ಜನರಾಗಿದ್ದಾರೆ.—ಯೆಶಾಯ 54:13.
19 ಮಲಾಕಿಯನ ಮೂಲಕ ಯೆಹೋವನು ಅಧಿಕ ಆಶೀರ್ವಾದವನ್ನು ಮುಂತಿಳಿಸಿದ್ದಾನೆ: “ಇಂಥ ಮಾತುಗಳನ್ನು ಕೇಳಿ ಯೆಹೋವನ ಭಕ್ತರು ಒಬ್ಬರಿಗೊಬ್ಬರು ಮಾತಾಡಿಕೊಳ್ಳಲು ಯೆಹೋವನು ಕಿವಿಗೊಟ್ಟು ಆಲಿಸಿ ಭಯಭಕ್ತಿಯಿಂದ ತನ್ನ ನಾಮಸ್ಮರಣೆಮಾಡುವವರ ಹೆಸರುಗಳನ್ನು ತನ್ನ ಮುಂದೆ ಜ್ಞಾಪಕದ ಪುಸ್ತಕದಲ್ಲಿ ಬರೆಯಿಸಿದನು.” (ಮಲಾಕಿಯ 3:16) ಕ್ರೈಸ್ತರೆನಿಸಿಕೊಳ್ಳುವ ಸಂಸ್ಥಾಪನೆಗಳೆಲ್ಲವುಗಳಲ್ಲಿ, ಯೆಹೋವನ ಸಾಕ್ಷಿಗಳು ಮಾತ್ರವೇ ಆತನ ನಾಮಸ್ಮರಣೆ ಮತ್ತು ಜನಾಂಗಗಳಲ್ಲಿ ಅದನ್ನು ಮಹಿಮೆಪಡಿಸುವಿಕೆ ಈ ಎರಡನ್ನೂ ಮಾಡುತ್ತಾರೆ. (ಕೀರ್ತನೆ 34:3) ಯೆಹೋವನು ಅವರ ನಂಬಿಗಸ್ತಿಕೆಯನ್ನು ನೆನಪಿಗೆ ತರುತ್ತಾನೆಂಬ ಆಶ್ವಾಸನೆಯು ಅವರಿಗಿರುವುದಕ್ಕೆ ಅವರೆಷ್ಟು ಸಂತೋಷಿತರು!
20, 21. (ಎ) ಯಾವ ಆಶೀರ್ವಾದಿತ ಸಂಬಂಧವನ್ನು ನಿಜ ಕ್ರೈಸ್ತರು ಆನಂದಿಸುತ್ತಾರೆ? (ಬಿ) ಕ್ರೈಸ್ತ ಪ್ರಪಂಚದ ವಿಷಯದಲ್ಲಾದರೋ, ಯಾವ ವ್ಯತ್ಯಾಸವು ಅಧಿಕಾಧಿಕವಾಗಿ ಸ್ಪಷ್ಟವಾಗಿಗುತ್ತಾ ಬರುತ್ತಿದೆ?
20 ಅಭಿಷಿಕ್ತ ಉಳಿಕೆಯವರು ಯೆಹೋವನ ವಿಶೇಷ ಜನರಾಗಿರುತ್ತಾರೆ, ಮತ್ತು ಅವರೊಂದಿಗೆ ಸಹವಸಿಸಲು ಹಿಂಡಾಗಿ ಬರುತ್ತಿರುವ ಮಹಾ ಸಮೂಹದವರು, ಶುದ್ಧಾರಾಧನೆಯ ಆಶೀರ್ವಾದಗಳನ್ನು ಅವರೊಂದಿಗೆ ಕೊಯ್ಯುತ್ತಿದ್ದಾರೆ. (ಜೆಕರ್ಯ 8:23) ಮಲಾಕಿಯನ ಮೂಲಕ ಯೆಹೋವನು ವಾಗ್ದಾನಿಸುವುದು: “ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ—ನಾನು ಕಾರ್ಯಸಾಧಿಸುವ ದಿನದಲ್ಲಿ ಅವರು ನನಗೆ ಸಕ್ವೀಯ ಜನರಾಗಿರುವರು; ಒಬ್ಬನು ತನ್ನನ್ನು ಸೇವಿಸುವ ಸ್ವಂತ ಮಗನನ್ನು ಕರುಣಿಸುವಂತೆ ನಾನು ಅವರನ್ನು ಕರುಣಿಸುವೆನು.” (ಮಲಾಕಿಯ 3:17) ಯೆಹೋವನಿಗೆ ಅವರೆಡೆಗೆ ಅಂಥ ಕೋಮಲ ಚಿಂತನೆಯಿರುವುದು ಎಂಥ ಒಂದು ಆಶೀರ್ವಾದವು!
21 ಸತ್ಯ ಮತ್ತು ಸುಳ್ಳು ಕ್ರೈಸ್ತರ ನಡುವೆ ಇರುವ ವ್ಯತ್ಯಾಸವು ಅಧಿಕಾಧಿಕವಾಗಿ ಪ್ರಕಟವಾಗುತ್ತಾ ಬರುತ್ತಿದೆ ನಿಶ್ಚಯ. ಯೆಹೋವನ ಜನರು ಆತನ ಮಟ್ಟಗಳಿಗೆ ಹೊಂದಿಕೆಯಾಗಲು ಪ್ರಯಾಸಪಡುತ್ತಿರುವಾಗ, ಕ್ರೈಸ್ತ ಪ್ರಪಂಚವಾದರೋ ಈ ಲೋಕದ ಅಶುದ್ಧತೆಯ ಜವುಗಿನೊಳಗೆ ಅಧಿಕಾಧಿಕವಾಗಿ ಮುಳುಗುತ್ತಾ ಬರುತ್ತಿದೆ. ನಿಜವಾಗಿಯೂ, ಯೆಹೋವನ ಮಾತುಗಳು ಸತ್ಯವಾಗಿ ರುಜುವಾಗಿವೆ: “ಆಗ ಶಿಷ್ಟರಿಗೂ ದುಷ್ಟರಿಗೂ ದೇವರನ್ನು ಸೇವಿಸುವವರಿಗೂ ದೇವರನ್ನು ಸೇವಿಸದವರಿಗೂ ಇರುವ ತಾರತಮ್ಯವನ್ನು ಮತ್ತೆ ಕಾಣುವಿರಿ.”—ಮಲಾಕಿಯ 3:18.
22. ನಾವು ಯಾವತ್ತೂ ದಶಮಾಂಶವನ್ನು ತರುವುದನ್ನು ಮುಂದರಿಸುತ್ತಾ ಇದ್ದಲ್ಲಿ, ಯಾವ ಆಶೀರ್ವಾದಗಳನ್ನು ಆನಂದಿಸುವ ಭರವಸೆಯುಳ್ಳವರಾಗಿರಬಲ್ಲೆವು?
22 ಶೀಘ್ರದಲ್ಲೇ ಸುಳ್ಳು ಕ್ರೈಸ್ತರಿಗೆ ಆ ಮುಯ್ಯಿತೀರಿಸುವ ದಿನವು ಬರಲಿದೆ: “ಇಗೋ, ಆ ದಿನವು ಬರುತ್ತಿದೆ, ಒಲೆಯಂತೆ ಉರಿಯುತ್ತಿದೆ. ಸಕಲ ಅಹಂಕಾರಿಗಳೂ ದುಷ್ಕರ್ಮಿಗಳೂ ಹೊಟ್ಟಿನಂತಿರುವರು; ಬರುತ್ತಿರುವ ಆ ದಿನವು ಅವರಿಗೆ ಅಗ್ನಿಪ್ರಲಯವಾಗುವದು. . . . ಇದು ಸೇನಾಧೀಶ್ವರನಾದ ಯೆಹೋವನ ನುಡಿ.” (ಮಲಾಕಿಯ 4:1) ಆತನು ಅವರನ್ನು ಆ ಸಮಯದಲ್ಲಿ ರಕ್ಷಿಸುತ್ತಾನೆಂದು ಯೆಹೋವನ ಜನರಿಗೆ ತಿಳಿದದೆ, ಹಿಂದೆ ಸಾ.ಶ. 70 ರಲ್ಲಿ ಆತನು ತನ್ನ ಆತ್ಮಿಕ ಜನಾಂಗವನ್ನು ರಕ್ಷಿಸಿದ ಪ್ರಕಾರವೇ. (ಮಲಾಕಿಯ 4:2) ಆ ಆಶ್ವಾಸನೆಯನ್ನು ಪಡೆಯಲು ಅವರೆಷ್ಟು ಸಂತೋಷಿತರು! ಆದಕಾರಣ, ಆ ಸಮಯದ ತನಕ ನಮ್ಮಲ್ಲಿ ಪ್ರತಿಯೊಬ್ಬರು ಯಾವತ್ತೂ ದಶಮಾಂಶವನ್ನು ಭಂಡಾರಕ್ಕೆ ತರುವ ಮೂಲಕ ಯೆಹೋವನಿಗಾಗಿ ನಮ್ಮ ಗಣ್ಯತೆಯನ್ನು ಪ್ರೀತಿಯನ್ನೂ ತೋರಿಸೋಣ. ಆಗ ಆತನು ನಮ್ಮಲ್ಲಿ ಸ್ಥಳಹಿಡಿಯಲಾಗದಷ್ಟು ಸುವರವನ್ನು ಸುರಿಯುತ್ತಾ ಇರುವನೆಂಬ ಭರವಸೆಯುಳ್ಳವರಾಗಿರಬಲ್ಲೆವು.
[ಅಧ್ಯಯನ ಪ್ರಶ್ನೆಗಳು]
a ಅಧಿಕ ಸಮಾಚಾರಕ್ಕಾಗಿ, ವಾಚ್ಟವರ್ ಜೂನ್ 15, 1987 ಪುಟ 14-20 ನೋಡಿರಿ.
ನೀವು ವಿವರಿಸಬಲ್ಲಿರೋ?
▫ ಆಧುನಿಕ ಸಮಯದಲ್ಲಿ, ಯೆಹೋವನು ತನ್ನ ಒಡಂಬಡಿಕೆಯ ದೂತನೊಂದಿಗೆ ಆಲಯಕ್ಕೆ ಬಂದದ್ದು ಯಾವಾಗ?
▫ ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ಯಾರು, ಮತ್ತು 1918 ರ ಅನಂತರ ಅವರಿಗೆ ಯಾವ ಶುದ್ಧೀಕರಣದ ಅಗತ್ಯವಿತ್ತು?
▫ ಯಾವ ರೀತಿಯ ಆತ್ಮಿಕ ಅರ್ಪಣೆಗಳನ್ನು ನಿಜ ಕ್ರೈಸ್ತರು ಯೆಹೋವನಿಗೆ ತರುತ್ತಾರೆ?
▫ ಯಾವ ದಶಮಾಂಶವನ್ನು ಕ್ರೈಸ್ತರು ಭಂಡಾರಕ್ಕೆ ತರುವಂತೆ ಆಮಂತ್ರಿಸಲ್ಪಟ್ಟಿದ್ದಾರೆ?
▫ ಆತ್ಮಿಕ ದಶಮಾಂಶಗಳನ್ನು ಅರ್ಪಿಸುವ ಮೂಲಕ ಯಾವ ಆಶೀರ್ವಾದಗಳನ್ನು ದೇವಜನರು ಆನಂದಿಸುತ್ತಾರೆ?
[ಪುಟ 15 ರಲ್ಲಿರುವ ಚಿತ್ರ]
ನಮ್ಮ ಆತ್ಮಿಕ ದಶಮಾಂಶಗಳಲ್ಲಿ, ರಾಜ್ಯ ಸಭಾಗೃಹಗಳನ್ನು ಕಟ್ಟುವುದಕ್ಕಾಗಿ ನಮ್ಮ ಶಕ್ತಿ ಮತ್ತು ಸಂಪತ್ತುಗಳನ್ನು ಅರ್ಪಿಸುವುದೂ ಸೇರಿವೆ
[ಪುಟ 16 ರಲ್ಲಿರುವ ಚಿತ್ರ]
ಆತನ ಜನರ ಮೇಲೆ ಯೆಹೋವನ ಆಶೀರ್ವಾದದ ಕಾರಣ, ರಾಜ್ಯ ಸಭಾಗೃಹಗಳು ಮತ್ತು ಎಸೆಂಬ್ಲಿ ಹೋಲ್ಗಳೂ ಸೇರಿರುವ ಬಹಳಷ್ಟು ಕಟ್ಟಡ ನಿರ್ಮಾಣವು ಬೇಕಾಗಿದೆ