ಕರ್ತನ ಸಂಧ್ಯಾ ಭೋಜನ—ನಿಮಗೆ ಅರ್ಥವುಳ್ಳದ್ದಾಗಿರಲು ಕಾರಣ
ಯೇಸು ಕ್ರಿಸ್ತನು ತನ್ನ ಮಾನವ ಜೀವನದ ಕಡೇ ರಾತ್ರಿಯಲ್ಲಿ ಕರ್ತನ ಸಂಧ್ಯಾ ಭೋಜನವನ್ನು ಪ್ರತಿಷ್ಟಾಪಿಸಿದನು. ಅದು ಗುರುವಾರ ಸಾಯಂಕಾಲ, ಮಾರ್ಚ್ 31 ಆಗಿತ್ತು, ಮತ್ತು ಶುಕ್ರವಾರ ಅಪರಾಹ್ನ, ಎಪ್ರಿಲ್ 1 ರಂದು ಯೇಸುವು ಸತ್ತನು. ಯೆಹೂದ್ಯ ಕ್ಯಾಲಂಡರಿನ ದಿನಗಳು ಒಂದು ದಿನದ ಸಾಯಂಕಾಲದಿಂದ ಮರುದಿನದ ಸಾಯಂಕಾಲದ ವರೆಗೂ ಚಲಾವಣೆಯಲ್ಲಿ ಮುಂಬರಿಯುವುದರಿಂದ, ಈ ಭೋಜನ ಮತ್ತು ಯೇಸುವಿನ ಮರಣ ಎರಡೂ ಸಾ.ಶ. 33 ನೈಸಾನ್ 14 ರಂದು ಸಂಭವಿಸಿದವು.
ಯೇಸು ಈ ಭೋಜನವನ್ನು ಪ್ರತಿಷ್ಟಾಪಿಸಿದ್ದು ಯಾಕೆ? ಅವನು ಉಪಯೋಗಿಸಿದ ರೊಟ್ಟಿ ಮತ್ತು ದ್ರಾಕ್ಷಾಮದ್ಯದ ವೈಶಿಷ್ಟ್ಯತೆಯೇನು? ಯಾರು ಪಾಲುತಕ್ಕೊಳ್ಳತಕ್ಕದ್ದು? ಈ ಭೋಜನವನ್ನು ಎಷ್ಟೊಂದು ಸಾರಿ ಆಚರಿಸತಕ್ಕದ್ದು? ಮತ್ತು ನಿಮಗೆ ಅದು ಹೇಗೆ ಅರ್ಥವುಳ್ಳದ್ದಾಗಿರಬಲ್ಲದು?
ಪ್ರತಿಷ್ಟಾಪಿಸಲ್ಪಟ್ಟದ್ದು ಯಾಕೆ?
ಈ ಭೋಜನದ ಕುರಿತು, ಯೇಸುವು ತನ್ನ ಅಪೊಸ್ತಲರಿಗೆ ಹೇಳಿದ್ದು: “ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಇದನ್ನು ಮಾಡುತ್ತಾ ಇರ್ರಿ.” ಇನ್ನೊಂದು ತರ್ಜುಮೆಗನುಸಾರ, ಅವನಂದದ್ದು: “ನನ್ನ ಸ್ಮಾರಕಾಚರಣೆಯೋಪಾದಿ ಇದನ್ನು ಮಾಡಿರಿ.” (1 ಕೊರಿಂಥ 11:24, ದ ನ್ಯೂ ಇಂಗ್ಲಿಷ್ ಬೈಬಲ್) ವಾಸ್ತವದಲ್ಲಿ, ಕರ್ತನ ಸಂಧ್ಯಾ ಭೋಜನವು ಕೆಲವೊಮ್ಮೆ ಕ್ರಿಸ್ತನ ಮರಣದ ಸ್ಮಾರಕಾಚರಣೆ ಎಂದೂ ನಿರ್ದೇಶಿಸಲ್ಪಟ್ಟಿದೆ.
ಯೆಹೋವನ ಸಾರ್ವಭೌಮತೆಯನ್ನು ಸಮರ್ಥಿಸುವ ಒಬ್ಬ ಸಮಗ್ರತೆ-ಪಾಲಕನೋಪಾದಿ ಯೇಸುವು ಸತ್ತನು ಮತ್ತು ಈ ರೀತಿಯಲ್ಲಿ, ಕೇವಲ ಸ್ವಾರ್ಥಭರಿತ ಹೇತುಗಳಿಗಾಗಿ ಮಾತ್ರ ಯಥಾರ್ಥವಾದಿ ಮಾನವರು ದೇವರನ್ನು ಸೇವಿಸುತ್ತಾರೆ ಎಂಬ ಆಪಾದನೆಯಲ್ಲಿ ಸೈತಾನನು ಒಬ್ಬ ಸುಳ್ಳಿನ ದೂರುಗಾರನಾಗಿರುವನು ಎಂದು ರುಜುಪಡಿಸಿದನು. (ಯೋಬ 2:1-5) ಅವನ ಮರಣವು ದೇವರ ಹೃದಯವನ್ನು ಸಂತೋಷಿಸುವಂತೆ ಮಾಡಿತು.—ಜ್ಞಾನೋಕ್ತಿ 27:11.
ಒಬ್ಬ ಪರಿಪೂರ್ಣ ಮಾನವನೋಪಾದಿ ಅವನ ಮರಣದ ಮೂಲಕ, ಯೇಸುವು ‘ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡು’ ಆಗಿಯೂ ಕೊಟ್ಟನು. (ಮತ್ತಾಯ 20:28) ದೇವರ ವಿರುದ್ಧವಾಗಿ ಪಾಪ ಗೈಯುವುದರಲ್ಲಿ, ಮೊದಲನೆಯ ಮನುಷ್ಯನು ಪರಿಪೂರ್ಣ ಮಾನವ ಜೀವವನ್ನು ಮತ್ತು ಅದರ ಪ್ರತೀಕ್ಷೆಗಳನ್ನು ಕಳಕೊಂಡನು. ಆದರೆ “ದೇವರು ಲೋಕದ [ಮಾನವ ಕುಲದ] ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” (ಯೋಹಾನ 3:16) ಹೌದು, “ಪಾಪವು ಕೊಡುವ ಸಂಬಳ ಮರಣ; ದೇವರ ಉಚಿತಾರ್ಥ ವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ.”—ರೋಮಾಪುರ 6:23.
“ಕರ್ತನಿಂದ ಹೊಂದಿದೆನು”
ಅಪೊಸ್ತಲ ಪೌಲನ ಮಾತುಗಳು ಕ್ರಿಸ್ತನ ಮರಣದ ಸ್ಮಾರಕಾಚರಣೆಯ ಮೇಲೆ ಪ್ರಕಾಶವನ್ನು ಚೆಲ್ಲುತ್ತವೆ: “ನಾನು ನಿಮಗೆ ತಿಳಿಸಿಕೊಟ್ಟ ಉಪದೇಶವನ್ನು ಕರ್ತನಿಂದ ಹೊಂದಿದೆನು. ಅದೇನಂದರೆ—ಕರ್ತನಾದ ಯೇಸು ತಾನು ಹಿಡಿದು ಕೊಡಲ್ಪಟ್ಟ ರಾತ್ರಿಯಲ್ಲಿ ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರಮಾಡಿ ಮುರಿದು—ಇದು ನಿಮಗೋಸ್ಕರವಾಗಿರುವ ನನ್ನ ದೇಹ; ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ ಅಂದನು. ಊಟವಾದ ಮೇಲೆ ಆತನು ಅದೇ ರೀತಿಯಾಗಿ ಪಾತ್ರೆಯನ್ನು ತೆಗೆದುಕೊಂಡು—ಈ ಪಾತ್ರೆಯು ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ; ನೀವು ಇದರಲ್ಲಿ ಪಾನಮಾಡುವಾಗೆಲ್ಲಾ ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಪಾನಮಾಡಿರಿ ಅಂದನು. ನೀವು ಈ ರೊಟ್ಟಿಯನ್ನು ತಿಂದು ಈ ಪಾತ್ರೆಯಲ್ಲಿ ಪಾನಮಾಡುವಷ್ಟು ಸಾರಿ ಕರ್ತನ ಮರಣವನ್ನು ಆತನು ಬರುವ ತನಕ ಪ್ರಸಿದ್ಧಿಪಡಿಸುತ್ತೀರಿ.”—1 ಕೊರಿಂಥ 11:23-26.
ಸಾ.ಶ. 33 ರ ನೈಸಾನ್ 14 ರಂದು ಯೇಸು ಮತ್ತು 11 ಅಪೊಸ್ತಲರುಗಳೊಂದಿಗೆ ಪೌಲನು ಹಾಜರಿ ಇಲ್ಲದಿದುದ್ದರಿಂದ, ಈ ಸಮಾಚಾರವನ್ನು ಪ್ರೇರಿತ ಪ್ರಕಟನೆಯ ಮೂಲಕ “ಕರ್ತನಿಂದ ಹೊಂದಿದನು” ಎಂದು ವ್ಯಕ್ತವಾಗುತ್ತದೆ. ಕ್ರಿಸ್ತನನ್ನು ರೋಮನರು ಕಂಭಕ್ಕೇರಿಸುವಂತೆ ಪ್ರೇರಿಸಿದ ಯೆಹೂದ್ಯ ಧಾರ್ಮಿಕ ಶತ್ರುಗಳಿಗೆ ಯೂದನಿಂದ, “ತಾನು ಹಿಡಿದು ಕೊಡಲ್ಪಟ್ಟ ರಾತ್ರಿಯಲ್ಲಿ” ಸ್ಮಾರಕಾಚರಣೆಯನ್ನು ಯೇಸುವು ಸ್ಥಾಪಿಸಿದನು. ಕುರುಹುಗಳಾದ ರೊಟ್ಟಿ ಮತ್ತು ದ್ರಾಕ್ಷಾಮದ್ಯದಲ್ಲಿ ಪಾಲುತಕ್ಕೊಳ್ಳಲು ಅರ್ಹರಾದವರು, ಅವನ ಸ್ಮರಣೆಯಲ್ಲಿ ಹಾಗೆ ಮಾಡುವರು.
ಎಷ್ಟೊಂದು ಸಾರಿ ಅದನ್ನು ಆಚರಿಸಬೇಕು?
“ನೀವು ಈ ರೊಟ್ಟಿಯನ್ನು ತಿಂದು ಈ ಪಾತ್ರೆಯಲ್ಲಿ ಪಾನಮಾಡುವಷ್ಟು ಸಾರಿ ಕರ್ತನ ಮರಣವನ್ನು ಆತನು ಬರುವ ತನಕ ಪ್ರಸಿದ್ಧಿಪಡಿಸುತ್ತೀರಿ” ಎಂಬ ಪೌಲನ ಮಾತುಗಳ ಅರ್ಥವೇನಾಗಿದೆ? ಅವರು ಸಾಯುವ ತನಕ, ನಂಬಿಗಸ್ತ ಅಭಿಷಿಕ್ತ ಕ್ರೈಸ್ತರು ಸ್ಮಾರಕಾಚರಣೆಯ ಕುರುಹುಗಳಲ್ಲಿ “ಅಷ್ಟು ಸಾರಿ” ಪಾಲಿಗರಾಗುವರು, ಅನಂತರ ಅವರು ಸ್ವರ್ಗೀಯ ಜೀವಿತಕ್ಕೆ ಪುನರುತ್ಥಾನಗೊಳಿಸಲ್ಪಡುವರು. ದೇವರ ಮತ್ತು ಲೋಕದ ಮುಂದೆ, ಈ ರೀತಿಯಲ್ಲಿ, ಯೇಸುವಿನ ಯಜ್ಞದ ಯೆಹೋವನ ಒದಗಿಸುವಿಕೆಯಲ್ಲಿ ಅವರ ನಂಬಿಕೆಯನ್ನು ಕೆಲವು ಸಾರಿ ಅವರು ಪ್ರಸಿದ್ದಿಗೊಳಿಸುವರು. ಎಷ್ಟರ ತನಕ? “ಆತನು ಬರುವ ತನಕ,” ಎಂದನು ಪೌಲನು, ಅವನ “ಸಾನ್ನಿಧ್ಯ”ದ ಸಮಯಾವಧಿಯಲ್ಲಿ ಪುನರುತ್ಥಾನವೊಂದರ ಮೂಲಕ ಸ್ವರ್ಗದೊಳಗೆ ತನ್ನ ಅಭಿಷಿಕ್ತ ಹಿಂಬಾಲಕರನ್ನು ಸೇರಿಸಿಕೊಳ್ಳಲು ಯೇಸುವಿನ ಬರೋಣದ ತನಕ ಈ ಆಚರಣೆಗಳು ಮುಂದರಿಯಲಿರುವುವು ಎಂದಿದರ ಅರ್ಥವೆಂದು ವ್ಯಕ್ತವಾಗುತ್ತದೆ. (1 ಥೆಸಲೊನೀಕ 4:14-17, NW) ಇದು 11 ಮಂದಿ ನಿಷ್ಠೆಯ ಅಪೊಸ್ತಲರಿಗೆ ಕ್ರಿಸ್ತನು ನುಡಿದ ಮಾತುಗಳೊಂದಿಗೆ ಸಹಮತದಲ್ಲಿದೆ: “ನಾನು ಹೋಗಿ ನಿಮಗೆ ಸ್ಥಳವನ್ನು ಸಿದ್ಧಮಾಡಿದ ಮೇಲೆ ತಿರಿಗಿ ಬಂದು ನಿಮ್ಮನ್ನು ಕರಕೊಂಡು ಹೋಗಿ ನನ್ನ ಬಳಿಗೆ ಸೇರಿಸಿಕೊಳ್ಳುವೆನು; ಯಾಕಂದರೆ ನಾನಿರುವ ಸ್ಥಳದಲ್ಲಿ ನೀವು ಸಹ ಇರಬೇಕು.”—ಯೋಹಾನ 14:3.
ಕ್ರಿಸ್ತನ ಮರಣವು ಪ್ರತಿ ದಿನ ಯಾ ಪ್ರಾಯಶಃ ಪ್ರತಿ ವಾರ ಆಚರಿಸಲ್ಪಡತಕ್ಕದ್ದೋ? ಒಳ್ಳೇದು, ಕರ್ತನ ಸಂಧ್ಯಾ ಭೋಜನವನ್ನು ಯೇಸುವು ಪ್ರತಿಷ್ಟಾಪಿಸಿದ್ದು ಮತ್ತು ಕೊಲ್ಲಲ್ಪಟ್ಟದ್ದು ಪಸ್ಕಹಬ್ಬದಲ್ಲಿ, ಅದು ಐಗುಪ್ತ್ಯರ ಬಂದಿವಾಸದಿಂದ ಇಸ್ರಾಯೇಲಿನ ಬಿಡುಗಡೆಯ ಸ್ಮಾರಕವಾಗಿ ಆಚರಿಸಲ್ಪಡುತ್ತಿತ್ತು. ವಾಸ್ತವದಲ್ಲಿ, ಅವನು “ಕ್ರಿಸ್ತನು ನಮ್ಮ ಪಸ್ಕಹಬ್ಬ” ಎಂದು ಕರೆಯಲ್ಪಟ್ಟಿದ್ದಾನೆ, ಕಾರಣವೇನಂದರೆ ಕ್ರೈಸ್ತರಿಗೆ ಅವನು ಯಜ್ಞದ ಕುರಿಯಾಗಿದ್ದಾನೆ. (1 ಕೊರಿಂಥ 5:7, NW) ಪಸ್ಕಹಬ್ಬವು ನೈಸಾನ್ 14 ರಂದು, ವರ್ಷಕ್ಕೊಮ್ಮೆ ಮಾತ್ರವೇ ಆಚರಿಸಲ್ಪಡುತ್ತಿತ್ತು. (ವಿಮೋಚನಕಾಂಡ 12:6, 14; ಯಾಜಕಕಾಂಡ 23:5) ಪಸ್ಕಹಬ್ಬವು ಆಚರಿಸಲ್ಪಡುವಷ್ಟು ಸಾರಿ ಮಾತ್ರವೇ,—ವಾರ್ಷಿಕವಾಗಿ, ಪ್ರತಿ ದಿನ ಯಾ ಪ್ರತಿ ವಾರ ಅಲ್ಲ—ಯೇಸುವಿನ ಮರಣವನ್ನೂ ಆಚರಿಸತಕ್ಕದ್ದು ಎಂದು ಇದು ಸೂಚಿಸುತ್ತದೆ.
ಹಲವಾರು ಶತಮಾನಗಳ ತನಕ ಕ್ರೈಸ್ತರೆನಿಸಿಕೊಳ್ಳುವ ಅನೇಕರು ಯೇಸುವಿನ ಮರಣವನ್ನು ವರ್ಷಕ್ಕೆ ಒಂದು ಸಾರಿ ಆಚರಿಸುತ್ತಿದ್ದರು. ಅವರು ಹಾಗೆ ನೈಸಾನ್ 14 ರಂದು ಮಾಡುತ್ತಿದ್ದುದರಿಂದ, ಅವರು ಕ್ವಾರ್ಟೊಡೆಸಿಮನ್ಸ್ ಅಂದರೆ “ಹದಿನಾಲ್ಕನೆಯವರು” ಎಂದು ಕರೆಯಲ್ಪಟ್ಟರು. ಅವರ ಕುರಿತು ಇತಿಹಾಸಗಾರ ಜೆ. ಎಲ್. ಫೊನ್ ಮೊಸ್ಹಿಮ್ ಬರೆದದ್ದು: “ಕರ್ತನ ರಾತ್ರಿ ಭೋಜನದ ಪ್ರತಿಷ್ಟಾಪನೆಯ, ಮತ್ತು ಯೇಸು ಕ್ರಿಸ್ತನ ಮರಣದ ಸ್ಮಾರಕಾಚರಣೆಯಾಗಿ, ಯೆಹೂದ್ಯರು ಅವರ ಪಸ್ಕಹಬ್ಬದ ಕುರಿಯನ್ನು ತಿನ್ನುತ್ತಿರುವ ಅದೇ ಸಮಯದಲ್ಲಿ, ಅಂದರೆ ಮೊದಲ ತಿಂಗಳ [ನೈಸಾನ್] ಹದಿನಾಲ್ಕನೆಯ ದಿನದ ಸಾಯಂಕಾಲದಲ್ಲಿ, ಏಶಿಯಾ ಮೈನರಿನ ಕ್ರೈಸ್ತರು ಈ ಪವಿತ್ರ ಹಬ್ಬವನ್ನು ಆಚರಿಸಲು ರೂಢಿ ಮಾಡಿಕೊಂಡಿದ್ದರು. . . . ಅವರು ಒಂದು ನಿಯಮವನ್ನು ಅನುಸರಿಸುವಂತೆ, ಕ್ರಿಸ್ತನ ಮಾದರಿಯನ್ನು ಅನುಸರಿಸುವ ಹಂಗುಳ್ಳವರಾಗಿದ್ದೇವೆ ಎಂದವರು ಭಾವಿಸಿದರು.”
ಕುರುಹುಗಳ ವೈಶಿಷ್ಟ್ಯತೆ
ಪೌಲನು ಅಂದದ್ದು, ಯೇಸುವು “ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರಮಾಡಿ ಮುರಿದನು.” ಸೇವಿಸಲಿಕ್ಕಾಗಿ ಹುಳಿ (ಯಾ ಕಿಣ್ವ) ಇಲ್ಲದ ಹಿಟ್ಟು ಮತ್ತು ನೀರಿನಿಂದ ಸುಡಲ್ಪಟ್ಟ ಆ ತೆಳ್ಳಗಿನ ಗರಿಮುರಿ ರೊಟ್ಟಿಯು ಮುರಿಯಲ್ಪಡಬೇಕಿತ್ತು. ಬೈಬಲ್ ಸಂಕೇತಗಳಲ್ಲಿ, ಹುಳಿಯು ಪಾಪ ಯಾ ಭ್ರಷ್ಟತೆಯನ್ನು ಸೂಚಿಸುತ್ತದೆ. ಒಬ್ಬ ಅನೈತಿಕ ಮನುಷ್ಯನನ್ನು ಸಭೆಯಿಂದ ಬಹಿಷ್ಕರಿಸಲು ಕೊರಿಂಥದ ಕ್ರೈಸ್ತರಿಗೆ ಒತ್ತಾಯಿಸುತ್ತಾ, ಪೌಲನು ಹೇಳಿದ್ದು: “ಸ್ವಲ್ಪ ಹುಳಿ ಕಲಸಿದರೆ ಕಣಿಕವೆಲ್ಲಾ ಹುಳಿಯಾಗುತ್ತದೆಂಬದು ನಿಮಗೆ ತಿಳಿಯದೋ? ನೀವು ಹುಳಿಯಿಲ್ಲದವರೆನಿಸಿಕೊಂಡದ್ದರಿಂದ ಹಳೆ ಹುಳಿಯನ್ನು ತೆಗೆದುಹಾಕಿ ಹೊಸ ಕಣಿಕದಂತಾಗಿರ್ರಿ. ಯಾಕಂದರೆ ನಮ್ಮ ಪಸ್ಕದ ಯಜ್ಞದ ಕುರಿಯು ಕೊಯಿದದೆ; ಅದಾವದಂದರೆ ಕ್ರಿಸ್ತನೇ. ಆದಕಾರಣ ನಾವು ಹಳೇ ಹುಳಿಯನ್ನು ಅಂದರೆ ದುರ್ಮಾಗತ್ವ ದುಷ್ಟತ್ವ ಎಂಬ ಹುಳಿಯನ್ನು ಇಟ್ಟುಕೊಳ್ಳದೆ ಸರಳತೆ ಸತ್ಯತೆ ಎಂಬ ಹುಳಿಯಿಲ್ಲದ ರೊಟ್ಟಿಯನ್ನೇ ತೆಗೆದುಕೊಂಡು ಹಬ್ಬವನ್ನು ಆಚರಿಸೋಣ.” (1 ಕೊರಿಂಥ 5:6-8) ಸ್ವಲ್ಪ ಹುಳಿಮುದ್ದೆಯು ರೊಟ್ಟಿಯ ಇಡೀ ಕಣಿಕವನ್ನು ಯಾ ಅಂಶವನ್ನೆಲ್ಲಾ ಹುಳಿಮಾಡುವಂತೆ, ಪಾಪಿ ಮನುಷ್ಯನ ಭ್ರಷ್ಟಗೊಳಿಸುವ ಪ್ರಭಾವವನ್ನು ತೆಗೆದುಹಾಕದಿದ್ದರೆ, ದೇವರ ದೃಷ್ಟಿಯಲ್ಲಿ ಸಭೆಯು ಅಶುದ್ಧವಾಗಿ ಪರಿಣಮಿಸುವುದು. ಹೇಗೆ ಇಸ್ರಾಯೇಲ್ಯರು ಪಸ್ಕಹಬ್ಬವನ್ನು ಹಿಂಬಾಲಿಸಿ ಬರುವ ಹುಳಿಯಿಲ್ಲದ ರೊಟ್ಟಿಗಳ ಹಬ್ಬದ ಸಮಯದಲ್ಲಿ ಅವರ ಮನೆಗಳಲ್ಲಿ ಹುಳಿಯನ್ನು ಇಡಸಾಧ್ಯವಿರಲಿಲ್ಲವೊ ಹಾಗೆಯೇ, ಅವರ ಮಧ್ಯದಿಂದ “ಹಳೆ ಹುಳಿ”ಯನ್ನು ತೆಗೆದು ಹಾಕುವ ಜರೂರಿಯಿತ್ತು.
ಸ್ಮಾರಕಾಚರಣೆಯ ಹುಳಿಯಿಲ್ಲದ ರೊಟ್ಟಿಯ ಕುರಿತು, ಯೇಸು ಅಂದದ್ದು: “ಇದು ನಿಮಗೋಸ್ಕರವಾಗಿರುವ ನನ್ನ ದೇಹ.” (1 ಕೊರಿಂಥ 11:24) ರೊಟ್ಟಿಯು ಯೇಸುವಿನ ಪರಿಪೂರ್ಣ ಮಾಂಸಿಕ ದೇಹವನ್ನು ಪ್ರತಿನಿಧಿಸುತ್ತದೆ, ಅದರ ಕುರಿತಾಗಿ ಪೌಲನು ಬರೆದದ್ದು: “ಆದದರಿಂದ ಕ್ರಿಸ್ತನು ಭೂಲೋಕದೊಳಗೆ ಬರುವಾಗ—[ದೇವರೇ,] ಯಜ್ಞನೈವೇದ್ಯಗಳು ನಿನಗೆ ಇಷ್ಟವಾಗಿರಲಿಲ್ಲ, ನನಗೆ ದೇಹವನ್ನು ಸಿದ್ಧಮಾಡಿಕೊಟ್ಟಿ; ಸರ್ವಾಂಗಹೋಮಗಳಲ್ಲಿಯೂ ದೋಷಪರಿಹಾರಕಯಜ್ಞಗಳಲಿಯ್ಲೂ ನೀನು ಸಂತೋಷಪಡಲಿಲ್ಲ; ಆಗ ನಾನು—ಇಗೋ, ದೇವರೇ, ನಿನ್ನ ಚಿತ್ತವನ್ನು ನೆರವೇರಿಸುವದಕ್ಕೆ ಬಂದಿದ್ದೇನೆ. ಗ್ರಂಥದ ಸುರುಳಿಯಲ್ಲಿ ನನ್ನನ್ನು ಕುರಿತು ಬರೆದದೆ ಎಂದು ಹೇಳಿದೆನು ಅನ್ನುತ್ತಾನೆ. . . . ಯೇಸು ಕ್ರಿಸ್ತನು ಒಂದೇ ಸಾರಿ ದೇಹ ಸಮರ್ಪಣೆಮಾಡಿ ದೇವರ ಚಿತ್ತವನ್ನು ನೆರವೇರಿಸಿದದರಿಂದಲೇ ನಾವು ಶುದ್ಧರಾದೆವು.” (ಇಬ್ರಿಯ 10:5-10) ಯೇಸುವಿನ ಪರಿಪೂರ್ಣ ಮಾನವ ದೇಹವು ಪಾಪರಹಿತವಾಗಿತ್ತು ಮತ್ತು ಮಾನವ ಕುಲದ ವಿಮೋಚನ ಯಜ್ಞದೋಪಾದಿ ಕಾರ್ಯವೆಸಗಿತು.—ಇಬ್ರಿಯ 7:26.
ಬೆರಸದ ಕೆಂಪು ದ್ರಾಕ್ಷಾಮದ್ಯದ ಮೇಲೆ ಪ್ರಾರ್ಥಿಸುತ್ತಾ, ಯೇಸುವಂದದ್ದು: “ಈ ಪಾತ್ರೆಯು ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ.” (1 ಕೊರಿಂಥ 11:25) ಇನ್ನೊಂದು ತರ್ಜುಮೆಯು ಹೀಗಿದೆ: “ಈ ಪಾತ್ರೆಯೆಂದರೆ ನನ್ನ ರಕ್ತದಿಂದ ಸ್ಥಿರೀಕರಿಸಿರುವ ಹೊಸ ಒಡಂಬಡಿಕೆಯೆಂದರ್ಥವಾಗಿದೆ.” (ಮೊಫೆಟ್) ದೇವರ ಮತ್ತು ಇಸ್ರಾಯೇಲ್ ಜನಾಂಗದ ನಡುವಣ ನಿಯಮದೊಡಂಬಡಿಕೆಯನ್ನು ಯಜ್ಞಾರ್ಪಿಸಲ್ಪಟ್ಟ ಹೋರಿಗಳ ಮತ್ತು ಹೋತಗಳ ರಕ್ತವು ಊರ್ಜಿತಗೊಳಿಸಿದಂತೆಯೇ, ಮರಣದಲ್ಲಿ ಸುರಿಸಲ್ಪಟ್ಟ ಯೇಸುವಿನ ರಕ್ತವು ಹೊಸ ಒಡಂಬಡಿಕೆಯನ್ನು ಕ್ರಮಬದ್ಧಗೊಳಿಸಿತು. ಆ ಒಡಂಬಡಿಕೆಯ ಉಲ್ಲೇಖವು ತಾನೇ ಸ್ಮಾರಕಾಚರಣೆಯ ಕುರುಹುಗಳ ನ್ಯಾಯಸಮ್ಮತ ಪಾಲಿಗರನ್ನು ಗುರುತಿಸಲು ನಮಗೆ ಸಹಾಯ ಮಾಡುತ್ತದೆ.
ಯಾರು ಪಾಲು ತಕ್ಕೊಳ್ಳತಕ್ಕದ್ದು?
ಹೊಸ ಒಡಂಬಡಿಕೆಯಲ್ಲಿರುವ ಯೇಸುವಿನ ಅಭಿಷಿಕ್ತ ಹಿಂಬಾಲಕರು ಸ್ಮಾರಕಾಚರಣೆಯ ಕುರುಹುಗಳಲ್ಲಿ ತಕ್ಕದಾಗಿಯೇ ಪಾಲುತಕ್ಕೊಳ್ಳುತ್ತಾರೆ. ಈ ಒಡಂಬಡಿಕೆಯು ದೇವರ ಮತ್ತು ಆತ್ಮಿಕ ಇಸ್ರಾಯೇಲಿನ ನಡುವೆ ಮಾಡಲ್ಪಟ್ಟದೆ. (ಯೆರೆಮೀಯ 31:31-34; ಗಲಾತ್ಯ 6:16) ಆದರೆ ಹೊಸ ಒಡಂಬಡಿಕೆಯು ಕಟ್ಟಕಡೆಗೆ ಎಲ್ಲಾ ವಿಧೇಯ ಮಾನವ ಕುಲಕ್ಕೆ ಆಶೀರ್ವಾದಗಳನ್ನು ತರುವುದು, ಮತ್ತು ಆ ಆಶೀರ್ವಾದಗಳನ್ನು ಪಡೆದುಕೊಳ್ಳುವವರಲ್ಲಿ ನೀವೊಬ್ಬರಾಗಿರಬಲ್ಲಿರಿ.
ಸ್ಮಾರಕಾಚರಣೆಯ ಕುರುಹುಗಳಲ್ಲಿ ಪಾಲುತಕ್ಕೊಳ್ಳುವವರು ಯೇಸುವು ರಾಜ್ಯಕ್ಕಾಗಿ ಮಾಡಿದ ವೈಯಕ್ತಿಕ ಒಡಂಬಡಿಕೆಯಲ್ಲಿ ಇರಲೇ ಬೇಕಾಗಿದೆ. ಈ ಭೋಜನವನ್ನು ಸ್ಥಾಪಿಸುವಾಗ, ಯೇಸುವು ತನ್ನ ನಿಷ್ಠೆಯ ಅಪೊಸ್ತಲರಿಗೆ ಹೇಳಿದ್ದು: “ನನ್ನ ತಂದೆಯು ನನ್ನೊಂದಿಗೆ ಒಂದು ರಾಜ್ಯಕ್ಕೋಸ್ಕರವಾಗಿ ಒಡಂಬಡಿಕೆಯನ್ನು ಮಾಡಿದಂತೆ, ನಾನೂ ನಿಮ್ಮೊಂದಿಗೆ ಒಂದು ಒಡಂಬಡಿಕೆಯನ್ನು ಮಾಡುತ್ತೇನೆ.” (ಲೂಕ 22:29, NW) ಅರಸ ದಾವೀದನೊಂದಿಗೆ ದೇವರಿಂದ ಮಾಡಲ್ಪಟ್ಟ ರಾಜ್ಯದೊಡಂಬಡಿಕೆಯು ಸದಾಕಾಲಕ್ಕೂ ಆಳುವಾತನೊಬ್ಬನನ್ನು ಮುನ್ನಿರ್ದೇಶಿಸಿತು, ಆತನು ಯೇಸುವಾಗಿದ್ದನು. ಯೇಸುವಿನೊಂದಿಗೆ ಆಳಿಕ್ವೆಯಲ್ಲಿ ಪಾಲಿಗರಾಗುವ 1,44,000 ಆತ್ಮಿಕ ಇಸ್ರಾಯೇಲ್ಯರು, ಪರಲೋಕದ ಚೀಯೋನ್ ಪರ್ವತದ ಮೇಲೆ ಕುರಿಯಾದ ಯೇಸು ಕ್ರಿಸ್ತನೊಂದಿಗೆ ನಿಂತಿರುವವರೋಪಾದಿ ಚಿತ್ರಿಸಲ್ಪಟ್ಟಿದ್ದಾರೆ. ಪುನರುತಿಥ್ತರಾದ ಮೇಲೆ, ಅವರು ಕ್ರಿಸ್ತನೊಂದಿಗೆ ಸಹ ರಾಜರು ಮತ್ತು ಯಾಜಕರುಗಳಾಗಿ ಆಳಲಿರುವರು. (2 ಸಮುವೇಲ 7:11-16; ಪ್ರಕಟನೆ 7:4; 14:1-4; 20:6) ಯಾರು ಹೊಸ ಒಡಂಬಡಿಕೆಯೊಳಗೆ ಮತ್ತು ಯೇಸುವಿನೊಂದಿಗೆ ವೈಯಕ್ತಿಕ ಒಡಂಬಡಿಕೆಯೊಳಗೆ ಇದ್ದಾರೋ, ಅವರು ಮಾತ್ರವೇ ಕರ್ತನ ಸಂಧ್ಯಾ ಭೋಜನದ ಕುರುಹುಗಳಲ್ಲಿ ಯುಕ್ತವಾಗಿಯೇ ಪಾಲುತಕ್ಕೊಳ್ಳುವರು.
ಅವರು ಆತನ ಮಕ್ಕಳಾಗಿದ್ದಾರೆ ಮತ್ತು ಕ್ರಿಸ್ತನೊಂದಿಗೆ ಬಾಧ್ಯರಾಗಿದ್ದಾರೆ ಎಂದು ಅಭಿಷಿಕ್ತರ ಆತ್ಮದೊಂದಿಗೆ ದೇವರ ಆತ್ಮವು ಸಾಕ್ಷಿ ಹೇಳುತ್ತದೆ. ಪೌಲನು ಬರೆದುದು: “ನಾವು ದೇವರ ಮಕ್ಕಳಾಗಿದ್ದೇವೆಂಬದಕ್ಕೆ ಪವಿತ್ರಾತ್ಮನೇ ನಮ್ಮ ಆತ್ಮದೊಂದಿಗೆ ಸಾಕ್ಷಿಹೇಳುತ್ತಾನೆ. ಮಕ್ಕಳಾಗಿದ್ದರೆ ಬಾಧ್ಯರಾಗಿದ್ದೇವೆ; ದೇವರಿಗೆ ಬಾಧ್ಯರು, ಕ್ರಿಸ್ತನೊಂದಿಗೆ ಬಾಧ್ಯರು. ಹೇಗಂದರೆ ಕ್ರಿಸ್ತನಿಗೆ ಸಂಭವಿಸಿದ ಬಾಧೆಗಳಲ್ಲಿ ನಾವು ಪಾಲುಗಾರರಾಗುವದಾದರೆ ಆತನ ಮಹಿಮೆಯಲ್ಲಿಯೂ ಪಾಲುಗಾರರಾಗುವೆವು.” (ರೋಮಾಪುರ 8:16, 17) ದೇವರ ಪವಿತ್ರ ಆತ್ಮವು, ಯಾ ಕಾರ್ಯಕಾರಿ ಶಕ್ತಿಯು, ಅಭಿಷಿಕ್ತರಲ್ಲಿ ಸ್ವರ್ಗೀಯ ಜೀವಿತಕ್ಕಾಗಿ ಒಂದು ಅಸಾಮಾನ್ಯ ಆಶೆಯನ್ನು ಉಂಟುಮಾಡುತ್ತದೆ. ಶಾಸ್ತ್ರವಚನಗಳಲ್ಲಿ ಪರಲೋಕದ ಜೀವಿತದ ಕುರಿತು ಹೇಳಿದ ಪ್ರತಿಯೊಂದು ವಿಷಯವು ಅವರಿಗೆ ನಿರ್ದೇಶಿಸಲ್ಪಟ್ಟಿದೆ ಎಂದವರು ದೃಷ್ಟಿಸುತ್ತಾರೆ ಮತ್ತು ಮಾನವ ಜೀವ ಮತ್ತು ಕುಟುಂಬ ಸದಸ್ಯರುಗಳ ಸಹಿತ ಎಲ್ಲಾ ಐಹಿಕ ಸಂಗತಿಗಳನ್ನು ಹಿಂದಕ್ಕೆ ಬಿಟ್ಟುಹೋಗಲು ಇಚ್ಛೆಯುಳ್ಳವರಾಗಿದ್ದಾರೆ. ಭೂಪ್ರಮೋದವನದಲ್ಲಿನ ಜೀವಿತವು ಆಶ್ಚರ್ಯಕರವಾಗಿರುವುದಾದರೂ, ಅವರಿಗೆ ಆ ನಿರೀಕ್ಷೆಯು ಇರುವುದಿಲ್ಲ. (ಲೂಕ 23:43) ಸುಳ್ಳು ಧಾರ್ಮಿಕ ನೋಟಗಳ ಮೇಲಾಧಾರಿತವಲ್ಲದ ಒಂದು ನಿರ್ದಿಷ್ಟ ಮತ್ತು ಬದಲಾಗದ ಸ್ವರ್ಗೀಯ ನಿರೀಕ್ಷೆಯು, ಸ್ಮಾರಕಾಚರಣೆಯ ಕುರುಹುಗಳಲ್ಲಿ ಪಾಲುತಕ್ಕೊಳ್ಳುವಂತೆ ಅವರನ್ನು ಅರ್ಹರನ್ನಾಗಿ ಮಾಡುತ್ತದೆ.
ಅಂತಹ ಒಂದು ಕರೆಯು ಒಬ್ಬನಿಗೆ ಇರದಿರುವಾಗ, ವ್ಯಕ್ತಿಯೊಬ್ಬನು ತಾನು ಸ್ವರ್ಗೀಯ ಅರಸ ಮತ್ತು ಯಾಜಕನಾಗಲು ಕರೆಯಲ್ಪಟ್ಟಿದೇನ್ದೆ ಎಂದು ಪ್ರತಿನಿಧಿಸಿಕೊಳ್ಳುವುದಾದರೆ, ಯೆಹೋವನು ಅಪ್ರಸನ್ನಗೊಳ್ಳಲಿರುವನು. (ರೋಮಾಪುರ 9:16; ಪ್ರಕಟನೆ 22:5) ದುರಭಿಮಾನದಿಂದ ಯಾಜಕತ್ವವನ್ನು ಪಡೆಯಲು ಹವಣಿಸಿದ್ದ ಕೋರಹನನ್ನು ದೇವರು ಹತಿಸಿದನು. (ವಿಮೋಚನಕಾಂಡ 28:1; ಅರಣ್ಯಕಾಂಡ 16:4-11, 31-35) ಆದುದರಿಂದ, ಬಲವಾದ ಆವೇಶಗಳು ಯಾ ಹಿಂದಿನ ಧಾರ್ಮಿಕ ಕಲ್ಪನೆಗಳು ಸ್ಮಾರಕಾಚರಣೆಯ ಕುರುಹುಗಳಲ್ಲಿ ತಪ್ಪಾಗಿ ಪಾಲುತಕ್ಕೊಳ್ಳುವಂತೆ ಒಬ್ಬ ವ್ಯಕ್ತಿಯನ್ನು ಮಾಡಿರುವುದಾದರೆ, ಆಗೇನು? ಹಾಗಿದ್ದಲ್ಲಿ, ಅವನು ಯಾ ಅವಳು ಪಾಲುತಕ್ಕೊಳ್ಳುವದನ್ನು ನಿಲ್ಲಿಸತಕ್ಕದ್ದು ಮತ್ತು ದೇವರ ಕ್ಷಮಾಪಣೆಗಾಗಿ ಬೇಡತಕ್ಕದ್ದು.—ಕೀರ್ತನೆ 19:13.
ನೀವು ಪ್ರಭಾವಿತರಾಗುವ ವಿಧ
ಯೇಸುವಿನ ವಿಮೋಚನ ಯಜ್ಞದ ಮೂಲಕ ಪ್ರಯೋಜಿತನಾಗಲು ಮತ್ತು ಭೂಮಿಯ ಮೇಲೆ ನಿತ್ಯಜೀವವನ್ನು ಪಡೆಯಲು ವ್ಯಕ್ತಿಯೊಬ್ಬನು ಸ್ಮಾರಕಾಚರಣೆಯ ಕುರುಹುಗಳಲ್ಲಿ ಪಾಲುತಕ್ಕೊಳ್ಳಲೇ ಬೇಕೆಂದಿಲ್ಲ. ಉದಾಹರಣೆಗೆ, ಅಬ್ರಹಾಮ, ಸಾರ, ಇಸಾಕ, ರೆಬೆಕ್ಕ, ಬೋವಜ, ರೂತ್, ಮತ್ತು ದಾವೀದರಂತಹ ದೇವ-ಭೀರು ಜನರು ಈ ಕುರುಹುಗಳಲ್ಲಿ ಎಂದಾದರೂ ಪಾಲುತಕ್ಕೊಳ್ಳಲಿರುವರು ಎಂಬ ಯಾವ ಸೂಚನೆಯನ್ನೂ ಬೈಬಲ್ ಕೊಡುವುದಿಲ್ಲ. ಆದರೆ ಈ ಭೂಗೋಲದ ಮೇಲೆ ಮುಗಿಯದ ಜೀವವನ್ನು ಬಯಸುವ ಅವರು ಮತ್ತು ಇನ್ನಿತರರೆಲ್ಲರೂ ದೇವರಲ್ಲಿ ಮತ್ತು ಕ್ರಿಸ್ತನಲ್ಲಿ ಮತ್ತು ಯೇಸುವಿನ ವಿಮೋಚನ ಯಜ್ಞದ ಯೆಹೋವನ ಒದಗಿಸುವಿಕೆಯಲ್ಲಿ ನಂಬಿಕೆಯನ್ನು ಪ್ರದರ್ಶಿಸತಕ್ಕದ್ದು. (ಯೋಹಾನ 3:36; 14:1) ಕ್ರಿಸ್ತನ ಮರಣದ ವಾರ್ಷಿಕ ಆಚರಣೆಯು ಆ ಮಹಾ ಯಜ್ಞದ ಮರುಜ್ಞಾಪಕದೋಪಾದಿ ಕಾರ್ಯನಡಿಸುತ್ತದೆ.
ಯೇಸುವಿನ ಯಜ್ಞದ ಆ ಪ್ರಾಮುಖ್ಯತೆಯು ಅಪೊಸ್ತಲ ಯೋಹಾನನು ಹೇಳಿದ್ದರಲ್ಲಿ ತೋರಿಸಲ್ಪಟ್ಟಿದೆ: “ನೀವು ಪಾಪಮಾಡದಂತೆ ಈ ಮಾತುಗಳನ್ನು ನಿಮಗೆ ಬರೆಯುತ್ತೇನೆ. ಯಾವನಾದರೂ ಪಾಪಮಾಡಿದರೆ ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸು ಕ್ರಿಸ್ತನೆಂಬ ಸಹಾಯಕನು ನಮಗಿದ್ದಾನೆ. ಆತನು ನಮ್ಮ ಪಾಪಗಳನ್ನು ನಿವಾರಣಮಾಡುವ ಯಜ್ಞವಾಗಿದ್ದಾನೆ; ನಮ್ಮ ಪಾಪಗಳನ್ನು ಮಾತ್ರವಲ್ಲದೆ, ಸಮಸ್ತ ಲೋಕದ ಪಾಪಗಳನ್ನು ಸಹ ನಿವಾರಣಮಾಡುತ್ತಾನೆ.” (1 ಯೋಹಾನ 2:1, 2) ಯೇಸುವು “[ಅವರ] ಪಾಪಗಳನ್ನು ನಿವಾರಣಮಾಡುವ ಯಜ್ಞವಾಗಿದ್ದಾನೆ” ಎಂದು ಅಭಿಷಿಕ್ತ ಕ್ರೈಸ್ತರು ಹೇಳಶಕ್ತರು. ಆದಾಗ್ಯೂ, ಸಮಸ್ತ ಲೋಕದ ಪಾಪಗಳಿಗಾಗಿ ಒಂದು ಯಜ್ಞವಾಗಿಯೂ ಅವನು ಇದ್ದಾನೆ, ಹೀಗೆ, ಈಗ ಬಹಳ ಹತ್ತಿರವಿರುವ ಪ್ರಮೋದವನವಾದ ಭೂಮಿಯಲ್ಲಿ ವಿಧೇಯ ಮಾನವ ಕುಲಕ್ಕಾಗಿ ನಿತ್ಯಜೀವವನ್ನು ಸಾಧ್ಯಮಾಡುತ್ತಾನೆ.
ಕ್ರಿಸ್ತನ ಮರಣದ ಸ್ಮಾರಕಾಚರಣೆಯಲ್ಲಿ ಹಾಜರಿರುವ ಮೂಲಕ, ವಿಚಾರ-ಪ್ರೇರಕ ಬೈಬಲ್ ಪ್ರವಚನವೊಂದರಿಂದ ನೀವು ಪ್ರಯೋಜನ ಪಡೆಯುವಿರಿ. ನಮಗಾಗಿ ಯೆಹೋವ ದೇವರು ಮತ್ತು ಯೇಸು ಕ್ರಿಸ್ತನು ಎಷ್ಟನ್ನು ಮಾಡಿದ್ದಾರೆ ಎಂಬುದರ ಮರುಜ್ಞಾಪಕವು ನಿಮಗಾಗುವುದು. ದೇವರಿಗೆ ಮತ್ತು ಕ್ರಿಸ್ತನಿಗೆ ಹಾಗೂ ಯೇಸುವಿನ ವಿಮೋಚನ ಯಜ್ಞಕ್ಕಾಗಿ ಆಳವಾದ ಗಣ್ಯತೆಯಿರುವವರೊಂದಿಗೆ ಕೂಡಿಬರುವುದು ಆತ್ಮಿಕವಾಗಿ ಪ್ರತಿಫಲದಾಯಕವಾಗಲಿರುವುದು. ನಿತ್ಯ ಜೀವಕ್ಕೆ ನಡಿಸುವ ದೇವರ ಅಪಾತ್ರ ದಯೆಯನ್ನು ಪಡೆದುಕೊಳ್ಳುವವರಾಗುವ ನಿಮ್ಮ ಆಶೆಯನ್ನು ಆ ಸಂದರ್ಭವು ಚೆನ್ನಾಗಿ ಬಲಗೊಳಿಸಬಹುದಾಗಿದೆ. ಯೇಸು ಕ್ರಿಸ್ತನ ಮರಣದ ಸ್ಮಾರಕಾಚರಣೆಗಾಗಿ, ಎಪ್ರಿಲ್ 6, 1993ರ ಸೂರ್ಯಾಸ್ತಮಾನದ ನಂತರ ಯೆಹೋವನ ಸಾಕ್ಷಿಗಳೊಂದಿಗೆ ಜತೆಗೂಡಲು ನಾವು ಹೃದಯಪೂರ್ವಕವಾಗಿ ನಿಮ್ಮನ್ನು ಆಮಂತ್ರಿಸುತ್ತೇವೆ, ಕಾರಣವೇನಂದರೆ ಕರ್ತನ ಸಂಧ್ಯಾ ಭೋಜನವು ನಿಮಗೆ ಮಹತ್ತಾದ ಅರ್ಥವುಳ್ಳದ್ದಾಗಿರಬಲ್ಲದು. (w93 3⁄15)