“ಕಡೇ ಶತ್ರು” ಸೋಲಿಸಲ್ಪಡಲಿರುವುದು!
ನೀವು ಮಗುವಾಗಿದ್ದಾಗ, ಕತ್ತಲೆಯ ಭಯವಿದ್ದವರಾಗಿರಬಹುದು. ಭಯ ಹುಟ್ಟಿಸುವ ಕಥೆಗಳು ಮತ್ತು ಕೆಲವು ಯಕ್ಷಿಣಿಯ ಕಥೆಗಳೂ ಕೂಡ ನಿಮ್ಮನ್ನು ಚಿಂತೆಯಿಂದ ತುಂಬಿಸಿರಬಹುದು. ನಿದ್ರೆಹೋಗಲು ನೀವು ಪ್ರಯತ್ನಿಸುತ್ತಿದ್ದಾಗ, ಉರಿಯುವ ದೀಪವೊಂದನ್ನು ನಿಮ್ಮ ತಾಯಿ ಯಾ ತಂದೆ ಬಿಟ್ಟುಹೋದಾಗ, ಅದು ಎಷ್ಟು ಭರವಸದಾಯಕವಾಗಿತ್ತು!
ತದ್ರೀತಿಯಲ್ಲಿ ಮರಣವು ಅನೇಕರನ್ನು ಹೆದರಿಸುತ್ತದೆ. ಆದರೂ, ಅದು ಹಾಗೆ ಮಾಡುವ ಅಗತ್ಯವಿಲ್ಲ. ಯಾಕೆ? ಯಾಕಂದರೆ ಮರಣವು ನಿಜವಾಗಿಯೂ ಏನಾಗಿದೆಯೋ ಆ ಕಾರಣದಿಂದಲೇ.
ನಿಮ್ಮ ಶತ್ರುವನ್ನು ತಿಳಿಯಿರಿ
ಪ್ರಾಚೀನ ಇಸ್ರಾಯೇಲಿನ ವಿವೇಕಿ ಅರಸನಾದ ಸೊಲೊಮೋನನು ಘೋಷಿಸಿದ್ದು: “ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ.” (ಪ್ರಸಂಗಿ 9:5) ನಿಮ್ಮ ಸ್ವಂತ ಬೈಬಲಿನಲ್ಲಿ ಕಂಡುಕೊಳ್ಳಲ್ಪಟ್ಟ ಈ ದೈವಿಕವಾಗಿ ಪ್ರೇರೇಪಿಸಲ್ಪಟ್ಟ ಯೋಚನೆಗನುಸಾರ, ಮರಣವು ಕೇವಲ ಜೀವದ ವಿರುದ್ಧವಾಗಿದೆ. ಸತ್ತವರಿಗೆ ಯಾವುದೇ ಪ್ರಜ್ಞಾಪೂರ್ವಕ ಅಸ್ತಿತ್ವವಿರುವುದಿಲ್ಲ.
ಒಂದು ದೃಷ್ಟಾಂತ ರೂಪದಲ್ಲಿ ಮರಣವನ್ನು ಸೂಚಿಸುತ್ತಾ, ಕ್ರೈಸ್ತ ಅಪೊಸ್ತಲ ಪೌಲನು ಬರೆಯುವುದು: “ಮರಣವೇ, ನಿನ್ನ ಜಯವೆಲ್ಲಿ? ಮರಣವೇ, ನಿನ್ನ ವಿಷದ ಕೊಂಡಿ ಎಲ್ಲಿ?” ಮರಣವನ್ನುಂಟುಮಾಡುವ ಆ ವಿಷದ ಕೊಂಡಿಯು ಯಾವುದು? ಪೌಲನು ಹೇಳುವುದು: “ಮರಣದ ಕೊಂಡಿ ಪಾಪವೇ.” (1 ಕೊರಿಂಥ 15:55, 56; ಹೋಶೇಯ 13:14) ಹಾಗಾದರೆ, ಈ ಮಾರಕ ಕೊಂಡಿಯ ಮೂಲ ಏನಾಗಿದೆ? ಶಾಸ್ತ್ರವಚನಗಳಲ್ಲಿ ಬೇರೊಂದು ಕಡೆಯಲ್ಲಿ, ಪೌಲನು ಹೇಳುವುದು: “ಒಬ್ಬ ಮನುಷ್ಯನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರು ಪಾಪ ಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.” (ರೋಮಾಪುರ 5:12) “ಆದಾಮನ ಸಂಬಂಧದಿಂದ ಎಲ್ಲರು ಸಾಯುವವರಾದರು” ಎಂದು ಅವನು ಹೇಳುವಾಗ, ಆ “ಒಬ್ಬ ಮನುಷ್ಯನ” ಗುರುತಿನ ಕುರಿತು ಯಾವುದೇ ಸಂಶಯಕ್ಕೆ ಅಪೊಸ್ತಲನು ಆಸ್ಪದ ಕೊಡುವುದಿಲ್ಲ. (1 ಕೊರಿಂಥ 15:22) ಹೌದು, ನಮ್ಮ ಪ್ರಥಮ ಪೂರ್ವಜನಾದ ಆದಾಮನ ಅವಿಧೇಯತೆಯ ಮುಖಾಂತರ, ನಾವೆಲ್ಲರು ಮರಣದ ಕೊಂಡಿಗೆ ಒಳಪಟ್ಟಿರುವವರಾಗಿದ್ದೇವೆ.—ಆದಿಕಾಂಡ 3:1-19.
ಹಿತಕರವಾದ ಪರಿಸರಗಳಲ್ಲಿ ಒಳ್ಳೆಯ ಆರೋಗ್ಯ ಮತ್ತು ಒಂದು ಪ್ರೀತಿಪರ ಕುಟುಂಬವಿರುವಲ್ಲಿ, ನಮ್ಮಲ್ಲಿ ಯಾರೂ ಕೂಡ ಸಾಯಲು ಆರಿಸಿಕೊಳ್ಳಲಾರೆವು. ಹಾಗಿದ್ದರೂ ಬೈಬಲ್ ತೋರಿಸುವಂತೆ, “ಕಾಲವೂ ಮತ್ತು ಮುಂಗಾಣದ ಘಟನೆಗಳೂ” ನಮ್ಮನ್ನು ಜೀವದಿಂದ ವಂಚಿತರನ್ನಾಗಿ ಮಾಡಬಹುದು. (ಪ್ರಸಂಗಿ 9:11, NW) ವಾಸ್ತವದಲ್ಲಿ ನಮ್ಮ ಜೀವಕ್ಕೆ ನಾಳೆ ಏನು ಸಂಭವಿಸುವುದೊ ಎಂದು ನಮಗೆ ಗೊತ್ತಿಲ್ಲ. (ಯಾಕೋಬ 4:14) ಒಂದು ವಿಷಯವಾದರೊ ಖಂಡಿತವಾಗಿದೆ—ನಾವೆಲ್ಲರು ಪಾಪ ಮತ್ತು ಮರಣವನ್ನು ಪಿತ್ರಾರ್ಜಿತವಾಗಿ ಪಡೆದಿದ್ದೇವೆ. ಆದುದರಿಂದ, ಮರಣವು ಒಬ್ಬ ಶತ್ರುವಿನಂತೆ ನಮ್ಮನ್ನು ಬೆನ್ನಟ್ಟುತ್ತದೆ ಮತ್ತು ಹೊಡೆಯುತ್ತದೆ.
ಪ್ರಿಯರೊಬ್ಬರ ಮರಣದೊಂದಿಗೆ ನಿಭಾಯಿಸುವುದು
ಪ್ರಿಯರೊಬ್ಬರಿಗೆ ಅದು ತಾಕಿದಾಗ ಮರಣವು ವಿಶೇಷವಾಗಿ ಒಂದು ಶತ್ರುವಾಗಿದೆ. ಗುಣವಾಗದ ಒಂದು ರೋಗವಿದ್ದ ಒಬ್ಬಾಕೆ ಹೆಂಡತಿಯು, ಮರಣವನ್ನು ನಿರೀಕ್ಷಿಸುವಾಗ ಅವಳ ಗಂಡನಿಗೆ “ನಿನಗೆ ಅದು ತುಂಬಾ ಕಠಿನವಾಗಿರುವುದು” ಎಂದಳು. ಅವಳು ಹಾಗೆ ಯಾಕೆ ಹೇಳಬಹುದಿತ್ತು? ಯಾಕಂದರೆ “ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣ ಶಕಿಯ್ತಿಂದ ಮಾಡು; ನೀನು ಸೇರಬೇಕಾದ ಪಾತಾಳದಲ್ಲಿ [ಶಿಯೋಲ್—ಮಾನವಕುಲದ ಸಾಮಾನ್ಯ ಸಮಾಧಿ, NW] ಯಾವ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ”, ಎಂದು ಬೈಬಲ್ ಹೇಳುತ್ತದೆ. (ಪ್ರಸಂಗಿ 9:10) ಸತ್ತವರು ಇನ್ನು ಮುಂದೆ ಕಷ್ಟಾನುಭವಿಸುವುದಿಲ್ಲ. ಆದರೆ ಬದುಕಿರುವ ಸಂಬಂಧಿಕರ ಹಾಗೂ ಗೆಳೆಯರ ಮೇಲೆ ದುಃಖದ ಹೊರೆಯು ಬೀಳುತ್ತದೆ. ಅಂಥ ಕಷ್ಟಾನುಭವದ ಕುರಿತು ಏನನ್ನಾದರೂ ಮಾಡಸಾಧ್ಯವಿದೆಯೋ?
ದೇವರ ವಾಕ್ಯವಾದ ಬೈಬಲಿನ ಪುಟಗಳು, ಸಾಂತ್ವನದ ಅನೇಕ ಮಾತುಗಳನ್ನು ಹೊಂದಿವೆ. ಉದಾಹರಣೆಗೆ, ಕೀರ್ತನೆಗಳನ್ನು ಓದುವುದು ಮತ್ತು ಅವುಗಳ ಮೇಲೆ ಮನನ ಮಾಡುವುದು ನಿಶ್ಚಯವಾಗಿಯೂ ದುಃಖೋಪಶಮನದ ಒಂದು ಮೂಲವಾಗಿದೆ. “ನಮ್ಮ ಭಾರವನ್ನು ಹೊರುವ ಯೆಹೋವನಿಗೆ ಸ್ತೋತ್ರವಾಗಲಿ. ನಮ್ಮನ್ನು ರಕ್ಷಿಸುವ ದೇವರು ಆತನೇ,” ಎಂಬ ಇಂಥ ಮಾತುಗಳು ನಿಶ್ಚಯವಾಗಿಯೂ ದುಃಖೋಪಶಮನವನ್ನು ನೀಡುವಂಥವುಗಳಾಗಿವೆ.—ಕೀರ್ತನೆ 68:19.
ಸಾಂತ್ವನದ ಇನ್ನೊಂದು ಮೂಲವು ಕ್ರೈಸ್ತ ಸಭೆಯಾಗಿದೆ. ಸಾ.ಶ. ಮೊದಲನೆಯ ಶತಮಾನದಲ್ಲಿ, ಅಪೊಸ್ತಲ ಪೌಲನು ಹೀಗೆ ಬರೆದನು: “ದಿಕ್ಕಿಲ್ಲದ ವಿಧವೆಯರನ್ನು ಸಂರಕ್ಷಿಸು. ಆದರೆ ಒಬ್ಬ ವಿಧವೆಗೆ [ಪ್ರಾಪಂಚಿಕವಾಗಿ ಪೋಷಿಸಲು ಶಕ್ತರಾಗಿರುವ] ಮಕ್ಕಳಾಗಲಿ ಮೊಮ್ಮಕ್ಕಳಾಗಲಿ ಇದ್ದರೆ ಅವರೇ ಮೊದಲು ತಮ್ಮ ಮನೆಯವರಿಗೆ ಭಕ್ತಿತೋರಿಸುವದಕ್ಕೂ ತಂದೆತಾಯಿಗಳಿಗೆ ಪ್ರತ್ಯುಪಕಾರ ಮಾಡುವದಕ್ಕೂ ಕಲಿತುಕೊಳ್ಳಲಿ; ಇದು ದೇವರ ದೃಷ್ಟಿಯಲ್ಲಿ ಮೆಚ್ಚಿಕೆಯಾದದ್ದು. ವಯಸ್ಸಿನಲ್ಲಿ ಅರುವತ್ತಕ್ಕೆ ಕಡಿಮೆಯಿಲ್ಲದ ವಿಧವೆಯನ್ನು ವಿಧವೆಯರ ಪಟ್ಟಿಯಲ್ಲಿ ಸೇರಿಸಬಹುದು; ಅಂಥವಳಾದರೂ ಒಬ್ಬ ಗಂಡನಿಗೆ ಮಾತ್ರ ಹೆಂಡತಿಯಾಗಿದ್ದವಳೂ ಸತ್ಕ್ರಿಯೆಗಳನ್ನು ಮಾಡುವವಳೆಂದು ಹೆಸರುಗೊಂಡವಳೂ ಆಗಿರಬೇಕು; ಅಂದರೆ ಮಕ್ಕಳನ್ನು ಸಾಕಿದವಳಾಗಲಿ ಅತಿಥಿಸತ್ಕಾರವನ್ನು ಮಾಡಿದವಳಾಗಲಿ ದೇವಜನರಿಗೆ ಉಪಚಾರಮಾಡಿದವಳಾಗಲಿ ಸಂಕಟದಲ್ಲಿ ಬಿದ್ದವರಿಗೆ ಸಹಾಯಮಾಡಿದವಳಾಗಲಿ ಎಲ್ಲಾ ಸತ್ಕಾರ್ಯಗಳಲ್ಲಿ ಆಸಕ್ತಿಯುಳ್ಳವಳಾಗಲಿ ಆಗಿರಬೇಕು.” (1 ತಿಮೊಥೆಯ 5:3, 4, 9, 10) ಅಂಥ ಜೊತೆ ವಿಶ್ವಾಸಿಗಳಿಗೆ ಇಂದು ಯೆಹೋವನ ಸಾಕ್ಷಿಗಳು ತದ್ರೀತಿಯಲ್ಲಿ ಸಹಾಯ ಮತ್ತು ಸಾಂತ್ವನವನ್ನು ನೀಡುತ್ತಾರೆ.
ಅನೇಕ ವೇಳೆ ವಿಯೋಗ ಹೊಂದಿದ ವ್ಯಕ್ತಿಯು ಮಾಡಬೇಕಾದ ಅತ್ಯಂತ ದೊಡ್ಡ ಹೊಂದಾಣಿಕೆಯು ಭಾವಾತ್ಮಕವಾದದ್ದಾಗಿದೆ. ಎರಡು ವರ್ಷಗಳ ಹಿಂದೆ ಸಂಗಾತಿಯನ್ನು ಮರಣದಲ್ಲಿ ಕಳೆದುಕೊಂಡ ಒಬ್ಬ ಮನುಷ್ಯನು “ನಾನು ನನ್ನ ಹೆಂಡತಿಯನ್ನು ಬಹಳವಾಗಿ ಪ್ರೀತಿಸುತ್ತಿದ್ದೆ” ಎಂದು ಬರೆದನು. “ನನ್ನ ಜೀವನದಲ್ಲಿ ಇದು ಅತೀ ದುಃಖಕರವಾದ ಘಟನೆಯಾಗಿದೆ, ಮತ್ತು ತಾಳಿಕೊಳ್ಳಲು ಕಷ್ಟಕರವಾಗಿ ನಾನು ಕಂಡುಕೊಳ್ಳುತ್ತೇನೆ.” ಮಾನವ ಸಂಬಂಧಗಳಲ್ಲಿಯೇ ಅತಿ ನಿಕಟವಾದ ಸಂಬಂಧದಲ್ಲಿ, ಕೆಲವು ಸಮಯಗಳ ವರೆಗೆ ಮದುವೆಯಾದ ಒಬ್ಬ ವ್ಯಕ್ತಿ ಅವನ ಯಾ ಅವಳ ಜೀವನವನ್ನು ಹಂಚಿಕೊಂಡಿರುತ್ತಾರೆ. ಮದುವೆಯ ಒಬ್ಬ ಸಂಗಾತಿಯು ಸತ್ತಾಗ, ಬದುಕಿ ಉಳಿದ ಜೊತೆಗಾರನು ಸ್ವಾಭಾವಿಕವಾಗಿಯೇ ಒಂದು ಮಹಾ ನಷ್ಟವನ್ನು ಅನುಭವಿಸುತ್ತಾನೆ. ಆ ವ್ಯಕ್ತಿಯು ಸಹಾಯಕ್ಕಾಗಿ ಯಾರ ಕಡೆಗೆ ತೆರಳಬಲ್ಲನು?
ಅಂಥ ಸನ್ನಿವೇಶಗಳಲ್ಲಿ, ಒಳ್ಳೆಯ ಕ್ರೈಸ್ತ ಸಹವಾಸಿಗಳು ಭಕ್ತಿವೃದ್ಧಿಮಾಡುವವರಾಗಿರಬಲ್ಲರು. “ಮಿತ್ರನ ಪ್ರೀತಿಯು ನಿರಂತರ; ಸಹೋದರನ ಜನ್ಮವು ಆಪತ್ತಿನಲ್ಲಿ ಸಾರ್ಥಕ,” ಎನ್ನುತ್ತದೆ ಜ್ಞಾನೋಕ್ತಿಯೊಂದು. (ಜ್ಞಾನೋಕ್ತಿ 17:17) ಒಬ್ಬ ವಿಧವೆ ಯಾ ವಿಧುರನಿಗೆ ಸಹಾಯದ—ನಿಜವಾದ ಬೆಂಬಲವನ್ನು ಕೊಡುವ ಸಂಗಾತಿಗಳು—ಅಗತ್ಯವಿದೆ. ಅದು ಕಣ್ಣೀರುಗಳನ್ನು ತರುವುದಾದರೂ ಕೂಡ, ಶೋಕಿಸುವ ವ್ಯಕ್ತಿಯು ಮಾತಾಡುವಂತೆ ವಿವೇಕಿ ಮಿತ್ರರು ಉತ್ತೇಜಿಸುತ್ತಾರೆ. ಸಂಗಾತಿಯನ್ನು ಕಳೆದುಕೊಳ್ಳುವುದರ ನೋವು ಮತ್ತು ಮಾನಸಿಕ ವ್ಯಥೆಯನ್ನು ಈಗಾಗಲೇ ಅನುಭವಿಸಿದ್ದ ಒಬ್ಬ ಕ್ರೈಸ್ತನು, ಬಹುಶಃ ಸ್ವಲ್ಪ ದಯೆಯುಳ್ಳ ನೆರವನ್ನು ನೀಡಬಲ್ಲನು. “ಮನಗುಂದಿದವರನ್ನು ಸಾಂತ್ವನಗೊಳಿಸಿರಿ,” ಎಂದು ಬೈಬಲ್ ಬುದ್ಧಿಹೇಳುತ್ತದೆ. (1 ಥೆಸಲೊನೀಕ 5:14, NW) ಆದರೆ ವಿಧವೆಯರು ಮತ್ತು ವಿಧುರರು ತಮ್ಮ ವಿವಾಹದ ಸಂಗಾತಿಗಳು ಇಲ್ಲದಕ್ಕಾಗಿ ವಿಷಾದಪಡುಡಿರುತ್ತಾರೆಂಬುದನ್ನು ನೆನಪಿನಲ್ಲಿಡಿ. ಆದುದರಿಂದ, ಎಲ್ಲರು ನಿರ್ಮಲ ನಡತೆಯನ್ನು ಕಾಪಾಡುವಂತೆ ಶಕ್ತಗೊಳಿಸುವ ಪರಿಸ್ಥಿತಿಗಳ ಕೆಳಗೆ ಮಾತ್ರ ವಿಯೋಗ ಹೊಂದಿದವರು ಇತರರೊಂದಿಗೆ ಅಂತರಂಗ ಹೇಳಿಕೊಳ್ಳಬೇಕು.—1 ಪೇತ್ರ 2:12.
ಮರಣವು ಉಂಟುಮಾಡುವ ನೋವುಗಳಿಗೆ ಅತ್ಯುತ್ತಮವಾದ ಪ್ರತಿರೋಧಕವು, ಇತರರಿಗೆ ಸಹಾಯ ಮಾಡುವುದರಲ್ಲಿ ನಮ್ಮನ್ನು ಕಾರ್ಯಮಗ್ನರಾಗಿರಿಸಿಕೊಳ್ಳುವುದೇ ಆಗಿದೆ—ಸಹಾಯದ ಅಗತ್ಯವು ಅವರಿಗೆ ಇದೆ ಎಂದು ನಂಬುವ ಜನರಿಗೆ ಇದು ನಿಜವಾಗಿಯೂ ಒಂದು ಪಂಥಾಹ್ವನವಾಗಿದೆ! ಅಲ್ಲಿಯೇ ನಿಸ್ವಾರ್ಥತೆಯು ತನ್ನ ಪಾತ್ರವನ್ನು ವಹಿಸುತ್ತದೆ. ಇತರರಿಗಾಗಿ ನಿಸ್ವಾರ್ಥದಿಂದ ವಿಷಯಗಳನ್ನು ಮಾಡುವುದು, ದುಃಖ ಮತ್ತು ಶೋಕವನ್ನು ಓಡಿಸಲು ಸಹಾಯಮಾಡುತ್ತದೆ. ಯಾಕಂದರೆ “ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ,” ಎಂದು ಯೇಸು ಹೇಳಿದನು.—ಅ. ಕೃತ್ಯಗಳು 20:35.
ಮರಣದ ಮೇಲೆ ಜಯ
ಜೇನುನೊಣದ ಕೊಂಡಿಯು ಬಹಳ ವೇದನಾಮಯವಾಗಿ, ಮಾರಕವಾಗಿಯೂ ಕೂಡ ಇರಬಲ್ಲದು. ಆದರೂ, ನಿಮ್ಮ ಚರ್ಮದಿಂದ ಕೀಟದ ಕೊಂಡಿಯ ತೆಗೆಯುವಿಕೆಯು ಉಪಶಮನವನ್ನು ತರಲು ಸಾಮಾನ್ಯವಾಗಿ ಸಹಾಯಮಾಡುವುದು. ಆದರೆ ಮರಣವನ್ನು ಉತ್ಪಾದಿಸುವ ಕೊಂಡಿಯಿಂದ ಉಪಶಮನಕ್ಕಾಗಿ ಯಾವ ಪ್ರತೀಕ್ಷೆಗಳು ಇವೆ?
ಮರಣವನ್ನು ಉತ್ಪಾದಿಸುವ ಕೊಂಡಿಯು ಪಾಪವಾಗಿದೆ ಎಂದು ವಿವರಿಸಿದ ಬಳಿಕ, ಪೌಲನು ಉದ್ಗರಿಸುವುದು: “ಆದರೆ ದೇವರು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ನಮಗೆ ಜಯವನ್ನು ಕೊಟ್ಟಿದ್ದಾನೆ; ಆತನಿಗೆ ಸ್ತೋತ್ರ.” (1 ಕೊರಿಂಥ 15:57) ಮರಣದ ಮೇಲೆ ಜಯವು ಕ್ರಿಸ್ತನೊಂದಿಗೆ ಹೇಗೆ ಜೊತೆಗೂಡಿದೆ? ಅವನು ತನ್ನ ಕುರಿತಾಗಿಯೇ ಹೇಳುವಾಗ, ವಿಷಯವು ಹೀಗಿದೆ ಎಂದು ಯೇಸು ತೋರಿಸಿದನು: “ಹಾಗೆಯೇ ಮನುಷ್ಯಕುಮಾರನು ಸೇವೆಮಾಡಿಸಿಕೊಳ್ಳುವದಕ್ಕೆ ಬರಲಿಲ್ಲ, ಸೇವೆ ಮಾಡುವದಕ್ಕೂ ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕೂ ಬಂದನು.” (ಮತ್ತಾಯ 20:28) ಹೌದು, ದೇವರ ಮಗನಾದ ಯೇಸು ಕ್ರಿಸ್ತನಲ್ಲಿ ಮತ್ತು ಅವನ ಮುಖಾಂತರ ಯೆಹೋವನು ಒದಗಿಸಿದ ವಿಮೋಚನಾ ಯಜ್ಞದಲ್ಲಿ ನಂಬಿಕೆ ಇಡುವವರಿಗೆ, ಆದಾಮನಿಂದ ಪಡೆದ ಮರಣವು ಶಾಶ್ವತ ಇಲ್ಲಮೆಯಾಗಿ ಪರಿಣಮಿಸುವುದಿಲ್ಲ.—ಯೋಹಾನ 3:16.
ಯೇಸುವಿನ ಮಾತುಗಳು ನಿಜವಾಗಿಯೂ ಉತ್ಸಾಹಗೊಳಿಸುವಂಥವಾಗಿವೆ: “ಸಮಾಧಿಗಳಲ್ಲಿರುವವರೆಲ್ಲರು ಆತನ ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ. ಒಳ್ಳೇದನ್ನು ಮಾಡಿದವರಿಗೆ ಜೀವಕ್ಕಾಗಿ ಪುನರುತ್ಥಾನವಾಗುವದು; ಕೆಟ್ಟದ್ದನ್ನು ನಡಿಸಿದವರಿಗೆ ತೀರ್ಪಿಗಾಗಿ ಪುನರುತ್ಥಾನವಾಗುವದು.”—ಯೋಹಾನ 5:28, 29.
ಶತಮಾನಗಳ ಮುಂಚೆ, ದೇವರ ಪ್ರವಾದಿಯಾದ ಯೆಶಾಯನು ಮುಂತಿಳಿಸಿದ್ದು: “ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವನು; ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರಸಿಬಿಡುವನು.” (ಯೆಶಾಯ 25:8) ಪುನಃ, ಪ್ರಕಟನೆ 21:4 ರಲ್ಲಿ, ಬೈಬಲ್ ಅದ್ಭುತಕರವಾದ ಈ ಪ್ರತೀಕ್ಷೆಯನ್ನು ಸಾದರಪಡಿಸುತ್ತದೆ: “[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.” ಮರಣದಲ್ಲಿ ನಿದ್ರಿಸುವವರಿಗಾಗಿರುವ ಈ ಬೈಬಲ್ ನಿರೀಕ್ಷೆಯಿಂದ ಬಲಗೊಳಿಸಲ್ಪಟ್ಟು, ವಿಯೋಗಗೊಳಿಸಲ್ಪಟ್ಟವರು “ನಿರೀಕ್ಷೆಯಿಲ್ಲದವರಾದ ಇತರರಂತೆ ದುಃಖಿಸುವ,” ಅಗತ್ಯ ಇರುವುದಿಲ್ಲ.—1 ಥೆಸಲೊನೀಕ 4:13.
ಬೈಬಲಿನಲ್ಲಿ ಪ್ರಕಟಿಸಲಾದಂತೆ, ಮಾನವಕುಲಕ್ಕಾಗಿ ದೇವರು ಏನನ್ನು ಕಾದಿರಿಸಿದ್ದಾನೆಂಬುದನ್ನು ಚಿತ್ರಿಸಿಕೊಳ್ಳಲು ಪ್ರಯತ್ನಿಸಿರಿ. ಬರಲಿರುವ “ಮಹಾ ಸಂಕಟವು” ಪ್ರಚಲಿತ ದುಷ್ಟ ವಿಷಯಗಳ ವ್ಯವಸ್ಥೆಗಾಗಿ ನಾಶನದ ಅರ್ಥದಲ್ಲಿದೆ. (ಪ್ರಕಟನೆ 7:14) ಸುಳ್ಳು ಧರ್ಮವನ್ನು ಆಚರಿಸುತ್ತಿರುವವರು ತಮ್ಮ ಅಂತ್ಯವನ್ನು ಎದುರು ನೋಡುತ್ತಾರೆ. ಬರ ಮತ್ತು ಯುದ್ಧಕ್ಕೆ ನೆರವು ನೀಡುವ ದುರಾಶೆಯ ರಾಜಕೀಯ ಮತ್ತು ವಾಣಿಜ್ಯ ಅಂಶಗಳು ಹೋಗಿವೆ. ಇಷ್ಟೊಂದು ಮಾನವ ಮರಣವನ್ನು ಉಂಟುಮಾಡಿದ ಪಿಶಾಚನಾದ ಸೈತಾನನನ್ನು ಅಧೋಲೋಕಕ್ಕೆ ದಬ್ಬಲು ಯೇಸು ಕ್ರಿಸ್ತನು ಮುಂದುವರಿಯುತ್ತಾನೆ. ಅನಂತರ, ಮಾನವಕುಲಕ್ಕೆ ಅವನ ವಿಮೋಚನಾ ಯಜ್ಞದ ಮೌಲ್ಯವನ್ನು ಅನ್ವಯಿಸುವ ಸಹಸ್ರ ವರ್ಷಗಳ ಆಳಿಕೆಯನ್ನು ಕ್ರಿಸ್ತನು ಆರಂಭಿಸುತ್ತಾನೆ. ನಿರೀಕ್ಷಿಸಲಾದ ಪುನರುತ್ಥಾನದಲ್ಲಿ ಸತ್ತವರು ಹಿಂದಿರುಗುತ್ತಾರೆ, ಮತ್ತು ದೇವರ ವಾಕ್ಯದಿಂದ ಬೆಳಕು ಎಷ್ಟು ಪ್ರಜ್ವಲಿಸುತ್ತದೆ ಎಂದರೆ, ಮಾನವಕುಲದ ವೈರಿ—ಮರಣದ ಕುರಿತು ಇರುವ ಮೂಢನಂಬಿಕೆಗಳು ಇನ್ನು ಮುಂದೆ ಆಸ್ತಿತ್ವದಲ್ಲಿ ಇರುವುದಿಲ್ಲ. ಆಗ ಜೀವಂತರಾಗಿರುವವರೆಲ್ಲರಿಗೆ ದೇವರ ಮಾರ್ಗಗಳನ್ನು ಕಲಿಯುವ ಮತ್ತು ಆತನ ನೀತಿಯ ಮಟ್ಟಕ್ಕೆ ಅನುವರ್ತಿಸುವ ಅವಕಾಶವಿದೆ.—ಜ್ಞಾನೋಕ್ತಿ 4:18; ಅ. ಕೃತ್ಯಗಳು 24:15; ಇಬ್ರಿಯ 2:14, 15; ಪ್ರಕಟನೆ 18:4-8; 19:19-21; 20:1-3.
‘ಆತನು . . . ಎಲ್ಲಾ ಅಧಿಕಾರವನ್ನೂ . . . ತಂದೆಯಾಗಿರುವ ದೇವರಿಗೆ ರಾಜ್ಯವನ್ನು ಒಪ್ಪಿಸಿಕೊಡುವಾಗ ಸಮಾಪ್ತಿ,’ ಎನ್ನುತ್ತಾನೆ ಪೌಲನು. ‘ತಾನು ಎಲ್ಲಾ ವಿರೋಧಿಗಳನ್ನು ತನ್ನ ಪಾದಗಳ ಕೆಳಗೆ ಹಾಕಿಕೊಳ್ಳುವ ತನಕ ರಾಜ್ಯವನ್ನಾಳುವದು ಅವಶ್ಯ. ಮರಣವು ಕಡೇ ಶತ್ರುವಾಗಿ ನಿವೃತ್ತಿಯಾಗುವದು.’ (1 ಕೊರಿಂಥ 15:24-26) ಆದಾಮನ ಪಾಪದಿಂದ ಫಲಿಸುವ ಪ್ರತಿಯೊಂದು ನ್ಯೂನತೆಯು ಇಲ್ಲದೇ ಹೋಗುವುದು. ಕೊನೆಯ ಪರೀಕ್ಷೆಯು ನಡೆಯುತ್ತದೆ, ಮತ್ತು ದೇವರನ್ನು ಪ್ರೀತಿಸುವವರು ಅದರಿಂದ ನಂಬಿಗಸ್ತಿಕೆಯಿಂದ ಹೊರಬರುತ್ತಾರೆ. (ಪ್ರಕಟನೆ 20:4-10) ಪರಿಪೂರ್ಣತೆಗೆ ಪುನಃಸ್ಥಾಪಿಸಲ್ಪಟ್ಟ ಈ ವಿಧೇಯ ಮಾನವರು, ಎಪ್ಪತ್ತು ಯಾ ಕೇವಲ ನೂರಹತ್ತು ವರ್ಷಗಳ ತನಕ ಮಾತ್ರ ಜೀವಿಸದೆ, ಸದಾಕಾಲ ಜೀವಿಸುವರು. ಆತನ ಪ್ರಿಯ ಮಗನ ಮುಖಾಂತರ ದೇವರಿಂದ ಎಂತಹ ಒಂದು ಕೊಡುಗೆ!—ರೋಮಾಪುರ 6:23.
ಆದುದರಿಂದ, ನೀವು ಎಷ್ಟು ದೀರ್ಘ ಕಾಲದ ವರೆಗೆ ಜೀವಿಸಬಲ್ಲಿರಿ? ನಿಮ್ಮ ಆಯುಷ್ಕಾಲವು ಎಲ್ಲಾ ನಿರಂತರಕ್ಕೂ ವಿಸ್ತರಿಸಬಲ್ಲದು. ಈ ಲೋಕದ “ಅಂತ್ಯದ ಸಮಯದಲ್ಲಿ” ನೀವು ಜೀವಿಸುತ್ತಿರುವುದರಿಂದ, ನೀವು ಎಂದೂ ಸಾಯದೆ ಇರಬಹುದು. (ದಾನಿಯೇಲ 12:4; ಯೋಹಾನ 11:25, 26; 17:3) ನೀವು ದೈವಿಕ ಚಿತ್ತವನ್ನು ಮಾಡುವುದಾದರೆ, ದೇವರ ವಾಗ್ದತ್ತ ಹೊಸ ಲೋಕದೊಳಗೆ ನೀವು ಜೀವಿಸಬಹುದು.—2 ಪೇತ್ರ 3:13.
ಆದಾಗ್ಯೂ, ನೀವು ವೃದ್ಧರಾಗಿದ್ದರೆ, ಸಾಯುವುದರ ಸಾಧ್ಯತೆಯನ್ನು ನೈಜವಾಗಿ ಪರಿಗಣಿಸುವ ಅಗತ್ಯ ನಿಮಗಿದೆ. ಖಂಡಿತವಾಗಿಯೂ, ಪುನರುತ್ಥಾನದ ನಿರೀಕ್ಷೆಯು ಆನಂದವನ್ನು ತರುತ್ತದೆ. ಆದರೆ, ವಿಷಯಗಳ ಆ ಹೊಸ ವ್ಯವಸ್ಥೆಯಲ್ಲಿ ಕುಟುಂಬ ಜೀವಿತವನ್ನು ಯೆಹೋವನು ಹೇಗೆ ಏರ್ಪಡಿಸುವನೆಂದು ನೀವು ಯೋಚಿಸಬಹುದು. ಅಂಥ ವಿಷಯಗಳು ನಿಮ್ಮನ್ನು ಕಳವಳಗೊಳಿಸುವಂತೆ ಬಿಡಬೇಡಿರಿ, ಯಾಕಂದರೆ ಸದಾಕಾಲ ನಂಬಿಗಸ್ತರಾಗಿರುವವರ ಬಾಳುವ ಸಂತೋಷದ ಕಡೆಗೆ ಯೆಹೋವನು ಗಮನವನ್ನು ಕೊಡುವನು.
ಸೈತಾನನ ದುಷ್ಟ ವ್ಯವಸ್ಥೆಯ ಈ ಕಠಿನವಾದ “ಕಡೇ ದಿವಸಗಳು” ತಮ್ಮ ಸಮಾಪ್ತಿಯ ಕಡೆಗೆ ಮುಂದುವರಿಯುತ್ತಿರುವಂತೆ, ಈಗಲೇ ಯೆಹೋವನನ್ನು ಸೇವಿಸುವುದರ ನಿಮ್ಮ ಸುಯೋಗವನ್ನು ಮರಣದ ಭೀತಿಯು ಕಸಿದುಕೊಳ್ಳುವಂತೆ ಬಿಡಬೇಡಿರಿ. (2 ತಿಮೊಥೆಯ 3:1) ಮರಣದಲ್ಲಿ ನೀವು ಒಬ್ಬ ಪ್ರಿಯ ವ್ಯಕ್ತಿಯನ್ನು ಕಳೆದುಕೊಳ್ಳುವುದಾದರೆ, ಅದರ ಹಿಡಿತದ ತಾತ್ಕಾಲಿಕ ಪ್ರಕೃತಿಯಿಂದ ನಿಮ್ಮನ್ನು ಸಂತೈಸಿಕೊಳ್ಳಿರಿ. (ಪ್ರಕಟನೆ 20:13, 14) ಪುನರುತ್ಥಾನದ ನಿರೀಕ್ಷೆಯಲ್ಲಿ ಭರವಸೆಯನ್ನಿಡಿರಿ. ತದನಂತರ, ಹೊಸ ಲೋಕಕ್ಕೆ ಪ್ರವೇಶವನ್ನು ನೀವು ಮಹಾ ಸಂಕಟವನ್ನು ಪಾರಾಗುವ ಮೂಲಕ ಪಡೆಯಿರಿ, ಮತ್ತು ಪುನರುತ್ಥಾನದ ಮೂಲಕ ಪಡೆಯಿರಿ, ಕಡೇ ಶತ್ರುವಾದ ಮರಣವು ಇಲ್ಲಮೆಗೆ ತರಲ್ಪಡುತ್ತದೆ ಎಂಬ ಪ್ರೇರಿತ ಖಾತರಿ ಅಶ್ವಾಸನೆ ನಿಮಗಿರಲಿ.—ಪ್ರಕಟನೆ 7:9, 14.
[ಪುಟ 5 ರಲ್ಲಿರುವ ಚಿತ್ರ]
ಒಳ್ಳೆಯ ಕ್ರೈಸ್ತ ಸಹವಾಸಿಗಳು ವಿಯೋಗಗೊಳಿಸಲ್ಪಟ್ಟವರನ್ನು ಆತ್ಮಿಕವಾಗಿ ಕಟ್ಟಬಲ್ಲರು
[ಪುಟ 7 ರಲ್ಲಿರುವ ಚಿತ್ರ]
ಇತರರಿಗೆ ಸಹಾಯಮಾಡುವುದರಲ್ಲಿ ಮಗ್ನರಾಗಿರುವುದು, ಪ್ರಿಯರೊಬ್ಬರ ಮರಣದಿಂದ ಉಂಟಾದ ಶೋಕವನ್ನು ಕಡಿಮೆಗೊಳಿಸುತ್ತದೆ