ಯೆಹೋವನ ಮಾರ್ಗಗಳಲ್ಲಿ ಧೈರ್ಯದಿಂದ ನಡೆಯಿರಿ
“ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ ಆತನ ಮಾರ್ಗಗಳಲ್ಲಿ ನಡೆಯುವವನು ಧನ್ಯನು.”—ಕೀರ್ತನೆ 128:1.
1, 2. ಯೆಹೋವನ ಆದಿ ಸಾಕ್ಷಿಗಳ ಮಾತುಗಳ ಮತ್ತು ಕೃತ್ಯಗಳ ಬೈಬಲಿನ ದಾಖಲೆಯು ಯಾವ ರೀತಿಯಲ್ಲಿ ಸಹಾಯಕಾರಿಯಾಗಿದೆ?
ಯೆಹೋವನ ಪವಿತ್ರ ವಾಕ್ಯವು ಆತನ ನಿಷ್ಠಾವಂತ ಸೇವಕರ ಕಷ್ಟಗಳ ಮತ್ತು ಆನಂದಗಳ ದಾಖಲೆಗಳಿಂದ ತುಂಬಿದೆ. ನೋಹ, ಅಬ್ರಹಾಮ, ಸಾರ, ಯೆಹೋಶುವ, ದೆಬೋರಾ, ಬಾರಾಕ್, ದಾವೀದನು, ಮತ್ತು ಇತರರ ಅನುಭವಗಳು ಎದ್ದುಕಾಣುವಂಥವುಗಳೂ, ಉಜ್ವಲವಾದವುಗಳೂ ಆಗಿವೆ. ಸಾಮಾನ್ಯಾನುಭವದಲ್ಲಿ ಯಾವುದೊ ವಿಶೇಷವಾದ ಸಂಗತಿಯೊಂದಿಗೆ ಅವರೆಲ್ಲರು ನೈಜವಾದ ಜನರಾಗಿದ್ದರು. ಅವರಿಗೆ ದೇವರಲ್ಲಿ ನಂಬಿಕೆ ಇತ್ತು ಮತ್ತು ಆತನ ಮಾರ್ಗಗಳಲ್ಲಿ ಧೈರ್ಯದಿಂದ ನಡೆದರು.
2 ದೇವರ ಮಾರ್ಗಗಳಲ್ಲಿ ನಡೆಯಲು ನಾವು ಯತ್ನಿಸುವಾಗ, ಯೆಹೋವನ ಆದಿ ಸಾಕ್ಷಿಗಳ ಮಾತುಗಳು ಮತ್ತು ಕೃತ್ಯಗಳು ನಮಗೆ ಪ್ರೋತ್ಸಾಹದಾಯಕವಾಗಿರಬಲ್ಲವು. ಅದೂ ಅಲ್ಲದೆ, ದೇವರಿಗಾಗಿ ಪೂಜ್ಯಭಾವನೆಯನ್ನು ಮತ್ತು ಆತನನ್ನು ಅಸಂತೋಷಗೊಳಿಸದೆ ಇರುವ ಆರೋಗ್ಯಕರ ಭಯವನ್ನು ನಾವು ಪ್ರದರ್ಶಿಸಿದರೆ, ನಾವು ಸಂತೋಷದಿಂದಿರುವೆವು. ನಾವು ಜೀವನದಲ್ಲಿ ಕಷ್ಟಗಳನ್ನು ಎದುರಿಸಿದರೂ ಕೂಡ ಇದು ನಿಜವಾಗಿದೆ ಯಾಕಂದರೆ ಪ್ರೇರಿತ ಕೀರ್ತನೆಗಾರನು ಹೀಗೆ ಹಾಡಿದನು: “ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ ಆತನ ಮಾರ್ಗಗಳಲ್ಲಿ ನಡೆಯುವವನು ಧನ್ಯನು.”—ಕೀರ್ತನೆ 128:1.
ಧೈರ್ಯವು ಏನಾಗಿದೆ
3. ಧೈರ್ಯ ಎಂದರೇನು?
3 ಯೆಹೋವನ ಮಾರ್ಗಗಳಲ್ಲಿ ನಡೆಯಲು, ನಮಗೆ ಧೈರ್ಯವು ಬೇಕಾಗಿದೆ. ವಾಸ್ತವದಲ್ಲಿ, ಶಾಸ್ತ್ರವಚನಗಳು ಈ ಗುಣವನ್ನು ಪ್ರದರ್ಶಿಸುವಂತೆ ದೇವರ ಜನರಿಗೆ ಆಜ್ಞಾಪಿಸುತ್ತವೆ. ಉದಾಹರಣೆಗೆ, ಕೀರ್ತನೆಗಾರ ದಾವೀದನು ಹೀಗೆ ಹಾಡಿದನು: “ಯೆಹೋವನನ್ನು ನಿರೀಕ್ಷಿಸುವವರೇ, ದೃಢವಾಗಿರ್ರಿ; ನಿಮ್ಮ ಹೃದಯವು ಧೈರ್ಯದಿಂದಿರಲಿ.” (ಕೀರ್ತನೆ 31:24) ಧೈರ್ಯವು, “ಸಾಹಸಗೈಯಲು, ಸತತ ಪ್ರಯತ್ನಿಸಲು, ಮತ್ತು ಅಪಾಯ, ಭಯ, ಯಾ ಬಿಕ್ಕಟ್ಟನ್ನು ಎದುರಿಸಲು ಇರುವ ಮಾನಸಿಕ ಯಾ ನೈತಿಕ ಬಲವಾಗಿದೆ.” (ವೆಬ್ಸ್ಟರ್ಸ್ ನೈನ್ತ್ ನ್ಯೂ ಕಲೀಜಿಯೆಟ್ ಡಿಕ್ಷನರಿ) ಧೈರ್ಯವಂತ ವ್ಯಕ್ತಿಯೊಬ್ಬನು ಬಲವುಳ್ಳವನೂ, ಧೀರನೂ, ಶೂರನೂ ಆಗಿದ್ದಾನೆ. ಯೆಹೋವನು ತನ್ನ ಸೇವಕರಿಗೆ ಧೈರ್ಯವನ್ನು ಕೊಡುತ್ತಾನೆಂಬ ವಿಷಯವು, ಅಪೊಸ್ತಲ ಪೌಲನು ತನ್ನ ಜೊತೆ ಕೆಲಸಗಾರನಾದ ತಿಮೊಥೆಯನಿಗೆ ಬರೆದ ಈ ಮಾತುಗಳಿಂದ ಸ್ಪಷ್ಟವಾಗಿಗುತ್ತದೆ: “ದೇವರು ನಮಗೆ ಕೊಟ್ಟಿರುವ ಆತ್ಮವು ಬಲ ಪ್ರೀತಿ ಶಿಕ್ಷಣಗಳ ಆತ್ಮವೇ ಹೊರತು ಹೇಡಿತನದ ಆತ್ಮವಲ್ಲ.”—2 ತಿಮೊಥೆಯ 1:7.
4. ಧೈರ್ಯವನ್ನು ಸಂಪಾದಿಸುವ ಒಂದು ಮಾರ್ಗವು ಯಾವುದು?
4 ಯೆಹೋವನ ವಾಕ್ಯವಾದ ಬೈಬಲಿನ ಕಡೆಗೆ ಪ್ರಾರ್ಥನಾಪೂರ್ವಕವಾದ ಗಣನೆಯನ್ನು ಕೊಡುವುದೇ, ದೇವದತ್ತ ಧೈರ್ಯವನ್ನು ಸಂಪಾದಿಸುವ ಒಂದು ಮಾರ್ಗವಾಗಿದೆ. ಶಾಸ್ತ್ರವಚನಗಳಲ್ಲಿ ಕಂಡುಬರುವ ಅನೇಕ ದಾಖಲೆಗಳು ಹೆಚ್ಚು ಧೈರ್ಯವಂತರಾಗಲು ನಮಗೆ ಸಹಾಯಮಾಡಬಲ್ಲವು. ಆದುದರಿಂದ, ಯೆಹೋವನ ಮಾರ್ಗಗಳಲ್ಲಿ ಧೈರ್ಯವಂತರಾಗಿ ನಡೆದ ಕೆಲವರ ದಾಖಲೆಯಿಂದ ನಾವು ಏನನ್ನು ಕಲಿಯಬಲ್ಲೆವೆಂದು ನಾವು ಮೊದಲು ಹೀಬ್ರು ಶಾಸ್ತ್ರವಚನಗಳಲ್ಲಿ ನೋಡೋಣ.
ದೇವರ ಸಂದೇಶವನ್ನು ಘೋಷಿಸಲು ಧೈರ್ಯ
5. ಯೆಹೋವನ ಪ್ರಚಲಿತ ದಿನದ ಸೇವಕರಿಗೆ ಹನೋಕನ ಧೈರ್ಯವು ಹೇಗೆ ಪ್ರಯೋಜನವಾಗಬಲ್ಲದು?
5 ಯೆಹೋವನ ಪ್ರಚಲಿತ ದಿನದ ಸೇವಕರಿಗೆ, ದೇವರ ಸಂದೇಶವನ್ನು ಧೈರ್ಯದಿಂದ ಮಾತಾಡಲು ಹನೋಕನ ಧೈರ್ಯವು ಸಹಾಯ ಮಾಡಬಲ್ಲದು. ಹನೋಕನು ಹುಟ್ಟುವ ಮುಂಚೆಯೇ, “ಯೆಹೋವ ಎಂಬ ಹೆಸರನ್ನು ಹೇಳಿಕೊಂಡು ಆರಾಧಿಸುವದಕ್ಕೆ ಪ್ರಾರಂಭವಾಯಿತು.” ಮನುಷ್ಯರು ಯೆಹೋವನ ನಾಮವನ್ನು “ಅಶುದ್ಧವಾಗಿ ಉಪಯೋಗಿಸಲಾರಂಭಿಸಿದರೆಂದು” ಕೆಲವು ಪಂಡಿತರು ಹೇಳುತ್ತಾರೆ. (ಆದಿಕಾಂಡ 4:25, 26; 5:3, 6) ದೈವಿಕ ನಾಮವು ಮಾನವರಿಗೆ ಯಾ ವಿಗ್ರಹಗಳಿಗೂ ಕೂಡ ಬಳಸಲ್ಪಟ್ಟಿರಬಹುದು. ಆದಕಾರಣ, ಸಾ.ಶ.ಪೂ. 3404 ರಲ್ಲಿ ಹನೋಕನು ಹುಟ್ಟಿದಾಗ ಸುಳ್ಳು ಧರ್ಮವು ಹುಲುಸಾಗಿ ಬೆಳೆಯುತ್ತಾ ಇತ್ತು. ವಾಸ್ತವದಲ್ಲಿ, ‘ದೇವರೊಂದಿಗೆ ಅನ್ಯೋನ್ಯವಾಗಿ ನಡೆಯುವುದರಲ್ಲಿ’, ಯೆಹೋವನ ಪ್ರಕಟಿತವಾದ ಸತ್ಯದೊಂದಿಗೆ ಸಮರಸಗೊಳ್ಳುವ ನೀತಿಯ ಮಾರ್ಗವನ್ನು ಬೆನ್ನಟ್ಟುವುದರಲ್ಲಿ ಅವನು ಒಬ್ಬಂಟಿಗನಾಗಿದ್ದನೆಂದು ತೋರುತ್ತದೆ.—ಆದಿಕಾಂಡ 5:18, 24.
6. (ಎ) ಯಾವ ಬಲವಾದ ಸಂದೇಶವನ್ನು ಹನೋಕನು ಘೋಷಿಸಿದನು? (ಬಿ) ಯಾವ ಭರವಸವನ್ನು ನಾವು ಹೊಂದಿರಬಲ್ಲೆವು?
6 ಹನೋಕನು ದೇವರ ಸಂದೇಶವನ್ನು ಧೈರ್ಯದಿಂದ, ಬಹುಶಃ ಸಾರುವ ಮೂಲಕ ನೀಡಿದನು. (ಇಬ್ರಿಯ 11:5; ಹೋಲಿಸಿ 2 ಪೇತ್ರ 2:5.) ಈ ಏಕಮಾತ್ರ ಸಾಕ್ಷಿಯು ಘೋಷಿಸಿದ್ದು: “ಇಗೋ ಕರ್ತನು ಲಕ್ಷಾಂತರ ಪರಿಶುದ್ಧ ದೂತರನ್ನು ಕೂಡಿಕೊಂಡು ಎಲ್ಲರಿಗೆ ನ್ಯಾಯತೀರಿಸುವದಕ್ಕೂ ಭಕ್ತಿಹೀನರೆಲ್ಲರು ಮಾಡಿದ ಭಕ್ತಿಯಿಲ್ಲದ ಎಲ್ಲಾ ಕೃತ್ಯಗಳ ವಿಷಯವಾಗಿ ಮತ್ತು ಭಕ್ತಿಯಿಲ್ಲದ ಪಾಪಿಷ್ಠರು ತನ್ನ ಮೇಲೆ ಹೇಳಿದ ಎಲ್ಲಾ ಕಠಿನವಾದ ಮಾತುಗಳ ವಿಷಯವಾಗಿ ಅವರನ್ನು ಖಂಡಿಸುವದಕ್ಕೂ ಬಂದನು.” (ಯೂದ 14, 15) ದೇವಭಕ್ತಿಯಿಲ್ಲದವರನ್ನು ಖಂಡಿಸುವ ಆ ಸಂದೇಶವನ್ನು ನೀಡುವಾಗ ಯೆಹೋವ ಎಂಬ ಹೆಸರನ್ನು ಉಪಯೋಗಿಸಲು ಹನೋಕನಿಗೆ ಧೈರ್ಯವಿತ್ತು. ಆ ಬಲವಾದ ಸಂದೇಶವನ್ನು ಘೋಷಿಸಲು ದೇವರು ಹನೋಕನಿಗೆ ಧೈರ್ಯವನ್ನು ಕೊಟ್ಟಂತೆ, ಆತನ ವಾಕ್ಯವನ್ನು ಶುಶ್ರೂಷೆಯಲ್ಲಿ, ಶಾಲೆಯಲ್ಲಿ, ಮತ್ತು ಬೇರೆಕಡೆಯಲ್ಲಿ ಧೈರ್ಯದಿಂದ ಮಾತಾಡಲು, ಆತನ ಪ್ರಚಲಿತ ದಿನದ ಸಾಕ್ಷಿಗಳಿಗೆ ಯೆಹೋವನು ಶಕಿಕ್ತೊಟ್ಟಿದ್ದಾನೆ.—ಹೋಲಿಸಿ ಅ. ಕೃತ್ಯಗಳು 4:29-31.
ಪರೀಕ್ಷೆಯಲ್ಲಿ ಧೈರ್ಯ
7. ನೋಹನು ಧೈರ್ಯದ ಯಾವ ಉದಾಹರಣೆಯನ್ನು ಒದಗಿಸುತ್ತಾನೆ?
7 ಪರೀಕ್ಷೆಯಲ್ಲಿ ನಾವು ಇರುವಾಗ ನೀತಿಯ ಕೃತ್ಯಗಳನ್ನು ಮಾಡುವುದರಲ್ಲಿ ಧೈರ್ಯವಂತರಾಗಿರಲು ನೋಹನ ಉದಾಹರಣೆಯು ನಮಗೆ ಸಹಾಯ ಮಾಡಬಲ್ಲದು. ಧೈರ್ಯ ಮತ್ತು ನಂಬಿಕೆಯೊಂದಿಗೆ ಅವನು, ಭೌಗೋಲಿಕ ಪ್ರಳಯದ ದೈವಿಕ ಎಚ್ಚರಿಕೆಯ ಅನುಸಾರ ಕಾರ್ಯ ಮಾಡಿದನು ಮತ್ತು “ತನ್ನ ಮನೆಯವರ ಸಂರಕ್ಷಣೆಗೋಸ್ಕರ ನಾವೆಯನ್ನು ಕಟ್ಟಿ ಸಿದ್ಧಮಾಡಿದನು.” ನಂಬಿಕೆಯಿಲ್ಲದ ಲೋಕವನ್ನು ಅದರ ದುಷ್ಟ ಕೃತ್ಯಗಳಿಗಾಗಿ ನೋಹನು ವಿಧೇಯ ಮತ್ತು ನೀತಿಯುಳ್ಳ ಕಾರ್ಯಗಳ ಮೂಲಕ ಖಂಡಿಸಿದನು ಮತ್ತು ನಾಶನಕ್ಕೆ ಯೋಗ್ಯವೆಂದು ರುಜುಪಡಿಸಿದನು. (ಇಬ್ರಿಯ 11:7; ಆದಿಕಾಂಡ 6:13-22; 7:16) ಕ್ರೈಸ್ತ ಶುಶ್ರೂಷೆಯಂತಹ ನೀತಿಯುಳ್ಳ ಕೃತ್ಯಗಳಲ್ಲಿ ಧೈರ್ಯವಂತರಾಗಿ ತೊಡಗಲು ದೇವರ ಆಧುನಿಕ ದಿನದ ಸೇವಕರಿಗೆ ನೋಹನ ಮಾರ್ಗದ ಕುರಿತಾದ ಮನನವು ಸಹಾಯಮಾಡುವುದು.
8. (ಎ) ಧೈರ್ಯದ “ಸುನೀತಿಯ ಪ್ರಚಾರಕ” ನೋಪಾದಿ ನೋಹನು ಏನನ್ನು ಎದುರಿಸಿದನು? (ಬಿ) ನಾವು ಸುನೀತಿಯ ಧೈರ್ಯದ ಪ್ರಚಾರಕರಾಗಿದ್ದರೆ ಯೆಹೋವನು ನಮಗಾಗಿ ಏನನ್ನು ಮಾಡಲಿರುವನು?
8 ನಾವು ಒಂದು ನೀತಿಯುಳ್ಳ ಮಾರ್ಗವನ್ನು ಬೆನ್ನಟ್ಟುತ್ತಾ ಇರುವುದಾದರೆ, ನಿಶ್ಚಿತವಾದೊಂದು ಕಷ್ಟವನ್ನು ಹೇಗೆ ನಿರ್ವಹಿಸಬೇಕೆಂದು ತಿಳಿಯದಿರುವಲ್ಲಿ, ಅದನ್ನು ನಿಭಾಯಿಸಲು ವಿವೇಕಕ್ಕಾಗಿ ನಾವು ಪ್ರಾರ್ಥಿಸೋಣ. (ಯಾಕೋಬ 1:5-8) ಪರೀಕ್ಷೆಯ ಕೆಳಗೆ, ದೇವರ ಕಡೆಗೆ ನೋಹನಿಗಿದ್ದ ನಿಷ್ಠೆಯು, ಕಷ್ಟಗಳನ್ನು ಧೈರ್ಯ ಮತ್ತು ನಂಬಿಗಸ್ತಿಕೆಯೊಂದಿಗೆ ಎದುರಿಸಲು ಸಾಧ್ಯವಿದೆ ಎಂಬುದನ್ನು ತೋರಿಸುತ್ತದೆ. ಒಂದು ದುಷ್ಟ ಲೋಕದಿಂದ ಮತ್ತು ರೂಪಾಂತರಗೊಂಡ ದೇವದೂತರು ಮತ್ತು ಅವರ ಮಿಶ್ರ ಜಾತಿಯ ಸಂತಾನದಿಂದ ಬಂದ ಒತ್ತಡಗಳನ್ನು ಅವನು ಎದುರಿಸಿದನು. ಹೌದು, ನಾಶನಕ್ಕಾಗಿ ಮುಂದುವರಿಯುತ್ತಿದ್ದ “ಒಂದು ಪ್ರಾಚೀನ ಲೋಕ”ಕ್ಕೆ “ಸುನೀತಿಯನ್ನು ಸಾರುವವನಾಗಿದ್ದ” ನೋಹನು ಧೈರ್ಯವಂತನಾಗಿದ್ದನು. (2 ಪೇತ್ರ 2:4, 5; ಆದಿಕಾಂಡ 6:1-9) ಅವನು ಧೈರ್ಯದಿಂದ ಒಬ್ಬ ಘೋಷಕನಂತೆ ದೇವರ ಎಚ್ಚರಿಕೆಯನ್ನು ಪ್ರಳಯಪೂರ್ವದವರೊಂದಿಗೆ ಮಾತಾಡಿದರೂ ಕೂಡ, “ಪ್ರಳಯದ ನೀರು ಬಂದು ಎಲ್ಲರನ್ನು ಬಡುಕೊಂಡುಹೋಗುವ ತನಕ ಏನೂ ತಿಳಿಯದೆ ಇದ್ದರು.” (ಮತ್ತಾಯ 24:36-39) ಆದರೆ ಇಂದು ಹಿಂಸೆ ಮತ್ತು ಅನೇಕ ಜನರ ಮೂಲಕ ನಮ್ಮ ಬೈಬಲಾಧಾರಿತ ಸಂದೇಶದ ತಿರಸ್ಕಾರದ ನಡುವೆಯೂ, ನೀತಿಯ ಸೌವಾರ್ತಿಕರೋಪಾದಿ ಸಮಾನವಾದ ನಂಬಿಕೆ ಮತ್ತು ಧೈರ್ಯವನ್ನು ನಾವು ಪ್ರದರ್ಶಿಸಿದರೆ, ಯೆಹೋವನು ನೋಹನನ್ನು ಎತ್ತಿಹಿಡಿದಂತೆ ನಮ್ಮನ್ನೂ ಎತ್ತಿಹಿಡಿಯುವನು ಎಂಬುದನ್ನು ನಾವು ನೆನಪಿನಲ್ಲಿಡೋಣ.
ದೇವರಿಗೆ ವಿಧೇಯರಾಗಲು ಧೈರ್ಯ
9, 10. ಯಾವ ವಿಷಯದಲ್ಲಿ ಅಬ್ರಹಾಮನು, ಸಾರಳು, ಮತ್ತು ಇಸಾಕನು ಧೈರ್ಯದ ವಿಧೇಯತೆಯನ್ನು ಪ್ರದರ್ಶಿಸಿದರು?
9 “ಯೆಹೋವನ ಸ್ನೇಹಿತನಾದ” ಅಬ್ರಹಾಮನು, ದೇವರ ಕಡೆಗೆ ಧೈರ್ಯವುಳ್ಳ ವಿಧೇಯತೆಯ ಅತ್ಯುತ್ತಮ ಉದಾಹರಣೆಯಾಗಿದ್ದಾನೆ. (ಯಾಕೋಬ 2:23) ಯೆಹೋವನಿಗೆ ವಿಧೇಯನಾಗಿ ಹೇರಳವಾದ ಪ್ರಾಪಂಚಿಕ ಲಾಭಗಳ ಪಟ್ಟಣವಾದ ಕಲೀಯ್ದರ ಊರ್ ಎಂಬ ಪಟ್ಟಣವನ್ನು ಬಿಟ್ಟು ಹೋಗಲು ಅಬ್ರಹಾಮನಿಗೆ ನಂಬಿಕೆ ಮತ್ತು ಧೈರ್ಯವು ಬೇಕಾಗಿತ್ತು. ಅವನ ಮೂಲಕ “ಭೂಲೋಕದ ಎಲ್ಲಾ ಕುಲದವರು” ತಮ್ಮನ್ನು ಆಶೀರ್ವದಿಸಿಕೊಳ್ಳುವರು ಮತ್ತು ಅವನ ಸಂತಾನಕ್ಕೆ ಒಂದು ದೇಶವನ್ನು ಕೊಡಲಾಗುವುದು ಎಂಬ ದೇವರ ವಾಗ್ದಾನವನ್ನು ಅವನು ನಂಬಿದನು. (ಆದಿಕಾಂಡ 12:1-9; 15:18-21) ನಂಬಿಕೆಯಿಂದಲೇ ಅಬ್ರಹಾಮನು “ವಾಗ್ದತ್ತದೇಶಕ್ಕೆ ಬಂದಾಗ ಅಲ್ಲಿ ಅನ್ಯದೇಶದಲ್ಲಿ ಇದ್ದವನಂತೆ . . . ಬದುಕಿದನು” ಮತ್ತು “ಶಾಶ್ವತವಾದ ಅಸ್ತಿವಾರಗಳುಳ್ಳ ಪಟ್ಟಣವನ್ನು”—ಯಾವುದರ ಕೆಳಗೆ ಭೂಮಿಯ ಮೇಲೆ ಜೀವಕ್ಕೆ ಅವನು ಪುನರುತ್ಥಾನಗೊಳಿಸಲ್ಪಡುವನೋ ಆ ದೇವರ ಸ್ವರ್ಗೀಯ ರಾಜ್ಯವನ್ನು—ಅವನು ಎದುರುನೋಡಿದನು.—ಇಬ್ರಿಯ 11:8-16.
10 ಊರ್ ಪಟ್ಟಣವನ್ನು ಬಿಡಲು, ಅನ್ಯದೇಶವೊಂದಕ್ಕೆ ಆಕೆಯ ಗಂಡನ ಜೊತೆಗೆ ಹೋಗಲು, ಮತ್ತು ಅಲ್ಲಿ ಅವರು ಎದುರಿಸಬಹುದಾದ ಯಾವುದೇ ತೊಂದರೆಗಳನ್ನು ತಾಳಿಕೊಳ್ಳಲು ಬೇಕಾಗಿದ್ದ ನಂಬಿಕೆ ಮತ್ತು ಧೈರ್ಯ, ಅಬ್ರಹಾಮನ ಹೆಂಡತಿಯಾದ ಸಾರಳಲ್ಲಿ ಇತ್ತು. ಮತ್ತು ದೇವರ ಕಡೆಗೆ ಆಕೆಯ ಧೈರ್ಯಭರಿತ ವಿಧೇಯತೆಗಾಗಿ ಅವಳು ಎಂತಹ ರೀತಿಯಲ್ಲಿ ಬಹುಮಾನಿಸಲ್ಪಟ್ಟಳು! ತೊಂಬತ್ತರ ಪ್ರಾಯದ ತನಕ ಬಂಜೆಯಾಗಿದ್ದು “ಪ್ರಾಯಮೀರಿ” ದವಳಾಗಿದ್ದರೂ, ‘ವಾಗ್ದಾನಮಾಡಿದಾತನನ್ನು ನಂಬತಕ್ಕವನೆಂದೆಣಿಸಿ . . . ಗರ್ಭವತಿಯಾಗುವುದಕ್ಕೆ’ ಸಾರಳು ಶಕ್ತಳಾದಳು. ಸಕಾಲದಲ್ಲಿ ಅವಳು ಇಸಾಕನನ್ನು ಹೆತ್ತಳು. (ಇಬ್ರಿಯ 11:11, 12; ಆದಿಕಾಂಡ 17:15-17; 18:11; 21:1-7) ವರ್ಷಗಳಾನಂತರ, ಅಬ್ರಹಾಮನು ದೇವರಿಗೆ ಧೈರ್ಯದಿಂದ ವಿಧೇಯನಾದನು ಮತ್ತು “ಇಸಾಕನನ್ನು . . . ಸಮರ್ಪಿಸುವದಕ್ಕಿದ್ದನು.” ಒಬ್ಬ ದೇವದೂತನ ಮೂಲಕ ತಡೆಯಲ್ಪಟ್ಟು, ಈ ಪೂರ್ವಜನು ತನ್ನ ಧೈರ್ಯಭರಿತ ಮತ್ತು ವಿಧೇಯ ಮಗನನ್ನು ಮರಣದಿಂದ “ಒಂದು ದೃಷ್ಟಾಂತದ ರೀತಿಯಲ್ಲಿ” ಪಡೆದನು. ಆತನಲ್ಲಿ ನಂಬಿಕೆ ಇಡುವವರು ನಿತ್ಯ ಜೀವವನ್ನು ಪಡೆಯಲು ಯೆಹೋವ ದೇವರು ತನ್ನ ಮಗನಾದ ಯೇಸು ಕ್ರಿಸ್ತನನ್ನು ವಿಮೋಚನಾ ಯಜ್ಞವಾಗಿ ಒದಗಿಸುವನೆಂಬುದನ್ನು, ಅವನು ಮತ್ತು ಇಸಾಕನು ಪ್ರವಾದನಾಪೂರ್ವಕವಾಗಿ ಚಿತ್ರಿಸಿದರು. (ಇಬ್ರಿಯ 11:17-19; ಆದಿಕಾಂಡ 22:1-19; ಯೋಹಾನ 3:16) ಖಂಡಿತವಾಗಿ, ಅಬ್ರಹಾಮ, ಸಾರ, ಮತ್ತು ಇಸಾಕನ ಧೈರ್ಯಭರಿತ ವಿಧೇಯತೆಯು, ಯೆಹೋವನಿಗೆ ವಿಧೇಯರಾಗಿರಲು ಮತ್ತು ಆತನ ಚಿತ್ತವನ್ನು ಯಾವಾಗಲೂ ಮಾಡಲು ನಮ್ಮನ್ನು ಪ್ರೇರೇಪಿಸಬೇಕು.
ದೇವರ ಜನರೊಂದಿಗೆ ನಿಲ್ಲಲು ಧೈರ್ಯ
11, 12. (ಎ) ಯೆಹೋವನ ಜನರ ಸಂಬಂಧದಲ್ಲಿ ಮೋಶೆಯು ಧೈರ್ಯವನ್ನು ಹೇಗೆ ಪ್ರದರ್ಶಿಸಿದನು? (ಬಿ) ಮೋಶೆಯ ಧೈರ್ಯದ ನೋಟದಲ್ಲಿ, ಯಾವ ಪ್ರಶ್ನೆಯು ಕೇಳಲ್ಪಡಬಹುದು?
11 ದಬ್ಬಾಳಿಕೆ ನಡೆಸಲ್ಪಟ್ಟ ದೇವರ ಜನರೊಂದಿಗೆ ಮೋಶೆಯು ಧೈರ್ಯದಿಂದ ಅವನ ನಿಲುವನ್ನು ತೆಗೆದುಕೊಂಡನು. ಸಾ.ಶ.ಪೂ. 16 ನೆಯ ಶತಮಾನದಲ್ಲಿ, ಸ್ವತಃ ಮೋಶೆಯ ಹೆತ್ತವರು ಧೈರ್ಯವನ್ನು ತೋರಿಸಿದರು. ನವಜನಿತ ಹೀಬ್ರು ಗಂಡುಕೂಸುಗಳನ್ನು ಕೊಲ್ಲಲು ಇದ್ದ ರಾಜನ ಕಟ್ಟಳೆಗೆ ಹೆದರದೆ, ಅವರು ಮೋಶೆಯನ್ನು ಅಡಗಿಸಿ ಇಟ್ಟರು ಮತ್ತು ನೈಲ್ ನದಿಯ ತೀರದಲ್ಲಿ ಜಂಬುಹುಲ್ಲಿನೊಳಗೆ ಆಪಿನ ಪೆಟ್ಟಿಗೆಯಲ್ಲಿ ಅವನನ್ನು ಇಟ್ಟರು. ಫರೋಹನ ಮಗಳಿಂದ ಕಂಡುಕೊಳ್ಳಲ್ಪಟ್ಟ ಅವನು, ಅವನ ಹೆತ್ತವರ ಮನೆಯಲ್ಲಿ ಆತ್ಮಿಕ ತರಬೇತಿಯನ್ನು ಮೊದಲಾಗಿ ಪಡೆದಿದ್ದರೂ ಕೂಡ, ಆಕೆಯ ಸ್ವಂತ ಮಗನಂತೆ ಬೆಳೆಸಲ್ಪಟ್ಟನು. ಫರೋಹನ ಮನೆವಾರ್ತೆಯ ಒಂದು ಭಾಗವಾಗಿ ಮೋಶೆಯು, “ಐಗುಪ್ತದೇಶದವರ ಸರ್ವವಿದ್ಯೆಗಳಲ್ಲಿಯೂ ಉಪದೇಶಹೊಂದಿ” ಮಾನಸಿಕ ಮತ್ತು ಶಾರೀರಿಕ ಸಾಮರ್ಥ್ಯಗಳಲ್ಲಿ, “ಮಾತುಗಳಲ್ಲಿಯೂ ಕಾರ್ಯಗಳಲ್ಲಿಯೂ ಸಮರ್ಥನಾದನು.”—ಅ. ಕೃತ್ಯಗಳು 7:20-22; ವಿಮೋಚನಕಾಂಡ 2:1-10; 6:20.
12 ರಾಜನ ಮನೆಯ ಪ್ರಾಪಂಚಿಕ ಲಾಭಗಳಿದ್ದರೂ, ಮೋಶೆಯು ಐಗುಪ್ತ್ಯರಿಂದ ಆಗ ಗುಲಾಮರಾಗಿಡಲ್ಪಟ್ಟಿದ್ದ ಯೆಹೋವನ ಆರಾಧಕರೊಂದಿಗೆ ತನ್ನ ನಿಲುವನ್ನು ತೆಗೆದುಕೊಳ್ಳಲು ಧೈರ್ಯದಿಂದ ಆಯ್ದುಕೊಂಡನು. ಇಸ್ರಾಯೇಲಿನ ಒಬ್ಬ ವ್ಯಕ್ತಿಯ ರಕ್ಷಣೆಯಲ್ಲಿ, ಅವನು ಒಬ್ಬ ಐಗುಪ್ತ್ಯದವನನ್ನು ಕೊಂದು ತದನಂತರ ಮಿದ್ಯಾನಿಗೆ ಓಡಿಹೋದನು. (ವಿಮೋಚನಕಾಂಡ 2:11-15) ಸುಮಾರು 40 ವರ್ಷಗಳಾನಂತರ, ಇಸ್ರಾಯೇಲ್ಯರನ್ನು ಬಂದಿವಾಸದಿಂದ ಹೊರಗೆ ನಡೆಸಲು ದೇವರು ಅವನನ್ನು ಉಪಯೋಗಿಸಿದನು. ಆಗ ಮೋಶೆಯು, ಇಸ್ರಾಯೇಲಿನ ಪರವಾಗಿ ಯೆಹೋವನನ್ನು ಪ್ರತಿನಿಧಿಸಿದ್ದಕ್ಕಾಗಿ ತನ್ನನ್ನು ಮರಣದಿಂದ ಬೆದರಿಸಿದ “ಅರಸನ ರೌದ್ರಕ್ಕೆ ಭಯಪಡದೆ ಐಗುಪ್ತದೇಶವನ್ನು ಬಿಟ್ಟುಹೋದನು.” ‘ಅದೃಶ್ಯನಾದ’ ಯೆಹೋವ ದೇವರನ್ನು ಅವನು ಕಂಡಂತೆ ಮೋಶೆಯು ನಡೆದನು. (ಇಬ್ರಿಯ 11:23-29; ವಿಮೋಚನಕಾಂಡ 10:28) ತೊಂದರೆ ಮತ್ತು ಹಿಂಸೆ ಇದ್ದಾಗ್ಯೂ ಯೆಹೋವನೊಂದಿಗೆ ಮತ್ತು ಆತನ ಜನರೊಂದಿಗೆ ನೀವು ಅಂಟಿಕೊಳ್ಳುವಿರೆಂಬ ಅಂತಹ ನಂಬಿಕೆ ಮತ್ತು ಧೈರ್ಯ ನಿಮಗಿದೆಯೊ?
‘ಪೂರ್ಣಮನಸ್ಸಿನಿಂದ ಯೆಹೋವನನ್ನು ಅನುಸರಿಸಲು’ ಧೈರ್ಯ
13. ಯೆಹೋಶುವ ಮತ್ತು ಕಾಲೇಬರು ಧೈರ್ಯದ ಉದಾಹರಣೆಗಳನ್ನು ಹೇಗೆ ಒದಗಿಸಿದರು?
13 ನಾವು ದೇವರ ಮಾರ್ಗಗಳಲ್ಲಿ ನಡೆಯಬಲ್ಲೆವೆಂಬ ಪ್ರಮಾಣವನ್ನು ಧೈರ್ಯವಂತರಾದ ಯೆಹೋಶುವ ಮತ್ತು ಕಾಲೇಬರು ಒದಗಿಸಿದರು. ಅವರು “ಯೆಹೋವನನ್ನು ಪೂರ್ಣಮನಸ್ಸಿನಿಂದ ಅನುಸರಿಸಿದರು.” (ಅರಣ್ಯಕಾಂಡ 32:12) ವಾಗ್ದತ್ತ ದೇಶದ ಬೇಹುಗಾರಿಕೆ ನಡಿಸಲು ಕಳುಹಿಸಲಾದ 12 ಪುರುಷರಲ್ಲಿ ಯೆಹೋಶುವ ಮತ್ತು ಕಾಲೇಬರೂ ಇದ್ದರು. ಅದರ ನಿವಾಸಿಗಳಿಗೆ ಭಯಪಡುತ್ತಾ, ಕಾನಾನ್ ದೇಶವನ್ನು ಪ್ರವೇಶಿಸುವುದರಿಂದ ಇಸ್ರಾಯೇಲನ್ನು ತಡೆಯಲು ಹತ್ತು ಗೂಢಚಾರರು ಪ್ರಯತ್ನಿಸಿದರು. ಹಾಗಿದ್ದರೂ, ಯೆಹೋಶುವ ಮತ್ತು ಕಾಲೇಬರು ಧೈರ್ಯದಿಂದ ಹೇಳಿದ್ದು: “ಅದು ಹಾಲೂ ಜೇನೂ ಹರಿಯುವ ದೇಶ; ಯೆಹೋವನು ನಮ್ಮನ್ನು ಮೆಚ್ಚಿಕೊಂಡರೆ ಅದರಲ್ಲಿ ನಮ್ಮನ್ನು ಸೇರಿಸಿ ಅದನ್ನು ನಮ್ಮ ಸ್ವಾಧೀನಕ್ಕೆ ಕೊಡುವನು; ಹೀಗಿರುವದರಿಂದ ಯೆಹೋವನಿಗೆ ತಿರುಗಿಬೀಳಬೇಡಿರಿ. ಅದಲ್ಲದೆ ಈ ದೇಶದ ಜನರಿಗೆ ದಿಗಿಲುಪಡಬೇಡಿರಿ; ನಾವು ಅವರನ್ನು ನುಂಗಿ ಪುಷ್ಟಿಯಾಗುವೆವು. ಅವರಿಗೆ ನೆರಳಾಗಿದ್ದ ದೇವರು ಅವರನ್ನು ಕೈಬಿಟ್ಟನು; ನಮ್ಮ ಕಡೆ ಯೆಹೋವನು ಇದ್ದಾನೆ; ಅವರಿಗೆ ಭಯಪಡಬೇಡಿರಿ.” (ಅರಣ್ಯಕಾಂಡ 14:8, 9) ನಂಬಿಕೆ ಮತ್ತು ಧೈರ್ಯದ ಅಭಾವದಿಂದಾಗಿ, ಇಸ್ರಾಯೇಲ್ಯರ ಆ ಸಂತತಿಯು ವಾಗ್ದತ್ತದೇಶವನ್ನು ತಲಪಲೇ ಇಲ್ಲ. ಆದರೆ, ಹೊಸದೊಂದು ಸಂತತಿಯೊಂದಿಗೆ ಯೆಹೋಶುವ ಮತ್ತು ಕಾಲೇಬರು ಅದನ್ನು ಪ್ರವೇಶಿಸಿದರು.
14, 15. (ಎ) ಯೆಹೋಶುವ 1:7, 8ರ ಮಾತುಗಳನ್ನು ಯೆಹೋಶುವನು ಅನ್ವಯಿಸಿದಂತೆ, ಅವನು ಮತ್ತು ಇಸ್ರಾಯೇಲ್ಯರು ಏನನ್ನು ಅನುಭವಿಸಿದರು? (ಬಿ) ಧೈರ್ಯವು ಒಳಗೊಂಡಿರುವ ಯಾವ ಪಾಠವನ್ನು ನಾವು ಯೆಹೋಶುವ ಮತ್ತು ಕಾಲೇಬರಿಂದ ಕಲಿಯುತ್ತೇವೆ?
14 ದೇವರು ಯೆಹೋಶುವನಿಗೆ ಹೇಳಿದ್ದು: “ನನ್ನ ಸೇವಕನಾದ ಮೋಶೆ ನಿನಗೆ ಬೋಧಿಸಿದ ಧರ್ಮೋಪದೇಶವನ್ನೆಲ್ಲಾ ಕೈಕೊಂಡು ನಡೆಯುವದರಲ್ಲಿ ಸ್ಥಿರಚಿತ್ತನಾಗಿರು, ಪೂರ್ಣಧೈರ್ಯದಿಂದಿರು. ಅದನ್ನು ಬಿಟ್ಟು ಎಡಕ್ಕಾದರೂ ಬಲಕ್ಕಾದರೂ ಹೋಗಬೇಡ. ಆಗ ನೀನು ಎಲ್ಲಿ ಹೋದರೂ ಕೃತಾರ್ಥನಾಗುವಿ. ಈ ಧರ್ಮಶಾಸ್ತ್ರವು ಯಾವಾಗಲೂ ನಿನ್ನ ಬಾಯಲ್ಲಿರಲಿ; ಹಗಲಿರುಳು ಅದನ್ನು ಧ್ಯಾನಿಸುತ್ತಾ ಅದರಲ್ಲಿ ಬರೆದಿರುವದನ್ನೆಲ್ಲಾ ಕೈಕೊಂಡು ನಡಿ. ಆಗ ನಿನ್ನ ಮಾರ್ಗದಲ್ಲೆಲ್ಲಾ ಸಫಲನಾಗುವಿ, ಕೃತಾರ್ಥನಾಗುವಿ.”—ಯೆಹೋಶುವ 1:7, 8.
15 ಯೆಹೋಶುವನು ಆ ಮಾತುಗಳನ್ನು ಅನ್ವಯಿಸಿದಂತೆ, ಯೆರಿಕೋ ಮತ್ತು ಇತರ ಪಟ್ಟಣಗಳು ಇಸ್ರಾಯೇಲ್ಯರ ಕೈಗೆ ಬಿದ್ದವು. ಗಿಬ್ಯೋನ್ನಲ್ಲಿ ಇಸ್ರಾಯೇಲ್ ಜಯಶಾಲಿಯಾಗುವ ತನಕ ಸೂರ್ಯನು ಪ್ರಜ್ವಲಿಸುತ್ತಾ ಇರಲು ಹಾಗೆಯೇ ನಿಲ್ಲುವಂತೆ ಸಹ ದೇವರು ಮಾಡಿದನು. (ಯೆಹೋಶುವ 10:6-14) “ಸಮುದ್ರತೀರದ ಮರಳಿನಂತೆ ಅಸಂಖ್ಯರಾಗಿದ್ದ” ಏಕೀಕೃತ ವೈರಿ ಪಡೆಗಳ ಮೂಲಕ ಅಪಾಯಕ್ಕೀಡಾದಾಗ, ಯೆಹೋಶುವನು ಧೈರ್ಯದಿಂದ ಕಾರ್ಯವೆಸಗಿದನು ಮತ್ತು ದೇವರು ಇಸ್ರಾಯೇಲ್ ಜನಾಂಗವನ್ನು ಪುನಃ ಜಯಶಾಲಿಗಳನ್ನಾಗಿ ಮಾಡಿದನು. (ಯೆಹೋಶುವ 11:1-9) ಯೆಹೋಶುವ ಮತ್ತು ಕಾಲೇಬರಂತೆ ನಾವು ಅಪರಿಪೂರ್ಣ ಮಾನವರಾಗಿದ್ದರೂ, ಯೆಹೋವನನ್ನು ಪೂರ್ಣಮನಸ್ಸಿನಿಂದ ಅನುಸರಿಸಬಲ್ಲೆವು, ಮತ್ತು ಆತನ ಮಾರ್ಗಗಳಲ್ಲಿ ಧೈರ್ಯದಿಂದ ನಡೆಯುವಂತೆ ದೇವರು ನಮಗೆ ಶಕ್ತಿ ಕೊಡಬಲ್ಲನು.
ದೇವರಲ್ಲಿ ಭರವಸವಿಡಲು ಧೈರ್ಯ
16. ಯಾವ ವಿಧಗಳಲ್ಲಿ ದೆಬೋರಾ, ಬಾರಾಕ್, ಮತ್ತು ಯಾಯೇಲರು ಧೈರ್ಯವನ್ನು ತೋರಿಸಿದರು?
16 ಇಸ್ರಾಯೇಲಿನಲ್ಲಿ ನ್ಯಾಯಸ್ಥಾಪಕರು ನ್ಯಾಯವನ್ನು ನಿರ್ವಹಿಸುತ್ತಿದ್ದ ದಿನಗಳಲ್ಲಿನ ಘಟನೆಗಳ ಮೂಲಕ ತೋರಿಸಲಾದಂತೆ, ದೇವರಲ್ಲಿ ಧೈರ್ಯವಂತ ಭರವಸೆಯು ಪ್ರತಿಫಲದಾಯಕವಾಗಿದೆ. (ರೂತಳು 1:1) ಉದಾಹರಣೆಗೆ, ನ್ಯಾಯಸ್ಥಾಪಕನಾದ ಬಾರಾಕನು ಮತ್ತು ಪ್ರವಾದಿನಿಯಾದ ದೆಬೋರಳು ದೇವರಲ್ಲಿ ಧೈರ್ಯದಿಂದ ಭರವಸವಿಟ್ಟರು. ಯೆಹೋವನು ದೆಬೋರಳ ಮೂಲಕ ಬಾರಾಕನು ತಾಬೋರ್ ಬೆಟ್ಟದ ಮೇಲೆ 10,000 ಪುರುಷರನ್ನು ಕೂಡಿಸುವಂತೆ ಮಾಡಿದಾಗ, ಕಾನಾನ್ಯ ರಾಜನಾದ ಯಾಬೀನನು ಇಸ್ರಾಯೇಲನ್ನು 20 ವರ್ಷಗಳ ತನಕ ಬಾಧಿಸಿದ್ದನು. ಈ ಸಮವಾದ ನೆಲದಲ್ಲಿ, ಅವನ ಸೈನ್ಯ ಮತ್ತು ಅವುಗಳ ಅಚ್ಚುಗಳಿಗೆ ಕತ್ತಿಯಲಗುಗಳುಳ್ಳ ಅದರ ಒಂಭೈನೂರು ಕಬ್ಬಿಣದ ರಥಗಳಿಗೆ ಇಸ್ರಾಯೇಲಿನ ಪುರುಷರು ಸರಿಸಾಟಿಯಾಗಿರರು ಎಂಬ ದೃಢತೆಯಿಂದ, ಯಾಬೀನನ ಸೇನಾಪತಿ, ಸೀಸೆರನು ಕೀಷೋನ್ ಹಳ್ಳಕ್ಕೆ ಧಾವಿಸಿ ಬಂದನು. ಇಸ್ರಾಯೇಲ್ಯರು ಹಳ್ಳದೊಳಗೆ ನಡೆದಾಗ, ದೇವರು ಅವರ ಪರವಾಗಿ ಕಾರ್ಯವೆಸಗಿದನು, ಮತ್ತು ಸೀಸೆರನ ರಥಗಳನ್ನು ಕದಲದಂತೆ ಮಾಡಿದ ನೀರಿನ ಪ್ರವಾಹವು, ರಣರಂಗವನ್ನು ಜವುಗು ನೆಲವನ್ನಾಗಿ ಮಾಡಿತು. ಬಾರಾಕನ ಪುರುಷರು ಜಯಶಾಲಿಗಳಾದರು, ಹೇಗೆಂದರೆ ಕಾರಣ “ಸೀಸೆರನ ಸೈನದವರೆಲ್ಲಾ ಕತ್ತಿಯಿಂದ ಹತರಾದರು.” ಸೀಸೆರನು ಯಾಯೇಲಳ ಗುಡಾರಕ್ಕೆ ಓಡಿಹೋದನು, ಆದರೆ ಅವನು ನಿದ್ರಿಸುತ್ತಿದ್ದಂತೆ, ಅವನ ಕಣತಲೆಗೆ ಗುಡಾರದ ಗೂಟವನ್ನು ಹೊಡೆಯುವ ಮುಖಾಂತರ ಅವನನ್ನು ಕೊಲ್ಲುವಷ್ಟು ಧೈರ್ಯ ಅವಳಿಗಿತ್ತು. ಬಾರಾಕನಿಗೆ ದೆಬೋರಾ ನೀಡಿದ ಪ್ರವಾದನಾ ಹೇಳಿಕೆಯಂತೆಯೇ, ಈ ಜಯದ “ಮಾನವು” ಹೀಗೆ ಒಬ್ಬ ಸ್ತ್ರೀಗೆ ಕೊಡಲ್ಪಟ್ಟಿತು. ದೆಬೋರಾ, ಬಾರಾಕ್, ಮತ್ತು ಯಾಯೇಲರು ದೇವರಲ್ಲಿ ಧೈರ್ಯದಿಂದ ಭರವಸವಿಟ್ಟ ಕಾರಣ, ಇಸ್ರಾಯೇಲ್ “ದೇಶದಲ್ಲಿ ನಾಲ್ವತ್ತು ವರುಷ ಸಮಾಧಾನವಿತ್ತು.”—ನ್ಯಾಯಸ್ಥಾಪಕರು 4:1-22; 5:31.
17. ನ್ಯಾಯಸ್ಥಾಪಕ ಗಿದ್ಯೋನನ ಮೂಲಕ ಯೆಹೋವನಲ್ಲಿ ಧೈರ್ಯದ ಭರವಸೆಯ ಯಾವ ಉದಾಹರಣೆಯು ಒದಗಿಸಲ್ಪಟ್ಟಿತು?
17 ಮಿದ್ಯಾನ್ಯರು ಮತ್ತು ಇತರರು ಇಸ್ರಾಯೇಲನ್ನು ಮುತ್ತಿದಾಗ, ನ್ಯಾಯಸ್ಥಾಪಕನಾದ ಗಿದ್ಯೋನನು ಯೆಹೋವನಲ್ಲಿ ಧೈರ್ಯದಿಂದ ಭರವಸವಿಟ್ಟನು. ಸುಮಾರು 1,35,000 ಆಕ್ರಮಣಗಾರರು ಸಂಖ್ಯೆಯಲ್ಲಿ ತಮ್ಮನ್ನು ತೀರಾ ಮೀರಿಸಿದ್ದರೂ ಇಸ್ರಾಯೇಲಿನ 32,000 ಯುದ್ಧಮಾಡುವ ಪುರುಷರು ದೇವದತ್ತ ಜಯವನ್ನು ತಮ್ಮ ಸ್ವಂತ ಪರಾಕ್ರಮಕ್ಕೆ ಸೇರಿದುದೆಂದು ಹೇಳಿಕೊಳ್ಳುವ ಪ್ರವೃತ್ತಿಯುಳ್ಳವರಾಗಿದ್ದಿರಬಹುದು. ಆದುದರಿಂದ ಯೆಹೋವನ ಮಾರ್ಗದರ್ಶನದಿಂದ, ಗಿದ್ಯೋನನು ತನ್ನ ಸೇನೆಗಳನ್ನು 100 ಪುರುಷರ ಮೂರು ಗುಂಪುಗಳಿಗೆ ಕಡಿಮೆಗೊಳಿಸಿದನು. (ನ್ಯಾಯಸ್ಥಾಪಕರು 7:1-7, 16; 8:10) ರಾತ್ರಿಯಲ್ಲಿ 300 ಸೈನಿಕರು ಮಿದ್ಯಾನ್ಯರ ಪಾಳೆಯವನ್ನು ಸುತ್ತುವರಿದಂತೆ, ಪ್ರತಿಯೊಬ್ಬನಲ್ಲಿ ಒಂದು ಕೊಂಬು ಮತ್ತು ಉರಿಯುವ ಪಂಜಡಗಿರುವ ಬರಿಕೊಡ ಇತ್ತು. ಸನ್ನೆಯೊಂದಿಗೆ, ಅವರು ಕೊಂಬುಗಳನ್ನು ಊದಿ, ಕೊಡಗಳನ್ನು ಒಡೆದು, ಉರಿಯುವ ಪಂಜನ್ನು ಏರಿಸಿ, “ಯೆಹೋವನ ಕತ್ತಿ, ಗಿದ್ಯೋನನ ಕತ್ತಿ” ಎಂದು ಕೂಗಿದರು! (ನ್ಯಾಯಸ್ಥಾಪಕರು 7:20) ಭಯಭೀತರಾದ ಮಿದ್ಯಾನ್ಯರು ಓಡಲು ಪ್ರಾರಂಭಿಸಿದರು ಮತ್ತು ವಶಪಡಿಸಿಕೊಳ್ಳಲ್ಪಟ್ಟರು. ದೇವರಲ್ಲಿ ಧೈರ್ಯಭರಿತ ಭರವಸವು ಇಂದು ಕೂಡ ಪ್ರತಿಫಲದಾಯಕವಾಗಿದೆ ಎಂದು ಇಂತಹ ಘಟನೆಗಳು ನಮಗೆ ಮನವರಿಕೆ ಮಾಡತಕ್ಕದ್ದು.
ಯೆಹೋವನನ್ನು ಸನ್ಮಾನಿಸಲು ಮತ್ತು ಶುದ್ಧಾರಾಧನೆಯನ್ನು ಪ್ರವರ್ಧಿಸಲು ಧೈರ್ಯ
18. ಗೊಲ್ಯಾತನನ್ನು ಕೊಂದುಹಾಕಿದಾಗ, ದಾವೀದನು ಧೈರ್ಯದಿಂದ ಏನನ್ನು ಮಾಡಿದನು?
18 ಯೆಹೋವನನ್ನು ಸನ್ಮಾನಿಸಲು ಮತ್ತು ಶುದ್ಧಾರಾಧನೆಯನ್ನು ಪ್ರವರ್ಧಿಸಲು ಕೆಲವು ಬೈಬಲ್ ಉದಾಹರಣೆಗಳು ಧೈರ್ಯವನ್ನು ಕೊಡುತ್ತವೆ. ತನ್ನ ತಂದೆಯ ಕುರಿಗಳನ್ನು ಧೈರ್ಯದಿಂದ ರಕ್ಷಿಸಿದ ಎಳೆಯ ದಾವೀದನು, ಫಿಲಿಷ್ಟಿಯ ದೈತ್ಯನಾದ ಗೊಲ್ಯಾತನ ಎದುರು ಧೈರ್ಯವಿದವ್ದನಾಗಿ ಪರಿಣಮಿಸಿದನು. ದಾವೀದನು ಅವನಿಗೆ, “ನೀನು ಈಟಿ ಕತ್ತಿ ಬರ್ಜಿಗಳೊಡನೆ ನನ್ನ ಬಳಿಗೆ ಬರುತ್ತೀ; ನಾನಾದರೋ ನೀನು ಹೀಯಾಳಿಸಿದಂಥ ಸೇನಾಧೀಶ್ವರನೂ ಇಸ್ರಾಯೇಲ್ಯರ ಯುದ್ಧಭಟರ ದೇವರೂ ಆಗಿರುವ ಯೆಹೋವನ ನಾಮದೊಡನೆ ನಿನ್ನ ಬಳಿಗೆ ಬರುತ್ತೇನೆ. ಆತನು ಈ ಹೊತ್ತು ನಿನ್ನನ್ನು ನನ್ನ ಕೈಗೆ ಒಪ್ಪಿಸಿಕೊಡುವನು; ನಾನು ನಿನ್ನನ್ನು ಕೊಂದು ನಿನ್ನ ತಲೆಯನ್ನು ಕಡಿದುಹಾಕಿ . . . ಇಸ್ರಾಯೇಲ್ಯರೊಳಗೆ ದೇವರಿರುತ್ತಾನೆಂಬದು ಭೂಲೋಕದವರಿಗೆಲ್ಲಾ ತಿಳಿದುಬರುವದು; ಯೆಹೋವನು ಈಟಿ ಕತ್ತಿಗಳಿಲ್ಲದೆ ರಕ್ಷಿಸಬಲ್ಲನೆಂಬದು ಇಲ್ಲಿ ಕೂಡಿರುವವರಿಗೆಲ್ಲಾ ಗೊತ್ತಾಗುವದು; ಯಾಕಂದರೆ ಯುದ್ಧಫಲವು ಯೆಹೋವನ ಕೈಯಲ್ಲಿದೆ.” (1 ಸಮುವೇಲ 17:32-37, 45-47) ದೈವಿಕ ಸಹಾಯದಿಂದ, ದಾವೀದನು ಯೆಹೋವನನ್ನು ಧೈರ್ಯದಿಂದ ಸನ್ಮಾನಿಸಿದನು, ಗೊಲ್ಯಾತನನ್ನು ಕೊಂದುಹಾಕಿದನು, ಮತ್ತು ಹೀಗೆ ಶುದ್ಧ ಆರಾಧನೆಗೆ ಇದ್ದ ಒಂದು ಫಿಲಿಷ್ಟಿಯ ಬೆದರಿಕೆಯನ್ನು ತೆಗೆಯುವುದರಲ್ಲಿ ಪ್ರಾಮುಖ್ಯವಾದ ಒಂದು ಪಾತ್ರವನ್ನು ವಹಿಸಿದನು.
19. ಯಾವ ಯೋಜನೆಗಾಗಿ ಸೊಲೊಮೋನನಿಗೆ ಧೈರ್ಯವು ಬೇಕಾಗಿತ್ತು, ಮತ್ತು ಅವನ ವಿಧಾನವು ನಮ್ಮ ದಿನಗಳಲ್ಲಿ ಹೇಗೆ ಅನ್ವಯಿಸಲ್ಪಡಬಲ್ಲದು?
19 ರಾಜ ದಾವೀದನ ಮಗನಾದ ಸೊಲೊಮೋನನು ದೇವರ ಆಲಯವನ್ನು ಕಟ್ಟಲಿಕ್ಕಿರುವ ಸಮಯದಲ್ಲಿ, ಅವನ ವೃದ್ಧ ತಂದೆಯು ಅವನಿಗೆ ಪ್ರೇರೇಪಿಸಿದ್ದು: “ಸ್ಥಿರಚಿತ್ತನಾಗಿರು, ಧೈರ್ಯದಿಂದಿರು, ಕೆಲಸಕ್ಕೆ ಕೈಹಾಕು; ಅಂಜಬೇಡ, ಕಳವಳಗೊಳ್ಳಬೇಡ. ನನ್ನ ದೇವರಾಗಿರುವ ಯೆಹೋವ ದೇವರು ನಿನ್ನ ಸಂಗಡ ಇರುತ್ತಾನೆ; ಆತನು ತನ್ನ ಆಲಯದ ಎಲ್ಲಾ ಕೆಲಸವು ತೀರುವ ವರೆಗೂ ನಿನ್ನನ್ನು ಕೈಬಿಡುವದಿಲ್ಲ, ತೊರೆಯುವದಿಲ್ಲ.” (1 ಪೂರ್ವಕಾಲವೃತ್ತಾಂತ 28:20) ಧೈರ್ಯದ ಕಾರ್ಯವನ್ನೆಸಗುತ್ತಾ, ಸೊಲೊಮೋನನು ಆಲಯವನ್ನು ಸಫಲತೆಯಿಂದ ಪೂರ್ಣಗೊಳಿಸಿದನು. ಇಂದು ಒಂದು ದೇವಪ್ರಭುತ್ವ ಕಟ್ಟಡ ರಚನಾ ಕಾರ್ಯಕ್ರಮವು ಒಂದು ಸವಾಲನ್ನು ಸಾದರಪಡಿಸಿದಾಗ, ದಾವೀದನ ಮಾತುಗಳನ್ನು ನಾವು ಜ್ಞಾಪಿಸಿಕೊಳ್ಳೋಣ: “ಸ್ಥಿರಚಿತ್ತನಾಗಿರು, ಧೈರ್ಯದಿಂದಿರು, ಕೆಲಸಕ್ಕೆ ಕೈಹಾಕು.” ಯೆಹೋವನನ್ನು ಸನ್ಮಾನಿಸುವ ಮತ್ತು ಶುದ್ಧಾರಾಧನೆಯನ್ನು ಪ್ರವರ್ಧಿಸುವ ಎಂಥ ಉತ್ತಮ ಮಾರ್ಗವು ಇದಾಗಿದೆ!
20. ಯಾವ ಸಂಬಂಧದಲ್ಲಿ ರಾಜ ಆಸನು ಧೈರ್ಯವನ್ನು ತೆಗೆದುಕೊಂಡನು?
20 ದೇವರನ್ನು ಸನ್ಮಾನಿಸಲು ಮತ್ತು ಶುದ್ಧಾರಾಧನೆಯನ್ನು ಪ್ರವರ್ಧಿಸಲು ಇದ್ದ ರಾಜ ಆಸನ ಬಯಕೆಯ ಕಾರಣ, ವಿಗ್ರಹಗಳನ್ನು ಮತ್ತು ದೇವದಾಸರನ್ನು ಅವನು ಯೂದಾಯದಿಂದ ತೆಗೆದುಹಾಕಿದನು. ಅವನ ಧರ್ಮಭ್ರಷ್ಟ ಅಜಿಯ್ಜನ್ನು ಆಕೆಯ ಉನ್ನತ ಸ್ಥಾನದಿಂದ ತೆಗೆದನು ಮತ್ತು ಅವಳ “ಅಸಹ್ಯವಾದ ಮೂರ್ತಿಯನ್ನು” ಅವನು ಸುಟ್ಟುಬಿಟ್ಟನು. (1 ಅರಸು 15:11-13) ಹೌದು, ಆಸನು “ಯೆಹೂದ ಬೆನ್ಯಾಮೀನ್ ಪ್ರಾಂತಗಳಲ್ಲಿಯೂ ತಾನು ಸ್ವಾಧೀನಮಾಡಿಕೊಂಡ ಎಫ್ರಾಯೀಮ್ ಪರ್ವತ ಪ್ರದೇಶದ ಪಟ್ಟಣಗಳಲ್ಲಿಯೂ ಇದ್ದ ಅಸಹ್ಯ ಪ್ರತಿಮೆಗಳನ್ನು ತೆಗೆದುಹಾಕಿ ಯೆಹೋವನ ಆಲಯಕ್ಕೆ ಸೇರಿದ ಮಂಟಪದ ಮುಂದಿದ್ದ ಆತನ ಯಜ್ಞವೇದಿಯನ್ನು ಜೀರ್ಣೋದ್ಧಾರಮಾಡಿಸಿದನು.” (2 ಪೂರ್ವಕಾಲವೃತ್ತಾಂತ 15:8) ನೀವು ಕೂಡ ಧರ್ಮಭ್ರಷ್ಟತೆಯನ್ನು ಧೈರ್ಯದಿಂದ ನಿರಾಕರಿಸಿ ಶುದ್ಧ ಆರಾಧನೆಯನ್ನು ಪ್ರವರ್ಧಿಸುತ್ತೀರೊ? ರಾಜ್ಯದ ಅಭಿರುಚಿಗಳನ್ನು ಅಭಿವೃದ್ಧಿಪಡಿಸಲು ನಿಮ್ಮ ಪ್ರಾಪಂಚಿಕ ಸಂಪನ್ಮೂಲಗಳನ್ನು ನೀವು ಉಪಯೋಗಿಸುತ್ತಾ ಇದ್ದೀರೊ? ಮತ್ತು ಆತನ ಸಾಕ್ಷಿಗಳಲ್ಲಿ ಒಬ್ಬರಾಗಿ ಸುಸಮಾಚಾರವನ್ನು ಘೋಷಿಸುವುದರಲ್ಲಿ ಕ್ರಮವಾದ ಒಂದು ಪಾಲನ್ನು ಹೊಂದಿರುವ ಮೂಲಕ ಯೆಹೋವನನ್ನು ಸನ್ಮಾನಿಸಲು ನೀವು ಹುಡುಕುತ್ತಿದ್ದೀರೊ?
21. (ಎ) ಸಮಗ್ರತೆ ಕಾಪಾಡಿದ್ದ ಕ್ರೈಸ್ತರಿಗಿಂತ ಹಿಂದಿನವರ ದಾಖಲೆಗಳು ನಮಗೆ ಹೇಗೆ ಸಹಾಯ ಮಾಡಬಲ್ಲವು? (ಬಿ) ಮುಂದಿನ ಲೇಖನದಲ್ಲಿ ಯಾವ ವಿಷಯವು ಪರಿಗಣಿಸಲ್ಪಡುವುದು?
21 ಕ್ರೈಸ್ತರಿಗಿಂತಲೂ ಹಿಂದಿನ ಧೈರ್ಯದ ಸಮಗ್ರತೆಯನ್ನು ಕಾಪಾಡಿದವರ ಕುರಿತು ಶಾಸ್ತ್ರೀಯ ದಾಖಲೆಗಳನ್ನು ದೇವರು ಸಂರಕ್ಷಿಸಿದ್ದಕ್ಕಾಗಿ ನಾವು ಎಷ್ಟು ಕೃತಜ್ಞರು! ಖಂಡಿತವಾಗಿಯೂ, ಅವರ ಉತ್ತಮ ಉದಾಹರಣೆಗಳು ಯೆಹೋವನಿಗೆ ಧೈರ್ಯ, ದೇವ ಭಕ್ತಿ, ಮತ್ತು ಭಯ ಭಕ್ತಿಯೊಂದಿಗೆ ಪವಿತ್ರ ಸೇವೆಯನ್ನು ಸಲ್ಲಿಸುವಂತೆ ನಮಗೆ ಸಹಾಯ ಮಾಡಬಲ್ಲವು. (ಇಬ್ರಿಯ 12:28) ಕ್ರೈಸ್ತ ಗ್ರೀಕ್ ಶಾಸ್ತ್ರಗಳು ಕೂಡ ಕಾರ್ಯದಲ್ಲಿ ಕಂಡುಬರುವ ದೈವಿಕ ಧೈರ್ಯದ ಉದಾಹರಣೆಗಳನ್ನು ಒಳಗೊಂಡಿವೆ. ಯೆಹೋವನ ಮಾರ್ಗಗಳಲ್ಲಿ ಧೈರ್ಯದಿಂದ ನಡೆಯಲು ಈ ದಾಖಲೆಗಳಲ್ಲಿ ಕೆಲವು ನಮಗೆ ಹೇಗೆ ಸಹಾಯ ನೀಡಬಲ್ಲವು?
ನೀವು ಹೇಗೆ ಉತ್ತರಿಸುವಿರಿ?
▫ ಧೈರ್ಯವು ಏನಾಗಿದೆ?
▫ ಹನೋಕನು ಮತ್ತು ನೋಹನು ಧೈರ್ಯವನ್ನು ಹೇಗೆ ಪ್ರದರ್ಶಿಸಿದರು?
▫ ಯಾವ ವಿಷಯಗಳಲ್ಲಿ ಅಬ್ರಹಾಮನು, ಸಾರಳು, ಮತ್ತು ಇಸಾಕನು ಧೈರ್ಯದಿಂದ ಕಾರ್ಯವೆಸಗಿದರು?
▫ ಮೋಶೆ, ಯೆಹೋಶುವ, ಮತ್ತು ಕಾಲೇಬರಿಂದ ಯಾವ ಧೈರ್ಯದ ಉದಾಹರಣೆಗಳು ಇಡಲ್ಪಟ್ಟವು?
▫ ದೇವರಲ್ಲಿ ಭರವಸವಿಡಲು ಅವರಿಗೆ ಧೈರ್ಯವಿತ್ತೆಂದು ಇತರರು ಹೇಗೆ ತೋರಿಸಿದರು?
[ಪುಟ 15 ರಲ್ಲಿರುವ ಚಿತ್ರ]
ಗಿದ್ಯೋನನು ಮತ್ತು ಅವನ ಸೈನಿಕರ ಚಿಕ್ಕ ಗುಂಪು ಯೆಹೋವನಲ್ಲಿ ಧೈರ್ಯದಿಂದ ಭರವಸವಿಟ್ಟರು