ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w94 3/15 ಪು. 10-15
  • ಯೆಹೋವ ಉದ್ದೇಶದ ದೇವರು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವ ಉದ್ದೇಶದ ದೇವರು
  • ಕಾವಲಿನಬುರುಜು—1994
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಉದ್ದೇಶದ ದೇವರು
  • ಪ್ರಗತಿಪರವಾಗಿ ಪ್ರಕಟಿಸಲ್ಪಟ್ಟದ್ದು
  • ಜ್ಞಾನೋದಯ
  • ಅನೇಕರು ತಿಳಿಯದೆ ಇರಲು ಆಯ್ದುಕೊಳ್ಳುತ್ತಾರೆ
  • ಬೆಳಕು ವಾಹಕರು—ಯಾವ ಉದ್ದೇಶಕ್ಕಾಗಿ?
    ಕಾವಲಿನಬುರುಜು—1993
  • ಯೆಹೋವನು ತನ್ನ ಉದ್ದೇಶವನ್ನು ನೆರವೇರಿಸುವನಂದು ಆತನಲ್ಲಿ ಭರವಸವಿಡಿರಿ
    ಕಾವಲಿನಬುರುಜು—1994
  • ಜೀವಿತಕ್ಕೆ ಒಂದು ಮಹಾ ಉದ್ದೇಶವಿದೆ
    ಜೀವಿತದ ಉದ್ದೇಶವೇನು?—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?
  • ನಮ್ಮ ದಿನಗಳಿಗೆ ಸಂಬಂಧಿಸಿದ ಅತ್ಯಾವಶ್ಯಕ ಪ್ರಶ್ನೆಗಳನ್ನು ಬೈಬಲು ಉತ್ತರಿಸುತ್ತದೆ
    ಕಾವಲಿನಬುರುಜು—1999
ಇನ್ನಷ್ಟು
ಕಾವಲಿನಬುರುಜು—1994
w94 3/15 ಪು. 10-15

ಯೆಹೋವ ಉದ್ದೇಶದ ದೇವರು

“ನಾನು ಸಂಕಲ್ಪಿಸಿದ್ದೇ ನೆರವೇರುವದು, ಉದ್ದೇಶಿಸಿದ್ದೇ ನಿಲ್ಲುವದು, ಖಂಡಿತ.”—ಯೆಶಾಯ 14:24.

1, 2. ಜೀವಿತದ ಉದ್ದೇಶದ ಕುರಿತು ಅನೇಕರು ಏನು ಹೇಳುತ್ತಾರೆ?

ಎಲ್ಲೆಡೆಯೂ ಜನರು, “ಜೀವನದ ಉದ್ದೇಶವೇನು?” ಎಂಬುದಾಗಿ ಕೇಳುತ್ತಾರೆ. ಪಾಶ್ಚಾತ್ಯ ರಾಜಕೀಯ ನಾಯಕನೊಬ್ಬನು ಹೇಳಿದ್ದು: “ಹಿಂದೆಂದಿಗಿಂತಲೂ ಹೆಚ್ಚಿನ ಜನರು, ‘ನಾವು ಯಾರು? ನಮ್ಮ ಉದ್ದೇಶವೇನು?’ ಎಂದು ಕೇಳುತ್ತಿದ್ದಾರೆ.” ಜೀವನದ ಉದ್ದೇಶವೇನು ಎಂಬ ಪ್ರಶ್ನೆಯ ಮೇಲೆ ವಾರ್ತಾಪತ್ರಿಕೆಯೊಂದು ಯುವ ಜನರ ಮತವನ್ನು ಎಣಿಸಿದಾಗ, ಪ್ರತಿನಿಧಿರೂಪದ ಪ್ರತಿಕ್ರಿಯೆಗಳು ಹೀಗಿದ್ದವು: “ನಿಮ್ಮ ಹೃದಯವು ಬಯಸಿದ್ದೆಲ್ಲವನ್ನು ಮಾಡುವುದು.” “ಪ್ರತಿಯೊಂದು ಘಳಿಗೆಯನ್ನು ಸಂಪೂರ್ಣ ಉಪಯೋಗಿಸಿ ಜೀವಿಸುವುದು.” “ಹರ್ಷದಿಂದ ಮತ್ತು ಅಳತೆಗೆಟ್ಟು ಜೀವಿಸುವುದು.” “ಮಕ್ಕಳನ್ನು ಪಡೆಯುವುದು, ಸಂತೋಷವಾಗಿರುವುದು ಮತ್ತು ಆಮೇಲೆ ಸಾಯುವುದು.” ಇರುವುದು ಈ ಜೀವಿತ ಮಾತ್ರವೆಂದು ಅನೇಕರಿಗೆ ಅನಿಸಿತು. ಭೂಮಿಯ ಮೇಲೆ ಜೀವಿತದ ಯಾವುದೇ ದೀರ್ಘಾವಧಿಯ ಉದ್ದೇಶದ ಕುರಿತು ಯಾರೂ ಮಾತಾಡಲಿಲ್ಲ.

2 ಕನ್‌ಫ್ಯೂಷಿಯನ್‌ ವಿದ್ವಾಂಸನೊಬ್ಬನು ಹೇಳಿದ್ದು: “ಜೀವನದ ಅಂತಿಮ ಅರ್ಥವು ನಮ್ಮ ಸಾಧಾರಣ, ಮಾನವ ಅಸ್ತಿತ್ವದಲ್ಲಿ ಕಂಡುಕೊಳ್ಳಲ್ಪಡುತ್ತದೆ.” ಇದಕ್ಕನುಸಾರ, ಜನರು ಹುಟ್ಟಿ, 70 ಯಾ 80 ವರ್ಷಗಳ ಕಾಲ ಹೋರಾಡಿ, ಆಮೇಲೆ ಸತ್ತು ಸದಾಕಾಲಕ್ಕಾಗಿ ಅಸ್ತಿತ್ವದಲ್ಲಿಲ್ಲದೆ ಇರುತ್ತಾ ಮುಂದುವರಿಯುವರು. ವಿಕಾಸವಾದದ ಒಬ್ಬ ವಿಜ್ಞಾನಿಯು ಹೇಳಿದ್ದು: “ನಾವು ‘ಉನ್ನತ’ ಉತ್ತರಕ್ಕಾಗಿ ಹಾತೊರೆಯಬಹುದು—ಆದರೆ ಯಾವುದೂ ಅಸ್ತಿತ್ವದಲ್ಲಿಲ್ಲ.” ಈ ವಿಕಾಸವಾದಿಗಳಿಗೆ, ಜೀವನವು—ಅದನ್ನೆಲ್ಲಾ ಮರಣವು ಕೊನೆಗೊಳಿಸುವ ತನಕ—ಬದುಕಿ ಉಳಿಯಲಿಕ್ಕಾಗಿರುವ ಒಂದು ಹೋರಾಟವಾಗಿದೆ. ಇಂತಹ ತತ್ವಗಳು ಜೀವನದ ನಿರೀಕ್ಷಾಹೀನ ನೋಟವನ್ನು ಸಾದರಪಡಿಸುತ್ತವೆ.

3, 4. ಅನೇಕರು ಜೀವನವನ್ನು ವೀಕ್ಷಿಸುವ ರೀತಿಯನ್ನು ಲೋಕ ಪರಿಸ್ಥಿತಿಗಳು ಹೇಗೆ ಪ್ರಭಾವಿಸುತ್ತವೆ?

3 ಮಾನವ ಅಸ್ತಿತ್ವವು ಇಷ್ಟೊಂದು ಸಂಕಟದಿಂದ ತುಂಬಿರುವುದನ್ನು ಅವರು ನೋಡುವಾಗ, ಜೀವಿತಕ್ಕೆ ಉದ್ದೇಶವೊಂದು ಇರುವುದನ್ನು ಅನೇಕರು ಸಂದೇಹಿಸುತ್ತಾರೆ. ನಮ್ಮ ಸಮಯದಲ್ಲಿ, ಮನುಷ್ಯನು ಔದ್ಯೋಗಿಕ ಮತ್ತು ವೈಜ್ಞಾನಿಕ ಸಾಧನೆಯ ಪರಾಕಾಷ್ಠೆಯನ್ನು ಮುಟ್ಟಿರುತ್ತಾನೆಂದು ಭಾವಿಸುವಾಗ, ಲೋಕವ್ಯಾಪಕವಾಗಿ ಸುಮಾರು ನೂರು ಕೋಟಿ ಜನರು ಗಂಭೀರವಾಗಿ ಅಸ್ವಸ್ಥರಾಗಿದ್ದಾರೆ ಯಾ ನ್ಯೂನ ಪೋಷಣೆಗೊಳಗಾಗಿದ್ದಾರೆ. ಇಂತಹ ಕಾರಣಗಳಿಂದ ಪ್ರತಿ ವರ್ಷ ಲಕ್ಷಾಂತರ ಮಕ್ಕಳು ಸಾಯುತ್ತಾರೆ. ಇದರ ಜೊತೆಗೆ, ಹಿಂದಿನ ನಾಲ್ಕು ನೂರು ವರ್ಷಗಳನ್ನು ಸೇರಿಸಿ ಸತ್ತವರ ಸಂಖ್ಯೆಕ್ಕಿಂತ ಈ 20 ನೆಯ ಶತಮಾನವು ನಾಲ್ಕು ಪಟ್ಟು ಹೆಚ್ಚು ಮರಣ ಸಂಖ್ಯೆಯನ್ನು ಯುದ್ಧದಿಂದ ಪಡೆದಿದೆ. ಅಪರಾಧ, ಹಿಂಸೆ, ಅಮಲೌಷಧ ದುರುಪಯೋಗ, ಕುಟುಂಬ ಕುಸಿತ, ಏಯ್ಡ್ಸ್‌ ಮತ್ತು ಇತರ ರತಿರವಾನಿತ ರೋಗಗಳು—ನಕಾರಾತ್ಮಕ ಅಂಶಗಳ ಪಟ್ಟಿಯು ಹೆಚ್ಚಾಗುತ್ತದೆ. ಈ ಸಮಸ್ಯೆಗಳಿಗಾಗಿ ಲೋಕ ನಾಯಕರಲ್ಲಿ ಪರಿಹಾರವಿಲ್ಲ.

4 ಇಂತಹ ಪರಿಸ್ಥಿತಿಗಳ ನೋಟದಲ್ಲಿ, ಅನೇಕರು ನಂಬುವಂಥ ಒಂದು ವಿಷಯವನ್ನು ಒಬ್ಬಾಕೆ ವ್ಯಕ್ತಪಡಿಸಿದಳು: “ಜೀವನಕ್ಕೆ ಯಾವುದೇ ಉದ್ದೇಶವಿರುವುದಿಲ್ಲ. ಈ ಎಲ್ಲ ಕೆಟ್ಟ ವಿಷಯಗಳು ಸಂಭವಿಸುತ್ತಿರುವುದಾದರೆ, ಆಗ ಜೀವನಕ್ಕೆ ಹೆಚ್ಚಿನ ಅರ್ಥವಿರುವುದಿಲ್ಲ.” ಒಬ್ಬ ವೃದ್ಧ ಮನುಷ್ಯನು ಹೇಳಿದ್ದು: “ನನ್ನ ಜೀವನದ ಹೆಚ್ಚಿನ ಸಮಯ ನಾನು ಇಲ್ಲಿ ಏಕೆ ಇದ್ದೇನೆಂದು ಕೇಳುತ್ತಾ ಇದ್ದೇನೆ. ಉದ್ದೇಶವೊಂದು ಇರುವುದಾದರೆ, ನಾನು ಅದರ ಬಗ್ಗೆ ಇನ್ನು ಮುಂದೆ ಚಿಂತಿಸುವುದಿಲ್ಲ.” ಆದುದರಿಂದ, ದೇವರು ಕಷ್ಟಾನುಭವವನ್ನು ಯಾಕೆ ಅನುಮತಿಸುತ್ತಾನೆಂದು ಜನಸಮೂಹಗಳಿಗೆ ಗೊತ್ತಿರದ ಕಾರಣ, ಯಾತನಾಮಯ ಲೋಕ ಪರಿಸ್ಥಿತಿಗಳು ಭವಿಷ್ಯಕ್ಕಾಗಿ ಯಾವ ವಾಸ್ತವಿಕ ನಿರೀಕ್ಷೆಯನ್ನೂ ಅವರು ಹೊಂದದಂತೆ ಮಾಡುತ್ತವೆ.

5. ಈ ಲೋಕದ ಧರ್ಮಗಳು ಜೀವನದ ಉದ್ದೇಶದ ಕುರಿತು ಇರುವ ಗಲಿಬಿಲಿಗೆ ಯಾಕೆ ಹೆಚ್ಚನ್ನು ಕೂಡಿಸುತ್ತವೆ?

5 ಧಾರ್ಮಿಕ ಮುಖಂಡರು ಕೂಡ ಜೀವನದ ಉದ್ದೇಶದ ಕುರಿತು ಭಿನ್ನಾಭಿಪ್ರಾಯಿಗಳೂ ಅನಿಶ್ಚಿತರೂ ಆಗಿದ್ದಾರೆ. ಲಂಡನ್‌ನಲ್ಲಿ ಸೆಂಟ್‌ ಪೌಲ್ಸ್‌ ಕತೀಡ್ರಲ್‌ನ ಮಾಜಿ ಪ್ರಧಾನಾಧಿಕಾರಿಯು ಹೇಳಿದ್ದು: “ನನ್ನ ಜೀವನವೆಲ್ಲಾ ಜೀವಿಸುವುದರ ಉದ್ದೇಶವನ್ನು ಕಂಡುಹಿಡಿಯಲು ನಾನು ಹೋರಾಡಿದ್ದೇನೆ. . . . ನಾನು ವಿಫಲನಾಗಿದ್ದೇನೆ.” ಮರಣದಲ್ಲಿ, ಒಳ್ಳೆಯವರು ಪರಲೋಕಕ್ಕೆ ಹೋಗುತ್ತಾರೆ ಮತ್ತು ಕೆಟ್ಟವರು ಸದಾಕಾಲಕ್ಕೆ ಬೆಂಕಿಯ ನರಕಕ್ಕೆ ಹೋಗುತ್ತಾರೆಂದು ಅನೇಕ ಪಾದ್ರಿಗಳು ಕಲಿಸುತ್ತಾರೆಂಬುದು ನಿಜ. ಆದರೆ ಮಾನವಕುಲವು ಭೂಮಿಯ ಮೇಲೆ ಅದರ ಯಾತನಾ ಮಾರ್ಗವನ್ನು ಮುಂದುವರಿಸುವಂತೆ ಈ ದೃಷ್ಟಿಕೋನವು ಇನ್ನೂ ಅನುಮತಿಸುತ್ತದೆ. ಮತ್ತು ಜನರು ಪರಲೋಕದಲ್ಲಿ ಜೀವಿಸಬೇಕೆಂಬುದು ದೇವರ ಉದ್ದೇಶವಾಗಿದ್ದರೆ, ದೇವದೂತರನ್ನು ಮಾಡಿದಂತೆ ಅವರನ್ನು ಸ್ವರ್ಗೀಯ ಜೀವಿಗಳಂತೆ ಮಾಡಿ, ಮಾನವರನ್ನು ಇಷ್ಟೊಂದು ಕಷ್ಟಾನುಭವದಿಂದ ತಪ್ಪಿಸಬಾರದಿತೇಕ್ತೆ? ಹೀಗೆ ಭೂಮಿಯ ಮೇಲೆ ಜೀವನದ ಉದ್ದೇಶದ ಕುರಿತು ಗಲಿಬಿಲಿಯು ಯಾ ಅದಕ್ಕೆ ಯಾವುದೇ ಉದ್ದೇಶವಿದೆ ಎಂದು ನಂಬಲು ನಿರಾಕರಿಸುವುದು ಸಾಮಾನ್ಯ ವಿಷಯವಾಗಿದೆ.

ಉದ್ದೇಶದ ದೇವರು

6, 7. ವಿಶ್ವದ ಸಾರ್ವಭೌಮನ ಕುರಿತು ಬೈಬಲ್‌ ನಮಗೆ ಏನನ್ನು ಹೇಳುತ್ತದೆ?

6 ಆದರೂ, ಇತಿಹಾಸದಲ್ಲಿ ಅತ್ಯಂತ ವ್ಯಾಪಕವಾಗಿ ಹಂಚಲ್ಪಟ್ಟ ಪುಸ್ತಕವಾದ ಪವಿತ್ರ ಬೈಬಲ್‌, ವಿಶ್ವದ ಸಾರ್ವಭೌಮನಾದ ಯೆಹೋವನು ಉದ್ದೇಶದ ದೇವರಾಗಿದ್ದಾನೆಂದು ಹೇಳುತ್ತದೆ. ಭೂಮಿಯ ಮೇಲೆ ಮಾನವಕುಲಕ್ಕಾಗಿ ಆತನಿಗೆ ದೀರ್ಘಾವಧಿಯ, ವಾಸ್ತವದಲ್ಲಿ ಅನಂತ ಉದ್ದೇಶವಿದೆ ಎಂದು ಅದು ನಮಗೆ ತೋರಿಸುತ್ತದೆ. ಮತ್ತು ಯೆಹೋವನು ಏನನ್ನಾದರೂ ಉದ್ದೇಶಿಸಿದರೆ, ಅದು ತಪ್ಪದೆ ನೆರವೇರುವುದು. ಮಳೆಯು ಬೀಜವು ಮೊಳಕೆ ಬಿಡುವಂತೆ ಮಾಡುವಂತೆಯೇ, “ನನ್ನ ಬಾಯಿಂದ ಹೊರಟ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿ ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವದಿಲ್ಲ,” ಎಂದು ದೇವರು ಹೇಳುತ್ತಾನೆ. (ಯೆಶಾಯ 55:10, 11) ತಾನು ಸಾಧಿಸುವೆನೆಂದು ಯೆಹೋವನು ಹೇಳಿದ ವಿಷಯವು, “ನೆರವೇರುವದು.”—ಯೆಶಾಯ 14:24.

7 ಮಾನವರಾದ ನಮಗೆ ಸರ್ವಶಕ್ತನು ಆತನ ವಾಗ್ದಾನಗಳನ್ನು ನೆರವೇರಿಸುವನು ಎಂಬ ಪೂರ್ಣ ಭರವಸೆ ಇರಬಲ್ಲದು ಯಾಕೆಂದರೆ ದೇವರು “ಸುಳ್ಳಾಡ ಸಾಧ್ಯವಿಲ್ಲ.” (ತೀತ 1:2, NW; ಇಬ್ರಿಯ 6:18) ಆತನು ಏನನ್ನಾದರೂ ಮಾಡುವನೆಂದು ನಮಗೆ ಹೇಳುವುದಾದರೆ, ಅದು ಖಂಡಿತವಾಗಿ ನೆರವೇರುವುದೆಂಬುದಕ್ಕೆ ಆತನ ವಾಕ್ಯವೇ ಭರವಸೆ ಕೊಡುವಂಥದ್ದಾಗಿದೆ. ಅದು ಸಾಧಿಸಲ್ಪಡುವುದಕ್ಕೆ ಸಮಾನವಾಗಿದೆ. ಆತನು ಘೋಷಿಸುವುದು: “ನಾನೇ ದೇವರು, ಇನ್ನು ಯಾರೂ ಅಲ್ಲ; ನಾನೇ ಪರಮ ದೇವರು, ನನಗೆ ಸರಿಸಮಾನರಿಲ್ಲ. ಆರಂಭದಲ್ಲಿಯೇ ಅಂತ್ಯವನ್ನು ತಿಳಿಸಿದ್ದೇನೆ; ನನ್ನ ಸಂಕಲ್ಪವು ನಿಲ್ಲುವದು, ನನ್ನ ಇಷ್ಟಾರ್ಥವನ್ನೆಲ್ಲಾ ನೆರವೇರಿಸುವೆನು ಎಂದು ಹೇಳಿ ಇನ್ನೂ ನಡೆಯದಿರುವ ಕಾರ್ಯಗಳನ್ನು ಪುರಾತನಕಾಲದಲ್ಲಿಯೇ ಅರುಹಿದ್ದೇನೆ; . . . ನಾನು ನುಡಿದಿದ್ದೇನೆ, ಈಡೇರಿಸುವೆನು; ಆಲೋಚಿಸಿದ್ದೇನೆ, ಸಾಧಿಸುವೆನು.”—ಯೆಶಾಯ 46:9-11.

8. ದೇವರನ್ನು ಯಥಾರ್ಥವಾಗಿ ಅರಿಯಲು ಬಯಸುವವರು ಆತನನ್ನು ಕಂಡುಹಿಡಿಯಬಲ್ಲರೊ?

8 ಇನ್ನೂ ಹೆಚ್ಚಾಗಿ, ಯೆಹೋವನು “ಯಾವನಾದರೂ ನಾಶವಾಗುವದರಲ್ಲಿ  . . . ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸುವವನಾಗಿದ್ದಾನೆ.” (2 ಪೇತ್ರ 3:9) ಈ ಕಾರಣಕ್ಕಾಗಿ, ಯಾರೂ ಆತನ ಅರಿವಿಲ್ಲದೆ ಇರುವಂತೆ ಆತನು ಬಯಸುವುದಿಲ್ಲ. ಅಜರ್ಯನೆಂಬ ಒಬ್ಬ ಪ್ರವಾದಿಯು ಹೇಳಿದ್ದು: “ನೀವು [ದೇವರನ್ನು] ಹುಡುಕಿದರೆ ನಿಮಗೆ ಸಿಕ್ಕುವನು; ಆತನನ್ನು ಬಿಟ್ಟರೆ ಆತನೂ ನಿಮ್ಮನ್ನು ಬಿಟ್ಟುಬಿಡುವನು.” (2 ಪೂರ್ವಕಾಲವೃತ್ತಾಂತ 15:1, 2) ಆದಕಾರಣ, ದೇವರನ್ನು ಮತ್ತು ಆತನ ಉದ್ದೇಶಗಳನ್ನು ತಿಳಿದುಕೊಳ್ಳಲು ಯಥಾರ್ಥವಾಗಿ ಬಯಸುವವರು, ಆತನನ್ನು ಹುಡುಕುವ ಪ್ರಯತ್ನ ಮಾಡಿದರೆ, ಖಂಡಿತವಾಗಿ ತಿಳಿದುಕೊಳ್ಳಬಲ್ಲರು.

9, 10. (ಎ) ದೇವರನ್ನು ತಿಳಿಯಲು ಬಯಸುವವರಿಗೆ ಏನನ್ನು ಒದಗಿಸಲಾಗಿದೆ? (ಬಿ) ದೇವರ ವಾಕ್ಯದ ಅನ್ವೇಷಣೆ ಏನನ್ನು ಮಾಡುವಂತೆ ನಮ್ಮನ್ನು ಶಕ್ತಗೊಳಿಸುತ್ತದೆ?

9 ಎಲ್ಲಿ ಹುಡುಕುವುದು? ನಿಜವಾಗಿಯೂ ದೇವರನ್ನು ಹುಡುಕುವವರಿಗಾಗಿ, ತನ್ನ ವಾಕ್ಯವಾದ ಬೈಬಲನ್ನು ಆತನು ಒದಗಿಸಿದ್ದಾನೆ. ವಿಶ್ವವನ್ನು ಸೃಷ್ಟಿಸಲು ಆತನು ಉಪಯೋಗಿಸಿದ ಅದೇ ಕ್ರಿಯಾಶೀಲ ಶಕ್ತಿಯಾದ ಆತನ ಪವಿತ್ರಾತ್ಮದ ಮೂಲಕ, ಆತನ ಉದ್ದೇಶಗಳ ಕುರಿತು ನಾವು ತಿಳಿಯಬೇಕಾದ ವಿಷಯಗಳನ್ನು ಬರೆದಿಡುವಂತೆ ದೇವರು ನಂಬಿಗಸ್ತ ಪುರುಷರನ್ನು ನಿರ್ದೇಶಿಸಿದನು. ಉದಾಹರಣೆಗೆ, ಬೈಬಲ್‌ ಪ್ರವಾದನೆಯ ಕುರಿತು, ಅಪೊಸ್ತಲ ಪೇತ್ರನು ಅಂದದ್ದು: “ಯಾವ ಪ್ರವಾದನೆಯೂ ಎಂದೂ ಮನುಷ್ಯರ ಚಿತ್ತದಿಂದ ಉಂಟಾಗಲಿಲ್ಲ; ಮನುಷ್ಯರು ಪವಿತ್ರಾತ್ಮ ಪ್ರೇರಿತರಾಗಿ ದೇವರಿಂದ ಹೊಂದಿದ್ದನ್ನೇ ಮಾತಾಡಿದರು.” (2 ಪೇತ್ರ 1:21) ಅದೇ ರೀತಿಯಲ್ಲಿ, ಅಪೊಸ್ತಲ ಪೌಲನು ಘೋಷಿಸಿದ್ದು: “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ. ಅದರಿಂದ ದೇವರ ಮನುಷ್ಯನು ಪೂರ್ಣ ಪ್ರವೀಣನಾಗಿ ಸಕಲಸತ್ಕಾರ್ಯಕ್ಕೆ ಸಂಪೂರ್ಣ ಸನ್ನದ್ಧನಾಗುವನು.”—2 ತಿಮೊಥೆಯ 3:16, 17, NW; 1 ಥೆಸಲೊನೀಕ 2:13.

10 ದೇವರ ವಾಕ್ಯವು ನಮ್ಮನ್ನು ಆಂಶಿಕವಾಗಿ ಯಾ ಅಸಂಪೂರ್ಣವಾಗಿಯಲ್ಲ, ಆದರೆ ‘ಪೂರ್ಣ ಪ್ರವೀಣರಾಗಿ, ಸಂಪೂರ್ಣ ಸನ್ನದ್ಧರಾಗಲು’ ಶಕ್ತಗೊಳಿಸುತ್ತದೆ ಎಂಬುದನ್ನು ಗಮನಿಸಿರಿ. ದೇವರು ಯಾರು, ಆತನ ಉದ್ದೇಶಗಳೇನು ಮತ್ತು ತನ್ನ ಸೇವಕರಿಂದ ಆತನು ಕೇಳಿಕೊಳ್ಳುವುದು ಏನನ್ನು ಎಂಬುದರ ಕುರಿತು ಒಬ್ಬನು ನಿಶ್ಚಿತವಾಗಿರುವಂತೆ ಅದು ಸಾಧ್ಯಗೊಳಿಸುತ್ತದೆ. ದೇವರಿಂದ ರಚಿತವಾದ ಪುಸ್ತಕದಿಂದ ಇದು ಅಪೇಕ್ಷಿಸಲ್ಪಡತಕ್ಕದ್ದು. ದೇವರ ನಿಷ್ಕೃಷ್ಟ ಜ್ಞಾನವನ್ನು ಪಡೆಯಲು ನಾವು ಹುಡುಕಬಲ್ಲ ಏಕಮಾತ್ರ ಮೂಲವು ಇದೇ ಆಗಿದೆ. (ಜ್ಞಾನೋಕ್ತಿ 2:1-5; ಯೋಹಾನ 17:3) ಹಾಗೆ ಮಾಡುವ ಮೂಲಕ, ನಾವು “ಇನ್ನು ಮೇಲೆ ಕೂಸುಗಳಾಗಿರಬಾರದು; ದುರ್ಜನರ ವಂಚನೆಗೂ ದುರ್ಬೋಧಕರ ಕುಯುಕ್ತಿಗೂ ಒಳಬಿದ್ದು ನಾನಾ ಉಪದೇಶಗಳಿಂದ ಕಂಗೆಟ್ಟು ಗಾಳಿಯಿಂದ ಅತ್ತಿತ್ತು ನೂಕಿಸಿಕೊಂಡು ಹೋಗುವವರ ಹಾಗಿರಬಾರದು.” (ಎಫೆಸ 4:13, 14) ಕೀರ್ತನೆಗಾರನು ಯೋಗ್ಯವಾದ ದೃಷ್ಟಿಕೋನವನ್ನು ವ್ಯಕ್ತಪಡಿಸಿದನು: “ನಿನ್ನ [ದೇವರ] ವಾಕ್ಯವು ನನ್ನ ಕಾಲಿಗೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ.”—ಕೀರ್ತನೆ 119:105.

ಪ್ರಗತಿಪರವಾಗಿ ಪ್ರಕಟಿಸಲ್ಪಟ್ಟದ್ದು

11. ಯೆಹೋವನು ತನ್ನ ಉದ್ದೇಶವನ್ನು ಮಾನವಕುಲಕ್ಕೆ ಹೇಗೆ ಪ್ರಕಟಿಸಿದ್ದಾನೆ?

11 ಮಾನವ ಕುಟುಂಬದ ಆರಂಭದಲ್ಲಿಯೇ, ಯೆಹೋವನು ಭೂಮಿಯ ಮತ್ತು ಅದರಲ್ಲಿನ ಮಾನವರ ಕಡೆಗೆ ತನ್ನ ಉದ್ದೇಶವನ್ನು ಪ್ರಕಟಿಸಿದನು. (ಆದಿಕಾಂಡ 1:26-30) ಆದರೆ ನಮ್ಮ ಪ್ರಥಮ ಹೆತ್ತವರು ದೇವರ ಸಾರ್ವಭೌಮತೆಯನ್ನು ನಿರಾಕರಿಸಿದಾಗ, ಮಾನವಕುಲವು ಆತ್ಮಿಕ ಅಂಧಕಾರ ಮತ್ತು ಮರಣದೊಳಗೆ ಬಿತ್ತು. (ರೋಮಾಪುರ 5:12) ಆದರೂ, ಆತನನ್ನು ಸೇವಿಸಲು ಬಯಸುವವರು ಇರುವರೆಂದು ಯೆಹೋವನಿಗೆ ಗೊತ್ತಿತ್ತು. ಆದುದರಿಂದ, ಶತಮಾನಗಳ ಉದ್ದಕ್ಕೂ ಆತನು ಪ್ರಗತಿಪರವಾಗಿ ತನ್ನ ಉದ್ದೇಶಗಳನ್ನು ತನ್ನ ನಂಬಿಗಸ್ತ ಸೇವಕರಿಗೆ ಪ್ರಕಟಿಸಿದ್ದಾನೆ. ಆತನು ಸಂಸರ್ಗ ಮಾಡಿದವರಲ್ಲಿ ಕೆಲವರು, ಹನೋಕನು (ಆದಿಕಾಂಡ 5:24; ಯೂದ 14, 15), ನೋಹನು (ಆದಿಕಾಂಡ 6:9, 13), ಅಬ್ರಹಾಮನು (ಆದಿಕಾಂಡ 12:1-3), ಮತ್ತು ಮೋಶೆ (ವಿಮೋಚನಕಾಂಡ 31:18; 34:27, 28) ಆಗಿದ್ದರು. ದೇವರ ಪ್ರವಾದಿಯಾದ ಆಮೋಸನು ಬರೆದದ್ದು: “ಕರ್ತನಾದ ಯೆಹೋವನು ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ರಹಸ್ಯವನ್ನು ತಿಳಿಸದೆ ಏನೂ ಮಾಡನು.”—ಆಮೋಸ 3:7; ದಾನಿಯೇಲ 2:27, 28.

12. ದೇವರ ಉದ್ದೇಶಗಳ ಮೇಲೆ ಯೇಸು ಹೆಚ್ಚಿನ ಬೆಳಕನ್ನು ಹೇಗೆ ಬೀರಿದನು?

12 ಏದೆನಿನಲ್ಲಿ ದಂಗೆಯ ಸುಮಾರು 4,000 ವರ್ಷಗಳ ಅನಂತರ, ದೇವರ ಮಗನಾದ ಯೇಸು ಕ್ರಿಸ್ತನು ಭೂಮಿಯ ಮೇಲಿದ್ದಾಗ, ಯೆಹೋವನ ಉದ್ದೇಶಗಳ ಇನ್ನೂ ಅಧಿಕ ವಿವರಗಳು ಪ್ರಕಟಿಸಲ್ಪಟ್ಟವು. ಇದು ಪ್ರತ್ಯೇಕವಾಗಿ ಭೂಮಿಯ ಮೇಲೆ ಆಳಲು ಒಂದು ಸ್ವರ್ಗೀಯ ರಾಜ್ಯವನ್ನು ಸ್ಥಾಪಿಸುವ ದೇವರ ಉದ್ದೇಶದ ಸಂಬಂಧದಲ್ಲಿತ್ತು. (ದಾನಿಯೇಲ 2:44) ಯೇಸು ಆ ರಾಜ್ಯವನ್ನು ತನ್ನ ಬೋಧನೆಯ ಮುಖ್ಯವಿಷಯವನ್ನಾಗಿ ಮಾಡಿದನು. (ಮತ್ತಾಯ 4:17; 6:10) ಭೂಮಿಗಾಗಿ ಮತ್ತು ಮಾನವಕುಲಕ್ಕಾಗಿ ದೇವರ ಮೂಲಭೂತ ಉದ್ದೇಶವು ಆ ರಾಜ್ಯದ ಕೆಳಗೆ ನೆರವೇರಲ್ಪಡುವುದೆಂದು ಅವನು ಮತ್ತು ಅವನ ಶಿಷ್ಯರು ಕಲಿಸಿದರು. ಈ ಭೂಮಿಯು ಸದಾಕಾಲ ಜೀವಿಸುವ ಪರಿಪೂರ್ಣ ಮಾನವರಿಂದ ವಾಸಿಸಲ್ಪಡುವ ಒಂದು ಪ್ರಮೋದವನವಾಗಿ ಪರಿವರ್ತಿಸಲ್ಪಡುವುದು. (ಕೀರ್ತನೆ 37:29; ಮತ್ತಾಯ 5:5; ಲೂಕ 23:43; 2 ಪೇತ್ರ 3:13; ಪ್ರಕಟನೆ 21:4) ಇನ್ನೂ ಹೆಚ್ಚಾಗಿ, ದೇವರು ಪ್ರದರ್ಶಿಸಲು ಶಕ್ತಗೊಳಿಸಿದ ಅದ್ಭುತಕಾರ್ಯಗಳ ಮೂಲಕ, ಆ ಹೊಸ ಲೋಕದಲ್ಲಿ ಏನು ಸಂಭವಿಸುವುದು ಎಂಬುದನ್ನು ಯೇಸು ಮತ್ತು ಅವನ ಶಿಷ್ಯರು ಪ್ರದರ್ಶಿಸಿದರು.—ಮತ್ತಾಯ 10:1, 8; 15:30, 31; ಯೋಹಾನ 11:25-44.

13. ಮಾನವಕುಲದೊಂದಿಗೆ ದೇವರ ನಿರ್ವಹಣೆಗಳ ಸಂಬಂಧದಲ್ಲಿ, ಯಾವ ಬದಲಾವಣೆಯು ಸಾ.ಶ. 33ರ ಪಂಚಾಶತ್ತಮದಲ್ಲಿ ಸಂಭವಿಸಿತು?

13 ಸಾ.ಶ. 33ರ ಪಂಚಾಶತ್ತಮದಲ್ಲಿ, ಯೇಸುವಿನ ಪುನರುತ್ಥಾನದ 50 ದಿನಗಳ ಬಳಿಕ, ಕ್ರಿಸ್ತನ ಹಿಂಬಾಲಕರ ಸಭೆಯ ಮೇಲೆ ದೇವರ ಆತ್ಮವು ಸುರಿಸಲ್ಪಟ್ಟಿತು. ಅದು ಅಪನಂಬಿಗಸ್ತ ಇಸ್ರಾಯೇಲ್ಯರನ್ನು ಯೆಹೋವನ ಒಡಂಬಡಿಕೆಯ ಜನರೋಪಾದಿ ಸ್ಥಾನಪಲ್ಲಟಗೊಳಿಸಿತು. (ಮತ್ತಾಯ 21:43; 27:51; ಅ. ಕೃತ್ಯಗಳು 2:1-4) ಆ ಸಂದರ್ಭದಲ್ಲಿ ಪವಿತ್ರಾತ್ಮದ ಸುರಿಯುವಿಕೆಯು, ಆ ಸಮಯದಿಂದ ದೇವರ ಸತ್ಯತೆಗಳ ತನ್ನ ಉದ್ದೇಶಗಳ ಕುರಿತು ಈ ಹೊಸ ಸಂಸ್ಥೆಯ ಮುಖಾಂತರ ಪ್ರಕಟಿಸುವನೆಂಬುದಕ್ಕೆ ರುಜುವಾತಾಗಿತ್ತು. (ಎಫೆಸ 3:10) ಸಾ.ಶ. ಪ್ರಥಮ ಶತಮಾನದ ಸಮಯದಲ್ಲಿ, ಕ್ರೈಸ್ತ ಸಭೆಯ ಸಂಘಟನಾ ಚೌಕಟ್ಟನ್ನು ಸ್ಥಾಪಿಸಲಾಯಿತು.—1 ಕೊರಿಂಥ 12:27-31; ಎಫೆಸ 4:11, 12.

14. ಸತ್ಯವನ್ನು ಹುಡುಕುವವರು ಸತ್ಯ ಕ್ರೈಸ್ತ ಸಭೆಯನ್ನು ಹೇಗೆ ಗುರುತಿಸುವರು?

14 ಇಂದು, ಸತ್ಯವನ್ನು ಹುಡುಕುವವರು ಸತ್ಯ ಕ್ರೈಸ್ತ ಸಭೆಯನ್ನು, ದೇವರ ಪ್ರಪ್ರಥಮ ಗುಣವಾದ ಪ್ರೀತಿಯ ಸಮಂಜಸ ಪ್ರದರ್ಶನದಿಂದ ಗುರುತಿಸಬಲ್ಲರು. (1 ಯೋಹಾನ 4:8, 16) ನಿಜವಾಗಿಯೂ, ಸಹೋದರ ಪ್ರೀತಿಯು ಯಥಾರ್ಥವಾದ ಕ್ರೈಸ್ತತ್ವವನ್ನು ಗುರುತಿಸುವ ಸಂಕೇತವಾಗಿದೆ. ಯೇಸು ಹೇಳಿದ್ದು: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು” “ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬದೇ ನಾನು ಕೊಡುವ ಆಜ್ಞೆಯಾಗಿದೆ.” (ಯೋಹಾನ 13:35; 15:12) ಮತ್ತು ಯೇಸು ತನ್ನ ಕೇಳುಗರನ್ನು ಮರುಜ್ಞಾಪಿಸಿದ್ದು: “ನಾನು ನಿಮಗೆ ಕೊಟ್ಟ ಆಜೆಗ್ಞಳಿಗೆ ಸರಿಯಾಗಿ ನೀವು ನಡೆದರೆ ನೀವು ನನ್ನ ಸ್ನೇಹಿತರು.” (ಯೋಹಾನ 15:14) ಆದುದರಿಂದ, ಪ್ರೀತಿಯ ನಿಯಮಕ್ಕನುಗುಣವಾಗಿ ಜೀವಿಸು ವವರೇ ದೇವರ ನಿಜ ಸೇವಕರಾಗಿದ್ದಾರೆ. ಅವರು ಕೇವಲ ಅದರ ಕುರಿತು ಮಾತಾಡುವುದಿಲ್ಲ, ಯಾಕೆಂದರೆ “ಕ್ರಿಯೆಗಳಿಲ್ಲದ ನಂಬಿಕೆಯೂ ಸತ್ತದ್ದು.”—ಯಾಕೋಬ 2:26.

ಜ್ಞಾನೋದಯ

15. ಯಾವ ವಿಷಯದಲ್ಲಿ ದೇವರ ಸೇವಕರು ಭರವಸೆಯಿಂದಿರಬಲ್ಲರು?

15 ಸಮಯದ ದಾಟುವಿಕೆಯೊಂದಿಗೆ, ದೇವರ ಉದ್ದೇಶಗಳ ಕುರಿತು ಸತ್ಯ ಕ್ರೈಸ್ತ ಸಭೆಯು ಹೆಚ್ಚೆಚ್ಚಾಗಿ ಜ್ಞಾನೋದಯಗೊಳಿಸಲ್ಪಡುವುದೆಂದು ಯೇಸು ಮುಂತಿಳಿಸಿದನು. ಅವನು ತನ್ನ ಹಿಂಬಾಲಕರಿಗೆ ವಾಗ್ದಾನಿಸಿದ್ದು: “ಆದರೆ ಆ ಸಹಾಯಕನು ಅಂದರೆ ನನ್ನ ಹೆಸರಿನಲ್ಲಿ ತಂದೆಯು ಕಳುಹಿಸಿಕೊಡುವ ಪವಿತ್ರಾತ್ಮನೇ ನಿಮಗೆ ಎಲ್ಲವನ್ನು ಉಪದೇಶಿಸುವನು.” (ಯೋಹಾನ 14:26) “ನೋಡಿರಿ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ,” ಎಂದು ಸಹ ಯೇಸು ಹೇಳಿದನು. (ಮತ್ತಾಯ 28:20) ಹೀಗೆ, ದೇವರು ಮತ್ತು ಆತನ ಉದ್ದೇಶಗಳ ಕುರಿತು ಸತ್ಯ ಜ್ಞಾನೋದಯವು ದೇವರ ಸೇವಕರೊಳಗೆ ಹೆಚ್ಚಾಗುತ್ತದೆ. ಹೌದು, “ನೀತಿವಂತರ ಮಾರ್ಗವು ಮಧ್ಯಾಹ್ನದ ವರೆಗೂ ಹೆಚ್ಚುತ್ತಾ ಬರುವ ಬೆಳಗಿನ ಬೆಳಕಿನಂತಿದೆ.”—ಜ್ಞಾನೋಕ್ತಿ 4:18.

16. ದೇವರ ಉದ್ದೇಶಗಳ ವಿಷಯದಲ್ಲಿ ನಾವು ಎಲ್ಲಿದ್ದೇವೆ ಎಂಬುದರ ಕುರಿತು ನಮ್ಮ ಆತ್ಮಿಕ ಜ್ಞಾನೋದಯವು ನಮಗೆ ಏನನ್ನು ಹೇಳುತ್ತದೆ?

16 ಇಂದು, ಆ ಆತ್ಮಿಕ ಬೆಳಕು ಹಿಂದೆಂದಿಗಿಂತಲೂ ಪ್ರಕಾಶಮಾನವಾಗಿದೆ ಯಾಕೆಂದರೆ, ಅನೇಕ ಬೈಬಲ್‌ ಪ್ರವಾದನೆಗಳು ನೆರವೇರಲ್ಪಡುತ್ತಿರುವ ಯಾ ನೆರವೇರಿಕೆಯನ್ನು ಸಮೀಪಿಸುತ್ತಿರುವ ಸಮಯದಲ್ಲಿ ನಾವು ಇದ್ದೇವೆ. ಈ ದುಷ್ಟ ವಿಷಯಗಳ ವ್ಯವಸ್ಥೆಯ “ಕಡೇ ದಿವಸಗಳಲ್ಲಿ” ನಾವು ಜೀವಿಸುತ್ತಾ ಇದ್ದೇವೆಂದು ಇವು ನಮಗೆ ತೋರಿಸುತ್ತವೆ. “ಯುಗದ ಸಮಾಪ್ತಿ” ಎಂದು ಕರೆಯಲ್ಪಡುವ ಸಮಯಾವಧಿಯು ಇದೇ ಆಗಿದೆ; ಇದು ದೇವರ ಹೊಸ ಲೋಕದಿಂದ ಹಿಂಬಾಲಿಸಲ್ಪಡುವುದು. (2 ತಿಮೊಥೆಯ 3:1-5, 13; ಮತ್ತಾಯ 24:3-13) ದಾನಿಯೇಲನ ಮೂಲಕ ಮುಂತಿಳಿಸಲ್ಪಟ್ಟಂತೆ, ದೇವರ ಸ್ವರ್ಗೀಯ ರಾಜ್ಯವು ಬೇಗನೆ “ಆ [ಈಗ ಅಸ್ತಿತ್ವದಲ್ಲಿರುವ] ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವುದು.”—ದಾನಿಯೇಲ 2:44.

17, 18. ಯಾವ ಮಹಾ ಪ್ರವಾದನೆಗಳು ಈಗ ನೆರವೇರಲ್ಪಡುತ್ತಿವೆ?

17 ಈಗ ನೆರವೇರುತ್ತಿರುವ ಪ್ರವಾದನೆಗಳಲ್ಲಿ, ಮತ್ತಾಯ 24 ನೆಯ ಅಧ್ಯಾಯ 14 ನೇ ವಚನದಲ್ಲಿ ದಾಖಲಿಸಲ್ಪಟ್ಟ ಪ್ರವಾದನೆಯು ಒಂದಾಗಿದೆ. ಅಲ್ಲಿ ಯೇಸು ಹೇಳಿದ್ದು: “ಇದಲ್ಲದೆ ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.” ಭೂಮಿಯ ಸುತ್ತಲೂ, ಆ ರಾಜ್ಯ ಸಾರುವಿಕೆಯ ಕೆಲಸವು ಲಕ್ಷಾಂತರ ಯೆಹೋವನ ಸಾಕ್ಷಿಗಳ ಮೂಲಕ ನಡೆಸಲ್ಪಡುತ್ತಿದೆ. ಮತ್ತು ಪ್ರತಿ ವರ್ಷ ನೂರಾರು ಸಾವಿರ ಜನರು ಅವರನ್ನು ಜೊತೆಗೂಡುತ್ತಿದ್ದಾರೆ. ಇದು, ಈ ದುಷ್ಟ ಲೋಕದ “ಅಂತ್ಯಕಾಲದಲ್ಲಿ” ಅನೇಕ ಜನಾಂಗಗಳಿಂದ ಜನರು ಯೆಹೋವನ ಸತ್ಯಾರಾಧನೆಗೆ ಬರುವರೆಂದು, ಮತ್ತು ‘ಆತನು ತನ್ನ ಮಾರ್ಗಗಳ ವಿಷಯವಾಗಿ ಅವರಿಗೆ ಬೋಧನೆ ಮಾಡುವನು, ಅವರು ಆತನ ದಾರಿಗಳಲ್ಲಿ ನಡೆಯುವರು’ ಎಂಬುದಾಗಿ ಹೇಳುವ ಯೆಶಾಯ 2:2, 3 ರಲ್ಲಿರುವ ಪ್ರವಾದನೆಯೊಂದಿಗೆ ಹೊಂದಾಣಿಕೆಯಲ್ಲಿದೆ.

18 ಈ ಹೊಸ ಜನರು ಯೆಹೋವನ ಆರಾಧನೆಗೆ ಯೆಶಾಯ 60 ನೆಯ ಅಧ್ಯಾಯ 8 ನೇ ವಚನದಲ್ಲಿ ಮುಂತಿಳಿಸಲ್ಪಟ್ಟಂತೆ “ಮೇಘದೋಪಾದಿಯಲ್ಲಿ” ಬರುತ್ತಿದ್ದಾರೆ. ವಚನ 22 ಕೂಡಿಸುವುದು: “ಚಿಕ್ಕವನಿಂದ ಒಂದು ಕುಲವಾಗುವದು, ಅಲ್ಪನಿಂದ ಬಲವಾದ ಜನಾಂಗವಾಗುವದು; ಯೆಹೋವನೆಂಬ ನಾನು ಕ್ಲುಪ್ತಕಾಲದಲ್ಲಿ ಇದನ್ನು ಬಲುಬೇಗನೆ ಉಂಟುಮಾಡುವೆನು.” ಅದು ಈಗಿನ ಸಮಯವಾಗಿದೆ ಎಂದು ಪ್ರಮಾಣವು ತೋರಿಸುತ್ತದೆ. ಮತ್ತು ಯೆಹೋವನ ಸಾಕ್ಷಿಗಳೊಂದಿಗೆ ಸಹವಸಿಸುವುದರಿಂದ, ಅವರು ಸತ್ಯ ಕ್ರೈಸ್ತ ಸಭೆಯೊಂದಿಗೆ ಸಂಪರ್ಕದಲ್ಲಿ ಬಂದಿದ್ದಾರೆ ಎಂಬ ಭರವಸೆಯಿಂದ ಹೊಸಬರು ಇರಬಲ್ಲರು.

19. ಯೆಹೋವನ ಸಾಕ್ಷಿಗಳೊಂದಿಗೆ ಸಹವಸಿಸುವ ಹೊಸಬರು ಸತ್ಯ ಕ್ರೈಸ್ತ ಸಭೆಗೆ ಬರುತ್ತಿದ್ದಾರೆಂದು ನಾವು ಯಾಕೆ ಹೇಳುತ್ತೇವೆ?

19 ಇದನ್ನು ನಾವು ಖಚಿತವಾಗಿ ಯಾಕೆ ಹೇಳಬಲ್ಲೆವು? ಯಾಕೆಂದರೆ ಈ ಹೊಸಬರು ಈಗಾಗಲೇ ಯೆಹೋವನ ಸಂಸ್ಥೆಯೊಳಗಿರುವ ಲಕ್ಷಾಂತರ ಜನರೊಂದಿಗೆ, ತಮ್ಮ ಜೀವಿತಗಳನ್ನು ದೇವರಿಗೆ ಸಮರ್ಪಿಸಿದ್ದಾರೆ ಮತ್ತು ಆತನ ಚಿತ್ತವನ್ನು ಮಾಡುತ್ತಾ ಇದ್ದಾರೆ. ದೈವಿಕ ಪ್ರೀತಿಯ ನಿಯಮದೊಂದಿಗೆ ಹೊಂದಾಣಿಕೆಯಲ್ಲಿ ಜೀವಿಸುವುದನ್ನು ಇದು ಒಳಗೊಳ್ಳುತ್ತದೆ. ಇದರ ಒಂದು ಪ್ರಮಾಣದೋಪಾದಿ, ಈ ಕ್ರೈಸ್ತರು ‘ತಮ್ಮ [ಆಯುಧಗಳನ್ನು] ಕುಲುಮೆಗೆ ಹಾಕಿ ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡಿದ್ದಾರೆ . . . ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ.’ (ಯೆಶಾಯ 2:4) ಲೋಕವ್ಯಾಪಕವಾಗಿ ಎಲ್ಲಾ ಯೆಹೋವನ ಸಾಕ್ಷಿಗಳು ಇದನ್ನು ಮಾಡಿದ್ದಾರೆ ಯಾಕೆಂದರೆ ಅವರು ಪ್ರೀತಿಯನ್ನು ಆಚರಿಸುತ್ತಾರೆ. ಇದರ ಅರ್ಥವು ಅವರು ಒಬ್ಬರ ವಿರುದ್ಧ ಒಬ್ಬರು ಯಾ ಬೇರೆ ಯಾರ ವಿರುದ್ಧವೂ ಯುದ್ಧ ಶಸ್ತ್ರಗಳನ್ನು ತೆಗೆದುಕೊಳ್ಳಲು ಸಾಧ್ಯವೇ ಇಲ್ಲ. ಇದರಲ್ಲಿ ಅವರು ಲೋಕದ ಧರ್ಮಗಳಂತೆ ಇರದೆ ಅಪೂರ್ವವಾಗಿದ್ದಾರೆ. (ಯೋಹಾನ 13:34, 35; 1 ಯೋಹಾನ 3:10-12, 15) “ಸಂಪೂರ್ಣಮಾಡುವ ಬಂಧವಾಗಿರುವ” ಪ್ರೀತಿಯ ಮೂಲಕ ಕಟ್ಟಲ್ಪಟ್ಟ ಒಂದು ಭೌಗೋಲಿಕ ಸಹೋದರತ್ವವನ್ನು ಅವರು ರೂಪಿಸುವುದರಿಂದ, ಅವರು ವಿಭಾಗಿಸುವ ರಾಷ್ಟ್ರೀಯತೆಯಲ್ಲಿ ಒಳಗೊಳ್ಳುವುದಿಲ್ಲ.—ಕೊಲೊಸ್ಸೆ 3:14; ಮತ್ತಾಯ 23:8; 1 ಯೋಹಾನ 4:20, 21.

ಅನೇಕರು ತಿಳಿಯದೆ ಇರಲು ಆಯ್ದುಕೊಳ್ಳುತ್ತಾರೆ

20, 21. ಮಾನವಕುಲದ ಬಹುಭಾಗವು ಆತ್ಮಿಕ ಅಂಧಕಾರದಲ್ಲಿದೆ ಏಕೆ? (2 ಕೊರಿಂಥ 4:4; 1 ಯೋಹಾನ 5:19)

20 ದೇವರ ಸೇವಕರ ಮಧ್ಯೆ ಆತ್ಮಿಕ ಬೆಳಕು ಪ್ರಕಾಶಮಾನವಾದಂತೆ, ಭೂಮಿಯ ಜನಸಂಖ್ಯೆಯ ಉಳಿದ ಜನರು ಹಿಂದೆಂದಿಗಿಂತಲೂ ಹೆಚ್ಚಾದ ಆತ್ಮಿಕ ಅಂಧಕಾರದೊಳಗೆ ಬೀಳುತ್ತಿದ್ದಾರೆ. ಅವರಿಗೆ ಯೆಹೋವ ಮತ್ತು ಆತನ ಉದ್ದೇಶಗಳ ಅರಿವಿಲ್ಲ. “ಇಗೋ, ಕತ್ತಲು ಭೂಮಿಯನ್ನು ಆವರಿಸಿದೆ, ಕಾರ್ಗತ್ತಲು ಜನಾಂಗಗಳನ್ನು ಮುಚ್ಚಿದೆ,” ಎಂಬುದಾಗಿ ದೇವರ ಪ್ರವಾದಿಯು ಹೇಳಿದಾಗ, ಈ ಸಮಯವನ್ನು ವಿವರಿಸಿದನು. (ಯೆಶಾಯ 60:2) ದೇವರ ಕುರಿತು ಕಲಿಯುವುದರಲ್ಲಿ ಯಥಾರ್ಥವಾದ ಆಸಕ್ತಿಯನ್ನು ಜನರು ಪ್ರದರ್ಶಿಸದೆ ಯಾ ಆತನನ್ನು ಮೆಚ್ಚಿಸುವಂತೆ ಪ್ರಯತ್ನ ಮಾಡುವ ಬಯಕೆಯನ್ನು ತೋರಿಸದೆ ಇರುವುದರಿಂದ ಇದು ಹೀಗಿದೆ. ಯೇಸು ಅಂದದ್ದು: “ಆ ತೀರ್ಪು ಏನಂದರೆ—ಬೆಳಕು ಲೋಕಕ್ಕೆ ಬಂದಿದ್ದರೂ ಮನುಷ್ಯರ ಕೃತ್ಯಗಳು ಕೆಟ್ಟವುಗಳಾಗಿರುವದರಿಂದ ಅವರು ಬೆಳಕಿಗಿಂತ ಕತ್ತಲೆಯನ್ನೇ ಹೆಚ್ಚಾಗಿ ಪ್ರೀತಿಸಿದರು. ಕೆಟ್ಟದ್ದನ್ನು ಮಾಡುವವರು ಬೆಳಕನ್ನು ಸಹಿಸುವದಿಲ್ಲ, ತಮ್ಮ ಕೃತ್ಯಗಳು ದುಷ್ಕೃತ್ಯಗಳಾಗಿ ತೋರಿಬಂದಾವೆಂದು ಬೆಳಕಿಗೆ ಬರುವದಿಲ್ಲ.”—ಯೋಹಾನ 3:19, 20.

21 ಇಂತಹ ವ್ಯಕ್ತಿಗಳು ದೇವರ ಚಿತ್ತವನ್ನು ಕಂಡುಹಿಡಿಯುವುದರಲ್ಲಿ ಯಥಾರ್ಥವಾಗಿ ಆಸಕ್ತರಾಗಿರುವುದಿಲ್ಲ. ಬದಲಾಗಿ, ತಮ್ಮ ಸ್ವಂತ ಚಿತ್ತವನ್ನು ಮಾಡುವುದರ ಮೇಲೆ ತಮ್ಮ ಜೀವಿತಗಳನ್ನು ಅವರು ಕೇಂದ್ರೀಕರಿಸುತ್ತಾರೆ. ದೇವರ ಚಿತ್ತವನ್ನು ಕಡೆಗಣಿಸುವುದರಿಂದ, ಅವರು ತಮ್ಮನ್ನು ಅಪಾಯಕರ ಸ್ಥಾನದಲ್ಲಿರಿಸಿಕೊಳ್ಳುತ್ತಾರೆ, ಯಾಕೆಂದರೆ ಆತನ ವಾಕ್ಯವು ಘೋಷಿಸುವುದು: “ಧರ್ಮೋಪದೇಶಕ್ಕೆ ಕಿವಿಗೊಡದವನು ಮಾಡುವ ದೇವಪ್ರಾರ್ಥನೆಯೂ ಅಸಹ್ಯ.” (ಜ್ಞಾನೋಕ್ತಿ 28:9) ತಮ್ಮ ಆಯ್ದುಕೊಂಡ ಮಾರ್ಗದ ಪರಿಣಾಮಗಳನ್ನು ಅವರು ಅನುಭವಿಸುವರು. ಅಪೊಸ್ತಲ ಪೌಲನು ಬರೆದದ್ದು: “ಮೋಸಹೋಗಬೇಡಿರಿ; ದೇವರು ತಿರಸ್ಕಾರ ಸಹಿಸುವವನಲ್ಲ. ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು.”—ಗಲಾತ್ಯ 6:7.

22. ದೇವರನ್ನು ತಿಳಿಯಲು ಬಯಸುವ ಜನಸಮೂಹದವರು ಈಗ ಏನನ್ನು ಮಾಡುತ್ತಿದ್ದಾರೆ?

22 ಹಾಗಿದ್ದರೂ, ದೇವರ ಚಿತ್ತವನ್ನು ಅರಿಯಲು ಬಯಸುವ, ಆತನಿಗಾಗಿ ಯಥಾರ್ಥವಾಗಿ ಹುಡುಕುವ, ಮತ್ತು ಆತನ ಕಡೆಗೆ ಸೆಳೆಯಲ್ಪಡುವ ಜನಸಮೂಹಗಳು ಇವೆ. “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು,” ಎಂಬುದಾಗಿ ಯಾಕೋಬ 4:8 ಹೇಳುತ್ತದೆ. ಅಂತಹವರ ಕುರಿತು ಯೇಸು ಹೇಳಿದ್ದು: “ಆದರೆ ಸತ್ಯವನ್ನು ಅನುಸರಿಸಿ ನಡೆಯುವವನು ತಾನು ದೇವರಿಂದ ನಡಿಸಿಕೊಂಡು ತನ್ನ ಕೃತ್ಯಗಳನ್ನು ಮಾಡಿದ್ದೇನೆಂದು ತೋರಿಬರುವಂತೆ ಬೆಳಕಿಗೆ ಬರುತ್ತಾನೆ.” (ಯೋಹಾನ 3:21) ಬೆಳಕಿಗೆ ಬರುವವರಿಗಾಗಿ ಎಂತಹ ಅದ್ಭುತಕರ ಭವಿಷ್ಯತ್ತನ್ನು ದೇವರು ಉದ್ದೇಶಿಸಿದ್ದಾನೆ! ನಮ್ಮ ಮುಂದಿನ ಲೇಖನವು ಆ ರೋಮಾಂಚಕ ಪ್ರತೀಕ್ಷೆಗಳನ್ನು ಚರ್ಚಿಸುವುದು.

ನೀವು ಹೇಗೆ ಉತ್ತರಿಸುವಿರಿ?

▫ ಜೀವಿತದ ಉದ್ದೇಶದ ಕುರಿತು ಅನೇಕರು ಏನು ಹೇಳುತ್ತಾರೆ?

▫ ಯೆಹೋವನು ಒಬ್ಬ ಉದ್ದೇಶದ ದೇವರೆಂದು ತನ್ನನ್ನು ಹೇಗೆ ಪ್ರಕಟಿಸಿಕೊಳ್ಳುತ್ತಾನೆ?

▫ ಸಾ.ಶ. ಪ್ರಥಮ ಶತಮಾನದಲ್ಲಿ ಯಾವ ಮಹಾ ಜ್ಞಾನೋದಯವು ಸಂಭವಿಸಿತು?

▫ ಸತ್ಯ ಕ್ರೈಸ್ತ ಸಭೆಯನ್ನು ಇಂದು ಹೇಗೆ ಗುರುತಿಸಸಾಧ್ಯವಿದೆ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ