ವಿಶ್ವಾಸಾರ್ಹ ಮಾರ್ಗದರ್ಶನವನ್ನು ನೀವು ಎಲ್ಲಿ ಕಂಡುಕೊಳ್ಳಬಲ್ಲಿರಿ?
“ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು. ಯೆಹೋವನೇ, ನನ್ನನ್ನು ಶಿಕ್ಷಿಸು.”—ಯೆರೆಮೀಯ 10:23, 24.
ಬೈಬಲ್ ಬರಹಗಾರ ಯೆರೆಮೀಯನು ಸುಮಾರು 25 ಶತಮಾನಗಳ ಹಿಂದೆ ಆ ಮಾತುಗಳನ್ನು ಬರೆದನು. ಮಾನವ ಮಾರ್ಗದರ್ಶನದ ಸಾವಿರಾರು ವರುಷಗಳ ಅನ್ವಯಿಸುವಿಕೆಯ ಬಳಿಕ ಮಾನವ ಕುಲದ ಶೋಚನೀಯ ಪರಿಸ್ಥಿತಿಯು ಈ ಹೇಳಿಕೆಯ ನಿರಾಕರಿಸಲಾಗದ ಸತ್ಯತೆಯನ್ನು ರುಜುಪಡಿಸುತ್ತದೆ. ಆದರೆ ನೀವು ಹೀಗೆ ಕೇಳಬಹುದು, ‘ವಿಶ್ವಾಸಾರ್ಹ ಮಾರ್ಗದರ್ಶನವನ್ನು ಎಲ್ಲಿ ಕಂಡುಕೊಳ್ಳಸಾಧ್ಯವಿದೆ’?
ಮೇಲೆ ಉದ್ಧರಿಸಲ್ಪಟ್ಟ ಶಾಸ್ತ್ರವಚನವು, ಮಾನವನಿಗಿಂತಲೂ ಅತ್ಯುತ್ಕೃಷ್ಟವಾಗಿರುವ—ಮಾನವನ ನಿರ್ಮಾಣಿಕನಾದ, ಯೆಹೋವ ದೇವರ—ವಿಶ್ವಾಸಾರ್ಹವಾದ ಮಾರ್ಗದರ್ಶನ ಮತ್ತು ನಿರ್ದೇಶನದ ಒಂದು ಮೂಲವನ್ನು ಸೂಚಿಸುತ್ತದೆ. ಮಾನವನ ರಚನೆ ಮತ್ತು ಅವನ ಆವಶ್ಯಕತೆಗಳನ್ನು ನಮ್ಮ ಸೃಷ್ಟಿಕರ್ತನಿಗಿಂತಲೂ ಹೆಚ್ಚು ಉತ್ತಮವಾಗಿ ಯಾರೂ ಅರಿಯರು. ಆದರೂ, ಅಂತಹ ಮಾರ್ಗದರ್ಶನ ಮತ್ತು ನಿರ್ದೇಶನವನ್ನು ನಮಗೆ ಒದಗಿಸುವುದರಲ್ಲಿ ದೇವರು ಆಸಕ್ತನಾಗಿದ್ದಾನೊ? ಆತನು ಅದನ್ನು ಹೇಗೆ ಮಾಡುತ್ತಾನೆ? ನಮ್ಮ ಸಮಯಗಳಿಗೆ ಇದು ಪ್ರಾಯೋಗಿಕವಾದದ್ದಾಗಿದೆಯೊ?
ದೈವಿಕ ಮಾರ್ಗದರ್ಶನವನ್ನು ಪಡೆಯಲು ರಚಿಸಲ್ಪಟ್ಟದ್ದು
ಪ್ರಾಣಿಗಳಿಂದ ಮಾನವನನ್ನು ಬೇರ್ಪಡಿಸುವ ಪ್ರಾಮುಖ್ಯ ವ್ಯತ್ಯಾಸವು, ಸ್ಪರೂಪ, ಸಾಮರ್ಥ್ಯ, ಮತ್ತು ಮಾನವ ಮಿದುಳಿನ ಕೆಲಸಗಳಲ್ಲಿ ಸೇರಿರುತ್ತದೆಂಬುದು ಸುವಿದಿತ. ಪ್ರಾಣಿಗಳಲ್ಲಿ ಬಹುಮಟ್ಟಿಗೆ ಮಿದುಳಿನ ಎಲ್ಲ ಕೆಲಸಗಳು, ಯಾವುದು ಹುಟ್ಟರಿವು ಎಂಬುದಾಗಿ ಕರೆಯಲ್ಪಡುತ್ತದೋ ಅದರಿಂದ ಯೋಜಿಸಲ್ಪಡುತ್ತದೆ. ಮಾನವರ ಸಂಬಂಧದಲ್ಲಿ ಇದು ಈ ರೀತಿಯಲ್ಲ.—ಜ್ಞಾನೋಕ್ತಿ 30:24-28.
ಪ್ರಾಣಿಗಳ ಮಿದುಳುಗಳಿಗೆ ಅಸದೃಶವಾಗಿ, ಮಾನವ ಮಿದುಳಿನ ಬಹು ಭಾಗವು ನಿರ್ಧರಿತ ಯೋಜನೆಗಳಿಂದ ವಿಮುಕ್ತವಾಗಿದೆ. ಬುದ್ಧಿಶಕ್ತಿಯುಳ್ಳ ನಿರ್ಧಾರಗಳನ್ನು ಮಾಡಲು ಮತ್ತು ಪ್ರೀತಿ, ಔದಾರ್ಯ, ನಿಸ್ವಾರ್ಥತೆ, ನ್ಯಾಯ, ಮತ್ತು ವಿವೇಕಗಳಂತಹ ಶ್ರೇಷ್ಠ ಗುಣಗಳನ್ನು ಪ್ರದರ್ಶಿಸಲು, ಅವರನ್ನು ಶಕ್ತರನ್ನಾಗಿಮಾಡುವ ಇಚ್ಛಾಸ್ವಾತಂತ್ರ್ಯದ ಯೋಗ್ಯತೆಯಿಂದ ದೇವರು ಮಾನವರನ್ನು ಉಂಟುಮಾಡಿದನು.
ಅಂತಹ ಮಾನಸಿಕ ಸಾಮರ್ಥ್ಯದೊಂದಿಗೆ, ಅದನ್ನು ಅತ್ಯುತ್ತಮವಾಗಿ ಹೇಗೆ ಉಪಯೋಗಿಸಸಾಧ್ಯವಿದೆ ಎಂಬುದರ ಕುರಿತು ಯಾವುದೇ ರೀತಿಯ ಮಾರ್ಗದರ್ಶನವನ್ನು ಒದಗಿಸದೆ ಮಾನವನನ್ನು ದೇವರು ಸೃಷ್ಟಿಸಿರುವನೆಂದು ಭಾವಿಸುವುದು ತರ್ಕಬದ್ಧವಾಗಿದೆಯೊ? ಪ್ರಥಮ ಮಾನವರಿಗೆ ದೇವರು ನೇರವಾದ ಮಾರ್ಗದರ್ಶನವನ್ನು ನೀಡಿದನು. (ಆದಿಕಾಂಡ 2:15-17, 19; 3:8, 9) ಮಾನವನು ಪಾಪದಲ್ಲಿ ಬಿದ್ದ ಅನಂತರವೂ, ನಂಬಿಗಸ್ತರಾದ ಸ್ತ್ರೀಯರು ಮತ್ತು ಪುರುಷರನ್ನು, ಹೆಚ್ಚು ಗಮನಾರ್ಹವಾಗಿ ತನ್ನ ಸ್ವಪ್ರೇರಿತ ವಾಕ್ಯವಾದ, ಬೈಬಲಿನ ಮೂಲಕ ಮಾರ್ಗದರ್ಶಿಸುವುದನ್ನು ಯೆಹೋವನು ಮುಂದುವರಿಸಿದ್ದಾನೆ. (ಕೀರ್ತನೆ 119:105) ತಮ್ಮ ಇಚ್ಛಾಸ್ವಾತಂತ್ರ್ಯವನ್ನು ಅವರು ವಿವೇಕದಿಂದ ಉಪಯೋಗಿಸುವಾಗ, ಜೀವಿತದ ದೈನಂದಿನ ಸಮಸ್ಯೆಗಳನ್ನು ಯಶಸ್ವಿಯಾಗಿ ನಿಭಾಯಿಸಲು ಇದು ಮಾನವರನ್ನು ಅನುಮತಿಸಿದೆ.
ಬೈಬಲಿನ ದೈವಿಕ ಕರ್ತೃತ್ವ
ಬೈಬಲನ್ನು ಒಂದು ವಿಶ್ವಾಸಾರ್ಹ ಮಾರ್ಗದರ್ಶನದ ಉಗಮವಾಗಿ ಯಾವುದು ಮಾಡುತ್ತದೆ? ಒಂದು ವಿಚಾರವೇನಂದರೆ, ಕೇವಲ ಸೃಷ್ಟಿಕರ್ತನು ಮಾತ್ರ ಒದಗಿಸಸಾಧ್ಯವಿರುವ ಸಮಾಚಾರವನ್ನು ಇದು ನೀಡುತ್ತದೆ. ಮಾನವ ಜೀವಿತವು ಆರಂಭವಾಗುವುದಕ್ಕಿಂತಲೂ ಬಹು ಮುಂಚೆ ಸಂಭವಿಸಿದ ಘಟನೆಗಳ ಇತಿಹಾಸವನ್ನು ಅದು ರೇಖಿಸುತ್ತದೆ. ಉದಾಹರಣೆಗೆ, ಈ ಭೂಮಿಯು ಮಾನವ ಜೀವವನ್ನು ಸಂರಕ್ಷಿಸಲು ಸೂಕ್ತವಾದದ್ದಾಗಿ ಪರಿಣಮಿಸುವ ತನಕ, ಅದು ಹೇಗೆ ಅನುಕ್ರಮಿಕ ಹಂತದಲ್ಲಿ ರಚಿಸಲ್ಪಟಿತ್ಟೆಂಬ ಇತಿಹಾಸವನ್ನು ಇದು ಒದಗಿಸುತ್ತದೆ. (ಆದಿಕಾಂಡ ಅಧ್ಯಾಯಗಳು 1, 2) ಬೈಬಲಿನಲ್ಲಿ ಇದು 3,000 ವರುಷಗಳ ಹಿಂದೆ ದಾಖಲಿಸಲ್ಪಟ್ಟಿರುವುದಾದರೂ, ಅದು ಆಧುನಿಕ ವೈಜ್ಞಾನಿಕ ಕಲ್ಪನೆಗಳೊಂದಿಗೆ ಹೊಂದಿಕೆಯಲ್ಲಿದೆ.
ಭೂಮಿಯು ಗುಂಡಗಿದೆಯೆಂದು ಮಾನವ ಕುಲವು ಸರ್ವಸಾಮಾನ್ಯವಾಗಿ ಅಂಗೀಕರಿಸುವುದಕ್ಕೆ ಬಹು ಕಾಲದ ಹಿಂದೆಯೇ ಬೈಬಲ್ ಘೋಷಿಸಿದ್ದು: “[ದೇವರು] ಶೂನ್ಯದ ಮೇಲೆ [ಆಕಾಶದ] ಉತ್ತರ ದಿಕ್ಕನ್ನು ವಿಸ್ತರಿಸಿ ಭೂಲೋಕವನ್ನು ಯಾವ ಆಧಾರವೂ ಇಲ್ಲದೆ ತೂಗಹಾಕಿದ್ದಾನೆ.” (ಯೋಬ 26:7) ಇನ್ನೂ ಹೆಚ್ಚಾಗಿ, ಬೈಬಲ್ ಪ್ರಕಟಪಡಿಸುವುದೇನಂದರೆ “ಭೂಮಂಡಲನಿವಾಸಿಗಳು ಮಿಡತೆಗಳಂತೆ ಸಣ್ಣಗೆ ಕಾಣಿಸುವಷ್ಟು ಉನ್ನತವಾದ ಆಕಾಶದಲ್ಲಿ ಆತನು ಆಸೀನನಾಗಿದ್ದಾನೆ.” (ಯೆಶಾಯ 40:22) ಸೃಷ್ಟಿಕರ್ತನಾದ ದೇವರು ಮಾತ್ರ ಈ ವಿವರಣೆಯನ್ನು ಒದಗಿಸಿದಿರ್ದಸಾಧ್ಯವಿದೆ.
ಭವಿಷ್ಯತ್ತನ್ನು ಮುಂಗಾಣುವ ಸಾಮರ್ಥ್ಯವು ಮಾನವನಿಗೆ ಕೊಡಲ್ಪಟ್ಟ ಒಂದು ವರವಾಗಿಲ್ಲ. ಬದಲಾಗಿ, ಬೈಬಲಿನ ಪುಟಗಳ ಮೂಲಕ ಭವಿಷ್ಯತ್ತನ್ನು ಸೃಷ್ಟಿಕರ್ತನು ಮುಂತಿಳಿಸುತ್ತಾನೆ. ಆತನ ಕುರಿತು ಹೀಗೆ ಬರೆಯುವಂತೆ ಪ್ರವಾದಿ ಯೆಶಾಯನನ್ನು ದೇವರು ಪ್ರೇರೇಪಿಸಿದನು: “ನಾನೇ ದೇವರು, ಇನ್ನು ಯಾರೂ ಅಲ್ಲ; ನಾನೇ ಪರಮ ದೇವರು, ನನಗೆ ಸರಿಸಮಾನರಿಲ್ಲ. ಆರಂಭದಲ್ಲಿಯೇ ಅಂತ್ಯವನ್ನು ತಿಳಿಸಿದ್ದೇನೆ; ನನ್ನ ಸಂಕಲ್ಪವು ನಿಲ್ಲುವದು, ನನ್ನ ಇಷ್ಟಾರ್ಥವನ್ನೆಲ್ಲಾ ನೆರವೇರಿಸುವೆನು.”—ಯೆಶಾಯ 46:9, 10.
ಬೈಬಲು ಅತ್ಯಾಶ್ಚರ್ಯಕರ ನಿಷ್ಕೃಷ್ಟತೆಯೊಂದಿಗೆ, ತನಗೆ ಆರಂಭದಿಂದ ಅಂತ್ಯವನ್ನು ಮುಂತಿಳಿಸಸಾಧ್ಯವೆಂಬುದನ್ನು ಪ್ರದರ್ಶಿಸಿದೆ. ಉದಾಹರಣೆಗೆ, ಮಾನವ ಇತಿಹಾಸದ ಸಾವಿರಾರು ವರುಷಗಳ ಸಮಯದಲ್ಲಿ, ಪ್ರಧಾನ ಲೋಕ ಶಕ್ತಿಗಳ ಉದಯ, ಪತನ ಮತ್ತು ವೈಶಿಷ್ಟ್ಯಗಳನ್ನು ಅದು ಮುಂತಿಳಿಸಿತು. ಈ ಗಮನಾರ್ಹವಾದ ಪ್ರವಾದನೆಗಳು, ಅವುಗಳು ನೆರವೇರುವುದಕ್ಕಿಂತಲೂ ಶತಮಾನಗಳ ಮೊದಲು, ಕೆಲವು ಪ್ರವಾದನೆಗಳು ಸಾವಿರಾರು ವರುಷಗಳಿಗೂ ಮೊದಲು ಬರೆಯಲ್ಪಟ್ಟವುಗಳಾಗಿದ್ದವು. ಹೀಗೆ ಬೈಬಲು ಆಧುನಿಕ ದಿನದ ಘಟನೆಗಳನ್ನು, ಹಾಗೂ ಅವುಗಳ ಅಂತಿಮ ಪರಿಣಾಮಗಳನ್ನು ನಿಷ್ಕೃಷ್ಟವಾಗಿ ಮುಂತಿಳಿಸುತ್ತದೆ. “ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧ” ವಾದ ಅರ್ಮಗೆದೋನಿನಲ್ಲಿ ಅಪರಿಪೂರ್ಣ ಮಾನವ ನಿರ್ಮಿತ ಸರಕಾರಗಳ ನಾಶನದ ಸಮಯದಲ್ಲಿ, ರಕ್ಷಣೆಯ ಮಾರ್ಗವನ್ನು ಅದು ನಿರ್ದೇಶಿಸುವುದರಿಂದ ಸಹ ಬೈಬಲು ಅಪೂರ್ವವಾದದ್ದಾಗಿದೆ. ದೇವರ ರಾಜ್ಯವು ಆತನ ಮಗನಾದ ಯೇಸು ಕ್ರಿಸ್ತನ ಆಳಿಕ್ವೆಯ ಕೆಳಗೆ, ಆ ಮಹಾ ಕಾರ್ಯವನ್ನು ನೆರವೇರಿಸಲಿರುವುದು.—ಪ್ರಕಟನೆ 16:14, 16; 17:9-18; ದಾನಿಯೇಲ, ಅಧ್ಯಾಯಗಳು 2, 8.
ಸದಾ ಪ್ರಯೋಜನಕರ—ಎಂದೂ ಹಾನಿಕರವಲ್ಲ
ಬರಿಯ ಮಾನವ ವಿವೇಕವು ಅಪರಿಪೂರ್ಣವಾಗಿದೆ; ಆದುದರಿಂದ, ಸಲಹೆಯು ಒಳ್ಳೆಯ ಉದ್ದೇಶದಿಂದ ಕೊಡಲ್ಪಟ್ಟಿರಬಹುದಾದರೂ, ಅದು ಸದಾ ಪ್ರಯೋಜನಕರವಾಗಿರುವುದಿಲ್ಲ. ಬೈಬಲಿನ ಸಲಹೆಯೊಂದಿಗೆ ಇದು ಹಾಗಿರುವುದಿಲ್ಲ. ಸ್ವತಃ ದೇವರು ಹೇಳುವುದು: “ನಾನೇ ನಿನ್ನ ದೇವರಾದ ಯೆಹೋವನು, . . . ನೀನು ನನ್ನ ಆಜ್ಞೆಗಳನ್ನು ಕೇಳಿದ್ದರೆ ಎಷ್ಟೋ ಚೆನ್ನಾಗಿತ್ತು! ನಿನ್ನ ಸುಖವು ದೊಡ್ಡ ನದಿಯಂತೆಯೂ ನಿನ್ನ ಕ್ಷೇಮವು ಸಮುದ್ರದ ಅಲೆಗಳ ಹಾಗೂ ಇರುತ್ತಿದ್ದವು.”—ಯೆಶಾಯ 48:17, 18.
ದೈವಿಕ ಮಾರ್ಗದರ್ಶನವು, ನಾವು ಆದ್ಯತೆಗಳನ್ನಿಡಲು ಮತ್ತು ಜೀವಿತದಲ್ಲಿ ಶ್ರೇಷ್ಠ ಮೌಲ್ಯಗಳಿಗೆ ಅಂಟಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ಆಧುನಿಕ ಸಮಾಜವು ಪ್ರಾಪಂಚಿಕ ಈಡೇರಿಕೆಗಳು ಮತ್ತು ಗುರಿಗಳ ಮೇಲೆ ಒತ್ತಡವನ್ನು ಹಾಕುವಾಗ, ಬೈಬಲು “ನಾವು ಕಾಣುವಂಥದನ್ನು ಲಕ್ಷಿಸದೆ ಕಾಣದಿರುವಂಥದನ್ನು ಲಕ್ಷಿಸುವವರಾಗಿದ್ದೇವೆ. ಕಾಣುವಂಥದು ಸ್ಪಲ್ಪಕಾಲ ಮಾತ್ರ ಇರುವದು; ಕಾಣದಿರುವಂಥದು ಸದಾಕಾಲವೂ ಇರುವದು” ನಮಗೆ ಎಷ್ಟೊಂದು ಅಮೂಲ್ಯವಾದುದೆಂದು ಒತ್ತಿ ಹೇಳುತ್ತದೆ. (2 ಕೊರಿಂಥ 4:18) ಈ ವಿಧದಲ್ಲಿ ಜೀವನದಲ್ಲಿ ಅತ್ಯುತ್ತಮ ಗುರಿಗಳು ಅಂದರೆ ದೇವರ ಚಿತ್ತವನ್ನು ಮಾಡುವ ಸಂಬಂಧದಲ್ಲಿ ಆತ್ಮಿಕ ಗುರಿಗಳು—ನೀತಿಯ ನೂತನ ವ್ಯವಸ್ಥೆಯಲ್ಲಿ ನಿತ್ಯಜೀವವು ಅಂತಿಮ ಗುರಿ—ಉಳ್ಳವರಾಗುವಂತೆ ನಾವು ಪ್ರೋತ್ಸಾಹಿಸಲ್ಪಡುತ್ತೇವೆ.
ಈ ಉನ್ನತ ಗುರಿಗಳನ್ನು ಸಾಧಿಸಲು ಕ್ರೈಸ್ತನೊಬ್ಬನು ಸ್ವತಃ ಶ್ರಮಿಸುವಾಗ, ಈ ದುಷ್ಟ ವಿಷಯಗಳ ವ್ಯವಸ್ಥೆಯಲ್ಲಿ ಅತ್ಯುತ್ತಮ ರೀತಿಯ ಜೀವಿತವನ್ನು ಜೀವಿಸುವಂತೆ ಅವನಿಗೆ ಬೈಬಲಿನ ಸಲಹೆಯು ಸಹಾಯಮಾಡುತ್ತದೆ. ಕಡಿಮೆ ಕೆಲಸ ಮಾಡುವಂತೆ ಮತ್ತು ಹೆಚ್ಚಿನ ಪ್ರಮಾಣದ ವೇತನವನ್ನು ಸಂಪಾದಿಸುವಂತೆ ಆಧುನಿಕ ಮಾನವ ವಿವೇಕವು ಉತ್ತೇಜಿಸುವ ಪ್ರವೃತ್ತಿಯುಳ್ಳದ್ದಾಗಿದೆ. ಇನ್ನೊಂದು ಕಡೆ, “ಜೋಲುಗೈ ದಾರಿದ್ರ್ಯ; ಚುರುಕುಗೈ ಐಶ್ವರ್ಯ,” ಎಂದು ಬೈಬಲು ನಮಗೆ ಹೇಳುತ್ತದೆ. ಅಪೊಸ್ತಲ ಪೌಲನು ಇಬ್ರಿಯ ಕ್ರೈಸ್ತರಿಗೆ ಬರೆದದ್ದು: “ನಾವು ಎಲ್ಲಾ ವಿಷಯಗಳಲ್ಲಿ ಸಜ್ಜನರಾಗಿ ನಡೆದುಕೊಳ್ಳಬೇಕೆಂದು ಅಪೇಕ್ಷಿಸುವವರಾಗಿದ್ದು ನಮ್ಮ ಮನಸ್ಸಿನಿಂದ ಒಳ್ಳೇ ಸಾಕ್ಷಿ ಹೊಂದಿದ್ದೇವೆಂದು ನಿಶ್ಚಯಿಸಿಕೊಂಡಿದ್ದೇವೆ.”—ಜ್ಞಾನೋಕ್ತಿ 10:4; ಇಬ್ರಿಯ 13:18.
ಕುಟುಂಬ ಏರ್ಪಾಡಿನ ಕುರಿತಾಗಿಯೂ ಬೈಬಲು ಪ್ರಾಯೋಗಿಕವಾದ ಸಲಹೆಯನ್ನು ನೀಡುತ್ತದೆ. ವಿವಾಹದ ಏರ್ಪಾಡಿನೊಳಗೆ ಗಂಡ ಮತ್ತು ಹೆಂಡತಿಯರ ಪಾತ್ರವನ್ನು, ಹಾಗು ಮಕ್ಕಳನ್ನು ಬೆಳೆಸುವ ಮತ್ತು ಶಿಕ್ಷಣಕೊಡುವ ಸರಿಯಾದ ಮಾರ್ಗವನ್ನು ಕೂಡ ಅದು ನಿರ್ದಿಷ್ಟವಾಗಿ ಸ್ಥಾಪಿಸುತ್ತದೆ. ಅದನ್ನುವುದು: “ನಿಮ್ಮಲ್ಲಿ ಪ್ರತಿ ಪುರುಷನು ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಬೇಕು; ಪ್ರತಿ ಹೆಂಡತಿಯು ತನ್ನ ಗಂಡನಿಗೆ ಭಯಭಕ್ತಿಯಿಂದ ನಡೆದುಕೊಳ್ಳಬೇಕು. ಮಕ್ಕಳೇ, ನೀವು ಕರ್ತನಲ್ಲಿರುವವರಿಗೆ ತಕ್ಕ ಹಾಗೆ ನಿಮ್ಮ ತಂದೆತಾಯಿಗಳ ಮಾತನ್ನು ಕೇಳಬೇಕು; . . . ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ ಕರ್ತನಿಗೆ ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ ಮಾಡುತ್ತಾ ಅವರನ್ನೂ ಸಾಕಿ ಸಲಹಿರಿ.” ಸೃಷ್ಟಿ ಕರ್ತನ ಅತ್ಯುತ್ತಮ ಸಲಹೆಯನ್ನು ಹಿಂಬಾಲಿಸುವುದು, ಕುಟುಂಬಗಳ ಸ್ಥಿರತೆ ಮತ್ತು ಸಂತೋಷಕ್ಕೆ ಹೆಚ್ಚನ್ನು ಕೂಡಿಸುತ್ತದೆ.—ಎಫೆಸ 5:21–6:4.
ದೇವರ ಮಾರ್ಗದರ್ಶನವನ್ನು ಅನುಸರಿಸುವವರಿಗಾಗಿ ಭದ್ರವಾದೊಂದು ಭವಿಷ್ಯತ್ತು
ಮಾನವ ಕುಲದ ಎಲ್ಲ ಸಮಸ್ಯೆಗಳಿಗೆ ದೇವರಿಟ್ಟಿರುವ ಪರಿಹಾರವನ್ನು ದೇವರ ಲಿಖಿತ ವಾಕ್ಯವಾದ ಬೈಬಲು ತೋರಿಸುತ್ತದೆ. ಯೆಹೋವ ದೇವರು ಅತಿ ಬೇಗನೆ ಪ್ರಚಲಿತ ವಿಷಯಗಳ ವ್ಯವಸ್ಥೆಯನ್ನು, ಅದರ ಎಲ್ಲ ವೇದನೆ, ಅನ್ಯಾಯ ಮತ್ತು ಕಷ್ಟಾನುಭವಗಳೊಂದಿಗೆ ತೆಗೆದುಹಾಕುವನು, ಮತ್ತು ಅದನ್ನು ತನ್ನ ನೀತಿಯ ನೂತನ ವ್ಯವಸ್ಥೆಯಿಂದ ಪುನಃ ಸ್ಥಾಪಿಸುವನು. ಇದನ್ನು 2 ಪೇತ್ರ 3:7-10 ರಲ್ಲಿ ಬೈಬಲ್ ವರ್ಣಿಸುತ್ತ, ವಚನ 13ರಲ್ಲಿ ಕೂಡಿಸಿದ್ದು: “ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವುದು.” ಮಾನವ ಕುಟುಂಬಕ್ಕೆ ಕೊಡಲ್ಪಡಸಾಧ್ಯವಿರುವ ಸುವಾರ್ತೆಗಳಲ್ಲಿ ಎಷ್ಟೋ ಅತ್ಯುತ್ತಮವಾದ ಸುವಾರ್ತೆಯನ್ನು ಇದು ಒಳಗೊಳ್ಳುತ್ತದೆ. ಬೈಬಲ್ ನೀಡುವ ಸಂದೇಶವು ಇದೇ ಆಗಿದೆ ಮತ್ತು 200 ಕ್ಕಿಂತಲೂ ಹೆಚ್ಚಿನ ದೇಶ ಮತ್ತು ಸಮುದ್ರ ದ್ವೀಪಗಳಲ್ಲಿ ಯೆಹೋವನ ಸಾಕ್ಷಿಗಳು ಇದನ್ನು ಸಾರುತ್ತಾರೆ.
ಇಡೀ ಭೂಮಿಯಲ್ಲಿ ದೇವರ ಚಿತ್ತವು ಮಾಡಲ್ಪಡುವಾಗ, ಅದರ ನಿರ್ಮಾಣಿಕನಾದ ಯೆಹೋವನ ಅತ್ಯುತ್ತಮ ಮಾರ್ಗದರ್ಶನವನ್ನು ಹಿಂಬಾಲಿಸುವ ಮೂಲಕ, ಸಂಪೂರ್ಣ ಮಾನವ ಕುಟುಂಬವು ಪ್ರಯೋಜನ ಪಡೆಯುವುದು. ಬಡತನ, ದುಷ್ಕೃತ್ಯ, ಮತ್ತು ಅಮಲೌಷಧಗಳಂತಹ ಸಮಸ್ಯೆಗಳು ಇನ್ನಿರುವುದಿಲ್ಲ. ಮಾನವ ಕುಲವು, ಅಸ್ವಸ್ಥತೆ, ವೃದ್ಧಾಪ್ಯ, ಮತ್ತು ಮರಣದಿಂದ ಬಾಧಿಸಲ್ಪಡುವುದಿಲ್ಲ. ನಮ್ಮ ಪ್ರಥಮ ಹೆತ್ತವರು ದೇವರ ಮಾರ್ಗದರ್ಶನದ ವಿರುದ್ಧ ದಂಗೆಯೇಳುವುದಕ್ಕೆ ಮೊದಲು ಇದ್ದಂತೆ ಮಾನವ ಕುಟುಂಬವು ಪರಿಪೂರ್ಣತೆಗೇರಿಸಲ್ಪಡುವುದು.
ದೈವಿಕ ಮಾರ್ಗದರ್ಶನದಲ್ಲಿ ತಮ್ಮ ಭರವಸೆಯನ್ನಿಡುವವರ ಸಂತೋಷಕರ ಪರಿಸ್ಥಿತಿಯನ್ನು ಬೈಬಲಿನ ಕಡೆಯ ಪುಸ್ತಕವು ಎಷ್ಟು ಚೆನ್ನಾಗಿ ಸಂಗ್ರಹಿಸಿ ಹೇಳುತ್ತದೆ! “[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು,” ಎಂದು ಪ್ರಕಟನೆ 21:4, 5 ಹೇಳುತ್ತದೆ. ನಮ್ಮ ಸೃಷ್ಟಿಕರ್ತನು ಹೀಗೆ ಹೇಳುವ ಮೂಲಕ ಭರವಸೆ ಕೊಟ್ಟಿದ್ದಾನೆ: “ಇಗೋ, ಎಲ್ಲವನ್ನು ಹೊಸದುಮಾಡುತ್ತೇನೆ.” ಆತನು ಕೂಡಿಸಿದ್ದು: “ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ.”
ಈ ಆಶೀರ್ವಾದಗಳನ್ನು ನಾವು ಸ್ವೀಕರಿಸಬೇಕಾದರೆ, ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು,” ದೇವರ ಚಿತ್ತವಾಗಿದೆಯೆಂದು ಅಪೊಸ್ತಲ ಪೌಲನು ವಿವರಿಸುತ್ತಾನೆ. (1 ತಿಮೊಥೆಯ 2:4) ಬೈಬಲಿನ ಆದ್ಯಂತವಾದ ಒಂದು ಅಭ್ಯಾಸದ ಮೂಲಕ ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಲು ಯೆಹೋವನ ಸಾಕ್ಷಿಗಳು ನಿಮ್ಮನ್ನು ಹಾರ್ದಿಕವಾಗಿ ಆಮಂತ್ರಿಸುತ್ತಾರೆ. ದೈವಿಕ ಚಿತ್ತದ ಕುರಿತು ಶ್ರದ್ಧೆಯಿಂದ ಕಲಿಯುವುದರ ಮೂಲಕ, ಈ ಅಪಾಯಕರ ಸಮಯಗಳಲ್ಲಿ ದೈವಿಕ ವಿವೇಕವು ಮಾತ್ರ ವಿಶ್ವಾಸಾರ್ಹವಾದ ಮಾರ್ಗದರ್ಶನವಾಗಿದೆಯೆಂಬ ಪೂರ್ಣ ಅನುಭವವನ್ನು ನೀವು ಕಂಡುಕೊಳ್ಳಬಲ್ಲಿರಿ. ಸಮಯದ ತುರ್ತು, ಇದನ್ನು ಅನುಸರಿಸುವುದು ಹಿಂದೆಂದಿಗಿಂತಲೂ ಅತ್ಯವಶ್ಯವಾದುದಾಗಿ ಮಾಡುತ್ತದೆ!