ಪತನಗೊಂಡ ಶರೀರದ ಮೇಲೆ ಪಾಪದ ಹಿಡಿತದೊಂದಿಗೆ ಹೋರಾಡುವುದು
“ಶರೀರಭಾವದವುಗಳ ಮೇಲೆ ಮನಸ್ಸಿಡುವದು ಮರಣ; ಪವಿತ್ರಾತ್ಮನವುಗಳ ಮೇಲೆ ಮನಸ್ಸಿಡುವದು ಜೀವವೂ ಮನಶ್ಶಾಂತಿಯೂ ಆಗಿದೆ.”—ರೋಮಾಪುರ 8:6.
1. ಮಾನವರು ಯಾವ ಉದ್ದೇಶಕ್ಕಾಗಿ ಸೃಷ್ಟಿಸಲ್ಪಟ್ಟರು?
“ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದನು; ದೇವಸ್ವರೂಪದಲ್ಲಿ ಅವನನ್ನು ಉಂಟುಮಾಡಿದನು; ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿದನು.” (ಆದಿಕಾಂಡ 1:27) ಒಂದು ಸ್ವರೂಪವು, ಒಂದು ವಸ್ತುವಿನ ಯಾ ಒಂದು ಮೂಲದ ಪ್ರತಿಬಿಂಬವಾಗಿದೆ. ಹೀಗೆ, ಮಾನವರು ದೇವರ ಮಹಿಮೆಯ ಪ್ರತಿಬಿಂಬವಾಗಿರಲು ಸೃಷ್ಟಿಸಲ್ಪಟ್ಟರು. ಪ್ರೀತಿ, ಒಳ್ಳೆಯತನ, ನ್ಯಾಯ, ಮತ್ತು ಆತ್ಮಿಕತೆಗಳಂತಹ ದಿವ್ಯ ಗುಣಗಳನ್ನು ಪ್ರದರ್ಶಿಸುವ ಮೂಲಕ, ಅವರು ಸೃಷ್ಟಿಕರ್ತನಿಗೆ ಸ್ತುತಿ ಮತ್ತು ಘನತೆಯನ್ನು ತರುತ್ತಾರೆ, ಅಷ್ಟೇ ಅಲ್ಲದೆ ತಮಗಾಗಿ ಸಂತೋಷವನ್ನು ಮತ್ತು ಸಂತೃಪ್ತಿಯನ್ನು ತಂದುಕೊಳ್ಳುತ್ತಾರೆ.—1 ಕೊರಿಂಥ 11:7; 1 ಪೇತ್ರ 2:12.
2. ಪ್ರಥಮ ಮಾನವ ಜೋಡಿಯು ಗುರುತನ್ನು ಹೇಗೆ ತಪ್ಪಿತು?
2 ಪರಿಪೂರ್ಣತೆಯಲ್ಲಿ ಸೃಷ್ಟಿಸಲ್ಪಟ್ಟ ಪ್ರಥಮ ಮಾನವ ಜೋಡಿಯು, ಈ ಪಾತ್ರಕ್ಕಾಗಿ ಸುಸಜ್ಜಿತವಾಗಿತ್ತು. ಬಹಳವಾಗಿ ಪ್ರಜ್ವಲಿಸುವಂತೆ ಉಜ್ಜಲ್ಪಟ್ಟ ಕನ್ನಡಿಗಳ ಹಾಗೆ, ಅವರು ದೇವರ ಮಹಿಮೆಯನ್ನು ತೇಜಸ್ಸು ಮತ್ತು ನಿಷ್ಠೆಯಿಂದ ಪ್ರತಿಬಿಂಬಿಸುವ ಸಾಮರ್ಥ್ಯವುಳ್ಳವರಾಗಿದ್ದರು. ಹಾಗಿದ್ದರೂ, ತಮ್ಮ ಸೃಷ್ಟಿಕರ್ತನಿಗೂ ದೇವರಿಗೂ ಅವಿಧೇಯರಾಗಲು ಅವರು ಉದ್ದೇಶಪೂರ್ವಕವಾಗಿ ಆರಿಸಿದಾಗ, ಆ ಅತ್ಯುಜಲ್ವ ಭಾಗವು ಕಾಂತಿಹೀನವಾಗುವಂತೆ ಅವರು ಅನುಮತಿಸಿದರು. (ಆದಿಕಾಂಡ 3:6) ಅದಾದನಂತರ, ಅವರು ಇನ್ನು ಮುಂದೆ ದೇವರ ಮಹಿಮೆಯನ್ನು ಪರಿಪೂರ್ಣವಾಗಿ ಪ್ರತಿಬಿಂಬಿಸಲಾಗಲಿಲ್ಲ. ದೇವರ ಸ್ವರೂಪದಲ್ಲಿ ಅವರನ್ನು ಸೃಷ್ಟಿಸಲಾದ ಉದ್ದೇಶವನ್ನು ನಷ್ಟಗೊಳಿಸುತ್ತಾ, ಅವರು ದೇವರ ಮಹಿಮೆಯನ್ನು ಹೊಂದದೆ ಹೋದರು. ಬೇರೆ ಮಾತುಗಳಲ್ಲಿ, ಅವರು ಪಾಪಮಾಡಿದರು.a
3. ಪಾಪದ ನಿಜ ಸ್ವರೂಪವೇನು?
3 ಪಾಪದ ನಿಜವಾದ ಸ್ವರೂಪವನ್ನು ತಿಳಿದುಕೊಳ್ಳಲು ಇದು ನಮಗೆ ಸಹಾಯಮಾಡುತ್ತದೆ. ಅದು ದೇವರ ಹೋಲಿಕೆ ಮತ್ತು ಮಹಿಮೆಯ ಮನುಷ್ಯನ ಪ್ರತಿಬಿಂಬವನ್ನು ಕೆಡಿಸುತ್ತದೆ. ಪಾಪವು ಮನುಷ್ಯನನ್ನು ಅಪವಿತ್ರಗೊಳಿಸುತ್ತದೆ, ಅಂದರೆ, ಆತ್ಮಿಕ ಮತ್ತು ನೈತಿಕ ಅರ್ಥದಲ್ಲಿ ಅಶುದ್ಧರೂ ಕಾಂತಿಹೀನರೂ ಆಗುವಂತೆ ಮಾಡುತ್ತದೆ. ಆದಾಮ ಮತ್ತು ಹವ್ವರ ಸಂತತಿಯವರಾಗಿರುವ ಎಲ್ಲ ಮಾನವಕುಲದವರು, ಆ ಕಾಂತಿಹೀನ ಮತ್ತು ಅಶುದ್ಧ ಸ್ಥಿತಿಯಲ್ಲಿ ಜನಿಸಿ, ಆತನ ಮಕ್ಕಳಂತೆ ದೇವರಿಗಿದ್ದ ನಿರೀಕ್ಷೆಯನ್ನು ನೆರವೇರಿಸಲು ತಪ್ಪಿದ್ದಾರೆ. ಮತ್ತು ಫಲಿತಾಂಶವು? ಬೈಬಲ್ ವಿವರಿಸುವುದು: “ಒಬ್ಬ ಮನುಷ್ಯನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರು ಪಾಪ ಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.”—ರೋಮಾಪುರ 5:12; ಹೋಲಿಸಿ ಯೆಶಾಯ 64:6.
ಪತನಗೊಂಡ ಶರೀರದ ಮೇಲೆ ಪಾಪದ ಹಿಡಿತ
4-6. (ಎ) ಹೆಚ್ಚಿನ ಜನರು ಇಂದು ಪಾಪವನ್ನು ಹೇಗೆ ವೀಕ್ಷಿಸುತ್ತಾರೆ? (ಬಿ) ಪಾಪದ ಆಧುನಿಕ ದೃಷ್ಟಿಕೋನಗಳ ಫಲಿತಾಂಶವೇನಾಗಿದೆ?
4 ಅನೇಕ ಜನರು ಇಂದು ತಮ್ಮ ಕುರಿತು ಅಶುದ್ಧರಂತೆ, ಕಾಂತಿಹೀನರಂತೆ, ಯಾ ಪಾಪಪೂರ್ಣರಂತೆ ನೆನಸುವುದಿಲ್ಲ. ವಾಸ್ತವದಲ್ಲಿ, ಪಾಪವು, ಒಂದು ಶಬ್ದದ ರೂಪದಲ್ಲಿ ಹೆಚ್ಚಿನ ಜನರ ಶಬ್ದಭಂಡಾರದಿಂದ ಮಾಯವಾಗಿದೆ. ಅವರು ಬಹುಶಃ ತಪ್ಪುಗಳ, ಅವಿಚಾರಗಳ, ಮತ್ತು ತಪ್ಪೆಣಿಕೆಗಳ ಕುರಿತು ಮಾತಾಡುವರು. ಆದರೆ ಪಾಪ? ಎಂದಿಗೂ ಇಲ್ಲ! ದೇವರನ್ನು ನಂಬುತ್ತೇವೆಂದು ಹೇಳಿಕೊಳ್ಳುವವರಿಗೂ ಕೂಡ, “ಆತನ ಬೋಧನೆಗಳು ನೈತಿಕ ನಿಯಮಾವಳಿಗಿಂತ ನೈತಿಕ ನಂಬಿಕೆಗಳ ಒಂದು ಪಟ್ಟಿಯನ್ನು ಸೂಚಿಸುತ್ತದೆ, ‘10 ಆಜ್ಞೆಗಳು’ ಆಗಿರುವುದಕ್ಕಿಂತ 10 ಸಲಹೆಗಳಾಗಿವೆ,” ಎಂದು ಸಮಾಜಶಾಸ್ತ್ರದ ಪ್ರೊಫೆಸರ್, ಆ್ಯಲೆನ್ ವುಲ್ಫ್ ಗಮನಿಸುತ್ತಾರೆ.
5 ಈ ರೀತಿಯ ಯೋಚನೆಯ ಪರಿಣಾಮವೇನಾಗಿದೆ? ಪಾಪದ ನೈಜತೆಯ ನಿರಾಕರಣೆ, ಅಥವಾ ಕಡಿಮೆ ಪಕ್ಷ ಅದರ ಕಡೆಗಣಿಸುವಿಕೆ. ಇದು ಸರಿ ಮತ್ತು ತಪ್ಪಿನ ವಿರೂಪಗೊಂಡ ಪ್ರಜ್ಞೆಯಿರುವ, ವರ್ತನೆಯ ತಮ್ಮ ಸ್ವಂತ ಮಟ್ಟಗಳನ್ನು ಸ್ಥಾಪಿಸಲು ಸ್ವತಂತ್ರರೆಂದೆಣಿಸಿಕೊಳ್ಳುವ ಮತ್ತು ತಾವು ಮಾಡಲು ಆಯ್ದುಕೊಂಡ ಯಾವುದೇ ಕಾರ್ಯಕ್ಕೆ ಯಾರಿಗೂ ಹೊಣೆಗಾರರಲ್ಲವೆಂದೆಣಿಸಿಕೊಳ್ಳುವ ಜನರ ಒಂದು ಸಂತತಿಯನ್ನು ಉತ್ಪಾದಿಸಿದೆ. ಅಂತಹ ಜನರಿಗೆ, ಒಂದು ಕ್ರಿಯೆಯ ಕ್ರಮವು ಯೋಗ್ಯವಾಗಿದೆಯೊ ಇಲ್ಲವೊ ಎಂಬುದನ್ನು ತೀರ್ಮಾನಿಸುವುದರಲ್ಲಿ, ಅಪರಾಧ ಪ್ರಜ್ಞೆ ಇಲ್ಲದಿರುವುದೇ ಏಕೈಕ ನಿರ್ಣಾಯಕವಾಗಿದೆ.—ಜ್ಞಾನೋಕ್ತಿ 30:12, 13; ಹೋಲಿಸಿ ಧರ್ಮೋಪದೇಶಕಾಂಡ 32:5, 20.
6 ಉದಾಹರಣೆಗೆ, ಒಂದು ಟೆಲಿವಿಷನ್ ಸಂಭಾಷಣಾ ಕಾರ್ಯಕ್ರಮದಲ್ಲಿ, ಏಳು ಮಾರಕ ಪಾಪಗಳೆಂದು ಕರೆಯಲ್ಪಡುವ ವಿಷಯದ ಮೇಲೆ ತಮ್ಮ ಎಣಿಕೆಗಳನ್ನು ವ್ಯಕ್ತಪಡಿಸುವಂತೆ ಯುವ ಜನರು ಆಮಂತ್ರಿಸಲ್ಪಟ್ಟಿದ್ದರು.b “ಗರ್ವವು ಒಂದು ಪಾಪವಾಗಿಲ್ಲ,” ಎಂದು ಒಬ್ಬ ಭಾಗಿಯು ಘೋಷಿಸಿದನು. “ನಿಮ್ಮ ಕುರಿತು ನಿಮಗೆ ಒಳ್ಳೆಯ ಅಭಿಪ್ರಾಯವಿರಬೇಕು.” ಮೈಗಳ್ಳತನದ ಕುರಿತು, ಇನ್ನೊಬ್ಬಾಕೆ ಹೇಳಿದ್ದು: “ಕೆಲವೊಮ್ಮೆ ಹಾಗಿರುವುದು ಪ್ರಯೋಜನಕಾರಿಯಾಗಿದೆ. . . . ಕೆಲವೊಮ್ಮೆ ವಿಶ್ರಾಂತಿಸಿ ನಿಮಗಾಗಿ ವೈಯಕ್ತಿಕ ಸಮಯವನ್ನು ಕೊಟ್ಟುಕೊಳ್ಳುವುದು ಒಳ್ಳೆಯದಾಗಿದೆ.” ಕಥನಗಾರನು ಕೂಡ ಈ ಸಂಕ್ಷೇಪವಾದ ಹೇಳಿಕೆಯನ್ನು ಒದಗಿಸಿದನು: ‘ಈ ಏಳು ಮಾರಕವಾದ ಪಾಪಗಳು ದುಷ್ಕ್ರಿಯೆಗಳಾಗಿಲ್ಲ, ಬದಲಿಗೆ, ಪೀಡಿಸಬಲ್ಲ ಮತ್ತು ಬಹಳ ಆನಂದದಾಯಕವಾಗಿರಬಲ್ಲ ಸಾರ್ವತ್ರಿಕ ಮಾನವ ಪ್ರವೃತ್ತಿಗಳಾಗಿವೆ.’ ಹೌದು, ಪಾಪದೊಂದಿಗೆ ಅಪರಾಧ ಪ್ರಜ್ಞೆಯೂ ಮಾಯವಾಗಿದೆ, ಯಾಕೆಂದರೆ, ಅಪರಾಧ ಪ್ರಜ್ಞೆ ಹಿತವಾಗಿ ಭಾಸವಾಗುವುದರ ವ್ಯತಿರಿಕ್ತ ಸಂಗತಿಯಾಗಿದೆ.—ಎಫೆಸ 4:17-19.
7. ಬೈಬಲಿಗನುಸಾರ, ಮಾನವರು ಪಾಪದಿಂದ ಹೇಗೆ ಪ್ರಭಾವಿತರಾಗುತ್ತಾರೆ?
7 ಇದಕ್ಕೆಲ್ಲ ತೀರ ವಿರುದ್ಧವಾಗಿ, ಬೈಬಲ್ ಸ್ಪಷ್ಟವಾಗಿಗಿ ಹೇಳುವುದು: “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ.” (ರೋಮಾಪುರ 3:23) ಅಪೊಸ್ತಲ ಪೌಲನು ಕೂಡ ಒಪ್ಪಿಕೊಂಡಿದ್ದು: “ನನ್ನಲ್ಲಿ ಅಂದರೆ ನನ್ನ ಶರೀರಾಧೀನಸ್ವಭಾವದಲ್ಲಿ ಒಳ್ಳೇದೇನೂ ವಾಸವಾಗಿಲ್ಲವೆಂದು ನನಗೆ ತಿಳಿದದೆ. ಒಳ್ಳೇದನ್ನು ಮಾಡುವದಕ್ಕೆ ನನಗೇನೋ ಮನಸ್ಸುಂಟು; ಆದರೆ ಅದನ್ನು ಮಾಡುವದು ನನ್ನಿಂದಾಗದು. ನಾನು ಮೆಚ್ಚುವ ಒಳ್ಳೇ ಕಾರ್ಯವನ್ನು ಮಾಡದೆ ಮೆಚ್ಚದಿರುವ ಕೆಟ್ಟ ಕಾರ್ಯವನ್ನೇ ಮಾಡುವವನಾಗಿದ್ದೇನೆ.” (ರೋಮಾಪುರ 7:18, 19) ಪೌಲನು ಇಲ್ಲಿ ಸ್ವಾನುಕಂಪದಲ್ಲಿ ತೊಡಗಿರಲಿಲ್ಲ. ಬದಲಿಗೆ, ಮಾನವಕುಲವು ಎಷ್ಟರ ಮಟ್ಟಿಗೆ ದೇವರ ಮಹಿಮೆಯನ್ನು ಹೊಂದದೆ ಹೋಗಿದೆ ಎಂಬುದನ್ನು ಅವನು ಪೂರ್ಣವಾಗಿ ಗ್ರಹಿಸಿದ ಕಾರಣ, ಪತನಗೊಂಡ ಶರೀರದ ಮೇಲೆ ಪಾಪದ ಹಿಡಿತದ ಕುರಿತು ಅವನು ಸೂಕ್ಷ್ಮವಾಗಿ ಬಲ್ಲವನಾಗಿದ್ದನು. “ಅಯ್ಯೋ, ನಾನು ಎಂಥ ದುರವಸ್ಥೆಯಲ್ಲಿ ಬಿದ್ದ ಮನುಷ್ಯನು!” ಎಂದು ಅವನು ಘೋಷಿಸಿದನು, “ಇಂಥ ಮರಣಕ್ಕೆ ಒಳಗಾದ ಈ ದೇಹದಿಂದ ನನ್ನನ್ನು ಬಿಡಿಸುವವನು ಯಾರು?”—ರೋಮಾಪುರ 7:24.
8. ಯಾವ ಪ್ರಶ್ನೆಗಳನ್ನು ನಾವು ಸ್ವತಃ ಕೇಳಿಕೊಳ್ಳಬೇಕು? ಯಾಕೆ?
8 ಈ ವಿಷಯದ ಕುರಿತು ನಿಮ್ಮ ದೃಷ್ಟಿಕೋನವೇನು? ಆದಾಮನ ಸಂತತಿಯವನೋಪಾದಿ, ನೀವು ಎಲ್ಲರಂತೆ, ಅಪರಿಪೂರ್ಣರಾಗಿದ್ದೀರೆಂದು ಒಪ್ಪಬಹುದು. ಆದರೆ ಆ ಜ್ಞಾನವು ನಿಮ್ಮ ಯೋಚನೆಯನ್ನು ಮತ್ತು ನಿಮ್ಮ ಜೀವನದ ರೀತಿಯನ್ನು ಹೇಗೆ ಪ್ರಭಾವಿಸುತ್ತದೆ? ಅದನ್ನು ಜೀವಿತದ ಒಂದು ನಿಜತ್ವವೆಂದು ಸ್ವೀಕರಿಸಿ, ನೀವು ಸ್ವಾಭಾವಿಕವಾಗಿ ಬರುವುದನ್ನು ಮಾಡುತ್ತಾ ಮುಂದುವರಿಯುತ್ತೀರೊ? ಅಥವಾ ನೀವು ಮಾಡುವ ಎಲ್ಲ ಕಾರ್ಯಗಳಲ್ಲಿ ದೇವರ ಮಹಿಮೆಯನ್ನು ಸಾಧ್ಯವಾದಷ್ಟು ಉಜ್ವಲವಾಗಿ ಪ್ರತಿಬಿಂಬಿಸಲು ಶ್ರಮಿಸುತ್ತಾ, ಪತನಗೊಂಡ ಶರೀರದ ಮೇಲೆ ಪಾಪದ ಹಿಡಿತದೊಂದಿಗೆ ಹೋರಾಡಲು ಸಂತತವಾದ ಪ್ರಯತ್ನವನ್ನು ನೀವು ಮಾಡುತ್ತೀರೊ? ಪೌಲನು ಹೇಳಿದ ವಿಷಯದ ನೋಟದಲ್ಲಿ ಇದು ನಮ್ಮೆಲ್ಲರಿಗೂ ಗಂಭೀರವಾದ ಚಿಂತೆಯ ಸಂಗತಿಯಾಗಿರಬೇಕು: “ಶರೀರಭಾವವನ್ನು ಅನುಸರಿಸುವವರು ಅದಕ್ಕೆ ಸಂಬಂಧಪಟ್ಟವುಗಳ ಮೇಲೆ ಮನಸ್ಸಿಡುತ್ತಾರೆ. ಶರೀರಭಾವದವುಗಳ ಮೇಲೆ ಮನಸ್ಸಿಡುವದು ಮರಣ; ಪವಿತ್ರಾತ್ಮನವುಗಳ ಮೇಲೆ ಮನಸ್ಸಿಡುವದು ಜೀವವೂ ಮನಶ್ಶಾಂತಿಯೂ ಆಗಿದೆ.”—ರೋಮಾಪುರ 8:5, 6.
ಶರೀರಭಾವದವುಗಳ ಮೇಲೆ ಮನಸ್ಸಿಡುವುದು
9. “ಶರೀರಭಾವದವುಗಳ ಮೇಲೆ ಮನಸ್ಸಿಡುವದು ಮರಣ” ವಾಗಿದೆ ಯಾಕೆ?
9 “ಶರೀರಭಾವದವುಗಳ ಮೇಲೆ ಮನಸ್ಸಿಡುವದು ಮರಣ” ವೆಂದು ಪೌಲನು ಹೇಳಿದಾಗ ಅವನು ಏನನ್ನು ಅರ್ಥೈಸಿದನು? ದಂಗೆಕೋರ ಆದಾಮನ ಸಂತತಿಯವನಂತೆ ‘ಪಾಪದಲ್ಲಿ ಜನಿಸಿದ’ ಅವನ ಅಪರಿಪೂರ್ಣ ಸ್ಥಿತಿಯಲ್ಲಿರುವ ಮನುಷ್ಯನನ್ನು ಸೂಚಿಸಲು, “ಶರೀರ” ಎಂಬ ಪದವು ಅನೇಕ ಬಾರಿ ಬೈಬಲಿನಲ್ಲಿ ಉಪಯೋಗಿಸಲ್ಪಟ್ಟಿದೆ. (ಕೀರ್ತನೆ 51:5; ಯೋಬ 14:4) ಹೀಗೆ, ತಮ್ಮ ಮನಸ್ಸುಗಳನ್ನು ಪಾಪಪೂರ್ಣ ಒಲವುಗಳ ಮೇಲೆ, ಪ್ರವೃತ್ತಿಗಳ ಮೇಲೆ, ಮತ್ತು ಅಪರಿಪೂರ್ಣ, ಪತನಗೊಂಡ ಶರೀರದ ಅಭಿಲಾಷೆಗಳ ಮೇಲೆ ಇಡದಂತೆ ಪೌಲನು ಕ್ರೈಸ್ತರನ್ನು ಎಚ್ಚರಿಸುತ್ತಿದ್ದನು. ಯಾಕೆ ಇಡಬಾರದು? ಶರೀರದ ಕರ್ಮಗಳು ಯಾವುವೆಂದು ಪೌಲನು ನಮಗೆ ಬೇರೆ ಕಡೆಯಲ್ಲಿ ತಿಳಿಸಿ, ತದನಂತರ ಈ ಎಚ್ಚರಿಕೆಯನ್ನು ಕೂಡಿಸಿದನು: “ಇಂಥ ಕಾರ್ಯಗಳನ್ನು ನಡಿಸುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ.”—ಗಲಾತ್ಯ 5:19-21.
10. “ಮನಸ್ಸಿಡುವದು” ಅಂದರೇನು?
10 ಆದರೆ ಯಾವುದೊ ವಿಷಯದ ಮೇಲೆ ಮನಸ್ಸಿಡುವುದು ಮತ್ತು ಅದನ್ನು ಆಚರಿಸುವುದರ ನಡುವೆ ಒಂದು ದೊಡ್ಡ ವ್ಯತ್ಯಾಸವಿರುವುದಿಲ್ಲವೊ? ಯಾವುದೊ ವಿಷಯದ ಕುರಿತು ಯೋಚಿಸುವುದು ಅದನ್ನು ಮಾಡುವಂತೆ ಯಾವಾಗಲೂ ನಡೆಸುವುದಿಲವ್ಲೆಂಬುದು ನಿಜ. ಹಾಗಿದ್ದರೂ, ಮನಸ್ಸಿಡುವುದು ಸಂಕ್ಷಿಪ್ತವಾದ ಯೋಚನೆಯನ್ನು ಮಾಡುವುದಕ್ಕಿಂತ ಹೆಚ್ಚಿನದ್ದಾಗಿದೆ. ಗ್ರೀಕ್ನಲ್ಲಿ ಪೌಲನು ಉಪಯೋಗಿಸಿದ ಶಬ್ದವು ಫ್ರೋನಿಮಾ ಎಂದಾಗಿದೆ, ಮತ್ತು ಅದು “ಯೋಚನಾ ರೀತಿ, ಮನಸ್ಸು(ಮಾಡು), . . . ಗುರಿ, ಉತ್ಕಾಂಕ್ಷೆ, ಶ್ರಮಿಸು” ಇವುಗಳನ್ನು ಸೂಚಿಸುತ್ತದೆ. ಆದುದರಿಂದ, “ಶರೀರಭಾವದವುಗಳ ಮೇಲೆ ಮನಸ್ಸಿಡುವದು” ಅಂದರೆ ಪತನಗೊಂಡ ಶರೀರದ ಅಭಿಲಾಷೆಗಳ ಮೂಲಕ ನಿಯಂತ್ರಿಸಲ್ಪಡುವುದು, ಅಧೀನದಲ್ಲಿರುವುದು, ಆಳಲ್ಪಡುವುದು, ಮತ್ತು ನಡೆಸಲ್ಪಡುವುದು ಆಗಿದೆ.—1 ಯೋಹಾನ 2:16.
11. ಶರೀರಭಾವದ ಮೇಲೆ ಕಾಯಿನನು ಹೇಗೆ ಮನಸ್ಸಿಡುತ್ತಿದ್ದನು, ಮತ್ತು ಪರಿಣಾಮವು ಏನಾಗಿತ್ತು?
11 ಕಾಯಿನನು ಅನುಸರಿಸಿದ ಮಾರ್ಗದಿಂದ ಈ ವಿಷಯವನ್ನು ಚೆನ್ನಾಗಿ ದೃಷ್ಟಾಂತಿಸಲಾಗಿದೆ. ಹೊಟ್ಟೆಕಿಚ್ಚು ಮತ್ತು ಕೋಪವು ಕಾಯಿನನ ಹೃದಯದಲ್ಲಿ ಹೆಚ್ಚಾದಾಗ, ಯೆಹೋವ ದೇವರು ಅವನನ್ನು ಎಚ್ಚರಿಸಿದ್ದು: “ಯಾಕೆ ಕೋಪಿಸಿಕೊಂಡಿ? ನಿನ್ನ ತಲೆ ಯಾಕೆ ಬೊಗ್ಗಿತು? ಒಳ್ಳೇ ಕೆಲಸ ಮಾಡಿದರೆ ನಿನ್ನ ತಲೆ ಎತ್ತಲ್ಪಡುವದಲ್ಲವೇ; ಅಲ್ಲದಿದ್ದರೆ ಪಾಪವು ನಿನ್ನನ್ನು ಹಿಡಿಯಬೇಕೆಂದು ಬಾಗಲಲ್ಲಿ ಹೊಂಚಿಕೊಂಡಿರುವದು; ಆದರೂ ನೀನು ಅದನ್ನು ವಶಮಾಡಿಕೊಳ್ಳಬೇಕು ಎಂದು ಹೇಳಿದನು.” (ಆದಿಕಾಂಡ 4:6, 7) ಕಾಯಿನನ ಮುಂದೆ ಒಂದು ಆಯ್ಕೆಯಿತ್ತು. ಅವನು “ಒಳ್ಳೇ ಕೆಲಸವನ್ನು,” ಮಾಡುವನೊ, ಅಂದರೆ, ತನ್ನ ಮನಸ್ಸು, ಗುರಿ, ಮತ್ತು ಹೆಬ್ಬಯಕೆಯನ್ನು ಒಳ್ಳೆಯ ವಿಷಯದ ಮೇಲೆ ನೆಡುವನೊ? ಅಥವಾ ಅವನು ಶರೀರಭಾವದವುಗಳ ಮೇಲೆ ಮನಸ್ಸಿಡುತ್ತಾ ತನ್ನ ಹೃದಯಲ್ಲಿ ಗುಪ್ತವಾಗಿರುವ ಕೆಟ್ಟ ಪ್ರವೃತ್ತಿಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸುತ್ತಾ ಇರುವನೊ? ಯೆಹೋವನು ವಿವರಿಸಿದಂತೆ, ಕಾಯಿನನು ಪಾಪವನ್ನು ಅನುಮತಿಸುವುದಾದರೆ ಅವನ ಮೇಲೆ ಬೀಳಲು ಮತ್ತು ನುಂಗಿಬಿಡಲು ಅದು ಕಾಯುತ್ತಾ, “ಬಾಗಲಲ್ಲಿ ಹೊಂಚಿಕೊಂಡಿತ್ತು.” ಹೋರಾಡಿ ತನ್ನ ಶಾರೀರಿಕ ಅಭಿಲಾಷೆಯ ಮೇಲೆ ‘ಪ್ರಭುತ್ವವನ್ನು ಪಡೆಯುವ’ ಬದಲು, ಅದು ತನ್ನನ್ನು ವಿಪತ್ಕಾರಕ ಅಂತ್ಯದ ತನಕ ಆಳುವಂತೆ ಕಾಯಿನನು ಅನುಮತಿಸಿದನು.
12. “ಕಾಯಿನನ ಮಾರ್ಗದಲ್ಲಿ” ಹೋಗದೆ ಇರಲು ನಾವು ಏನನ್ನು ಮಾಡಬೇಕು?
12 ಇಂದು ನಮ್ಮ ಕುರಿತೇನು? ಪ್ರಥಮ ಶತಮಾನದ ಕ್ರೈಸ್ತರೊಳಗೆ ಕೆಲವರ ಕುರಿತು ಯೂದನು ಪ್ರಲಾಪಿಸಿದಂತೆ, “ಕಾಯಿನನ ಮಾರ್ಗದಲ್ಲಿ” ಹೋಗಲು ನಾವು ಖಂಡಿತವಾಗಿ ಬಯಸುವುದಿಲ್ಲ. (ಯೂದ 11) ಒಂದಿಷ್ಟು ಲೋಲುಪತೆಯು ಅಥವಾ ಇಲ್ಲೂ ಅಲ್ಲೂ ತೆಗೆದುಕೊಳ್ಳಲಾದ ಸ್ವಾತಂತ್ರ್ಯವು ಹಾನಿಕಾರಕವಲ್ಲವೆಂದು ನಾವು ಎಂದಿಗೂ ಸಮನ್ವಯಿಸಿ ಯೋಚಿಸಬಾರದು. ಅದಕ್ಕೆ ವಿರುದ್ಧವಾಗಿ, ನಮ್ಮ ಹೃದಯ ಮತ್ತು ಮನಸ್ಸಿನೊಳಗೆ ಬಂದಿರಬಹುದಾದ ಯಾವುದೇ ದೈವಿಕವಲ್ಲದ ಹಾಗೂ ಭ್ರಷ್ಟಗೊಳಿಸುವ ಪ್ರಭಾವವನ್ನು ಗುರುತಿಸಲು ಮತ್ತು ಅದು ಬೇರೂರುವ ಮುಂಚೆ ಅದನ್ನು ಕ್ಷಿಪ್ರವಾಗಿ ತೆಗೆದುಹಾಕಲು ನಾವು ಎಚ್ಚರವುಳ್ಳವರಾಗಿರಬೇಕು. ಪತನಗೊಂಡ ಶರೀರದ ಮೇಲೆ ಪಾಪದ ಹಿಡಿತದೊಂದಿಗೆ ಹೋರಾಡುವುದು ಒಳಗಡೆಯಿಂದ ಆರಂಭವಾಗುತ್ತದೆ.—ಮಾರ್ಕ 7:21.
13. ಒಬ್ಬ ವ್ಯಕ್ತಿಯು ಹೇಗೆ “ತನ್ನಲ್ಲಿರುವ ಆಶಾಪಾಶದಿಂದ ಎಳೆಯಲ್ಪಡ” ಬಲ್ಲನು?
13 ಉದಾಹರಣೆಗೆ, ತಲ್ಲಣಗೊಳಿಸುವ ಯಾ ಭಯಂಕರವಾಗಿರುವ ಒಂದು ದೃಶ್ಯದ ನೋಟವನ್ನು ಅಥವಾ ಪ್ರತ್ಯೇಕವಾಗಿ ಸೂಚಕವಾಗಿರುವ ಯಾ ಉದ್ರೇಕಕಾರಿಯಾದ ಬಿಂಬವನ್ನು ನೀವು ನೋಡಬಹುದು. ಅದು ಒಂದು ಪುಸ್ತಕ ಯಾ ಪತ್ರಿಕೆಯಲ್ಲಿರುವ ಒಂದು ಚಿತ್ರ, ಚಲನಚಿತ್ರ ಯಾ ಟೆಲಿವಿಷನ್ ಪರದೆಯ ಮೇಲಿನ ಒಂದು ದೃಶ್ಯ, ಒಂದು ಪ್ರಕಟನ ಪಟದ ಮೇಲಿರುವ ಒಂದು ಜಾಹೀರಾತು, ಯಾ ವಾಸ್ತವವಾದ ಸನ್ನಿವೇಶದಲ್ಲಿಯೂ ಕೂಡ ಅದಾಗಿರಬಹುದು. ಅದು ತಾನೇ ಭಯಹುಟ್ಟಿಸುವ ವಿಷಯವಾಗಿರುವ ಅಗತ್ಯವಿಲ್ಲ, ಯಾಕೆಂದರೆ ಅದು ಸಂಭವಿಸಬಲ್ಲದು ಮತ್ತು ಸಂಭವಿಸುತ್ತದೆ. ಹಾಗಿದ್ದರೂ, ಈ ಬಿಂಬ ಯಾ ದೃಶ್ಯವು ಕೆಲವೊಂದು ಸೆಕೆಂಡುಗಳ ಕಾಲ ಉಳಿದಿದಿರ್ದಬಹುದಾದರೂ, ಮನಸ್ಸಿನಲ್ಲಿ ಬಳಸಾಡಿ ಸಮಯದಿಂದ ಸಮಯಕ್ಕೆ ಮತ್ತೆ ತಲೆಯೆತ್ತಬಹುದು. ಅದು ಸಂಭವಿಸಿದಾಗ ನೀವು ಏನು ಮಾಡುತ್ತೀರಿ? ಆ ಯೋಚನೆಯೊಂದಿಗೆ ಹೋರಾಡಿ ನಿಮ್ಮ ಮನಸ್ಸಿನಿಂದ ಅದನ್ನು ತೆಗೆದುಹಾಕಲು ನೀವು ಕೂಡಲೇ ಕಾರ್ಯಗೈಯುತ್ತೀರೊ? ಆ ಯೋಚನೆ ಬರುವಾಗ, ಪ್ರತಿಸಲ ಅನುಭವವನ್ನು ಬಹುಶಃ ಕಲ್ಪಿಸಿಕೊಳ್ಳುತ್ತಾ ನಿಮ್ಮ ಮನಸ್ಸಿನಲ್ಲಿ ನೆಲೆಯೂರುವಂತೆ ನೀವು ಅದನ್ನು ಅನುಮತಿಸುತ್ತೀರೊ? ಎರಡನೆಯ ಕಾರ್ಯವನ್ನು ಮಾಡುವುದು, ಯಾಕೋಬನ ಮೂಲಕ ವರ್ಣಿಸಲಾದ ಘಟನೆಗಳ ಸರಪಣಿಯನ್ನು ಆರಂಭಿಸುವುದರ ಗಂಡಾಂತರದ ಅರ್ಥದಲ್ಲಿದೆ: “ಆದರೆ ಪ್ರತಿಯೊಬ್ಬನೂ ತನ್ನಲ್ಲಿರುವ ಆಶಾಪಾಶದಿಂದ ಎಳೆಯಲ್ಪಟ್ಟು ಮರುಳುಗೊಂಡವನಾಗಿ ಪ್ರೇರೇಪಿಸಲ್ಪಡುತ್ತಾನೆ. ಆ ಮೇಲೆ ಆಶೆಯು ಬಸುರಾಗಿ ಪಾಪವನ್ನು ಹೆರುತ್ತದೆ; ಪಾಪವು ತುಂಬಾ ಬೆಳೆದು ಮರಣವನ್ನು ಹಡೆಯುತ್ತದೆ.” ಆದುದರಿಂದಲೇ ಪೌಲನು ಹೇಳಿದ್ದು: “ಶರೀರಭಾವದವುಗಳ ಮೇಲೆ ಮನಸ್ಸಿಡುವದು ಮರಣ.”—ಯಾಕೋಬ 1:14, 15; ರೋಮಾಪುರ 8:6.
14. ಪ್ರತಿನಿತ್ಯವೂ ಯಾವ ವಿಷಯವನ್ನು ನಾವು ಎದುರುಗೊಳ್ಳುತ್ತೇವೆ, ಮತ್ತು ನಾವು ಹೇಗೆ ಪ್ರತಿಕ್ರಿಯಿಸಬೇಕು?
14 ಲೈಂಗಿಕ ಅನೈತಿಕತೆ, ಹಿಂಸೆ, ಮತ್ತು ಪ್ರಾಪಂಚಿಕತೆಯು ಮಹಿಮೆಗೇರಿಸಲ್ಪಡುವ ಪುಸ್ತಕಗಳಲ್ಲಿ, ಪತ್ರಿಕೆಗಳಲ್ಲಿ, ಚಲನಚಿತ್ರಗಳಲ್ಲಿ, ಟೆಲಿವಿಷನ್ ಕಾರ್ಯಕ್ರಮಗಳಲ್ಲಿ, ಮತ್ತು ಜನಪ್ರಿಯ ಸಂಗೀತದಲ್ಲಿ ಮುಕ್ತವಾಗಿ ಹಾಗೂ ಧಾರಾಳವಾಗಿ ಪ್ರದರ್ಶಿಸಲ್ಪಡುತ್ತಿರುವ ಒಂದು ಲೋಕದಲ್ಲಿ ಜೀವಿಸುತ್ತಿರುವ ನಾವು ಪ್ರತಿದಿನ ತಪ್ಪಾದ ಯೋಚನೆಗಳಿಂದ ಮತ್ತು ವಿಚಾರಗಳಿಂದ ಅಕ್ಷರಾರ್ಥಕವಾಗಿ ಹೊಡೆಯಲ್ಪಡುತ್ತಿದ್ದೇವೆ. ನಿಮ್ಮ ಪ್ರತಿಕ್ರಿಯೆಯು ಏನಾಗಿದೆ? ಇವೆಲ್ಲವುಗಳ ಮೂಲಕ ನೀವು ಮನೋರಂಜನೆ ಪಡೆದು, ವಿನೋದಮಗ್ನರಾಗುತ್ತೀರೊ? ಅಥವಾ “ಅವರ ಅನ್ಯಾಯಕೃತ್ಯಗಳನ್ನು ನೋಡುತ್ತಾ ಕೇಳುತ್ತಾ ಅವುಗಳ ನಿಮಿತ್ತ ದಿನೇ ದಿನೇ ತನ್ನ ನೀತಿಯುಳ್ಳ ಆತ್ಮದಲ್ಲಿ ಬಹಳವಾಗಿ ಕರಕರೆಗೊಂಡ,” ನೀತಿವಂತನಾದ ಲೋಟನಂತೆ ನಿಮಗನಿಸುತ್ತದೊ? (2 ಪೇತ್ರ 2:8) ಪತನಗೊಂಡ ಶರೀರದ ಮೇಲೆ ಪಾಪದ ಹಿಡಿತದೊಂದಿಗೆ ಹೋರಾಡುವುದರಲ್ಲಿ ಸಫಲರಾಗಲು, ಕೀರ್ತನೆಗಾರನು ಮಾಡಿದಂತೆ ಮಾಡಲು ನಾವು ದೃಢನಿಶ್ಚಯವುಳ್ಳವರಾಗಿರಬೇಕು: “ಯಾವ ನೀಚವಾದ ಕಾರ್ಯವನ್ನೂ ದೃಷ್ಟಿಸುವದಿಲ್ಲ; ದುರಾಚಾರವನ್ನು ಹಗೆಮಾಡುತ್ತೇನೆ, ಅದರ ಗೊಡವೆಯೇ ನನಗೆ ಬೇಡ.”—ಕೀರ್ತನೆ 101:3.
ಪವಿತ್ರಾತ್ಮನವುಗಳ ಮೇಲೆ ಮನಸ್ಸಿಡುವುದು
15. ನಮ್ಮ ಮೇಲಿರುವ ಪಾಪದ ಹಿಡಿತದೊಂದಿಗೆ ಹೋರಾಡಲು ಯಾವ ಸಹಾಯ ನಮ್ಮಲ್ಲಿದೆ?
15 ಪತನಗೊಂಡ ಶರೀರದ ಮೇಲೆ ಪಾಪದ ಹಿಡಿತದೊಂದಿಗೆ ಹೋರಾಡಲು ನಮಗೆ ಸಹಾಯಮಾಡಬಲ್ಲ ವಿಷಯದ ಕುರಿತು ಹೇಳುತ್ತಾ ಪೌಲನು ಮುಂದುವರಿದದ್ದು: “ಪವಿತ್ರಾತ್ಮನವುಗಳ ಮೇಲೆ ಮನಸ್ಸಿಡುವದು ಜೀವವೂ ಮನಶ್ಶಾಂತಿಯೂ ಆಗಿದೆ.” (ರೋಮಾಪುರ 8:6) ಹೀಗೆ, ಶರೀರದ ಮೂಲಕ ಆಳಲ್ಪಡುವ ಬದಲಿಗೆ, ನಮ್ಮ ಮನಸ್ಸು ಆತ್ಮದ ಪ್ರಭಾವದ ಕೆಳಗೆ ಬರುವಂತೆ ನಾವು ಬಿಡಬೇಕು ಮತ್ತು ಆತ್ಮದ ವಿಷಯಗಳಲ್ಲಿ ಅಭಿವೃದ್ಧಿಹೊಂದಬೇಕು. ಅವು ಯಾವುವು? ಫಿಲಿಪ್ಪಿ 4:8, NW ರಲ್ಲಿ, ಪೌಲನು ಅವುಗಳ ಒಂದು ಪಟ್ಟಿಯನ್ನು ಮಾಡುತ್ತಾನೆ: “ಕೊನೆಯದಾಗಿ, ಸಹೋದರರೇ, ಯಾವಾವ ವಿಷಯಗಳು ಸತ್ಯವೂ, ಯಾವಾವ ವಿಷಯಗಳು ಗಂಭೀರ ಚಿಂತೆಯವುಗಳೋ, ಯಾವಾವ ವಿಷಯಗಳು ನೀತಿಬದ್ಧವೋ, ಯಾವಾವ ವಿಷಯಗಳು ಪರಿಶುದ್ಧವೋ, ಯಾವಾವ ವಿಷಯಗಳು ಪ್ರೀತಿಯೋಗ್ಯವೂ, ಯಾವಾವ ವಿಷಯಗಳು ಹಿತೋಕ್ತಿಪಾತ್ರವೋ; ಇರುವ ಯಾವುದೇ ಸದ್ಗುಣವನ್ನು ಮತ್ತು ಇರುವ ಯಾವುದೇ ಪ್ರಶಂಸಾರ್ಹವಾದ ವಿಷಯವನ್ನು—ಈ ವಿಷಯಗಳನ್ನು ಪರಿಗಣಿಸುತ್ತಾ ಹೋಗಿರಿ.” ನಾವು ಹತ್ತಿರದ ನೋಟವನ್ನು ತೆಗೆದುಕೊಳ್ಳೋಣ ಮತ್ತು ನಾವು ಲಕ್ಷ್ಯಕ್ಕೆ ತಂದುಕೊಳ್ಳಬೇಕಾದ ವಿಷಯಗಳ ಉತ್ತಮ ತಿಳಿವಳಿಕೆಯನ್ನು ಪಡೆಯೋಣ.
16. ಯಾವ ಗುಣಗಳನ್ನು “ಪರಿಗಣಿಸುತ್ತಾ” ಹೋಗುವಂತೆ ಪೌಲನು ನಮ್ಮನ್ನು ಉತ್ತೇಜಿಸಿದನು, ಮತ್ತು ಪ್ರತಿಯೊಂದು ಏನನ್ನು ಒಳಗೊಳ್ಳುತ್ತದೆ?
16 ಪ್ರಥಮವಾಗಿ, ಪೌಲನು ಎಂಟು ನೈತಿಕ ಗುಣಗಳನ್ನು ಪಟ್ಟಿಮಾಡಿದನು. ಕ್ರೈಸ್ತರು ಎಲ್ಲ ಸಮಯಗಳಲ್ಲಿ ಶಾಸ್ತ್ರೀಯ ಯಾ ತಾತ್ವಿಕ ವಿಷಯಗಳನ್ನು ಮಾತ್ರ ಯೋಚಿಸುವುದಕ್ಕೆ ನಿರ್ಬಂಧಿಸಲ್ಪಟ್ಟಿಲ್ಲವೆಂದು ನಾವು ನಿಶ್ಚಯವಾಗಿಯೂ ಗ್ರಹಿಸುತ್ತೇವೆ. ನಮ್ಮ ಮನಸ್ಸುಗಳನ್ನು ನಾವು ಇಡಬಹುದಾದ ವಿಷಯಗಳ ಯಾ ವಿಚಾರಗಳ ದೊಡ್ಡ ವ್ಯಾಪ್ತಿಯಿದೆ. ಆದರೆ ಪ್ರಾಮುಖ್ಯವಾದ ವಿಷಯವೇನೆಂದರೆ, ಪೌಲನ ಮೂಲಕ ನಮೂದಿಸಲ್ಪಟ್ಟ ನೈತಿಕ ಗುಣಗಳ ಮಟ್ಟಕ್ಕೆ ಅವು ತಕ್ಕದಾಗಿರಬೇಕು. ಪೌಲನ ಮೂಲಕ ಉದ್ಧರಿಸಲ್ಪಟ್ಟ “ವಿಷಯಗಳ” ಪ್ರತಿಯೊಂದು ವಿಭಾಗಗಳು ನಮ್ಮ ಗಮನಕ್ಕೆ ಅರ್ಹವಾಗಿವೆ. ನಾವು ಅವುಗಳನ್ನು ಪರಿಗಣಿಸೋಣ.
▫ “ಸತ್ಯ”ವು ಕೇವಲ ಸತ್ಯ ಯಾ ಸುಳ್ಳು ಆಗಿರುವುದಕ್ಕಿಂತ ಹೆಚ್ಚಿನದನ್ನು ಒಳಗೊಂಡಿದೆ. ಅದು ನಿಜವಾಗಿರುವುದನ್ನು, ಪ್ರಾಮಾಣಿಕವಾಗಿರುವುದನ್ನು, ಮತ್ತು ವಿಶ್ವಾಸಾರ್ಹವಾಗಿರುವುದನ್ನು, ಕೇವಲ ವಾಸ್ತವವಾಗಿರುವ ತೋರಿಕೆಯನ್ನು ಕೊಡದ, ವಾಸ್ತವವಾಗಿರುವ ವಿಷಯವನ್ನು ಅರ್ಥೈಸುತ್ತದೆ.—1 ತಿಮೊಥೆಯ 6:20.
▫ “ಗಂಭೀರ ಚಿಂತೆ” ಎಂಬುದು ಗಂಭೀರವಾದ ಮತ್ತು ಗೌರವವುಳ್ಳ ವಿಷಯಗಳನ್ನು ಸೂಚಿಸುತ್ತದೆ. ಅದು ಪೂಜ್ಯಭಾವವನ್ನು ಹುಟ್ಟಿಸುತ್ತದೆ, ಅಸಭ್ಯ ಹಾಗೂ ಕೀಳಾಗಿರುವ ಬದಲು ಉನ್ನತ, ಅತ್ಯುತ್ತಮ, ಮತ್ತು ಗೌರವಾರ್ಹ ವಿಷಯವಾಗಿದೆ.
▫ “ನೀತಿಬದ್ಧ” ಅಂದರೆ ಮನುಷ್ಯನದ್ದಲ್ಲ, ದೇವರ ಮಟ್ಟವನ್ನು ಪೂರೈಸುವುದು. ಲೌಕಿಕ ಮನುಷ್ಯರು ತಮ್ಮ ಮನಸ್ಸುಗಳನ್ನು ಅನ್ಯಾಯದ ಯೋಜನೆಗಳಿಂದ ತುಂಬುತ್ತಾರೆ, ಆದರೆ ನಾವು ದೇವರ ದೃಷ್ಟಿಯಲ್ಲಿ ನ್ಯಾಯವಾಗಿರುವ ವಿಷಯಗಳ ಕುರಿತು ಯೋಚಿಸಬೇಕು ಮತ್ತು ಅವುಗಳಲ್ಲಿ ಹರ್ಷಿಸಬೇಕು.—ಹೋಲಿಸಿ ಕೀರ್ತನೆ 26:4; ಆಮೋಸ 8:4-6.
▫ “ಪರಿಶುದ್ಧ” ಅಂದರೆ (ಲೈಂಗಿಕ ಯಾ ಬೇರೆರೀತಿಯ) ನಡತೆಯಲ್ಲಿ ಮಾತ್ರವಲ್ಲ ಯೋಚನೆ ಮತ್ತು ಉದ್ದೇಶದಲ್ಲಿಯೂ ಶುದ್ಧರು ಹಾಗೂ ಪವಿತ್ರರಾಗಿರುವುದು. “ಆದರೆ ಮೇಲಣಿಂದ ಬರುವ ಜ್ಞಾನವು ಮೊದಲು ಪರಿಶುದ್ಧವಾದದ್ದು,” ಎಂದು ಯಾಕೋಬನು ಹೇಳುತ್ತಾನೆ. “ಶುದ್ಧ” ನಾಗಿರುವ ಯೇಸು, ನಮಗೆ ಪರಿಗಣಿಸಲಿಕ್ಕಿರುವ ಪರಿಪೂರ್ಣ ಮಾದರಿಯಾಗಿದ್ದಾನೆ.—ಯಾಕೋಬ 3:17; 1 ಯೋಹಾನ 3:3.
▫ “ಪ್ರೀತಿಯೋಗ್ಯ” ಎಂಬುದು ಇತರರಲ್ಲಿ ಪ್ರೀತಿಯನ್ನು ಪ್ರಚೋದಿಸುವಂಥದ್ದೂ, ಪ್ರೇರಿಸುವಂಥದ್ದೂ ಆಗಿದೆ. ದ್ವೇಷ, ಉಗ್ರತೆ, ಮತ್ತು ವ್ಯಾಜ್ಯಗಳನ್ನು ಕೆರಳಿಸುವ ವಿಷಯಗಳ ಮೇಲೆ ನಮ್ಮ ಮನಸ್ಸುಗಳನ್ನು ಹಾಕುವ ಬದಲಿಗೆ, ನಾವು “ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿಸ” ಬೇಕು.—ಇಬ್ರಿಯ 10:24.
▫ “ಹಿತೋಕ್ತಿ ಪಾತ್ರ” ಅಂದರೆ ಕೇವಲ “ಹೆಸರುವಾಸಿ” ಯಾ “ಒಳ್ಳೆಯ ವರದಿ” ಯುಳ್ಳವರಾಗಿರುವುದಲ್ಲ, ಆದರೆ ಸಕ್ರಿಯ ಅರ್ಥದಲ್ಲಿ, ಆತ್ಮೋನ್ನತಿ ಮಾಡುವಂಥವರೂ ಪ್ರಶಂಸಿಸುವಂಥವರೂ ಆಗಿರುವುದು ಸೇರಿದೆ. ಹೀನಯಿಸುವ ಮತ್ತು ಅಸಹ್ಯಕರವಾಗಿರುವ ವಿಷಯಗಳಿಗಿಂತ ಆರೋಗ್ಯಕರವಾದ ಮತ್ತು ಅಭಿವೃದ್ಧಿ ಮಾಡುವ ವಿಷಯಗಳ ಮೇಲೆ ನಮ್ಮ ಮನಸ್ಸುಗಳನ್ನು ನಾವು ಇರಿಸುತ್ತೇವೆ.—ಎಫೆಸ 4:29.
▫ “ಸದ್ಗುಣ” ಮೂಲಭೂತವಾಗಿ “ಒಳ್ಳೆಯತನ” ಯಾ “ನೈತಿಕ ಉತ್ಕೃಷ್ಟತೆಯನ್ನು” ಅರ್ಥೈಸುತ್ತದೆ, ಆದರೆ ಅದು ಯಾವುದೇ ರೀತಿಯ ಉತ್ಕೃಷ್ಟತೆಯನ್ನು ಅರ್ಥೈಸಬಲ್ಲದು. ಹೀಗೆ, ದೇವರ ಮಟ್ಟಕ್ಕೆ ಸರಿಯಾಗಿರುವ ಇತರರ ಬೆಲೆಯುಳ್ಳ ಗುಣಗಳನ್ನು, ಯೋಗ್ಯತೆಗಳನ್ನು, ಮತ್ತು ಸಾಧನೆಗಳನ್ನು ನಾವು ಗಣ್ಯಮಾಡಬಲ್ಲೆವು.
▫ “ಪ್ರಶಂಸಾರ್ಹ” ವಾದ ವಿಷಯಗಳು, ಸ್ತುತಿಯು ದೇವರಿಂದ ಯಾ ಆತನಿಂದ ಗುರುತಿಸಲ್ಪಡುವ ಅಧಿಕಾರದಿಂದ ಬರುವುದಾದರೆ ಅವು ನಿಜವಾಗಿಯೂ ಕೀರ್ತಿಗೆ ಯೋಗ್ಯವಾಗಿವೆ.—1 ಕೊರಿಂಥ 4:5; 1 ಪೇತ್ರ 2:14.
ಜೀವ ಮತ್ತು ಶಾಂತಿಯ ವಾಗ್ದಾನ
17. “ಪವಿತ್ರಾತ್ಮನವುಗಳ ಮೇಲೆ ಮನಸ್ಸಿಡು” ವುದರಿಂದ ಯಾವ ಆಶೀರ್ವಾದಗಳು ಫಲಿಸುತ್ತವೆ?
17 ನಾವು ಪೌಲನ ಎಚ್ಚರಿಕೆಯನ್ನು ಅನುಸರಿಸಿ, “ಈ ವಿಷಯಗಳನ್ನು ಪರಿಗಣಿಸುತ್ತಾ” ಹೋಗುವುದಾದರೆ, “ಪವಿತ್ರಾತ್ಮನವುಗಳ ಮೇಲೆ ಮನಸ್ಸಿಡುವದ” ರಲ್ಲಿ ನಾವು ಸಫಲರಾಗುವೆವು. ಫಲಿತಾಂಶವು ಜೀವಿತದ ಆಶೀರ್ವಾದ, ಅಂದರೆ ವಾಗ್ದಾನ ಮಾಡಲಾದ ಹೊಸ ಲೋಕದಲ್ಲಿ ಅನಂತ ಜೀವನ ಮಾತ್ರವಲ್ಲ, ಶಾಂತಿಯು ಸಹ ಆಗಿದೆ. (ರೋಮಾಪುರ 8:6) ಯಾಕೆ? ಯಾಕೆಂದರೆ ನಮ್ಮ ಮನಸ್ಸುಗಳು ಶಾರೀರಿಕ ವಿಷಯಗಳ ದುಷ್ಟ ಪ್ರಭಾವದಿಂದ ರಕ್ಷಿಸಲ್ಪಡುತ್ತವೆ, ಮತ್ತು ಪೌಲನ ಮೂಲಕ ವರ್ಣಿಸಲಾದಂತೆ ಶರೀರ ಮತ್ತು ಆತ್ಮದ ನಡುವೆ ಇರುವ ಸಂಕಟಮಯ ಹೋರಾಟದಿಂದ ನಾವು ಇನ್ನು ಮುಂದೆ ಬಹಳವಾಗಿ ಪ್ರಭಾವಿಸಲ್ಪಡುವುದಿಲ್ಲ. ಶರೀರದ ಪ್ರಭಾವವನ್ನು ಪ್ರತಿರೋಧಿಸುವ ಮೂಲಕ, ದೇವರೊಂದಿಗೆ ಶಾಂತಿಯನ್ನು ಕೂಡ ನಾವು ಪಡೆಯುತ್ತೇವೆ, “ಯಾಕೆಂದರೆ ಶರೀರಭಾವದವುಗಳ ಮೇಲೆ ಮನಸ್ಸಿಡುವದು ದೇವರಿಗೆ ಶತ್ರುತ್ವ” ವಾಗಿದೆ.—ರೋಮಾಪುರ 7:21-23; 8:7.
18. ಯಾವ ಯುದ್ಧವನ್ನು ಸೈತಾನನು ನಡೆಸುತ್ತಿದ್ದಾನೆ, ಮತ್ತು ನಾವು ಹೇಗೆ ಜಯಶಾಲಿಗಳಾಗಿರಬಲ್ಲೆವು?
18 ದೇವರ ಮಹಿಮೆಯ ನಮ್ಮ ಪ್ರತಿಬಿಂಬವನ್ನು ಕಾಂತಿಹೀನಮಾಡಲು ಸೈತಾನನು ಮತ್ತು ಅವನ ನಿಯೋಗಿಗಳು ಅವರಿಂದ ಸಾಧ್ಯವಾಗುವ ಎಲ್ಲ ಕಾರ್ಯಗಳನ್ನು ಮಾಡುತ್ತಿದ್ದಾರೆ. ಶಾರೀರಿಕ ಅಭಿಲಾಷೆಗಳಿಂದ ನಮ್ಮ ಮನಸ್ಸುಗಳನ್ನು ಸತತವಾಗಿ ಹೊಡೆಯುವ ಮೂಲಕ ಅವುಗಳ ನಿಯಂತ್ರಣವನ್ನು ಪಡೆಯಲು ಅವರು ಪ್ರಯತ್ನಿಸುತ್ತಾರೆ, ಮತ್ತು ಇದು ಕಟ್ಟಕಡೆಗೆ ದೇವರೊಂದಿಗೆ ಶತ್ರುತ್ವಕ್ಕೆ ಮತ್ತು ಮರಣಕ್ಕೆ ನಡೆಸುವುದೆಂದು ಅವರು ತಿಳಿದಿದ್ದಾರೆ. ಆದರೆ ನಾವು ಈ ಯುದ್ಧದಿಂದ ಜಯಶಾಲಿಗಳಾಗಿ ಹೊರ ಬರಸಾಧ್ಯವಿದೆ. ಪತನಗೊಂಡ ಶರೀರದ ಮೇಲೆ ಪಾಪದ ಹಿಡಿತದೊಂದಿಗೆ ಹೋರಾಡಲು ಸಾಧನವನ್ನು ಒದಗಿಸಿದ ಕಾರಣ, ಪೌಲನಂತೆ, ನಾವು ಕೂಡ ಹೀಗೆ ಘೋಷಿಸಬಲ್ಲೆವು: “ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರಿಗೆ ಸ್ತೋತ್ರ.”—ರೋಮಾಪುರ 7:25.
[ಅಧ್ಯಯನ ಪ್ರಶ್ನೆಗಳು]
a “ಪಾಪ” ಎಂಬ ಶಬ್ದವನ್ನು ಸೂಚಿಸಲು, ಬೈಬಲ್ ಸಾಮಾನ್ಯವಾಗಿ ಹಿಬ್ರೂ ಕ್ರಿಯಾಪದವಾದ ಚಾಟಾ ಮತ್ತು ಗ್ರೀಕ್ ಕ್ರಿಯಾಪದವಾದ ಹಮಾರ್ಟಾನೊ ವನ್ನು ಉಪಯೋಗಿಸುತ್ತದೆ. ಒಂದು ಲಕ್ಷ್ಯವನ್ನು, ಗುರುತನ್ನು, ಯಾ ಗುರಿಯನ್ನು ತಲಪದೆ ಇರುವ ಅಥವಾ ನಷ್ಟಪಡಿಸಿಕೊಳ್ಳುವುದರ ಅರ್ಥದಲ್ಲಿ, ಈ ಎರಡೂ ಶಬ್ದಗಳು “ತಪ್ಪುವುದು,” ಎಂಬುದನ್ನು ಅರ್ಥೈಸುತ್ತವೆ.
b ಸಾಂಪ್ರದಾಯಿಕವಾಗಿ, ಏಳು ಮಾರಕವಾದ ಪಾಪಗಳು, ಗರ್ವ, ಅತ್ಯಾಶೆ, ಕಾಮ, ಮತ್ಸರ, ಹೊಟ್ಟೆಬಾಕತನ, ಕೋಪ, ಮತ್ತು ಮೈಗಳ್ಳತನವಾಗಿವೆ.
ನೀವು ವಿವರಿಸಬಲ್ಲಿರೊ?
▫ ಪಾಪವು ಏನಾಗಿದೆ, ಮತ್ತು ಪತನಗೊಂಡ ಶರೀರದ ಮೇಲೆ ಹಿಡಿತವನ್ನು ಅದು ಹೇಗೆ ಬೆಳೆಸಿಕೊಳ್ಳಬಲ್ಲದು?
▫ “ಶರೀರಭಾವದವುಗಳ ಮೇಲೆ ಮನಸ್ಸಿಡು” ವುದರ ವಿರುದ್ಧ ನಾವು ಹೇಗೆ ಹೋರಾಡಬಲ್ಲೆವು?
▫ “ಪವಿತ್ರಾತ್ಮನವುಗಳ ಮೇಲೆ ಮನಸ್ಸಿಡುವದ”ನ್ನು ನಾವು ಹೇಗೆ ಪ್ರವರ್ತಿಸಬಲ್ಲೆವು?
▫ “ಪವಿತ್ರಾತ್ಮನವುಗಳ ಮೇಲೆ ಮನಸ್ಸಿಡುವದು” ಜೀವ ಮತ್ತು ಶಾಂತಿಯನ್ನು ಹೇಗೆ ತರುತ್ತದೆ?
[ಪುಟ 15 ರಲ್ಲಿರುವ ಚಿತ್ರ]
ಕಾಯಿನನು ಶಾರೀರಿಕ ಪ್ರವೃತ್ತಿಗಳು ತನ್ನ ಸ್ವಂತ ನಾಶಕ್ಕಾಗಿ ತನ್ನನ್ನು ಆಳುವಂತೆ ಅನುಮತಿಸಿದನು
[ಪುಟ 16 ರಲ್ಲಿರುವ ಚಿತ್ರಗಳು]
ಆತ್ಮದ ಮೇಲೆ ಮನಸ್ಸಿಡುವುದು ಜೀವವೂ ಶಾಂತಿಯೂ ಆಗಿದೆ