ನಿಮ್ಮ ಮದುವೆಯನ್ನು ಒಂದು ಬಾಳುವ ಬಂಧವಾಗಿ ಮಾಡಿರಿ
“ಆದುದರಿಂದ, ದೇವರು ಕೂಡಿಸಿದ್ದನ್ನು ಮನುಷ್ಯರು ಅಗಲಿಸಬಾರದು.”—ಮತ್ತಾಯ 19:6.
1. ನಿಜ ಕ್ರೈಸ್ತರೊಳಗೆ ಇಂದು ಮದುವೆಯ ಯಶಸ್ಸಿಗಾಗಿರುವ ಆಧಾರವು ಯಾವುದು?
ಯೆಹೋವನ ಜನರಲ್ಲಿ ಇಂದು ಅನೇಕ ಸಾವಿರಾರು ಮಂದಿ ತೃಪ್ತಿಕರ ಹಾಗೂ ಬಾಳುವ ಮದುವೆಗಳನ್ನು ಅನುಭವಿಸುತ್ತಾರೆ. ಅಂತಹ ವ್ಯಾಪಕವಾದ ಯಶಸ್ಸಾದರೊ, ಒಂದು ಅನಿರೀಕ್ಷಿತ ಘಟನೆಯಾಗಿರಲು ಸಾಧ್ಯವೇ ಇಲ್ಲ. ಇಬ್ಬರೂ ಸಂಗಾತಿಗಳು (1) ದಾಂಪತ್ಯದ ಕುರಿತಾದ ದೇವರ ನೋಟವನ್ನು ಗೌರವಿಸುವಾಗ ಮತ್ತು (2) ಆತನ ವಾಕ್ಯದ ತತ್ವಗಳಿಗನುಸಾರವಾಗಿ ಜೀವಿಸಲು ಪ್ರಯತ್ನಿಸುವಾಗ, ಕ್ರೈಸ್ತ ಮದುವೆಗಳು ಏಳಿಗೆ ಹೊಂದುತ್ತವೆ. ಅಂತೂ, ವಿವಾಹದೇರ್ಪಾಡನ್ನು ಸ್ಥಾಪಿಸಿದ್ದು ಸ್ವತಃ ದೇವರೆ. ‘ಯಾವ ತಂದೆಯಿಂದ ಭೂಲೋಕದಲ್ಲಿರುವ ಪ್ರತಿ (ಕುಟುಂಬವೂ, NW) ಜನವೂ ಹೆಸರು ತೆಗೆದುಕೊಳ್ಳುತ್ತದೋ ಆ ತಂದೆಯು’ ಆತನಾಗಿದ್ದಾನೆ. (ಎಫೆಸ 3:14, 15) ಮದುವೆಯನ್ನು ಒಂದು ಯಶಸ್ಸಾಗಿ ಮಾಡುವುದರಲ್ಲಿ ಏನು ಒಳಗೊಂಡಿದೆ ಎಂದು ಯೆಹೋವನಿಗೆ ತಿಳಿದಿರುವುದರಿಂದ, ಆತನ ಮಾರ್ಗದರ್ಶನವನ್ನು ಅನುಸರಿಸುವ ಮೂಲಕ ನಾವು ನಮ್ಮನ್ನು ಪ್ರಯೋಜನಪಡಿಸಿಕೊಳ್ಳುತ್ತೇವೆ.—ಯೆಶಾಯ 48:17.
2. ಮದುವೆಯಲ್ಲಿ ಬೈಬಲ್ ತತ್ವಗಳನ್ನು ಅನ್ವಯಿಸುವುದರಲ್ಲಿ ತಪ್ಪಿಹೋಗುವುದರ ಪರಿಣಾಮಗಳಾವುವು?
2 ವ್ಯತಿರೇಕವಾಗಿ, ಬೈಬಲ್ ತತ್ವಗಳನ್ನು ಅನ್ವಯಿಸಲು ತಪ್ಪಿಹೋಗುವುದು ವೈವಾಹಿಕ ದುರವಸ್ಥೆಯಲ್ಲಿ ಫಲಿಸಬಲ್ಲದು. ಇಂದು ಅಮೆರಿಕದಲ್ಲಿ ಮದುವೆ ಮಾಡಿಕೊಳ್ಳುವ ಮೂರನೆಯ ಎರಡಂಶದಷ್ಟು ಜನರು ಕಟ್ಟಕಡೆಗೆ ಒಂದು ವಿವಾಹ ವಿಚ್ಛೇದವನ್ನು ಪಡೆದುಕೊಳ್ಳುವರೆಂದು ಕೆಲವು ಪರಿಣತರು ನಂಬುತ್ತಾರೆ. ಈ ‘ನಿಭಾಯಿಸಲು ಕಠಿನವಾದ ಕಾಲ’ ಗಳ ಒತ್ತಡಗಳಿಂದ ಮತ್ತು ಜಂಜಾಟಗಳಿಂದ ಕ್ರೈಸ್ತರು ಕೂಡ ರಕ್ಷಿತರಾಗಿರುವುದಿಲ್ಲ. (2 ತಿಮೊಥೆಯ 3:1) ಆರ್ಥಿಕ ಬಿಗುಪುಗಳು ಮತ್ತು ಕೆಲಸದ ಸ್ಥಳದಲ್ಲಿನ ಒತ್ತಡಗಳು ಯಾವುದೇ ಮದುವೆಯ ಮೇಲೆ ಹಾನಿಕಾರಕ ಪ್ರಭಾವವನ್ನು ಬೀರಬಲ್ಲವು. ಬೈಬಲ್ ತತ್ವಗಳನ್ನು ಅನ್ವಯಿಸುವುದರಲ್ಲಿ ತಮ್ಮ ಸಂಗಾತಿಗಳ ವಿಫಲತೆಯಿಂದ ಸಹ ಕೆಲವು ಕ್ರೈಸ್ತರು ಬಹಳ ನಿರಾಶೆಗೊಂಡಿದ್ದಾರೆ. “ನಾನು ಯೆಹೋವನನ್ನು ಪ್ರೀತಿಸುತ್ತೇನೆ,” ಎಂಬುದಾಗಿ ಒಬ್ಬಾಕೆ ಕ್ರೈಸ್ತ ಪತ್ನಿಯು ಹೇಳುತ್ತಾಳೆ, “ಆದರೆ 20 ವರ್ಷಗಳಿಂದ ನನ್ನ ಮದುವೆಯು ಸಮಸ್ಯೆಗಳಿಂದ ತುಂಬಿದೆ. ನನ್ನ ಗಂಡನು ಸ್ವಾರ್ಥಿಯಾಗಿದ್ದಾನೆ ಮತ್ತು ಯಾವುದೇ ಬದಲಾವಣೆಗಳನ್ನು ಮಾಡಲು ಬಯಸುವುದಿಲ್ಲ. ಬೋನಿನಲ್ಲಿ ಸಿಕ್ಕಿಕೊಂಡಿರುವಂತೆ ನನಗನಿಸುತ್ತದೆ.” ಅದೇ ರೀತಿಯ ಭಾವನೆಗಳನ್ನು ಕೊಂಚಕ್ಕಿಂತಲೂ ಅಧಿಕ ಕ್ರೈಸ್ತ ಗಂಡಂದಿರು ಯಾ ಹೆಂಡತಿಯರು ವ್ಯಕ್ತಪಡಿಸಿದ್ದಾರೆ. ತಪ್ಪು ಎಲ್ಲಿ ಸಂಭವಿಸುತ್ತದೆ? ಒಂದು ಮದುವೆಯು ನೀರಸ ಉಪೇಕ್ಷೆಗೆ ಅಥವಾ ನೇರವಾದ ವಿರೋಧಕ್ಕೆ ಹೋಗುವುದರಿಂದ ಯಾವುದು ತಡೆಯಬಲ್ಲದು?
ಮದುವೆಯ ಶಾಶ್ವತತೆ
3, 4. (ಎ) ಮದುವೆಗಾಗಿರುವ ದೇವರ ಮಟ್ಟವು ಏನಾಗಿದೆ? (ಬಿ) ಮದುವೆಯ ಶಾಶ್ವತತೆಯು ನ್ಯಾಯವೂ ಪ್ರಯೋಜನಕಾರಿಯೂ ಆಗಿರುವುದೇಕೆ?
3 ಅತ್ಯುತ್ತಮ ಪರಿಸ್ಥಿತಿಗಳ ಅಡಿಯಲ್ಲಿಯೂ, ಮದುವೆ ಅಪರಿಪೂರ್ಣ ವ್ಯಕ್ತಿಗಳ ಸೇರಿಕೆಯಾಗಿದೆ. (ಧರ್ಮೋಪದೇಶಕಾಂಡ 32:5) ಆದುದರಿಂದ ಅಪೊಸ್ತಲ ಪೌಲನು “ಮದುವೆಮಾಡಿಕೊಂಡವರಿಗೆ ಶರೀರಸಂಬಂಧವಾಗಿ ಕಷ್ಟ ಸಂಭವಿಸುವದು” ಎಂದು ಹೇಳಿದನು. (1 ಕೊರಿಂಥ 7:28) ಕೆಲವು ಅತಿರೇಕ ಪರಿಸ್ಥಿತಿಗಳು ಅಗಲಿಕೆ ಯಾ ವಿವಾಹ ವಿಚ್ಛೇದದಲ್ಲಿಯೂ ಪರಿಣಮಿಸಬಹುದು. (ಮತ್ತಾಯ 19:9; 1 ಕೊರಿಂಥ 7:12-15) ಹಾಗಿದ್ದರೂ ಅನೇಕ ಸಂದರ್ಭಗಳಲ್ಲಿ, ಕ್ರೈಸ್ತರು ಪೌಲನ ಸಲಹೆಯನ್ನು ಅನ್ವಯಿಸುತ್ತಾರೆ: “ಹೆಂಡತಿಯು ಗಂಡನನ್ನು ಬಿಟ್ಟು ಅಗಲಬಾರದು; . . . ಮತ್ತು ಗಂಡನು ಹೆಂಡತಿಯನ್ನು ಬಿಡಬಾರದು.” (1 ಕೊರಿಂಥ 7:10, 11) ಮದುವೆಯು ಶಾಶ್ವತವಾದ ಒಂದು ಬಂಧವಾಗಿರಬೇಕೆಂದು ಉದ್ದೇಶಿಸಲಾಗಿತ್ತು ನಿಜ, ಯಾಕೆಂದರೆ ಯೇಸು ಕ್ರಿಸ್ತನು ಘೋಷಿಸಿದ್ದು: “ಆದುದರಿಂದ, ದೇವರು ಕೂಡಿಸಿದ್ದನ್ನು ಮನುಷ್ಯರು ಅಗಲಿಸಬಾರದು.”—ಮತ್ತಾಯ 19:6.
4 ಹಗೆತನವಿರುವ ಯಾ ಪ್ರೀತಿಯಿಲ್ಲದ ಒಂದು ಮದುವೆಯಲ್ಲಿ ಸಿಲುಕಿಕೊಂಡಂತೆ ಅನಿಸುವ ಒಬ್ಬರಿಗೆ, ಯೆಹೋವನ ಮಟ್ಟವು ಕಠೋರವಾಗಿಯೂ ಅನುಚಿತವಾಗಿಯೂ ತೋರಬಹುದು. ಆದರೆ ಅದು ಹಾಗಿರುವುದಿಲ್ಲ. ವಿವಾಹ ಬಂಧದ ಶಾಶ್ವತತೆಯು, ದೇವರಿಗೆ ಭಯಪಡುವ ದಂಪತಿಗಳನ್ನು, ಅವರು ತೊಂದರೆಯ ಪ್ರಥಮ ಸೂಚನೆಯಲ್ಲಿ ತಮ್ಮ ಹಂಗುಗಳನ್ನು ಅವಸರವಾಗಿ ತೊರೆಯುವ ಬದಲು ತಮ್ಮ ಸಮಸ್ಯೆಗಳನ್ನು ಎದುರಿಸಿ ಅವುಗಳನ್ನು ಬಗೆಹರಿಸಲು ಪ್ರಯತ್ನಿಸುವಂತೆ ಪ್ರೇರೇಪಿಸುತ್ತದೆ. ಇಪ್ಪತ್ತಕ್ಕಿಂತಲೂ ಅಧಿಕ ವರ್ಷಗಳ ಕಾಲ ಮದುವೆಯಾಗಿದ್ದ ಒಬ್ಬ ಮನುಷ್ಯನು ಅದನ್ನು ಹೀಗೆ ವ್ಯಕ್ತಪಡಿಸಿದನು: “ಕಷ್ಟಕರ ಸಮಯಗಳನ್ನು ನೀವು ದೂರವಿಡಲು ಸಾಧ್ಯವಿಲ್ಲ. ನೀವು ಎಲ್ಲ ಸಮಯ ಒಬ್ಬರೊಂದಿಗೊಬ್ಬರು ಸಂತೋಷವಾಗಿರುವುದಿಲ್ಲ. ಬದ್ಧತೆಯು ಬಹಳ ಪ್ರಾಮುಖ್ಯವಾಗಿ ಪರಿಣಮಿಸುವುದು ಆಗಲೇ.” ನಿಶ್ಚಯವಾಗಿಯೂ, ಕ್ರೈಸ್ತ ವಿವಾಹಿತ ದಂಪತಿಗಳ ಪ್ರಾಥಮಿಕ ಹಂಗು ಮದುವೆಯ ಮೂಲನಾದ ಯೆಹೋವ ದೇವರ ಕಡೆಗಿರುತ್ತದೆ.—ಹೋಲಿಸಿ ಪ್ರಸಂಗಿ 5:4.
ತಲೆತನ ಮತ್ತು ಅಧೀನತೆ
5. ಗಂಡಂದಿರಿಗಾಗಿ ಮತ್ತು ಹೆಂಡತಿಯರಿಗಾಗಿರುವ ಪೌಲನ ಸಲಹೆಗಳಲ್ಲಿ ಕೆಲವು ಯಾವುವು?
5 ಆದುದರಿಂದ, ಸಮಸ್ಯೆಗಳು ಏಳುವಾಗ, ಅದರಿಂದ ತಪ್ಪಿಸಿಕೊಳ್ಳುವ ವಿಧಾನವನ್ನು ಹುಡುಕುವ ಸಮಯವು ಅದಾಗಿರುವುದಿಲ್ಲ, ಬದಲಿಗೆ ದೇವರ ವಾಕ್ಯದ ಸಲಹೆಯನ್ನು ಅನ್ವಯಿಸುವ ಉತ್ತಮ ವಿಧಾನವನ್ನು ಹುಡುಕುವ ಸಮಯವು ಅದಾಗಿರುತ್ತದೆ. ಉದಾಹರಣೆಗೆ, ಎಫೆಸ 5:22-25, 28, 29, 30 ರಲ್ಲಿ ಕಾಣಿಸಿಕೊಳ್ಳುವ ಪೌಲನ ಈ ಮಾತುಗಳನ್ನು ಪರಿಗಣಿಸಿರಿ: “ಸ್ತ್ರೀಯರೇ, ನೀವು ಕರ್ತನಿಗೆ ಹೇಗೋ ಹಾಗೆಯೇ ನಿಮ್ಮನಿಮ್ಮ ಗಂಡಂದಿರಿಗೆ ಅಧೀನರಾಗಿರ್ರಿ. ಕ್ರಿಸ್ತನು ಸಭೆಗೆ ತಲೆಯಾಗಿರುವ ಪ್ರಕಾರವೇ ಗಂಡನು ಹೆಂಡತಿಗೆ ತಲೆಯಾಗಿದ್ದಾನೆ. ಕ್ರಿಸ್ತನೋ ಸಭೆಯೆಂಬ ದೇಹಕ್ಕೆ ರಕ್ಷಕನಾಗಿದ್ದಾನೆ. ಅದಿರಲಿ; ಸಭೆಯು ಕ್ರಿಸ್ತನಿಗೆ ಹೇಗೆ ಅಧೀನವಾಗಿದೆಯೋ ಹಾಗೆಯೇ ಸ್ತ್ರೀಯರು ತಮ್ಮತಮ್ಮ ಗಂಡಂದಿರಿಗೆ ಎಲ್ಲಾ ವಿಷಯಗಳಲ್ಲಿ ಅಧೀನರಾಗಿರಬೇಕು. ಪುರುಷರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರವೇ ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ. ಹಾಗೆಯೇ ಪುರುಷರು ಸಹ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸಿಕೊಳ್ಳುವವನಾಗಿದ್ದಾನೆ. ಯಾರೂ ಎಂದೂ ಸ್ವಶರೀರವನ್ನು ಹಗೆಮಾಡಿದ್ದಿಲ್ಲ; ಎಲ್ಲರೂ ತಮ್ಮ ಶರೀರಗಳನ್ನು ಪೋಷಿಸಿ ಸಂರಕ್ಷಿಸುತ್ತಾರೆ. . . . ಸಭೆಯೆಂಬ ಆ ದೇಹವನ್ನು ಕ್ರಿಸ್ತನು ಹಾಗೆಯೇ ಪೋಷಿಸಿ ಸಂರಕ್ಷಿಸುತ್ತಾನಲ್ಲಾ.”
6. ಕ್ರೈಸ್ತ ಗಂಡಂದಿರು ಹೇಗೆ ಲೋಕದ ಪುರುಷರಿಂದ ಭಿನ್ನರಾಗಿರಬೇಕು?
6 ಪುರುಷರು ಅನೇಕ ಬಾರಿ ತಮ್ಮ ಪತಿಯೋಗ್ಯವಾದ ಅಧಿಕಾರವನ್ನು ದುರುಪಯೋಗಿಸಿದ್ದಾರೆ ಮತ್ತು ತಮ್ಮ ಹೆಂಡತಿಯರ ಮೇಲೆ ಅಧಿಕಾರ ನಡೆಸಿದ್ದಾರೆ. (ಆದಿಕಾಂಡ 3:16) ಹಾಗಿದ್ದರೂ, ಪೌಲನು ಕ್ರೈಸ್ತ ಗಂಡಂದಿರನ್ನು ಲೋಕದ ಪುರುಷರಿಗಿಂತ ಭಿನ್ನವಾಗಿರಲು, ತಮ್ಮ ಹೆಂಡತಿಯರ ಅಸ್ತಿತ್ವದ ಪ್ರತಿಯೊಂದು ವಿವರವನ್ನು ನಿಯಂತ್ರಿಸುವ ಕ್ರೂರಿಗಳಾಗಿರದೆ, ಕ್ರಿಸ್ತನಂತಿರಲು, ಉತ್ತೇಜಿಸಿದನು. ನಿಶ್ಚಯವಾಗಿಯೂ, ಮನುಷ್ಯನಾದ ಯೇಸು ಕ್ರಿಸ್ತನು ಎಂದಿಗೂ ಕಠೋರನೂ ಅಥವಾ ಅಧಿಕಾರ ಚಲಾಯಿಸುವವನೂ ಆಗಿರಲಿಲ್ಲ. ತನ್ನ ಹಿಂಬಾಲಕರನ್ನು ಅವನು ಘನತೆ ಮತ್ತು ಗೌರವದಿಂದ ನಡೆಸಿಕೊಂಡನು. ಅವನಂದದ್ದು: “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು. ನಾನು ಸಾತ್ವಿಕನೂ ದೀನಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ.”—ಮತ್ತಾಯ 11:28, 29.
7. ತನ್ನ ಹೆಂಡತಿಯು ಐಹಿಕವಾಗಿ ಕೆಲಸಮಾಡಬೇಕಾದಲ್ಲಿ ಒಬ್ಬ ಮನುಷ್ಯನು ಆಕೆಗೆ ಘನತೆಯನ್ನು ಹೇಗೆ ಸಲ್ಲಿಸಬಲ್ಲನು?
7 ಒಬ್ಬ ಕ್ರೈಸ್ತ ಗಂಡನು ತನ್ನ ಹೆಂಡತಿಗೆ ಬಲಹೀನ ಪಾತ್ರೆ ಎಂಬಂತೆ ಘನತೆಯನ್ನು ಸಲ್ಲಿಸುತ್ತಾನೆ. (1 ಪೇತ್ರ 3:7) ಉದಾಹರಣೆಗೆ, ಅವಳೊಂದು ಐಹಿಕ ಉದ್ಯೋಗದಲ್ಲಿ ಕೆಲಸಮಾಡಬೇಕೆಂದು ಭಾವಿಸಿಕೊಳ್ಳಿರಿ. ಸಾಧ್ಯವಾದಷ್ಟು ಸಹಾಯಕಾರಿಯೂ ವಿಚಾರಪೂರ್ಣನೂ ಆಗಿರುವ ಮೂಲಕ ಅವನು ಇದನ್ನು ಗಣನೆಗೆ ತೆಗೆದುಕೊಳ್ಳುವನು. ವಿವಾಹ ವಿಚ್ಛೇದಕ್ಕಾಗಿ ಸ್ತ್ರೀಯರು ಕೊಟ್ಟಿರುವ ಒಂದು ಪ್ರಧಾನ ಕಾರಣವು, ಮಕ್ಕಳ ಅಥವಾ ಮನೆಯ ಕುರಿತು ತಮ್ಮ ಗಂಡಂದಿರ ಅಲಕ್ಷ್ಯಭಾವವಾಗಿದೆ. ಆದುದರಿಂದ, ಒಬ್ಬ ಕ್ರೈಸ್ತ ಗಂಡನು, ಇಡೀ ಕುಟುಂಬಕ್ಕೆ ಪ್ರಯೋಜನವಾಗಿರುವ ಅರ್ಥಪೂರ್ಣ ವಿಧಗಳಲ್ಲಿ ಆಕೆಗೆ ಮನೆಯಲ್ಲಿ ಸಹಾಯವಾಗಿರಲು ಪ್ರಯತ್ನಿಸುತ್ತಾನೆ.
8. ಅಧೀನತೆಯಲ್ಲಿ ಕ್ರೈಸ್ತ ಹೆಂಡತಿಯರಿಗೆ ಏನು ಒಳಗೊಂಡಿರುತ್ತದೆ?
8 ಗೌರವದಿಂದ ನೋಡಿಕೊಳ್ಳಲ್ಪಡುವುದು, ಕ್ರೈಸ್ತ ಹೆಂಡತಿಯರು ತಮ್ಮ ಗಂಡಂದಿರಿಗೆ ಅಧೀನರಾಗಿರುವುದನ್ನು ಸರಳಗೊಳಿಸುತ್ತದೆ. ಇದು ಹೀನದೆಸೆಯ ಗುಲಾಮಗಿರಿಯನ್ನು ಅರ್ಥೈಸುವುದಿಲ್ಲ. ಹೆಂಡತಿಯೊಬ್ಬಳು ದಾಸಿಯಲ್ಲ, “ಪೂರಕ” (“ಪೂರಕವ್ಯಕ್ತಿ,” ಪಾದಟಿಪ್ಪಣಿ) ವಾಗಿರುವಂತೆ, ಪುರುಷನಿಗೆ ತಕ್ಕದಾಗಿರುವ ಏನನ್ನೊ ಸೂಚಿಸುವಂತೆ ದೇವರು ಆದೇಶಿಸಿದನು. (ಆದಿಕಾಂಡ 2:18) ಮಲಾಕಿಯ 2:14 ರಲ್ಲಿ, ಹೆಂಡತಿಯೊಬ್ಬಳು ಒಬ್ಬ ಪುರುಷನ “ಸಹಚಾರಿ” ಯೋಪಾದಿ ಸೂಚಿಸಲ್ಪಟ್ಟಿದ್ದಾಳೆ. ಹೀಗೆ, ಬೈಬಲ್ ಸಮಯಗಳಲ್ಲಿ ಹೆಂಡತಿಯರು ಗಣನೀಯವಾದ ಸ್ವಾತಂತ್ರ್ಯ ಮತ್ತು ಅವಕಾಶವನ್ನು ಅನುಭವಿಸಿದರು. “ಗುಣವತಿಯಾದ ಸತಿ”ಯ ಕುರಿತು, ಬೈಬಲ್ ಹೇಳುವುದು: “ಪತಿಹೃದಯವು ಆಕೆಯಲ್ಲಿ ಭರವಸಪಡುವದು.” ಮನೆವಾರ್ತೆಯ ಸಾಮಾನ್ಯ ನಿರ್ವಹಣೆ, ಆಹಾರ ಖರೀದಿಯ ಮೇಲ್ವಿಚಾರಣೆ, ಜಮೀನು ಕಟ್ಟಡ ವ್ಯವಹಾರದ ಏರ್ಪಾಡು, ಮತ್ತು ಒಂದು ಸಣ್ಣ ವ್ಯಾಪಾರವನ್ನು ನಿರ್ವಹಿಸುವುದು—ಇಂತಹ ವಿಷಯಗಳನ್ನು ಅವಳಿಗೆ ವಹಿಸಲಾಗಿತ್ತು ಎಂಬುದು ನಿಶ್ಚಯ.—ಜ್ಞಾನೋಕ್ತಿ 31:10-31.
9. (ಎ) ಬೈಬಲ್ ಸಮಯಗಳಲ್ಲಿ ದೇವಭಯವಿರುವ ಸ್ತ್ರೀಯರು ನಿಜ ಅಧೀನತೆಯನ್ನು ಹೇಗೆ ಪ್ರದರ್ಶಿಸಿದರು? (ಬಿ) ಒಬ್ಬಾಕೆ ಕ್ರೈಸ್ತ ಹೆಂಡತಿಯು ಇಂದು ಅಧೀನಳಾಗಿ ಉಳಿಯುವಂತೆ ಯಾವುದು ಸಹಾಯಮಾಡಬಲ್ಲದು?
9 ಆದರೂ, ದೇವ ಭಯವಿರುವ ಹೆಂಡತಿಯು ತನ್ನ ಗಂಡನ ಅಧಿಕಾರವನ್ನು ಗುರುತಿಸಿದಳು. ಉದಾಹರಣೆಗೆ, ಸಾರಳು “ಅಬ್ರಹಾಮನಿಗೆ ವಿಧೇಯಳಾಗಿದ್ದು ಅವನನ್ನು ಯಜಮಾನ ಎಂದು ಕರೆದಳು,” ಅದೊಂದು ವಿನಯವಾದ ಔಪಚಾರಿಕತೆಯಂತಲ್ಲ, ಬದಲಿಗೆ ಆಕೆಯ ಅಧೀನತೆಯ ಪ್ರಾಮಾಣಿಕ ಪ್ರತಿಬಿಂಬದೋಪಾದಿಯಲ್ಲಿ. (1 ಪೇತ್ರ 3:6; ಆದಿಕಾಂಡ 18:12) ಆಕೆಯ ಗಂಡನೊಂದಿಗೆ ಗುಡಾರಗಳಲ್ಲಿ ವಾಸಿಸಲು ಊರ್ ಪಟ್ಟಣದಲ್ಲಿದ್ದ ಆಕೆಯ ಹಿತಕರವಾದ ಮನೆಯನ್ನು ಕೂಡ ಅವಳು ಮನಃಪೂರ್ವಕವಾಗಿ ಬಿಟ್ಟುಬಂದಳು. (ಇಬ್ರಿಯ 11:8, 9) ಅಗತ್ಯವಿದ್ದಾಗ ಹೆಂಡತಿಯೊಬ್ಬಳು ಹೊಣೆಗಾರಿಕೆಯ ಕ್ರಿಯೆಯನ್ನು ತೆಗೆದುಕೊಳ್ಳಲು ಸಾಧ್ಯವಿರಲಿಲ್ಲವೆಂಬುದನ್ನು ಅಧೀನತೆಯು ಅರ್ಥೈಸಲಿಲ್ಲ. ಸುನ್ನತಿಯ ಕುರಿತ ದೇವರ ನಿಯಮದೊಂದಿಗೆ ಅನುವರ್ತಿಸಲು ಮೋಶೆಯು ತಪ್ಪಿಹೋದಾಗ, ಅವನ ಹೆಂಡತಿಯಾದ ಚಿಪ್ಪೋರಳು, ನಿರ್ಣಾಯಕವಾಗಿ ಕಾರ್ಯನಡಿಸುವ ಮೂಲಕ ವಿಪತ್ತನ್ನು ತಡೆದಳು. (ವಿಮೋಚನಕಾಂಡ 4:24-26) ಒಬ್ಬ ಅಪರಿಪೂರ್ಣ ಮನುಷ್ಯನನ್ನು ಮೆಚ್ಚಿಸುವುದಕ್ಕಿಂತ ಹೆಚ್ಚಿನದ್ದು ಇದರಲ್ಲಿ ಒಳಗೊಂಡಿದೆ. ಹೆಂಡತಿಯರು “ಕರ್ತನಿಗೆ ಹೇಗೋ ಹಾಗೆಯೇ ನಿಮ್ಮನಿಮ್ಮ ಗಂಡಂದಿರಿಗೆ ಅಧೀನ” ರಾಗಿರಬೇಕು. (ಎಫೆಸ 5:22) ಕ್ರೈಸ್ತ ಹೆಂಡತಿಯೊಬ್ಬಳು ದೇವರೊಂದಿಗೆ ಆಕೆಯ ಸಂಬಂಧದ ಕುರಿತು ಯೋಚಿಸುವಲ್ಲಿ—ಅವನು ಕೂಡ ಆಕೆಯೊಂದಿಗೆ ನಿಭಾಯಿಸುವಾಗ ಮಾಡಬೇಕಾದ ಹಾಗೆ—ಆಕೆಯ ಗಂಡನಲ್ಲಿರುವ ಅಲ್ಪ ಕೊರತೆಗಳನ್ನು ಮತ್ತು ನ್ಯೂನತೆಗಳನ್ನು ಲಕ್ಷಿಸದಿರುವಂತೆ ಇದು ಅವಳಿಗೆ ಸಹಾಯಮಾಡುತ್ತದೆ.
ಸಂಸರ್ಗ—ಮದುವೆಯ ಜೀವರಕ್ತ
10. ಒಂದು ಮದುವೆಗೆ ಸಂಸರ್ಗವು ಎಷ್ಟು ಪ್ರಾಮುಖ್ಯವಾಗಿದೆ?
10 ದಂಪತಿಗಳು ಬೇರ್ಪಡಲು ಅತ್ಯಂತ ಮುಖ್ಯವಾದ ಕಾರಣವು ಏನಾಗಿತ್ತು ಎಂದು ಕೇಳಲ್ಪಟ್ಟಾಗ, ವಿವಾಹ ವಿಚ್ಛೇದನದ ವಕೀಲನೊಬ್ಬನು ಉತ್ತರಿಸಿದ್ದು: “ಒಬ್ಬರು ಇನ್ನೊಬ್ಬರೊಂದಿಗೆ ಪ್ರಾಮಾಣಿಕವಾಗಿ ಮಾತಾಡುವ, ತಮ್ಮ ಆಂತರಿಕ ವಿಚಾರಗಳನ್ನು ಪ್ರಕಟಿಸುವ ಮತ್ತು ಒಬ್ಬರನ್ನೊಬ್ಬರು ಅತ್ಯುತ್ತಮ ಗೆಳೆಯರಂತೆ ನಡೆಸಿಕೊಳ್ಳುವ ಅಸಮರ್ಥತೆ.” ಹೌದು, ಸಂಸರ್ಗವು ಒಂದು ಬಲವಾದ ಮದುವೆಯ ಜೀವರಕ್ತವಾಗಿದೆ. ಬೈಬಲ್ ಹೇಳುವಂತೆ, “ಯೋಚನೆ ಹೇಳುವವರಿಲ್ಲದೆ ಉದ್ದೇಶಗಳು ನೆರವೇರವು.” (ಜ್ಞಾನೋಕ್ತಿ 15:22) ಗಂಡ ಮತ್ತು ಹೆಂಡತಿಯರು, ಒಂದು ಅನುರಾಗದ, ಅನ್ಯೋನ್ಯ ಸಂಬಂಧವನ್ನು ಅನುಭವಿಸುವ ‘ಆಪ್ತ ಮಿತ್ರ’ ರಾಗಿರಬೇಕು. (ಜ್ಞಾನೋಕ್ತಿ 2:17) ಆದರೂ, ಅನೇಕ ದಂಪತಿಗಳು ಸಂಸರ್ಗ ಮಾಡುವುದನ್ನು ಕಠಿನವೆಂದು ಕಂಡುಕೊಳ್ಳುತ್ತಾರೆ, ಮತ್ತು ಹೀಗೆ ಅಸಮಾಧಾನವು ನಾಶಕಾರಕ ಕೋಪದ ಸ್ಫೋಟನೆ ಸಂಭವಿಸುವ ತನಕ ಕಟುವಾಗುತ್ತದೆ. ಅಥವಾ ಮದುವೆಯ ಸಂಗಾತಿಗಳು ತಮ್ಮನ್ನು ಒಬ್ಬರಿಂದೊಬ್ಬರು ಭಾವನಾತ್ಮಕವಾಗಿ ದೂರವಾಗಿರಿಸಿಕೊಳ್ಳುತ್ತಾ, ಸಭ್ಯತೆಯ ತೋರ್ಕೆಯ ಹಿಂದೆ ಅಡಗಿಕೊಳ್ಳಬಹುದು.
11. ಗಂಡ ಮತ್ತು ಹೆಂಡತಿಯ ನಡುವಿನ ಸಂಸರ್ಗವನ್ನು ಹೇಗೆ ಉತ್ತಮಗೊಳಿಸಸಾಧ್ಯವಿದೆ?
11 ಪುರುಷರಿಗೆ ಮತ್ತು ಸ್ತ್ರೀಯರಿಗೆ ಅನೇಕ ವೇಳೆ ವಿಭಿನ್ನ ಸಂಸರ್ಗ ಶೈಲಿಗಳು ಇರುವುದು, ಸಮಸ್ಯೆಯ ಒಂದು ಭಾಗವಾಗಿ ತೋರುತ್ತದೆ. ಭಾವನೆಗಳನ್ನು ಚರ್ಚಿಸುವುದು ಅನೇಕ ಸ್ತ್ರೀಯರಿಗೆ ಹಿತವನಿಸುವಂತೆ ತೋರುವಾಗ, ಪುರುಷರು ಸಾಮಾನ್ಯವಾಗಿ ನಿಜತ್ವಗಳನ್ನು ಚರ್ಚಿಸಲು ಇಷ್ಟಪಡುವಂತೆ ತೋರುತ್ತದೆ. ಸ್ತ್ರೀಯರು ಹೆಚ್ಚಾಗಿ ಸಹಾನುಭೂತಿ ತೋರಿಸುವ ಮತ್ತು ಭಾವನಾತ್ಮಕ ಬೆಂಬಲವನ್ನು ನೀಡುವ ಪ್ರವೃತ್ತಿಯುಳ್ಳವರಾಗಿರುವಾಗ, ಪುರುಷರು ಪರಿಹಾರಗಳನ್ನು ಹುಡುಕಿ, ನೀಡುವ ಪ್ರವೃತ್ತಿಯವರಾಗಿದ್ದಾರೆ. ಆದರೂ, ಇಬ್ಬರು ಸಂಗಾತಿಗಳೂ “ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ . . . ಕೋಪಿಸುವದರಲ್ಲಿಯೂ ನಿಧಾನವಾಗಿ” ರಲು ನಿಶ್ಚಯಿಸಿಕೊಂಡಿರುವಲ್ಲಿ, ಇನ್ನೂ ಒಳ್ಳೆಯ ಸಂಸರ್ಗಕ್ಕೆ ಸಂಭಾವನೆಯು ಅಸ್ತಿತ್ವದಲ್ಲಿದೆ. (ಯಾಕೋಬ 1:19) ದೃಷ್ಟಿ ಸಂಪರ್ಕ ಮಾಡಿರಿ ಮತ್ತು ನಿಜವಾಗಿಯೂ ಗಮನಕೊಡಿರಿ. ವಿಚಾರಪೂರ್ಣ ಪ್ರಶ್ನೆಗಳಿಂದ ಪರಸ್ಪರವಾಗಿ ಉತ್ತರಗಳನ್ನು ಹೊರಸೆಳೆಯಿರಿ. (ಹೋಲಿಸಿ 1 ಸಮುವೇಲ 1:8; ಜ್ಞಾನೋಕ್ತಿ 20:5.) ನಿಮ್ಮ ಸಂಗಾತಿಯು ಸಮಸ್ಯೆಯೊಂದನ್ನು ಪ್ರಕಟಿಸುವಾಗ ಕ್ಷಿಪ್ರವಾದೊಂದು ಪರಿಹಾರವನ್ನು ನೀಡಲು ಪ್ರಯತ್ನಿಸುವ ಬದಲು, ವಿಷಯಗಳನ್ನು ಬಗೆಹರಿಸಲು ನೀವು ಕಾರ್ಯವೆಸಗುವಾಗ ಜಾಗರೂಕರಾಗಿ ಆಲಿಸಿರಿ. ದೈವಿಕ ಮಾರ್ಗದರ್ಶನವನ್ನು ಕೋರುತ್ತಾ, ಒಟ್ಟಿಗೆ ದೀನತೆಯಿಂದ ಪ್ರಾರ್ಥಿಸಿರಿ.—ಕೀರ್ತನೆ 65:2; ರೋಮಾಪುರ 12:12.
12. ಕ್ರೈಸ್ತ ಸಂಗಾತಿಗಳು ಒಬ್ಬರು ಇನ್ನೊಬ್ಬರಿಗಾಗಿ ಹೇಗೆ ಸಮಯವನ್ನು ಕೊಂಡುಕೊಳ್ಳಬಲ್ಲರು?
12 ಕೆಲವೊಮ್ಮೆ ಜೀವಿತದ ಒತ್ತಡಗಳು ಮತ್ತು ಜಂಜಾಟಗಳು ಮದುವೆಯ ಸಂಗಾತಿಗಳಿಗೆ, ಅರ್ಥಪೂರ್ಣ ಮಾತುಕತೆಗಾಗಿ ಅತಿ ಕಡಿಮೆ ಸಮಯ ಯಾ ಶಕ್ತಿಯನ್ನು ಬಿಡುವಂತೆ ತೋರುತ್ತದೆ. ಹಾಗಿದ್ದರೂ, ತಮ್ಮ ಮದುವೆಯನ್ನು ಕ್ರೈಸ್ತರು ಮಾನ್ಯವಾಗಿಯೂ ಅದನ್ನು ಕಲ್ಮಶದಿಂದ ಸುರಕ್ಷಿತವಾಗಿಯೂ ಇಡಬೇಕಾದರೆ, ಅವರು ಒಬ್ಬರಿಗೊಬ್ಬರು ನಿಕಟವಾಗಿ ಉಳಿಯಬೇಕು. ಅವರು ತಮ್ಮ ಸಂಯೋಗವನ್ನು ಅಮೂಲ್ಯವೂ ಬೆಲೆಯುಳ್ಳದ್ದೂ ಎಂದು ಎಣಿಸಬೇಕು, ಮತ್ತು ಒಬ್ಬರು ಇನ್ನೊಬ್ಬರಿಗಾಗಿ ಸಮಯವನ್ನು ಕೊಂಡುಕೊಳ್ಳಬೇಕು. (ಹೋಲಿಸಿ ಕೊಲೊಸ್ಸೆ 4:5.) ಕೆಲವು ವಿದ್ಯಮಾನಗಳಲ್ಲಿ, ಆರೋಗ್ಯಕರ ಮಾತುಕತೆಗಾಗಿ ಸಮಯವನ್ನು ಕಂಡುಕೊಳ್ಳುವುದರ ಪರಿಹಾರವು, ಟಿವಿಯನ್ನು ಬಂದ್ ಮಾಡುವಷ್ಟು ಸರಳವಾಗಿರಬಹುದು. ಕ್ರಮವಾಗಿ ಒಂದು ಕಪ್ ಚಹವನ್ನು ಯಾ ಕಾಫಿಯನ್ನು ಕುಡಿಯಲು ಒಟ್ಟಿಗೆ ಕುಳಿತುಕೊಳ್ಳುವುದು, ಭಾವನಾತ್ಮಕವಾಗಿ ಸಂಸರ್ಗ ಮಾಡುತ್ತಾ ಇರುವಂತೆ ಮದುವೆಯ ಜೊತೆಗಳಿಗೆ ಸಹಾಯಮಾಡಬಲ್ಲದು. ಅಂತಹ ಸಂದರ್ಭಗಳಲ್ಲಿ ವಿಭಿನ್ನ ಕುಟುಂಬ ವಿಷಯಗಳ ಕುರಿತು ಅವರು ‘ಒಟ್ಟಿಗೆ ಸಮಾಲೋಚಿಸ’ ಬಲ್ಲರು. (ಜ್ಞಾನೋಕ್ತಿ 13:10) ಅವು ಬಿಗುಪಿನ ಪ್ರಧಾನ ಮೂಲಗಳಾಗುವ ಮುಂಚೆ ಅಪ್ರಧಾನ ಕಿರುಕುಳ ಹಾಗೂ ಅಪಾರ್ಥಗಳ ಕುರಿತು ಮಾತಾಡುವ ಹವ್ಯಾಸವನ್ನು ಬೆಳೆಸಿಕೊಳ್ಳುವುದು ಎಷ್ಟು ವಿವೇಕಯುಕ್ತವಾಗಿದೆ!—ಹೋಲಿಸಿ ಮತ್ತಾಯ 5:23, 24; ಎಫೆಸ 4:26.
13. (ಎ) ತೆರೆದ ಮನಸ್ಸು ಮತ್ತು ಪ್ರಾಮಾಣಿಕತೆಯಲ್ಲಿ ಯೇಸು ಯಾವ ಮಾದರಿಯನ್ನು ಸ್ಥಾಪಿಸಿದನು? (ಬಿ) ಮದುವೆಯ ಸಂಗಾತಿಗಳು ಒಬ್ಬರಿಗೊಬ್ಬರು ನಿಕಟವಾಗಿ ಬರುವ ಕೆಲವು ವಿಧಗಳಾವುವು?
13 ಒಬ್ಬ ಮನುಷ್ಯನು ಒಪ್ಪಿಕೊಂಡದ್ದು: “ನನ್ನ ದೃಷ್ಟಿಕೋನಗಳನ್ನು ನಿಜವಾಗಿಯೂ ವ್ಯಕ್ತಪಡಿಸಲು ಮತ್ತು ನನಗೆ ನಿಖರವಾಗಿ ಹೇಗನಿಸುತ್ತಿದೆ ಎಂದು [ನನ್ನ ಹೆಂಡತಿಗೆ] ನಿಜವಾಗಿಯೂ ಹೇಳಲು, ಅನೇಕ ವೇಳೆ ನನಗೆ ಬಹಳ ಕಷ್ಟವಾಗುತ್ತದೆ.” ಸ್ವಅನಾವರಣವಾದರೊ, ಅನ್ಯೋನ್ಯತೆಯನ್ನು ವಿಕಸಿಸಿಕೊಳ್ಳುವುದರ ಒಂದು ಮುಖ್ಯ ಕೀಲಿಕೈಯಾಗಿದೆ. ತನ್ನ ವಧುವರ್ಗದ ಭಾವಿ ಸದಸ್ಯರೊಂದಿಗೆ ಯೇಸು ಎಷ್ಟು ತೆರೆದ ಮನಸ್ಸಿನವನೂ ಪ್ರಾಮಾಣಿಕನೂ ಆಗಿದ್ದನೆಂಬುದನ್ನು ಗಮನಿಸಿರಿ. ಅವನಂದದ್ದು: “ಇನ್ನು ಮೇಲೆ ನಾನು ನಿಮ್ಮನ್ನು ಆಳುಗಳನ್ನುವದಿಲ್ಲ; ಯಜಮಾನನು ಮಾಡುವಂಥದು ಆಳಿಗೆ ತಿಳಿಯುವದಿಲ್ಲ. ನಿಮ್ಮನ್ನು ಸ್ನೇಹಿತರೆಂದು ಹೇಳಿದ್ದೇನೆ; ತಂದೆಯ ಕಡೆಯಿಂದ ನಾನು ಕೇಳಿದ್ದನ್ನೆಲ್ಲಾ ನಿಮಗೆ ತಿಳಿಸಿದ್ದೇನೆ.” (ಯೋಹಾನ 15:15) ಆದುದರಿಂದ ನಿಮ್ಮ ಪತಿ ಯಾ ಪತ್ನಿಯನ್ನು ಒಬ್ಬ ಸ್ನೇಹಿತರೋಪಾದಿ ವೀಕ್ಷಿಸಿರಿ. ನಿಮ್ಮ ಸಂಗಾತಿಗೆ ನಿಮ್ಮ ಅನಿಸಿಕೆಗಳನ್ನು ಹೇಳುವಷ್ಟು ಭರವಸೆಯನ್ನು ಅವನ⁄ಅವಳ ಮೇಲಿಡಿರಿ. ಸರಳ, ಪ್ರಾಮಾಣಿಕವಾದ “ಪ್ರೀತಿಯ ಅಭಿವ್ಯಕ್ತಿಗಳನ್ನು” ಮಾಡಲು ಪ್ರಯತ್ನಿಸಿರಿ. (ಪರಮ ಗೀತ 1:2) ಮುಚ್ಚುಮರೆಯಿಲ್ಲದ ಸಂಸರ್ಗವು ಕೆಲವೊಮ್ಮೆ ವಕ್ರವಾಗಿ ಕಾಣಬಹುದು, ಆದರೆ ಮದುವೆಯ ಸಂಗಾತಿಗಳಲ್ಲಿ ಇಬ್ಬರೂ ಯಥೋಚಿತವಾದ ಪ್ರಯತ್ನವನ್ನು ಮಾಡುವಾಗ, ತಮ್ಮ ಮದುವೆಯನ್ನು ಒಂದು ಬಾಳುವ ಸಂಯೋಗವಾಗಿ ಮಾಡುವುದರ ಕಡೆಗೆ ಹೆಚ್ಚನ್ನು ಸಾಧಿಸಲಾಗುವುದು.
ಭಿನ್ನಾಭಿಪ್ರಾಯಗಳನ್ನು ನಿರ್ವಹಿಸುವುದು
14, 15. ಜಗಳವಾಡುವುದನ್ನು ಹೇಗೆ ತೊರೆಯಸಾಧ್ಯವಿದೆ?
14 ಯಥಾರ್ಥವಾದ ಭಿನ್ನಾಭಿಪ್ರಾಯಗಳು ಆಗಾಗ ಏಳುವುದು ಖಂಡಿತ. ಆದರೆ ನಿಮ್ಮ ಮನೆಯು ‘ವ್ಯಾಜ್ಯದ ಮನೆ’ಯ ಸ್ಥಿತಿಗೆ ಅವನತಿ ಹೊಂದುವ ಅಗತ್ಯವಿಲ್ಲ. (ಜ್ಞಾನೋಕ್ತಿ 17:1) ಮಕ್ಕಳು ಕಿವಿಗೊಡಬಹುದಾದ ಸಮಯಗಳಲ್ಲಿ ಸೂಕ್ಷ್ಮ ವಿಷಯಗಳನ್ನು ಚರ್ಚಿಸದಿರುವಂತೆ ಜಾಗರೂಕರಾಗಿರ್ರಿ, ಮತ್ತು ನಿಮ್ಮ ಸಂಗಾತಿಯ ಭಾವನೆಗಳಿಗೆ ಪರಿಗಣನೆ ತೋರಿಸಿರಿ. ರಾಹೇಲಳು ಆಕೆಯ ಬಂಜೆತನದ ಮೇಲೆ ಸಂಕಟವನ್ನು ವ್ಯಕ್ತಪಡಿಸಿದಾಗ ಮತ್ತು ಆಕೆಗೆ ಮಕ್ಕಳನ್ನು ಕೊಡುವಂತೆ ಯಾಕೋಬನನ್ನು ಕೇಳಿಕೊಂಡಾಗ, ಅವನು ಕೋಪದಿಂದ ಪ್ರತಿಕ್ರಿಯಿಸಿದ್ದು: “ದೇವರು ನಿನಗೆ ಮಕ್ಕಳನ್ನು ಕೊಡದೆ ಹೋದ ಮೇಲೆ ಕೊಡಲಿಕ್ಕೆ ನನ್ನಿಂದಾದೀತೋ?” (ಆದಿಕಾಂಡ 30:1, 2) ಗೃಹಕೃತ್ಯದ ತೊಂದರೆಗಳು ಏಳುವುದಾದರೆ, ಸಮಸ್ಯೆಯನ್ನು ಆಕ್ರಮಿಸಿರಿ, ವ್ಯಕ್ತಿಯನ್ನಲ್ಲ. ವ್ಯಕ್ತಿಗತ ಚರ್ಚೆಯೊಂದರ ಸಮಯದಲ್ಲಿ, “ದುಡುಕಿ ಮಾತಾಡು” ವುದನ್ನು ಯಾ ಅನಾವಶ್ಯಕವಾಗಿ ಒಬ್ಬರಿಗೆ ತಡೆ ಮಾಡುವುದನ್ನು ತೊರೆಯಿರಿ.—ಜ್ಞಾನೋಕ್ತಿ 12:18.
15 ನಿಮ್ಮ ದೃಷ್ಟಿಕೋನದ ಕುರಿತು ನಿಮಗೆ ಬಲವಾದ ಅನಿಸಿಕೆಗಳು ಇರಬಹುದು ನಿಜ, ಆದರೆ ಇವುಗಳನ್ನು “ದ್ವೇಷ ಕೋಪ ಕ್ರೋಧ ಕಲಹ ದೂಷಣೆ” ಗಳಿಲ್ಲದೆ ವ್ಯಕ್ತಪಡಿಸಸಾಧ್ಯವಿದೆ. (ಎಫೆಸ 4:31) “ನಿಮ್ಮ ಸಮಸ್ಯೆಗಳನ್ನು ಸಾಧಾರಣವಾದ ಸರ್ವದಲ್ಲಿ ಚರ್ಚಿಸಿರಿ,” ಎಂದು ಒಬ್ಬ ಗಂಡನು ಹೇಳುತ್ತಾನೆ. “ಸರ್ವವೊಂದು ಏರುವುದಾದರೆ, ನಿಲ್ಲಿಸಿ. ಅಲ್ಪಾವಧಿಯ ಬಳಿಕ ಹಿಂದಿರುಗಿರಿ. ಪುನಃ ಆರಂಭಿಸಿರಿ.” ಜ್ಞಾನೋಕ್ತಿ 17:14 ಈ ಒಳ್ಳೆಯ ಬುದ್ಧಿವಾದವನ್ನು ಕೊಡುತ್ತದೆ: “ಸಿಟ್ಟೇರುವದಕ್ಕೆ ಮುಂಚೆ ಜಗಳವನ್ನು ಬಿಟ್ಟುಬಿಡಿ.” ನೀವಿಬ್ಬರೂ ಶಾಂತವಾದ ಮೇಲೆ ವಿಷಯಗಳನ್ನು ಪುನಃ ಚರ್ಚಿಸಲು ಪ್ರಯತ್ನಿಸಿರಿ.
ಒಬ್ಬರಿಗೊಬ್ಬರು ನಂಬಿಗಸ್ತರಾಗಿ ಉಳಿಯಿರಿ
16. ವ್ಯಭಿಚಾರವು ಯಾಕೆ ಅಂತಹ ಗಂಭೀರ ವಿಷಯವಾಗಿದೆ?
16 ಇಬ್ರಿಯ 13:4 ಹೇಳುವುದು: “ದಾಂಪತ್ಯವು ಮಾನ್ಯವಾದದ್ದೆಂದು ಎಲ್ಲರೂ ಎಣಿಸಬೇಕು; ಗಂಡಹೆಂಡರ ಸಂಬಂಧವು ನಿಷ್ಕಲಂಕವಾಗಿರಬೇಕು. ಜಾರರಿಗೂ ವ್ಯಭಿಚಾರಿಗಳಿಗೂ ದೇವರು ನ್ಯಾಯತೀರಿಸುವನೆಂದು ತಿಳುಕೊಳ್ಳಿರಿ.” ವ್ಯಭಿಚಾರವು ದೇವರ ವಿರುದ್ಧ ಪಾಪವಾಗಿದೆ. ಅದು ಒಂದು ಮದುವೆಯನ್ನು ಕೂಡ ನಾಶಮಾಡುತ್ತದೆ. (ಆದಿಕಾಂಡ 39:9) ಒಬ್ಬಾಕೆ ಮದುವೆಯ ಸಲಹೆಗಾರ್ತಿ ಬರೆಯುವುದು: “ಒಮ್ಮೆ ಅದನ್ನು ಕಂಡುಹಿಡಿದ ಅನಂತರ, ವ್ಯಭಿಚಾರವು ಇಡೀ ಕುಟುಂಬವನ್ನು ಒಂದು ಮಹತ್ತರವಾದ ಚಂಡಮಾರುತದಂತೆ—ಮನೆವಾರ್ತೆಗಳನ್ನು ನಾಶಮಾಡುತ್ತಾ, ಭರವಸೆ ಮತ್ತು ಸ್ವಗೌರವವನ್ನು ಧ್ವಂಸಮಾಡುತ್ತಾ, ಎಳೆಯರಿಗೆ ಹಾನಿಯನ್ನುಂಟುಮಾಡುತ್ತಾ—ಅಪ್ಪಳಿಸುತ್ತದೆ.” ಗರ್ಭಧಾರಣೆ ಯಾ ರತಿ ರವಾನಿತ ರೋಗವೊಂದು ಕೂಡ ಫಲಿಸಬಹುದು.
17. ವ್ಯಭಿಚಾರಾತ್ಮಕ ಒಲವುಗಳು ಹೇಗೆ ತೊರೆಯಲ್ಪಡಬಲ್ಲವು ಯಾ ತಿರಸ್ಕರಿಸಲ್ಪಡಬಲ್ಲವು?
17 ಪುಸ್ತಕಗಳಲ್ಲಿ, ಟೆಲಿವಿಷನ್ನಲ್ಲಿ, ಮತ್ತು ಚಿತ್ರಗಳಲ್ಲಿ ಚಿತ್ರಿಸಲ್ಪಟ್ಟಂತೆ ಕಾಮದ ಕುರಿತು ಲೋಕದ ಭ್ರಷ್ಟಗೊಂಡ ದೃಷ್ಟಿಕೋನವನ್ನು ಹೀರಿಕೊಳ್ಳುವ ಮೂಲಕ ಕೆಲವು ಜನರು ವ್ಯಭಿಚಾರಾತ್ಮಕ ಒಲವುಗಳನ್ನು ಪೋಷಿಸುತ್ತಾರೆ. (ಗಲಾತ್ಯ 6:8) ವ್ಯಭಿಚಾರವಾದರೊ ಸಾಮಾನ್ಯವಾಗಿ ಕೇವಲ ಕಾಮದ ಅಭಿಲಾಷೆಯಿಂದಲ್ಲ, ವ್ಯಕ್ತಿಯು ಇನ್ನೂ ಆಕರ್ಷಕನಾಗಿದ್ದಾನೆ ಎಂಬುದನ್ನು ರುಜುಪಡಿಸಲಿರುವ ಗ್ರಾಹ್ಯ ಬಯಕೆಯಿಂದ ಅಥವಾ ಹೆಚ್ಚು ಪ್ರೀತಿಸಲ್ಪಡುವ ಅಭಿಲಾಷೆಯಿಂದ ಪರಿಣಮಿಸುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. (ಹೋಲಿಸಿ ಜ್ಞಾನೋಕ್ತಿ 7:18.) ಕಾರಣವು ಏನೇ ಆಗಿರಲಿ, ಕ್ರೈಸ್ತನೊಬ್ಬನು ಅನೈತಿಕ ಭ್ರಮೆಗಳನ್ನು ತಿರಸ್ಕರಿಸಬೇಕು. ನಿಮ್ಮ ಅನಿಸಿಕೆಗಳನ್ನು ನಿಮ್ಮ ಸಂಗಾತಿಯೊಂದಿಗೆ ಪ್ರಾಮಾಣಿಕವಾಗಿ ಚರ್ಚಿಸಿರಿ. ಅಗತ್ಯವಿದ್ದಲ್ಲಿ, ಸಭಾ ಹಿರಿಯರಿಂದ ಸಹಾಯವನ್ನು ಹುಡುಕಿರಿ. ಹಾಗೆ ಮಾಡುವುದು ಪಾಪದಲ್ಲಿ ಬೀಳುವುದನ್ನು ತಡೆಯಬಹುದು. ಇನ್ನೂ ಹೆಚ್ಚಾಗಿ, ವಿರುದ್ಧ ಲಿಂಗದ ಸದಸ್ಯರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರುವ ಅಗತ್ಯ ಕ್ರೈಸ್ತರಿಗಿದೆ. ಒಬ್ಬ ವ್ಯಕ್ತಿಯೊಂದಿಗೆ ಮದುವೆಯಾಗಿದ್ದು ಆದರೆ ಇನ್ನೊಬ್ಬನನ್ನು ಕಾಮೋದ್ರೇಕದಿಂದ ಕಾಣುವುದು ಶಾಸ್ತ್ರೀಯ ತತ್ವಗಳಿಗೆ ವಿರುದ್ಧವಾಗಿರುವುದು. (ಯೋಬ 31:1; ಮತ್ತಾಯ 5:28) ಕೆಲಸದ ಸಂಗಾತಿಗಳೊಂದಿಗೆ ಭಾವನಾತ್ಮಕ ಜೋಡಣೆಗಳನ್ನು ಬೆಳೆಸುವುದರ ಕುರಿತು ಕ್ರೈಸ್ತರು ವಿಶೇಷವಾಗಿ ಜಾಗರೂಕರಾಗಿರಬೇಕು. ಅಂತಹ ಸಂಬಂಧಗಳನ್ನು ಹೃತ್ಪೂರ್ವಕವಾದರೂ ವ್ಯವಹಾರೋಚಿತವಾಗಿಡಿರಿ.
18. ಮದುವೆಯಲ್ಲಿ ಲೈಂಗಿಕ ಸಮಸ್ಯೆಗಳ ಬುಡದಲ್ಲಿ ಅನೇಕ ವೇಳೆ ಇರುವುದೇನು, ಮತ್ತು ಅವುಗಳನ್ನು ಹೇಗೆ ಬಗೆಹರಿಸಸಾಧ್ಯವಿದೆ?
18 ಇನ್ನೂ ಹೆಚ್ಚಿನ ರಕ್ಷೆಯು, ಒಬ್ಬನ ಯಾ ಒಬ್ಬಾಕೆಯ ಸಂಗಾತಿಯೊಂದಿಗೆ ಅನುರಾಗದ, ತೆರೆದ ಸಂಬಂಧವಾಗಿದೆ. ಮದುವೆಯಲ್ಲಿ ಲೈಂಗಿಕ ಸಮಸ್ಯೆಗಳು ವಿರಳವಾಗಿ ಶಾರೀರಿಕ ಸ್ವರೂಪದವುಗಳಾಗಿವೆ ಆದರೆ ಸಾಮಾನ್ಯವಾಗಿ ನ್ಯೂನ ಸಂಸರ್ಗದ ಉಪ ಫಲಗಳಾಗಿವೆ ಎಂದು ಅನೇಕ ಸಂಶೋಧಕರು ಹೇಳುತ್ತಾರೆ. ದಂಪತಿಗಳು ಮುಚ್ಚುಮರೆಯಿಲ್ಲದೆ ಸಂಸರ್ಗ ಮಾಡುವಾಗ ಮತ್ತು ಮದುವೆಯಲ್ಲಿ ಸಲ್ಲಿಸಬೇಕಾದುದನ್ನು ಒಂದು ಕರ್ತವ್ಯಕ್ಕಿಂತ ಪ್ರೀತಿಯ ಅಭಿವ್ಯಕ್ತಿಯೋಪಾದಿಯಲ್ಲಿ ಸಲ್ಲಿಸುವುದಾದರೆ, ಈ ಸಂಬಂಧದಲ್ಲಿ ಸಮಸ್ಯೆಗಳು ವಿರಳ.a ಇಂತಹ ಯೋಗ್ಯ ಪರಿಸ್ಥಿತಿಗಳ ಕೆಳಗೆ, ಅನ್ಯೋನ್ಯ ಸಂಬಂಧಗಳು ಮದುವೆಯ ಬಂಧವನ್ನು ಬಲಗೊಳಿಸಲು ಕಾರ್ಯಮಾಡಬಲ್ಲವು.—1 ಕೊರಿಂಥ 7:2-5; 10:24.
19. ಯಾವುದು “ಐಕಮತ್ಯದ ಪರಿಪೂರ್ಣ ಬಂಧ” ವಾಗಿದೆ, ಮತ್ತು ಒಂದು ಮದುವೆಯ ಮೇಲೆ ಅದು ಯಾವ ಪರಿಣಾಮವನ್ನು ಬೀರಬಲ್ಲದು?
19 ಕ್ರೈಸ್ತ ಸಭೆಯೊಳಗೆ “ಐಕಮತ್ಯದ ಪರಿಪೂರ್ಣ ಬಂಧವು” ಪ್ರೀತಿಯಾಗಿದೆ. ಪ್ರೀತಿಯನ್ನು ಬೆಳೆಸಿಕೊಳ್ಳುವ ಮೂಲಕ, ದೇವ ಭಯವಿರುವ ವಿವಾಹಿತ ದಂಪತಿಗಳಿಬ್ಬರು ‘ಒಬ್ಬರನ್ನೊಬ್ಬರು ಸೈರಿಸಿಕೊಳ್ಳುವುದಕ್ಕೂ ಮತ್ತು ಉದಾರವಾಗಿ ಒಬ್ಬರನ್ನೊಬ್ಬರು ಕ್ಷಮಿಸುವುದಕ್ಕೂ’ ಶಕ್ತರಾಗಿದ್ದಾರೆ. (ಕೊಲೊಸ್ಸೆ 3:13, 14 NW) ತತ್ವಾಧಾರಿತ ಪ್ರೀತಿಯು ಇತರರ ಕ್ಷೇಮವನ್ನು ಬಯಸುತ್ತದೆ. (1 ಕೊರಿಂಥ 13:4-8) ಅಂತಹ ಪ್ರೀತಿಯನ್ನು ಬೆಳೆಸಿಕೊಳ್ಳಿ. ಅದು ನಿಮ್ಮ ಮದುವೆಯ ಬಂಧವನ್ನು ಬಲಗೊಳಿಸಲು ನಿಮಗೆ ಸಹಾಯ ಮಾಡುವುದು. ನಿಮ್ಮ ವಿವಾಹಿತ ಜೀವಿತದಲ್ಲಿ ಬೈಬಲ್ ತತ್ವಗಳನ್ನು ಅನ್ವಯಿಸಿರಿ. ನೀವು ಅದನ್ನು ಮಾಡುವುದಾದರೆ, ನಿಮ್ಮ ಮದುವೆಯು ಬಾಳುವ ಬಂಧವಾಗಿ ಪರಿಣಮಿಸುವುದು ಮತ್ತು ಯೆಹೋವ ದೇವರಿಗೆ ಸ್ತುತಿ ಮತ್ತು ಘನತೆಯನ್ನು ತರುವುದು.
[ಅಧ್ಯಯನ ಪ್ರಶ್ನೆಗಳು]
a ಆಗಸ್ಟ್ 1, 1993ರ ಕಾವಲಿನಬುರುಜು ಪತ್ರಿಕೆಯಲ್ಲಿ ಕಾಣಿಸಿಕೊಳ್ಳುವ, “ಸಂಸರ್ಗ—ಕೇವಲ ಮಾತುಕತೆಗಿಂತ ಹೆಚ್ಚಿನದು” ಎಂಬ ಲೇಖನವು, ಈ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ದಂಪತಿಗಳು ಹೇಗೆ ಜಯಿಸಬಲ್ಲರು ಎಂಬುದನ್ನು ತೋರಿಸಿತು.
ನೀವು ಹೇಗೆ ಉತ್ತರಿಸುವಿರಿ?
▫ ಮದುವೆಯು ಯಾಕೆ ಶಾಶ್ವತವಾದ ಬಂಧವಾಗಿರಬೇಕು?
▫ ತಲೆತನ ಮತ್ತು ಅಧೀನತೆಯ ಕುರಿತು ಬೈಬಲಿನ ದೃಷ್ಟಿಕೋನವೇನು?
▫ ವಿವಾಹಿತ ದಂಪತಿಗಳು ಸಂಸರ್ಗವನ್ನು ಹೇಗೆ ಉತ್ತಮಗೊಳಿಸಬಲ್ಲರು?
▫ ಭಿನ್ನಾಭಿಪ್ರಾಯಗಳನ್ನು ದಂಪತಿಗಳು ಕ್ರಿಸ್ತೀಯ ವಿಧಾನದಲ್ಲಿ ಹೇಗೆ ನಿರ್ವಹಿಸಬಲ್ಲರು?
▫ ಮದುವೆಯ ಬಂಧವನ್ನು ಬಲಗೊಳಿಸಲು ಯಾವುದು ಸಹಾಯಮಾಡುವುದು?
[ಪುಟ 12 ರಲ್ಲಿರುವ ಚಿತ್ರ]
ತನ್ನ ಹೆಂಡತಿಯು ಐಹಿಕವಾಗಿ ಕೆಲಸಮಾಡಲೇ ಬೇಕಾಗುವಲ್ಲಿ, ಅವಳು ಮಿತಿಮೀರಿ ಹೊರೆಹೇರುವಂತೆ ಒಬ್ಬ ಕ್ರೈಸ್ತ ಗಂಡನು ಅನುಮತಿಸಲಾರನು