ಭಿನ್ನತೆಗಳನ್ನು ನೀವು ಹೇಗೆ ಬಗೆಹರಿಸುತ್ತೀರಿ?
ಒಡ್ಡೊಡ್ಡಾದ ಒಂದು ಚಲನೆ—ಮತ್ತು ಹಲಗೆಯಿಂದ ಐದು ಪಿಂಗಾಣಿ ಆನೆಗಳ ಸಾಲಿನಲ್ಲಿ ಮೂರನೆಯದು ಕೆಳಗೆ ಬಿತ್ತು. ಆ ಪಿಂಗಾಣಿ ಆನೆಯನ್ನು ಪುನಃ ಭರ್ತಿ ಮಾಡಬೇಕು. ಇಲ್ಲವಾದರೆ, ಇಡೀ ತಂಡದ ಸಾಮರಸ್ಯವು ನಷ್ಟಗೊಳ್ಳುವುದು. ಆದರೆ, ಪ್ರಕ್ರಿಯೆಯು ಸೂಕ್ಷ್ಮವಾದದ್ದು, ಮತ್ತು ನೀವು ಅರ್ಹರೆಂದು ನಿಮಗನಿಸುವುದಿಲ್ಲ. ನಿಮಗೆ ಸಲಹೆಯನ್ನು ಕೇಳಬೇಕಾಗಬಹುದು ಯಾ ಕೆಲಸವನ್ನು ಮಾಡುವಂತೆ ಒಬ್ಬ ನಿಪುಣನನ್ನು ಕೂಡ ಕೇಳಬೇಕಾಗಬಹುದು.
ಆತ್ಮಿಕ ಸಹೋದರರ ಮತ್ತು ಸಹೋದರಿಯರ ನಡುವೆ ಸಾಮರಸ್ಯವು, ಬರಿಯ ಆಭರಣಗಳಿಗಿಂತ ಅತಿ ಹೆಚ್ಚು ಅಮೂಲ್ಯವಾದದ್ದು. ಕೀರ್ತನೆಗಾರನು ಸೂಕ್ತವಾಗಿಯೇ ಹಾಡಿದ್ದು: “ಆಹಾ, ಸಹೋದರರು ಒಂದಾಗಿರುವದು ಎಷ್ಟೋ ಒಳ್ಳೇದು, ಎಷ್ಟೋ ರಮ್ಯವಾದದ್ದು!” (ಕೀರ್ತನೆ 133:1) ಜೊತೆ ಕ್ರೈಸ್ತನೊಂದಿಗೆ ಒಂದು ಭಿನ್ನತೆಯನ್ನು ಬಗೆಹರಿಸುವುದು ಕೆಲವೊಮ್ಮೆ ಒಂದು ಸೂಕ್ಷ್ಮವಾದ ವಿಷಯವಾಗಿರಬಲ್ಲದು. ಅಲ್ಲದೆ, ಕೆಲವರು ಇದನ್ನು ಸರಿಯಾದ ರೀತಿಯಲ್ಲಿ ಮಾಡುವುದಿಲ್ಲ. ಅನೇಕ ವೇಳೆ “ಪುನಃಸ್ಥಾಪನೆಯು” ಅನಾವಶ್ಯಕವಾಗಿ ವೇದನಾಮಯವಾಗಿರುತ್ತದೆ ಇಲ್ಲವೆ ಹೇಯವಾದ ದರ್ಶಕ ಗುರುತುಗಳನ್ನು ಶೇಷವಾಗಿ ಬಿಡುತ್ತಾ, ಹೆಚ್ಚು ಉತ್ತಮವಾಗಿರುವುದಿಲ್ಲ.
ಕೆಲವು ಕ್ರೈಸ್ತರು ಸ್ವತಃ ತಾವೇ ನಿರ್ವಹಿಸಬಹುದಾದ ವಿಷಯಗಳಲ್ಲಿ ನೇಮಿತ ಹಿರಿಯರನ್ನು ಅನಾವಶ್ಯಕವಾಗಿ ಒಳಪಡಿಸಲು ನೋಡುತ್ತಾರೆ. ಏನನ್ನು ಮಾಡಬೇಕೆಂಬುದರ ಕುರಿತು ಅವರು ನಿಶ್ಚಿತರಾಗಿರದಿರುವಲ್ಲಿ ವಿಷಯವು ಹಾಗಿರಬಹುದು. “ತಮ್ಮ ಭಿನ್ನತೆಗಳನ್ನು ಬಗೆಹರಿಸಲು ಬೈಬಲ್ ಸಲಹೆಯನ್ನು ಹೇಗೆ ಅನ್ವಯಿಸಬೇಕೆಂದು ನಮ್ಮ ಅನೇಕ ಸಹೋದರರಿಗೆ ಗೊತ್ತಿರುವುದಿಲ್ಲ,” ಎಂದು ಬೈಬಲ್ ಸಲಹೆಯನ್ನು ಕೊಡುವುದರಲ್ಲಿ ಅನುಭವಸ್ಥರಾದ ಒಬ್ಬ ಸಹೋದರರು ಹೇಳಿಕೆ ನೀಡಿದರು. “ಅನೇಕ ವೇಳೆ,” ಅವರು ಮುಂದುವರಿಸಿದ್ದು, “ವಿಷಯಗಳನ್ನು ಮಾಡುವುದರಲ್ಲಿ ಯೇಸುವಿನ ರೀತಿಯನ್ನು ಅವರು ಅನುಸರಿಸುವುದಿಲ್ಲ.” ಆದುದರಿಂದ, ಒಬ್ಬ ಕ್ರೈಸ್ತನು ತನ್ನ ಸಹೋದರನೊಂದಿಗೆ ಭಿನ್ನತೆಗಳನ್ನು ಹೇಗೆ ಬಗೆಹರಿಸಬೇಕೆಂಬುದರ ಕುರಿತು ಯೇಸು ನಿಜವಾಗಿಯೂ ಏನನ್ನು ಹೇಳಿದನು? ಈ ಸಲಹೆಯೊಂದಿಗೆ ಚಿರಪರಿಚಿತರಾಗುವುದು ಮತ್ತು ಅದನ್ನು ಅನ್ವಯಿಸುವುದು ಹೇಗೆಂದು ಕಲಿಯುವುದು ಯಾಕೆ ಪ್ರಾಮುಖ್ಯವಾಗಿದೆ?
ಅಲ್ಪ ಭಿನ್ನತೆಗಳು
“ಆದಕಾರಣ ನೀನು ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಹತ್ತರಕ್ಕೆ ತಂದಾಗ ನಿನ್ನ ಸಹೋದರನ ಮನಸ್ಸಿನಲ್ಲಿ ನಿನ್ನ ಮೇಲೆ ಏನೋ ವಿರೋಧವದೆ ಎಂಬದು ನಿನ್ನ ನೆನಪಿಗೆ ಬಂದರೆ, ನಿನ್ನ ಕಾಣಿಕೆಯನ್ನು ಆ ಯಜ್ಞವೇದಿಯ ಮುಂದೆಯೇ ಬಿಟ್ಟುಹೋಗಿ ಮೊದಲು ನಿನ್ನ ಸಹೋದರನ ಸಂಗಡ ಒಂದಾಗು; ಆ ಮೇಲೆ ಬಂದು ನಿನ್ನ ಕಾಣಿಕೆಯನ್ನು ಕೊಡು.”—ಮತ್ತಾಯ 5:23, 24.
ಯೇಸು ಆ ಮಾತುಗಳನ್ನು ಆಡಿದಾಗ, ಯೆಹೂದ್ಯರು ವಾಡಿಕೆಯಂತೆ ಯೆರೂಸಲೇಮಿನ ದೇವಾಲಯದ ವೇದಿಕೆಯಲ್ಲಿ ಬಲಿಗಳನ್ನು ಅರ್ಪಿಸಿದರು, ಯಾ ಕೊಡುಗೆಗಳನ್ನು ಸಾದರಪಡಿಸಿದರು. ಒಬ್ಬ ಜೊತೆ ಇಸ್ರಾಯೇಲ್ಯನ ವಿರುದ್ಧ ಯೆಹೂದ್ಯನೊಬ್ಬನು ತಪ್ಪು ಮಾಡಿರುವಲ್ಲಿ, ತಪ್ಪು ಮಾಡಿದವನು ಸರ್ವಾಂಗಹೋಮವನ್ನು ಇಲ್ಲವೆ ಒಂದು ಪ್ರಾಯಶ್ಚಿತ್ತ ಯಜ್ಞವನ್ನು ನೀಡಬಹುದಿತ್ತು. ಯೇಸು ತಿಳಿಸಿದ ಉದಾಹರಣೆಯು ಅತ್ಯಂತ ಸಂದಿಗ್ಧ ಬಿಂದುವಿನಲ್ಲಿ ಬರುತ್ತದೆ. ವ್ಯಕ್ತಿಯು ವೇದಿಯ ಬಳಿಯಲ್ಲಿದ್ದು ದೇವರಿಗೆ ತನ್ನ ಕೊಡುಗೆಯನ್ನು ನೀಡಲು ಸಿದ್ಧನಾಗಿರುವಾಗ, ತನ್ನ ವಿರುದ್ಧ ಅವನ ಸಹೋದರನಿಗೆ ಏನೋ ಇದೆಯೆಂದು ಅವನು ಜ್ಞಾಪಿಸಿಕೊಳ್ಳುತ್ತಾನೆ. ಹೌದು, ಇಂತಹ ಒಂದು ಧಾರ್ಮಿಕ ಕರ್ತವ್ಯವನ್ನು ಮಾಡುವುದರ ಮೇಲೆ ತನ್ನ ಸಹೋದರನೊಂದಿಗೆ ಸಮಾಧಾನ ಮಾಡಿಕೊಳ್ಳುವುದು ಆದ್ಯತೆಯನ್ನು ತೆಗೆದುಕೊಳ್ಳಬೇಕೆಂದು ಇಸ್ರಾಯೇಲ್ಯನು ತಿಳಿಯುವ ಅಗತ್ಯವಿತ್ತು.
ಇಂತಹ ಅರ್ಪಣೆಗಳು ಮೋಶೆಯ ಧರ್ಮಶಾಸ್ತ್ರದ ಆವಶ್ಯಕತೆಯಾಗಿದ್ದರೂ, ಅವು ತಮ್ಮಲ್ಲಿಯೇ ಯೆಹೋವನ ದೃಷ್ಟಿಯಲ್ಲಿ ಅತಿ ದೊಡ್ಡ ಮೌಲ್ಯವನ್ನು ಹೊಂದಿರಲಿಲ್ಲ. ಅವಿಶ್ವಾಸಿಯಾದ ರಾಜ ಸೌಲನಿಗೆ ಪ್ರವಾದಿಯಾದ ಸಮುವೇಲನು ಹೇಳಿದ್ದು: “ಯೆಹೋವನು ವಿಧೇಯತ್ವಕ್ಕೆ ಮೆಚ್ಚುವಷ್ಟು ಯಜ್ಞಹೋಮಗಳಿಗೆ ಮೆಚ್ಚುತ್ತಾನೋ? ಯಜ್ಞವನ್ನರ್ಪಿಸುವದಕ್ಕಿಂತ ಮಾತುಕೇಳುವದು ಉತ್ತಮವಾಗಿದೆ; ಟಗರುಗಳ ಕೊಬ್ಬಿಗಿಂತ ವಿಧೇಯತ್ವವು ವಿಶೇಷವಾಗಿದೆ.”—1 ಸಮುವೇಲ 15:22.
ತನ್ನ ಪರ್ವತ ಪ್ರಸಂಗದಲ್ಲಿ ಯೇಸು ಆದ್ಯತೆಯ ಈ ಕ್ರಮವನ್ನು ಪುನರಾವೃತ್ತಿಸಿದನು ಮತ್ತು ತಮ್ಮ ಅರ್ಪಣೆಗಳನ್ನು ಮಾಡುವ ಮೊದಲು ತಮ್ಮ ಭಿನ್ನತೆಗಳನ್ನು ಅವರು ಬಗೆಹರಿಸಬೇಕೆಂದು ತನ್ನ ಶಿಷ್ಯರಿಗೆ ತೋರಿಸಿದನು. ಇಂದು, ಕ್ರೈಸ್ತರಿಂದ ಕೇಳಿಕೊಳ್ಳಲ್ಪಡುವ ಅರ್ಪಣೆಗಳು ಆತ್ಮಿಕ ಸ್ವರೂಪದ್ದು—“ಸ್ತೊತ್ರಯಜ್ಞವನ್ನು . . . ಆತನು ಕರ್ತನೆಂದು ಬಾಯಿಂದ ಪ್ರತಿಜ್ಞೆಮಾಡುವದೇ ನಾವು ಅರ್ಪಿಸುವ ಯಜ್ಞವಾಗಿದೆ.” (ಇಬ್ರಿಯ 13:15) ಆದರೂ, ಆ ಮೂಲತತ್ವವು ನ್ಯಾಯಸಮ್ಮತವಾಗಿ ಉಳಿಯುತ್ತದೆ. ತದ್ರೀತಿಯಲ್ಲಿ ಒಬ್ಬನು ತನ್ನ ಸಹೋದರನನ್ನು ದ್ವೇಷಿಸುವುದಾದರೆ ತಾನು ದೇವರನ್ನು ಪ್ರೀತಿಸುತ್ತೇನೆಂದು ಹೇಳಿಕೊಳ್ಳುವುದು ವ್ಯರ್ಥವಾಗಿರುವುದೆಂದು ಅಪೊಸ್ತಲ ಯೋಹಾನನು ತೋರಿಸುತ್ತಾನೆ.—1 ಯೋಹಾನ 4:20, 21.
ಸ್ವಾರಸ್ಯಕರವಾಗಿ, ತನ್ನ ಸಹೋದರನಿಗೆ ತನ್ನ ವಿರುದ್ಧ ಏನೋ ಇದೆಯೆಂದು ಜ್ಞಾಪಿಸಿಕೊಳ್ಳುವ ವ್ಯಕ್ತಿ ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳಬೇಕು. ಹೀಗೆ ಅವನು ಪ್ರದರ್ಶಿಸುವ ದೀನತೆಯು ಪ್ರಾಯಶಃ ಒಳ್ಳೆಯ ಫಲಿತಾಂಶಗಳನ್ನು ಉತ್ಪಾದಿಸುವುದು. ಬಹುಶಃ ಅವನ ಸ್ವಂತ ತಪ್ಪುಗಳನ್ನು ಅಂಗೀಕರಿಸುತ್ತಾ ಅವನ ಕಡೆಗೆ ಬರುವವನೊಂದಿಗೆ ಮನನೋಯಿಸಲ್ಪಟ್ಟ ವ್ಯಕ್ತಿಯು ಸಹಕರಿಸಲು ನಿರಾಕರಿಸನು. ತಪ್ಪಾಗಿ ತೆಗೆದುಕೊಳ್ಳಲ್ಪಟ್ಟ ಯಾವುದೇ ವಿಷಯವು ಪೂರ್ತಿಯಾಗಿ ಪುನಃಭರ್ತಿ ಮಾಡಲ್ಪಡಬೇಕಲ್ಲದೆ ಐದನೆಯ ಒಂದು ಪಾಲನ್ನು ಹೆಚ್ಚಾಗಿ ಅದಕ್ಕೆ ಕೂಡಿಸಬೇಕೆಂದು ಮೋಶೆಯ ಧರ್ಮಶಾಸ್ತ್ರವು ನಿಗದಿಪಡಿಸಿತು. (ಯಾಜಕಕಾಂಡ 6:5) ತಪ್ಪು ಮಾಡಿದವನು ಪದದ ಅತಿ ನಿಷ್ಕೃಷ್ಟ ಅರ್ಥದಲ್ಲಿ, ಅವಶ್ಯವಿರುವುದಕ್ಕಿಂತ ಇನ್ನೂ ಹೆಚ್ಚಾಗಿ ಮಾಡಲು, ಅವನು ಉಂಟುಮಾಡಿರಬಹುದಾದ ಯಾವುದೇ ಹಾನಿಯನ್ನು ಸರಿಪಡಿಸಲು ತನ್ನ ಬಯಕೆಯನ್ನು ತೋರಿಸುವುದಾದರೆ, ಶಾಂತಿಭರಿತ, ಸಮರಸವಾದ ಸಂಬಂಧಗಳು ಅಂತೆಯೇ ಸರಳ ಮಾಡಲ್ಪಡುವುವು.
ಹಾಗಿದ್ದರೂ, ಶಾಂತಿಭರಿತ ಸಂಬಂಧಗಳನ್ನು ಪುನಃಸ್ಥಾಪಿಸುವ ಪ್ರಯತ್ನಗಳು ಯಾವಾಗಲೂ ಯಶಸ್ವಿಕರವಾಗಿರುವುದಿಲ್ಲ. ಪ್ರತಿಕ್ರಿಯಿಸುವುದು ಕಷ್ಟವೆಂದು ಕಂಡುಕೊಳ್ಳುವ ವ್ಯಕ್ತಿಯೊಂದಿಗೆ ಭಿನ್ನತೆಗಳನ್ನು ಬಗೆಹರಿಸುವುದು ಕಠಿನವಾಗಿದೆ ಎಂದು ಜ್ಞಾನೋಕ್ತಿಗಳ ಪುಸ್ತಕವು ನಮಗೆ ಜ್ಞಾಪಕ ಹುಟ್ಟಿಸುತ್ತದೆ. ಜ್ಞಾನೋಕ್ತಿ 18:19 ಹೇಳುವುದು: “ಅನ್ಯಾಯಹೊಂದಿದ ಸಹೋದರನು ಬಲವಾದ ಪಟ್ಟಣಕ್ಕಿಂತಲೂ ಅಸಾಧ್ಯ; ಕೋಟೆಯ ಅಗುಳಿಗಳಂತೆ ಜಗಳಗಳು ಜನರನ್ನು ಅಗಲಿಸುತ್ತವೆ.” ಮತ್ತೊಂದು ಭಾಷಾಂತರ ಓದುವುದು: “ಮನನೋಯಿಸಲ್ಪಟ್ಟ ಸಹೋದರನು ಬಲವಾದ ಪಟ್ಟಣವನ್ನು ಜಯಿಸುವುದಕ್ಕಿಂತ ಕಠಿನನು: ಮತ್ತು ಅವರ ಕಲಹಗಳು ಅರಮನೆಯ ಅಗುಳಿಗಳಂತಿವೆ.” (ದ ಇಂಗ್ಲಿಷ್ಮ್ಯಾನ್ಸ್ ಬೈಬಲ್) ಹಾಗಿದ್ದರೂ ಕಟ್ಟಕಡೆಗೆ, ಎಲ್ಲ ವಿಷಯಗಳಲ್ಲಿ ದೇವರನ್ನು ಮೆಚ್ಚಿಸಲು ಇಷ್ಟಪಡುವ ಜೊತೆ ವಿಶ್ವಾಸಿಗಳ ಸಂಬಂಧದಲ್ಲಿ, ಪ್ರಾಮಾಣಿಕ ಹಾಗೂ ದೀನ ಪ್ರಯತ್ನಗಳು ಬಹುಶಃ ಸಫಲವಾಗುವುವು. ಆದರೆ ಘೋರ ಪಾಪವು ಆಪಾದಿಸಲ್ಪಟ್ಟಲ್ಲಿ, ಮತ್ತಾಯ 18 ನೆಯ ಅಧ್ಯಾಯದಲ್ಲಿ ದಾಖಲಿಸಲಾದ ಯೇಸುವಿನ ಸಲಹೆಯನ್ನು ಅನ್ವಯಿಸುವ ಅಗತ್ಯವಿರುತ್ತದೆ.
ಗಂಭೀರ ಭಿನ್ನತೆಗಳನ್ನು ಬಗೆಹರಿಸುವುದು
“ಇದಲ್ಲದೆ ನಿನ್ನ ಸಹೋದರನು ತಪ್ಪುಮಾಡಿದರೆ ನೀನು ಹೋಗಿ ಅವನ ತಪ್ಪನ್ನು ನಿನ್ನ ಮತ್ತು ಅವನ ಮಧ್ಯದಲ್ಲಿ ಮಾತ್ರ ಬಯಲು ಮಾಡು. ಅವನು ನಿನ್ನ ಮಾತನ್ನು ಕೇಳಿದರೆ ನೀನು ನಿನ್ನ ಸಹೋದರನನ್ನು ಸಂಪಾದಿಸಿಕೊಂಡಿದ್ದೀ. ಆದರೆ ಅವನು ಕೇಳದೆಹೋದರೆ ಎರಡು ಅಥವಾ ಮೂರು ಸಾಕ್ಷಿಗಳ ಬಾಯಿಂದ ಪ್ರತಿಯೊಂದು ಮಾತು ಸ್ಥಾಪನೆಯಾಗುವ ಹಾಗೆ ಇನ್ನೂ ಒಬ್ಬರನ್ನೋ ಇಬ್ಬರನ್ನೋ ನಿನ್ನ ಸಂಗಡ ಕರೆದುಕೊಂಡುಹೋಗು. ಅವನು ಅವರ ಮಾತನ್ನು ಕೇಳದೆ ಹೋದರೆ ಸಭೆಗೆ ಹೇಳು; ಆದರೆ ಸಭೆಯ ಮಾತನ್ನೂ ಕೇಳದೆ ಹೋದರೆ ಅವನು ನಿನಗೆ ಜನಾಂಗಗಳ ಮನುಷ್ಯನಂತೆ ಮತ್ತು ತೆರಿಗೆ ವಸೂಲಿಮಾಡುವವನಂತೆ ಇರಲಿ.”—ಮತ್ತಾಯ 18:15-17 NW.
ಒಬ್ಬ ಯೆಹೂದ್ಯನು (ಅಥವಾ ತದನಂತರ, ಒಬ್ಬ ಕ್ರೈಸ್ತನು) ಯೆಹೋವನ ಜೊತೆ ಆರಾಧಕನೊಂದಿಗೆ ಗಂಭೀರ ತೊಂದರೆಗಳನ್ನು ಎದುರಿಸುವುದಾದರೆ ಆಗೇನು? ತನ್ನ ವಿರುದ್ಧ ಪಾಪಗೈಯಲ್ಪಟ್ಟಿದೆ ಎಂದು ಯೋಚಿಸುವವನು ಪ್ರಥಮ ಹೆಜ್ಜೆಯನ್ನು ತೆಗೆದುಕೊಳ್ಳಬೇಕಿತ್ತು. ತಪ್ಪುಮಾಡಿದವನೊಂದಿಗೆ ಏಕಾಂತದಲ್ಲಿ ಅವನು ವಿಷಯಗಳನ್ನು ಚರ್ಚಿಸಬೇಕಿತ್ತು. ಸನ್ನಿವೇಶದ ತನ್ನ ಪಕ್ಕಕ್ಕೆ ಬೆಂಬಲವನ್ನು ಸೇರಿಸಲು ಪ್ರಯತ್ನಿಸದಿರುವುದರಿಂದ, ವಿಶೇಷವಾಗಿ ಕ್ಷಿಪ್ರವಾಗಿ ಸೃಷ್ಟಗೊಳಿಸಲ್ಪಡಬಹುದಾಗಿದ್ದ ತಪ್ಪೆಣಿಕೆ ಮಾತ್ರ ಇದ್ದಿದ್ದರೆ, ತನ್ನ ಸಹೋದರನನ್ನು ಅವನು ನಿಶ್ಚಯವಾಗಿಯೂ ಸಂಪಾದಿಸುವ ಸಾಧ್ಯತೆಯು ಹೆಚ್ಚು ಸಂಭವನೀಯ. ನೇರವಾಗಿ ಒಳಗೊಂಡವರು ಮಾತ್ರ ವಿಷಯದ ಕುರಿತು ಅರಿತವರಾಗಿರುವುದಾದರೆ, ಎಲ್ಲವೂ ಹೆಚ್ಚು ಸರಳವಾಗಿ ಬಗೆಹರಿಸಲ್ಪಡುವುದು.
ಹಾಗಿದ್ದರೂ, ಪ್ರಥಮ ಹೆಜ್ಜೆ ಸಾಕಾಗಲಾರದೆ ಇರಬಹುದು. ಅಂತಹ ಸನ್ನಿವೇಶವನ್ನು ನಿಭಾಯಿಸಲು, ಯೇಸು ಹೇಳಿದ್ದು: “ಇನ್ನೂ ಒಬ್ಬರನ್ನೋ ಇಬ್ಬರನ್ನೋ ನಿನ್ನ ಸಂಗಡ ಕರೆದುಕೊಂಡುಹೋಗು.” ಇವರು ಪ್ರತ್ಯಕ್ಷ ಸಾಕ್ಷಿಗಳಾಗಿರಸಾಧ್ಯವಿದೆ. ಇಬ್ಬರಲ್ಲಿ ಒಬ್ಬರು ಇನ್ನೊಬ್ಬನ ವಿರುದ್ಧ ಚಾಡಿಹೇಳುವುದನ್ನು ಅವರು ಬಹುಶಃ ಕೇಳಿದ್ದರು, ಯಾ ಜೊತೆಗೆ ಕರೆದುಕೊಂಡು ಹೋದವರು ಈಗ ಎರಡೂ ಪಕ್ಷಗಳು ಒಪ್ಪದಿರುವ ಒಂದು ಲಿಖಿತ ಒಪ್ಪಂದಕ್ಕೆ ಸಾಕ್ಷಿಗಳಾಗಿದ್ದಿರಬಹುದು. ಇನ್ನೊಂದು ಕಡೆಯಲ್ಲಿ, ಸಮಸ್ಯೆಗೆ ಕಾರಣವನ್ನು ಸ್ಥಾಪಿಸಲು ಯಾವುದೇ ಅಂಶಗಳು—ಲಿಖಿತ ಯಾ ಮೌಖಿಕ ಸಾಕ್ಷ್ಯಗಳು ವಿಕಸಿಸಲ್ಪಡುವಾಗ, ಜೊತೆಗೆ ಕರೆದುಕೊಂಡು ಹೋದವರು ಸಾಕ್ಷಿಗಳಾಗಬಹುದು. ಪುನಃ ಇಲ್ಲಿ, ಸಾಧ್ಯವಾದಷ್ಟು ಕಡಿಮೆ ಸಂಖ್ಯೆ—“ಒಬ್ಬಿಬ್ಬರು”—ಸಮಸ್ಯೆಯ ಕುರಿತು ತಿಳಿದಿರಬೇಕು. ವಿಷಯವು ಕೇವಲ ಒಂದು ತಪ್ಪೆಣಿಕೆ ಆಗಿದ್ದಲ್ಲಿ ವಿಷಯಗಳು ತೀರ ಕೆಡುವುದರಿಂದ ಇದು ತಡೆಯುವುದು.
ಮನನೋಯಿಸಲ್ಪಟ್ಟ ವ್ಯಕ್ತಿಗೆ ಯಾವ ಹೇತುಗಳಿರಬೇಕು? ತನ್ನ ಜೊತೆ ಕ್ರೈಸ್ತನನ್ನು ಅಪಮಾನಿಸಲು, ಅವನು ತನ್ನ ಕಾಲಿಗೆ ಬೀಳುವಂತೆ ಮಾಡಲು ಪ್ರಯತ್ನಿಸಬೇಕೊ? ಯೇಸುವಿನ ಸಲಹೆಯ ನೋಟದಲ್ಲಿ, ತಮ್ಮ ಸಹೋದರರನ್ನು ಖಂಡಿಸಲು ಕ್ರೈಸ್ತರು ತ್ವರಿತರಾಗಿರಬಾರದು. ತಪ್ಪುಮಾಡಿದವನು ತನ್ನ ತಪ್ಪನ್ನು ಗುರುತಿಸಿ, ಕ್ಷಮೆಯಾಚಿಸಿ, ವಿಷಯಗಳನ್ನು ಸರಿಪಡಿಸಲು ಪ್ರಯತ್ನಿಸುವುದಾದರೆ, ತನ್ನ ವಿರುದ್ಧ ಪಾಪಮಾಡಲ್ಪಟ್ಟ ವ್ಯಕ್ತಿಯು ‘ತನ್ನ ಸಹೋದರನನ್ನು ಸಂಪಾದಿಸಿರುವನು.’—ಮತ್ತಾಯ 18:15.
ವಿಷಯವನ್ನು ಬಗೆಹರಿಸಲು ಸಾಧ್ಯವಾಗಿರದಿದ್ದಲ್ಲಿ, ಅದನ್ನು ಸಭೆಗೆ ತಿಳಿಸಬೇಕಿತ್ತು. ಆರಂಭದಲ್ಲಿ, ಇದು ಯೆಹೂದ್ಯರ ಹಿರಿಯರನ್ನು ಆದರೆ ತದನಂತರ, ಕ್ರೈಸ್ತ ಸಭೆಯ ಹಿರಿಯರನ್ನು ಅರ್ಥೈಸಿತು. ಪಶ್ಚಾತಾಪ್ತಪಡದ ತಪ್ಪಿತಸ್ಥನನ್ನು ಸಭೆಯಿಂದ ಹೊರಗೆ ಹಾಕಬೇಕಾಗಬಹುದು. ಅವನನ್ನು “ಜನಾಂಗಗಳ ಮನುಷ್ಯನಂತೆ ಮತ್ತು ತೆರಿಗೆ ವಸೂಲಿಮಾಡುವವನಂತೆ”—ಯೆಹೂದ್ಯರು ತಮ್ಮಿಂದ ದೂರವಿಟ್ಟ ವ್ಯಕ್ತಿಗಳು—ಪರಿಗಣಿಸಬೇಕೆಂಬುದರ ಅರ್ಥವು ಇದೇ ಆಗಿತ್ತು. ಈ ಗಂಭೀರವಾದ ಹೆಜ್ಜೆಯನ್ನು ಯಾವುದೇ ಕ್ರೈಸ್ತನ ಮೂಲಕ ವೈಯಕ್ತಿಕವಾಗಿ ತೆಗೆದುಕೊಳ್ಳಲು ಸಾಧ್ಯವಿರಲಿಲ್ಲ. ಸಭೆಯನ್ನು ಪ್ರತಿನಿಧಿಸುವ ನೇಮಿತ ಹಿರಿಯರು ಮಾತ್ರ ಇಂತಹ ಕ್ರಿಯೆಯನ್ನು ತೆಗೆದುಕೊಳ್ಳುವ ಅಧಿಕಾರ ಪಡೆದಿದ್ದರು.—ಹೋಲಿಸಿ 1 ಕೊರಿಂಥ 5:13.
ಪಶ್ಚಾತಾಪ್ತಪಡದ ಒಬ್ಬ ತಪ್ಪಿತಸ್ಥನು ಬಹಿಷ್ಕರಿಸಲ್ಪಡುವುದರ ಸಾಧ್ಯತೆಯು, ಮತ್ತಾಯ 18:15-17 ಅಲ್ಪ ಭಿನ್ನತೆಗಳಿಗೆ ಅನ್ವಯಿಸುವುದಿಲ್ಲವೆಂಬುದನ್ನು ತೋರಿಸುತ್ತದೆ. ಯೇಸು ಗಂಭೀರ ತಪ್ಪುಗಳನ್ನು—ಆದರೂ ಸಂಬಂಧಪಟ್ಟ ಕೇವಲ ಎರಡು ವ್ಯಕ್ತಿಗಳ ನಡುವೆ ಬಗೆಹರಿಸಲ್ಪಡಬಹುದಾದ ರೀತಿಯ ತಪ್ಪುಗಳಿಗೆ—ಸೂಚಿಸುತ್ತಿದ್ದನು. ಉದಾಹರಣೆಗೆ ತಪ್ಪು, ಬಲಿಯಾದ ವ್ಯಕ್ತಿಯ ಸತ್ಕೀರ್ತಿಯನ್ನು ಗಂಭೀರವಾಗಿ ಪ್ರಭಾವಿಸುವ ಚಾಡಿಮಾತಾಗಿರಬಲ್ಲದು. ಅಥವಾ ಅದು ಆರ್ಥಿಕ ವಿಷಯಗಳಿಗೆ ಅನ್ವಯಿಸಬಲ್ಲದು, ಯಾಕೆಂದರೆ ಮುಂದಿನ ವಚನಗಳಲ್ಲಿ ಒಂದು ದೊಡ್ಡ ಸಾಲವು ಕ್ಷಮಿಸಲ್ಪಟ್ಟಿದ್ದ ನಿರ್ದಯಿ ಆಳಿನ ಕುರಿತಾದ ಯೇಸುವಿನ ದೃಷ್ಟಾಂತವು ಸೇರಿದೆ. (ಮತ್ತಾಯ 18:23-25) ಗೊತ್ತು ಮಾಡಿದ ಸಮಯದಲ್ಲಿ ಸಾಲವನ್ನು ಹಿಂದಿರುಗಿ ಕೊಡದೆ ಇರುವುದು ಇಬ್ಬರು ವ್ಯಕ್ತಿಗಳ ನಡುವೆ ಸುಲಭವಾಗಿ ಬಗೆಹರಿಸಲ್ಪಡಬಹುದಾದ ಕೇವಲ ಒಂದು ಕಣ್ಷಿಕ ತೊಂದರೆಯಾಗಿರಬಲ್ಲದು. ಆದರೆ ಸಾಲ ತೆಗೆದುಕೊಂಡವನು ಮೊಂಡನಾಗಿ ಸಲ್ಲತಕ್ಕದ್ದನ್ನು ಕೊಡಲು ನಿರಾಕರಿಸುವುದಾದರೆ, ಅದು ಗಂಭೀರವಾದ ಪಾಪ, ಅಂದರೆ ಕಳ್ಳತನವಾಗಬಲ್ಲದು.
ಇತರ ತಪ್ಪುಗಳನ್ನು ಸುಮ್ಮನೆ ಇಬ್ಬರು ಕ್ರೈಸ್ತರ ನಡುವೆ ಬಗೆಹರಿಸಲು ಸಾಧ್ಯವಿಲ್ಲ. ಮೋಶೆಯ ಧರ್ಮಶಾಸ್ತ್ರದ ಕೆಳಗೆ, ಗಂಭೀರ ಪಾಪಗಳನ್ನು ವರದಿಸಬೇಕಿತ್ತು. (ಯಾಜಕಕಾಂಡ 5:1; ಜ್ಞಾನೋಕ್ತಿ 29:24) ಅದೇ ರೀತಿಯಲ್ಲಿ, ಸಭೆಯ ಶುದ್ಧತೆಯನ್ನು ಒಳಗೊಳ್ಳುವ ಗಂಭೀರವಾದ ಪಾಪಗಳು ಕ್ರೈಸ್ತ ಹಿರಿಯರಿಗೆ ತಿಳಿಸಲ್ಪಡಬೇಕು.
ಹಾಗಿದ್ದರೂ, ಕ್ರೈಸ್ತರ ನಡುವೆ ಘರ್ಷಣೆಯ ಅನೇಕ ವಿದ್ಯಮಾನಗಳು ಈ ಕಾರ್ಯವಿಧಾನದ ಕೆಳಗೆ ಬರುವುದಿಲ್ಲ.
ನೀವು ಸುಮ್ಮನೆ ಕ್ಷಮಿಸಬಲ್ಲಿರೊ?
ಗಂಭೀರ ಭಿನ್ನತೆಗಳನ್ನು ಹೇಗೆ ಬಗೆಹರಿಸಬೇಕೆಂದು ವಿವರಿಸಿದ ಕೂಡಲೇ ಯೇಸು ಇನ್ನೊಂದು ಮುಖ್ಯವಾದ ಪಾಠವನ್ನು ಕಲಿಸಿದನು. ನಾವು ಓದುವುದು: “ಆಗ ಪೇತ್ರನು ಆತನ ಬಳಿಗೆ ಬಂದು—ಸ್ವಾಮೀ, ನನ್ನ ಸಹೋದರನು ನನಗೆ ತಪ್ಪುಮಾಡುತ್ತಾ ಬಂದರೆ ನಾನು ಎಷ್ಟು ಸಾರಿ ಅವನಿಗೆ ಕ್ಷಮಿಸಬೇಕು ಏಳು ಸಾರಿಯೋ ಎಂದು ಕೇಳಲು ಯೇಸು ಅವನಿಗೆ—ಏಳು ಸಾರಿ ಎಂದಲ್ಲ, ಏಳೆಪ್ಪತ್ತು ಸಾರಿ ಎಂದು ನಿನಗೆ ಹೇಳುತ್ತೇನೆ.” (ಮತ್ತಾಯ 18:21, 22) ಇನ್ನೊಂದು ಸಂದರ್ಭದಲ್ಲಿ, ಯೇಸು ತನ್ನ ಶಿಷ್ಯರಿಗೆ “ದಿನಕ್ಕೆ ಏಳು ಸಾರಿ” ಕ್ಷಮಿಸಬೇಕೆಂದು ಹೇಳಿದನು. (ಲೂಕ 17:3, 4) ಸ್ಪಷ್ಟವಾಗಿಗಿ ಹಾಗಾದರೆ, ಕ್ರಿಸ್ತನ ಹಿಂಬಾಲಕರು ಮುಕ್ತವಾಗಿ ಒಬ್ಬರನ್ನೊಬ್ಬರು ಕ್ಷಮಿಸುವ ಮೂಲಕ ಭಿನ್ನತೆಗಳನ್ನು ಬಗೆಹರಿಸುವಂತೆ ಕೇಳಿಕೊಳ್ಳಲ್ಪಡುತ್ತಾರೆ.
ಇದು ಗಣನೀಯವಾದ ಪ್ರಯತ್ನವನ್ನು ಕೇಳಿಕೊಳ್ಳುವ ಕ್ಷೇತ್ರವಾಗಿದೆ. “ಕೆಲವು ಸಹೋದರರಿಗೆ ಕ್ಷಮಿಸುವುದು ಹೇಗೆಂದು ತಿಳಿದಿರುವುದೇ ಇಲ್ಲ” ಎಂದು ಆರಂಭದಲ್ಲಿ ನಮೂದಿಸಲ್ಪಟ್ಟ ವ್ಯಕ್ತಿಯು ಹೇಳಿದನು. ಅವನು ಕೂಡಿಸಿದ್ದು: “ಕ್ರೈಸ್ತ ಸಭೆಯಲ್ಲಿ ಪ್ರಪ್ರಥಮವಾಗಿ ಶಾಂತಿಯನ್ನು ಕಾಪಾಡುವ ಸಲುವಾಗಿ, ಅವರು ಕ್ಷಮಿಸಲು ಆರಿಸಬಲ್ಲರೆಂದು ಯಾರಾದರು ವಿವರಿಸಿದಾಗ ಅವರು ಆಶ್ಚರ್ಯಗೊಳ್ಳುತ್ತಾರೆ.”
ಅಪೊಸ್ತಲ ಪೌಲನು ಬರೆದದ್ದು: “ಮತ್ತೊಬ್ಬನ ಮೇಲೆ ತಪ್ಪುಹೊರಿಸುವದಕ್ಕೆ ಕಾರಣವಿದ್ದರೂ ತಪ್ಪುಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ. ಕರ್ತನು (ಯೆಹೋವನು, NW) ನಿಮ್ಮನ್ನು ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ.” (ಕೊಲೊಸ್ಸೆ 3:13) ಆದುದರಿಂದ ನಮ್ಮ ವಿರುದ್ಧ ತಪ್ಪುಮಾಡಿರಬಹುದಾದ ಸಹೋದರನ ಬಳಿಗೆ ಹೋಗುವ ಮೊದಲು, ಮುಂದಿನ ಪ್ರಶ್ನೆಗಳ ಕುರಿತು ಚಿಂತಿಸುವುದು ಒಳ್ಳೆಯದಾಗಿರುವುದು: ತಪ್ಪು ಅದನ್ನು ಅವನೊಂದಿಗೆ ಮಾತಾಡುವಷ್ಟು ಯೋಗ್ಯವಾಗಿದೆಯೊ? ಕ್ರೈಸ್ತತ್ವದ ನಿಜ ಆತ್ಮದಲ್ಲಿ ಹಿಂದಿನ ಭಿನ್ನತೆಗಳನ್ನು ಮರೆಯುವುದು ನನಗೆ ನಿಜವಾಗಿಯೂ ಅಸಾಧ್ಯವೊ? ನಾನು ಅವನ ಸ್ಥಾನದಲ್ಲಿ ಇದ್ದಿದ್ದರೆ, ಕ್ಷಮಿಸಲ್ಪಡುವಂತೆ ನಾನು ಬಯಸುತ್ತಿರಲಿಲ್ಲವೊ? ಮತ್ತು ನಾನು ಕ್ಷಮಿಸಲು ಆರಿಸದಿದ್ದರೆ, ದೇವರು ನನ್ನ ಪ್ರಾರ್ಥನೆಗಳನ್ನು ಉತ್ತರಿಸಿ, ನನ್ನನ್ನು ಕ್ಷಮಿಸುವನೆಂದು ನಾನು ನಿರೀಕ್ಷಿಸಬಲ್ಲೆನೊ? (ಮತ್ತಾಯ 6:12, 14, 15) ಇಂತಹ ಪ್ರಶ್ನೆಗಳು ನಾವು ಕ್ಷಮಿಸುವವರಾಗಿರುವಂತೆ ಸಹಾಯ ಮಾಡಬಲ್ಲವು.
ಕ್ರೈಸ್ತರೋಪಾದಿ, ನಮ್ಮ ಪ್ರಾಮುಖ್ಯ ಜವಾಬ್ದಾರಿಗಳಲ್ಲಿ ಒಂದು ಯೆಹೋವನ ಜನರ ಸಭೆಯಲ್ಲಿ ಶಾಂತಿಯನ್ನು ಕಾಪಾಡುವುದಾಗಿದೆ. ಆದುದರಿಂದ, ನಾವು ಯೇಸುವಿನ ಸಲಹೆಯನ್ನು ಕಾರ್ಯರೂಪಕ್ಕೆ ಹಾಕೋಣ. ಮುಕ್ತವಾಗಿ ಕ್ಷಮಿಸುವಂತೆ ಇದು ನಮಗೆ ಸಹಾಯ ಮಾಡುವುದು. ಯೇಸುವಿನ ಶಿಷ್ಯರನ್ನು ಗುರುತಿಸುವ ಚಿಹ್ನೆಯಾಗಿರುವ ಸಹೋದರ ಪ್ರೀತಿಗೆ ಇಂತಹ ಕ್ಷಮಿಸುವ ಆತ್ಮವು ನೆರವು ನೀಡುವುದು.—ಯೋಹಾನ 13:34, 35.
[ಪುಟ 23 ರಲ್ಲಿರುವ ಚಿತ್ರ]
ಯೇಸುವಿನ ಸಲಹೆಯನ್ನು ಅನುಸರಿಸುವ ಮೂಲಕ ಕ್ರೈಸ್ತರು ತಮ್ಮ ಭಿನ್ನತೆಗಳನ್ನು ಬಗೆಹರಿಸಬಲ್ಲರು