ಹೊಂದಿಕೆಯನ್ನು ಕಾಪಾಡಿಕೊಳ್ಳುವುದು ಹಿರಿಯರ ಮತ್ತು ಶುಶ್ರೂಷಾ ಸೇವಕರ ನಡುವೆ
ಸಾ.ಶ. 33ರ ಪಂಚಾಶತ್ತಮದ ಅನಂತರ ಸ್ವಲ್ಪ ಸಮಯದಲ್ಲೆ, ಹೊಸದಾಗಿ ರಚಿತವಾದ ಕ್ರೈಸ್ತ ಸಭೆಯಲ್ಲಿ ಒಂದು ತುರ್ತು ಪರಿಸ್ಥಿತಿಯು ಎದಿತ್ದು. ಕೊರತೆಯುಳ್ಳ ವಿಧವೆಯರ ಆರೈಕೆಗಾಗಿ ಒಂದು ಏರ್ಪಾಡು ಸ್ಥಾಪಿಸಲ್ಪಟ್ಟಿತ್ತು. ಆದರೆ ಸ್ವಲ್ಪ ಸಮಯದ ತರುವಾಯ, “ಗ್ರೀಕ್ ಭಾಷೆಯವರು ಇಬ್ರಿಯ ಭಾಷೆಯವರ ಮೇಲೆ—ದಿನದಿನದ ಉಪಚಾರದಲ್ಲಿ ನಮ್ಮ ವಿಧವೆಯರನ್ನು ಸರಿಯಾಗಿ ಪರಾಂಬರಿಸುವದಿಲ್ಲವೆಂದು ಗುಣುಗುಟ್ಟಿದರು.”—ಅ. ಕೃತ್ಯಗಳು 6:1.
ಈ ದೂರುಗಳು ಅಪೊಸ್ತಲರ ಕಿವಿಗಳಿಗೆ ತಲಪಿದವು. “ಆಗ ಹನ್ನೆರಡು ಮಂದಿ ಅಪೊಸ್ತಲರು ಶಿಷ್ಯಮಂಡಲಿಯನ್ನು ಕೂಡಿಸಿ—ನಾವು ದೇವರ ವಾಕ್ಯೋಪದೇಶವನ್ನು ಬಿಟ್ಟು ಉಪಚಾರ ಮಾಡುತ್ತಿರುವದು ತಕ್ಕದ್ದಲ್ಲವಲ್ಲಾ; ಆದದರಿಂದ ಸಹೋದರರೇ, ಸಂಭಾವಿತರೂ ಪವಿತ್ರಾತ್ಮಭರಿತರೂ ಜ್ಞಾನಸಂಪನ್ನರೂ ಆಗಿರುವ ಏಳು ಮಂದಿಯನ್ನು ನಿಮ್ಮೊಳಗಿಂದ ನೋಡಿ ಆರಿಸಿಕೊಳ್ಳಿರಿ. ಅವರನ್ನು ಈ ಕೆಲಸದ ಮೇಲೆ ನೇಮಿಸುವೆವು.”—ಅ. ಕೃತ್ಯಗಳು 6:2, 3.
ಇದು ಕ್ರೈಸ್ತ ಸಭೆಯೊಳಗೆ ಸಂಘಟನೆಯ ಒಂದು ಮಹತ್ವದ ಮೂಲತತ್ವವನ್ನು ಉದಾಹರಿಸುತ್ತದೆ. ಕೆಲವು ಜವಾಬ್ದಾರಿ ಪುರುಷರು ದಿನನಿತ್ಯದ ಕೆಲಸಗಳನ್ನು ನೋಡಿಕೊಳ್ಳಲು ಉಪಯೋಗಿಸಲ್ಪಡುತ್ತಿದ್ದಾಗ, ಇತರರು ಭಾರವಾದ ಆತ್ಮಿಕ ಚಿಂತನೆಗಳನ್ನು ನೋಡಿಕೊಳ್ಳುತ್ತಿದ್ದರು. ಇದು ಪೂರ್ವನಿದರ್ಶನವಿಲ್ಲದ್ದಲ್ಲ. ಪುರಾತನ ಇಸ್ರಾಯೇಲಿನಲ್ಲಿ, ದೇವರಿಗೆ ಯಜ್ಞಗಳನ್ನು ಮಾಡುವುದಕ್ಕೆ ಯಾಜಕರಾಗಿ ಸೇವೆಮಾಡಲು ಆರೋನನು ಮತ್ತು ಅವನ ವಂಶಜರು ನೇಮಿಸಲ್ಪಟ್ಟಿದ್ದರು. ಆದರೂ, ಲೇವಿಯರು ‘ದೇವದರ್ಶನದ ಗುಡಾರದ ಎಲ್ಲಾ ಸಾಮಾನುಗಳನ್ನು ಕಾಯುವ’ ಮೂಲಕ ಯಾಜಕರಿಗೆ ಸಹಾಯ ಮಾಡುವಂತೆ ಯೆಹೋವನು ಮಾರ್ಗದರ್ಶಿಸಿದನು. (ಅರಣ್ಯಕಾಂಡ 3:5-10) ತದ್ರೀತಿಯಲ್ಲಿ, ಇಂದು ಮೇಲ್ವಿಚಾರಕರು ಶುಶ್ರೂಷಾ ಸೇವಕರುಗಳಿಂದ ಸಹಾಯ ಮಾಡಲ್ಪಡುತ್ತಾರೆ.
ಹಿರಿಯರ ಮತ್ತು ಶುಶ್ರೂಷಾ ಸೇವಕರ ಪಾತ್ರ
ಹಿರಿಯರಿಗೆ ಮತ್ತು ಶುಶ್ರೂಷಾ ಸೇವಕರಿಗೆ ಇಬ್ಬರಿಗೂ ಶಾಸ್ತ್ರಗ್ರಂಥವು ಉಚ್ಚ ಯೋಗ್ಯತೆಗಳನ್ನು ನಮೂದಿಸುತ್ತದೆ. (1 ತಿಮೊಥೆಯ 3:1-10, 12, 13; ತೀತ 1:6-9) ಅವರು ಪ್ರತಿಸ್ಪರ್ಧಿಗಳಲ್ಲ, ಬದಲಿಗೆ ಒಂದೇ ಗುರಿಗಾಗಿ ಕಾರ್ಯನಡಿಸುವವರು—ಅದು ಸಭೆಯನ್ನು ಕಟ್ಟಿ ಬಲಪಡಿಸುವುದಾಗಿದೆ. (ಹೋಲಿಸಿ ಎಫೆಸ 4:11-13.) ಆದಾಗ್ಯೂ, ಸಭೆಯಲ್ಲಿ ಅವರು ನಡಿಸುವ ಕೆಲಸದಲ್ಲಿ ಕೆಲವು ವ್ಯತ್ಯಾಸಗಳಿವೆ. ಮೇಲ್ವಿಚಾರಕರಿಗೆ 1 ಪೇತ್ರ 5:2ರಲ್ಲಿ ಹೇಳಲ್ಪಟ್ಟದ್ದು: “ನಿಮ್ಮಲ್ಲಿರುವ ದೇವರ ಮಂದೆಯನ್ನು ಕಾಯಿರಿ. ಬಲಾತ್ಕಾರದಿಂದಲ್ಲ ದೇವರ ಚಿತ್ತದ ಪ್ರಕಾರ ಇಷ್ಟಪೂರ್ವಕವಾಗಿಯೂ ನೀಚವಾದ ದ್ರವ್ಯಾಶೆಯಿಂದಲ್ಲ ಸಿದ್ಧಮನಸ್ಸಿನಿಂದಲೂ, ಮೇಲ್ವಿಚಾರಣೆಮಾಡಿರಿ.” ಈ ಪವಿತ್ರ ಹೊಣೆಯನ್ನು ಅವರು ಹೇಗೆ ನಿರ್ವಹಿಸುತ್ತಾರೆಂಬದಕ್ಕೆ ಅವರು ದೇವರಿಗೆ ಲೆಕ್ಕಕೊಡುತ್ತಾರೆ.—ಇಬ್ರಿಯ 13:17.
ಶುಶ್ರೂಷಾ ಸೇವಕರ ಕುರಿತೇನು? ತಮ್ಮ ಕಲಿಸುವ ಸಾಮರ್ಥ್ಯದಲ್ಲಿ ಅವರು ಅಷ್ಟೇ ಯೋಗ್ಯತೆಯುಳ್ಳವರಾಗಿರುವಂತೆ ಶಾಸ್ತ್ರಗ್ರಂಥವು ಆವಶ್ಯಪಡುವುದಿಲ್ಲ. ಅವರ ಕರ್ತವ್ಯಗಳು ಹಿರಿಯರ ಕೆಲಸಗಳಿಗಿಂತ ಸ್ವಲ್ಪಮಟ್ಟಿಗೆ ಬೇರೆಯಾಗಿದೆ. ಸಾ.ಶ. ಒಂದನೆಯ ಶತಮಾನದಲ್ಲಿ, ಗಮನದ ಆವಶ್ಯಕತೆ ಇದ್ದ ಒಂದು ಭೌತಿಕ ರೀತಿಯ, ದಿನಚರ್ಯೆಯ, ಮತ್ತು ಕೈಕಸಬಿನ ತೆರದ ಅನೇಕ ವಿಷಯಗಳಿದ್ದವೆಂಬದು ನಿಸ್ಸಂಶಯ, ಪ್ರಾಯಶಃ ಶಾಸ್ತ್ರವಚನಗಳ ಪ್ರತಿಯೆತ್ತುವುದಕ್ಕಾಗಿ ಸಾಮಗ್ರಿಗಳ ಖರೀದಿಸುವಿಕೆ ಅಥವಾ ಸ್ವತಃ ಪ್ರತಿಯೆತ್ತುವ ಕೆಲಸವು ಸಹ ಇದ್ದಿರಬಹುದು.
ಇಂದು ಶುಶ್ರೂಷಾ ಸೇವಕರು ಸಭೆಯೊಳಗೆ, ಸಭಾ ಅಕೌಂಟ್ಸ್ ಮತ್ತು ಟೆರಿಟೊರಿಗಳನ್ನು ನೋಡಿಕೊಳ್ಳುವುದು, ಪತ್ರಿಕೆಗಳನ್ನು ಮತ್ತು ಪುಸ್ತಕಗಳನ್ನು ಹಂಚುವುದು, ಮತ್ತು ರಾಜ್ಯ ಸಭಾಗೃಹವನ್ನು ದುರಸ್ತಿಯಲಿಡ್ಲುವುದು ಮುಂತಾದ ಹಲವಾರು ಮಹತ್ವದ ಕೆಲಸಗಳನ್ನು ನಿರ್ವಹಿಸುವುದನ್ನು ಮುಂದರಿಸುತ್ತಾರೆ. ಸಾಮರ್ಥ್ಯ ಹೊಂದಿರುವ ಕೆಲವು ಶುಶ್ರೂಷಾ ಸೇವಕರು ಕಲಿಸುವಿಕೆಯಲ್ಲಿ, ಕೆಲವೊಮ್ಮೆ ಸಭಾ ಪುಸ್ತಕಭ್ಯಾಸಗಳನ್ನು ನಡಿಸುವುದು, ಸೇವಾ ಕೂಟಗಳಲ್ಲಿ ಭಾಗಗಳನ್ನು ನಿರ್ವಹಿಸುವುದು, ಮತ್ತು ಬಹಿರಂಗ ಭಾಷಣಗಳನ್ನು ಕೊಡುವುದಕ್ಕಾಗಿ ಸಹ ಕೆಲವೊಮ್ಮೆ ಉಪಯೋಗಿಸಲ್ಪಡಬಹುದು.
ಹಿರಿಯರು ಮತ್ತು ಶುಶ್ರೂಷಾ ಸೇವಕರು ಒಂದುಗೂಡಿ ಹೊಂದಿಕೆಯಲ್ಲಿ ಸೇವೆಮಾಡುವಾಗ, ಸಭೆಯ ಅಗತ್ಯಗಳು—ಆತ್ಮಿಕ ಮತ್ತು ವ್ಯವಸ್ಥಾಪನೆ ಎರಡೂ—ಸಮತೋಲವಾಗಿ ನಿರ್ವಹಿಸಲ್ಪಡುತ್ತವೆ. ಆಗ ಸಭಾ ಸದಸ್ಯರು ಹರ್ಷಭರಿತರೂ, ದೃಢತೆಯುಳ್ಳವರೂ, ಆತ್ಮಿಕವಾಗಿ ಫಲ ಫಲಿಸುವವರೂ ಆಗುತ್ತಾರೆ. ಎಫೆಸದಲ್ಲಿರುವ ಅಭಿಷಿಕ್ತರಿಗೆ ಪೌಲನು ಏನು ಬರೆದನೆಂಬದನ್ನು ನೆನಪಿಗೆ ತನ್ನಿರಿ: “ದೇಹವೆಲ್ಲಾ ಆತನ ದೊರೆತನದಲ್ಲಿದ್ದು ತನ್ನಲ್ಲಿರುವ ಎಲ್ಲಾ ನರಗಳಿಂದ ಬಿಗಿಯಾಗಿ ಜೋಡಿಸಲ್ಪಟ್ಟು ಪ್ರತಿ ಅಂಗದಿಂದ ಅದರದರ ಶಕ್ತಿಯ ಪ್ರಕಾರ ಸಹಾಯಹೊಂದಿ ಪ್ರೀತಿಯಿಂದ ಐಕ್ಯವಾಗಿದ್ದು ಕ್ಷೇಮಾಭಿವೃದ್ಧಿಯನ್ನು ಹೊಂದುತ್ತದೆ.”—ಎಫೆಸ 4:16.
ಹಿರಿಯರು ಮತ್ತು ಶುಶ್ರೂಷಾ ಸೇವಕರು ತದ್ರೀತಿಯ ಹೊಂದಿಕೆಯನ್ನು ಅಂದರೆ ಏಕಾಭಿಪ್ರಾಯ, ಒಮ್ಮನಸ್ಸು, ಸಹಕಾರ, ಮತ್ತು ಐಕಮತ್ಯವನ್ನು ವಿಕಸಿಸಲು ಪ್ರಯಾಸಪಡಬೇಕು. ಆದರೂ, ಅಂಥ ಹೊಂದಿಕೆಯು ತನ್ನಷ್ಟಕ್ಕೆ ತಾನೇ ಬರುವುದಿಲ್ಲ. ಅದನ್ನು ಬೆಳೆಸಿಕೊಳ್ಳಬೇಕು ಮತ್ತು ಜಾಗರೂಕತೆಯಿಂದ ಕಾಪಾಡಬೇಕು.
ಹಿರಿಯರು ಮಾಡಬಲ್ಲ ವಿಷಯ
ಅಂಗೀಕರಿಸಬೇಕಾದ ಒಂದು ಮಹತ್ವದ ವಿಷಯವು ಯಾವುದಂದರೆ ಶುಶ್ರೂಷಾ ಸೇವಕನಿಗೆ ಒಬ್ಬ ಹಿರಿಯನ ಸಂಬಂಧವು ಧಣಿ ಮತ್ತು ದಾಸನ ಅಥವಾ ಯಜಮಾನ ಮತ್ತು ಆಳಿನ ಸಂಬಂಧವಲ್ಲ. ನಿಜವಾದ ಹೊಂದಿಕೆಯು ಇರುವಲ್ಲಿ, ಹಿರಿಯರು ಶುಶ್ರೂಷಾ ಸೇವಕರನ್ನು ದೇವರ ಜೊತೆ ಶುಶ್ರೂಷಕರಾಗಿ ನೋಡುತ್ತಾರೆ. (ಹೋಲಿಸಿ 1 ಕೊರಿಂಥ 3:6-9.) “ಮಾನಮರ್ಯಾದೆಯನ್ನು ತೋರಿಸುವದರಲ್ಲಿ ಒಬ್ಬರಿಗೆ ಒಬ್ಬರು ಮುಂದಾಗಿರಿ,” ಎನ್ನುತ್ತದೆ ರೋಮಾಪುರ 12:10. ಆದುದರಿಂದ ಹಿರಿಯರು ಶುಶ್ರೂಷಾ ಸೇವಕರನ್ನು, ಅನುಗ್ರಹ ತೋರುವ ಅಥವಾ ಹೀನವಾಗಿ ಕಾಣುವ ರೀತಿಯಲ್ಲಿ ಉಪಚರಿಸುವುದನ್ನು ವರ್ಜಿಸಬೇಕು. ಹಿತಕರವಾದ ಮುಂತೊಡಗುವಿಕೆಯನ್ನು ಅವರು ಜಜ್ಜಿಹಾಕುವ ಬದಲಿಗೆ, ಉತ್ತೇಜಿಸುತ್ತಾರೆ. ಶುಶ್ರೂಷಾ ಸೇವಕರನ್ನು ಮರ್ಯಾದೆಯಿಂದ ಉಪಚರಿಸುವುದು, ಅವರಲ್ಲಿ ಉತ್ತಮ ಗುಣಗಳನ್ನು ಹೊರತರುತ್ತದೆ ಮತ್ತು ಸಭೆಯ ತಮ್ಮ ಕೆಲಸದಲ್ಲಿ ಆವರು ಆನಂದಿಸುವಂತೆ ನೆರವಾಗುತ್ತದೆ.
ತಮ್ಮ ಪರಾಮರಿಕೆಯಲ್ಲಿರುವ ದೇವರ ಮಂದೆಯನ್ನು ಪಾಲಿಸುವ ಅವರ ಆದೇಶದಲ್ಲಿ ಶುಶ್ರೂಷಾ ಸೇವಕರಾಗಿ ಸೇವೆಮಾಡುವ ಸಹೋದರರು ಸೇರಿದ್ದಾರೆಂಬದನ್ನು ಸಹ ಹಿರಿಯರು ಮನಸ್ಸಿನಲ್ಲಿಡಬೇಕು. ಅಂಥ ಜವಾಬ್ದಾರಿ ಪುರುಷರು ಪಕ್ವತೆ ಹೊಂದಿರುವ ಕ್ರೈಸ್ತರಾಗಿರುವಂತೆ ನಿರೀಕ್ಷಿಸಲಾಗುತ್ತದೆ ನಿಜ. ಆದಾಗ್ಯೂ, ಮಂದೆಯಲ್ಲಿರುವ ಇತರರಂತೆ, ಅವರಿಗೆ ಆಗಿಂದಾಗ್ಗೆ ವೈಯಕ್ತಿಕ ಗಮನವು ಬೇಕಾಗಿದೆ. ಅವರ ಆತ್ಮಿಕ ವಿಕಸನದಲ್ಲಿ ಹಿರಿಯರು ತೀವ್ರಾಸಕ್ತರಾಗಿರಬೇಕು.
ಉದಾಹರಣೆಗೆ, ಅಪೊಸ್ತಲ ಪೌಲನು ಯುವಕ ತಿಮೊಥೆಯನನ್ನು ಭೇಟಿಯಾದಾಗ, ಅವನು ಕೂಡಲೆ ತಿಮೊಥೆಯನ ಸಾಮರ್ಥ್ಯವನ್ನು ಗ್ರಹಿಸಿಕೊಂಡನು ಮತ್ತು “ಅವನು ತನ್ನ ಸಂಗಡ ಬರಬೇಕೆಂದು ಪೌಲನು ಅಪೇಕ್ಷಿಸಿದನು.” (ಅ. ಕೃತ್ಯಗಳು 16:3) ತಿಮೊಥೆಯನು ಪೌಲನ ಸಂಚಾರ ಸಂಗಡಿಗನಾಗಿ ಸೇವೆಮಾಡುತ್ತಾ, ಫಲಿತಾಂಶವಾಗಿ ಅಮೂಲ್ಯವಾದ ತರಬೇತನ್ನು ಪಡೆದುಕೊಂಡನು. ಯಾಕೆ, ವರ್ಷಗಳ ಅನಂತರ ಪೌಲನು ಕೊರಿಂಥದ ಕ್ರೈಸ್ತರಿಗೆ ಹೀಗೆ ಬರೆಯಶಕ್ತನಾದನು: “ಕರ್ತನಲ್ಲಿ ನನ್ನ ಮಗನಾದ ತಿಮೊಥೆಯನನ್ನು ನಿಮ್ಮ ಬಳಿಗೆ ಕಳುಹಿಸಿಕೊಟ್ಟಿದ್ದೇನೆ. ಅವನು ನನಗೆ ಪ್ರಿಯನೂ ನಂಬಿಗಸ್ತನೂ ಆಗಿದ್ದಾನೆ. ಅವನು ಕ್ರಿಸ್ತನ ಸೇವೆಯಲ್ಲಿರುವ ನನ್ನ ನಡಾವಳಿಯನ್ನು ಅಂದರೆ ನಾನು ಎಲ್ಲೆಲ್ಲಿಯೂ ಪ್ರತಿಯೊಂದು ಸಭೆಯಲ್ಲಿಯೂ ಬೋಧಿಸುವ ಕ್ರಮವನ್ನು ನಿಮ್ಮ ನೆನಪಿಗೆ ತರುವನು.”—1 ಕೊರಿಂಥ 4:17.
ಹಿರಿಯರೇ, ನಿಮ್ಮ ಸಭೆಯಲ್ಲಿರುವ ಶುಶ್ರೂಷಾ ಸೇವಕರ ಪೂರ್ಣ ಅರ್ಹತೆಗಳನ್ನು ಬಳಸಿಕೊಳ್ಳಲು ನೀವು ತೊಡಗಿರುತ್ತೀರೊ? ಬಹಿರಂಗ ಭಾಷಣಗಳಲ್ಲಿ ಮತ್ತು ಬೈಬಲ್ ಸಂಶೋಧನೆಯಲ್ಲಿ ವೈಯಕ್ತಿಕ ತರಬೇತನ್ನು ಅವರಿಗೆ ಕೊಡುವ ಮೂಲಕ ಅವರಿಗೆ ಪ್ರಗತಿಮಾಡಲು ಸಹಾಯಮಾಡುತ್ತೀರೊ? ಯೋಗ್ಯತೆಯುಳ್ಳವರು ಕುರಿಪಾಲನೆಯ ಸಂದರ್ಶನಗಳಲ್ಲಿ ನಿಮ್ಮೊಂದಿಗೆ ಬರುವಂತೆ ನೀವು ಆಮಂತ್ರಿಸಿದ್ದೀರೊ? ಕ್ಷೇತ್ರ ಶುಶ್ರೂಷೆಯಲ್ಲಿ ನೀವು ಅವರೊಂದಿಗೆ ಸೇವೆಮಾಡುತ್ತೀರೊ? “ಭಲಾ, ನಂಬಿಗಸ್ತನಾದ ಒಳ್ಳೇ ಆಳು ನೀನು,” ಎಂದು ಯೇಸುವಿನ ತಲಾಂತುಗಳ ಸಾಮ್ಯದಲ್ಲಿ ಧಣಿಯು ತನ್ನ ನಂಬಿಗಸ್ತ ಸೇವಕರಿಗೆ ಹೇಳಿದನು. (ಮತ್ತಾಯ 25:23) ತದ್ರೀತಿ, ತಮ್ಮ ನೇಮಕಗಳನ್ನು ಒಳ್ಳೆಯ ರೀತಿಯಲ್ಲಿ ವಿನಯದಿಂದ ನಿರ್ವಹಿಸುವ ಶುಶ್ರೂಷಾ ಸೇವಕರೆಡೆಗೆ ಹೊಗಳಿಕೆ ಮತ್ತು ಪ್ರಶಂಸೆಯಲ್ಲಿ ನೀವು ಉದಾರವಾಗಿದ್ದೀರೊ? (ಹೋಲಿಸಿ ಜ್ಞಾನೋಕ್ತಿ 3:27.) ಇಲ್ಲವಾದರೆ, ತಮ್ಮ ಕೆಲಸವು ಗಣನೆಗೆ ತರಲ್ಪಡುವುದಿಲ್ಲವೆಂದು ಅವರು ಭಾವಿಸಾರೆ?
ತದ್ರೀತಿ ಒಂದು ಹೊಂದಿಕೆಯಾದ ಸುಸಂಬಂಧಕ್ಕೆ ಮಾತುಕತೆಯು ಪ್ರಾಮುಖ್ಯವಾಗಿದೆ. (ಹೋಲಿಸಿ ಜ್ಞಾನೋಕ್ತಿ 15:22.) ಕೆಲಸಗಳನ್ನು ಸ್ವೇಚ್ಛಾನುಸಾರವಾಗಿ ಅಥವಾ ಅಕಸ್ಮಾತ್ತಾಗಿ ನೇಮಿಸಲೂ ಬಾರದು, ತೆಗೆದುಬಿಡಲೂ ಬಾರದು, ಒಬ್ಬ ಸಹೋದರನ ಸಾಮರ್ಥ್ಯಗಳು ಸಭೆಯಲ್ಲಿ ಹೇಗೆ ಉತ್ತಮವಾಗಿ ಬಳಸಲ್ಪಡಬಲ್ಲವೆಂದು ಹಿರಿಯರು ಪ್ರಾರ್ಥನಾಪೂರ್ವಕವಾಗಿ ಚರ್ಚಿಸಬೇಕು. (ಹೋಲಿಸಿ ಮತ್ತಾಯ 25:15.) ಒಂದು ನೇಮಕವು ಮಾಡಲ್ಪಟ್ಟಾಗ, ಅವನಿಂದ ನಿಶ್ಚಿತವಾಗಿ ಏನು ಕೇಳಲ್ಪಡುತ್ತದೆ ಎಂಬ ವಿಷಯದಲ್ಲಿ ಸಹೋದರನಿಗೆ ಪೂರ್ಣವಾಗಿ ಸೂಚಿಸಲ್ಪಡಬೇಕು. “ನುರಿತ ಮಾರ್ಗದರ್ಶನವಿಲ್ಲದಲ್ಲಿ” ಎಚ್ಚರಿಸುತ್ತದೆ ಜ್ಞಾನೋಕ್ತಿ 11:14, NW, “ಜನರು ಬಿದ್ದುಹೋಗುತ್ತಾರೆ.”
ಇನ್ನೊಬ್ಬ ಸೇವಕನಿಂದ ಅಕೌಂಟ್ಸ್, ಮ್ಯಾಗಜಿನ್ ಮತ್ತು ಲಿಟ್ರೇಚರ್ ವಿಭಾಗವನ್ನು ವಹಿಸಿಕೊಳ್ಳುವಂತೆ ಸಹೋದರನೊಬ್ಬನಿಗೆ ಬರೇ ಹೇಳಿಬಿಡುವುದು ಒಳ್ಳೆಯದಲ್ಲ. ಕೆಲವು ಸಾರಿ ಹೊಸತಾಗಿ ನೇಮಿಸಲ್ಪಟ್ಟ ಒಬ್ಬ ಸೇವಕನು ಸರಿಯಿಲ್ಲದ ಮತ್ತು ಅಪೂರ್ಣವಾದ ದಾಖಲೆಗಳ ತಂಡವನ್ನು ಬಾಧ್ಯವಾಗಿ ಪಡೆಯುತ್ತಾನೆ. ಎಷ್ಟು ನಿರುತ್ತೇಜನಕರ! “ಎಲ್ಲವೂ ಮರ್ಯಾದೆಯಿಂದಲೂ ಕ್ರಮದಿಂದಲೂ ನಡೆಯಲಿ,” ಎಂದು ಮಾರ್ಗದರ್ಶಿಸುತ್ತದೆ 1 ಕೊರಿಂಥ 14:40. ಸಭಾ ಕಾರ್ಯವಿಧಾನಗಳ ಪರಿಚಯಮಾಡಿಸುತ್ತಾ, ಹಿರಿಯರು ಸಹೋದರರನ್ನು ತರಬೇತುಗೊಳಿಸಲು ಮೊದಲಹೆಜ್ಜೆಯನ್ನು ತೆಗೆದುಕೊಳ್ಳಬೇಕು ಮತ್ತು ಅಂಥ ಕಾರ್ಯವಿಧಾನಗಳನ್ನು ಅನುಸರಿಸುವುದರಲ್ಲಿ ತಾವು ಸ್ವತಃ ಮಾದರಿಯನ್ನಿಡಬೇಕು. ಉದಾಹರಣೆಗೆ, ಪ್ರತಿ ಮೂರು ತಿಂಗಳಲ್ಲಿ ಸಭಾ ಅಕೌಂಟ್ಗಳ ಲೆಕ್ಕಪರೀಕ್ಷೆಯನ್ನು ಹಿರಿಯರಿಗೆ ಏರ್ಪಡಿಸಲಿಕ್ಕಿದೆ. ಅಂಥ ಪ್ರಾಮುಖ್ಯ ಏರ್ಪಾಡನ್ನು ಅಸಡ್ಡೆಮಾಡುವುದು ಸಮಸ್ಯೆಗಳಿಗೆ ನಡಿಸಬಲ್ಲದು ಮತ್ತು ಸಂಸ್ಥಾಪನಾ ಸೂಚನೆಗಳಿಗೆ ಶುಶ್ರೂಷಾ ಸೇವಕರಿಗಿರುವ ಗೌರವವನ್ನು ಕುಂದಿಸಬಲ್ಲದು.
ಆದರೆ ಸಹೋದರನೊಬ್ಬನು ನಿರ್ದಿಷ್ಟ ನೇಮಕವನ್ನು ನಿರ್ವಹಿಸುವುದರಲ್ಲಿ ಅಸಡ್ಡೆಯಿಂದಿರುವಂತೆ ತೋರಿದ ಪಕ್ಷದಲ್ಲಿ? ಅವಸರದಿಂದ ಅವನನ್ನು ಅವನ ನೇಮಕದಿಂದ ತೆಗೆದುಬಿಡುವ ಬದಲಿಗೆ, ಹಿರಿಯರು ವಿಷಯಗಳನ್ನು ಅವನೊಂದಿಗೆ ಮಾತಾಡಿ ನೋಡಬೇಕು. ಸಮಸ್ಯೆಯು ಪ್ರಾಯಶಃ ತರಬೇತಿನ ಕೊರತೆಯಾಗಿರಬಹುದು. ಸಹೋದರನಿಗೆ ಅವನ ನೇಮಕವನ್ನು ನಿರ್ವಹಿಸಲು ಕಷ್ಟಗಳು ಮುಂದರಿಯುತ್ತಾ ಹೋದರೆ, ಬಹುಶಃ ಅವನು ಇನ್ನೊಂದು ನೇಮಕದಲ್ಲಿ ಒಳ್ಳೇದಾಗಿ ಕೆಲಸಮಾಡ್ಯಾನು.
ನಮ್ರತೆಯನ್ನು ತೋರಿಸುವ ಮೂಲಕ ಸಹ ಹಿರಿಯರು ಹೊಂದಿಕೆಯನ್ನು ವರ್ಧಿಸಬಲ್ಲರು. “ಪಕ್ಷಪಾತದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವದನ್ನೂ ಮಾಡದೆ ಪ್ರತಿಯೊಬ್ಬನು ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸು” ವಂತೆ ಕ್ರೈಸ್ತರನ್ನು ಫಿಲಿಪ್ಪಿ 2:3 ಪ್ರೋತ್ಸಾಹಿಸುತ್ತದೆ. ಹಾಲ್ನಲ್ಲಿ ಒಂದು ನಿರ್ದಿಷ್ಟ ಆಸನದಲ್ಲಿ ಕೂತುಕೊಳ್ಳುವಂತೆ ಎಟೆಂಡೆಂಟನು ಹಿರಿಯನನ್ನು ಮಾರ್ಗದರ್ಶಿಸುವುದಾದರೆ, ತಾನು ಹಿರಿಯನಾಗಿರುವ ಕಾರಣ ವಿಧೇಯನಾಗುವ ಅಗತ್ಯವಿಲ್ಲವೆಂಬ ವಿವೇಚನೆಯನ್ನು ಮಾಡದೆ, ಸಹಕರಿಸಲು ಅವನು ಪ್ರಯತ್ನಿಸಬೇಕು. ಬಹುಶಃ ಎಟೆಂಡೆಂಟನು ಹಾಲ್ನ ಬೇರೆ ಭಾಗಗಳಲ್ಲಿ ಕೂತುಕೊಳ್ಳುವ ಸಲಹೆಯನ್ನು ಕೇವಲ ಪಾಲಿಸುತ್ತಿರಬಹುದು, ಆದರೂ ಎಲ್ಲರೂ ಹಾಗೆ ಮಾಡಬೇಕೆಂಬ ನಿಯಮವಿರುವುದಿಲ್ಲವೆಂಬದನ್ನು ಅವನು ನೆನಪಿನಲ್ಲಡಬೇಕು.a ಒಬ್ಬ ಶುಶ್ರೂಷಾ ಸೇವಕನಿಗೆ ನೇಮಿಸಲ್ಪಟ್ಟ ವಿಷಯಗಳ ಮೇಲೆ ಮಾಡಿರುವ ನಿರ್ಣಯಗಳನ್ನು ಅನಾವಶ್ಯಕವಾಗಿ ತಳ್ಳಿಹಾಕುವುದನ್ನು ಹಿರಿಯನು ವರ್ಜಿಸುವನು.
ಹೊಂದಿಕೆಗಾಗಿ ಕಾರ್ಯನಡಿಸುವ ಶುಶ್ರೂಷಾ ಸೇವಕರು
“ಅದೇ ರೀತಿಯಾಗಿ ಶುಶ್ರೂಷಾ ಸೇವಕರು ಗಂಭೀರಭಾವದವರಾಗಿರಬೇಕು,” ಎಂದು ಗಮನಿಸಿದನು ಅಪೊಸ್ತಲ ಪೌಲನು. (1 ತಿಮೊಥೆಯ 3:8, NW) ತಮ್ಮ ನೇಮಕಗಳನ್ನು ಗಂಭೀರವಾಗಿ—ಪವಿತ್ರ ಸೇವೆಯ ಭಾಗವಾಗಿ—ವೀಕ್ಷಿಸುವುದು ಉದ್ವೇಗಗಳು ವಿಕಾಸಗೊಳ್ಳುವುದರಿಂದ ತಡೆಯಲು ಹೆಚ್ಚನ್ನು ಮಾಡುತ್ತದೆ. ನೀವೊಬ್ಬ ಶುಶ್ರೂಷಾ ಸೇವಕರಾಗಿದ್ದಲ್ಲಿ, ನೀವು ನಿಮ್ಮ ಕರ್ತವ್ಯಗಳನ್ನು ಉತ್ಸಾಹದಿಂದ ನಡಿಸುತ್ತೀರೊ? (ರೋಮಾಪುರ 12:7, 8) ನಿಮ್ಮ ಕೆಲಸಗಳನ್ನು ನಿರ್ವಹಿಸುವುದರಲ್ಲಿ ನಿಪುಣರಾಗುವುದಕ್ಕಾಗಿ ನೀವು ಶ್ರದ್ಧೆವಹಿಸಿದ್ದೀರೊ? ನೀವು ಭರವಸಯೋಗ್ಯರೂ ವಿಶ್ವಾಸಪಾತ್ರರೂ ಆಗಿದ್ದೀರೊ? ನೇಮಕಗಳ ಸಂಬಂಧದಲ್ಲಿ ಒಂದು ಸಿದ್ಧವಾಗಿರುವ ಆತ್ಮವನ್ನು ನೀವು ತೋರಿಸುತ್ತೀರೊ? ಆಫ್ರಿಕದ ಒಂದು ದೇಶದಲ್ಲಿ ಒಬ್ಬ ಶುಶ್ರೂಷಾ ಸೇವಕನು ಸಭೆಯಲ್ಲಿ ಮೂರು ವಿವಿಧ ನೇಮಕಗಳನ್ನು ನಿರ್ವಹಿಸುತ್ತಾನೆ. ಅವನ ಮನೋಭಾವ? “ಹೆಚ್ಚು ಕಷ್ಟ ಪಟ್ಟು ಕೆಲಸಮಾಡಬೇಕೆಂದೇ ಅದರ ಸರಳಾರ್ಥ,” ಎಂದನ್ನುತ್ತಾನೆ ಅವನು, “ಮತ್ತು ಕಷ್ಟದ ಕೆಲಸ ನಿಮ್ಮನ್ನು ಕೊಲ್ಲುವುದಿಲ್ಲ.” ಖಂಡಿತವಾಗಿಯೂ, ಯಾರು ತಮ್ಮನ್ನು ಕೊಟ್ಟುಕೊಳ್ಳುತ್ತಾರೊ ಅವರು ಅತಿ ಹೆಚ್ಚು ಸಂತೋಷದಲ್ಲಿ ಆನಂದಿಸುತ್ತಾರೆ.—ಅ. ಕೃತ್ಯಗಳು 20:35.
ಹಿರಿಯರೊಂದಿಗೆ ಪೂರ್ಣವಾಗಿ ಸಹಕರಿಸುವ ಮೂಲಕ ಹೊಂದಿಕೆಯನ್ನು ವರ್ಧಿಸುವುದಕ್ಕೆ ನೀವು ಹೆಚ್ಚನ್ನು ಮಾಡಬಲ್ಲಿರಿ. “ನಿಮ್ಮ ಸಭಾನಾಯಕರ ಮಾತನು ಕೇಳಿರಿ, ಅವರಿಗೆ ಅಧೀನರಾಗಿರಿ,” ಎನ್ನುತ್ತದೆ ಇಬ್ರಿಯ 13:17, “ಅವರು ಲೆಕ್ಕ ಒಪ್ಪಿಸಬೇಕಾದವರಾಗಿ ನಿಮ್ಮ ಆತ್ಮಗಳನ್ನು ಕಾಯುವವರಾಗಿದ್ದಾರೆ. ಅವರು ವ್ಯಸನಪಡದೆ ಸಂತೋಷದಿಂದ ಇದನ್ನು ಮಾಡುವಂತೆ ನೋಡಿರಿ; ಅವರು ವ್ಯಸನದಿಂದಿರುವದು ನಿಮಗೆ ಪ್ರಯೋಜನಕರವಾದದ್ದಲ್ಲ.” ಹಿರಿಯರು ಅಸಂಪೂರ್ಣ ಮನುಷ್ಯರೆಂಬುದು ನಿಜ, ಮತ್ತು ಅವರಲ್ಲಿ ತಪ್ಪುಗಳನ್ನು ಕಾಣುವುದು ಬಹು ಸುಲಭವಾಗಿದ್ದೀತು. ಆದರೂ ಟೀಕಾತ್ಮಕ ಭಾವವು ಅಪನಂಬಿಕೆಯನ್ನು ಹಡೆಯುತ್ತದೆ. ಅದು ನಿಮ್ಮ ಸಂತೋಷವನ್ನು ಧ್ವಂಸಮಾಡಬಲ್ಲದು ಮತ್ತು ಸಭೆಯ ಇತರರನ್ನು ಬಾಧಕವಾಗಿ ಪ್ರಭಾವಿಸಬಹುದು. ಅಪೊಸ್ತಲ ಪೇತ್ರನು ಹೀಗೆ ಈ ಸಲಹೆಯನ್ನು ಕೊಟ್ಟಿದ್ದಾನೆ: “ಯೌವನಸ್ಥರೇ, ಅದೇ ರೀತಿಯಾಗಿ ಹಿರಿಯರಿಗೆ ಅಧೀನರಾಗಿರಿ. . . . ದೇವರ ತ್ರಾಣವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆತನು ತಕ್ಕ ಕಾಲದಲ್ಲಿ ನಿಮ್ಮನ್ನು ಮೇಲಕ್ಕೆ ತರುವನು.”—1 ಪೇತ್ರ 5:5, 6.
ನೀವು ಸೇವಾ ಸುಯೋಗಗಳಿಗಾಗಿ ಅಲಕ್ಷಿಸಲ್ಪಟ್ಟಿದ್ದೀರೆಂಬ ಅನಿಸಿಕೆ ನಿಮಗಿರುವುದಾದರೆ ಈ ಬುದ್ಧಿವಾದವು ವಿಶಿಷ್ಟವಾಗಿ ಯುಕ್ತವಾಗಿರುತ್ತದೆ. ಪ್ರಾಯಶಃ ನೀವು “ಮೇಲ್ವಿಚಾರಕನ ಸ್ಥಾನಕ್ಕಾಗಿ ಪ್ರಯತ್ನಿಸುವವ” ನಾಗಿ ಇದ್ದಿರಬಹುದು, ಆದರೆ ಯಾವ ನೇಮಕವೂ ಮಾಡಲ್ಪಟ್ಟಿರುವುದಿಲ್ಲ. (1 ತಿಮೊಥೆಯ 3:1, NW) “ನಿರೀಕ್ಷಿಸುವ” ಒಂದು ಭಾವವನ್ನು ಕಾಪಾಡಲು ದೀನ ಮನಸ್ಸು ನಿಮಗೆ ಸಹಾಯ ಮಾಡಬಲ್ಲದು. (ಪ್ರಲಾಪಗಳು 3:24) ಹಿರಿಯರೆಡೆಗೆ ಅಸಮಾಧಾನ ಹೊಂದುವ ಬದಲಿಗೆ—ಅದು ಖಂಡಿತವಾಗಿಯೂ ನಿಮ್ಮ ಸುಸಂಬಂಧಕ್ಕೆ ಹಾನಿಕರವಾಗಿದೆ—ನೀವು ಪ್ರಗತಿಯನ್ನು ಮಾಡಬಹುದಾದ ಕ್ಷೇತ್ರಗಳಿವೆಯೊ ಎಂದು ಅವರನ್ನು ಕೇಳಿರಿ. ಬುದ್ಧಿವಾದವನ್ನು ಸ್ವೀಕರಿಸಲು ಮತ್ತು ಅನ್ವಯಿಸಲು ನಿಮ್ಮ ನೈಜವಾದ ಸಿದ್ಧಮನಸ್ಸು ನಿಮ್ಮ ಆತ್ಮಿಕ ಬೆಳವಣಿಗೆಯ ರುಜುವಾತಾಗಿ ನೋಡಲ್ಪಡುವುದು ನಿಸ್ಸಂಶಯ.
ಒಬ್ಬ ಶುಶ್ರೂಷೆ ಸೇವಕನಿಗೆ ವಿಶೇಷವಾದ ಸಾಮರ್ಥ್ಯಗಳು ಅಥವಾ ಶೈಕ್ಷಣಿಕ ಮತ್ತು ಸಾಮಾಜಿಕ ಮೇಲ್ಮೆಗಳು ಇರುವುದಾದರೆ, ದೈವಿಕ ದೀನತೆ ಮತ್ತು ವಿನಯಶೀಲತೆಯು ಅವನಿಗೆ ತನ್ನ ಸಮತೋಲವನ್ನು ಕಾಪಾಡಲು ಸಹಾಯಮಾಡಬಲ್ಲದು. ಹಿರಿಯರಿಗಿಂತ ಅತಿಶಯಿಸಿ ಬೆಳಗಲು ಅಥವಾ ತನ್ನ ಸ್ವಂತ ಸಾಮರ್ಥ್ಯಗಳಿಗೆ ಗಮನ ಸೆಳೆಯಲು ಪ್ರಯತ್ನಿಸುವುದು ಅವನಿಗೆ ಅದೆಷ್ಟು ಆಕರ್ಷಕವಾಗಿದ್ದಿರಬಹುದು! “ದೀನರಲ್ಲಿ ಜ್ಞಾನ” ಎಂಬ ಜ್ಞಾಪಕವನ್ನು ಜ್ಞಾನೋಕ್ತಿ 11:2 ನಮಗೆ ಕೊಡುತ್ತದೆ. ವಿನಯಶೀಲನಾದ ಒಬ್ಬ ಸಹೋದರನು ತನ್ನ ಮಿತಿಗಳನ್ನು ಬಲ್ಲವನಾಗಿದ್ದಾನೆ. ಹಿನ್ನೆಲೆಯಲ್ಲಿ ಸದ್ದಿಲ್ಲದೆ ಕೆಲಸಮಾಡಲು ಮತ್ತು ಹಿರಿಯರ ಬೆಂಬಲಕ್ಕಾಗಿ ತನ್ನ ಸಾಮರ್ಥ್ಯಗಳನ್ನುಪಯೋಗಿಸಲು ಅವನು ಮನಸ್ಸುಳ್ಳವನಾಗಿದ್ದಾನೆ. ವಿನಯಶೀಲತೆ ಅವನಿಗೆ ಇದನ್ನೂ ಗ್ರಹಿಸಿಕೊಳ್ಳಲು ಸಹಾಯ ಮಾಡುವುದು ಏನಂದರೆ ಲೌಕಿಕ ರೀತಿಯಲ್ಲಿ ಅವನಿಗೆ ಹೆಚ್ಚು ಜ್ಞಾನವಿರಬಹುದಾದರೂ—ಹಿರಿಯರು ಅತಿಶಯಿಸಬಹುದಾದ ಗುಣಗಳಲ್ಲಿ—ಆತ್ಮಿಕ ಜ್ಞಾನ ಮತ್ತು ವಿವೇಚನೆಯ ಮಹತ್ವದ ಕ್ಷೇತ್ರಗಳಲ್ಲಿ ತಾನು ಇನ್ನೂ ಕೊರತೆಯುಳ್ಳವನಾಗಿರಬಹುದು.—1 ಕೊರಿಂಥ 1:26–2:13; ಫಿಲಿಪ್ಪಿ 1:9.
ಸ್ಪಷ್ಟವಾಗಿಗಿ ಹಿರಿಯರು ಮತ್ತು ಶುಶ್ರೂಷಾ ಸೇವಕರು ಮಹತ್ವದ ಪಾತ್ರಗಳನ್ನು ವಹಿಸುತ್ತಾರೆ. ಒಂದುಗೂಡಿ ಅವರು ಸಭೆಯಲ್ಲಿರುವ ಎಲ್ಲರ ಭಕ್ತಿವೃದ್ಧಿ ಮಾಡಲು ಹೆಚ್ಚನ್ನು ಗೈಯಬಲ್ಲರು. ಆದರೆ ಅದನ್ನು ಮಾಡಲು, ಅವರು ಒಟ್ಟಾಗಿ “ನೀವು ಪೂರ್ಣ ವಿನಯ ಸಾತ್ವಿಕತ್ವಗಳಿಂದಲೂ ದೀರ್ಘಶಾಂತಿಯಿಂದಲೂ ಕೂಡಿದವರಾಗಿ ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ. . . . ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿಕೊಳ್ಳುವದಕ್ಕೆ” ಹೊಂದಾಣಿಕೆಯಿಂದ ಕೆಲಸಮಾಡಬೇಕು.’—ಎಫೆಸ 4:2, 3.
[ಅಧ್ಯಯನ ಪ್ರಶ್ನೆಗಳು]
[ಪುಟ 27 ರಲ್ಲಿರುವ ಚಿತ್ರಗಳು]
ಹಿರಿಯರು ಶುಶ್ರೂಷಾ ಸೇವಕರನ್ನು, ಕೈಕೆಳಗಿನವರಾಗಿ ಅಲ್ಲ, ದೇವರ ಜೊತೆ ಶುಶ್ರೂಷಕರಾಗಿ ನೋಡುತ್ತಾರೆ