ಮಾನವ ಕಷ್ಟಾನುಭವ—ದೇವರು ಏಕೆ ಅದನ್ನು ಅನುಮತಿಸುತ್ತಾನೆ?
ಮಾನವನ ಇತಿಹಾಸದ ಆರಂಭದಲ್ಲಿ, ಸರಳವಾಗಿಯೇ ದುಃಖದ ಯಾ ನೋವಿನ ಕಣ್ಣೀರು ಇರಲಿಲ್ಲ. ಮಾನವ ಕಷ್ಟಾನುಭವವೇ ಅಸ್ತಿತ್ವದಲ್ಲಿರಲಿಲ್ಲ. ಮಾನವಕುಲಕ್ಕೆ ಒಂದು ಪರಿಪೂರ್ಣ ಆರಂಭವು ಕೊಡಲ್ಪಟ್ಟಿತು. “ದೇವರು ತಾನು ಉಂಟುಮಾಡಿದ್ದನ್ನೆಲ್ಲಾ ನೋಡಲಾಗಿ ಅದು ಬಹು ಒಳ್ಳೇದಾಗಿತ್ತು.”—ಆದಿಕಾಂಡ 1:31.
ಆದರೆ ಕೆಲವರು ಆಕ್ಷೇಪಿಸುವುದು, ‘ಏದೆನ್ ತೋಟದಲ್ಲಿನ ಆದಾಮ, ಹವ್ವರ ಕಥೆಯು ಕೇವಲ ಒಂದು ಸಾಂಕೇತಿಕ ನಿರೂಪಣೆಯಾಗಿದೆ.’ ವಿಷಾದನೀಯವಾಗಿ, ಕ್ರೈಸ್ತಪ್ರಪಂಚದ ಅನೇಕ ವೈದಿಕರು ಇದನ್ನು ಹೇಳುತ್ತಾರೆ. ಆದಾಗ್ಯೂ, ಅಸಾಮಾನ್ಯ ಮಹಾ ತಜ್ಞನಾದ ಯೇಸು ಕ್ರಿಸ್ತನು ತಾನೇ ಏದೆನಿನಲ್ಲಿನ ಘಟನೆಗಳು ಐತಿಹಾಸಿಕವೆಂದು ಪುಷ್ಟೀಕರಿಸಿದ್ದಾನೆ. (ಮತ್ತಾಯ 19:4-6) ಇನ್ನೂ ಹೆಚ್ಚಾಗಿ, ಮಾನವ ಕಷ್ಟಾನುಭವವನ್ನು ದೇವರು ಅನುಮತಿಸಿರುವುದರ ಕಾರಣವನ್ನು ತಿಳಿದುಕೊಳ್ಳಲು ಇರುವ ಕೇವಲ ಏಕ ಮಾತ್ರ ದಾರಿಯು ಮಾನವನ ಪ್ರಾರಂಭದ ಇತಿಹಾಸದ ಈ ಘಟನೆಗಳನ್ನು ಪರೀಕ್ಷಿಸುವುದಾಗಿದೆ.
ಮೊದಲನೆಯ ಮನುಷ್ಯನಾದ ಆದಾಮನಿಗೆ ಏದೆನ್ ತೋಟದ ಪರಾಂಬರಿಕೆಯ ಸಂತೃಪ್ತಿಕರ ಕೆಲಸವನ್ನು ಕೊಡಲಾಗಿತ್ತು. ತನ್ನ ಏದೆನ್ ಮನೆಯನ್ನು ಭೌಗೋಳಿಕ ಆಹ್ಲಾದದ ತೋಟವನ್ನಾಗಿ ವಿಸ್ತರಿಸುವ ಗುರಿಯೊಂದನ್ನು ಸಹ ದೇವರು ಅವನ ಮುಂದೆ ಇಟ್ಟನು. (ಆದಿಕಾಂಡ 1:28; 2:15) ಈ ಮಹಾ ಕಾರ್ಯವನ್ನು ಪೂರೈಸಲು ಆದಾಮನಿಗೆ ಸಹಾಯಿಸಲು, ದೇವರು ಅವನಿಗೆ ಹವ್ವಳೆಂಬ ಮದುವೆ ಸಂಗಾತಿಯನ್ನು ಒದಗಿಸಿದನು, ಮತ್ತು ಬಹುಸಂತಾನವಾಗಿ ಹೆಚ್ಚಿ, ಭೂಮಿಯನ್ನು ವಶಮಾಡಿಕೊಳ್ಳಲು ಅವರಿಗೆ ಹೇಳಲಾಯಿತು. ಆದರೂ, ಭೂಮಿಗಾಗಿ ಮತ್ತು ಮಾನವಕುಲಕ್ಕಾಗಿ ಇರುವ ದೇವರ ಉದ್ದೇಶದ ಯಶಸ್ವಿಯನ್ನು ನಿಶ್ಚಿತ ಮಾಡಲು ಬೇರೇನೊ ಆವಶ್ಯಕವಾಗಿತ್ತು. ದೇವರ ಸ್ವರೂಪದಲ್ಲಿ ಉಂಟುಮಾಡಲ್ಪಟ್ಟದ್ದರಿಂದ, ಮನುಷ್ಯನಿಗೆ ಇಚ್ಛಾ ಸ್ವಾತಂತ್ರ್ಯ ಇತ್ತು; ಆದಕಾರಣ ಮಾನವನ ಇಚ್ಛೆಯು ದೇವರದ್ದರೊಂದಿಗೆ ಎಂದಿಗೂ ಘರ್ಷಣೆಗೆ ಬಾರದೆ ಇರುವ ಜರೂರಿಯಿತ್ತು. ಇಲ್ಲದಿದ್ದರೆ, ವಿಶ್ವದಲ್ಲಿ ಅವ್ಯವಸ್ಥೆಯ ಇರುತ್ತಿತ್ತು, ಮತ್ತು ಶಾಂತ ಸ್ಥಿತಿಯ ಮಾನವ ಕುಟುಂಬದಿಂದ ಭೂಮಿಯನ್ನು ತುಂಬಿಸುವ ದೇವರ ಉದ್ದೇಶವು ಎಂದಿಗೂ ಕೈಗೂಡುತ್ತಿರಲಿಲ್ಲ.
ದೇವರ ಆಳಿಕೆಗೆ ಅಧೀನತೆಯು ಸ್ವಯಂಚಲಿಯಾಗಿರಲಿಲ್ಲ. ಅದು ಮಾನವನ ಇಚ್ಛಾ ಸ್ವಾತಂತ್ರ್ಯದ ಪ್ರೀತಿಯ ಅಭಿವ್ಯಕ್ತಿಯಾಗಿರಬೇಕಿತ್ತು. ಉದಾಹರಣೆಗೆ, ಕಠಿನ ಪರೀಕ್ಷೆಯನ್ನು ಯೇಸು ಕ್ರಿಸ್ತನು ಎದುರಿಸಿದಾಗ, ಅವನು ಪ್ರಾರ್ಥಿಸಿದ್ದು: “ತಂದೆಯೇ, ನಿನಗೆ ಇಷ್ಟವಿದ್ದರೆ ಈ ಪಾತ್ರೆಯನ್ನು ನನ್ನಿಂದ ತೊಲಗಿಸು; ಹೇಗೂ ನನ್ನ ಚಿತ್ತವಲ್ಲ, ನಿನ್ನ ಚಿತ್ತವೇ ಆಗಲಿ.”—ಲೂಕ 22:42.
ತದ್ರೀತಿಯಲ್ಲಿ, ದೇವರ ಆಳಿಕೆಗೆ ಆದಾಮ, ಹವ್ವರು ಅಧೀನರಾಗಲು ಬಯಸುತ್ತಾರೋ ಇಲ್ಲವೋ ಎಂಬುದು ಅವರ ಮೇಲೆ ಹೊಂದಿಕೊಂಡಿತ್ತು. ಈ ಉದ್ದೇಶಕ್ಕಾಗಿ, ಯೆಹೋವ ದೇವರು ಒಂದು ಸರಳ ಪರೀಕ್ಷೆಯನ್ನು ಏರ್ಪಡಿಸಿದನು. ತೋಟದಲ್ಲಿರುವ ಮರಗಳಲ್ಲೊಂದು “ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರ” ವೆಂಬುದಾಗಿ ಕರೆಯಲ್ಪಟ್ಟಿತು. ಸರಿಯಾದ ನಡತೆಯ ಮಟ್ಟಗಳನ್ನು ನಿರ್ಧರಿಸುವ ದೇವರ ಹಕ್ಕನ್ನು ಅದು ಪ್ರತಿನಿಧಿಸುತ್ತಿತ್ತು. ನೇರ ಮಾತಿನಲ್ಲಾದರೆ, ಈ ನಿರ್ದಿಷ್ಟ ಮರದ ಹಣ್ಣನ್ನು ತಿನ್ನುವುದನ್ನು ದೇವರು ನಿಷೇಧಿಸಿದನು. ಆದಾಮ, ಹವ್ವರು ಅವಿಧೇಯರಾದರೆ, ಅದರಿಂದ ಅವರ ಮರಣವು ಫಲಿಸುತ್ತಿತ್ತು.—ಆದಿಕಾಂಡ 2:9, 16, 17.
ಮಾನವ ಕಷ್ಟಾನುಭವದ ಆರಂಭ
ಒಂದು ದಿನ ದೇವರ ಒಬ್ಬ ಆತ್ಮ ಪುತ್ರನು ದೇವರ ಆಳಿಕೆಯ ವಿಧಾನವನ್ನು ಪ್ರಶ್ನಿಸುವ ಧೈರ್ಯಮಾಡಿದನು. ಹಾವೊಂದನ್ನು ವದನಕನನ್ನಾಗಿ ಬಳಸುತ್ತಾ, ಅವನು ಹವ್ವಳನ್ನು ವಿಚಾರಿಸಿದ್ದು: “ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ನೀವು ತಿನ್ನಬಾರದೆಂದು ದೇವರು ಅಪ್ಪಣೆಕೊಟ್ಟಿರುವದು ನಿಜವೋ”? (ಆದಿಕಾಂಡ 3:1) ಹೀಗೆ ದೇವರ ಆಳಿಕೆಯ ವಿಧಾನವು ಸರಿಯೋ ಎಂಬುದರ ಕುರಿತು ಹವ್ವಳ ಮನಸ್ಸಿನಲ್ಲಿ ಸಂದೇಹದ ಒಂದು ಬೀಜವನ್ನು ಬಿತ್ತಲಾಯಿತು.a ಪ್ರತ್ಯುತ್ತರವಾಗಿ, ತನ್ನ ಗಂಡನಿಂದ ಅವಳು ಕಲಿತಂತಹ ಸರಿಯಾದ ಉತ್ತರವನ್ನು ಹವ್ವಳು ನೀಡಿದಳು. ಆದಾಗ್ಯೂ, ಆತ್ಮ ಜೀವಿಯು ಅನಂತರ ದೇವರಿಗೆ ಪ್ರತಿಷೇಧಿಸಿ, ಅವಿಧೇಯತೆಯ ಪರಿಣಾಮಗಳ ಕುರಿತು ಸುಳ್ಳನ್ನು ಹೇಳುತ್ತಾ, ಹೀಗಂದನು: “ನೀವು ಹೇಗೂ ಸಾಯುವದಿಲ್ಲ; ನೀವು ಇದರ ಹಣ್ಣನ್ನು ತಿಂದಾಗಲೇ ನಿಮ್ಮ ಕಣ್ಣುಗಳು ತೆರೆಯುವವು; ನೀವು ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವರಾಗಿರುವಿರಿ; ಇದು ದೇವರಿಗೆ ಚೆನ್ನಾಗಿ ಗೊತ್ತುಂಟು.”—ಆದಿಕಾಂಡ 3:4, 5.
ವಿಷಾದಕರವಾಗಿ, ಅವಿಧೇಯತೆಯು ಮಾನವ ಕಷ್ಟಾನುಭವದಲ್ಲಿ ಅಲ್ಲ, ಬದಲಾಗಿ ಒಂದು ಉತ್ತಮ ಜೀವಿತವನ್ನು ಫಲಿಸುತ್ತದೆಂದು ಯೋಚಿಸುವಂತೆ ಹವ್ವಳನ್ನು ವಂಚಿಸಲಾಯಿತು. ಆ ಹಣ್ಣನ್ನು ಎಷ್ಟು ಹೆಚ್ಚು ನೋಡಿದಳೋ ಅದು ಅಷ್ಟು ಹೆಚ್ಚು ಅಪೇಕ್ಷಣೀಯವಾಗಿ ತೋರಿಬಂತು, ಮತ್ತು ಅದನ್ನು ತಿನ್ನಲು ಅವಳು ಆರಂಭಿಸಿದಳು. ತದನಂತರ, ಆದಾಮನೂ ಅದನ್ನು ತಿನ್ನುವಂತೆ ಒಡಂಬಡಿಸಿದಳು. ದುರಂತಮಯವಾಗಿ, ಆದಾಮನು ದೇವರ ಮೆಚ್ಚಿಕೆಯನ್ನು ಉಳಿಸಿಕೊಳ್ಳುವುದರ ಬದಲಾಗಿ ತನ್ನ ಹೆಂಡತಿಯದನ್ನು ಉಳಿಸಿಕೊಳ್ಳಲು ಆರಿಸಿದನು.—ಆದಿಕಾಂಡ 3:6; 1 ತಿಮೊಥೆಯ 2:13, 14.
ಈ ದಂಗೆಯನ್ನು ಪ್ರೇರೇಪಿಸುವುದರಿಂದ, ಆತ್ಮ ಜೀವಿಯು ತನ್ನನ್ನು ದೇವರ ಪ್ರತಿಭಟಕನನ್ನಾಗಿ ಮಾಡಿಕೊಂಡನು. ಹೀಗೆ, “ಪ್ರತಿಭಟಿಸುವವನು” ಎಂಬರ್ಥದ ಹೀಬ್ರು ಪದದಿಂದ ಅವನು ಸೈತಾನನೆಂದು ಕರೆಯಲ್ಪಡುವವನಾದನು. ಅವನು ದೇವರ ಕುರಿತು ಸುಳ್ಳನ್ನೂ ಹೇಳಿ, ಹೀಗೆ ತನ್ನನ್ನು ಆಪಾದಕನನ್ನಾಗಿ ಮಾಡಿದ್ದನು. “ಆಪಾದಕನು” ಎಂಬರ್ಥವಿರುವ ಗ್ರೀಕ್ ಪದದಿಂದ, ಅವನನ್ನು ಪಿಶಾಚನೆಂತಲೂ ಕರೆಯಲಾಗುತ್ತದೆ.—ಪ್ರಕಟನೆ 12:9.
ಹೀಗೆ, ಮಾನವ ಕಷ್ಟಾನುಭವವು ಆರಂಭಗೊಂಡಿತು. ದೇವರ ಜೀವಿಗಳಲ್ಲಿ ಮೂವರು ತಮ್ಮ ಸೃಷ್ಟಿಕರ್ತನಿಗೆ ವಿರೋಧದಲ್ಲಿ ಸ್ವಾರ್ಥದ ಜೀವಿತ ವಿಧಾನವನ್ನು ಆರಿಸುವುದರ ಮೂಲಕ ತಮ್ಮ ಇಚ್ಛಾ ಸ್ವಾತಂತ್ರ್ಯದ ಕೊಡುಗೆಯನ್ನು ದುರುಪಯೋಗಿಸಿದ್ದರು. ಸ್ವರ್ಗದಲ್ಲಿರುವ ನಂಬಿಗಸ್ತ ದೇವದೂತರ ಮತ್ತು ಆದಾಮ, ಹವ್ವರ ಭಾವೀ ವಂಶಜರ ಸಹಿತ ಆತನ ಬುದ್ಧಿಮತೆಯ್ತ ಸೃಷ್ಟಿಯ ಉಳಿದವರಿಗೆ ಮರುಆಶ್ವಾಸನೆ ಕೊಡುವಂತೆ, ದೇವರು ಈ ದಂಗೆಯನ್ನು ನ್ಯಾಯವಾದ ರೀತಿಯಲ್ಲಿ ಹೇಗೆ ನಿಭಾಯಿಸುವನು ಎಂಬ ಪ್ರಶ್ನೆಯು ಈಗ ಎದಿತ್ದು.
ದೇವರ ವಿವೇಕದ ಪ್ರತಿಕ್ರಿಯೆ
ಸೈತಾನ, ಆದಾಮ ಮತ್ತು ಹವ್ವರನ್ನು ದೇವರು ತಕ್ಷಣ ನಾಶಮಾಡಿದ್ದರೆ, ಅದು ಅತ್ಯುತ್ತಮವಾಗಿರುತ್ತಿತ್ತು ಎಂದು ಕೆಲವರು ವಾದಿಸಬಹುದು. ಆದರೆ ದಂಗೆಯಿಂದಾಗಿ ಎಬ್ಬಿಸಲ್ಪಟ್ಟ ವಾದಾಂಶಗಳನ್ನು ಅದು ಇತ್ಯರ್ಥಗೊಳಿಸತ್ತಿರಲಿಲ್ಲ. ದೇವರ ಆಳಿಕೆಯಿಂದ ಸ್ವತಂತ್ರವಾಗಿರುವ ಮಾನವರು ಹೆಚ್ಚು ಉತ್ತಮ ಜೀವಿತವನ್ನು ಆನಂದಿಸುವರು ಎಂದು ಸೂಚಿಸುತ್ತಾ, ಸೈತಾನನು ದೇವರ ಆಳಿಕೆಯ ವಿಧಾನವನ್ನು ಪ್ರಶ್ನಿಸಿದ್ದನು. ದೇವರ ಆಳಿಕೆಯ ವಿರುದ್ಧವಾಗಿ ಮೊದಲ ಇಬ್ಬರು ಮಾನವರನ್ನು ತಿರುಗಿಸುವುದರಿಂದಾದ ಯಶಸ್ಸು ಇತರ ಪ್ರಶ್ನೆಗಳನ್ನು ಎಬ್ಬಿಸಿತು ಸಹ. ಆದಾಮ, ಹವ್ವರು ಪಾಪ ಮಾಡಿದ್ದರಿಂದ, ದೇವರು ಮನುಷ್ಯನನ್ನು ಸೃಷ್ಟಿಸಿದ ರೀತಿಯಲ್ಲಿ ಏನಾದರೊಂದು ದೋಷ ಇದೆಯೆಂದು ಇದರ ಅರ್ಥವೊ? ದೇವರಿಗೆ ನಂಬಿಗಸ್ತನಾಗಿ ಭೂಮಿಯ ಮೇಲೆ ಯಾವನೇ ಒಬ್ಬನು ಇರಲು ಸಾಧ್ಯವೊ? ಮತ್ತು ಸೈತಾನನ ದಂಗೆಯನ್ನು ನೋಡಿದ ಯೆಹೋವನ ದಿವ್ಯ ಪುತ್ರರ ಕುರಿತಾಗಿ ಏನು? ಅವನ ಸಾರ್ವಭೌಮತೆಯನ್ನು ಅವರು ಸಮರ್ಥಿಸುವರೊ? ಈ ವಿವಾದಾಂಶಗಳನ್ನು ಇತ್ಯರ್ಥಗೊಳಿಸಲು ಸಾಕಷ್ಟು ಸಮಯವು ಆವಶ್ಯಕವೆಂಬುದು ವ್ಯಕ್ತ. ಆದುದರಿಂದಲೇ ನಮ್ಮ ದಿನಗಳ ತನಕ ಸೈತಾನನು ಅಸ್ತಿತ್ವದಲ್ಲಿರುವಂತೆ ದೇವರು ಅನುಮತಿಸಿದ್ದಾನೆ.
ಆದಾಮ, ಹವ್ವರಿಗಾದರೊ, ಅವರ ಅವಿಧೇಯತೆಯ ದಿನವೇ ದೇವರು ಮರಣ ದಂಡನೆಯನ್ನು ವಿಧಿಸಿದನು. ಹೀಗೆ ಮರಣಿಸುವ ಕಾರ್ಯಗತಿಯು ಆರಂಭಿಸಿತು. ಆದಾಮ, ಹವ್ವರ ಪಾಪದ ಅನಂತರ ಗರ್ಭಧರಿಸಲ್ಪಟ್ಟು ಹುಟ್ಟಿದಂತಹ ಅವರ ವಂಶಜರು ತಮ್ಮ ಹೆತ್ತವರಿಂದ ಪಾಪ ಮತ್ತು ಮರಣವನ್ನು ಬಾಧ್ಯತೆಯಾಗಿ ಹೊಂದಿದರು.—ರೋಮಾಪುರ 5:14.
ಸೈತಾನನು ವಾದಾಂಶದ ತನ್ನ ಪಕ್ಕದಲ್ಲಿ ಮೊದಲ ಇಬ್ಬರು ಮಾನವರೊಂದಿಗೆ ಆರಂಭಿಸಿದನು. ಆದಾಮನ ಎಲ್ಲಾ ವಂಶಜರನ್ನು ತನ್ನ ಹತೋಟಿಯೊಳಗೆ ಇಟ್ಟುಕೊಳ್ಳಲು ಪ್ರಯತ್ನಿಸುವುದರಲ್ಲಿ ಅವನಿಗೆ ಅನುಮತಿಸಲ್ಪಟ್ಟ ಸಮಯವನ್ನು ಅವನು ಬಳಸಿದ್ದಾನೆ. ತನ್ನ ದಂಗೆಯಲ್ಲಿ ಸೇರಿಕೊಳ್ಳುವಂತೆ ಅನೇಕ ದೇವದೂತರನ್ನು ವಂಚಿಸುವುದರಲ್ಲಿ ಸಹ ಅವನು ಯಶಸ್ವಿಯಾಗಿದ್ದಾನೆ. ಆದಾಗ್ಯೂ, ದೇವರ ದಿವ್ಯ ಪುತ್ರರಲ್ಲಿ ಅಧಿಕಾಂಶ ಮಂದಿ ಯೆಹೋವನ ಪ್ರಭುತ್ವದ ನೀತಿಯುಕ್ತತೆಯನ್ನು ನಿಷ್ಠೆಯಿಂದ ಸಮರ್ಥಿಸಿದ್ದಾರೆ.—ಆದಿಕಾಂಡ 6:1, 2; ಯೂದ 6; ಪ್ರಕಟನೆ 12:3, 9.
ಯೋಬನ ದಿನಗಳಲ್ಲಿ ಬಹಳಷ್ಟು ಅಸ್ತಿತ್ವದಲ್ಲಿದ್ದ ಒಂದು ವಾದಾಂಶವು, ದೇವರ ಆಳಿಕೆಯ ವಿರುದ್ಧ ಸೈತಾನನದ್ದು ವಿವಾದದಲ್ಲಿತ್ತು. ಹೇಬೇಲ, ಹನೋಕ, ನೋಹ, ಅಬ್ರಹಾಮ, ಇಸಾಕ, ಯಾಕೋಬ, ಮತ್ತು ಯೋಸೇಫರಂತಹ ದೇವಭೀರು ಪುರುಷರು ಈಗಾಗಲೇ ಮಾಡಿದ್ದಂತೆ, ಈ ನಂಬಿಗಸ್ತ ಮನುಷ್ಯನು ಸೈತಾನ ಸಂಬಂಧಿತ ಸ್ವಾತಂತ್ರ್ಯಕ್ಕಿಂತ ದೇವರ ನೀತಿಯ ಆಳಿಕೆಯನ್ನು ಹೆಚ್ಚು ಇಷ್ಟಪಟ್ಟನು ಎಂದು ತನ್ನ ನಡತೆಯ ಮೂಲಕ ರುಜುಪಡಿಸಿದನು. ಯೋಬನು ಸ್ವರ್ಗದಲ್ಲಿ ದೇವರ ನಂಬಿಗಸ್ತ ದೂತರ ಸಮ್ಮುಖದಲ್ಲಿ ನಡೆದಂತಹ ಸಂಭಾಷಣೆಯ ವಿಷಯವಾದನು. ತನ್ನ ನೀತಿಯ ಬೆಂಬಲದಲ್ಲಿ, ದೇವರು ಸೈತಾನನಿಗೆ ಅಂದದ್ದು: “ನನ್ನ ದಾಸನಾದ ಯೋಬನ ಮೇಲೆ ಗಮನವಿಟ್ಟಿಯಾ? ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ ಯಥಾರ್ಥಚಿತ್ತನೂ ಆಗಿದ್ದಾನೆ.”—ಯೋಬ 1:6-8.
ಸೋಲನ್ನೊಪ್ಪಲು ನಿರಾಕರಿಸುತ್ತಾ, ದೇವರು ಯೋಬನನ್ನು ಭೌತಿಕ ಅಭ್ಯುದಯದೊಂದಿಗೆ ಹೇರಳವಾಗಿ ಆಶೀರ್ವದಿಸಿದರ್ದಿಂದ, ಕೇವಲ ಸ್ವಾರ್ಥ ಕಾರಣಗಳಿಗಾಗಿ ಯೋಬನು ದೇವರನ್ನು ಸೇವಿಸಿದನೆಂದು ಸೈತಾನನು ವಾದಿಸಿದನು. ಆದುದರಿಂದ ಸೈತಾನನು ಆಪಾದಿಸಿದ್ದು: “ಆದರೆ ನಿನ್ನ ಕೈನೀಡಿ ಅವನ ಸೊತ್ತನ್ನೆಲ್ಲಾ ಅಳಿಸಿಬಿಡು. ಆಗ ಅವನು ನಿನ್ನ ಎದುರಿಗೆ ನಿನ್ನನ್ನು ದೂಷಿಸಲೇ ದೂಷಿಸುವನು.” (ಯೋಬ 1:11) ಸೈತಾನನು ಇನ್ನೂ ಮುಂದಕ್ಕೆ ಹೋಗಿ, ದೇವರ ಎಲ್ಲಾ ಜೀವಿಗಳ ಯಥಾರ್ಥತೆಯ ಕುರಿತು ಪ್ರಶ್ನೆಯೆಬ್ಬಿಸಿದನು. “ಒಬ್ಬ ಮನುಷ್ಯನು ಪ್ರಾಣವನ್ನು ಉಳಿಸಿಕೊಳ್ಳುವದಕ್ಕೋಸ್ಕರ ತನ್ನ ಸರ್ವಸ್ವವನ್ನೂ ಕೊಡುವನು,” ಎಂದವನು ಆರೋಪಿಸಿದನು. (ಯೋಬ 2:4) ಈ ಅವಮಾನಕಾರಿ ಆಕ್ರಮಣವು ಕೇವಲ ಯೋಬನನ್ನು ಮಾತ್ರವಲ್ಲದೆ, ಭೂಪರಲೋಕಗಳಲ್ಲಿರುವ ದೇವರ ಎಲ್ಲಾ ನಂಬಿಗಸ್ತ ಆರಾಧಕರನ್ನು ಒಳಗೂಡಿಸಿದೆ. ಅವರ ಜೀವಗಳು ಗಂಡಾಂತರದಲ್ಲಿರುವುದಾದರೆ ಯೆಹೋವನೊಂದಿಗಿನ ತಮ್ಮ ಸಂಬಂಧವನ್ನು ಅವರು ತ್ಯಜಿಸುವರು ಎಂದು ಸೈತಾನನು ಸೂಚಿಸಿದನು.
ಯೋಬನ ಯಥಾರ್ಥತೆಯ ಕುರಿತು ಯೆಹೋವ ದೇವರಿಗೆ ಪೂರ್ಣ ಭರವಸೆ ಇತ್ತು. ಅದರ ಸಾಕ್ಷ್ಯವನ್ನು ನೀಡುತ್ತಾ, ಯೋಬನ ಮೇಲೆ ಮಾನವ ಕಷ್ಟಾನುಭವ ಬರುವಂತೆ ಅವನು ಸೈತಾನನನ್ನು ಅನುಮತಿಸಿದನು. ತನ್ನ ನಂಬಿಗಸ್ತಿಕೆಯಿಂದ ಯೋಬನು ತನ್ನ ಸ್ವಂತ ಹೆಸರನ್ನು ನಿಷ್ಕಳಂಕಗೊಳಿಸಿದ್ದು ಮಾತ್ರವಲ್ಲ, ಹೆಚ್ಚು ಪ್ರಾಮುಖ್ಯವಾಗಿ ಯೆಹೋವನ ಸಾರ್ವಭೌಮತ್ವದ ನೀತಿಯುಕ್ತತೆಯನ್ನು ಎತ್ತಿಹಿಡಿದನು. ಪಿಶಾಚನು ಒಬ್ಬ ಸುಳ್ಳುಗಾರನಾಗಿ ಪರಿಣಮಿಸಿದನು.—ಯೋಬ 2:10; 42:7.
ಆದಾಗ್ಯೂ, ಪರೀಕ್ಷೆಯ ಕೆಳಗಿನ ನಂಬಿಗಸ್ತಿಕೆಯ ಅತ್ಯುತ್ತಮ ಉದಾಹರಣೆಯು ಯೇಸು ಕ್ರಿಸ್ತನಾಗಿದ್ದಾನೆ. ದೇವರು ಈ ದಿವ್ಯ ಪುತ್ರನ ಜೀವವನ್ನು ಸ್ವರ್ಗದಿಂದ ಕನ್ಯೆಯೊಬ್ಬಳ ಗರ್ಭಕ್ಕೆ ಸ್ಥಳಾಂತರಿಸಿದನು. ಆದಕಾರಣ ಯೇಸು ಪಾಪ ಮತ್ತು ಅಪರಿಪೂರ್ಣತೆಯನ್ನು ಬಾಧ್ಯವಾಗಿ ಹೊಂದಲಿಲ್ಲ. ಬದಲಾಗಿ ಪ್ರಥಮ ಮಾನವನು ಆತನ ಪರಿಪೂರ್ಣತೆಯನ್ನು ಕಳಕೊಳ್ಳುವ ಮೊದಲು ಇದದ್ದಕ್ಕೆ ಸಮಾನವಾದ ಪರಿಪೂರ್ಣ ಮಾನವನಾಗಿ ಅವನು ಬೆಳೆದನು. ಸೈತಾನನು ಯೇಸುವನ್ನು ಒಂದು ವಿಶೇಷ ಗುರಿಯನ್ನಾಗಿ ಮಾಡಿ, ಅವನ ಮೇಲೆ ಅನೇಕ ಶೋಧನೆಗಳನ್ನು ಮತ್ತು ಪರೀಕ್ಷೆಗಳನ್ನು ತಂದು, ಅವಮಾನಕಾರಿ ಮರಣವೊಂದರಲ್ಲಿ ಅದನ್ನು ಪರಾಕಾಷ್ಠೆಗೇರಿಸಿದನು. ಆದರೆ ಸೈತಾನನು ಯೇಸುವಿನ ಯಥಾರ್ಥತೆಯನ್ನು ಮುರಿಯುವುದರಲ್ಲಿ ಪರಾಜಯಗೊಂಡನು. ಒಂದು ಪೂರ್ಣ ರೀತಿಯಲ್ಲಿ ಯೇಸುವು ತನ್ನ ತಂದೆಯ ಆಳಿಕೆಯ ನೀತಿಯುಕ್ತತೆಯನ್ನು ಎತ್ತಿಹಿಡಿದನು. ಸೈತಾನನ ದಂಗೆಯಲ್ಲಿ ಜತೆಗೂಡಲಿಕ್ಕಾಗಿ ಮೊದಲನೆಯ ಮಾನವನಾದ ಆದಾಮನಿಗೆ ಯಾವುದೇ ವಿನಾಯಿತಿ ಇರಲಿಲ್ಲವೆಂಬುದನ್ನು ಸಹ ಅವನು ರುಜುಪಡಿಸಿದನು. ತನ್ನ ಎಷ್ಟೋ ಕಡಿಮೆ ತೆರನಾದ ಪರೀಕ್ಷೆಯಲ್ಲಿ ಆದಾಮನು ನಂಬಿಗಸ್ತನಾಗಿರಸಾಧ್ಯವಿತ್ತು.
ಬೇರೆ ಏನು ರುಜುಪಡಿಸಲ್ಪಟ್ಟಿತು?
ಆದಾಮ, ಹವ್ವರ ದಂಗೆಯಂದಿನಿಂದ, ಮಾನವ ಕಷ್ಟಾನುಭವದ ಸುಮಾರು 6,000 ವರುಷಗಳು ಗತಿಸಿವೆ. ಈ ಸಮಯದಲ್ಲಿ ಸರಕಾರದ ಅನೇಕ ವಿಧಗಳೊಂದಿಗೆ ಮಾನವರು ಪ್ರಯೋಗ ನಡಿಸಲು ದೇವರು ಮಾನವಕುಲಕ್ಕೆ ಅನುಮತಿಸಿದನು. ಮಾನವನು ಸ್ವತಃ ತನ್ನನು ಆಳಿಕೊಳ್ಳಲು ಶಕ್ತನಲ್ಲವೆಂದು ಮಾನವ ಕಷ್ಟಾನುಭವದ ಘೋರ ದಾಖಲೆಯು ರುಜುಪಡಿಸಿದೆ. ವಾಸ್ತವದಲ್ಲಿ, ಭೂಮಿಯ ಅನೇಕ ಪ್ರದೇಶಗಳಲ್ಲಿ ಅರಾಜಕತೆಯು ಸಲುವಳಿಯಲ್ಲಿದೆ. ಸೈತಾನನಿಂದ ಸಮರ್ಥಿಸಲ್ಪಟ್ಟಂತೆಯೇ, ದೇವರಿಂದ ಸ್ವಾತಂತ್ರ್ಯವು ಆಪತ್ಕಾರಿಯಾಗಿದೆ.
ಯೆಹೋವನು ತನಗೇ ರುಜುಪಡಿಸಿಕೊಡಬೇಕಾದ ಯಾವ ವಿಷಯಗಳೂ ಇರಲಿಲ್ಲ. ಆಳಿಕೆಯ ಅವನ ವಿಧಾನವು ನೀತಿಯದ್ದು ಮತ್ತು ಆತನ ಜೀವಿಗಳ ಅತ್ಯುತ್ತಮ ಹಿತಾಸಕ್ತಿಯದ್ದು ಆಗಿದೆ. ಆದಾಗ್ಯೂ, ಸಂತೃಪ್ತಿಕರವಾಗಿ ಸೈತಾನನ ದಂಗೆಯಿಂದ ಎಬ್ಬಿಸಲ್ಪಟ್ಟ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಲು, ಅವನ ನೀತಿಯ ಆಳಿಕೆಗಾಗಿ ಅವರ ಆದ್ಯತೆಯನ್ನು ತೋರಿಸಲು ತನ್ನ ಬುದ್ಧಿಮತೆಯ್ತ ಜೀವಿಗಳಿಗೆ ಅವನು ಅವಕಾಶವನ್ನು ಅನುಮತಿಸಿದನು.
ದೇವರನ್ನು ಪ್ರೀತಿಸುವುದರ ಮತ್ತು ಅವನಿಗೆ ನಂಬಿಗಸ್ತರಾಗಿರುವುದರ ಬಹುಮಾನಗಳು ಪಿಶಾಚನ ಕೈಯ ಕಷ್ಟಾನುಭವದ ತಾತ್ಕಾಲಿಕ ಸಮಯಾವಧಿಗಿಂತ ಹೆಚ್ಚು ಬೆಲೆಯುಳ್ಳದ್ದಾಗಿವೆ. ಯೋಬನ ವಿದ್ಯಮಾನವು ಇದನ್ನು ನಿದರ್ಶಿಸುತ್ತದೆ. ಪಿಶಾಚನು ಯೋಬನ ಮೇಲೆ ತಂದಂತಹ ರೋಗದಿಂದ ಯೆಹೋವನು ಅವನನ್ನು ವಾಸಿಮಾಡಿದನು. ಇನ್ನೂ ಹೆಚ್ಚಾಗಿ, ದೇವರು “ಯೋಬನ ಮೊದಲನೆಯ ಸ್ಥಿತಿಗಿಂತಲೂ ಅವನ ಕಡೆಯ ಸ್ಥಿತಿಯನ್ನು ಹೀಗೆ ಹೆಚ್ಚಾಗಿ ಆಶೀರ್ವದಿಸಿದನು.” ಕೊನೆಯಲ್ಲಿ, ಜೀವಿತದ 140-ವರುಷ ವಿಸ್ತರಣದ ಅನಂತರ, “ಯೋಬನು ಮುಪ್ಪಿನ ಮುದುಕನಾಗಿ ಗತಿಸಿದನು.”—ಯೋಬ 42:10-17.
ಕ್ರೈಸ್ತ ಬೈಬಲ್ ಲೇಖಕನಾದ ಯಾಕೋಬನು ಹೀಗನ್ನುತ್ತಾ ಅದಕ್ಕೆ ಗಮನ ಸೆಳೆಯುತ್ತಾನೆ: “ಯೆಹೋವನು ವಾತ್ಸಲ್ಯದಲ್ಲಿ ಅತಿ ಕೋಮಲನೂ, ಕನಿಕರನೂ ಆಗಿದ್ದಾನೆ ಎಂದು ನೀವು ಯೋಬನ ತಾಳ್ಮೆಯ ವಿಷಯವಾಗಿ ಕೇಳಿದ್ದೀರಿ ಮತ್ತು ಯೆಹೋವನು ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ನೋಡಿದ್ದೀರಿ.”—ಯಾಕೋಬ 5:11, NW, ಪಾದಟಿಪ್ಪಣಿ.
ಸೈತಾನನ ಮತ್ತು ಅವನ ಲೋಕದ ಹೊತ್ತು ಮುಗಿದದೆ. ಬೇಗನೆ, ಸೈತಾನನ ದಂಗೆಯು ಮಾನವಕುಲದ ಮೇಲೆ ತಂದಂತಹ ಎಲ್ಲಾ ಕಷ್ಟಾನುಭವವನ್ನು ದೇವರು ವಿಪರ್ಯಸ್ತಗೊಳಿಸುವನು. ಸತ್ತವರೂ ಸಹ ಎಬ್ಬಿಸಲ್ಪಡುವರು. (ಯೋಹಾನ 11:25) ಅನಂತರ, ಯೋಬನಂತಹ ನಂಬಿಗಸ್ತ ಮನುಷ್ಯರಿಗೆ ಪ್ರಮೋದವನದ ಭೂಮಿಯ ಮೇಲೆ ಅನಂತ ಜೀವವನ್ನು ಪಡೆಯುವ ಅವಕಾಶವಿರುವುದು. ತನ್ನ ಸೇವಕರ ಮೇಲೆ ದೇವರು ಸುರಿಸಲಿರುವ ಈ ಭಾವೀ ಆಶೀರ್ವಾದಗಳು, ನೀತಿಯ ಸಾರ್ವಭೌಮನೋಪಾದಿ ಆತನು ನಿಜವಾಗಿಯೂ “ವಾತ್ಸಲ್ಯದಲ್ಲಿ ಅತಿ ಕೋಮಲನೂ, ಕನಿಕರನೂ” ಆಗಿರುವನು ಎಂದು ಅವನನ್ನು ನಿರ್ದೋಷೀಕರಿಸುವುದು.
[ಅಧ್ಯಯನ ಪ್ರಶ್ನೆಗಳು]
a “ಕೆಡುಕಿನ ಮೂಲ” ಎಂಬ ತನ್ನ ಚರ್ಚೆಯಲ್ಲಿ ಈ ಪ್ರಶ್ನೆಯನ್ನು ಪರೀಕ್ಷಿಸಿದ ಇಪ್ಪತ್ತನೆಯ ಶತಕದಾರಂಭದ ಒಬ್ಬ ವಕೀಲನೂ, ಗ್ರಂಥಕರ್ತನೂ ಆಗಿದ್ದ ಫಿಲಿಪ್ ಮಾರೊ, ಇದು “ಮಾನವಕುಲದ ಎಲ್ಲಾ ತೊಂದರೆಯ ಕಾರಣ” ಎಂದು ತೀರ್ಮಾನಿಸಿದನು.
[ಪುಟ 8ರಲ್ಲಿರುವಚೌಕ]
ಮನುಷ್ಯರ ಕ್ರೂರ ದೇವರುಗಳು
ಪ್ರಾಚೀನ ದೇವರುಗಳನ್ನು ರಕ್ತಪಿಪಾಸುಗಳಾಗಿಯೂ ಅತಿ ಕಾಮಾಸಕ್ತಿಯವರಾಗಿಯೂ ಅನೇಕ ವೇಳೆ ವರ್ಣಿಸಲಾಗಿದೆ. ಅವರನ್ನು ಪ್ರಸನ್ನಗೊಳಿಸಲು, ಹೆತ್ತವರು ತಮ್ಮ ಮಕ್ಕಳನ್ನು ಸಹ ಸಜೀವವಾಗಿ ಬೆಂಕಿಯಲ್ಲಿ ಸುಟ್ಟಿದ್ದಾರೆ. (ಧರ್ಮೋಪದೇಶಕಾಂಡ 12:31) ಇನ್ನೊಂದು ಕೊನೆಯಲ್ಲಿ, ದೇವರು ಕೋಪ ಯಾ ಕರುಣೆಯಂತಹ ಭಾವನೆಗಳಿಲ್ಲದವನಾಗಿದ್ದಾನೆ ಎಂದು ವಿಧರ್ಮಿ ತತ್ವಜ್ಞಾನಿಗಳು ಕಲಿಸಿದ್ದಾರೆ.
ಈ ತತ್ವಜ್ಞಾನಿಗಳ ದೆವ್ವ-ಪ್ರೇರಿತ ದೃಷ್ಟಿಕೋನಗಳು ದೇವರ ಜನರೆಂದು ಹೇಳಿಕೊಳ್ಳುತ್ತಿದ್ದ ಯೆಹೂದ್ಯರನ್ನು ಪ್ರಭಾವಿಸಿದವು. ಯೇಸುವಿನ ಒಬ್ಬ ಸಮಕಾಲೀನನಾಗಿದ್ದ ಯೆಹೂದಿ ತತ್ವಜ್ಞಾನಿ ಫಿಲೊ, ಪ್ರತಿಪಾದಿಸಿದ್ದೇನಂದರೆ ದೇವರು “ಎಂದಿಗೂ ಯಾವುದೇ ಭಾವೋದ್ರೇಕಕ್ಕೆ ಒಳಪಡುವುದಿಲ್ಲ.”
ಫರಿಸಾಯರ ಕಟ್ಟುನಿಟ್ಟಿನ ಯೆಹೂದಿ ಮತಪಂಥವು ಸಹ ಗ್ರೀಕ್ ತತ್ವಜ್ಞಾನದ ಪ್ರಭಾವದಿಂದ ಪಾರಾಗಲಿಲ್ಲ. ಮಾನವ ಶರೀರದೊಳಗೆ ಸಿಕ್ಕಿಕೊಂಡಿರುವ ಅಮರವಾದ ಆತ್ಮವೊಂದರಿಂದ ಮನುಷ್ಯನು ಉಂಟುಮಾಡಲ್ಪಟ್ಟಿದ್ದಾನೆ ಎಂಬ ಪ್ಲೇಟೋವಿನ ಬೋಧನೆಗಳನ್ನು ಅವರು ಸ್ವೀಕರಿಸಿದರು. ಇನ್ನೂ ಹೆಚ್ಚಾಗಿ, ಮೊದಲನೆಯ ಶತಕದ ಇತಿಹಾಸಗಾರನಾದ ಜೋಸೀಫಸನಿಗನುಸಾರ, ದುಷ್ಟ ಜನರ ಆತ್ಮಗಳು “ನಿತ್ಯ ಶಿಕ್ಷೆಯ ಬಾಧೆಯನ್ನನುಭವಿಸುತ್ತವೆ” ಎಂದು ಫರಿಸಾಯರು ನಂಬಿದರು. ಆದಾಗ್ಯೂ, ಬೈಬಲು ಅಂತಹ ದೃಷ್ಟಿಕೋನಕ್ಕೆ ಯಾವುದೇ ಆಧಾರವನ್ನು ನೀಡುವುದಿಲ್ಲ.—ಆದಿಕಾಂಡ 2:7; 3:19; ಪ್ರಸಂಗಿ 9:5; ಯೆಹೆಜ್ಕೇಲ 18:4.
ಯೇಸುವಿನ ಹಿಂಬಾಲಕರ ಕುರಿತಾಗಿ ಏನು? ವಿಧರ್ಮಿ ತತ್ವಜ್ಞಾನದಿಂದ ಪ್ರಭಾವಿಸಲ್ಪಡಲು ಅವರು ತಮ್ಮನ್ನು ಅನುಮತಿಸಿಕೊಂಡರೊ? ಈ ಅಪಾಯವನ್ನು ಅರಿತುಕೊಂಡು, ಅಪೊಸ್ತಲ ಪೌಲನು ಜೊತೆ ಕ್ರೈಸ್ತರನ್ನು ಎಚ್ಚರಿಸಿದ್ದು: “ಕ್ರಿಸ್ತನನ್ನು ಅನುಸರಿಸದೆ ಮನುಷ್ಯರ ಸಂಪ್ರದಾಯಗಳನ್ನೂ ಪ್ರಾಪಂಚಿಕಬಾಲಬೋಧೆಯನ್ನೂ ಅನುಸರಿಸುವವರು ನಿಮ್ಮಲ್ಲಿ ಬಂದು ಮೋಸವಾದ ನಿರರ್ಥಕ ತತ್ವಜ್ಞಾನಬೋಧನೆಯಿಂದ ನಿಮ್ಮ ಮನಸ್ಸನ್ನು ಕೆಡಿಸಿ ನಿಮ್ಮನ್ನು ವಶಮಾಡಿಕೊಂಡಾರು, ಎಚ್ಚರಿಕೆಯಾಗಿರಿ.”—ಕೊಲೊಸ್ಸೆ 2:8; 1 ತಿಮೊಥೆಯ 6:20 ಸಹ ನೋಡಿರಿ.
ವಿಷಾದನೀಯವಾಗಿ, ಎರಡನೆಯ ಮತ್ತು ಮೂರನೆಯ ಶತಮಾನದ ಕ್ರೈಸ್ತ ಮೇಲ್ವಿಚಾರಕರೆಂದು ಹೇಳಿಕೊಂಡ ಅನೇಕರು ಆ ಎಚ್ಚರಿಕೆಯನ್ನು ಅಲಕ್ಷಿಸಿದರು ಮತ್ತು ದೇವರಿಗೆ ಯಾವುದೇ ಭಾವನೆಗಳಿಲವ್ಲೆಂದು ಕಲಿಸಿದರು. ದಿ ಎನ್ಸೈಕ್ಲೊಪೀಡಿಯ ಆಫ್ ರಿಲಿಜನ್ ಹೇಳುವುದು: “ಒಟ್ಟಿನಲ್ಲಿ, ದೇವರ ಗುಣಗಳನ್ನು ಸುಮಾರಾಗಿ ಯೆಹೂದಿ ಮತ್ತು ಆ ಕಾಲದ ತತ್ವ ವಿಚಾರಗಳಲ್ಲಿ ಸ್ಥಿರೀಕರಿಸಲ್ಪಟ್ಟಿರುವಂತೆಯೇ ಗ್ರಹಿಸಲಾಯಿತು . . . ಪಿತನಾದ ದೇವರಿಗೆ ಕರುಣೆಯಂತಹ ಭಾವನೆಗಳು ಇರಬಲ್ಲವು ಎಂಬ ಯೋಚನೆಯು . . . ಕಡಿಮೆ ಪಕ್ಷ ಇಪ್ಪತ್ತನೆಯ ಶತಕದ ಕೊನೆಯ ಭಾಗದ ವರೆಗೆ ಸಾಮಾನ್ಯವಾಗಿ ಅಸ್ವೀಕರಣೀಯವಾಗಿ ಎಣಿಸಲ್ಪಡುತ್ತಿತ್ತು.”
ಹೀಗೆ, ಪಾಪಿಗಳನ್ನು ನಿತ್ಯಕ್ಕೂ ಪ್ರಜ್ಞೆಯಿರುವ ಯಾತನೆಯಲ್ಲಿ ಬಾಧಿಸಲ್ಪಡುವಂತೆ ಮಾಡುವುದರ ಮೂಲಕ ದಂಡಿಸುವ ಒಬ್ಬ ಕ್ರೂರ ದೇವರ ಸುಳ್ಳು ಬೋಧನೆಯನ್ನು ಕ್ರೈಸ್ತಪ್ರಪಂಚವು ಸ್ವೀಕರಿಸಿತು. ಇನ್ನೊಂದು ಪಕ್ಕದಲ್ಲಿ, ತನ್ನ ವಾಕ್ಯವಾದ ಬೈಬಲಿನಲ್ಲಿ “ಪಾಪವು ಕೊಡುವ ಸಂಬಳ ಮರಣ,”ವೇ ಹೊರತು ಪ್ರಜ್ಞೆಯಿರುವ ನಿತ್ಯ ಯಾತನೆಯಲ್ಲ ಎಂದು ಯೆಹೋವ ದೇವರು ಸರಳವಾಗಿ ಹೇಳುತ್ತಾನೆ.—ರೋಮಾಪುರ 6:23.
[ಕೃಪೆ]
Above: Acropolis Museum, Greece
Courtesy of The British Museum
[ಪುಟ 7 ರಲ್ಲಿರುವ ಚಿತ್ರ]
ಏದೇನ್ ಸಂಬಂಧಿತ ಪ್ರಮೋದವನವಾಗಿ ಭೂಮಿಯನ್ನು ಮಾರ್ಪಡಿಸುವ ದೇವರ ಉದ್ದೇಶವು ನೆರವೇರಲೇಬೇಕು!