ಯೋಬನ ಪ್ರತಿಫಲ—ನಿರೀಕ್ಷೆಯ ಒಂದು ಮೂಲ
“ಯೆಹೋವನು ಯೋಬನ ಮೊದಲನೆಯ ಸ್ಥಿತಿಗಿಂತಲೂ ಅವನ ಕಡೆಯ ಸ್ಥಿತಿಯನ್ನು . . . ಹೆಚ್ಚಾಗಿ ಆಶೀರ್ವದಿಸಿದನು.”—ಯೋಬ 42:12.
1. ಪರೀಕ್ಷೆಗಳು ಅವರನ್ನು ಬಹಳವಾಗಿ ದುರ್ಬಲಗೊಳಿಸುವಾಗಲೂ, ಯೆಹೋವನು ತನ್ನ ಜನರಿಗಾಗಿ ಏನನ್ನು ಮಾಡುತ್ತಾನೆ?
ಯೆಹೋವನು “ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ.” (ಇಬ್ರಿಯ 11:6) ಪರೀಕ್ಷೆಗಳು ಅವರನ್ನು ಸತ್ತವರಂತೆ ಬಲಹೀನರನ್ನಾಗಿ ಮಾಡಿರುವುದಾದರೂ ಧೈರ್ಯದಿಂದ ಸಾಕ್ಷಿನೀಡುವಂತೆ ಆತನು ತನ್ನ ನಿಷ್ಠೆಯುಳ್ಳ ಜನರನ್ನು ಪ್ರಚೋದಿಸುತ್ತಾನೆ. (ಯೋಬ 26:5; ಪ್ರಕಟನೆ 11:3, 7, 11) ಕಷ್ಟಾನುಭವಿಸುತ್ತಿದ್ದ ಯೋಬನ ವಿಷಯದಲ್ಲಿ ಅದು ಸತ್ಯವಾಗಿ ಪರಿಣಮಿಸಿತು. ಮೂವರು ಸುಳ್ಳು ಸಮಾಧಾನಕಾರರ ಮೂಲಕ ದೂಷಿಸಲ್ಪಟ್ಟರೂ ಮನುಷ್ಯರ ಭಯದಿಂದ ಅವನು ಮೌನತಾಳಲಿಲ್ಲ. ಬದಲಿಗೆ, ಅವನೊಂದು ಧೀರ ಸಾಕ್ಷಿಯನ್ನು ಕೊಟ್ಟನು.
2. ಹಿಂಸೆ ಮತ್ತು ಯಾತನೆಯನ್ನು ಅವರು ಅನುಭವಿಸಿದ್ದರೂ, ಯೆಹೋವನ ಸಾಕ್ಷಿಗಳು ತಮ್ಮ ಪರೀಕೆಗ್ಷಳಿಂದ ಹೇಗೆ ಹೊರಬಂದಿದ್ದಾರೆ?
2 ಪ್ರಚಲಿತ ದಿನದ ಅನೇಕ ಯೆಹೋವನ ಸಾಕ್ಷಿಗಳು ಎಂತಹ ಮಹಾ ಹಿಂಸೆ ಮತ್ತು ಯಾತನೆಯನ್ನು ಅನುಭವಿಸಿದ್ದಾರೆಂದರೆ, ಅವರು ಮರಣಕ್ಕೆ ಸಮೀಪವಾಗಿ ಪರಿಣಮಿಸಿದ್ದಾರೆ. (2 ಕೊರಿಂಥ 11:23) ಹಾಗಿದ್ದರೂ ಯೋಬನಂತೆ ಅವರು ದೇವರಿಗಾಗಿ ಪ್ರೀತಿಯನ್ನು ತೋರಿಸಿದ್ದಾರೆ ಮತ್ತು ನೀತಿಯನ್ನು ಆಚರಿಸಿದ್ದಾರೆ. (ಯೆಹೆಜ್ಕೇಲ 14:14, 20) ಯೆಹೋವನನ್ನು ಮೆಚ್ಚಿಸಲು ನಿರ್ಧರಿಸಿಕೊಂಡು, ಒಂದು ಧೀರ ಸಾಕ್ಷಿಯನ್ನು ಕೊಡಲಿಕ್ಕಾಗಿ ಬಲಪಡಿಸಲ್ಪಟ್ಟವರಾಗಿ, ಮತ್ತು ಯಥಾರ್ಥವಾದ ನಿರೀಕ್ಷೆಯಿಂದ ತುಂಬಲ್ಪಟ್ಟವರಾಗಿ, ತಮ್ಮ ಪರೀಕೆಗ್ಷಳಿಂದ ಅವರು ಸಹ ಹೊರಬಂದಿದ್ದಾರೆ.
ಧೈರ್ಯದ ಸಾಕ್ಷಿಯನ್ನು ಯೋಬನು ಕೊಡುತ್ತಾನೆ
3. ಯಾವ ರೀತಿಯ ಸಾಕ್ಷಿಯನ್ನು ಯೋಬನು ತನ್ನ ಅಂತಿಮ ಭಾಷಣದಲ್ಲಿ ನೀಡಿದನು?
3 ತನ್ನ ಕೊನೆಯ ಭಾಷಣದಲ್ಲಿ, ತಾನು ಪೂರ್ವದಲ್ಲಿ ಕೊಟ್ಟದ್ದಕ್ಕಿಂತಲೂ ಹೆಚ್ಚು ಮಹತ್ತರವಾದ ಸಾಕ್ಷಿಯನ್ನು ಯೋಬನು ನೀಡಿದನು. ತನ್ನ ಸುಳ್ಳು ಸಮಾಧಾನಕಾರರನ್ನು ಅವನು ಸಂಪೂರ್ಣವಾಗಿ ಸುಮ್ಮನಾಗಿಸಿದನು. ತೀಕ್ಷೈವಾದ ಕೆಣಕುವ ಮಾತಿನೊಂದಿಗೆ, ಅವನಂದದ್ದು: “ಬಲಹೀನವಾದ ಕೈಗೆ ಚೆನ್ನಾಗಿ ನೆರವಾಗಿದ್ದೀ!” (ಯೋಬ 26:2) ಯಾರ ಶಕ್ತಿಯು ನಮ್ಮ ಭೂಗೋಳವನ್ನು ಅಂತರಿಕ್ಷದಲ್ಲಿ ಯಾವ ಆಧಾರವೂ ಇಲ್ಲದೆ ತೂಗುವಂತೆ ಮತ್ತು ಭೂಮಿಯ ಮೇಲೆ ನೀರಿನಿಂದ ತುಂಬಿರುವ ಮೇಘಗಳನ್ನು ತೇಲಾಡುವಂತೆ ಬಿಡುತ್ತದೊ, ಆ ಯೆಹೋವನನ್ನು ಯೋಬನು ಉತ್ಸಾಹಪೂರ್ವಕವಾಗಿ ಹೊಗಳುತ್ತಾನೆ. (ಯೋಬ 26:7-9) ಆದರೂ, ಇಂತಹ ವಿಸ್ಮಯಗಳು ‘ಯೆಹೋವನ ಮಾರ್ಗಗಳ ಅಂಚು ಮಾತ್ರ’ ಆಗಿವೆ ಎಂದು ಯೋಬನು ಹೇಳಿದನು.—ಯೋಬ 26:14.
4. ಸಮಗ್ರತೆಯ ಕುರಿತು ಯೋಬನು ಏನನ್ನು ಹೇಳಿದನು, ಮತ್ತು ಆ ವಿಧದಲ್ಲಿ ಅವನು ತನ್ನನ್ನು ಏಕೆ ವ್ಯಕ್ತಪಡಿಸಿಕೊಳ್ಳಬಹುದಿತ್ತು?
4 ತನ್ನ ಮುಗ್ಧತೆಯ ಕುರಿತು ಖಂಡಿತವಾಗಿದ್ದು, ಯೋಬನು ಘೋಷಿಸಿದ್ದು: “ಸಾಯುವ ತನಕ ನನ್ನ ಯಥಾರ್ಥತ್ವದ ಹೆಸರನ್ನು ಕಳಕೊಳ್ಳೆನು.” (ಯೋಬ 27:5) ತನ್ನ ವಿರುದ್ಧ ಹೊರಿಸಲಾದ ಸುಳ್ಳು ಅಪವಾದಗಳಿಗೆ ಪ್ರತಿಕೂಲವಾಗಿ, ತನಗೆ ಸಂಭವಿಸಿದ ಸಂಗತಿಗಳಿಗೆ ತಕ್ಕದಾದ ಯಾವ ವಿಷಯಗಳನ್ನೂ ಅವನು ಮಾಡಿರಲಿಲ್ಲ. ಯೆಹೋವನು ಧರ್ಮಭ್ರಷ್ಟರ ಪ್ರಾರ್ಥನೆಗಳನ್ನು ಕೇಳುವುದಿಲ್ಲವೆಂದು ಆದರೆ ಸಮಗ್ರತೆಯನ್ನು ಕಾಪಾಡಿಕೊಳ್ಳುವವರನ್ನು ಬಹುಮಾನಿಸುತ್ತಾನೆಂದು ಯೋಬನಿಗೆ ಗೊತ್ತಿತ್ತು. ಬೇಗನೆ ಅರ್ಮಗೆದೋನಿನ ಬಿರುಗಾಳಿಯು ದುಷ್ಟರನ್ನು ತಮ್ಮ ಶಕ್ತಿಯ ಸ್ಥಾನದಿಂದ ಹೊರತೆಗೆಯುವುದೆಂದು, ಮತ್ತು ದೇವರ ದಂಡಿಸದೆ ಬಿಡದ ಹಸ್ತದಿಂದ ಅವರು ತಪ್ಪಿಸಿಕೊಳ್ಳಲಾರರೆಂಬುದನ್ನು ಇದು ನಮಗೆ ಚೆನ್ನಾಗಿ ಜ್ಞಾಪಕ ಹುಟ್ಟಿಸುತ್ತದೆ. ಅಲ್ಲಿಯ ವರೆಗೆ, ಯೆಹೋವನ ಜನರು ತಮ್ಮ ಸಮಗ್ರತೆಯಲ್ಲಿ ನಡೆಯುವರು.—ಯೋಬ 27:11-23.
5. ನಿಜವಾದ ವಿವೇಕವನ್ನು ಯೋಬನು ಹೇಗೆ ಸ್ಫುಟಗೊಳಿಸಿದನು?
5 ಭೂಮಿಯಲ್ಲಿ ಮತ್ತು ಸಮುದ್ರದಲ್ಲಿ ಬಂಗಾರ, ಬೆಳ್ಳಿ, ಮತ್ತು ಇತರ ನಿಕ್ಷೇಪಗಳನ್ನು ಕಂಡುಹಿಡಿಯಲು ಮನುಷ್ಯನು ತನ್ನ ಕೌಶಲಗಳನ್ನು ಉಪಯೋಗಿಸಿದ್ದಾನೆಂದು ಯೋಬನು ತೋರಿಸಿದಂತೆ, ಲೌಕಿಕ ವಿವೇಕವುಳ್ಳ ಆ ಮೂವರ ತಂಡವು ಆಲಿಸುತ್ತಿರುವುದನ್ನು ಕಲ್ಪಿಸಿಕೊಳ್ಳಿ. “ಆದರೆ,” ಅವನಂದದ್ದು, “ಒಂದು ಚೀಲ ಮುತ್ತುಗಳಿಗಿಂತ ಒಂದು ಚೀಲ ವಿವೇಕವು ಹೆಚ್ಚು ಅಮೂಲ್ಯವಾದದ್ದು.” (ಯೋಬ 28:18, NW) ಯೋಬನ ಸುಳ್ಳು ಸಮಾಧಾನಕಾರರಿಗೆ ಸತ್ಯವಾದ ವಿವೇಕವನ್ನು ಕೊಂಡುಕೊಳ್ಳಲು ಸಾಧ್ಯವಿರಲಿಲ್ಲ. ಅದರ ಮೂಲನು ಗಾಳಿಯ, ಮಳೆಯ, ಸಿಡಿಲಿನ, ಮತ್ತು ಗುಡುಗಿನ ಸೃಷ್ಟಿಕರ್ತನಾಗಿದ್ದಾನೆ. ನಿಶ್ಚಯವಾಗಿಯೂ, ಭಯಭಕ್ತಿಯುಳ್ಳ “ಕರ್ತನ [ಯೆಹೋವನ, NW) ಭಯವೇ ಜ್ಞಾನವು; ದುಷ್ಟತನವನ್ನು ಬಿಡುವದೇ ವಿವೇಕವು.”—ಯೋಬ 28:28.
6. ತನ್ನ ಮೊದಲಿನ ಜೀವಿತದ ಕುರಿತು ಯೋಬನು ಏಕೆ ಮಾತಾಡಿದನು?
6 ತನ್ನ ಕಷ್ಟಾನುಭಗಳ ಹೊರತೂ, ಯೆಹೋವನನ್ನು ಸೇವಿಸುವುದನ್ನು ಯೋಬನು ನಿಲ್ಲಿಸಲಿಲ್ಲ. ಸರ್ವೋನ್ನತನಿಂದ ತಿರುಗುವ ಬದಲು, ಸಮಗ್ರತೆಯ ಈ ಮನುಷ್ಯನು ಹಿಂದಿನ “ದೇವರ ಸ್ನೇಹ” ಕ್ಕಾಗಿ ಹಾತೊರೆದನು. (ಯೋಬ 29:4) ತಾನು ಹೇಗೆ ‘ಅಂಗಲಾಚುವ ಬಡವನನ್ನು ರಕ್ಷಿಸುತ್ತಿದ್ದೆನೆಂದು, ಧರ್ಮವನ್ನು ಧರಿಸಿಕೊಳ್ಳುತ್ತಿದ್ದೆನೆಂದು, ಮತ್ತು ದರಿದ್ರರಿಗೆ ತಂದೆಯಾಗಿದ್ದೆನೆಂದು’ ಜ್ಞಾಪಿಸಿಕೊಳ್ಳುವಾಗ, ಯೋಬನು ಬಡಾಯಿಕೊಚ್ಚುತ್ತಿರಲಿಲ್ಲ. (ಯೋಬ 29:12-16) ಬದಲಿಗೆ, ಯೆಹೋವನ ಒಬ್ಬ ನಂಬಿಗಸ್ತ ಸೇವಕನೋಪಾದಿ ತನ್ನ ಜೀವಿತದ ನಿಜತ್ವಗಳನ್ನು ಅವನು ಉಲ್ಲೇಖಿಸುತ್ತಿದ್ದನು. ಅಂತಹ ಒಂದು ಉತ್ತಮ ದಾಖಲೆಯನ್ನು ನೀವು ವಿಕಸಿಸಿಕೊಂಡಿರುವಿರೊ? ಯೋಬನು, ಮೂವರು ಧಾರ್ಮಿಕ ವಂಚಕರಿಂದ ಮಾಡಲಾದ ಅಪವಾದಗಳ ಅಸತ್ಯವನ್ನು ಸಹ ಬಯಲು ಮಾಡುತ್ತಿದ್ದನೆಂಬುದು ನಿಶ್ಚಯ.
7. ಯೋಬನು ಯಾವ ರೀತಿಯ ವ್ಯಕ್ತಿಯಾಗಿದ್ದನು?
7 ‘ಯಾರ ತಂದೆಗಳನ್ನು ಅವನು ತನ್ನ ಮಂದೆನಾಯಿಗಳೊಡನೆಯೂ ಇರತಕ್ಕವರಲ್ಲವೆಂದು ತಳ್ಳಿಬಿಡುತ್ತಿದ್ದನೋ’ ಆ ಚಿಕ್ಕ ವಯಸ್ಸಿನ ಪುರುಷರಿಂದ ಯೋಬನು ಪರಿಹಾಸ್ಯಮಾಡಲ್ಪಟ್ಟನು. ಅವರು ಅವನಿಗೆ ಅಸಹ್ಯಪಟ್ಟುಕೊಂಡು, ಅವನ ಮೇಲೆ ಉಗುಳಿದರು. ಯೋಬನು ಉಗ್ರವಾಗಿ ಸಂಕಟಪಡುತ್ತಿದ್ದರೂ, ಅವನಿಗೆ ಯಾವ ಪರಿಗಣನೆಯೂ ತೋರಿಸಲ್ಪಡಲಿಲ್ಲ. (ಯೋಬ 30:1, 10, 30) ಆದರೆ, ಅವನು ಯೆಹೋವನಿಗೆ ಸಂಪೂರ್ಣವಾಗಿ ನಿಷ್ಠೆಯುಳ್ಳವನಾಗಿದ್ದ ಕಾರಣ, ಅವನಿಗೊಂದು ಶುದ್ಧವಾದ ಮನಸ್ಸಾಕ್ಷಿಯಿತ್ತು ಮತ್ತು ಅವನು ಹೀಗೆ ಹೇಳಬಹುದಿತ್ತು: “ದೇವರು ನನ್ನನ್ನು ನ್ಯಾಯವಾದ ತ್ರಾಸಿನಲ್ಲಿ ತೂಗಿ ನನ್ನ ಯಥಾರ್ಥತ್ವವನ್ನು ತಿಳಿದುಕೊಳ್ಳಲಿ!” (ಯೋಬ 31:5) ಯೋಬನು ವ್ಯಭಿಚಾರಿಯೂ ಸಂಚುಗಾರನೂ ಆಗಿರಲಿಲ್ಲ, ಮತ್ತು ಬಡವರಿಗೆ ಸಹಾಯ ಮಾಡಲೂ ಅವನು ತಪ್ಪಿರಲಿಲ್ಲ. ಅವನು ಐಶ್ವರ್ಯವಂತನಾಗಿದ್ದರೂ, ಪ್ರಾಪಂಚಿಕ ಸಂಪತ್ತಿನಲ್ಲಿ ಅವನೆಂದೂ ಭರವಸೆಯಿಡಲಿಲ್ಲ. ಅಲ್ಲದೆ, ಚಂದ್ರನಂತಹ ಜೀವರಹಿತ ವಸ್ತುಗಳಿಗೆ ಭಯಭಕ್ತಿಯನ್ನು ತೋರಿಸುವ ಮೂಲಕ ಯೋಬನು ಮೂರ್ತಿಪೂಜೆಯಲ್ಲಿ ತೊಡಗಲಿಲ್ಲ. (ಯೋಬ 31:26-28) ದೇವರಲ್ಲಿ ಭರವಸೆಯನ್ನಿಡುತ್ತಾ, ಸಮಗ್ರತೆಯನ್ನು ಕಾಪಾಡಿಕೊಳ್ಳುವವನೋಪಾದಿ ಅವನೊಂದು ಉತ್ತಮ ಮಾದರಿಯನ್ನಿಟ್ಟನು. ಅವನೆಲ್ಲಾ ಕಷ್ಟಾನುಭವಗಳ ಮತ್ತು ಸುಳ್ಳು ಸಮಾಧಾನಕಾರರ ಉಪಸ್ಥಿತಿಯ ಹೊರತೂ, ಯೋಬನು ಕುಶಲಪೂರ್ಣ ಪ್ರತಿವಾದವನ್ನು ಮಾಡಿದನು ಮತ್ತು ಅತ್ಯುತ್ತಮವಾದೊಂದು ಸಾಕ್ಷಿಯನ್ನು ನೀಡಿದನು. ಯೋಬನ ಮಾತುಗಳು ಮುಗಿದದರ್ದಿಂದ, ತನ್ನ ನ್ಯಾಯಾಧೀಶನೂ ಪ್ರತಿಫಲ ಕೊಡುವವನೂ ಆಗಿದ್ದ ದೇವರ ಕಡೆಗೆ ಅವನು ನೋಡಿದನು.—ಯೋಬ 31:35-40.
ಎಲೀಹು ಮಾತಾಡುತ್ತಾನೆ
8. ಎಲೀಹು ಯಾರಾಗಿದ್ದನು, ಮತ್ತು ಅವನು ಗೌರವ ಹಾಗೂ ಧೈರ್ಯ—ಇವೆರಡನ್ನೂ ಹೇಗೆ ಪ್ರದರ್ಶಿಸಿದನು?
8 ಹತ್ತಿರದಲ್ಲಿ ಯುವ ಪುರುಷನಾದ ಎಲೀಹು ಇದ್ದನು. ಅವನು ನಾಹೋರನ ಮಗನಾದ ಬೂಚ್‌ನ ಸಂತತಿಯವನು ಮತ್ತು ಹೀಗೆ ಯೆಹೋವನ ಸ್ನೇಹಿತನಾದ ಅಬ್ರಹಾಮನ ದೂರದ ಸಂಬಂಧಿಯೂ ಆಗಿದ್ದನು. (ಯೆಶಾಯ 41:8) ವಾಗ್ವಾದದ ಎರಡೂ ಪಕ್ಷಗಳಿಗೆ ಕಿವಿಗೊಡುವ ಮೂಲಕ ಎಲೀಹು ವೃದ್ಧ ಪುರುಷರಿಗೆ ಗೌರವವನ್ನು ತೋರಿಸಿದನು. ಆದರೂ, ಯಾವ ವಿಷಯಗಳ ಕುರಿತು ಅವರು ತಪ್ಪಾಗಿದ್ದರೊ ಆ ವಿಷಯಗಳನ್ನು ಅವನು ಧೈರ್ಯದಿಂದ ಮಾತಾಡಿದನು. ದೃಷ್ಟಾಂತಕ್ಕೆ, ಯೋಬನು “ದೇವರಿಗಿಂತಲೂ ತಾನೇ ನ್ಯಾಯವಂತನೆಂದು ಎಣಿಸಿಕೊಂಡದರಿಂದ” ಅವನ ಮೇಲೆ ಎಲೀಹುವಿಗೆ ಸಿಟ್ಟು ಬಂತು. ವಿಶೇಷವಾಗಿ ಸುಳ್ಳು ಸಮಾಧಾನಕಾರರ ವಿರುದ್ಧ ಎಲೀಹುವಿನ ಕೋಪವು ನಿರ್ದೇಶಿಸಲ್ಪಟ್ಟಿತು. ಅವರ ಹೇಳಿಕೆಗಳು ದೇವರನ್ನು ಘನತೆಗೇರಿಸುವಂತೆ ತೋರಿದವು ಆದರೆ ವಾಗ್ವಾದದಲ್ಲಿ ಸೈತಾನನ ಪಕ್ಷವನ್ನು ತೆಗೆದುಕೊಳ್ಳುವ ಮೂಲಕ ನಿಜವಾಗಿಯೂ ದೇವರನ್ನು ಖಂಡಿಸಿದವು. ‘ಮಾತುಗಳಿಂದ ತುಂಬಿದವನಾಗಿ’ ಮತ್ತು ಪವಿತ್ರಾತ್ಮನ ಮೂಲಕ ಪ್ರೇರೇಪಿಸಲ್ಪಟ್ಟ ಎಲೀಹು, ಯೆಹೋವನ ನಿಷ್ಪಕ್ಷಪಾತ ಸಾಕ್ಷಿಯಾಗಿದ್ದನು.—ಯೋಬ 32:2, 18, 21.
9. ಯೋಬನಿಗಾಗಿ ಪುನಃಸ್ಥಾಪನೆಯ ಬಗ್ಗೆ ಎಲೀಹು ಹೇಗೆ ಸೂಚನೆಯಿತ್ತನು?
9 ದೇವರ ನಿರ್ದೋಷೀಕರಣಕ್ಕಿಂತಲೂ ಯೋಬನು, ತನ್ನ ಸ್ವಂತ ನಿರ್ದೋಷೀಕರಣದ ಕುರಿತು ಹೆಚ್ಚು ಚಿಂತಿತನಾಗಿದ್ದನು. ವಾಸ್ತವದಲ್ಲಿ, ಅವನು ದೇವರೊಡನೆ ಹೋರಾಡಿದ್ದನು. ಆದರೆ, ಮರಣವು ಆಸನ್ನವಾದಂತೆ, ಪುನಃಸ್ಥಾಪನೆಯ ಒಂದು ಸೂಚನೆಯು ಅಲ್ಲಿತ್ತು. ಅದು ಹೇಗೆ? ಒಳ್ಳೇದು, ಈ ಸಂದೇಶದಿಂದ ಯೆಹೋವನು ಯೋಬನನ್ನು ಅನುಗ್ರಹಿಸಿದನೆಂದು ಹೇಳುವಂತೆ ಎಲೀಹು ಪ್ರೇರೇಪಿಸಲ್ಪಟ್ಟನು: “ಈಡು ಸಿಕ್ಕಿತು, ಅಧೋಲೋಕಕ್ಕೆ ಇಳಿಯದಂತೆ ಇವನನ್ನು ರಕ್ಷಿಸು . . . ಅವನ ದೇಹವು ಬಾಲ್ಯಕ್ಕಿಂತಲೂ ಕೋಮಲವಾಗುವದು, ಅವನು ಪುನಃ ಎಳೆಯತನದ ದಿನಗಳನ್ನು ಅನುಭವಿಸುವನು.”—ಯೋಬ 33:24, 25.
10. ಎಷ್ಟರ ಮಟ್ಟಿಗೆ ಯೋಬನು ಪರೀಕೆಗ್ಷೊಳಪಡಲಿದ್ದನು, ಆದರೆ 1 ಕೊರಿಂಥ 10:13ರ ದೃಷ್ಟಿಕೋನದಲ್ಲಿ ಯಾವ ವಿಷಯದ ಕುರಿತು ನಾವು ನಿಶ್ಚಿತರಾಗಿರಬಲ್ಲೆವು?
10 ಸಮಗ್ರತೆಯನ್ನು ಕಾಪಾಡಿಕೊಳ್ಳುವ ಮೂಲಕ ದೇವರಲ್ಲಿ ಆನಂದವನ್ನು ಕಂಡುಕೊಳ್ಳುವುದರಲ್ಲಿ ಯಾವ ಲಾಭವೂ ಇಲ್ಲವೆಂದು ಹೇಳಿದ್ದಕ್ಕಾಗಿ ಎಲೀಹು ಯೋಬನನ್ನು ತಿದ್ದದನು. ಎಲೀಹು ಹೇಳಿದ್ದು: “ದೇವರು ಕೆಟ್ಟದ್ದನ್ನು ಮಾಡಾನೆಂಬ ಯೋಚನೆಯೂ ಸರ್ವಶಕ್ತನು ಅನ್ಯಾಯವನ್ನು ನಡಿಸಾನೆಂಬ ಭಾವನೆಯೂ ದೂರವಾಗಿರಲಿ! ಆತನು ಮನುಷ್ಯನಿಗೆ ಅವನ ಕೃತ್ಯದ ಫಲವನ್ನು ತೀರಿಸಿಬಿಡುವನು.” ತನ್ನ ಸ್ವಂತ ನೀತಿಯನ್ನು ಒತ್ತಿ ಹೇಳುವುದರಲ್ಲಿ ಯೋಬನು ಆಲೋಚನೆಯಿಲ್ಲದೆ ವರ್ತಿಸಿದನು, ಆದರೆ ಅವನು ಸಾಕಷ್ಟು ಜ್ಞಾನ ಮತ್ತು ಒಳನೋಟವಿಲ್ಲದೆ ಹಾಗೆ ಮಾಡಿದನು. ಎಲೀಹು ಕೂಡಿಸಿದ್ದು: “ಯೋಬನ ಪರಿಶೋಧನೆಯು ನಿರಂತರವಾಗಿದ್ದರೆ ಸಂತೋಷ! ದುಷ್ಟರ ಹಾಗೆ ಉತ್ತರಕೊಡುತ್ತಾನಲ್ಲವೆ.” (ಯೋಬ 34:10, 11, 35, 36) ತದ್ರೀತಿಯಲ್ಲಿ, ನಾವು ಯಾವುದೊ ವಿಧದಲ್ಲಿ ‘ಕಟ್ಟಕಡೆಯ ಮಿತಿಯ ವರೆಗೆ ಪರೀಕ್ಷಿಸಲ್ಪಟ್ಟರೆ ಮಾತ್ರ’ ನಮ್ಮ ನಂಬಿಕೆ ಮತ್ತು ಸಮಗ್ರತೆಯು ಪೂರ್ಣವಾಗಿ ರುಜುವಾಗಬಲ್ಲವು. ಆದರೂ, ನಾವು ಸಹಿಸಸಾಧ್ಯವಿರುವುದಕ್ಕಿಂತಲೂ ಹೆಚ್ಚಾಗಿ ಶೋಧಿಸಲ್ಪಡುವಂತೆ ನಮ್ಮ ಪ್ರೀತಿಯ ಸ್ವರ್ಗೀಯ ತಂದೆಯು ಬಿಡನು.—1 ಕೊರಿಂಥ 10:13.
11. ಉಗ್ರವಾಗಿ ಪರೀಕ್ಷಿಸಲ್ಪಟ್ಟಾಗ, ನಾವು ಏನನ್ನು ಜ್ಞಾಪಿಸಿಕೊಳ್ಳಬೇಕು?
11 ಎಲೀಹು ಮುಂದುವರಿಸಿದಂತೆ, ಯೋಬನು ತನ್ನ ಸ್ವಂತ ನೀತಿಯ ಮೇಲೆ ಹೆಚ್ಚಿನ ಒತ್ತನ್ನು ಹಾಕುತ್ತಿದ್ದನೆಂದು ಅವನು ಪುನಃ ತೋರಿಸಿದನು. ನಮ್ಮ ಮಹಾ ನಿರ್ಮಾಣಿಕನ ಕಡೆಗೆ ಗಮನವನ್ನು ಕೇಂದ್ರೀಕರಿಸತಕ್ಕದ್ದು. (ಯೋಬ 35:2, 6, 10) ದೇವರು “ದುಷ್ಟರ ಪ್ರಾಣವನ್ನು ಉಳಿಸುವದಿಲ್ಲ, ಗತಿಹೀನರ ನ್ಯಾಯವನ್ನು ಸ್ಥಾಪಿಸುವನು,” ಎಂದು ಎಲೀಹು ಹೇಳಿದನು. (ಯೋಬ 36:6) ದೇವರ ಮಾರ್ಗವನ್ನು ಲೆಕ್ಕಿಸಲು ಮತ್ತು ಆತನು ಅನೀತಿವಂತನಾಗಿದ್ದಾನೆಂದು ಹೇಳಲು ಯಾರಿಗೂ ಸಾಧ್ಯವಿಲ್ಲ. ನಮಗೆ ತಿಳಿದಿರುವುದಕ್ಕಿಂತಲೂ ದೇವರು ಮಹೋನ್ನತನಾಗಿದ್ದಾನೆ, ಮತ್ತು ಆತನ ವರ್ಷಗಳು ಅಸಂಖ್ಯಾತವಾಗಿವೆ. (ಯೋಬನ 36:22-26) ಉಗ್ರವಾಗಿ ಪರೀಕ್ಷಿಸಲ್ಪಟ್ಟಾಗ, ಎಂದೆಂದಿಗೂ ಇರುವ ನಮ್ಮ ದೇವರು ನೀತಿವಂತನಾಗಿದ್ದಾನೆಂದು ಮತ್ತು ಆತನಿಗೆ ಸ್ತುತಿಯನ್ನು ತರುವ ನಮ್ಮ ನಂಬಿಗಸ್ತ ಚಟುವಟಿಕೆಗಳಿಗಾಗಿ ನಮ್ಮನ್ನು ಬಹುಮಾನಿಸುವನೆಂದು ಜ್ಞಾಪಕದಲ್ಲಿಟ್ಟುಕೊಳ್ಳಿರಿ.
12. ದುಷ್ಟರ ಮೇಲೆ ದೇವರ ನ್ಯಾಯತೀರ್ಪಿನ ನಿರ್ವಹಣೆಯ ಕುರಿತು ಎಲೀಹುವಿನ ಸಮಾಪ್ತಿಯ ಅಭಿವ್ಯಕ್ತಿಗಳು ಏನನ್ನು ಸೂಚಿಸುತ್ತವೆ?
12 ಎಲೀಹು ಮಾತಾಡುತ್ತಿದ್ದಾಗ, ಬಿರುಗಾಳಿಯೊಂದು ಆರಂಭವಾಗುತ್ತಿತ್ತು. ಅದು ಹತ್ತಿರ ಬಂದಂತೆ, ಎಲೀಹುವಿನ ಹೃದಯವು ತತ್ತರಗೊಂಡು ಹಾರಲು ಆರಂಭಿಸಿತು. ಯೆಹೋವನಿಂದ ಮಾಡಲ್ಪಟ್ಟ ಮಹಾ ವಿಷಯಗಳ ಕುರಿತು ಅವನು ಮಾತಾಡಿ, ಅಂದದ್ದು: “ಯೋಬನೇ, ಇದನ್ನು ಕೇಳು! ಸುಮ್ಮನೆ ನಿಂತು ದೇವರ ಅದ್ಭುತಕಾರ್ಯಗಳನ್ನು ಧ್ಯಾನಿಸು.” ಯೋಬನಂತೆ, ದೇವರ ಅದ್ಭುತ ಕೆಲಸಗಳನ್ನು ಮತ್ತು ಭಯ ಹುಟ್ಟಿಸುವ ಘನತೆಯನ್ನು ನಾವು ಪರಿಗಣಿಸಬೇಕಾಗಿದೆ. “ಇಂಥ ಸರ್ವಶಕ್ತನನ್ನು ನಾವು ಕಂಡುಹಿಡಿಯಲಾರೆವು,” ಎಂದು ಎಲೀಹು ಹೇಳಿದನು. “ಆತನ ಪರಾಕ್ರಮವು ಬಹಳ; ಆತನು ನ್ಯಾಯವನ್ನಾಗಲಿ ಪರಿಪೂರ್ಣ ಧರ್ಮವನ್ನಾಗಲಿ ಕುಂದಿಸುವದಿಲ್ಲ. ಆದಕಾರಣ ಮನುಷ್ಯರು ಆತನಿಗೆ ಭಯಪಡುವರು.” (ಯೋಬ 37:1, 14, 23, 24) ದೇವರು ಬೇಗನೆ ದುಷ್ಟರ ಮೇಲೆ ನ್ಯಾಯತೀರ್ಪನ್ನು ವಿಧಿಸುವಾಗ, ಆತನು ನ್ಯಾಯ ಮತ್ತು ನೀತಿಯನ್ನು ಕಡೆಗಣಿಸನು ಮತ್ತು ತನ್ನ ಭಯಭಕ್ತಿಯುಳ್ಳ ಆರಾಧಕರಂತೆ ಆತನಿಗೆ ಭಯಪಡುವವರನ್ನು ರಕ್ಷಿಸುವನೆಂದು, ಎಲೀಹುವಿನ ಸಮಾಪ್ತಿಯ ಅಭಿವ್ಯಕ್ತಿಗಳು ನಮಗೆ ಜ್ಞಾಪಕ ಹುಟ್ಟಿಸುತ್ತವೆ. ಯೆಹೋವನನ್ನು ವಿಶ್ವದ ಸಾರ್ವಭೌಮನಂತೆ ಅಂಗೀಕರಿಸುವ ಇಂತಹ ಸಮಗ್ರತೆಯನ್ನು ಕಾಪಾಡಿಕೊಳ್ಳುವವರ ಮಧ್ಯದಲ್ಲಿರುವುದು ಎಂತಹ ಒಂದು ಸುಯೋಗವಾಗಿದೆ! ಯೋಬನು ತಾಳಿಕೊಂಡಂತೆ ತಾಳಿಕೊಳ್ಳಿರಿ, ಮತ್ತು ಈ ಸಂತೋಷಕರ ಜನಸಂದಣಿಯ ಮಧ್ಯದಲ್ಲಿರುವ ನಿಮ್ಮ ಆಶೀರ್ವದಿತ ಸ್ಥಾನದಿಂದ ಪಿಶಾಚನು ನಿಮ್ಮನ್ನು ದೂರ ಸೆಳೆಯುವಂತೆ ಎಂದಿಗೂ ಬಿಡದಿರಿ.
ಯೆಹೋವನು ಯೋಬನಿಗೆ ಉತ್ತರಕೊಡುತ್ತಾನೆ
13, 14. (ಎ) ಯಾವ ವಿಷಯದ ಕುರಿತು ಯೆಹೋವನು ಯೋಬನನ್ನು ಪ್ರಶ್ನಿಸತೊಡಗಿದನು? (ಬಿ) ದೇವರು ಯೋಬನನ್ನು ಕೇಳಿದ ಇತರ ಪ್ರಶ್ನೆಗಳಿಂದ ಯಾವ ಅಂಶಗಳನ್ನು ಕಲಿಯಸಾಧ್ಯವಿದೆ?
13 ಬಿರುಗಾಳಿಯೊಳಗಿಂದ ಯೆಹೋವನು ಯೋಬನೊಂದಿಗೆ ಮಾತಾಡಿದಾಗ, ಯೋಬನು ಎಷ್ಟು ಆಶ್ಚರ್ಯಚಕಿತನಾಗಿದ್ದಿರಬೇಕು! ಆ ಬಿರುಗಾಳಿಯು, ಮನೆಯು ಕುಸಿದು ಬೀಳುವಂತೆ ಮತ್ತು ಯೋಬನ ಮಕ್ಕಳನ್ನು ಕೊಲ್ಲುವಂತೆ ಸೈತಾನನು ಉಪಯೋಗಿಸಿದ ಮಹಾ ಬಿರುಗಾಳಿಯಂತಿರದೆ, ದೇವರ ಕ್ರಿಯೆಯಾಗಿತ್ತು. ದೇವರು ಹೀಗೆ ಕೇಳಿದಾಗ ಯೋಬನು ಮಾತಿಲ್ಲದವನಾದನು: “ನಾನು ಲೋಕಕ್ಕೆ ಅಸ್ತಿವಾರಹಾಕಿದಾಗ ನೀನು ಎಲ್ಲಿದ್ದಿ? . . . ಮುಂಜಾನೆ ನಕ್ಷತ್ರಗಳು ಒಟ್ಟಾಗಿ ಉತ್ಸಾಹಧ್ವನಿಯೆತ್ತುತ್ತಾ ದೇವಕುಮಾರರೆಲ್ಲರೂ ಆನಂದಘೋಷಮಾಡುತ್ತಾ ಇರಲು . . . ಅದರ ಮೂಲೆಗಲ್ಲನ್ನು ಹಾಕಿದವರು ಯಾರು?” (ಯೋಬ 38:4, 6, 7) ಸಮುದ್ರ, ಅದರ ಮೋಡದ ವಸ್ತ್ರ, ಅರುಣೋದಯ, ಮರಣದ ಬಾಗಲುಗಳು, ಬೆಳಕು ಮತ್ತು ಕತ್ತಲು, ಮತ್ತು ನಕ್ಷತ್ರರಾಶಿಗಳ ಕುರಿತು ಒಂದಾದ ಮೇಲೆ ಒಂದು ಪ್ರಶ್ನೆಯನ್ನು ಯೆಹೋವನು ಯೋಬನ ಮುಂದಿಟ್ಟನು. “ಖಗೋಲದ ಕಟ್ಟಳೆಗಳನ್ನು ತಿಳಿದುಕೊಂಡಿದ್ದೀಯೋ?” ಎಂದು ಕೇಳಲ್ಪಟ್ಟಾಗ, ಯೋಬನಿಗೆ ಏನನ್ನೂ ಹೇಳಲು ಸಾಧ್ಯವಾಗಲಿಲ್ಲ.—ಯೋಬ 38:33.
14 ಮನುಷ್ಯನನ್ನು ಸೃಷ್ಟಿಸಿ ಅವನಿಗೆ ಮೀನು, ಪಕ್ಷಿ, ಪ್ರಾಣಿಗಳು, ಮತ್ತು ಹರಿದಾಡುವ ಜೀವಿಗಳ ಮೇಲೆ ಅಧಿಕಾರವನ್ನು ಕೊಡುವ ಮೊದಲು, ಯಾವುದೇ ಮಾನವ ಸಹಾಯ ಯಾ ಸಲಹೆಯಿಲ್ಲದೆ ದೇವರು ಅವುಗಳಿಗಾಗಿ ಒದಗಿಸುತ್ತಿದ್ದನೆಂದು ಇತರ ಪ್ರಶ್ನೆಗಳು ಸೂಚಿಸಿದವು. ಯೆಹೋವನ ಮುಂದಿನ ಪ್ರಶ್ನೆಗಳು ಕಾಡುಕೋಣ, ಉಷ್ಟ್ರಪಕ್ಷಿ, ಮತ್ತು ಕುದುರೆಯಂತಹ ಸೃಷ್ಟಿಜೀವಿಗಳನ್ನು ನಮೂದಿಸುತ್ತವೆ. ಯೋಬನು ಹೀಗೆ ಕೇಳಲ್ಪಟ್ಟನು: “ಹದ್ದು ಮೇಲಕ್ಕೆ ಹಾರಿ ಉನ್ನತದಲ್ಲಿ ಗೂಡುಮಾಡುವದು ನಿನ್ನ ಅಪ್ಪಣೆಯಿಂದಲೋ?” (ಯೋಬ 39:27) ಖಂಡಿತವಾಗಿಯೂ ಇಲ್ಲ! ದೇವರು ಹೀಗೆ ಕೇಳಿದಾಗ ಯೋಬನ ಪ್ರತಿಕ್ರಿಯೆಯನ್ನು ಊಹಿಸಿರಿ: “ಆಕ್ಷೇಪಕನು ಸರ್ವಶಕ್ತನ ಸಂಗಡಲೂ ವ್ಯಾಜ್ಯವಾಡುವನೋ?” “ಅಯ್ಯೋ, ನಾನು ಅಲ್ಪನೇ ಸರಿ, ನಿನಗೆ ಪ್ರತ್ಯುತ್ತರವಾಗಿ ಏನು ಹೇಳಲಿ? ಬಾಯ ಮೇಲೆ ಕೈಯಿಟ್ಟುಕೊಳ್ಳುವೆನು,” ಎಂದು ಯೋಬನು ಹೇಳಿದ್ದರಲ್ಲಿ ಆಶ್ಚರ್ಯವೇನೂ ಇರುವುದಿಲ್ಲ. (ಯೋಬ 40:2, 4) ಯೆಹೋವನು ಯಾವಾಗಲೂ ಸರಿಯಾಗಿರುವುದರಿಂದ, ಆತನ ವಿರುದ್ಧ ದೂರು ಹೇಳುವಂತೆ ನಾವು ಎಂದಾದರೂ ಶೋಧಿಸಲ್ಪಟ್ಟಲ್ಲಿ, ‘ನಮ್ಮ ಬಾಯ ಮೇಲೆ ನಮ್ಮ ಕೈಯನ್ನು’ ನಾವು ಇಟ್ಟುಕೊಳ್ಳಬೇಕು. ದೇವರ ಪ್ರಶ್ನೆಗಳು ಆತನ ಶ್ರೇಷ್ಠತೆಯನ್ನು, ಘನತೆಯನ್ನು, ಮತ್ತು ಸೃಷ್ಟಿಯಲ್ಲಿ ಪ್ರದರ್ಶಿಸಲ್ಪಟ್ಟಂತೆ ಆತನ ಬಲವನ್ನು ಸಹ ಹೆಚ್ಚಿಸಿದವು.
ಬಿಹೀಮತ್ ಮತ್ತು ಲಿವೈಅತನ್
15. ಬಿಹೀಮತ್ ಸಾಮಾನ್ಯವಾಗಿ ಯಾವ ಪ್ರಾಣಿಯೆಂದು ಪರಿಗಣಿಸಲಾಗುತ್ತದೆ, ಮತ್ತು ಅದರ ವಿಶೇಷ ಗುಣಗಳಲ್ಲಿ ಕೆಲವು ಯಾವುವು?
15 ಸಾಮಾನ್ಯವಾಗಿ ನೀರಾನೆಯೆಂದು ಪರಿಗಣಿಸಲ್ಪಡುವ ಬಿಹೀಮತನ್ನು ಯೆಹೋವನು ಮುಂದೆ ಉಲ್ಲೇಖಿಸಿದನು. (ಯೋಬ 40:15-24) ಭಾರಿ ಗಾತ್ರ, ಮಹಾ ತೂಕ, ಮತ್ತು ಗಡುಸಾದ ಚರ್ಮಕ್ಕೆ ಗಮನಾರ್ಹವಾದ ಈ ಶಾಕಾಹಾರಿ ಪ್ರಾಣಿಯು ‘ಹಸಿರು ಹುಲ್ಲನ್ನು ತಿನ್ನುತ್ತದೆ.’ ಅದರ ಶಕ್ತಿ ಮತ್ತು ಬಲದ ಮೂಲಗಳು ಅದರ ಸೊಂಟದಲ್ಲಿಯೂ ಹೊಟ್ಟೆಯ ನರಗಳಲ್ಲಿಯೂ ಇವೆ. ಅದರ ಕಾಲುಗಳ ಎಲುಬುಗಳು “ತಾಮ್ರದ ನಳಗಳಂತೆ” ಸದೃಢವಾಗಿವೆ. ನೀರಾನೆ ಧಾರಾಕಾರವಾದ ಮಳೆಯಲ್ಲಿ ಬೆದರುವುದಿಲ್ಲ ಆದರೆ ಪ್ರವಾಹದ ವಿರುದ್ಧ ಸುಲಭವಾಗಿ ಈಜುತ್ತದೆ.
16. (ಎ) ಲಿವೈಅತನ್‌ನ ವಿವರಣೆಯು ಯಾವ ಜೀವಿಯನ್ನು ಹೋಲುತ್ತದೆ, ಮತ್ತು ಅದರ ಕುರಿತು ಕೆಲವು ನಿಜತ್ವವುಗಳು ಏನಾಗಿವೆ? (ಬಿ) ಯೆಹೋವನ ಸೇವೆಯಲ್ಲಿ ನೇಮಕಗಳನ್ನು ನೆರವೇರಿಸುವುದರ ಕುರಿತು ಯಾವ ವಿಷಯವನ್ನು ಬಿಹೀಮತ್ ಮತ್ತು ಲಿವೈಅತನ್‌ನ ಶಕ್ತಿಯು ಸೂಚಿಸಬಹುದು?
16 ದೇವರು ಯೋಬನನ್ನು ಮತ್ತೂ ಕೇಳಿದ್ದು: “ನೀನು ಮೊಸಳೆಯನ್ನು ಗಾಳದಿಂದ ಎಳೆದು ಹುರಿಯಿಂದ ಅದರ ನಾಲಿಗೆಯನ್ನು ಅದುಮಿ ಬಿಗಿಯುವಿಯೋ?” ಲಿವೈಅತನ್ ಜೀವಿಯ ವರ್ಣನೆಯು ಮೊಸಳೆಯನ್ನು ಸರಿಹೋಲುತ್ತದೆ. (ಯೋಬ 41:1-34) ಅದು ಯಾರೊಂದಿಗೂ ಶಾಂತಿಯ ಒಡಂಬಡಿಕೆಯನ್ನು ಮಾಡುವುದಿಲ್ಲ, ಮತ್ತು ಯಾವ ಬುದ್ಧಿವಂತ ಮಾನವನೂ ಈ ಸರೀಸೃಪವನ್ನು ಕೆಣಕುವಷ್ಟು ಕೆಚ್ಚೆದೆಯುಳ್ಳವನಾಗಿಲ್ಲ. ಬಾಣಗಳು ಅದನ್ನು ಓಡಿಸುವುದಿಲ್ಲ, ಮತ್ತು ಅದು “ಬಿರ್ರನೆ ಬರುವ ಈಟಿಗೆ ನಗುವದು.” ಕೆರಳುವ ಮೊಸಳೆಯು ಜಲನಿಧಿಯನ್ನು ಹಂಡೆಯ ನೀರಿನ ಹಾಗೆ ಕುದಿಸುವುದು. ನೀರಾನೆ ಮತ್ತು ಮೊಸಳೆಯು ಯೋಬನಿಗಿಂತ ಎಷ್ಟೋ ಹೆಚ್ಚು ಶಕ್ತಿಶಾಲಿಯಾಗಿದ್ದವೆಂಬ ನಿಜತ್ವವು ಅವನನ್ನು ದೀನನಾಗಿಸಲು ಸಹಾಯ ಮಾಡಿತು. ನಮ್ಮಲ್ಲಿಯೇ ನಾವು ಶಕ್ತಿಶಾಲಿಗಳಲವ್ಲೆಂದು ನಾವು ಸಹ ದೈನ್ಯದಿಂದ ಅಂಗೀಕರಿಸಬೇಕು. ಸರ್ಪನಾದ ಸೈತಾನನ ವಿಷದ ಹಲಿನ್ಲಿಂದ ತಪ್ಪಿಸಿಕೊಳ್ಳಲು, ಮತ್ತು ಯೆಹೋವನ ಸೇವೆಯಲ್ಲಿ ನಮ್ಮ ನೇಮಕಗಳನ್ನು ನೆರವೇರಿಸಲು ದೇವದತ್ತ ವಿವೇಕ ಮತ್ತು ಬಲದ ಅಗತ್ಯ ನಮಗಿದೆ.—ಫಿಲಿಪ್ಪಿ 4:13; ಪ್ರಕಟನೆ 12:9.
17. (ಎ) ಯೋಬನು “ದೇವರನ್ನು ನೋಡಿ”ದ್ದು ಹೇಗೆ? (ಬಿ) ಉತ್ತರಿಸಲು ಯೋಬನು ಅಶಕ್ತನಾಗಿದ್ದ ಪ್ರಶ್ನೆಗಳಿಂದ ಏನು ರುಜುವಾಯಿತು, ಮತ್ತು ಇದು ನಮಗೆ ಹೇಗೆ ಸಹಾಯ ಮಾಡಬಲ್ಲದು?
17 ಪೂರ್ಣವಾಗಿ ದೀನನಾಗಿಸಲ್ಪಟ್ಟ ಯೋಬನು, ತನ್ನ ತಪ್ಪಾದ ದೃಷ್ಟಿಕೋನವನ್ನು ಅಂಗೀಕರಿಸಿದನು ಮತ್ತು ತಾನು ಜ್ಞಾನವಿಲ್ಲದೆ ಮಾತಾಡಿದೆನೆಂದು ಒಪ್ಪಿಕೊಂಡನು. ಆದರೂ, ಅವನು “ದೇವರನ್ನು ನೋಡುವೆನು” ಎಂಬ ನಂಬಿಕೆಯನ್ನು ವ್ಯಕ್ತಪಡಿಸಿದ್ದನು. (ಯೋಬ 19:25-27) ಯಾವ ಮಾನವನೂ ಯೆಹೋವನನ್ನು ನೋಡಿ ಜೀವಿಸಲಾರನಾದುದರಿಂದ, ಅದು ಹೇಗೆ ಸಂಭವಿಸಬಹುದಿತ್ತು? (ವಿಮೋಚನಕಾಂಡ 33:20) ನಿಜವಾಗಿಯೂ, ಯೋಬನು ದೈವಿಕ ಶಕ್ತಿಯ ಪ್ರದರ್ಶನವನ್ನು ನೋಡಿದನು, ದೇವರ ವಾಕ್ಯವನ್ನು ಕೇಳಿದನು, ಮತ್ತು ಯೆಹೋವನ ಕುರಿತಾದ ಸತ್ಯವನ್ನು ನೋಡುವಂತೆ ಅವನ ತಿಳಿವಳಿಕೆಯ ಕಣ್ಣುಗಳು ತೆರೆಯಲ್ಪಟ್ಟವು. ಆದುದರಿಂದ ಯೋಬನು ‘ಆಡಿದ್ದನ್ನು ತಪ್ಪೆಂದು ಒಪ್ಪಿಕೊಂಡು, ಧೂಳಿಯಲ್ಲಿಯೂ ಬೂದಿಯಲ್ಲಿಯೂ ಕುಳಿತು ಪಶ್ಚಾತಾಪ್ತಪಟ್ಟನು.’ (ಯೋಬ 42:1-6) ಅವನು ಉತ್ತರಿಸಲು ಅಶಕ್ತನಾಗಿದ್ದ ಅನೇಕ ಪ್ರಶ್ನೆಗಳು ದೇವರ ಶ್ರೇಷ್ಠತೆಯನ್ನು ರುಜುಪಡಿಸಿದವು ಮತ್ತು ಮನುಷ್ಯನ—ಯೋಬನಂತೆ ಯೆಹೋವನಿಗೆ ಭಯಭಕ್ತಿಯುಳ್ಳವನದ್ದು ಸಹ—ಸಣ್ಣತನವನ್ನು ತೋರಿಸಿದವು. ನಮ್ಮ ಅಭಿರುಚಿಗಳನ್ನು ಯೆಹೋವನ ನಾಮದ ಪವಿತ್ರೀಕರಣ ಮತ್ತು ಆತನ ಸಾರ್ವಭೌಮತೆಯ ನಿರ್ದೋಷೀಕರಣಕ್ಕಿಂತ ಹೆಚ್ಚು ಪ್ರಾಮುಖ್ಯವೆಂದು ಪರಿಗಣಿಸಬಾರದೆಂಬುದನ್ನು ಮನಗಾಣುವಂತೆ ಇದು ನಮಗೆ ಸಹಾಯ ಮಾಡುತ್ತದೆ. (ಮತ್ತಾಯ 6:9, 10) ನಮ್ಮ ಮುಖ್ಯ ಚಿಂತೆಯು ಯೆಹೋವನ ಕಡೆಗೆ ಸಮಗ್ರತೆಯನ್ನು ಕಾಪಾಡಿಕೊಳ್ಳುವುದು ಮತ್ತು ಆತನ ಹೆಸರನ್ನು ಘನಪಡಿಸುವುದಾಗಿರತಕ್ಕದ್ದು.
18. ಯೋಬನ ಸುಳ್ಳು ಸಮಾಧಾನಕಾರರು ಏನನ್ನು ಮಾಡಬೇಕಿತ್ತು?
18 ಹಾಗಾದರೆ, ಸ್ವಧರ್ಮಿಷ್ಠಿತಾಭಿಮಾನವುಳ್ಳ ಸುಳ್ಳು ಸಮಾಧಾನಕಾರರ ಕುರಿತೇನು? ತನ್ನ ಕುರಿತು ಯೋಬನು ಸತ್ಯವನ್ನಾಡಿದಂತೆ, ಎಲೀಫಜ, ಬಿಲದ್ದ, ಮತ್ತು ಚೋಫರನು ಸತ್ಯವನ್ನಾಡದೆ ಇದ್ದದ್ದಕ್ಕಾಗಿ ಯೆಹೋವನು ಅವರನ್ನು ಯೋಗ್ಯವಾಗಿಯೇ ಕೊಲ್ಲಬಹುದಿತ್ತು. “ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ತೆಗೆದುಕೊಂಡು ನನ್ನ ದಾಸನಾದ ಯೋಬನ ಬಳಿಗೆ ಹೋಗಿ,” ಎಂದು ದೇವರು ಹೇಳಿದನು, ಮತ್ತು “ನಿಮ್ಮ ದೋಷಪರಿಹಾರಕ್ಕಾಗಿ ಹೋಮಮಾಡಿರಿ; ನನ್ನ ದಾಸನಾದ ಯೋಬನು ನಿಮ್ಮ ಪಕ್ಷವಾಗಿ ಪ್ರಾರ್ಥನೆ ಮಾಡುವನು.” ಆಜ್ಞೆಯಂತೆ ನಡೆಯಲು ಮೂವರ ತಂಡವು ತಮ್ಮನ್ನು ತಗ್ಗಿಸಿಕೊಳ್ಳಬೇಕಿತ್ತು. ಸಮಗ್ರತೆಯನ್ನು ಕಾಪಾಡಿಕೊಳ್ಳುವವನಾದ ಯೋಬನು ಅವರಿಗಾಗಿ ಪ್ರಾರ್ಥಿಸಬೇಕಿತ್ತು, ಮತ್ತು ಯೆಹೋವನು ಅವನ ಪ್ರಾರ್ಥನೆಯನ್ನು ಸ್ವೀಕಾರಾರ್ಹವೆಂದು ಕಂಡುಕೊಂಡನು. (ಯೋಬ 42:7-9) ಆದರೆ ದೇವರನ್ನು ಶಪಿಸಿ, ಸಾಯಲು ಅವನನ್ನು ಪ್ರೋತ್ಸಾಹಿಸಿದ್ದ ಯೋಬನ ಹೆಂಡತಿಯ ಕುರಿತೇನು? ದೇವರ ಕರುಣೆಯಿಂದ ಅವಳು ಯೋಬನೊಂದಿಗೆ ಸಮಾಧಾನ ಮಾಡಿಕೊಂಡಳೆಂದು ತೋರುತ್ತದೆ.
ವಾಗ್ದತ್ತ ಪ್ರತಿಫಲಗಳು ನಮಗೆ ನಿರೀಕ್ಷೆಯನ್ನು ಕೊಡುತ್ತವೆ
19. ಯೋಬನ ಸಂಬಂಧದಲ್ಲಿ, ಸೈತಾನನ ಮೇಲೆ ಆತನ ಶ್ರೇಷ್ಠತೆಯನ್ನು ಯೆಹೋವನು ಹೇಗೆ ತೋರಿಸಿದನು?
19 ಯೋಬನು ತನ್ನ ಕಷ್ಟಾನುಭವಗಳ ಕುರಿತು ಚಿಂತಿಸುವುದನ್ನು ಬಿಟ್ಟು ದೇವರ ಸೇವೆಯಲ್ಲಿ ಪುನಶ್ಚ್ಯೆತನ್ಯಗೊಂಡ ಕೂಡಲೇ, ಯೆಹೋವನು ಅವನಿಗಾಗಿ ವಿಷಯಗಳನ್ನು ಬದಲಿಸಿದನು. ಆ ಮೂವರ ತಂಡಕ್ಕಾಗಿ ಯೋಬನು ಪ್ರಾರ್ಥಿಸಿದ ಬಳಿಕ, ದೇವರು ‘ಅವನ ದುಸ್ಥಿತಿಯನ್ನು ಹೋಗಲಾಡಿಸಿ’ ಅವನಿಗೆ ‘ಮೊದಲಿಗಿಂತ ಎರಡರಷ್ಟು ಸೊತ್ತನ್ನು ಕೊಟ್ಟನು.’ ಸೈತಾನನ ರೋಗವಂಟಿಸುವ ಕೈಯನ್ನು ತಡೆಯುವ ಮತ್ತು ಅದ್ಭುತಕರವಾಗಿ ಯೋಬನನ್ನು ಗುಣಪಡಿಸುವ ಮೂಲಕ, ಸೈತಾನನ ಮೇಲಿರುವ ತನ್ನ ಶ್ರೇಷ್ಠತೆಯನ್ನು ಯೆಹೋವನು ತೋರಿಸಿದನು. ದೆವ್ವ ತಂಡದವರನ್ನು ಸಹ ದೇವರು ಹಿಂದಕ್ಕೆ ಅಟ್ಟಿದನು ಮತ್ತು ಆತನ ದಿವ್ಯ ಕಾವಲಿನಿಂದ ಯೋಬನ ಸುತ್ತಲೂ ಪುನಃ ಬೇಲಿಯನ್ನು ಹಾಕುವ ಮೂಲಕ ಅವರನ್ನು ತಡೆದನು.—ಯೋಬ 42:10; ಕೀರ್ತನೆ 34:7.
20. ಯಾವ ವಿಧಗಳಲ್ಲಿ ಯೆಹೋವನು ಯೋಬನನ್ನು ಬಹುಮಾನಿಸಿದನು ಮತ್ತು ಆಶೀರ್ವದಿಸಿದನು?
20 ಯೋಬನ ಅಣತ್ಣಮ್ಮಂದಿರೂ, ಅಕ್ಕತಂಗಿಯರೂ, ಹಿಂದಿನ ಪರಿಚಿತರೂ ಅವನೊಂದಿಗೆ ಭೋಜನಮಾಡಲು, ಅವನೊಡನೆ ಅನುಭೂತಿ ತೋರಿಸಲು, ಮತ್ತು ಅವನು ಅನುಭವಿಸುವಂತೆ ಯೆಹೋವನು ಅನುಮತಿಸಿದ್ದ ವಿಪತ್ತಿನ ಕುರಿತು ಅವನಿಗೆ ಸಾಂತ್ವನ ನೀಡಲು ಬರುತ್ತಿದ್ದರು. ಅವರಲ್ಲಿ ಪ್ರತಿಯೊಬ್ಬರೂ ಯೋಬನಿಗೆ ಹಣವನ್ನು ಮತ್ತು ಒಂದು ಬಂಗಾರದ ಉಂಗುರವನ್ನು ಕೊಟ್ಟರು. ಯೆಹೋವನು ಯೋಬನ ಮೊದಲನೆಯ ಸ್ಥಿತಿಗಿಂತ ಅವನ ಕಡೆಯ ಸ್ಥಿತಿಯನ್ನು ಆಶೀರ್ವದಿಸಿದನು, ಇದರಿಂದ ಅವನು 14,000 ಕುರಿಗಳನ್ನು, 6,000 ಒಂಟೆಗಳನ್ನು, 1,000 ಜೋಡಿ ಎತ್ತುಗಳನ್ನು, ಮತ್ತು 1,000 ಹೆಣ್ಣು ಕತ್ತೆಗಳನ್ನು ಪಡೆದನು. ಯೋಬನು ಮೊದಲಿನಂತೆಯೇ ಏಳು ಗಂಡು ಮಕ್ಕಳನ್ನು ಮತ್ತು ಮೂವರು ಹೆಣ್ಣು ಮಕ್ಕಳನ್ನು ಸಹ ಪಡೆದನು. ಅವನ ಹೆಣ್ಣು ಮಕ್ಕಳು—ಯೆಮೀಮ, ಕೆಚೀಯ, ಮತ್ತು ಕೆರೆನಪ್ಹ್ಪೂಕ್—ಆ ದೇಶದಲ್ಲಿ ಅತ್ಯಂತ ಸುಂದರ ಸ್ತ್ರೀಯರಾಗಿದ್ದರು, ಮತ್ತು ಅವರ ಅಣತ್ಣಮ್ಮಂದಿರಂತೆ ಯೋಬನು ಅವರಿಗೂ ಸ್ವಾಸ್ತ್ಯವನ್ನು ಕೊಟ್ಟನು. (ಯೋಬ 42:11-15) ಅಲ್ಲದೆ, ಯೋಬನು ಇನ್ನೂ 140 ವರ್ಷಗಳು ಜೀವಿಸಿದನು ಮತ್ತು ತನ್ನ ಸಂತಾನದ ನಾಲ್ಕು ತಲೆಗಳನ್ನು ಕಂಡನು. ದಾಖಲೆಯು ಸಮಾಪ್ತಿಗೊಳ್ಳುವುದು: “ತರುವಾಯ ಯೋಬನು ಮುಪ್ಪಿನ ಮುದುಕನಾಗಿ ಗತಿಸಿದನು.” (ಯೋಬ 42:16, 17) ಅವನ ಜೀವಿತದ ವಿಸ್ತರಣವು ಯೆಹೋವ ದೇವರ ಅದ್ಭುತಕಾರ್ಯವಾಗಿತ್ತು.
21. ಯೋಬನ ಕುರಿತಿರುವ ಶಾಸ್ತ್ರೀಯ ದಾಖಲೆಯಿಂದ ನಾವು ಹೇಗೆ ಸಹಾಯಿಸಲ್ಪಡುತ್ತೇವೆ, ಮತ್ತು ಏನನ್ನು ಮಾಡಲು ನಾವು ನಿಶ್ಚಿತರಾಗಿರಬೇಕು?
21 ಯೋಬನ ಕುರಿತಾದ ಶಾಸ್ತ್ರೀಯ ದಾಖಲೆಯು, ಸೈತಾನನ ಯುಕ್ತಿಗಳ ಬಗ್ಗೆ ನಮ್ಮನ್ನು ಅಧಿಕ ಅರಿವುಳ್ಳವರನ್ನಾಗಿ ಮಾಡುತ್ತದೆ ಮತ್ತು ವಿಶ್ವದ ಸಾರ್ವಭೌಮತೆಯು ಹೇಗೆ ಮಾನವ ಸಮಗ್ರತೆಗೆ ಸಂಬಂಧಿಸಿದೆ ಎಂಬುದನ್ನು ಮನಗಾಣುವಂತೆ ನಮಗೆ ಸಹಾಯ ಮಾಡುತ್ತದೆ. ಯೋಬನಂತೆ, ದೇವರನ್ನು ಪ್ರೀತಿಸುವವರೆಲ್ಲರು ಪರೀಕ್ಷಿಸಲ್ಪಡುವರು. ಆದರೆ ಯೋಬನು ತಾಳಿಕೊಂಡಂತೆ ನಾವು ತಾಳಿಕೊಳ್ಳಬಲ್ಲೆವು. ನಂಬಿಕೆ ಮತ್ತು ನಿರೀಕ್ಷೆಯಿಂದ ಅವನು ತನ್ನ ಪರೀಕೆಗ್ಷಳಿಂದ ಹೊರಬಂದನು, ಮತ್ತು ಅವನ ಪ್ರತಿಫಲಗಳು ಅನೇಕವಾಗಿದ್ದವು. ಯೆಹೋವನ ಸೇವಕರೋಪಾದಿ ಇಂದು, ನಮಗೆ ನಿಜವಾದ ನಂಬಿಕೆ ಮತ್ತು ನಿರೀಕ್ಷೆಯಿದೆ. ಮತ್ತು ಎಂತಹ ಮಹಾ ನಿರೀಕ್ಷೆಯನ್ನು ಮಹಾ ಪ್ರತಿಫಲದಾಯಕನು ನಮ್ಮಲ್ಲಿ ಪ್ರತಿಯೊಬ್ಬರ ಮುಂದೆ ಇಟ್ಟಿದ್ದಾನೆ! ಸ್ವರ್ಗೀಯ ಬಹುಮಾನವನ್ನು ಮನಸ್ಸಿನಲ್ಲಿಡುವುದು, ಭೂಮಿಯ ಮೇಲೆ ತಮ್ಮ ಜೀವಿತದ ಉಳಿದ ಸಮಯದ ವರೆಗೆ ದೇವರನ್ನು ನಿಷ್ಠಾವಂತರಾಗಿ ಸೇವಿಸುವಂತೆ ಅಭಿಷಿಕ್ತರನ್ನು ಸಹಾಯಿಸುವುದು. ಭೂಪ್ರತೀಕ್ಷೆಗಳಿರುವ ಅನೇಕರು ಎಂದಿಗೂ ಸಾಯುವುದೇ ಇಲ್ಲ, ಆದರೆ ಮರಣ ಹೊಂದುವವರು ಯೋಬನೊಂದಿಗೆ ಭೂಮಿಯ ಮೇಲೆ ಪ್ರಮೋದವನದಲ್ಲಿ, ಒಂದು ಪುನರುತ್ಥಾನದೊಂದಿಗೆ ಬಹುಮಾನಿಸಲ್ಪಡುವರು. ಹೃದಯ ಮತ್ತು ಮನಸ್ಸಿನಲ್ಲಿ ಇಂತಹ ಯಥಾರ್ಥವಾದ ನಿರೀಕ್ಷೆಯೊಂದಿಗೆ, ಸಮಗ್ರತೆಯನ್ನು ಕಾಪಾಡುವವರೋಪಾದಿ ಮತ್ತು ಆತನ ವಿಶ್ವದ ಸಾರ್ವಭೌಮತೆಯ ನಿಷ್ಠೆಯ ಬೆಂಬಲಿಗರೋಪಾದಿ ಯೆಹೋವನ ಪಕ್ಷದಲ್ಲಿ ದೃಢವಾಗಿ ನಿಲ್ಲುವ ಮೂಲಕ ದೇವರನ್ನು ಪ್ರೀತಿಸುವವರೆಲ್ಲರು ಸೈತಾನನನ್ನು ಒಬ್ಬ ಸುಳ್ಳುಗಾರನೆಂದು ರುಜುಪಡಿಸಲಿ.
ನೀವು ಹೇಗೆ ಪ್ರತಿಕ್ರಿಯಿಸುವಿರಿ?
▫ ತನ್ನ ಸುಳ್ಳು ಸಮಾಧಾನಕಾರರಿಗೆ ಅವನು ನೀಡಿದ ಅಂತಿಮ ಉತ್ತರದಲ್ಲಿ ಯೋಬನಿಂದ ಒತ್ತಿಹೇಳಲ್ಪಟ್ಟ ಕೆಲವು ಅಂಶಗಳು ಏನಾಗಿದ್ದವು?
▫ ಎಲೀಹು ಯೆಹೋವನ ನಿಷ್ಪಕ್ಷಪಾತ ಸಾಕ್ಷಿಯಾಗಿ ಪರಿಣಮಿಸಿದ್ದು ಹೇಗೆ?
▫ ದೇವರು ಯೋಬನಿಗೆ ಹಾಕಿದ ಪ್ರಶ್ನೆಗಳಲ್ಲಿ ಕೆಲವು ಯಾವುವು, ಮತ್ತು ಅವು ಯಾವ ಪರಿಣಾಮವನ್ನು ಬೀರಿದವು?
▫ ಯೋಬನ ಕುರಿತಾದ ಶಾಸ್ತ್ರೀಯ ದಾಖಲೆಯಿಂದ ನೀವು ಹೇಗೆ ಪ್ರಯೋಜನ ಹೊಂದಿದ್ದೀರಿ?
[ಪುಟ 18 ರಲ್ಲಿರುವ ಚಿತ್ರಗಳು]
ಬಿಹೀಮತ್ ಮತ್ತು ಲಿವೈಅತನ್ ಕುರಿತಾದ ಯೆಹೋವನ ಹೇಳಿಕೆಗಳು ಯೋಬನನ್ನು ದೀನನಾಗಿಸಲು ಸಹಾಯ ಮಾಡಿದವು