ಅವನು ದೈವಿಕ ನಿರ್ದೇಶನವನ್ನು ಸ್ವೀಕರಿಸಿದನು
ನಿಮ್ಮ ಪರಾಮರಿಕೆಯಲ್ಲಿ ಪರಿಪೂರ್ಣವಾದೊಂದು ಮಗುವನ್ನು ಇರಿಸಲಾಗಿದೆ ಮತ್ತು ಅವನನ್ನು ಸರಿಯಾಗಿ ಬೆಳೆಸುವಂತೆ ನಿಮ್ಮಿಂದ ಅಪೇಕ್ಷಿಸಲಾಗುತ್ತದೆ ಎಂದು ಭಾವಿಸಿಕೊಳ್ಳಿರಿ. ಎಂತಹ ಒಂದು ಪಂಥಾಹ್ವಾನ! ಯಾವನೇ ಅಪರಿಪೂರ್ಣ ಮಾನವನು ಅದನ್ನು ಹೇಗೆ ಮಾಡಸಾಧ್ಯವಿತ್ತು? ದೈವಿಕ ನಿರ್ದೇಶನವನ್ನು ಸ್ವೀಕರಿಸಿ, ಅದನ್ನು ಪ್ರತಿನಿತ್ಯದ ಜೀವಿತದಲ್ಲಿ ಅನ್ವಯಿಸುವ ಮೂಲಕವೇ.
ಯೇಸುವಿನ ದತ್ತು ತಂದೆಯಾದ ಯೋಸೇಫನು ಅದನ್ನೇ ಮಾಡಿದನು. ಯೋಸೇಫನ ಕುರಿತು ಅನೇಕ ವಿವರಗಳನ್ನು ಹೊಂದಿರುವ ಅಪಾಕ್ರಿಫದ ಸಂಪ್ರದಾಯಗಳಿಗೆ ತದ್ವಿರುದ್ಧವಾಗಿ, ಯೇಸುವಿನ ಆರಂಭಿಕ ಜೀವನದಲ್ಲಿ ಅವನ ದೀನ ಪಾತ್ರದ ಕುರಿತು ಬೈಬಲು ಅತ್ಯಲ್ಪ ವಿಷಯವನ್ನು ಹೇಳುತ್ತದೆ. ಯೋಸೇಫನು ಮತ್ತು ಅವನ ಹೆಂಡತಿಯಾದ ಮರಿಯಳು, ಯೇಸುವನ್ನು, ಇತರ ನಾಲ್ಕು ಗಂಡುಮಕ್ಕಳನ್ನು, ಮತ್ತು ಹೆಣ್ಣುಮಕ್ಕಳನ್ನು ಸಹ ಬೆಳೆಸಿದರೆಂದು ನಮಗೆ ಗೊತ್ತಿದೆ.—ಮಾರ್ಕ 6:3.
ಯೋಸೇಫನು, ಸೊಲೊಮೋನನ ಸಂತತಿಯ ಮುಖಾಂತರ ಇಸ್ರಾಯೇಲಿನ ಅರಸನಾದ ದಾವೀದನ ವಂಶದವನಾಗಿದ್ದನು. ಅವನು ಯಾಕೋಬನ ಮಗನೂ ಹೇಲೀಯನ ಅಳಿಯನೂ ಆಗಿದ್ದನು. (ಮತ್ತಾಯ 1:16; ಲೂಕ 3:23) ಗಲಿಲಾಯದ ನಜರೇತ್ ಎಂಬ ಪಟ್ಟಣದಲ್ಲಿ ಒಬ್ಬ ಮರಗೆಲಸದವನೋಪಾದಿ, ಯೋಸೇಫನು ಬಡವನಾಗಿದ್ದನು. (ಮತ್ತಾಯ 13:55; ಲೂಕ 2:4, 24; ಹೋಲಿಸಿ ಯಾಜಕಕಾಂಡ 12:8.) ಆದರೆ ಆತ್ಮಿಕವಾಗಿ ಅವನು ಶ್ರೀಮಂತನಾಗಿದ್ದನು. (ಜ್ಞಾನೋಕ್ತಿ 10:22) ಇದು ಖಂಡಿತವಾಗಿಯೂ ಅವನು ದೈವಿಕ ನಿರ್ದೇಶನವನ್ನು ಸ್ವೀಕರಿಸಿದ್ದರಿಂದಲೇ.
ನಿಸ್ಸಂದೇಹವಾಗಿ ಯೋಸೇಫನು, ದೇವರಲ್ಲಿ ನಂಬಿಕೆಯಿದ್ದ ಮತ್ತು ಸರಿಯಾಗಿದ್ದದ್ದನ್ನು ಮಾಡಲು ಬಯಸಿದ ಒಬ್ಬ ವಿನೀತ ಹಾಗೂ ದೀನ ಯೆಹೂದ್ಯನಾಗಿದ್ದನು. ಶಾಸ್ತ್ರಗಳಲ್ಲಿ ದಾಖಲಿಸಲ್ಪಟ್ಟಿರುವ ಅವನ ಜೀವಿತದ ಕೆಲವು ಘಟನೆಗಳು, ಅವನು ಯಾವಾಗಲೂ ಯೆಹೋವನ ಆಜೆಗ್ಞಳಿಗೆ ವಿಧೇಯನಾಗಿದ್ದನೆಂಬುದನ್ನು ತೋರಿಸುತ್ತವೆ. ಇದು ಧರ್ಮಶಾಸ್ತ್ರದಲ್ಲಿ ಇದ್ದವುಗಳಾಗಿರಲಿ ಅಥವಾ ಯೋಸೇಫನು ನೇರವಾಗಿ ದೇವದೂತರಿಂದ ಪಡೆದವುಗಳಾಗಿದ್ದಿರಲಿ—ಅವನು ಇವಕ್ಕೆ ವಿಧೇಯನಾಗಿದ್ದನು.
ಸಮಸ್ಯೆಗಳಿಂದ ಕೂಡಿದ್ದ ಒಬ್ಬ ನೀತಿವಂತ ಪುರುಷನು
ಒಂದು ಪ್ರಧಾನ ಸಮಸ್ಯೆಯನ್ನು ಎದುರಿಸುವಾಗ ದೇವಭಕ್ತಿಯುಳ್ಳ ವ್ಯಕ್ತಿಯೊಬ್ಬನು ಏನು ಮಾಡತಕ್ಕದ್ದು? ಅವನು ‘ಯೆಹೋವನ ಮೇಲೆ ತನ್ನ ಹೊರೆಯನ್ನು ಹಾಕ’ ತಕ್ಕದ್ದು ಮತ್ತು ದೈವಿಕ ನಿರ್ದೇಶನವನ್ನು ಅನುಸರಿಸತಕ್ಕದ್ದು! (ಕೀರ್ತನೆ 55:22) ಅದನ್ನೇ ಯೋಸೇಫನು ಮಾಡಿದನು. ಮರಿಯಳೊಂದಿಗೆ ಅವನ ಮದುವೆ ನಿಶ್ಚಯವಾಗಿದ್ದಾಗ, “ಅವರು ಕೂಡುವದಕ್ಕಿಂತ ಮುಂಚೆ ಆಕೆಯು ಪವಿತ್ರಾತ್ಮನಿಂದ ಬಸುರಾಗಿದ್ದದ್ದು ತಿಳಿದು ಬಂತು.” ಯೋಸೇಫನು ‘ನೀತಿವಂತನಾಗಿದ್ದ ಕಾರಣ ಮತ್ತು ಆಕೆಯನ್ನು ಸಾರ್ವಜನಿಕ ನೋಟವನ್ನಾಗಿ ಮಾಡಲು ಬಯಸದ ಕಾರಣ, ಗುಪ್ತವಾಗಿ ಆಕೆಯನ್ನು ಬಿಟ್ಟುಬಿಡಲು ಯೋಚಿಸಿದನು.’ ವಿಷಯಗಳ ಕುರಿತು ಯೋಸೇಫನು ಯೋಚಿಸಿಯಾದ ಮೇಲೆ, ಯೆಹೋವನ ದೂತನು ಅವನಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡು, ಹೇಳಿದ್ದು: “ಎಲೈ ಯೋಸೇಫನೇ, ದಾವೀದನ ವಂಶದವನೇ, ನಿನ್ನ ಹೆಂಡತಿಯಾದ ಮರಿಯಳನ್ನು ಸೇರಿಸಿಕೊಳ್ಳುವದಕ್ಕೆ ಅಂಜಬೇಡ. ಆಕೆಯ ಗರ್ಭವು ಪವಿತ್ರಾತ್ಮದಿಂದಲೇ ಆದದ್ದು. ಆಕೆಯು ಒಬ್ಬ ಮಗನನ್ನು ಹಡೆಯುವಳು; ನೀನು ಆತನಿಗೆ ಯೇಸು ಎಂದು ಹೆಸರಿಡಬೇಕು; ಯಾಕಂದರೆ ಆತನೇ ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿಕಾಯುವನು.” ಎಚ್ಚರಗೊಂಡ ಬಳಿಕ, ಯೋಸೇಫನು “ಕರ್ತನ ದೂತನು ಅಪ್ಪಣೆಕೊಟ್ಟ ಹಾಗೆ ತನ್ನ ಹೆಂಡತಿಯನ್ನು ಸೇರಿಸಿಕೊಂಡನು. ಆದರೆ ಆಕೆಯು ಗಂಡುಮಗನನ್ನು ಹಡೆಯುವ ತನಕ ಆಕೆಯನ್ನು ಅರಿಯಲಿಲ್ಲ. ಮಗುವಿಗೆ ಯೇಸುವೆಂದು ಹೆಸರಿಟ್ಟನು.” (ಮತ್ತಾಯ 1:18-25) ಯೋಸೇಫನು ದೈವಿಕ ನಿರ್ದೇಶನವನ್ನು ಸ್ವೀಕರಿಸಿದನು.
ತಮ್ಮ ಸ್ವಂತ ಊರುಗಳಲ್ಲಿ ಖಾನೆಷುಮಾರಿ ಬರೆಸಿಕೊಳ್ಳಬೇಕೆಂದು ಔಗುಸ್ತ ಕೈಸರನು ಆಜ್ಞೆ ವಿಧಿಸಿದನು. ಅದಕ್ಕೆ ವಿಧೇಯರಾಗುತ್ತಾ, ಯೋಸೇಫನು ಮತ್ತು ಮರಿಯಳು ಯೂದಾಯದಲ್ಲಿದ್ದ ಬೇತ್ಲೆಹೇಮಿಗೆ ಹೋದರು. ಅಲ್ಲಿ ಮರಿಯಳು ಯೇಸುವಿಗೆ ಜನ್ಮ ನೀಡಿದಳು ಮತ್ತು ಬೇರೆ ಯಾವ ವಸತಿಯೂ ಲಭ್ಯವಿರದ ಕಾರಣ, ಅವನನ್ನು ಒಂದು ಗೋದಲಿಯಲ್ಲಿ ಇಡಬೇಕಾಗಿತ್ತು. ಆ ರಾತ್ರಿ, ವಿಶೇಷವಾದ ಈ ಜನನದ ಕುರಿತಾದ ದಿವ್ಯ ಪ್ರಕಟನೆಯನ್ನು ಕೇಳಿದ್ದ ಕುರುಬರು ಶಿಶುವನ್ನು ನೋಡಲು ಬಂದರು. ಸುಮಾರು 40 ದಿನಗಳ ಅನಂತರ, ಯೆರೂಸಲೇಮಿನಲ್ಲಿರುವ ದೇವಾಲಯದಲ್ಲಿ ಯೇಸುವನ್ನು ಕಾಣಿಕೆಯೊಂದಿಗೆ ಪ್ರಸ್ತುತಪಡಿಸುವ ಮೂಲಕ, ಯೋಸೇಫನು ಮತ್ತು ಮರಿಯಳು ನಿಯಮದೊಂದಿಗೆ ಅನುವರ್ತಿಸಿದರು. ಯೇಸು ಮಾಡಲಿಕ್ಕಿದ್ದ ಮಹಾ ವಿಷಯಗಳ ಕುರಿತು ವೃದ್ಧನಾದ ಸಿಮೆಯೋನನ ಪ್ರವಾದನಾತ್ಮಕ ಮಾತುಗಳನ್ನು ಅವರು ಕೇಳಿದಂತೆ, ಇಬ್ಬರೂ ಆಶ್ಚರ್ಯಪಟ್ಟರು.—ಲೂಕ 2:1-33; ಹೋಲಿಸಿ ಯಾಜಕಕಾಂಡ 12:2-4, 6-8.
ದೇವಾಲಯದಲ್ಲಿ ಯೇಸುವನ್ನು ಪ್ರಸ್ತುತಪಡಿಸಿದ ಕೂಡಲೇ ಯೋಸೇಫನು ಮತ್ತು ಮರಿಯಳು ನಜರೇತಿಗೆ ಹೋದರೆಂದು ಲೂಕ 2:39 ಸೂಚಿಸುವಂತೆ ತೋರಬಹುದಾದರೂ, ಈ ವಚನವು ಸಂಕ್ಷೇಪಿಸಲ್ಪಟ್ಟ ದಾಖಲೆಯ ಭಾಗವಾಗಿದೆ. ದೇವಾಲಯದಲ್ಲಿ ಪ್ರಸ್ತುತಪಡಿಸುವಿಕೆಯ ಸ್ವಲ್ಪ ಸಮಯದ ಬಳಿಕ, ಪೌರಸ್ತ್ಯ ಜೋಯಿಸರು (ಮೇಜೈ) ಬೇತ್ಲೆಹೇಮಿನಲ್ಲಿ ಒಂದು ಮನೆಯಲ್ಲಿದ್ದ ಮರಿಯಳನ್ನೂ ಯೇಸುವನ್ನೂ ಸಂದರ್ಶಿಸಿದರೆಂದು ತೋರುತ್ತದೆ. ಈ ಸಂದರ್ಶನವು ಯೇಸುವಿಗೆ ಮರಣವನ್ನು ತರುವುದನ್ನು ದೈವಿಕ ಹಸ್ತಕ್ಷೇಪವು ತಡೆಯಿತು. ಮಾಟಗಾರರು ಅಲ್ಲಿಂದ ಹೋದ ಬಳಿಕ, ಯೆಹೋವನ ದೂತನು ಯೋಸೇಫನಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡು, ಅವನಿಗೆ ಹೇಳಿದ್ದು: “ಹೆರೋದನು ಈ ಕೂಸನ್ನು ಕೊಲ್ಲಬೇಕೆಂದು ಅದನ್ನು ಹುಡುಕುತ್ತಿರುವನು.” ಯಥಾಪ್ರಕಾರ, ಯೋಸೇಫನು ದೈವಿಕ ನಿರ್ದೇಶನವನ್ನು ಆಲಿಸಿದನು ಮತ್ತು ತನ್ನ ಕುಟುಂಬವನ್ನು ಐಗುಪ್ತಕ್ಕೆ ಕರೆದುಕೊಂಡು ಹೋದನು.—ಮತ್ತಾಯ 2:1-14.
ಹೆರೋದನ ಮರಣಾನಂತರ, ಒಬ್ಬ ದೇವದೂತನು ಐಗುಪ್ತದಲ್ಲಿ ಯೋಸೇಫನಿಗೆ ಒಂದು ಸ್ವಪ್ನದಲ್ಲಿ ಕಾಣಿಸಿಕೊಂಡು, ಹೀಗೆ ಹೇಳಿದನು: “ನೀನು ಎದ್ದು ಕೂಸನ್ನೂ ಅದರ ತಾಯಿಯನ್ನೂ ಕರಕೊಂಡು ಇಸ್ರಾಯೇಲ್ದೇಶಕ್ಕೆ ಹೋಗು.” ತನ್ನ ತಂದೆಯ ಸ್ಥಾನದಲ್ಲಿ ಹೆರೋದನ ಮಗನಾದ ಅರ್ಖೆಲಾಯನು ಆಳುತ್ತಿದ್ದಾನೆಂಬುದನ್ನು ಕೇಳಿ, ಯೋಸೇಫನು ಯೂದಾಯಕ್ಕೆ ಹಿಂದಿರುಗಲು ಹೆದರಿದನು. ಸ್ವಪ್ನದಲ್ಲಿ ಕೊಡಲ್ಪಟ್ಟ ದೈವಿಕ ಎಚ್ಚರಿಕೆಯನ್ನು ಆಲಿಸುತ್ತಾ, ಅವನು ಗಲಿಲಾಯದ ಕ್ಷೇತ್ರದೊಳಗೆ ಹೋಗಿ, ನಜರೇತ್ ಪಟ್ಟಣದಲ್ಲಿ ನೆಲಸಿದನು.—ಮತ್ತಾಯ 2:15-23.
ಒಬ್ಬ ಆತ್ಮಿಕ ಪುರುಷ
ತನ್ನ ಕುಟುಂಬವು ದೈವಿಕ ನಿಯಮದೊಂದಿಗೆ ಅನುವರ್ತಿಸುವುದನ್ನು ಮತ್ತು ಆತ್ಮಿಕವಾಗಿ ಪೋಷಿಸಲ್ಪಡುತ್ತಿರುವುದನ್ನು ಯೋಸೇಫನು ಖಚಿತಮಾಡಿಕೊಂಡನು. ಪ್ರತಿ ವರ್ಷ ಯೆರೂಸಲೇಮಿನಲ್ಲಿ ನಡೆಯುವ ಪಸ್ಕದ ಆಚರಣೆಗೆ ತನ್ನೊಂದಿಗೆ ತನ್ನ ಇಡೀ ಕುಟುಂಬವನ್ನು ಅವನು ಕರೆದುಕೊಂಡು ಹೋದನು. ಇಂತಹ ಸಂದರ್ಭಗಳಲ್ಲೊಮ್ಮೆ, ಯೋಸೇಫನು ಮತ್ತು ಮರಿಯಳು ನಜರೇತಿಗೆ ಹಿಂದಿರುಗುತ್ತಿದ್ದರು ಮತ್ತು ಯೆರೂಸಲೇಮಿನಿಂದ ಒಂದು ದಿನದ ಅಂತರವನ್ನು ಅವರು ಆವರಿಸಿದ್ದಾಗ, 12 ವರ್ಷ ಪ್ರಾಯದ ಯೇಸು ಕಾಣೆಯಾಗಿದ್ದಾನೆಂದು ಅವರು ಕಂಡುಹಿಡಿದರು. ಯೆರೂಸಲೇಮಿಗೆ ಮತ್ತೆ ಹೋಗುತ್ತಾ, ಅವರು ದೃಢಪ್ರಯತ್ನದಿಂದ ಹುಡುಕಿದರು ಮತ್ತು ಅಂತಿಮವಾಗಿ ಅವನನ್ನು ದೇವಾಲಯದಲ್ಲಿ, ಅಲ್ಲಿನ ಬೋಧಕರಿಗೆ ಕಿವಿಗೊಡುತ್ತಾ ಮತ್ತು ಪ್ರಶ್ನಿಸುತ್ತಾ ಇರುವುದನ್ನು ಕಂಡರು.—ಲೂಕ 2:41-50.
ಕೆಲವು ವಿಷಯಗಳಲ್ಲಿ ತನ್ನ ಹೆಂಡತಿ ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳುವಂತೆ ಯೋಸೇಫನು ಬಿಟ್ಟನೆಂದು ತೋರುತ್ತದೆ. ದೃಷ್ಟಾಂತಕ್ಕೆ, ಅವರು ಯೆರೂಸಲೇಮಿಗೆ ಹಿಂದಿರುಗಿ ಯೇಸುವನ್ನು ದೇವಾಲಯದಲ್ಲಿ ಕಂಡಾಗ, ವಿಷಯದ ಕುರಿತು ತನ್ನ ಎಳೆಯ ಮಗನೊಂದಿಗೆ ಮಾತಾಡಿದವಳು ಮರಿಯಳಾಗಿದ್ದಳು. (ಲೂಕ 2:48, 49) “ಬಡಗಿಯ ಮಗ” ನಂತೆ ಬೆಳೆಯುತ್ತಿದ್ದಾಗ, ಯೇಸು ಆತ್ಮಿಕ ಉಪದೇಶವನ್ನು ಪಡೆದನು. ಯೋಸೇಫನು ಅವನಿಗೆ ಮರಗೆಲಸವನ್ನೂ ಕಲಿಸಿದನು, ಯಾಕೆಂದರೆ ಯೇಸು ‘ಬಡಗಿಯೆಂದೂ, ಮರಿಯಳ ಮಗನೆಂದೂ’ ಕರೆಯಲ್ಪಟ್ಟನು. (ಮತ್ತಾಯ 13:55; ಮಾರ್ಕ 6:3) ದೇವಭಕ್ತಿಯುಳ್ಳ ಹೆತ್ತವರು ಇಂದು, ತಮ್ಮ ಮಕ್ಕಳಿಗೆ ಉಪದೇಶವನ್ನು ನೀಡಲು, ವಿಶೇಷವಾಗಿ ಅವರಿಗೆ ಆತ್ಮಿಕ ತರಬೇತಿಯನ್ನು ಕೊಡುತ್ತಾ, ತದ್ರೀತಿಯ ಅವಕಾಶಗಳ ಪೂರ್ಣ ಲಾಭವನ್ನು ತೆಗೆದುಕೊಳ್ಳಬೇಕು.—ಎಫೆಸ 6:4; 2 ತಿಮೊಥೆಯ 1:5; 3:14-16.
ಯೋಸೇಫನ ಪ್ರತೀಕ್ಷೆಗಳು
ಯೋಸೇಫನ ಮರಣದ ಬಗ್ಗೆ ಶಾಸ್ತ್ರಗಳು ಮೌನವಾಗಿವೆ. ಆದರೆ ಮಾರ್ಕ 6:3 ಯೇಸುವನ್ನು ಯೋಸೇಫನ ಮಗನಲ್ಲ, “ಮರಿಯಳ ಮಗ” ನೆಂದು ಕರೆದಿರುವುದು ಗಮನಾರ್ಹವಾಗಿದೆ. ಯೋಸೇಫನು ಆಗ ಸತ್ತು ಹೋಗಿದ್ದನೆಂದು ಇದು ಸೂಚಿಸುತ್ತದೆ. ಅಲ್ಲದೆ, ಯೋಸೇಫನು ಸಾ.ಶ. 33ರ ತನಕ ಜೀವಿಸಿದ್ದರೆ, ಶೂಲಕ್ಕೆ ಏರಿಸಲ್ಪಟ್ಟ ಯೇಸು ಮರಿಯಳನ್ನು ಅಪೊಸ್ತಲ ಯೋಹಾನನ ಪರಾಮರಿಕೆಗೆ ವಹಿಸುತ್ತಿದ್ದದ್ದು ಅಸಂಭವ.—ಯೋಹಾನ 19:26, 27.
ಹಾಗಾದರೆ, ಯೋಸೇಫನು ಮನುಷ್ಯ ಕುಮಾರನ ಧ್ವನಿಯನ್ನು ಕೇಳಿ ಪುನರುತ್ಥಾನದಲ್ಲಿ ಹೊರಗೆ ಬರುವ ಸತ್ತವರಲ್ಲಿ ಒಬ್ಬನಾಗಿರುವನು. (ಯೋಹಾನ 5:28, 29) ಅನಂತ ಜೀವಿತಕ್ಕಾಗಿರುವ ಯೆಹೋವನ ಒದಗಿಸುವಿಕೆಯ ಕುರಿತು ಕಲಿಯುತ್ತಾ, ನಿಸ್ಸಂದೇಹವಾಗಿ ಯೋಸೇಫನು ಯೆಹೋವನ ಒದಗಿಸುವಿಕೆಯ ಉಪಯೋಗವನ್ನು ಮಾಡಿಕೊಳ್ಳುವನು ಮತ್ತು 1,900 ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ ಅವನು ದೈವಿಕ ನಿರ್ದೇಶನವನ್ನು ಆಲಿಸಿದಂತೆಯೇ, ಮಹಾ ಸ್ವರ್ಗೀಯ ಅರಸನಾದ ಯೇಸು ಕ್ರಿಸ್ತನ ವಿಧೇಯ ಪ್ರಜೆಯಾಗಿರುವನು.
[ಪುಟ 31 ರಲ್ಲಿರುವ ಚಿತ್ರ]
ಯೋಸೇಫನು ಯೇಸುವಿಗೆ ಆತ್ಮಿಕ ಉಪದೇಶವನ್ನು ನೀಡಿದನು ಮತ್ತು ಅವನಿಗೆ ಮರಗೆಲಸವನ್ನೂ ಕಲಿಸಿದನು