ಯೇಸುವಿನ ಅದ್ಭುತಗಳು—ಇತಿಹಾಸವೋ ಕಾಲ್ಪನಿಕ ಕಥನವೋ?
“ರಾತ್ರಿಯ ನಾಲ್ಕನೆಯ ಜಾವದಲ್ಲಿ ಯೇಸು ಸಮುದ್ರದ ಮೇಲೆ ನಡೆದು ಅವರ ಕಡೆಗೆ ಬಂದನು.”—ಮತ್ತಾಯ 14:25.
ಲೋಕದ ಸುತ್ತಲೂ ಲಕ್ಷಗಟ್ಟಲೆ ಜನರಿಗೆ, ಯೇಸು ಕ್ರಿಸ್ತನು ಅದ್ಭುತಗಳನ್ನು ನಡಿಸಿದನೆಂಬ ವಿಶ್ವಾಸವು ಬಹುಮಟ್ಟಿಗೆ ಸ್ವತಃ ದೇವರಲ್ಲಿನ ವಿಶ್ವಾಸದಷ್ಟೇ ಪ್ರಾಮುಖ್ಯವಾಗಿದೆ. ಸುವಾರ್ತಾ ಬರಹಗಾರರು—ಮತ್ತಾಯ, ಮಾರ್ಕ, ಲೂಕ ಮತ್ತು ಯೋಹಾನರು—ಯೇಸುವಿನ ಅದ್ಭುತಗಳಲ್ಲಿ ಸುಮಾರು 35ನ್ನು ವರ್ಣಿಸಿದ್ದಾರೆ. ಆದಾಗಲೂ, ಅವನು ಇನ್ನೂ ಅನೇಕ ಪ್ರಕೃತ್ಯತೀತ ಚಮತ್ಕಾರಗಳನ್ನು ನಡಿಸಿದನೆಂಬದನ್ನು ಅವರ ದಾಖಲೆಗಳು ಸೂಚಿಸುತ್ತವೆ.—ಮತ್ತಾಯ 9:35; ಲೂಕ 9:11.
ಈ ಅದ್ಭುತಗಳು ಮನೋರಂಜನೆಗಾಗಿ ನಡಿಸಲ್ಪಟ್ಟಿರಲ್ಲಿಲ. ಬಹು ಕಾಲದಿಂದ ನಿರೀಕ್ಷಿಸಲ್ಪಟ್ಟ ಮೆಸ್ಸೀಯನು, ತಾನು ದೇವರ ಪುತ್ರನು ಎಂಬ ಯೇಸುವಿನ ವಾದಕ್ಕೆ ಅವು ಸಹಜವಾಗಿದ್ದವು. (ಯೋಹಾನ 14:11) ದಾಸತ್ವದಲ್ಲಿದ್ದ ಇಸ್ರಾಯೇಲ್ ಜನಾಂಗಕ್ಕೆ ತನ್ನನ್ನು ಸಾದರಪಡಿಸಿದಾಗ ಮೋಶೆ ಅದ್ಭುತಕರ ಪವಾಡಗಳನ್ನು ನಡಿಸಿದನು. (ವಿಮೋಚನಕಾಂಡ 4:1-9) ಮೋಶೆಗಿಂತ ಹೆಚ್ಚು ಮಹತ್ತಾದವನೆಂದು ಪ್ರವಾದಿಸಲ್ಪಟ್ಟಿದ್ದ ಮೆಸ್ಸೀಯನು ಸಹ ದೈವಿಕ ಬೆಂಬಲದ ಕೆಲವೊಂದು ಸೂಚನೆಗಳನ್ನು ಒದಗಿಸುವಂತೆ ನಿರೀಕ್ಷಿಸಲಾಗುವುದು ಎಂಬುದು ತರ್ಕಬದ್ಧ. (ಧರ್ಮೋಪದೇಶಕಾಂಡ 18:15) ಆದುದರಿಂದ, ಬೈಬಲು ಯೇಸುವನ್ನು, ದೇವರು “ಮಹತ್ತುಗಳನ್ನೂ ಅದ್ಭುತಗಳನ್ನೂ ಸೂಚಕಕಾರ್ಯಗಳನ್ನೂ ನಿಮ್ಮಲ್ಲಿ ನಡಿಸಿ ಆತನನ್ನು [ಯೆಹೂದ್ಯರಿಗೆ] . . . ತೋರಿಸಿಕೊಟ್ಟ” ಮನುಷ್ಯನೆಂದು ಕರೆಯುತ್ತದೆ.—ಅ. ಕೃತ್ಯಗಳು 2:22.
ಅದ್ಭುತಗಳನ್ನು ನಡಿಸುವವನಾಗಿ, ಯೇಸುವಿನ ಕುರಿತಾದ ಬೈಬಲಿನ ವರ್ಣನೆಯನ್ನು ಜನರು ಗತಿಸಿದಂತಹ ಕಾಲಗಳಲ್ಲಿ, ಸಾಮಾನ್ಯಾರ್ಥದಲ್ಲಿ ಯಾವುದೇ ಸಂದೇಹವಿಲ್ಲದೆ ಸ್ವೀಕರಿಸುತ್ತಿದ್ದರು. ಆದರೆ ಇತ್ತೀಚೆಗಿನ ದಶಕಗಳಲ್ಲಿ, ಸುವಾರ್ತಾ ದಾಖಲೆಗಳು ವಿಮರ್ಶಕರಿಂದ ಟೀಕೆಗೆ ಗುರಿಯಾಗಿವೆ. ಡಿಸೆಪ್ಷೆನ್ಸ್ ಆ್ಯಂಡ್ ಮಿಥ್ಸ್ ಆಫ್ ದ ಬೈಬಲ್ (ಬೈಬಲಿನ ವಂಚನೆಗಳು ಮತ್ತು ಕಲ್ಪನಾ ಕಥನಗಳು) ಎಂಬ ತನ್ನ ಪುಸ್ತಕದಲ್ಲಿ ಯೇಸು ನೀರಿನ ಮೇಲೆ ನಡೆಯುವುದರ ಕುರಿತಾದ ಬೈಬಲ್ ದಾಖಲೆಯನ್ನು ಲೈಡ್ ಗ್ರಹಾಮ್ ಸೂಚಿಸುತ್ತಾ ಹೀಗನ್ನುವಷ್ಟು ದೂರಕ್ಕೆ ಹೋಗುತ್ತಾರೆ: “ಇದನ್ನು ನಂಬಲು ತುಂಬ ಅಜ್ಞಾನವು ಬೇಕಾಗುತ್ತದೆ, ಆದರೂ, ಅಕ್ಷರಶಃ ಲಕ್ಷಾಂತರ ಜನರು ಅದನ್ನು ನಂಬುತ್ತಾರೆ. ಮತ್ತು ಹೀಗಿರುವಾಗ ನಮ್ಮ ಲೋಕಕ್ಕೆ ಏನಾಗಿದೆಯೆಂದು ನಾವು ವಿಸ್ಮಯಪಡಬೇಕಾಗಿಲ್ಲ. ಇಂಥ ಅಜ್ಞಾನದ ಮೇಲೆ ಆಧರಿತವಾದ ಯಾವ ಉತ್ತಮ ಲೋಕವನ್ನು ನೀವು ನಿರೀಕ್ಷಿಸಲು ಸಾಧ್ಯ?”
ಅಸಾಧ್ಯವೋ?
ಆದಾಗಲೂ, ಅಂತಹ ಟೀಕೆಗಳು ಸಮಂಜಸವಲ್ಲ. ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಒಂದು ಅದ್ಭುತವನ್ನು “ತಿಳಿದಿರುವ ನಿಸರ್ಗದ ನಿಯಮಗಳ ಮೂಲಕ ವಿವರಿಸಲಸಾಧ್ಯವಾದಂತಹ ಒಂದು ಘಟನೆ” ಯಾಗಿ ಅರ್ಥ ನಿರೂಪಿಸುತ್ತದೆ. ಆ ಅರ್ಥನಿರೂಪಣೆಗನುಸಾರ, ಒಂದು ಕಲರ್ ಟಿವಿ, ಒಂದು ರೇಡಿಯೋ ಟೆಲಿಫೋನ್, ಅಥವಾ ಒಂದು ಲ್ಯಾಪ್ಟಾಪ್ ಕಂಪ್ಯೂಟರ್, ಇವುಗಳನ್ನು ಕೇವಲ ಒಂದು ಶತಮಾನದ ಹಿಂದೆ ಅದ್ಭುತಗಳಾಗಿ ಪರಿಗಣಿಸಲ್ಪಡಸಾಧ್ಯವಿತ್ತು! ಯಾವುದೇ ವಿಷಯವನ್ನು ನಾವು ಸದ್ಯದ ವೈಜ್ಞಾನಿಕ ಜ್ಞಾನದ ಪ್ರಕಾರ ವಿವರಿಸಲಾರೆವು ಎಂಬ ಕಾರಣಕ್ಕಾಗಿ ಮಾತ್ರವೇ ಉದ್ಧತರಾಗಿದ್ದು ಅದನ್ನು ಅಸಾಧ್ಯವೆಂದು ಕರೆಯುವುದು ಸಮಂಜಸವೋ?
ಪರಿಗಣಿಸಲು ಇನ್ನೊಂದು ವಾಸ್ತವಾಂಶ: “ಹೊಸ ಒಡಂಬಡಿಕೆಯು” ಬರೆಯಲ್ಪಟ್ಟ ಮೂಲ ಗ್ರೀಕ್ ಭಾಷೆಯಲ್ಲಿ, “ಅದ್ಭುತ” ಕ್ಕಾಗಿ ಉಪಯೋಗಿಸಲ್ಪಟ್ಟ ಶಬ್ದವು ಡೈನಮೀಸ್ ಆಗಿತ್ತು—ಈ ಶಬ್ದದ ಮೂಲ ಅರ್ಥ “ಶಕ್ತಿ” ಎಂದಾಗಿದೆ. ಅದನ್ನು “ಮಹತ್ಕಾರ್ಯಗಳು” ಅಥವಾ “ಸಾಮರ್ಥ್ಯ” ಎಂದಾಗಿಯೂ ನಿರೂಪಿಸಲಾಗಿದೆ. (ಲೂಕ 6:19; 1 ಕೊರಿಂಥ 12:10; ಮತ್ತಾಯ 25:15) ಯೇಸುವಿನ ಅದ್ಭುತಗಳು “ದೇವರ ವೈಭವದ ಶಕ್ತಿಯ” ಒಂದು ಪ್ರದರ್ಶನವಾಗಿದ್ದವೆಂದು ಬೈಬಲು ಹೇಳುತ್ತದೆ. (ಲೂಕ 9:43) ಒಬ್ಬ ಸರ್ವಶಕ್ತನಾದ ದೇವರಿಗೆ—“ಅತಿ ಬಲಾಢ್ಯನೂ ಮಹಾಶಕ್ತನೂ ಆಗಿರುವವ” ನಿಗೆ—ಇಂಥ ಕಾರ್ಯಗಳು ಅಸಾಧ್ಯವಾಗಿರಸಾಧ್ಯವೋ?—ಯೆಶಾಯ 40:26.
ವಿಶ್ವಾಸಾರ್ಹತೆಯ ಸಾಕ್ಷ್ಯ
ನಾಲ್ಕು ಸುವಾರ್ತೆಗಳ ಒಂದು ನಿಕಟ ಪರೀಕ್ಷೆಯು ಅವುಗಳ ನಂಬಲರ್ಹತೆಗೆ ಹೆಚ್ಚಿನ ಸಾಕ್ಷ್ಯವನ್ನು ಕೊಡುತ್ತದೆ. ಪರಿಗಣಿಸಬೇಕಾದ ಒಂದು ವಿಷಯವೇನೆಂದರೆ, ಈ ದಾಖಲೆಗಳು ಯಕ್ಷಿಣಿಯ ಕಥೆಗಳು ಮತ್ತು ಪುರಾಣ ಕಥೆಗಳಿಂದ ಸ್ಪಷ್ಟವಾಗಿಗಿ ಭಿನ್ನವಾಗಿವೆ. ಉದಾಹರಣೆಗಾಗಿ, ಆತನ ಮರಣವನ್ನು ಹಿಂಬಾಲಿಸಿದ ಶತಮಾನಗಳಲ್ಲಿ ಹರಡಿದ್ದ ಸುಳ್ಳು ಕಥೆಗಳನ್ನು ಪರಿಗಣಿಸಿರಿ. ಅಪಾಕ್ರಿಫದ “ತಾಮಸನ ಸುವಾರ್ತೆ” ತಿಳಿಸುವುದು: “ಈ ಹುಡುಗ ಯೇಸು ಐದು ವರ್ಷ ಪ್ರಾಯದವನಾಗಿದ್ದಾಗ . . . , ಅವನು ಹಳ್ಳಿಯನ್ನು ಹಾದುಹೋಗುತ್ತಿದ್ದಾಗ, ಒಬ್ಬ ಬಾಲಕನು ಓಡಿಬಂದು ಅವನ ಭುಜಕ್ಕೆ ಢಿಕ್ಕಿ ಹೊಡೆದನು. ಯೇಸು ಉದ್ರೇಕಗೊಂಡು ಅವನಿಗೆ ಹೇಳಿದ್ದು: ‘ನೀನು ನಿನ್ನ ಮಾರ್ಗದಲ್ಲಿ ಮುಂದುವರಿಯದಿರುವಿ,’ ಮತ್ತು ಆ ಮಗು ತತ್ಕ್ಷಣ ಬಿದ್ದು ಸತ್ತು ಹೋಯಿತು.” ಈ ಕಥೆಯ ನಿಜ ಸ್ವಭಾವವನ್ನು ಗ್ರಹಿಸುವುದು ಕಷ್ಟಕರವಲ್ಲ—ಕೌಶಲದಿಂದ ಕಲ್ಪಿಸಲ್ಪಟ್ಟ, ಕಟ್ಟುಕಥೆಯ ಒಂದು ಭಾಗವೇ. ಇನ್ನೂ ಹೆಚ್ಚಾಗಿ, ಇಲ್ಲಿ ವರ್ಣಿಸಲ್ಪಟ್ಟ ವಿಚಿತ್ರ ವರ್ತನೆಯ, ತುಚ್ಛಸ್ವಭಾವದ ಮಗುವು ಬೈಬಲಿನ ಯೇಸುವಿನೊಂದಿಗೆ ಯಾವ ರೀತಿಯಲ್ಲೂ ಹೋಲುವದಿಲ್ಲ.—ವ್ಯತ್ಯಾಸ ನೋಡಿರಿ ಲೂಕ 2:51, 52.
ಈಗ ವಿಶ್ವಾಸಾರ್ಹವಾದ ಸುವಾರ್ತಾ ದಾಖಲೆಗಳನ್ನು ಪರಿಗಣಿಸಿರಿ. ಅವು ಅತಿಶಯೋಕ್ತಿ ಮತ್ತು ಕಾಲ್ಪನಿಕ ಸೂಚನೆಗಳಿಂದ ಮುಕ್ತವಾಗಿವೆ. ಯೇಸು ಯಥಾರ್ಥವಾದ ಅಗತ್ಯಕ್ಕೆ ಪ್ರತಿಕ್ರಿಯೆಯಲ್ಲಿ ಅದ್ಭುತಗಳನ್ನು ನಡಿಸಿದನು, ಕೇವಲ ಚಪಲಚಿತತ್ತೆಯನ್ನು ತೃಪ್ತಿಪಡಿಸಲಿಕ್ಕಾಗಿ ಅಲ್ಲ. (ಮಾರ್ಕ 10:46-52) ಯೇಸು ಎಂದೂ ತನ್ನ ಶಕ್ತಿಯನ್ನು ಸ್ವಪ್ರಯೇಜನಕ್ಕಾಗಿ ಉಪಯೋಗಿಸಲಿಲ್ಲ. (ಮತ್ತಾಯ 4:2-4) ಮತ್ತು ಅದನ್ನು ಅವನು ಎಂದೂ ಮೆರಸಿಕೊಳ್ಳಲಿಕ್ಕಾಗಿ ಉಪಯೋಗಿಸಲಿಲ್ಲ. ವಾಸ್ತವದಲ್ಲಿ, ಕುತೂಹಲಿಯಾಗಿದ್ದ ಹೆರೋದ ರಾಜನು ಯೇಸು ತನಗಾಗಿ ಒಂದು ಅದ್ಭುತಕರ “ಸೂಚಕಕಾರ್ಯ” ವನ್ನು ನಡಿಸುವಂತೆ ಬಯಸಿದಾಗ, ಯೇಸು “ಅವನಿಗೆ ಏನೂ ಉತ್ತರ ಕೊಡಲಿಲ್ಲ.”—ಲೂಕ 23:8, 9.
ಯೇಸುವಿನ ಅದ್ಭುತಗಳು ವೃತ್ತಿಪರ ಯಕ್ಷಿಣಿಗಾರರ, ಐಂದ್ರಜಾಲಿಕರ ಮತ್ತು ಭಕ್ತಿ ಚಿಕಿತ್ಸಕರ ಕಾರ್ಯಗಳಿಂದಲೂ ಪೂರ್ತಿಯಾಗಿ ಭಿನ್ನವಾಗಿವೆ. ಅವನ ಮಹತ್ಕಾರ್ಯಗಳು ಯಾವಾಗಲೂ ದೇವರನ್ನು ಮಹಿಮೆಪಡಿಸಿದವು. (ಯೋಹಾನ 9:3; 11:1-4) ಅವನ ಅದ್ಭುತಗಳು ಭಾವನಾತ್ಮಕ ಸಂಸ್ಕಾರಗಳು, ಇಂದ್ರಜಾಲದ ಮಂತ್ರಪ್ರಯೋಗಗಳು ಆಡಂಬರದ ಪ್ರದರ್ಶನಗಳು, ಮೋಸ ಮತ್ತು ಸುಪ್ತ್ಯಾವಾಹನೆಯಿಂದ ಕೂಡಿರಲಿಲ್ಲ. “ನನಗೆ ಕಣ್ಣು ಬರುವಂತೆ ಮಾಡಬೇಕು, ಗುರುವೇ” ಎಂದು ಕೂಗಿದ ಬಾರ್ತಿಮಾಯ ಎಂಬ ಹೆಸರಿನ ಒಬ್ಬ ಕುರುಡ ಭಿಕ್ಷುಕನನ್ನು ಯೇಸು ಸಂಧಿಸಿದಾಗ, ಯೇಸು ಅವನಿಗೆ “ಹೋಗು, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿ ಅದೆ” ಎಂದಷ್ಟೇ ಹೇಳಿದನು. ಮತ್ತು “ಕೂಡಲೇ ಅವನಿಗೆ ಕಣ್ಣುಬಂದವು.”—ಮಾರ್ಕ 10:46-52.
ಯೇಸು ತನ್ನ ಮಹತ್ಕಾರ್ಯಗಳನ್ನು ಯಾವುದೇ ರಂಗ ಸಜ್ಜುಗಳಿಲ್ಲದೆ, ವಿಶೇಷವಾಗಿ ಯೋಜಿಸಲ್ಪಟ್ಟ ರಂಗಪ್ರದರ್ಶನ ಅಥವಾ ಚಮತ್ಕಾರದ ದೀಪಗಳಿಲ್ಲದೆ ನಡಿಸಿದನೆಂದು ಸುವಾರ್ತಾ ದಾಖಲೆಗಳು ತೋರಿಸುತ್ತವೆ. ಅವು ಅನೇಕ ಸಲ ಅಸಂಖ್ಯಾತ ಪ್ರತ್ಯಕ್ಷ ಸಾಕ್ಷಿಗಳ ಮುಂದೆ ಬಹಿರಂಗವಾಗಿ ನಡಿಸಲ್ಪಡುತ್ತಿದ್ದವು. (ಮಾರ್ಕ 5:24-29; ಲೂಕ 7:11-15) ಆಧುನಿಕ ಭಕ್ತಿ ಚಿಕಿತ್ಸಕರ ಪ್ರಯತ್ನಗಳಂತಿರದೆ, ಗುಣಪಡಿಸುವ ಅವನ ಪ್ರಯತ್ನಗಳು, ಕಾಯಿಲೆಬಿದ್ದ ಒಬ್ಬನು ನಂಬಿಕೆಯ ಕೊರತೆಯುಳ್ಳವನಾಗಿದ್ದಾನೆಂದುಕೊಳ್ಳುವ ಕಾರಣಕ್ಕಾಗಿ ಎಂದೂ ವಿಫಲವಾಗಲಿಲ್ಲ. ಮತ್ತಾಯ 8:16 ಹೇಳುವುದು: “ಮೈಯಲ್ಲಿ ನೆಟ್ಟಗಿಲ್ಲದವರೆಲ್ಲರನ್ನು ವಾಸಿಮಾಡಿದನು.”
“ಮೆನಿ ಇನ್ಫ್ಯಾಲಿಬ್ಲ್ ಪ್ರೂಫ್ಸ್:” ದಿ ಎವಿಡೆನ್ಸೆಸ್ ಆಫ್ ಕ್ರಿಸ್ಟಿಆ್ಯನಿಟಿ, ಎಂಬ ತನ್ನ ಪುಸ್ತಕದಲ್ಲಿ ವಿದ್ವಾಂಸ ಆರ್ತರ್ ಪೀರ್ಸನ್ರವರು, ಕ್ರಿಸ್ತನ ಅದ್ಭುತಗಳ ಕುರಿತಾಗಿ ಹೇಳುವುದು: “ಅವುಗಳ ಸಂಖ್ಯೆ, ಅವನು ನಡಿಸಿದಂತಹ ಗುಣಪಡಿಸುವಿಕೆಗಳ ತತ್ಕ್ಷಣದ ಮತ್ತು ಸಂಪೂರ್ಣತೆಯ ಸ್ವರೂಪವು, ಮತ್ತು ಸತ್ತವರನ್ನು ಎಬ್ಬಿಸುವ ಪ್ರಯತ್ನದಲ್ಲಿ ಒಂದೇ ಒಂದು ಸೋಲಿನ ಇಲ್ಲಮೆಯು, ಈಗಿನ ಮತ್ತು ಇತರ ಯಾವುದೇ ಯುಗದ ಸೋಗಿನ ಚಮತ್ಕಾರಗಳ ಹಾಗೂ ಈ ಅದ್ಭುತಗಳ ನಡುವೆ ಅಪಾರ ಅಂತರವನ್ನು ಹಾಕುತ್ತದೆ.”
ಲೌಕಿಕ ಸ್ಥಿರೀಕರಣ
ಪೀರ್ಸನ್ ಹೀಗನ್ನುವಾಗ ಸುವಾರ್ತಾ ದಾಖಲೆಗಳನ್ನು ಬೆಂಬಲಿಸುವ ಮತ್ತೊಂದು ವಾದವನ್ನು ಅವರು ನೀಡುತ್ತಾರೆ: “ಶಾಸ್ತ್ರವಚನದ ಅದ್ಭುತಗಳ ಯಾವುದೇ ದೃಢೀಕರಣವು ಶತ್ರುಗಳ ಮೌನಕ್ಕಿಂತ ಹೆಚ್ಚು ಗಮನಾರ್ಹವಾಗಿರುವುದಿಲ್ಲ.” ಯೇಸುವಿಗೆ ಅಪಕೀರ್ತಿ ತರಲು ಯೆಹೂದಿ ಮುಖಂಡರಿಗೆ ತುಂಬ ಬಲವಾದ ಒಂದು ಹೇತು ಇತ್ತು, ಆದರೆ ಅವನ ಅದ್ಭುತಗಳು ಎಷ್ಟು ಪ್ರಸಿದ್ಧವಾಗಿದ್ದವೆಂದರೆ ಅವನ ಎದುರಾಳಿಗಳು ಅವುಗಳನ್ನು ಅಲ್ಲಗಳೆಯಲು ಧೈರ್ಯಮಾಡಲಿಲ್ಲ. ಅಂಥ ಚಮತ್ಕಾರಗಳಿಗೆ ಪೈಶಾಚಿಕ ಶಕ್ತಿಗಳು ಕಾರಣ ಎಂದು ಮಾತ್ರ ಅವರಿಗೆ ಹೇಳಸಾಧ್ಯವಾಯಿತು. (ಮತ್ತಾಯ 12:22-24) ಯೇಸುವಿನ ಮರಣದ ಶತಮಾನಗಳ ನಂತರ, ಯೆಹೂದಿ ಟಾಲ್ಮೂಡ್ನ ಬರಹಗಾರರು ಅದ್ಭುತ ಶಕಿಗ್ತಳಿಗಾಗಿ ಯೇಸುವಿಗೆ ಕೀರ್ತಿ ಕೊಡುವುದನ್ನು ಮುಂದುವರಿಸಿದರು. ಜ್ಯೂವಿಷ್ ಎಕ್ಸ್ಪ್ರೆಶನ್ಸ್ ಆನ್ ಜೀಜಸ್ (ಯೇಸುವಿನ ಮೇಲೆ ಯೆಹೂದಿ ಅಭಿವ್ಯಕ್ತಿಗಳು) ಎಂಬ ಪುಸ್ತಕಕ್ಕನುಸಾರ “ಇಂದ್ರಜಾಲದ ಆಚರಣೆಗಳನ್ನು ಅನುಸರಿಸಿದ” ಒಬ್ಬನಾಗಿ ಅವರು ಅವನನ್ನು ತಳ್ಳಿಹಾಕಿದರು. ಯೇಸುವಿನ ಅದ್ಭುತಗಳನ್ನು ತಳ್ಳಿಬಿಡಲು ಸ್ವಲ್ಪವೂ ಸಾಧ್ಯವಿರುತ್ತಿದ್ದಲ್ಲಿ ಅಂಥ ಒಂದು ಹೇಳಿಕೆಯು ಮಾಡಲ್ಪಡುತ್ತಿತ್ತೋ?
ಇನ್ನೂ ಹೆಚ್ಚಿನ ಪುರಾವೆಯು ನಾಲ್ಕನೆಯ ಶತಮಾನದ ಚರ್ಚ್ ಇತಿಹಾಸಗಾರನಾದ ಯೂಸೀಬಿಯಸ್ನಿಂದ ಬರುತ್ತದೆ. ದ ಹಿಸ್ಟರಿ ಆಫ್ ದ ಚರ್ಚ್ ಫ್ರಾಮ್ ಕ್ರೈಸ್ಟ್ ಟು ಕಾನ್ಸ್ಟಂಟೀನ್ ಎಂಬ ತನ್ನ ಪುಸ್ತಕದಲ್ಲಿ, ಯಾರು ಕ್ರೈಸ್ತತ್ವದ ಸಮರ್ಥನೆಯಲ್ಲಿ ಸಮ್ರಾಟನಿಗೆ ಒಂದು ಪತ್ರವನ್ನು ಕಳುಹಿಸಿದನೋ, ಆ ಕ್ವಾಡ್ರೇಟಸ್ನನ್ನು ಅವನು ಉಲ್ಲೇಖಿಸುತ್ತಾನೆ. ಕ್ವಾಡ್ರೇಟಸ್ ಬರೆದದ್ದು: “ನಮ್ಮ ವಿಮೋಚಕನ ಕೆಲಸಗಳು ಯಾವಾಗಲೂ ಗಮನಿಸಲ್ಪಡುವಂತಹವುಗಳಾಗಿದ್ದವು, ಯಾಕಂದರೆ ಅವು ನಿಜವಾಗಿದ್ದವು—ಗುಣಪಡಿಸಲ್ಪಟ್ಟ ಜನರು ಮತ್ತು ಸತ್ತವರಿಂದ ಎಬ್ಬಿಸಲ್ಪಟ್ಟವರು, ಇವರು ಗುಣಪಡಿಸಲ್ಪಟ್ಟ ಯಾ ಎಬ್ಬಿಸಲ್ಪಟ್ಟ ಕ್ಷಣದಲ್ಲಿ ಮಾತ್ರ ನೋಡಲ್ಪಟ್ಟಿರಲಿಲ್ಲ, ವಿಮೋಚಕನು ನಮ್ಮ ಮಧ್ಯೆ ಇದ್ದಾಗ ಮಾತ್ರವಲ್ಲ; ಅವನ ನಿರ್ಗಮನದ ಬಹಳ ಸಮಯದ ನಂತರವೂ; ಯಾವಾಗಲೂ ಅವರನ್ನು ನೋಡಬಹುದಿತ್ತು, ವಾಸ್ತವದಲ್ಲಿ ಕೆಲವರು ನನ್ನ ಸ್ವಂತ ಸಮಯದ ತನಕ ಬದುಕಿದರು.” ವಿದ್ವಾಂಸ ವಿಲ್ಯಮ್ ಬಾರ್ಕ್ಲಿ ಅವಲೋಕಿಸಿದ್ದು: “ತನ್ನ ಸ್ವಂತ ದಿನದ ತನಕ, ಯಾರ ಮೇಲೆ ಅದ್ಭುತಗಳು ನಡಿಸಲ್ಪಟ್ಟವೋ ಆ ಮನುಷ್ಯರನ್ನು ಸಾಕ್ಷ್ಯವಾಗಿ ಸಾದರಪಡಿಸಬಹುದಿತ್ತು ಎಂದು ಕ್ವಾಡ್ರೇಟಸ್ ಹೇಳುತ್ತಿದ್ದಾನೆ. ಅದು ಅಸತ್ಯವಾಗಿದ್ದರೆ ರೋಮನ್ ಸರಕಾರವು ಅದನ್ನು ಒಂದು ಸುಳ್ಳಾಗಿ ಮಸಿಹಚ್ಚುವುದಕ್ಕಿಂತ ಹೆಚ್ಚು ಸುಲಭವಾದದ್ದೇನೂ ಇರುತ್ತಿರಲಿಲ್ಲ.”
ಯೇಸುವಿನ ಅದ್ಭುತಗಳಲ್ಲಿ ನಂಬುವುದು ಸಮಂಜಸವೂ, ತರ್ಕಸಮ್ಮತವೂ ಮತ್ತು ಪುರಾವೆಯೊಂದಿಗೆ ಪೂರ್ಣವಾಗಿ ಹೊಂದಿಕೆಯಲ್ಲಿರುವುದು ಆಗಿದೆ. ಆದರೂ, ಯೇಸುವಿನ ಅದ್ಭುತಗಳು ಇಂದು ವ್ಯಾವಹಾರಿಕ ಪ್ರಮುಖತೆಯಿಲ್ಲದ ಇತಿಹಾಸವಾಗಿಲ್ಲ. ಇಬ್ರಿಯ 13:8 ನಮ್ಮನ್ನು ಜ್ಞಾಪಿಸುವದು: “ಯೇಸು ಕ್ರಿಸ್ತನು ನಿನ್ನೆ ಇದ್ದ ಹಾಗೇ ಈಹೊತ್ತೂ ಇದ್ದಾನೆ, ನಿರಂತರವೂ ಹಾಗೆಯೇ ಇರುವನು.” ಹೌದು, ಅವನು ಇಂದು ಸ್ವರ್ಗದಲ್ಲಿ ಜೀವಿತನಾಗಿದ್ದಾನೆ, ಭೂಮಿಯ ಮೇಲೆ ಒಬ್ಬ ಮಾನವನೋಪಾದಿ ಮಾಡಿದುದಕ್ಕಿಂತ ಹೆಚ್ಚು ಮಹತ್ತಾದ ರೀತಿಯಲ್ಲಿ ಅದ್ಭುತಶಕ್ತಿಗಳನ್ನು ಉಪಯೋಗಿಸಲು ಶಕ್ತನಾಗಿದ್ದಾನೆ. ಇನ್ನೂ ಹೆಚ್ಚಾಗಿ, ಆತನ ಅದ್ಭುತಗಳ ಕುರಿತಾದ ಸುವಾರ್ತಾ ದಾಖಲೆಗಳು (1) ಇಂದು ಕ್ರೈಸ್ತರಿಗೆ ವ್ಯಾವಹಾರಿಕ ಪಾಠಗಳನ್ನು ಕಲಿಸುತ್ತವೆ, (2) ಯೇಸುವಿನ ವ್ಯಕ್ತಿತ್ವದ ಬೆರಗುಗೊಳಿಸುವಂತಹ ರೂಪಗಳನ್ನು ಪ್ರಕಟಿಸುತ್ತವೆ, ಮತ್ತು (3) ಹತ್ತಿರದ ಭವಿಷ್ಯತ್ತಿನಲ್ಲಿ ಇನ್ನೂ ಹೆಚ್ಚು ಪ್ರೇಕ್ಷಣೀಯ ಘಟನೆಗಳು ನಡೆಯಲಿರುವ ಒಂದು ಸಮಯಕ್ಕೆ ನಿರ್ದೇಶಿಸುತ್ತವೆ!
ಈ ಅಂಶಗಳನ್ನು ದೃಷ್ಟಾಂತಿಸಲು ಮುಂದಿನ ಲೇಖನವು ಬೈಬಲಿನ ಮೂರು ಪ್ರಸಿದ್ಧ ದಾಖಲೆಗಳ ಮೇಲೆ ಕೇಂದ್ರೀಕರಿಸಲಿದೆ.