ನನ್ನ ಜೀವನವನ್ನು ಅರ್ಪಿಸಲು ಸಾಧ್ಯವಿರುವ ಕೆಲಸಗಳಲ್ಲಿ ಅತ್ಯುತ್ತಮವಾದದ್ದು
ಬಾಬ್ ಆ್ಯಂಡರ್ಸನ್ ಹೇಳಿದಂತೆ
ಸುಮಾರು ಹತ್ತು ವರ್ಷಗಳ ಹಿಂದೆ, ಕೆಲವು ಮಿತ್ರರು ನನ್ನನ್ನು ಕೇಳಿದ್ದು: “ಒಬ್ಬ ಪಯನೀಯರನೋಪಾದಿ ಇಷ್ಟು ದೀರ್ಘ ಸಮಯದ ವರೆಗೆ ನೀನು ಮುಂದುವರಿದಿರುವುದು ಏಕೆ ಬಾಬ್?” ನಾನು ನಸುನಕ್ಕು ಹೇಳಿದ್ದು, “ಒಳ್ಳೆಯದು, ಪಯನೀಯರ್ ಸೇವೆ ಮಾಡುವುದಕ್ಕಿಂತ ಉತ್ತಮವಾದ ಯಾವುದಾದರೂ ಕೆಲಸದ ಕುರಿತು ನೀವು ಯೋಚಿಸಬಲ್ಲಿರೊ?”
ನಾನು 1931 ರಲ್ಲಿ ಪಯನೀಯರ್ ಸೇವೆಯನ್ನು ಪ್ರವೇಶಿಸಿದಾಗ, ನನಗೆ 23 ವರ್ಷ ವಯಸ್ಸಾಗಿತ್ತು. ನಾನು ಈಗ ನನ್ನ 87 ನೆಯ ವರ್ಷದಲ್ಲಿದ್ದೇನೆ ಮತ್ತು ಇನ್ನೂ ಪಯನೀಯರ್ ಸೇವೆಯನ್ನು ಮಾಡುತ್ತಿದ್ದೇನೆ. ನನ್ನ ಜೀವಿತದಲ್ಲಿ ಇದಕ್ಕಿಂತ ಉತ್ತಮವಾದ ಏನನ್ನೂ ಮಾಡಲು ನನಗೆ ಸಾಧ್ಯವಾಗಿರುತ್ತಿರಲಿಲ್ಲವೆಂದು ನನಗೆ ಗೊತ್ತಿದೆ. ಏಕೆಂದು ನಾನು ವಿವರಿಸುವೆ.
1914 ರಲ್ಲಿ ಕಿರುಹೊತ್ತಗೆಯೊಂದನ್ನು ನಮ್ಮ ಮನೆಯಲ್ಲಿ ಬಿಟ್ಟು ಹೋಗಲಾಯಿತು. ಅದು ಅಂತಾರಾಷ್ಟ್ರೀಯ ಬೈಬಲ್ ವಿದ್ಯಾರ್ಥಿಗಳಿಂದ ಪ್ರಕಾಶಿಸಲ್ಪಟ್ಟಿತ್ತು. ಯೆಹೋವನ ಸಾಕ್ಷಿಗಳು ಆ ಸಮಯದಲ್ಲಿ ಹಾಗೆಂದು ಕರೆಯಲ್ಪಟ್ಟರು. ಸಾಕ್ಷಿಯು ಹಿಂದಿರುಗಿದಾಗ, ನರಕಾಗ್ನಿಯ ಕುರಿತು ನನ್ನ ತಾಯಿಯು ಕೂಲಂಕಷವಾಗಿ ಅವನನ್ನು ಪ್ರಶ್ನಿಸಿದರು. ತಾಯಿ ಒಬ್ಬ ಕಟ್ಟುನಿಟ್ಟಿನ ವೆಸ್ಲೀಯನ್ ಮೆತೊಡಿಸ್ಟ್ ಆಗಿ ಬೆಳೆಸಲ್ಪಟ್ಟಿದ್ದರು ಆದರೆ ಒಬ್ಬ ಪ್ರೀತಿಯ ದೇವರೊಂದಿಗೆ ಅನಂತ ಯಾತನೆಯ ಈ ಸಿದ್ಧಾಂತವನ್ನು ಎಂದಿಗೂ ಸರಿಹೊಂದಿಸಲು ಆಕೆಗೆ ಸಾಧ್ಯವಾಗಲಿಲ್ಲ. ವಿಷಯದ ಕುರಿತಾದ ಸತ್ಯವನ್ನು ತಾನು ಕಲಿತ ಕೂಡಲೆ, ಅವರು ಅಂದದ್ದು: “ನನ್ನ ಜೀವಿತದಲ್ಲಿ ನನಗೆ ಎಂದೂ ಅನಿಸಲಾರದಷ್ಟು ಹೆಚ್ಚು ಸಂತೋಷ ಈಗ ಅನಿಸುತ್ತಿದೆ!”
ನನ್ನ ತಾಯಿ ಕೂಡಲೇ ಮೆತೊಡಿಸ್ಟ್ ಸಂಡೇ ಸ್ಕೂಲ್ನಲ್ಲಿ ಕಲಿಸುವುದನ್ನು ನಿಲ್ಲಿಸಿದರು ಮತ್ತು ಬೈಬಲ್ ವಿದ್ಯಾರ್ಥಿಗಳ ಸಣ್ಣ ಗುಂಪನ್ನು ಸೇರಿದರು. ಮರ್ಜಿ ನದಿಯ ಆಚೆ ಲಿವರ್ಪೂಲ್ ಬಂದರಿನ ಎದುರಿನಲ್ಲಿರುವ, ಬರ್ಕನ್ಹೆಡ್ ಎಂಬ ನಮ್ಮ ಹುಟ್ಟೂರಿನಲ್ಲಿ ಸಾರುವುದನ್ನು ಆಕೆ ಆರಂಭಿಸಿದರು, ಮತ್ತು ಬೇಗನೆ ಅನೇಕ ನೆರೆಹೊರೆಯ ಪಟ್ಟಣಗಳಿಗೆ ಕ್ರಮವಾಗಿ ಸೈಕಲ್ ಸವಾರಿಯ ಮೂಲಕ ಭೇಟಿನೀಡುತ್ತಿದ್ದರು. ಅವರ ಜೀವಿತದ ಉಳಿದ ಸಮಯದ ವರೆಗೆ ವಿಸ್ತಾರವಾದ ಈ ಟೆರಿಟೊರಿಯಲ್ಲಿ ಅವರು ಸಾಕ್ಷಿನೀಡಿದರು ಮತ್ತು ಬಹಳ ಪ್ರಸಿದ್ಧರಾದರು, ಮತ್ತು ಹೀಗೆ ಅವರ ಮಕ್ಕಳಿಗೆ ಉತ್ತಮವಾದೊಂದು ಮಾದರಿಯನ್ನಿಟ್ಟರು. ಅವರು 1971 ರಲ್ಲಿ, ಕೊನೆಯ ವರೆಗೆ ಒಬ್ಬ ಸಕ್ರಿಯ ಸಾಕ್ಷಿಯಾಗಿ, 97 ನೆಯ ಮುಪ್ಪಾದ ವಯಸ್ಸಿನಲ್ಲಿ ಮರಣ ಹೊಂದಿದರು.
ನನ್ನ ಅಕ್ಕ ಕ್ಯಾತ್ಲೀನ್ ಮತ್ತು ನಾನು ತಾಯಿಯ ಜೊತೆಗೆ ಬೈಬಲ್ ವಿದ್ಯಾರ್ಥಿಗಳೊಂದಿಗೆ ಅವರ ಕೂಟಗಳಿಗೆ ಹೋಗಲು, ಮೆತೊಡಿಸ್ಟ್ ಸಂಡೇ ಸ್ಕೂಲ್ನಿಂದ ವರ್ಗಾಯಿಸಲ್ಪಟ್ಟೆವು. ತದನಂತರ, ನನ್ನ ತಂದೆಯೂ ಜೊತೆ ಸೇರಿದಾಗ, ನನ್ನ ಹೆತ್ತವರು ದ ಹಾರ್ಪ್ ಆಫ್ ಗಾಡ್ (ಇಂಗ್ಲಿಷ್ನಲ್ಲಿ) ಎಂಬ ಪುಸ್ತಕದಿಂದ ಕ್ರಮವಾದ ಕುಟುಂಬ ಬೈಬಲ್ ಅಧ್ಯಯನಕ್ಕಾಗಿ ಏರ್ಪಾಡು ಮಾಡಿದರು. ಅಂತಹ ಒಂದು ಅಧ್ಯಯನವು ಆ ದಿನಗಳಲ್ಲಿ ಒಂದು ಹೊಸ ವಿಷಯವಾಗಿತ್ತು, ಆದರೆ ಮೂಲಭೂತ ಬೈಬಲ್ ಸತ್ಯದಲ್ಲಿ ಈ ಆರಂಭಿಕ ಆಧಾರವು ಸಮೃದ್ಧವಾದ ಪ್ರತಿಫಲವನ್ನು ನೀಡಿತು, ಯಾಕೆಂದರೆ ನನ್ನ ಅಕ್ಕ ಮತ್ತು ನಾನು, ಇಬ್ಬರೂ ಸಕಾಲದಲ್ಲಿ ಪಯನೀಯರ್ ಸೇವೆಯಲ್ಲಿ ತೊಡಗಿದೆವು.
“ಫೋಟೊ ಡ್ರಾಮಾ ಆಫ್ ಕ್ರಿಯೇಷನ್” ಅನ್ನು 1920 ರಲ್ಲಿ ಲಿವರ್ಪೂಲ್ನಲ್ಲಿ ನೋಡಿದ್ದು, ಮಕ್ಕಳಾದ ನಮಗೆ ಆತ್ಮಿಕ ಸಂಧಿಕಾಲವಾಗಿತ್ತು ಎಂಬುದು ತಾಯಿಯ ವೀಕ್ಷಣೆಯಾಗಿತ್ತು, ಮತ್ತು ಆಕೆಯ ವೀಕ್ಷಣೆ ಸರಿಯಾಗಿತ್ತು. ನಾನು ಎಳೆಯನಾಗಿದ್ದ ಕಾರಣ, ಆ ಪ್ರದರ್ಶನವು ನನ್ನ ಮನಸ್ಸಿನ ಮೇಲೆ ಸ್ಪಷ್ಟವಾಗಿದ ಪ್ರಭಾವವನ್ನು ಬೀರಿತು. ನನ್ನ ಜ್ಞಾಪಕದಲ್ಲಿ ಪ್ರಧಾನವಾಗಿರುವ ಭಾಗವು ಯೇಸುವಿನ ಜೀವಿತವನ್ನು, ವಿಶೇಷವಾಗಿ ಅವನು ತನ್ನ ಮರಣದ ಕಡೆಗೆ ನಡೆಯುವುದನ್ನು ಪ್ರದರ್ಶಿಸಿದ ಭಾಗವಾಗಿತ್ತು. ಆ ಇಡೀ ಅನುಭವವು ಜೀವಿತದಲ್ಲಿ ಅತ್ಯಂತ ಪ್ರಾಮುಖ್ಯವಾದ ಕೆಲಸವಾದ ಸಾರುವಿಕೆಯ ಮೇಲೆ ಮನಸ್ಸನ್ನು ಕೇಂದ್ರೀಕರಿಸುವಂತೆ ನನಗೆ ಸಹಾಯ ಮಾಡಿತು!
1920 ಗಳ ಆದಿ ಭಾಗದಲ್ಲಿ, ಆದಿತ್ಯವಾರದ ಮಧ್ಯಾಹ್ನಗಳಲ್ಲಿ ನಾನು ನನ್ನ ತಾಯಿಯೊಂದಿಗೆ ಕಿರುಹೊತ್ತಗೆಗಳನ್ನು ಹಂಚಲು ತೊಡಗಿದೆ. ಮೊದಲು ಅವುಗಳನ್ನು ಮನೆಗಳಲ್ಲಿ ಬಿಟ್ಟುಹೋಗುವಂತೆ ನಾವು ಆದೇಶಿಸಲ್ಪಟ್ಟೆವು; ಅನಂತರ ಅವುಗಳನ್ನು ಮನೆಯವರ ಕೈಗಳಲ್ಲಿ ನೀಡಿ, ಆಸಕ್ತಿಯಿರುವವರನ್ನು ಪುನಃ ಭೇಟಿಯಾಗುವಂತೆ ಹೇಳಲ್ಪಟ್ಟೆವು. ನಾನು ಇದನ್ನು, ಇಂದು ಬಹಳಷ್ಟು ಉತ್ಪನ್ನಕಾರಕವಾಗಿರುವ ನಮ್ಮ ಪುನರ್ಭೇಟಿ ಮತ್ತು ಬೈಬಲ್ ಅಧ್ಯಯನ ಚಟುವಟಿಕೆಯ ಆರಂಭಿಕ ಅಡಿಪಾಯವಾಗಿ ಯಾವಾಗಲೂ ವೀಕ್ಷಿಸಿದ್ದೇನೆ.
ಪಯನೀಯರ್ ಸೇವೆಯಲ್ಲಿ!
ಕ್ಯಾತ್ಲೀನ್ ಮತ್ತು ನಾನು 1927 ರಲ್ಲಿ ದೀಕ್ಷಾಸ್ನಾನ ಪಡೆದೆವು. 1931 ರಲ್ಲಿ ಯೆಹೋವನ ಸಾಕ್ಷಿಗಳು ಎಂಬ ಹೆಸರನ್ನು ಧರಿಸುವ ಠರಾವಿನ ಕುರಿತು ನಾನು ಕೇಳಿದಾಗ, ಲಿವರ್ಪೂಲ್ನಲ್ಲಿ ನಾನು ಒಬ್ಬ ರಾಸಾಯನಿಕ ಪರೀಕ್ಷಕನಾಗಿ ಕೆಲಸಮಾಡುತ್ತಿದ್ದೆ. ಸೊಸೈಟಿಯ ಕಾಲ್ಪೋರ್ಟರ್ಗಳು (ಈಗ ಪಯನೀಯರರೆಂದು ಕರೆಯಲ್ಪಡುವವರು) ಲಿವರ್ಪೂಲ್ನ ವ್ಯಾಪಾರ ಟೆರಿಟೊರಿಯಲ್ಲಿ ಕೆಲಸಮಾಡುವುದನ್ನು ನಾನು ಅನೇಕ ಬಾರಿ ನೋಡಿದ್ದೆ, ಮತ್ತು ಅವರ ಉದಾಹರಣೆಯು ನನ್ನನ್ನು ಬಹಳವಾಗಿ ಪ್ರಭಾವಿಸಿತು. ಲೌಕಿಕ ಸಹವಾಸದಿಂದ ಮುಕ್ತನಾಗಿ, ಯೆಹೋವನ ಸೇವೆಯಲ್ಲಿ ನನ್ನ ಜೀವಿತವನ್ನು ವ್ಯಯಿಸಲು ನಾನು ಎಷ್ಟು ಹಂಬಲಿಸಿದೆ!
ಅದೇ ವರ್ಷದ ಬೇಸಗೆಯ ಕಾಲದಲ್ಲಿ, ನನ್ನ ಮಿತ್ರರಾದ ಗೆರಿ ಗ್ಯಾರಾರ್ಡ್, ತಾನು ವಾಚ್ ಟವರ್ ಸೊಸೈಟಿಯ ಎರಡನೆಯ ಅಧ್ಯಕ್ಷರಾಗಿದ್ದ ಜೋಸಫ್ ಎಫ್. ರಥರ್ಫರ್ಡ್ ಅವರಿಂದ, ಭಾರತದಲ್ಲಿ ಸಾರುವ ಒಂದು ನೇಮಕವನ್ನು ಸ್ವೀಕರಿಸಿದ್ದೇನೆಂದು ನನಗೆ ಹೇಳಿದರು. ಸಮುದ್ರ ಯಾನವನ್ನು ಪ್ರಾರಂಭಿಸುವ ಮೊದಲು, ನನ್ನನ್ನು ಭೇಟಿಯಾಗಲು ಅವರು ಬಂದರು ಮತ್ತು ಪೂರ್ಣ ಸಮಯದ ಸೇವೆಯ ಸುಯೋಗದ ಕುರಿತು ಮಾತಾಡಿದರು. ಹೋಗಿ ಬರುವೆನೆಂದು ಅವರು ಹೇಳಿದಂತೆ, “ಬೇಗನೆ ನೀನು ಒಬ್ಬ ಪಯನೀಯರನಾಗುವೆ ಎಂಬುದು ಖಂಡಿತ, ಬಾಬ್” ಎಂದು ಹೇಳುವ ಮೂಲಕ ನನ್ನನ್ನು ಇನ್ನೂ ಉತ್ತೇಜಿಸಿದರು. ಮತ್ತು ಸಂಭವಿಸಿದ್ದು ಹಾಗೆಯೇ. ಅಕ್ಟೋಬರ್ ತಿಂಗಳಿನಲ್ಲಿ ನನ್ನ ಹೆಸರನ್ನು ನಾನು ನಮೂದಿಸಿಕೊಂಡೆ. ನಾಡಿನ ಬೀದಿಗಳಲ್ಲಿ ಸೈಕಲ್ ಸವಾರಿ ಮಾಡುತ್ತಾ, ಪ್ರತ್ಯೇಕವಾದ ಸಮುದಾಯಗಳಲ್ಲಿ ಸಾರುವುದು ಎಂತಹ ಆನಂದದ, ಎಂತಹ ಸ್ವಾತಂತ್ರ್ಯದ ಸಂಗತಿಯಾಗಿತ್ತು! ನಾನು ಮಾಡಸಾಧ್ಯವಿದ್ದ ಕೆಲಸಗಳಲ್ಲಿ ಅತ್ಯಂತ ಪ್ರಾಮುಖ್ಯವಾದ ಕೆಲಸವನ್ನು ನಾನು ಪ್ರಾರಂಭಿಸುತ್ತಿದ್ದೇನೆಂದು ಆಗ ನನಗೆ ಗೊತ್ತಿತ್ತು.
ನನ್ನ ಪ್ರಥಮ ಪಯನೀಯರ್ ನೇಮಕವು ಸೌತ್ ವೇಲ್ಸ್ ಆಗಿತ್ತು. ಅಲ್ಲಿ ನಾನು ಸಿರಿಲ್ ಸ್ಟೆಂಟಿಫರ್ಡ್ ಜೊತೆಗೆ ಸೇರಿದೆ. ಸಿರಿಲ್ ತದನಂತರ ಕ್ಯಾತ್ಲೀನಳನ್ನು ಮದುವೆಯಾದರು, ಮತ್ತು ಅವರು ಒಟ್ಟಿಗೆ ಹಲವಾರು ವರ್ಷಗಳ ತನಕ ಪಯನೀಯರ್ ಸೇವೆಯನ್ನು ಮಾಡಿದರು. ಅವರ ಮಗಳಾದ ರೂತ್, ಮುಂದೆ ಪಯನೀಯರ್ ಸೇವೆಯನ್ನು ಪ್ರವೇಶಿಸಿದಳು. 1937 ರೊಳಗಾಗಿ ನಾನು ಲ್ಯಾಂಕಷೈಅರ್ನ ಫ್ಲೀಟ್ವುಡ್ನಲ್ಲಿ, ಎರಿಕ್ ಕುಕ್ನ ಜೊತೆಗಾರನಾಗಿದ್ದೆ. ಆ ಸಮಯದ ತನಕ, ಪಯನೀಯರರು ಸಭಾ ಟೆರಿಟೊರಿಯ ಹೊರಗೆ, ಬ್ರಿಟನ್ನ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಕೆಲಸಮಾಡಿದರು. ಆದರೆ ಸೊಸೈಟಿಯ ಲಂಡನ್ ಬ್ರಾಂಚ್ ಆಫೀಸಿನ ಕೆಲಸಕ್ಕೆ ಆಗ ಜವಾಬ್ದಾರರಾಗಿದ್ದ ಆ್ಯಲ್ಬರ್ಟ್ ಡಿ. ಶ್ರೋಡರ್, ನಮ್ಮನ್ನು ಯಾರ್ಕ್ಷೈಅರ್ನ ಬ್ರ್ಯಾಡ್ಫರ್ಡ್ ನಗರಕ್ಕೆ ಸ್ಥಳಾಂತರಿಸಲು ನಿರ್ಣಯಿಸಿದರು. ಬ್ರಿಟನ್ನಲ್ಲಿರುವ ಪಯನೀಯರರು ನಿರ್ದಿಷ್ಟವಾದೊಂದು ಸಭೆಗೆ ನೇಮಿಸಲ್ಪಟ್ಟದ್ದು ಇದೇ ಪ್ರಥಮ ಬಾರಿ.
1946 ರಲ್ಲಿ ಎರಿಕ್ ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ ಅನ್ನು ಹಾಜರಾದರು ಮತ್ತು ಈಗ ಜಿಂಬಾಬ್ವೆ ಆಗಿರುವ ದಕ್ಷಿಣ ರೊಡೇಷಿಯಾಗೆ ನೇಮಿಸಲ್ಪಟ್ಟರು, ಮತ್ತು ಅವರು ಹಾಗೂ ಅವರ ಹೆಂಡತಿ ದಕ್ಷಿಣ ಆಫ್ರಿಕದ ಡರ್ಬನ್ನಲ್ಲಿ ಮಿಷನೆರಿಗಳೋಪಾದಿ ಇನ್ನೂ ನಂಬಿಗಸ್ತರಾಗಿ ಸೇವೆಸಲ್ಲಿಸುತ್ತಿದ್ದಾರೆ.
1938 ರಲ್ಲಿ ನಾನು ಮತ್ತೊಂದು ನೇಮಕದಲ್ಲಿದ್ದೆ, ಈ ಬಾರಿ ವಾಯುವ್ಯ ಲ್ಯಾಂಕಷೈಅರ್ ಮತ್ತು ಸುಂದರವಾದ ಲೇಕ್ ಡಿಸ್ಟ್ರಿಕ್ಟ್ಗೆ ಜೋನ್ ಸೇವಕ (ಈಗ ಸರ್ಕಿಟ್ ಮೇಲ್ವಿಚಾರಕನೆಂದು ಕರೆಯಲ್ಪಡುವವ) ನಾಗಿ. ಅಲ್ಲಿ ನಾನು ಆಲಿವ್ ಡಕೆಟ್ಳನ್ನು ಭೇಟಿಯಾದೆ, ಮತ್ತು ನಾವು ಮದುವೆಯಾದ ಬಳಿಕ, ಆಕೆ ಕೂಡಲೆ ನನ್ನನ್ನು ಸರ್ಕಿಟ್ ಕೆಲಸದಲ್ಲಿ ಜೊತೆಗೊಂಡಳು.
ಯುದ್ಧದ ವರ್ಷಗಳಲ್ಲಿ ಐರ್ಲಂಡ್
ಸಪ್ಟಂಬರ್ 1939 ರಲ್ಲಿ ಜರ್ಮನಿಯ ವಿರುದ್ಧ ಬ್ರಿಟನ್ ಯುದ್ಧವನ್ನು ಘೋಷಿಸಿದ ಕೂಡಲೆ, ನನ್ನ ನೇಮಕವು ಐರ್ಲಂಡ್ಗೆ ಬದಲಾಯಿತು. ಸೇನೆಗೆ ಒತ್ತಯಾದ ದಾಖಲಾತಿ ಬ್ರಿಟನ್ನಲ್ಲಿ ತೊಡಗಿತ್ತು, ಆದರೆ ಐರ್ಲಂಡ್ನ ದಕ್ಷಿಣ ರಿಪಬ್ಲಿಕ್ನಲ್ಲಿ ತೊಡಗಿರಲಿಲ್ಲ, ಅದು ಯುದ್ಧದ ಅವಧಿಯ ವರೆಗೆ ತಟಸ್ಥ ರಾಷ್ಟ್ರವಾಗಿ ಉಳಿಯಿತು. ಐರ್ಲಂಡ್ನ ರಿಪಬ್ಲಿಕ್ ಮತ್ತು ಉತ್ತರ ಐರ್ಲಂಡ್ ಒಂದು ಸರ್ಕಿಟ್ ಆಗಲಿತ್ತು. ಹಾಗಿದ್ದರೂ ತಡೆಗಳು ಜಾರಿಯಲ್ಲಿದ್ದವು, ಮತ್ತು ಐರ್ಲಂಡ್ನ ಯಾವುದೇ ಭಾಗಕ್ಕೆ ಹೋಗಲು ಬ್ರಿಟನನ್ನು ಬಿಡುವ ಸಲುವಾಗಿ ಸಂಚಾರ ಅನುಮತಿಗಳನ್ನು ಪಡೆಯುವ ಅಗತ್ಯವಿತ್ತು. ನಾನು ಹೋಗಬಹುದೆಂದು ಅಧಿಕಾರಿಗಳು ಹೇಳಿದರು, ಆದರೆ ಒತ್ತಾಯದ ದಾಖಲಾತಿಗಾಗಿ ನನ್ನ ವಯೋಮಿತಿಯವರು ಕರೆಯಲ್ಪಡುವಾಗ ಇಂಗ್ಲೆಂಡ್ಗೆ ಕೂಡಲೇ ಹಿಂದಿರುಗಲು ನಾನು ಒಪ್ಪಬೇಕಿತ್ತು. ಮಾತಿನಲ್ಲಿ ನಾನು ಒಪ್ಪಿದೆ, ಆದರೆ ನನಗೇ ಆಶ್ಚರ್ಯವಾಗುವಂತೆ, ನನ್ನ ಅನುಮತಿ ಬಂದಾಗ, ಅದಕ್ಕೆ ಯಾವ ಷರತ್ತುಗಳೂ ಸೇರಿಸಲ್ಪಟ್ಟಿರಲ್ಲಿಲ!
ಆ ಸಮಯದಲ್ಲಿ, ಇಡೀ ಐರ್ಲಂಡ್ನಲ್ಲಿ ಕೇವಲ 100 ಕ್ಕಿಂತ ತುಸು ಹೆಚ್ಚು ಸಾಕ್ಷಿಗಳಿದ್ದರು. ನವಂಬರ 1939 ರಲ್ಲಿ ಡಬ್ಲಿನ್ನಲ್ಲಿ ನಮ್ಮ ಆಗಮನದ ತರುವಾಯ, ಜ್ಯಾಕ್ ಕಾರ್ ಎಂಬ ದೀರ್ಘ ಸಮಯದ ಒಬ್ಬ ಪಯನೀಯರ್ ನಮ್ಮನ್ನು ಭೇಟಿಯಾದರು. ಹತ್ತಿರದ ಒಂದು ಪಟ್ಟಣದಲ್ಲಿ ಇನ್ನು ಇಬ್ಬರು ಪಯನೀಯರರು ಮತ್ತು ಡಬ್ಲಿನ್ನಲ್ಲಿ ಕೆಲವು ಆಸಕ್ತ ಜನರು, ಒಟ್ಟಿಗೆ ಸುಮಾರು 20 ಮಂದಿ ಇದ್ದಾರೆಂದು ಅವರು ನಮಗೆ ಹೇಳಿದರು. ಒಂದು ಕೂಟಕ್ಕಾಗಿ ಡಬ್ಲಿನ್ನಲ್ಲಿ ಒಂದು ಕೋಣೆಯನ್ನು ಜ್ಯಾಕ್ ಬಾಡಿಗೆಗೆ ಪಡೆದರು. ಅಲ್ಲಿ ಪ್ರತಿ ಆದಿತ್ಯವಾರ ಕ್ರಮವಾಗಿ ಕೂಡಿಬರಲು ಎಲ್ಲರೂ ಒಪ್ಪಿದರು. 1940 ರಲ್ಲಿ ಸಭೆಯು ಸ್ಥಾಪಿತವಾಗುವ ತನಕ ಈ ಏರ್ಪಾಡು ಮುಂದುವರಿಯಿತು.
ಯುನೈಟೆಡ್ ಕಿಂಗ್ಡಮ್ನ ಒಂದು ಭಾಗದೋಪಾದಿ, ದಕ್ಷಿಣ ಐರ್ಲಂಡ್ ಜರ್ಮನಿಯೊಂದಿಗೆ ಯುದ್ಧದಲ್ಲಿ ತೊಡಗಿತ್ತು, ಆದುದರಿಂದ ನಾವು ಉತ್ತರಕ್ಕೆ, ಬೆಲ್ಫಾಸ್ಟ್ಗೆ ಸ್ಥಳಾಂತರಿಸಿದೆವು. ನಾವು ಆಹಾರದ ರ್ಯಾಷನ್ ಪುಸ್ತಕ (ಪಡಿತರ ಚೀಟಿ) ಗಳೊಂದಿಗೆ ಮತ್ತು ರಾತ್ರಿಯಲ್ಲಿ ಅಂಧೀಕರಣದೊಂದಿಗೆ ತೃಪ್ತರಾಗಬೇಕಿತ್ತು. ನಾಜಿ ವಿಮಾನಗಳು ಬೆಲ್ಫಾಸ್ಟ್ಗೆ ಬಂದು ಯೂರೋಪಿನಲ್ಲಿರುವ ತಮ್ಮ ಹಿಂಬೀಡುಗಳಿಗೆ ಹಿಂದಿರುಗಲು 1,600 ಕ್ಕಿಂತಲೂ ಹೆಚ್ಚು ಕಿಲೊಮೀಟರುಗಳ ಅಂತರವನ್ನು ಪ್ರಯಾಣಿಸಬೇಕಿದ್ದರೂ, ನಗರದ ಮೇಲೆ ಪರಿಣಾಮಕಾರಿಯಾಗಿ ಬಾಂಬ್ ಹಾಕಿದರು. ಮೊದಲನೆಯ ದಾಳಿಯಲ್ಲಿ, ನಮ್ಮ ರಾಜ್ಯ ಸಭಾಗೃಹವು ನಷ್ಟಗೊಂಡಿತು ಮತ್ತು ನಗರದ ಇನ್ನೊಂದು ಭಾಗದಲ್ಲಿದ್ದ ಸಹೋದರರನ್ನು ನಾವು ಭೇಟಿನೀಡುತ್ತಿದ್ದಾಗ ನಮ್ಮ ವಾಸದ ಮಹಡಿಯು ನಾಶವಾಯಿತು, ಆದುದರಿಂದ ನಾವು ಗಮನಾರ್ಹವಾಗಿ ತಪ್ಪಿಸಿಕೊಂಡೆವು. ಅದೇ ರಾತ್ರಿ ಸಾಕ್ಷಿಗಳ ಒಂದು ಕುಟುಂಬವು ಪ್ರಾಂತೀಯ ಆಶ್ರಯಕ್ಕೆ ಓಡಿತು. ಅವರು ಅಲ್ಲಿ ತಲಪಿದಾಗ, ಅದು ತುಂಬಿಹೋಗಿತ್ತು ಮತ್ತು ಅವರು ಮನೆಗೆ ಹಿಂದಿರುಗಬೇಕಾಗಿತ್ತು. ಆಶ್ರಯಕ್ಕೆ ನೇರವಾಗಿ ಬಾಂಬು ಹಾಕಲಾಯಿತು ಮತ್ತು ಅದರಲ್ಲಿ ಇದ್ದವರೆಲ್ಲ ಸತ್ತುಹೋದರು, ಆದರೆ ನಮ್ಮ ಸಹೋದರರು ಕೆಲವೊಂದು ಕಡಿತಗಳು ಮತ್ತು ಪೆಟ್ಟುಗಾಯಗಳುಳ್ಳವರಾಗಿ ಪಾರಾದರು. ಈ ಕಠಿನ ಯುದ್ಧ ವರ್ಷಗಳ ಸಮಯದಲ್ಲಿ, ನಮ್ಮ ಸಹೋದರರಲ್ಲಿ ಒಬ್ಬರೂ ಗಂಭೀರವಾಗಿ ಗಾಯಗೊಳ್ಳಲಿಲ್ಲ, ಇದಕ್ಕಾಗಿ ನಾವು ಯೆಹೋವನಿಗೆ ಉಪಕಾರ ಸಲ್ಲಿಸಿದೆವು.
ಆತ್ಮಿಕ ಆಹಾರದ ಸರಬರಾಯಿಗಳು
ಯುದ್ಧವು ಮುಂದುವರಿದಂತೆ, ನಿರ್ಬಂಧಗಳು ಬಿಗಿಯಾದವು, ಮತ್ತು ಕಟ್ಟಕಡೆಗೆ ಅಂಚೆಯ ಮೇಲೆ ತಡೆಯನ್ನು ಹೇರಲಾಯಿತು. ಇದರ ಅರ್ಥವು ಕಾವಲಿನಬುರುಜು ಪತ್ರಿಕೆಯು ವಶಪಡಿಸಲ್ಪಟ್ಟಿತು ಮತ್ತು ದೇಶವನ್ನು ಪ್ರವೇಶಿಸಲು ಅನುಮತಿಸಲ್ಪಡಲಿಲ್ಲ. ನಾವು ಏನು ಮಾಡಸಾಧ್ಯವಿತ್ತೆಂದು ಕುತೂಹಲಪಡುತ್ತಿದ್ದರೂ, ಯೆಹೋವನ ಹಸ್ತವು ಮೋಟುಗೈಯಾಗಿರಲಿಲ್ಲ. ಒಂದು ಬೆಳಗ್ಗೆ, ಕುಟುಂಬ ವಿಷಯಗಳ ಕುರಿತು ನನಗೆ ಬರೆಯುತ್ತಿದ್ದ ಕೆನಡದಲ್ಲಿರುವ ಒಬ್ಬ “ರಕ್ತ ಸಂಬಂಧಿ” ಯಿಂದ ಒಂದು ಪತ್ರವನ್ನು ನಾನು ಪಡೆದೆ. ಅವನು ಯಾರಾಗಿದ್ದನೆಂದು ನನಗೆ ಗೊತ್ತಿರಲಿಲ್ಲ, ಆದರೆ ಪತ್ರದ ಕೊನೆಯಲ್ಲಿ, ಓದಲು ನನಗಾಗಿ “ಒಂದು ಆಸಕ್ತಿಕರ ಬೈಬಲ್ ಲೇಖನವನ್ನು” ತಾನು ಸೇರಿಸುತ್ತಿರುವೆನೆಂದು ಅವನು ಹೇಳಿದನು. ಅದು ಕಾವಲಿನಬುರುಜು ಪತ್ರಿಕೆಯ ಪ್ರತಿಯಾಗಿತ್ತು, ಆದರೆ ಅದು ಸಾದಾ ಆವರಣದಲ್ಲಿದ್ದ ಕಾರಣ, ಸೆನ್ಸರ್ ಅದನ್ನು ತೆಗೆದಿರಲಿಲ್ಲ.
ಕೂಡಲೇ ನನ್ನ ಹೆಂಡತಿ ಮತ್ತು ನಾನು, “ಫೋಟೊ ಡ್ರಾಮಾ” ಕೆಲಸದಲ್ಲಿದ್ದ ಮ್ಯಾಗಿ ಕೂಪರ್ನನ್ನು ಸೇರಿಸಿ, ಸ್ಥಳಿಕ ಸಾಕ್ಷಿಗಳ ಸಹಾಯದಿಂದ, ಲೇಖನಗಳ ಪ್ರತಿರೂಪಗಳನ್ನು ಮಾಡಲು ತೊಡಗಿದೆವು. ಸಾದಾ ಆವರಣದ ಕಾವಲಿನಬುರುಜು ಪತ್ರಿಕೆಗಳು ಕ್ರಮವಾಗಿ ಕೆನಡ, ಆಸ್ಟ್ರೇಲಿಯ, ಮತ್ತು ಅಮೆರಿಕದಲ್ಲಿರುವ ಅನೇಕ ಹೊಸ ಮಿತ್ರರಿಂದ ಬಂದು ತಲಪಿದಂತೆ, ದೇಶದ ಉದ್ದಕ್ಕೂ 120 ಪ್ರತಿಗಳನ್ನು ರವಾನಿಸಲು ನಾವು ಬೇಗನೆ ನಮ್ಮನ್ನು ಸಂಘಟಿಸಿಕೊಂಡೆವು. ಅವರ ದೃಢ ಪ್ರಯತ್ನ ಮತ್ತು ದಯೆಯ ಫಲವಾಗಿ, ಸಂಪೂರ್ಣ ಯುದ್ಧಾವಧಿಯಲ್ಲಿ ಒಂದು ಸಂಚಿಕೆಯೂ ನಮ್ಮಿಂದ ತಪ್ಪಿಹೋಗಲಿಲ್ಲ.
ನಾವು ಸಮ್ಮೇಳನಗಳನ್ನೂ ಏರ್ಪಡಿಸಲು ಶಕ್ತರಾಗಿದ್ದೆವು. ಮಕ್ಕಳು (ಇಂಗ್ಲಿಷ್ನಲ್ಲಿ) ಎಂಬ ಹೊಸ ಪ್ರಕಾಶನವು ಬಿಡುಗಡೆಗೊಂಡ 1941ರ ಅಧಿವೇಶನವು ಗಮನಾರ್ಹವಾಗಿತ್ತು. ಮಕ್ಕಳ ಕುರಿತಾದ ಪುಸ್ತಕವೆಂದು ನೆನಸಿ ಪುಸ್ತಕಕ್ಕೆ ಸೆನ್ಸರ್ ಆಕ್ಷೇಪಿಸಲಿಲ್ಲವೆಂದು ತೋರಿತು, ಆದುದರಿಂದ ಯಾವುದೇ ತೊಂದರೆಯಿಲ್ಲದೆ ದೇಶದೊಳಗೆ ನಮ್ಮ ಸಂಗ್ರಹವನ್ನು ಪಡೆಯಲು ನಾವು ಶಕ್ತರಾದೆವು! ಇನ್ನೊಂದು ಸಂದರ್ಭದಲ್ಲಿ, ಶಾಂತಿ—ಅದು ಬಾಳಬಲ್ಲದೊ? (ಇಂಗ್ಲಿಷ್ನಲ್ಲಿ) ಎಂಬ ಪುಸ್ತಿಕೆಯನ್ನು ನಾವು ಸ್ಥಳಿಕವಾಗಿ ಮುದ್ರಿಸಿದೆವು. ಯಾಕೆಂದರೆ ಲಂಡನ್ನಿಂದ ಪ್ರತಿಗಳನ್ನು ಆಮದು ಮಾಡುವುದು ಅಸಾಧ್ಯವಾಗಿತ್ತು. ನಮ್ಮ ಮೇಲೆ ಹೇರಲಾದ ಎಲ್ಲ ತಡೆಗಳ ಹೊರತೂ, ಆತ್ಮಿಕವಾಗಿ ನಾವು ಚೆನ್ನಾಗಿ ಪೋಷಿಸಲ್ಪಟ್ಟೆವು.
ವಿರೋಧವನ್ನು ಜಯಿಸುವುದು
ಬೆಲ್ಫಾಸ್ನ್ಟಲ್ಲಿ ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಿಂದ ನಡೆಸಲ್ಪಡುವ ರೋಗೋಪಚಾರ ಗೃಹದಲ್ಲಿ ವಾಸಿಸುತ್ತಿದ್ದ ಪಾದ್ರಿಯೊಬ್ಬನು, ಸಂಪತ್ತು (ಇಂಗ್ಲಿಷ್ನಲ್ಲಿ) ಎಂಬ ಪುಸ್ತಕದ ಪ್ರತಿಯನ್ನು ಇಂಗ್ಲೆಂಡ್ನಲ್ಲಿದ್ದ ತನ್ನ ಹೆಂಡತಿಗೆ ಕಳುಹಿಸಿದನು. ಆಕೆ ಸತ್ಯವನ್ನು ವಿರೋಧಿಸಿದಳು, ಮತ್ತು ತನ್ನ ಉತ್ತರದಲ್ಲಿ ಆ ವಿಷಯವನ್ನು ಸ್ಪಷ್ಟಪಡಿಸಿದಳು. ನಾವು “ದೇಶಭಕ್ತಿಯಿಲ್ಲದ ಒಂದು ಸಂಘಟನೆ” ಯಾಗಿದ್ದೇವೆಂದು ಆಕೆ ಆಪಾದಿಸಿದಳು. ಅಂಚೆಯ ಸೆನ್ಸ್ರ್ ಇದನ್ನು ಗಮನಿಸಿತು ಮತ್ತು ವಿಷಯವನ್ನು ಕ್ರಿಮಿನಲ್ ಇನ್ವೆಸಿಗ್ಟೇಷನ್ ಡಿಪಾರ್ಟ್ಮೆಂಟ್ಗೆ ವರದಿಸಿತು. ಇದರ ಪರಿಣಾಮವಾಗಿ, ಪೋಲಿಸರ ಪಾಳೆಯಕ್ಕೆ ಹೋಗಿ ಒಂದು ವಿವರಣೆಯನ್ನು ಕೊಡುವಂತೆ ಮತ್ತು ಸಂಪತ್ತು ಪುಸ್ತಕದ ಒಂದು ಪ್ರತಿಯನ್ನು ತರುವಂತೆ ನಾನು ಕೇಳಿಕೊಳ್ಳಲ್ಪಟ್ಟೆ. ಆಸಕ್ತಿಕರವಾಗಿ, ಪುಸ್ತಕವನ್ನು ಕಟ್ಟಕಡೆಗೆ ಹಿಂದಿರುಗಿಸಿದಾಗ, ಅಡಗ್ಡೆರೆ ಎಳೆಯಲ್ಪಟ್ಟ ಭಾಗಗಳೆಲ್ಲವೂ ರೋಮನ್ ಕ್ಯಾತೊಲಿಕ್ ಚರ್ಚಿನ ಕುರಿತು ಇತ್ತೆಂದು ನಾನು ಗಮನಿಸಿದೆ. ಇದು ಮಹತ್ವದ ವಿಷಯವಾಗಿತ್ತೆಂದು ನನಗೆ ಅನಿಸಿತು ಯಾಕೆಂದರೆ ಪೋಲಿಸರು ಐಆರ್ಎ (ಐರಿಷ್ ರಿಪಬ್ಲಿಕನ್ ಆರ್ಮಿ) ಚಟುವಟಿಕೆಯ ವಿರುದ್ಧ ಜಾಗರೂಕರಾಗಿದ್ದರೆಂದು ನನಗೆ ಗೊತ್ತಿತ್ತು.
ಯುದ್ಧದ ಸಮಯಗಳಲ್ಲಿ ನಮ್ಮ ತಾಟಸ್ಥ್ಯದ ಕುರಿತು ನಾನು ಕೂಲಂಕಷವಾಗಿ ಪ್ರಶ್ನಿಸಲ್ಪಟ್ಟೆ, ಯಾಕೆಂದರೆ ನಮ್ಮ ಸ್ಥಾನವನ್ನು ಅರ್ಥಮಾಡಿಕೊಳ್ಳುವುದು ಪೊಲೀಸರಿಗೆ ಕಷ್ಟಕರವಾಗಿತ್ತು. ಆದರೆ ಅಧಿಕಾರಿಗಳು ನಮ್ಮ ವಿರುದ್ಧ ಯಾವುದೇ ಕ್ರಿಯೆಗೈಯಲಿಲ್ಲ. ತದನಂತರ, ಸಮ್ಮೇಳನವೊಂದನ್ನು ನಡೆಸಲು ನಾನು ಅನುಮತಿಯನ್ನು ಕೋರಿದಾಗ, ಇಬ್ಬರು ಪೊಲೀಸ್ ವರದಿಗಾರರನ್ನು ಕಳುಹಿಸುವುದರ ಬಗ್ಗೆ ಪಟ್ಟು ಹಿಡಿದರು. “ನಾವು ಅವರನ್ನು ಸ್ವಾಗತಿಸುವೆವು,” ಎಂದು ನಾನು ಹೇಳಿದೆ! ಅವರು ಬಂದು, ಶೀಘ್ರ ಲಿಪಿಯಲ್ಲಿ ಟಿಪ್ಪಣಿಗಳನ್ನು ತೆಗೆದುಕೊಳ್ಳುತ್ತಾ, ಮಧ್ಯಾಹ್ನದ ಕೂಟವನ್ನು ಹಾಜರಾದರು. ಸಭೆಯ ಕೊನೆಯಲ್ಲಿ ಅವರು ಕೇಳಿದ್ದು, “ನಾವು ಇಲ್ಲಿಗೆ ಏಕೆ ಕಳುಹಿಸಲ್ಪಟ್ಟೆವು? ನಾವು ಇದೆಲ್ಲವನ್ನೂ ಆನಂದಿಸುತ್ತಿದ್ದೇವೆ!” ಅವರು ಪುನಃ ಮರುದಿನ ಬಂದರು ಮತ್ತು ಶಾಂತಿ—ಅದು ಬಾಳಬಲ್ಲದೊ? ಎಂಬ ಪುಸ್ತಿಕೆಯ ಉಚಿತ ಪ್ರತಿಯನ್ನು ಸಂತೋಷದಿಂದ ಸ್ವೀಕರಿಸಿದರು. ಸಮ್ಮೇಳನದ ಉಳಿದ ಭಾಗವು ಯಾವುದೇ ದುರ್ಘಟನೆ ಸಂಭವಿಸದೆ ಸಾಗಿತು.
ಯುದ್ಧವು ಕೊನೆಗೊಂಡು ಸಂಚಾರದ ನಿರ್ಬಂಧಗಳನ್ನು ಸಡಿಲಿಸಿದ ಕೂಡಲೆ, ಲಂಡನ್ ಬೆತೆಲ್ನಿಂದ ಪ್ರೈಸ್ ಹ್ಯೂಸ್ ಬೆಲ್ಫಾಸ್ಟ್ಗೆ ಬಂದರು. ಅವರು, ತದನಂತರ ಚೈನಾಕ್ಕೆ ಮಿಷನೆರಿಯೋಪಾದಿ ನೇಮಕ ಹೊಂದಿದ ಹ್ಯಾರಲ್ಡ್ ಕಿಂಗ್ರಿಂದ ಜೊತೆಗೂಡಲ್ಪಟ್ಟರು. ಲಂಡನ್ ಬ್ರಾಂಚ್ ಆಫೀಸಿನಿಂದ ಆರು ವರ್ಷಗಳ ಬೇರ್ಪಡಿಕೆಯಿಂದ, ಈ ಸಹೋದರರು ನೀಡಿದ ಭಾಷಣಗಳಿಂದ ನಾವೆಲ್ಲರೂ ಬಹಳವಾಗಿ ಉತ್ತೇಜಿಸಲ್ಪಟ್ಟೆವು. ತದನಂತರ ಸ್ವಲ್ಪದರಲ್ಲಿಯೇ, ಇನ್ನೊಬ್ಬ ನಂಬಿಗಸ್ತ ಪಯನೀಯರರಾಗಿದ್ದ ಹ್ಯಾರಲ್ಡ್ ಡ್ಯೂರ್ಡನ್ರನ್ನು ಇಂಗ್ಲೆಂಡ್ನಿಂದ ಬೆಲ್ಫಾಸ್ಟ್ನಲ್ಲಿನ ರಾಜ್ಯದ ಕೆಲಸವನ್ನು ಬಲಗೊಳಿಸಲು ಕಳುಹಿಸಲಾಯಿತು.
ಇಂಗ್ಲೆಂಡ್ಗೆ ಹಿಂದಿರುಗಿ ಬರುವುದು
ಐರಿಷ್ ಸಹೋದರರಿಗಾಗಿ ಆಳವಾದ ಪ್ರೀತಿಯನ್ನು ನಾವು ಬೆಳೆಸಿಕೊಂಡಿದ್ದೆವು, ಮತ್ತು ಇಂಗ್ಲೆಂಡ್ಗೆ ಹಿಂದಿರುಗುವುದು ಕಠಿನವಾಗಿತ್ತು. ಆದರೆ ನನ್ನ ಹೆಂಡತಿ ಮತ್ತು ನಾನು, ಮತ್ತೆ ಮ್ಯಾನ್ಚೆಸ್ಟರ್ಗೆ ನೇಮಕ ಪಡೆದೆವು ಮತ್ತು ನಂತರ ಅಗತ್ಯವು ಹೆಚ್ಚಾಗಿದ್ದ ಮತ್ತೊಂದು ಲ್ಯಾಂಕಷೈಅರ್ ಪಟ್ಟಣವಾದ ನೂಟನ್ ಲ ವಿಲೋಜ್ಗೆ ಸ್ಥಳಾಂತರಿಸಿದೆವು. ನಮ್ಮ ಮಗಳಾದ ಲೋಅಸ್ 1953 ರಲ್ಲಿ ಜನಿಸಿದಳು, ಮತ್ತು 16 ನೆಯ ವಯಸ್ಸಿನಲ್ಲಿ ಆಕೆ ಪಯನೀಯರ್ ಶುಶ್ರೂಷೆಯನ್ನು ಪ್ರವೇಶಿಸಿದ್ದನ್ನು ನೋಡುವುದು ಹೃದಯೋಲ್ಲಾಸಕರವಾಗಿತ್ತು. ಪಯನೀಯರ್ ಡೇವಿಡ್ ಪಾರ್ಕಿನ್ಸನ್ನೊಂದಿಗೆ ಆಕೆಯ ಮದುವೆಯ ನಂತರ, ತಮ್ಮ ಪೂರ್ಣ ಸಮಯದ ಸೇವೆಯನ್ನು ಅವರು ಉತ್ತರ ಐರ್ಲಂಡ್ನಲ್ಲಿ ಮುಂದುವರಿಸಿದರು, ಅನೇಕ ವಿಧಗಳಲ್ಲಿ ಆಲಿವ್ ಮತ್ತು ನಾನು ತೆಗೆದುಕೊಂಡ ಹೆಜ್ಜೆಗಳನ್ನೇ ಅವರು ಅನುಕರಿಸಿದರು. ಈಗ ತಮ್ಮ ಮಕ್ಕಳೊಂದಿಗೆ, ಅವರು ಮತ್ತೆ ಇಂಗ್ಲೆಂಡ್ನಲ್ಲಿದ್ದಾರೆ, ಮತ್ತು ನಾವೆಲ್ಲರೂ ಅದೇ ಸಭೆಯಲ್ಲಿ ಸೇವೆ ಸಲ್ಲಿಸುತ್ತಾ ಇದ್ದೇವೆ.
ನಮ್ಮ ಪರಿಸ್ಥಿತಿಗಳಲ್ಲಿ ಬದಲಾವಣೆಗಳ ಹೊರತೂ, ನಾನು ಎಂದಿಗೂ ಪಯನೀಯರ್ ಸೇವೆಯನ್ನು ನಿಲ್ಲಿಸಲಿಲ್ಲ. ಆಲಿವ್ ಅದನ್ನು ಎಂದೂ ಬಯಸಲಿಲ್ಲ, ನಾನು ಸಹ ಅದನ್ನು ಬಯಸಲಿಲ್ಲ. ನನ್ನ ಪಯನೀಯರ್ ದಾಖಲೆಯು ಯೋಗ್ಯವಾಗಿ ನನ್ನ ಹೆಂಡತಿಗೂ ಸೇರಿದ್ದೆಂದು ನನಗೆ ಯಾವಾಗಲೂ ಅನಿಸಿದೆ ಯಾಕೆಂದರೆ ಆಕೆಯ ಸತತವಾದ ಪ್ರೀತಿಯ ಬೆಂಬಲವಿಲ್ಲದೆ ನಾನು ಪೂರ್ಣ ಸಮಯದ ಸೇವೆಯಲ್ಲಿ ಎಂದಿಗೂ ಮುಂದುವರಿಯಲು ಸಾಧ್ಯವಾಗುತ್ತಿರಲಿಲ್ಲ. ನಿಶ್ಚಯವಾಗಿ ಈಗ ನಾವು ಬೇಗನೆ ಆಯಾಸಗೊಳ್ಳುತ್ತೇವೆ, ಆದರೆ ಸಾಕ್ಷಿನೀಡುವುದು ಇನ್ನೂ ಒಂದು ಆನಂದವಾಗಿದೆ. ವಿಶೇಷವಾಗಿ ನಾವು ಒಟ್ಟಿಗೆ ಇದ್ದು ನಮ್ಮ ನೆರೆಯವರೊಂದಿಗೆ ಬೈಬಲ್ ಅಧ್ಯಯನಗಳನ್ನು ನಡೆಸುತ್ತಿರುವಾಗ. ಗತ ವರ್ಷಗಳಲ್ಲಿ, ಯೆಹೋವನ ಸಮರ್ಪಿತ, ದೀಕ್ಷಾಸ್ನಾನ ಪಡೆದ ಸೇವಕರಾಗುವಂತೆ ನಾವು ಸುಮಾರು ಒಂದು ನೂರು ವ್ಯಕ್ತಿಗಳಿಗೆ ಸಹಾಯ ಮಾಡುವ ಸುಯೋಗವನ್ನು ಪಡೆದಿದ್ದೇವೆ. ಅದು ಎಂತಹ ಒಂದು ಆನಂದವಾಗಿದೆ! ಮತ್ತು ಈ ಸಂಖ್ಯೆಯು ಇಷ್ಟರೊಳಗೆ ಅನೇಕ ಬಾರಿ ವೃದ್ಧಿಗೊಂಡಿರಬಹುದೆಂದು ನಾನು ನೆನಸುತ್ತೇನೆ ಯಾಕೆಂದರೆ ಮೂರನೆಯ ಮತ್ತು ನಾಲ್ಕನೆಯ ಸಂತತಿಗಳ ವರೆಗೆ ವಿಸ್ತರಿಸಿರುವ ಕುಟುಂಬಗಳು ಸಹ ಸಾಕ್ಷಿಗಳಾಗಿವೆ.
ಈ ವರ್ಷಗಳ ಉದ್ದಕ್ಕೂ ನಮಗಿದ್ದ ಅನೇಕ ಸುಯೋಗಗಳ ಮತ್ತು ನಮಗಾದ ಅನುಭವಗಳ ಕುರಿತು ಆಲಿವ್ ಮತ್ತು ನಾನು ಅನೇಕ ವೇಳೆ ಮಾತಾಡುತ್ತೇವೆ. ಅವು ಎಂತಹ ಸಂತೋಷದ ವರ್ಷಗಳಾಗಿದ್ದವು, ಮತ್ತು ಎಷ್ಟು ಬೇಗನೆ ಅವು ಗತಿಸಿಹೋಗಿವೆ! ಈ ಎಲ್ಲ ವರ್ಷಗಳಲ್ಲಿ ಒಬ್ಬ ಪಯನೀಯರನಂತೆ ನನ್ನ ದೇವರಾದ ಯೆಹೋವನನ್ನು ಸೇವಿಸುವುದಕ್ಕಿಂತ ಮಾಡಲು ಉತ್ತಮವಾದ ಬೇರೆ ಏನನ್ನೂ ನನ್ನ ಜೀವಿತದಲ್ಲಿ ನನಗೆ ಕಂಡುಕೊಳ್ಳಲು ಸಾಧ್ಯವಿರುತ್ತಿರಲಿಲ್ಲವೆಂದು ನನಗೆ ಗೊತ್ತು. ಈಗ ಕೃತಜ್ಞತೆಯಿಂದ ಗತಕಾಲವನ್ನು ನೋಡುತ್ತಿರಲಿ ಅಥವಾ ಭವಿಷ್ಯತ್ತಿಗಾಗಿ ಕಾಯುತ್ತಿರಲಿ, ಯೆರೆಮೀಯನ ಮಾತುಗಳಿಗೆ ಬಹಳಷ್ಟು ಅರ್ಥವಿದೆಯೆಂದು ನಾನು ಕಂಡುಕೊಳ್ಳುತ್ತೇನೆ: “ನಾವು ಉಳಿದಿರುವದು ಯೆಹೋವನ ಕರುಣೆಯೇ; ಆತನ ಕೃಪಾವರಗಳು ನಿಂತುಹೋಗವು. ದಿನದಿನವು ಹೊಸಹೊಸದಾಗಿ ಒದಗುತ್ತವೆ; . . . ಆದಕಾರಣ ಆತನನ್ನು ನಿರೀಕ್ಷಿಸುವೆನು.”—ಪ್ರಲಾಪಗಳು 3:22-24.
[ಪುಟ 26 ರಲ್ಲಿರುವ ಚಿತ್ರ]
ಬಾಬ್ ಮತ್ತು ಆಲಿವ್ ಆ್ಯಂಡರ್ಸನ್