ದೈನಿಕ ಬೈಬಲ್ ವಾಚನದಿಂದ ಪ್ರಯೋಜನ ಪಡೆಯುವುದು
“ಯಾವನು . . . ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುವವನಾಗಿ ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವನೋ ಅವನು ಎಷ್ಟೋ ಧನ್ಯನು.”—ಕೀರ್ತನೆ 1:1, 2.
1. (ಎ) ವಾಚ್ ಟವರ್ ಸೊಸೈಟಿಯ ಲೋಕ ಮುಖ್ಯಕಾರ್ಯಾಲದ ಫ್ಯಾಕ್ಟರಿ ಕಟ್ಟಡದ ಒಂದು ಪಕ್ಕದಲ್ಲಿ ಯಾವ ಪ್ರಧಾನ ಸೂಚನೆಯು ತೋರಿಬರುತ್ತದೆ? (ಬಿ) ಆ ಬುದ್ಧಿವಾದವನ್ನು ನಾವು ವೈಯಕ್ತಿಕವಾಗಿ ಹೃದಯಕ್ಕೆ ತೆಗೆದುಕೊಳ್ಳುವುದಾದರೆ ನಾವು ಹೇಗೆ ಪ್ರಯೋಜನ ಪಡೆಯುವೆವು?
“ದೇವರ ವಾಕ್ಯವಾದ ಪವಿತ್ರ ಬೈಬಲನ್ನು ಪ್ರತಿನಿತ್ಯವೂ ಓದಿರಿ.” ನ್ಯೂ ಯಾರ್ಕ್ನ ಬ್ರೂಕ್ಲಿನ್ನಲ್ಲಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಮೂಲಕ, ಬೈಬಲುಗಳು ಮತ್ತು ಬೈಬಲ್ ಸಾಹಿತ್ಯವು ಮುದ್ರಿಸಲ್ಪಡುವ ಕಟ್ಟಡದ ಒಂದು ಪಕ್ಕದಲ್ಲಿ, ಆ ಶಬ್ದಗಳು ದಪ್ಪಕ್ಷರಗಳಲ್ಲಿ ಕಾಣಿಸಿಕೊಳ್ಳುತ್ತವೆ. ಆ ಬುದ್ಧಿವಾದವು, ಸೂಚನೆಯನ್ನು ನೋಡುವ ಲೋಕದ ಜನರಿಗಾಗಿ ಮಾತ್ರ ಮೀಸಲಾಗಿಡಲ್ಪಡುವುದಿಲ್ಲ. ತಾವು ಸಹ ಅದನ್ನು ಹೃದಯಕ್ಕೆ ತೆಗೆದುಕೊಳ್ಳಬೇಕೆಂದು ಯೆಹೋವನ ಸಾಕ್ಷಿಗಳು ಗ್ರಹಿಸುತ್ತಾರೆ. ಬೈಬಲನ್ನು ಕ್ರಮವಾಗಿ ಓದುವವರು ಮತ್ತು ಅದರ ವೈಯಕ್ತಿಕ ಅನ್ವಯವನ್ನು ಮಾಡುವವರು, ಅದು ಒದಗಿಸುವ ಬೋಧನೆ, ಗದರಿಕೆ, ತಿದ್ದುಪಾಟು, ಮತ್ತು ನೀತಿಯಲ್ಲಿ ನೀಡಲ್ಪಡುವ ಶಿಕ್ಷೆಯಿಂದ ಪ್ರಯೋಜನ ಪಡೆಯುತ್ತಾರೆ.—2 ತಿಮೊಥೆಯ 3:16, 17.
2. ಬೈಬಲ್ ವಾಚನದ ಪ್ರಮುಖತೆಯನ್ನು ಸಹೋದರ ರಸ್ಸಲ್ ಹೇಗೆ ಒತ್ತಿಹೇಳಿದರು?
2 ಯೆಹೋವನ ಸಾಕ್ಷಿಗಳು ಕಾವಲಿನಬುರುಜು ಪತ್ರಿಕೆಯನ್ನು ಸೇರಿಸಿ, ತಮ್ಮ ಬೈಬಲ್ ಅಧ್ಯಯನದ ಸಹಾಯಕಗಳನ್ನು ಬಹಳವಾಗಿ ಗಣ್ಯಮಾಡುತ್ತಾರೆ, ಮತ್ತು ಅವುಗಳನ್ನು ಕ್ರಮವಾಗಿ ಬಳಸುತ್ತಾರೆ. ಆದರೆ ಅವುಗಳಲ್ಲಿ ಒಂದಾದರೂ ಸ್ವತಃ ಬೈಬಲಿನ ಸ್ಥಾನವನ್ನು ತೆಗೆದುಕೊಳ್ಳಲಾರದೆಂದು ಅವರಿಗೆ ಗೊತ್ತಿದೆ. ಹಿಂದೆ 1909 ರಲ್ಲಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಪ್ರಥಮ ಅಧ್ಯಕ್ಷರಾದ ಚಾರ್ಲ್ಸ್ ಟೇಸ್ ರಸ್ಸಲ್, ಕಾವಲಿನಬುರುಜು ಪತ್ರಿಕೆಯ ಓದುಗರಿಗೆ ಬರೆದದ್ದು: “ಬೈಬಲು ನಮ್ಮ ಪ್ರಮಾಣ ಗ್ರಂಥವೆಂಬುದನ್ನು ಎಂದಿಗೂ ಮರೆಯದಿರಿ ಮತ್ತು ನಮ್ಮ ನೆರವುಗಳು ಎಷ್ಟೇ ದೇವದತ್ತವಾಗಿರಬಹುದಾದರೂ ಅವು ‘ನೆರವುಗಳು,’ ಬೈಬಲಿಗೆ ಬದಲಿಗಳಲ್ಲ.”
3. (ಎ) “ದೇವರ ವಾಕ್ಯಕ್ಕೆ” ಅಧೀನರಾಗುವವರ ಮೇಲೆ ಯಾವ ಪರಿಣಾಮವನ್ನು ಅದು ಬೀರುತ್ತದೆ? (ಬಿ) ಬೆರೋಯದವರು ಎಷ್ಟು ಬಾರಿ ಶಾಸ್ತ್ರಗಳನ್ನು ಓದುತ್ತಿದ್ದರು ಮತ್ತು ಅಭ್ಯಾಸಿಸುತ್ತಿದ್ದರು?
3 ಬೇರೆ ಯಾವುದೇ ಪುಸ್ತಕಕ್ಕಿರದ ಗಹನತೆ ಮತ್ತು ಬಲವು ಪ್ರೇರಿತ ಶಾಸ್ತ್ರಗಳಿಗಿದೆ. “ಯಾಕಂದರೆ ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು, ಯಾವ ಇಬ್ಬಾಯಿಕತ್ತಿಗಿಂತಲೂ ಹದವಾದದ್ದು, ಪ್ರಾಣ ಆತ್ಮಗಳನ್ನೂ ಕೀಲುಮಜ್ಜೆಗಳನ್ನೂ ವಿಭಾಗಿಸುವಷ್ಟು ಮಟ್ಟಿಗೂ ತೂರಿಹೋಗುವಂಥದು, ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದು ಆಗಿದೆ.” (ಇಬ್ರಿಯ 4:12) ಶಿಷ್ಯನಾದ ಲೂಕನು ಬೆರೋಯದ ಜನರನ್ನು “ಸದ್ಗುಣವುಳ್ಳ” ಜನರೆಂದು ಕರೆಯುತ್ತಾ, ಹೃತ್ಪೂರ್ವಕವಾಗಿ ಪ್ರಶಂಸಿಸಿದನು. ಅಪೊಸ್ತಲ ಪೌಲನು ಮತ್ತು ಅವನ ಸಂಗಡಿಗನಾದ ಸೀಲನ ಮೂಲಕ ಸಾರಿದ ವಾಕ್ಯವನ್ನು ಅವರು ಅತ್ಯಾಸಕಿಯ್ತಿಂದ ಸ್ವೀಕರಿಸಿದರು ಮಾತ್ರವಲ್ಲ, ಏನು ಕಲಿಸಲಾಗುತ್ತಿತ್ತೊ ಅದರ ಶಾಸ್ತ್ರೀಯ ಆಧಾರವನ್ನು ನಿರ್ಧರಿಸಲು ‘ಶಾಸ್ತ್ರಗಳನ್ನು ಪ್ರತಿನಿತ್ಯವೂ ಜಾಗರೂಕವಾಗಿ ಪರಿಶೀಲಿಸಿದರು.’—ಅ. ಕೃತ್ಯಗಳು 17:11.
ಅದನ್ನು ಪ್ರತಿನಿತ್ಯವೂ ಓದುವುದು
4. ನಾವು ಎಷ್ಟು ಬಾರಿ ಬೈಬಲನ್ನು ಓದಬೇಕು ಎಂಬುದರ ಕುರಿತು ಶಾಸ್ತ್ರಗಳು ಏನನ್ನು ಸೂಚಿಸುತ್ತವೆ?
4 ನಾವು ಬೈಬಲನ್ನು ಎಷ್ಟು ಬಾರಿ ಓದಬೇಕೆಂದು ಬೈಬಲು ನಿರ್ದಿಷ್ಟವಾಗಿ ಹೇಳುವುದಿಲ್ಲ. ಆದರೂ, ಯೆಹೋಶುವನು ಬುದ್ಧಿವಂತನಾಗಿ ಕ್ರಿಯೆಗೈಯುವಂತೆ ಮತ್ತು ತನ್ನ ದೇವದತ್ತ ನೇಮಕವನ್ನು ಪೂರೈಸುವುದರಲ್ಲಿ ಯಶಸ್ಸನ್ನು ಪಡೆಯುವಂತೆ, ಅವನು ‘ಧರ್ಮಶಾಸ್ತ್ರವನ್ನು ಹಗಲಿರುಳು ಓದಬೇಕು’ ಎಂಬ ಯೆಹೋವನ ಸಲಹೆಯನ್ನು ಅದು ದಾಖಲಿಸುತ್ತದೆ. (ಯೆಹೋಶುವ 1:8) ಪ್ರಾಚೀನ ಇಸ್ರಾಯೇಲಿನ ಮೇಲೆ ಅರಸನೋಪಾದಿ ಪ್ರಭುತ್ವ ನಡೆಸಿದ ಪ್ರತಿಯೊಬ್ಬನೂ ಶಾಸ್ತ್ರಗಳನ್ನು “ತನ್ನ ಜೀವಮಾನದ ದಿನಗಳೆಲ್ಲಾ . . . ಓದಿಕೊಳ್ಳ” ಬೇಕಿತ್ತು. (ಧರ್ಮೋಪದೇಶಕಾಂಡ 17:19) ಅದು ಇನ್ನೂ ಹೇಳುವುದು: “ಯಾವನು ದುಷ್ಟರ ಆಲೋಚನೆಯಂತೆ ನಡೆಯದೆ . . . ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುವವನಾಗಿ ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವನೋ ಅವನು ಎಷ್ಟೋ ಧನ್ಯನು.” (ಕೀರ್ತನೆ 1:1, 2) ಮತ್ತಾಯನ ಮೂಲಕ ದಾಖಲು ಮಾಡಲಾದ ಸುವಾರ್ತೆಯು ಸಹ ನಮಗೆ ತಿಳಿಸುವುದೇನೆಂದರೆ, ಯೇಸು ಕ್ರಿಸ್ತನನ್ನು ಶೋಧಿಸಲು ಸೈತಾನನು ಮಾಡಿದ ಪ್ರಯತ್ನಗಳನ್ನು ಅವನು ತಿರಸ್ಕರಿಸಿದಾಗ, ಪ್ರೇರಿತ ಹೀಬ್ರು ಶಾಸ್ತ್ರಗಳಿಂದ ಅವನು ಉದ್ಧರಿಸಿ, ಹೇಳಿದ್ದು: “ಮನುಷ್ಯನು ರೊಟ್ಟಿತಿಂದ ಮಾತ್ರದಿಂದ ಬದುಕುವದಿಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು ಎಂದು ಬರೆದದೆ.” (ಮತ್ತಾಯ 4:4) ನಮಗೆ ಎಷ್ಟು ಬಾರಿ ಶಾರೀರಿಕ ಆಹಾರದ ಅಗತ್ಯವಿರುತ್ತದೆ? ಪ್ರತಿದಿನ! ಆತ್ಮಿಕ ಆಹಾರವನ್ನು ಪ್ರತಿದಿನವೂ ತೆಗೆದುಕೊಳ್ಳುವುದು ಇನ್ನೂ ಹೆಚ್ಚು ಪ್ರಮುಖವಾಗಿದೆ ಯಾಕೆಂದರೆ ಅದು ಅನಂತಕಾಲದ ಜೀವಿತಕ್ಕಾಗಿರುವ ನಮ್ಮ ಪ್ರತೀಕ್ಷೆಗಳನ್ನು ಪ್ರಭಾವಿಸುತ್ತದೆ.—ಧರ್ಮೋಪದೇಶಕಾಂಡ 8:3; ಯೋಹಾನ 17:3.
5. ನಂಬಿಕೆಯ ಪರೀಕ್ಷೆಗಳು ನಮ್ಮ ಮೇಲೆ ಹೇರಲ್ಪಡುವಾಗ, ದೈನಿಕ ಬೈಬಲ್ ವಾಚನವು “ಆತನಿಗೆ [“ಯೆಹೋವನಿಗೆ,” NW] ಯೋಗ್ಯರಾಗಿ ನಡೆ” ಯುವಂತೆ ನಮಗೆ ಹೇಗೆ ಸಹಾಯ ಮಾಡಬಲ್ಲದು?
5 ನಮ್ಮಲ್ಲಿ ಪ್ರತಿಯೊಬ್ಬರೂ ಪ್ರತಿನಿತ್ಯವೂ ದೇವರ ವಾಕ್ಯದಿಂದ ಬಲಗೊಳಿಸಲ್ಪಡುವ ಅಗತ್ಯವಿದೆ. ಪ್ರತಿದಿನ—ಮನೆಯಲ್ಲಿ, ಕೆಲಸದ ಸ್ಥಳದಲ್ಲಿ, ಶಾಲೆಯಲ್ಲಿ, ರಸ್ತೆಗಳಲ್ಲಿ, ಖರೀದಿ ಮಾಡುವಾಗ, ನಮ್ಮ ಶುಶ್ರೂಷೆಯಲ್ಲಿ—ನಮ್ಮ ಮೇಲೆ ನಮ್ಮ ನಂಬಿಕೆಗೆ ಸವಾಲುಗಳು ಹೇರಲ್ಪಡುತ್ತವೆ. ನಾವು ಇವುಗಳೊಂದಿಗೆ ಹೇಗೆ ವ್ಯವಹರಿಸುವೆವು? ಬೈಬಲ್ ಆಜ್ಞೆಗಳು ಮತ್ತು ತತ್ವಗಳು ಒಡನೆಯೇ ಮನಸ್ಸಿಗೆ ಬರುವವೊ? ಸ್ವಾವಲಂಬನೆಯ ಅನಿಸಿಕೆಯನ್ನು ಪ್ರೋತ್ಸಾಹಿಸುವ ಬದಲು, ಬೈಬಲ್ ಎಚ್ಚರಿಸುವುದು: “ಆದಕಾರಣ ನಿಂತಿದ್ದೇನೆಂದು ನೆನಸುವವನು ಬೀಳದಂತೆ ಎಚ್ಚರಿಕೆಯಾಗಿರಲಿ.” (1 ಕೊರಿಂಥ 10:12) ಲೋಕವು ನಮ್ಮನ್ನು ಅದರ ಅಚಿನ್ಚೊಳಗೆ ಹಿಸುಕುವಂತೆ ಅನುಮತಿಸುವ ಬದಲು, ದೈನಿಕ ಬೈಬಲ್ ವಾಚನವು ನಮಗೆ, “ಆತನಿಗೆ [“ಯೆಹೋವನಿಗೆ,” NW] ಯೋಗ್ಯರಾಗಿ ನಡೆದು ಎಲ್ಲಾ ವಿಧದಲ್ಲಿ ಆತನನ್ನು ಸಂತೋಷಪಡಿಸು” ವಂತೆ ಸಹಾಯ ಮಾಡುವುದು.—ಕೊಲೊಸ್ಸೆ 1:9, 10; ರೋಮಾಪುರ 12:2.
ಬೈಬಲನ್ನು ಪದೇ ಪದೇ ಓದುವ ಅಗತ್ಯ
6. ಬೈಬಲನ್ನು ಪದೇ ಪದೇ ಓದುವುದು ಪ್ರಯೋಜನಕರವೇಕೆ?
6 ಬೈಬಲನ್ನು ಓದುವುದು ಒಂದು ಕಟ್ಟು ಕಥೆಯ ಪುಸ್ತಕವನ್ನು ಓದುವುದಕ್ಕಿಂತ ಬಹಳ ಭಿನ್ನವಾಗಿದೆ. ಅತ್ಯಂತ ಜನಪ್ರಿಯ ಕಟ್ಟು ಕಥೆಯು ಏಕೈಕ ವಾಚನಕ್ಕಾಗಿ ರಚಿಸಲ್ಪಟ್ಟಿದೆ; ಕಥೆಯು ಮತ್ತು ಅದು ಹೇಗೆ ಅಂತ್ಯಗೊಳ್ಳುತ್ತದೆ ಎಂಬುದು ಒಮ್ಮೆ ವ್ಯಕ್ತಿಗೆ ಗೊತ್ತಾದರೆ, ಪುಸ್ತಕವನ್ನು ಓದುವುದರಲ್ಲಿ ಇನ್ನಾವ ಉದ್ದೇಶವೂ ಇರುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ನಾವು ಬೈಬಲನ್ನು ಎಷ್ಟು ಬಾರಿಯಾದರೂ ಓದಿರಲಿ, ಅದನ್ನು ಮತ್ತೆ ಓದುವುದರಿಂದ ನಾವು ಬಹಳವಾಗಿ ಪ್ರಯೋಜನ ಪಡೆಯುತ್ತೇವೆ. (ಜ್ಞಾನೋಕ್ತಿ 9:9) ವಿವೇಚಿಸುವ ಒಬ್ಬ ವ್ಯಕ್ತಿಗೆ, ಶಾಸ್ತ್ರಗಳು ಸತತವಾಗಿ ನವೀನ ಅರ್ಥವನ್ನು ಪಡೆದುಕೊಳ್ಳುತ್ತವೆ. ಇತ್ತೀಚಿನ ತಿಂಗಳುಗಳಲ್ಲಿ ಅವನು ನೋಡಿರುವಂತಹ, ಕೇಳಿರುವಂತಹ, ಮತ್ತು ವೈಯಕ್ತಿಕವಾಗಿ ಅನುಭವಿಸಿರುವಂತಹ ವಿಷಯಗಳ ನೋಟದಲ್ಲಿ, ಕಡೆಯ ದಿವಸಗಳ ಕುರಿತಾದ ಪ್ರವಾದನೆಗಳು ಅವನಿಗೆ ಇನ್ನೂ ಹೆಚ್ಚು ಮನತಟ್ಟುವಂತಹವುಗಳಾಗುತ್ತವೆ. (ದಾನಿಯೇಲ 12:4) ಜೀವನದಲ್ಲಿ ತನ್ನ ಸ್ವಂತ ಅನುಭವವನ್ನು ಅವನು ವಿಸ್ತರಿಸಿದಂತೆ ಮತ್ತು ಸಮಸ್ಯೆಗಳನ್ನು ನಿಭಾಯಿಸಿದಂತೆ, ವಿವೇಚನೆ ಮಾಡುವ ಬೈಬಲ್ ಓದುಗನು, ಅವನು ಹಿಂದೆ ಯಾವುದೇ ಗುರಿಯಿಲ್ಲದೆ ಓದಿರಬಹುದಾದ ಸಲಹೆಯನ್ನು ಅಧಿಕ ಪೂರ್ಣವಾಗಿ ಗಣ್ಯಮಾಡುತ್ತಾನೆ. (ಜ್ಞಾನೋಕ್ತಿ 4:18) ಅವನು ಗಂಭೀರವಾಗಿ ಅಸ್ವಸ್ಥನಾದರೆ, ವೇದನೆಯ ತೆಗೆದುಹಾಕುವಿಕೆ ಮತ್ತು ಆರೋಗ್ಯದ ಪುನಃಸ್ಥಾಪನೆಯ ಕುರಿತಾದ ಬೈಬಲಿನ ವಾಗ್ದಾನಗಳು, ಹಿಂದೆಂದಿಗಿಂತಲೂ ಈಗ ಅತ್ಯಂತ ಆಳವಾದ ಅರ್ಥವನ್ನು ಪಡೆದುಕೊಳ್ಳುತ್ತವೆ. ಆಪ್ತ ಮಿತ್ರರು ಮತ್ತು ಕುಟುಂಬದ ಸದಸ್ಯರು ಮರಣ ಹೊಂದುವಾಗ, ಪುನರುತ್ಥಾನದ ವಾಗ್ದಾನವು ಇನ್ನೂ ಅಧಿಕ ಅಮೂಲ್ಯವಾದದ್ದಾಗುತ್ತದೆ.
7. ಜೀವನದಲ್ಲಿ ನಾವು ಹೊಸದೊಂದು ಜವಾಬ್ದಾರಿಯನ್ನು ವಹಿಸಿಕೊಳ್ಳುವಾಗ, ಯಾವುದು ನಮಗೆ ಸಹಾಯ ಮಾಡುವುದು ಮತ್ತು ಏಕೆ?
7 ನೀವು ಬೈಬಲನ್ನು ವೈಯಕ್ತಿಕವಾಗಿ ಓದಿರಬಹುದು ಮತ್ತು ಹಲವಾರು ವರ್ಷಗಳಿಂದ ಅದರ ಸಲಹೆಯನ್ನು ಅನ್ವಯಿಸಿದಿರ್ದಬಹುದು. ಆದರೆ ಬಹುಶಃ ಈಗ ನೀವು ಜೀವನದಲ್ಲಿ ಹೊಸ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತಿದ್ದೀರಿ. ಮದುವೆಯಾಗಲು ನೀವು ಯೋಜಿಸುತ್ತಿದ್ದೀರೊ? ನೀವು ಒಬ್ಬ ಹೆತ್ತವರಾಗಲಿದ್ದೀರೊ? ಒಬ್ಬ ಹಿರಿಯ ಅಥವಾ ಶುಶ್ರೂಷಾ ಸೇವಕನೋಪಾದಿ ಸಭೆಯಲ್ಲಿ ನಿಮಗೆ ಜವಾಬ್ದಾರಿಯು ಕೊಡಲ್ಪಟ್ಟಿದೆಯೊ? ಸಾರುವ ಮತ್ತು ಕಲಿಸುವ ಹೆಚ್ಚಿನ ಅವಕಾಶಗಳೊಂದಿಗೆ ನೀವು ಒಬ್ಬ ಪೂರ್ಣ ಸಮಯದ ಸೌವಾರ್ತಿಕರಾಗಿದ್ದೀರೊ? ಆ ಹೊಸ ಜವಾಬ್ದಾರಿಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತಾ, ಪುನಃ ಇಡೀ ಬೈಬಲನ್ನು ಓದುವುದು ಎಷ್ಟು ಪ್ರಯೋಜನಕರವಾಗಿರುವುದು!—ಎಫೆಸ 5:24, 25; 6:4; 2 ತಿಮೊಥೆಯ 4:1, 2.
8. ನಮಗೆ ಈಗಾಗಲೇ ಗೊತ್ತಿದೆ ಎಂದು ನಾವು ನೆನಸಿದ ವಿಷಯಗಳ ಕುರಿತು ಹೆಚ್ಚನ್ನು ಕಲಿಯುವ ಅಗತ್ಯ ಇದೆಯೆಂದು ಬದಲಾದ ಪರಿಸ್ಥಿತಿಗಳು ಹೇಗೆ ತೋರಿಸಬಹುದು?
8 ಹಿಂದಿನ ವರ್ಷಗಳಲ್ಲಿ ಆತ್ಮದ ಫಲಗಳನ್ನು ನೀವು ಚೆನ್ನಾಗಿ ಪ್ರದರ್ಶಿಸಿದಿರ್ದಬಹುದು. (ಗಲಾತ್ಯ 5:22, 23) ಆದರೆ ಬದಲಾದ ಪರಿಸ್ಥಿತಿಗಳು, ಆ ದೈವಿಕ ಗುಣಗಳ ಕುರಿತು ಇನ್ನೂ ಹೆಚ್ಚನ್ನು ಕಲಿಯುವ ಅಗತ್ಯದೊಂದಿಗೆ ನಿಮ್ಮನ್ನು ಎದುರುಗೊಳ್ಳಬಹುದು. (ಹೋಲಿಸಿ ಇಬ್ರಿಯ 5:8.) ವೃದ್ಧರಾಗುತ್ತಿರುವ ತನ್ನ ಹೆತ್ತವರ ಪರಾಮರಿಕೆ ಮಾಡುವ ಸಲುವಾಗಿ ತನ್ನ ವಿಶೇಷ ಸೇವೆಯನ್ನು ಬಿಡುವುದು ಅಗತ್ಯವೆಂದು ಕಂಡುಕೊಂಡ ಒಬ್ಬ ಹಿಂದಿನ ಸಂಚರಣ ಮೇಲ್ವಿಚಾರಕನು ಹೇಳಿದ್ದು: “ಆತ್ಮದ ಫಲಗಳನ್ನು ನಾನು ನ್ಯಾಯಸಮ್ಮತವಾಗಿ ಒಳ್ಳೆಯ ರೀತಿಯಲ್ಲಿ ಪ್ರದರ್ಶಿಸುತ್ತಾ ಇದ್ದೆನೆಂದು ನಾನು ನೆನಸುತ್ತಿದ್ದೆ. ನಾನು ಪುನಃ ಮೊದಲಿನಿಂದಲೂ ಆರಂಭಿಸುತ್ತಿರುವಂತೆ ಈಗ ನನಗೆ ಅನಿಸುತ್ತಿದೆ.” ತದ್ರೀತಿಯಲ್ಲಿ, ಯಾರ ವಿವಾಹ ಸಂಗಾತಿಗಳು ತೀಕ್ಷ್ಣವಾದ ಶಾರೀರಿಕ ಅಥವಾ ಭಾವನಾತ್ಮಕ ಅನಾರೋಗ್ಯದಿಂದ ಕಷ್ಟಾನುಭವಿಸುತ್ತಾರೊ, ಅಂತಹ ಗಂಡಂದಿರು ಮತ್ತು ಹೆಂಡತಿಯರು ವೈಯಕ್ತಿಕ ಪರಾಮರಿಕೆಯನ್ನು ಒದಗಿಸುವುದರಲ್ಲಿ, ಕೆಲವೊಮ್ಮೆ ಮಹತ್ತಾದ ಒತ್ತಡವು ತಮ್ಮನ್ನು ನಿರಾಶೆಗೊಳಿಸುವ ಪ್ರತಿಕ್ರಿಯೆಗಳನ್ನು ಕೆರಳಿಸುತ್ತದೆಂದು ಕಂಡುಕೊಳ್ಳಬಹುದು. ಕ್ರಮವಾದ ಬೈಬಲ್ ವಾಚನವು ಮಹಾ ಸಾಂತ್ವನ ಹಾಗೂ ಸಹಾಯದ ಮೂಲವಾಗಿದೆ.
ಬೈಬಲ್ ವಾಚನವನ್ನು ಮಾಡಬಹುದಾದ ಸಮಯ
9. (ಎ) ಬಹಳ ಕಾರ್ಯಮಗ್ನನಾಗಿರುವ ಒಬ್ಬ ವ್ಯಕ್ತಿಗೆ ದೈನಿಕ ಬೈಬಲ್ ವಾಚನಕ್ಕಾಗಿ ಸಮಯವನ್ನು ಕಂಡುಕೊಳ್ಳುವಂತೆ ಯಾವುದು ಸಹಾಯ ಮಾಡಬಲ್ಲದು? (ಬಿ) ದೇವರ ವಾಕ್ಯವನ್ನು ಓದುವುದು ವಿಶೇಷವಾಗಿ ಹಿರಿಯರಿಗೆ ಪ್ರಾಮುಖ್ಯವಾಗಿದೆ ಏಕೆ?
9 ಈಗಾಗಲೇ ಬಹಳ ಕಾರ್ಯಮಗ್ನರಾಗಿರುವ ಜನರಿಗೆ, ಯಾವುದೊ ಹೆಚ್ಚಿನ ವಿಷಯವನ್ನು ಕ್ರಮವಾಗಿ ಮಾಡಲು ಸಮಯವನ್ನು ಕಂಡುಕೊಳ್ಳುವುದು ಒಂದು ಪಂಥಾಹ್ವಾನವಾಗಿದೆ ನಿಶ್ಚಯ. ಹಾಗಿದ್ದರೂ, ನಾವು ಯೆಹೋವನ ಉದಾಹರಣೆಯಿಂದ ಪ್ರಯೋಜನ ಪಡೆಯಬಲ್ಲೆವು. ಆತನು ವಿಷಯಗಳನ್ನು ‘ನಿಯಮಿತ ಸಮಯದಲ್ಲಿ’ ಮಾಡುತ್ತಾನೆಂದು ಬೈಬಲ್ ಪ್ರಕಟಿಸುತ್ತದೆ. (ಆದಿಕಾಂಡ 21:2; ವಿಮೋಚನಕಾಂಡ 9:5; ಲೂಕ 21:24; ಗಲಾತ್ಯ 4:4) ದೇವರ ವಾಕ್ಯವನ್ನು ಕ್ರಮವಾಗಿ ಓದುವುದರ ಮಹತ್ವಕ್ಕಾಗಿ ಗಣ್ಯತೆಯನ್ನು ತೋರಿಸುವುದು, ನಮ್ಮ ದೈನಿಕ ವೇಳಾಪಟ್ಟಿಯಲ್ಲಿ ಅದಕ್ಕಾಗಿ ಒಂದು ಸಮಯವನ್ನು ಗೊತ್ತುಮಾಡಲು ನಮಗೆ ಸಹಾಯ ಮಾಡಬಲ್ಲದು. (ಎಫೆಸ 5:15-17) ವಿಶೇಷವಾಗಿ ಹಿರಿಯರು ಕ್ರಮವಾದ ಬೈಬಲ್ ವಾಚನಕ್ಕೆ ಸಮಯವನ್ನು ಬದಿಗಿಡಬೇಕಾಗಿದೆ. ಇದರಿಂದಾಗಿ ಅವರು ನೀಡುವ ಸಲಹೆಯು ನಿಷ್ಕೃಷ್ಟವಾಗಿ ಬೈಬಲ್ ತತ್ವಗಳ ಮೇಲೆ ಆಧರಿಸಿರುವುದು ಮತ್ತು ಅವರು ತೋರಿಸುವ ಆತ್ಮವು “ಮೇಲಣಿಂದ ಬರುವ ಜ್ಞಾನ” ವನ್ನು ಪ್ರತಿಬಿಂಬಿಸುವುದು.—ಯಾಕೋಬ 3:17; ತೀತ 1:9.
10. ಪ್ರತಿನಿತ್ಯವೂ ಬೈಬಲನ್ನು ಓದುವವರು, ಓದಲು ಸಮಯವನ್ನು ಯಾವಾಗ ಕಂಡುಕೊಳ್ಳುತ್ತಾರೆ?
10 ವೈಯಕ್ತಿಕ ಬೈಬಲ್ ವಾಚನದ ಕಾರ್ಯಕ್ರಮದಲ್ಲಿ ಯಶಸ್ಸನ್ನು ಗಳಿಸುವ ಅನೇಕರು, ತಾವು ದಿನದ ಚಟುವಟಿಕೆಗಳನ್ನು ಆರಂಭಿಸುವ ಮೊದಲು ಬೆಳಗ್ಗೆ ಬೇಗನೆ ತಮ್ಮ ವಾಚನವನ್ನು ಮಾಡುತ್ತಾರೆ. ಇತರರು ಮತ್ತೊಂದು ಸಮಯದಲ್ಲಿ ಅದನ್ನು ಸುಸಂಗತವಾಗಿ ಮಾಡಲು ತಾವು ಶಕ್ತರೆಂದು ಕಂಡುಕೊಳ್ಳುತ್ತಾರೆ. ಬೈಬಲ್ ಆಡಿಯೊಕ್ಯಾಸೆಟ್ಗಳು (ಲಭ್ಯವಿರುವಲ್ಲಿ) ಪ್ರಯಾಣ ಸಮಯದ ಸದುಪಯೋಗವನ್ನು ಮಾಡುವಂತೆ ನಿತ್ಯ ಪ್ರಯಾಣಿಕರಿಗೆ ಸಹಾಯ ಮಾಡುತ್ತವೆ, ಮತ್ತು ಕೆಲವು ಸಾಕ್ಷಿಗಳು ನಿಯತಕ್ರಮದ ಮನೆವಾರ್ತೆಯ ಕೆಲಸಗಳನ್ನು ನೋಡಿಕೊಳ್ಳುವಾಗ ಅವುಗಳನ್ನು ಆಲಿಸುತ್ತಾರೆ. ಯೂರೋಪ್, ಆಫ್ರಿಕ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಮತ್ತು ಪೌರಸ್ತ್ಯ ದೇಶಗಳಲ್ಲಿನ ವಿಭಿನ್ನ ಸಾಕ್ಷಿಗಳ ವಿಷಯದಲ್ಲಿ ವ್ಯಾವಹಾರ್ಯವಾಗಿರುವ ಕಾರ್ಯಕ್ರಮಗಳು ಪುಟಗಳು 20 ಮತ್ತು 21 ರಲ್ಲಿರುವ “ಅವರು ಓದುವ ಸಮಯ ಮತ್ತು ಪ್ರಯೋಜನ ಪಡೆಯುವ ವಿಧ” ಎಂಬ ಲೇಖನದಲ್ಲಿ ತೋರಿಸಲ್ಪಟ್ಟಿವೆ.
11. ಲಭ್ಯವಾಗಿರುವ ಸಮಯವು ಬಹಳ ಸೀಮಿತವಾಗಿದ್ದರೂ, ದೈನಿಕ ಬೈಬಲ್ ವಾಚನವನ್ನು ಹೇಗೆ ಪೂರೈಸಸಾಧ್ಯವಿದೆ?
11 ಅತ್ಯಂತ ಪ್ರಮುಖವಾದ ವಿಷಯವು, ನಿಮ್ಮ ಬೈಬಲ್ ವಾಚನಕ್ಕೆ ಯಾವುದೊ ಒಂದು ಸಂದರ್ಭದಲ್ಲಿ ಮೀಸಲಾಗಿಟ್ಟ ಸಮಯದ ಮೊತ್ತವಲ್ಲ, ಬದಲಿಗೆ ಅದನ್ನು ಮಾಡಲಾಗುವ ಕ್ರಮಬದ್ಧತೆಯೇ. ಹೆಚ್ಚಿನ ಸಂಶೋಧನೆಯನ್ನು ಮಾಡುತ್ತಾ, ವಿಷಯದಲ್ಲಿ ಸಂಪೂರ್ಣವಾಗಿ ಮಗ್ನರಾಗುತ್ತಾ, ಒಂದು ಸಂದರ್ಭದಲ್ಲಿ ಒಂದು ತಾಸು ಅಥವಾ ಇನ್ನೂ ಹೆಚ್ಚಿನ ವೇಳೆ ಓದುವುದನ್ನು ನೀವು ಪ್ರತಿಫಲದಾಯಕವೆಂದು ಕಂಡುಕೊಳ್ಳಬಹುದು. ಆದರೆ ನಿಮ್ಮ ವೇಳಾಪಟ್ಟಿಯು ಅದನ್ನು ಕ್ರಮವಾಗಿ ಮಾಡುವಂತೆ ನಿಮ್ಮನ್ನು ಅನುಮತಿಸುತ್ತದೊ? ಯಾವುದೇ ಬೈಬಲ್ ವಾಚನವಿಲ್ಲದೆ ಹಲವಾರು ದಿನಗಳು ದಾಟಿಹೋಗುವಂತೆ ಬಿಡುವುದಕ್ಕಿಂತ, ಪ್ರತಿ ದಿನ 15 ನಿಮಿಷಗಳ ಸಮಯ ಅಥವಾ ಕೇವಲ 5 ನಿಮಿಷಗಳ ವರೆಗೆ ಓದುವುದು ಹೆಚ್ಚು ಉತ್ತಮವಾಗಿರುವುದಿಲ್ಲವೊ? ದೈನಿಕ ಬೈಬಲ್ ವಾಚನ ಮಾಡುವುದನ್ನು ನಿಮ್ಮ ಸಂಕಲ್ಪವನ್ನಾಗಿ ಮಾಡಿರಿ. ತದನಂತರ ಸಾಧ್ಯವಾದಾಗ ಆ ವಾಚನದೊಂದಿಗೆ ಆಳವಾದ ಸಂಶೋಧನೆಯನ್ನು ಸೇರಿಸಿರಿ.
ಬೈಬಲ್ ವಾಚನಕ್ಕೆ ವಿಭಿನ್ನ ಪ್ರಸ್ತಾವಗಳು
12. ಬೆತೆಲ್ ಕುಟುಂಬದ ಹೊಸ ಸದಸ್ಯರಿಗೆ ಮತ್ತು ಗಿಲ್ಯಡ್ ವಿದ್ಯಾರ್ಥಿಗಳಿಗೆ ಬೈಬಲ್ ವಾಚನದ ಯಾವ ಕಾರ್ಯಕ್ರಮವಿದೆ?
12 ಬೈಬಲನ್ನು ಅನೇಕ ವಿಧಗಳಲ್ಲಿ ಓದಸಾಧ್ಯವಿದೆ. ಅದನ್ನು ಆದಿಕಾಂಡದಿಂದ ಪ್ರಕಟನೆಯ ವರೆಗೆ ಓದುವುದು ಪ್ರಯೋಜನಕಾರಿಯಾಗಿದೆ. ಲೋಕದ ಮುಖ್ಯಕಾರ್ಯಾಲಯಗಳಲ್ಲಿ ಅಥವಾ ಸೊಸೈಟಿಯ ಒಂದು ಬ್ರಾಂಚಿನಲ್ಲಿ ಸೇವೆ ಸಲ್ಲಿಸುವ ಭೌಗೋಲಿಕವಾದ ಬೆತೆಲ್ ಕುಟುಂಬದ ಎಲ್ಲ ಸದಸ್ಯರು, ತಮ್ಮ ಬೆತೆಲ್ ಸೇವೆಯ ಪ್ರಥಮ ವರ್ಷದಲ್ಲಿ ಸಂಪೂರ್ಣ ಬೈಬಲನ್ನು ಓದುವಂತೆ ಕೇಳಿಕೊಳ್ಳಲ್ಪಡುತ್ತಾರೆ. (ಅದು ಸಾಮಾನ್ಯವಾಗಿ ಅವುಗಳ ವಿಸ್ತಾರದ ಮೇಲೆ ಅವಲಂಬಿಸುತ್ತಾ, ಪ್ರತಿ ದಿನ ಮೂರರಿಂದ ಐದು ಅಧ್ಯಾಯಗಳ ಅಥವಾ ನಾಲ್ಕರಿಂದ ಐದು ಪುಟಗಳ ವಾಚನವನ್ನು ಒಳಗೊಳ್ಳುತ್ತದೆ.) ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನ ವಿದ್ಯಾರ್ಥಿಗಳು ಸಹ ತಾವು ಪದವಿಯನ್ನು ಪಡೆಯುವ ಮೊದಲು ಬೈಬಲನ್ನು ಸಂಪೂರ್ಣವಾಗಿ ಓದಬೇಕು. ಇದು ದೈನಿಕ ಬೈಬಲ್ ವಾಚನವನ್ನು ಅವರ ಜೀವಿತಗಳ ಒಂದು ಭಾಗವಾಗಿ ಮಾಡಲು ಸಹಾಯ ಮಾಡುವುದೆಂದು ನಿರೀಕ್ಷಿಸಲಾಗಿದೆ.
13. ಹೊಸದಾಗಿ ದೀಕ್ಷಾಸ್ನಾನ ಪಡೆದಿರುವ ಸಾಕ್ಷಿಗಳಿಗೆ ಯಾವ ಗುರಿಯನ್ನು ಶಿಫಾರಸ್ಸು ಮಾಡಲಾಗುತ್ತದೆ?
13 ಹೊಸದಾಗಿ ದೀಕ್ಷಾಸ್ನಾನ ಪಡೆದ ಸಾಕ್ಷಿಗಳಿಗೆ ತಮ್ಮ ಮುಂದೆ ಸಂಪೂರ್ಣ ಬೈಬಲನ್ನು ಓದುವ ಗುರಿಯನ್ನಿಡುವುದು ಪ್ರಯೋಜನಕರವಾಗಿದೆ. 1975 ರಲ್ಲಿ, ಅವನು ದೀಕ್ಷಾಸ್ನಾನಕ್ಕಾಗಿ ತಯಾರಿಯಾಗುತ್ತಿದ್ದ ಸಮಯದಲ್ಲಿ, ಬೈಬಲ್ ವಾಚನಕ್ಕಾಗಿ ಒಂದು ನಿಶ್ಚಿತ ಕಾರ್ಯಕ್ರಮ ಅವನಿಗಿದೆಯೊ ಎಂಬುದಾಗಿ ಫ್ರಾನ್ಸ್ನ ಒಬ್ಬ ಯುವ ಪುರುಷನು ಹಿರಿಯನೊಬ್ಬನಿಂದ ಕೇಳಲ್ಪಟ್ಟನು. ಆ ಸಮಯದಿಂದ, ಸಾಮಾನ್ಯವಾಗಿ ಕೆಲಸಕ್ಕೆ ಹೋಗುವ ಮೊದಲು ಬೆಳಗ್ಗೆ ತನ್ನ ವಾಚನವನ್ನು ಮಾಡುತ್ತಾ, ಪ್ರತಿ ವರ್ಷ ಅವನು ಸಂಪೂರ್ಣ ಬೈಬಲನ್ನು ಓದಿದ್ದಾನೆ. ಫಲಿತಾಂಶಗಳ ಕುರಿತು, ಅವನು ಹೇಳುವುದು: “ನಾನು ಯೆಹೋವನೊಂದಿಗೆ ಇನ್ನೂ ಉತ್ತಮವಾಗಿ ಪರಿಚಿತನಾಗಿದ್ದೇನೆ. ಆತನು ಮಾಡುವ ಎಲ್ಲ ವಿಷಯಗಳು ಹೇಗೆ ಆತನ ಉದ್ದೇಶಕ್ಕೆ ಸಂಬಂಧಿಸಿವೆ ಮತ್ತು ತಡೆಗಳು ಏಳುವಾಗ ಆತನು ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುದನ್ನು ನಾನು ನೋಡಬಲ್ಲೆ. ಅದೇ ಸಮಯದಲ್ಲಿ ಯೆಹೋವನು ನೀತಿವಂತನು ಮತ್ತು ತನ್ನ ಎಲ್ಲ ಕ್ರಿಯೆಗಳಲ್ಲಿ ಒಳ್ಳೆಯವನೂ ಆಗಿದ್ದಾನೆಂದು ನಾನು ನೋಡುತ್ತೇನೆ.”
14. (ಎ) ಮುಂದುವರಿಯುವ ವೈಯಕ್ತಿಕ ಬೈಬಲ್ ವಾಚನದ ಒಂದು ಕಾರ್ಯಕ್ರಮವನ್ನು ಆರಂಭಿಸುವ ಸಲುವಾಗಿ, ಯಾವುದರ ಅಗತ್ಯವಿದೆ? (ಬಿ) ಪ್ರತಿಯೊಂದು ಬೈಬಲ್ ಪುಸ್ತಕವನ್ನು ನಾವು ಓದಿದಂತೆ ಅದರ ಸಾಮಾನ್ಯ ಹೊರಮೇರೆಯನ್ನು ಜ್ಞಾಪಕದಲ್ಲಿಟ್ಟುಕೊಳ್ಳುವಂತೆ ಯಾವುದು ಸಹಾಯ ಮಾಡಬಹುದು?
14 ನೀವು ಸಂಪೂರ್ಣ ಬೈಬಲನ್ನು ಓದಿದ್ದೀರೊ? ಇಲ್ಲವಾದಲ್ಲಿ, ಆರಂಭಿಸಲು ಇದು ಸುಸಮಯವಾಗಿದೆ. ನಿಶ್ಚಿತವಾದೊಂದು ಕಾರ್ಯಕ್ರಮವನ್ನು ರೂಪಿಸಿರಿ, ಮತ್ತು ನಂತರ ಅದಕ್ಕೆ ಅಂಟಿಕೊಳ್ಳಿರಿ. ಎಷ್ಟೊಂದು ಪುಟಗಳನ್ನು ಅಥವಾ ಎಷ್ಟೊಂದು ಅಧ್ಯಾಯಗಳನ್ನು ನೀವು ಪ್ರತಿ ದಿನ ಓದುವಿರೆಂಬುದನ್ನು ನಿರ್ಧರಿಸಿರಿ, ಅಥವಾ ಕೇವಲ ಎಷ್ಟು ಸಮಯವನ್ನು ನೀವು ವ್ಯಯಿಸುವಿರಿ ಮತ್ತು ಯಾವಾಗ ಎಂಬುದನ್ನು ನಿರ್ಧರಿಸಿರಿ. ಎಲ್ಲರೂ ಬೈಬಲನ್ನು ಒಂದು ವರ್ಷದಲ್ಲಿ ಮುಗಿಸಲಾರರು, ಆದರೆ ಪ್ರಾಮುಖ್ಯವಾದ ವಿಷಯವೇನೆಂದರೆ, ಸಾಧ್ಯವಾದಲ್ಲಿ ಪ್ರತಿನಿತ್ಯವೂ ಹಾಗೆ ಮಾಡುತ್ತಾ ದೇವರ ವಾಕ್ಯವನ್ನು ಕ್ರಮವಾಗಿ ಓದಿರಿ. ಬೈಬಲನ್ನು ನೀವು ಓದಿದಂತೆ, ವಿಷಯದ ಸಾಮಾನ್ಯ ರೂಪರೇಖೆಯನ್ನು ನಿಮ್ಮ ಮನಸ್ಸಿನ ಮೇಲೆ ಮನದಟ್ಟು ಮಾಡುವಲ್ಲಿ, ಕೆಲವೊಂದು ಆಧಾರ ಪುಸ್ತಕಗಳ ಬಳಕೆಯು ಸಹಾಯಕರವೆಂದು ನೀವು ಕಂಡುಕೊಳ್ಳಬಹುದು. ಶಾಸ್ತ್ರವಚನಗಳ ಒಳನೋಟ (ಇಂಗ್ಲಿಷ್) ಎಂಬ ಪುಸ್ತಕವು ನಿಮ್ಮ ಭಾಷೆಯಲ್ಲಿ ಲಭ್ಯವಿದ್ದರೆ, ನಿರ್ದಿಷ್ಟವಾದೊಂದು ಬೈಬಲ್ ಪುಸ್ತಕವನ್ನು ಓದಲು ಆರಂಭಿಸುವ ಮೊದಲು, ಒಳನೋಟ ಪುಸ್ತಕದಲ್ಲಿ ಒದಗಿಸಲಾದಂತೆ ಅದರ ಅತ್ಯುಜಲ್ವ ಭಾಗಗಳ ಸಂಕ್ಷಿಪ್ತ ಹೊರಮೇರೆಯ ಪುನರ್ವಿಮರ್ಶೆಯನ್ನು ಮಾಡಿರಿ.* ಹೊರಮೇರೆಯಲ್ಲಿರುವ ದಪ್ಪ ಶೀರ್ಷಿಕೆಗಳನ್ನು ವಿಶೇಷವಾಗಿ ಗಮನಿಸಿರಿ. ಅಥವಾ “ಎಲ್ಲ ಶಾಸ್ತ್ರವು ದೇವ ಪ್ರೇರಿತವೂ ಪ್ರಯೋಜನಕರವೂ ಆಗಿದೆ” (ಇಂಗ್ಲಿಷ್) ಎಂಬ ಪುಸ್ತಕದಲ್ಲಿ ಒದಗಿಸಲಾದ ಅಧಿಕ ವಿಸ್ತಾರವಾದ ಸಾರಾಂಶದ ತದ್ರೀತಿಯ ಉಪಯೋಗವನ್ನು ಮಾಡಿರಿ.a
15. (ಎ) ನಿಮ್ಮ ಬೈಬಲ್ ವಾಚನವನ್ನು ವೃದ್ಧಿಸಲು 16 ಮತ್ತು 17ನೇ ಪುಟಗಳಲ್ಲಿ ನೀಡಲ್ಪಟ್ಟಿರುವ ಯಾವ ಸೂಚನೆಗಳು ಸಹಾಯ ಮಾಡಬಲ್ಲವು? (ಬಿ) ಕೆಲವೊಂದು ಪುಟಗಳ ವಾಚನವನ್ನು ಒಂದು ಮತಾಚರಣೆ ಎಂಬಂತೆ ಮಾಡುವುದರ ಬದಲು, ಯಾವ ಪ್ರಮುಖ ವಿಷಯಕ್ಕೆ ನಾವು ಹೆಚ್ಚಿನ ಗಮನವನ್ನು ಕೊಡತಕ್ಕದ್ದು?
15 ಕ್ರಮಾನುಗತವಾದ ಬೈಬಲ್ ವಾಚನವು ಪ್ರಯೋಜನಕರ, ಆದರೆ ಕೇವಲ ಮತಾಚರಣೆಗಾಗಿ ಓದುವ ಓದುಗರಾಗಬೇಡಿ. ಪ್ರತಿ ವರ್ಷ ಇಡೀ ಬೈಬಲನ್ನು ನೀವು ಓದಿದಿರೆಂದು ಹೇಳಲಿಕ್ಕಾಗಿ ಪ್ರತಿ ದಿನ ಕೆಲವೊಂದು ಪುಟಗಳನ್ನು ಓದಬೇಡಿ. “ನಿಮ್ಮ ಬೈಬಲ್ ವಾಚನವನ್ನು ಹೆಚ್ಚಿಸಲಿಕ್ಕಾಗಿರುವ ಸೂಚನೆಗಳು” ಎಂಬ ರೇಖಾಚೌಕದಲ್ಲಿ ತೋರಿಸಿರುವಂತೆ (ಪುಟಗಳು 16 ಮತ್ತು 17), ಬೈಬಲನ್ನು ನೀವು ಓದಬಲ್ಲ ಮತ್ತು ಆನಂದಿಸಬಲ್ಲ ಹಲವಾರು ವಿಧಗಳಿವೆ. ನೀವು ಬಳಸುವ ವಿಧಾನವು ಯಾವುದೇ ಆಗಿರಲಿ, ನೀವು ನಿಮ್ಮ ಮನಸ್ಸು ಮತ್ತು ಹೃದಯ, ಎರಡನ್ನೂ ಉಣಿಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.
ನೀವು ಓದುವ ವಿಷಯದ ಅರ್ಥವನ್ನು ಗ್ರಹಿಸಿರಿ
16. ನಾವು ಓದುವ ವಿಷಯದ ಕುರಿತು ಮನನ ಮಾಡಲು ಸಮಯವನ್ನು ತೆಗೆದುಕೊಳ್ಳುವುದು ಪ್ರಾಮುಖ್ಯವೇಕೆ?
16 ತನ್ನ ಶಿಷ್ಯರಿಗೆ ಕಲಿಸುವಾಗ, ತಾನು ಹೇಳಿದ ವಿಷಯವನ್ನು ಅವರು ತಿಳಿದುಕೊಳ್ಳುವುದರ ಮಹತ್ವವನ್ನು ಯೇಸು ಒತ್ತಿಹೇಳಿದನು. ಪ್ರಾಮುಖ್ಯವಾದ ಸಂಗತಿಯು, ಬರಿಯ ಬುದ್ಧಿಯ ಗ್ರಹಿಕೆಯಾಗಿರಲಿಲ್ಲ, ಬದಲಿಗೆ ತಮ್ಮ ಜೀವಿತಗಳಲ್ಲಿ ಅದನ್ನು ಅವರು ಅನ್ವಯಿಸುವಂತೆ, ‘ತಮ್ಮ ಹೃದಯದಿಂದ ಅದರ ಅರ್ಥವನ್ನು’ ಗ್ರಹಿಸುವುದಾಗಿತ್ತು. (ಮತ್ತಾಯ 13:14, 15, 19, 23) ವ್ಯಕ್ತಿಯೊಬ್ಬನು ಅಂತರಂಗದಲ್ಲಿ ನಿಜವಾಗಿಯೂ ಏನಾಗಿದಾನ್ದೊ, ಅದು ದೇವರ ಮುಂದೆ ಎಣಿಕೆಗೆ ಬರುತ್ತದೆ ಮತ್ತು ಇದೇ ಸಂಗತಿಯು ಹೃದಯದ ಮೂಲಕ ಪ್ರತಿನಿಧಿಸಲ್ಪಡುತ್ತದೆ. (1 ಸಮುವೇಲ 16:7; ಜ್ಞಾನೋಕ್ತಿ 4:23) ಹೀಗೆ, ಬೈಬಲ್ ವಾಕ್ಯಗಳು ಹೇಳುವ ವಿಷಯವನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ ಎಂಬುದನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ, ನಮ್ಮ ಸ್ವಂತ ಜೀವಿತಗಳಲ್ಲಿ ಅವುಗಳ ಅರ್ಥವನ್ನು ಪರಿಗಣಿಸುತ್ತಾ, ಅವುಗಳ ಮೇಲೆ ಮನನ ಮಾಡುವ ಅಗತ್ಯ ನಮಗಿದೆ.—ಕೀರ್ತನೆ 48:9; 1 ತಿಮೊಥೆಯ 4:15.
17. ಶಾಸ್ತ್ರಗಳಲ್ಲಿ ನಾವು ಓದುವ ವಿಷಯದ ಕುರಿತು ನಾವು ಮನನ ಮಾಡಬಹುದಾದ ಕೆಲವು ದೃಷ್ಟಿಕೋನಗಳಾವುವು?
17 ಬೈಬಲ್ ವೃತ್ತಾಂತಗಳಲ್ಲಿ ಒಳಗೊಂಡಿರುವ ಮೂಲ ತತ್ವಗಳನ್ನು ಗುರುತಿಸಲು ಪ್ರಯತ್ನಿಸಿರಿ, ಹೀಗೆ ಇವುಗಳನ್ನು ನೀವು ಎದುರಿಸುವ ಸನ್ನಿವೇಶಗಳಿಗೆ ಅನ್ವಯಿಸಬಲ್ಲಿರಿ. (ಹೋಲಿಸಿ ಮತ್ತಾಯ 9:13; 19:3-6.) ಯೆಹೋವನ ಅದ್ಭುತಕರ ಗುಣಗಳ ಕುರಿತು ನೀವು ಓದಿ ಮನನ ಮಾಡಿದಂತೆ, ಆತನೊಂದಿಗಿನ ನಿಮ್ಮ ವೈಯಕ್ತಿಕ ಸಂಬಂಧವನ್ನು ಬಲಪಡಿಸಲು, ನಿಮ್ಮೊಳಗೆ ದಿವ್ಯ ಭಕ್ತಿಯ ಬಲವಾದ ಪ್ರಜ್ಞೆಯನ್ನು ವಿಕಸಿಸಿಕೊಳ್ಳಲು, ಆ ಅವಕಾಶವನ್ನು ಉಪಯೋಗಿಸಿರಿ. ಯೆಹೋವನ ಉದ್ದೇಶದ ಕುರಿತಾದ ಹೇಳಿಕೆಗಳನ್ನು ನೀವು ಓದುವಾಗ, ಇವುಗಳೊಂದಿಗೆ ಹೊಂದಿಕೆಯಲ್ಲಿ ಕಾರ್ಯನಡಿಸಲು ನೀವು ಏನನ್ನು ಮಾಡಬಲ್ಲಿರೆಂಬುದನ್ನು ಪರಿಗಣಿಸಿರಿ. ನೇರವಾದ ಸಲಹೆಯನ್ನು ನೀವು ಓದುವಾಗ, ‘ಅದು ನನಗೆ ಗೊತ್ತು,’ ಎಂದು ಸ್ವತಃ ನೀವೇ ಹೇಳಿಕೊಳ್ಳುವ ಬದಲು, ‘ಅದು ಹೇಳುವ ವಿಷಯವನ್ನು ನಾನು ಮಾಡುತ್ತಿದ್ದೇನೊ? ಹಾಗಿರುವಲ್ಲಿ, ‘ಯಾವ ವಿಧಗಳಲ್ಲಿ ನಾನು ಅದನ್ನು “ಇನ್ನೂ ಹೆಚ್ಚಾಗಿ” ಮಾಡಬಲ್ಲೆ?’ ಎಂಬುದಾಗಿ ನಿಮ್ಮನ್ನೇ ಕೇಳಿಕೊಳ್ಳಿ. (1 ಥೆಸಲೊನೀಕ 4:1) ದೇವರ ಆವಶ್ಯಕತೆಗಳನ್ನು ನೀವು ಕಲಿತಂತೆ, ಈ ಆವಶ್ಯಕತೆಗಳಿಗೆ ಹೊಂದಿಕೆಯಲ್ಲಿ ಜೀವಿಸಿದ ಹಾಗೂ ಜೀವಿಸದೆ ಹೋದ ಬೈಬಲಿನ ನಿಜ ಜೀವನದ ಉದಾಹರಣೆಗಳ ಕಡೆಗೂ ಗಮನ ಹರಿಸಿರಿ. ಅವರು ಯಾಕೆ ಆ ಮಾರ್ಗವನ್ನು ಬೆನ್ನಟ್ಟಿದರು ಮತ್ತು ಪರಿಣಾಮವು ಏನಾಗಿತ್ತು ಎಂಬುದನ್ನು ಪರಿಗಣಿಸಿರಿ. (ರೋಮಾಪುರ 15:4; 1 ಕೊರಿಂಥ 10:11) ಯೇಸು ಕ್ರಿಸ್ತನ ಜೀವನದ ಕುರಿತು ನೀವು ಓದುವಾಗ, ಭೂಮಿಯ ಮೇಲೆಲ್ಲಾ ದೊರೆತನವನ್ನು ಯೆಹೋವನು ಯಾರಿಗೆ ವಹಿಸಿದ್ದಾನೊ, ಆ ವ್ಯಕ್ತಿಯು ಯೇಸು ಎಂಬುದನ್ನು ಸ್ಮರಿಸಿಕೊಳ್ಳಿ; ನಿಮ್ಮೊಳಗೆ ದೇವರ ಹೊಸ ಲೋಕಕ್ಕಾಗಿರುವ ಹಂಬಲವನ್ನು ಬಲಪಡಿಸಿಕೊಳ್ಳಲು ಸಂದರ್ಭದ ಉಪಯೋಗವನ್ನು ಮಾಡಿರಿ. ಹಾಗೂ, ದೇವರ ಮಗನನ್ನು ಹೆಚ್ಚು ಪೂರ್ಣವಾಗಿ ಅನುಕರಿಸಬಲ್ಲ ವಿಧಗಳ ವಿಶ್ಲೇಷಣೆ ಮಾಡಿರಿ.—1 ಪೇತ್ರ 2:21.
18. ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕ ಒದಗಿಸಲಾಗುವ ಅಧ್ಯಯನ ವಿಷಯದ ನಮ್ಮ ಉಪಯೋಗದೊಂದಿಗೆ ಬೈಬಲ್ ವಾಚನವನ್ನು ನಾವು ಹೇಗೆ ಸರಿದೂಗಿಸಬಲ್ಲೆವು?
18 ‘ನಂಬಿಗಸ್ತನೂ ವಿವೇಕಿಯೂ ಆದ ಆಳಿನ’ ಮೂಲಕ ಲಭ್ಯವಾಗುವ ಅತ್ಯುತ್ಕೃಷ್ಟ ಅಧ್ಯಯನ ವಿಷಯದ ನಿಮ್ಮ ಉಪಯೋಗವನ್ನು ನಿಶ್ಚಯವಾಗಿಯೂ ಬೈಬಲ್ ವಾಚನವು ಭರ್ತಿಮಾಡಬಾರದು. ಅದು ಕೂಡ ಯೆಹೋವನ ಒದಗಿಸುವಿಕೆಯ ಒಂದು ಭಾಗವಾಗಿದೆ—ಬಹು ಅಮೂಲ್ಯವಾದ ಭಾಗ. (ಮತ್ತಾಯ 24:45-47) ದೇವರ ವಾಕ್ಯದ ಕ್ರಮವಾದ ವಾಚನಕ್ಕೆ ನಿಮ್ಮ ಜೀವಿತದಲ್ಲಿ ಒಂದು ಪ್ರಧಾನ ಸ್ಥಾನವಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸಾಧ್ಯವಾಗುವುದಾದರೆ, “ದೇವರ ವಾಕ್ಯವಾದ ಪವಿತ್ರ ಬೈಬಲನ್ನು ಪ್ರತಿನಿತ್ಯವೂ ಓದಿರಿ.”
[ಅಧ್ಯಯನ ಪ್ರಶ್ನೆಗಳು]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್, ಇನ್ಕ್ ಇವರಿಂದ ಪ್ರಕಾಶಿಸಲ್ಪಟ್ಟದ್ದು.
ನೀವು ಹೇಗೆ ಉತ್ತರಿಸುವಿರಿ?
▫ ಪ್ರತಿದಿನ ಒಂದಿಷ್ಟು ಬೈಬಲ್ ವಾಚನವನ್ನು ಮಾಡುವುದು ಪ್ರಯೋಜನಕರವಾಗಿದೆ ಏಕೆ?
▫ ಬೈಬಲನ್ನು ಪದೇ ಪದೇ ಓದುವ ಅಗತ್ಯ ನಮಗಿದೆ ಏಕೆ?
▫ ನಿಮ್ಮ ಸ್ವಂತ ವೇಳಾಪಟ್ಟಿಯಲ್ಲಿ, ದೈನಿಕ ಬೈಬಲ್ ವಾಚನಕ್ಕಿರುವ ಒಳ್ಳೆಯ ಸಮಯವು ಯಾವುದಾಗಿದೆ?
▫ ನೀವು ಬೈಬಲನ್ನು ಪದೇ ಪದೇ ಓದಿದಂತೆ, ನಿಮ್ಮ ಕಾರ್ಯಕ್ರಮಕ್ಕೆ ವೈವಿಧ್ಯವನ್ನು ಯಾವುದು ಕೂಡಿಸಬಲ್ಲದು?
▫ ನಾವು ಓದುವ ವಿಷಯದ ಕುರಿತು ಮನನ ಮಾಡುವುದು ಬಹಳ ಪ್ರಾಮುಖ್ಯವಾಗಿದೆ ಏಕೆ?
[ಪುಟ 16,17ರಲ್ಲಿರುವಚೌಕ]
ನಿಮ್ಮ ಬೈಬಲ್ ವಾಚನವನ್ನು ಹೆಚ್ಚಿಸಲಿಕ್ಕಾಗಿರುವ ಸೂಚನೆಗಳು
(1) ಅನೇಕ ಜನರು ಬೈಬಲ್ ಪುಸ್ತಕಗಳನ್ನು ಅವು ಸಾಂಪ್ರದಾಯಿಕವಾಗಿ ಮುದ್ರಿಸಲ್ಪಟ್ಟಿರುವ ಕ್ರಮದಲ್ಲಿ, ಆದಿಕಾಂಡದಿಂದ ಪ್ರಕಟನೆಯ ತನಕ ಓದುತ್ತಾರೆ. ಅವು ಮೂಲಭೂತವಾಗಿ ಬರೆಯಲ್ಪಟ್ಟ ಕ್ರಮದಲ್ಲಿ ಸಹ ನೀವು ಅವುಗಳನ್ನು ಓದಬಹುದು. ಬೈಬಲು 66 ಪ್ರೇರಿತ ಪುಸ್ತಕಗಳ ಒಂದು ಸಂಗ್ರಹ, ಒಂದು ದೈವಿಕ ಗ್ರಂಥಾಲಯವೆಂಬುದನ್ನು ಮನಸ್ಸಿನಲ್ಲಿಡಿ. ಕೇವಲ ಪುಟದ ಅನುಕ್ರಮವನ್ನು ಅನುಸರಿಸುವ ಬದಲು, ವೈವಿಧ್ಯಕ್ಕಾಗಿ, ಇತಿಹಾಸವನ್ನು ಪ್ರದರ್ಶಿಸುವ ಪುಸ್ತಕಗಳಲ್ಲಿ ಕೆಲವನ್ನು, ನಂತರ ಹೆಚ್ಚಾಗಿ ಪ್ರವಾದನಾತ್ಮಕವಾಗಿರುವ ಕೆಲವನ್ನು, ಇದನ್ನು ಹಿಂಬಾಲಿಸಿ ಸಲಹೆಯ ಪತ್ರಗಳಾಗಿರುವ ಕೆಲವನ್ನು ಓದಲು ನೀವು ಬಯಸಬಹುದು. ಓದಿರುವ ವಿಷಯದ ಅರಿವು ನಿಮಗಿರಲಿ, ಮತ್ತು ಸಂಪೂರ್ಣ ಬೈಬಲನ್ನು ಓದಲು ಖಚಿತಪಡಿಸಿಕೊಳ್ಳಿ.
(2) ಶಾಸ್ತ್ರಗಳ ಒಂದು ಭಾಗವನ್ನು ಓದಿದ ಬಳಿಕ, ಅದು ಯೆಹೋವನ ಕುರಿತು, ಆತನ ಉದ್ದೇಶ, ವಿಷಯಗಳನ್ನು ಮಾಡುವ ಆತನ ವಿಧದ ಕುರಿತು ಏನು ಹೇಳುತ್ತದೆ; ನಿಮ್ಮ ಸ್ವಂತ ಜೀವಿತವನ್ನು ಅದು ಹೇಗೆ ಪ್ರಭಾವಿಸಬೇಕು; ಬೇರೆ ಯಾರಾದರೊಬ್ಬರಿಗೆ ಸಹಾಯ ಮಾಡಲು ಅದನ್ನು ನೀವು ಹೇಗೆ ಉಪಯೋಗಿಸಬಹುದು ಎಂದು ಸ್ವತಃ ಕೇಳಿಕೊಳ್ಳಿ.
(3) ಶಾಸ್ತ್ರವಚನಗಳ ಒಳನೋಟ (ಇಂಗ್ಲಿಷ್) (“ಎಲ್ಲ ಶಾಸ್ತ್ರವು ದೇವ ಪ್ರೇರಿತವೂ ಪ್ರಯೋಜನಕರವೂ ಆಗಿದೆ” (ಇಂಗ್ಲಿಷ್) ಎಂಬ ಪುಸ್ತಕದಲ್ಲಿಯೂ) ಎಂಬ ಪುಸ್ತಕದಲ್ಲಿ, “ಯೇಸು ಕ್ರಿಸ್ತ” ಎಂಬ ಶಿರೋನಾಮದ ಕೆಳಗೆ ಪ್ರಕಾಶಿಸಲಾದ “ಯೇಸುವಿನ ಭೂಜೀವಿತದ ಪ್ರಧಾನ ಘಟನೆಗಳು” ಎಂಬ ರೇಖಾಪಟ (ಚಾರ್ಟ್) ವನ್ನು ಒಂದು ಮಾರ್ಗದರ್ಶಕದಂತೆ ಉಪಯೋಗಿಸುತ್ತಾ, ಸುವಾರ್ತೆಗಳ ಪ್ರತಿಯೊಂದು ಭಾಗದ ಸಮಾಂತರ ವೃತ್ತಾಂತಗಳನ್ನು ಒಂದರ ನಂತರ ಇನ್ನೊಂದರಂತೆ ಓದಿರಿ. ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಎಂಬ ಪುಸ್ತಕದಲ್ಲಿರುವ ಅನುಗುಣವಾದ ಭಾಗಗಳನ್ನು ಪರಾಮರ್ಶಿಸುವ ಮೂಲಕ ಇದಕ್ಕೆ ಹೆಚ್ಚನ್ನು ಸೇರಿಸಿರಿ.
(4) ಪೌಲನ ಜೀವನ ಮತ್ತು ಶುಶ್ರೂಷೆಯ ವೃತ್ತಾಂತವನ್ನು ಅಪೊಸ್ತಲರ ಕೃತ್ಯಗಳಿಂದ ನೀವು ಓದುವಾಗ, ಸಂಬಂಧಪಟ್ಟ ಪ್ರೇರಿತ ಪತ್ರಗಳನ್ನು ಸಹ ಓದಿರಿ. ಹೀಗೆ, ಪೌಲನು ಸಾರಿದ ಹಲವಾರು ಪಟ್ಟಣಗಳ ಅಥವಾ ಕ್ಷೇತ್ರಗಳ ಉಲ್ಲೀಖ ಮಾಡಿರುವಲ್ಲಿ, ಓದುವುದನ್ನು ಅಲ್ಲಿಗೆ ತಡೆದು, ಆ ಸ್ಥಳಗಳಲ್ಲಿದ್ದ ಜೊತೆ ಕ್ರೈಸ್ತರಿಗೆ ಅವನು ತದನಂತರ ಬರೆದ ಪತ್ರಗಳನ್ನು ಓದಿರಿ. ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಬೈಬಲಿನ ಕೊನೆಯ ಪುಟದ ಒಳಭಾಗದಲ್ಲಿರುವಂತಹ ಒಂದು ನಕ್ಷೆಯ ಮೇಲೆ ಅವನ ಸಂಚಾರಗಳನ್ನು ಅನುಸರಿಸುವುದು ಕೂಡ ಸಹಾಯಕಾರಿಯಾಗಿದೆ.
(5) ವಿಮೋಚನಕಾಂಡದಿಂದ ಧರ್ಮೋಪದೇಶಕಾಂಡದ ವರೆಗಿನ ನಿಮ್ಮ ವಾಚನದೊಂದಿಗೆ, ಅನೇಕ ಪ್ರವಾದನಾ ನಮೂನೆಗಳ ಒಂದು ವಿವರಣೆಯನ್ನು ಪಡೆಯಲು ಇಬ್ರಿಯರಿಗೆ ಬರೆದ ಪತ್ರವನ್ನು ಓದಿರಿ. ಶಾಸ್ತ್ರವಚನಗಳ ಒಳನೋಟ (ಇಂಗ್ಲಿಷ್) ಎಂಬ ಪುಸ್ತಕದಲ್ಲಿ “ನಿಯಮ” ಎಂಬ ತಲೆಬರಹದ ಕೆಳಗೆ, “ನಿಯಮದ ಒಡಂಬಡಿಕೆಯ ಕೆಲವು ವೈಶಿಷ್ಟ್ಯಗಳು” ಎಂಬ ರೇಖಾಪಟವನ್ನು ಪರಾಮರ್ಶಿಸಿರಿ.
(6) ಪ್ರವಾದನಾತ್ಮಕ ಪುಸ್ತಕಗಳನ್ನು ಓದುವಾಗ, ಬೈಬಲಿನಲ್ಲಿರುವ ಸಂಬಂಧಪಟ್ಟ ಐತಿಹಾಸಿಕ ಹಿನ್ನೆಲೆಯನ್ನು ವಿಮರ್ಶಿಸಲು ಸಮಯವನ್ನು ತೆಗೆದುಕೊಳ್ಳಿರಿ. ಉದಾಹರಣೆಗೆ, ಯೆಶಾಯನ ಪುಸ್ತಕವನ್ನು ಓದುವಾಗ, ಯೆಶಾಯ 1:1 ರಲ್ಲಿ ಉಲ್ಲೀಖಿಸಲ್ಪಟ್ಟ ಅರಸರಾದ ಉಜ್ಜೀಯ, ಯೋಥಾಮ, ಆಹಾಜ, ಮತ್ತು ಹಿಜ್ಕೀಯರ ಕುರಿತು ಬೇರೆ ಕಡೆಯಲ್ಲಿ ಏನು ಹೇಳಲಾಗಿದೆ ಎಂಬುದನ್ನು ವಿಮರ್ಶಿಸಿರಿ. (2 ಅರಸು, ಅಧ್ಯಾಯಗಳು 15-20; 2 ಪೂರ್ವಕಾಲವೃತ್ತಾಂತ, ಅಧ್ಯಾಯಗಳು 26-32) ಅಥವಾ ಹಗ್ಗಾಯ ಮತ್ತು ಜೆಕರ್ಯನ ಪುಸ್ತಕಗಳನ್ನು ಓದುವಾಗ, ಎಜ್ರನ ಪುಸ್ತಕದಲ್ಲಿ ಕಂಡುಕೊಳ್ಳಲಾಗುವ ವಿಷಯವನ್ನು ವಿಮರ್ಶಿಸಲು ಸಮಯವನ್ನು ತೆಗೆದುಕೊಳ್ಳಿರಿ.
(7) ಬೈಬಲಿನ ಒಂದು ಪುಸ್ತಕವನ್ನು ಆರಿಸಿರಿ, ಅದರ ಒಂದು ಭಾಗವನ್ನು ಓದಿರಿ (ಬಹುಶಃ ಒಂದು ಅಧ್ಯಾಯ), ನಂತರ ವಾಚ್ ಟವರ್ ಪಬ್ಲಿಕೇಷನ್ಸ್ ಇಂಡೆಕ್ಸ್ ಅನ್ನು ಅಥವಾ ನಿಮ್ಮ ಭಾಷೆಯಲ್ಲಿ ಲಭ್ಯವಿರುವುದಾದರೆ ಕಂಪ್ಯೂಟರೀಕರಿಸಲ್ಪಟ್ಟ ವಾಚ್ಟವರ್ ಲೈಬ್ರರಿ ಯನ್ನು ಉಪಯೋಗಿಸುತ್ತಾ, ಸಂಶೋಧನೆಯನ್ನು ಮಾಡಿರಿ. ನಿಮ್ಮ ಸ್ವಂತ ಜೀವಿತದಲ್ಲಿ ವಿಷಯದ ಅನ್ವಯವನ್ನು ಮಾಡಿರಿ. ಅದನ್ನು ಭಾಷಣಗಳಲ್ಲಿ ಮತ್ತು ಕ್ಷೇತ್ರ ಶುಶ್ರೂಷೆಯಲ್ಲಿ ಉಪಯೋಗಿಸಿರಿ. ನಂತರ ಮತ್ತೊಂದು ಭಾಗವನ್ನು ಓದಿರಿ.
(8) ಒಂದು ಬೈಬಲ್ ಪುಸ್ತಕ ಅಥವಾ ಅದರ ಒಂದು ಭಾಗದ ಮೇಲೆ ವ್ಯಾಖ್ಯಾನವನ್ನು ಒದಗಿಸುವ ಒಂದು ವಾಚ್ ಟವರ್ ಪ್ರಕಾಶನವು ಇರುವುದಾದರೆ, ಬೈಬಲಿನ ಆ ಭಾಗವನ್ನು ನೀವು ಓದುವಾಗ ಅದನ್ನು ಪದೇ ಪದೇ ಪರಾಮರ್ಶಿಸಿರಿ. (ಉದಾಹರಣೆಗೆ: ಪರಮಗೀತ ಪುಸ್ತಕದ ಕುರಿತು, ದ ವಾಚ್ಟವರ್, ದಶಂಬರ 1, 1957, ಪುಟಗಳು 720-34; ಯೆಹೆಜ್ಕೇಲನ ಕುರಿತು, “ನಾನು ಯೆಹೋವನೆಂದು ಜನಾಂಗಗಳಿಗೆ ಗೊತ್ತಾಗುವುದು”—ಹೇಗೆ? (ಇಂಗ್ಲಿಷ್); ದಾನಿಯೇಲನ ಕುರಿತು, “ಭೂಮಿಯ ಮೇಲೆ ನಿನ್ನ ಚಿತ್ತವು ನೆರವೇರಲಿ” (ಇಂಗ್ಲಿಷ್) ಅಥವಾ ನಮ್ಮ ಒಳಬರಲಿರುವ ಲೋಕ ಸರಕಾರ—ದೇವರ ರಾಜ್ಯ (ಇಂಗ್ಲಿಷ್); ಹಗ್ಗಾಯ ಮತ್ತು ಜೆಕರ್ಯನ ಕುರಿತು, ಮಾನವಕುಲಕ್ಕೆ ಪುನಃಸ್ಥಾಪಿಸಲ್ಪಟ್ಟ ಪ್ರಮೋದವನ—ದೇವಪ್ರಭುತ್ವದ ಮೂಲಕ! (ಇಂಗ್ಲಿಷ್); ಪ್ರಕಟನೆಯ ಕುರಿತು, ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ!)
(9) ನೀವು ಓದಿದಂತೆ, ಕೆಲವೊಂದು ಪ್ರಕರಣಾಂತರ ಸೂಚನೆಗಳನ್ನು ಹುಡುಕಿರಿ. ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ ನೇರವಾಗಿ ನಮೂದಿಸಲಾದ ಹೀಬ್ರು ಶಾಸ್ತ್ರಗಳಿಂದ ತೆಗೆಯಲ್ಪಟ್ಟ 320 ಹೇಳಿಕೆಗಳನ್ನು ಗಮನಿಸಿರಿ ಮತ್ತು ನೂರಾರು ಇತರ ಹೇಳಿಕೆಗಳಿಗೆ ಮಾಡಲಾದ ಸೂಚನೆಯನ್ನು ಅಷ್ಟೇ ಅಲ್ಲದೆ ಕೊಡಲ್ಪಟ್ಟ ಅನ್ವಯವನ್ನು ಗಮನಿಸಿರಿ. ಪ್ರಕರಣಾಂತರ ಸೂಚನೆಗಳು ಬೈಬಲಿನಲ್ಲಿ ದಾಖಲು ಮಾಡಲಾದ ಪ್ರವಾದನೆಯ ನೆರವೇರಿಕೆಗಳಿಗೆ, ಜೀವಶಾಸ್ತ್ರದ ಮತ್ತು ಭೂಗೋಳ ಶಾಸ್ತ್ರದ ವಿವರಗಳಿಗೆ, ಮತ್ತು ಅರ್ಥಮಾಡಿಕೊಳ್ಳಲು ಕಷ್ಟಕರವೆಂದು ನೀವು ಬಹುಶಃ ಕಂಡುಕೊಂಡಿರಬಹುದಾದ ಅಭಿವ್ಯಕ್ತಿಗಳನ್ನು ಸೃಷ್ಟಗೊಳಿಸಬಹುದಾದ ಸಮಾಂತರ ಯೋಚನೆಗಳಿಗೆ ಸೂಚಿಸುತ್ತವೆ.
(10) ನಿಮ್ಮ ಭಾಷೆಯಲ್ಲಿ ಲಭ್ಯವಿರುವುದಾದರೆ, ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ನ ರೆಫರೆನ್ಸ್ ಮುದ್ರಣವನ್ನು ಉಪಯೋಗಿಸುತ್ತಾ, ನಿಮ್ಮ ವಾಚನಕ್ಕೆ ಸಂಬಂಧಿಸುವ ಪಾದಟಿಪ್ಪಣಿಗಳನ್ನು ಮತ್ತು ಪರಿಶಿಷ್ಟ ಲೇಖನಗಳನ್ನು ಪರಿಶೀಲಿಸಿರಿ. ಉಪಯೋಗಿಸಲಾದ ತರ್ಜುಮೆಗಳಿಗಾಗಿರುವ ಆಧಾರವನ್ನು ಮತ್ತು ಪ್ರಮುಖ ಅಭಿವ್ಯಕ್ತಿಗಳು ಭಾಷಾಂತರಿಸಲ್ಪಡಬಹುದಾದ ಇತರ ವಿಧಗಳನ್ನು ಅವು ತೋರಿಸುತ್ತವೆ. ನಿರ್ದಿಷ್ಟವಾದ ವಚನಗಳ ತರ್ಜುಮೆಯನ್ನು ಇತರ ಬೈಬಲ್ ಭಾಷಾಂತರಗಳಲ್ಲಿ ಹೋಲಿಸಲು ಸಹ ನೀವು ಬಯಸಬಹುದು.
(11) ಪ್ರತಿಯೊಂದು ಅಧ್ಯಾಯವನ್ನು ನೀವು ಓದಿದ ಬಳಿಕ, ಆ ಅಧ್ಯಾಯದಲ್ಲಿರುವ ಮುಖ್ಯ ವಿಚಾರದ ಕುರಿತು ಬಹಳ ಸಂಕ್ಷಿಪ್ತ ಸಾರಾಂಶವನ್ನು ಬರೆಯಿರಿ. ಅನಂತರದ ವಿಮರ್ಶೆ ಮತ್ತು ಮನನಕ್ಕಾಗಿ ಆಧಾರದೋಪಾದಿ ಅದನ್ನು ಉಪಯೋಗಿಸಿರಿ.
(12) ಬೈಬಲನ್ನು ಓದಿದಂತೆ, ನೀವು ವಿಶೇಷವಾಗಿ ಜ್ಞಾಪಕದಲ್ಲಿಟ್ಟುಕೊಳ್ಳಲು ಬಯಸುವ ಆಯ್ದ ವಚನಗಳನ್ನು ಗುರುತಿಸಿರಿ, ಅಥವಾ ಅವುಗಳನ್ನು ಕಾರ್ಡ್ಗಳ ಮೇಲೆ ಬರೆದು ನೀವು ಅವುಗಳನ್ನು ಪ್ರತಿದಿನ ಎಲ್ಲಿ ನೋಡುವಿರೊ ಆ ಸ್ಥಳದಲ್ಲಿ ಇಡಿರಿ. ಅವುಗಳನ್ನು ಬಾಯಿಪಾಠ ಮಾಡಿರಿ; ಅವುಗಳ ಕುರಿತು ಮನನ ಮಾಡಿರಿ; ಅವುಗಳ ಉಪಯೋಗ ಮಾಡಿರಿ. ಒಂದೇ ಸಮಯದಲ್ಲಿ ಬಹಳ ಹೆಚ್ಚನ್ನು ಬಾಯಿಪಾಠ ಮಾಡಲು ಪ್ರಯತ್ನಿಸಬೇಡಿ, ಬಹುಶಃ ಪ್ರತಿ ವಾರ ಒಂದು ಯಾ ಎರಡನ್ನು ಮಾತ್ರ ಬಾಯಿಪಾಠ ಮಾಡಿರಿ; ಮುಂದಿನ ಸಲ ನೀವು ಬೈಬಲನ್ನು ಓದುವಾಗ ಹೆಚ್ಚನ್ನು ಆರಿಸಿರಿ.
[ಪುಟ 15 ರಲ್ಲಿರುವ ಚಿತ್ರಗಳು]
ನೀವು ಪ್ರತಿದಿನ ಬೈಬಲನ್ನು ಓದುತ್ತಿದ್ದೀರೊ ಅಥವಾ ಅದರ ಆಡಿಯೊಕ್ಯಾಸೆಟ್ಗಳನ್ನು ಆಲಿಸುತ್ತಿದ್ದೀರೊ?